Pages

ವ್ಯಕ್ತಿ ಪರಿಚಯ - ಡಾ. ಎಚ್ ನರಸಿಂಹಯ್ಯ


ಡಾ. ಎಚ್ ನರಸಿಂಹಯ್ಯ 
"ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ವಿದ್ಯಾರ್ಥಿಯಾಗಿದ್ದಾಗ ನನ್ನ ಉಳಿವಿಗಾಗಿ, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂಬ ಹಠ, ಕಾಲೇಜು ಸೇರಿದಾಗ ಸ್ವಾತಂತ್ರ್ಯ ಚಳವಳಿಗಳಲ್ಲಿಯ ಹೋರಾಟ, ಅರ್ಥವಿಲ್ಲದ ನಂಬಿಕೆ, ಸಂಪ್ರದಾಯ, ಮೂಢನಂಬಿಕೆಗಳ, ಪವಾಡಪುರುಷರ ವಿರುದ್ಧ ಹೋರಾಟ ಹೀಗೆ ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ನಾನು ಜೀವನದಲ್ಲಿ ಒಂಟಿ, ಹೋರಾಟದಲ್ಲಿ ಒಂಟಿ" ಹೀಗೆ ತಮ್ಮ ಜೀವನದ ಬಗ್ಗೆ ಹೇಳಿಕೊಂಡಿರುವವರು ಛಲವಾದಿ, ವಿಚಾರವಾದಿ, ಶಿಕ್ಷಣತಜ್ಞರು ಚಿಂತಕರಾದ ಡಾ.ಹೆಚ್. ನರಸಿಂಹಯ್ಯನವರು.
ನರಸಿಂಹಯ್ಯನವರು ಹುಟ್ಟಿದ್ದು ಜೂನ್ 6, 1920 ರಂದು ಗೌರಿಬಿದನೂರಿನ ಹೊಸೂರಿನ ಬಡಕುಟುಂಬದಲ್ಲಿ. ತಂದೆ ಹನುಮಂತಪ್ಪ ಮತ್ತು ತಾಯಿ ವೆಂಕಟಮ್ಮ. ಇವರ ಶಿಕ್ಷಣ ಪ್ರಾರಂಭವಾದದ್ದು ಸ್ವಗ್ರಾಮದಲ್ಲಿ. ಶಾಲೆಯಲ್ಲಿ ಪಠ್ಯದ ಜೊತೆಗೆ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ, ಜಾತೀಯತೆ, ಅಸ್ಪೃಶ್ಯತೆ ಮೊದಲಾದವುಗಳ ಬಗ್ಗೆ ಶಿಕ್ಷಕರು ತಿಳಿಸುತ್ತಿದ್ದದ್ದು ಇವರ ಮೇಲೆ ಪ್ರಭಾವ ಬೀರಿತ್ತು. ಇವರು ಗಾಂಧೀಜಿಯವರ ಸರಳಜೀವನದಿಂದ ಪ್ರಭಾವಿತರಾಗಿದ್ದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ನೆಚ್ಚಿನ ಶಿಕ್ಷಕರ ಸಹಾಯದಿಂದ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಹೀಗೆ ಪ್ರಾರಂಭವಾದ ಇವರ ನ್ಯಾಷನಲ್ ಸ್ಕೂಲಿನೊಂದಿಗಿನ ಸಂಬಂಧ ಕೊನೆಯವರೆಗೂ ಮುಂದುವರಿದಿತ್ತು. ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಅಲ್ಲಿನ ಕೆಲಸಗಳನ್ನು ಮಾಡುತ್ತಾ ತಮ್ಮ ಓದನ್ನು ಮುಗಿಸಿದರು. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜಿಗೆ ಸೇರಿದರು. ಆ ಸಮಯದಲ್ಲಿ ಇವರ ಬಳಿ ಹಣವಿಲ್ಲದ ಕಾರಣ ಶಾಲೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಇವೆಲ್ಲದರ ನಡುವೆಯೂ ನರಸಿಂಹಯ್ಯನವರು ರಾಜ್ಯಕ್ಕೆ ಹನ್ನೊಂದನೆಯವರಾಗಿ ತೇರ್ಗಡೆಯಾದರು.
ನಂತರ ಇವರು ಬಿ ಎಸ್ ಸಿ(ಫಿಸಿಕ್ಸ್) ಆನರ್ಸ್ಗೆ ಸೇರಿದರು. ಎರಡೂವರೆ ವರ್ಷ ಮುಗಿದಿದ್ದ ಇವರ ವಿದ್ಯಾಭ್ಯಾಸ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಇಳಿದಿದ್ದರಿಂದ ಅಲ್ಲಿಗೆ ನಿಂತಿತು. ದೇಶದೆಲ್ಲೆಡೆಯಲ್ಲೂ " ಮಾಡು ಇಲ್ಲವೆ ಮಡಿ" ಚಳುವಳಿಯು ನಡೆಯುತ್ತಿತ್ತು. ಹಲವಾರು ನಾಯಕರುಗಳನ್ನು ಬಂಧಿಸಲಾಗಿತ್ತು. ಕಾಲೇಜುಗಳು ಚಳವಳಿಯ ಕೇಂದ್ರಗಳಾಗಿದ್ದವು. ನರಸಿಂಹಯ್ಯನವರನ್ನು ಎಚ್ಚರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಗೆ "ನಿಮ್ಮ ಕೆಲಸವನ್ನು ನೀವು ಮಾಡಿ, ನನ್ನ ಕೆಲಸವನ್ನು ನಾನು ಮಾಡುತ್ತೇನೆ" ಎಂದು ಉತ್ತರ ಕೊಟ್ಟಿದ್ದರಿಂದ ಅವರನ್ನು ಬಂಧಿಸಲಾಯಿತು. ಕ್ಷಮಾಪಣೆ ಪತ್ರವನ್ನು ಬರೆದು ಕೊಟ್ಟರೆ ಬಿಡುತ್ತೇವೆ ಎಂದಾಗ ಒಪ್ಪದ ಇವರನ್ನು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಸುಮಾರು ನಾಲ್ಕು ತಿಂಗಳ ಕಾಲದ ನಂತರ ಬಿಡುಗಡೆ ಮಾಡಿದರು. ಆದರೂ ಚಳವಳಿ ಮುಗಿಯುವವರೆಗೂ ಕಾಲೇಜಿಗೆ ಹೋಗುವುದಿಲ್ಲವೆಂದು ಕೊಂಡಿದ್ದ ಇವರು ಗಾಂಧೀಜಿಗೆ ಬೆಂಬಲ ಸೂಚಿಸುತ್ತ "ಇಂಗ್ಲಿಷರಿಗೆ ಧಿಕ್ಕಾರ" ಎಂದು ಘೋಷಣೆಯನ್ನು ಕೂಗುತ್ತಾ ಮೆರವಣಿಗೆ ಹೊರಟ ಇವರನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಮೂರು ತಿಂಗಳ ನಂತರ ಸೆರೆಮನೆಯಿಂದ ಹೊರ ಬಂದರು. 

ನಂತರ ಗಾಂಧೀಜಿ ಮೊದಲಾದ ನಾಯಕರುಗಳ ಬಿಡುಗಡೆಯಾಗಿ ಚಳವಳಿ ಮುಕ್ತಾಯಗೊಂಡಾಗ ಇವರು ಮತ್ತೆ ತಮ್ಮ ವಿದ್ಯಾಭ್ಯಾಸವನ್ನು  ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು  ಮುಂದುವರಿಸಿದರು. ಅಲ್ಲಿ  ಗುರು ತ್ಯಾಗೀಶಾನಂದರೊಡನೆ  ಮೌಢ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಬಿ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವಂತೆ ಗುರುಗಳು ಹೇಳಿದರೂ ಒಪ್ಪದ ಇವರು 1946ರಲ್ಲಿ ನ್ಯಾಶನಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು.
ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮೈಸೂರು ಚಲೋ ಚಳವಳಿ ಪ್ರಾರಂಭವಾಯಿತು. ಮತ್ತೊಮ್ಮೆ ಅವರಲ್ಲಿನ ರಾಷ್ಟ್ರಪ್ರೇಮ ಜಾಗೃತಗೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಇಳಿದರು. ನರಸಿಂಹಯ್ಯನವರು "ಇನ್ ಕಿಲಾಬ್" ಎಂಬ ಕೈ ಬರಹದ ಪತ್ರಿಕೆಯನ್ನು ಪ್ರಾರಂಭಿಸಿ ಸುಮಾರು 37 ಸಂಚಿಕೆಗಳನ್ನು ಪ್ರಕಟಿಸಿದರು. ನಂತರ ಕಾಂಗ್ರೆಸ್ ಮತ್ತು ಸರ್ಕಾರದ ನಡುವಿನ ಒಪ್ಪಂದದಿಂದಾಗಿ ಚಳವಳಿ ಮುಕ್ತಾಯವಾಯಿತು. ಇವರ ರಾಜೀನಾಮೆ  ಅಂಗೀಕಾರವಾಗದ ಕಾರಣ ಮತ್ತೆ ತಮ್ಮ ಅಧ್ಯಾಪಕ ವೃತ್ತಿ ಯನ್ನು ಮುಂದುವರಿಸಿದರು. ನಂತರ ಉನ್ನತ ವಿದ್ಯಾಭ್ಯಾಸವನ್ನು ಅಮೆರಿಕಾದಲ್ಲಿ ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು. ಮತ್ತೊಮ್ಮೆ ಅಮೆರಿಕಾ ದೇಶಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗಿ ಬಂದರು.
ನರಸಿಂಹಯ್ಯನವರು ಶಿಕ್ಷಣರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ನ್ಯಾಷನಲ್ ಸ್ಕೂಲಿನಿಂದ ತಮ್ಮ ವಿದ್ಯಾಯಾನವನ್ನು ಪ್ರಾರಂಭಿಸಿ ಆ ಕಾಲೇಜಿನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣರಾದರು. ನ್ಯಾಷನಲ್ ಕಾಲೇಜಿನಲ್ಲಿ ಸಹಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು.
ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಇವರು ನ್ಯಾಷನಲ್ ಕಾಲೇಜಿನಲ್ಲಿ "ಬೆಂಗಳೂರು ಸೈನ್ಸ್ ಫೋರಂ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇಲ್ಲಿ ತಂತ್ರಜ್ಞಾನ, ವೈದ್ಯಕೀಯ, ಮನಶಾಸ್ತ್ರ ಮೊದಲಾದವುಗಳ ಬಗ್ಗೆ  ಉಪನ್ಯಾಸಗಳನ್ನು ನೀಡಲಾಗುತ್ತಿತ್ತು.
ವಿದ್ಯಾರ್ಥಿಗಳಿಗೆ ನೀತಿ ಹಾಗೂ ಆರೋಗ್ಯದ ಬಗ್ಗೆ ಅರಿವು ನೀಡುವ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ  ಲೈಂಗಿಕ ಶಿಕ್ಷಣವನ್ನು ನೀಡುವ ಹೊಸ ಪ್ರಯೋಗವನ್ನು ಜಾರಿಗೆ ತಂದರು.
ಇವರ ಮತ್ತೊಂದು ಪ್ರಯೋಗವೆಂದರೆ ಪರೀಕ್ಷಾ ಮೇಲ್ವಿಚಾರಕರಿಲ್ಲದೆ ಪರೀಕ್ಷೆಗಳನ್ನು  ನಡೆಸಿದ್ದು. ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಲು ಇವರು ಹಲವಾರು ಶಿಬಿರಗಳನ್ನು ನಡೆಸಿದರು. ನರಸಿಂಹಯ್ಯನವರು ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷತೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ವಿಶೇಷವೆಂದರೆ ಆ ಸಂಸ್ಥೆಗಳಲ್ಲಿ ವಂತಿಗೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ.
ನರಸಿಂಹಯ್ಯನವರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಮ್ಮೆ ಬೇಸಿಗೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪಾನಕವನ್ನು ಕುಡಿಯಲು ನೀಡಿದ್ದರು. ಇವರಿಗೆ ಕನ್ನಡ ನಾಟಕಗಳಲ್ಲಿ ತುಂಬಾ ಆಸಕ್ತಿಯಿತ್ತು. ಇವರು ಪ್ರಿನ್ಸಿಪಾಲರಾಗಿದ್ದಾಗ ಕಾಲೇಜಿನಲ್ಲಿ ಇಂಟರ್ ಸೆಕ್ಷನ್ ನಾಟಕ ಸ್ಪರ್ಧೆಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದರು. ಇವರು ವಿದ್ಯಾರ್ಥಿಗಳೊಂದಿಗೆ ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳನ್ನು ಆಡುತ್ತಿದ್ದರು.
   ನರಸಿಂಹಯ್ಯನವರು ಬಾಲ್ಯದಿಂದಲೂ ಸ್ವತಂತ್ರವಾಗಿ ಆಲೋಚಿಸುವ ಗುಣವನ್ನು  ಹೊಂದಿದ್ದರು. ಇವರ ತಂದೆ ತೀರಿಹೋದಾಗ ತಮ್ಮ ತಲೆಗೂದಲನ್ನು ತೆಗೆಸಿಕೊಳ್ಳಲು ಒಪ್ಪಲಿಲ್ಲ. ಇವರ ಮೂಢನಂಬಿಕೆಗಳ ವಿರುದ್ಧ ಬರೆದಿರುವ ಲೇಖನಗಳು " ತೆರೆದ ಮನ" ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಇವರು ಜ್ಯೋತಿಷ್ಯ ಮತ್ತು ಪವಾಡಪುರುಷರ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಒಮ್ಮೆ ಸಾಯಿಬಾಬರಿಗೆ "ನೀವು ಗಾಳಿಯಿಂದ ವಸ್ತುಗಳನ್ನು ಸೆಳೆದು ಕೊಡುವಂತಹ ಪವಾಡಗಳನ್ನು ಮಾಡುತ್ತಿರುವುದೇ ಹೌದಾದಲ್ಲಿ ನನಗೆ ಶೂನ್ಯದಿಂದ ಕುಂಬಳಕಾಯಿಯನ್ನು ಸೃಷ್ಟಿಸಿಕೊಡಿ" ಎಂದು ಸವಾಲನ್ನು ಹಾಕಿದ್ದರು.
ಇವರು ಶಿಕ್ಷಣಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು  ಕಂಡ ಸರ್ಕಾರ ಇವರನ್ನು 1972 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಿತು. ನಂತರ ನಾಗರಬಾವಿಯಲ್ಲಿ ಪ್ರಾರಂಭವಾಗಿದ್ದ ಶಿಕ್ಷಣ ಸಂಸ್ಥೆಯ ಕಟ್ಟಡಗಳ ನಿರ್ಮಾಣವನ್ನು ತ್ವರಿತಗೊಳಿಸಿ ನಾಗರಬಾವಿಯನ್ನು 'ಜ್ಞಾನಭಾರತಿ"ಯನ್ನಾಗಿ ಮಾಡಿದರು. ಇವರು ಉಪಕುಲಪತಿಗಳಾದ ನಂತರ ಮೌಢ್ಯತೆಯ ವಿರುದ್ಧ ಜನರನ್ನು ಜಾಗೃತಗೊಳಿಸಲು ವಿಶ್ವವಿದ್ಯಾನಿಲಯದ ವತಿಯಿಂದ "ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ಸಮಿತಿ"ಯನ್ನು  ನೇಮಕ ಮಾಡಿದರು. ಈ ಸಮಿತಿಯು ಪವಾಡಪುರುಷರು ನಡೆಸುತ್ತಿದ್ದ ಪವಾಡಗಳನ್ನು ಬಯಲು ಪಡಿಸಿತು. 1980 ರಲ್ಲಿ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.
ಇವರು ತಮ್ಮ ಸೇವೆ ಮತ್ತು ಸಾಧನೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದರು. 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ಕೇಂದ್ರ ಸರ್ಕಾರ "ಪದ್ಮಭೂಷಣ" ಪ್ರಶಸ್ತಿಯನ್ನು ನೀಡಿತು. 1990ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ನ್ನು ಪಡೆದುಕೊಂಡರು. ಗುಲ್ಬರ್ಗ. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನ್ನ ನೀಡಿ ಗೌರವಿಸಿತು. ಹಿಂದುಳಿದವರು ಏಳ್ಗೆಗಾಗಿ ದುಡಿದವರಿಗೆ ನೀಡುತ್ತಿದ್ದ ದೇವರಾಜ್ ಅರಸ್ ಪ್ರಶಸ್ತಿಯನ್ನು 1994 ರಲ್ಲಿ ಪಡೆದರು. ಇವರ ಮೌಢ್ಯತೆಯ ವಿರುದ್ಧ ನಡೆಸಿದ ಹೋರಾಟಕ್ಕಾಗಿ ಅಮೆರಿಕದ ಪ್ರಕೃತ್ಯತೀತವಾದ ಘಟನೆಗಳನ್ನು ವೈಜ್ಞಾನಿಕವಾಗಿ ಸಂಶೋಧಿಸುವ ಸಮಿತಿಯಿಂದ ಫೆಲೋಶಿಪ್ ನ್ನು ಪಡೆದ ಭಾರತದ ಏಕೈಕ ವ್ಯಕ್ತಿ ನರಸಿಂಹಯ್ಯನವರು. 1942 ರಲ್ಲಿ ನಡೆದ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಸರ್ಕಾರ ತಾಮ್ರಪತ್ರವನ್ನು ನೀಡಿತು.
1992 ರಲ್ಲಿ ಇವರ " ತೆರೆದ ಮನ" ಎಂಬ ಪತ್ತಿಕಾಲೇಖನಗಳ ಸಂಗ್ರಹವು ಪ್ರಕಟವಾಯಿತು. 1995 ರಲ್ಲಿ ಇವರ ಆತ್ಮಕಥೆ "ಹೋರಾಟದ ಹಾದಿ" ಪ್ರಕಟವಾಯಿತು.
ಮೌಢ್ಯತೆಯ ವಿರೋಧಿಯಾಗಿದ್ದ ಇವರು  "ಯಾವ ಧಾರ್ಮಿಕ ಅಂತ್ಯ ಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ ಮತ್ತು ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜ ಕೊಡಕೂಡದು" ಎಂದು ಉಯಿಲನ್ನು ಬರೆದಿದ್ದ ನರಸಿಂಹಯ್ಯನವರು ಜನವರಿ 31, 2005 ರಲ್ಲಿ ಇಹಲೋಕ ತ್ಯಜಿಸಿದರು.
  ಹುಟ್ಟಿನಿಂದಲೂ ಬಡತನದಲ್ಲೇ ಇದ್ದ ನರಸಿಂಹಯ್ಯನವರು ದುಡಿಯುವಾಗಲೂ ಸಹ ತಮ್ಮ ಗಳಿಕೆಯ ಹಣವನ್ನೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದು ಸರಳ ಜೀವನವನ್ನು ನಡೆಸಿ ಎಲ್ಲರಿಗು ಆದರ್ಶಪ್ರಾಯರಾಗಿದ್ದಾರೆ.
 - ವಿಜಯಲಕ್ಷ್ಮಿ  ಎಂ ಎಸ್

ಕಾಮೆಂಟ್‌ಗಳಿಲ್ಲ: