Pages

ಸರಣಿ ಲೇಖನ - 2 - ನಾನೇಕೆ ನಾಸ್ತಿಕ

[ಭಗತ್ ಸಿಂಗ್ ರವರ ನಾನೇಕೆ ನಾಸ್ತಿಕ  ಅನುವಾದವಿದು]
(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

ಆನಂತರ ನಾನು ಕ್ರಾಂತಿಕಾರಿ ಪಕ್ಷವನ್ನು ಸೇರಿಕೊಂಡೆ. ನನಗೆ ಆರಂಭದಲ್ಲಿ ಪರಿಚಯವಾದ ನಾಯಕರು, ತಮಗೆ ನಂಬಿಕೆಯಿರದಿದ್ದರೂ ದೇವರ ಅಸ್ತಿತ್ವವನ್ನು ನಿರಾಕರಿಸುವ ಧೈರ್ಯ ಮಾಡಲಿಲ್ಲ. ನನ್ನ ಪಟ್ಟು ಬಿಡದ ಪ್ರಶ್ನೆಗಳಿಗೆ ಅವರು ಹೀಗೆ ಹೇಳುತ್ತಿದ್ದರು: “ನಿಮಗೆ ಬೇಕೆನಿಸಿದಾಗ ಪ್ರಾರ್ಥಿಸಿ.” ಇದೊಂದು ನಾಸ್ತಿಕತೆ – ಆ ಪಂಥವನ್ನು ಅಂಗೀಕರಿಸಲು ಕಡಿಮೆ ಧೈರ್ಯ ಸಾಕು. 

ನನಗೆ ನಂತರದಲ್ಲಿ ಪರಿಚಯವಾದ ನಾಯಕರು ದೃಢಚಿತ್ತದ ದೈವಭಕ್ತರು. ಅವರ ಹೆಸರನ್ನು ಹೇಳುತ್ತೇನೆ – ಕಾಕೋರಿ ಪಿತೂರಿ ಮೊಕದ್ದಮೆಗೆ ಸಂಬಂಧಿಸಿದಂತೆ ಈಗ ಕರಿನೀರಿನ (life transportation) ಶಿಕ್ಷೆಯನ್ನು ಅನುಭವಿಸುತ್ತಿರುವ ಗೌರವಾನ್ವಿತ ಕಾಮ್ರೇಡ್ ಸಚಿಂದ್ರನಾಥ್ ಸನ್ಯಾಲ್. ಅವರ ಏಕೈಕ ಪ್ರಸಿದ್ಧ ಕೃತಿ ‘ಬಂಧಿ ಜೀವನ’ದಲ್ಲಿ ಪ್ರಥಮ ಪುಟದಿಂದಲೇ ದೇವರ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ವೇದಾಂತದ ಪ್ರಭಾವದಿಂದಾಗಿ, ಆ ಸುಂದರ ಪುಸ್ತಕದ ಎರಡನೆಯ ಭಾಗದ ಕೊನೆಯ ಪುಟದಲ್ಲಿ ದೇವರ ಮೇಲೆ ಸ್ತುತಿಗಳ ಮಳೆಗರೆದಿದ್ದಾರೆ; ಇದು ಅವರ ಚಿಂತನೆಗಳ ಸುವ್ಯಕ್ತ ಭಾಗವನ್ನು ರೂಪಿಸುತ್ತದೆ. ಫಿರ್ಯಾದಿನ ಪ್ರಕಾರ, 1925ರ ಜನವರಿ 28ರಂದು ಭಾರತದಾದ್ಯಂತ ಹಂಚಿದ ‘ಕ್ರಾಂತಿಕಾರಿ ಕರಪತ್ರ’ವು ಅವರ ಬೌದ್ಧಿಕ ಶ್ರಮದ ಫಲ. ಈಗ ಗುಪ್ತ ಬರಹಗಳಲ್ಲಿ ಅನಿವಾರ್ಯವಾಗಿರುವಂತೆ, ಪ್ರಮುಖ ನಾಯಕ ತನಗೆ ಪ್ರಿಯವಾದ ಸ್ವಂತ ವಿಚಾರಗಳನ್ನು ವ್ಯಕ್ತಪಡಿಸುತ್ತಾನೆ; ಇನ್ನಿತರ ಕಾರ್ಯಕರ್ತರು, ಅವರಿಗೆ ಭಿನ್ನಾಭಿಪ್ರಾಯಗಳಿದ್ದರೂ ಸಹ ಅದಕ್ಕೆ ಮೌನವಾಗಿ ಸಮ್ಮತಿಸಬೇಕು. ಆ ಕರಪತ್ರದಲ್ಲಿ ದೇವರನ್ನು, ಅವನ ಆನಂದಗಳನ್ನು ಮತ್ತು ಲೀಲೆಗಳನ್ನು ಸ್ತುತಿಸುವುದಕ್ಕೇ ಒಂದು ಪ್ಯಾರಾ ಪೂರ್ತಿ ಮೀಸಲಿಡಲಾಗಿದೆ. ಅದೆಲ್ಲವೂ ನಿಗೂಢವಾದ (mysticism). 

ನಾನು ಹೇಳಬಯಸುವುದೇನೆಂದರೆ, ನಾಸ್ತಿಕತೆಯ ವಿಚಾರವು ಕ್ರಾಂತಿಕಾರಿ ಪಕ್ಷದಲ್ಲೂ ಸಹ ಹುಟ್ಟಿರಲಿಲ್ಲ. ಪ್ರಖ್ಯಾತ ಕಾಕೋರಿ ಹುತಾತ್ಮರು – ಆ ನಾಲ್ವರೆಲ್ಲರೂ ತಮ್ಮ ಕೊನೆಯ ದಿನಗಳನ್ನು ಪ್ರಾರ್ಥನೆಗಳಲ್ಲಿ ಕಳೆದರು. ರಾಮ್ ಪ್ರಸಾದ್ ಬಿಸ್ಮಿಲ್ ಸಂಪ್ರದಾಯಸ್ಥ ಆರ್ಯಸಮಾಜಿಯಾಗಿದ್ದರು. ಸಮಾಜವಾದ ಮತ್ತು ಕಮ್ಯುನಿಸಮ್ ಕ್ಷೇತ್ರಗಳಲ್ಲಿ ವಿಫುಲವಾದ ಅಧ್ಯಯನ ನಡೆಸಿದ್ದರೂ ಸಹ, ರಾಜೇಂದ್ರ ಲಾಹಿರಿಗೆ ಉಪನಿಷತ್ ಮತ್ತು ಗೀತಾಗಳ ಶ್ಲೋಕಗಳನ್ನು ಪಠಿಸುವ ಬಯಕೆಯನ್ನು ಹತ್ತಿಕ್ಕಲಾಗಲಿಲ್ಲ. ಅವರಲ್ಲೆಲ್ಲಾ ಪ್ರಾರ್ಥನೆಯನ್ನು ಮಾಡದ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ಅವರು ಹೇಳುತ್ತಿದ್ದರು: “ತತ್ವಶಾಸ್ತ್ರವು ಮಾನವನ ದೌರ್ಬಲ್ಯ ಅಥವಾ ಜ್ಞಾನದ ಕೊರತೆಯ ಫಲ.” ಅವರೂ ಸಹ ಕರಿನೀರಿನ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆದರೆ ಅವರೂ ಕೂಡ ದೇವರ ಅಸ್ತಿತ್ವವನ್ನು ನಿರಾಕರಿಸುವ ಧೈರ್ಯ ಮಾಡಲೇ ಇಲ್ಲ.

ಅಲ್ಲಿಯ ತನಕ ನಾನೊಬ್ಬ ಕೇವಲ ರಮ್ಯ (romantic) ಭಾವನಾವಾದಿ ಕ್ರಾಂತಿಕಾರಿಯಾಗಿದ್ದೆ. ಅಲ್ಲಿಯವರೆಗೂ ನಾವು (ನಾಯಕರನ್ನು -ಸಂ.) ಅನುಸರಿಸಬೇಕಿತ್ತು. ಇದೀಗ ಸಂಪೂರ್ಣ ಜವಾಬ್ದಾರಿಯನ್ನು ಹೊರುವ ಕಾಲ ಬಂದಿದೆ. ಅನಿವಾರ್ಯ ಹಿನ್ನಡೆಯಿಂದಾಗಿ ಸ್ವಲ್ಪಕಾಲ ಪಕ್ಷದ ಅಸ್ತಿತ್ವವೇ ಅಸಾಧ್ಯವೇನೋ ಎನ್ನುವಂತೆ ತೋರುತ್ತಿತ್ತು. ಉತ್ಸಾಹಿ ಕಾಮ್ರೇಡರು – ಅಲ್ಲ, ನಾಯಕರು ನಮ್ಮನ್ನು ಅಪಹಾಸ್ಯ ಮಾಡಲಾರಂಭಿಸಿದರು. ಒಂದು ದಿನ ನಮ್ಮ ಸ್ವಂತ ಕಾರ್ಯಕ್ರಮವು ನಿಷ್ಪಲವೆಂಬ ನಂಬಿಕೆ ಬಂದುಬಿಡಬಹುದೇನೋ ಎಂದು ಸ್ವಲ್ಪಕಾಲ ಭಯಪಟ್ಟಿದ್ದೆ. ಅಲ್ಲೇ ನನ್ನ ಕ್ರಾಂತಿಕಾರಿ ಜೀವನ ತಿರುವು ಕಂಡಿದ್ದು. 

‘ಅಧ್ಯಯನ’ ಎನ್ನುವುದು ನನ್ನ ಮನದಂಗಳದಲ್ಲಿ ಪ್ರತಿಧ್ವನಿತವಾದ ಕೂಗು. ವಿರೋಧಿಗಳು ಮುಂದಿರಿಸಿದ ವಾದಗಳನ್ನು ಎದುರಿಸಲು ನನ್ನನ್ನು ಸಿದ್ಧಗೊಳಿಸಿಕೊಳ್ಳಲು ಅಧ್ಯಯನ ಮಾಡಬೇಕು. ನನ್ನ ಪಂಥದ ಪರವಾಗಿ ವಾದ ಮಾಡಲು ಆರಂಭಿಸಿದೆ. ನನ್ನ ಹಿಂದಿನ ಶ್ರದ್ಧೆ ಮತ್ತು ನಂಬಿಕೆಗಳು ಗಣನೀಯವಾಗಿ ಮಾರ್ಪಾಡಾದವು. ನಮ್ಮ ಹಿಂದಿನವರ ನಡುವೆ ಎದ್ದು ಕಾಣುತ್ತಿದ್ದ ಬರಿಯ ಹಿಂಸಾತ್ಮಕ ವಿಧಾನಗಳ ರಮ್ಯತೆಯ ಜಾಗದಲ್ಲಿ ಗಂಭೀರ ವಿಚಾರಗಳು ಬಂದವು. ಇನ್ನು ಆಧ್ಯಾತ್ಮಿಕತೆಯಿಲ್ಲ. ಭಯಂಕರ ಅವಶ್ಯಕತೆಯ ವಿಷಯದಲ್ಲಿ ಮಾತ್ರ ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಬಹುದು; ಒಂದು ನೀತಿಯಾಗಿ ಅಹಿಂಸೆಯು ಎಲ್ಲಾ ಸಮೂಹ ಚಳುವಳಿಗೆ ಅನಿವಾರ್ಯ. ಇದಿಷ್ಟು ವಿಧಾನಗಳ ಬಗ್ಗೆ. ನಾವು ಹೋರಾಡಬೇಕಾದ ಆದರ್ಶದ ಸ್ಪಷ್ಟ ಪರಿಕಲ್ಪನೆಯು ಬಹಳ ಮುಖ್ಯವಾದ ವಿಷಯವಾಗಿತ್ತು. 

ಕಾರ್ಯಕ್ಷೇತ್ರದಲ್ಲಿ ಬಹಳ ಮುಖ್ಯವಾದ ಚಟುವಟಿಕೆಗಳು ಇಲ್ಲದ್ದರಿಂದ, ವಿಶ್ವಕ್ರಾಂತಿಯ ವಿವಿಧ ಆದರ್ಶಗಳನ್ನು ಅಧ್ಯಯನ ಮಾಡಲು ನನಗೆ ವಿಫುಲ ಅವಕಾಶ ದೊರಕಿತು. ಅರಾಜಕತಾವಾದಿ ನಾಯಕ ಬಕುನಿನ್ ಬಗ್ಗೆ, ಕಮ್ಯುನಿಸಮ್‍ನ ಪಿತಾಮಹ ಕಾರ್ಲ್ ಮಾರ್ಕ್ಸ್ ರ ಕೆಲವು ಬರಹಗಳನ್ನು, ಹೆಚ್ಚಾಗಿ ತಮ್ಮ ದೇಶದಲ್ಲಿ ಕ್ರಾಂತಿಯನ್ನು ಯಶಸ್ವಿಯಾಗಿ ನಡೆಸಿದ ಲೆನಿನ್, ಟ್ರಾಟ್‍ಸ್ಕಿ ಮತ್ತು ಇನ್ನಿತರರ ಬರಹಗಳನ್ನು ಅಧ್ಯಯನ ಮಾಡಿದೆ. ಅವರೆಲ್ಲರೂ ನಾಸ್ತಿಕರಾಗಿದ್ದರು. ಬಕುನಿನ್‍ರವರ ‘ದೇವರು ಮತ್ತು ರಾಜ್ಯ’ವು ಸಮಗ್ರವಲ್ಲದಿದ್ದರೂ, ವಿಷಯದ ಬಗ್ಗೆ ಕುತೂಹಲಕಾರಿ ಅಧ್ಯಯನ. 

ನಂತರ ನಿರಾಲಂಭಸ್ವಾಮಿಯವರ ‘ಸಾಮಾನ್ಯ ಪ್ರಜ್ಞೆ’ (common sense) ಪುಸ್ತಕ ದೊರಕಿತು. ಅದು ಕೇವಲ ಒಂದು ರೀತಿಯ ನಿಗೂಢ ಆಸ್ತಿಕವಾದ. ಇದು ನನಗೆ ಅತ್ಯಂತ ಆಸಕ್ತಿದಾಯಕ ವಿಷಯವಾಯಿತು. ಸುಮಾರು 1926ರ ಕೊನೆಯಲ್ಲಿ, ವಿಶ್ವವನ್ನು ಸೃಷ್ಟಿಸಿದ, ಅದಕ್ಕೆ ಮಾರ್ಗದರ್ಶನವಿತ್ತ, ಅದನ್ನು ನಿಯಂತ್ರಿಸಿದ ಸರ್ವಶಕ್ತ ಪರಮ ಪುರುಷನ ಅಸ್ತಿತ್ವದ ಸಿದ್ಧಾಂತ ತಳವಿಲ್ಲದ್ದು ಎಂದು ಮನವರಿಕೆಯಾಗುತ್ತಿತ್ತು. ನನ್ನ ಈ ಅಪನಂಬಿಕೆಯನ್ನು ಬಹಿರಂಗಪಡಿಸಿದೆ. ಈ ವಿಷಯಗಳ ಬಗ್ಗೆ ನನ್ನ ಸ್ನೇಹಿತರೊಡನೆ ಚರ್ಚಿಸಲು ಆರಂಭಿಸಿದೆ. ನಾನು ಎಲ್ಲರಿಗೂ ಘೋಷಿತ ನಾಸ್ತಿಕನಾದೆ. ಆದರೆ ಅದರ ಅರ್ಥವನ್ನು ಈಗ ಚರ್ಚಿಸುತ್ತೇನೆ.
1927ನೇ ಮೇ ತಿಂಗಳಲ್ಲಿ ನನ್ನನ್ನು ಲಾಹೋರಿನಲ್ಲಿ ಬಂಧಿಸಿದರು. ಬಂಧನವು ಅನಿರೀಕ್ಷಿತವಾಗಿತ್ತು. ಪೊಲೀಸರಿಗೆ ನಾನು ಬೇಕಾದವನೆಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ನಾನು ತೋಟವನ್ನು ಹಾದುಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಪೊಲೀಸರಿಂದ ಸುತ್ತುವರಿಯಲ್ಪಟ್ಟಿದ್ದೆ. ನನಗೇ ಆಶ್ಚರ್ಯವಾಗುವಂತೆ ಆಗ ಬಹಳ ಶಾಂತನಾಗಿದ್ದೆ. ನನಗೆ ಯಾವುದೇ ರೀತಿಯ ತಳಮಳ ಉಂಟಾಗಲಿಲ್ಲ ಅಥವಾ ಉದ್ರೇಕದ ಅನುಭವವೂ ಆಗಲಿಲ್ಲ. ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಂತರ ನನ್ನನ್ನು ರೈಲ್ವೆ ಪೊಲೀಸ್ ಲಾಕಪ್‍ಗೆ ಕರೆದೊಯ್ದರು; ಒಂದು ತಿಂಗಳು ಪೂರ್ತಿ ಅಲ್ಲಿದ್ದೆ. ಪೊಲೀಸ್ ಅಧಿಕಾರಿಗಳ ಜೊತೆ ನಡೆದ ನಡೆದ ಹಲವಾರು ದಿನಗಳ ಮಾತುಕತೆಯ ನಂತರ, ಕಾಕೋರಿ ತಂಡದೊಂದಿಗೆ ನನಗಿದ್ದ ಸಂಬಂಧ ಮತ್ತು ಕ್ರಾಂತಿಕಾರಿ ಚಳುವಳಿಗೆ ಸಂಬಂಧಿಸಿದಂತೆ ನನ್ನ ಇನ್ನಿತರ ಚಟುವಟಿಕೆಗಳ ಬಗ್ಗೆ ಅವರಿಗೆ ಕೆಲವು ಮಾಹಿತಿಗಳು ದೊರಕಿಬಹುದೆಂದು ಊಹಿಸಿದೆ. ನನಗೆ ಪೊಲೀಸರು ಹೇಳಿದ್ದೇನೆಂದರೆ, ಅಲ್ಲಿ ವಿಚಾರಣೆ ನಡೆಯುತ್ತಿದ್ದಾಗ (ಕಾಕೋರಿ ಮೊಕದ್ದಮೆಗೆ ಸಂಬಂಧಪಟ್ಟಿದ್ದು -ಸಂ) ನಾನು ಲಕ್ನೋದಲ್ಲಿದ್ದೆ; ಅವರನ್ನು (ಕಾಕೋರಿ ತಂಡದವರನ್ನು -ಸಂ.) ಬಿಡಿಸಲು ಸಂಚು ಮಾಡುತ್ತಿದ್ದೆ; ಅವರ ಒಪ್ಪಿಗೆ ಪಡೆದ ನಂತರ ಸ್ವಲ್ಪ ಬಾಂಬುಗಳನ್ನು ಶೇಖರಿಸಿಕೊಂಡಿದ್ದೆವು ಮತ್ತು ಅದನ್ನು ಪರೀಕ್ಷಿಸಲು 1926ರ ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬೊದನ್ನು ಜನಸಂದಣಿಯ ಮೇಲೆ ಬಾಂಬ್ ಎಸೆದೆವು  - ಇದೆಲ್ಲವನ್ನೂ ನನ್ನ ಹಿತದೃಷ್ಟಿಯಿಂದ, ಕ್ರಾಂತಿಕಾರಿ ಪಕ್ಷದ ಚಟುವಟಿಕೆಗಳ ಮೆಲೆ ಬೆಳಕು ಚೆಲ್ಲುವ ಯಾವುದಾದರೂ ಹೇಳಿಕೆಯನ್ನು ನೀಡುವುದಾದರೆ, ನನ್ನನ್ನು ಬಂಧಿಸದಿರುವುದಷ್ಟೇ ಅಲ್ಲ, ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿಯಾಗಿ (approver) ಹಾಜರುಪಡಿಸದೇ ಬಂಧಮುಕ್ತಗೊಳಿಸಿ, ಬಹುಮಾನವನ್ನೂ ಕೊಡುತ್ತೇವೆಂದು ಅವರು ಮುಂದುವರೆಸಿ ಹೇಳಿದರು. ಅವರ ಪ್ರಸ್ತಾಪ ಕೇಳಿ ನಕ್ಕುಬಿಟ್ಟೆ. ಅದೆಲ್ಲವೂ ಮೋಸ. ನಮ್ಮಂಥ ವಿಚಾರಗಳಿರುವ ಜನರು ತಮ್ಮ ಸ್ವಂತ ಮುಗ್ಧ ಜನತೆಯ ಮೇಲೆ ಬಾಂಬು ಎಸೆಯುವುದಿಲ್ಲ. 

ಒಂದು ದಿನ ಬೆಳಿಗ್ಗೆ, ಅಂದಿನ ಸಿಐಡಿ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ನ್ಯೂಮನ್ ನನ್ನಲ್ಲಿಗೆ ಬಂದರು. ಬಹಳಷ್ಟು ಅನುಕಂಪದ ಮಾತುಕತೆಯಾದ ನಂತರ, ಅವರು ಕೇಳಿದ ಯಾವುದಾದರೊಂದು ಹೇಳಿಕೆಯನ್ನು ಕೊಡದಿದ್ದರೆ, ಕಾಕೋರಿ ಕೇಸಿಗೆ ಸಂಬಂಧಪಟ್ಟಂತೆ ಯುದ್ಧಸಾರುವ ಪಿತೂರಿಯ ಮತ್ತು ದಸರಾ ಬಾಂಬ್ ದಾಳಿಗೆ ಸಂಬಂಧಪಟ್ಟಂತೆ ಭಯಾನಕ ಕೊಲೆಗಳ ಆಪಾದನೆಯ ಮೇಲೆ ವಿಚಾರಣೆಗೆ ನನ್ನನ್ನು ಕಳುಹಿಸಬೇಕಾಗುತ್ತದೆಯೆಂಬ - ಅವರಿಗೆ ಬಹಳ ದುಃಖದ – ವಿಷಯವನ್ನು ತಿಳಿಸಿದರು. ಜೊತೆಗೆ ನನ್ನನ್ನು ಅಪರಾಧಿಯನ್ನಾಗಿ ಮಾಡಲು ಮತ್ತು ನೇಣಿಗೆ ಹಾಕಲು ಅವರಲ್ಲಿ ಸಾಕಷ್ಟು ಸಾಕ್ಷ್ಯಗಳಿವೆಯೆಂದು ಹೇಳಿದರು. ಆ ದಿನಗಳಲ್ಲಿ - ಸ್ವಲ್ಪ ಮುಗ್ಧನಾಗಿದ್ದೆ - ಪೊಲೀಸರ ತಮಗೆ ಬೇಕಾದ್ದನ್ನು ಮಾಡಬಹುದೆಂದು ನಂಬಿದ್ದೆ. ಆ ದಿನವೇ ಕೆಲವು ಪೊಲೀಸ್ ಅಧಿಕಾರಿಗಳು, ನಾನು ಎರಡೂ ಸಾರಿ ನಿಯತವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಮನವೊಲಿಸಲು ಆರಂಭಿಸಿದರು. ಆಗ ನಾನು ನಾಸ್ತಿಕನಾಗಿದ್ದೆ. ಶಾಂತಿ ಮತ್ತು ಸಂತೋಷದ ದಿನಗಳಲ್ಲಿ ಮಾತ್ರವೇ ನಾಸ್ತಿಕನೆಂದು ಜಂಭಪಡಬಹುದೋ ಅಥವಾ ಅಂತಹ ಕಠಿಣ ಸಮಯದಲ್ಲೂ ಸಹ ನನ್ನ ತತ್ವಗಳಿಗೆ ಬದ್ಧನಾಗಿರಬಹುದೋ ಎಂಬುದನ್ನು ಬಗೆಹರಿಸಿಕೊಳ್ಳಬೇಕಾಗಿತ್ತು. ಬಹಳ ಆಲೋಚನೆಯ ನಂತರ ದೇವರನ್ನು ನಂಬುವುದಾಗಲೀ ಅಥವಾ ಪ್ರಾರ್ಥನೆ ಸಲ್ಲಿಸುವುದಾಗಲೀ ನನ್ನಿಂದ ಸಾಧ್ಯವಿಲ್ಲವೆಂದು ನಿರ್ಧರಿಸಿದೆ. ಇಲ್ಲ ನಾನು ಪ್ರಾರ್ಥನೆ ಮಾಡಲೇ ಇಲ್ಲ. ಅದು ನನ್ನ ಸತ್ವಪರೀಕ್ಷೆಯಾಗಿತ್ತು ಮತ್ತು ಅದರಲ್ಲಿ ಯಶಸ್ವಿಯಾದೆ. ಬೇರೆ ಕೆಲವು ವಿಷಯಗಳನ್ನು ಬಲಿಕೊಟ್ಟು ನನ್ನ ಜೀವ ಉಳಿಸಿಕೊಳ್ಳಬೇಕೆಂದು ನಾನು ಯಾವತ್ತೂ, ಒಂದರೆಕ್ಷಣವೂ ಬಯಸಲಿಲ್ಲ. ಹೀಗೆ ನಾನು ದೃಢನಿಷ್ಠೆಯ ನಾಸ್ತಿಕನಾದೆ, ಅಂದಿನಿಂದಲೂ ನಾಸ್ತಿಕನಾಗಿಯೇ ಉಳಿದಿದ್ದೇನೆ. ಅಂತಹ ಪರೀಕ್ಷೆಯನ್ನು ಎದುರಿಸಿ ನಿಲ್ಲುವುದು ಸುಲಭದ ಕೆಲಸವಾಗಿರಲಿಲ್ಲ. (ದೇವರಲ್ಲಿ -ಸಂ.) 

‘ನಂಬಿಕೆ’ಯು ಕಷ್ಟಕಾರ್ಪಣ್ಯಗಳನ್ನು ಹಗುರಗೊಳಿಸುತ್ತದೆ, ಅವುಗಳನ್ನು ಸಂತಸಮಯವನ್ನಾಗಿಯೂ ಮಾಡುತ್ತದೆ. ಮನುಷ್ಯನು ದೇವರಲ್ಲಿ ಬಹಳ ಬಲವಾದ ಸಮಾಧಾನ ಮತ್ತು ಸಹಾಯವನ್ನೂ ಕಂಡುಕೊಳ್ಳುತ್ತಾನೆ. ಅವನಿಲ್ಲದೆ ಹೋದರೆ ಮಾನವನು ತನ್ನ ಮೇಲೆಯೇ ಅವಲಂಬಿತನಾಗಿರಬೇಕು. ಪ್ರವಾಹ ಮತ್ತು ಬಿರುಗಾಳಿಗಳ ಮಧ್ಯೆ ತನ್ನ ಕಾಲ ಮೇಲೆ ತಾನು ನಿಲ್ಲುವುದು ಹುಡುಗಾಟಿಕೆಯಲ್ಲ. ಅಂತಹ ಪರೀಕ್ಷೆಯ ಸಮಯದಲ್ಲಿ ಜಂಭವಿದ್ದರೆ, ಅದು ಆವಿಯಾಗಿ ಹೋಗುತ್ತದೆ ಮತ್ತು ವ್ಯಕ್ತಿಯು ಸಾಮಾನ್ಯ ನಂಬಿಕೆಗಳನ್ನು ನಿರಾಕರಿಸುವ ಧೈರ್ಯ ಮಾಡಲಾರ. ಅವನು ಹಾಗೇನಾದರೂ ಮಾಡಿದರೆ, ಆಗ ಅವನಿಗೆ ಕೇವಲ ಜಂಭವಲ್ಲದೆ ಬೇರೆ ಯಾವುದೋ ಬಲವಿರಬೇಕೆಂಬ ನಿರ್ಧಾರಕ್ಕೆ ನಾವು ಬರಲೇಬೇಕು. ಈಗಿರುವ ಪರಿಸ್ಥಿತಿಯು ಸ್ಪಷ್ಟವಾಗಿ ಇದೇ ಆಗಿದೆ. ತೀರ್ಪು ಏನೆಂಬುದು ಈಗಾಗಲೇ ತುಂಬಾ ಚೆನ್ನಾಗಿ ಗೊತ್ತಿದೆ. ಅದನ್ನು ಒಂದು ವಾರದೊಳಗೆ ತಿಳಿಸುತ್ತಾರೆ. ನನಗೆ ಒಂದು ಧ್ಯೇಯಕ್ಕೋಸ್ಕರ ಪ್ರಾಣಾರ್ಪಣೆ ಮಾಡುತ್ತಿದ್ದೇನೆಂಬ ವಿಚಾರವನ್ನು ಬಿಟ್ಟು ಇನ್ನಾವ ಸಮಾಧಾನವಿದೆ? ದೇವರಲ್ಲಿ ನಂಬಿಕೆಯಿಟ್ಟಿರುವ ಒಬ್ಬ ಹಿಂದೂ, ತಾನು ರಾಜನಾಗಿ ಪುನರ್ಜನ್ಮವೆತ್ತುವುದನ್ನು ನಿರೀಕ್ಷಿಸಬಹುದು, ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಆದವನು ತಾನು ಸ್ವರ್ಗದಲ್ಲಿ ಅನುಭವಿಸುವ ಸುಖ ಮತ್ತು ತನ್ನ ನೋವು ಹಾಗೂ ಬಲಿದಾನಗಳಿಗಾಗಿ ದೊರಕುವ ಪುರಸ್ಕಾರಗಳ ಬಗ್ಗೆ ಕನಸು ಕಾಣಬಹುದು. ಆದರೆ ನಾನೇನನ್ನು ಬಯಸಲಿ? ನನ್ನ ಕೊರಳಿನ ಸುತ್ತ ಹಗ್ಗವನ್ನು ಸುತ್ತಿ ಕಾಲಕೆಳಗಿನ ಹಲಗೆಯನ್ನು ಎಳೆದ ಕ್ಷಣವೇ ಕೊನೆಯ ಕ್ಷಣ – ಅದೇ ನನ್ನ ಕಟ್ಟಕಡೆಯ ಕ್ಷಣವಾಗುತ್ತದೆ ಎಂದು ನನಗೆ ಗೊತ್ತು. ನಾನು ಅಥವಾ ಇನ್ನೂ ಸ್ಪಷ್ಟವಾಗಿ ಆಧ್ಯಾತ್ಮಿಕ ಭಾಷೆಯಲ್ಲಿ ವ್ಯಾಖ್ಯಾನಿಸಿರುವಂತೆ ಹೇಳುವುದಾದರೆ, ನನ್ನ ಆತ್ಮವು ಅಲ್ಲಿಗೆ ಅಂತ್ಯವಾಗುತ್ತದೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ಅಂತಹ ಅಮೋಘವಾದ ಅಂತ್ಯವನ್ನು ಕಾಣದ ಕ್ಷಣಕಾಲದ ಹೋರಾಟದ ಬದುಕು - ಸ್ವತಃ ಆ ಬದುಕೇ ಪುರಸ್ಕಾರವಾಗುತ್ತದೆ. ನನಗೆ ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಧೈರ್ಯವಿದ್ದರೆ ಮಾತ್ರ. ಇಹದಲ್ಲಾಗಲಿ ಅಥವಾ ಪರದಲ್ಲಾಗಲಿ ಪುರಸ್ಕಾರ ಸಿಗಬಹುದೆಂದು ಸ್ವಾರ್ಥದ ಉದ್ದೇಶ ಮತ್ತು ಬಯಕೆಗಳಿಲ್ಲದೆ, ಸ್ವಲ್ಪ ನಿಷ್ಕಾಮದಿಂದಲೇ ನನ್ನ ಜೀವನವನ್ನು ಸ್ವಾತಂತ್ರ್ಯ ಹಿತಾಸಕ್ತಿಗಾಗಿ ಮುಡಿಪಾಗಿಟ್ಟೆ; ಏಕೆಂದರೆ ನನಗೆ ಬೇರೆ ರೀತಿ ಮಾಡಲು ಸಾಧ್ಯವಿರಲಿಲ್ಲ.

ಮನುಕುಲದ ಸೇವೆಗಾಗಿ ಮತ್ತು ನೊಂದ ಜನತೆಯ ವಿಮುಕ್ತಿಯನ್ನು ಬಿಟ್ಟು ಬೇರಾವುದಕ್ಕೂ ತಮ್ಮನ್ನು ಮುಡಿಪಾಗಿಡಲು ಸಾಧ್ಯವಿಲ್ಲವೆಂಬ ಮನೋಭಾವವಿರುವ ಬಹುದೊಡ್ಡ ಸಂಖ್ಯೆಯ ಪುರುಷರು ಮತ್ತು ಮಹಿಳೆಯರನ್ನು ಕಾಣುವ ದಿನ ಸ್ವಾತಂತ್ರ್ಯದ ಯುಗ ಆರಂಭವಾಗುತ್ತದೆ. ದಮನಕಾರರನ್ನು, ಶೋಷಕರನ್ನು ಮತ್ತು ನಿರಂಕುಶ ಪ್ರಭುಗಳನ್ನು ಎದುರಿಸಿ ನಿಲ್ಲಲು ರಾಜನಾಗುವ, ಇಂದಿನ ಅಥವಾ ಮುಂದಿನ ಜನ್ಮದಲ್ಲಿ ಅಥವಾ ಸ್ವರ್ಗದಲ್ಲಿ ಯಾವುದಾದರೂ ಪುರಸ್ಕಾರ ಪಡೆಯುವ ಆಸೆಗಳು ಸ್ಫೂರ್ತಿ ತುಂಬಬಾರದು; ಬದಲಿಗೆ ಮನುಕುಲದ ಕೊರಳಿನಿಂದ ದಾಸ್ಯದ ನೊಗವನ್ನು ಕಿತ್ತೊಗೆದು, ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಸ್ಥಾಪಿಸುವ ದಾರಿ ಅವರಿಗೆ ವೈಯಕ್ತಿಕವಾಗಿ ಅಪಾಯಕಾರಿಯಾದ ಮತ್ತು ಅವರ ಉದಾತ್ತ ಸ್ವಭಾವವಾದ ಕಲ್ಪನೆಗೆ ನಿಲುಕುವ ಏಕೈಕ ಮಹೋನ್ನತ ದಾರಿಯನ್ನು ಹಿಡಿಯಬೇಕು. ಅವರ ಉದಾತ್ತ ಧ್ಯೇಯದ ಬಗ್ಗೆ ಅವರಿಗಿರುವ ಹೆಮ್ಮೆಯನ್ನು ಜಂಭವೆಂದು ತಪ್ಪಾಗಿ ವ್ಯಾಖ್ಯಾನ ಮಾಡಬಹುದೆ? ಅಂತಹ ಅಸಹ್ಯಕರ ವಿಶೇಷಣಗಳನ್ನು ಹೇಳುವ ಧೈರ್ಯ ಯಾರಿಗಿದೆ? ನಾನು ಅವನನ್ನು ಮೂರ್ಖ ಅಥವಾ ನೀಚ ಎನ್ನುತ್ತೇನೆ. ಅವನಿಗೆ ಅಂತಹದೊಂದು ಹೃದಯದಲ್ಲಿ ಉಕ್ಕಿ ಹರಿಯುವ ಭಾವೋದ್ರೇಕಗಳನ್ನು ಮತ್ತು ಉದಾತ್ತ ಭಾವನೆಗಳನ್ನು, ಅದರ ಆಳ, ಭಾವುಕತೆಗಳನ್ನು ಅರಿಯಲು ಅಸಾಧ್ಯವಾಗಿರುವುದರಿಂದ ಅವನನ್ನು ಕ್ಷಮಿಸಿಬಿಡೋಣ. ಅವನ ಹೃದಯ ಮಾಂಸದ ಮುದ್ದೆಯಂತೆ ಸತ್ತುಹೋಗಿರುತ್ತದೆ, ಇತರ ಆಸಕ್ತಿಗಳ ನೀಚತನಗಳು ಆವರಿಸಿರುವ ಅವನ ಕಣ್ಣುಗಳು ದುರ್ಬಲವಾಗಿರುತ್ತವೆ. ಯಾವಾಗಲೂ ಸ್ವಾವಲಂಬನೆಯು ಜಂಭವೆಂಬ ವ್ಯಾಖ್ಯಾನಕ್ಕೆ ಗುರಿಯಾಗುತ್ತದೆ. ಅದು ದುಃಖಕರ ಮತ್ತು ಶೋಚನೀಯ. ಆದರೆ ಏನೂ ಮಾಡಲು ಸಾಧ್ಯವಿಲ್ಲ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
ಎಸ್.ಎನ್.ಸ್ವಾಮಿ

ಕಾಮೆಂಟ್‌ಗಳಿಲ್ಲ: