ಸಾವಿಗೆ ನೋವಾಗುವುದಿಲ್ಲ
ನಾವು ನಮ್ಮ ಊರಿನಿಂದ, ನಮ್ಮವರಿಂದ, ನಮ್ಮಿಂದ
ದೂರ ಪಯಣಿಸದಿದ್ದರೆ
ಆಕಾಶದೆತ್ತರಕ್ಕೆ ಹಾರದಿದ್ದರೆ, ಸಮುದ್ರದ ಆಳಕ್ಕೆ ಇಳಿಯದಿದ್ದರೆ
ಸಾವಿಗೆ ನೋವಾಗುವುದಿಲ್ಲ
ನಾವು ಓದದಿದ್ದರೆ,
ಪದಗಳಲ್ಲಡಗಿರುವ ಮಾಂತ್ರಿಕ ಜಗತ್ತನ್ನು ಹೊಕ್ಕು ಖುಷಿ ಪಡದಿದ್ದರೆ,
ಆಡದಿದ್ದರೆ, ಓಡದಿದ್ದರೆ, ನಿರಾಸೆಗಳನ್ನು ಒದೆಯದಿದ್ದರೆ
ಸಾವಿಗೆ ನೋವಾಗುವುದಿಲ್ಲ
ನಮ್ಮ ನೆತ್ತರು ಬಿಸಿಯಾಗದಿದ್ದರೆ,
ಎದೆ ಸೆಟೆಯದಿದ್ದರೆ,
ತುಟಿ ಬಿರಿಯದಿದ್ದರೆ,
ತೊಯ್ದ ಕಂಗಳಿಂದ ಕೆನ್ನೆಗಳಿಗೆ ಬಿಸಿ ಹನಿಯ ಸ್ಪರ್ಶವಾಗದಿದ್ದರೆ
ಸಾವಿಗೆ ನೋವಾಗುವುದಿಲ್ಲ
ನಾವು ದುಃಖದ ಕಡಲಿನಲ್ಲಿ ತೇಲುತ್ತಿರುವಾಗ
ನಡುನೀರಿನಲ್ಲಿ ಮುಳುಗದಂತೆ ದೋಣಿ ತಂದವರನ್ನು
ದೂರ ತಳ್ಳಿದರೆ
ಸಾವಿಗೆ ನೋವಾಗುವುದಿಲ್ಲ
ನಾವು ನಿನ್ನೆವರೆಗೂ ನಡೆದ ದಾರಿಯಲ್ಲೇ ಸಾಗುತ್ತಿದ್ದು
ಸುತ್ತಲ್ಲೆಲ್ಲಾ ಹುಲ್ಲು ಬೆಳೆದು ಇನ್ನಾವ ದಾರಿಯೂ ಕಾಣದಂತಾದರೆ
ಸಾವಿಗೆ ನೋವಾಗುವುದಿಲ್ಲ
ದಿನದಿನವೂ ಒಂದೇ ನೋಟ ನೋಡುತ್ತಿದ್ದರೆ,
ಒಂದೇ ಬಣ್ಣ ಉಡುತ್ತಿದ್ದರೆ, ಒಂದೇ ಹಾಡು ಕೇಳುತ್ತಿದ್ದರೆ
ಏಕತಾನದಲ್ಲೇ ಬದುಕು ಸಾಗಿಸುತ್ತಿದ್ದರೆ
ಸಾವಿಗೆ ನೋವಾಗುವುದಿಲ್ಲ
ಪರ ಊರಿನ ಕೊರೆವ ಚಳಿಗೆ ನಡುಗದಿದ್ದರೆ,
ಎಂದೂ ಕಾಣದ ಬಿಸಿಲಿಗೆ ಮೈ ಕಾಯಿಸಿಕೊಳ್ಳದಿದ್ದರೆ
ಹೊಸ ಮಳೆಗೆ ತೊಯ್ಯದಿದ್ದರೆ
ಸಾವಿಗೆ ನೋವಾಗುವುದಿಲ್ಲ
ಅದೇ ಭಾಷೆ, ಅದೇ ಜನ, ಅದೇ ಪರಿಚಿತ ಜಗತ್ತಿನಲ್ಲುಳಿದು
ಹೊಸ ಜನಕ್ಕೆ, ಹೊಸ ಜಗಕ್ಕೆ, ಹೊಸ ರಾಗಕ್ಕೆ ಹೆದರುತ್ತಿದ್ದರೆ
ಸಾವಿಗೆ ನೋವಾಗುವುದಿಲ್ಲ
ಹರೆಯದಲ್ಲಿ ನಾಳೆಗಳ ನುಂಗುವ ಇಂಗದ ದಾಹವಿಲ್ಲದಿದ್ದರೆ
ಹೊಸತನಕ್ಕಾಗಿ ಹಂಬಲಿಸದಿದ್ದರೆ
ಒಂದು ಕನಸಿನ ಬೆನ್ನು ಹತ್ತಿ ಹೋಗದಿದ್ದರೆ
ಸಾವಿಗೆ ನೋವಾಗುವುದಿಲ್ಲ
ನಿನ್ನೆಯ ನೆನಪುಗಳ ಹೊದಿಕೆಯ ಮಡಿಕೆಗಳ ನಡುವೆ
ಬೆಚ್ಚಗೆ ಮುದುಡಿ ಮಲಗಿಕೊಂಡರೆ, ಅರಿಯದ ನಾಳಿನ
ಭಯದ ರೋಮಾಂಚನವರಿಯದಿದ್ದರೆ
ಸಾವಿಗೆ ನೋವಾಗುವುದಿಲ್ಲ
ನಾವು ಎಲ್ಲರಿಗೂ ಕಿವಿಗೊಡುತ್ತಾ, ತಲೆದೂಗುತ್ತಾ
ತಾನೇ ಯೋಚಿಸುವುದನ್ನು ಮರೆತರೆ
ನಾವು ನಾವಾಗಿರದಿದ್ದರೆ,
ನಿನ್ನಿನ ಆಳಾಗಿ, ಕತ್ತಲಿನ ಪಾಲಾಗಿ
ನಾಳಿನ ಬೆಳಕು ಕಾಣದಾಗಿ
ನೀರಸ ಬದುಕಿನೊಂದಿಗೆ ವಿರಸವಿಲ್ಲದೆ
ಸಾಹಸದೊಂದಿಗೆ ಸರಸವಿಲ್ಲದೆ
ಬದುಕು ಸಾಗಿಸುತ್ತಿದ್ದರೆ
ಅದು ನಮ್ಮನ್ನು ನೋಡಿ, ನಗುತ್ತಾ ನಿಂತಿರುತ್ತದೆ
ನಾವೇ ಸೋಲುತ್ತೇವೆ, ನಡೆಯುತ್ತೇವೆ ಅದರತ್ತ.
- ಡಾ. ಸುಚೇತಾ ಪೈ
(ಪ್ರೇರಣೆ- ಪಾಬ್ಲೋ ನೆರುಡಾ ಅವರು ಬರೆದದ್ದು ಎಂದು ಹೇಳಲಾಗಿರುವ
You start dying
slowly ಕವನದ ಅನುವಾದ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ