Pages

ಅನುವಾದಿತ ಕೃತಿ - 1 - ಲೆನಿನ್ ಮತ್ತು ರಷ್ಯಾ ಕ್ರಾಂತಿ ಕುರಿತ ಕಥೆಗಳು




 ಕ್ರಾಂತಿಯನ್ನು ಮುನ್ನಡೆಸುತ್ತಿರುವ ಲೆನಿನ್ 


ಜಾರ್ ಎಂದರೆ ಯಾರು

ಇದು ಬಹಳ ಹಿಂದಿನ ಕಥೆ. ಆ ದಿನಗಳಲ್ಲಿ ರಷ್ಯಾದ ಜೀವನ ಬಹಳ ವಿಭಿನ್ನವಾಗಿತ್ತು. ಶ್ರೀಮಂತರಾಗಿದ್ದವರ ಬಳಿ ಅವರಿಷ್ಟಪಟ್ಟಿದ್ದೆಲ್ಲವೂ ಇತ್ತು. ಆದರೆ ರಷ್ಯಾದ ಕಾರ್ಮಿಕರು ಮತ್ತು ರೈತರು ಬಡತನದಲ್ಲಿ ಬದುಕುತ್ತಿದ್ದರು. ಕೆಲವು ಶ್ರೀಮಂತರು ದೊಡ್ಡ ದೊಡ್ಡ ಎಸ್ಟೇಟ್‍ಗಳನ್ನು ಹೊಂದಿದ್ದರು, ಅವರು ಜಮೀನ್ದಾರರು ಅಥವಾ ಭೂಮಾಲೀಕರಾಗಿದ್ದರು. ಇತರರು ಗಿರಣಿಗಳನ್ನು ಮತ್ತು ಕೈಗಾರಿಕೆಗಳನ್ನು ಹೊಂದಿದ್ದರು. ಅವರನ್ನು ಬಂಡವಾಳಶಾಹಿಗಳೆಂದು ಕರೆಯುತ್ತಿದ್ದರು.
ಕಾರ್ಮಿಕರಿಗೆ ದುಡಿಯಲು ತಮ್ಮ ಎರಡು ಕೈಗಳ ವಿನಹ ಬೇರೇನೂ ಇರಲಿಲ್ಲ. ಅವರಿಗೆ ಮತ್ತು ಅವರ ಮಕ್ಕಳಿಗೆ ಆಹಾರ, ಬಟ್ಟೆ ಮತ್ತು ಇರಲು ಒಂದು ಜಾಗದ ಅವಶ್ಯಕತೆಯಿತ್ತು. ಆದ್ದರಿಂದಲೆ ಅವರು ಫ್ಯಾಕ್ಟರಿ ಮತ್ತು ಗಣಿ ಧಣಿಗಳಿಗೆ ತಮ್ಮ ಶ್ರಮವನ್ನು ಮಾರಿಕೊಳ್ಳುತ್ತಿದ್ದರು. ಅವರು ಆಳವಾದ ಗಣಿಗಳಲ್ಲಿ ಕಲ್ಲಿದ್ದಲು ಮತ್ತು ಅದಿರನ್ನು ತೆಗೆಯುತ್ತಿದ್ದರು. ಅವರು ಕಬ್ಬಿಣ ಮತ್ತು ಉಕ್ಕನ್ನು ಸಂಸ್ಕರಿಸಿ ಯಂತ್ರಗಳನ್ನು ತಯಾರಿಸುತ್ತಿದ್ದರು. ಇದರಿಂದ ಫ್ಯಾಕ್ಟರಿ ಮತ್ತು ಗಿರಣಿಯ ಮಾಲೀಕರು ಇನ್ನಷ್ಟು ಶ್ರೀಮಂತರಾಗುತ್ತಿದ್ದರು. ಕಾರ್ಮಿಕರ ದುಡಿಮೆಗೆ ಎಷ್ಟು ಕಡಿಮೆ ಸಂಬಳ ಕೊಡುತ್ತಿದ್ದರೆಂದರೆ ಅದು ಅವರ ಊಟಕ್ಕೂ ಸಹ ಸಾಕಾಗುತ್ತಿರಲಿಲ್ಲ. 
ರೈತರು ಚಿಕ್ಕ ಚಿಕ್ಕ ಜಮೀನನ್ನು ಹೊಂದಿದ್ದರು. ಆದ್ದರಿಂದ ಅವರ ಬೆಳೆದ ಫಸಲು ಸಹ ಸಣ್ಣ ಪ್ರಮಾಣದಲ್ಲಿರುತ್ತಿತ್ತು. ಬಹಳಷ್ಟು ಬಾರಿ ಅವರಿಗೆ ತಮ್ಮ ಕುಟುಂಬಗಳನ್ನು ಪೋಷಿಸುವಷ್ಟು ಫಸಲನ್ನೂ ಸಹ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಬಹಳಷ್ಟು ರೈತರು ಭೂಮಾಲೀಕರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿ ಭೂಮಾಲೀಕರ ಹೊಲಗಳಲ್ಲಿ ಉತ್ತು ಬಿತ್ತು ಫಸಲನ್ನು ತೆಗೆಯುತ್ತಿದ್ದರು. ಬಹಳಷ್ಟು ರೈತರು ನಗರಗಳಿಗೆ ತೆರಳಿ, ಅಲ್ಲಿ ಕಾರ್ಖಾನೆಗಳಲ್ಲಿ ಮತ್ತು ಗಿರಣಿಗಳಲ್ಲಿ ಕೆಲಸಗಳನ್ನು ಹುಡುಕುತ್ತಿದ್ದರು.
ರಷ್ಯಾದ ಜಾರ್ ದೊರೆ ಇವರೆಲ್ಲರ ಪೈಕಿ ಅತ್ಯಂತ ಶ್ರೀಮಂತ ಭೂಮಾಲೀಕನಾಗಿದ್ದ. ಅವನು ರಾಜ್ಯದ ಮುಖ್ಯಸ್ಥನಾಗಿದ್ದ. ಎಲ್ಲಾ ಭೂಮಾಲೀಕರು ಮತ್ತು ಕೈಗಾರಿಕೆಯ ಮಾಲೀಕರು ಅವನ ಪ್ರಜೆಗಳಾಗಿದ್ದರು. ಜಾರ್ ದೇಶವನ್ನು ಆಳುತ್ತಿದ್ದ ಮತ್ತು ಅದಕ್ಕಾಗಿ ಕಾನೂನುಗಳನ್ನು ರಚಿಸುತ್ತಿದ್ದ. ಈ ಕಾನೂನುಗಳ ಪ್ರಕಾರ ಕಾರ್ಮಿಕರು ಮತ್ತು ರೈತರು ಜಾರ್, ಭೂಮಾಲೀಕರಿಗೆ ಮತ್ತು ಬಂಡವಾಳಶಾಹಿಗಳಿಗೆ ವಿಧೇಯರಾಗಬೇಕಿತ್ತು. ಪೊಲೀಸ್, ಸೈನ್ಯ ಮತ್ತು ಬಹಳಷ್ಟು ಅಧಿಕಾರಿಗಳು ಜಾರ್ಮತ್ತು ಶ್ರೀಮಂತರ ಆಳ್ವಿಕೆಯನ್ನು ರಕ್ಷಿಸುತ್ತಿದ್ದರು. ಜಾರ್ನು ಶ್ರೀಮಂತರ ರಕ್ಷಕನು ಮತ್ತು ಕಾರ್ಮಿಕರ-ರೈತರು ದಮನಕನು ಹಾಗೂ ಕೊಲೆಗಾರನೂ ಆಗಿದ್ದನು.
ನಿಜವಾದ ಅರ್ಥದಲ್ಲಿ ಜಾರ್ ದೊರೆಯು ಹೀಗಿದ್ದನು.

ಜಾರ್ ಆಳ್ವಿಕೆಯಲ್ಲಿ ರೈತರು ಬದುಕು ಹೇಗೆ
ಒಂದು ಹಳ್ಳಿಯಲ್ಲಿ ಇವಾನ್ ಎಂಬ ರೈತನು, ಅವನ ಹೆಂಡತಿ ಮರಿಯಾ ಮತ್ತು ಅವರ ಮಗ ಮಿತ್ಯಾ ವಾಸಿಸುತ್ತಿದ್ದರು. ಇವಾನ್ ಬಳಿ ಒಂದು ತುಂಡು ಜಮೀನಿತ್ತು. ಅದನ್ನು ಅವನು ಮರದ ನೇಗಿಲಿನಿಂದ ಉಳುತ್ತಿದ್ದನು. ಒಂದು ಬಡಕಲು ಕುದುರೆಯು ಆ ನೇಗಿಲನ್ನು ಎಳೆಯುತ್ತಿತ್ತು. ಅವನು ಬೆಳೆಯುತ್ತಿದ್ದ ಬೆಳೆ ಮುಂದಿನ ಫಸಲಿನ ಕಾಲದ ವರೆಗೂ ಸಾಕಾಗುತ್ತಲೇ ಇರಲಿಲ್ಲ.
ಒಂದು ದಿನ ಹಳ್ಳಿಯ ಪೊಲೀಸನು ಇವಾನ್ ಮನೆಗೆ ಬಂದು ಕೇಳಿದನು, “ನೀನು ಜಾರ್ನಿಗೆ ಕೊಡಬೇಕಾದ ತೆರಿಗೆ ಹಣವೆಲ್ಲಿ?”
ಇವಾನ್ ಬಳಿ ಹಣವಿಲ್ಲದಿದ್ದರಿಂದ ಅವನು ಪೊಲೀಸನಿಗೆ ಸ್ವಲ್ಪ ಕಾಲಾವಕಾಶ ಕೊಡಲು ಕೇಳಿದನು.
“ನೀನೀಗ ಕೊಡದೇ ಹೋದರೆ ನಾವು ನಿನ್ನ ಹಸುವನ್ನು ಮಾರಿ ತೆರಿಗೆಯ ಹಣವನ್ನು ತೆಗೆದುಕೊಳ್ಳುತ್ತೇವೆ” ಪೊಲೀಸನು ಕಿರುಚಿದನು.
“ದಯವಿಟ್ಟು, ನಮ್ಮ ಹಸುವನ್ನು ತೆಗೆದುಕೊಂಡು ಹೋ|ಗಬೇಡಿ. ನೀವು ಆ ರೀತಿ ಮಾಡಿದರೆ ನಮ್ಮ ಹುಡುಗನಿಗೆ ಏನೂ ಆಹಾರವಿರುವುದಿಲ್ಲ” ಇವಾನ್ ಬೇಡಿಕೊಂಡನು.
“ನೀನಾಗಿಯೇ ನೀನು ಕೊಟ್ಟರೆ ಸರಿ, ಇಲ್ಲದಿದ್ದರೆ ನಾವು ಬಲವಂತವಾಗಿ ಅದನ್ನು ಎಳೆದೊಯ್ಯುತ್ತೇವೆ ಮತ್ತು ನಿನ್ನನ್ನು ಸಹ ಜೈಲಿಗೆ ಹಾಕುತ್ತೇವೆ” ಪೊಲೀಸನು ಉತ್ತರಿಸಿ ಹಸುವನ್ನು ಹಿಡಿದುಕೊಂಡು ಬರಲು ಹೋದನು.
ಮರಿಯಾ ಅಳಲಾರಂಭಿಸಿದಳು. ಅವಳ ಮಗನಿಗೆ ಹಾಲು ಸಿಗುವುದಿಲ್ಲವೆಂದು ಅರ್ಥವಾಯಿತು. ಮಿತ್ಯಾನಿಗೆ ಭಯವಾಯಿತು. ಪೊಲೀಸನು ಹಸುವನ್ನು ಎಳೆದುಕೊಂಡು ಹೋಗುವಾಗ, ಅವನು ತಾಯಿಯ ಹಿಂದೆ ಬಚ್ಚಿಟ್ಟುಕೊಂಡನು. ತೆರಿಗೆ ಹಣವನ್ನು ಕೊಡಲಾಗದ ಇತರೆ ರೈತ ಕುಟುಂಬಗಳೂ ಸಹ ತೆರಿಗೆ ಸಂಗ್ರಹಕಾರನಿಗೆ ಕುರಿ ಅಥವಾ ಕೋಳಿಗಳನ್ನು ಕೊಡಬೇಕಾಯಿತು.
ಮಿತ್ಯಾ ಸ್ವಲ್ಪ ದೊಡ್ಡವನಾಗುತ್ತಿದ್ದಂತೆಯೇ ತಂದೆ ಹೇಳಿದನು. “ನಾನು ನಿನ್ನನ್ನು ನೋಡಿಕೊಳ್ಳಲಾರೆ. ನೀನೊಂದು ಕೆಲಸವನ್ನು ಹುಡುಕಿಕೊಳ್ಳಬೇಕು.”
ಮಿತ್ಯಾ ಭೂಮಾಲೀಕನೊಬ್ಬನ ಕುರಿ ಕಾಯುವವನಾದನು. ಅವನಿಗೆ ಶಾಲೆಗೆ ಹೋಗಲು ಸಮಯವಿರಲಿಲ್ಲ. ಆದ್ದರಿಂದ ಅವನಿಗೆ ಓದಲು, ಬರೆಯಲು ಬರುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ಬಹುತೇಕ ರೈತರ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ., ಏಕೆಂದರೆ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ದುಡಿಯಲಾರಂಭಿಸುತ್ತಿದ್ದರು ಮತ್ತು ಹಳ್ಳಿಯಲ್ಲಿ ಶಾಲೆಗಳಿದ್ದುದು ಬಹಳ ಕಡಿಮೆ.

ಭೂಮಾಲೀಕರು ಬದುಕು ಹೇಗೆ
ಇವಾನ್ ಮತ್ತು ಅವನ ಕುಟುಂಬ ವಾಸಿಸುತ್ತಿದ್ದ ಹಳ್ಳಿಗೆ ಹತ್ತಿರವಾಗಿ ಒಂದು ದೊಡ್ಡ ಎಸ್ಟೇಟ್ ಇತ್ತು. ಅಲ್ಲಿ ಒಂದು ದೊಡ್ಡ ಬಿಳಿ ಬಂಗಲೆಯಿತ್ತು. ಸುತ್ತಲೂ ಎತ್ತರದ ಕಲ್ಲುಗಳ ಬೇಲಿ ಇತ್ತು, ಇದರಿಂದಾಗಿ ರೈತರಿಗೆ ಒಳಗಡೆ ಏನೂ ಕಾಣಿಸುತ್ತಿರಲಿಲ್ಲ. ಪ್ರತಿವರ್ಷ ಭೂಮಾಲೀಕ ಮತ್ತು ಅವನ ಕುಟುಂಬ ಅಲ್ಲಿಗೆ ಬೇಸಿಗೆಯನ್ನು ಕಳೆಯಲು ಬರುತ್ತಿದ್ದರು. ಏಕೆಂದರೆ ಭೂಮಿ ಮತ್ತು ಬಂಗಲೆ ಅವನಿಗೆ ಸೇರಿತ್ತು. ಸುತ್ತಲೂ ಇದ್ದ ಕಾಡು, ಊರು, ಹುಲ್ಲುಗಾವಲು ಎಲ್ಲವೂ ಅವನಿಗೆ ಸೇರಿತ್ತು. ಅವನು ಆ ಎಲ್ಲಾ ಭೂಮಿಯ ಮಾಲೀಕನಾಗಿದ್ದ. ಅವನ ಹೆಂಡತಿ ಸುಂದರವಾಗಿ ಬಟ್ಟೆ ಧರಿಸಿದ್ದರೂ ಸಹ ಬಹಳ ನಿಷ್ಠುರ ವ್ಯಕ್ತಿಯಾಗಿದ್ದಳು. ಆ ಭೂಮಾಲೀಕನಿಗೆ ಮಿಷಾ ಎಂಬ ಮಗನಿದ್ದ. 
ಮಿಷಾ ಬಳಿ ಒಂದು ಮಗು ಕನಸು ಕಾಣಬಹುದಾದ ಎಲ್ಲಾ ವಸ್ತುಗಳಿದ್ದವು. ಚಳಿಗಾಲದಲ್ಲಿ ಮಿಷಾ ಪಟ್ಟಣದಲ್ಲಿದ್ದು ಶಾಲೆಗೆ ಹೋಗುತ್ತಿದ್ದ. ಕಾರ್ಮಿಕರ, ರೈತರ ಮಕ್ಕಳನ್ನು ಈ ಶಾಲೆಗೆ ಎಂದಿಗೂ ಸೇರಿಸುತ್ತಿರಲಿಲ್ಲ.
ಮಿಷಾನನ್ನು ಹಳ್ಳಿಯ ಮಕ್ಕಳೊಂದಿಗೆ ಆಟವಾಡಲು ಬಿಡುತ್ತಿರಲಿಲ್ಲ. ಏಕೆಂದರೆ ಅವರು ಅಶಿಕ್ಷಿತರಾಗಿದ್ದರು ಮತ್ತು ಸರಿಯಾದ ಬಟ್ಟೆ ಹಾಕಿಕೊಳ್ಳುತ್ತಿರಲಿಲ್ಲ. ಮಿಷಾನ ತಂದೆ ತಾಯಿಗಳು ಅವನಿಗೆ ನೀನು ಉತ್ತಮ ವಂಶದಲ್ಲಿ ಜನಿಸಿದ್ದೀಯಾ, ಆದರೆ ಆ ರೈತರ ಮಕ್ಕಳು ಸಾಮಾನ್ಯ ಜನರು, ಗಲೀಜು ಜನರು ಮತ್ತು ಚಿಂದಿಯನ್ನುಡುವವರು ಎಂದು ಹೇಳುತ್ತಿದ್ದರು. ರಷ್ಯಾದ ಭೂಮಾಲೀಕ ಮತ್ತು ಅವನ ಕುಟುಂಬಕ್ಕೆ ಜೀವನದಲ್ಲಿ ಎಲ್ಲವೂ ಸಿಗುತ್ತಿತ್ತು, ಆ ದಿನಗಳಲ್ಲಿ ಎಲ್ಲಾ ಭೂಮಾಲೀಕರಿಗೂ ಸಹ ಉತ್ತಮ ಜೀವನವಿತ್ತು.

ಕಾರ್ಮಿಕರ ಬದುಕು ಹೇಗಿತ್ತು
ಇವಾನನ ಅಣ್ಣ ವ್ಯಾಸಿಲಿ ಪಟ್ಟಣದಲ್ಲಿ ಬದುಕುತ್ತಿದ್ದ. ಅವನೊಂದು ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಹೆಂಡತಿ ಆನ್ನಾ ಗಿರಣಿಯೊಂದರಲ್ಲಿ ನೇಕಾರಳಾಗಿದ್ದಳು. ಅವರಿಗೆ ಮಾಷಾ ಎಂಬ ಒಬ್ಬ ಮಗಳಿದ್ದಳು. ಪ್ರತಿ ಮುಂಜಾನೆ ಮಾಷಾ ಇನ್ನೂ ಮಲಗಿದ್ದಾಗಲೇ ವ್ಯಾಸಿಲಿ ಮತ್ತು ಆನ್ನಾ ದುಡಿಯಲು ಹೋಗಿಬಿಡುತ್ತಿದ್ದರು ಮತ್ತು ಕತ್ತಲಾದ ಮೇಲೆ ನಿತ್ರಾಣರಾಗಿ ಮನೆಗೆ ಬರುತ್ತಿದ್ದರು.
ಚಳಿಗಾಲ ಪೂರ್ತಿ ಮಾಷಾ ಮನೆಯೊಳಗೆಯೇ ಇರುತ್ತಿದ್ದಳು. ಏಕೆಂದರೆ ಅವಳಿಗೆ ಹೊರಗಡೆ ಹೋಗಲು ಬೆಚ್ಚನೆಯ ಬಟ್ಟೆಗಳಾಗಲೀ, ಶೂಗಳಾಗಲೀ ಇರುತ್ತಿರಲಿಲ್ಲ. ಆ ಬಾಡಿಗೆಯ ಕತ್ತಲೆ ಕೋಣೆಯೂ ಸಹ ತೇವವಾಗಿರುತ್ತಿತ್ತು. ಬೇಸಿಗೆಯ ಕಾಲದಲ್ಲಿ ಅವಳು ಹೊರಗಡೆ ಗಲೀಜಾದ ಅಂಗಳದಲ್ಲಿ ಆಡಿಕೊಳ್ಳುತ್ತಿದ್ದಳು.
ವ್ಯಾಸಿಲಿಯ ಕಾರ್ಖಾನೆಯ ಎಲ್ಲಾ ಕೆಲಸಗಾರರು ಮತ್ತು ಆನ್ನಾ ಕೆಲಸ ಮಾಡುತ್ತಿದ್ದ ಗಿರಣಿಯಲ್ಲಿದ್ದ ಎಲ್ಲಾ ಮಹಿಳಾ ಕೆಲಸಗಾರರು ಇವರಷ್ಟೇ ಬಡವರಾಗಿದ್ದರು. ದೇಶದ ಎಲ್ಲಾ ಕಾರ್ಮಿಕರ ಬದುಕು ಇವರಂತೆಯೇ ಇತ್ತು. 
ಅಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಕೆಲಸವೇ ಇರಲಿಲ್ಲ. ಕೆಲಸ ಇಲ್ಲದಿರುವುದೆಂದರೆ ಹಸಿವಿನಿಂದ ಸಾಯುವುದು ಎಂದರ್ಥ. ಆದ್ದರಿಂದಲೇ ಶ್ರೀಮಂತರು ನಿರುದ್ಯೋಗಿ ಯುವಕ-ಯುವತಿಯರನ್ನು ಬಹಳ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ತೆಗೆದುಕೊಳ್ಳಬಹುದಿತ್ತು.

ಕಾರ್ಖಾನೆ ಮತ್ತು ಗಿರಣಿ ಮಾಲೀಕರು
ನಗರದ ಅತ್ಯಂತ ಸೊಗಸಾದ ರಸ್ತೆಯಲ್ಲಿ ದೊಡ್ಡದಾದ ಬಂಗಲೆಯಿತ್ತು. ಆ ಬಂಗಲೆಯ ಹಿಂದೆ ಒಂದು ದೊಡ್ಡ ತೋಟ ಮತ್ತು ಆ ಕುಟುಂಬದ ಉತ್ತಮ ತಳಿಯ ಕುದುರೆಗಳು ಮತ್ತು ದುಬಾರಿ ಕುದುರೆಗಾಡಿಗಳೂ ಇದ್ದವು. ವ್ಯಾಸಿಲಿ ಕೆಲಸ ಮಾಡುತ್ತಿದ್ದ ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯ ಮಾಲೀಕ ಈ ಮನೆಯಲ್ಲಿ ವಾಸಿಸುತ್ತಿದ್ದನು.
ಅವನಿಗೊಬ್ಬ ಮಗ ಮತ್ತು ಮಗಳಿದ್ದರು. ಭೂಮಾಲೀಕನ ಮಗನಂತೆಯೇ ಅವರಿಗೂ ಸಹ ಅವರು ಆಶಿಸುತ್ತಿದ್ದೆಲ್ಲವೂ ದೊರೆಯುತ್ತಿತ್ತು. ಒಳ್ಳೆಯ ಆಹಾರ, ಅತ್ಯಂತ ದುಬಾರಿ ಆಟದ ಸಾಮಾನುಗಳು ದೊರೆಯುತ್ತಿತ್ತು. ಅವರಿಗೆ ಆರಂಭದಲ್ಲಿ ಮನೆಯಲ್ಲಿಯೇ ಖಾಸಗಿ ಟ್ಯೂಷನ್ ನೀಡಿ, ನಂತರ ಶ್ರೀಮಂತರ ಶಾಲೆಗಳಿಗೆ ಓದಲು ಕಳುಹಿಸುತ್ತಿದ್ದರು.

ಭೂಮಾಲೀಕರು ರೈತರನ್ನು ಹೇಗೆ ಹತೋಟಿಯಲ್ಲಿಡುತ್ತಿದ್ದರು
ಒಂದು ವರ್ಷ ಅಥವಾ ಆ ವರ್ಷ ಫಸಲು ಬಹಳ ಕಡಿಮೆಯಿತ್ತು. ಹಳ್ಳಿಯ ರೈತರಿಗೆ ಧವಸ ಧಾನ್ಯವಿರಲಿಲ್ಲ. ಅವರು ಹಸಿವಿನಿಂದ ನರಳುತ್ತಿದ್ದರು. ಆದರೆ ಹತ್ತಿರದಲ್ಲಿಯೇ ಇದ್ದ ಭೂಮಾಲೀಕರ ಕಣಜಗಳು ತುಂಬಿ ತುಳುಕುತ್ತಿದ್ದವು. ರೈತರು ಧಾನ್ಯವನ್ನು ಕೇಳಲು ಭೂಮಾಲೀಕನ ಬಳಿ ಹೋದರು. ಅವನ ಮನೆ ಮುಂದೆ ಮೆಟ್ಟಿಲುಗಳ ಮೇಲೆ ತಮ್ಮ ಕ್ಯಾಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದರು. ಆದರೆ ಭೂಮಾಲೀಕನಿಗೆ ಅವರ ಮಾತನ್ನು ಕೇಳುವಷ್ಟು ತಾಳ್ಮೆಯಿರಲಿಲ್ಲ.
“ಎಲ್ಲರೂ ಇಲ್ಲಿಂದ ತೊಲಗಿ., ನಾನು ನಿಮಗೆ ಏನನ್ನೂ ಕೊಡುವುದಿಲ್ಲ” ಎಂದು ಅರಚಿದನು.
ಇವಾನ್ ಮುಂದೆ ಬಂದು ಹೇಳಿದನು. “ನಾವು ದುಡಿದ್ದದ್ದನ್ನೇ ನಿಮ್ಮನ್ನು ಕೇಳುತ್ತಿದ್ದೇವೆ. ನೀವು ಉತ್ತಲಿಲ್ಲ, ಬಿತ್ತಲಿಲ್ಲ. ಅಥವಾ ಬೆಳೆಯನ್ನು ಬೆಳೆಯಲಿಲ್ಲ. ನಿಮಗಾಗಿ ಆ ಕೆಲಸಗಳನ್ನು ಮಾಡಿದ್ದು ನಾವೆ.”
“ಅದು ನಿಜ!” ರೈತನೊಬ್ಬ ಕೂಗಿದನು.
“ಅವನು ಸತ್ಯವನ್ನೇ ಹೇಳುತ್ತಿದ್ದಾನೆ” ಇನ್ನೊಬ್ಬ ಹೇಳಿದ.
“ಹೊ, ಹಾಗಾದರೆ ನೀವು ಬಂಡಾಯವೇಳಲು ಬಯಸುತ್ತೀರಾ? ಇದರ ಪರಿಣಾಮ ಚೆನ್ನಾಗಿರುವುದಿಲ್ಲ” ಭೂಮಾಲೀಕ ಸಿಟ್ಟಿಗೆದ್ದು ಇವಾನನ್ನು ಹಿಡಿಯುವಂತೆ ತನ್ನ ಸೇವಕರಿಗೆ ಹೇಳಿದನು. ನಂತರ ಇವಾನನ್ನು ನಗರದಲ್ಲಿ ಜೈಲಿಗೆ ಹಾಕಿದರು. ಇತರ ರೈತರನ್ನು ಚಾಟಿಯಿಂದ ಹೊಡೆದರು.

ಕಾರ್ಮಿಕರನ್ನು ಏಕೆ ಬಂಧಿಸಲಾಯಿತು
ಶಸ್ತ್ರ ತಯಾರಿಸುವ ಕಾರ್ಖಾನೆಯ ಮಾಲೀಕನು ಇನ್ನಷ್ಟು ಶ್ರೀಮಂತನಾಗ ಬಯಸಿದ. ಆದ್ದರಿಂದ ಅವನು ಕಾರ್ಮಿಕರಿಗೆ ಹೆಚ್ಚು ವೇಗವಾಗಿ ಕೆಲಸ ಮಾಡಲು ಆದೇಶಿಸಿದ. 
“ಇದಕ್ಕೆ ಒಪ್ಪಬೇಡಿ” ವ್ಯಾಸಿಲಿ ತನ್ನ ಸಂಗಾತಿಗಳಿಗೆ ಹೇಳಿದ. “ನಾವೆಲ್ಲರೂ ಒಂದೇ ಸಾರಿಗೆ ಕೆಲಸ ಮಾಡುವುದನ್ನು ನಿಲ್ಲಿಸೋಣ. ನಾವು ಆ ರೀತಿ ಮಾಡಿದರೆ ಎಲ್ಲಾ ಯಂತ್ರಗಳು ನಿಂತು ಹೋಗುತ್ತವೆ. ಆಗ ಮಾಲೀಕ ಹಣವನ್ನು ಕಳೆದುಕೊಳ್ಳುತ್ತಾನೆ. ಆಗ ಅವನು ನಮ್ಮ ಬೇಡಿಕೆಗಳನ್ನು ಈಡೇರಿಸಲೇ ಬೇಕಾಗುತ್ತದೆ.”
ಕಾರ್ಮಿಕರು ಕೆಲಸ ಮಾಡುವುದನ್ನು ನಿಲ್ಲಿಸಿದರು. ಯಂತ್ರಗಳು ಸ್ತಬ್ಧವಾದವು. ಕಾರ್ಮಿಕರು ಮುಷ್ಕರವನ್ನು ಹೂಡಿದರು. ಅವರು ಕಾರ್ಖಾನೆಯಿಂದ ಒಂದಲ್ಲ ಎರಡಲ್ಲ ಮೂರು ದಿನಗಳ ಕಾಲ ಹೊರಗುಳಿದರು.
ಕಾರ್ಖಾನೆಯ ಮಾಲೀಕ ಪೊಲೀಸರನ್ನು ಕರೆದನು. ಆ ರಾತ್ರಿ ಪೊಲೀಸರು ವ್ಯಾಸಿಲಿಯ ಕೋಣೆಗೆ ನುಗ್ಗಿ ಅವನನ್ನು ಬಂಧಿಸಿದರು. ಅವನನ್ನು ಜೈಲಿಗೆ ಕಳಿಸುತ್ತಾ ಹೇಳಿದರು, “ನೀನೆ ಈ ಮುಷ್ಕರದ ನಾಯಕ, ನೀನೇ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಮುಷ್ಕರ ಮಾಡಿ ಎಂದು ಹೇಳಿದ್ದು.”
ಮುಷ್ಕರ ಹೂಡಿದ್ದ ಇತರ ಕಾರ್ಮಿಕರನ್ನೂ ಸಹ ಜೈಲಿಗೆ ಕಳುಹಿಸಿದರು.
ಈ ರೀತಿ ಕಾರ್ಖಾನೆ ಮಾಲೀಕರು ಕಾರ್ಮಿಕರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು.

ಜಾರ್ನ ವಿರುದ್ಧ ಹೋರಾಡಿದ ಧೀರರು
ಬಹಳ ವರ್ಷಗಳ ಹಿಂದೆ ಲೆನಿನ್‍ಗ್ರಾದ್ ನಗರವನ್ನು ಸೈಂಟ್ ಪೀಟರ್ಸ್‍ಬರ್ಗ್ ಎಂದು ಕರೆಯುತ್ತಿದ್ದರು. ಅಲ್ಲಿ ರಷ್ಯಾದ ಜಾರ್ನ ಅರಮನೆಯಿತ್ತು. ಆಗ ದ್ವಿತೀಯ ಅಲೆಗ್ಸಾಂಡರ್ ಜಾರ್ ದೊರೆಯಾಗಿದ್ದ. ಭೂಮಾಲೀಕರು ಮತ್ತು ಬಂಡವಾಳಶಾಹಿಗಳು ರೈತರು ಮತ್ತು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಲು ಅವನು ಸಹಾಯ ಮಾಡಿದ.
ಆ ಸಮಯದಲ್ಲಿಯೇ ದುಡಿಯುವ ಜನತೆಗೆ ಸಹಾಯ ಮಾಡಲು ಧೀರ ಯುವಕ-ಯುವತಿಯರ ಗುಂಪೊಂದು ಮುಂದೆ ಬಂದಿತು. ಅವರು ಜಾರ್ ದೊರೆಯ ಆಳ್ವಿಕೆಯಿಂದ ಮುಕ್ತರಾಗಲು ಇಚ್ಛಿಸಿದರು. ಅವರು ಹೇಳಿದರು, “ನಾವು ಜಾರ್ನನ್ನು ಕೊಲ್ಲಬೇಕು. ಏಕೆಂದರೆ ಅವನು ಭೂಮಾಲೀಕರನ್ನು ಮತ್ತು ಕಾರ್ಖಾನೆ ಮಾಲೀಕರನ್ನು ಬೆಂಬಲಿಸುತ್ತಾನೆ. ಅವನನ್ನು ಕೊಂದರೆ ಜನರಿಗೆ ಉತ್ತಮ ಜೀವನ ಸಿಗುತ್ತದೆ.”
ಸ್ಟೀಫನ್ ಖಾಲ್‍ಟುರಿನ್ ಎಂಬ ಕಾರ್ಮಿಕನೊಬ್ಬ ಅರಮನೆಯೊಳಗೆ ಡೈನಮೈಟ್ ಅನ್ನು ಗುಪ್ರವಾಗಿ ಸಾಗಿಸಿದ. ಅರಮನೆಯಲ್ಲಿ ಸ್ಫೋಟವಾಯಿತು, ಆದರೆ ಜಾರ್ ತಪ್ಪಿಸಿಕೊಂಡ. ನಂತರ ಸೈಂಟ್ ಪೀಟರ್ಸ್‍ಬರ್ಗ್ ರಸ್ತೆಯಲ್ಲಿ ಜಾರ್ ಕುದುರೆಗಾಡಿಯಲ್ಲಿ ಹೋಗುತ್ತಿದ್ದಾಗ, ಕೆಲವು ಧೀರರು ಬಾಂಬನ್ನು ಎಸೆದು ಜಾರ್ನನ್ನು ಸಾಯಿಸಿದರು. ಆ ಹೋರಾಟಗಾರರನ್ನೆಲ್ಲಾ ಬಂಧಿಸಿ ಗಲ್ಲಿಗೇರಿಸಲಾಯಿತು. 
ಸತ್ತ ಜಾರ್ ಮಗ ತೃತೀಯ ಅಲೆಗ್ಸಾಂಡರ್ ಸಿಂಹಾಸನವನ್ನು ಏರಿದನು. ರಷ್ಯಾಗೆ ಹೊಸ ಜಾರ್ ದೊರೆ ಬಂದನು. ಆದರೆ ಇನ್ನೇನೂ ಬದಲಾವಣೆಯಾಗಲಿಲ್ಲ. ಕಾರ್ಮಿಕರು ಮತ್ತು ರೈತರ ಪರಿಸ್ಥಿತಿ ಒಂದಿಂಚೂ ಸುಧಾರಿಸಲಿಲ್ಲ.

ಮೂಲ -  ಎ ಕ್ರಾವ್ ಚೆಂಕೊ     
ಅನುವಾದ - ಸುಧಾ ಜಿ ಮತ್ತು ಎಸ್.ಎನ್.ಸ್ವಾಮಿ 

ಕಾಮೆಂಟ್‌ಗಳಿಲ್ಲ: