Pages

ಕಥೆ - ನಮ್ಮನ್ನು ಬದುಕಲು ಬಿಡಿ





“ಹುಷಾರಾಗಿ ಹೋಗಿ ಬಾ. ಹೋದ ತಕ್ಷಣ ಫೋನ್ ಮಾಡು. ನಿನ್ನ ಆರೋಗ್ಯದ ಕಡೆ ಗಮನವಿರಲಿ. ಇಲ್ಲಿ ಅಪ್ಪ-ಅಮ್ಮನ ಬಗ್ಗೆ ಯೋಚನೆ ಮಾಡಬೇಡ. ನಾನೆಲ್ಲಾ ನೋಡ್ಕೋತೀನಿ. ನಿನಗೆ ರಜಾ ಬೇಕೆನಿಸಿದರೆ ಫೋನ್ ಮಾಡು. ನಾನು ನಿಮ್ಮ ಬಾಸ್‍ಗೆ ಹೇಳ್ತೀನಿ” ರೈಲ್ವೆ ಪ್ಲಾಟ್‍ಫಾರಂನಲ್ಲಿ ಉಷಾಳ ಮಾತು ಸಾಗಿತ್ತು. ಅದೇಕೋ, ಏನೋ ಟ್ರೈನ್‍ನಲ್ಲಿ ಕುಳಿತಿದ್ದ ಹುಡುಗಿ ಕೇವಲ ಹೂಂ, ಉಹೂಂ, ಎಂದು ಉತ್ತರಿಸುತ್ತಿದಳು. ಆಕೆಯ ಮುಖದಲ್ಲಿ ಗೆಲುವಿರಲಿಲ್ಲ. ಒಂದು ರೀತಿ ದುಃಖದ ಛಾಯೆ ಆವರಿಸಿತ್ತು.

“ನಾನೇನೋ, ಹೋಗುತ್ತಿದ್ದೇನೆ. ಅಮ್ಮಾ-ಅಪ್ಪಾ ಈ ವಯಸ್ಸಿನಲ್ಲಿ...” ಮಧ್ಯದಲ್ಲಿ ಅವಳನ್ನು ತಡೆದ ಉಷಾ, “ಸುಮಾ, ನಾನಿದ್ದೀನಲ್ಲ. ಅವರಿಗೀಗ ಉಮಾಳನ್ನು ಕಳೆದುಕೊಂಡದ್ದಕ್ಕಿಂತ, ನಿನ್ನನ್ನು ಈ ಸ್ಥಿತಿಯಲ್ಲಿ ನೋಡುವುದೇ ಕಷ್ಟವಾಗಿದೆ. ನೆನ್ನೆ ಚಿಕ್ಕಮ್ಮ ಏನು ಹೇಳಿದರು ಗೊತ್ತಾ? ‘ಇರುವ ಒಬ್ಬಳನ್ನಾದರೂ ನೋಡಿಕೊಂಡು ಬದುಕಿರೋಣವೆಂದುಕೊಂಡರೆ, ಅವಳೂ ಈ ರೀತಿ ಅನ್ನಾಹಾರ, ನಿದ್ರೆ ಬಿಟ್ಟರೆ ಏನು ಮಾಡೋಣ’ಎಂದು ಕೇಳಿದರು. ನೀನು ಸಂಧ್ಯಾಳ ಮನೆಯಿಂದ ಸಂತೋಷವಾಗಿ ಹಿಂತಿರುಗಿದರೆ ಸಾಕು.” ಸುಮಾಳ ಕಣ್ಣಿಂದ ಕಂಬನಿ ಜಾರತೊಡಗಿತು.

“ಉಷಾ, ಅಕ್ಕ ನಮ್ಮ ಜೊತೆಗಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಲಿ?”

“ಸಮಾಧಾನ ಮಾಡ್ಕೊ. ಚೀಯರ್‍ಅಪ್.” ಅಷ್ಟರಲ್ಲಿ ಮೊದಲ ವಿಷಲ್ ಕೇಳಿಸಿತು.

“ಎಲ್ಲಾ ಸರಿಯಾಗಿ ಇಟ್ಕೊಂಡಿದೀಯ ತಾನೇ?”  ತಕ್ಷಣ ಉಷಾಳಿಗೆ ಊಟದ ಡಬ್ಬಿ ಸ್ಕೂಟರ್‍ನಲ್ಲಿ ಬಿಟ್ಟು ಬಂದದ್ದು ನೆನಪಾಯಿತು.

“ಒಂದ್ನಿಮಿಷ ಊಟದ ಪ್ಯಾಕೆಟ್ ತರ್ತೀನಿ” ಎಂದವಳನ್ನು ತಡೆದು, “ಬೇಡ ನೀನು ಬರುವಷ್ಟರಲ್ಲಿ ಟ್ರೈನ್ ಬಹಳ ದೂರ ಹೋಗಿರುತ್ತೆ.” ಎಂದಳು.

“ಮತ್ತೆ, ಈಗ ಏನು ಮಾಡೋದು” ಅಲ್ಲೇ ಬಿಸ್ಕತ್ತು, ಹಣ್ಣು ತೆಗೆದುಕೊಟ್ಟರೂ, ತನ್ನ ಮರೆವಿಗೆ ಬೇಸರಿಸಿಕೊಂಡಳು.

“ಹೋಗ್ಲಿ ಬಿಡು, ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟೊಂದು ಬೇಜಾರು ಮಾಡಿಕೋಬೇಡ. ದಾರಿಯಲ್ಲಿ ಏನಾದರೂ ಕೊಂಡ್ಕೊತೀನಿ.”

“ಹಾಗೆ ಮಾಡು. ಟ್ರೈನ್‍ನಿಂದ ಇಳೀಬೇಕಾದರೆ ಹುಷಾರು. . . . .” ಮಾತು ಮುಂದುವರೆಸಲು ಬಿಡೆನೆಂಬಂತೆ ಗಾಡಿ ಚಲಿಸಲಾರಂಭಿಸಿತು. ಉಷಾ ಮರೆಯಾಗುವವರೆಗೂ ಅವಳಿಗೆ ಕೈ ಬೀಸಿ ಸುಮಾ ಹಾಗೆ ಸೀಟಿಗೊರಗಿ ಕುಳಿತಳು. ಕೆಲವೇ ನಿಮಿಷಗಳಲ್ಲಿ ಅವಳು ತನ್ನಿರುವನ್ನು ಮರೆತು ಯಾವುದೋ ಲೋಕಕ್ಕೆ ಹೋದಳು. ಹಳೆಯ ನೆನಪುಗಳು, ಹಳೆಯ ಚಿತ್ರಗಳು.

ಶಾಲೆಗೆ ಹೋಗುವಾಗ ತನ್ನ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕ, ಪಾಠ ಹೇಳಿಕೊಡುತ್ತಿದ್ದ ಅಕ್ಕ, ತನ್ನ ತುಂಟತನ ತಡೆಯಲಾರದೆ ಕಿವಿ ಹಿಂಡುತ್ತಿದ್ದ ಅಕ್ಕ, ನೋವು ತಾಳಲಾರದೆ ಅತ್ತರೆ ತಬ್ಬಿ ಸಂತೈಸುತ್ತಿದ್ದ ಅಕ್ಕ, ತನ್ನ ಬಾಳಿನುದ್ದಕ್ಕೂ ಜೊತೆಯಾಗಿ ಇರುವಳೆಂದುಕೊಂಡಿದ್ದ ಅಕ್ಕ ಈಗ. . . . .

ಹದಿನೈದು ದಿನಗಳ ಹಿಂದೆ ಸಣ್ಣ ಜ್ವರವೆಂದು ಹಾಸಿಗೆ ಹಿಡಿದವಳು ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟೇ ಹೋದಳು. ಅವಳಿಲ್ಲದೆ ತಾನು ಹೇಗೆ ಇರಬಲ್ಲೆ ಎಂಬ ಯೋಚನೆ ಅವಳಿಗೆ ಬರಲಿಲ್ಲವೆ? ಮುಂದೆ ಹೇಗೆ?  ಏನೇನೋ ಹುಚ್ಚು ಆಲೋಚನೆಗಳು.

ರಾತ್ರಿಯಾಯ್ತು, ಮಲಗುವ ಸಮಯ. “ಏಳ್ತೀಯಾಮ್ಮ”ಯಾರೋ ಕರೆದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. “ಸ್ಟೇಷನ್ ಬಂದಿದೆ ಏನಾದರೂ ಕೊಂಡುಕೊಳ್ಳುವುದಿದ್ದರೆ ಕೊಂಡುಕೊ.” ಸುಮಾ ಎದ್ದು ದುಡ್ಡು ತೆಗೆದುಕೊಂಡು ಹೊರಡುವಷ್ಟರಲ್ಲಿ ಗಾಡಿ ಚಲಿಸಲಾರಂಭಿಸಿತು.  “ತಿನ್ನೊ ತಂಟೆ ತಪ್ಪಿತು” ಎಂದುಕೊಂಡು ಮತ್ತೆ ಕುಳಿತುಕೊಂಡಳು.

“ಇದನ್ನು ತಗೊಮ್ಮ” ಎಲೆಯಲ್ಲಿ ಊಟವನ್ನು ಕೊಟ್ಟರು ಎದುರು ಸೀಟಿನಲ್ಲಿ ಕುಳಿತಾಕೆ. ಆಗಲೇ ಅವಳು ತನ್ನ ಎದುರಿನಲ್ಲಿದ್ದಾಕೆಯನ್ನು ಗಮನಿಸಿದ್ದು. ಸುಮಾರು 30-35 ರ ವಯಸ್ಸಿನ ಹೆಂಗಸು.

ನೋಡಿದ ತಕ್ಷಣ ಗೌರವ ಮೂಡುವಂತಿತ್ತು. ಆಕೆಯ ಜೊತೆಗೆ 7-8 ವರ್ಷದ ಹೆಣ್ಣು ಮಗುವಿತ್ತು.

“ಬೇಡ ಬಿಡಿ, ನನಗೇನೂ ಹಸಿವಿಲ್ಲ.”

“ತಗೊಳಮ್ಮ, ನಾಳೆ ಬೆಳಿಗ್ಗೆಯವರೆಗೂ ಏನೂ ಸಿಗುವುದಿಲ್ಲ.”

“ಮತ್ತೆ ನಿಮಗೆ. . . .”

“ಹೆಚ್ಚಾಗಿಯೇ ತಂದಿದ್ದೆ. ತಗೊಮ್ಮ” ಆಕೆಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು.

ಊಟವಾದ ನಂತರ ಎಲ್ಲರೂ ಮಲಗಿದರೂ ಸುಮಾಳಿಗೆ ನಿದ್ರೆ ಬರಲಿಲ್ಲ. ಯೋಚನೆಗಳ ಮಧ್ಯದಲ್ಲಿ ಯಾವಾಗ ನಿದ್ರೆ ಬಂದಿತೊ. ಎಚ್ಚರವಾದದ್ದು ಎದುರು ಸೀಟಿನಾಕೆಯ ದನಿ ಕೇಳಿದಾಗಲೇ.

“ಕಾಫಿ ಬಂದಿದೆ ತಗೋತೀಯೇನಮ್ಮ?” ಕೆಳಗಿಳಿದು ಮುಖ ತೊಳೆದುಕೊಂಡು ಬಂದು ಕಾಫಿ ಕಪ್ಪನ್ನಿಡಿದಳು. ಹಾಗೆ ಮಾತುಕತೆ ಶುರುವಾಯಿತು. ಆಕೆಯ ಆತ್ಮೀಯತೆಗೆ ಸೋತು ತನ್ನ ಬಗ್ಗೆ, ತನ್ನಕ್ಕನ ಸಾವಿನ ಬಗ್ಗೆ, ಈಗ ಹೋಗುತ್ತಿರುವ ಗೆಳತಿಯ ಬಗ್ಗೆ ಹೇಳಿದಳು. ಅವರಿಗೆ ತಾವಿಬ್ಬರೂ ಹೋಗುತ್ತಿರುವ ಸ್ಥಳ ಒಂದೇ ಎಂಬುದು ತಿಳಿಯಿತು.

ಸುಮಾಳಿಗೆ ಆಕೆಯ ಬಗ್ಗೆ ಮಾತ್ರ ಸಂಪೂರ್ಣವಾಗಿ ತಿಳಿಯಲಾಗಲಿಲ್ಲ. ಆಕೆ ಹೇಳಿದ್ದಿಷ್ಟೆ. ತಾನು ಸ್ವಂತವಾಗಿ ಯಾವುದೋ ಉದ್ಯೋಗ ಮಾಡುತ್ತಿರುವುದಾಗಿ, ಕೆಲಸದ ಕಾರಣದಿಂದಾಗಿ ಹೀಗೆ ಓಡಾಡುತ್ತಿರಬೇಕೆಂದು ತಿಳಿಸಿದರು. ಆ ಮಗುವಿನ ತಂದೆಯ ಬಗ್ಗೆ ಕೇಳಿದಾಗ “ಆತನಿಲ್ಲ”ಎಂದಷ್ಟೇ ಹೇಳಿದರು. ಅದರ ಅರ್ಥವೇನೋ? ಸುಮಾ ಮತ್ತೇನೂ ಕೇಳಲೂ ಇಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ.

ತನ್ನ ಯೋಚನೆಗಳಲ್ಲೇ ಮುಳುಗಿರುತ್ತಿದ್ದ ಸುಮಾಗೆ ಲಕ್ಷ್ಮಿ ತನ್ನ ಮಗುವಿನ ಬಗ್ಗೆ ವಹಿಸುತ್ತಿದ್ದ ಕಾಳಜಿಯನ್ನು ಕಂಡು ತನ್ನಕ್ಕನ ನೆನಪೇ ಆಗುತ್ತಿತ್ತು. ಲಕ್ಷ್ಮಿ ಸುಮಾಳೊಡನೆ ಮಾತನಾಡುವಾಗಲೂ ಅದೇ ವಾತ್ಸಲ್ಯ ಕಂಡುಬರುತ್ತಿತ್ತು. ಬಹಳ ಬೇಗ ಸುಮಾ ಲಕ್ಷ್ಮಿಯೊಡನೆ ಹೊಂದಿಕೊಂಡುಬಿಟ್ಟಳು, ಬಹುಶಃ ಲಕ್ಷ್ಮಿಯಲ್ಲಿ ತನ್ನಕ್ಕನನ್ನೇ ಕಂಡಳೋ ಏನೋ!

ಮಧ್ಯಾಹ್ನ ಮಲಗಿ ಎದ್ದಾಗ ಮೈ ಬಿಸಿಯಾಗಿದೆ ಎನಿಸಿತು ಸುಮಾಗೆ. ಅವಳ ಕಣ್ಣು ಕೆಂಪಗಿರುವುದನ್ನು ಗಮನಿಸಿ ಲಕ್ಷ್ಮಿ ಅವಳ ಹಣೆಯ ಮೇಲೆ ಕೈ ಇಟ್ಟು, “ಅಯ್ಯೋ, ಜ್ವರ ಬಂದಿದೆಯಲ್ಲಾ” ಎಂದು ಎಲ್ಲಾ ಕಡೆ ಮಾತ್ರೆಗಾಗಿ ಹುಡುಕಾಡಿ ಬಂದರು. ಕೊನೆಗೆ 2-3 ಸ್ಟೇಷನ್‍ಗಳಾದ ನಂತರ ಮಾತ್ರೆ ದೊರಕಿದ ಮೇಲೆ0iÉುೀ ಅವರಿಗೆ ತೃಪ್ತಿ.

ಸಂಜೆ ಸುಮಾ ಮುಖ ತೊಳೆದುಕೊಂಡು ಬರಲು ಹೋದಾಗ ಪಕ್ಕದ ಕೂಪೆಯಲ್ಲಿದ್ದವರು ಕರೆದರು. “ಆಕೆ ನಿನಗೇನಾಗಬೇಕಮ್ಮಾ?”

“ಹೀಗೆ ಟ್ರೈನಿನಲ್ಲಿ ಪರಿಚಿತರಾದರು.”

“ಹಾಗಿದ್ದರೆ ಹುಷಾರಮ್ಮಾ. ಅವಳಿಂದ ದೂರವಿರು.”

“ಏಕೆ?”

“ಅಯ್ಯೋ ಅವಳು ಅದೆಲ್ಲೋ ಇದ್ದು ಬಂದವಳಂತಮ್ಮ. ನೀನು ಮರ್ಯಾದಸ್ಥರ ಮನೆಯವಳಂತೆ ಕಾಣ್ತೀಯಾ. ಅದಕ್ಕೇ, ಹೇಳ್ತಿದ್ದೀನಿ.”

ಸುಮಾಗೆ ಎಲ್ಲಾ ಅಯೋಮಯವಾಗಿ ಕಂಡಿತು. “ನೀನು ಬಹಳ ಅಮಾಯಕಳಂತೆ ಕಾಣ್ತೀಯಾ. ಅವಳು ನನಗೆ ಚೆನ್ನಾಗಿ ಗೊತ್ತು. ನಮ್ಮ ಊರೇ ಅವಳದು. ಬೊಂಬಾಯಲ್ಲಿ ಅದೇನೋ ರೆಡ್ ಲೈಟ್ ಏರಿಯ ಅಂತಾರಲ್ಲ ಅಲ್ಲಿದ್ದು ಬಂದಿರೋಳು. ಹೋಗ್ಲಿ ಬಿಡು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾ ನಮಗ್ಯಾಕೆ? ಆದ್ರೂ ನೀನು ಹುಷಾರಮ್ಮ.”

ಆಘಾತವಾಯಿತು ಸುಮಾಗೆ. "ಛೇ, ಈಕೆಯನ್ನೇ ತಾನು ತನ್ನ ಅಕ್ಕನೆಂದು ಪರಿಗಣಿಸಿದ್ದು” ಅಸಹ್ಯವೆನಿಸಿತು. ಸೀಟಿನಲ್ಲಿ ಹೋಗಿ ಕೂರಲು ಇಷ್ಟವಾಗದೆ ಬಾಗಿಲ ಬಳಿ ನಿಂತುಕೊಂಡಳು.

“ಎಂತೆಂಥವರು ಇರ್ತಾರೆ. ಎಷ್ಟು ಹುಷಾರಾಗಿ ಇದ್ದರೂ ಸಾಲದು. ಬಹುಶಃ ಇದಕ್ಕೇ ಏನೋ ಆಕೆ ಆ ಮಗುವಿನ ತಂದೆಯ ಬಗ್ಗೆ ಹಾರಿಕೆ ಉತ್ತರ ಕೊಟ್ಟಿದ್ದು” ಎಂದಿತು ಒಂದು ಮನಸ್ಸು. ಆದರೆ ಇನ್ನೊಂದು ಮನಸ್ಸು, “ಏನು ಕಷ್ಟವಿತ್ತೋ ಏನೋ, ಯಾವ ಹೆಣ್ಣೂ ಸಹ ತಾನಾಗೇ ಆ ನರಕಕ್ಕೆ ಹೋಗಲಾರಳು” ಎಂದಿತು. “ಏನೇ ಆಗಲಿ, ನೀನು ದೂರವಿರು” ಎಂದಿತು ಮತ್ತೊಂದು ಮನಸ್ಸು. ಈ ದ್ವಂದ್ವದಲ್ಲಿ ಅದೆಷ್ಟು ಸಮಯ ಕಳೆಯಿತೋ.

ಲಕ್ಷ್ಮಿಯ ದನಿ ಕೇಳಿದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. “ಜ್ವರ ಇದೆ ಗಾಳಿಗೆ ನಿಂತಿದ್ದೀಯಲ್ಲಮ್ಮಾ?”

ಸ್ವಲ್ಪ ಸಮಯದ ಮುಂಚೆ ಮಧುರವೆನಿಸಿದ್ದ ಆ ಸ್ವರ ಈಗ ಕರ್ಕಶವೆನಿಸಿತು. “ನೀವು ಹೋಗಿ, ಆಮೇಲೆ ಬರ್ತೀನಿ” ಎಂದಷ್ಟೇ ಹೇಳಿದಳು.

ಸ್ವಲ್ಪ ಸಮಯದ ನಂತರ ಸುಮಾ ತನ್ನ ಕೂಪೆಗೆ ಹೋದಳು. “ತಗೋಮ್ಮಾ, ಊಟ ಮಾಡು. ಈ ಮಾತ್ರೆ ತೆಗೆದುಕೊ”

“ನನಗೆ ಬೇಡ” ಎಷ್ಟೇ ಮೃದುವಾಗಿ ಉತ್ತರ ನೀಡಬೇಕು ಎಂದುಕೊಂಡರೂ ಅವಳಿಗೆ ಅದು ಸಾಧ್ಯವಾಗಲಿಲ್ಲ.

ಲಕ್ಷ್ಮಿ ಸೂಕ್ಷ್ಮ ಸ್ವಭಾವದವರು. “ಏನಮ್ಮಾ? ಏಕೆ ಹೀಗಿದ್ದೀಯಾ?””

ಏನು ಮಾಡುವುದೆಂದು ತಿಳಿಯದೆ ಪಕ್ಕದ ಕೂಪೆಯಾಕೆ ಹೇಳಿದ್ದನ್ನು ಹೇಳಿದಳು. ಮನದ ಮೂಲೆಯಲ್ಲಿ “ಆಕೆ ಇದನ್ನು ಸುಳ್ಳೆಂದು ಹೇಳಲಿ” ಎಂಬ ಭಾವನೆಯಿತ್ತು. ಆದರೆ ಲಕ್ಷ್ಮಿಯ ಉತ್ತರ ಕೇಳಿ ದಂಗಾದಳು ಸುಮಾ.

“ಹೌದಮ್ಮಾ, ಆಕೆ ಹೇಳಿದ್ದು ನಿಜ. ಆದರೆ ಕಾರಣ ಏನೆಂದರೆ. . . .. . . .”“ಸಾಕು ನಿಲ್ಲಿಸಿ ಪ್ಲೀಸ್.” ಸುಮಾ ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇವಳ ಪರಿಸ್ಥಿತಿ ಕಂಡು ಲಕ್ಷ್ಮಿ ಮೌನವಹಿಸಿದಳು.

ಸುಮಾಳ ಮನಸ್ಸು ಕಠಿಣವಾಗಿ ಬಿಟ್ಟಿತ್ತು. “ಛೇ, ಇಷ್ಟು ಬಹಿರಂಗವಾಗಿ ಒಪ್ಪಿಕೊಳ್ಳುವ ಈಕೆ ಎಂತಹ ಹೆಣ್ಣು?”

ಆ ರಾತ್ರಿ ಸುಮಾ ಲಕ್ಷ್ಮಿಯಿಂದ ಊಟವನ್ನು ತೆಗೆದುಕೊಳ್ಳಲಿಲ್ಲ. ಎಷ್ಟೇ ಒತ್ತಾಯ ಮಾಡಿದರೂ ಔಷಧಿ ತೆಗೆದುಕೊಳ್ಳಲಿಲ್ಲ. ಸುಮಾ ಲಕ್ಷ್ಮಿಯ ಎಲ್ಲ ನೆರವನ್ನು ತಿರಸ್ಕರಿಸಿದ್ದಳು.

ಆಕೆ ಕಂಬನಿ ತುಂಬಿದ ಕಣ್ಣುಗಳಿಂದಲೇ ಸುಮಾಳನ್ನು ನೋಡುತ್ತಾ, “ಸುಮಾ, ದಯವಿಟ್ಟು ಈ ಔಷಧಿ ತೆಗೆದುಕೊ, ಇಲ್ಲದಿದ್ದರೆ ಕಷ್ಟವಾಗುತ್ತದೆ” ಎಂದರು.

“ಏನೇ ಆದರೂ ನಿಮ್ಮ ಸಹಾಯ ಬೇಡ. ನಿಮ್ಮ ಕೈನಿಂದ ಏನೇ ತೆಗೆದುಕೊಂಡರೂ ಅದು ವಿಷವೇ.” ಚಾಟಿ ಏಟು ತಿಂದವರಂತೆ ಲಕ್ಷ್ಮಿ ಕುಳಿತುಬಿಟ್ಟರು. ಮುಂದೇನೂ ಮಾತಾಡಲಿಲ್ಲ.

ಸ್ಟೇಷನ್ ತಲುಪುವುದರಲ್ಲಿ ಸುಮಾ ಏರಿದ್ದ ಜ್ವರದಿಂದಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಪೂರ್ಣ ಎಚ್ಚರವಾದಾಗ ಸಂಧ್ಯಾಳ ಮನೆಯಲ್ಲಿದ್ದಳು.

“ಸಂಧ್ಯಾ, ನಿನ್ನನ್ನು ಸ್ಟೇಷನ್ನಿಗೆ ಬರಬೇಡವೆಂದಿದ್ದೆ. ಮತ್ತೆ ನಾನೇ ಇಲ್ಲಿಗೆ ಹೇಗೆ ಬಂದೆ?”

“ಅಬ್ಬಾ, ಈಗ ಬದುಕಿದೆ.  ಈ ಹಾಲು ಕುಡಿದು ಮಾತ್ರೆ ತೆಗೆದುಕೊ. ನಿನ್ನನ್ನು ಇಲ್ಲಿಗೆ ಲಕ್ಷ್ಮಿ ಎಂಬುವವರು ಬಿಟ್ಟು ಹೋದರು.”

“ಓಹ್ ಆಕೆನಾ?”

“ಬಹಳ ವಿಚಿತ್ರ ವ್ಯಕ್ತಿ. ನೆನ್ನೆಯಿಂದ ಸುಮಾರು ಹತ್ತು ಬಾರಿಯಾದರೂ ಫೋನ್ ಮಾಡಿದ್ದರು.ಈಗ ಸ್ವಲ್ಪ ಹೊತ್ತಿನ ಮುಂಚೆ ಕೂಡ ಫೋನ್  ಮಾಡಿದ್ದರು. ಯಾರವರು?”

“ಟ್ರೈನಿನಲ್ಲಿ ಜೊತೆಗೆ ಬಂದವರು.”

“ಆದರೆ ಅವರ ಕಾಳಜಿ ನೋಡಿದರೆ ಕೇವಲ ಪರಿಚಯದವರು ಅನಿಸಲ್ಲ. ಹಾ! ಮರೆತಿದ್ದೆ, ನಿನಗೊಂದು ಪತ್ರ ಕೊಟ್ಟು ಹೋಗಿದ್ದಾರೆ.”

ಪತ್ರ ಓದದಿದ್ದರೆ ಇನ್ನು ಸಂಧ್ಯಾಗೆ ಉತ್ತರ ಕೊಡಬೇಕಲ್ಲ ಎಂದುಕೊಂಡು ಪತ್ರ ಓದಲಾರಂಭಿಸಿದಳು.

“ಪ್ರೀತಿಯ ತಂಗಿ, ತಂಗಿ ಎಂದರೆ ನಿನಗೆ ಬೇಸರ ಬರಬಹುದೇನೊ! ಆದರೆ ನನಗೆ ನೀನು ತಂಗಿಯೇ. ಪೂರ್ತಿ ವಿಷಯ ತಿಳಿದುಕೊಳ್ಳದೆ ನೀನು ಆತುರದಲ್ಲಿ ನಿರ್ಧಾರ ತೆಗೆದುಕೊಂಡಿದ್ದೀಯ. ದಯವಿಟ್ಟು ಈ ಪತ್ರವನ್ನು ಪೂರ್ತಿ ಓದಿ ನಂತರವೇ ನಿರ್ಧರಿಸು. ನೀನು ಪ್ರಶ್ನೆ ಕೇಳಿದಾಗ ನಾನು ಸುಳ್ಳು ಹೇಳಬಹುದಿತ್ತು. ಆದರೆ ನಾನು ಕೇಳದೆಯೇ ನೀನು ನನ್ನನ್ನು ಅಕ್ಕಾ ಎಂದು ಕರೆದೆ. ಅದಕ್ಕೆ ಕಟ್ಟುಬಿದ್ದು ನಿನ್ನ ಬಳಿ ಸತ್ಯ ಹೇಳಲು ಹೊರಟೆ.”

“ಪದವಿ ಮುಗಿಸಿದ ನಂತರ ಹಿರಿಯ ಮಗಳಾದ ನಾನು, ಸಂಸಾರದ ಹೊಣೆ ಹೊತ್ತು ಕೆಲಸ ಹುಡುಕಿಕೊಂಡು ಹೋದಾಗ ಈ ಜಾಲದಲ್ಲಿ ಸಿಲುಕಿ ಬಿದ್ದೆ. ಹೊರಗೆ ಬರಲೆತ್ನಿಸಿದೆ. ಯಾರಿಗಾದರೂ ಬಾಳಬೇಕೆಂಬ ಆಸೆ ಇರುತ್ತದಲ್ಲವೇ? ಆದರೆ ಸೋತೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ.”

“ಆದರೆ ನನ್ನಂತೆ ಈ ಜಾಲದಲ್ಲಿ ಸಿಕ್ಕುಬಿದ್ದ ಹೆಣ್ಣುಮಗಳೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿ ಸಾವನ್ನಪ್ಪಿದಳು. ಸಾಯುವ ಮುನ್ನ ಆ ಮಗುವನ್ನು ನನಗೊಪ್ಪಿಸಿದಳು. ನಾನೇನು ಮಾಡಲಿ? ನನಗೇನೊ ನನ್ನ ಜೀವ ಕಳೆದುಕೊಳ್ಳುವ ಅಧಿಕಾರವಿತ್ತು. ಆದರೆ ಆ ಮಗುವಿನ ಜೀವ. . . ..  ಅದಕ್ಕಾಗಿ ದಿನಾ ಸಾಯುತ್ತಾ ಬದುಕುಳಿದೆ."

“ಒಂದು ದಿನ ರೈಡ್ ನಡೆಯಿತು. ನಮ್ಮನ್ನು ಹಿಡಿದ ಇನ್ಸ್ಪೆಕ್ಟರ್ ಬಹಳ ಒಳ್ಳೆಯವರು. ನನ್ನ ಕಥೆ ಕೇಳಿ ಆ ಪುಣ್ಯಾತ್ಮ ನನ್ನನ್ನು ಆ ನರಕದಿಂದ ಬಿಡಿಸಿ ಬದುಕಲೊಂದು ದಾರಿ ಮಾಡಿಕೊಟ್ಟರು.”

“ನೀವು ಬೆಳಕಿನಲ್ಲಿರುವವರು. ನಿಮಗೆ ಕತ್ತಲ ಬಗ್ಗೆ ತಿಳಿಯದು. ನಮ್ಮಂತಹರಿಗೆ ನಿಮ್ಮ ಮಧ್ಯೆ ಇರಲು ಅವಕಾಶ ಕೊಡದಿದ್ದರೂ ಪರವಾಗಿಲ್ಲ, ಅಸಹ್ಯ ಪಡಬೇಡಿ. ಪ್ರತಿ ಜೀವಿಗೂ ಗೌರವಯುತವಾಗಿ ಬದುಕುವ ಆಸೆ ಇರುತ್ತದೆ ಎಂಬುದನ್ನು ಮಾತ್ರ ಯಾವಾಗಲೂ ನೆನಪಿನಲ್ಲಿಟ್ಟುಕೊ. ನೀನು ಎಲ್ಲೇ ಇದ್ದರೂ ನಿನಗೆ ಶುಭವನ್ನೇ ಕೋರುವೆ - ಲಕ್ಷ್ಮಿ.”

ಶಾಕ್‍ಗೆ ಒಳಗಾದವಳಂತೆ ಕುಳಿತುಬಿಟ್ಟಳು ಸುಮಾ. “ಇನ್ನೊಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ತಿಳಿಯದೆ ಅವರ ಬಗ್ಗೆ ತೀರ್ಪು ಕೊಡುವ ನೈತಿಕ ಹಕ್ಕಿದೆಯೇ?”- ಪ್ರಶ್ನೆ ಸುಮಾಳ ಮನಸ್ಸಿನಲ್ಲಿ ಮತ್ತೆ ಮತ್ತೆ ಕಾಡತೊಡಗಿತು.

ಒಂದು ಘಂಟೆಯಾದ ನಂತರ ಸಂಧ್ಯಾ ಅಲ್ಲಿಗೆ ಬಂದಾಗಲೂ ಸುಮಾ ಗರಬಡಿದವಳಂತೆ ಹಾಗೆಯೇ ಕುಳಿತಿದ್ದಳು. “ಏ, ಸುಮಾ, ಏನಾಯ್ತು.” ಅಲುಗಾಡಿಸಿದಳು.

ಬೆಚ್ಚಿಬಿದ್ದವಳಂತೆ ಎದ್ದು, “ಸಂಧ್ಯಾ, ಈ ಬಾರಿ ಫೋನ್ ಬಂದರೆ ನನಗೇ ಕೊಡು” ಎಂದಳು.

ಅಷ್ಟರಲ್ಲಿಯೇ ಹೊರಗಡೆ ಹಾಲ್‍ನಲ್ಲಿ ಫೋನ್ ಗಂಟೆ ಮೊಳಗಿತು. “ಸುಮಾ, ಇರು ನಾನೇ ತಂದುಕೊಡ್ತೀನಿ” ಸಂಧ್ಯಾ ಕೂಗುತ್ತಿದ್ದರೂ ಕೇಳಿಸಿಕೊಳ್ಳದೆ ಹಾಲ್‍ನತ್ತ ಓಡಿದಳು ಸುಮಾ.
 - ಸುಧಾ ಜಿ





ಅನುವಾದಿತ ಕವಿತೆ - ಅಂದಿನ ಪ್ರೀತಿಯನ್ನರಸದಿರು ಇಂದು ನನ್ನಿಂದ



ಅಂದಿನ ಪ್ರೀತಿಯನ್ನರಸದಿರು, ಪ್ರಿಯತಮೆ, ಇಂದು ನನ್ನಿಂದ |
ನೀನಿರಲು ಸನಿಹ ಬಾಳು ಬೆಳಗುವುದು ಎನಿಸಿತ್ತು, ನನಗೆ,
ನಿನ್ನ ನೋವಿರಲು ಜಗದ ನೋವಿನ ಗೊಡವೆಯೇಕೆ.
ವಸಂತದ ಚೆಲುವು ಸ್ಥಿರವಾಗಿಹುದು ನಿನ್ನ ರೂಪಿನಲಿ,
ನಿನ್ನ ನಯನಗಳ ಹೊರತು ಜಗದಲ್ಲೇನಿಹುದು ಎನಿಸಿತ್ತು ||

ಇಲ್ಲ, ದುಃಖಗಳಿವೆ ಹಲವು ಜಗದೊಳು ವಿರಹದ ಹೊರತು;
ಸಂತಸಗಳಿವೆ ಅನುಭವಿಸಲು ಪ್ರೇಮಿಗಳ ಮಿಲನದ ಹೊರತು.
ಯುಗಯುಗಗಳಲ್ಲೂ ಹೆಣೆದ ಕರಾಳ ಕತ್ತಲೆಗಳ ಜಾಲವಿದೆ;
ಬಜಾರಿನಲಿ, ಬೀದಿಯಲಿ ಬಿಕರಿಗಿವೆ ಮನುಷ್ಯ ದೇಹಗಳು ||

ಧೂಳು, ರಕ್ತದಲಿ ಅದ್ದಿ ತೆಗೆದ ದೇಹಗಳಿವೆ,
ಮಾಗದ ಗಾಯಗಳ ರೋಗಿಷ್ಠ ದೇಹಗಳಿವೆ.
ಕಣ್ಣು ಕೀಳಲಾರೆನಲ್ಲಿಂದ ಸಾಧ್ಯವಿಲ್ಲ ನನ್ನಿಂದ
ನಿಜ, ನಿನ್ನ ಚೆಲುವು ಬಲು ಸೊಗಸು ಅಂದಿನಂತೆ; ||

ಆದರೂ ಪ್ರೇಮಿಗಳ ವಿರಹದ ಹೊರತು 
ನೂರೆಂಟು ನೋವಿಹುದು ಈ ಜಗದಲಿ
ಸಂತಸಗಳಿವೆ ಸಾವಿರ ಅನುಭವಿಸಲು 
ಪ್ರೇಮಿಗಳ ಮಿಲನದ ಹೊರತೂ ||

ಅಂದಿನ ಪ್ರೀತಿಯನ್ನರಸದಿರು, ಪ್ರಿಯತಮೆ, ಇಂದು ನನ್ನಿಂದ ||


- ಎಸ್.ಎನ್.ಸ್ವಾಮಿ 
  ಮೂಲ: ಫೈಜ್  ಅಹಮದ್  ಫೈಜ್


ವ್ಯಕ್ತಿ ಪರಿಚಯ - ಡಾ. ಎಚ್ ನರಸಿಂಹಯ್ಯ


ಡಾ. ಎಚ್ ನರಸಿಂಹಯ್ಯ 
"ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ವಿದ್ಯಾರ್ಥಿಯಾಗಿದ್ದಾಗ ನನ್ನ ಉಳಿವಿಗಾಗಿ, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂಬ ಹಠ, ಕಾಲೇಜು ಸೇರಿದಾಗ ಸ್ವಾತಂತ್ರ್ಯ ಚಳವಳಿಗಳಲ್ಲಿಯ ಹೋರಾಟ, ಅರ್ಥವಿಲ್ಲದ ನಂಬಿಕೆ, ಸಂಪ್ರದಾಯ, ಮೂಢನಂಬಿಕೆಗಳ, ಪವಾಡಪುರುಷರ ವಿರುದ್ಧ ಹೋರಾಟ ಹೀಗೆ ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ನಾನು ಜೀವನದಲ್ಲಿ ಒಂಟಿ, ಹೋರಾಟದಲ್ಲಿ ಒಂಟಿ" ಹೀಗೆ ತಮ್ಮ ಜೀವನದ ಬಗ್ಗೆ ಹೇಳಿಕೊಂಡಿರುವವರು ಛಲವಾದಿ, ವಿಚಾರವಾದಿ, ಶಿಕ್ಷಣತಜ್ಞರು ಚಿಂತಕರಾದ ಡಾ.ಹೆಚ್. ನರಸಿಂಹಯ್ಯನವರು.
ನರಸಿಂಹಯ್ಯನವರು ಹುಟ್ಟಿದ್ದು ಜೂನ್ 6, 1920 ರಂದು ಗೌರಿಬಿದನೂರಿನ ಹೊಸೂರಿನ ಬಡಕುಟುಂಬದಲ್ಲಿ. ತಂದೆ ಹನುಮಂತಪ್ಪ ಮತ್ತು ತಾಯಿ ವೆಂಕಟಮ್ಮ. ಇವರ ಶಿಕ್ಷಣ ಪ್ರಾರಂಭವಾದದ್ದು ಸ್ವಗ್ರಾಮದಲ್ಲಿ. ಶಾಲೆಯಲ್ಲಿ ಪಠ್ಯದ ಜೊತೆಗೆ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ, ಜಾತೀಯತೆ, ಅಸ್ಪೃಶ್ಯತೆ ಮೊದಲಾದವುಗಳ ಬಗ್ಗೆ ಶಿಕ್ಷಕರು ತಿಳಿಸುತ್ತಿದ್ದದ್ದು ಇವರ ಮೇಲೆ ಪ್ರಭಾವ ಬೀರಿತ್ತು. ಇವರು ಗಾಂಧೀಜಿಯವರ ಸರಳಜೀವನದಿಂದ ಪ್ರಭಾವಿತರಾಗಿದ್ದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ನೆಚ್ಚಿನ ಶಿಕ್ಷಕರ ಸಹಾಯದಿಂದ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಹೀಗೆ ಪ್ರಾರಂಭವಾದ ಇವರ ನ್ಯಾಷನಲ್ ಸ್ಕೂಲಿನೊಂದಿಗಿನ ಸಂಬಂಧ ಕೊನೆಯವರೆಗೂ ಮುಂದುವರಿದಿತ್ತು. ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಅಲ್ಲಿನ ಕೆಲಸಗಳನ್ನು ಮಾಡುತ್ತಾ ತಮ್ಮ ಓದನ್ನು ಮುಗಿಸಿದರು. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜಿಗೆ ಸೇರಿದರು. ಆ ಸಮಯದಲ್ಲಿ ಇವರ ಬಳಿ ಹಣವಿಲ್ಲದ ಕಾರಣ ಶಾಲೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಇವೆಲ್ಲದರ ನಡುವೆಯೂ ನರಸಿಂಹಯ್ಯನವರು ರಾಜ್ಯಕ್ಕೆ ಹನ್ನೊಂದನೆಯವರಾಗಿ ತೇರ್ಗಡೆಯಾದರು.
ನಂತರ ಇವರು ಬಿ ಎಸ್ ಸಿ(ಫಿಸಿಕ್ಸ್) ಆನರ್ಸ್ಗೆ ಸೇರಿದರು. ಎರಡೂವರೆ ವರ್ಷ ಮುಗಿದಿದ್ದ ಇವರ ವಿದ್ಯಾಭ್ಯಾಸ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಇಳಿದಿದ್ದರಿಂದ ಅಲ್ಲಿಗೆ ನಿಂತಿತು. ದೇಶದೆಲ್ಲೆಡೆಯಲ್ಲೂ " ಮಾಡು ಇಲ್ಲವೆ ಮಡಿ" ಚಳುವಳಿಯು ನಡೆಯುತ್ತಿತ್ತು. ಹಲವಾರು ನಾಯಕರುಗಳನ್ನು ಬಂಧಿಸಲಾಗಿತ್ತು. ಕಾಲೇಜುಗಳು ಚಳವಳಿಯ ಕೇಂದ್ರಗಳಾಗಿದ್ದವು. ನರಸಿಂಹಯ್ಯನವರನ್ನು ಎಚ್ಚರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಗೆ "ನಿಮ್ಮ ಕೆಲಸವನ್ನು ನೀವು ಮಾಡಿ, ನನ್ನ ಕೆಲಸವನ್ನು ನಾನು ಮಾಡುತ್ತೇನೆ" ಎಂದು ಉತ್ತರ ಕೊಟ್ಟಿದ್ದರಿಂದ ಅವರನ್ನು ಬಂಧಿಸಲಾಯಿತು. ಕ್ಷಮಾಪಣೆ ಪತ್ರವನ್ನು ಬರೆದು ಕೊಟ್ಟರೆ ಬಿಡುತ್ತೇವೆ ಎಂದಾಗ ಒಪ್ಪದ ಇವರನ್ನು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಸುಮಾರು ನಾಲ್ಕು ತಿಂಗಳ ಕಾಲದ ನಂತರ ಬಿಡುಗಡೆ ಮಾಡಿದರು. ಆದರೂ ಚಳವಳಿ ಮುಗಿಯುವವರೆಗೂ ಕಾಲೇಜಿಗೆ ಹೋಗುವುದಿಲ್ಲವೆಂದು ಕೊಂಡಿದ್ದ ಇವರು ಗಾಂಧೀಜಿಗೆ ಬೆಂಬಲ ಸೂಚಿಸುತ್ತ "ಇಂಗ್ಲಿಷರಿಗೆ ಧಿಕ್ಕಾರ" ಎಂದು ಘೋಷಣೆಯನ್ನು ಕೂಗುತ್ತಾ ಮೆರವಣಿಗೆ ಹೊರಟ ಇವರನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಮೂರು ತಿಂಗಳ ನಂತರ ಸೆರೆಮನೆಯಿಂದ ಹೊರ ಬಂದರು. 

ನಂತರ ಗಾಂಧೀಜಿ ಮೊದಲಾದ ನಾಯಕರುಗಳ ಬಿಡುಗಡೆಯಾಗಿ ಚಳವಳಿ ಮುಕ್ತಾಯಗೊಂಡಾಗ ಇವರು ಮತ್ತೆ ತಮ್ಮ ವಿದ್ಯಾಭ್ಯಾಸವನ್ನು  ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು  ಮುಂದುವರಿಸಿದರು. ಅಲ್ಲಿ  ಗುರು ತ್ಯಾಗೀಶಾನಂದರೊಡನೆ  ಮೌಢ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಬಿ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವಂತೆ ಗುರುಗಳು ಹೇಳಿದರೂ ಒಪ್ಪದ ಇವರು 1946ರಲ್ಲಿ ನ್ಯಾಶನಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು.
ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮೈಸೂರು ಚಲೋ ಚಳವಳಿ ಪ್ರಾರಂಭವಾಯಿತು. ಮತ್ತೊಮ್ಮೆ ಅವರಲ್ಲಿನ ರಾಷ್ಟ್ರಪ್ರೇಮ ಜಾಗೃತಗೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಇಳಿದರು. ನರಸಿಂಹಯ್ಯನವರು "ಇನ್ ಕಿಲಾಬ್" ಎಂಬ ಕೈ ಬರಹದ ಪತ್ರಿಕೆಯನ್ನು ಪ್ರಾರಂಭಿಸಿ ಸುಮಾರು 37 ಸಂಚಿಕೆಗಳನ್ನು ಪ್ರಕಟಿಸಿದರು. ನಂತರ ಕಾಂಗ್ರೆಸ್ ಮತ್ತು ಸರ್ಕಾರದ ನಡುವಿನ ಒಪ್ಪಂದದಿಂದಾಗಿ ಚಳವಳಿ ಮುಕ್ತಾಯವಾಯಿತು. ಇವರ ರಾಜೀನಾಮೆ  ಅಂಗೀಕಾರವಾಗದ ಕಾರಣ ಮತ್ತೆ ತಮ್ಮ ಅಧ್ಯಾಪಕ ವೃತ್ತಿ ಯನ್ನು ಮುಂದುವರಿಸಿದರು. ನಂತರ ಉನ್ನತ ವಿದ್ಯಾಭ್ಯಾಸವನ್ನು ಅಮೆರಿಕಾದಲ್ಲಿ ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು. ಮತ್ತೊಮ್ಮೆ ಅಮೆರಿಕಾ ದೇಶಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗಿ ಬಂದರು.
ನರಸಿಂಹಯ್ಯನವರು ಶಿಕ್ಷಣರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ನ್ಯಾಷನಲ್ ಸ್ಕೂಲಿನಿಂದ ತಮ್ಮ ವಿದ್ಯಾಯಾನವನ್ನು ಪ್ರಾರಂಭಿಸಿ ಆ ಕಾಲೇಜಿನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣರಾದರು. ನ್ಯಾಷನಲ್ ಕಾಲೇಜಿನಲ್ಲಿ ಸಹಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು.
ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಇವರು ನ್ಯಾಷನಲ್ ಕಾಲೇಜಿನಲ್ಲಿ "ಬೆಂಗಳೂರು ಸೈನ್ಸ್ ಫೋರಂ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇಲ್ಲಿ ತಂತ್ರಜ್ಞಾನ, ವೈದ್ಯಕೀಯ, ಮನಶಾಸ್ತ್ರ ಮೊದಲಾದವುಗಳ ಬಗ್ಗೆ  ಉಪನ್ಯಾಸಗಳನ್ನು ನೀಡಲಾಗುತ್ತಿತ್ತು.
ವಿದ್ಯಾರ್ಥಿಗಳಿಗೆ ನೀತಿ ಹಾಗೂ ಆರೋಗ್ಯದ ಬಗ್ಗೆ ಅರಿವು ನೀಡುವ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ  ಲೈಂಗಿಕ ಶಿಕ್ಷಣವನ್ನು ನೀಡುವ ಹೊಸ ಪ್ರಯೋಗವನ್ನು ಜಾರಿಗೆ ತಂದರು.
ಇವರ ಮತ್ತೊಂದು ಪ್ರಯೋಗವೆಂದರೆ ಪರೀಕ್ಷಾ ಮೇಲ್ವಿಚಾರಕರಿಲ್ಲದೆ ಪರೀಕ್ಷೆಗಳನ್ನು  ನಡೆಸಿದ್ದು. ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಲು ಇವರು ಹಲವಾರು ಶಿಬಿರಗಳನ್ನು ನಡೆಸಿದರು. ನರಸಿಂಹಯ್ಯನವರು ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷತೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ವಿಶೇಷವೆಂದರೆ ಆ ಸಂಸ್ಥೆಗಳಲ್ಲಿ ವಂತಿಗೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ.
ನರಸಿಂಹಯ್ಯನವರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಮ್ಮೆ ಬೇಸಿಗೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪಾನಕವನ್ನು ಕುಡಿಯಲು ನೀಡಿದ್ದರು. ಇವರಿಗೆ ಕನ್ನಡ ನಾಟಕಗಳಲ್ಲಿ ತುಂಬಾ ಆಸಕ್ತಿಯಿತ್ತು. ಇವರು ಪ್ರಿನ್ಸಿಪಾಲರಾಗಿದ್ದಾಗ ಕಾಲೇಜಿನಲ್ಲಿ ಇಂಟರ್ ಸೆಕ್ಷನ್ ನಾಟಕ ಸ್ಪರ್ಧೆಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದರು. ಇವರು ವಿದ್ಯಾರ್ಥಿಗಳೊಂದಿಗೆ ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳನ್ನು ಆಡುತ್ತಿದ್ದರು.
   ನರಸಿಂಹಯ್ಯನವರು ಬಾಲ್ಯದಿಂದಲೂ ಸ್ವತಂತ್ರವಾಗಿ ಆಲೋಚಿಸುವ ಗುಣವನ್ನು  ಹೊಂದಿದ್ದರು. ಇವರ ತಂದೆ ತೀರಿಹೋದಾಗ ತಮ್ಮ ತಲೆಗೂದಲನ್ನು ತೆಗೆಸಿಕೊಳ್ಳಲು ಒಪ್ಪಲಿಲ್ಲ. ಇವರ ಮೂಢನಂಬಿಕೆಗಳ ವಿರುದ್ಧ ಬರೆದಿರುವ ಲೇಖನಗಳು " ತೆರೆದ ಮನ" ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಇವರು ಜ್ಯೋತಿಷ್ಯ ಮತ್ತು ಪವಾಡಪುರುಷರ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಒಮ್ಮೆ ಸಾಯಿಬಾಬರಿಗೆ "ನೀವು ಗಾಳಿಯಿಂದ ವಸ್ತುಗಳನ್ನು ಸೆಳೆದು ಕೊಡುವಂತಹ ಪವಾಡಗಳನ್ನು ಮಾಡುತ್ತಿರುವುದೇ ಹೌದಾದಲ್ಲಿ ನನಗೆ ಶೂನ್ಯದಿಂದ ಕುಂಬಳಕಾಯಿಯನ್ನು ಸೃಷ್ಟಿಸಿಕೊಡಿ" ಎಂದು ಸವಾಲನ್ನು ಹಾಕಿದ್ದರು.
ಇವರು ಶಿಕ್ಷಣಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು  ಕಂಡ ಸರ್ಕಾರ ಇವರನ್ನು 1972 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಿತು. ನಂತರ ನಾಗರಬಾವಿಯಲ್ಲಿ ಪ್ರಾರಂಭವಾಗಿದ್ದ ಶಿಕ್ಷಣ ಸಂಸ್ಥೆಯ ಕಟ್ಟಡಗಳ ನಿರ್ಮಾಣವನ್ನು ತ್ವರಿತಗೊಳಿಸಿ ನಾಗರಬಾವಿಯನ್ನು 'ಜ್ಞಾನಭಾರತಿ"ಯನ್ನಾಗಿ ಮಾಡಿದರು. ಇವರು ಉಪಕುಲಪತಿಗಳಾದ ನಂತರ ಮೌಢ್ಯತೆಯ ವಿರುದ್ಧ ಜನರನ್ನು ಜಾಗೃತಗೊಳಿಸಲು ವಿಶ್ವವಿದ್ಯಾನಿಲಯದ ವತಿಯಿಂದ "ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ಸಮಿತಿ"ಯನ್ನು  ನೇಮಕ ಮಾಡಿದರು. ಈ ಸಮಿತಿಯು ಪವಾಡಪುರುಷರು ನಡೆಸುತ್ತಿದ್ದ ಪವಾಡಗಳನ್ನು ಬಯಲು ಪಡಿಸಿತು. 1980 ರಲ್ಲಿ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.
ಇವರು ತಮ್ಮ ಸೇವೆ ಮತ್ತು ಸಾಧನೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದರು. 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ಕೇಂದ್ರ ಸರ್ಕಾರ "ಪದ್ಮಭೂಷಣ" ಪ್ರಶಸ್ತಿಯನ್ನು ನೀಡಿತು. 1990ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ನ್ನು ಪಡೆದುಕೊಂಡರು. ಗುಲ್ಬರ್ಗ. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನ್ನ ನೀಡಿ ಗೌರವಿಸಿತು. ಹಿಂದುಳಿದವರು ಏಳ್ಗೆಗಾಗಿ ದುಡಿದವರಿಗೆ ನೀಡುತ್ತಿದ್ದ ದೇವರಾಜ್ ಅರಸ್ ಪ್ರಶಸ್ತಿಯನ್ನು 1994 ರಲ್ಲಿ ಪಡೆದರು. ಇವರ ಮೌಢ್ಯತೆಯ ವಿರುದ್ಧ ನಡೆಸಿದ ಹೋರಾಟಕ್ಕಾಗಿ ಅಮೆರಿಕದ ಪ್ರಕೃತ್ಯತೀತವಾದ ಘಟನೆಗಳನ್ನು ವೈಜ್ಞಾನಿಕವಾಗಿ ಸಂಶೋಧಿಸುವ ಸಮಿತಿಯಿಂದ ಫೆಲೋಶಿಪ್ ನ್ನು ಪಡೆದ ಭಾರತದ ಏಕೈಕ ವ್ಯಕ್ತಿ ನರಸಿಂಹಯ್ಯನವರು. 1942 ರಲ್ಲಿ ನಡೆದ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಸರ್ಕಾರ ತಾಮ್ರಪತ್ರವನ್ನು ನೀಡಿತು.
1992 ರಲ್ಲಿ ಇವರ " ತೆರೆದ ಮನ" ಎಂಬ ಪತ್ತಿಕಾಲೇಖನಗಳ ಸಂಗ್ರಹವು ಪ್ರಕಟವಾಯಿತು. 1995 ರಲ್ಲಿ ಇವರ ಆತ್ಮಕಥೆ "ಹೋರಾಟದ ಹಾದಿ" ಪ್ರಕಟವಾಯಿತು.
ಮೌಢ್ಯತೆಯ ವಿರೋಧಿಯಾಗಿದ್ದ ಇವರು  "ಯಾವ ಧಾರ್ಮಿಕ ಅಂತ್ಯ ಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ ಮತ್ತು ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜ ಕೊಡಕೂಡದು" ಎಂದು ಉಯಿಲನ್ನು ಬರೆದಿದ್ದ ನರಸಿಂಹಯ್ಯನವರು ಜನವರಿ 31, 2005 ರಲ್ಲಿ ಇಹಲೋಕ ತ್ಯಜಿಸಿದರು.
  ಹುಟ್ಟಿನಿಂದಲೂ ಬಡತನದಲ್ಲೇ ಇದ್ದ ನರಸಿಂಹಯ್ಯನವರು ದುಡಿಯುವಾಗಲೂ ಸಹ ತಮ್ಮ ಗಳಿಕೆಯ ಹಣವನ್ನೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದು ಸರಳ ಜೀವನವನ್ನು ನಡೆಸಿ ಎಲ್ಲರಿಗು ಆದರ್ಶಪ್ರಾಯರಾಗಿದ್ದಾರೆ.
 - ವಿಜಯಲಕ್ಷ್ಮಿ  ಎಂ ಎಸ್

ಕವನ - ಅವಳು


ಇಂದು ಮುಂಜಾವಿನಲಿ
ಅವಳ ನೋಡಿದ ಕ್ಷಣದಿಂದ
ಬರೆಯಬೇಕೆನಿಸಿದೆ...
ಅವಳ ಬಗ್ಗೆ...,
ಅವಳ ಮಾತು,
ನೋಟ.......,
ಇವೆಲ್ಲದರ ಬಗ್ಗೆ!!
ತಡೆಯದಾಗಿದೆ ಮನಸು
ಹಾಕಲೇಬೇಕು ಹೊರಗೆ
ಮನದ ಮಾತುಗಳ..
ಎಂದಿನಂತೆ ಇಂದೂ,
ಎದ್ದೆ, ಸ್ನಾನ, ತಿಂಡಿ.
ಹೊರಬಿದ್ದೆ.....,
ಆದರೆ,
ಅವಳ ಚಿತ್ರಣ,
ಕಣ್ಣ ತುಂಬಿದೆ.
ಆಡಿದ ಮಾತು
ಎದೆಯ ಮೇಲಿದೆ.
ಅವಳ ನಾ ನೋಡಿದಾಗ
ನಾ ದಿನವೂ ನೋಡುತಿದ್ದ
ಮನೆಗೆ ಹೋದಳು.
ಹತ್ತಿರವಾಗುತಿದ್ದಂತೆ
ನಾನಲ್ಲಿಗೆ
ಗೇಟು ದಾಟಿ
ಹತ್ತಿರ ಬಂದಳು
ಅವಳ ನೋಡಿದೆ
ನೋಡಿಯೂ ನೋಡದಂತೆ!!
ಬಲಗೈಯಲ್ಲಿ
ಪುಟ್ಟ ಪ್ಲಾಸ್ಟಿಕ್ ಹಾಳೆಯ ಗಂಟು.
ಅದರ ಮೇಲೆ
ಮಾಸಿದ ಇಪ್ಪತ್ತರ ನೋಟು.
ಎಡಗೈಯಲ್ಲಿ
ಊರುಗೋಲು.
ಮಾಸಿಹೋಗಿತ್ತು
ಅವಳಂತೆ..,
ಅವಳ ಬಟ್ಟೆ, ನೋಟದಂತೆ!!
ಬೆನ್ನ ಮೇಲೆ,
ಭಾರವಿಲ್ಲದಿದ್ದರೂ
ಹೊರಲಾರದೆ ಹೊತ್ತ
ಬಟ್ಟೆ ಗಂಟು
ಬಾಗಿದ ಸೊಂಟ
ಮೈ ಹಣ್ಣುಹಣ್ಣಾಗಿ
ಸುಕ್ಕುಗಟ್ಟಿತ್ತು...
ಕೈ ಚಾಚುವಳೇನೋ...,
ಎಂದುಕೊಂಡೆ.
ಇಲ್ಲ!! ಚಾಚಲಿಲ್ಲ!!
ಆಗಲೇ
ಎದೆಯ ಹೊಕ್ಕಿದ್ದು
ಅವಳ ಮಾತು..,
ನನ್ನೆಡೆಗೆ ದೃಷ್ಟಿ ಬೀರಿ
ಹೇಳಿದಳು
ತನ್ನೊಳಗಿದ್ದೆಲ್ಲವನ್ನೂ
ಹೊರ ಹಾಕುವಂತೆ..,
"ಏನ್ ಮಾಡ್ಲಿ ರೀ ಯಪ್ಪಾ,
ಹೊಟ್ಟಿ ಕೇಳ್ಬೇಕಲ್ಲಾ .....??"
- ಮಹಾಂತೇಶ ಬಿ ಬಿ

ಅನುಭವ - ನನ್ನ ಮೊದಲ ಪ್ರೇಮ ಪ್ರಸಂಗ


ಕೆಲ ದಿನಗಳ ಹಿಂದೆ ನಾನು ನನ್ನ ವಿದ್ಯಾರ್ಥಿಗಳಿಗೆ ವಾಟ್ಸ್ ಆಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದೆ. “ನಾನು ಸಧ್ಯದಲ್ಲೇ ನನ್ನ ನೆನಪಿನಂಗಳದಿಂದ ಆಯ್ದ ಕೆಲವು ಘಟನೆಗಳನ್ನು ಬರೆದು ಪ್ರಕಟಿಸಬೇಕೆಂದಿದ್ದೇನೆ. ನಿಮಗೆ ನನ್ನ ತರಗತಿಯಲ್ಲಿ ನಡೆದ ಅಥವಾ ನಿಮ್ಮನ್ನು ಗಾಢವಾಗಿ ಮುಟ್ಟಿದ ವಿಷಯಗಳನ್ನು ನನಗೆ ಬರೆದು ಕಳುಹಿಸಿ.”
ಅದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಬ್ಬ ಹುಡುಗಿ ಮಾತ್ರ ಸ್ವಲ್ಪ ತರಲೆ ಸ್ವಭಾವದವಳು- “ಮೇಡಂ ನಿಮ್ಮ ಪ್ರೀತಿಯ ಅನುಭವದ ಕುರಿತು ಏನಾದರೂ?” ನಾನು ನಕ್ಕು ಹೇಳಿದೆ “ನಾನು ಸದಾ ಯಾರನ್ನಾದರೂ ಪ್ರೀತಿಸುತ್ತಲೇ ಬಂದಿದ್ದೇನೆ. ನನಗೆ ಐನ್‍ಸ್ಟೀನ್ ಎಂದರೆ ಬಹಳ ಪ್ರೀತಿ, ಚಾರ್ಲಿ ಚಾಪ್ಲಿನ್ ಅಂದರೆ ಜೀವ. ಹೀಗೆ ಈ ಪಟ್ಟಿ ಬಹಳ ದೊಡ್ಡದು. . .” ಎಂದೆ. “ಅಲ್ಲ ಮೇಡಂ, ನೀವು ಸಣ್ಣವರಿದ್ದಾಗ?” ನಾನು ಮತ್ತೆ ನನ್ನ ನೆನಪಿನ ಕಡತಗಳನ್ನು ಹುಡುಕಿದಾಗ ಸಿಕ್ಕದ್ದು ಅವಳಿಗೆ ಬರೆದು ಕಳುಹಿಸಿದೆ. ಅದು ಹೀಗಿದೆ:

ಆತನನ್ನು ಮೊದಲು ಭೇಟಿಯಾದಾಗ ನನಗಿನ್ನೂ 11 ವರ್ಷ. ಆತ ಕಪ್ಪಗಿದ್ದ. ಮಾಟವಾದ ಎದೆ, ಚೂಪಾದ ಕಣ್ಣುಗಳು, ಕೇವಲ ಒಂದು ಬಿಳಿ ಪಂಚೆ ಉಟ್ಟಿದ್ದ ಆತ ಒಂದು ಆನೆಯ ಮೇಲೆ ಕುಳಿತು ಹತ್ತಿರ ಬರುತ್ತಿದ್ದರೆ, ನಾನು ಪರವಶಳಾಗಿ ಹೋಗಿದ್ದೆ. ದೂರದಲ್ಲಿ ಯಾರದೋ ದನಿ ಆತನ ಕುರಿತು ವಿವರಣೆ ನೀಡುತ್ತಿದ್ದರೆ, “ಬೆಳ್ಳಗಿರುವುದೇ ಚಂದ” ಎಂಬ ಮಾತುಗಳ ನಡುವೆ ಬೆಳೆದಿದ್ದ ನನಗೆ, ಕಪ್ಪಗಿರುವವರು ಇಷ್ಟೊಂದು ಸುಂದರವಾಗಿರಬಹುದೆಂದು ಕಲ್ಪಿಸಿಕೊಳ್ಳುವುದರಲ್ಲೇ ಪುಳಕ ಮೂಡಿತ್ತು. ಆತ ಆನೆಯಿಂದ ಇಳಿದ, ಯಾರೋ ಆನೆಗೆ ಕಬ್ಬು ತಂದು ಕೊಟ್ಟರು, ಆ ನಂತರ ಆತ ಆನೆಯ ಮೇಲೇರಿ ಮತ್ತೆ ಮುಂದೆ ಹೋದ. ಮಕ್ಕಳೆಲ್ಲಾ ಹಾಗೇ ನೋಡುತ್ತಾ ನಿಂತೇ ಇದ್ದರು. ಆ ಮಕ್ಕಳೊಂದಿಗೆ ನಾನೂ ಕೂಡ ಒಬ್ಬಳಾಗಿದ್ದೆ. ನನಗೆ ಅವನ ಮೇಲಿನ ಮನಸ್ಸು ಕೀಳಲಾಗಲಿಲ್ಲ. ಮುಂದೆ ನಾನು ನಿರ್ಧರಿಸಿದೆ - ನಾನೇನಾದರೂ ಮುಂದೆ ಮದುವೆಯಾಗುವುದಿದ್ದರೆ, ಇವನನ್ನೇ, ಅಥವಾ ಇಂತಹವನನ್ನೆ. ವರ್ಷಗಟ್ಟಲೇ ಅವನಿಗಾಗಿ ಹುಡುಕಾಡಿದ್ದೇನೆ. ಆತ ಮತ್ತೆ ಅದೇ ಆನೆಯ ಮೇಲೆ ಕೂತು ಬರುತ್ತಾನೆ, ಆ ನಂತರ ಮರೆಯಾಗುತ್ತಾನೆ. ಹೀಗೆ ನಲವತ್ತು ವರ್ಷಗಳು ಕಳೆದಿವೆಯಾದರೂ ನನಗಾತ ಮಾತನಾಡಲು ಸಿಕ್ಕಿಲ್ಲ. ಸಿಕ್ಕುವನೆಂಬ ಭರವಸೆಯೂ ಇಲ್ಲ. 
ಆತ ಯಾರೆಂದು ನಿಮಗೆ ಕುತೂಹಲವಿರಬಹುದು. ನನ್ನ ವಯಸ್ಸಿನ ಎಲ್ಲರಿಗೂ ಈತನ ಪರಿಚಯವಿದ್ದೇ ಇರುತ್ತದೆ. ನನಗಂತೂ ಈತನ ಪರಿಚಯವಾದದ್ದು ನನ್ನ ಕನ್ನಡ ಮೇಡಂ ಸಾವಿತ್ರಮ್ಮನ ಮೂಲಕ. ಆಗ ನಾನು ಏಳನೇ ತರಗತಿಯಲ್ಲಿದ್ದೆ. ನಮ್ಮ ಮೇಡಂ ನಮ್ಮ ಕನ್ನಡ ಪಠ್ಯದಲ್ಲಿದ್ದ ಮಾವುತನ ಬಗ್ಗೆ ವಿವರಿಸಿ ಹೇಳುತ್ತಿದ್ದರೆ, ಅವರು ಸವಿದಷ್ಟೇ ಚೆನ್ನಾಗಿ ಆ ವಿವರಣೆಯನ್ನು ಸವಿದ ನನಗೆ ಇಂದಿಗೂ ಅವರ ದನಿ ಕೇಳಿಸುತ್ತಿದೆ. ಪ್ರತಿ ಬಾರಿ ನಾನು ಆನೆ ಮೇಲೆ ಕುಳಿತ ಯಾರೇ ಮಾವುತನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ನೋಡಿದಾಗ ನಾನು ಮತ್ತೆ ಅವರ ತರಗತಿಯಲ್ಲಿ ಕೂತು ಅವರ ದನಿಯೊಂದಿಗೆ ದೂರಲೋಕಕ್ಕೆ ತೇಲುತ್ತಾ ಹೋಗುತ್ತೇನೆ. 
ಮಾತೃಭಾಷೆ ಕೊಂಕಣಿ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಾ ಬೆಳೆದದ್ದು ಮುಂಬೈ, ಆ ನಂತರ ಕರ್ನಾಟಕಕ್ಕೆ ಬಂದಿದ್ದ ನನಗೆ ಕನ್ನಡವೆಂದರೆ ಇಷ್ಟು ರುಚಿಕರ ಎಂದು ತೋರಿಸಿಕೊಟ್ಟ ಆ ನನ್ನ ಗುರುಗಳನ್ನು ನಾನು ಎಂದಿಗೂ ಮರೆಯಲಾರೆ. ಇಂದಿಗೂ ನನಗೆ ಕನ್ನಡ ಚೆನ್ನಾಗಿ ಬರುತ್ತದೆಯೆಂದಾದರೆ, ಅದಕ್ಕೆ ನಾನು ನನ್ನ ಕನ್ನಡ ಟೀಚರ್ ಸಾವಿತ್ರಮ್ಮ ಮೇಡಂಗೆ ಋಣಿ.
ಅವರು ನನ್ನಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕುರಿತು ಪ್ರೀತಿ ಬೆಳೆಸಿದರು. ವ್ಯಾಕರಣವೆಂದರೇನೆಂದು ತಿಳಿಯದಿದ್ದ ನನಗೆ ಸಂಧಿ, ಸಮಾಸಗಳನ್ನು ಪರಿಚಯಿಸಿದರು, ಭೂತ, ಭವಿಷ್ಯ ಕಾಲ, ವಿಭಕ್ತಿ ಪ್ರತ್ಯಯ- ಇವೆಲ್ಲಾ ಏನೆಂದು ಅರ್ಥ ಮಾಡಿಸಿದವರು ಅವರೇ. ಪ್ರೇಮದ ಮೊದಲ ಪಾಠ ಕಲಿಸಿಕೊಟ್ಟ ಅವರು ನನ್ನಲ್ಲಿ ಮುಂದೆಯೂ ಕೂಡ ಆ ಸಾಹಿತ್ಯ ಪ್ರೀತಿ ಹಾಗೇ ಉಳಿಯುವಂತೆ ಮಾಡಿದವರು. 
ಈಗ ಶಿಕ್ಷಕಿಯಾಗಿ ನಾನು ಕೂಡ ನನ್ನ ವಿದ್ಯಾರ್ಥಿಗಳಿಗೆ ಇಂತಹುದೇ ಪ್ರೀತಿ ಹಂಚುತ್ತಿದ್ದೇನೆ. ಸಾವಿತ್ರಮ್ಮ ಮೇಡಂ ಅವರ ಪರಂಪರೆಯನ್ನು ಹಾಗೇ ಮುಂದುವರೆಸುತ್ತಿದ್ದೇನೆ. 

- ಡಾ.ಸುಚೇತಾ ಪೈ



ಶಾಲಾ ಡೈರಿ 8 -

ಪರೀಕ್ಷೆಗಳ ಬಗ್ಗೆ
[ಅಮೇರಿಕಾದ ಇಂಗ್ಲಿಷ್ ಭಾಷಾತಜ್ಞರಾದ ನಾರ್ಮನ್ ಲೂಯಿಸ್  ರವರ ಲೇಖನದ ಅನುವಾದ]


ಪರೀಕ್ಷೆಗಳು ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸಬಹುದಾಗಿದೆ. ಯಾವಾಗ ನೀವು ಒಂದು ಪರೀಕ್ಷೆಯನ್ನು ನಿಮ್ಮ ಮೌಲ್ಯವನ್ನು ನಿರ್ಧರಿಸುವ, ನಿಮ್ಮ ಗುಣಗಳನ್ನು ತೀರ್ಮಾನಿಸುವ ಅಥವಾ ನಿಮ್ಮ ಬುದ್ಧಿಶಕ್ತಿಯನ್ನು ಅಳೆಯುವ ಸಾಧನವೆಂದು ಭಾವಿಸುವಿರೊ, ಆಗ ನೀವು ಪರೀಕ್ಷೆಯನ್ನು ವೇದನಾದಾಯಕ ಅನುಭವವಾಗಿ, ಉದ್ವೇಗ ಸೃಷ್ಟಿಸುವ ಉಗ್ರಪರೀಕ್ಷೆ ಎಂದು ಪರಿಗಣಿಸುವಿರಿ.
ಒಂದು ವಿವೇಚನಾಯುಕ್ತ ಸಮಾಜದಲ್ಲಿ ಪರೀಕ್ಷೆಯೆಂದರೆ ಮೇಲೆ ಹೇಳಿದ ಯಾವ ವಿಷಯವೂ ಅಲ್ಲ. ನೀವು ಎಷ್ಟರ ಮಟ್ಟಿಗೆ ಕಲಿತಿದ್ದೀರೆಂದು ಅಳೆಯುವ ಸಾಧನವಷ್ಟೇ. ನೀವು ಪರೀಕ್ಷೆಯಲ್ಲಿ ಪಾಸು ಅಥವಾ ನಪಾಸು ಆಗುವುದಿಲ್ಲ. ಪಾಸು ಮತ್ತು ನಪಾಸು ಎಂಬ ಪದಗಳು ಎರಡು ಕೊನೆಗಳನ್ನು ತೋರಿಸುತ್ತವೆ. ನಿಮ್ಮ ಇಡೀ ಜೀವನವನ್ನು ದಾಳದ ಒಂದು ಎಸೆತದಲ್ಲಿ ತೀರ್ಮಾನಿಸಲಾಗದು.
ವಾಸ್ತವವಾಗಿ, ಪರೀಕ್ಷೆ ಎಂದರೆ ಒಂದು ಅಳೆಯುವ ಸಾಧನ. ಒಂದು ಕಾರಿನಲ್ಲಿ ಸೂಚಕವಿದ್ದಂತೆ. ಆ ಸೂಚಕದಲ್ಲಿ ನಿಮ್ಮ ಪೆಟ್ರೋಲ್ ಟ್ಯಾಂಕ್‍ನಲ್ಲಿ ಪೆಟ್ರೋಲ್ ಇದೆಯಾ, ನೀವೆಷ್ಟು ಕಿಲೋಮೀಟರ್ ಚಲಿಸಿದ್ದೀರಾ, ಬ್ಯಾಟರಿ ಸರಿಯಿದೆಯೇ ಇತ್ಯಾದಿಗಳನ್ನು ತೋರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಸೂಚಕ ಇನ್ನಷ್ಟು ಸಾಮರ್ಥ್ಯದಿಂದ ಚಲಿಸಬಹುದೆಂಬುದನ್ನು ಸೂಚಿಸುತ್ತದೆಯೇ ಹೊರತು ನಿಮ್ಮನ್ನು ಓರ್ವ ವ್ಯಕ್ತಿಯಾಗಿ ನಿಮ್ಮ ಮೌಲ್ಯವನ್ನು ಅಳೆಯುವುದಿಲ್ಲ.
ವಿವಿಧ ಪರೀಕ್ಷೆಗಳೂ ಸಹ ಅಷ್ಟೆಯೇ. ನಿಮಗೆ ಕೆಲವು ಮಾಹಿತಿಗಳನ್ನು ನೀಡಿ ಇನ್ನೂ ಹೆಚ್ಚು ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ –
1.      ನೀವು ಈಗಾಗಲೇ ಕಲಿತಿರುವುದನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಇಲ್ಲಿ ನಿಮಗೆ ನೀವು ಕಲಿತಿರುವುದನ್ನು ನೆನಪಿಸಿಕೊಂಡು ಬರೆಯಲು ಅವಕಾಶವಿದೆ.
2.      ಯಶಸ್ವಿ ಓದುವಿಕೆಗೆ ಒಂದು ಮುಖ್ಯ ಸಾಧನ ಪರೀಕ್ಷೆ. ನಾನು ಇನ್ನೆಷ್ಟು ಕಲಿಯಬೇಕೆಂಬುದನ್ನು ಸೂಚಿಸುತ್ತದೆ.
3.      ಪರೀಕ್ಷೆಗಳು ನಮ್ಮ ತಪ್ಪನ್ನು ತೋರಿಸುವುದರಿಂದ ಹೋಲಿಕಾ ದೃಷ್ಟಿಯಲ್ಲಿ ನಾವು ಯಾವ ವಿಷಯದಲ್ಲಿ ಕಡಿಮೆ ತಿಳಿದಿದ್ದೇವೆಂದು ಸೂಚಿಸುವುದರಿಂದ ಅವು ನಮ್ಮ ಕಲಿಕಾ ಸಾಮರ್ಥ್ಯವನ್ನು ಸೂಚಿಸುತ್ತವೆ. ಈ ಪ್ರಪಂಚದಲ್ಲಿ ಯಾವುದೂ ಮತ್ತು ಯಾರೂ ಶೇಕಡ 100ರಷ್ಟು ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಬಹಳಷ್ಟು ಜನರಿಗೆ ತಮ್ಮ ಬಲಹೀನತೆ ಎಲ್ಲಿದೆ ಎಂದು ತಿಳಿದರೆ ತಮ್ಮನ್ನೆ ಉತ್ತಮಗೊಳಿಸಲು ಅವಕಾಶವಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ನೀವು ಕಡಿಮೆ ಅಂಕ ಗಳಿಸಿದರೆ, ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಾ, ಹೆಚ್ಚಿನ ಅಂಕ ಗಳಿಸಲು ಎಲ್ಲಿ ನೀವು ಹೆಚ್ಚು ಶ್ರಮಿಸಬೇಕು ಎಂಬುದನ್ನು ಮಾತ್ರ ಅದು ಸೂಚಿಸುತ್ತದೆ.
4.      ಪರೀಕ್ಷೆಗಳಿಂದಾಗುವ ಇನ್ನೊಂದು ಸಹಾಯವೆಂದರೆ ‘ಸಾಧಿಸಿದ ಸಂತೋಷ’. ನಿಮ್ಮ ಅಂಕಗಳು ಎಷ್ಟೇ ಆಗಲಿ, ಅದೇ ನಿಮ್ಮ ಸಾಧನೆ. ಏನೂ ತಿಳಿಯದೆ ಇರುವಂತಹ ಪರಿಸ್ಥಿತಿಯಿಂದ ಇಲ್ಲಿಯವರೆಗೂ ಬಂದಿದ್ದೀರಿ ಎಂದರ್ಥ. ಈಗ ಇದರ ಆಧಾರದ ಮೇಲೆ ಇನ್ನಷ್ಟು ಪರಿಶ್ರಮದಿಂದ ಇನ್ನೂ ಉತ್ತಮವಾಗಿ ಕಲಿಯಲು ಸಾಧ್ಯ.
- ಅನುವಾದ - ಸುಧಾ ಜಿ 


ಅನುವಾದಿತ ಕವಿತೆ - ತಾಜಮಹಲು



ಪ್ರೀತಿಯ ಪ್ರತೀಕ ತಾಜಮಹಲದು ನಿನಗೆ, ನಿಜ
ಮಧುರ ವಚನಕೆ ಸಾಕ್ಷಿ ನಿನಗದು, ಅದೂ ನಿಜ. ||

ಆದರೆ ಪ್ರಿಯೆ, ನನ್ನನ್ನು ಬೇರೆಲ್ಲಾದರೂ ಭೇಟಿಯಾಗು
ನವಾಬನ ಆಸ್ಥಾನದಲಿ ಗರೀಬನ ತಿರುಗಾಟವೇ ಹೇಳು,
ರಾಜ ವೈಭವ ಮೆರೆದಾಡುವ ರಾಜಬೀದಿ ರಸ್ತೆಯಿದು,
ಅದರೊಳು ಪ್ರೀತಿಸಿದ ಪ್ರೇಮಿಗಳ ಪಯಣವೇ ಹೇಳು ||

ಜಗಕೆ ಸಾರುವ ಪ್ರೇಮ ನಿಷ್ಠೆಯ ಹಿಂದೆ, ನಲ್ಲೆ ನೀ
ವೈಭವದ ಪತಾಕೆ ಹಾರಾಡುವುದ ನೋಡಬೇಕಿತ್ತು
ನವಾಬರ ಬೆಳಗುವ ಸಮಾಧಿಗಳ ಸೆಳೆತಕೆ ಸಿಲುಕಿದಾಕೆ
ಕತ್ತಲು ಕವಿದ ನಮ್ಮ ಮನೆಗಳ ನೆನಪಿಸಿಕೊಳ್ಳಬೇಕಿತ್ತು ||

ಲೆಕ್ಕವಿರದಷ್ಟು ಜನ ಪ್ರೀತಿಸಿಹರು ಜಗದೊಳಗಿಂದು
ಅವರ ಪ್ರೀತಿ ನಿಜವಲ್ಲವೆಂದು ಯಾರು ಹೇಳಬಲ್ಲರು
ಆದರದನು ಜಗಕೆ ಸಾರಲು ಅವರಿಗಿರಲಿಲ್ಲ ಸಾಧನಗಳು
ಏಕೆಂದರೆ ಅವರೂ ಸಹ ನಮ್ಮಂತೆಯೇ ಗರೀಬರು ||

ರಾಜ ವೈಭವದೀ ಸಂಕೇತಗಳು, ಅದರ ಭವ್ಯ ಶೈಲಿ,
ಅರಮನೆಗಳು, ಕೋಟೆ-ಕೊತ್ತಲಗಳು, ಮಹಲುಗಳು
ಭುವನದ ಮೇಲೆ ಬೆಳಗುತಿಹುದು ಅವುಗಳ ರಂಗು
ಅದರಲ್ಲಿಹುದು ನನ್ನ ನಿನ್ನ ಪೂರ್ವಜರ ರಕ್ತಕಲೆಗಳು ||

ಕೇಳು ಗೆಳತಿ, ನಮ್ಮವರೊಳಗೂ ಹುಟ್ಟಿ ಬೆಳೆದಿತ್ತು ಪ್ರೀತಿ
ಮನೋಹರ ಕಲೆಗೆ ರೂಪ ನೀಡಿತ್ತು ಅವರ ಕಲೆಯು;
ಆದರೆ ಬೇನಾಮಿಯಾದವು ಅವರ  ಪ್ರಿಯರ ಗೋರಿಗಳು
ಅವುಗಳ ಮೇಲೆಂದೂ ಬೆಳಗುವುದಿಲ್ಲ ಹಣತೆಗಳು ||

ಈ ಉದ್ಯಾನವನ, ಯಮುನಾ ನದಿಯ ತೀರ, ಮಹಲು,
ಕೆತ್ತನೆ ಕೆಲಸದ ಗೋಡೆ-ಬಾಗಿಲುಗಳು, ಮೆಹ್ರಾಬ್, ಕಿಟಕಿಗಳು;
ಸಂಪತ್ತಿನ ಸಹಾಯದಿಂದ ನವಾಬ ತಾಜಮಹಲನು ಕಟ್ಟಿ
ನಮ್ಮಂತಹ ಗರೀಬರ ಪ್ರೀತಿಯನ್ನು ಅಣಕಿಸಿಬಿಟ್ಟ ||

ಪ್ರಿಯೆ ನನ್ನನ್ನು ಬೇರೆಲ್ಲಾದರೂ ಭೇಟಿಯಾಗು ||


- ಎಸ್.ಎನ್.ಸ್ವಾಮಿ (02.12.2017)
ಮೂಲ: ಸಾಹಿರ್ ಲೂಧಿಯಾನ್ವಿ


ಸಾಹಿರ್ ಲೂಧಿಯಾನ್ವಿ