Pages

ಪುಸ್ತಕ ಪ್ರೀತಿ - ಏತೋ ಮುಂಡಾ ಯುದ್ಧವನ್ನು ಗೆದ್ದ


ಮಹಾಶ್ವೇತಾದೇವಿ

ಹಾಥೀಘರ್ ಅಥವಾ ಸಾಲಗೇರಿಯಾ ಹಳ್ಳಿಯ ಆದಿವಾಸಿ ಪುಟ್ಟ ಬಾಲಕ ಏತೋ ಈ ಕಥೆಯ ನಾಯಕ. ಆದಿವಾಸಿಗಳು ಅನಕ್ಷರಸ್ಥರಾಗಿದ್ದರೂ ತಮ್ಮ ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ವಿದೇಶಿಯರ ಜೊತೆ  ನಡೆದ ಯುದ್ಧದಲ್ಲಿ ಸೋತು ತಮ್ಮ ನೆಲೆಯನ್ನು ಬಿಟ್ಟು ಬರಬೇಕಾಯಿತು. ಹೀಗೆ ಬಂದ ಇವರು ಸ್ವಲ್ಪ ಭಾಗ ಅರಣ್ಯವನ್ನು ಕಡಿದು ಹಸನುಗೊಳಿಸಿ ತಮ್ಮ ನೆಲೆಯನ್ನು ಮಾಡಿಕೊಂಡರು. ಇವರು ಕಾಡನ್ನು ತಮ್ಮ ದೇವರೆಂದು ತಿಳಿದಿದ್ದರು. ಇವರು ಹಲವಾರು ಹಬ್ಬಗಳನ್ನು ಆಚರಿಸುತ್ತಿದ್ದರು. ಪ್ರಮುಖವಾಗಿ ಕೃಷಿಯ ಸಮೃದ್ಧಿಗಾಗಿ "ಕರಮ್" ಹಬ್ಬವನ್ನು, ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ "ಬಂಧ್ನಾ ಅಥವಾ ಸೊಹ್ರಾಯ್" ಹಬ್ಬವನ್ನು ಆಚರಿಸುತ್ತಿದ್ದರು. ಇವರಲ್ಲಿ ವಧುದಕ್ಷಿಣೆ ಪದ್ಧತಿ ರೂಢಿಯಲ್ಲಿತ್ತು.
ಈ ಆದಿವಾಸಿಗಳು ಮಕ್ಕಳಿಗೆ ಹೆಸರಿಡಲು ತಮ್ಮದೇ ಆದ ರೀತಿಯನ್ನಿರಿಸಿಕೊಂಡಿದ್ದರು. ಮಕ್ಕಳು ಯಾವ ದಿನದಂದು ಹುಟ್ಟುತ್ತಾರೋ ಆ ದಿನದ ಹೆಸರನ್ನು ಇಡುತ್ತಿದ್ದರು. ಹಾಗೆಯೇ ಈ ಕಥೆಯ ನಾಯಕ ಏತವಾರ ಅಂದರೆ ಭಾನುವಾರ ಜನಿಸಿದ್ದರಿಂದ ಅವನಿಗೆ 'ಏತೋ' ಎಂದು ಹೆಸರಿಟ್ಟರು. 

ಏತೋ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಿದ್ದನು. ಏತೋ ತನ್ನ ಅಜ್ಜನನ್ನು "ಈ ಹಳ್ಳಿಗೆ ಹಾಥೀಘರ್ ಹೆಸರು ಬರಲು ಕಾರಣವೇನು?" "ಅದನ್ನು ಬದಲಾಯಿಸಿದ್ದು ಏಕೆ?" "ಮೋತೀಬಾಬು ನಮ್ಮನ್ನು ಕಾಡು ನಾಶ ಮಾಡಿದವರು ಎನ್ನುವರಲ್ಲ ಏಕೆ?" ಎಂದೆಲ್ಲಾ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದನು. 
ಇವನ ಈ ಗುಣವನ್ನು ನೋಡಿದ ಅಜ್ಜ ಇವನನ್ನು ಶಾಲೆಗೆ ಕಳುಹಿಸಿ ವಿದ್ಯಾವಂತನನ್ನಾಗಿಸಬೇಕೆಂದು ಕೊಂಡಿದ್ದನು.
ಆದರೆ ಏತೋ ತನ್ನ ಅಜ್ಜನೊಬ್ಬನೇ ಕಷ್ಟ ಪಡುತ್ತಾನೆಂದು ಮೋತೀಬಾಬುವಿನ ಮನೆಗೆಲಸಕ್ಕೆ ಹೋಗುತ್ತಿದ್ದನು. ಜೊತೆಗೆ ಊರಿನಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗೆ ಹೋಗಿ ಅಂಗಡಿಗಳನ್ನು ಗುಡಿಸಿ ಬದಲಾಗಿ ಗೋಣೀಚೀಲವನ್ನು ಪಡೆಯುತ್ತಿದ್ದನು. ಅವನು ಎಲ್ಲಿಗೆ ಹೋದರೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದನು. ದಾರಿಯಲ್ಲಿ ಸಿಕ್ಕಂತಹ ಮರದ ತುಂಡು, ಸೊಪ್ಪು, ತರಕಾರಿ ಎಲ್ಲವನ್ನು ಚೀಲಕ್ಕೆ ಹಾಕಿಕೊಂಡು, ಮಾರಿ ತನಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತಿದ್ದನು. ಇದೇ ಚೀಲವನ್ನು ಮಳೆಗಾಲದಲ್ಲಿ ತಲೆಗೆ ಹಾಕುವ ಗೊರಗುವಿನಂತೆ ಉಪಯೋಗಿಸುತ್ತಿದ್ದನು. ಚಳಿಗಾಲದಲ್ಲಿ ಕಂಬಳಿಯಂತೆ ಹೊದೆಯುತ್ತಿದ್ದನು. 
ಏತೋ, ಬಾಬುವಿನ ಮನೆಗೆಲಸವನ್ನು ಮುಗಿಸಿ, ಹಸು, ಆಡುಗಳನ್ನು ಮೇಯಿಸಲು ಹೊರಗಡೆ ಹೋಗುತ್ತಿದ್ದನು. ಅಲ್ಲಿ ಸ್ವತಂತ್ರನಾಗಿ ಪ್ರಕೃತಿಯ ಜೊತೆ ಮಾತನಾಡುತ್ತ ಸಂತಸದಿಂದಿರುತ್ತಿದ್ದನು. ಹಾಗೆ ಅವನು ಕಾಡಿಗೆ ಹೋಗುವಾಗ ಶಾಲೆಯೊಂದಿತ್ತು. ಅಲ್ಲಿ ಮಾಸ್ತರು ಯುದ್ಧ ಕುರಿತು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ನಿಲ್ಲುತ್ತಿದ್ದನು.

ಹೀಗೆ ಕಾಲ ಕಳೆಯುತ್ತಿರಬೇಕಾದರೆ ಅಜ್ಜ ಅವನನ್ನು ಶಾಲೆಗೆ ಸೇರಿಸಲು ಕರೆದುಕೊಂಡು ಹೋದನು. "ನನಗೆ ಇವನ ತಂದೆಯನ್ನೇ ಓದಿಸಬೇಕೆಂಬ ಆಸೆಯಿತ್ತು. ಆದರೆ ಹೊಟ್ಟೆಪಾಡಿಗಾಗಿ ಬಾಬುವಿನ ಹತ್ತಿರ ಕೆಲಸಕ್ಕೆ ಸೇರಿಸಬೇಕಾಯಿತು. ಆದರೆ ಇವನನ್ನಾದರೂ ಓದಿ ವಿದ್ಯಾವಂತನನ್ನಾಗಿ ಮಾಡಬೇಕು " ಎಂದು ಮಾಸ್ತರಿಗೆ ಹೇಳಿದನು.
"
ಚಿಂತಿಸಬೇಡ ಚಾಚ ಎಲ್ಲಾ ಆದಿವಾಸಿಗಳದೂ ಇದೇ ಸಮಸ್ಯೆ. ನಾನೂ ಸಹ ಹೋರಾಟ ಮಾಡಿಯೇ ಈ ಸ್ಥಾನಕ್ಕೆ ಬಂದಿರುವುದು. ಕೆಲಸ ಮಾಡಿಕೊಂಡು, ವಿದ್ಯಾರ್ಥಿವೇತನದ ಸಹಾಯದಿಂದ ವಿದ್ಯಾಭ್ಯಾಸ ಮಾಡಿದೆ. ಪ್ರೈಮರಿ ಪರೀಕ್ಷೆಯಲ್ಲಿ 2ನೇ ಸ್ಥಾನ ಗಳಿಸಿದಾಗ ನನ್ನ ತಂದೆ ಮನಸ್ಸು ಬದಲಾಯಿಸಿದರು" ಎಂದು ಮಾಸ್ತರು ಅಜ್ಜನಿಗೆ ಹೇಳಿದರು.
ಕೇಳಿದ ಅಜ್ಜ "ನಿಜ ನಮಗೆ ಓದು ಬರಹ ಬರಲಿಲ್ಲವಾದ್ದರಿಂದ ನಮಗೆ ಸೇರಿದ ಆಸ್ತಿಯನ್ನು ಕಳೆದುಕೊಳ್ಳಬೇಕಾಯಿತು ಮತ್ತು ಸರಕಾರ ನಮಗಾಗಿ ತರುವ ಯೋಜನೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಏತೋನನ್ನ ವಿದ್ಯಾವಂತನನ್ನಾಗಿ ಮಾಡುವ ಜವಾಬ್ದಾರಿ ನಿನ್ನದು" ಎಂದು ಮಾಸ್ತರಿಗೆ ಹೇಳಿದ ಅಜ್ಜ. ಹೀಗೆ ಶಾಲೆಗೆ ಸೇರಿದ ಏತೋ, ಬಾಬುವಿನ ಕೋಪಕ್ಕೆ ಗುರಿಯಾದನು.
ಆದರೂ ರಜಾದಿನಗಳಲ್ಲಿ ಏತೋ ಬಾಬುವಿನ ಮನೆಗೆಲಸಕ್ಕೆ ಹೋಗುತ್ತಿದ್ದನು. ಅಂತಹ ಸಮಯದಲ್ಲಿ ಬಾಬು ಅವನಿಗೆ ಆಸೆ ತೋರಿಸಿ ಶಾಲೆಗೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದನು.  "ಹಿಂದಿನ ಕಾಲದಲ್ಲಿ ಬಿಲ್ಲು ಬಾಣವಿದ್ದರೆ ಸಾಕಾಗಿತ್ತು, ಆದರೆ ಈಗ ನಮ್ಮ ಅಸ್ತಿತ್ವಕ್ಕೆ ಬೇಕಾದ ಅಸ್ತ್ರವೆಂದರೆ ವಿದ್ಯೆ" ಎನ್ನುತ್ತಿದ್ದ ಮಾಸ್ತರ ಮಾತುಗಳನ್ನು ನೆನೆಸಿಕೊಂಡು 
 ಏತೋ ಏನೂ ಮಾತನಾಡದೆ ಸುಮ್ಮನಾಗುತ್ತಿದ್ದನು.
ಆದಿವಾಸಿಗಳೆಲ್ಲಾ ಸೇರಿ ಒಂದು ಕ್ಲಬ್ ಅನ್ನು ಮಾಡಿಕೊಂಡಿದ್ದರು. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜಯಂತಿಯನ್ನು ಆಚರಿಸುತ್ತಿದ್ದರು. ಆ ಸಂದರ್ಭದಲ್ಲಿ  ಪಂದ್ಯಗಳನ್ನು ನಡೆಸುತ್ತಿದ್ದರು ಮತ್ತು ಸಂಜೆಯ ಸಮಯದಲ್ಲಿ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದುತ್ತಿದ್ದರು. ಅಲ್ಲದೆ ವ್ಯಾಯಾಮ, ಅಂಗಸಾಧನೆಯನ್ನು ಕಲಿಸುತ್ತಿದ್ದರು ಹಾಗೂ ಸಂಗೀತ, ನೃತ್ಯ, ಕಂಠಪಾಠ ಸ್ಪರ್ಧೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
ಹೀಗೆ ದೊಡ್ಡವರಿಗಾಗಿ ಇದ್ದ ಈ ಕ್ಲಬ್ ನಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಆಸಕ್ತಿ ಮೂಡಿಸುವ ಸಲುವಾಗಿ ಮಾಸ್ತರು ಪಾಠ ಹೇಳಿಕೊಡಲು ಪ್ರಾರಂಭಿಸಿದರು. ಜೊತೆಗೆ ಹಾಡುವುದು, ಕೊಳಲು ನುಡಿಸುವುದನ್ನು ಹೇಳಿಕೊಡುವುದಾಗಿ ಮಾಸ್ತರು ತಿಳಿಸಿದರು.
ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದ ಏತೋ ಅಜ್ಜನ ಕಾರಣದಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಅಂದರೆ ಅಜ್ಜ ಮರದ ಕೆಳಗೆ ಕುಳಿತ್ತಿದ್ದಾಗ ಮರ ಅವನ ಮೇಲೆ ಬಿದ್ದು ಕಾಲಿನ ಮೂಳೆ ಮುರಿಯಿತು. ಚಿಕಿತ್ಸೆಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಇದರಿಂದ ಏತೋ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮತ್ತೆ ಬಾಬುವಿನ ಮನೆಗೆಲಸಕ್ಕೆ ಹೋಗಲು ಪ್ರಾರಂಭಿಸಿದನು. ಜೊತೆಗೆ ಸಂಜೆ ಕ್ಲಬ್ ನ ಪಾಠ ಕೇಳಲು ಹೋಗುತ್ತಿದ್ದುದ್ದನ್ನು ನಿಲ್ಲಿಸಿದನು. ಆದರೆ ಮಾಸ್ತರು ಹೇಳುತ್ತಿದ್ದ ಯುದ್ಧ ಕತೆಗಳನ್ನು ತಪ್ಪದೆ ಕೇಳುತ್ತಿದ್ದನು.
ಇದನ್ನು ನೋಡಿದ ಮಾಸ್ತರು ಒಂದು ದಿನ ಏತೋಗೆ "ನಿನಗೆ ಯುದ್ಧ ಕಥೆಗಳು ಇಷ್ಟ ಅಲ್ಲವೇ?" ಎಂದು ಅವನಿಗೆ ಸ್ವಾತಂತ್ರ್ಯ ಹೊರಾಟಗಾರ ಬಿರಸಾ ಚಿತ್ರವನ್ನು ತೋರಿಸಿ, "ನೀನೆ ವಿದ್ಯೆ ಕಲಿತರೆ ಸಿದ್ಧು, ಕನ್ಹು, ಬಿರಸಾರವರ ಕಥೆಗಳನ್ನು ಓದಬಹುದು" ಎಂದರು. ಇದನ್ನು ಕೇಳಿದ ಏತೋ ಮತ್ತೆ ಶಾಲೆಗೆ ಹೋಗಲು ನಿರ್ಧರಿಸಿದನು.
ನಂತರ ಬಾಬುವಿನೊಂದಿಗೆ  ಬಿರಸಾ ಜಯಂತಿ ನಂತರ ಕೆಲಸಕ್ಕೆ ಬರುವುದಿಲ್ಲ ಎಂದನು. ಕೋಪಗೊಂಡ ಬಾಬು "ನೀವೆಲ್ಲಾ ಕೊಬ್ಬಿಬಿಟ್ಟೀದ್ದೀರಿ. ಆದರೆ ಕಾಲ ಕೆಟ್ಟದ್ದು ನಾವು ಸುಮ್ಮನಿರಬೇಕಾಗಿದೆ. ಬಿರಸಾ ಜಯಂತಿಯಂತೆ, ದೊಡ್ಡ ಆನೆಯಂತೆ, ಅನಾಗರಿಕ ಕಾಡುಮನುಷ್ಯರ ಅಧಿಕಪ್ರಸಂಗಿತನ " ಎಂದನು.
ಕೇಳಿದ ಏತೋಗೆ ಕೋಪ ಬಂದರೂ ಸುಮ್ಮನಾಗಿ ಮನೆಗೆ ಅಜ್ಜನ ಜೊತೆ ನಾಳೆಯಿಂದ ಕೆಲಸಕ್ಕೆ ಹೋಗುವುದಿಲ್ಲವೆಂದನು. ಬಿರಸಾ ಜಯಂತಿಯಂದು ಮಾಸ್ತರು ಹೇಳಿದ ಸಿದ್ಧು ಮತ್ತು ಕನ್ಹು ರವರ ಕಥೆಗಳನ್ನು ಕೇಳಿ ಸ್ಫೂರ್ತಿಗೊಂಡನು. "ನಾನು ಶಾಲೆಗೆ ಹೋಗಿ ವಿದ್ಯೆ ಕಲಿತರೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದು ಶಾಲೆಗೆ ಹೋಗುವ ತನ್ನ ನಿರ್ಧಾರವನ್ನು ದೃಢಪಡಿಸಿಕೊಂಡನು.
ನಂತರ ಆದಿವಾಸಿಗಳು ಹೋರಾಟ ನಡೆಸಿ ತಮ್ಮ ಊರಿಗೂ ಶಾಲೆಯನ್ನು ಮಂಜೂರು ಮಾಡಿಸಿಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದರು. ಹೀಗೆ ಏತೋ ಯುದ್ಧ ಕಥೆಗಳನ್ನು ಕೇಳುತ್ತಾ, ವಿದ್ಯೆಗಾಗಿ ತಾನೇ ಒಂದು ಯುದ್ಧವನ್ನು ಮಾಡಿ ಗೆದ್ದನು.
ತುಳಿತಕ್ಕೊಳಗಾದ ಹಾಗೂ ಕೆಳವರ್ಗದವರ ಹಕ್ಕಿನ ಹೋರಾಟಕ್ಕಾಗಿ ಬಹಳವಾಗಿ ಶ್ರಮಿಸಿದ ಮಹಾನ್ ಹೋರಾಟಗಾರ್ತಿ ಮಹಾಶ್ವೇತಾದೇವಿಯವರು ಆದಿವಾಸಿಗಳ "ಏತೋ ಮುಂಡಾ ಯುದ್ಧವನ್ನು ಗೆದ್ದ" ಕಥೆಯನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಇಲ್ಲಿ ಆದಿವಾಸಿಗಳು ತಮ್ಮ ಶಿಕ್ಷಣಕ್ಕಾಗಿ ಮಾಡಿದ ಹೋರಾಟ, ಹಾಗೂ ಏತೋ ಮನೆಗೆಲಸ ಬಿಟ್ಟು ಶಾಲೆಯ ಕಡೆ ನಡೆದುದು ಒಂದು ಯುದ್ಧವನ್ನೇ ಗೆದ್ದಂತೆ ಎಂದು ಸೊಗಸಾಗಿ ಬರೆದಿದ್ದಾರೆ. ಇದನ್ನು ಕನ್ನಡಕ್ಕೆ ಗೊರೂರು ಶ್ರೀನಿವಾಸಮೂರ್ತಿಯವರು ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ
.

- ವಿಜಯಲಕ್ಷ್ಮಿ ಎಂ. ಎಸ್    

ಸಿನಿಮಾ ವಿಮರ್ಶೆ - ದಿ ಬೇರ್ (ಕರಡಿ)

[ಇಂಗ್ಲಿಷ್ ಸಿನಿಮಾ ದಿ ಬೇರ್ (ಕರಡಿ) - ಇದರ ವಿಮರ್ಶೆ]


ಕಥೆಯ ಜಾಗ - ಬ್ರಿಟಿಷ್ ಕೊಲಂಬಿಯಾ, ಕೆನಡಾ  – 1885
ಈ ಕಥೆ ಅನಾಥವಾದ ಕರಡಿ ಮರಿ ದೊಡ್ಡ ಕರಡಿಯೊಂದಿಗೆ ಬೆಳೆಸಿದ ಸ್ನೇಹ ಸಂಬಂಧದ ಬಗ್ಗೆ ಹೇಳುತ್ತದೆ. ಜೊತೆಗೆ ಕೊಲ್ಲುವುದಕ್ಕಿಂತ ಬದುಕುವುದು, ಬದುಕಲು ಅವಕಾಶ ನೀಡುವುದು ದೊಡ್ಡದು ಎಂದು ಸಾರುತ್ತದೆ. 
ಕಥೆ 
ತಾಯಿ ಕರಡಿ ಜೇನನ್ನು ಕೀಳುತ್ತಿರುತ್ತದೆ. ಮರದ ಬುಡದಿಂದ ಮಣ್ಣನ್ನು ತೆಗೆಯುತ್ತಾ. ಮರಿ ಕರಡಿ ಅದರ ಸುತಮುತ್ತಲೂ ಓಡಾಡಿಕೊಂಡಿರುತ್ತದೆ. ಮರಿಗೂ ಜೇನನ್ನು ಕೊಡುತ್ತಾ ತಾನು ತಿನ್ನುತ್ತಿರುತ್ತದೆ. ಇನ್ನಷ್ಟು ಆಳಕ್ಕೆ ಹೋದಾಗ, ಮರ ಅಲುಗಾಡಿ, ಮರಕ್ಕೆ ಅಂಟಿಕೊಂಡಂತಿದ್ದ ಕಲ್ಲುಗಳು ಉದುರುತ್ತವೆ. ದೊಡ್ಡ ಬಂಡೆಯೊಂದು ತಾಯಿಯ ಮೇಲೆ ಬಿದ್ದು ತಾಯಿ ಸತ್ತುಹೋಗುತ್ತದೆ. ಮರಿ ಕರಡಿ ಅದನ್ನು ಎಬ್ಬಿಸಲು ಕಲ್ಲುಗಳನ್ನು ತೆಗೆಯುವ ಪ್ರಯತ್ನ ಮಾಡುತ್ತದೆ. ಆದರೆ ಸಾಧ್ಯವಾಗುವುದಿಲ್ಲ. ಮರುದಿನ ಅದು ಬೇರೆ ಕಡೆಗೆ ಹೊರಡುತ್ತದೆ.
ಈ ಮಧ್ಯೆ ಬೇಟೆಗಾರರು ಕರಡಿಯನ್ನು ಬೇಟೆಯಾಡಲು ಬಂದಿದ್ದಾರೆ.  ಇನ್ನೊಂದು ಗಂಡು ಕರಡಿ ಸಿಗುತ್ತದೆ, ಹೊಡೆಯುತ್ತಾರೆ, ಆದರೆ ಅದು ಸಾಯುವುದಿಲ್ಲ, ತಪ್ಪಿಸಿಕೊಳ್ಳುತ್ತದೆ, ಜೊತೆಗೆ ಬೇಟೆಗಾರರು ತಂದಿದ್ದ ಕುದುರೆಗಳ ಮೇಲೆ ದಾಲೀ ಮಾಡಿ ಗಾಯಗೊಳಿಸಿರುತ್ತದೆ. ಇದರಿಂದ ಅಪ್ಪ ಹೇಗಾದರೂ ಮಾಡಿ ಅದನ್ನು ಕೊಲ್ಲಲೇಬೇಕೆಂದು ತೀರ್ಮಾನಿಸಿದ್ದಾನೆ.
ಇತ್ತ ಕರಡಿಗೆ ತಗುಲಿದ ಗುಂಡು ಭುಜದ ಮೇಲಿರುತ್ತದೆ. ಅದರ ಕೂಗನ್ನು ಕೇಳಿಸಿಕೊಂಡು ಮರಿ ಕರಡಿ ತನ್ನಮ್ಮ ಎಂದುಕೊಂಡೇ ಅದರ ಹತ್ತಿರ ಹೋಗಲೆತ್ನಿಸುತ್ತದೆ. ಆದರೆ ಅದು ಇದನ್ನು ಓಡಿಸಿ, ಕೊನೆಗೆ ಹೊಂಡದಲ್ಲಿ ಹೋಗಿ ತಂಪಾಗಲೆಂದು ಮಲಗಿರುತ್ತದೆ, ಆದರೆ ನೋವಿನ್ನು ಹೋಗಿರುವುದಿಲ್ಲ. 
ಮರಿ ಕರಡಿ ನಿಧಾನವಾಗಿ ಹೋಗಿ ಆ ಗಾಯವನ್ನು ನೆಕ್ಕಲಾರಂಭಿಸುತ್ತದೆ. ಆ ದೊಡ್ಡ ಕರಡಿಗೆ ಹಾಯೆನಿಸುತ್ತದೆ. ಈ ಮರಿಯನ್ನು ತನ್ನದೆಂದು ಒಪ್ಪಿಕೊಂಡುಬಿಡುತ್ತದೆ. ನೀರಿನಲ್ಲಿ ಮೀನನ್ನು ಹಿಡಿದು ತನ್ನ ಮರಿಗೆ ಕೊಡುತ್ತದೆ. 
ಬೇಟೆಗಾರ ಕಾಯುತ್ತಿದ್ದಾನೆ, ಅಪ್ಪ ನಾಯಿಗಳನ್ನು ಕರೆತರಲು ಹೋಗಿದ್ದಾನೆ. 
ತಾಯಿ ಕರಡಿ ಮರ ಕೀಳುವುದನ್ನು ಗಮನಿಸಿ ತಾನೂ ಕೀಳಲೆತ್ನಿಸುತ್ತದೆ. ನಾಯಿಕೊಡೆ ತಿಂದಾಗ ತಲೆ ತಿರುಗುವುದು; ಕಪ್ಪೆಯನ್ನು ಹಿಡಿಯಲೆತ್ನಿಸುವುದು,; ಚಿಟ್ಟೆಯನ್ನು, ಆಮೆಯನ್ನು ಹಿಡಿಯಲೆತ್ನಿಸುವುದು; ಅಳಿಲನ್ನು, ನೀರಲ್ಲಿರುವ ಚಂದ್ರನನ್ನು ಹಿಡಿಯಲೆತ್ನಿಸುವ ದೃಶ್ಯಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಹುಲಿಯೊಂದಿಗಿನ ಹೋರಾಟದ ಸಮಯದಲ್ಲಿ, ನಾಯಿಗಳು ಅಟ್ಟಿಸಿಕೊಂಡು ಬಂದಾಗ ಅದರ ಮುಖದಲ್ಲಿನ ಭಯ ಸುಂದರವಾಗಿ ಚಿತ್ರಿತವಾಗಿದೆ. ಏಕೆಂದರೆ ಮರಿ ಕರಡಿ ಅಷ್ಟು ಅದ್ಭುತವಾಗಿ ನಟಿಸಿದೆ. ಅಥವಾ ನಿರ್ದೇಶಕರು ಅಷ್ಟು ಚೆನ್ನಾಗಿ ಸೂಕ್ತ ಸಮಯದಲ್ಲಿ ಕ್ಯಾಮರಾದಲ್ಲಿ ಅದಷ್ಟನ್ನು ಸೆರೆಹಿಡಿದಿದ್ದಾರೆ. ಪೋಟೊಗ್ರಫಿ ಅದ್ಭುತ. ಮರಿ ಕರಡಿಯೇ ಈ ಚಿತ್ರದ ಹೀರೋ ಎಂದರೆ ತಪ್ಪಿಲ್ಲ. 
ಬೇಟೆಗಾರರು ಕರಡಿಯನ್ನು ಹುಡುಕಿ ಹೊರಟಿದ್ದಾರೆ, ಕರಡಿ ಅವರನ್ನು ನೋಡುತ್ತದೆ. ಬೆಟ್ಟ ಹತ್ತಲಾರಂಭಿಸುತ್ತದೆ. ಮರಿ ಬಹಳ ಕಷ್ಟ ಪಟ್ಟು ಹತ್ತುತ್ತದೆ, ಒಂದು ಹಂತದಲ್ಲಿ ಅಸಹಾಯವಾಗಿ ಕೂಗುತ್ತದೆ. ತಂದೆ ಕರಡಿ ಮತ್ತೆ ಹಿಂದೆ ಬರುತ್ತದೆ. ಮರಿಯನ್ನು ಗುಹೆಯೊಂದರಲ್ಲಿ ಕಳಿಸಿ ಹೊರಗೆ ನಿಲ್ಲುತ್ತದೆ. ಹತ್ತಾರು ನಾಯಿಗಳು ಒಟ್ಟಾಗಿ ಆಕ್ರಮಣ ಮಾಡುತ್ತವೆ. ಕರಡಿ ಬಹಳಷ್ಟು ನಾಯಿಗಳನ್ನು ಗಾಯಗೊಳಿಸಿ ತಪ್ಪಿಸಿಕೊಳ್ಳುತ್ತದೆ. ಮರಿ ಗುಹೆಯಿಂದ ಹೊರಬಂದು ತಂದೆಯ ಹೆಜ್ಜೆ ಗುರುತಿನ ಆಧಾರದ ಮೇಲೆ ಅದನ್ನು ಹುಡುಕಲು ಹೊರಡುತ್ತದೆ. ಬೇಟೆಗಾರರು ಮರಿಯನ್ನು ನೋಡಿ ಅದನ್ನು ಹಿಡಿದುಕೊಂಡು ಬರುತ್ತಾರೆ. 
ಮಗ ಕರಡಿ ಮರಿಯ ಬಗ್ಗೆ ಕಾಳಜಿ ವಹಿಸುತ್ತಾನೆ. ರಾತ್ರಿ ಅಪ್ಪ ಕರಡಿ ಆ ಟೆಂಟ್ ನ ಸುತ್ತ ಸುತ್ತುತ್ತದೆ. ಮರುದಿನ ಮತ್ತೆ ಬೇಟೇಗಾರರು ಕರಡಿಯನ್ನು ಹುಡುಕಿ ಹೊರಟಿದ್ದಾರೆ. ಅಪ್ಪ, ಮಗ ಬೇರೆ ಬೇರೆ ಕಡೆ ಹೋಗುತ್ತಾರೆ. ಕರಡಿ ಅವರನ್ನು ನೋಡುತ್ತದೆ. ಮಗ ಕುಳಿತು ಕರಡಿಗಾಗಿ ಕಾಯುತ್ತಿದ್ದಾನೆ. ನೀರು ಖಾಲಿಯಾಗಿದೆ ಎಂದುಕೊಂಡು ನೀರು ತರಲು ಬರುತ್ತಾನೆ. ಆಗ ಅಪ್ಪ ಕರಡಿ ಬರುತ್ತದೆ. ಅವನ ಕೈಯಲ್ಲಿ ಗನ್ ಇರುವುದಿಲ್ಲ. ಅದು ಎಷ್ಟು ಜೋರಾಗಿ ಕೂಗಿಕೊಳ್ಳುತ್ತದೆಂದರೆ ಅವನ ಕಿವಿ ತಮಟೆ ಒಡೆದುಹೋಗುವಷ್ಟು, ಅದನ್ನು ಕೇಳಿಸಿಕೊಳ್ಳಲಾಗದೆ ಅವನು ದಯವಿಟ್ಟು ನಿಲ್ಲಿಸು ಎಅಂದು ಕೇಳಿಕೊಳ್ಳುತ್ತಾನೆ. ಕರಡಿ ದಯೆಯನ್ನು ತೋರಿಸಿ ಹಿಂದೆ ಹೊರಟುಹೋಗುತ್ತದೆ.  ತಕ್ಷಣವೇ ಇವನು ಗನ್ ತೆಗೆದುಕೊಂಡು ಗುರಿ ಇಡುತ್ತಾನೆ, ಆದರೆ ನಂತರ ಮನಸ್ಸನ್ನು ಬದಲಿಸಿಕೊಳ್ಳುತ್ತಾನೆ. ಅವನ ಮುಖಚಹರೆಯಲ್ಲಿ, “ಪ್ರ್ರಾಣಿಯೇ ನನ್ನ ಮೇಲೆ ದಯೆ ತೋರಿಸಿರುವಾಗ, ಮನುಷ್ಯನಾದ ನಾನು ಕಟುಕನಾಗಿ ವರ್ತಿಸುವುದು ಸರಿಯಲ್ಲ, ಎಂಬುದು ಕಾಣಿಸುತ್ತದೆ. ಅಪ್ಪ ಅಲ್ಲಿಗೆ ಬಂದು ಗುರಿ ಇಡುತ್ತಾನೆ. ಮಗ ಬೇಡವೆನ್ನುತ್ತಾನೆ.
ನಂತರ ಅವರು ಹಿಂದಿರುಗಲು ನಿರ್ಧರಿಸಿ ಮರಿಯನ್ನು ಬಿಟ್ಟುಬಿಡುತ್ತಾರೆ. ಅದು ಇವರನ್ನು ಹಿಂಬಾಲಿಸಿದಾಗ, ಇವರು ಅದನ್ನು ಪುನಃ ಕಾಡಿನತ್ತ ಓಡಿಸುತ್ತಾರೆ. ಬೇಟೆಯಾಡುವ ತಮ್ಮ ಹವ್ಯಾಸವನ್ನು ಬಿಟ್ಟುಬಿಡಲು ನಿರ್ಧರಿಸುತ್ತಾರೆ.
ಇತ್ತ ಮರಿ ತನ್ನ ತಾಯಿಯನ್ನು ಹುಡುಕಿಕೊಂಡು ಹೊರಟಿದೆ. ಅಷ್ಟರಲ್ಲಿ ಹುಲಿಯೊಂದು ಅದನ್ನು ಅಟ್ಟಿಸಿಕೊಂಡು ಬರುತ್ತದೆ. ಅದು ಓಡುತ್ತಾ ನದಿ ಅಡ್ಡಬಂದಾಗ, ಅದರ ಮೇಲೆ ಬಾಗಿದ್ದ ಮರದ ಕೊಂಬೆಯನ್ನು ಏರುತ್ತದೆ, ಕೊಂಬೆ ಮುರಿದು ಅದು ನೀರಿಗೆ ಬೀಳುತ್ತದೆ, ಅದೇ ಕೊಂಬೆಯ ಮೇಲೆ ಕುಳಿತು ಸಾಗುತ್ತಿರುವಾಗ ಹುಲಿ ಬಂಡೆಯ ಹತ್ತಿರ ಕಾಯುತ್ತಿರುತ್ತದೆ. ನೀರಿಗೆ ಧುಮುಕಿದ ಮರಿ ಅಲ್ಲಿಂದ ಈಜುತ್ತಾ ಬಂಡೆಯ ಮೇಲೆ ಬರುತ್ತದೆ. ಹುಲಿ ಕರಡಿ ಮರಿಯ ಮೇಲೆ ಆಕ್ರಮಣ ಮಾಡುತ್ತದೆ. ಮರಿ ಹೆದರಿದ್ದರೂ ತಾನು ಸಹ ಆಕ್ತ್ರಮಣ ಮಾಡಲೆತ್ನಿಸುತ್ತದೆ. ಕೊನೆಗೆ ಮರಿ ಜೋರಾಗಿ ಕೂಗುತ್ತದೆ. ಹುಲಿ ಹಿಮ್ಮೆಟ್ಟುತ್ತದೆ. ಅದನ್ನು ಕಂಡು ಮರಿ ಇನ್ನಷ್ಟು ಜೋರಾಗಿ ಕೂಗುತ್ತದೆ. ಆದರೆ ಅದರ ಹಿಂದೆ ಅಪ್ಪ ಕರಡಿಯ ಕೂಗಿಗೆ ಹುಲಿ ಹೆದರಿರುವುದು. ಹುಲಿ ಹೋದ ನಂತರ ಶಬ್ದ ಕೇಳಿಸಿದ ಕಡೆಗೆ ತಿರುಗಿ ನೋಡುತ್ತದೆ ಆಗ ಅಪ್ಪ ಕರಡಿ ಕಾಣಿಸುತ್ತದೆ, ತಕ್ಷಣವೇ ಅದರ ಬಳಿ ಓಡುತ್ತದೆ. ಕರಡಿ ತನ್ನ ಮರಿಯ ಮೇಲೆ ಅದ ಗಾಯವನ್ನು ನೆಕ್ಕುತ್ತದೆ. ನಂತರ ಅವೆರಡೂ ಒಟ್ಟಿಗೆ ಹೋಗುತ್ತವೆ.
ಮಂಜುಗಾಲ ಬರುತ್ತಿದೆ. ಅಪ್ಪ ಕರಡಿ ಮರಿಯನ್ನು ಕರೆದುಕೊಂಡು ಗುಹೆಯೊಂದನ್ನು ಹೊಕ್ಕುತ್ತದೆ. ಎರಡೂ ಒಂದನ್ನೊಂದು ಅಪ್ಪಿಕೊಂಡು ಮಲಗುತ್ತವೆ. ಈ ಚಿತ್ರಣದೊಂದಿಗೆ ಮತ್ತೆ ನಿಸರ್ಗವನ್ನು ತೋರಿಸುತ್ತಾ ಚಿತ್ರ ಮುಗಿಯುತ್ತದೆ. 
ಪ್ರಾಣಿಗಳನ್ನು ಇಟ್ಟುಕೊಂಡು ಚಿತ್ರ ಮಾಡುವುದು ಅತ್ಯಂತ ಕಷ್ಟಕರವಾದದ್ದು. ಪ್ರತಿಯೊಂದು ಸನ್ನಿವೇಶದಲ್ಲೂ ಆ ಅದ್ಭುತ ನಟನೆಯನ್ನು ಚಿತ್ರೀಕರಿಸುವುದು ಕಷ್ಟ. 
ಪ್ರಾಣಿಯಲ್ಲಿರುವ ಮಮತೆಯನ್ನು, ತಮ್ಮ ಮರಿಗಳ ಬಗ್ಗೆ ಅವು ವಹಿಸುವ ಕಾಳಜಿಯನ್ನು, ಬದುಕುವುದನ್ನು ಕಲಿಸಿಕೊಡುವುದನ್ನು, ನಿಸರ್ಗದತ್ತವಾಗಿ ಪ್ರತಿಯೊಂದು ಪ್ರಾಣಿ ತನ್ನ ಜೀವದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ನಾವಿಲ್ಲಿ ನೋಡಬಹುದು. ಪ್ರಾಣಿಯಿಂದ ಬದಲಾದ ಮೇಲ್ಮಟ್ಟದ ಪ್ರಾಣಿಯೆಂದೆನಿಸಿಕೊಳ್ಳುವ ಮನುಷ್ಯನನ್ನೂ ನೋಡಬಹುದು.
ಈ ಚಿತ್ರವನ್ನು ಚಿತ್ರೀಕರಿಸಲು ನಿರ್ದೇಶಕರು ೬ ತಿಂಗಳು ತೆಗೆದುಕೊಂಡರೆನ್ನಲಾಗಿದೆ. ಚಿತ್ರದ ನಿರ್ದೇಶಕ - ಜೀನ್ ಜಾಕ್ವೆಸ್ ಅನ್ನಾಡ್ 
ಇದು ಅಮೇರಿಕನ್ ಲೇಖಕ ಜೇಮ್ಸ್ ಆಲಿವರ್ ಕರ್ವುಡ್ ರವರ "ದಿ ಗ್ರಿಸ್ಲೆ ಕಿಂಗ್"  The Grizzly King (1916)  ಕಾದಂಬರಿಯಾಧಾರಿತ.  
ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. 
- ಸುಧಾ ಜಿ   

ಶಾಲಾ ಡೈರಿ - ಶಿಕ್ಷಕರಿಗೊಂದು ಪತ್ರ



ಪ್ರೀತಿಯ ಶಿಕ್ಷಕರೇ,
ಕೇವಲ ಕಲಿಸುವ ಯಂತ್ರವಾಗದಿರಿ,
ಮಾನವರಾಗಲು ಪ್ರಯತ್ನಿಸಿ.
ವಿಷಯವನ್ನಷ್ಟೇ ಕಲಿಸಬೇಡಿ, ಬದುಕನ್ನೂ ಕಲಿಸಿಕೊಡಿ.
ನೀವು ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡಿರಿ
ಕೇವಲ ನಿಮ್ಮ ಪುಸ್ತಕದ ಸಂಖ್ಯೆಯಾಗಿ ಅಲ್ಲ ಎಂಬುದನ್ನು ನಾ ಮನಗಾಣಬೇಕು.
ಪರೀಕ್ಷೆಗೆ ನಾ ಮಾಡುವ ಪ್ರಯತ್ನಗಳಿಂದ ನನ್ನನ್ನು ತೀರ್ಮಾನಿಸಿ
ಅದರಲಿ ಬರುವ ಅಂಕಗಳಿಂದಲ್ಲ.
ನನ್ನ ಸಾಮರ್ಥ್ಯ ಅಥವಾ ಪ್ರತಿಭೆಗೆ ಮೀರಿದ್ದನ್ನು ನನ್ನಿಂದ ಆಶಿಸಬೇಡಿ
ಆದರೆ ಕಾಲಕಾಲಕ್ಕೆ ಪ್ರೋತ್ಸಾಹ ನೀಡಿ.
ಶಾಲೆ ಮತ್ತು ಓದು ಜೀವನದ ಅತ್ಯಂತ ಉನ್ನತ ಸಂತೋಷವೆಂದು
ನಾನು ಪರಿಗಣಿಸಬೇಕೆಂದು ಆಶಿಸಬೇಡಿ.
ಕನಿಷ್ಟ ಪಕ್ಷ ನನಗಂತೂ ಆ ರೀತಿ ಇಲ್ಲ.
ನೀವು ಕಲಿಸುವ ವಿಷಯಗಳನ್ನೆಲ್ಲಾ ನಾನು ಇಷ್ಟಪಡಬೇಕೆಂದು ಆಶಿಸಬೇಡಿ,
ಬೇರೆ ವಿಷಯಗಳು ಹೆಚ್ಚು ಆಸಕ್ತಿದಾಯಕವಾಗಿರಬಹುದೂ ಕೂಡಾ
ಬಹುಶಃ ನನಗಂತೂ ಆ ರೀತಿಯೇ ಇದೆ.
ನಾನೇ ಆಲೋಚಿಸಲು, ಅಳೆಯಲು, ಸಹಾಯ ಮಾಡಿ,  
ಕೇವಲ ಸಿದ್ಧಪಡಿಸಿದ ಉತ್ತರಗಳನ್ನು ಬಾಯಿಪಾಠ ಮಾಡಲಲ್ಲ.
ನಾನೇ ಉತ್ತರಗಳನ್ನು ಹುಡುಕಲು ನೆರವಾಗಿ,
ಅದು, ಇಬ್ಬರಿಗೂ ತ್ರಾಸದಾಯಕವಾಗಿದ್ದರೂ ಸಹ.
ನಾನು ಗಂಭೀರವಾಗಿ ಕೇಳುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳಿ
ಅವು ಎಷ್ಟೇ ಮೂರ್ಖತ್ವದ ಮಾತುಗಳೆನಿಸಿದರೂ.
ನೀವು ಕೇಳಿಸಿಕೊಂಡರೆ,
ನಾನೂ ಸಹ ಕೇಳಿಸಿಕೊಳ್ಳಲು ಕಲಿಯಬಹುದು.
ನೀವು ನ್ಯಾಯಯುತವಾಗಿದ್ದರೆ ನನ್ನೊಂದಿಗೆ ಬಿಗಿಯಾಗಿಯೇ ಇರಿ.
ಹೊರಗಿನಿಂದ ನಾನದರ ವಿರುದ್ಧ ಬಂಡಾಯವೆದ್ದರೂ ಸಹ
ಅದು ನನಗೆ ಅವಶ್ಯವೆಂದು ಗೊತ್ತು.
ನನ್ನನ್ನು ಪರಿಹಾಸ್ಯ ಮಾಡಬೇಡಿ, ಮುಖ್ಯವಾಗಿ 
ನನ್ನ ಸಹಪಾಠಿಗಳ ಮುಂದೆ- ನೋವಾಗುತ್ತದೆ.
ನಿಮಗೆ ಎದುರುತಿರುಗುವಂತೆ ಮಾಡುತ್ತದೆ.
ಖಾಸಗಿಯಾಗಿ ನಿಜವಾದ ಭಾವನೆಯಿಂದ ನೀವಾಡುವ ಒಂದು ಹಿತನುಡಿ,
 ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ನನಗೆ ಕರುಣೆ ತೋರಿಸಬೇಡಿ, ವಿಶೇಷವಾಗಿ ಇತರರ ಮುಂದೆ.
ನಾನಷ್ಟು ಯಶಸ್ವಿಯಾಗದಿದ್ದರೆ, ನಿಮ್ಮ ಕರುಣೆ ಮುಜುಗರವೆನಿಸುತ್ತದೆ.
ತರಗತಿಯಲ್ಲಿ ಇನ್ನೊಬ್ಬ ವಿದ್ಯಾರ್ಥಿಯನ್ನು ನನಗೆ ಉದಾಹರಣೆಯೆಂದು ತೋರಿಸಬೇಡಿ.
ನಾನು ಆಕೆಯನ್ನು ಮತ್ತು ನಿಮ್ಮನ್ನಿಬ್ಬರನ್ನೂ ದ್ವೇಷಿಸಬಹುದು.
ನಾನೊಂದು ವೇಳೆ ಚೆನ್ನಾಗಿ ಮಾಡಿದರೂ,
 ಇತರರಿಗೆ ನನ್ನನ್ನು ಮಾದರಿಯಾಗಿ ತೋರಿಸಬೇಡಿ.
ನನಗೆ ಬಹಳ ಮುಜುಗರವಾಗುತ್ತದೆ.
ಆದರೆ ಆಗಾಗ ನನಗೆ ಸಲ್ಲಬೇಕಾದ ಶಬಾಶ್ ನೀಡಿದರೆ 
ಅದು ಸ್ವಾಗತಾರ್ಹ.
ನೆನಪಿಡಿ ನೀವು ನಮ್ಮಂತೆ ಒಮ್ಮೆ ವಿದ್ಯಾರ್ಥಿಯಾಗಿದ್ದಿರಿ.
ನಿಮಗೆ ಯಾವಾಗಲೂ ಅತಿ ಹೆಚ್ಚಿನ ಅಂಕಗಳೇ ಬರುತ್ತಿತ್ತೇ?
ನೀವು ಏನನ್ನು ಮರೆಯುತ್ತಿರಲಿಲ್ಲವೇ?
ದಯವಿಟ್ಟು ನಿರಂತರವಾಗಿ ಓದುತ್ತಿರಿ,
ಯಾಂತ್ರಿಕವಾಗಿ 20 ವರ್ಷಗಳ ಹಿಂದೆ ಬರೆದ
ಅದೇ ಹಳದಿ ಬಣ್ಣಕ್ಕೆ ತಿರುಗಿರುವ ಟಿಪ್ಪಣಿಯನ್ನು 
ಯಾಂತ್ರಿಕವಾಗಿ ತರಗತಿಯಲ್ಲಿ ಬಳಸಬೇಡಿ.
ಪದೇ ಪದೇ ನಿಮಗೆ ವಂದನೆ ಎನ್ನಬೇಕೆಂದು ನಿರೀಕ್ಷಿಸಬೇಡಿ.
ನನ್ನಲ್ಲಿ ಕೃತಜ್ಞತೆ ಇದೆ, ಆದರೆ ಅದನ್ನು ಪದಗಳಲ್ಲಿ
ವ್ಯಕ್ತಪಡಿಸುವುದು ನನಗೆ ಕಷ್ಟಕರ.
ಮತ್ತೆ.  . . . . . ನಿಮಗೆ ನನ್ನ ಕೃತಜ್ಞತೆಗಳು
           ನಿಮ್ಮ ಪ್ರೀತಿಯ ವಿದ್ಯಾರ್ಥಿ       
- ಅನಾಮಿಕ
(ಇಂಗ್ಲಿಷ್ ನಿಂದ ಅನುವಾದ 
ಡಾ. ಸುಧಾ ಜಿ)
 

ಲೇಖನ - ರಂಗಭೂಮಿ

ಜನರ ಬಳಿಗೆ ಹೋಗುವ ಬಗ್ಗೆ- ಸ್ಟಾನಿಸ್ಲಾವ್‍ಸ್ಕಿ

...ನಾವು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವದ ಗುಣ ಗಣನೆಗೆ ಬರುತ್ತದೆಯೋ ಹೊರತು ಪ್ರಭಾವ ಬೀರುವ ಶಕ್ತಿಯಲ್ಲ ಎನ್ನುವುದನ್ನು ಈಗ ಸ್ಪಷ್ಟವಾಗಿ ಗ್ರಹಿಸುತ್ತಿದ್ದೇವೆ: ಮೇಲುಮೇಲಿನ ಪರಿಣಾಮ ಬೀರುವುದು ರಂಗಭೂಮಿಯ ಉದ್ದೇಶವಲ್ಲ. ಸಾರ್ವಜನಿಕರು ಹುಯಿಲೆಬ್ಬಿಸುವಂತೆ, ಗದ್ದಲವೆಬ್ಬಿಸುವಂತೆ ಮಾಡುವುದಕ್ಕಿಂತ ಅವರು ಬಹಳ ದೀರ್ಘಕಾಲದ ಪ್ರಭಾವಕ್ಕೆ ಒಳಗಾಗುವಂತೆ, ಆ ಪ್ರಭಾವವು ಅವರ ಹೃದಯದಾಳಕ್ಕಿಳಿದು, ಬೇರುಬಿಟ್ಟು, ಅವರ ಜೀವನದ ಒಂದು ಭಾಗದಂತೆ ಸದಾಕಾಲ ಉಳಿಯುವಂತೆ ಮಾಡುವುದು ಹೆಚ್ಚು ಪ್ರಯೋಜನಕಾರಿ.
ರಂಗಭೂಮಿಯ ಪ್ರಭಾವಗಳು ಜೀವಂತ ಪ್ರಭಾವಗಳಾದರೆ, ನಾಟಕದೊಳಗಿನ ನಟರು ಜನರಿಗೆ ಹೆಚ್ಚು ಹತ್ತಿರವಾದರೆ, ಆತ್ಮೀಯ ಸ್ನೇಹಿತರಾದರೆ ಅದು ಪಾರವಿಲ್ಲದಷ್ಟು ಪ್ರಯೋಜನಕಾರಿಯಾಗುತ್ತದೆ. ಹಿಂದಿನ ಕಾಲದ ಮಹಾನ್ ನಟರೆಲ್ಲರೂ ಇಂತಹದೊಂದು ಸಂಬಂಧಕ್ಕೆ ಬರಲು ಬಯಸಿದರು. ಆ ಮಹಾನ್ ನಟರು ಬಿಟ್ಟುಹೋದ ಪರಂಪರೆಯನ್ನು ನಂತರ ಬಂದ ಜನಾಂಗಗಳು ಅರ್ಥಮಾಡಿಕೊಂಡಿರುವುದು ಮತ್ತು ಉಪಯೋಗಿಸುತ್ತಿರುವುದು ಅದೆಷ್ಟು ಅಲ್ಪವೆನ್ನುವುದನ್ನು ನೊಡಿದರೆ ಅವರು ಅದೆಷ್ಟು ನೊಂದುಕೊಳ್ಳುತ್ತಾರೆ !
ಜನರು ರಂಗಭೂಮಿಯಿಂದ ಏನನ್ನು ಬಯಸುತ್ತಾರೋ ಅದರಲ್ಲಿ ಬದಲಾವಣೆಗಳು ಬಹಳ ಬೇಗ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಸೂಕ್ಷ್ಮವಾಗಿದ್ದಾರೆ. ಅವರು ರಂಗದ ಮೇಲೆ ನಿಜವಾದ ಜೀವನವನ್ನು ನೋಡಲು ಬಯಸುತ್ತಾರೆ  ಕೇವಲ ಅದರ ಬಾಹ್ಯ ಪ್ರದರ್ಶನವಲ್ಲ, ಬದಲಿಗೆ ಅದರ ಆಳವಾದ ಸಾರ, ನಿಜವಾದ ಭಾವನೆಗಳು, ಅದರ ನೈಜ ತರ್ಕ, ನಿಜವಾದ ಸಾಮಾನ್ಯ ಚಲನೆಗಳು. ನೀವು 'ವೈಚಾರಿಕ ಸಹಜತೆ' ಎಂದು ಕರೆಯಬಹುದಾದ ಈ ಆಂತರಿಕ ಜೀವಂತಿಕೆಯನ್ನು ಸಾಧಿಸಲು, ಒಂದು ಅತ್ಯಂತ ಪ್ರಮುಖವಾದ ನಿಬಂಧನೆಯಿದೆ: ನೀವು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ರಂಗದ ಮೇಲೆ ಜೀವಿಸಬಾರದು, ನೀವು ನಿಮಗಾಗಿಯೇ ಜೀವಿಸಬೇಕು.
ಒಬ್ಬ ನಟ ಕೇವಲ ಜನರಿಗೆ ಮನರಂಜನೆ ನೀಡುವುದಕ್ಕೆ ನಟಿಸುವುದು ಕಡಿಮೆಯಾದಷ್ಟು ಅವರೊಂದಿಗೆ ಅವನ ಸಂಬಂಧವು ಹೆಚ್ಚು ಗೌಪ್ಯವಾಗಿರುತ್ತದೆ ಮತ್ತು ವರ್ಣಿಸಲು ಸಾಧ್ಯವಾಗುವುದಿಲ್ಲ.  ಅದು ಹೆಚ್ಚು ಆಪ್ತ ಮತ್ತು ಗಾಢವಾಗಿರುತ್ತದೆ.
ನಾವು ಯಾರ ಮನಸ್ಸನ್ನು ಗೆದ್ದಿದ್ದೇವೆಯೋ ಅವರು ನಮ್ಮಿಂದ ಮನರಂಜನೆ ಪಡೆದ ಜನರಷ್ಟೇ ಆಗದೆ, ಆಲೋಚಿಸುವ ಮತ್ತು ಭಾವನೆಗಳುಳ್ಳ ಮಾನವ ಜೀವಿಗಳಾದರೆ ಅದು ನಮ್ಮ ಅತ್ಯಂತ ಮುಖ್ಯವಾದ ಸಾಧನೆಯೆಂದೇ ಪರಿಗಣಿಸುತ್ತೇನೆ.
ಈ ಹದಿನೈದು ವರ್ಷಗಳಲ್ಲಿ ನಮ್ಮ ರಂಗಭೂಮಿಯು ಮಹೋನ್ನತವಾದ ಮತ್ತು ಸಂಕೀರ್ಣವಾದ ವಿಕಾಸದ ಹಾದಿಯನ್ನು ಸವೆಸಿ ಬಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.  ನಾವು ನಮ್ಮ ಹುಡುಕಾಟದಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಒಂದು ಸುತ್ತು ಸುತ್ತಿ ಬಂದಿದ್ದೇವೆ...
ಏಕೆಂದರೆ, ನಾವು ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಸದಾ ಹುಡುಕಾಟದಲ್ಲಿದ್ದೇವೆ. ನಾವು ಸತ್ಯಕ್ಕಾಗಿ, ಉದಾತ್ತ ಭಾವನೆಗಳಿಗಾಗಿ ಹುಡುಕಾಟದಲ್ಲಿದ್ದೆವು; ಅವುಗಳನ್ನು ಒಂದು ವಾಸ್ತವವಾದಿ ರಂಗಭೂಮಿಯಲ್ಲಿ, ಒಂದು ಶೈಲೀಕೃತ ರಂಗಭೂಮಿಯಲ್ಲಿ ಹುಡುಕಿದೆವು. ...ನಮ್ಮ ಆರಂಭದ ಕಾಲಘಟ್ಟದ ಗುರುತಾಗಿರುವ ಬಾಹ್ಯ ವಾಸ್ತವವಾದದಿಂದ ಈಗ 'ವೈಚಾರಿಕ ವಾಸ್ತವವಾದ'ವೆಂದು ಕರೆಯಬಹುದಾದ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ.
ನಾವು ಹಾದುಬಂದ ಘಟ್ಟಗಳನ್ನು ಗುರುತಿಸಲು ನಮ್ಮ ನಾಟಕಗಳ ಲೇಖಕರ ಹೆಸರನ್ನು ಸೂಚಿಸಿದರೆ ಸಾಕಾಗುತ್ತದೆ.
1. ಅಲೆಕ್ಸಿ ಟಾಲ್‍ಸ್ಟಾಯ್: ಫ್ಯೂದೊರ್ ಇವಾನೊವಿಚ್: ನಾವು ಈ ನಾಟಕವನ್ನು ಅಪ್ಪಟ ವಾಸ್ತವವಾದಿ ದೃಷ್ಟಿಕೋನದಿಂದ ನೋಡಿದೆವು. ಆದರೆ ಈ ವಾಸ್ತವವಾದವು ಚರ್ವಿತಚರ್ವಣವಾಗಿದೆ, ತಥಾಕಥಿತ ನಟನೆ, ಅಪಾರ್ಥ ಮಾಡಿಕೊಂಡ ಹಳೆಯ 'ಪರಂಪರೆ'ಗಳ ವಿರುದ್ಧ ಪ್ರತಿಭಟನೆಯಾಗಿತ್ತು. ಅದು ಕಪಟ ರೊಮ್ಯಾಂಟಿಸಿಸಮ್‍ಗೆ ವಿರುದ್ಧವಾದ ಪ್ರತಿಕ್ರಿಯೆಯಾಗಿತ್ತು; ರಕ್ತಮಾಂಸ ತುಂಬಿಲ್ಲದ ಬರಿಯ ಪೊಳ್ಳು ತಂತ್ರಗಾರಿಕೆಯಿಂದ ತುಂಬಿದ ನಟನೆಗೆ ವಿರುದ್ಧವಾಗಿತ್ತು. ರಂಗಭೂಮಿಯ ಕಲೆಯು ಕೇವಲ ಒಂದು ಪಾತ್ರವನ್ನು ಪ್ರದರ್ಶಿಸುವ ಕಲೆಯಲ್ಲ, ಅದು ಅನುಭವಿಸುವ ಕಲೆಯಾಗಬೇಕು. ನೀವು ಪ್ರದರ್ಶನ ಕಲೆಯನ್ನು ಹೊಗಳಬಹುದು, ಆದರೆ ಅದರ ಮೇಲೇಯೇ ಆಧಾರವಾಗಿರಲು ಸಾಧ್ಯವಿಲ್ಲ... ಈ ಪ್ರಾತಿನಿಧಿಕ ಶೈಲಿಯ ತಥಾಕಥಿತ ನಟರ ವಿರುದ್ಧ ಜನಸಮಾನ್ಯರು ಈಗಾಗಲೇ ದಂಗೆಯೆದ್ದಿದ್ದಾರೆ.  ಅವರದೇ ಜೀವನದ ತರ್ಕಗಳ ಮೇಲೆ ಆಧಾರಪಟ್ಟಿರುವ ನಿಜವಾದ ಭಾವನೆಗಳನ್ನು ನೋಡಲು ಜನ ಬಯಸುತ್ತಾರೆ.
2. ಆ್ಯಂಟನ್ ಚೆಖಾವ್: ನಮ್ಮ ವಿಕಾಸದಲ್ಲಿ ಚೆಖಾವ್ ಅವರದ್ದು ನಿರ್ಧಾರಕ ಪಾತ್ರ. ನಮಗೆ ಆರಂಭದಲ್ಲಿ, ಬಹುಶಃ ಸುಪ್ತಪ್ರಜ್ಞೆಯಲ್ಲಿ, ಅಂದರೆ ನಮಗರಿವಿಲ್ಲದೆಯೇ ಚೆಖಾವ್ ನಾಟಕಗಳಲ್ಲಿ ಪದಗಳ ಪದರದಡಿಯಲ್ಲಿ ಅಡಗಿದ 'ಜೀವ'ವನ್ನು, 'ಆಂತರಿಕ ಹರಿವ'ನ್ನು ಚಿತ್ರಿಸಲು ಸಾಧ್ಯವಾಯಿತು. ಏಕೆಂದರೆ ಚೆಖಾವ್ ಪಾತ್ರಗಳು ಕೆಲವು ಪದಗಳನ್ನು ಉಪಯೋಗಿಸುತ್ತವೆ. ಆದರೆ ಅವುಗಳು ತಮ್ಮ ಜೀವನ ಮತ್ತು ಭಾವನೆಗಳನ್ನು ಬಹಿರಂಗಗೊಳಿಸುವುದಿಲ್ಲ. ಈ ಪದಗಳ ಹಿಂದೆ 'ಮಾನವನ ಮಾಧುರ್ಯ'ವು ಅಡಗಿರುತ್ತದೆ. ಆದರೆ ನಾವೀಗ ಹೆಚ್ಚು ಸೂಕ್ಷ್ಮವಾಗಿ ಆಳವಾಗಿ ನಟಿಸುತ್ತೇವೆ. ಚೆಖಾವ್ ಎಂದಿಗೂ ನಮ್ಮ ನಾಟಕಕಾರರು.
3. ಮ್ಯಾಕ್ಸಿಂ ಗಾರ್ಕಿ: ಅವರು ನಮಗೆ ಅತ್ಯಂತ ಆತ್ಮೀಯರು; ಅದಕ್ಕೆ ಕಾರಣ ಅವರ ಬೋಧನೆಗಳು. ಅವರು ನಟನೆಯಲ್ಲಿ ಹೊಸ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. 
4. ಹೆನ್ರಿಕ್ ಇಬ್ಸನ್ : ಅವರ ತತ್ವಶಾಸ್ತ್ರವು ನಮ್ಮನ್ನು ಆಕರ್ಷಿಸಿತು. ಇಬ್ಸನ್‍ರವರ ಕುತೂಹಲಕಾರಿ ಅಂಶವಾದ ಅವರ ವೈಚಾರಿಕಾ ಶಕ್ತಿ, ತರ್ಕಶಕ್ತಿಗಳನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸಿದೆವು.
5. ಕೆ. ಹಮ್ಸನ್: ಜೀವನದ ನಾಟಕ: ಶೈಲೀಕೃತ ರಂಗಭೂಮಿಯಲ್ಲಿ ಇದೊಂದು ಪ್ರಯೋಗ. 'ಮಹಾ ಪ್ರವಾಹಗಳು', ಆಂತರಿಕ ಭಾವನೆಗಳ ಬೃಹತ್ ಗಾತ್ರಗಳು 'ಜೀವನದ ನಾಟಕ'ದಲ್ಲಿರುವ ಅತ್ಯಂತ ಮುಖ್ಯವಾದ ಅಂಶಗಳು  ಅದನ್ನು ಶೈಲೀಕರಣದ ಮಾರ್ಗದಲ್ಲಿ ಚಿತ್ರಿಸಲು ಪ್ರಯತ್ನಿಸಿದೆವು.
6. ಇವಾನ್ ತುರ್ಗೆನೆವ್: ಅವರ ಅಗಾಧ ಒಳಾರ್ಥಗಳಿಂದಾಗಿ ತುರ್ಗೆನೆವ್ ನಮಗೆ ಬಹಳ ಮುಖ್ಯ ಬರಹಗಾರರಾಗಿದ್ದರು. ಹೊರನೋಟದ ದೃಷ್ಟಿಯಿಂದ ಅದೆಷ್ಟು ಕಟ್ಟುನಿಟ್ಟಾಗಿ ಅವರ ನಾಟಕಗಳನ್ನು ಅಣಿಗೊಳಿಸಿದೆವು, ನಮ್ಮ ಆಂಗಿಕ ಅಭಿನಯವನ್ನು ಅದೆಷ್ಟು ಮಿತಗೊಳಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ... ಮತ್ತೆ ಹ್ಯಾಮ್‍ಸನ್ ಹಾಗೂ ತುರ್ಗೆನೆವ್ ನಡುವೆ ದಾಸ್ತೊಯೆವ್‍ಸ್ಕಿಯನ್ನು ಮಧ್ಯೆ ಸೇರಿಸುತ್ತೇನೆ; ದಾಸ್ತೊಯೆವ್‍ಸ್ಕಿ ನಟರಿಗೆ ಮೂಲಭೂತ ಗುಣಗಳನ್ನು, ಉದ್ವೇಗಗಳನ್ನು, 'ಜೀವನದ ನಾಟಕ'ದ ಉದ್ದಕ್ಕೂ ಹರಿಯುವ ಅದೇ ಭಾವೋದ್ವೇಗಗಳನ್ನು ತೋರಿಸುವ ಅವಕಾಶ ನೀಡುತ್ತಾರೆ.
7. ಮೋಲಿಯೇರ್: ಅವರ 'ಕಾಲ್ಪನಿಕ ನಿಷ್ಪ್ರಯೋಜಕ' ನಾಟಕದಲ್ಲಿ ಆಂತರಿಕ ಅನುಭವವನ್ನು, ಒಂದು ರೀತಿಯ 'ಆಂತರಿಕ ಸಂಗೀತದ ಪ್ರಸ್ತಾರ'ದ ರೀತಿಯನ್ನು ಸಾಧಿಸಲು ಪ್ರಯತ್ನಿಸಿದೆವು. ಹಾಗಿದ್ದಾಗ್ಯೂ ಅದನ್ನು ನಿರಂತರವಾದ ಜೀವನದ ಆಪ್ತ ಸಂಬಂಧದ ಮೇಲೆ ಆಧಾರವಾಗಿರಿಸಬೇಕಿತ್ತು.
ಕಾಲ್ಪನಿಕ ನಿಷ್ಪ್ರಯೋಜಕದಲ್ಲಿ ಬಳಸಿದ ಪ್ರಖ್ಯಾತ ವಾದ್ಯಕ್ಕಾಗಿ ನಮ್ಮನ್ನು ನಿಂದಿಸಿದರು; ಏಕೆಂದರೆ ಅದರಲ್ಲಿ ಜೀವನದ ದುರಂತದ, ಅದರ ನಿಜವಾದ ಸತ್ಯದ ವಿವರವನ್ನು ಜನರು ಗುರುತಿಸುವುದಿಲ್ಲ... ಏನೇ ಆಗಲಿ, ರಾಜನ ಪ್ರಶ್ನೆಗೆ ಮೋಲಿಯೇರ್ ಉತ್ತರ: ಅದೇ ಜೀವನ.
ಈ 'ಆಂತರಿಕ ಸಂಗೀತದ ಪ್ರಸ್ತಾರ'ವು ಅತ್ಯಂತ ಸ್ವಪ್ರೇರಣೆಯ ಮೇಲೆ, ಸಹಜವಾದ (ಸಹಜತೆಯ ಅರ್ಥದಲ್ಲಿ) ಭಾವನೆಗಳ ಮೇಲೆ ಆಧಾರವಾಗಿರಬೇಕು. 
ನಾಟಕವನ್ನು ತಯಾರು ಮಾಡುತ್ತಿರುವ ನಿರ್ದೇಶಕನನ್ನು ರಸಾಯನತಜ್ಞನಿಗೆ ಹೋಲಿಸಬಹುದು. ಅವನ ಮುಂದೆ ಲೇಖಕ ಮತ್ತು ನಟರಿರುತ್ತಾರೆ. ಅವನು ಅವರಿಬ್ಬರ ನಿಜವಾದ ಸಾರವನ್ನು ಕಂಡು ಹಿಡಿದು, ಅವರನ್ನು ಒಂದು ರೀತಿಯ ಬಟ್ಟಿ ಇಳಿಸುವಿಕೆಗೆ ಹಾಕುತ್ತಾನೆ. ನಂತರ ಕಾಯುತ್ತಾನೆ. ಒಂದು ರೀತಿಯ ಸಮರಸ ಬರುವವರೆಗೆ, ದೀರ್ಘಕಾಲದವರೆಗೆ ಕಾಯುತ್ತಾನೆ. ಐದು ತಾಲೀಮುಗಳಲ್ಲಿ ನಾಟಕ ತಯಾರಾಗಬೇಕೆನ್ನುವ ಜನರು, ರಬ್ಬರ್ ಸ್ಟಾಂಪ್ ಮಾದರಿಯ ನಟನೆಯ ಬಗ್ಗೆ ಮಾತನಾಡುತ್ತಾರೋ ಹೊರತು, ಸೃಜನಶೀಲ ನಟನೆಯ ಬಗ್ಗೆ ಅಲ್ಲ.
ನಾವು ಆರು ತಿಂಗಳಿಗೇ ಹುಟ್ಟಿದ ಮಗುವಿಗೆ ಏನನ್ನುತ್ತೇವೆ ? ಅದನ್ನು ಪೂರ್ಣ ಬೆಳೆಯದ ಮಗುವೆನ್ನುತ್ತೇವೆ. ನಾಟಕವನ್ನು ಆತುರದಲ್ಲಿ ಪ್ರದರ್ಶಿಸಿದರೆ, ಅದನ್ನೂ ಹಾಗೆಯೇ ಕರೆಯುತ್ತೇವೆ. ಅದೂ ಸಹ ಪೂರ್ಣವಾಗಿ ಬೆಳೆಯದ ಮಗು...
ಆದರೆ ನಮ್ಮ ರಂಗಭೂಮಿಯ ನಿರ್ದೇಶಕರು ಸಹ ಇಡೀ ವಿಕಾಸವನ್ನು ಹಾದುಹೋಗಿದ್ದಾರೆ. ಹಿಂದಿನ ಕಾಲದಲ್ಲಿ ನಿರ್ದೇಶಕರಾದ ನಾವೇ ರಂಗಸಜ್ಜಿಕೆ, ಸೀನರಿ, ನಾಟಕ - ಎಲ್ಲವನ್ನು ಅಣಿಗೊಳಿಸಿ ನಟರಿಗೆ ಹೇಳುತ್ತಿದ್ದೆವು: “ಈ ರೀತಿ ನಟಿಸು.” ಈಗ ಅವರ ಅವಶ್ಯಕತೆಗಳನ್ನು ಮತ್ತು ಅವರಿಗೆ ಎಲ್ಲಕ್ಕಿಂತ ಹೆಚ್ಚಾಗಿ ಯಾವುದು ಅವರ ಮನಸೆಳೆಯುತ್ತಿದೆಯೆಂದು ಸರಿಯಾಗಿ ನಿರ್ಧರಿಸಿದ ನಂತರವೇ ನಟರಿಗೆ ಎಲ್ಲವನ್ನೂ ತಯಾರಿ ಮಾಡಿಕೊಡುತ್ತೇವೆ.
ನಾವು ಇಲ್ಲಿಗೆ ಬಂದು ತಲುಪಿದ್ದೇವೆ: ನಾವು “ವೈಚಾರಿಕ ವಾಸ್ತವವಾದ”ಕ್ಕೆ ಬಂದಿದ್ದೇವೆ.

ಸೂಕ್ತಿಗಳು:

ಮೇಲುಮೇಲಿನ ಪರಿಣಾಮ ಬೀರುವುದು ರಂಗಭೂಮಿಯ ಉದ್ದೇಶವಲ್ಲ. ಸಾರ್ವಜನಿಕರು ಹುಯಿಲೆಬ್ಬಿಸುವಂತೆ, ಗದ್ದಲವೆಬ್ಬಿಸುವಂತೆ ಮಾಡುವುದಕ್ಕಿಂತ ಅವರು ಬಹಳ ದೀರ್ಘಕಾಲದ ಪ್ರಭಾವಕ್ಕೆ ಒಳಗಾಗುವಂತೆ, ಆ ಪ್ರಭಾವವು ಅವರ ಹೃದಯದಾಳಕ್ಕಿಳಿದು, ಬೇರುಬಿಟ್ಟು, ಅವರ ಜೀವನದ ಒಂದು ಭಾಗದಂತೆ ಸದಾಕಾಲ ಉಳಿಯುವಂತೆ ಮಾಡುವುದು ಹೆಚ್ಚು ಪ್ರಯೋಜನಕಾರಿ.

ನಾವು ಯಾರ ಮನಸ್ಸನ್ನು ಗೆದ್ದಿದ್ದೇವೆಯೋ ಅವರು ನಮ್ಮಿಂದ ಮನರಂಜನೆ ಪಡೆದ ಜನರಷ್ಟೇ ಆಗದೆ, ಆಲೋಚಿಸುವ ಮತ್ತು ಭಾವನೆಗಳುಳ್ಳ ಮಾನವ ಜೀವಿಗಳಾದರೆ, ಅದು ನಮ್ಮ ಅತ್ಯಂತ ಮುಖ್ಯವಾದ ಸಾಧನೆಯೆಂದೇ ಪರಿಗಣಿಸುತ್ತೇನೆ.

- (ಅನುವಾದ - ಎಸ್.ಎನ್.ಸ್ವಾಮಿ)     

ಕಥೆ - ಅಂಗುಲಿಮಾಲ



ಅಂದು ಸಂಜೆ ಬೇಸರದಿಂದ ಹೊರಗೆ ಕುಳಿತಿದ್ದೆ. ಬೆಳಿಗ್ಗೆ ಟೀಚರ್ ಮಾಡಿದ ಅಂಗುಲಿಮಾಲನ ಪಾಠ ನನ್ನ ಮನಸ್ಸನ್ನು ಕದಡಿತ್ತು. ಪಾಠವನ್ನು ಆರಂಭಿಸಿ ಅಂಗುಲಿಮಾಲನ ಚಿತ್ರಣವನ್ನು ನೀಡುವಷ್ಟರಲ್ಲಿ ಬೆಲ್ ಹೊಡೆದಿತ್ತು, ಪಾಠ ಅರ್ಧಕ್ಕೆ ನಿಂತುಹೋಗಿತ್ತು.
ಅದೇಕೊ ಏನೊ ಆ ವ್ಯಕ್ತಿಯ ಬಗ್ಗೆ ಬಹಳ ಅಸಹ್ಯವೆನಿಸಿತು. ಮನುಷ್ಯರ ಹೆಬ್ಬೆರಳುಗಳನ್ನು ಕಡಿದು ಮಾಲೆಯನ್ನು ಹಾಕಿಕೊಂಡ ಆತ ಅದೆಂಥ ಕಟುಕ ಎನಿಸಿತು.
ಟೀ ಕೂಡ ಕುಡಿಯಬೇಕೆನಿಸಿರಲಿಲ್ಲ. ವಾಕಿಂಗ್ ಹೋಗಿದ್ದ ತಾತ ಬಂದು ಎದುರಿಗೆ ನಿಂತು, “ಏನಾಯ್ತು ನನ್ನ ಪುಟ್ಟಿಗೆ?” ಕೇಳಿದರು.
ತಾತನ ಜೊತೆ ನನ್ನ ಬಾಂಧವ್ಯ ಬಹಳ ಗಾಢ. ನನಗಷ್ಟೆ ಅಲ್ಲ ಅವರು ಇಡೀ ಹಳ್ಳಿಗೆ, ಅಷ್ಟೇಕೆ ಹತ್ತಾರು ಹಳ್ಳಿಗಳಿಗೆ ಬೇಕಾದವರು.
ನನ್ನ ಕಷ್ಟದುಃಖಗಳನ್ನೆಲ್ಲಾ ನಾನು ಹಂಚಿಕೊಳ್ಳುತ್ತಿದ್ದದ್ದು ತಾತನ ಜೊತೆಯೇ. ಹಾಗಾಗಿ ತಾತ ಕೇಳಿದ್ದೆ ಸಾಕೆನ್ನುವಂತೆ ನನ್ನ ಮನಸ್ಸಿನ ಭಾವನೆಗಳೆಲ್ಲಾ ಹೊರಬಂದವು.
“ತಾತ, ಇವತ್ತು ಅಂಗುಲಿಮಾಲ ಪಾಠ ಮಾಡಿದ್ರು. ನಿನಗ್ಗೊತ್ತಾ ಅವನ ಬಗ್ಗೆ. ಛೀ, ಥೂ ಅಂಥಾ ಪಾಠ ಯಾಕಾದ್ರೂ ಇಡ್ತಾರೋ. ನೆನಸಿಕೊಂಡರೆ ಅಸಹ್ಯ ಅನ್ನಿಸ್ತಾ ಇದೆ.”
ತಾತ ನಗುತ್ತಾ, “ಪಾಠ ಪೂರ್ತಿ ಆಗಿಲ್ಲ ಅನಿಸುತ್ತೆ” ಎಂದರು.
ಆಶ್ಚರ್ಯವಾಯಿತು ನನಗೆ. “ನಿನಗೆ ಹೇಗೆ ಗೊತ್ತು ತಾತ?”
“ಹೇಗೆ ಗೊತ್ತು ಅಂದ್ರೆ......” ಸ್ವಲ್ಪ ತಡೆದು, “ನಿನ್ನ ಈ ತಾತ ಕೂಡ ಒಂದು ರೀತಿಯ ಅಂಗುಲಿಮಾಲನಾಗಿದ್ದ” ಹೇಳಿದರು.
ಶಾಕ್ ಹೊಡೆದಂತಾಯಿತು. “ತಾತ, ನೀನು....ಅಂಗುಲಿಮಾಲ.....ಸಾಧ್ಯವೇ ಇಲ್ಲ......ನಮ್ಮ ಪಾಠದಲ್ಲಿ ಬರೋ ಅಂಗುಲಿಮಾಲ ಯಾರು ಗೊತ್ತಾ......ನಿನಗೆ ಗೊತ್ತಿಲ್ಲ ಅನಿಸುತ್ತೆ.”
“ಬೆರಳನ್ನು ಕಡಿದು ಮಾಲೆ ಹಾಕಿಕೊಂಡವನಲ್ಲವೇ?”
“ತಾತ...ನೀನು.....ಕನಸಿನಲ್ಲಿಯೂ ನಾನು ಊಹಿಸಿಕೊಳ್ಳಲಾರೆ. ನಿನ್ನಷ್ಟು ಒಳ್ಳೆಯವರು.......” ತಾತನನ್ನು ಅಪ್ಪಿಕೊಂಡು ಅತ್ತುಬಿಟ್ಟೆ.
ನನ್ನನ್ನು ಸಮಾಧಾನ ಮಾಡುತ್ತಾ ತಾತ, “ನಾನು ಹೇಳ್ತಾ ಇರೋದು ಈಗಿನ ನಿಮ್ಮ ತಾತನ ಬಗ್ಗೆ ಅಲ್ಲಮ್ಮ. ಸುಮಾರು 45-50 ವರ್ಷಗಳ ಹಿಂದಿನ ಮಾತು.”
“ಹಾಗಂದ್ರೆ ಏನು ತಾತ?”
ತಾತ ಮಾತು ಶುರುಮಾಡುವಷ್ಟರಲ್ಲಿ ಅಮ್ಮ ಊಟಕ್ಕೆ ಕರೆದಳು. “ಅಮ್ಮ, ಪ್ಲೀಸ್, ಸ್ವಲ್ಪ ಹೊತ್ತಾದ ಮೇಲೆ ಬರ್ತೀವಿ” ಎಂದೆ.
“ನೀನು ಯಾವಾಗ ಬೇಕಾದ್ರೂ ಊಟ ಮಾಡು. ಆದ್ರೆ ತಾತನನ್ನು ಕಳಿಸು. ಅವರು ಔಷಧಿ ತೆಗೆದುಕೊಬೇಕು.”
ಒಲ್ಲದ ಮನಸ್ಸಿನಿಂದಲೇ ಊಟಕ್ಕೆ ಕುಳಿತೆ. ಊಟ ಮುಗಿಸಿ ಬರೋವರೆಗೆ ಆ ವಿಷಯವೇ ಕೊರೆಯುತ್ತಿತ್ತು.
“ತಾತ ನಿದ್ರೆ ಮಾಡಲಿ ಬಿಡು” ಎಂದು ಅಮ್ಮ ಹೇಳುತ್ತಿದ್ದರೂ ಕೇಳದೆ ತಾತನ ಕೈ ಹಿಡಿದುಕೊಂಡೇ ಅವರ ರೂಮಿಗೆ ಹೋದೆ.
ಛೇರಿನ ಮೇಲೆ ಕುಳಿತುಕೊಂಡು ತಾತ, “ಈಗ ಹೇಳು ಅಂಗುಲಿಮಾಲನ ಬಗ್ಗೆ ನಿನಗೇನನಿಸಿತು?”
“ಅಬ್ಬಾ, ಎಂಥಾ ರಾಕ್ಷಸ? ಅದಕ್ಕೂ ನಿಮಗೂ ಸಂಬಂಧವಿದೆ ಎಂದು ಹೇಳಿರದಿದ್ದರೆ ನಾನು ಖಂಡಿತಾ ಆ ಪಾಠವನ್ನೇ ಮರೆತುಬಿಡಲು ತಯಾರಿದ್ದೆ.”
ಉತ್ತರಿಸಿ ಅವರ ಮುಖವನ್ನು ನೋಡಿದೆ. ಅವರು ಯಾವುದೋ ಲೋಕಕ್ಕೆ ಹೋದಂತಿತ್ತು. ಅವರ ಯೋಚನೆಗೆ ಭಂಗ ತರಲು ನಾನಿಚ್ಛಿಸಲಿಲ್ಲ. ಆದರೆ ಕುತೂಹಲ ತಡೆದುಕೊಳ್ಳಲಾಗದೆ, “ತಾತ, ತಾತ” ಎಂದೆ.
“ಆ....ಪುಟ್ಟಿ.....” ಈ ಲೋಕಕ್ಕೆ ಬರುತ್ತಾ ತಾತ, “ಅದು 1942ರ ಕಥೆ. ನನಗಾಗ 20 ವರ್ಷಗಳು. ನಾನು ಜೈಲಿನಲ್ಲಿದ್ದೆ” ಆರಂಭಿಸಿದರು.
“ಅರೆ, ತಾತ ನೀನು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆಯಾ? 42ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯಿತಂತೆ. ಏನೇನು ಮಾಡಿದೆ ತಾತ? ಇಷ್ಟು ದಿನ ಮತ್ತೆ ನನಗೆ ಹೇಳಿರಲೇ ಇಲ್ಲ. ನಾಳೇನೇ ನನ್ನ ಗೆಳತಿಯರಿಗೆ, ಮಿಸ್‍ಗೆ ಹೇಳ್ತೀನಿ” ಎಂದೆ ಉತ್ಸಾಹದಿಂದ.
‘ಇಲ್ಲಮ್ಮ, ಆಗ ನಾನು ಜೈಲಿಗೆ ಹೋಗಿದ್ದು ಕೊಲೆ ಮಾಡಿದ್ದರಿಂದ.” ಸಹಜವಾಗಿಯೇ ನುಡಿದರು.
ಆಘಾತವಾಯಿತು.
“ಆಶ್ಚರ್ಯವಲ್ಲವೇ? ಆದರೆ ಪೂರ್ತಿ ಕೇಳು.” ಹಾಗೆಯೇ ಗತಕ್ಕೆ ಇಳಿದುಹೋದರು.
“ಆಗ ನಾವು ಈಗಿನಂತೆ ಸ್ಥಿತಿವಂತರಾಗಿರಲಿಲ್ಲ. ಇರುವ ಜಮೀನನ್ನು ಅಪ್ಪ ಊರಿನ ಜಮೀನುದಾರನ ಹತ್ತಿರ ಅಡವಿಟ್ಟಿದ್ದರು. ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಬೆಳೆದು ಕೊನೆಗೆ ಆ ಜಮೀನುದಾರ ಜಮೀನನ್ನು ನುಂಗಿದ್ದೂ ಅಲ್ಲದೆ ಯಾರಾದರೂ ಜೀತ ಮಾಡಿದ್ರೆ ಮಾತ್ರ ಸಾಲ ತೀರುತ್ತೆ ಅಂದ. ಅಪ್ಪನಿಗೆ ವಯಸ್ಸಾಗಿತ್ತು. ಮನೆ ಹಿರಿಮಗ ನಾನು. ಇನ್ನೇನು ಮಾಡುವುದು? ನಾನೇ ಜೀತಕ್ಕೆ ಸೇರಿದೆ.”
“ಆ ಜಮೀನುದಾರ ಎಂಥಾ ಕಟುಕ ಅಂದ್ರೆ, ಎಷ್ಟೋ ಬಾರಿ ಇಡೀ ದಿನ ಏನೂ ತಿನ್ನಲು ಕೊಡದೆ ಕತ್ತೆ ತರಹ ದುಡಿಸಿಕೊಳ್ತಿದ್ದ. ನನಗಾಗ ಇನ್ನೂ 16 ವರ್ಷ. ಕಟ್ಟುಮಸ್ತಾಗಿದ್ದೆ. ಹೇಗೋ ದಿನಾ ತಳ್ತಿದ್ದೆ, ಮನೆಯವರ ಕಷ್ಟ ನೋಡ್ಬೇಕಲ್ಲಾ?”
“ಆದ್ರೆ ಒಂದಿನ ಆ ಜಮೀನುದಾರ ನನ್ನ ತಪ್ಪೇನೂ ಇಲ್ಲದೇನೆ ಚಾಟೀಲಿ ಹೊಡೆಯಲಾರಂಭಿಸಿದ. ನನಗೆ ಮೊದಲೇ ಮುಂಗೋಪ. ನಾನೂ ಸಿಟ್ಟಿನ ಭರದಲ್ಲಿ ಮರ ಕಡಿಯುತ್ತಿದ್ದ ಮಚ್ಚಿನಿಂದಲೇ ಹೊಡೆದುಬಿಟ್ಟೆ. ಅವನು ಅಲ್ಲೇ ಸತ್ತು ಬಿದ್ದ.”
“ನೀನು ಮಾಡಿದ್ದು ಸರೀನೇ ತಾತ” ಅಂದೆ ನಾನು.
“ನಾನೂ ಹಾಗೆ ಅಂದ್ಕೊಂಡೆ. ಎಲ್ಲರೂ ಓಡಿಹೋಗು ಅಂದ್ರು. ನಾನೇನೂ ಬೇಕೂ ಅಂತಾ ಹೊಡೀಲಿಲ್ಲವಲ್ಲ ಅಂದ್ಕೊಂಡು ಅಲ್ಲೇ ನಿಂತೆ. ಪೋಲಿಸರು ಅರೆಸ್ಟ್ ಮಾಡಿದ್ರು. ವಿಚಾರಣೆ ಅನ್ನೋ ನಾಟಕ ನಡೀತು. ಜಮೀನುದಾರ ನಮಗೆ ಮಾಡಿದ ಅನ್ಯಾಯದ ಬಗ್ಗೆ ಆ ಜಡ್ಜ್ ಕೇಳಲೇ ಇಲ್ಲ. 5 ವರ್ಷ ಜೈಲಲ್ಲಿರಬೇಕು ಅಂತ ತೀರ್ಪು ಓದೇ ಬಿಟ್ರು.”
ಮುಂದಕ್ಕೆ ಹೇಳಲು ಬಿಡದೆ ನಾನು, “ಬೇಡ ತಾತ. ಇನ್ಮುಂದೆ ಕಥೆ ಬೇಡ. ನೀನು ಜೈಲಿನಲ್ಲಿ ಕಷ್ಟ ಪಟ್ಟಿದ್ದನ್ನು ನಾನು ಕೇಳಲಾರೆ. ನೀನು ಏನೇ ಮಾಡಿದ್ರೂ ನನ್ನ ಪ್ರೀತಿಯ ತಾತಾನೇ. ಅದೆಲ್ಲಾ ಬೇಡ. ಪ್ಲೀಸ್, ಬೇಡ ತಾತ” ಎಂದೆ.
“ಭಯಾ ಆಯ್ತಾ ಪುಟ್ಟಿ? ಅದಕ್ಕೆ ಇಷ್ಟು ದಿನ ಹೇಳಿರಲಿಲ್ಲ. ಆದ್ರೆ ಇಷ್ಟು ಕೇಳಿದ ಮೇಲೆ ಮುಂದಿನ ಕಥೆ ನೀನು ಕೇಳಲೇ ಬೇಕು. ಆಗ್ಲೆ ನಿನಗೆ ಅಂಗುಲಿಮಾಲನ ಬಗ್ಗೆ ಅರ್ಥ ಆಗೋದು” ಬೆನ್ನು ನೇವರಿಸುತ್ತಾ ಹೇಳಿದರು ತಾತ.
“ಬೇಡ ತಾತ, ಆ ಅಂಗುಲಿಮಾಲ ಢಕಾಯಿತ. ಸುಮ್ ಸುಮ್‍ನೆ ಎಲ್ಲರನ್ನೂ ಸಾಯಿಸ್ತಿದ್ದ. ನೀನು ಹಾಗಲ್ಲ. ನೀನು ನನ್ನ ಒಳ್ಳೆ ತಾತ.”
“ಪುಟ್ಟಿ ಅಂಗುಲಿಮಾಲನಾಗಿದ್ದ ತಾತ, ಈಗ ನಿನ್ನ ಮುಂದೆ ಇರೋ ತಾತ ಇಬ್ಬರೂ ಬೇರೆಬೇರೆ.”
“ಮತ್ತೆ ಅಷ್ಟೊತ್ತಿಂದ ನೀವೇ ಅಂತಾ ಹೇಳಿದ್ರಿ?”
“ವ್ಯಕ್ತಿ ಒಬ್ನೆ. ಆದ್ರೆ ಮನಸ್ಸು, ಅಂತರಾತ್ಮ ಬೇರೆ ಬೇರೆ.”
“ತಾತ ನೀನು ಒಗಟೊಗೊಟಾಗಿ ಮಾತಾಡ್ತಾ ಇದ್ದೀಯಾ.”
“ಕೊಲೆ ಮಾಡಿದ್ದು ನಿನ್ನ ತಾತಾನೇ. ಆಗ ಹಳ್ಳಿ ಜನ ನನ್ನ ಕಂಡ್ರೆ ಹೆದರಿ ನಡುಗ್ತಾ ಇದ್ರು. ಈಗ ಅದೇ ಹಳ್ಳಿ ಜನ ನನ್ನ ಪ್ರೀತಿಸ್ತಾರೆ.”
“ಅದ್ ಹೇಗೆ ತಾತ?”
“ಅದನ್ನೇ ಹೇಳೋಕೆ ಹೊರಟಿದ್ದೆ ಪುಟ್ಟಾ. ಆಮೇಲೇನಾಯ್ತು ಅಂದ್ರೆ....” ತಾತಾ ಮತ್ತೆ ಗತಕ್ಕೆ ಇಳಿದರು.
“ಮೊದಲೇ ಒರಟ ನಾನು. ಜೈಲಿಗೋದ್ಮೇಲೆ ಇನ್ನಷ್ಟು ಒರಟನಾದೆ. ಇಲ್ದೆ ಇದ್ರೆ ಆ ಪೋಲಿಸ್ನೋರ ಹತ್ತಿರ, ಆ ಕಳ್ಳಕಾಕರ ಮಧ್ಯೆ ಬದುಕೋಕೆ ಸಾಧ್ಯಾನೇ ಇರ್ಲಿಲ್ಲ. ಎಲ್ರೂ ನನ್ನ ಕಂಡ್ರೆ ಹೆದರ್ತಿದ್ರು. ಯಾರೂ ನನ್ನ ತಂಟೆಗೆ ಬರುತ್ತಿರಲಿಲ್ಲ. ನಾನು ಯಾರ ಜೊತೇನೂ ಮಾತಾಡ್ತಾ ಇರ್ಲಿಲ್ಲ. ಯಾರಾದ್ರೂ ಮಾತ್ನಾಡದ್ರೆ ಸಿಟ್ಟು ಬರ್ತಿತ್ತು. ಅವರಿಗೆ ಏಟು ಬೀಳ್ತಿತ್ತು. ಹೀಗೆ ಒಂದು ವರ್ಷ ಕಳೀತು.”
“ಆಗ ನಮ್ಮ ಜೈಲಿಗೆ ಸುಮಾರು ನನ್ನ ವಯಸ್ಸಿನವನೊಬ್ಬ ಬಂದ. ಅವ್ನು ನಮ್ಮ ತರಹ ಇರ್ಲಿಲ್ಲ. ನೋಡೋದಿಕ್ಕೆ ಒಳ್ಳೆ ಶ್ರೀಮಂತರ ಮನೆಯ ವಿದ್ಯಾವಂತ ಹುಡುಗನಂತೆ ಕಂಡ. ವಿಚಿತ್ರ ಅನಿಸಿದರೂ ನಾನೇನೂ ತಲೆಕೆಡಿಸಿಕೊಳ್ಳಲಿಲ್ಲ.
“ಸ್ವಲ್ಪ ದಿನ ಆದ ನಂತರ ಅವನ ಬಗ್ಗೆ ಬೇಡವೆಂದರೂ ಸುದ್ದಿ ಕಿವಿಗೆ ಬಿತ್ತು. ‘ಆತ ಕ್ರಾಂತಿಕಾರಿ ಅಂತೆ, ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವಾತಂತ್ರ್ಯ ಬೇಕು ಅಂತಾ ಹೋರಾಟ ಮಾಡ್ತಾ ಇದ್ದಾನಂತೆ ಎಂದು.”
“ಅಷ್ಟು ದಿನ ಅಂತಹವರ ಬಗ್ಗೆ ಕೇಳಿದ್ದೆ. ಆದ್ರೆ ನೋಡಿರಲಿಲ್ಲ. ಕುತೂಹಲದಿಂದ ಅವನನ್ನು ಗಮನಿಸಿದೆ. ಬಹಳ ಪ್ರಸನ್ನ ಮುಖ. ಯಾವಾಗಲೂ ಹಸನ್ಮುಖಿ. ಆತ ಸಿಟ್ಟು ಮಾಡಿಕೊಂಡಿದ್ದೆ ನಾನು ನೋಡಲಿಲ್ಲ. ಅವನು ಎಲ್ಲರೊಂದಿಗೂ ಮಾತನಾಡುತ್ತಿದ್ದ. ಬಹುಬೇಗ ಎಲ್ಲರ ಸ್ನೇಹ ಸಂಪಾದಿಸಿ ಎಲ್ಲರಿಗೂ ಅಣ್ಣನಾಗಿಬಿಟ್ಟ.”
“ಆತ ನನ್ನ ಬಳಿಯೂ ಬಂದ. ಆದ್ರೆ ನಾನು ಮಾತನಾಡಲಿಲ್ಲ. ನನಗೆ ಯಾರೂ ಬೇಕಿರಲಿಲ್ಲ. ನನಗೆ ಯಾರ ಬಗ್ಗೆ ನಂಬಿಕೆಯೂ ಇರಲಿಲ್ಲ.”
“ಇತರರು ಅವನಿಗೆ ನನ್ನ ಬಗ್ಗೆ ‘ಅವನು ಒರಟ. ಅವನ ಸ್ನೇಹ ಬೇಡ. ಅವನು ಏನು ಮಾಡೋಕೂ ಹೇಸೋನಲ್ಲ’ ಎಂದು ಹೇಳಿದ್ದನ್ನು ಕೇಳಿದೆ.”
ಆ ವಿಚಿತ್ರ ವ್ಯಕ್ತಿ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ನನ್ನ ಬಳಿಗೆ ಬಂದ. ಒಮ್ಮೆ ನನಗೆ ಸಿಟ್ಟು ತಡೆಯಲಾಗಲಿಲ್ಲ. ಹೊಡೆದೇಬಿಟ್ಟೆ. ತುಟಿಯಿಂದ ರಕ್ತ ಸೋರಲಾರಂಭಿಸಿತು. ಅವನ ಸ್ನೇಹಿತರು ನನ್ನನ್ನು ಹೊಡೆಯಲು ಬಂದರೆ ಅವನೇ ತಡೆದ. ಏನೂ ಮಾತನಾಡದೆ ಹೊರಟುಹೋದ.”
“ನನಗ್ಯಾಕೋ ಒಂಥರಾ ಅನಿಸಿತು. ಇಂಥಾ ಮನುಷ್ಯನನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ನನಗೆ ಯಾರಾದ್ರೂ ಹೊಡೆದಿದ್ರೆ ಅವನ ಕೊಲೆ ಆಗೋಗ್ತಿತ್ತು. ಆದ್ರೆ ಆ ಮನುಷ್ಯ.... ಮೊದಲನೇ ಬಾರಿ ನನ್ನ ಒರಟುತನದಿಂದ ನಂಗೇ ಬೇಜಾರಾಯ್ತು.”
“ಎರಡು ಮೂರು ದಿನ ಆತನ ಕಣ್ತಪ್ಪಿಸಿ ಓಡಾಡಿದೆ. ಆದ್ರೆ ನಾಲ್ಕನೇ ದಿನ ಆತ ನೇರವಾಗಿ ನನ್ನೆದುರಿಗೆ ಬಂದ. ಆ ಗಾಯ ಇನ್ನೂ ಇತ್ತು. ಒಂದು ರೀತಿ ಕಸಿವಿಸಿ ನನ್ನೊಳಗೆ. ಆದ್ರೆ, ಆಹಾ... ಆ ವಿಚಿತ್ರ ವ್ಯಕ್ತಿ ಮುಗುಳ್ನಕ್ಕ. ನನಗೆ ಗೊತ್ತಿಲ್ಲದಂತೆ ನಾನೂ ಮುಗುಳ್ನಕ್ಕೆ. ಆಮೇಲೆ ಒಂದು ಕ್ಷಣಾನೂ ಅಲ್ಲಿ ನಿಲ್ಲದೆ ಓಡಿಹೋದೆ.”
“ಮಾರನೇ ದಿನವೂ ಅದೇ ರೀತಿ ನಡೆಯಿತು. ಅದಾದ ಮೇಲೆ ನಾನೂ ಮುಗುಳ್ನಗುತ್ತಿದ್ದೆ. ಆದ್ರೆ ಮಾತನ್ನು ಮಾತ್ರ ಆಡುತ್ತಿರಲಿಲ್ಲ. ಅದೇನೋ ಒಂದು ರೀತಿ ಕೆಟ್ಟ ಹಟ.”
ಒಂದು ವಾರ ಕಳೆದ ನಂತರ ಆತ ನೇರವಾಗಿ ನನ್ನ ಬಳಿ ಬಂದು ಕುಳಿತುಕೊಂಡ. ನನಗೆ ಗಾಬರಿಯಾಯಿತು. ಆತ ತನ್ನಲ್ಲಿದ್ದ ಪಗಡೆ ಹಾಸನ್ನು ಹಾಸುತ್ತಾ, “ನೀನೇನೋ ಆಟದಲ್ಲಿ ಪ್ರಚಂಡನಂತೆ, ಬರ್ತೀಯಾ ಆಟಕ್ಕೆ?” ಸವಾಲೆಸೆದ.
“ಅರೆ, ಎಂಥೆಂಥವರ ಜೊತೆ ಆಡಿ ಗೆದ್ದಿದ್ದೀನಿ. ನೀನ್ಯಾವ ಮಹಾ? ಬಾ ನೋಡೆ ಬಿಡೋಣ” ಸವಾಲನ್ನು ಅಂಗೀಕರಿಸಿ ದಾಳಗಳನ್ನು ಎಸೆದೆ.
“ಆಟದಲ್ಲಿ ಗೆದ್ದಿದ್ದು ನಾನೇ. ಆದರೆ ಅವನೇನೂ ಸಾಮಾನ್ಯ ಆಟಗಾರನಾಗಿರಲಿಲ್ಲ. ಆಟವಾದ ಮೇಲೆ ಅವನು, ‘ಎಲ್ಲರು ಹೇಳಿದ್ದು ನಿಜಾನೇ. ನಿಜಕ್ಕೂ ನೀನು ಪ್ರಚಂಡ. ಇನ್ನು ಮುಂದೆ ನೀನೇ ನನ್ನ ಗುರು’ ಎಂದ. ನನಗೆ ಹೆಮ್ಮೆಯೆನಿಸಿತು. ಹೀಗೆ ದಿನನಿತ್ಯ ನನ್ನ ಅವನ ಭೇಟಿ ಆರಂಭವಾಯಿತು.” 
“ಒಂದು ದಿನ ಆಟವಾಡುತ್ತಿರುವಾಗ ಆತ ನನ್ನ ಕಥೆ ಕೇಳಿದ. ಒಂದು ರೀತಿಯ ಅವಮಾನದಿಂದಲೇ ನಡೆದದ್ದನ್ನು ಹೇಳಿದೆ.”
“ಭೇಷ್, ಎಂಟೆದೆಯ ಭಂಟ ನೀನು” ಎಂದ. ತಮಾಷೆ ಮಾಡುತ್ತಿದ್ದಾನೇನೋ ಎಂದುಕೊಂಡ್ರೆ, ಇಲ್ಲಾ ನಿಜವಾಗಿ ಹೇಳಿದ್ದ. ನನಗೆ ಬಹಳ ಆಶ್ಚರ್ಯವಾಯಿತು. ಮೊಟ್ಟಮೊದಲ ಬಾರಿ ಯಾರೋ ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದರು. ಆತ ನನ್ನ ಆತ್ಮೀಯ ಅನಿಸಿತು.”
“ಕ್ರಮೇಣ ಆತ ನನಗೆ ಹತ್ತಿರದವನಾಗಿ ಬಿಟ್ಟ. ನಾನು ಅವನನ್ನು ಅಣ್ಣ ಎಂದು ಕರೆಯಲಾರಂಭಿಸಿದೆ. ಹೀಗೆ ಒಂದು ದಿನ ಮಾತನಾಡುತ್ತಿರುವಾಗ, ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಪೋಲಿಸರ ಗುಂಡಿಗೆ ಬಲಿಯಾದ ಬಾಲಕನ ಬಗ್ಗೆ ಹೇಳುತ್ತಿದ್ದ. ನನಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ‘ಅಣ್ಣ ಆ ಪುಟ್ಟ ಮಗುವನ್ನು ಕೊಂದವರು ಯಾರು ಅಂತಾ ಹೇಳು, ನಾನು ಅವರ್ನ ಕೊಚ್ಚಿಹಾಕ್ತೀನಿ’ ಅಂದೆ. ‘ನಿಜವಾಗ್ಲೂ?’ ‘ನಿನ್ನ ಮೇಲಾಣೆ’ ಖಚಿತವಾಗಿ ಹೇಳಿದೆ.’ ‘ಹಾಗಾದ್ರೆ ನನ್ನ ಜೊತೆ ಸೇರ್ತೀಯಾ?’ ಗಾಬರಿಯಾಗುವ ಸರದಿ ನನ್ನದಾಯಿತು.
‘ಅಣ್ಣ, ನಾನು......ಕೊಲೆಗಾರ.....?’ ‘ಗಾಬರಿಯಾಗಬೇಡ.’ ‘ಮತ್ತೆ...... ನಾನು...... ನಿನ್ನ ಜೊತೆ......?’ ‘ಹೌದು ಶಂಕ್ರೂ, ನಿನ್ನ ಆವೇಶ ನಮಗೆ ಬೇಕು. ಆದ್ರೆ ಒಬ್ಬ ಬ್ರಿಟಿಷ್ ವ್ಯಕ್ತಿಯನ್ನ, ಒಬ್ಬ ಜಮೀನುದಾರನನ್ನ ಕೊಂದ್ರೆ ಏನೂ ಪ್ರಯೋಜನವಿಲ್ಲ. ಅವರ ಇಡೀ ಗುಂಪುಗುಂಪನ್ನೇ ನಾಶಮಾಡಬೇಕು.’ ಎಂದ.
‘ಗುಂಪುಗುಂಪನ್ನೆ.....ನಾನೊಬ್ನೆ.....?’ ಗೊಂದಲದಿಂದ ಕೇಳಿದೆ. 
‘ಇಲ್ಲ ಶಂಕ್ರೂ ನೀನೊಬ್ನೆ ಅಲ್ಲ. ನಿನ್ನಂತೋರು, ನನ್ನಂತೋರು ಸಾವಿರಾರು ಜನ ಇದ್ದಾರೆ. ಎಲ್ರೂ ಸೇರ್ಕೊಂಡ್ರೆ ಆ ಫರಂಗಿಯೋರ್ನ ಹೊಡೆದೋಡಿಸೋದು ಏನೂ ಕಷ್ಟವಿಲ್ಲ. ಅವರು ಹೊರಟು ಹೋದ್ರೆ ಈ ಜಮೀನ್ದಾರ್ರೂ, ಮಾಲೀಕರೂ ಯಾರೂ ಇರೋದಿಲ್ಲ. ಆಗ ನಮ್ಮ ದೇಶ ಸ್ವರ್ಗ ಆಗುತ್ತೆ. ಎಲ್ರೂ ಕಷ್ಟಪಟ್ಟು ದುಡೀತಾರೆ, ಹಂಚ್ಕೊಂಡು ಬದುಕ್ತಾರೆ.’ ಅಣ್ಣ ಆವೇಶದಿಂದ ಮಾತನಾಡಿದ್ದನ್ನು ನಾನು ಆವತ್ತೆ ನೋಡಿದ್ದು. ಅಣ್ಣ ಹೇಳಿದ್ದು ಸರಿ ಅನಿಸಿತು.”
“ಅಣ್ಣ, ಆದ್ರೆ ನಾನು ಕೊಲೆಗಾರ.... ನನ್ನನ್ನು ನಿಮ್ಮ ಜೊತೆ ಸೇರಿಸ್ಕೋತೀರಾ?’ ಅನುಮಾನದಿಂದಲೇ ಕೇಳಿದೆ. ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ‘ಖಂಡಿತ’ ಎಂದ. ‘ಹಿಂದೆ ನಡೆದ್ದದ್ದನ್ನು ಮರೆತುಬಿಡು. ಈಗ ನೀನು ಬದಲಾಗಿದ್ದೀಯಾ. ಯೋಚಿಸುವ ಶಕ್ತಿ ಇದೆ. ನೀನು ಖಂಡಿತ ನಮ್ಮ ಜೊತೆ ಬರಬಹುದು.’ 
“ಆ ಘಳಿಗೆ ನನ್ನ ಬದುಕಿಗೆ ಹೊಸ ತಿರುವನ್ನು ನೀಡಿತು. ಬುದ್ಧನ ಜೊತೆ ಸೇರಿ ಅಂಗುಲಿಮಾಲ ಬದಲಾದಂತೆ ಅಣ್ಣನ ಜೊತೆ ಸೇರಿ ನಾನೂ ಬದಲಾಗಿಬಿಟ್ಟೆ. ಸ್ವಲ್ಪ ದಿನಗಳ ನಂತರ ಅಣ್ಣನ ಬಿಡುಗಡೆಯಾಯಿತು. ಹೋಗುವ ಮುಂಚೆ ನನಗೆ ಅವನ ವಿಳಾಸ ಕೊಟ್ಟು, ‘ನಿನಗೆ ನಮ್ಮೊಂದಿಗೆ ಸೇರಲು ಯಾವಾಗಲೂ ಸ್ವಾಗತ’ ಎಂದು ಹೇಳಿ ಹೋದ. 
“ಅಣ್ಣನ ಮಾತನ್ನು ಕೇಳಿದ ನಂತರ ಅವನ ಜೊತೆ ಸೇರಬೇಕೆಂದು ತೀರ್ಮಾನ ಮಾಡಿದೆ. ಅದಾದ ಮೇಲೆ ನನ್ನ ನಡತೆ ಪೂರ್ತಿ ಬದಲಾಗಿಹೋಯಿತು. ಒಳ್ಳೆಯ ನಡತೆ ಎಂದು ನನ್ನನ್ನು 1945 ರಲ್ಲಿಯೇ ಬಿಟ್ಟುಬಿಟ್ಟರು.”
“ಹೊರಗೆ ಬಂದ ಮೇಲೆ ನಾನು ಮಾಡಿದ ಮೊದಲ ಕೆಲಸ ಅಣ್ಣನನ್ನು ಹುಡುಕಿದ್ದು. ಅವನ ಗುಂಪಿನಲ್ಲಿ ನಾನೂ ಸೇರಿಕೊಂಡೆ.”
“ಎಲ್ಲಿ ಕೆಲಸ ಮಾಡಲಿ ಎಂದು ಕೇಳಿದ್ದಕ್ಕೆ ನಿಮ್ಮ ಹಳ್ಳಿಗೆ ಹೋಗು ಎಂದ. ನನಗೆ ತಕ್ಷಣ ನೆನಪಿಗೆ ಬಂದದ್ದು ಅಂಗುಲಿಮಾಲನ ಕಥೆಯೇ. ಬುದ್ಧ ಕೂಡ ಅಂಗುಲಿಮಾಲನಿಗೆ, ಅವನು ಬೌದ್ಧ ಭಿಕ್ಷುವಾದ ನಂತರ ನಿನ್ನ ಹಳ್ಳಿಗೆ ಹೋಗು ಎಂದಿದ್ದ.”
“ಅಣ್ಣ ಊರ ಜನರಿಗೆ ನನ್ನ ಮೇಲೆ ಸಿಟ್ಟಿದೆ, ಭಯವಿದೆ. ನನ್ನ ಮಾತನ್ನ ಯಾರು ಕೇಳ್ತಾರೆ ಕೇಳಿದೆ. ಶಂಕ್ರೂ ನೀನೀಗ ಬದಲಾಗಿದ್ದೀಯಾ. ನೀನು ಹಳ್ಳಿಗೆ ಹೋಗು. ತಾಳ್ಮೆಯಿಂದ ಕೆಲಸ ಮಾಡು. ಜಯ ಸಿಗುತ್ತೆ.” ವಿಶ್ವಾಸ ತುಂಬಿ ಕಳಿಸಿದ.
“ಮೊದಮೊದಲು ಅಂಗುಲಿಮಾಲನಿಗೆ ಆದ ಅನುಭವವೇ ನನಗೂ ಆಯಿತು. ದೆವ್ವದ ಬಾಯಲ್ಲಿ ವೇದ ಬರುವಂತೆ ನಿನ್ನ ಬಾಯಲ್ಲಿ ಸ್ವಾತಂತ್ರ್ಯದ ಮಾತು ಎಂದು ವ್ಯಂಗ್ಯವಾಡಿದರು, ಬೈದರು, ಹೊಡೆದರು. ಆದರೆ ನಾನು ಹೆದರಲಿಲ್ಲ, ಹಿಂಜರಿಯಲಿಲ್ಲ. ಅಣ್ಣನ ಮಾತಿನಂತೆ ನಡೆದುಕೊಂಡೆ.” 
“ಕ್ರಮೇಣ ಜನ ನಾನು ಬದಲಾಗಿದ್ದನ್ನು ಗುರುತಿಸಿದರು. ನನ್ನ ಮಾತುಗಳನ್ನು ಕೇಳಲಾರಂಭಿಸಿದರು. ಮೆಚ್ಚಿಕೊಂಡಿದ್ದೇ ಅಲ್ಲದೆ ನಾಯಕನ ಸ್ಥಾನವನ್ನೂ ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಆ ಜನರ ನಾಯಕತ್ವ ವಹಿಸಿಕೊಂಡೆ. ಸ್ವಾತಂತ್ರ್ಯ ಬಂದ ನಂತರವೂ ಸಹ, ಅವತ್ತಿನಿಂದ ಇವತ್ತಿನವರೆಗೂ ಹಳ್ಳಿಯ ಜನರಿಗೆ ನನ್ನ ಕೈಲಾದದ್ದನ್ನು ಮಾಡುತ್ತಲೇ ಬಂದಿದ್ದೇನೆ.”
ಕಥೆ ಮುಗಿಯಿತೆಂಬಂತೆ ಮಾತನ್ನು ನಿಲ್ಲಿಸಿದರು. ಆದರೂ ತಾತ ಇನ್ನೂ ಈ ಲೋಕಕ್ಕೆ ಬಂದಿರಲಿಲ್ಲ. ತಾತ ಹೇಳಿದ್ದನ್ನು ನನಗಿನ್ನೂ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲಾಗಿರಲಿಲ್ಲ. “ಅಬ್ಬಾ, ಎಂಥಾ ವ್ಯಕ್ತಿತ್ವ ತಾತ ನಿಂದು” ಎನ್ನುತ್ತಾ “ತಾತ ಈಗ ಆ ಅಣ್ಣ ಎಲ್ಲಿದ್ದಾರೆ?” ಕೇಳಿದೆ.
“ಅಣ್ಣ ಕಳೆದ ವರ್ಷವೇ ತೀರಿಕೊಂಡರು ಪುಟ್ಟಿ. ಕೊನೆ ಘಳಿಗೆಯವರೆಗೂ ಜನರೊಂದಿಗೆ ಅವರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುತ್ತಾ ಕಾಲ ಕಳೆದರು. ಜನರ ಹೋರಾಟ ಕಟ್ಟುತ್ತಲೇ ಇದ್ದರು. ಆ ದಿವ್ಯ ಚೇತನದ ಮುಂದೆ ನಾವೆಷ್ಟು?”
ತಾತನದೇ ಭವ್ಯ ವ್ಯಕ್ತಿತ್ವ ಎಂದುಕೊಂಡ ನಾನು ಆ ವ್ಯಕ್ತಿಯ ಅತ್ಯದ್ಭುತ ವ್ಯಕ್ತಿತ್ವವನ್ನು ಅಳೆಯದಾದೆ!!
(ಸತ್ಯಕಥೆಯನ್ನು ಆಧರಿಸಿ ಬರೆದ ಕಥೆಯಿದು)
- ಸುಧಾ ಜಿ


ಅನುವಾದಿತ ಕವಿತೆ - ಹುಡುಕಿ ಬಂದರು ಯಹೂದಿಯನು



ಮೊದಲಿಗೆ ಹುಡುಕಿ ಬಂದರು ಯಹೂದಿಯನು
ಧ್ವನಿಯೆತ್ತಲಿಲ್ಲ ನಾನು; ಏಕೆಂದರೆ
ನಾನಾಗಿರಲಿಲ್ಲ ಯಹೂದಿ

ಮತ್ತೆ ಹುಡುಕಿ ಬಂದರು ಸಮಾಜವಾದಿಯನು
ಧ್ವನಿಯೆತ್ತಲಿಲ್ಲ ನಾನು; ಏಕೆಂದರೆ
ನಾನಾಗಿರಲಿಲ್ಲ ಸಮಾಜವಾದಿ

ಮತ್ತೆ ಹುಡುಕಿ ಬಂದರು ಕಮ್ಯುನಿಸ್ಟರನು
ಧ್ವನಿಯೆತ್ತಲಿಲ್ಲ ನಾನು; ಏಕೆಂದರೆ
ನಾನಾಗಿರಲಿಲ್ಲ ಕಮ್ಯುನಿಸ್ಟನು

ಮತ್ತೆ ಹುಡುಕಿ ಬಂದರು ಕಾರ್ಮಿಕ ಸಂಘದವನನು
ಧ್ವನಿಯೆತ್ತಲಿಲ್ಲ ನಾನು; ಏಕೆಂದರೆ
ನಾನಾಗಿರಲಿಲ್ಲ ಕಾರ್ಮಿಕ ಸಂಘದವನು

ಈಗ ಹುಡುಕಿ ಬಂದರು ನನ್ನನು
ಒಂದೂ ಧ್ವನಿ ಬರಲಿಲ್ಲ; ಏಕೆಂದರೆ
ಧ್ವನಿಯೆತ್ತಲು ಉಳಿದಿರಲಿಲ್ಲ ಒಬ್ಬನೂ


- ಮೂಲ: ಪ್ಯಾಸ್ತರ್ ನಿಯೊಮಲರ್
ಅನುವಾದ: ಎಸ್.ಎನ್.ಸ್ವಾಮಿ 

ಕವನ - ತಿಂಗಳ ಅತಿಥಿ



ತಿಂಗಳಿಗೊಮ್ಮೆ ಬರುತ್ತಿದ್ದಳು
ಹುಣ್ಣಿಮೆ ಚಂದ್ರನಂತೆ
ಕಾವ್ಯದ ಪ್ರಾಸದಂತೆ
ತಂಗಾಳಿಯ ಮಂದಹಾಸದಂತೆ

ಆಕೆ ಬಂದಾಗಲೆಲ್ಲ
ಸಂತಸದ ವಸಂತ, ಕನಸುಗಳು ಅನಂತ
ತುಂಬಿದ ಜೋಳಿಗೆ, ಹೊಟ್ಟೆ ತುಂಬ ಹೋಳಿಗೆ
ವರುಷಕೊಮ್ಮೆ ಅವಳ ಬಸಿರು
ಮನದಲ್ಲಿ ನಿಟ್ಟುಸಿರು ಮನೆಯೆಲ್ಲ ಹಚ್ಚ ಹಸಿರು

 ಆಕೆ ಬಾರದ ಅಮವಾಸೆಗೆ
ತಣ್ಣಗಾದ ಒಲೆ,ಅಲ್ಲಾಡಿದ ನೆಲೆ
ನುಚ್ಚು ನೂರು ಕನಸು,ವಿಚಲಿತ ಮನಸು
ಕೊನೆಯಿಲ್ಲ ಗೋಳಿಗೆ, ಆಸರೆಯಿಲ್ಲ ಬಾಳಿಗೆ

ಆಕೆ ಬರುವಳೆಂಬ
ಶರತ್ ಕಾಲದ  ಬೆಳ್ಳನೆ ಮೋಡದ ಆಸೆ
ಆಕಾಂಕ್ಷೆಗಳ ಆಗರ,ಭರವಸೆಗಳ ಸಾಗರ


ಆಕೆ ಬಾರದ ಬಿಸಿಲ ಭಯ
ಎಲ್ಲವೂ ಕಲ್ಲೋಲಮಯ

ಅದೇಕೋ ಈ ಬಾರಿ ಬರುವಳೋ ಬಾರಳೋ ಗೊತ್ತಿಲ್ಲ
ಧರೆ ಹೊತ್ತಿ ಉರಿಯುತ್ತಿದ್ದರೂ
ಒಲೆ ಹತ್ತಿ ಉರಿಯುತ್ತಿಲ್ಲ
ಮೋಡಗಳೂ ಕಂಡಿಲ್ಲ ಹನಿ ನೀರೂ ಸುರಿಸಿಲ್ಲ
ಸುರಿಸಿಯಾಗಿದೆ ಬೆವರು
ಮೈ ಕೈಯೆಲ್ಲಾ ಕೆಸರು
ಆದರೂ ಬಾಯಿಗೆ ಬಾರದ ಮೊಸರು
 

ತಿಂಗಳಾದರೂ ಆಕೆ ಬಂದಿಲ್ಲ
ಮನೆಗೆ ಸಾಮಾನು ತಂದಿಲ್ಲ

- ಡಾ.ಸುಚೇತಾ ಪೈ