Pages

ಕಥೆ - ಕರುಳಿನ ಸಂಬಂಧ ಕಡಿಯಲಾದೀತೇ?




ಭಾರವಾದ ಮನದಿಂದ ಬರೆಯುತ್ತಿದ್ದ ಪೆನ್ನನ್ನು ಬಿಟ್ಟು ಕುರ್ಚಿಗೆ ಹಿಂದಕ್ಕೆ ಒರಗಿದಳು ಭಾರತಿ. ಭಾರವಾದ ನಿಟ್ಟುಸಿರೊಂದನ್ನು ಬಿಟ್ಟು ಮತ್ತೆ ತಾನು ಬರೆಯುತ್ತಿದ್ದ ಹಾಳೆಯನ್ನು ಕೈಗೆತ್ತಿಕೊಂಡಳು. 
ಮತ್ತೊಮ್ಮೆ ಅದನ್ನು ಓದತೊಡಗಿದಳು.
“ಮೈತ್ರಿ, ಇಲ್ಲಿ ಪ್ರೀತಿಯ ಮಗಳೆ ಎಂದು ಸಂಬೋಧಿಸುತ್ತಿಲ್ಲ ಏಕೆಂದರೆ ಆ ಪ್ರೀತಿ ಕಳೆದುಹೋಗಿದೆ ಎನಿಸುತ್ತಿದೆ. ನಮ್ಮಿಬ್ಬರ ಬಾಂಧವ್ಯ ಚಿರಕಾಲ ಎಂದು ನಂಬಿದ್ದೆ. ಆದರೆ ಅದು ಸುಳ್ಳು ಎಂದು ನೀ ಸಾಬೀತು ಮಾಡಿಬಿಟ್ಟೆ. ಪ್ರೀತಿ ಇದ್ದೆಡೆ ನಂಬಿಕೆ ಇರುತ್ತದೆ ಎನ್ನುತ್ತಾರೆ. ಆದರೆ ನೀ ನಂಬಿಕೆಗೆ ದ್ರೋಹ ಮಾಡಿದ ಮೇಲೆ ಪ್ರೀತಿ ಇನ್ನೆಲ್ಲಿರಲು ಸಾಧ್ಯ?"
"ಹೇಗಿದ್ದೀಯಾ ಎಂದು ಕೇಳುವ ಪದ್ಧತಿ ಇದೆ. ಆದರೆ ನಾನದನ್ನೂ ಕೇಳುವುದಿಲ್ಲ. ಏಕೆಂದರೆ ತನ್ನ ಸುಖವೇ ಸರ್ವಸ್ವ ಎಂದುಕೊಂಡವಳು ತನ್ನ ಯೋಗಕ್ಷೇಮ ನೋಡಿಕೊಳ್ಳಲಾರಳೇ?
ನಾವೆಲ್ಲರೂ ಕ್ಷೇಮ ಎಂದೂ ಸಹ ಬರೆಯುವುದಿಲ್ಲ. ನಾವು ಕ್ಷೇಮವಾಗಿಲ್ಲ ಎಂದರ್ಥವಲ್ಲ, ನಮ್ಮ ಕ್ಷೇಮದ ಬಗ್ಗೆ ಯೋಚಿಸದೆ ನಿರ್ಧಾರ ತೆಗೆದುಕೊಂಡಿರುವವಳಿಗೆ ಏನು ಕ್ಷೇಮ ಸಮಾಚಾರ ಹೇಳುವುದು?"
"ಹಾಗಿದ್ದರೆ ಮತ್ತೇಕೆ ಈ ಪತ್ರ ಎಂದುಕೊಳ್ಳುತ್ತಿದ್ದೀಯ? ಹೆಣ್ಣಾಗಿ ನೀ  ನಮ್ಮ ಮನೆಗಷ್ಟೇ ಅಲ್ಲ ಸ್ತ್ರೀಕುಲಕ್ಕೇ ಮಾಡಿದ ದ್ರೋಹದ ಬಗ್ಗೆ ನಿನಗೆ ಹೇಳದೆ ಹೋದರೆ ತಪ್ಪಾಗುತ್ತದೆ."
"ತಾಯಿಯಾಗಿ ನೀನು ಹುಟ್ಟಿದಂದಿನಿಂದ ನಿನ್ನ ಎಲ್ಲಾ ಬೇಕುಬೇಡಗಳನ್ನು ನಾನು ಸರಿಯಾಗಿಯೇ ನೋಡಿಕೊಂಡಿದ್ದೇನೆ. ಹೆಣ್ಣುಮಗು ಹುಟ್ಟಿತೆಂದು ಎಂದೂ ಬೇಸರಿಸಿಕೊಳ್ಳಲಿಲ್ಲ. ನಿನಗೆ ಖಾಯಿಲೆಯಾದಾಗ, ಆ ಇಡೀ ವರ್ಷ ನಿನ್ನನ್ನು ನೋಡಿಕೊಳ್ಳುವಾಗ ನನ್ನೆಲ್ಲಾ ಸಂತೋಷ ನೀ ಕಸಿದುಕೊಂಡೆ ಎನ್ನಲಿಲ್ಲ, ಸಂಕಟಪಡಲಿಲ್ಲ."
"ನಿನಗೆ ಅಕ್ಷರಾಭ್ಯಾಸ ಮಾಡಿಸಿದ ಮೊದಲನೇ ದಿನದಿಂದಲೇ ನಿನ್ನ ಶಿಕ್ಷಣದ ಬಗ್ಗೆ ಗಮನಕೊಟ್ಟೆ. ಇತರೆ ಎಷ್ವೋ ಹೆಣ್ಣುಮಕ್ಕಳಿಗೆ ಸಿಗದ ಸ್ವಾತಂತ್ರ್ಯ ಕೊಟ್ಟೆ. ಸಂಗೀತ, ಕರಾಟೆ – ಯಾವುದನ್ನೂ ಬೇಡವೆನಲಿಲ್ಲ. ನೀನು ಸ್ವಚ್ಛಂದವಾಗಿ ಹಾರಾಡಲು ಅನುವು ಮಾಡಿಕೊಟ್ಟೆ."
"ಹೆಚ್ಚು ಓದಬೇಕೆಂದಾಗ, ಬೇರೆ ಕಡೆ ಹಾಸ್ಟೆಲ್ಲಿನಲ್ಲಿ ಇದ್ದು ಓದಬೇಕೆಂದಾಗ, ನಿನ್ನ ಅಪ್ಪ, ಅಜ್ಜಿ, ತಾತ ಎಲ್ಲರನ್ನೂ ನಾನು ಒಪ್ಪಿಸಿದೆ. ನೆನಪಿದೆಯಾ, ಆಗಲೂ ನಿನ್ನ ತಾತ, 'ಯಾಕಮ್ಮಾ ಇದೆಲ್ಲಾ? ಹೆಣ್ಣುಮಕ್ಕಳನ್ನು ಹೊರಗೆ ಕಳಿಸಿದರೆ ಹೇಗೋ ಏನೋ ಎಂದು.' ಆಗಲೂ ನಾ ನಿನ್ನ ಪರವಾಗಿಯೇ ಮಾತನಾಡಿದೆ. ನನ್ನ ಮಗಳು ಎಂದೂ ತಪ್ಪು ಮಾಡುವುದಿಲ್ಲ ಎಂದು. ನಾನು ಬೆಳೆಸಿದ ರೀತಿಯ ಬಗ್ಗೆ, ನನ್ನ ತಾಯ್ತನದ ಬಗ್ಗೆ ಅಷ್ಟು ನಂಬಿಕೆಯಿತ್ತು. ಎಲ್ಲವನ್ನೂ ಒಂದೇ ಏಟಿಗೆ ನುಚ್ಚುನೂರುಮಾಡಿಬಿಟ್ಟೆಯಲ್ಲ?"
"ಅಷ್ಟು ನಂಬಿಕೆಯಿಂದ ನಿನ್ನನ್ನು ಹಾಸ್ಟೆಲ್ ನಲ್ಲಿ ಬಿಟ್ಟಾಗ ನೀನು ಓದುವ ಬದಲು ಪ್ರೇಮದಲ್ಲಿ ಮುಳುಗಿದೆ. ಪ್ರೇಮ ತಪ್ಪೆಂದು ನನ್ನ ವಾದವಲ್ಲ, ಆದರೆ ಓದುವುದನ್ನು ಮರೆತು….. ಇದು ತಪ್ಪಲ್ಲವೇ?
ಈ ವಿಷಯ ನಿನ್ನಪ್ಪನಿಗೆ ಗೊತ್ತಾಗಿ ಅವರು ಕೂಗಾಡಿದ್ದು, ನಿಜ. ಅದು ಅವರ ಧೋರಣೆ. ಆದರೆ ನಾನು ನಿನಗೆ ಏನು ಹೇಳಿದೆ. ಈ ಪ್ರೀತಿ - ಪ್ರೇಮ ಬಿಟ್ಟುಬಿಡು. ಇದು ಓದುವ ವಿದ್ಯಾರ್ಥಿಗಳಿಗಲ್ಲ. ಓದು ಮುಗಿಸಿ, ಉದ್ಯೋಗ ಸಂಪಾದಿಸಿಕೊ, ನಂತರ ನೋಡೋಣ ಎಂದಿರಲಿಲ್ಲವೇ?"
"ನಿನ್ನಪ್ಪ ಮುಂದೆ ಓದಲು ಕಳಿಸುವುದು ಬೇಡ ಎಂದಾಗ, “ಅಮ್ಮನ ಮೇಲಾಣೆ ನಾನು ತಪ್ಪು ಹೆಜ್ಜೆ ಇಡುವುದಿಲ್ಲ. ಓದಿನ ಬಗ್ಗೆ ಗಮನ ಹರಿಸುತ್ತೇನೆ” ಎಂದಿರಲಿಲ್ಲವೇ? ಮತ್ತೀಗ ಏನು ಮಾಡಿರುವೆ?
ಮೊನ್ನೆ ನಿನ್ನ ಚಿಕ್ಕಪ್ಪ ನಿನ್ನನ್ನು ಹೋಟೆಲ್ ನಲ್ಲಿ ಆ ಹುಡುಗನ ಜೊತೆ ನೋಡಿದಾಗಿನಿಂದ ಮನೆಯಲ್ಲಿ ರಾದ್ಧಾಂತವೋ ರಾದ್ಧಾಂತ. ಈಗ ನಿನ್ನಿಂದ ನಿನ್ನ ತಂಗಿಯನ್ನು ಓದಲು ಬೇರೆಡೆ ಕಳಿಸುವುದಿರಲಿ, ಇದೇ ಊರಿನಲ್ಲಿಯೂ ಕಾಲೇಜಿಗೆ ಬೇಡ ಎನ್ನುತ್ತಿದ್ದಾರೆ. ಅವಳು ನೆನ್ನೆಯಿಂದಲೂ ಏನನ್ನೂ ತಿಂದಿಲ್ಲ. ರೂಮ್ ಬಿಟ್ಟು ಹೊರಬಂದಿಲ್ಲ, ಅಳುವುದನ್ನು ನಿಲ್ಲಿಸಿಲ್ಲ."
"ಮೈತ್ರಿ, ನಿನ್ನನ್ನು ಹಾಸ್ಟೆಲ್ಲಿಗೆ ಬಿಟ್ಟು ನಾವು ಹಿಂತಿರುಗುವ ಮುನ್ನ ನಿನಗೊಂದು ಮಾತು ಹೇಳಿದ್ದೆ, ನೆನಪಿದೆಯಾ? ನೀನು ಚೆನ್ನಾಗಿ ಓದದಿದ್ದರೂ ಪರವಾಗಿಲ್ಲ, ನಮಗೆ, ನಿನಗೆ ಅವಮಾನವಾಗುವಂತಹ ಕೆಲಸ ಮಾಡಬೇಡವೆಂದು. ಎಲ್ಲಕ್ಕೂ ಮಿಗಿಲಾಗಿ, ನಮ್ಮ ಚಿಕ್ಕ ಊರಿನಿಂದ ಹೊರಗಡೆ ಬಂದು ಓದುತ್ತಿರುವ ಮೊದಲ ಹೆಣ್ಣುಮಗಳು ನೀನು, ನಿನ್ನ ಮೇಲೆ ನಮ್ಮೂರಿನ ಇತರ ಹೆಣ್ಣುಮಕ್ಕಳ ಭವಿಷ್ಯ ನಿಂತಿದೆ ಎಂದು. ಈಗ ನೋಡು, ನೀ ಮಾಡಿರುವ ತಪ್ಪಿಗೆ ನಿನ್ನ ತಂಗಿ ಮೊದಲ ಬಲಿಪಶು. ಇನ್ನೆಷ್ಟು ಹೆಣ್ಣುಮಕ್ಕಳ ಪರಿಸ್ಥಿತಿ ಹೀಗಾಗುತ್ತೋ?"
ಓದುವುದನ್ನು ನಿಲ್ಲಿಸಿದ ಭಾರತಿಗೆ, ಒಂದು ಘಟನೆ ಮನಸ್ಸಿನಲ್ಲಿ ಎಷ್ಟು ಕಹಿ ತುಂಬಿಸಿದೆಯಲ್ಲ ಎನಿಸಿತು. ಒಟ್ಟಿನಲ್ಲಿ ಮನದಲ್ಲಿ ಇರುವುದನ್ನೆಲ್ಲ ಹೊರ ಉಗುಳಲು ಸಿದ್ಧವಾದಳು. ಮೈತ್ರಿ ಎಂದೂ ಭಾರತಿಗೆ ಕೇವಲ ಮಗಳೆನಿಸಿರಲಿಲ್ಲ. ಇಬ್ಬರೂ ಸ್ನೇಹಿತರಂತಿದ್ದರು. ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮೈತ್ರಿ ಇದುವರೆವಿಗೂ ಯಾವುದೇ ನಿರ್ಧಾರವನ್ನು ತಾನೇ ತೆಗೆದುಕೊಂಡಿರಲಿಲ್ಲ, ಭಾರತಿಗೆ ಹೇಳದೆ. 
ಅಂತಾದ್ದರಲ್ಲಿ, ಮೈತ್ರಿಗೆ ಈಗ ಏನಾಯಿತು? ಮಗಳು ಬದಲಾಗಿಬಿಟ್ಟಳೇ? ನನ್ನ ಪ್ರೀತಿಯಲ್ಲಿ, ಬೆಳೆಸುವುದರಲ್ಲಿ ಏನಾದರೂ ತಪ್ಪಾಯಿತೇ ಎನ್ನುವುದು ಕೊರೆಯತೊಡಗಿತ್ತು.
ಒಟ್ಟಿನಲ್ಲಿ ಈ ಪತ್ರ ಮುಗಿಸಿ ಇಂದೇ ಪೋಸ್ಟ್ ಮಾಡಬೇಕು ಎಂದು ನಿರ್ಧರಿಸಿ ಮತ್ತೆ ಬರೆಯತೊಡಗಿದಳು.
ಅಷ್ಟರಲ್ಲಿ ಹೊರಗಡೆ ಪೋಸ್ಟ್ ಎನ್ನುವ ಶಬ್ದ ಕೇಳಿಸಿತು. ಹೊರಗಡೆ ಹೋದಾಗ ಪತ್ರ ನೋಡಿದಾಗ ಶಾಕ್ ಆಯಿತು. ಕವರ್ ಮೇಲೆ ಮೈತ್ರಿಯ ಬರವಣಿಗೆ ಕಾಣಿಸಿತು. ಯಾವತ್ತೂ ಪತ್ರ ಬರೆಯದ ಮಗಳು ಏನು ಬರೆದಿರಬಹುದೆಂದು ಕಾತರದಿಂದ ಒಡೆದು ಒಳಹೋಗುತ್ತಲೇ ಓದಲಾರಂಭಿಸಿದಳು.
---*----


ಪ್ರೀತಿಯ ಅಮ್ಮನಿಗೆ
"ಅಮ್ಮ, ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಅಪ್ಪ ಚಿಕ್ಕಪ್ಪ -ಚಿಕ್ಕಮ್ಮನೆದುರು, ನಾನು ಹುಟ್ಟಿದ್ದೇ ತಪ್ಪು, ನಾನು ನಿಮಗೆಲ್ಲ ಅವಮಾನ ಮಾಡಿದ್ದೀನಿ ಇತ್ಯಾದಿ, ಇತ್ಯಾದಿ ಮಾತನಾಡಿದ್ದಾರೆ ಎಂದು ತಿಳಿಯಿತು. ನೀವು ಮೌನವಾಗಿ ಕುಳಿತ್ತಿದ್ದೀರಿ ಎಂದೂ ಸಹ ತಿಳಿಯಿತು."
"ಯಾಕೆ ಆ ರೀತಿ ಮಾತನಾಡಿದಿರಿ ಎಂದು ನಾನು ಕೇಳುವುದಿಲ್ಲ. ಆ ಹಕ್ಕು ನಿಮಗಿದೆ. ನನಗೆ ಮಾತ್ರ ನಿಮ್ಮ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಕಾರಣ ಏನು ಗೊತ್ತಾ, ನೀವು ಹೆಚ್ಚು ಓದದಿದ್ದರೂ ನನ್ನನ್ನು ಎಂ ಟೆಕ್ ವರೆಗೂ ಓದಿಸಿದಿರಿ. ನೀವು ಪಡೆಯಲು ಸಾಧ್ಯವಾಗದ್ದನ್ನೆಲ್ಲಾ ನನಗೆ ಪಡೆಯಲು ದಾರಿ ಮಾಡಿಕೊಟ್ಟಿದ್ದೀರಿ.
ಭಾರತಿಗೆ ಮಗಳ ಬಗ್ಗೆ ಒಂದು ಘಳಿಗೆ ಮನಸ್ಸು ಮೃದುವಾಯಿತು. ಆದರೆ ಅಷ್ಟರಲ್ಲೇ ಆದ ಅವಮಾನ ಕಣ್ಣೆದುರಿಗೆ ಬಂದು ಮತ್ತೆ ಮನ ಕಠಿಣವಾಯಿತು. ಓದುವುದನ್ನು ಮುಂದುವರೆಸಿದಳು."
"ಅಮ್ಮ, ನಾನೇನು ತಪ್ಪು ಮಾಡಿದೆ ಎಂದು ಅಪ್ಪ ಆ ರೀತಿ ಮಾತನಾಡಿದರು? ಅದರ ಬದಲು ನನ್ನನ್ನೇ ಕರೆದು ಕೇಳಬಹುದಿತ್ತಲ್ಲ. ನಾನೇ ನಿಮ್ಮೆದುರು ವಿಷಯ ಪ್ರಸ್ತಾಪಿಸುವಷ್ಟರಲ್ಲಿ ಇಷ್ಟೆಲ್ಲಾ ನಡೆದುಹೋಗಿದೆ."
"ಅಮ್ಮ ಒಂದು ಮಾತು ಮಾತ್ರ ನಿಜ, ಯಾವ ಕಾರಣಕ್ಕೂ ನಿಮಗಿಂತ ನನಗೆ ಯಾರೂ ಹೆಚ್ಚಲ್ಲ. ಕೇವಲ ತಾಯಿಯಾಗಿ ಜನ್ಮ ಕೊಟ್ಟಿದ್ದೀರಿ ಎಂದಲ್ಲ. ಇಂದು ನಾನು ಏನೇ ಸಾಧಿಸಿದ್ದರೂ ಅದಕ್ಕೇ ನೀವೇ ಕಾರಣವಲ್ಲವೇ?"
"ಮದುವೆ ಅವಶ್ಯಕ ಮಾತ್ರವಲ್ಲ ಅನಿವಾರ್ಯ ಎಂಬ ಭಾವನೆಯನ್ನು ಮನೆಯವರೆಲ್ಲಾ ತುಂಬಿದ್ದೀರಿ. ನಾವು ಹೋದ ಮೇಲೆ ನಿನ್ಗ್ಯಾರು ಆಗುತ್ತಾರೆ ಎಂದು. ಹಾಗಿದ್ದರೆ ನಾನು ನನ್ನ ಮನಸ್ಸಿಗೆ ಸರಿ ಹೋಗುವಂಥವನನ್ನು ತಾನೇ ಆರಿಸಿಕೊಳ್ಳಬೇಕು, ನನ್ನ ಜೊತೆ ಹೊಂದಿಕೊಂಡು ಹೋಗುವಂಥವನನ್ನು ತಾನೇ ಹುಡುಕಿಕೊಳ್ಳಬೇಕು. ನೀವು ಅಂತಹವನನ್ನು ಹುಡುಕುತ್ತಿರಲಿಲ್ಲ ಎಂದಲ್ಲ. ಆದರೆ ಅಷ್ಟರಲ್ಲಿ ಇವನನ್ನು ನಾ ನೋಡಿ ಅವನ ಒಳ್ಳೆಯತನದಿಂದ ಆಕರ್ಷಿತಳಾದೆ. ನನಗೆ ಹೊಂದಿಕೊಳ್ಳುತ್ತಾನೆಂದು ಆಯ್ಕೆ ಮಾಡಿಕೊಂಡೆ. ನಿಮ್ಮ ಮಗಳ ಆಯ್ಕೆಯ ಬಗ್ಗೆ ನಿಮಗೆ ಸಂದೇಹವೇ? ನಿಮ್ಮ ಲಾಲನೆಪಾಲನೆ ಬಗ್ಗೆ ನಿಮಗೇ ಅನುಮಾನವೇ? ಇದು ಸರಿಯೇ?"
"ನಿಮ್ಮ ಒಪ್ಪಿಗೆ ಇಲ್ಲದೆ ನಾನಂತೂ ಮದುವೆಯಾಗುವುದಿಲ್ಲ. ನಿಮ್ಮನ್ನು ಬಿಟ್ಟು ಬಾಳುವ ಶಕ್ತಿ ನನಗಿಲ್ಲ. ನೀವು ಆ ಹುಡುಗನನ್ನು ಒಮ್ಮೆ ನೋಡಿ. ನಂತರವೂ ನಿಮಗೆ ಸರಿ ಎನಿಸದಿದ್ದರೆ ನಾನು ಮದುವೆಯಾಗುವುದಿಲ್ಲ. ಆದರೆ ಇನ್ನೊಬ್ಬನನ್ನು ಮದುವೆಯಾಗು ಎಂದು ಒತ್ತಾಯಿಸಬಾರದು. ನಿಮ್ಮ ಭಾವನೆಗೆ ನಾನು ಧಕ್ಕೆ ತರಲು ಇಚ್ಛಿಸುವುದಿಲ್ಲ, ಹಾಗೇ ನೀವು ಸಹ ತರಬಾರದು."
"3 ವರ್ಷಗಳಿಂದಲೂ ಪ್ರೀತಿಸುತ್ತಿದ್ದೆ ನಿಜ, ಆದರೆ ನಿಮಗೆ ಹೇಳಿಲ್ಲ. ನೀವು ಓದಲು ಹಣ ಕಳಿಸುವುದಿಲ್ಲ ಎಂಬ ಭಯದಿಂದಲ್ಲ. ಸಂಜೆ ಎಲ್ಲಾದರೂ 2 ಘಂಟೆ ಪಾರ್ಟ್ ಟೈಮ್ ಕೆಲಸ ಮಾಡಿದ್ದರೆ ನನ್ನ ಖರ್ಚು ಕಳೆದುಹೋಗುತ್ತಿತ್ತು. ಇಲ್ಲ ಕೇಳಿದ್ದರೆ, ಆ ಹುಡುಗನೇ ಕೊಡುತ್ತಿದ್ದ. ಆದರೆ ನನ್ನ ಕಾಲ ಮೇಲೆ ನಾನು ನಿಂತುಕೊಂಡ ಮೇಲೆ ಈ ವಿಚಾರ ನಿಮಗೆ ತಿಳಿಸೋಣ ಎಂದುಕೊಂಡೆ. ಅಷ್ಟರಲ್ಲಿ ಯೋಚಿಸುವ ಸಮಯವೂ ಸಿಗುತ್ತದೆ, ಸಂಬಂಧ ಜೊಳ್ಳಾಗಿದ್ದರೆ ಕಳಚಿಹೋಗಲಿ, ಕಾಳಾಗಿದ್ದರೆ ಉಳಿಯಲಿ ಎಂಬ ಭಾವನೆಯೂ ಇತ್ತು. ಈಗ ನನ್ನ ಕೈಲಿ ಉದ್ಯೋಗ ಇದೆ ಎಂದಲ್ಲ."
"ಆಸ್ತಿ ಕೊಡುವುದಿಲ್ಲ ಎಂದೂ ಸಹ ಅಪ್ಪ ಹೇಳಿದರಂತೆ. ನಿಮ್ಮಿಂದ ನಾನ್ಯಾವತ್ತೂ ಬಯಸಿದ್ದು ಪ್ರೀತಿಯೊಂದನ್ನೇ. ಅದು ನಾನು ಬಯಸಿದ್ದಕ್ಕಿಂತ ಹೆಚ್ಚೇ ಸಿಕ್ಕಿದೆ. ಜೊತೆಗೆ ನೀವು ಯಾರೂ ಕಸಿಯಲಾಗದ ಆಸ್ತಿ – ವಿದ್ಯೆಯನ್ನು ಕೊಟ್ಟಿದ್ದೀರಿ. ಅದಕ್ಕಿಂತ ನನಗಿನ್ನೇನು ಬೇಕು?"
ಭಾರತಿಗೆ ತನ್ನ ಮಗಳು ಎತ್ತರಕ್ಕೆ ಬೆಳೆಯುತ್ತಿದ್ದಾಳೆ ಎನಿಸಿತು, ಹೆಮ್ಮೆಯಾಯಿತು. ತಾನಷ್ಟೊಂದು ಬೇಜಾರು ಮಾಡಿಕೊಳ್ಳಬೇಕಿರಲಿಲ್ಲ ಎನಿಸಿತು. ಮುಂದೆ ಏನು ಬರೆದಿದ್ದಾಳೆ ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
“ಅಮ್ಮ ನಿಮ್ಮನ್ನು ನೋವಿಗೆ ಅವಮಾನಕ್ಕೆ ನೂಕಿ ನಾನು ಸಂತೋಷವಾಗಿರುತ್ತೇನೆ ಎಂದು ಹೇಗೆ ಭಾವಿಸಿದಿರಿ? ನಾನೇನೂ ತಪ್ಪು ಮಾಡಿಲ್ಲಮ್ಮ. ಪ್ರೀತಿಸುವುದೇ ತಪ್ಪಾದರೆ ಚಿಕ್ಕಪ್ಪ ಚಿಕ್ಕಮ್ಮ ಸಹ ಪ್ರೀತಿಸಿ ಮದುವೆಯಾದವರಲ್ಲವೇ? ಅಜ್ಜಿ ತಾತನಿಗೆ ಇಷ್ಟವಿಲ್ಲದಿದ್ದರೂ, ಕೊನೆಗೆ ವಿಧಿಯಿಲ್ಲದೆ ಒಪ್ಪಿಕೊಳ್ಳಲಿಲ್ಲವೇ? ಒಂದೇ ಜಾತಿಯಾದರೆ ಸಮಸ್ಯೆ ಇರುವುದಿಲ್ಲವೇ? ಚಿಕ್ಕಮ್ಮ ತಮ್ಮ ಅಮ್ಮ ಅಪ್ಪನ ಮಾತನ್ನು ಧಿಕ್ಕರಿಸಲಿಲ್ಲವೇ? ನಂತರ ತಾನೇ ಅವರ ಅಪ್ಪ ಅಮ್ಮ ಒಪ್ಪಿಕೊಂಡದ್ದು. ನಾನು ಅವರ ತಪ್ಪನ್ನು ಎತ್ತಿ ತೋರಿಸುತ್ತಿಲ್ಲ. ಅವರು ತಮಗಿಷ್ಟ ಬಂದವರನ್ನು ಆರಿಸಿಕೊಳ್ಳುವಾಗ ಅಜ್ಜಿ ತಾತನನ್ನು ಕಡೆಗಣಿಸಿದರೂ, ಈಗ ಅವರೇ ಮಾತನಾಡುತ್ತಿದ್ದಾರಲ್ಲ, ಅದನ್ನು ಕೇಳಿ ನೀವು ಬೇಜಾರು ಮಾಡಿಕೊಳ್ಳುತ್ತೀರಲ್ಲ? ಸರಿಯೇ? ಅವರು ಯಾರೂ ಒಪ್ಪಿಕೊಳ್ಳದಿದ್ದರೂ ತಾವು ಮದುವೆ ಆಗಿಯೇ ತೀರುತ್ತೇವೆಂದರು. ನಾನು ಆ ಮಟ್ಟಕ್ಕೆ ಇಳಿಯುತ್ತಿಲ್ಲ." 
"ಅಮ್ಮ ನನಗೆ ಗೊತ್ತು. ನೀವು ಅರ್ಥ ಮಾಡಿಕೊಳ್ಳುತ್ತೀರಿ. ನಾನು ತಪ್ಪು ಮಾಡಿದರೆ ತಿದ್ದುತ್ತೀರಿ ಎಂದು. ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾವೇನು ಮಾಡಿದರೂ ಟೀಕಾಚಾರ್ಯರು ಟೀಕೆ ಮಾಡುತ್ತಲೇ ಇರುತ್ತಾರೆ."
"ಅಮ್ಮ ಬೇರೆ ಹೆಣ್ಣುಮಕ್ಕಳಿಗೆ ತೊಂದರೆಯಾಗುವಂತಹ ಕೆಲಸ ನಾ ಮಾಡಿಲ್ಲಮ್ಮ. ನಿಮಗೇ ಗೊತ್ತು, ಪ್ರೀತಿ ಎಂದೂ ನನ್ನ ಗುರಿಗೆ ಅಡ್ಡಿಯಾಗಿಲ್ಲ. ನಾನೆಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ. ಆಯ್ಕೆಯ ಹಕ್ಕನ್ನು ಚಲಾಯಿಸಿದ್ದೇನೆಯೇ ಹೊರತು ಅವಮಾನದ ಕೆಲಸ ಮಾಡಿಲ್ಲವಮ್ಮ. ಎಂಟೆಕ್ ಸೀಟು ಮೆರಿಟ್ ಸೀಟು ಎಂದು ಎಲ್ಲರಿಗೂ ಗೊತ್ತು. ಜೊತೆಗೆ ನಾ ಓಡಿಹೋಗುತ್ತಿಲ್ಲಮ್ಮ. ನಿಮ್ಮಗಳ ಆಶೀರ್ವಾದ ಪಡೆದು, ನಿಮ್ಮ ಸಮ್ಮುಖದಲ್ಲಿಯೇ ನನ್ನ ವಿವಾಹ, ಅದೂ ನೀವು ಒಪ್ಪಿ ಮಾಡಿದರೆ. ಈಗಲೂ ಅನಿಸುತ್ತಾ ಅಮ್ಮ, ನಾನು ದ್ರೋಹ ಮಾಡಿದೆ ಎಂದು?"
ಭಾರತಿಗೆ ತನ್ನ ಮನದಲ್ಲಿದ್ದ ಪ್ರಶ್ನೆಗಳೆಲ್ಲ ಮಗಳಿಗೆ ಹೇಗೆ ಗೊತ್ತಾಯಿತು ಎಂದು ವಿಸ್ಮಯಗೊಂಡಳು.
"ಕೊನೆಯದಾಗಿ ಅಮ್ಮ, ನನ್ನ ನಿರ್ಧಾರ ತಪ್ಪಾಗಿಯೂ ಇರಬಹುದು. ನನ್ನ ಮೇಲಿನ ಪ್ರೀತಿಗೆ ನೀವು ಒಪ್ಪಿದ ಮೇಲೂ ನನ್ನ ಬದುಕು ಸಮಸ್ಯೆಯಲ್ಲಿ ಸಿಲುಕಬಹುದು. ದೊಡ್ಡವರು ನೋಡಿ ಮಾಡುವ ಎಲ್ಲಾ ಮದುವೆಗಳೂ ಚೆನ್ನಾಗಿಯೇ ಇರುತ್ತವೆ ಎಂದು ಏನು ಗ್ಯಾರಂಟಿ? ಈಗ ರಾಣಿ ಆಂಟಿ ಮಗಳು ಡೈವೋರ್ಸ್ ತೆಗೆದುಕೊಳ್ಳುತ್ತಿಲ್ಲವೇ? ಜೀವನದಲ್ಲಿ ಆ ರೀತಿ ಸಮಸ್ಯೆ ಬಂದರೂ ನಗುನಗುತ್ತಲೇ ಎದುರಿಸುತ್ತೀನಿ, ಸಾಯುವುದಿಲ್ಲ - ನೀವು ಜೊತೆಗಿದ್ದರೆ, ನೀವು ಖಂಡಿತ ಜೊತೆಗಿರುತ್ತೀರ ಎಂದು ನನಗೆ ಗೊತ್ತು. ಬದುಕೇನೂ ಅಲ್ಲಿಗೆ ಮುಗಿಯುವುದಿಲ್ಲ ಅಲ್ಲವೇ?"
"ನೀವು ಸಂಬಂಧ ಬೇಡವೆಂದು ಕೋಪದಲ್ಲಿ ಹೇಳಿದರೂ ಅದು ಸತ್ಯಕ್ಕೆ ದೂರ ಎಂದು ನನಗೆ ಗೊತ್ತು. ಅಪ್ಪ ಕೋಪ ಮಾಡಿಕೊಳ್ಳಬಹುದು, ಸಂಬಂಧ ಕಡಿದುಕೊಳ್ಳಬಹುದು. ನೀವು ಆ ರೀತಿ ಮಾಡಲು ಸಾಧ್ಯವೇ? ಕರುಳಿನ ಬಳ್ಳಿಯ ಸಂಬಂಧ ಕಡಿಯಲಾದೀತೇ?"
ಭಾರತಿಗೆ ಮುಂದೆ ಓದಲಾಗಲಿಲ್ಲ. ಎಷ್ಟು ಅಪಾರ್ಥ ಮಾಡಿಕೊಂಡೆ ಮಗಳನ್ನು ಎನಿಸಿತು. ತಪ್ಪಿತಸ್ಥ ಭಾವನೆ ಕಾಡತೊಡಗಿತು. ಮನದಲ್ಲಿದ್ದ ಕಹಿ ಕರಗಿಹೋಯಿತು. ಸಧ್ಯ ಪತ್ರ ಪೋಸ್ಟ್  ಮಾಡಲಿಲ್ಲವಲ್ಲ ಎಂದುಕೊಂಡಳು.
ಅಷ್ಟರಲ್ಲಿ ಫೋನ್ ರಿಂಗಣಿಸತೊಡಗಿತು.
ಫೋನ್ ಎತ್ತಿದರೆ ಆಕಡೆ ಮೈತ್ರಿಯ ಮಾತು ಕೇಳಿಸಿತು. “ಅಮ್ಮ ನಾಳೆಯೇ ಬರುತ್ತಿದ್ದೇನೆ. ಅಮ್ಮನ ಮಡಿಲು ಬೇಕೆನಿಸುತ್ತಿದೆ.”
ಆನಂದಭಾಷ್ಪವೇ ಭಾರತಿಯ ಉತ್ತರವಾಯಿತು!
  - ಸುಧಾ ಜಿ

ಕಾಮೆಂಟ್‌ಗಳಿಲ್ಲ: