Pages

ಅನುವಾದ: "ಹೂಗುಚ್ಛವೊಂದು ನನಗಿಂದು ಬಂತು"




ಮೂಲಇಂಗ್ಲಿಷ್ – “I Got Flowers Today


ಹೂಗುಚ್ಛವೊಂದು ನನಗಿಂದು ಬಂತು
ಇಂದು ನನ್ನ ಹುಟ್ಟುಹಬ್ಬವಲ್ಲ, ಯಾವುದೇ ವಿಶೇಷ ದಿನವಲ್ಲ

ಕಳೆದ ರಾತ್ರಿ ಮೊದಲ ಬಾರಿಗೆ ನಮ್ಮಿಬ್ಬರಿಗೂ ಮನಸ್ತಾಪವಾಯ್ತು
ಅತ ಬಹಳ ಕಠೋರ ಮಾತುಗಳನ್ನಾಡಿದ್ದು
ನನಗೆ ತುಂಬಾ ನೋವುಂಟಾಯಿತು
ಆತನು ನೊಂದಿರುವನೆಂದು,
ಹಾಗೆ ಹೇಳಬಯಸಿರಲಿಲ್ಲವೆಂದು ನಾ ಬಲ್ಲೆ
ಏಕೆಂದರೆ ನನಗೆ ಇಂದು ಹೂಗುಚ್ಛವೊಂದನ್ನು ಕಳುಹಿಸಿದ್ದಾನೆ.

ಹೂಗುಚ್ಛವೊಂದು ನನಗಿಂದು ಬಂತು
ಇಂದು ನನ್ನ ಹುಟ್ಟುಹಬ್ಬವಲ್ಲ, ಯಾವುದೇ ವಿಶೇಷ ದಿನವಲ್ಲ.
ಕಳೆದ ರಾತ್ರಿ ನನ್ನನ್ನು ಗೋಡೆಗೆ ತಳ್ಳಿ
ಕತ್ತನ್ನು ಹಿಸುಕಲೆತ್ನಿಸಿದ
ಇದೇನು ಕರಾಳ ಸ್ವಪ್ನವೇ ಎಂದು ಅರೆಕ್ಷಣ ಬೆಚ್ಚಿದೆ
ನಿಜವೆಂದು ನಂಬಲು ನಾ ಸಿದ್ಧಳಿರಲಿಲ್ಲ
ಮುಂಜಾನೆ ಮೈತುಂಬಾ ಗಾಯಗಳಿದ್ದವು
ಆತನಿಗೆ ಬೇಸರವಾಗಿದೆಯೆಂದು ನಾ ಬಲ್ಲೆ
ಏಕೆಂದರೆ ನನಗೆ ಇಂದು ಹೂಗುಚ್ಛವೊಂದನ್ನು ಕಳುಹಿಸಿದ್ದಾನೆ.

ಹೂಗುಚ್ಛವೊಂದು ನನಗಿಂದು ಬಂತು
ಇಂದು ನನ್ನ ಹುಟ್ಟುಹಬ್ಬವಲ್ಲ, ಯಾವುದೇ ವಿಶೇಷ ದಿನವಲ್ಲ.
ನಿನ್ನೆ ರಾತ್ರಿ ನನ್ನನಾತ ಮತ್ತೆ ಹೊಡೆದ
ಇದು ಹಿಂದೆಂದಿಗಿಂತಲೂ ಬಹು ಘೋರವಾಗಿತ್ತು
ಆದರೂ, ಆತನನ್ನು ತೊರೆದು ಏನು ಮಾಡಲಿ?
ನನ್ನ ಮಕ್ಕಳನ್ನು ಹೇಗೆ ಸಾಕಲಿ?
ಹಣಕ್ಕಾಗಿ ನಾನೇನು ಮಾಡಲಿ?
ಆತನನ್ನು ಕಂಡರೆ ನನಗೆ ಭಯವಿದೆ; ಬಿಡಲೂ ಹಿಂಜರಿಕೆ
ಅವ ಪಶ್ಚಾತ್ತಾಪ ಪಡುತ್ತಿರಬೇಕೆಂದು ನಾ ಬಲ್ಲೆ
ಏಕೆಂದರೆ ನನಗೆ ಇಂದು ಹೂಗುಚ್ಛವೊಂದನ್ನು ಕಳುಹಿಸಿದ್ದಾನೆ.

ನನಗೆ ಇಂದು ಹೂಗುಚ್ಛವೊಂದು ಬಂತು
ಬಹಳ ವಿಶೇಷ ದಿನವಿದು
ನನ್ನ ಜೀವನಯಾತ್ರೆಯ ಅಂತಿಮ ದಿನವಿದು
ಕಳೆದ ರಾತ್ರಿ ಕೊನೆಗೂ ಆತ ನನ್ನನ್ನು ಕೊಂದ
ಸಾಯುವವರೆಗೂ ಹೊಡೆದ
ನಾನೇನಾದರೂ ಅಂದು ಧೈರ್ಯದಿಂದ ಮುನ್ನಡೆದಿದ್ದರೆ,
ಆತನಿಂದ ಬಿಡುಗಡೆ ಹೊಂದಿದ್ದರೆ
ಹೂಗುಚ್ಛವೊಂದು ಬರುತ್ತಿರಲಿಲ್ಲ ನನಗೆ. . . . . . ಇಂದು

-              ಗಿರಿಜಾ ಕೆ ಎಸ್

ಕಾಮೆಂಟ್‌ಗಳಿಲ್ಲ: