Pages

ಅನುಭವ - ನನ್ನ ಮೊದಲ ಪ್ರೇಮ ಪ್ರಸಂಗ


ಕೆಲ ದಿನಗಳ ಹಿಂದೆ ನಾನು ನನ್ನ ವಿದ್ಯಾರ್ಥಿಗಳಿಗೆ ವಾಟ್ಸ್ ಆಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದೆ. “ನಾನು ಸಧ್ಯದಲ್ಲೇ ನನ್ನ ನೆನಪಿನಂಗಳದಿಂದ ಆಯ್ದ ಕೆಲವು ಘಟನೆಗಳನ್ನು ಬರೆದು ಪ್ರಕಟಿಸಬೇಕೆಂದಿದ್ದೇನೆ. ನಿಮಗೆ ನನ್ನ ತರಗತಿಯಲ್ಲಿ ನಡೆದ ಅಥವಾ ನಿಮ್ಮನ್ನು ಗಾಢವಾಗಿ ಮುಟ್ಟಿದ ವಿಷಯಗಳನ್ನು ನನಗೆ ಬರೆದು ಕಳುಹಿಸಿ.”
ಅದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಬ್ಬ ಹುಡುಗಿ ಮಾತ್ರ ಸ್ವಲ್ಪ ತರಲೆ ಸ್ವಭಾವದವಳು- “ಮೇಡಂ ನಿಮ್ಮ ಪ್ರೀತಿಯ ಅನುಭವದ ಕುರಿತು ಏನಾದರೂ?” ನಾನು ನಕ್ಕು ಹೇಳಿದೆ “ನಾನು ಸದಾ ಯಾರನ್ನಾದರೂ ಪ್ರೀತಿಸುತ್ತಲೇ ಬಂದಿದ್ದೇನೆ. ನನಗೆ ಐನ್‍ಸ್ಟೀನ್ ಎಂದರೆ ಬಹಳ ಪ್ರೀತಿ, ಚಾರ್ಲಿ ಚಾಪ್ಲಿನ್ ಅಂದರೆ ಜೀವ. ಹೀಗೆ ಈ ಪಟ್ಟಿ ಬಹಳ ದೊಡ್ಡದು. . .” ಎಂದೆ. “ಅಲ್ಲ ಮೇಡಂ, ನೀವು ಸಣ್ಣವರಿದ್ದಾಗ?” ನಾನು ಮತ್ತೆ ನನ್ನ ನೆನಪಿನ ಕಡತಗಳನ್ನು ಹುಡುಕಿದಾಗ ಸಿಕ್ಕದ್ದು ಅವಳಿಗೆ ಬರೆದು ಕಳುಹಿಸಿದೆ. ಅದು ಹೀಗಿದೆ:

ಆತನನ್ನು ಮೊದಲು ಭೇಟಿಯಾದಾಗ ನನಗಿನ್ನೂ 11 ವರ್ಷ. ಆತ ಕಪ್ಪಗಿದ್ದ. ಮಾಟವಾದ ಎದೆ, ಚೂಪಾದ ಕಣ್ಣುಗಳು, ಕೇವಲ ಒಂದು ಬಿಳಿ ಪಂಚೆ ಉಟ್ಟಿದ್ದ ಆತ ಒಂದು ಆನೆಯ ಮೇಲೆ ಕುಳಿತು ಹತ್ತಿರ ಬರುತ್ತಿದ್ದರೆ, ನಾನು ಪರವಶಳಾಗಿ ಹೋಗಿದ್ದೆ. ದೂರದಲ್ಲಿ ಯಾರದೋ ದನಿ ಆತನ ಕುರಿತು ವಿವರಣೆ ನೀಡುತ್ತಿದ್ದರೆ, “ಬೆಳ್ಳಗಿರುವುದೇ ಚಂದ” ಎಂಬ ಮಾತುಗಳ ನಡುವೆ ಬೆಳೆದಿದ್ದ ನನಗೆ, ಕಪ್ಪಗಿರುವವರು ಇಷ್ಟೊಂದು ಸುಂದರವಾಗಿರಬಹುದೆಂದು ಕಲ್ಪಿಸಿಕೊಳ್ಳುವುದರಲ್ಲೇ ಪುಳಕ ಮೂಡಿತ್ತು. ಆತ ಆನೆಯಿಂದ ಇಳಿದ, ಯಾರೋ ಆನೆಗೆ ಕಬ್ಬು ತಂದು ಕೊಟ್ಟರು, ಆ ನಂತರ ಆತ ಆನೆಯ ಮೇಲೇರಿ ಮತ್ತೆ ಮುಂದೆ ಹೋದ. ಮಕ್ಕಳೆಲ್ಲಾ ಹಾಗೇ ನೋಡುತ್ತಾ ನಿಂತೇ ಇದ್ದರು. ಆ ಮಕ್ಕಳೊಂದಿಗೆ ನಾನೂ ಕೂಡ ಒಬ್ಬಳಾಗಿದ್ದೆ. ನನಗೆ ಅವನ ಮೇಲಿನ ಮನಸ್ಸು ಕೀಳಲಾಗಲಿಲ್ಲ. ಮುಂದೆ ನಾನು ನಿರ್ಧರಿಸಿದೆ - ನಾನೇನಾದರೂ ಮುಂದೆ ಮದುವೆಯಾಗುವುದಿದ್ದರೆ, ಇವನನ್ನೇ, ಅಥವಾ ಇಂತಹವನನ್ನೆ. ವರ್ಷಗಟ್ಟಲೇ ಅವನಿಗಾಗಿ ಹುಡುಕಾಡಿದ್ದೇನೆ. ಆತ ಮತ್ತೆ ಅದೇ ಆನೆಯ ಮೇಲೆ ಕೂತು ಬರುತ್ತಾನೆ, ಆ ನಂತರ ಮರೆಯಾಗುತ್ತಾನೆ. ಹೀಗೆ ನಲವತ್ತು ವರ್ಷಗಳು ಕಳೆದಿವೆಯಾದರೂ ನನಗಾತ ಮಾತನಾಡಲು ಸಿಕ್ಕಿಲ್ಲ. ಸಿಕ್ಕುವನೆಂಬ ಭರವಸೆಯೂ ಇಲ್ಲ. 
ಆತ ಯಾರೆಂದು ನಿಮಗೆ ಕುತೂಹಲವಿರಬಹುದು. ನನ್ನ ವಯಸ್ಸಿನ ಎಲ್ಲರಿಗೂ ಈತನ ಪರಿಚಯವಿದ್ದೇ ಇರುತ್ತದೆ. ನನಗಂತೂ ಈತನ ಪರಿಚಯವಾದದ್ದು ನನ್ನ ಕನ್ನಡ ಮೇಡಂ ಸಾವಿತ್ರಮ್ಮನ ಮೂಲಕ. ಆಗ ನಾನು ಏಳನೇ ತರಗತಿಯಲ್ಲಿದ್ದೆ. ನಮ್ಮ ಮೇಡಂ ನಮ್ಮ ಕನ್ನಡ ಪಠ್ಯದಲ್ಲಿದ್ದ ಮಾವುತನ ಬಗ್ಗೆ ವಿವರಿಸಿ ಹೇಳುತ್ತಿದ್ದರೆ, ಅವರು ಸವಿದಷ್ಟೇ ಚೆನ್ನಾಗಿ ಆ ವಿವರಣೆಯನ್ನು ಸವಿದ ನನಗೆ ಇಂದಿಗೂ ಅವರ ದನಿ ಕೇಳಿಸುತ್ತಿದೆ. ಪ್ರತಿ ಬಾರಿ ನಾನು ಆನೆ ಮೇಲೆ ಕುಳಿತ ಯಾರೇ ಮಾವುತನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ನೋಡಿದಾಗ ನಾನು ಮತ್ತೆ ಅವರ ತರಗತಿಯಲ್ಲಿ ಕೂತು ಅವರ ದನಿಯೊಂದಿಗೆ ದೂರಲೋಕಕ್ಕೆ ತೇಲುತ್ತಾ ಹೋಗುತ್ತೇನೆ. 
ಮಾತೃಭಾಷೆ ಕೊಂಕಣಿ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಾ ಬೆಳೆದದ್ದು ಮುಂಬೈ, ಆ ನಂತರ ಕರ್ನಾಟಕಕ್ಕೆ ಬಂದಿದ್ದ ನನಗೆ ಕನ್ನಡವೆಂದರೆ ಇಷ್ಟು ರುಚಿಕರ ಎಂದು ತೋರಿಸಿಕೊಟ್ಟ ಆ ನನ್ನ ಗುರುಗಳನ್ನು ನಾನು ಎಂದಿಗೂ ಮರೆಯಲಾರೆ. ಇಂದಿಗೂ ನನಗೆ ಕನ್ನಡ ಚೆನ್ನಾಗಿ ಬರುತ್ತದೆಯೆಂದಾದರೆ, ಅದಕ್ಕೆ ನಾನು ನನ್ನ ಕನ್ನಡ ಟೀಚರ್ ಸಾವಿತ್ರಮ್ಮ ಮೇಡಂಗೆ ಋಣಿ.
ಅವರು ನನ್ನಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕುರಿತು ಪ್ರೀತಿ ಬೆಳೆಸಿದರು. ವ್ಯಾಕರಣವೆಂದರೇನೆಂದು ತಿಳಿಯದಿದ್ದ ನನಗೆ ಸಂಧಿ, ಸಮಾಸಗಳನ್ನು ಪರಿಚಯಿಸಿದರು, ಭೂತ, ಭವಿಷ್ಯ ಕಾಲ, ವಿಭಕ್ತಿ ಪ್ರತ್ಯಯ- ಇವೆಲ್ಲಾ ಏನೆಂದು ಅರ್ಥ ಮಾಡಿಸಿದವರು ಅವರೇ. ಪ್ರೇಮದ ಮೊದಲ ಪಾಠ ಕಲಿಸಿಕೊಟ್ಟ ಅವರು ನನ್ನಲ್ಲಿ ಮುಂದೆಯೂ ಕೂಡ ಆ ಸಾಹಿತ್ಯ ಪ್ರೀತಿ ಹಾಗೇ ಉಳಿಯುವಂತೆ ಮಾಡಿದವರು. 
ಈಗ ಶಿಕ್ಷಕಿಯಾಗಿ ನಾನು ಕೂಡ ನನ್ನ ವಿದ್ಯಾರ್ಥಿಗಳಿಗೆ ಇಂತಹುದೇ ಪ್ರೀತಿ ಹಂಚುತ್ತಿದ್ದೇನೆ. ಸಾವಿತ್ರಮ್ಮ ಮೇಡಂ ಅವರ ಪರಂಪರೆಯನ್ನು ಹಾಗೇ ಮುಂದುವರೆಸುತ್ತಿದ್ದೇನೆ. 

- ಡಾ.ಸುಚೇತಾ ಪೈ



ಕಾಮೆಂಟ್‌ಗಳಿಲ್ಲ: