Pages

ಪರಿಸರ ಪ್ರೀತಿ - ಹಿಮಾಚಲ ಪ್ರದೇಶದ ಮಾಣಿಕ್ಯ ಕಿಂಕ್ರಿದೇವಿ





ಹಿಮಾಚಲ ಪ್ರದೇಶದ ರತ್ನವೆಂದೇ ಪರಿಗಣಿಸಲ್ಪಟ್ಟಿರುವ ಕಿಂಕ್ರಿದೇವಿಯವರು ಭಾರತದ ಪ್ರಖ್ಯಾತ ಪರಿಸರವಾದಿಗಳಲ್ಲೊಬ್ಬರು. ತಮ್ಮ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಕಾನೂನುಬಾಹಿರ ಗಣಿಗಾರಿಕೆಯ ವಿರುದ್ಧ ಸಮರ ಸಾರಿದ್ದ ದಿಟ್ಟ ಮಹಿಳೆ. ಓದು ಬರಹವನ್ನೇ ಕಲಿಯದ ಆಕೆ ಪರಿಸರದ ಬಗ್ಗೆ ಅಪಾರ ಜ್ಞಾನವನ್ನು ಪಡೆದಿದ್ದರು ಮತ್ತು ಅದರ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಂತರು (ಸಾಯುವ ಕೆಲವೇ ವರ್ಷಗಳ ಮುಂಚೆ ಸಹಿ ಮಾಡುವುದನ್ನು ಕಲಿತರು)

೧೯೨೫ರಲ್ಲಿ ಕಿಂಕ್ರಿದೇವಿಯವರು ಹಿಮಾಚಲ ಪ್ರದೇಶದ ಸಿರ್ಮಾರ್ ಜಿಲ್ಲೆಯ ಘಾಟೋನ್ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ದಲಿತ ಸಮುದಾಯಕ್ಕೆ ಸೇರಿದ ಒಬ್ಬ ಸಣ್ಣ ರೈತ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮನೆ ಕೆಲಸದಾಳಾಗಿ ಕೆಲಸ ಮಾಡಲಾರಂಭಿಸಿದ ಕಿಂಕ್ರಿದೇವಿ ೧೪ ವಯಸ್ಸಿಗೆ ಜೀತದಾಳಾಗಿದ್ದ ಶಾಮು ರಾಮ್ ಎನ್ನುವಾತನನ್ನು ಮದುವೆಯಾದರು. ಆದರೆ ಆಕೆಗೆ ೨೨ ವರ್ಷವಾಗಿದ್ದಾಗ ಆತ ಜ್ವರದಿಂದ ಮೃತಪಟ್ಟರು. 

ನಂತರ ಜೀವನ ಸಾಗಿಸಲು ಜಾಡಮಾಲಿ ಕೆಲಸ ಮಾಡುತ್ತಿದ್ದ ಕಿಂಕ್ರಿದೇವಿಯವರು ಹಿಮಾಚಲಪ್ರದೇಶದ ಬೆಟ್ಟಗಳ ಕೆಲವು ಭಾಗಗಳಲ್ಲಿ ಭಾರಿ ಗಣಿಗಾರಿಕೆ ನಡೆಯುತ್ತಿರುವುದನ್ನು ಗಮನಿಸಿದರು. ಗಣಿಗಾರಿಕೆ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿತ್ತು ಮತ್ತು ಸರಬರಾಜಿಗೆ ತೊಂದರೆಯನ್ನು ಉಂಟುಮಾಡುತ್ತಿತ್ತು. ಜೊತೆಗೆ ಭತ್ತದ ಹೊಲಗಳ ಮತ್ತು ಕಾಡಿನ ನಾಶಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಪರಿಸರ ಸಂರಕ್ಷಣಾ ಕಾರ್ಯವನ್ನು ಕಿಂಕ್ರಿದೇವಿ ತಮ್ಮ ಹೆಗಲಿನ ಮೇಲೆ ಹೊತ್ತರು. ಮೊದಲಿಗೆ ಸ್ಥಳೀಯ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು. ಸುತ್ತಮುತ್ತಲ ಹಳ್ಳಿಗಳ ಜನರೊಂದಿಗೆ ಆ ಬಗ್ಗೆ ಮಾತನಾಡಲಾರಂಭಿಸಿದರು. ನಂತರ ಆಕೆ ೪೮ ಗಣಿ ಮಾಲೀಕರ ವಿರುದ್ಧ ಶಿಮ್ಲಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದರು. “ಪೀಪಲ್ಸ್ ಆಕ್ಷನ್ ಫಾರ್ ಪೀಪಲ್ ಇನ್ ನೀಡ” ಎಂಬ ಸ್ಥಳೀಯ ಸ್ವಯಂಸೇವಾ ಸಂಘಟನೆ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ಗಣಿ ಮಾಲೀಕರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕಿಂಕ್ರಿದೇವಿ ತಮ್ಮನ್ನು ಬೆದರಿಸಿ ಹಣ ವಸೂಲಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಹೊರಿಸಿದರು. ಕಿಂಕ್ರಿದೇವಿಯವರು ಇದಾವುದರಿಂದಲೂ ಧೃತಿಗೆಡಲಿಲ್ಲ. ಅವರು ತಮ್ಮ ಕೇಸ್ ಹಿಂದೆಗೆದುಕೊಳ್ಳಲಿಲ್ಲ. ಆದರೆ, ಅವರಿಗೆ ಕೋರ್ಟ್ ನಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಗದಾಗ, ಅವರು ೧೯ ದಿನ ಶಿಮ್ಲಾದಲ್ಲಿ ಹೈಕೋರ್ಟ್ ಹೊರಗಡೆ ಉಪವಾಸ ಸತ್ಯಾಗ್ರಹ ನಡೆಸಿದರು. ಆಗ, ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಲು ಒಪ್ಪಿತು. ಇಡೀ ಜಗತ್ತು ಅವರೆಡೆ ನೋಡುವಂತಾಯಿತು. ೧೯೮೭ರಲ್ಲಿ ಹೈಕೋರ್ಟ್ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.

ಗಣಿ ಮಾಲೀಕರು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿ ತಮ್ಮ ಹೋರಾಟವನ್ನು ಮುಂದುವರೆಸದಂತೆ ಕಿಂಕ್ರಿದೇವಿಯವರಿಗೆ ಜೀವಬೆದರಿಕೆಯನ್ನೊಡ್ಡಿದರು. ಆದರೆ ಕಿಂಕ್ರಿದೇವಿಯವರು ತಮ್ಮ ಹೋರಾಟವನ್ನು ಹಿಂದೆಗೆದುಕೊಳ್ಳಲಿಲ್ಲ. ೧೯೯೫ರಲ್ಲಿ ಸರ್ವೋಚ್ಛ ನ್ಯಾಯಾಲಯಗಣಿ ಮಾಲೀಕರ ಮನವಿಯನ್ನು ತಿರಸ್ಕರಿಸಿತು. ಕಿಂಕ್ರಿದೇವಿಯವರ ಹೋರಾಟವನ್ನು ಗಮನಿಸಿದ ಅಮೇರಿಕಾದ ಹಿಲರಿ ಕ್ಲಿಂಟನ್ ಅವರನ್ನು ಅದೇ ವರ್ಷ ಬೀಜಿಂಗ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನಕ್ಕೆ ಆಹ್ವಾನಿಸಿದರು. ಆಗಲೂ ಜಾಡಮಾಲಿ ಕೆಲಸ ಮಾಡುತ್ತಿದ್ದ ಕಿಂಕ್ರಿದೇವಿಯವರು ಸಮ್ಮೇಳನದಲ್ಲಿ ದೀಪ ಬೆಳಗಿಸುವುದರೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್ಮ ಹೋರಾಟದ ಬಗ್ಗೆ ಮಾತನಾಡಿದ ಅವರು, ಸಾಮಾನ್ಯ ಜನರೂ ಸಹ ಹೇಗೆ ಸಮಾಜದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಸಭೆಯಲ್ಲಿ ತಿಳಿಸಿಕೊಟ್ಟರು.

ಪರಿಸರ ಸಂರಕ್ಷಣೆಗಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅವರಿಗೆ ಹಿಮಾಚಲಪ್ರದೇಶದ ಸರ್ಕಾರ ಯಾವುದೇ ರೀತಿಯ ಬೆಂಬಲವನ್ನು, ಹಣಕಾಸಿನ ನೆರವನ್ನು ನೀಡಲಿಲ್ಲ. ೧೯೯೯ರಲ್ಲಿ ಝಾನ್ಸಿ ಕಿ ರಾಣಿ ಲಕ್ಷ್ಮಿಬಾಯಿ ಸ್ತ್ರೀಶಕ್ತಿ ಪುರಸ್ಕಾರವನ್ನು ನೀಡಲಾಯಿತು. ಕಿಂಕ್ರಿದೇವಿಯವರು ತಾವು ನೆಲೆಸಿದ್ದ ಸಂಗ್ರಾಹ್ ನಲ್ಲಿ ಹೆಣ್ಣುಮಕ್ಕಳ ಸಾಕ್ಷರತೆಗಾಗಿ ಶ್ರಮಿಸಿದರು. “ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದೆ ಯಾವ ದೇಶವಾಗಲೀ ಸಮಾಜವಾಗಲೀ ಅಭಿವೃದ್ಧಿಯಾಗಲು ಸಾಧ್ಯವಿಲ್ಲ” ಎಂಬುದು ಅವರ ವಿಚಾರವಾಗಿತ್ತು. ತಮ್ಮ ಹಳ್ಳಿ ಸಂಗ್ರಾಹ್ ನಲ್ಲಿ ಪದವಿ ಕಾಲೇಜನ್ನು ಆರಂಭಿಸಬೇಕೆಂದು ಆಗ್ರಹಿಸಿದರು. ಅವರ ಹೋರಾಟದ ಫಲವಾಗಿ, ೨೦೦೬ರಲ್ಲಿ ಅಲ್ಲಿ ಕಾಲೇಜು ಆರಂಭವಾಯಿತು. “ನನಗೆ ಓದಲಾಗಲಿಲ್ಲ ನಿಜ. ಆದರೆ
ನನ್ನಂತೆ ಇತರರು ಶಿಕ್ಷಣವಿಲ್ಲದೆ ಸಮಸ್ಯೆಗೆ ಎದುರಾಗಬಾರದು” ಎಂಬುದು ಅವರ ಅಭಿಪ್ರಾಯವಾಗಿತ್ತು.

ಜೀವನದುದ್ದಕ್ಕೂ ಸಾಮಾಜಿಕ ಕಳಕಳಿಯನ್ನು ಹೊಂದಿದ, ಹೋರಾಟವನ್ನು ಮಾಡುತ್ತಲೇ ಜೀವನ ಸವೆಸಿದ ಅವರು ತಮ್ಮ ಕಡೆಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಆ ಸಮಯದಲ್ಲಿಯೂ ಸಹ ಯಾವ ಸರ್ಕಾರಗಳೂ ಅವರ ನೆರವಿಗೆ ಬರಲಿಲ್ಲ. ಅವರ ಪರಿಸ್ಥಿತಿಯನ್ನರಿತ ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿಯೇತರ ಸಂಸ್ಥೆಗಳು ಅವರ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿ ಕೊಟ್ಟರು. ಕಿಂಕ್ರಿದೇವಿಯವರು ೨೦೦೭ರ ಡಿಸೆಂಬರ್ ೩೦ ರಂದು ಚಂಡಿಗಡ್ ನಲ್ಲಿ ಮರಣ ಹೊಂದಿದರು.

ಅವರ ಘೋಷಣೆ “ಜಲ, ಕಾಡು, ಬೆಟ್ಟಗಳನ್ನು ಸಂರಕ್ಷಿಸಿ” ಎಂಬುದು ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುತ್ತದೆ. ಅವರನ್ನು ಕೇವಲ ಸಂಗ್ರಾಹ್ ನ ಸ್ಥಳೀಯರು ಮಾತ್ರವಲ್ಲ, ಭಾರತದ ಉತ್ತರ ಪ್ರಾಂತ್ಯದವರು ಮಾತ್ರವಲ್ಲ, ಇಡೀ ದೇಶವೇ ನೆನಪಿಸಿಕೊಳ್ಳಬೇಕು, ಅವರ ಪರಿಸರ ಸಂರಕ್ಷಣಾ ಚಳುವಳಿಯನ್ನು ಮುಂದುವರೆಸಬೇಕು. ಅದು ನಾವು ಆ ಪರಿಸರ ಹೋರಾಟಗಾರ್ತಿಗೆ ಸಲ್ಲಿಸುವ ನಿಜ ನಮನವಾಗುತ್ತದೆ.


- ಡಾ।। ಸುಧಾ.ಜಿ

ಕಾಮೆಂಟ್‌ಗಳಿಲ್ಲ: