ಜ಼ಾರ್ ದೊರೆಯ ಕಾಲವದು. ರಷ್ಯಾದಲ್ಲಿ ಸರ್ವಾಧಿಕಾರಿ ರಾಜನ ಆಳ್ವಿಕೆ ಇತ್ತು. ಮೇ ದಿನೋತ್ಸವವನ್ನು ಆಚರಿಸಲು ಕಾರ್ಮಿಕರಿಗೆ ಅನುಮತಿಯನ್ನು ನೀಡಿರಲಿಲ್ಲ. ಅಂದು ದೊಡ್ಡ ಗುಂಪುಗಳಲ್ಲಿ ಒಂದುಗೂಡಲಾಗಲೀ, ಸಭೆ ಅಥವಾ ಮೆರವಣಿಗೆ ಸಂಘಟಿಸಲಾಗಲಿ ಅವಕಾಶವಿರಲಿಲ್ಲ. ಆದ್ದರಿಂದ ಕಾರ್ಮಿಕರು ವಿವಿಧ ಉಪಾಯಗಳನ್ನು ಹೂಡಬೇಕಾಗಿತ್ತು.
ಮಾಸ್ಕೋದ ಕಾರ್ಮಿಕರು ಮೇ ದಿನವನ್ನು ಆಚರಿಸಲು ಎಲ್ಲರಿಗಿಂತ ಭಿನ್ನವಾದ ಉಪಾಯವನ್ನು ಹೂಡಿದರು. ಒಂದು ಶವಪೆಟ್ಟಿಗೆಯನ್ನು ಖರೀದಿಸಿ, ಒಬ್ಬ ಪಾದ್ರಿಯನ್ನೂ ಗೊತ್ತುಮಾಡಿಕೊಂಡರು. ಆರು ಮಂದಿ ಆ ಪೆಟ್ಟಿಗೆಯನ್ನು ಹೊತ್ತರು, ಉಳಿದವರು ಅದನ್ನು ಹಿಂಬಾಲಿಸಿದರು. ಮೆರವಣಿಗೆ ಸ್ಮಶಾನದ ಕಡೆ ಸಾಗಿತು.
ಇಂಥ ಪರಿಸ್ಥಿತಿಯಲ್ಲಿ ಆ ಜನರನ್ನು ಮೆರವಣಿಗೆಯಲ್ಲಿ ಹೋಗಬೇಡಿರೆಂದು ಯಾರೂ ಹೇಳುವ ಹಾಗಿರಲಿಲ್ಲ. ಆದ್ದರಿಂದ ಪೋಲಿಸರೂ ಸಹ ಗೌರವದಿಂದ ಪಕ್ಕಕ್ಕೆ ಸರಿದು, ಆ ಮೆರವಣಿಗೆ ಸಾಗಲು ಬಿಟ್ಟರು.
ಸ್ಮಶಾನದಲ್ಲಿ ಮೃತನಿಗಾಗಿ ಶವಸಂಸ್ಕಾರದ ಪ್ರಾರ್ಥನಾ ಗೀತೆಯನ್ನು ಹಾಡಲಾಯಿತು. ಪಾದ್ರಿ ಧೂಪದಾನಿಯನ್ನು ಆಡಿಸುತ್ತಾ ಧರ್ಮಪ್ರವಚನವನ್ನು ಮಾಡತೊಡಗಿದ.
“ದೇವರ ಈ ಸೇವಕನ ಆತ್ಮಶಾಂತಿಗಾಗಿ. . . . ಏನು ಅವನ ಹೆಸರು?” ಎಂದು ಕಾರ್ಮಿಕರನ್ನು ಕೇಳಿದ.”
“ನಿಕೋಲಸ್” ಉತ್ತರ ಬಂತು ಕಾರ್ಮಿಕರಿಂದ.
“ಪ್ರಭುವಿನ ಸೇವಕ ನಿಕೋಲಸ್ ನ ಆತ್ಮಶಾಂತಿಗಾಗಿ” ಎಂದು ಪಾದ್ರಿ ಮತ್ತೆ ಹೇಳಿದ.
ಸಂಸ್ಕಾರವನ್ನು ಮುಗಿಸಿ, ತನ್ನ ಐದು ರೂಬೆಲ್ ಗಳನ್ನು ಪಡೆದು ಪಾದ್ರಿ ಅಲ್ಲಿಂದ ಹೊರಟುಹೋದ. ಆದರೆ ಕಾರ್ಮಿಕರು, ಸ್ಮಶಾನದ ಮೂಲೆಯಲ್ಲಿ ಸೇರಿ ಸಭೆ ನಡೆಸಿದರು. ಮೆಲುದನಿಯಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು, ಘೋಷಣೆಗಳನ್ನು ಕೂಗಿದರು.
ಅಂದು ರಾತ್ರಿ ಸ್ಮಶಾನ ಭೂಮಿಯ ಕಾವಲುಗಾರ ಪಹರೆ ಮಾಡುತ್ತ ಒಂದು ಕಡೆ ನೆಲದ ಮೇಲಿರಿಸಿದ್ದ ಶವಪೆಟ್ಟಿಗೆಯನ್ನು ಎಡವಿಬಿದ್ದ. ಆಶ್ಚರ್ಯಗೊಂಡ ಕಾವಲುಗಾರ ಶವಪೆಟ್ಟಿಗೆಯ ಮುಚ್ಚಳವನ್ನು ತೆಗೆದು ನೋಡಿದ. ಅವನಿಗೆ ಅತ್ಯಂತ ಭಯಾನಕ ದೃಶ್ಯ ಕಂಡು ಬಂದಿತು. ಅವನು ತಕ್ಷಣವೇ ಸ್ಥಳೀಯ ಇನ್ಸೆಪೆಕ್ಟರ್ ನನ್ನು ನೋಡಲು ಬಂದ.
“ಸ್ವಾಮಿ, ಅಲ್ಲಿ ಸ್ಮಶಾನದಲ್ಲಿ ಒಂದು ಶವಪೆಟ್ಟಿಗೆಯಿದೆ.”
“ಸರಿ, ಅದರಲ್ಲೇನು ಹೊಸತು?”
“ಶವಪೆಟ್ಟಿಗೆಯೊಳಗೆ . . . . .. ತಡವರಿಸಿದ ಕಾವಲುಗಾರ.
“ಏನಿತ್ತು ಅದರಲ್ಲಿ?”
“ಮಹಾಪ್ರಭು, ತ್ಸಾರ್ ದ್ವಿತೀಯ ನಿಕೋಲಸ್” ಕಾವಲುಗಾರ ಗೊಣಗುಟ್ಟಿದ.
“ಏನು, ನಿನಗೇನಾದರೂ ಹುಚ್ಚು ಹಿಡಿದಿದೆಯೇ?”
“ಇಲ್ಲ ಸ್ವಾಮಿ, ನಿಜಕ್ಕೂ ನಾನು ಕಂಡಿದ್ದು ಜ಼ಾರ್ ರವರನ್ನೇ.”
ಇನ್ಸ್ ಪೆಕ್ಟರ್ ಸ್ಮಶಾನಕ್ಕೆ ತೆರಳಿದ. ಅಲ್ಲಿ ಜ಼ಾರ್ ಇರಲಿಲ್ಲ ನಿಜ, ಆದರೆ ಜ಼ಾರ್ ನ ಭಾವಚಿತ್ರವಿತ್ತು. ಪೂರ್ಣಪ್ರಮಾಣದ ಚಿತ್ರ. ಮಿಲಿಟರಿ ಸಮವಸ್ತ್ರ ಧರಿಸಿ ಬಿರುದಿನ ಪದಕಗಳನ್ನು ತೊಟ್ಟಿರುವ ಚಿತ್ರ.
ವಿಚಾರಣೆ ಪ್ರಾರಂಭವಾಯಿತು. ಕಾವಲುಗಾರನಿಗೆ ಹೆಚ್ಚೇನೂ ಗೊತ್ತಿರಲಿಲ್ಲ. ಪಾದ್ರಿಯನ್ನು ಹುಡುಕಿದರು.
“ನೀನು ಶವಸಂಸ್ಕಾರದ ಧರ್ಮಪ್ರವಚನ ನಡೆಸಿದೆಯಾ?”
“ಹೌದು.”
“ಯಾರಿಗಾಗಿ?” “ದೇವರ ಸೇವಕ ನಿಕೋಲಸ್ ಗಾಗಿ.”
“ಬುದ್ಧಿಗೇಡಿ” ಇನ್ಸ್ ಪೆಕ್ಟರ್ ಕಿರುಚಿದ.
ಮೊದಲಿಗೆ ಪಾದ್ರಿಗೆ ತನ್ನನ್ನು ಏಕೆ ವಿಚಾರಿಸುತ್ತಿದ್ದಾರೆ, ತನ್ನ ತಪ್ಪೇನು ಎಂದು ಅರಿವಾಗಲಿಲ್ಲ. ಗೊತ್ತಾದಾಗ ತರಗೆಲೆಯಂತೆ ನಡುಗಲಾರಂಭಿಸಿದ. ಅಂಜಿಕೆಯಿಂದ ಪಿಳಪಿಳನೆ ಕಣ್ಣುಬಿಟ್ಟ.
ಇನ್ಸ್ ಪೆಕ್ಟರ್ “ನಿನ್ನನ್ನು ಕರೆದೊಯ್ದ ವ್ಯಕ್ತಿ ಹೇಗಿದ್ದ?” ಎಂದು ಕೇಳಿದ. ಅದಕ್ಕೆ ಪಾದ್ರಿ ಅವನು ಹರವಾದ ಎದೆಯಿದ್ದ, ಒರಟಾದ ಕೈಗಳಿದ್ದ, ಬಲಿಷ್ಟ ವ್ಯಕ್ತಿಯಾಗಿದ್ದ” ಎಂದ.
ಎಲ್ಲೆಡೆ ಅಂತಹ ವ್ಯಕ್ತಿಗಾಗಿ ಹುಡುಕಾಟ ನಡೆಯಿತು. ಆದರೆ ಅದೇನೂ ಪ್ರಯೋಜನಕಾರಿಯಾಗಲಿಲ್ಲ. ಏಕೆಂದರೆ ಬಹುತೇಕ ಕಾರ್ಮಿಕರು ವಿಶಾಲ ಎದೆ, ಒರಟಾದ ಕೈಗಳನ್ನು ಹೊಂದಿದ್ದ ಬಲಿಷ್ಟ ವ್ಯಕ್ತಿಗಳಾಗಿದ್ದರು. ವಿಚಾರಣೆಯನ್ನು ಅಲ್ಲಿಗೆ ಕೈಬಿಡಲಾಯಿತು.
ಕಾರ್ಮಿಕರು ಮಾತ್ರ ತಾವು ನಡೆಸಿದ ಅಣಕು ಶವಯಾತ್ರೆಯನ್ನು ನಿಜ ಮಾಡಲು ಶ್ರಮಿಸತೊಡಗಿದರು. ಬಹಳ ಬೇಗದಲ್ಲಿಯೇ, ರಷ್ಯಾದ ಕಾರ್ಮಿಕರು, ಇಡೀ ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ರಾಜರ ಪದ್ಧತಿ ತೊಡೆದುಹಾಕಿ, ಬಂಡವಾಳಶಾಹಿಗಳನ್ನು ಕಿತ್ತುಹಾಕಿ ಕಾರ್ಮಿಕರ ರಾಜ್ಯವನ್ನು ಸ್ಥಾಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ