ಒಂದು ಕೃತಿ ಓದುಗನಿಗೆ ಹೊಸ ಅರಿವು ಸೃಷ್ಟಿಸಿ, ತಿಳಿದಿರದ, ಹೊಸದೊಂದು ವಿಷಯ ಸೂಕ್ಷ್ಮಕ್ಕೆ ಪರಿಚಯಿಸಿ, ಒಂದು ವಿಚಾರ ಪ್ರಪಂಚವನ್ನೇ ತೆರೆದಿಟ್ಟರೆ ಆ ಕೃತಿಕಾರನ ಕೌಶಲ್ಯ ಎಷ್ಟು ತೀಕ್ಷ್ಣ ಎಂಬುದು ಮನದಟ್ಟಾಗುತ್ತದೆ. ಕನ್ನಡದ ಓದುಗರಿಗೆ ಭೂಮಿ-ವಿಜ್ಞಾನ-ಪ್ರಕೃತಿ-ಇತಿಹಾಸ-ವಿಕಾಸ ಎಂಬಂತಹ ವಿಷಯಗಳ ಕುರಿತು ಒಂದು ಸಮೃದ್ಧ ವಿಚಾರ ಪ್ರಪಂಚವನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟವರು "ಕೆ. ಪಿ. ಪೂರ್ಣಚಂದ್ರ ತೇಜಸ್ವಿ"ಯವರು.
"ಮಿಲೆನಿಯಮ್ ಸರಣಿ"ಯಡಿ ತೇಜಸ್ವಿಯವರು ಬರೆದ ಪುಸ್ತಕಗಳು ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಹಾಗು ವೈಚಾರಿಕ ಸಾಹಿತ್ಯಕ್ಕೆ ಹೊಸ ಸಂವೇದನೆ ಒದಗಿಸಿದವು. ನೈಸರ್ಗಿಕ ಅದ್ಭುತಗಳು, ಐತಿಹಾಸಿಕ ಘಟನೆಗಳು ಹಾಗು ಅವುಗಳ ಸಾಮಾಜಿಕ ಪರಿಣಾಮಗಳು, ವಿಸ್ಮಯ ಎನಿಸುವಂತಹ ಸಂಗತಿಗಳು, ಮೌಢ್ಯದ ಛಾಯೆ ಮೀರಿದ ವಿಜ್ಞಾನದ ಪ್ರಗತಿ ಕಥೆಗಳು - ಇಂತಹ ವಿಷಯಗಳನ್ನು, ನಿಜ ಘಟನೆಗಳನ್ನು ಕಥೆಯಂತೆ ಸಲೀಸಾಗಿ ಹೇಳುವ ಮಹತ್ವಾಕಾಂಕ್ಷೆ ಈ ಸರಣಿಯ ಪುಸ್ತಕಗಳಲ್ಲಿ ಕಾಣಸಿಗುತ್ತದೆ. ಅವರೇ ಹೇಳಿದಂತೆ ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಆ ಶತಮಾನದ ಅಪರೂಪದ ಕತೆಗಳನ್ನು ಆಯ್ದು ಬರೆದ ಪುಸ್ತಕಗಳು ಇವು. ಈ ಸರಣಿಯಲ್ಲಿ ೧೬ ಪುಸ್ತಕಗಳಿವೆ. ಪ್ರತಿ ಪುಸ್ತಕ ಒಂದು ವಿಷಯವನ್ನು ಒಳಗೊಂಡ ಕಥೆಗಳ ಮೊತ್ತ. "ಜೀವನ ಸಂಗ್ರಾಮ" ಇದೇ ಮಾಲಿಕೆಯಲ್ಲಿ ಪ್ರಕಟಗೊಂಡ ಎರಡನೆಯ ಪುಸ್ತಕ.
ತೇಜಸ್ವಿಯವರ ವ್ಯಕ್ತಿತ್ವದಿಂದ ಬೇರ್ಪಡಿಸಲು ಅಸಾಧ್ಯವಾದ ಗುಣ ಎಂದರೆ ದಣಿವರಿಯದ ಕುತೂಹಲವೇ ಇರಬೇಕು. "ಜೀವನ ಸಂಗ್ರಾಮ" ಕೃತಿಯಲ್ಲೂ ಪುಟ ಪುಟದಲ್ಲೂ ಅವರ ಕುತೂಹಲದ ಪ್ರತಿಫಲ ಕಾಣಸಿಗುತ್ತದೆ. ಇದು ಜ್ವಾಲಾಮುಖಿಗಳ ಕುರಿತ ಪುಸ್ತಕ. ವೈಜ್ಞಾನಿಕವಾಗಿ ಜ್ವಾಲಾಮುಖಿಗಳು ಹೇಗೆ ಪ್ರವರ್ತಿಸುತ್ತವೆ, ಅವುಗಳ ಒಳಗೆ ಏನಿರುತ್ತದೆ ಎಂಬಲ್ಲಿನಿಂದ ಹಿಡಿದು ಜ್ವಾಲಾಮುಖಿಗಳು ಸುನಾಮಿಯ ಸೃಷ್ಟಿಯಲ್ಲಿ ಯಾವ ಪಾತ್ರ ವಹಿಸುತ್ತವೆ ಎಂಬಲ್ಲಿವರೆಗೂ ಈ ಪುಸ್ತಕ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ವಿಶೇಷ ಏನೆಂದರೆ ಅದಷ್ಟೇ ಪುಸ್ತಕದ ಗುರಿಯಲ್ಲ. ಮೊದಲೇ ಹೇಳಿದಂತೆ ಇದು ಒಂದು ಮಹತ್ವಾಕಾಂಕ್ಷೆಯ ಯೋಜನೆ. ಕಳೆದ ಶತಮಾನದ ಪ್ರಮುಖ ಜ್ವಾಲಾಮುಖಿಗಳ ಚಟುವಟಿಕೆಗಳು, ಅವುಗಳ ಪರಿಣಾಮಗಳು, ವಿವಿಧ ಕಡೆ ಆ ಪರಿಣಾಮಗಳನ್ನು ಗ್ರಹಿಸಿದ ರೀತಿಗಳನ್ನು ಈ ಕೃತಿ ಕಥೆಯಂತೆ ಕಟ್ಟಿಕೊಡುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪ್ರಭಾವಗೊಳ್ಳುವ ಬೇರೆ ನೈಸರ್ಗಿಕ ಕ್ರಿಯೆಗಳ ಬಗ್ಗೆ ಕೂಡ ಪುಸ್ತಕ ಬೆಳಕು ಚೆಲ್ಲುತ್ತದೆ. ಸುಂಟರಗಾಳಿ, ಎಲ್ ನಿನೋ - ಈ ಪ್ರಕ್ರಿಯಗಳ ಬಗ್ಗೆ ಸಹ ಸ್ಥೂಲ ಪರಿಚಯ ಸಿಗುತ್ತದೆ.
ಇಂತಹ ವಿಷಯವನ್ನು ಬರೆಯುವಾಗ ಕೃತಿಕಾರನಿಗೆ ಭಾಷೆ ಹಾಗು ಕೃತಿಯ ರೂಪದ ಕುರಿತು ವಿಶೇಷ ಹಿಡಿತವಿರಬೇಕಾಗುತ್ತದೆ. ವೈಜ್ಞಾನಿಕ ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸುವ ಭರದಲ್ಲಿ ಐನ್ಸ್ಟೈನ್ ಹೇಳುವಂತೆ 'ಸರಳಗೊಳಿಸಬೇಕಾದಷ್ಟೇ ಸರಳಗೊಳಿಸಬೇಕು, ಹೆಚ್ಚು ಸರಳಗೊಳಿಸಲೋಗಬಾರದು!' 'ಜೀವನ ಸಂಗ್ರಾಮ' ಕೃತಿಯು ಈ ವಿಭಾಗದಲ್ಲಿ ಎಷ್ಟು ಯಶಸ್ಸು ಸಾಧಿಸುತ್ತದೆ ಎಂಬುದು ಓದುಗಳ ಒಲವನ್ನಾಧರಿಸಿದ್ದೇನೋ ಎನಿಸುತ್ತದೆ. ತೀರಾ ಸಲೀಸಾಗಿ ಓದಿಸಿಕೊಂಡು ಹೋಗುವ ಕೃತಿಯಲ್ಲವಿದು, ಆದರೆ ಕುತೂಹಲವಿದ್ದು ಓದಲು ತೊಡಗುವ ಓದುಗಳಿಗೆ ಇದು ವಿಚಾರಧಾರೆಯ ರಸದೌತಣವೇ ಹೌದು.
ಇಂತಹ ವಿಷಯವನ್ನು ಬರೆಯುವಾಗ ಕೃತಿಕಾರನಿಗೆ ಭಾಷೆ ಹಾಗು ಕೃತಿಯ ರೂಪದ ಕುರಿತು ವಿಶೇಷ ಹಿಡಿತವಿರಬೇಕಾಗುತ್ತದೆ. ವೈಜ್ಞಾನಿಕ ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸುವ ಭರದಲ್ಲಿ ಐನ್ಸ್ಟೈನ್ ಹೇಳುವಂತೆ 'ಸರಳಗೊಳಿಸಬೇಕಾದಷ್ಟೇ ಸರಳಗೊಳಿಸಬೇಕು, ಹೆಚ್ಚು ಸರಳಗೊಳಿಸಲೋಗಬಾರದು!' 'ಜೀವನ ಸಂಗ್ರಾಮ' ಕೃತಿಯು ಈ ವಿಭಾಗದಲ್ಲಿ ಎಷ್ಟು ಯಶಸ್ಸು ಸಾಧಿಸುತ್ತದೆ ಎಂಬುದು ಓದುಗಳ ಒಲವನ್ನಾಧರಿಸಿದ್ದೇನೋ ಎನಿಸುತ್ತದೆ. ತೀರಾ ಸಲೀಸಾಗಿ ಓದಿಸಿಕೊಂಡು ಹೋಗುವ ಕೃತಿಯಲ್ಲವಿದು, ಆದರೆ ಕುತೂಹಲವಿದ್ದು ಓದಲು ತೊಡಗುವ ಓದುಗಳಿಗೆ ಇದು ವಿಚಾರಧಾರೆಯ ರಸದೌತಣವೇ ಹೌದು.
ಪುಸ್ತಕದ ಮುನ್ನುಡಿಯಲ್ಲಿ ತೇಜಸ್ವಿಯವರು "ಹೆಚ್ಚು ತಿಳಿದ ಹಾಗೆ ನಾವು ತಿಳಿದಿಲ್ಲದಿರುವುದರ ಅರಿವು ಮತ್ತು ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ, ಎಂದರೆ ಜ್ಞಾನ ಎನ್ನುವುದು ನಮ್ಮ ಅಜ್ಞಾನದ ಅರಿವಷ್ಟೇ" ಎಂಬ ಲೋಹಿಯಾರವರ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ಪುಸ್ತಕ ಓದುತ್ತಾ ಓದುತ್ತಾ ಆ ಮಾತು ಎಷ್ಟು ಸತ್ಯ ಎಂಬುದರ ಅರಿವು ಕೂಡ ನಮಗೇ ಸೂಕ್ಷ್ಮವಾಗಿ ಮನದಟ್ಟಾಗುತ್ತದೆ. ಅದಕ್ಕಿಂತ ತೀಕ್ಷ್ಣವಾಗಿ ಅರಿವಾಗುವುದು ಅದೇ ಮುನ್ನುಡಿಯಲ್ಲಿ ಲೇಖಕರು ಹೇಳುವ ಈ ಅಭಿಪ್ರಾಯ - "ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸುತ್ತಾ ಒಂದು ದಿನ ಪರಿಪೂರ್ಣತೆಯ ಹಂತವನ್ನು ಮುಟ್ಟುತ್ತೇವೆ ಎನ್ನುವುದು ಸುಳ್ಳು. ಜ್ಞಾನ ಅಜ್ಞಾನ ಎರಡೂ ಅವಳಿಗಳು. ಆದರೆ ಅನ್ವೇಷಣೆ, ತಿಳಿಯುತ್ತಾ ಹೋಗುವದು ಸಹ ಮನಸ್ಸಿನ ಅನುಷಂಗಿಕ ಗುಣ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೋಮಾಂಚನಕ್ಕಾದರು ಮನಸ್ಸು ಮುಂದುವರಿಯುತ್ತದೆ." ಇದು ಅಭಿಪ್ರಾಯವಲ್ಲ ಸತ್ಯ ಎಂಬ ಅರಿವು ಕೃತಿ ಓದುತ್ತಾ ಓದುಗರಲ್ಲಿ ಮೂಡುತ್ತದೆ. ಕೃತಿಯ ಗೆಲುವಿರುವುದೇ ಅಲ್ಲಿ. ನೂರು ಪುಟದಷ್ಟೂ ಇಲ್ಲದ ಈ ಚಿಕ್ಕ ಪುಸ್ತಕ ಅಷ್ಟೆಲ್ಲಾ ವಿಷಯಗಳ ಬಗ್ಗೆ ನಮ್ಮ ಕಣ್ತೆರಿಸುವಲ್ಲಿ, ಈ ಜ್ವಾಲಾಮುಖಿಗಳ ಆರ್ಭಟದ ಎದುರು ಮನುಷ್ಯನ 'ಜೀವನ ಸಂಗ್ರಾಮ'ದ ಸಮಗ್ರ ಚಿತ್ರ ಕಟ್ಟಿಕೊಡುವಲ್ಲಿ ಸಂಪೂರ್ಣ ಸಫಲವಾಗಿಲ್ಲ ಎನಿಸಬಹುದು ಆದರೆ ಕುತೂಹಲ ಹಾಗೂ ಪರಿಶೋಧನೆಯ ಕಿಚ್ಚನ್ನು ಹೊತ್ತಿಸುವಲ್ಲಿ ಸಂಪೂರ್ಣ ಸಫಲವಾಗಿದೆ ಎನಿಸದೆ ಇರಲಾರದು.
- ಮಂಜುನಾಥ್ ಎ ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ