Pages

ಪುಸ್ತಕ ಪ್ರೀತಿ: "ಜೀವನ ಸಂಗ್ರಾಮ"



     ಒಂದು ಕೃತಿ ಓದುಗನಿಗೆ ಹೊಸ ಅರಿವು ಸೃಷ್ಟಿಸಿ, ತಿಳಿದಿರದ, ಹೊಸದೊಂದು ವಿಷಯ ಸೂಕ್ಷ್ಮಕ್ಕೆ ಪರಿಚಯಿಸಿ, ಒಂದು ವಿಚಾರ ಪ್ರಪಂಚವನ್ನೇ ತೆರೆದಿಟ್ಟರೆ ಆ ಕೃತಿಕಾರನ ಕೌಶಲ್ಯ ಎಷ್ಟು ತೀಕ್ಷ್ಣ ಎಂಬುದು ಮನದಟ್ಟಾಗುತ್ತದೆ. ಕನ್ನಡದ ಓದುಗರಿಗೆ ಭೂಮಿ-ವಿಜ್ಞಾನ-ಪ್ರಕೃತಿ-ಇತಿಹಾಸ-ವಿಕಾಸ ಎಂಬಂತಹ ವಿಷಯಗಳ ಕುರಿತು ಒಂದು ಸಮೃದ್ಧ ವಿಚಾರ ಪ್ರಪಂಚವನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟವರು "ಕೆ. ಪಿ. ಪೂರ್ಣಚಂದ್ರ ತೇಜಸ್ವಿ"ಯವರು. 

      "ಮಿಲೆನಿಯಮ್ ಸರಣಿ"ಯಡಿ ತೇಜಸ್ವಿಯವರು ಬರೆದ ಪುಸ್ತಕಗಳು ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಹಾಗು ವೈಚಾರಿಕ ಸಾಹಿತ್ಯಕ್ಕೆ ಹೊಸ ಸಂವೇದನೆ ಒದಗಿಸಿದವು. ನೈಸರ್ಗಿಕ ಅದ್ಭುತಗಳು, ಐತಿಹಾಸಿಕ ಘಟನೆಗಳು ಹಾಗು ಅವುಗಳ ಸಾಮಾಜಿಕ ಪರಿಣಾಮಗಳು, ವಿಸ್ಮಯ ಎನಿಸುವಂತಹ ಸಂಗತಿಗಳು, ಮೌಢ್ಯದ ಛಾಯೆ ಮೀರಿದ ವಿಜ್ಞಾನದ ಪ್ರಗತಿ ಕಥೆಗಳು - ಇಂತಹ ವಿಷಯಗಳನ್ನು, ನಿಜ ಘಟನೆಗಳನ್ನು ಕಥೆಯಂತೆ ಸಲೀಸಾಗಿ ಹೇಳುವ ಮಹತ್ವಾಕಾಂಕ್ಷೆ ಈ ಸರಣಿಯ ಪುಸ್ತಕಗಳಲ್ಲಿ ಕಾಣಸಿಗುತ್ತದೆ. ಅವರೇ ಹೇಳಿದಂತೆ ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಆ ಶತಮಾನದ ಅಪರೂಪದ ಕತೆಗಳನ್ನು ಆಯ್ದು ಬರೆದ ಪುಸ್ತಕಗಳು ಇವು. ಈ ಸರಣಿಯಲ್ಲಿ ೧೬ ಪುಸ್ತಕಗಳಿವೆ. ಪ್ರತಿ ಪುಸ್ತಕ ಒಂದು ವಿಷಯವನ್ನು ಒಳಗೊಂಡ ಕಥೆಗಳ ಮೊತ್ತ. "ಜೀವನ ಸಂಗ್ರಾಮ" ಇದೇ ಮಾಲಿಕೆಯಲ್ಲಿ ಪ್ರಕಟಗೊಂಡ ಎರಡನೆಯ ಪುಸ್ತಕ. 

     ತೇಜಸ್ವಿಯವರ ವ್ಯಕ್ತಿತ್ವದಿಂದ ಬೇರ್ಪಡಿಸಲು ಅಸಾಧ್ಯವಾದ ಗುಣ ಎಂದರೆ ದಣಿವರಿಯದ ಕುತೂಹಲವೇ ಇರಬೇಕು. "ಜೀವನ ಸಂಗ್ರಾಮ" ಕೃತಿಯಲ್ಲೂ ಪುಟ ಪುಟದಲ್ಲೂ ಅವರ ಕುತೂಹಲದ ಪ್ರತಿಫಲ ಕಾಣಸಿಗುತ್ತದೆ. ಇದು ಜ್ವಾಲಾಮುಖಿಗಳ ಕುರಿತ ಪುಸ್ತಕ. ವೈಜ್ಞಾನಿಕವಾಗಿ ಜ್ವಾಲಾಮುಖಿಗಳು ಹೇಗೆ ಪ್ರವರ್ತಿಸುತ್ತವೆ, ಅವುಗಳ ಒಳಗೆ ಏನಿರುತ್ತದೆ ಎಂಬಲ್ಲಿನಿಂದ ಹಿಡಿದು ಜ್ವಾಲಾಮುಖಿಗಳು ಸುನಾಮಿಯ ಸೃಷ್ಟಿಯಲ್ಲಿ ಯಾವ ಪಾತ್ರ ವಹಿಸುತ್ತವೆ ಎಂಬಲ್ಲಿವರೆಗೂ ಈ ಪುಸ್ತಕ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ವಿಶೇಷ ಏನೆಂದರೆ ಅದಷ್ಟೇ ಪುಸ್ತಕದ ಗುರಿಯಲ್ಲ. ಮೊದಲೇ ಹೇಳಿದಂತೆ ಇದು ಒಂದು ಮಹತ್ವಾಕಾಂಕ್ಷೆಯ ಯೋಜನೆ. ಕಳೆದ ಶತಮಾನದ ಪ್ರಮುಖ ಜ್ವಾಲಾಮುಖಿಗಳ ಚಟುವಟಿಕೆಗಳು, ಅವುಗಳ ಪರಿಣಾಮಗಳು, ವಿವಿಧ ಕಡೆ ಆ ಪರಿಣಾಮಗಳನ್ನು ಗ್ರಹಿಸಿದ ರೀತಿಗಳನ್ನು ಈ ಕೃತಿ ಕಥೆಯಂತೆ ಕಟ್ಟಿಕೊಡುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪ್ರಭಾವಗೊಳ್ಳುವ ಬೇರೆ ನೈಸರ್ಗಿಕ ಕ್ರಿಯೆಗಳ ಬಗ್ಗೆ ಕೂಡ ಪುಸ್ತಕ ಬೆಳಕು ಚೆಲ್ಲುತ್ತದೆ. ಸುಂಟರಗಾಳಿ, ಎಲ್ ನಿನೋ - ಈ ಪ್ರಕ್ರಿಯಗಳ ಬಗ್ಗೆ ಸಹ ಸ್ಥೂಲ ಪರಿಚಯ ಸಿಗುತ್ತದೆ. 

     ಇಂತಹ ವಿಷಯವನ್ನು ಬರೆಯುವಾಗ ಕೃತಿಕಾರನಿಗೆ ಭಾಷೆ ಹಾಗು ಕೃತಿಯ ರೂಪದ ಕುರಿತು ವಿಶೇಷ ಹಿಡಿತವಿರಬೇಕಾಗುತ್ತದೆ. ವೈಜ್ಞಾನಿಕ ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸುವ ಭರದಲ್ಲಿ ಐನ್ಸ್ಟೈನ್ ಹೇಳುವಂತೆ 'ಸರಳಗೊಳಿಸಬೇಕಾದಷ್ಟೇ ಸರಳಗೊಳಿಸಬೇಕು, ಹೆಚ್ಚು ಸರಳಗೊಳಿಸಲೋಗಬಾರದು!' 'ಜೀವನ ಸಂಗ್ರಾಮ' ಕೃತಿಯು ಈ ವಿಭಾಗದಲ್ಲಿ ಎಷ್ಟು ಯಶಸ್ಸು ಸಾಧಿಸುತ್ತದೆ ಎಂಬುದು ಓದುಗಳ ಒಲವನ್ನಾಧರಿಸಿದ್ದೇನೋ ಎನಿಸುತ್ತದೆ. ತೀರಾ ಸಲೀಸಾಗಿ ಓದಿಸಿಕೊಂಡು ಹೋಗುವ ಕೃತಿಯಲ್ಲವಿದು, ಆದರೆ ಕುತೂಹಲವಿದ್ದು ಓದಲು ತೊಡಗುವ ಓದುಗಳಿಗೆ ಇದು ವಿಚಾರಧಾರೆಯ ರಸದೌತಣವೇ ಹೌದು.

     ಪುಸ್ತಕದ ಮುನ್ನುಡಿಯಲ್ಲಿ ತೇಜಸ್ವಿಯವರು "ಹೆಚ್ಚು ತಿಳಿದ ಹಾಗೆ ನಾವು ತಿಳಿದಿಲ್ಲದಿರುವುದರ ಅರಿವು ಮತ್ತು ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ, ಎಂದರೆ ಜ್ಞಾನ ಎನ್ನುವುದು ನಮ್ಮ ಅಜ್ಞಾನದ ಅರಿವಷ್ಟೇ" ಎಂಬ ಲೋಹಿಯಾರವರ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ಪುಸ್ತಕ ಓದುತ್ತಾ ಓದುತ್ತಾ ಆ ಮಾತು ಎಷ್ಟು ಸತ್ಯ ಎಂಬುದರ ಅರಿವು ಕೂಡ ನಮಗೇ ಸೂಕ್ಷ್ಮವಾಗಿ ಮನದಟ್ಟಾಗುತ್ತದೆ. ಅದಕ್ಕಿಂತ ತೀಕ್ಷ್ಣವಾಗಿ ಅರಿವಾಗುವುದು ಅದೇ ಮುನ್ನುಡಿಯಲ್ಲಿ ಲೇಖಕರು ಹೇಳುವ ಈ ಅಭಿಪ್ರಾಯ - "ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸುತ್ತಾ ಒಂದು ದಿನ ಪರಿಪೂರ್ಣತೆಯ ಹಂತವನ್ನು ಮುಟ್ಟುತ್ತೇವೆ ಎನ್ನುವುದು ಸುಳ್ಳು. ಜ್ಞಾನ ಅಜ್ಞಾನ ಎರಡೂ ಅವಳಿಗಳು. ಆದರೆ ಅನ್ವೇಷಣೆ, ತಿಳಿಯುತ್ತಾ ಹೋಗುವದು ಸಹ ಮನಸ್ಸಿನ ಅನುಷಂಗಿಕ ಗುಣ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೋಮಾಂಚನಕ್ಕಾದರು ಮನಸ್ಸು ಮುಂದುವರಿಯುತ್ತದೆ." ಇದು ಅಭಿಪ್ರಾಯವಲ್ಲ ಸತ್ಯ ಎಂಬ ಅರಿವು ಕೃತಿ ಓದುತ್ತಾ ಓದುಗರಲ್ಲಿ ಮೂಡುತ್ತದೆ. ಕೃತಿಯ ಗೆಲುವಿರುವುದೇ ಅಲ್ಲಿ. ನೂರು ಪುಟದಷ್ಟೂ ಇಲ್ಲದ ಈ ಚಿಕ್ಕ ಪುಸ್ತಕ ಅಷ್ಟೆಲ್ಲಾ ವಿಷಯಗಳ ಬಗ್ಗೆ ನಮ್ಮ ಕಣ್ತೆರಿಸುವಲ್ಲಿ, ಈ ಜ್ವಾಲಾಮುಖಿಗಳ ಆರ್ಭಟದ ಎದುರು ಮನುಷ್ಯನ 'ಜೀವನ ಸಂಗ್ರಾಮ'ದ ಸಮಗ್ರ ಚಿತ್ರ ಕಟ್ಟಿಕೊಡುವಲ್ಲಿ ಸಂಪೂರ್ಣ ಸಫಲವಾಗಿಲ್ಲ ಎನಿಸಬಹುದು ಆದರೆ ಕುತೂಹಲ ಹಾಗೂ ಪರಿಶೋಧನೆಯ ಕಿಚ್ಚನ್ನು ಹೊತ್ತಿಸುವಲ್ಲಿ ಸಂಪೂರ್ಣ ಸಫಲವಾಗಿದೆ ಎನಿಸದೆ ಇರಲಾರದು. 

- ಮಂಜುನಾಥ್ ಎ ಎನ್  

ವಿಜ್ಞಾನ-ವಿಶೇಷ: "ಜನಪ್ರಿಯ ವೈಜ್ಞಾನಿಕ ಲೇಖನ ಬರೆಯುವುದು ಹೇಗೆ"




[ಜೆ ಬಿ ಎಸ್ ಹಾಲ್ಡೇನ್ ರವರು ಬ್ರಿಟಿಷ್  ವಿಜ್ಞಾನಿಗಳು. ಫಿಸಿಯಾಲಜಿ, ಜೆನಿಟಿಕ್ಸ್, ವಿಕಾಸವಾದಿ ಜೀವಶಾಸ್ತ್ರ, ಮತ್ತು ಗಣಿತದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಜೊತೆಗೆ ಸ್ಟಾಟಿಸ್ಟಿಕ್ಸ್  ಮತ್ತು ಬಯೋಸ್ಟಾಟಿಸ್ಟಿಕ್ಸ್ ಗೆ ನೂತನ ಕೊಡುಗೆಯನ್ನು ನೇಡಿದ್ದಾರೆ. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಹಾಲ್ಡೇನ್ ರವರು, ಅವರ ಪೀಳಿಗೆಯ ಅತ್ಯಂತ ಮೇಧಾವಿ ಎಂದು ಆರ್ಥರ್ ಸಿ ಕ್ಲಾರ್ಕ್ ರವರು ಹೇಳಿದ್ದಾರೆ. ತಮ್ಮ ಸಮಾಜವಾದಿ, ನಾಸ್ತಿಕವಾಡಿ, ಮಾರ್ಕ್ಸ್ ವಾದಿ, ಮಾನವೀಯತಾವಾದಿ ಅಭಿಪ್ರಾಯಗಳಿಂದಾಗಿ ಅವರು ದೇಶ ಬಿಟ್ಟು ಬಂದು ಭಾರತದಲ್ಲಿ ನೆಲೆಸಿದರು. ೧೯೬೧ರಲ್ಲಿ ಭಾರತದ ಪ್ರಜೆಯಾದರು. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಬರೆದಿರುವ ಹಲವರು ಲೇಖನಗಳಲ್ಲಿ ಈ ಲೇಖನ ಸಹ ಒಂದು]


ಬಹುತೇಕ ವೈಜ್ಞಾನಿಕ ಕೆಲಸಗಾರರು ತಮ್ಮ ವಿಷಯದ ಬಗ್ಗೆ ಜ್ಞಾನವನ್ನು ಹರಡಲು ಮತ್ತು ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸುತ್ತಾರೆ. ಸಾಮಾನ್ಯ ಜನತೆಗಾಗಿ ವಿಜ್ಞಾನದ ಬಗ್ಗೆ ಬರೆಯುತ್ತಾ ಎರಡನ್ನೂ ಮಾಡಬಹುದು. ಅದನ್ನು ಹೇಗೆ ಮಾಡುವುದೆಂಬುದರ ಬಗ್ಗೆ ಕೆಲವು ಸಲಹೆಗಳನ್ನು ಕೊಡುತ್ತೇನೆ. ಆದರೆ ಯಾವುದೇ ಓದುಗ ನನ್ನ ವಿಧಾನ ಏಕೈಕವಾದದ್ದು ಎಂದು ಭಾವಿಸದಿರಲಿ. ಸಾಹಿತ್ಯಿಕ ಜೋಡಣೆ, ಜೈವಿಕ ಜೋಡಣೆಯಂತೆ. ಯಾವ ಉತ್ಪನ್ನ ಬೇಕು ಮತ್ತು ಕಚ್ಚಾ ಪದಾರ್ಥಗಳು ಯಾವುವು, ಸಲಕರಣೆಗಳು ಏನು ಎಂಬುದರ ಮೇಲೆ ವಿಧಾನವು ನಿರ್ಧಾರವಾಗುತ್ತದೆ. ನನ್ನ ಮೆದುಳೇ ಒಂದು ಸಾಧನವಾದ್ದರಿಂದ, ನಿಮ್ಮದಕ್ಕಿಂತ ಭಿನ್ನವಾದ್ದರಿಂದ, ನನ್ನ ವಿಧಾನಗಳೂ ಸಹ ಬೇರೆಯೇ ಆಗಿರುತ್ತವೆ.

     ಬರವಣಿಗೆಯ ಕೆಲಸ ಸುಲಭವಲ್ಲ ಮತ್ತು ಬರೆಯುವ ವಿಧಾನಕ್ರಮವನ್ನು ದ್ವೇಷಿಸಿದರೆ ಬರವಣಿಗೆ ಅಸಾಧ್ಯವೆಂದು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು. ವಿಜ್ಞಾನಕ್ಕಿರುವಂತೆ ಸಾಹಿತ್ಯಕ್ಕೆ ತನ್ನದೇ ಆದ ವಿಧಾನಕ್ರಮವಿದೆ. ಎಲ್ಲಿಯವರೆಗೂ ನೀವು ಒಂದಷ್ಟು ಉತ್ತಮ ಮಾನದಂಡವನ್ನು ಅಳವಡಿಸಿಕೊಳ್ಳುವುದಿಲ್ಲವೊ, ಅಲ್ಲಿಯವರೆಗೂ ನೀವು ಗುರಿ ತಲುಪಲಾರಿರಿ. ಆದ್ದರಿಂದ ನೀವು ನಿಮ್ಮ ಮೊದಲ ಅಥವಾ ಎರಡನೆಯ ಪ್ರಯತ್ನದಲ್ಲಿಯೇ ಯಶಸ್ಸನ್ನು ಕಂಡುಬಿಡುತ್ತೀರೆಂದು ಆಶಿಸಬೇಡಿ. 

         ನೀವು ಯಾರಿಗಾಗಿ ಬರೆಯುತ್ತಿರುವಿರಿ! ಇದು ವಿಷಯದ ಆಯ್ಕೆಗಿಂತ ಬಹಳ ಮುಖ್ಯವಾದದ್ದು. ಏಕೆಂದರೆ 18ನೇ ಶತಮಾನದ ಭೌತಶಾಸ್ತ್ರದ ಇತಿಹಾಸದ ಬಗೆಗಿನ ಲೇಖನ ನಿಮಗೆ ದೈನಂದಿಕದಲ್ಲಿ ದೊರೆಯುವುದಿಲ್ಲ. ‘ದಿ ಟೈಮ್ಸ್ ಪತ್ರಿಕೆ’ ಮಿನರಾಲಜಿ ಬಗೆಗಿನ ಸೋವಿಯತ್ ಕೆಲಸದ ಬಗ್ಗೆ ಸರಿಯಾಗಿ ಬರೆಯುವುದು ಅಸಂಭವ. ‘ಡೈಲಿ ವರ್ಕರ್ ಪತ್ರಿಕೆ’ ಬ್ರಿಟಿಷ್ ಸುಡಾನ್‍ನಲ್ಲಿ ಹತ್ತಿ ಬೆಳೆಯುವಿಕೆಯ ಬಗ್ಗೆ ಪ್ರಶಂಸನೀಯ ಲೇಖನ ಬರೆಯುವ ಸಂಭವ ಅತಿ ಕಡಿಮೆ. ಜೊತೆಗೆ ನಿಮ್ಮ ಲೇಖನ ಎಷ್ಟು ಉದ್ದವಿರಬೇಕು, ಅದು ಎಲ್ಲಿ ಪ್ರಕಟವಾಗುವುದು ಎಂಬುದರ ಮೇಲೆ ಲೇಖನವನ್ನು ನಿರ್ಧರಿಸಬೇಕು. 

       ಈಗ ವಸ್ತುವಿಷಯಕ್ಕೆ ಬರೋಣ. ನೀವು ಯಾವುದೋ ಒಂದು ನಿರ್ದಿಷ್ಟ ಸಂಶೋಧನಾ ಕೆಲಸವನ್ನೋ ಅಥವಾ ನಿರ್ದಿಷ್ಟ ತತ್ವಅಳವಡಿಕೆಯ ವಿಷಯದ ಬಗ್ಗೆ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಯಾವುದೋ ಸಾಮಾನ್ಯ ತತ್ವವನ್ನು ಆಯ್ಕೆಮಾಡಿಕೊಂಡು ಅದನ್ನು ಅರ್ಥಮಾಡಿಸಲು ವಿವಿಧ ವಿಭಾಗಗಳ ವೈಜ್ಞಾನಿಕ ಕೆಲಸದ ಬಗ್ಗೆ ಬರೆಯಲು ಆರಿಸಿಕೊಳ್ಳಬಹುದು. ಉದಾಹರಣೆಗೆ “ಉಪಯುಕ್ತ ಆಕಸ್ಮಿಕ”ಗಳ ಬಗ್ಗೆ ಅತ್ಯುತ್ತಮ ಲೇಖನ ಬರೆಯಬಹುದು. ಪ್ರೀಸ್ಟ್ಲಿ ಆಕಸ್ಮಿಕವಾಗಿ ಒಂದು ಉಷ್ಣಮಾಪಕವನ್ನು (ಥರ್ಮಾಮೀಟರ್) ಬೀಳಿಸಿದರು. ಪಾದರಸದ ಸ್ಥಿತಿ ಅವರಿಗೆ ಆಕ್ಸಿಜೆನ್ ಕಂಡುಹಿಡಿಯಲು ದಾರಿಯನ್ನು ತೋರಿಸಿತು. ಟಾಕಮೈನ್ ಸುಪ್ರಾರೀನಲ್ ಗ್ರಂಥಿಗಳಿಗೆ ಸ್ವಲ್ಪ ಅಮೋನಿಯ ಚೆಲ್ಲಿಬಿಟ್ಟರು ಮತ್ತು ಅದರಿಂದ ಅಡ್ರಿನಾಲಿನ್‍ಅನ್ನು ಹರಳು ಮಾಡಿದರು. 

        ನೀವು ವಿಜ್ಞಾನ ಇತಿಹಾಸದ ವಿದ್ಯಾರ್ಥಿ ಅಲ್ಲದಿದ್ದರೆ, ಬಹುಶಃ ಹೆಚ್ಚು ವಿಶೇಷವಾದ ವಸ್ತುವಿಷಯದ ಬಗ್ಗೆ ಬರೆಯುವುದು ಉತ್ತಮ.  ನೆನಪಿಡಿ ನೀವು ಅದನ್ನು ಹೇಳುವ ವಿಧಾನ ಹೆಚ್ಚು ಆಸಕ್ತಿದಾಯಕವಾಗಿರಬೇಕು. ಇಲ್ಲಿಯವರೆಗೂ ಬಹುಶಃ ನೀವು ಎರಡು ರೀತಿಯ ಲೇಖನಗಳನ್ನು ಬರೆದಿರುತ್ತೀರಿ. ಮೊದಲನೆಯದು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ. ಅಲ್ಲಿ ನೀವು ವಿಷಯದ ಬಗ್ಗೆ ನಿಮಗೆ ಎಷ್ಟು ಗೊತ್ತೆಂಬುದನ್ನು ತೋರಿಸಲು ಪ್ರಯತ್ನಿಸುವಿರಿ. ಇನ್ನೊಂದು, ಒಂದು ಸಣ್ಣ ವಿಷಯವನ್ನು ಸಹ ಆಳವಾಗಿ ಪರಿಶೀಲಿಸುವ ವೈಜ್ಞಾನಿಕ ಲೇಖನಗಳು ಅಥವಾ ತಾಂತ್ರಿಕ ಲೇಖನಗಳು. ಈಗ ನೀವು ಇದಕ್ಕಿಂತ ವಿಭಿನ್ನವಾದದ್ದನ್ನು ಮಾಡಬೇಕೆಂಬ ಉತ್ಸಾಹದಲ್ಲಿದ್ದೀರಿ. ನೀವು ಏನೋ ಹೆಚ್ಚುಗಾರಿಕೆ ತೋರಿಸಲು ಪ್ರಯತ್ನಿಸುತ್ತಿಲ್ಲ ಅಥವಾ ನಿಮ್ಮ ಓದುಗರು ಆ ಕಾರ್ಯಾಚರಣೆ ಮಾಡುವಷ್ಟು ಪ್ರವೀಣರಾಗಬೇಕಾಗಿಲ್ಲದ್ದರಿಂದ ನಿಖರವಾಗಿ ಹೇಳಬೇಕೆಂಬ ಗುರಿಯನ್ನೂ  ಹೊಂದಿಲ್ಲ. ಅವರಲ್ಲಿ ಆಸಕ್ತಿ ಅಥವಾ ಕುತೂಹಲ ಮೂಡಿಸುವುದು ನಿಮ್ಮ ಉದ್ದೇಶವಾಗಿರುತ್ತದೆಯೇ ಹೊರತು ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲ.  ಆದ್ದರಿಂದ, ಆ ವಿಷಯದ ಬಗ್ಗೆ ನೀವು ಲೇಖನದಲ್ಲಿ ಬರೆಯುವುದಕ್ಕಿಂತ ಬಹಳ ಹೆಚ್ಚಿಗೆ ತಿಳಿದುಕೊಂಡಿರಬೇಕು. ಅದರಲ್ಲಿ ಒಂದು ಸುಸಂಬದ್ಧ ಲೇಖನ ಬರೆಯಲು ಅವಶ್ಯವಿರುವ ವಸ್ತುಗಳನ್ನು ಆರಿಸಿಕೊಳ್ಳಬೇಕು. ನನಗೆ ಬಂದಿರುವ ಬಹಳಷ್ಟು ಲೇಖನಗಳು ಪರೀಕ್ಷಾ ಉತ್ತರಪತ್ರಿಕೆಗಳಂತಿರುತ್ತವೆ. ಲೇಖಕರು ವಿಷಯವನ್ನು ನೋಡಿದ್ದಾರೆ ಮತ್ತು ಅದರ ಸಾರಾಂಶವನ್ನು ಬರೆಯಲು ಯತ್ನಿಸಿದ್ದಾರೆ ಎಂಬ ಭಾವನೆಯನ್ನು ಓದುಗರಲ್ಲಿ ಮೂಡಿಸಲೆತ್ನಿಸುತ್ತಾರೆ. ಈ ಸಂಕ್ಷಿಪ್ತ ರೂಪ ಪಠ್ಯಪುಸ್ತಕ ವಿಷಯಕ್ಕೆ ಸೂಕ್ತವಾದರೂ ಜನಪ್ರಿಯ ಲೇಖನಗಳ ಓದುಗರನ್ನು ಆಕರ್ಷಿಸುವುದಿಲ್ಲ, ಏಕೆಂದರೆ ಈ ರೀತಿಯ ಓದುಗರು ತಾರ್ಕಿಕವಾಗಿ ಯೋಚಿಸಲು ಇಚ್ಛಿಸುವುದಿಲ್ಲ. 

     ಹಾಗೆಂದ ಮಾತ್ರಕ್ಕೆ ನೀವು ಮೂರ್ಖರಿಗೆ ಬರೆಯಿರಿ ಎಂದಲ್ಲ. ಅಂದರೆ ನೀವು ವಿಜ್ಞಾನದ ಗೊತ್ತಿರದ ವಾಸ್ತವಾಂಶಗಳನ್ನು ಹೇಳುತ್ತಿರುವಾಗ, ಪದೇ ಪದೇ ದಿನನಿತ್ಯದ ಅನುಭವಗಳಿಂದ ಅರಿತಿರುವ, ಗೊತ್ತಿರುವ ವಾಸ್ತವಾಂಶಗಳನ್ನು ಹೇಳಬೇಕು. ಆದ್ದರಿಂದ ಗೊತ್ತಿರುವ ವಿಷಯದಿಂದ ಆರಂಭಿಸುವುದು ಒಳ್ಳೆಯದು. ಅದು ಬಾಂಬ್ ಸ್ಫೋಟವಿರಬಹುದು, ಹಕ್ಕಿ ಹಾಡು ಅಥವಾ ಚೀಸ್ ಬಗ್ಗೆ ಆಗಿರಬಹುದು. ಇದು ನಿಮಗೆ ಯಾವುದೋ ಒಂದು ವೈಜ್ಞಾನಿಕ ತತ್ವವನ್ನು ಸಾಬೀತುಪಡಿಸುವ ಅವಕಾಶ ನೀಡುತ್ತದೆ. 

       ಈಗ ಒಂದು ಗೊತ್ತಿರುವ ಸಾಮ್ಯತೆಯನ್ನೇ ಪರಿಗಣಿಸಿ. ಬಾಂಬ್‍ನಲ್ಲಿ ಆಗುವ ಬಿಸಿ ಅನಿಲ ಉತ್ಪತ್ತಿಯನ್ನು ಕೆಟಲ್‍ನ ಆವಿಗೆ, ಪಕ್ಷಿಯಲ್ಲಿ ಆಗುವ ಪ್ರತಿ ವರ್ಷದ ಬದಲಾವಣೆಗಳನ್ನು ಮನುಷ್ಯರಲ್ಲಿ ಆಗುವ ಬದಲಾವಣೆಗಳಿಗೆ, ಕ್ಯಾಸೀನ್‍ನಿಂದ ಕ್ಯಾಲ್ಷಿಯಂ ಲವಣಗಳ ರಚನೆಗೆ ಸೋಪ್ ನೊರೆಯ ರಚನೆಯನ್ನು ಹೋಲಿಸಿ. 

        ನಿಮಗೆ ಸಾಕಷ್ಟು ಮಾಹಿತಿ ಗೊತ್ತಿದ್ದರೆ, ಆಗ ನೀವು ನಿಮ್ಮ ಗುರಿಯನ್ನು ಒಂದು ದೊಡ್ಡ ನೆಗೆತದಲ್ಲಲ್ಲದೆ, ಚಿಕ್ಕ ಚಿಕ್ಕ ನೆಗೆತಗಳೊಂದಿಗೆ ಸಾಧಿಸಬಹುದು. ಈ ರೀತಿಯಲ್ಲಿ ನೀವು ಲೇಖನವನ್ನು ಬರೆಯಲು ಆರಂಭಿಸಿದರೆ, ಆಗ ಬಹುಶಃ ನಿಮಗೇ ನಿಮ್ಮ ಅಜ್ಞಾನದ ಅರಿವಾಗುತ್ತದೆ, ವಿಶೇಷವಾಗಿ ಪರಿಮಾಣಾತ್ಮಕ ವಿಷಯಗಳಲ್ಲಿ. ಬೇಸಿಗೆ ಕಾಲದಲ್ಲಿ ರಾಬಿನ್ ಪಕ್ಷಿಯ ಗೊನಾಡ್‍ಗಳ ಲೈಂಗಿಕ ಕೋಶಗಳು ಹೇಗೆ ಚಿಕ್ಕ ಮರಿಯದ್ದಾಗಿಬಿಡುತ್ತದೆ.,ಲಂಡನ್ನಲ್ಲಿ ನೀರಿಗಿಂತ ಎಷ್ಟು ಹೆಚ್ಚು ಕ್ಯಾಲ್ಸಿಯಂ ಹಾಲಿನಲ್ಲಿದೆ, ಸ್ಫೋಟಗೊಳ್ಳುವ ಬಾಂಬ್‍ನ ಗರಿಷ್ಟ ಉಷ್ಣಾಂಶವೆಷ್ಟು! ಒಂದು ಸಾವಿರ ಪದಗಳ ತಾರ್ಕಿಕವಾದ ಲೇಖನವನ್ನು ಪ್ರಾಮಾಣಿಕವಾಗಿ ಬರೆಯಲು ನೀವು 12 ಘಂಟೆಗಳ ಶ್ರಮ ಹಾಕಬೇಕಾಗುತ್ತದೆ. ಜನರ ಜೊತೆ ನಿಮ್ಮನ್ನೂ ನೀವು ಶಿಕ್ಷಿತರನ್ನಾಗಿಸಿಕೊಳ್ಳಬೇಕು. ನೀವು ಲೇಖನ ಬರೆದ ಮೇಲೆ, ಈ ವಿಷಯದ ಬಗ್ಗೆ ಅರಿವಿರದ ನಿಮ್ಮ ಸ್ನೇಹಿತರಿಗೆ ಕೊಡಿ ಅಥವಾ 6 ತಿಂಗಳುಗಳ ಕಾಲ ಪಕ್ಕಕ್ಕಿಟ್ಟುಬಿಡಿ. ನಂತರ ನಿಮಗೇ ಅದು ಅರ್ಥವಾಗುತ್ತದೆಯಾ ನೋಡಿ. ನೀವು ಹಿಂದೆ ಬರೆದಾಗ ಸರಳ ಎಂದುಕೊಂಡ ವಾಕ್ಯಗಳು ಈಗ ಸಂಕೀರ್ಣ ಎನಿಸಬಹುದು. ಅದನ್ನು ಒಟ್ಟುಗೂಡಿಸಲು ಕೆಲವು ಸಲಹೆಗಳು ಇಲ್ಲಿವೆ. (ನೆನಪಿಡಿ, ನಾನಿಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಮಾತ್ರ ಮಂಡಿಸುತ್ತಿದ್ದೇನೆ. ಪ್ರೊ।। ಹಾಗ್ಬೆನ್ ವಾಕ್ಯಗಳನ್ನು ರಚಿಸುವಾಗ ನನ್ನ ಕೆಲವು ಪ್ಯಾರಾಗಳಿಗಿಂತ ಸುದೀರ್ಘವಾದ ವಾಕ್ಯಗಳನ್ನು ಬರೆಯುತ್ತಾರೆ, ಆದರೂ ಅವರ ಪುಸ್ತಕಗಳೂ ಚೆನ್ನಾಗಿಯೇ ಮಾರಾಟಗೊಳ್ಳುತ್ತವೆ) ಕೆಲವೆಡೆ ಅರ್ಧವಿರಾಮ ಅಥವಾ ಸೆಮಿಕೊಲನ್ ಬದಲು ಪೂರ್ತಿ ವಿರಾಮ ಬಳಸಬಹುದೇ ಎಂಬುದನ್ನು ಪರಿಶೀಲಿಸಿ. ಸಾಧ್ಯವಾದರೆ ಅದನ್ನು ಮಾಡಿ. ಅದು ನಿಮ್ಮ ಓದುಗನಿಗೆ ಉಸಿರಾಡಲು ಸಮಯಾವಕಾಶ ಕಲ್ಪಿಸಿಕೊಡುತ್ತದೆ. ಪ್ಯಾಸಿವ್ ಕ್ರಿಯಾಪದದ ಬದಲು ಅಯ್ಕ್ಟಿವ್ ಕ್ರಿಯಾಪದ ಬಳಸಬಹುದೇ? “ಬಹಳಷ್ಟು ಜನರಿಂದ ಆರೋಗ್ಯಕ್ಕೆ ತೆರೆದ ಕಿಟಕಿಗಳು ಉತ್ತಮ ಎಂದು ಭಾವಿಸಲಾಗಿದೆ” ಎನ್ನುವ ಬದಲಿಗೆ ಹೀಗೆ ಬರೆಯಿರಿ - “ಬಹಳಷ್ಟು ಜನ ತೆರೆದ ಕಿಟಕಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ." ನೀವು ವಾಕ್ಯಗಳನ್ನು ಬಳಸಬೇಕಾದರೆ ನೀವು ಮಂಡಿಸುತ್ತಿರುವ ವಾಸ್ತವಾಂಶಗಳನ್ನು ಹೇಗೆ ಹಂತಹಂತವಾದ ರೀತಿಯಲ್ಲಿಯೇ ಇದನ್ನೂ ಮಂಡಿಸಿ. “ಅತ್ಯಂತ ಯೋಗ್ಯವಾದದ್ದು ಮಾತ್ರ ಉಳಿಯುತ್ತದ್ದಾದ್ದರಿಂದ ಜೀವ ತಳಿಯೂ ಬದಲಾಗುತ್ತದೆ” ಎನ್ನುವುದರ ಬದಲಿಗೆ “ಪ್ರತಿ ಪೀಳಿಗೆಯಲ್ಲಿಯೂ ಅತ್ಯಂತ ಯೋಗ್ಯ ಸದಸ್ಯರು ಮಾತ್ರ ಉಳಿದುಕೊಳುತ್ತಾರೆ,  ಆದ್ದರಿಂದ ಜೀವ ತಳಿ ಬದಲಾಗುತ್ತದೆ” ಎಂದು ಬರೆಯಿರಿ. 

    ವೈಜ್ಞಾನಿಕ ಸಂಶೋಧನಾ ಇತಿಹಾಸದಲ್ಲಿ ಸಾಮಾನ್ಯವಾಗಿ ಪರಿಣಾಮ ಅದರ ಕಾರಣಕ್ಕಿಂತ ಮುಂಚಿತವಾಗಿಯೇ ತಿಳಿದಿರುತ್ತದೆ. ಗಣಿತದ ಬಹಳಷ್ಟು ಥಿಯರಮ್‍ಗಳನ್ನು ಔಪಚಾರಿಕವಾಗಿ ಸಾಬೀತುಪಡಿಸುವ ಮುನ್ನವೇ ಅದನ್ನು ಸತ್ಯವೆಂದು ನಂಬಲಾಗುತ್ತದೆ. ನಿಮ್ಮ ಸಿದ್ಧಾಂತವನ್ನು ಸಾಬೀತುಪಡಿಸುವ ಮುನ್ನವೇ ಸಾರಿಬಿಟ್ಟರೆ, ಯೂಕ್ಲಿಡ್ ಹೇಳಿದಂತೆ, ಆಗ ನೀವು ನಿಮ್ಮ ಮಾಯಾಟೋಪಿಯಿಂದ ಮೊಲಗಳನ್ನು ತೆಗೆಯುವವರಂತೆ ಕಾಣಿಸುತ್ತೀರಿ. ಆದರೆ ನೀವು ನಿಧಾನವಾಗಿ ಸಿದ್ಧಾಂತದ ಬಗ್ಗೆ ಅರಿವು ಮೂಡಿಸಿದರೆ, ನೀವು ಕಡಿಮೆ ಬುದ್ಧಿವಂತರೆಂಬ ಅಭಿಪ್ರಾಯ ಮೂಡಬಹುದು ಆದರೆ ನಿಮ್ಮ ಓದುಗನಿಗೆ ನಿಮ್ಮ ವಾದ ಅರ್ಥವಾಗಿ ವಿಷಯವನ್ನು ತಿಳಿದುಕೊಳ್ಳಲು ಇನ್ನೂ ಸ್ವಲ್ಪ ಸುಲಭವಾಗುತ್ತದೆ.

         ವೈಜ್ಞಾನಿಕ ಮತ್ತು ಅದರಲ್ಲೂ ಗಣಿತ ಲೇಖನಗಳಲ್ಲಿ ಮಾಯಾಟೋಪಿ ಮತ್ತು ಮೊಲದ ವಿಧಾನ ಬಹಳ ಖುಷಿ ಕೊಡುವಂತಿರುತ್ತದೆ ಮತ್ತು ಕೆಲವೊಮ್ಮೆ ಅದು ಅವಶ್ಯಕವೂ ಹೌದು. ಹಾಗೆ ಮಾಡುತ್ತಾ ನೀವು ಗಂಭೀರ ವಿದ್ಯಾರ್ಥಿಗೆ ಯೋಚಿಸಲು ಸುಲಭ ವಿಧಾನವನ್ನು ಕಲಿಯಲು ಸಹಾಯ ಮಾಡಬಹುದು. ಆದರೆ ಒಬ್ಬ ಸಾಧಾರಣ ಓದುಗನನ್ನು ಅಶ್ಚರ್ಯಗೊಳಿಸಿಬಿಡುತ್ತೀರ. ನಿಧಾನವಾಗಿ ಮುಂದುವರೆಯಿರಿ ಮತ್ತು ಅವರಿಗೆ ಹಂತಹಂತವಾಗಿ ಹೇಳಿಕೊಡಿ. ನೀವು ಆಲೋಚನೆ ಮಾಡುವಾಗ ಕೆಲವನ್ನು ಬಿಟ್ಟರೂ ಅಥವಾ ಹಿಂದೆ ಮುಂದಕ್ಕೆ ಆಲೋಚಿಸಿದರೂ, ಲೇಖನವನ್ನು ಬರೆಯುವಾಗ, ನೀವು ನಿಮ್ಮ ವಾದದ ಮೂಲಕ, ತಾರ್ಕಿಕವಾಗಿ ಅರ್ಥಮಾಡಿಸಿ. ನೀನು ನಿಮ್ಮ ಲೇಖನವನ್ನು ಬರೆದಿರಬೇಕಾದರೆ ಅದು ಅಪೂರ್ಣ, ಅಥವಾ ಚೆನ್ನಾಗಿಲ್ಲ ಎನಿಸಬಹುದು. ವಾಸ್ತವಾಂಶಗಳ ಮತ್ತು ಅಮೂರ್ತ ವಾದಗಳ ದಾಖಲು ಪುಸ್ತಕ ಎನಿಸಬಹುದು. ವಿಮರ್ಶಕ ಅದಕ್ಕೆ ಇನ್ನಷ್ಟು ಮಾಹಿತಿ ತುಂಬಬೇಕು ಎಂದು ಹೇಳಬಹುದು. ಆದರೆ ಮಾಹಿತಿಗಾಗಿ ಮಾಹಿತಿಯನ್ನು ತುಂಬುವುದನ್ನು ನಾನು ವಿರೋಧಿಸುತ್ತೇನೆ. ವಸ್ತುವಿಷಯಕ್ಕಿಂತ ತಮ್ಮ ಶೈಲಿಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಕೆಲವು ಲೇಖಕರು, ಚಾರ್ಲ್ಸ್ ಲ್ಯಾಂಬ್ ಅಥವಾ ರಾಬರ್ಟ್ ಲಿಂಡ್‍ರವರ ಲಕ್ಷಣಗಳಿವು. ಆದರೆ ಇದಕ್ಕೆ ವೈಜ್ಞಾನಿಕ ಲೇಖನದಲ್ಲಿ ಸ್ಥಾನವಿಲ್ಲ. 

     ಇನ್ನೊಂದೆಡೆ ಓದುಗ ಈ ನಿಮ್ಮ ಲೇಖನವನ್ನು ತನ್ನ ಜ್ಞಾನಭಂಡಾರಕ್ಕೆ ಸಂಬಂಧಿಸಿ ನೋಡಲು ಸಾಧ್ಯವಾಗುವಂತೆ ಬರೆಯಬೇಕು. ನಿಮಗೆ ಗೊತ್ತಿರುವ ವಾಸ್ತವಾಂಶಗಳನ್ನು ಅಥವಾ ಗೊತ್ತಿರುವ ಸಾಹಿತ್ಯವನ್ನು ಪ್ರಸ್ತಾಪಿಸಿ ಈ ಕೆಲಸ ಮಾಡಬಹುದು. ಡೈಲಿ ವರ್ಕರ್ ಪತ್ರಿಕೆಯ ನನ್ನ ಲೇಖನಗಳಲ್ಲಿ ನಾನು ಮಾರ್ಕ್ಸ್ ರವರನ್ನು ಪ್ರಸ್ತಾಪಿಸಿರುವುದರಿಂದ ತೀವ್ರವಾದ ಟೀಕೆಗೆ ಒಳಗಾಗಿದ್ದೇನೆ. ಆದರೆ ನಾನು ಹೆಚ್ಚುಪ್ರಸ್ತಾಪಿಸುವುದು ಎಂಗೆಲ್ಸ್ ರವರನ್ನು. ಎಕೆಂದರೆ ನನ್ನ ಬಹಳಷ್ಟು ಓದುಗರು, ಈ ಬರಹಗಾರರ ಕೃತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಬದಲಾವಣೆಯ ಬಗೆ ಎಂಗೆಲ್ಸ್ ಕೆಲವು ವಿಷಯಗಳನ್ನು ಹೇಳಿದ್ದಾರೆ.  ಹೆರಾಕ್ಲಿಟಸ್ ಅವರಿಗಿಂತ ಮುಂಚೆ ಹೇಳಿದ್ದಾರೆ. ಬರ್ಗ್‍ಸನ್ ಮತ್ತು ವೈಟ್‍ಹೆಡ್ ಅವರ ನಂತರ ಹೇಳಿದ್ದಾರೆ. ಆದರೆ ನನ್ನ ಓದುಗರಲ್ಲಿ ಹೆರಾಕ್ಲಿಟಸ್, ಬರ್ಗ್‍ಸನ್ ಅಥವಾ ವೈಟ್‍ಹೆಡ್ ಅನ್ನು ಒಬ್ಬರು ಓದಿದ್ದರೆ, ಎಂಗೆಲ್ಸ್ ರವರನ್ನು ನೂರು ಜನ ಓದಿದ್ದಾರೆ, ಹಾಗಾಗಿ ನಾನು ಅವರ ಹೇಳಿಕೆಗಳನ್ನು ಬಳಸಿಕೊಳ್ಳಲಿಚ್ಛಿಸುತ್ತೇನೆ. ನಾನು ಕ್ಲಾಸಿಕಲ್ ಪಂಡಿತರಿಗೆ ಭಾಷಣ ಮಾಡುತ್ತಿದ್ದರೆ ಎಂಗೆಲ್ಸ್ ಅದನ್ನು ಇನ್ನೂ ಉತ್ತಮವಾಗಿ ಹೇಳಿದ್ದಾರೆ ಎನಿಸಿದರೂ ಬಹುಶಃ ಹೆರಾಕ್ಲಿಟಸ್‍ರವರ ವಿಚಾರ ಪ್ರಸ್ತಾಪಿಸಬೇಕು. ನನ್ನ ಹಿಂದಿನ ಪುಸ್ತಕ ಜೆನೆಟಿಕ್ಸ್ ನಲ್ಲಿ ಡಾಂಟೆಯವರ ಡಿವೈನ್ ಕಾಮಿಡಿಯ ಏಳು ಸೂಕ್ತಿಗಳಿವೆ. ಡಾಂಟೆಯನ್ನು ಅಲ್ಲಿ ತಂದಿರುವುದಕ್ಕೆ ನನ್ನ ಬಗ್ಗೆ ಟೀಕೆ ಇದೆ. ಆದರೆ ನನಗೆ ಮಾನವ ಚಿಂತನೆಯ ಮುಂದುವರೆಕೆಯನ್ನು ತೋರಿಸುವುದು ಸೂಕ್ತ ಎಂದನಿಸಿತು. ಬದಲಾವಣೆಗಳು ದೈವಿಕ ನಿರ್ಣಯ ಎಂಬ ಡಾಂಟೆಯವರ ತತ್ವವನ್ನು ನಾನು ಒಪ್ಪುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಅವರಿಗೊಂದು ತತ್ವವಿತ್ತು ಎನ್ನುವುದನ್ನು ಹೇಳಲು ಇಚ್ಛಿಸುತ್ತೇನೆ.

     ಮಾನವ ಜ್ಞಾನ ಮತ್ತು ಪ್ರಯತ್ನಗಳ ಐಕ್ಯತೆಯ ಬಗ್ಗೆ ಒತ್ತು ನೀಡಿದರೆ, ಜನಪ್ರಿಯ ವಿಜ್ಞಾನ ನಿಜವಾಗಿ ಸಮಾಜಕ್ಕೆ ಹೆಚ್ಚು ಉಪಯುಕ್ತ ಎಂದು ನಾನು ಭಾವಿಸುತ್ತೇನೆ. ಆದರೆ ಈ ಅಂಶವನ್ನು ವಿಜ್ಞಾನದ ಸಾಮಾನ್ಯ ಕಲಿಕೆಯಲ್ಲಿ ಒತ್ತಿ ಹೇಳುವುದಿಲ್ಲ. ಉತ್ತಮ ಜನಪ್ರಿಯ ವಿಜ್ಞಾನ ನಿಜವಾಗಿ  ಈ ತಪ್ಪನ್ನು ಸರಿಪಡಿಸಬೇಕು, ತಂತ್ರಜ್ಞಾನದಿಂದ ಹೇಗೆ ವಿಜ್ಜಾನ ಸೃಷಿಯಾಗುತ್ತದೆ ಮತ್ತು ಹೇಗೆ ವಿಜ್ಜಾನ ತಂತ್ರಜ್ಞಾನವನ್ನು ಸೃಷ್ಟಿಮಾಡುತ್ತದೆ; ವೈಜ್ಞಾನಿಕ ಮತ್ತು ಇತರ ರೂಪಗಳ ಜೊತೆ ಚಿಂತನೆಗೆ ಇರುವ ಸಂಬಂಧವನ್ನು ತೋರಿಸಿಕೊಡಬೇಕು. ಜನಪ್ರಿಯ ವೈಜ್ಞಾನಿಕ ಲೇಖನ ಎಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ಸುದ್ದಿಗಳನ್ನೂ ಸೇರಿಸಿಕೊಳ್ಳಬೇಕು. ಸಾಮಾನ್ಯ ನಿಯಮವಾಗಿ ನಾನು ವಿವಿಯ ಆನರ್ಸ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗೆ ಪರಿಚಿತವಲ್ಲದ ಒಂದೊ ಎರಡೊ ವಿಷಯಗಳನ್ನು ಸೇರಿಸಲು ಇಚ್ಚಿಸುತ್ತೇನೆ. ಯಾವುದೇ ಒಂದು ಅನ್ವೇಷಣೆಯ ಪ್ರಕಟಣೆಗೂ ಮತ್ತು ಅದನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದಕ್ಕೂ 5 ವರ್ಷಗಳ ಅಂತರವಿರುವುದರಿಂದ ಅವುಗಳನ್ನು ಲೇಖನಗಳಲ್ಲಿ ಸೇರಿಸುವುದು ಒಳಿತು.
       
      ಬಹಳಷ್ಟು ಅನ್ವೇಷಣೆಗಳನ್ನು ನಂತರದ ಸಂಶೋಧಕರು ಖಚಿತಪಡಿಸಿಲ್ಲ. ಒಂದು ಹೆಸರಾಂತ ಪತ್ರಿಕೆ ಈ ರೀತಿಯ ಅನ್ವೇಷಣೆಗಳನ್ನು ಪ್ರಕಟಿಸುತ್ತದೆ. ನನ್ನಂತೆ ಆ ಬರಹಗಾರ ವಾಸ್ತವವಾಗಿ ಸಂಶೋಧನೆಯಲ್ಲಿ ತೊಡಗಿದ್ದರೆ, ಮತ್ತು ಅವನ ಉಜ್ವಲ ವಿಚಾರಗಳು ಪಶ್ಚಿಮಕ್ಕೆ ಹೋಗುವುದನ್ನು ಕಂಡಿದ್ದರೆ, ಇಂತಹ ಬಲೆಗೆ ಅವರು ಬೀಳುವ ಸಾಧ್ಯತೆ ಕಡಿಮೆ. ಆರಂಭಿಕ ಹಂತಗಳಲ್ಲಿ, ಜನಪ್ರಿಯ ಬರವಣಿಗೆಯ ಲೇಖನಗಳಲ್ಲಿ, ಮೊದಲು ಲೇಖನದ ಸಾರಾಂಶವನ್ನು ಬರೆಯುವುದು ಒಳ್ಳೆಯದು. ಆದರೆ ನಾನೇ ಈ ಕೆಲಸ ಮಾಡುವುದು ಕಡಿಮೆ. ಪ್ರತಿಯೊಬ್ಬರು ಜನಪ್ರಿಯ ವಿಜ್ಞಾನ ಲೇಖನಗಳನ್ನು ತಮ್ಮದೇ ರೀತಿಯಲ್ಲಿ ಬರೆಯಬೇಕು. ನಾನು ಕೇವಲ ಒಂದು ವಿಧವನ್ನಷ್ಟೇ ವಿವರಿಸಿದ್ದೇನೆ. ನಾನು ಇದೊಂದೇ ದಾರಿಯೆಂದೊ ಅಥವಾ ಇದೇ ಅತ್ಯುತ್ತಮ ರೀತಿಯೆಂದೊ ಖಂಡಿತ ಸಾರಿಕೊಳ್ಳುವುದಿಲ್ಲ.

(ಮೂಲ: ಜೆ ಬಿ ಎಸ್ ಹಾಲ್ಡೇನ್)

ಕವನ: "ಲಾಲ್ ಸಲಾಮ್"

         
       
     

      ಈ ಕವನ ನನ್ನ ಮನದಾಳದ ಮಾತುಗಳು. ಇದು ನನ್ನ ಜೀವನದಲ್ಲಿ ನಡೆದ ಘಟನೆ. ನನ್ನ ತಂದೆ ತೀರಿಕೊಳ್ಳುವ ೨ ವರ್ಷಗಳ ಮುಂಚೆ ನಡೆಯಿತು ಈ ಸಂಭಾಷಣೆ. ನಂತರ ಅವರಿಗೆ ಲಕ್ವ ಹೊಡೆದು, ಮತ್ತೆ ಮಾತನಾಡಲೇ ಇಲ್ಲ. ಅದೇ ಅವರ ಕೊನೆನುಡಿಗಳಾದವು. ಈ ಕವನ ಕೇವಲ ಪದಗಳಲ್ಲ, ನನ್ನ ನೋವಿನ ಅಶ್ರುಗಳು. ಏಕೆಂದರೆ ನಾನವರ ಸ್ವಂತ ಮಗಳಲ್ಲದಿದ್ದರೂ ನನ್ನನ್ನು ಅಪಾರವಾಗಿ ಪ್ರೀತಿಸಿದರು. ದೇವರನ್ನು ನೋಡಲು ಯಾರಿಗಾದರೂ ಸಾಧ್ಯವೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನಾನು ಅವರಲ್ಲಿ ದೇವರ ರೂಪವನ್ನು ಕಂಡಿದ್ದೇನೆ.


ಮಾತಿಲ್ಲದೆ, ಮೌನವಾಗಿ 
ಚಿಪ್ಪೊಳಗೆ ಹೋಗುವ ಮುನ್ನ 
ಪ್ಪಾಜಿ ನನಗೆ ಹೇಳಿದ ಒಂದೇ ಪದ -
ಲಾಲ್ ಸಲಾಮ್. 

 ಗೊತ್ತಾಗಲಿಲ್ಲ ಅಂದು ಅದೇನೇ 
ಅಪ್ಪಾಜಿಯ ಕೊನೆಯ ಮಾತೆಂದು. 
ಆವತ್ತು ಹೇಳಿದ ಆ ಮಾತಲ್ಲಿದ್ದದ್ದು, 
ಗಾಂಭೀರ್ಯವೊ, ಆತ್ಮವಿಶ್ವಾಸವೊ? 
ಅಹಂಕಾರವೊ, ದುರಭಿಮಾನವೊ? 

ಇವು ಯಾವುದು ಅಲ್ಲೆಂದು 
ದು ಬರಿ ನೋವಿನ ವಿಲಾಪವೆಂದು 
ಗೊತ್ತಾಗಿದ್ದು ನಂತರವೇ. 

ನೋವಿನ ಆ ಮಾತುಗಳು, 
ಗಾಂಭೀರ್ಯದ ಆ ಧ್ವನಿ 
ನನ್ನ ಕಿವಿಗಳಿಗೆ ಕೇಳೋಕೆ ....ಇಂದಿಲ್ಲ.. 
ಆ ಕಂಗಳ ವಿಷಾದಛಾಯೆ ಪ್ರೀತಿಯ 
ಆ ಮುಖಭಾವ ನನ್ನ ಕಣ್ಣುಗಳಿಗೆ ನೋಡೋಕೆ.....ಇಂದಿಲ್ಲ

ಆದ್ರೂ....ಅಪ್ಪಾಜಿ ನಿನ್ನ 
ನಿಶ್ಚಲವಾದ ನಿಶ್ಯಬ್ದವಾದ 
ದೇಹವನು ಕಂಡು ಸುರಿದದ್ದು
ನನ್ ಕಣ್ಣುಗಳಲ್ಲಿ .... ಕಣ್ಣೀರಲ್ಲ .. ರಕ್ತ.

ಜೀವನದಲಿ ನೀ ಎಂದಾದರೂ ಶಿಸ್ತನ್ನು ಪಾಲಿಸಿದೆಯಾ? 
 ಅದೇ ಶಿಸ್ತುಗಳು ನಿನ್ನನ್ನು ಹೀಗೆ ಮಲಗಿಸಿಬಿಟ್ಟಿದೆಯಾ? 
ಒಂದಿನವೂ ಕೂಡ ದೇವರ ಸ್ತುತಿಸದೆ ನೀನಿರಲಿಲ್ಲ ಆದ್ರೂ ....
ಆ ದೇವರೆ ನಿನ್ನನ್ನು ಮೌನವಾಗಿ ಶಿಕ್ಷಿಸಿದನೋ, ಏನೋ? 
 ಇಂದು ನಿನ್ ಬಾಯಲ್ಲಿ ಬರಲಿಲ್ಲ ಒಂದೂ ದೇವರ ವಾಕ್ಯ ; 
ಮುಂಜಾನೆಯ ಮೊದಲ ವಾಕ್ಯವೇ, 
 ನೀ ನನಗೇ ಹೇಳಿದ ಲಾಲ್ ಸಲಾಮ್! 

ಅದೇನೇ ಇರಲಿ ಅಪ್ಪಾಜಿ ಕೊನೆಯದಾಗಿ
 ನೀ ನನಗೆ ಹೇಳಿದ ಆ ಮಾತನ್ನು ..... 
ಅದೊಂದು ನೋವಿನ ನೆನಪಾಗಿ.... 
ಮಿಂಚುವ ಮೂರ್ತಿಯಾಗಿ 
 ನನ್ ಮನಸಲ್ಲಿ ಮನಸಾರೆ ಪ್ರತಿಷ್ಠಾಪಿಸಿರುವೆ 
 ನನ್ ಪ್ರೀತಿಯ ಅಪ್ಪಾಜಿಯ ಎಂದೆಂದೂ 
ನೆನಪಿನ ಆ ಲಾಲ್ ಸಲಾಮ್ ಅನ್ನು 


 - ಶೀಬಾ

ಕವನ: "ಈ ಪ್ರಪಂಚ"



ಈ ಪ್ರಪಂಚಕ್ಕೆ ಕಾಲಿಡುತ್ತಿದ್ದೇನೆ ನಾ
ನನ್ನ ಒಂದೊಂದು ಕಣ್ಣು 
ತೋರಿಸುತ್ತಿದೆ ಒಂದೊಂದು ನೋಟವನ್ನು.
ತೋರಿಸುತ್ತಿದೆ ಕಣ್ಣೊಂದು ನನಗೆ
ಸುತ್ತಲೂ ನಗುವನ್ನು
ಎಲ್ಲೆಡೆ ಬಲಿಷ್ಟತೆಯನ್ನು
ಅಡಕವಾಗಿರುವ ಸೌಂದರ್ಯವನ್ನು
ಆವರಿಸಿರುವ ಐಕ್ಯತೆಯನ್ನು 
ಸುತ್ತಮುತ್ತಲೂ ಖುಷಿಯನ್ನು!

ಅನಾವರಿಸುತ್ತಿದೆ ಇನ್ನೊಂದು ನನಗೆ
ಸೂರಿರದ ಜನತೆಯನ್ನು
ಹಸಿದ ಹೊಟ್ಟೆಗಳನ್ನು
ಆಶಾವಿಹೀನ ಮಕ್ಕಳನ್ನು
ಬಹಳಷ್ಟು ಅಸಹಾಯಕರನ್ನು
ನಿರ್ದಯಿ ವ್ಯವಸ್ಥೆಯನ್ನು
ಕರುಣೆ ಇಲ್ಲದ ಶ್ರೀಮಂತರನ್ನು
ಅಧಿಕಾರರಹಿತ ಬಡವರನ್ನು.

ನೋಡಬೇಕು ನಾ ಯಾವ ಕಡೆ?
ಇರಬೇಕು ನಾ ಯಾರ ಜೊತೆ?
ಖುಷಿಯಾಗಿರುವರ ಜೊತೆ ಇರಬೇಕಾ?
ನೊಂದವರ ಕೈಹಿಡಿಯಬೇಕಾ?
ಜೊತೆಯವರು ಸೂರಿಲ್ಲದೆ ಬದುಕುವಾಗ
ಹವಾನಿಯಂತ್ರಿತ ಕೋಣೆಯಲ್ಲಿರಬೇಕಾ?
ಬಹಳ ಮಂದಿ ಉರಿಬಿಸಿಲಿನಲ್ಲಿರುವಾಗ
ನಾ ಮಾತ್ರ ನೆರಳನಾಶಿಸಬೇಕಾ?

ಕೇವಲ ಕಣ್ಣಷ್ಟೇ ಎರಡು
ಆದರೊಳಗಿರುವ ಪ್ರಜ್ಞೆ ಒಂದೇ
ನ್ಯಾಯಪರತೆಯೂ ಒಂದೇ.
ನಾವ್ ಬದುಕುವುದು ಒಂದು ಆತ್ಮದೊಂದಿಗೆ,
ಒಂದು ಮನಸ್ಸು, ಒಂದು ಹೃದಯದೊಂದಿಗೆ

ಹಾಗಿದ್ದಾಗ, ಈ ಭುವಿಯಲ್ಲಿ
ಯಾವ ನೋಟ ನೋಡಬೇಕು
ಯಾವ ಹಾದಿ ತುಳಿಯಬೇಕು
ಯಾವ ರೀತಿ ಬದುಕಬೇಕು -
ಆಯ್ಕೆ ಮಾತ್ರ ನಮ್ಮದೇ ! 

- ನಿಲೀನಾ ಥಾಮಸ್
(ಅನುವಾದ: ಸುಧಾ.ಜಿ)

ಧರ್ಮನಿರಪೇಕ್ಷತೆ: "ಸ್ನೇಹ - ಸಹಿಷ್ಣುತೆ"






"ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ"
- ಬಸವಣ್ಣ

     ಗೆಳತಿ ಸಮೀನಾ ಮನೆಗೆ ಹೋಗಿದ್ದೆ..... ಈ ಸ್ನೇಹ ತೀರ ಇತ್ತೀಚಿನದ್ದಾದರೂ ಮೊದಲ ಭೇಟಿಯಲ್ಲೆ ಸಮೀನಾ ಅದರಲ್ಲು ಅವರ ತಾಯಿಯ ನಿಷ್ಕಲ್ಮಶ ಪ್ರೇಮಕ್ಕೆ ಮನಸ್ಸು ಫಿದಾ ಆಗಿತ್ತು...... ನನ್ನ ಮದುವೆ ನಿಶ್ಚಯದ ವಿಷಯ ಕೇಳಿ ಸ್ವಂತ ಮಗಳ ಮದುವೆಯೇನೊ ಎಂಬಂತೆ ಸಂತೋಷಪಟ್ಟರು. ತಿಂಡಿ ಪಾನಕಗಳಿಂದ ಉದರವನ್ನು, ಪ್ರೀತಿ ಮಮತೆಯಿಂದ ಹೃದಯವನ್ನು ತುಂಬಿದರು .....ಹರಸಿದರು. ಅವರೊಂದಿಗೆ ಇದ್ದಷ್ಟು ಹೊತ್ತು ನನಗೆ ಕಂಡಿದ್ದು ಒಂದೇ..... ಅವರ ಸರಳ ಸಹಜ ಪ್ರೀತಿ. ಅದು ಬಿಟ್ಟರೆ ಅವರ ಧರ್ಮ, ಬುರ್ಖಾ, ಕುಂಕುಮವಿರದ ಹಣೆ ಇವಾವುದು ಕಾಣಲೇ ಇಲ್ಲ. ಸಾಮರಸ್ಯ ಬೆಳೆಯಲು ಇದಕ್ಕಿಂತ ಹೆಚ್ಚಿನದೇನಿರಬೇಕೊ ತಿಳಿಯದು. ಈ ಸಮಯದಲ್ಲಿ ನನ್ನಜ್ಜಿ ಹೇಳಿದ ಕಥೆಯೊಂದು ಇಲ್ಲಿ ನೆನಪಾಗುತಿದೆ ಆಕೆ ಚಿಕ್ಕ ಹುಡುಗಿಯಾಗಿದ್ದಾಗ ದರ್ಗಾದಲ್ಲಿ ವರುಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಬಲು ಉತ್ಸಾಹದಿಂದ ಭಾಗವಹಿಸುತ್ತಿದ್ದರಂತೆ.... ಪವಿತ್ರಾಕ್ಷರಗಳ ಲೋಹಬಿಲ್ಲೆಗಳನ್ನು ಹೊತ್ತು ಊರೆಲ್ಲ ಸುತ್ತಾಡಿ ಅಗ್ನಿಕುಂಡದಲ್ಲಿ ಹಾಯುತ್ತಿದ್ದರಂತೆ... ಹೀಗೊಂದು ದಿನ ನಮ್ಮಜ್ಜಿ ಹಂದಿ ಮಾಂಸವನ್ನು ತಿಂದು ಮಲಗಿದಾಗ ಕನಸಲ್ಲಿ ಆ ದೇವರು ಬಂದು ಕೆನ್ನೆಗೆ ಬಾರಿಸಿದ್ದರಂತೆ (ಆಕೆಯ ಮನದ ಭಯ ಕನಸಾಗಿದೆಯೆಂದು ತಿಳಿಯದಷ್ಟು ಅಮಾಯಕತನ) ಮರುದಿನವೇ ಅಜ್ಜಿ ದರ್ಗಾಗೆ ಹೋಗಿ ಇನ್ನೆಂದೂ ಹಂದಿ ಮಾಂಸ ಮುಟ್ಟೆನೆಂದು ಅಲವತ್ತುಕೊಂಡರಂತೆ. ಈ ಘಟನೆ ಹೇಳುವಾಗೆಲ್ಲ ಈಗಲೂ ಆಕೆಯಲ್ಲಿ ಇನ್ನಿಲ್ಲದ ಶ್ರದ್ಧೆ ಭಕ್ತಿ. ಮೂಢನಂಬಿಕೆ, ಭ್ರಮೆ, ಆಸ್ತಿಕತೆ ಎಂಬಂಶಗಳನ್ನು ಪಕ್ಕಕಿಟ್ಟಾಗ....ಆ ಕಥೆಯಲ್ಲಿ ನನಗೆ ಎದ್ದು ಕಂಡಿದ್ದು ಆಕೆಯ ಅಪಾಯರಹಿತ ಅಜ್ಞಾನ, (ವಿಷ ತುಂಬುವ ಮೇಧಾವಿಗಿಂತ ಆಕೆಯದು ಉತ್ತಮತನ ಎಂದೆನಿಸಿತು) ದೇವರೆಂದರೆ ಎಲ್ಲರಿಗೂ ದೇವರೆ ಎಂಬ ಮೇರು ಭಕ್ತಿಭಾವ. ಇಲ್ಲಿ ನಮ್ಮಜ್ಜಿಯಂಥ ಮನಸುಗಳಿಗೆ ಒಳಿತು ಕೋರುವ ದೇವರಷ್ಟೇ ಬೇಕಿತ್ತು, ಧರ್ಮಗಳ ಗೊಡವೆ ಬೇಕಿರಲಿಲ್ಲ. ನಾವು ಇನ್ನೊಬ್ಬರ ಆಚಾರ ವಿಚಾರಗಳನ್ನು ಗೌರವಿಸಿ ಪಾಲಿಸುವುದು ಬೇಡ....ಕನಿಷ್ಠ ಸಹಿಷ್ಣುತಾ ಭಾವವಿಲ್ಲದೇ ಹೋದರೆ ನಮ್ಮ ಹಿರಿಯರಿಂದ ನಾವು ಕಲಿತದ್ದು ಸೊನ್ನೆ ಎಂತಾಗುತ್ತದೆ. ಇಂದು ನಾವು ಬಹಳ ತಿಳಿದುಕೊಂಡಿದ್ದೇವೆ. ಯಾವುದನ್ನೂ ಸಾಕ್ಷಿರಹಿತ ಒಪ್ಪೆವು. ಅಂತಹ ಜ್ಞಾನವು ಸಮಾಜದ ಒಳಿತಿಗೆ ದುಡಿಯಬೇಕೆ ವಿನಃ ಒಡೆಯುವುದೇಕೆ? ಅಂತಹ ಜ್ಞಾನವು ಸಮಾಜದ ಒಳಿತಿಗೆ ದುಡಿಯಬೇಕೆ ವಿನಃ ಒಡೆಯುವುದಕ್ಕಾಗಬಾರದು. ಒಡೆಯುವ ಜ್ಞಾನ ವ್ಯರ್ಥವೆಂದೆ ನನ್ನನಿಸಿಕೆ. ಗತಕಾಲದ ಪ್ರಮಾದಗಳಿಂದ ನಾವು ಪಾಠ ಕಲಿಯದಿದ್ದಲ್ಲಿ ಇತಿಹಾಸ ಮರುಕಳಿಸುತ್ತದೆ.....ಎಂಬ ಎಚ್ಚರಿಕೆ ನಮ್ಮಲ್ಲಿ ಸದಾ ರಿಂಗಣಿಸಬೇಕು. ಒಂದು ಸಣ್ಣ ಕಿಡಿ ಕಾಡ ಸುಡುವಂತೆ ಸೂಕ್ಷ್ಮತೆಯ ಗ್ರಹಿಸಿ ಜಾಗ್ರತೆ ವಹಿಸದಿದ್ದಲ್ಲಿ ನೆಮ್ಮದಿ, ಶಾಂತಿಯುತ ಜೀವನ ದೊರಕದೆ ಜೀವ ಕೈಲಿಡಿದು ಭೀತಿಯಿಂದ ಅಲೆಯುವಂಥ ದಿನಗಳು ದೂರದಲ್ಲಿಲ್ಲವೆಂದು ಅರಿಯಬೇಕಾಗುತ್ತದೆ. ಭೀಷ್ಮ ಸಹಾನಿಯವರ 'ತಮಸ್' ಇದಕ್ಕೆ ಒಂದು ಜೀವಂತ ಸಾಕ್ಷಿ.  ಪ್ರಪಂಚದಲ್ಲೆಲ್ಲೂ ಇರದ ವೈವಿಧ್ಯತೆಯ ನಾಡು ನಮ್ಮ ಭಾರತ. ಏಕತೆ ಅದರ ವೈಶಿಷ್ಟ್ಯ. ಇಂಥ ಶ್ರೇಷ್ಠ ಭೂಮಿಯಲ್ಲಿ ಜನಿಸಿದ ನಮ್ಮ ಧ್ಯೇಯ ವಾಕ್ಯ "ಸಹಿಷ್ಣುತೆ" ಎಂತಾಗಬೇಕು.


- ಉಷಾಗಂಗೆ.ವಿ

ವಿನೋದ: " ಹೇಳುವುದೊಂದು. . . ."


ಆ ಸಂಜೆ ಮಾಡಲು ಏನೂ ಕೆಲಸವಿರಲಿಲ್ಲ. ಹಾಗೆ ಸುತ್ತಾಡಿ ಬರೋಣವೆಂದುಕೊಂಡು ಹೊರಟೆ. ಸ್ವಲ್ಪ ದೂರ ನಡೆದ ಮೇಲೆ ಒಂದು ಹಾಲ್‍ನ ಹೊರಗಡೆ ಮಹಿಳೆಯ ದನಿಯೊಂದು ಕೇಳಿಬರುತ್ತಿತ್ತು.  ಕುತೂಹಲದಿಂದ ಒಳಹೊಕ್ಕೆ. ಸ್ವರಚಿತ ಕವನ ಸ್ಪರ್ಧೆ ಎಂದು ಬ್ಯಾನರ್ ಇತ್ತು. ಬರೆಯುವ ಚಟ ನನಗೂ ಸ್ವಲ್ಪ ಇದ್ದುದರಿಂದ, ಜೊತೆಗೆ ಸಮಯ ಕಳೆಯಬೇಕಾದ್ದರಿಂದ ಕುಳಿತೆ.

ವೇದಿಕೆಯನ್ನು ಅಲಂಕರಿಸಿ ಮೂವರು ಮಹಿಳೆಯರು ಕುಳಿತಿದ್ದರು. ಒಬ್ಬಾಕೆ ಮೈಕ್ ಹಿಡಿದು ಮಾತನಾಡುತ್ತಿದ್ದರು. ಅವರ ಭಾಷೆ, ಶೈಲಿ ನನಗಿಷ್ಟವಾಯಿತು.

“ಯಾರಾಕೆ” ಎಂದು ಕೇಳಿದ್ದಕ್ಕೆ, “ಪಕ್ಕದ ಕಾಲೇಜಿನ ಕನ್ನಡದ ಅಧ್ಯಾಪಕಿ” ಎಂಬ ಉತ್ತರ ಬಂತು.

“ಎಷ್ಟೊಂದು ಜನ ತಮ್ಮೊಳಗೆ ಪ್ರತಿಭೆಯಿದ್ದರೂ ಅದನ್ನು ಬೆಳೆಸಿಕೊಳ್ಳುವುದಿಲ್ಲ. ಅದೂ, ಇದೂ, ತಾಪತ್ರಯ ಎಂದು ಹೇಳಿಕೊಳ್ತಾರೆ. ವಿದ್ಯಾರ್ಥಿನಿಯರಾಗಿದ್ದಾಗ ಪರವಾಗಿಲ್ಲ, ಆದ್ರೆ ಮದುವೆಯಾದ ಮೇಲಂತೂ ಮುಗೀತು. ಮಹಿಳೆಯರು ಈ ಕ್ಷೇತ್ರದಲ್ಲಿಯೂ ಮುಂದೆ ಬರಬೇಕೆಂದುಕೊಂಡರೆ ಛಲ ಬೇಕು. . . . . .” ಹೀಗೆ ಸಾಗಿತ್ತು ಭಾಷಣ.

ಚಪ್ಪಾಳೆಯಿಂದಲೇ ಆಕೆಯ ಮಾತನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎನಿಸಿತು. ಪಕ್ಕದಲ್ಲಿ ಕುಳಿತುಕೊಂಡವರು “ಈಕೆಯೂ ಸಾಹಿತಿ. ಹಿಂದೆ ಸಾಕಷ್ಟು ಬರೆದಿದ್ದಾರೆ.” ಎಂದರು.

ಹೆಸರು ಶಾಂತಾ ಎಂದು ತಿಳಿದಾಗ ಟಕ್ ಎಂದು “ನನ್ನ ಗೆಳತಿ ಶಾಂತಾನಾ” ಎನ್ನುವ ಪ್ರಶ್ನೆ ಮೂಡಿಬಂತು. ಆಕೆ ಕನ್ನಡಕ ತೆಗೆದು ಬೆವರೊರೆಸಿಕೊಂಡಾಗ ನನ್ನ ಗೆಳತಿ ಎಂಬುದು ಖಾತ್ರಿಯಾಯಿತು.

ಶಾಂತಾ ನನ್ನ ಬಾಲ್ಯ ಗೆಳತಿ. ಕಾಲೇಜಿನಲ್ಲಿಯೂ ಒಟ್ಟಿಗೆ ಓದಿದ್ದೆವು. ಅವಳ ಮದುವೆಯಾದ ನಂತರ ಭೇಟಿಯಾಗಿರಲಿಲ್ಲ. ಬಹುಶಃ 10-12 ವರ್ಷಗಳ ನಂತರ ಈಗಲೇ ಅವಕಾಶ ಸಿಕ್ಕಿದ್ದು. ಸರಿ ಮಾತನಾಡಿಸಿ ಹೋಗೋಣವೆಂದು ಕಾದು ಕುಳಿತೆ. ಕಾರ್ಯಕ್ರಮ ಮುಗಿದ ನಂತರ ಹತ್ತಿರ ಹೋಗಿ, “ನನ್ನ ಗುರುತು ಸಿಕ್ಕಿತಾ” ಕೇಳಿದೆ.

“ಯಾರು”, ಕನ್ನಡಕ ಮೂಗಿಗೇರಿಸಿ, “ಅರೆ ಉಷಾ, ಇಷ್ಟು ದಿನವಾದರೂ ಒಂಚೂರೂ ಬದಲಾಗಿಲ್ಲ ಗುರುತು ಸಿಕ್ಕದೆ ಏನು?” ಎಂದಳು.

ಕುಶಲೋಪರಿಗಳೆಲ್ಲಾ ಮುಗಿದ ಮೇಲೆ ಕೇಳಿದೆ, “ನಿನ್ನ ಬರವಣಿಗೆ ಹೇಗೆ ಸಾಗುತ್ತಿದೆ? ನಮ್ಮಲ್ಲೆಲ್ಲಾ ಆಸಕ್ತಿ ತುಂಬಿಸಿದವಳೇ ನೀನು.”

“ಅಯ್ಯೊ, ಈಗೆಲ್ಲಿ ಸಾಧ್ಯಾನೇ? ಗಂಡ, ಮನೆ, ಮಕ್ಕಳು - ನಿಭಾಯಿಸುವಷ್ಟರಲ್ಲಿ ಸಾಕಾಗುತ್ತೆ. ಬರವಣಿಗೆ ಸಂಪೂರ್ಣವಾಗಿ ನಿಂತೇ ಹೋಗಿದೆ.”

ಉತ್ತರ ಕೇಳಿ ಆಶ್ಚರ್ಯಚಕಿತಳಾದೆ. “ಇದೇನೆ ಈ ರೀತಿ ಹೇಳ್ತಿದ್ದೀಯಾ? ಇಷ್ಟೊತ್ತು ವೇದಿಕೆಯ ಮೇಲೆ ಮಾತಾಡಿದ್ದು?”

“ನೋಡೇ, ಹೇಳೋದು ಸುಲಭ. ನಾನು ಬರೋಲ್ಲ ಅಂದ್ರೂ ನನ್ನ ವಿದ್ಯಾರ್ಥಿನಿಯರು ಬಿಡಲಿಲ್ಲ. ಅದಕ್ಕೆ ಬಂದೆ. ಏನೇ ಆಗಲಿ ನೀನಂತೂ ಬರವಣಿಗೆ ಮುಂದುವರೆಸು, ನಿಲ್ಲಿಸಬೇಡ. ಬರ್ಲಾ, ಮನೇಲಿ ಕಾಯ್ತಾ ಇರ್ತಾರೆ" ಎಂದು ಹೇಳಿ ಉತ್ತರಕ್ಕೂ ಕಾಯದೆ ದೌಡಾಯಿಸಿದಳು.

ಅವಳು ಹೇಳಿದ್ದನ್ನು ಜೀರ್ಣಿಸಿಕೊಳ್ಳುವ ಪ್ರಯತ್ನದಲ್ಲಿ, ಅವಳ ವಿಳಾಸ ಕೇಳುವುದನ್ನೂ ಮರೆತು, ಹಾಗೆ ಅವಳು ಹೋದ ದಿಕ್ಕನ್ನು ಬೆಪ್ಪಳಂತೆ ನೋಡುತ್ತಾ ನಿಂತೆ!

- ಸುಧಾ.ಜಿ

ವ್ಯಕ್ತಿ ಪರಿಚಯ: "ಬೀಚಿ"



ಹುಟ್ಟಿದ ತಕ್ಷಣವೇ ತಂದೆಯನ್ನು ತಿಂದುಕೊಂಡಿತು ಎಂದು ಆ ಮಗುವನ್ನು ಮೂರು ದಿನಗಳ ಕಾಲ ಹಗಲು ಇರುಳು ಹೊರಗೆ ಇಟ್ಟಿದ್ದರಂತೆ. ತಂದೆಯನ್ನು ತಿಂದ ಮಗುವಿಗೆ ಬದುಕಲು ಅರ್ಹತೆ ಇಲ್ಲವೆಂದು. ಆದರೆ ಆ ಮಗು ಸಾಯದೇ ಬದುಕುಳಿಯಿತು. ಒಂದು ವೇಳೆ ಆ ಮಗುವೇನಾದರೂ ಉಳಿಯದೇ ಹೋಗಿದ್ದರೆ ಕನ್ನಡ ಸಾಹಿತ್ಯ ಖಂಡಿತವಾಗಿಯೂ ಬಡವಾಗುತ್ತಿತ್ತು ಎನ್ನುವುದು ನಿರ್ವಿವಾದ.  ಆ ಕಂದ ಬೆಳೆದು ದೊಡ್ಡವನಾದ ಮೇಲೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿತು. 'ಹಾಸ್ಯಬ್ರಹ್ಮ', ‘ಕನ್ನಡ ಸಾಹಿತ್ಯದ ಬರ್ನಾರ್ಡ್ ಶಾ’ ಎಂದೆಲ್ಲ ಕರೆಸಿಕೊಂಡಿತು. ಬೀಚಿಯವರು ತಮ್ಮ ಆತ್ಮಕಥೆ ‘ನನ್ನ ಭಯಾಗ್ರಫಿ’ಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ. 

ಬೀಚಿಯವರು ಜನಿಸಿದ್ದು 23-04-1913ರಲ್ಲಿ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ. ತಂದೆ ಶ್ರೀನಿವಾಸರಾಯರು, ತಾಯಿ ಭಾರತಮ್ಮ. ಬೀಚಿಯವರ ಪೂರ್ಣ ಹೆಸರು ರಾಯಸಂ ಭೀಮಸೇನ ರಾವ್. ಎಲ್ಲರ ತಿರಸ್ಕಾರದೊಂದಿಗೆ ಬೆಳೆದ ಮಗು 6-7 ವರ್ಷವಾಗುವಷ್ಟರಲ್ಲಿ ತಾಯಿಯನ್ನೂ ಕಳೆದುಕೊಂಡಿತು. ತಂದೆಯ ಅಕ್ಕ ರಿಂದಮ್ಮ ಇವರನ್ನು ಹೇಗೋ ಸಾಕಿದರು. ಶಾಲೆಗೆ ಹೋಗಬೇಕಾದರೆ ಅವರಿವರ ಹತ್ತಿರ ಶಾಲಾ ಫೀಸ್ ಸಂಗ್ರಹಿಸುತ್ತಿದ್ದರು ಬೀಚಿ. ಬಹಳಷ್ಟು ಜನ “ನೀನು ಓದದಿದ್ದರೇನು ನಷ್ಟ” ಎನ್ನುವ ಮಾತನ್ನೂ ಆಡಿದ್ದರಂತೆ. ಆದರೂ ಪ್ರತಿ ತಿಂಗಳು ಹೇಗೋ, ಯಾರೋ ಕೊಡುತ್ತಿದ್ದರು, ಬೀಚಿಯವರ ವಿದ್ಯಾಭ್ಯಾಸ ಮುಂದುವರೆಯಿತು. ಈ ಬಗ್ಗೆ ಬೀಚಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವಂತೆ “ಈ ಜಗತ್ತಿನಲ್ಲಿ ದೇವರಿಲ್ಲ ಎಂದು ಯಾರಾದರೂ ಅಂದಾಗ ಇರಲಿಕ್ಕಿಲ್ಲ ಎಂದೆನ್ನುಕೊಳ್ಳುತ್ತೇನೆ. ಆದರೆ ದಯೆ ಎಂಬುದಿಲ್ಲ ಅಂದಾಗ ಅವರನ್ನು ಕಂಡು 'ಅಯ್ಯೋ ಪಾಪಿ' ಅನ್ನುತ್ತೇನೆ. ಅವನು ನಿಜವಾಗಿಯೂ ದುರ್ದೈವಿ.”

ಶಾಲೆಗೆ ಹೋಗಬೇಕಾದಾಗ ಮಕ್ಕಳು ಹಿಂದೆ ಸರಿಯುತ್ತಿರಲಿಲ್ಲ ಎನ್ನುವ ಬೀಚಿಯವರು, ಕಾರಣವನ್ನು ಈ ರೀತಿ ವಿವರಿಸುತ್ತಾರೆ. ‘ಮನೆಗೂ, ಶಾಲೆಗೂ ಯಾವ ವ್ಯತ್ಯಾಸವಿದೆ ಎಂದು ನಾವು ಶಾಲೆಗೆ ಅಂಜಬೇಕು? ಮನೆಯಲ್ಲಿಯೂ ಪೆಟ್ಟುಗಳು, ಶಾಲೆಯಲ್ಲೂ ಪೆಟ್ಟುಗಳು. ಪೆಟ್ಟುಗಳನ್ನು ಕೊಡುವವರಷ್ಟೇ ಬೇರೆ.’ ಈ ಕಾರಣದಿಂದಲೇ ಬೀಚಿಯವರು ಮಕ್ಕಳಿಗೆ ಈ ರೀತಿಯ ಶಿಕ್ಷಾ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸಿದರು.

ಕಷ್ಟಪಟ್ಟು ಎಸ್ ಎಸ್ ಎಲ್ ಸಿಯವರೆಗೆ ಓದಿದ ಬೀಚಿಯವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸದೆ, ಬೇರೆ ಬೇರೆ ಕಡೆ ಕೆಲಸ ಮಾಡಿ, ಕೊನೆಗೆ ಸರ್ಕಾರಿ ಕಛೇರಿಯಲ್ಲಿ ಅಟೆಂಡರ್ ಆಗಿ ಸೇರಿಕೊಂಡರು. ನಂತರ ಪೋಲಿಸ್ ಇಲಾಖೆಗೆ ಸೇರಿಕೊಂಡರು. ವಿವಾಹವೂ ಆಯಿತು. ಅವರ ಮಡದಿ ಬದುಕಿನುದ್ದಕ್ಕೂ ಬೀಚಿಯವರ ಕಷ್ಟಸುಖಗಳನ್ನು ಹಂಚಿಕೊಂಡರು.

ಬಳ್ಳಾರಿಯವರಾಗಿ ಬೀಚಿಯವರ ಮನೆಮಾತು ಕನ್ನಡವಾದರೂ, ಬೆಳೆದದ್ದು ತೆಲುಗಿನ ವಾತಾವರಣದಲ್ಲಿ, ನಂತರ ಸಂಸ್ಕೃತ ಓದಿದರು. ಆನಂತರ ಓದಿದ್ದು ಇಂಗ್ಲಿಷ್ ಅನ್ನೇ. ದಡ್ಡರು ಮಾತ್ರ ಕನ್ನಡವನ್ನು ಓದುತ್ತಾರೆ ಎಂಬ ಅಭಿಪ್ರಾಯವನ್ನು ಬೀಚಿಯವರು ಅಂಗೀಕರಿಸಿದ್ದರು. ಕನ್ನಡ ಕಾದಂಬರಿಯನ್ನು ಓದುತ್ತಿದ್ದ ತಮ್ಮ ಪತ್ನಿಯನ್ನು ಹಾಸ್ಯ ಮಾಡುತ್ತಿದ್ದರು. ಆದರೆ ಒಮ್ಮೆ ಪತ್ನಿಯ ಬಲವಂತಕ್ಕೆ ರೈಲಿನಲ್ಲಿ ಹೋಗುವಾಗ ಕನ್ನಡ ಕಾದಂಬರಿಯನ್ನು ತೆಗೆದುಕೊಂಡು ಹೋದರು. ಆದರೆ ಕನ್ನಡ ಕಾದಂಬರಿ ಓದುವುದು ಅವಮಾನವೆಂದು ಪರಿಗಣಿಸಿ ಇಲ್ಲಸ್ಟ್ರೇಟೆಡ್ ವೀಕ್ಲಿಯ ಮಧ್ಯದಲ್ಲಿಟ್ಟುಕೊಂಡು ಓದಲಾರಂಭಿಸಿದರು. ಓದುಓದುತ್ತಿದ್ದಂತೆ ಅದರಲ್ಲೇ ಲೀನವಾಗಿಬಿಟ್ಟರು.  ಅನಕೃರವರ ‘ಸಂಧ್ಯಾರಾಗ’ ಕಾದಂಬರಿ ಕನ್ನಡ ಸಾಹಿತ್ಯದ ಬಗ್ಗೆ ಅವರ ಯೋಚನಾಲಹರಿಯನ್ನೇ ಬದಲಿಸಿಬಿಟ್ಟಿತು. ಆಗಲೇ ಅವರಿಗೆ ಅರಿವಾಗಿದ್ದು ಅವರ ಒಲವು ಬರವಣಿಗೆಯ ಕಡೆಗಿದೆ ಎಂದು. ಅನಕೃರವರನ್ನು ಅವರು ಗುರುಗಳೆಂದೇ ಪರಿಗಣಿಸಿದರು, ಕನ್ನಡದ ದೀಕ್ಷೆ ಸ್ವೀಕರಿಸಿದರು. ಬೀಚಿಯವರು ತಮ್ಮ ಮೇಲೆ ಪ್ರಭಾವ ಬೀರಿದ 6 ಕೃತಿಗಳ ಬಗ್ಗೆ ಹೇಳಿದ್ದಾರೆ - ಅನಕೃರವರ ‘ಸಂಧ್ಯಾರಾಗ’, ಆದ್ಯರಂಗಾಚಾರ್ಯರ ‘ವಿಶ್ವಾಮಿತ್ರ ಸೃಷ್ಟಿ’, ಜಿಪಿರಾಜರತ್ನಂರವರ ‘ರತ್ನನ ಪದಗಳು’, ಶಂ ಬಾ ಜೋಷಿಯವರ ‘ಯಕ್ಷಪ್ರಶ್ನೆ’, ಕೆವಿ ಅಯ್ಯರ್‍ರವರ ‘ರೂಪದರ್ಶಿ’ ಮತ್ತು ಡಿವಿಜಿಯವರ ‘ಮಂಕುತಿಮ್ಮನ ಕಗ್ಗ.’ ಇನ್ನಾವುದೂ ಅಂತಹ ಪ್ರಭಾವ ಬೀರಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ಅವರಿಗೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಸಾಕಷ್ಟು ಒಲವಿದ್ದು, ಇಂಗ್ಲಿಷ್‍ನಲ್ಲಿ ಲೇಖನ ಬರೆದು ಸ್ನೇಹಿತರೂ, ಹಿತೈಷಿಗಳೂ ಆದ ಮಳೆಬೆನ್ನೂರು ಸತ್ಯವಂತರಾಯರಿಗೆ ತೋರಿಸಿದರು. ಅವರು “ಇದು ಸರಿ, ಆದರೆ ನೀನೇಕೆ ಕನ್ನಡದಲ್ಲಿ ಬರೆಯಬಾರದು?” ಕೇಳಿದರು. ಸ್ವಲ್ಪಕಾಲ ಏನನ್ನೂ ಬರೆಯದ ಬೀಚಿಯವರು ನಂತರ ಕನ್ನಡದಲ್ಲಿ ಬರೆಯಲಾರಂಭಿಸಿದರು. ಅವರ ಮೊದಲ ಕೃತಿಗಳಿಗೆ ಪ್ರಕಾಶಕರನ್ನು ಒದಗಿಸಿಕೊಟ್ಟವರು ಶಂ ಬಾ ಜೋಷಿಯವರು. ಅವರು ಎಲ್ಲೆಡೆ ತಮ್ಮ ಹೆಸರನ್ನು ಬರೆಯುವುದು ಹೀಗೆ - ಬೀCHI. ಅವರ ಹೆಸರಿನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಇರುವುದು ಅವರ ಎರಡೂ ಭಾಷೆಗಳ ಬಗೆಗಿನ ಒಲವನ್ನು ತೋರಿಸುತ್ತದೆ.  

1945ರಲ್ಲಿ ಅವರ ಮೊದಲ ಕಾದಂಬರಿ ‘ದಾಸಕೂಟ’ ಪ್ರಕಟವಾಯಿತು. ಬೀಚಿಯವರು ಸಹ ಚಾರ್ಲಿ ಚಾಪ್ಲಿನ್‍ರವರಂತೆ ಜನರನ್ನು ನಗಿಸುತ್ತಲೇ ಬಹಳ ಗಂಭೀರವಾದ ವಿಷಯದ ಬಗ್ಗೆ ಯೋಚಿಸುವಂತೆ ಮಾಡುತ್ತಿದ್ದರು. ಅವರು ಬಹಳ ಪ್ರಮುಖ ಪಾತ್ರದಾರಿ ತಿಂಮ. ಡಿವಿಜಿಯವರ ತಿಮ್ಮ ಬಹಳ ಗಂಭೀರವಾದ ಚಿಂತನೆಯನ್ನು ನೀಡಿದರೆ, ಬೀಚಿಯವರ ತಿಂಮ ಹಾಸ್ಯ ರಸಾಯನದ ಮೂಲಕ ಜೀವನ ಪಾಠವನ್ನು ನೀಡಿದ್ದಾನೆ.

ನಂತರ ಬೀಚಿಯವರು ಬರೆದ ‘ದೇವರ ಆತ್ಮಹತ್ಯೆ’ ಯಿಂದಾಗಿ ಅವರು ಬಳ್ಳಾರಿ ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಯಿತು. ಆಗ ಹಿರಿಯ ವಕೀಲರು, ನಾಟಕಗಳನ್ನು ಬರೆದು ದೇಶವಿದೇಶಗಳಲ್ಲಿ ಪ್ರದರ್ಶನ ನೀಡಿದ ರಾಘವಾಚಾರ್ಯರು ಹೇಳಿಕಳಿಸಿದಾಗ ಬೀಚಿಯವರು ಗಾಬರಿಯಾದರು. ಅವರ ನಾಟಕವನ್ನು ಓದಿಸಿ ಕೇಳಿದ ರಾಘವಾಚಾರ್ಯರು “ಈ ಬಳ್ಳಾರಿಯೆಂಬ ಕಸದ ಡಬ್ಬಿಯಲ್ಲಿ ನೀನೊಂದು ರತ್ನ” ಎಂದಾಗ ಬೀಚಿಯವರು ಅತ್ತುಬಿಟ್ಟರು. “ರಾಘವಾಚಾರ್ಯರು ನನ್ನ ಪರವಾಗಿ ವಕಾಲತ್ತು ವಹಿಸಿರದಿದ್ದರೆ, ನನ್ನ ಸಾಹಿತ್ಯ ಶಕ್ತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಿತ್ತು” ಎಂದು ಹೇಳಿದ್ದಾರೆ ಬೀಚಿಯವರು. ಹೀಗೆ 1940ರ ದಶಕದಲ್ಲಿ ಆರಂಭಗೊಂಡ ಅವರ ಬರವಣಿಗೆ ಅವರು ಸಾಯುವವರೆಗೂ ಅವಿರತವಾಗಿ ಸಾಗಿತು. ಕಥೆ, ಕಾದಂಬರಿ, ಕವನ, ನಾಟಕ ಎಲ್ಲವನ್ನೂ ಬರೆದಿರುವ ಬೀಚಿಯವರು ಮುಖ್ಯವಾಗಿ ಹಾಸ್ಯರಸವನ್ನು ಬಳಸಿಕೊಂಡಿದ್ದಾರೆ. ಅವರು ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಥೆಗಳು, ಹಾಸ್ಯ, ಕಾದಂಬರಿ, ನಾಟಕ, ಲೇಖನ – ಎಲ್ಲಾ ಶೈಲಿಯಲ್ಲಿಯೂ ಬರೆದಿದ್ದಾರೆ. 

ಜೀವನದ ಹಾದಿಯಲ್ಲಿ, 1967ರಲ್ಲಿ ತಮ್ಮ ಪದವೀಧರ ಮಗನನ್ನು ಕಳೆದುಕೊಂಡರು ಬೀಚಿಯವರು. ತೀವ್ರ ಆಘಾತಕ್ಕೆ ಒಳಗಾದ ಅವರು ಆತ್ಮಹತ್ಯೆ ಮಾಡಿಕೊಳ್ಳದಿರಲು ಕಾರಣ ಅವರ ಹೆಂಡತಿ, ಹಿರಿ ಮಗ ಮತ್ತು ಅಣ್ಣನ ಸರ್ಪಕಾವಲು. ಕಿರಿಮಗನಿಗೆ ಮದುವೆ ನಿಶ್ಚಯವಾಗಿತ್ತು, ಎಲ್ಲರೂ ಹುಡುಗಿಯ ಕಾಲ್ಗುಣವನ್ನು ದೂಷಿಸಿದರು. ಆದರೆ ಬೀಚಿಯವರು ಅದೇ ಕನ್ಯೆಯನ್ನು ತಮ್ಮ ಇನ್ನೊಬ್ಬ ಮಗನೊಂದಿಗೆ ಮದುವೆ ಮಾಡಿಸಿದರು. ನಂತರ ಮಗ ಮತ್ತು ಸೊಸೆಯ ಸಂತೋಷಕ್ಕೆ ಅಡ್ಡಿ ಬರಲಿಚ್ಛಿಸದೆ ಮಗನ ಶ್ರಾದ್ಧವನ್ನು ಮಾಡಬಾರದೆಂದು ಅಂದುಕೊಂಡರು. ಅವರ ಪತ್ನಿಯೂ ಸಹ “ಈ ಮನೆಯಲ್ಲಿ ಮಗನ ಶ್ರಾದ್ಧ ಮಾಡಬೇಕೆಂದು ನನಗೆ ಹಟ ಇಲ್ಲ. ನಿಮ್ಮ ಇಷ್ಟದಂತೆ ನೀವು ರಾಮಕೃಷ್ಣಾಶ್ರಮಕ್ಕೆ ಹಣ ಕಳಿಸಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ” ಎಂದರು. ಇದು ಬೀಚಿ ದಂಪತಿಗಳ ವ್ಯಕ್ತಿತ್ವವನ್ನು ಎತ್ತಿತೋರಿಸುತ್ತದೆ. 

ತಮ್ಮ ನಿಜಜೀವನದಲ್ಲಿ ಕಂಡಿದ್ದರ ಬಗ್ಗೆ ಅರ್ಥಮಾಡಿಕೊಳ್ಳುತ್ತಾ, ಅರ್ಥವಿಹೀನ ಆಚರಣೆಗಳನ್ನು ಪ್ರಶ್ನಿಸುತ್ತಾ, ತಮ್ಮ ಕ್ರಾಂತಿಕಾರಕ ವಿಚಾರಗಳನ್ನು, ಜೀವನ ತತ್ವಗಳನ್ನು, ತಮ್ಮ ಸಾಹಿತ್ಯದ ಮೂಲಕ ಹಾಸ್ಯಲೇಪದೊಂದಿಗೆ ಜನರ ಮುಂದಿಟ್ಟರು. ಅವರ ಕ್ರಿಯಾಶೀಲತೆ, ಸಾಂಪ್ರದಾಯಿಕವಲ್ಲದ ಮನೋಭಾವ, ವೈಚಾರಿಕ ಚಿಂತನೆ, ಸಮಸ್ಯೆಗಳನ್ನು ಅವರು ನೋಡುವ ಹೊಸ ರೀತಿ, ಅವರನ್ನು ವಿಭಿನ್ನ ವ್ಯಕ್ತಿಯನ್ನಾಗಿಸಿತು. ತಾವು ಹುಟ್ಟಿದ ಸಮುದಾಯದ ಲೋಪದೋಷಗಳನ್ನು ಹೊರಹಾಕಿದ್ದರೆಂದು ತೀವ್ರ ಟೀಕೆಗೆ ಒಳಗಾದರು. ಆದರೂ ಅವರು ಹೊಗಳಿಕೆ – ತೆಗಳಿಕೆಯನ್ನೆಲ್ಲ ಸಮಾನವಾಗಿ ಸ್ವೀಕರಿಸಿದರು.  ಅವರು ಯಾರನ್ನು ಸಹ ಕುರುಡಾಗಿ ಹೊಗಳುತ್ತಿರಲಿಲ್ಲ. ಗುರುಗಳೆಂದು ಭಾವಿಸಿದ ಅನಕೃರವರ ಕೆಲವು ಕೃತಿಗಳನ್ನೂ ಸಹ ಅವರು ನಿರ್ಭಿಡೆಯಿಂದ ಟೀಕಿಸಿದ್ದಾರೆ. 

ಹಾಗೆಯೇ ತಾವೇ ಸ್ವತಃ ಜನಪ್ರಿಯ ಸಾಹಿತಿಯಾದರೂ, ಜೀವನತತ್ವಗಳನ್ನು ಹಾಸ್ಯಮಯವಾಗಿ ಹೇಳುತ್ತಿದ್ದರೂ, ಅವರು ಇನ್ನೊಬ್ಬರ ಮಹಾನತೆಯನ್ನು ಬಹಳ ಸುಲಭವಾಗಿ ಒಪ್ಪಿಕೊಳ್ಳುತ್ತಿದ್ದರು ಎಂಬುದಕ್ಕೆ ಈ ಮಾತೇ ಸಾಕ್ಷಿ. “ನನ್ನ ತಿಂಮನಿಗೂ ಗುಂಡಪ್ಪನವರ ತಿಮ್ಮನಿಗೂ ಕೇವಲ ಹೊರಹೋಲಿಕೆ ಅಷ್ಟಿಷ್ಟು ಇರಬಹುದಾದರೂ, ಇಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ, ನನ್ನ ತಿಂಮ ಬೆಡ್ ಲ್ಯಾಂಪ್!!” 

ಅವರ ಆತ್ಮಚರಿತ್ರೆ ‘ನನ್ನ ಭಯಾಗ್ರಪಿ" ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ನಿಜವಾದ ಅರ್ಥದಲ್ಲಿ ಅದು ಆತ್ಮಚರಿತ್ರೆ. ಬೀಚಿಯವರು ತಮ್ಮ ಜೀವನದ ಸಿಹಿ ಕಹಿ, ತಪ್ಪು ಒಪ್ಪು ಎಲ್ಲವನ್ನು ನಿಸ್ಸಂಕೋಚವಾಗಿ ಬರೆದಿದ್ದಾರೆ. ನೋವಿನ ಸಂಗತಿಗಳನ್ನೂ ಸಹ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಎಲ್ಲ ರೀತಿಯ ಘಟನೆಗಳನ್ನೂ ಚಿತ್ರೀಕರಿಸಿದ್ದರೂ ಎಲ್ಲಿಯೂ ಅಶ್ಲೀಲತೆಯ ಎಳೆ ಕಾಣುವುದಿಲ್ಲ. ಅದನ್ನು ಅವರು ತಮ್ಮ ಜೀವನದ ತತ್ವವನ್ನು ವಿವರಿಸಲು ಬಳಸಿಕೊಂಡ ಪುಸ್ತಕವಾಗಿದೆ ಎನ್ನಬಹುದು.
ಬೀಚಿಯವರು ಅನಾರೋಗ್ಯದಿಂದ 1980ರಲ್ಲಿ ಮರಣ ಹೊಂದಿದರು. ಭಾರತದ ಅಂಚೆ ಇಲಾಖೆ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಅವರ ಪುಸ್ತಕಗಳು ಎಷ್ಟೋ ಮುದ್ರಣ, ಮರುಮುದ್ರಣಗಳನ್ನು ಕಂಡಿವೆ. ಅವರ ತಿಂಮ ಜನಜನಿತನಾಗಿದ್ದಾನೆ. ತಮ್ಮ ಆತ್ಮಚರಿತ್ರೆಯ ಕೊನೆಯ ಪುಟದಲ್ಲಿ ಅವರು ಬರೆದಿರುವ ಈ ಸಾಲುಗಳು ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗದರ್ಶನ ನೀಡುವಂತಿದೆ: 
“ಯಾವನ ಬಾಳೂ ಬಾಳಲಾರದಷ್ಟು ಕಷ್ಟವಲ್ಲ, ಕನಿಷ್ಟವೂ ಅಲ್ಲ; ಬಾಳಿನಿಂದ ಓಡಿಹೋಗಬೇಡ. ಅದನ್ನು ಇದಿರಿಸು, ಅದನ್ನೇ ಬಾಳು. ಇದು ಬಾಳಿನಿಂದ ನಾ ಕಲಿತ ಪಾಠ. ನಿನ್ನ ಬಾಳು ನಿನ್ನಷ್ಟು ಕೆಡುಕಲ್ಲ. ಅದನ್ನು ಪ್ರೀತಿಸು. ಪ್ರೀತಿ ನಿನ್ನ ಬಾಳ ಹೊರೆಯನ್ನು ಹಗುರಮಾಡುತ್ತದೆ. ನಿನ್ನ ಹೃದಯದಲ್ಲಿ ದ್ವೇಷಕ್ಕೆ ಮಾತ್ರ ಎಂದೂ ಇಂಬು ಕೊಡಬೇಡ. ಪ್ರೇಮವೇ ಬೆಳಕು. ದ್ವೇಷವೇ ಕತ್ತಲು. ನೀನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ನೀನೇ ದಾರಿ ತಪ್ಪೀಯಾ! ಎಡವಿ ಬಿದ್ದೀಯಾ! ಎಚ್ಚರಿಕೆ ಎಂದು ಆಗಾಗ ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಹಾಗೆಯೇ ಬಾಳುತ್ತಿದ್ದೇನೆ! ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ!”

ಅವರ ಕೃತಿಗಳು ಈ ಕೆಳಕಂಡಂತಿವೆ : ದಾಸ ಕೂಟ, ಬೆಳ್ಳಿ ತಿಂಮ ನೂರೆಂಟು ಹೇಳಿದ, ತಿಂಮನ ತಲೆ, ತಿಂಮಾಯಣ, ಅಂದನಾ ತಿಂಮ, ತಿಂಮ ರಸಾಯನ) ತಿಂಮ ಸತ್ತಾಗ, ತಿಮ್ಮಿಕ್ಷನರಿ, ಸತೀಸೂಳೆ, ಮೇಡಮ್ಮನ ಗಂಡ, ಹೆಣ್ಣು ಕಾಣದ ಗಂಡು, ಸರಸ್ವತಿ ಸಂಹಾರ, ಮಾತನಾಡುವ ದೇವರುಗಳು, ದೇವರಿಲ್ಲದ ಗುಡಿ, ಮಾತ್ರೆಗಳು, ಸತ್ತವನು ಎದ್ದು ಬಂದಾಗ, ಟೆಂಟ್ ಸಿನೆಮಾ, ಬೆಂಗಳೂರು ಬಸ್ಸು, ಖಾದಿ ಸೀರೆ, ಬಿತ್ತಿದ್ದೆ ಬೇವು, ಆರಿದ ಚಹ, ನರಪ್ರಾಣಿ, ಬ್ರಹ್ಮಚಾರಿ, ಎಲ್ಲಿರುವೆ ತಂದೆ ಬಾರೋ, ಸುಬ್ಬಿ, ಬ್ರಹ್ಮಚಾರಿಯ ಮಗ, ಸರಸ್ವತಿ ಸಂಹಾರ, ಸಕ್ಕರೆ ಮೂಟೆ, ಕಾಮಲೋಕ, ಚಿನ್ನದ ಕಸ, ದೇವನ ಹೆಂಡ, ಏರದ ಬಳೆ, ಅಮ್ಮಾವ್ರ ಕಾಲ್ಗುಣ, ಆಗಿಷ್ಟು, ಈಗಿಷ್ಟು, ಹುಚ್ಚು ಹುರುಳು, ಕಾಣದ ಸುಂದಾರಿ, ಬಂಗಾರದ ಕತೆ

ರೇಡಿಯೋ ನಾಟಕಗಳು - ಹನ್ನೊಂದನೆಯ ಅವತಾರ, ಮನುಸ್ಮೃತಿ, ಏಕೀಕರಣ, ವಶೀಕರಣ, ಏಕೋದರರು, ಸೈಕಾಲಜಿಸ್ಟ್ ಸಾರಂಗಪಾಣಿ, ದೇವರ ಆತ್ಮಹತ್ಯೆ

ಸುಧಾ.ಜಿ

ಸ್ವಾತಂತ್ರ್ಯ ಸಂಗ್ರಾಮ: "ನೇತಾಜಿ"



ಭಾರತ ಕಂಡ ಧೀರೋದಾತ್ತ ನಾಯಕರಲ್ಲಿ ನೇತಾಜಿಯವರೇ ಅಗ್ರಗಣ್ಯರೆಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಹೋರಾಟದ ಬಿಸಿ ಎಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುವ ವೇಳೆಯಲ್ಲಿ ಅಹಿಂಸಾವಾದಿಗಳ ಸಂಧಾನಪರ ನೀತಿಯು ಜನರ ಉತ್ಸಾಹಕ್ಕೆ ತಣ್ಣೀರೆರಚುತ್ತಿತ್ತು. ಬ್ರಿಟಿಷ್ ಸರ್ಕಾರವು ಎಂತಹ ನೀಚ ಕೃತ್ಯವೆಸಗಿದರೂ ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು, ಸರ್ಕಾರ ನೋವು ನೀಡಿದರೆ ಅದನ್ನು ಸಹಿಸಬೇಕೇ ವಿನಾ ಪ್ರತಿನೋವು ಕೊಡಬಾರದು ಎಂಬ ಅರ್ಥವಿಲ್ಲದ ನೀತಿಯಿಂದ ಬೇಸತ್ತಿದ್ದ ಜನರಿಗೆ ತಮ್ಮಲ್ಲಿ ಕುದಿಯುತ್ತಿದ್ದ ಬಡಬಾಗ್ನಿಯನ್ನು ಹೊರಚೆಲ್ಲಲು ಒಬ್ಬ ಪ್ರಚಂಡ ನಾಯಕನಿಗಾಗಿ ಪರಿತಪಿಸುತ್ತಿದ್ದಾಗ ಎದ್ದವರೇ ನೇತಾಜಿ.

1897ರ ಜನವರಿ 23 ರಂದು ಒರಿಸ್ಸಾ ರಾಜ್ಯದ ಕಟಕ್ ನಗರದಲ್ಲಿ ಪ್ರಖ್ಯಾತ ವಕೀಲರಾದ ಜಾನಕೀನಾಥ್ ಬೋಸ್ ಮತ್ತು ಪ್ರಭಾವತಿ ದೇವಿಯವರ ಮಗನಾಗಿ ಸುಭಾಷ್ ಜನಿಸಿದರು. ತಂದೆ ತಾಯಿಯರ ವ್ಯಕ್ತಿತ್ವದಿಂದ ಪ್ರಭಾವಿತರಾದರು ಬೋಸ್ ರವರು. ಪ್ರಮುಖವಾಗಿ ಅವರ ತಾಯಿಯ ಆದರ್ಶಗಳು ಮತ್ತು ದೇಶಪ್ರೇಮವು ಅವರನ್ನು ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಯೋಧನನ್ನಾಗಿಸಿತು. ಬಾಲ್ಯದಲ್ಲಿ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿದ್ದ ಚಳುವಳಿ, ಮುಷ್ಕರ, ವಿದೇಶಿ ಸರಕುಗಳ ಬಹಿಷ್ಕಾರ ಮುಂತಾದ ಘಟನೆಗಳು ಇವರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹೊತ್ತಿಸಿತು. ಅಲ್ಲದೆ ಇವರು ಓದುತ್ತಿದ್ದ ಯೂರೋಪಿಯನ್ ಶಾಲೆಯಲ್ಲಿ ಆಂಗ್ಲರ ಮಕ್ಕಳಿಗಿದ್ದ ವಿಶೇಷ ಸವಲತ್ತುಗಳು ನಮಗೇಕಿಲ್ಲವೆಂದು ಚಿಂತಿಸುತ್ತಿದ್ದರು. ವಿದ್ಯಾರ್ಥಿಯಾಗಿರುವಾಗಲೇ ನಾಯಕನಾಗಿ ಮಾನವ ಹಕ್ಕುಗಳ ಪರ ಹೋರಾಡಿ ಕಾಲೇಜಿನಿಂದ ಬಹಿಷ್ಕಾರವನ್ನು ಪಡೆದರು. ಧೃತಿಗೆಡದ ಬೋಸರು ಆ ಸಮಯದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಆತ್ಮಸ್ಥೈರ್ಯವನ್ನು ಇನ್ನೂ ಬಲಗೊಳಿಸಿಕೊಂಡರು. ಇಂಗ್ಲೆಂಡಿನಲ್ಲಿ 1920ರಲ್ಲಿ ತಂದೆಯ ಸಲಹೆಯಂತೆ ಇಂಡಿಯನ್ ಸಿವಿಲ್ ಸರ್ವಿಸ್ ಅರ್ಹತಾ ಪರೀಕ್ಷೆಯಲ್ಲಿ 4 ನೇ gÁåAPï ಪಡೆದರು. 
ನೇತಾಜಿಯವರು ಫಾರ್ವರ್ಡ್ ಬ್ಲಾಕ್‍ನ ಮೂಲಕ ಕಾನೂನು ಭಂಗ ಚಳುವಳಿಗೆ ಕರೆ ನೀಡಿ ಗೃಹಬಂಧನಕ್ಕೊಳಗಾದರು. ವೀರನಾಯಕನಿಗೆ ಸುಮ್ಮನೆ ಕೂರಲಾಗುವುದೇ? ಒಬ್ಬ ಮೌಲ್ವಿಯ ವೇಷದಲ್ಲಿ ಚತುರತೆಯಿಂದ ಪಾರಾಗಿ ಜರ್ಮನಿಯನ್ನು ತಲುಪಿದರು. ನಂತರ ಜಪಾನಿಗೆ ತೆರಳಿ ರಾಸ್ ಬಿಹಾರಿ ಬೋಸ್ ರವರು ಸ್ಥಾಪಿಸಿದ್ದ ಐ ಎನ್ ಎನ ನಾಯಕತ್ವವನ್ನು ವಹಿಸಿದರು. ಹೀಗೆ ದೇಶವಿದೇಶಗಳಲ್ಲಿನ ಭಾರತೀಯರನ್ನು, ಯುದ್ಧಖೈದಿಗಳನ್ನು ಒಗ್ಗೂಡಿಸಿ ಸೈನ್ಯ ಶಕ್ತಿಯನ್ನು ನಿರ್ಮಿಸಿದರು.

ಬಂಡವಾಳಶಾಹಿಯನ್ನು ವಿರೋಧಿಸಿದ ನೇತಾಜಿಯವರಿಗೆ ಅಧಿಕಾರ ಜನಸಾಮಾನ್ಯರ ಕೈಗೆ ಬರಬೇಕೆಂಬ ಆಸೆಯಿತ್ತು. ದೇಶದಲ್ಲಿ ಶ್ರೀಮಂತ-ಬಡವ, ಮೇಲ್ಜಾತಿ-ಕೆಳಜಾತಿ, ಗಂಡು-ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಇವರು ಬಹಳಷ್ಟು ಶ್ರಮಿಸಿದರು. ಹೆಣ್ಣುಮಕ್ಕಳೂ ಸಮಾಜದಲ್ಲಿ ಸಮಾನರು; ಅವರು ಅಬಲೆಯರಲ್ಲ. ಅವರಲ್ಲಿರುವ ಮನೋಬಲ ಅಮೋಘವೆಂದು ಗುರುತಿಸಿ ಐ ಎನ್ ಎ ನಲ್ಲಿ ಮಹಿಳಾ ಪಡೆಯನ್ನು ನಿರ್ಮಿಸಿದರು. 1943 ಅಕ್ಟೋಬರ್ 22ರಂದು ಸಿಂಗಪೂರಿನಲ್ಲಿ ಮಹಿಳಾ ಯೋಧರ ಪಡೆಯೊಂದನ್ನು ಸ್ಥಾಪಿಸಿದರು. ಆಗಿನ ಕಾಲದಲ್ಲಿ ಮನೆಯ ಹೊಸ್ತಿಲಿನಿಂದ ಹೊರಬರುವುದು ಕೂಡ ಮಹಿಳೆಗೆ ದುಸ್ತರವಾಗಿತ್ತು. ಆದರೂ ಸುಭಾಷರ ಕರೆಗೆ ಓಗೊಟ್ಟು ತಂದೆ ತಾಯಿಯರನ್ನು, ಗಂಡನನ್ನು, ಮಕ್ಕಳನ್ನು, ಒಡಹುಟ್ಟಿದವರನ್ನು ತೊರೆದು ಸೈನ್ಯವನ್ನು ಸೇರಿದರು. ತಮ್ಮ ಕೋಮಲ ಹಸ್ತಗಳಲ್ಲಿ ಬಂದೂಕು ಮತ್ತು ರೈಫಲ್ ಗಳನ್ನು ಹಿಡಿದು ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಪಥ ಅತ್ಯಂತ ಕಠಿಣ ಎಂದರಿತೂ ವಿದೇಶದಲ್ಲಿ ಸೈನಿಕ ತರಬೇತಿ ಪಡೆದು ಯುದ್ಧಕ್ಕೆ ಸನ್ನದ್ಧರಾದರು. ಅದರ ಹಿಂದಿನ ಪ್ರೇರಕ ಶಕ್ತಿ, ಸುಭಾಷ್.

ನೇತಾಜಿಯವ್‍ರು ಎಲ್ಲರಂತೆ ಹೆಣ್ಣು ಅಬಲೆಯೆಂದೆಣಿಸದೆ, ಪ್ರತಿಯೊಬ್ಬ ಹೆಣ್ಣಿನಲ್ಲೂ ವೀರತನವನ್ನು ಗುರುತಿಸಿದರು. “ನಮಗೆ ಬೇಕಿರುವುದು ಸಹಸ್ರ ಸಹಸ್ರ ಝಾನ್ಸಿ ರಾಣಿಯರು, ಕೇವಲ ಒಬ್ಬರಲ್ಲ” ಎಂದು ಹೇಳಿ ಅಸಂಖ್ಯಾತ ಹೆಣ್ಣುಮಕ್ಕಳಲ್ಲಿ ದೇಶಕ್ಕಾಗಿ ಜೀವತ್ಯಾಗ ಮಾಡುವ ಮನೋಸ್ಥೈರ್ಯವನ್ನು ತುಂಬಿದರು. ಇಂತಹ ವೀರ ರಾಣಿಯರ ಪಡೆಯೇ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ರೆಜಿಮೆಂಟ್.

ಇವರ ಶಿಸ್ತು, ಪಥಸಂಚಲನ ಮತ್ತು ಶಸ್ತ್ರಗಳನ್ನು ಬಳಸುವ ವೈಖರಿ ಕಂಡು ಮೊದಲು ಅನುಮಾನಿಸಿದ ಜಪಾನಿಯರೇ ಅಚ್ಚರಿಗೊಂಡರು. ಈ ಅದ್ಭುತ ಕಾರ್ಯ ಸಾಧ್ಯವಾದದ್ದು ನೇತಾಜಿಯವರಿಂದ ಮಾತ್ರ. ಅವರ ದೃಷ್ಟಿಕೋನ ಪ್ರಗತಿಪರವಾದದ್ದು. ನಂತರ ಇವರು ಬ್ರಿಟಿಷರ ಮೇಲೆ ಯುದ್ಧ ಘೋಷಿಸಿ, ಅಚಲ ವಿಶ್ವಾಸದಿಂದ ಮುನ್ನುಗ್ಗಿದರು. ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡರು. 1944 ಫೆಬ್ರವರಿ 4 ರಂದು ಅರಕಾನ್ ನಲ್ಲಿ ನಡೆದ ಯುದ್ಧದಲ್ಲಿ ನೇತಾಜಿ ಸೈನ್ಯ ಬ್ರಿಟಿಷ್ ಸೇನೆಯನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ನಂತರ ಬರ್ಮಾದ ಕಡೆಯಿಂದ ಇಂಪಾಲ ಮತ್ತು ಕೊಹಿಲಾಗಳಲ್ಲಿ ಯುದ್ಧ ಮುಂದುವರಿಸಿದರು. ಆ ದಟ್ಟ ಅಡವಿಯಲ್ಲಿ ನಿದ್ರಾಹಾರವಿಲ್ಲದೆ ಯೋಧರು ಯುದ್ಧ ಮಾಡಿದರು. ಜೊತೆಗೆ ಭೋರಿಡುವ ಮಳೆಬೇರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬ್ರಿಟಿಷರ ವೈಮಾನಿಕ ಧಾಳಿಯಿಂದ ಯೋಧರು ತತ್ತರಿಸಿಹೋದರು. ಇತ್ತ ಕಡೆ ಜಪಾನ್ ಸಹಾಯವೂ ನಿಂತು ಹೋಯಿತು.

ಐ ಎನ್ ಎ ದಿಗ್ವಿಜಯಕ್ಕೆ ಪ್ರಕೃತಿ ವಿಕೋಪ ಜೊತೆ ಕಾಲರಾ, ಮಲೇರಿಯಾ ಮಾರಕವಾಗಿ ಪರಿಣಮಿಸಿತು. ಮುಂದಿನ ತೊಂದರೆ ಅರಿತ ನೇತಾಜಿ ಸೈನ್ಯವನ್ನು ಹಿಂತೆಗೆದುಕೊಂಡರು. ಅಲ್ಲಿಗೆ 1945 ರಲ್ಲಿ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲನ್ನಪ್ಪಿತು. ಇನ್ನು ರಷ್ಯಾದ ನೆರವು ಅವಶ್ಯಕವೆಂದರಿತು ವಿಮಾನ ಪ್ರಯಾಣ ಕೈಗೊಂಡರು. ಮಾರ್ಗ ಮಧ್ಯೆ ಅಪಘಾತದಲ್ಲಿ ಮರಣಿಸಿದರೆಂಬ ಸುದ್ದಿ ಎಲ್ಲೆಡೆ ಹಬ್ಬಿತು. 
ಅವರ ಅಪೂರ್ಣಗೊಂಡ ಕಾರ್ಯವನ್ನು ಇತರೆ ಸ್ವಾತಂತ್ರ್ಯ ಹೋರಾಟಗಾರರು ಪೋರ್ಣಗೊಳಿಸಿದರು. ಇಂದೂ ಸಹ ಅವರ ಸಾಹಸಮಯ ಬದುಕು ಅನ್ಯಾಯದ ವಿರುದ್ಧ ಹೋರಾಡುವ ಎಲ್ಲರಿಗೂ ಸ್ಫೂರ್ತಿಯ ಸಂಕೇತವಾಗಿದೆ. 

- ಸುಧಾ ಜಿ

ಕಥೆ: "ಒಂದು ಸೀಟಿಗಾಗಿ"

ಚಿತ್ರ ಕೃಪೆ: ಅಂತರ್ಜಾಲ 


ಬೆಳಿಗ್ಗೆ ಎದ್ದಾಗಿನಿಂದಲೂ ಕೆಲಸ ಮಾಡಿ ಮಾಡಿ ಆಶಾಗೆ ಸುಸ್ತಾಗಿತ್ತು. ಹಿಂದಿನ ರಾತ್ರಿ ಆರಂಭವಾದ ಜ್ವರ ಸ್ವಲ್ಪ ಕಡಿಮೆಯಾಗಿದ್ದರೂ ಸುಸ್ತಿತ್ತು. ಆಫೀಸಿಗೆ ಹೋಗಲೆಂದು ಕಷ್ಟ ಪಟ್ಟುಕೊಂಡೆ ಎಲ್ಲಾ ಸಿದ್ಧತೆ ಮಾಡಿಕೊಂಡಳು. ತಿಂಡಿ ತಿನ್ನಲೆಂದು ತಟ್ಟೆಗೆ ದೋಸೆ ಹಾಕಿಕೊಂಡು ಬಂದು ಡೈನಿಂಗ್ ಟೇಬಲ್ ಮೇಲೆ ತಟ್ಟೆ ಇಟ್ಟವಳಿಗೆ, ಕಾಫಿ ಕಪ್ ಅಡಿಗೆ ಮನೆಯಲ್ಲೇ ಇಟ್ಟುಬಂದದ್ದು ನೆನಪಿಗೆ ಬಂದು ಒಳಗೆ ಹೋದಳು.

ಕಾಫಿ ಕಪ್ ತೆಗೆದುಕೊಂಡು ಹೊರಬರುವಷ್ಟರಲ್ಲಿ ಮಗ ಅವಳ ತಟ್ಟೆಯಲ್ಲಿ ತಿಂಡಿ ತಿನ್ನಲಾರಂಭಿಸಿದ್ದ. ಬೆಳಿಗ್ಗೆ ತಿಂಡಿ ಬೇಡವೆಂದು ಅವನು ಹೇಳಿದ್ದರಿಂದ ಅವಳು ಅವನಿಗೆ ದೋಸೆ ಹಾಕಿರಲಿಲ್ಲ. ಕೇಳಿದ್ದಕ್ಕೆ, “ಅಯ್ಯೊ, ಮಮ್ಮಿ ಹಸಿವಾಯಿತು ತಿನ್ನುತ್ತಿದ್ದೇನೆ. ಮತ್ತೆ ಮಾಡಿಕೊ ಹೋಗು” ಉಡಾಫೆಯಿಂದ ಮಾತನಾಡಿದ. “ನನಗೆ ಟೈಮ್ ಆಯಿತು, ನೀನು ಮೊದಲೇ ಹೇಳಬೇಕಿತ್ತು” ಎಂದಿದ್ದಕ್ಕೆ, “ಎಲ್ಲಾದಕ್ಕೂ ಸಿಸ್ಟಮ್, ಡಿಸಿಪ್ಲಿನ್ ಅನ್ನಬೇಡ. ಈಗೇನು ನಾನು ತಿನ್ನಲೊ ಬೇಡವೊ?”

ತಿನ್ನಬೇಡ ಅನ್ನಲಾದೀತೇ? ಬರೀ ಕಾಫಿ ಕುಡಿದು ಆಫೀಸಿಗೆ ಹೊರಡಬೇಕೆಂದು ಗಾಡಿ ಕೀ ತೆಗೆದುಕೊಂಡು ಹೆಲ್ಮೆಟ್ ಹಾಕಿಕೊಳ್ಳುವಷ್ಟರಲ್ಲಿ ಗಂಡ ಬಂದು, “ನೀನಿವತ್ತು ಬಸ್‍ನಲ್ಲಿ ಹೋಗು, ನಿನ್ನ ಮೈದನನಿಗೆ ಗಾಡಿ ಬೇಕಂತೆ” ಎಂದ. ಇನ್ನೇನೂ ಮಾತನಾಡದೆ ಬಿಎಂಟಿಸಿ ಹತ್ತಿದಳು. ಅಲ್ಲಿಂದಲೆ ಹೊರಟದ್ದರಿಂದ ಸೀಟೇನೊ ಸಿಕ್ಕಿತು, ಆದರೆ ಎರಡು ಸ್ಟಾಪ್ ಆದ ನಂತರ ಹಿರಿಯರೊಬ್ಬಾಕೆ ಬಂದರೆಂದು ಸೀಟು ಬಿಟ್ಟುಕೊಟ್ಟಳು. ಹಿಂದಕ್ಕೆ ತಿರುಗಿ ನೋಡಿದಾಗ, ಅಲ್ಲಿ ಲೇಡಿಸ್ ಸೀಟ್‍ನಲ್ಲಿ ಒಬ್ಬಾತ ಕುಳಿತದ್ದು ಕಂಡು, ಅಲ್ಲಿ ಹೋಗಿ “ಎದ್ದೇಳಿ” ಅಂದಳು. ಅದಕ್ಕೆ ಆ ವ್ಯಕ್ತಿ “ಯಾಕೆ ಮೇಡಮ್ ನಮಗೂ ಸುಸ್ತಾಗಿದೆ, ಎಲ್ಲಾದಕ್ಕೂ ಸಮಾನತೆ ಅಂತೀರ, ಇದರಲ್ಲಿ ಮಾತ್ರ ರಿಸರ್ವೇಶನ್ ಯಾಕೆ?” ವಾದ ಮುಂದುವರೆಯಿತು. ಕಂಡಕ್ಟರ್‍ನ ಕೇಳಿದರೆ, “ಮೇಡಮ್ ರಷ್ ಎಷ್ಟಿದೆ ನೋಡಿ, ನಾನು ಟಿಕೆಟ್ ಕೊಡಲೊ, ಈ ವಾದ ಕೇಳಲೊ” ಎಂದ. ವಾದವಿವಾದ ಮುಂದುವರೆದು ಆ ವ್ಯಕ್ತಿ “ಒಂದು ಸೀಟಿಗೆ ಇಷ್ಟು ವಾದ ಮಾಡಬೇಕಾ?” ಎಂದು ಇಳಿದುಹೋದ.

ಮುಂದಿನ ಸ್ಟಾಪ್‍ನಲ್ಲಿ ಇಳಿದು ಆಫೀಸಿಗೆ ಹೋದರೆ ಅಲ್ಲಿ ಅವಳ ಛೇರ್ ಬದಲಾಗಿತ್ತು. ಪಕ್ಕದಲ್ಲಿದ್ದ ಸಹೋದ್ಯೋಗಿ “ನನಗೆ ಪ್ರಾಬ್ಲಮ್ ಇದೆ ಮೇಡಮ್, ಅದಕ್ಕೆ ನಾನೇ ಬದಲಾಯಿಸಿದೆ” ಎಂದ. “ಅಲ್ಲಾ, ಸರ್, ಇನ್ನೂ ಅಲ್ಲೆಲ್ಲಾ ಛೇರ್‍ಗಳು ಇವೆಯಲ್ಲ” ಎಂದಿದ್ದಕ್ಕೆ, ಆತ, “ಏನ್ ಮೇಡಮ್, ಅವರೆಲ್ಲ ಸುಮ್ನೆ ಇರ್ತಾರಾ? ಅದಕ್ಕೆ ನಿಮ್ಮದನ್ನು ಹಾಕಿಕೊಂಡೆ, ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ, ಒಂದು ಸೀಟಿಗಾಗಿ ಇಷ್ಟೊಂದು ಮಾತ್ಯಾಕೆ” ಎನ್ನುವುದೇ. ಸರಿ ಇನ್ನೇನು ಮಾಡಲಾದೀತು, ಕುಳಿತುಕೊಂಡಳು.

ಸಂಜೆ ಮನೆಗೆ ಬಂದ ಮೇಲೆ ಕಾಫಿ ಕುಡಿಯುತ್ತಾ ಟಿವಿ ನೋಡುತ್ತಿದ್ದರೆ ಮಗ ಬಂದವನೇ, “ಮಮ್ಮಿ, ನೀನು ಆ ಕಡೆ ಕುಳಿತುಕೊ, ನನಗಿಲ್ಲಿ comfortable ಆಗಿರುತ್ತೆ” ಎಂದ. ಅದಕ್ಕೆ ಆಶಾ, “ಹೌದಪ್ಪ, ನಾನು ಅದಕ್ಕೇ ಬಂದು ಇಲ್ಲಿ ಕುಳಿತುಕೊಂಡೆ,” ಎಂದಳು. "ನೀನು ಈ ಕಡೆ ಅಡ್ಜೆಸ್ಟ್ ಮಾಡಿಕೊ, ಒಂದು ಸೀಟ್‍ಗೆ ಎಷ್ಟು ಮಾತಾಡ್ತೀಯಾ?” ಎನ್ನಬೇಕೆ!

ರಾತ್ರಿ ಎಲ್ಲಾ ಕೆಲಸ ಮುಗಿಸಿ ಮಲಗಬೇಕಾದರೆ 11 ಘಂಟೆ. ಬೆಳಿಗ್ಗೆ 4ಕ್ಕೆ ಎದ್ದಿದ್ದರೂ ಅವಳಿಗೆ ನಿದ್ದೆ ಬರಲಿಲ್ಲ. ಏಕೆಂದರೆ ಅವಳ ಮನಸ್ಸನ್ನು ಕಾಡುತ್ತಿದ್ದದ್ದು ಒಂದೇ ಪ್ರಶ್ನೆ, ಒಂದು ಸೀಟಿಗಾಗಿಯೇ? ಅದು ಕೇವಲ ಒಂದು ಸೀಟೇ? ಅದು ತನ್ನ ಹಕ್ಕಲ್ಲವೇ, ಅಸ್ತಿತ್ವವಲ್ಲವೇ? ನನ್ನ ಅನಿಸಿಕೆ, ಅಭಿಪ್ರಾಯಗಳಿಗೆ ಬೆಲೆ ಇಲ್ಲವೇ? ನಮಗೇ ಬೆಲೆ ಇಲ್ಲವೇ? ಅದು ಕೇವಲ ಒಂದು ಸೀಟಾದರೆ, ಅವರೂ ಬಿಟ್ಟುಕೊಡಬಹುದಲ್ಲವೇ? ಪ್ರಶ್ನೆಗಳು ಮುತ್ತಿದವು, ಕಾಡಿಸಿದವು.

ಅಸಹಾಯಕತೆಯಿಂದ ಅವಳಿಗೆ ಅಳು ಬಂತು, ಅದನ್ನೂ ಮೀರಿ ಕೋಪ ಬಂತು. ಏಕೆ? ನಾವೇ ಎಲ್ಲದಕ್ಕೂ ಯಾಕೆ ಬಗ್ಗಬೇಕು? ಏನೋ ನಿರ್ಧಾರ ಮಾಡಿದವಳಿಗೆ ನೆಮ್ಮದಿಯ ನಿದ್ರೆ ಬಂತು.

ಬೆಳಿಗ್ಗೆ ಯಥಾಪ್ರಕಾರ ಮಗ ಬಂದಾಗ, ಅವಳು ಅವನ ಬ್ಲಾಕ್ ಮೇಲ್‍ಗೆ ಬಗ್ಗಲಿಲ್ಲ. “ನೀನು ತಿನ್ನುವುದಾದರೆ ನೀನೇ ಮಾಡಿಕೊ, ಆದರೆ ನನ್ನ ತಟ್ಟೆಯಲ್ಲಿ ತಿನ್ನಬೇಡ. ನಾನು ಆಫೀಸಿಗೆ ಹೋಗಬೇಕು. ನಿನಗೆ ತಿಂಡಿ ಮಾಡಿಲ್ಲ, ಹೇಗೂ ಕಾಲೇಜು ಇಲ್ಲವಲ್ಲ, ನೀನೇ ಮಾಡಿಕೊ” ಎಂದು ಹೇಳಿ ತಿಂಡಿ ಮುಗಿಸಿದಳು.

ಗಾಡಿ ಕೀ ತೆಗೆದುಕೊಳ್ಳುವಾಗ, ಗಂಡ, “ಆಶಾ ಇವತ್ತೊಂದು ದಿನ..” ಅವನಿಗೆ ಮುಂದುವರೆಸಲು ಬಿಡದೆ, “ನಿಮ್ಮ ತಮ್ಮನಿಗೆ ಗಾಡಿ ಬೇಕಾದರೆ ನಿಮ್ಮದನ್ನು ಕೊಟ್ಟು ನೀವು ಬಸ್‍ನಲ್ಲಿ ಹೋಗಿ, ನಾನು ಇವತ್ತು ಕೊಡಲಾರೆ, ನನಗೆ ತುಂಬಾ ಕೆಲಸವಿದೆ, ಸಂಜೆ ಲೇಟಾಗುತ್ತೆ,” ಎಂದು ಹೇಳಿ ಹೆಲ್ಮೆಟ್ ತೆಗೆದುಕೊಂಡು ಹೊರನಡೆದಳು

ಅಫೀಸಿಗೆ ಹೋದ ತಕ್ಷಣ ತನ್ನ ಛೇರ್ ಎಳೆದುಕೊಂಡು ಕುಳಿತಳು.

ಮತ್ತೆ ಆ ದಿನ, ಮರುದಿನ, ನಂತರದ ದಿನಗಳಲ್ಲಿ ಅವಳಿಗೆ ಯಾರೊಂದಿಗೂ ಒಂದು ಸೀಟಿಗಾಗಿ ಅಂಗಲಾಚುವ ಪರಿಸ್ಥಿತಿ ಬರಲಿಲ್ಲ. 

                                                                                                                                - ಸುಧಾ ಜಿ