Pages

ಸ್ವಾತಂತ್ರ್ಯಯೋಧರು



1. ಖಾನ್ ಅಬ್ದುಲ್ ಗಫಾರ್ ಖಾನ್ -  1890 -1987  - ಪೇಶಾವರ್ ಜಿಲ್ಲೆಯ ಉಥಾನ್ ಜೈ ಎಂಬ ಹಳ್ಳಿಯಲ್ಲಿ ಜನಿಸಿದರು. ‘ಫಕ್ತೂನ್’ ಎಂಬ ಪತ್ರಿಕೆಯ ಮೂಲಕ ಗಡಿನಾಡಿನಲ್ಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಚಾರಗಳನ್ನು ಹರಡಲಾರಂಭಿಸಿದರು. ‘ಕೆಂಪಂಗಿ ದಳ’ ಎಂಬ ಯುವಜನರ ಸಂಘಟನೆಯನ್ನು ಸಂಘಟಿಸಿದ್ದರು ಮತ್ತು ಬ್ರಿಟಿಷರಲ್ಲಿ ಆ ಸಂಘಟನೆ ಭಾರಿ  ನಡುಕವನ್ನು ಹುಟ್ಟಿಸಿತ್ತು. ಗಾಂಧೀಜಿಯವರ ಅಭಿಮಾನಿಯಾಗಿದ್ದರೂ ಅವರ ಅಹಿಂಸಾವಾದವನ್ನು ಒಪ್ಪಿರಲಿಲ್ಲ. ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವುದನ್ನು ವಿರೋಧಿಸಿದರು. ಸ್ವಾತಂತ್ರ್ಯದ ನಂತರವೂ ಪಾಕಿಸ್ತಾನದಲ್ಲಿ ಜನ ಚಳುವಳಿಗಳನ್ನು ಸಂಘಟಿಸಿದರು. ಜನತೆ ಪ್ರೀತಿಯಿಂದ ಇವರನ್ನು ಬಾದ್‍ಶಾಹ್ ಖಾನ್ ಮತ್ತು ಗಡಿನಾಡ ಗಾಂಧಿ ಎಂದು ಕರೆದರು. 


2. ಅಲ್ಲೂರಿ ಸೀತಾರಾಮರಾಜು – 1897ರ ಜುಲೈ 4ರಂದು ಆಂಧ್ರಪ್ರದೇಶದ ವಿಶಾಖ ಜಿಲ್ಲೆಯ ಪಾಂಡ್ರಕಿ ಎಂಬಲ್ಲಿ ಜನಿಸಿದರು. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಟವನ್ನು ಆರಂಭಿಸಿದ ಇವರು ಮನ್ಯಾ ಬುಡಕಟ್ಟಿನ ಮೇಲೆ ಬ್ರಿಟಿಷರು ನಡೆಸುತ್ತಿದ್ದ ಆಮಾನವೀಯ ದೌರ್ಜನ್ಯವನ್ನು ವಿರೋಧಿಸಿ ಆ ಜನಾಂಗದವರನ್ನು ಸಂಘಟಿಸಲಾರಂಭಿಸಿದರು. 1922ರ ಸೆಪ್ಟೆಂಬರ್ 23ರಂದು ಅವರು ಗುಜ್ರಿಘಾಟ್ ಎಂಬಲ್ಲಿದ್ದ ಸೈನಿಕ ತುಕಡಿಯನ್ನು ನಾಶಗೊಳಿಸಿದರು ಮತ್ತು ಸಾರಿಗೆ, ಸಂಪರ್ಕ ಮತ್ತು ಟೆಲಿಗ್ರಾಫ್ ವ್ಯವಸ್ಥೆಯನ್ನು ಮುರಿದರು. 1924ರ ಮೇ 7ರಂದು ಅವರನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ಅಂದೇ ಅವರನ್ನು ಅಮಾನುಷವಾಗಿ ಕೊಂದರು.


3. ಅಶ್ಫಾಕುಲ್ಲಾ ಖಾನ್ -  1900 ರ ಅಕ್ಟೋಬರ್ 22ರಂದು ಉತ್ತರ ಪ್ರದೇಶದ ಶಾಜಹಾನ್‍ಪುರ್‍ನಲ್ಲಿ ಜನಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್ಲಾರೊಡಗೂಡಿ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್‍ಅನ್ನು ಆರಂಭಿಸಿದರು ಮತ್ತು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದರು. ಬ್ರಿಟಿಷರನ್ನು ವಿರೋಧಿಸಲು ಅವಶ್ಯವಿದ್ದ ಹಣವನ್ನು ಅವರಿಂದಲೇ ವಸೂಲು ಮಾಡಬೇಕೆನ್ನುವ ಸಿದ್ಧಾಂತವನ್ನು ಕ್ರಾಂತಿಕಾರಿಗಳು ನಂಬಿದ್ದರು.  ಕಾಕೋರಿ ರೈಲು ದರೋಡೆಯಲ್ಲಿ ಸರ್ಕಾರಿ ಹಣವನ್ನು ಲೂಟಿ ಮಾಡಿದ ಕೇಸ್‍ನಲ್ಲಿ ಬಂಧಿತರಾದರು. 1925ರ ಡಿಸೆಂಬರ್ 1925 ರಂದು ಅವರನ್ನು ಗಲ್ಲಿಗೆ ಹಾಕಲಾಯಿತು.


4. ಅರವಿಂದ ಘೋಷ್ – 1872ರ ಆಗಸ್ಟ್ 15ರಂದು ಕಲ್ಕತ್ತಾದಲ್ಲಿ ಜನಿಸಿದರು. 1898ರಲ್ಲಿ ಕ್ರಾಂತಿಕಾರಿ ಚಳುವಳಿಯಲ್ಲಿ ಸಕ್ರಿಯವಾಗಿ ಧುಮುಕಿದರು. ತಮ್ಮ ಬರಹಗಳ ಮೂಲಕ ಸ್ವಾತಂತ್ರ್ಯದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಯತ್ನಿಸಿದರು. ವಿದ್ಯಾರ್ಥಿಗಳ ಗುಪ್ತ ಸಂಘಟನೆಯಲ್ಲಿ ಸೇರಿದರು. 1905ರ ನವೆಂಬರ್ 9ರಂದು ಬೃಹತ್ ಮೆರವಣಿಗೆಯನ್ನು ಸಂಘಟಿಸಿದರು. ಅಲಿಪುರ್ ಬಾಂಬ್ ಕೇಸ್ ನಲ್ಲಿ ಬಂಧಿತರಾಗಿ, ದೋಷಮುಕ್ತರಾಗಿ ಬಿಡುಗಡೆ ಹೊಂದಿದರೂ ಸಹ ಸರ್ಕಾರ ಇವರ ಮೇಲೆ ಕಣ್ಣಿಟ್ಟಿತ್ತು. ಪಾಂಡೀಚೆರಿಗೆ ತೆರಳಿದ ಇವರು, ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. 1950 ಡಿಸೆಂಬರ್ 5ರಂದು ಮರಣ ಹೊಂದಿದರು. 


5. ಬಾಲಗಂಗಾಧರ ತಿಲಕ್ – ಮಹಾರಾಷ್ಟ್ರದ ರತ್ನಗಿರಿಯಲ್ಲಿ 1856ರ ಜುಲೈ 23ರಂದು ಜನಿಸಿದರು. 1880ರಲ್ಲಿ ನ್ಯೂ ಇಂಗ್ಲಿಷ್ ಸ್ಕೂಲ್‍ಅನ್ನು ಮತ್ತು 1885ರಲ್ಲಿ ಡೆಕ್ಕನ್ ಎಜುಕೇಷನ್ ಸೊಸೈಟಿಯನ್ನು ತೆರೆದರು. 1881ರಲ್ಲಿ ಕೇಸರಿ ಮತ್ತು ಮರಾಠ ಎಂಬ ಪತ್ರಿಕೆಗಳನ್ನು ಆರಂಭಿಸಿ ಅವುಗಳ ಮೂಲಕ ಬ್ರಿಟಿಷರ ನೀತಿಗಳ ಬಗ್ಗೆ, ರಾಷ್ಟೀಯತಾವಾದದ ಬಗ್ಗೆ ಮತ್ತು ಸ್ವರಾಜ್ಯವನ್ನು    ಸಾಧಿಸುವ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾರಂಭಿಸಿದರು. ವಿದೇಶಿ ವಸ್ತುಗಳ ಬಹಿಷ್ಕಾರ, ಹರತಾಳ, ಮುಷ್ಕರಗಳನ್ನು ಸಂಘಟಿಸಿದರು. ಕಾಂಗ್ರೆಸ್ ನ ಮಂದಗಾಮಿ ನಿಲುವನ್ನು ಖಂಡಿಸಿದ ಇವರು, 1906ರಲ್ಲಿ ರಾಷ್ಟೀಯವಾದಿ ಪಕ್ಷವನ್ನು ಆರಂಭಿಸಿದರು. 1908ರಲ್ಲಿ ದೇಶದ್ರೋಹದ ಆಪಾದನೆಯ ಮೇಲೆ ಬಂಧಿತರಾದ ಇವರಿಗೆ, 6 ವರ್ಷಗಳ ಕಾಲದ ಶಿಕ್ಷೆಯನ್ನು ವಿಧಿಸಿ ಮಾಂಡಲೆ ಜೈಲಿಗೆ ಕಳಿಸಲಾಯಿತು. ಇಡೀ ಮುಂಬೈ ಪ್ರತಿಭಟನೆ ಮತ್ತು ಮುಷ್ಕರಗಳನ್ನು ಕಂಡಿತು. ಹೋಮ್ ರೂಲ್ ಲೀಗ್‍ನಲ್ಲಿಯೂ ಭಾಗವಹಿಸಿದರು. 1920ರ ಆಗಸ್ಟ್ 1ರಂದು ಮರಣಹೊಂದಿದರು. 

6. ಚಂದ್ರಶೇಖರ್ ಆಜಾದ್- ಮಧ್ಯ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ 1906ರಲ್ಲಿ ಜನಿಸಿದ ಇವರು, ವಾರಣಾಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿದ ಇವರು, 15 ವರ್ಷವಾಗಿದ್ದಾಗ ಬಂಧನಕ್ಕೊಳಗಾದರು. ನ್ಯಾಯಾಲಯದಲ್ಲಿ ತಮ್ಮ ಹೆಸರನ್ನು ಆಜಾದ್ ಎಂದು ಘೋಷಿಸಿಕೊಂಡ ಇವರು, ಮತ್ತೆಂದೂ ಬಂಧನಕ್ಕೊಳಗಾಗುವುದಿಲ್ಲವೆಂದು ಪಣತೊಟ್ಟರು. ರಾಮ್‍ಪ್ರಸಾದ್ ಬಿಸ್ಮಿಲ್ಲಾರೊಂದಿಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿದ್ದ ಇವರು, ಬಿಸ್ಮಿಲ್ಲಾರ ಮರಣದ ನಂತರ ಭಗತ್ ಸಿಂಗರೊಡಗೂಡಿ ‘ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ ಅನ್ನು ಆರಂಭಿಸಿದರು. ಅವರು ಆ ಸಂಘಟನೆಯ ಕಮಾಂಡರ್ ಆಗಿದ್ದರು. ಉತ್ತರ ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳನ್ನು ಸಂಘಟಿಸಿದ ಇವರು, ಸ್ನೇಹಿತನೋರ್ವನ ನಂಬಿಕೆ ದ್ರೋಹದಿಂದಾಗಿ ಮಡಿದರು. 1931ರ ಫೆಬ್ರವರಿ 27ರಂದು ಇವರು ಅಲಹಾಬಾದ್‍ನ ಆಲ್ಫ್ರೆಡ್ ಪಾರ್ಕ್‍ನಲ್ಲಿದ್ದಾಗ ಪೋಲೀಸರು ಎಲ್ಲೆಡೆಯಿಂದಲೂ ದಾಳಿ ಮಾಡಿದರು. ಧೀರೋದಾತ್ತವಾಗಿ ಹೋರಾಡಿದ ಇವರು, ಅಂದೇ ಹುತಾತ್ಮರಾದರು. 


7. ಚಾಪೇಕರ್ ಸಹೋದರರು – ದಾಮೋದರ್ ಚಾಪೇಕರ್ 1869ರಲ್ಲಿ, ಬಾಲಕೃಷ್ಣ ಚಾಪೇಕರ್ 1873ರಲ್ಲಿ, ವಾಸುದೇವ ಚಾಪೇಕರ್ 1879ರಲ್ಲಿ ಜನಿಸಿದರು. ವಾಸುದೇವ ಬಲವಂತ ಫಡ್ಕೆ ಯವರಿಂದ ಪ್ರಭಾವಿತರಾದ ಇವರು  ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ರಾಣಿ ವಿಕ್ಟೊರಿಯಾ ಪ್ರತಿಮೆಗೆ ಮಸಿ ಬಳಿದ ಇವರು, ಮುಂಬೈನಲ್ಲಿ ಪ್ಲೇಗ್ ಇದ್ದಾಗ ರಾಣಿಯ ಉತ್ಸವಕ್ಕೆ ತಯಾರಿ ನಡೆಸುತ್ತಿದ್ದ ಮತ್ತು ಭಾರತೀಯರನ್ನು ಅಪಮಾನ, ದೌರ್ಜನ್ಯಗಳಿಗೆ ಗುರಿಮಾಡಿದ್ದ ಬ್ರಿಟಿಷ್ ಅಧಿಕಾರಿ ರ್ಯಾಂಡ್‍ನನ್ನು ಕೊಲೆಮಾಡಿದರು. ದಾಮೋದರ್‍ನನ್ನು 1898ರ ಏಪ್ರಿಲ್ 18ರಂದು ಗಲ್ಲಿಗೇರಿಸಿದರು. ಬಾಲಕೃಷ್ಣ ಮತ್ತು ವಾಸುದೇವರನ್ನು  ನಂತರ ಬಂಧಿಸಲಾಯಿತು ಮತ್ತು ಗಲ್ಲು ಶಿಕ್ಷೆ ನೀಡಲಾಯಿತು. 


8. ಚಿದಂಬರಂ ಪಿಳ್ಳೈ – 1882 ರ ಸೆಪ್ಟೆಂಬರ್ 5 ರಂದು ಟ್ರಾವಂಕೂರ್‍ನಲ್ಲಿ ಜನಿಸಿದ ಇವರು, 1906ರಲ್ಲಿ ಸ್ವದೇಶಿ ಸ್ಟೀಮರ್ ಕಂಪನಿಯನ್ನು ಪ್ರಾರಂಭಿಸಿದರು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತಾ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕೆಂದು ಸಾರಿದರು. ಅದಕ್ಕಾಗಿ ಅವರನ್ನು ಬಂಧಿಸಿ 6 ವರ್ಷಗಳ ಕಾಲ ಜೈಲಿನಲ್ಲಿ ಇಡಲಾಯಿತು. ಹೊರಬಂದ ಮೇಲೆ ಕಾರ್ಮಿಕರನ್ನೂ ಸಹ ಸಂಘಟಿಸಲು ಆರಂಭಿಸಿದರು. 1936 ನವೆಂಬರ್ ನಲ್ಲಿ ಮರಣ ಹೊಂದಿದರು. 


9. ಚಿತ್ತರಂಜನ್ ದಾಸ್ - ಬಂಗಾಳದಲ್ಲಿ ನವೆಂಬರ್ 1890ರಲ್ಲಿ ಜನಿಸಿದ ಇವರು ಖ್ಯಾತ ವಕೀಲರಾಗಿದ್ದರು. ಅರವಿಂದ ಘೋಷ್ ಮತ್ತಿತರ ಕ್ರಾಂತಿಕಾರಿಗಳ ಪರವಾಗಿ ವಾದಿಸಿ ಅವರನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡಿದರು. ವಿವಿಧ ಕೇಸ್‍ಗಳಲ್ಲಿ ಬಂಧಿತರಾಗುತ್ತಿದ್ದ ಕ್ರಾಂತಿಕಾರಿಗಳನ್ನು ಹಣಕಾಸು ಪಡೆಯದೆ ಅವರ ಪರವಾಗಿ ವಾದಿಸುತ್ತಿದ್ದರು. ನ್ಯೂ ಇಂಡಿಯಾ ಪತ್ರಿಕೆಗೆ ಬಹಳಷ್ಟು ವರ್ಷಗಳ ಕಾಲ ಹಣಕಾಸಿನ ನೆರವನ್ನು ನೀಡಿದರು. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ಶಾಲೆಗಳನ್ನು, ಆಸ್ಪತ್ರೆಗಳನ್ನು ಮತ್ತು ಅನಾಥಾಶ್ರಮಗಳನ್ನು ನಡೆಸಲು ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಸಮರ್ಪಿಸಿದ ಇವರು, 1925ರ ಜೂನ್ 25ರಂದು ನಿಧನರಾದರು. 

 10. ಜತೀಂದ್ರನಾಥ್ ದಾಸ್ – ಕಲ್ಕತ್ತಾದಲ್ಲಿ 1904ರಲ್ಲಿ ಜನಿಸಿದ ಇವರು, ತಮ್ಮ ಶಾಲಾ ದಿನಗಳಿಂದಲೇ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸರ್ಕಾರಿ ಕಛೇರಿಯ ಮುಂದೆ ಪಿಕೆಟಿಂಗ್ ಮಾಡಿದ್ದಕ್ಕಾಗಿ, 6 ತಿಂಗಳುಗಳ ಕಾಲ ಬಂಧನದಲ್ಲಿದ್ದರು. ಇವರು ಬಾಂಬ್ ತಯಾರಿಸುವಲ್ಲಿ ನಿಪುಣರಾಗಿದ್ದರು. ಭಗತ್ ಸಿಂಗ್‍ರ ಎಚ್‍ಎಸ್‍ಆರ್‍ಎ ಅನ್ನು    ಸೇರಿದ ಇವರು, 1929ರಲ್ಲಿ ಬಂಧನಕ್ಕೊಳಗಾದರು. ಜೈಲಿನಲ್ಲಿ ತಮ್ಮನ್ನು ರಾಜಕೀಯ ಖೈದಿಗಳೆಂದು ಪರಿಗಣಿಸಬೇಕೆಂದು, ಸರಿಯಾದ ಆಹಾರ, ಪುಸ್ತಕಗಳನ್ನು ಒದಗಿಸಬೇಕೆಂದು, ಮಾನವೀಯ ವರ್ತನೆ ಇರಬೇಕೆಂದು ಬೇಡಿಕೆಗಳನ್ನು ಮುಂದಿಟ್ಟು ನಿರಾಹಾರ ದೀಕ್ಷೆಯನ್ನು ಆರಂಭಿಸಿದ ಕ್ರಾಂತಿಕಾರಿಗಳಲ್ಲಿ ಇವರೂ ಒಬ್ಬರು. 63 ದಿನಗಳ ಸುದೀರ್ಘ ಕಾಲದ ಉಪವಾಸದ ನಂತರ ಜತಿನ್ ದಾಸ್ ಹುತಾತ್ಮರಾದರು. ನಂತರ ಬ್ರಿಟಿಷ್ ಸರ್ಕಾರ ಕ್ರಾಂತಿಕಾರಿಗಳ ಬೇಡಿಕೆಗಳನ್ನು ಈಡೇರಿಸಿತು. 


11. ಜಯಪ್ರಕಾಶ ನಾರಾಯಣ್ - ಲೋಕನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು, 1902ರ ಅಕ್ಟೋಬರ್ 11ರಂದು ಉತ್ತರ ಪ್ರದೇಶದ ಬಾಲರ್ ಲಾನಿ ಎಂಬ ಹಳ್ಳಿಯಲ್ಲಿ ಜನಿಸಿದರು. ಭಾರತ ಬಿಟ್ಟು ತೊಲಗಿ ಚಳುವಳಿಯ ಸಮಯದಲ್ಲಿ ಬಂಧಿತರಾದ ಇವರು, ಬಿಡುಗಡೆಯ ನಂತರ ನೇಪಾಳಕ್ಕೆ ತೆರಳಿ ನೂರಾರು ಯುವಕರಿಗೆ ಗೆರಿಲ್ಲಾ ಯುದ್ಧ ತಂತ್ರದ ತರಬೇತಿ ನೀಡಿ ಭಾರತಕ್ಕೆ ಕಳುಹಿಸಿದರು. ಭಾರತ ಸ್ವಾತಂತ್ರ್ಯಾನಂತರ ಇವರನ್ನು ಕೇಂದ್ರೀಯ ಸಚಿವಾಲಯಕ್ಕೆ ಸೇರಲು ನೆಹರೂರವರು ಆಹ್ವಾನಿಸಿದರೂ ಇವರು ನಿರಾಕರಿಸಿದರು ಮತ್ತು ಸಮಾಜವಾದಿ ಪಕ್ಷಕ್ಕಾಗಿ ದುಡಿದರು. ಇವರು ಚಂಬಲ್ ಕಣಿವೆಯಲ್ಲಿನ ಅನೇಕ ಡಕಾಯಿತರ ಮನಃಪರಿವರ್ತಿಸಿ, ಅವರು ಶರಣಾಗುವಂತೆ ಮಾಡಿದರು. ಭಾರತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದಾಗ, ಸಂಪೂರ್ಣ ಕ್ರಾಂತಿಯ ಕರೆ ನೀಡಿದರು. ಇಂದಿರಾಗಾಂಧಿ ಸರ್ಕಾರವು ಜೂನ್ 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಬಂಧಿತರಾದ ಮೊದಲ ವ್ಯಕ್ತಿ, ಜಯಪ್ರಕಾಶ ನಾರಾಯಣ್. ಇವರು 1979ರ ಅಕ್ಟೋಬರ್ 7ರಂದು ಮರಣ ಹೊಂದಿದರು.


12. ಖುದಿರಾಮ್ ಬೋಸ್ – ಇವರು ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಬೀಬ್‍ಪುರ್ ಎಂಬಲ್ಲಿ ಜನಿಸಿದರು. 1905ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಇವರು, ‘ವಿದ್ಯಾರ್ಥಿ ಭಂಡಾರ’ವನ್ನು ಸೇರಿ ಕ್ರಾಂತಿಕಾg ಚಟುವಟಿಕೆಗಳಲ್ಲಿ ಪಾಲ್ಗೊಂಡರು.  ಸ್ವಾತಂತ್ರ್ಯ ಹೋರಾಟಗಾರರಿಗೆ ದುರ್ಬರ ಶಿಕ್ಷೆಯನ್ನು ವಿಧಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ನ್ನು ಕೊಲ್ಲಲು ‘ಯುಗಾಂತರ ಕ್ರಾಂತಿದಳ’ ದಿಂದ ನೇಮಕವಾದರು. ಈ ಪ್ರಯತ್ನ ವಿಫಲರಾದರೂ ಸಹ, ಇದು ಬ್ರಿಟಿಷರಲ್ಲಿ ನಡುಕವನ್ನು ಹುಟ್ಟಿಸಿತು. ನಂತರ ಇವರನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು. ಇವರನ್ನು 1908ರ ಆಗಸ್ಟ್ 11ರಂದು ಗಲ್ಲಿಗೇರಿಸಲಾಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಬಂಗಾಳದ ಮೊದಲ  ಹುತಾತ್ಮರಾದರು. 



13. ಲಾಲಾ ಲಜಪತ್ ರಾಯ್  - ಪಂಜಾಬಿನ ಫಿರೋಜ್‍ಪುರ್ ಜಿಲ್ಲೆಯ ದುಡಿಕೆ ಗ್ರಾಮದಲ್ಲಿ 1865ರ ಜನವರಿ 28ರಂದು ಜನಿಸಿದರು. ಇವರೂ ಸಹ ಪ್ರಖ್ಯಾತ ವಕೀಲರಾಗಿದ್ದರು. ಇವರು ಮಹಿಳೆಯರ ವಿಮೋಚನೆಗಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಕಾಂಗ್ರೆಸ್‍ನ ತೀವ್ರವಾದಿಗಳಲ್ಲಿ ಪ್ರಮುಖರಾಗಿದ್ದ ಇವರು, ಕಾಂಗ್ರೆಸ್ಸಿಗೆ ಒಂದು ಹೊಸ ಧೋರಣೆಯನ್ನು ನೀಡಲು ಪ್ರಯತ್ನಿಸಿದರು. ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿಗಳು ದೇಶದೆಲ್ಲೆಡೆ ಹರಡಬೇಕೆಂಬುದು ಇವರ ಆಕಾಂಕ್ಷೆಯಾಗಿತ್ತು. ಸ್ವರಾಜ್ ಪಕ್ಷದ ಸ್ಥಾಪಕರಲ್ಲೊಬ್ಬರಾದ ಇವರು ಬ್ರಿಟಿಷ್ ಶಾಲೆಗಳನ್ನು ವಿರೋಧಿಸಿ ಲಾಹೋರಿನಲ್ಲಿ ರಾಷ್ಟೀಯ ಶಾಲೆ ಆರಂಭಿಸಿದರು. ಹಲವಾರು ಬಾರಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರು. ‘ಸೈಮನ್ ಹಿಂತಿರುಗು’ ಚಳುವಳಿಲ್ಲಿ ಪೋಲೀಸರ ಹೊಡೆತಕ್ಕೆ ಸಿಕ್ಕಿ ತೀವ್ರವಾಗಿ ಗಾಯಗೊಂಡರು ಮತ್ತು ಅದರಿಂದಲೇ 1929ರ ನವೆಂಬರ್ 16ರಂದು ನಿಧನರಾದರು. 


14. ಮದನ್ ಲಾಲ್ ಧಿಂಗ್ರ - ಪಂಜಾಬಿನಲ್ಲಿ ಜನಿಸಿದ ಇವರು, ‘ಅಭಿನವ ಭಾರತ್’ ಮತ್ತು ‘ಸ್ವತಂತ್ರ್ಯ ಭಾರತ್ ಸಂಘ’ ಗಳಲ್ಲಿ ಸಕ್ರಿಯರಾಗಿದ್ದರು. ಇವರು ಬಾಂಬ್ ಗಳನ್ನು ಮಾಡುವುದರಲ್ಲಿ ನಿಪುಣರಾಗಿದ್ದರು. ಭಾರತೀಯರನ್ನು ತುಳಿಯಲು ಬ್ರಿಟೀಷರಿಗೆ ಸಲಹೆಗಳನ್ನು ಕೊಡುತ್ತಿದ್ದ, ಬ್ರಿಟಿಷರ ರಾಜಕೀಯ ಸಲಹೆಗಾರರಾದ, ಸರ್ ವಿಲಿಯ ಕರ್ಜನ್ ವೈಲಿಯನ್ನು ಕೊಂದರು. ಇವರನ್ನು ಆಗಸ್ಟ್ 9ರಂದು ಗಲ್ಲಿಗೇರಿಸಿದರು. 


15. ಮೈಲಾರ ಮಹಾದೇವ – ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು ಕರ್ನಾಟಕಕ್ಕೆ ಸೇರಿದವರು. ಹಲವು ಬಾರಿ ಬಂಧನಕ್ಕೊಳಗಾಗಿದ್ದಾರೆ. ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಯುವಜನರನ್ನು ಸಂಘಟಿಸಿ “ಕಬೀರ” ಎನ್ನುವ ಸಂಘವನ್ನು ಕಟ್ಟಿದರು. ಸರ್ಕಾರದ ನಡೆಯದಂತೆ ಎಲ್ಲಾ ರೀತಿಯ ಅಡೆತಡೆಗಳನ್ನೊಡ್ಡಿದರು. ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬ್ರಿಟಿಷ್ ಅಧಿಕಾರಿಗಳಿಂದ ಹಣವನ್ನು ಲೂಟಿಮಾಡಲು ಹೋಗಿ, ಏಪ್ರಿಲ್ 1, 1943ರಲ್ಲಿ ಪೋಲೀಸರಿಂದ ಹತರಾದರು. 


16. ರಾಜಗುರು -  1909 – 1931 – ಇವರು ಮಹಾರಾಷ್ಟ್ರದ ಖೋಡ ಎಂಬಲ್ಲಿ 1909ರಲ್ಲಿ ಜನಿಸಿದರು. ಬನಾರಸ್ ನ ಸಂಸ್ಕೃತ ಶಾಲೆಯಲ್ಲಿ ಕಲಿತು ಶಿಕ್ಷಕರಾದರು. ಭಗತ್ ಸಿಂಗ್ ರ ಕ್ರಾಂತಿಕಾರಿ ಸಂಘಟನೆಯನ್ನು ಸೇರಿ, ಸಾಂಡರ್ ನ ಕೊಲೆಯಲ್ಲಿ ಭಾಗಿಯಾಗಿ ಬಂಧಿತರಾದರು. ಇವರನ್ನು ಭಗತ್ ಸಿಂಗ್ ಮತ್ತು ಸುಖದೇವ್ ರ ಜೊತೆ ಮಾರ್ಚ್ 23, 1931ರಲ್ಲಿ ಗಲ್ಲಿಗೇರಿಸಲಾಯಿತು.


17. ರಾಮ್ ಪ್ರಸಾದ್ ಬಿಸ್ಮಿಲ್ – 1897ರಲ್ಲಿ ಉತ್ತರ್ ಪ್ರದೇಶದಲ್ಲಿ ಜನಿಸಿದ ಇವರು, ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಧುಮುಕಿದರು. ತಮ್ಮ ದೇಶಪ್ರೇಮಿ ಪುಸ್ತಕಗಳ ಮೂಲಕ ಜನರನ್ನು ಪ್ರೇರೇಪಿಸಿದರು. ಪೋಲಿಸರು ಅವರ ವಿರುದ್ಧ ಮೊಕದ್ದಮೆ ಹೂಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಯನ್ನೊಡ್ಡಿತು. ಆದರೆ ಅವರು ಅಶ್ಫಾಕುಲ್ಲಾ ಮತ್ತಿತರರೊಂದಿಗೆ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಆರಂಭಿಸಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ಸ್ವಾತಂತ್ರ್ಯ ಚಳುವಳಿಗಾಗಿ ಬ್ರಿಟಿಷರಿಂದಲೇ ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಕಾಕೋರಿ ಎಂಬಲ್ಲಿ ರೈಲನ್ನು ನಿಲ್ಲಿಸಿ ಸರ್ಕಾರಿ ಹಣವನ್ನು ದರೋಡೆ ಮಾಡಿದರು. ನಂತರ ಬಂಧನಕ್ಕೊಳಗಾದ ಇವರನ್ನು ಇವರ ಸಹಚರರಾದ ಅಶ್ಫಾಕುಲ್ಲಾ, ರಾಜೇಂದ್ರ ಲಾಹಿರಿ ಮತ್ತು ಸೋಹನ್ ಸಿಂಗ್ ರೊಂದಿಗೆ 19ನೇ ಡಿಸೆಂಬರ್ 1925 ರಲ್ಲಿ ಗಲ್ಲಿಗೇರಿಸಲಾಯಿತು. 


18. ರಾಸ್ ಬಿಹಾರಿ ಬೋಸ್ – 1886ರಲ್ಲಿ ಬಂಗಾಳದಲ್ಲಿ ಜನಿಸಿದ ಇವರು, ಕಲ್ಕತ್ತಾದ ಅನುಶೀಲನ ಸಮಿತಿಯ ಸದಸ್ಯರಾಗಿದ್ದರು. ವೈಸ್‍ರಾಯ್ ಹಾರ್ಡಿಂಜೆಯ ವಿಫಲ ಕೊಲೆ ಯತ್ನದ ನಂತರ ತಲೆಮರೆಸಿಕೊಂಡರು. ಭಾರತೀಯ ಸೈನ್ಯದಲ್ಲಿ ಬಂಡಾಯವನ್ನು ಯೋಜಿಸಿದ್ದರು. ಆದರೆ ದೇಶದ್ರೋಹಿಯೊಬ್ಬನ ಕಾರಣದಿಂದಾಗಿ ಅದು ವಿಫಲವಾಯಿತು. ಅವರು 1915ರ ಮೇ 12ರಂದು ಮಾರುವೇಷದಲ್ಲಿ ಜಪಾನಿಗೆ ತೆರಳಿದರು. ಅಲ್ಲಿ ಇಂಡಿಯನ್ ಇಂಡಿಪೆಂಡೆಂಟ್ ಲೀಗ್‍ಅನ್ನು ಆರಂಭಿಸಿದರು. ಸುತ್ತಲಿನ ದೇಶಗಳಲ್ಲಿ ಇದ್ದ ಭಾರತೀಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರುವಂತೆ ಪ್ರೇರೇಪಿಸಿದರು. 1945ರ ಜನವರಿ 21ರಂದು ತಮ್ಮ ಲೀಗ್ ಅನ್ನು ನೇತಾಜಿಯವರಿಗೆ ವಹಿಸಿಕೊಟ್ಟು ನಿಧನರಾದರು.  


19. ಸುಭಾಷ್ ಚಂದ್ರ ಬೋಸ್ –ಒರಿಸ್ಸಾದ ಕಟಕ್‍ನಲ್ಲಿ 1897ರ ಜನವರಿ 23ರಂದು ಜನಿಸಿದರು. ಚಿಕ್ಕಂದಿನಿಂದಲೇ ದೇಶಪ್ರೇಮಿಯಾಗಿ ಬೆಳೆದ ಇವರು, ಐಸಿಎಸ್ ಪರೀಕ್ಷೆಯನ್ನು ಪಾಸಾದರೂ ಸಹ ಬ್ರಿಟಿಷ್ ನೌಕರಿಯನ್ನು ಸ್ವೀಕರಿಸದೆ ಚಳುವಳಿಗೆ ಧುಮುಕಿದರು. ಗಾಂಧೀಜಿಯವರ ಇಚ್ಛೆಗೆ ವಿರುದ್ಧವಾಗಿ ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1940ರಲ್ಲಿ ಗೃಹಬಂಧನಕ್ಕೊಳಗಾದರು, ನಂತರ ಮಾರುವೇಶದಲ್ಲಿ ಜರ್ಮನಿಗೆ ನಂತರ ಜಪಾನ್‍ಗೆ ತಪ್ಪಿಸಿಕೊಂಡು ಹೋದರು. ಅಲ್ಲಿ ಇಂಡಿಯನ್ ಇಂಡಿಪೆಂಡೆಂಟ್ ಲೀಗ್‍ನ ನೇತೃತ್ವವನ್ನು ವಹಿಸಿಕೊಂಡ ಅವರು, ಆಜಾದ್ ಹಿಂದ್ ಫೌಜ್ ಅನ್ನು ಸಂಘಟಿಸಿದರು. ಮಲಯಾ, ಸಿಂಗಪೂರ್, ಥಾಯ್ಲಾಂಡ್ ಮತ್ತು ಬರ್ಮಾದಲ್ಲಿ ನೆಲೆಸಿದ್ದ ಭಾರತೀಯರ ಸಹಾಯದಿಂದ ಸೈನ್ಯವನ್ನು ಕಟ್ಟಿದರು. 1945ರಲ್ಲಿ ಬ್ರಿಟಿಷರ ವಿರುದ್ಧ ಸಮರವನ್ನು ಸಾರಿ ಅಂಡಮಾನ್‍ನಲ್ಲಿ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸಿದರು.  ನಂತರ ಆಗಸ್ಟ್ 13, 1945 ರಂದು ಜಪಾನ್‍ನಿಂದ ತೆರಳುವಾಗ, ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೊಳಗಾಯಿತು. 


20. ಸುಖ ದೇವ್ – 1907-1931- ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲ್ ಪುರದಲ್ಲಿ ಮೇ 15, 1907ರಲ್ಲಿ ಜನಿಸಿದರು. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ಕಲಿತ ಇವರು ಭಗತ್ ಸಿಂಗ್ ಮತ್ತು ಇತರರೊಡಗೂಡಿ “ನೌ ಜವಾನ್ ಭಾರತ್ ಸಭಾ”ವನ್ನು ಸೇರಿದರು. ಪಂಜಾಬ್ ಪ್ರಾಂತ್ಯದ ಸಂಚಾಲಕರಾದರು. ಇವರೂ ಕೂಡ ಸಾಂಡರ್ಸ್ ನ ಕೊಲೆಯಲ್ಲಿ ಭಾಗಿಯಾಗಿ ಬಂಧಿತರಾದರು. ಇವರನ್ನು ಭಗತ್ ಸಿಂಗ್ ಮತ್ತು ರಾಜಗುರುರವರ ಜೊತೆ ಮಾರ್ಚ್ 23, 1931ರಲ್ಲಿ ಗಲ್ಲಿಗೇರಿಸಲಾಯಿತು. 


- ದೀಪಶ್ರೀ  ಜೆ        

ಕವನ: "ಕ್ಷಣಭಂಗುರ ಹನಿಯೊಂದರಲಿ"

ಚಿತ್ರ ಕೃಪೆ: ಮಂಜುನಾಥ್ ಎ  ಎನ್

ಕಣ್ರೆಪ್ಪೆ ಮಿಟುಕಿದಷ್ಟೇ ಕ್ಷಣಿಕ
ತುಂತುರು ಹನಿ ಅಸ್ತಿತ್ವ.

ಮುತ್ತಿನಂತೆ ಹನಿ ಮೂಡುವುದು
ಬರಿ ಭೌತಿಕ ಆಕಸ್ಮಿಕ.
ಮೂಡಿ ಮಿನುಗಿದ ಆನಂತರ
ಒಡೆವುದದು ಅನಿವಾರ್ಯ.

ಮೂಡುವಲ್ಲಿ ಮುಗ್ಧ ನಗುವು,
ಬೀಳುವಲ್ಲಿ ಭವ್ಯ ಬೈರಾಗಿ,
ಬಿದ್ದು ಒಡೆಯುವಲ್ಲಿ ಬುದ್ಧನಂತೆ
ಪ್ರಶಾಂತ ಪ್ರಕಾಶಮಾನ! 

ಕ್ಷಣಭಂಗುರ ಹನಿಯೊಂದರಲಿ
ಚಿತ್ರಿಸಿಹಳಾ ಪ್ರಕೃತಿ
ಸಮಚಿತ್ತದ ಸಮ್ಯಕ ಚಿತ್ರಣ,
ಸತ್ಯದ ಅನಾವರಣ!

-  ಮಂಜುನಾಥ್ ಎ  ಎನ್

ಸ್ತ್ರೀದನಿ: "ಮಾದಮ್ಮ ಮಾಡಿದ ಪ್ರಮಾದವೇನು?"



 
ಮನುಷ್ಯರು ಜೀವನದಲ್ಲಿ ತಪ್ಪು ಮಾಡುವುದು ಸಹಜ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಅನುಭವಿಸಬೇಕು, ಬೆಲೆ ತೆತ್ತಬೇಕು. ಕೆಲವೊಮ್ಮೆ ಏನು ತಪ್ಪು ಮಾಡದಿದ್ದರೂ ಬೇರೆಯವರ ತಪ್ಪಿನಿಂದ ಕಷ್ಟ ಅನುಭವಿಸಬೇಕಾಗುತ್ತದೆ. ಪುರುಷ ಯಜಮಾನಿಕೆಯಿರುವ ಸಮಾಜದಲ್ಲಿ ಸ್ತ್ರೀಪುರುಷರು ಮಾಡುವ ತಪ್ಪುಗಳನ್ನು ಭಿನ್ನವಾಗಿ ನೋಡಲಾಗುತ್ತದೆ. ಇಲ್ಲಿ ದ್ವಂದ್ವ ನೀತಿಯಿದೆ. ಬೇರೆ ಬೇರೆ ತಪ್ಪುಗಳಿಗೆ ಬೇರೆ ಬೇರೆ ಶಿಕ್ಷೆ ನೀಡಬೇಕಾದುದು ನ್ಯಾಯ. ಒಂದೇ ತಪ್ಪಿಗೆ ಒಬ್ಬರಿಗೆ ಶಿಕ್ಷೆ ಇನ್ನೊಬ್ಬರಿಗೆ ವಿನಾಯಿತಿ ಎಂದರೆ? ಅಥವಾ ಒಬ್ಬರ ತಪ್ಪು ಕ್ಷಮಾರ್ಹ ಇನ್ನೊಬ್ಬರದು ಮಹಾಪರಾಧಿ ಕಠಿಣ ಶಿಕ್ಷೆಯಾಗಬೇಕು ಎಂದರೆ? ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಮಾಡುವ ತಪ್ಪುಗಳನ್ನು ಸಹಜವೆಂದು, ಏನು ಮಾಡುವುದಕಾಗುತ್ತದೆ, ಮನುಷ್ಯರಲ್ಲವಾ ಕ್ಷಮಿಸಬೇಕು ಎಂದು ಹೇಳಲಾಗುತ್ತದೆ. ಇಲ್ಲವೆ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಲಾಗುತ್ತದೆ. ಇಲ್ಲ ತಪ್ಪಿಗೆ ಸಾಕ್ಷಿ, ಕಾರಣಗಳನ್ನು ತೋರಿಸಿದರೆ ಪರಿಸ್ಥಿತಿಗೆ ಸಿಕ್ಕಿ ತಪ್ಪು ಮಾಡಿದ, ಬುದ್ದಿ ಇಲ್ಲದೆ ಮಡಿದ ಹಾಗಾಗಿ ಕಡಿಮೆ ಶಿಕ್ಷೆ ನೀಡಬೇಕು ಅಥವಾ ವಿನಾಯಿತಿ ಕೊಡಬೇಕು ಎಂದು ಹೇಳಲಾಗುತ್ತದೆ. ಸ್ತ್ರೀಯರನ್ನು ‘ಕ್ಷಮಯಾ ಧರಿತ್ರಿ’ ಎಂದು ಹೇಳುತ್ತಾ ಪುರುಷರ ತಪ್ಪುಗಳನ್ನು ಕ್ಷಮಿಸುತ್ತಾ ಹೋಗಬೇಕೆಂದು ನಿರೀಕ್ಷಿಸಲಾಗುತ್ತದೆ.
ಇಷ್ಟೆಲ್ಲ ಹಿನ್ನೆಲೆ ಹೇಳಬೇಕಾಗಿದ್ದು, ಮನೆಕೆಲಸದ ಮಹಿಳೆ ಮಾದಮ್ಮ ಅನುಭವಿಸಿದ ಸಂಕಟ, ನೋವು, ಅವಮಾನ, ಒಂಟಿತನ, ಬಡತನ ಅನುಭವಿಸಿದ್ದಕ್ಕೆ ಅವಳು ಮಾಡಿದ ತಪ್ಪೇನು? ಎಂದು ತಿಳಿಯಲು. ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತರಾದ ಹೆಣ್ಣುಮಕ್ಕಳು ಅತಿ ಚಿಕ್ಕ ವಯಸ್ಸಿಗೆ ಮುಪ್ಪಿಗೆ ಒಳಗಾಗುತ್ತಾರೆ. ಒಳ್ಳೆಯ ಸ್ಥಿತಿಯಲ್ಲಿರುವ ಅದೇ ವಯಸ್ಸಿನ ಇತರ ಮಹಿಳೆಯರು ಇನ್ನೂ ಚಿಕ್ಕವರಾಗೆ ಕಾಣುತ್ತಿರುತ್ತಾರೆ. ಮಾದಮ್ಮ 56 ವರ್ಷಕ್ಕೆ ವಯಸ್ಸಿಗೆ ಮೀರಿದ ಮುಪ್ಪನ್ನು ಕಂಡವಳು. 5 ಅಡಿ ಎತ್ತರ, ಕಪ್ಪು ಬಣ್ಣ. ಈಗಾಗಲೇ ಶೇಕಡ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದಾಳೆ. ಕೆಲವು ಹಲ್ಲುಗಳು ಉದುರಿವೆ, ತಲೆಗೂದಲು ಬೆಳ್ಳಗಾಗಿದೆ. ಮನೆ ಮಾಲೀಕರು ನೀಡುವ ಊಟ, ಬಟ್ಟೆಯನ್ನು ಪಡೆದೆ ಇಡೀ ಜೀವನ ಕಳೆದಿದ್ದಾಳೆ. ಬೇರೇನು ಕಾಯಿಲೆಗಳು ಇಲ್ಲದಿರುವುದರಿಂದ
ದೈಹಿಕ ಶ್ರಮ ಬೇಡುವ ಕೆಲಸಗಳನ್ನು ನಿರಾಯಾಸವಾಗಿ ಮಾಡಿಕೊಂಡು ಹೋಗುತ್ತಿದ್ದಾಳೆ.
ಯಾವುದೇ ವ್ಯಕ್ತಿಯ ಪ್ರಸ್ತುತ ಜೀವನ ಸ್ಥಿತಿ, ಗುಣಮಟ್ಟಕ್ಕೆ ಕೌಟುಂಬಿಕ ಹಿನ್ನೆಲೆಯು ಕಾರಣವಾಗಿರುತ್ತದೆ. ಅದು ಒಳ್ಳೆ ರೀತಿಯಲ್ಲೂ ಆಗಿರಬಹುದು, ಪ್ರತಿಕೂಲವಾಗಿಯೂ ಮೂಡಿಬರಬಹುದು. ಮಾದಮ್ಮ ಮೈಸೂರು ನಗರದಲ್ಲೇ ಹುಟ್ಟಿ ಬೆಳೆದಿದ್ದು ತಂದೆ ತಾಯಿಯ ನಾಲ್ಕು ಹೆಣ್ಣು ಮಕ್ಕಳು ಮೂರು ಗಂಡುಮಕ್ಕಳ ನಡುವೆ ಐದನೆಯವಳಾಗಿ ಬೆಳೆದವಳು. ಕೂಗಳತೆಯಲ್ಲಿ ಶಾಲೆಯಿದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬ ಅರಿವಿಲ್ಲದ ವಾತಾವರಣ. ಅನಕ್ಷರಸ್ಥ ತಂದೆತಾಯಿಗಳಿಗೆ ಅನಕ್ಷರಸ್ಥ ಮಕ್ಕಳಾಗೆ ಉಳಿದವರು. ತಂದೆ ಹಸು, ಆಡು ಸಾಕಿ ಕೂಲಿ ಮಾಡಿ ಮಕ್ಕಳನ್ನು ಬೆಳೆಸಿದರು. ಹೆಣ್ಣುಮಕ್ಕಳನ್ನು ಮಾದುವೆ ಮಾಡಿಕೊಟ್ಟರು. ಗಂಡುಮಕ್ಕಳು ತಂದೆಯ ಕೆಲಸಗಳನ್ನು ಮುಂದುವರೆಸಿದರು.
ಮಾದಮ್ಮನಿಗೆ 13 ವರ್ಷಕ್ಕೆ ಮೈಸೂರಿನಲ್ಲೆ ಇದ್ದ ಹುಡುಗನೊಂದಿಗೆ ಮದುವೆ ಮಾಡಿದರು. ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದ. ಗಂಡನ ಮನೆಗೆ ಹೋಗಿ ಒಂದು ವರ್ಷದ ಒಳಗೆ ಗರ್ಭಿಣಿಯಾದಳು. ಹೆರಿಗೆಗೆ ಎಂದು ತವರಿಗೆ ಬಂದಳು. ಏನಾಯಿತೊ ಗೊತ್ತಿಲ್ಲ ಹೆರಿಗೆಯಾದ ಮೇಲೆ ಗಂಡ ಮಗು ನೋಡಲು ಬರಲಿಲ್ಲ. ಹೆಂಡತಿ ಬೇಡ ಎಂದು ಹೇಳಿದ. ಮಾದಮ್ಮನ ಮನೆಯವರಿಗೆ ಗಾಬರಿಯಾಯಿತು. ಕಾರಣ ಗೊತ್ತಿಲ್ಲ, ಯಾವ ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಹೆಂಡತಿ ಮಗು ಬೇಡ ಎಂದರೆ ಹೇಗೆ ಎಂದು ಹುಡುಗನ ಮನೆಗೆ ಹೋಗಿ ಮಾತನಾಡಿಸಿ ಪರಿಪರಿಯಾಗಿ ಕೇಳಿಕೊಂಡರೂ ಹೆಂಡತಿಯನ್ನು ಕರೆದೊಯ್ಯಲು ಒಪ್ಪಲಿಲ್ಲ. ಸಂಬಂಧಿಕರನ್ನು ಸೇರಿಸಿ ಪಂಚಾಯ್ತಿ ಮಾಡಿದರು ಪ್ರಯೋಜನವಾಗಲಿಲ್ಲ. ಸರ್ಕಾರಿ ಕೆಲಸದಲ್ಲಿರುವುದರಿಂದ ಕೊನೆ ಪಕ್ಷ ಜೀವನಾಂಶವಾದರು ಕೊಡು ಎಂದರೂ ಒಪ್ಪಲಿಲ್ಲ.
ಕೆಲವು ವರ್ಷಗಳ ನಂತರ ಆತ ಇನ್ನೊಂದು ಮದುವೆಯಾದನೆಂದು ಸುದ್ದಿ ಬಂದಿತು. ಅಷ್ಟೊತ್ತಿಗೆ ಮಾದಮ್ಮ ಮನೆಗೆಲಸ ಪ್ರಾರಂಭಿಸಿ ಹೆಣ್ಣು ಮಗುವಿನೊಂದಿಗೆ ತವರು ಮನೆಯಲ್ಲಿ ಇರತೊಡಗಿದಳು. ಇವಳ ತವರು ಮನೆಯವರು ನಿಜವಾಗಲು ಇವಳ ಸಂಸಾರವನ್ನು ಸರಿಪಡಿಸಲು ಪ್ರಯತ್ನಿಸಿದರೊ
ಅಥವಾ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು ಅವನೆ ಬಿಟ್ಟು ಹೋಗಿದ್ದಾನೆ ಬೇಕಾದರೆ ಬಂದು ಕರೆದುಕೊಂಡು ಹೋಗಲಿ ಎಂದು ನಿರ್ಧರಿಸಿದರೋ ಗೊತ್ತಿಲ್ಲ. ಮಾದಮ್ಮನ ಬಳಿ ಈ ವಿಷಯದ ಬಗ್ಗೆ ಹಲವಾರು ಸಾರಿ ಮಾತನಾಡಿದೆ. ಸ್ಪಷ್ಟವಾಗಿ ಏನನ್ನು ಹೇಳಲಿಲ್ಲ. ಬಿಟ್ಟುಬಿಡುವುದಕ್ಕೆ ಕಾರಣವೇನು ಎಂದು ಕೂಡ ತಿಳಿಯಲಿಲ್ಲ. ತವರು ಮನೆಯವರು ಎರಡು ಮೂರು ವರ್ಷ ಪ್ರಯತ್ನ ಮಾಡಿದರು ಪ್ರಯೋಜನವಾಗಲಿಲ್ಲ ಎಂದು ಹೇಳಿದಳು. ಅಷ್ಟು ಚಿಕ್ಕ ವಯಸ್ಸಿಗೆ ಕಾರಣವೇ ತಿಳಿಯದೇ ಗಂಡನಿಂದ ಪರಿತ್ಯಕ್ತಳಾಗಿ, ಒಂಟಿಯಾಗಿ ಬದುಕುತ್ತಾ ಮನೆಗೆಲಸ ಮಾಡಿ ಮಗಳನ್ನು ಸಾಕುವ ಪರಿಸ್ಥಿತಿಗೆ ಬಂದಿದ್ದಕ್ಕೆ ಮಾದಮ್ಮ ಮಾಡಿದ ತಪ್ಪೇನು? ಇದಕ್ಕೆ ಯಾರನ್ನು ಹೊಣೆ ಮಾಡಬೇಕು? ಗಂಡ ಒಂದು ವೇಳೆ ತನಗಿಷ್ಟವಾಗಲಿಲ್ಲ ಎಂದರೆ ಕಾರಣ ತಿಳಿಸಿ, ವಿಚ್ಛೇದನ ನೀಡಿ ಅವಳ ಜೀವನಕ್ಕೆ ದಾರಿ ಮಾಡಿ ಕೊಡಬೇಕಿತ್ತು. ಮನೆಯವರಾದರು ಅವನನ್ನು ಪ್ರಶ್ನಿಸಿ ಕಾರಣ ತಿಳಿದು ಕಾನೂನು
ಪ್ರಕಾರ ನಡೆದುಕೊಳ್ಳುವಂತೆ ಹೇಳಬೇಕಿತ್ತು. ಒಪ್ಪದಿದ್ದರೆ ಸರ್ಕಾರಿ ನೌಕರಿಯಲ್ಲಿದ್ದ ಅವನ ಮೇಲೆ ಕ್ರಮ ಜರುಗಿಸಬಹುದಿತ್ತು. ಕಾನೂನು ತಿಳುವಳಿಕೆಯಿಲ್ಲದ್ದರಿಂದಲೋ ಅಥವಾ ಬಂಡ ಜನರ ಹತ್ತಿರ ನ್ಯಾಯ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಸುಮ್ಮನಾದರೋ ಗೊತ್ತಿಲ್ಲ. ಸದ್ಯ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಹೊರ ಹಾಕದೆ ಮನೆಯಲ್ಲಿಟ್ಟುಕೊಂಡು ಮನೆ ಕೆಲಸಮಾಡಿಕೊಂಡು ಮಗಳನ್ನು ಸಾಕಲು ಸಹಾಯ ಮಾಡಿದರು. ತಂದೆ ತಮ್ಮ ಬಳಿ ಇದ್ದ ಕಂದಾಯ ನಿವೇಶನಗಳಲ್ಲಿ ಒಂದನ್ನು ಅವಳ ಹೆಸರಿಗೆ ಬರೆದುಕೊಟ್ಟರು. ಅಂತು ಮಾದಮ್ಮನ ಜೀವನ ಮುಂದುವರೆಯಿತು.
     ಈ ಕೆಳ ವರ್ಗದ ಜನರಲ್ಲಿ ಅರ್ಥವಾಗದ ಒಂದು ವಿಷಯವೆಂದರೆ ಒಮ್ಮೆ ತಪ್ಪು ಮಾಡಿದಾಗ ಅದರಿಂದ ಪಾಠ ಕಲಿತು ಮತ್ತೆ ಅದೇ ತರಹದ ತಪ್ಪು ಮಾಡಬಾರದು ಅನ್ನುವ ತಿಳುವಳಿಕೆಯಿಲ್ಲದಿರುವುದು. ನಗರದಲ್ಲಿ ವಾಸವಾಗಿದ್ದರೂ ಮಾದಮ್ಮನಿಗೆ ಶಾಲೆಗೆ ಕಳುಹಿಸಲಿಲ್ಲ. ಅತಿ ಚಿಕ್ಕ ವಯಸ್ಸಿಗೆ ಮದುವೆ ಮಾಡಿ 13 ವರ್ಷಕ್ಕೆ ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡಿದರು. ಈಗಲು ಆಕೆಯ ಮಗಳನ್ನು ಓದಿಸಿ ಕೆಲಸಕ್ಕೆ ಸೇರಿಸಿ ಅವಳು ಸ್ವತಂತ್ರವಾಗಿ ಬದುಕುವಂತೆ ಮಾಡುವ ಬದಲು ಅವಳಿಗೂ 15ನೇ ವಯಸ್ಸಿಗೆ ಮದುವೆ ಮಾಡಿದರು. ಅದೃಷ್ಟವಶಾತ್ ಅವಳ ಗಂಡ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿರುವುದರಿಂದ ಮಗಳ ಜೀವನ ಸುಗಮವಾಗಿದೆ. ಅದಕ್ಕೆ ಮಾದಮ್ಮನ ಸಹಾಯವಿದೆ. ದಿನ ನಿತ್ಯ ಮನೆಗೆಲಸ ಮಾಡಿ ಸಂಬಳ ನೀಡುತ್ತಾಳೆ. ತಮ್ಮ ಮನೆ ಕೆಲಸದಲ್ಲು ಮಗಳಿಗೆ ಸಹಾಯ ಮಾಡುತ್ತಾಳೆ. ತನ್ನ ಹೆಸರಿನಲ್ಲಿದ್ದ ನಿವೇಶನವನ್ನು ಅಳಿಯನ ಹೆಸರಿಗೆ ಮಾಡಿಕೊಟ್ಟು ಸ್ವಂತ ಮನೆ ಕಟ್ಟಿಕೊಳ್ಳಲು ಅನುವುತಿ ಮಾಡಿಕೊಟ್ಟಿರುವುದರಿಂದ ಮಗಳ ಸಂಸಾರ ಚೆನ್ನಾಗಿ ನಡೆಯುತ್ತಿದೆ.
      ಮಾದಮ್ಮನ ಜೀವನವನ್ನು ಎರಡು ಭಾಗಗಳಲ್ಲಿ ನೋಡಬಹುದು. ಒಂದು ವೈಯಕ್ತಿಕ ಜೀವನ. ಇನ್ನೊಂದು ಆಕೆಯ ದುಡಿಮೆ ಜೀವನ. ಕಳೆದು 10 ವರ್ಷಗಳಿಂದ ನಾನು ಅವಳನ್ನು ಬಲ್ಲೆ. ಅವಳ ಜೀವನವನ್ನು ಹೊರಗಿನವಳಾಗಿ ನಾನು ಗಮನಿಸಿದ, ಗ್ರಹಿಸಿದ, ವಿಶ್ಲೇಷಿಸಿದ ಹಿನ್ನೆಲೆಯಲ್ಲಿ ನೋಡುತ್ತಿದ್ದೇನೆ. ಇದು ಖಂಡಿತ ಸೀಮಿತವಾದ ಗ್ರಹಿಕೆ. ತನ್ನ ತಪ್ಪಿದ್ದೋ ಇಲ್ಲದೆಯೋ ಸಂಕಷ್ಟಕ್ಕೆ ಸಿಲುಕಿ ಒಂಟಿ ಜೀವನಕ್ಕೆ ಗುರಿಯಾದವಳು. ತನ್ನ ಬದುಕಿನಲ್ಲಿ ಏನೂ ಸುಧಾರಣೆಯಾಗದಿದ್ದರೂ ಮಗಳ ಜೀವನ ಚೆನ್ನಾಗಿ ಆಗಲಿ ಎಂದು ಆಶಿಸಿ ಅದಕ್ಕೆ ಬೆಂಬಲವಾಗಿ ನಿಂತಳು. ಅದರಂತೆ ಮಗಳ ಜೀವನ ಸುಧಾರಿಸಿತು. ನಾನು ಗಮನಿಸಿದಂತೆ ಮಾದಮ್ಮ ಹಿಂದೆ ಮನೆಗೆಲಸದವರು ಕಂಡುಬರುತ್ತಿದ್ದ ಸ್ಥಿತಿಯಲ್ಲೇ ಇದ್ದಾಳೆ. ಅಂದರೆ ಒಂದು ಹಳೇ ಸೀರೆ, ಓಲೆ, ಬಳೆ, ಸರ ಏನೂ ಇಲ್ಲ, ತಲೆ ಸರಿಯಾಗಿ ಬಾಚಿರುವುದಿಲ್ಲ. ಮನೆಗೆಲಸ ಮಾಡುವುದಲ್ಲವಾ ಎಂದು ಸ್ವಚ್ಚತೆ ಕಡೆಗೆ ಅಷ್ಟೊಂದು ಗಮನವಿಲ್ಲ. ಕೆಲವು ಮನೆಗೆಲಸದ ಮಹಿಳೆಯರು ಅತ್ಯಂತ ಶುಚಿಯಾಗಿದ್ದು ಸರ್ಕಾರಿ ಉದ್ಯೋಗಕ್ಕೆ ಹೋಗುವ ಮಹಿಳೆಯರಂತೆ ಕಂಡುಬರುತ್ತಾರೆ. ಸುಮಾರು 30 ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದಾಳೆ. ಹೊಸ ಸೀರೆ ಉಟ್ಟಿಲ್ಲ. ಚಿನ್ನದ ಆಭರಣ ಕಂಡಿಲ್ಲ, ಚಪ್ಪಲಿ ಇಲ್ಲ, ಕಾಯಿಲೆ ಆದರೆ
ವೈದ್ಯ ಬಳಿ ಹೋಗುವುದಿಲ್ಲ (ಮನೆ ಔಷಧಿ ತೆಗೆದುಕೊಳ್ಳುತ್ತಾಳೆ). ನೆಂಟರಿಷ್ಟರ ಮನೆಗಾಗಲಿ ಬೇರೆ ಊರುಗಳಿಗಾಗಲಿ ಹೋಗುವುದಿಲ್ಲ. ಬಹುಶಃ ನಗರ, ಮಾರುಕಟ್ಟೆ, ಸಿನಿಮಾ ಮಂದಿರ, ಬಸ್‍ಸ್ಟ್ಯಾಂಡ್‍ಗಳನ್ನು ನೋಡಿಲ್ಲವೇನೋ. ದಿನವಿಡೀ ಮನೆಗೆಲಸ ಮಾಡಿ ಸಂಬಳವನ್ನು ಮಗಳಿಗೆ ನೀಡುವ, ಮಗಳ ಮತ್ತು ಮೊಮ್ಮಕ್ಕಳ ಜೀವನ ಚೆನ್ನಾಗಾಗಬೇಕು ಅನ್ನುವ ಯೋಚನೆ ಬಿಟ್ಟರೆ ಆಕೆಯ ಜೀವನದಲ್ಲಿ ಬೇರೇನೂ ಆಸೆಯೇ ಇಲ್ಲವೇನೊ. ಬಹುಶಃ ಗಂಡ ಬಿಟ್ಟುಹೋದಾಗಲೆ ತನ್ನೆಲ್ಲ ಆಸೆ, ಆಕಾಂಕ್ಷೆಗಳನ್ನು ಕೊಂದುಕೊಂಡಿರಬಹುದು. ತನ್ನ ಬದುಕಿನ ಅತಂತ್ರ, ಅವಮಾನದ, ಭರವಸೆಯಿಲ್ಲದ ಪರಿಸ್ಥಿತಿ ನೋಡಿಕೊಡು
ಮೌನಳಾಗುವುದು ಉಂಟು. ಅವಳ ಈ ವರ್ತನೆ ಹೊರಗಿನವರಿಗೆ ಮಾದಮ್ಮ ದಡ್ಡಿ, ತಿಳುವಳಿಕೆಯಿಲ್ಲದವಳು, ಅಯ್ಯೋ ಪಾಪದವಳು ಎಂಬಂತೆ ಕಂಡುಬರುತ್ತಾಳೆ. ಆದರೆ ಕೆಲವೊಮ್ಮೆ ಅವಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದಾಗ ಅವಳಿಗೆ ಎಲ್ಲವೂ ಗೊತ್ತಿದೆ. ತನ್ನೊಳಗೆ ಅಸಮಧಾನ, ಕೋಪ, ಆಸೆ, ನಿರೀಕ್ಷೆಗಳನ್ನು ತುಂಬಿಕೊಂಡಿದ್ದಳೆ, ತನ್ನಿಚ್ಚೆಯಂತೆ ಏನು ನಡೆಯುವುದಿಲ್ಲ, ಯಾರು ತನ್ನ ಮಾತು ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದಿರುವುದರಿಂದ ಮೌನವಹಿಸಿ ಕತ್ತೆ ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಕೆಲವೊಮ್ಮೆ ಕೋಪದ, ಸುಳ್ಳು ಪ್ರತಿಷ್ಠೆಯ, ಜಂಬದ ಮಾತುಗಳ ಮೂಲಕ ತನ್ನ ಅಳಲನ್ನು ವ್ಯಕ್ತಪಡಿಸುತ್ತಾಳೆ.
ಮನೆಗೆಲಸದ ಮನೆಗಳಲ್ಲಿ ಅತ್ಯಂತ ಶ್ರಮದಿಂದ, ಪ್ರಾಮಾಣಿಕತೆಯಿಂದ ಕೆಲಸಮಾಡುತ್ತಾಳೆ. ಸಂಬಳ ಹೆಚ್ಚಿಗೆ ಕೊಡಲಿ ಎಂದು ನಿರೀಕ್ಷಿಸುತ್ತಾಳೆ. ಆದರೆ ಕೇಳುವುದಕ್ಕೆ ಸ್ವಾಭಿಮಾನ. ಅವರಿಗೆ ಗೊತ್ತಿಲ್ಲವಾ ನಾನು ಎಷ್ಟು ಗಂಟೆ ಕೆಲಸ
ಮಾಡುತ್ತೇನೆ, ಇವತ್ತಿನ ಜೀವನ ವೆಚ್ಚ ಎಷ್ಟು ಎಂದು ಅವರೇ ಅರಿತು ಕೊಡಲಿ ಎಂದು ಆಸೆ ಪಡುತ್ತಾಳೆ. ಆದರೆ ನಮಗೆಲ್ಲ ಗೊತ್ತಿರುವಂತೆ ಇತ್ತೀಚಿನ ವಿದ್ಯಮಾನದಲ್ಲಿ ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಹೆಚ್ಚಿಗೆ ಬಂದ ಹಣವನ್ನು ಯಾವುದಕ್ಕೆ ಖರ್ಚು ಮಾಡಬೇಕು, ಆಸ್ತಿಯನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೆಯೇ ಹೊರತು, ನಮಗೆ ಸೇವೆ ಸಲ್ಲಿಸುವವರಿಗೆ ಶ್ರಮಕ್ಕೆ ತಕ್ಕ ಕೂಲಿ ಕೊಡಬೇಕೆನ್ನುವ ಮನೋಭಾವವಿಲ್ಲ. ಇದರಿಂದ ದೈಹಿಕ ಶ್ರಮದ ಕೆಲಸ ಮಾಡುವ ಜನರ ಜೀವನ
ಸುಧಾರಿಸುವುದಕ್ಕೆ ಅವಕಾಶವೆ ಇಲ್ಲ. ಮಾದಮ್ಮ ಸುಮಾರು 35 ವರ್ಷಗಳಿಂದ ಮನೆಗೆಲಸ ಮಾಸುತ್ತಿದ್ದರೂ ಅವಳ ಆದಾಯ ತಿಂಗಳಿಗೆ 2000 ದಾಟಿಲ್ಲ. ತನ್ನದೆ ಎಂದು ಹೇಳುವ ಒಡವೆ, ಬೆಲೆಬಾಳುವ ವಸ್ತುಗಳು, ಉಳಿತಾಯವಾಗಲಿ ಇಲ್ಲ. ಒಮ್ಮೆ ಅವಳ ಹತ್ತಿರ ನಿನ್ನದು ಅಂತ ಏನೂ ಇಲ್ಲ. ಕೆಲಸ ಮಾಡಲು ಆಗದೆ ಮೂಲೆ ಹಿಡಿದರೆ ಏನು ಮಾಡುತ್ತೀಯ? ಎಂದು ಕೇಳಿದೆ. ಇಷ್ಟು ವರ್ಷ ದುಡಿದುದ್ದನ್ನೆಲ್ಲ ಮಗಳಿಗೆ, ಅವಳ ಸಂಸಾರಕ್ಕೆ ನೀಡಿದ್ದೇನೆ. ನನ್ನ ಜೀವವನ್ನೇ ತೇದಿದ್ದೇನೆ. ನನ್ನ ಕೈಲಿ ಕೆಲಸ ಮಾಡಲು ಆಗುವುದಿಲ್ಲ ಎಂದಾಗ ನನ್ನ ಮಗಳು ನೋಡಿಕೊಳ್ಳುತ್ತಾಳೆ ಎಂದು ತುಂಬು ಭರವಸೆಯಿಂದ ಹೇಳಿದಳು.
ಇನ್ನು ಮನೆಯ ಒಳಗೆ ಅವಳ ಪರಿಸ್ಥಿತಿ ನೋಡಿದರೆ ಮಗಳು ತಾಯಿ ದುಡಿದು ತಂದ ಹಣವನ್ನು ತೆಗೆದುಕೊಳ್ಳುತ್ತಾಳೆ. ಆದರೆ ಅವಳ ಅಗತ್ಯ, ಬೇಕು ಬೇಡಗಳ ಬಗ್ಗೆ ಲಕ್ಷ್ಯವಿಲ್ಲ. ಬೇರೆ ಮನೆಯವರ ಮನೆಯಲ್ಲಿ ಮಲೀನವಾದ ಪಾತ್ರೆ ಬಟ್ಟೆ ಒಗೆದು ಬರುವುದರಿಂದ ಮಾದಮ್ಮನೂ ಮೈಲಿಗೆಯಾಗುವುದರಿಂದ ಅವಳನ್ನು ಮನೆ ಒಳಗೆ ಸೇರಿಸುವುದಿಲ್ಲ. ಕೆಲಸದ ಮನೆಯವರು ತಿನ್ನಲಿಕ್ಕೆ ಏನಾದರೂ ಕೊಡುತ್ತಾರೆ ಎಂದು ಮನೆಯಲ್ಲಿ ಊಟ ನೀಡಲೇ ಬೇಕೆಂದು ಅಥವಾ ಅವಳ ಮೂಲ ಅವಶ್ಯಕತೆಗಳನ್ನು ಪೂರೈಸಬೇಕೆಂಬ ಕಾಳಜಿ ಅಷ್ಟಾಗಿ ಕಂಡುಬರುವುದಿಲ್ಲ. ಮಾದಮ್ಮನ ಭೌತಿಕ ಚಹರೆ, ಸ್ಥಿತಿಗೂ ಅವರ ಮನೆಯ ಇತರ ಸದಸ್ಯರ ಸ್ಥಿತಿಗೂ ಅಂತರವಿದೆ. ನನಗೆ ಅನಿಸಿದ ಮಟ್ಟಿಗೆ ಅವಳು ಕೆಲಸ ಮಾಡುವ ಮಾಲಿಕರು ಅವಳನ್ನು ನೋಡುವ ದೃಷ್ಟಿಕೋನದಲ್ಲೇ ಮಗಳ ಮನೆಯವರು ನೋಡುತ್ತಾರೆ. ಇದೆಲ್ಲವು ಮಾದಮ್ಮನಿಗೆ ಅರ್ಥವಾಗುತ್ತದೆ. ಆದರೆ ಪ್ರೀತಿ, ಗೌರವ, ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದನ್ನು ಒತ್ತಾಯ ಪೂರ್ವಕವಾಗಿ ಪಡೆಯಲಾಗುವುದಿಲ್ಲ ಎಂದು ಗೊತ್ತಾಗಿ, ಏನಿದೆಯೇ ಅದರಲ್ಲೇ ತೃಪ್ತಿಯಿಂದ ಇರೋಣ ಎಂದೋ ಅಥವಾ ಸದ್ಯ ಮಗಳು ಅಳಿಯ ಮನೆಯಲ್ಲಿಟ್ಟುಕೊಂಡಿದ್ದಾರಲ್ಲ, ಒಂದು ವೇಳೆ ಮನೆ ಬಿಟ್ಟು ಕಳಿಸಿದರೆ ನನ್ನ ಗತಿಯೇನು ಎಂದು ಯೋಚಿಸಿರಬಹುದು. ಕಳೆದ ಐದಾರು ವರ್ಷಗಳಿಂದ ಮಾದಮ್ಮನ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತಾ ಬಂದಿದೆ. ಹಿಂದೆ ಒಮ್ಮೆ ವೈದ್ಯರ ಬಳಿ ತೋರಿಸಿದಾಗ ಕನ್ನಡಕಕ್ಕೆ ಬರೆದುಕೊಟ್ಟಿದ್ದಾರೆ. ಕನ್ನಡಕವನ್ನು ಹಾಕಿಕೊಂಡಾಗ ಮಕ್ಕಳು, ಸುತ್ತಮುತ್ತಲಿನವರು ಹಾಸ್ಯ ಮಾಡಿದರು ಎಂದು ಕನ್ನಡಕವನ್ನು ಬಳಸಲೆ ಇಲ್ಲ. ಚಿಕ್ಕ ಹುಡುಗಿಯಾಗಿದ್ದಾಗ ಕಣ್ಣಿನ ಪಕ್ಕಕ್ಕೆ ಏಟು ಬಿದ್ದಿದ್ದರಿಂದ ಈಗ ನರ ದುರ್ಬಲವಾಗಿ ದೃಷ್ಟಿ ದೋಷವಾಗಿದೆಯಂತೆ. ನನ್ನ ಅಂದಾಜಿನ ಪ್ರಕಾರ ಶೇ.75ರಷ್ಟು ದೃಷ್ಟಿ ಹೋಗಿದೆ. ಅಂದಾಜು ಮೇಲೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾಳೆ. ಹೋದವಾರ ಕೆಲಸ ಮುಗಿಸಿ ಹೋಗುವಾಗ ಕಲ್ಲಿಗೆ ಎಡವಿ ಬಿದ್ದು ಮಂಡಿಯ ಮೂಳೆ ಮುರಿದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಸದ್ಯಕ್ಕೆ ಮಗಳು, ಅಳಿಯ ನೋಡಿಕೊಳ್ಳುತ್ತಿದ್ದಾರೆ. ಮುಂದೆ ಅವಳು ಕೆಲಸ ಮಾಡಲು ಆಗುವುದಿಲ್ಲ, ಹಣ ಸಂಪಾದಿಸಲಾಗುವುದಿಲ್ಲ ಎಂದರೆ ಅವರು ನೋಡಿಕೊಳ್ಳುವ ರೀತಿ ಹೇಗಾಗುತ್ತೊ ಗೊತ್ತಿಲ್ಲ. 
          ಮಾದಮ್ಮನಂತಹವರ ಜೀವನ ಅಗೋಚರವಾದ, ಲೆಕ್ಕಕ್ಕೆ ಬರದ ಕೋಟ್ಯಾಂತರ ಮಹಿಳೆಯರ ಜೀವನ ಅತ್ಯಂತ ಸಾಮಾನ್ಯವೆನ್ನುವಂತಿದೆ. ಆದರೆ ಮಹಿಳಾ ಅಧ್ಯಯನ ದೃಷ್ಟಿಯಿಂದ ಹೇಗೆ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ ಅನ್ನುವುದನ್ನು ನೋಡಬೇಕಾಗುತ್ತದೆ. - ನಮ್ಮಲ್ಲಿರುವ ಸಾಮಾನ್ಯ ನಂಬಿಕೆ, ಮಹಿಳೆ ಗಂಡನ ಆಶ್ರಯವಿಲ್ಲದೆ, ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಅನ್ನುವುದಕ್ಕೆ ವಿರುದ್ಧವಾಗಿ ಮಾದಮ್ಮ ಗಂಡನ ಸಹಾವಿಲ್ಲದೆ ತನ್ನ ಜೀವನ ಸಾಗಿಸಿ ಮಗಳಿಗೂ ಜೀವನ ರೂಪಿಸಿಕೊಟ್ಟಿದ್ದಾಳೆ. ಇದನ್ನು ಸಮಾಜ ಗುರುತಿಸುವುದೇ ಇಲ್ಲ. ಅವಳನ್ನು ಅಯ್ಯೋ ಪಾಪ ಅವಳ ಜೀವನವೇ ಹಾಳಾಯ್ತು ಅಂತ ಅನುಕಂಪದಿಂದ ನೋಡಲಾಗುತ್ತದೆ. ಆದರೆ ನಿಜದಲ್ಲಿ ತವರು ಮನೆಯವರು ಅಲ್ಪಸ್ವಲ್ಪ ಸಹಾಯ ಮಾಡಿದರು ಮಾದಮ್ಮ ತನ್ನ ಸ್ವಂತ ಶ್ರಮದಿಂದಲೆ ಸ್ವತಂತ್ರವಾಗಿ ಜೀವನ ನಡೆಸಿದ್ದಾಳೆ. - ತನ್ನ ಮನೆಕೆಲಸವನ್ನು ಮಾಡಿ ಬೇರೆಯವರ ಮನೆಯಲ್ಲೂ ಸಂಬಳಕ್ಕಾಗಿ ದುಡಿದು ಸ್ವತಂತ್ರವಾಗಿ ಬದುಕಿದ್ದಾಳೆ. ಹಲವು ವರ್ಷಗಳ ಕಾಲ ಹಸು ಸಾಕಿ ಹಾಲು ಮಾರಿ ಮಗಳ ಸಂಸಾರಕ್ಕೆ ಆರ್ಥಿಕವಾಗಿ ನೆರವಾದಳು. ಕೆಲಸದ ಮನೆಯವರು ಏನು ಕೊಟ್ಟರು ಮಗಳಿಗೆ, ಮೊಮ್ಮಕ್ಕಳಿಗೆ ಕೊಡುತ್ತಾಳೆ. ಇಷ್ಟೆಲ್ಲ ಮಾಡಿದರೂ ಅವಳಿಗೆ ಸಿಗುತ್ತಿರುವುದು ಏನು? - ನಗರ ಪ್ರದೇಶದಲ್ಲಿ ವಾಸವಿದ್ದು ಶಾಲೆಗಳು ಹತ್ತಿರದಲ್ಲಿದ್ದರೂ ಹೆಣ್ಣುಮಕ್ಕಳನ್ನು ಶಾಲೆಗೆಕಳುಹಿಸಬೇಕು ಅನ್ನುವ ಅರಿವೆ ಇಲ್ಲ. ಎರಡು ಪೀಳಿಗೆ ಅಕ್ಷರ ಜ್ಞಾನವಿಲ್ಲದೆ ಕಳೆದಾಗಿದೆ. ಸಂತಸದ ವಿಚಾರವೆಂದರೆ ಇವಳ ಮೊಮ್ಮಕ್ಕಳು ಕಾಲೇಜಿನ್ಲಲಿ ಓದುತ್ತಿದ್ದಾರೆ. ಮುಂದಿನ ಪೀಳಿಗೆ ಶಿಕ್ಷಿತ ಪೀಳಿಗೆಯಾಗಿ ಮುಂದುವರೆಯಬಹುದು. ಮೊಮ್ಮಳಿಗೆ ಡೊನೇಷನ್ ಕೊಟ್ಟು ಎಂ.ಕಾಂ ಗೆ ಸೇರಿಸಿದ್ದರು. ಒಳ್ಳೆ ಗಂಡು ದೊರೆಯಿತು ಎಂದು ವರದಕ್ಷಿಣೆ ನೀಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆ ಮಾಡಿದರು. ಕೆಲವು ಆತುರದ ನಿರ್ಧಾರಗಳು ವ್ಯಕ್ತಿಗಳ ಜೀವನವನ್ನು ದುಃಸ್ಥಿತಿಗೆ ತಳ್ಳಬಹುದು ಅನ್ನುವ ವಿವೇಚನೆಯಿಲ್ಲದಿರುವುದು ಕಂಡುಬರುತ್ತದೆ. ಮಾದಮ್ಮಳ ಜೀವನ ಇನ್ನು ಚೆನ್ನಾಗಿ ಸುಧಾರಿತ ರೀತಿಯಲ್ಲಿ ಆಗಬೇಕಿದಿದ್ದರೆ ಏನು ಮಾಡಬಹುದಿತ್ತು ಅನ್ನುವುದನ್ನು ನೋಡಿದರೆ ಅವಳ ಬಿಟ್ಟುಬಿಡಲು ಕಾರಣವನ್ನು ತಿಳಿದು ಸೂಕ್ತ ಕಾರಣವಿಲ್ಲದಿದ್ದರೆ ಆಪ್ತ ಸಮಾಲೋಚನೆ ನಡೆಸಿ ಇಬ್ಬರು ಒಟ್ಟಿಗೆ ಜೀವನ ನಡೆಸುವಂತೆ ಮಾಡಬಹುದಿತ್ತು. ಗಂಡ ಅವನು ಬಿಡುವುದೇ ಆದರೆ ಅವಳಿಗೆ ಜೀವನಾಂಶ ಕೊಡುವಂತೆ ಮಾಡಬಹುದಿತ್ತು. ಮಗುವನ್ನು ಸಾಕುವ ಜವಾಬ್ದಾರಿಯಯನ್ನು ತೆಗೆದುಕೊಳ್ಳುವಂತೆ ಮಾಡಬಹುದಿತ್ತು. ಇದಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಜಾರಿಗೊಳ್ಳುವಂತೆ ಮಾಡಬಹುದಿತ್ತು. (ಸರ್ಕಾರಿ ಕೆಲಸ ಹೋಗುತ್ತಿತ್ತು. ಅವನ ಸಂಬಳದಲ್ಲಿ ಅರ್ಧಭಾಗ ಕೊಡುವಂತೆ, ಎರಡನೇ ಮದುವೆ ಕಾನೂನು ಬಾಹಿರ ಎಂದು ಹೀಳಿ ತಪ್ಪಿಸಬಹುದಿತ್ತು. ಆ ಹುಡುಗಿಯ ಮನೆಯವರಿಗೆ ಮೊದಲ ಮದುವೆಯ ವಿಷಯ ವಿಷಯ ತಿಳಿಸಬೇಕಾಗಿತ್ತು) ಚಿಕ್ಕ ವಯಸ್ಸಾಗಿದ್ದಿದ್ದರಿಂದ ಮಾದಮ್ಮಳಿಗೆ ಓದಿಸಬಹುದಿತ್ತು ಅಥವಾ ಮತ್ತೊಂದು ಮದುವೆ ಮಾಡಬಹುದಿತ್ತು. ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತ ಮಹಿಳೆಯರ ಸಮಸ್ಯೆಗಳ ಪ್ರತಿರೂಪದಂತಿದ್ದಾಳೆ. ಸರ್ಕಾರ ಈ ವಲಯದವರಿಗಾಗಿ ಕನಿಷ್ಟ ವೇತನ ನಿಗದಿಪಡಿಸಿದಿದ್ದರೆ, ಯೋಜನೆಗಳು ಸರಳ ರೀತಿಯಲ್ಲಿ ಜನರನ್ನು ತಲುಪುವಂತೆ ರೂಪಿಸದಿದ್ದರೆ ಮಾದಮ್ಮನಂತವರಿಗೆ ಸಹಾಯವಾಗುತಿತ್ತು. ಸಕಾರದ ಯೋಜನೆಗಳು ಹಲವಾರಿದ್ದರೂ ಅಜ್ಞಾನದಿಂದಲೋ, ತಿಳುವಳಿಕೆಯಿಲ್ಲದಿದ್ದರಿಂದಲೋ ಯಾವುದೇ ಸೌಲಭ್ಯ ಪಡೆಯಲಾಗಿಲ್ಲ. ಗಂಡ ಬದುಕಿರುವುದರಿಂದ ವಿಧವಾ ವೇತನ ದೊರಕುವುದಿಲ್ಲ. ಮತದಾರರ ಪಟ್ಟಯಲ್ಲಿ ಕಡಿಮೆ ವರ್ಷದ ವಯಸ್ಸು ನಮೂದಾಗಿರುವುದರಿಂದ ನಿರ್ಗತಿಕರಿಗೆ ನೀಡುವ ಮಾಸಾಶನವಾಗಲಿ ವೃದ್ದರಿಗೆ ನೀಡುವ ಪಿಂಚಣಿಯಾಗಲಿ ದೊರಕುತ್ತಿಲ್ಲ. ಹಸಿರು ಕಾರ್ಡ್ ಆಗಲಿ, ಯಶಸ್ವಿನಿ ಕಾರ್ಡ್ ಆಗಲಿ ಯಾವುದು ಮಾಡಿಸಿಲ್ಲ. ನಿಜವಾಗಿಯೂ ಯಾರಿಗೆ ಸರ್ಕಾರಿ ಯೋಜನೆಗಳು ತಲುಪಬೇಕೋ ಅವರಿಗೆ ತಲುಪುತ್ತಿಲ್ಲ ಅನ್ನುವುದಕ್ಕೆ ಮಾದಮ್ಮನೇ ಉದಾಹರಣೆ. ಮೆನಗೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಮಾದಮ್ಮನೂ ಎದುರಿಸುತ್ತಿದ್ದಾಳೆ. ಸಾಮಾಜಿಕ ಸುರಕ್ಷೆಯಡಿ ಇಂತವರ ಬದುಕು ಸುಧಾರಣೆಯಾಗಿ
ಸಾರ್ವತ್ರಿಕ ಮಾನವ ಹಕ್ಕುಗಳ ಸವಲತ್ತಿನಂತೆ ಘನತೆಯಿಂದ ಬದುಕುವಂತಾಗಬೇಕು.                                               -  ಹೇಮಲತ ಎಚ್.ಎಮ್



ಸಿನಿಮಾ ವಿಮರ್ಶೆ: "ಧರ್ಮ್"





"ಜಹಾ ದಯಾ ತಹಾ ಧರ್ಮ್, ಜಹಾ ಕ್ರೋಧ್ ತಹಾ ಪಾಪ್|
ಜಹಾ ಘೃಣಾ ತಹಾ ನರ್ಕ್ ಹೈ, ಜಹಾ ಕ್ಷಮಾ ತಹಾ ಆಪ್|"
(ಎಲ್ಲಿ ದಯೆಯೋ ಅಲ್ಲಿ ಧರ್ಮ, ಎಲ್ಲಿ ಕ್ರೋಧವೋ ಅಲ್ಲಿ ಪಾಪ)
ಎಲ್ಲಿ ಘೃಣವೋ ಅಲ್ಲಿ ನರಕ, ಎಲ್ಲಿ ಕ್ಷಮೆಯೋ ಅಲ್ಲಿ ನೀವು)
ಎಂಬ ಉಕ್ತಿಯೊಂದಿಗೆ ಪ್ರಾರಂಭವಾಗುತ್ತದೆ 'ಧರಮ್' ಎಂಬ ಹಿಂದಿ ಸಿನಿಮಾ. ಈ ಬಾರಿಯ ವಿಹಂಗಮ ನೋಟಕ್ಕೆ ಆರಿಸಿಕೊಳ್ಳಲು ಬೇಕಾದ ಎಲ್ಲಾ ಉತ್ತಮಾಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಪ್ರಮುಖವಾಗಿ ಕೋಮುವಾದದ ವಿರುದ್ಧ ಜಾಗೃತಿಯನ್ನು ಮೂಡಿಸುವಂತಹ ಶಕ್ತಿಯನ್ನು ಹೊಂದಿದೆ. ಧರ್ಮಕ್ಕಾಗಿ ಹೋರಾಡು, ಧರ್ಮಕ್ಕಾಗಿ ಕೊಲ್ಲು, ಎಂದು ಯುವ ಜನಾಂಗವನ್ನು ದಾರಿತಪ್ಪಿಸಿ ಧರ್ಮದ ನಿಜವಾದ ಅರ್ಥವನ್ನೆ ಕಲುಷಿತಗೊಳಿಸಿದವರು ಈ ಸಿನಿಮಾ ನೋಡಿ ಇನ್ನು ಮುಂದೆಯಾದರೂ ಬದಲಾಗಲಿ ಎಂಬ ಮಹತ್ವಕಾಂಕ್ಷೆ ನಮ್ಮದಾಗಿದೆ. ಪಂಕಜ್ ಕಪೂರ್‍ರವರ ಶ್ರೇಷ್ಠ ಅಭಿನಯವಂತೂ ನೋಡುಗರಿಂದ "ವಾಹ್! ಎಂತಹ ಅದ್ಭುತ ನಟನೆ" ಎಂಬ ಉದ್ಗಾರವನ್ನು ನುಡಿಸುತ್ತದೆ. ಅಂದ ಹಾಗೆ ಇವರು ಈ ಕಥೆಗೆ ಕಥಾನಾಯಕರೂ ಕೂಡ. ಭಾವನಾ ತಲ್‍ವಾರ್‍ರವರ ನಿರ್ದೇಶನ ಸಿನಿಮಾಗೆ ಜೀವಕಳೆ ತಂದಿದೆ. ಇನ್ನು ಸಹನಟಿ, ನಟರೆಲ್ಲರೂ ತಮ್ಮ ಪಾತ್ರಗಳಲ್ಲಿ ಲೀನವಾಗಿ ನೈಜ ಅಭಿನಯದಿಂದ ಮನಸೂರೆಗೊಳ್ಳುತ್ತಾರೆ. ಪ್ರಾರಂಭದಿಂದ ಕೊನೆಯವರೆಗೂ ಕುತೂಹಲವನ್ನು ಸಡಿಲಿಸದೆ ನೋಡಿಸಿಕೊಂಡು ಹೋಗುವ ಸುಂದರ ಕಥೆಯೇ ಸಿನಿಮಾದ ಮತ್ತೊಂದು ಹೈಲೈಟ್.
ಕಥೆ ಶುರುವಾಗುವುದೇ ಬನಾರಸ್(ವಾರಣಾಸಿ)ನ ಪವಿತ್ರ ಗಂಗಾ ನದಿ ತಟದಲ್ಲಿ. ಅಲ್ಲಿಗೆ ವೇದೋಪನಿಷತ್ ಭೋದಕರೂ,  ದೇವಾಲಯದ ಅರ್ಚಕರೂ, ನೇಮನಿಷ್ಠೆಗಳಿಂದ ಶಿವನನ್ನು ಪೂಜಿಸುವ ಬ್ರಾಹ್ಮಣ ಪಂಡಿತರು ಆದ ಚತುರ್ವೇದಿಯವರು ಶಿಷ್ಯರೊಡನೆ ಆಗಮಿಸುತ್ತಾರೆ. ಬೊಜ್ಜು ಹೊಟ್ಟೆಯ ಶುದ್ಧ ಬ್ರಾಹ್ಮಣ ವೇಷದಲ್ಲಿ ಪಂಕಜ್‍ರವರನ್ನು ನೋಡಲು ಹಾಸ್ಯಾಸ್ಪದವೆನಿಸಿದರೂ ತಮ್ಮ ಗಂಭೀರ ಅಭಿನಯದಿಂದ ನಮ್ಮಲ್ಲೂ ಗಂಭೀರತೆಯನ್ನು ಮೂಡಿಸುತ್ತಾರೆ.
ಪಂಡಿತರು ಸೂರ್ಯನನ್ನು ಪೂಜಿಸಿ ಹಿಂದಿರುಗುವಾಗ ಕಸ ಗುಡಿಸುತ್ತಿದ್ದ ಅಸ್ಪೃಶ್ಯನೊಬ್ಬ ಪಂಡಿತರನ್ನು ಹಿಂದಿನಿಂದ ಸ್ಪರ್ಷಿಸಿಬಿಡುತ್ತಾನೆ. ತಿಳಿಯದೆ ಆದ ಪ್ರಮಾದಕ್ಕೆ ಸುತ್ತಲಿನ ಜನ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಪಂಡಿತರು ಹೊಡೆಯಿರೆಂದು ಹೇಳಲಿಲ್ಲ ಹಾಗಂತ ಅದನ್ನು ತಡೆಯಲೂ ಇಲ್ಲ. ನಡೆದು ಹೋದ ಅಪರಾಧಕ್ಕೆ ಪ್ರಾಯಶ್ಚಿತ್ತಕ್ಕಾಗಿ ನೀರಿಗಿಳಿದು ಶಿವನನ್ನು ಜಪಿಸಿ ಜಲಪೆÇ್ರೀಕ್ಷಣೆ ಮಾಡಿಕೊಂಡು ತನ್ನ eನಿವಾರವನ್ನು ಬದಲಾಯಿಸಿ ಹೊರಡಲನುವಾಗುತ್ತಾರೆ. ಈ ಅನ್ಯಾಯವನ್ನು ತಡೆಯಲೆತ್ನಿಸಿದ ಸಾಧುವೊಬ್ಬರು ನೊಂದು ಪಂಡಿತರನ್ನು "ಇದೆಂತಹ ಅನ್ಯಾಯ, ಎಲ್ಲಾ ಶಾಸ್ತ್ರಗಳೂ ಹೇಳುತ್ತವೆ- ಯಾರೂ ಅಧಮರಲ್ಲ, ಯಾರೂ ಉತ್ತಮರಲ್ಲ. ಮನುಷ್ಯರಾಗಿ ನಾವೆಲ್ಲಾ ಒಂದೆ ಎಂದು. ನೀವೇ ತಡೆಯದೆ ಹೋದರೆ ಹೇಗೆ? ಎಂದು ವಿನಂತಿಸುತ್ತಾರೆ. ಭಗವಂತನ ದಯೆಯಿಂದ ನಾನೂ ಸಹ ಶಾಸ್ತ್ರಾಧ್ಯಯನವನ್ನು ಮಾಡಿದ್ದೇನೆ ಎಂದಷ್ಟೇ ಹೇಳಿ ನಮಸ್ಕರಿಸಿ ತೆರಳುತ್ತಾರೆ. ಇಂತಹ ಕಟ್ಟಾ ಮಡಿವಂತಿಕೆಯ ಪಂಡಿತರು ತಮ್ಮ ದಯೆಯಿರದ ಧರ್ಮಾಚರಣೆಗಳನ್ನು ತೊರೆದು ಕೋಮುವಾದಿಗಳ ವಿರುದ್ಧ ನಿಲ್ಲುವ ರೋಚಕ ಕಥೆಯೇ ‘ಧರ್ಮ್'.
ಪಂಡಿತರ ಪತ್ನಿ ಪಾರ್ವತಿ. ಪತಿಯ ಇಚ್ಛೆಗನುಗುಣವಾಗಿ ನಡೆಯುವ ಸುಗುಣವತಿ. ಪಂಡಿತರು ಪೂಜೆಗೆ ಕುಳಿತಾಗ ಅವರ ವ್ರತಕ್ಕೆ ಚೂರೂ ಭಂಗ ತರದಂತೆ ಎಚ್ಚರಿಕೆ ವಹಿಸುತ್ತಿದ್ದಳು. ಈ ಅನ್ಯೋನ್ಯ ದಂಪತಿಗಳಿಗೊಬ್ಬ ಮುದ್ದು ಮಗಳು. ಹೆಸರು ವೇದಿಕಾ. ಇವರ ಕಣ್ಮಣಿಯಾಗಿದ್ದಳು. ಪಂಡಿತರ ಬಳಿ ಪಾಲ್ ಎಂಬ ವಿದೇಶಿ ಯುವಕ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಬಂದಿದ್ದನು. ಆತನೊಬ್ಬ ಪತ್ರಕರ್ತ. ಇಲ್ಲಿ ಪಂಡಿತರ ಸಲಹೆ ಆಜ್ಞೆಗಳಿಗನುಸಾರವಾಗಿ ನಡೆಯುವ ಜಮೀನ್ದಾರಿ ಕುಟುಂಬವೊಂದರ ಪರಿಚಯವಾಗುತ್ತದೆ. ಮನೆಯ ಒಡೆಯ ವಿಷ್ಣುಸಿಂಗರು ಸಜ್ಜನರು. ಪಂಡಿತರ ಮಾತೇ ಇವರಿಗೆ ವೇದ ವಾಕ್ಯ. ಅವರ ಮಗಳು ಮಣಿ ರೂಪ, ಗುಣದ ಜೊತೆಗೆ ವಿದ್ಯಾವಂತೆ. ವಿದೇಶಿ ಯುವಕ ಪಾಲ್‍ಗೂ, ಮಣಿಗೂ ಪ್ರೇಮಾಂಕುರವಾಗಿರುತ್ತದೆ. ಇದು ಯಾರಿಗೂ ತಿಳಿದಿರುವುದಿಲ್ಲ. ಇನ್ನು ಮಗ ಸೂರ್ಯಪ್ರಕಾಶ ಮುಂಗೋಪಿ, ಅವಿವೇಕಿ. ತಂಗಿ ಎಮ್‍ಬಿಎ ಓದುವೆನೆಂದಾಗ ಪಂಡಿತರ ಮುಂದೆಯೇ ತಂದೆಯೆಂಬ ಗೌರವವಿಲ್ಲದೆ ವಿಷ್ಣುಸಿಂಗರ ಮೇಲೆ ರೇಗಾಡುತ್ತಾನೆ. ಹೆಣ್ಣುಮಕ್ಕಳಿಗಿದು ಸಭ್ಯತೆಯಲ್ಲ ಎಂದು ಕೂಗಾಡುತ್ತಾನೆ. ಆಗ ಪಂಡಿತರು ತಂದೆಯ ಜೊತೆ ಹೀಗೆ ಮಾತಾಡುವುದು ಕೂಡ ಸಭ್ಯತೆಯಲ್ಲವೆಂದು ಹೇಳಿ ಮಣಿಯ ಓದಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ತಂದೆಗಿದೆ ಎನ್ನುತ್ತಾರೆ. ತಂದೆ ಮಗಳ ಓದಿಗೆ ಸಮ್ಮತಿಸಿದರು.
ಒಂದು ದಿನ ಪಂಡಿತರ ಮಗಳು ವೇದಿಕಾಳಿಗೆ ದಾರಿಹೋಕಳೊಬ್ಬಳು ತನ್ನ ಎಳೆಮಗುವನ್ನು ನೀಡಿ ನೀರು ಕುಡಿದು ಬರುತ್ತೇನೆಂದು ಹೇಳಿ ವಾಪಸ್ಸು ಬಂದಿರುವುದಿಲ್ಲ. ತಾಯಿ ಮಗಳಿಬ್ಬರು ಮಗುವನ್ನು ಆಡಿಸುತ್ತಾ ಕಾಯುತ್ತಿದ್ದಾಗ ಮನೆಗೆ ಬಂದ ಪಂಡಿತರು ವಿಚಾರ ತಿಳಿದು, ಆಶ್ಚರ್ಯದಿಂದ ಜಾತಿಯಾದರೂ ತಿಳಿಯದೆ ಹೇಗೆ ಮಗುವನ್ನು ಮುಟ್ಟಿದಿರಿ ಎಂದು ಕೋಪಗೊಂಡರು. ಪಾರ್ವತಿಯು ಆ ವಿಷಯದ ಬಗ್ಗೆ ಏನೂ ತಿಳಿಯದಿದ್ದರು ಮಗಳನ್ನು ರಕ್ಷಿಸಲು ಮಗು ಬ್ರಾಹ್ಮಣರದಂತೆ, ವೇದಿಕಾ ಕೇಳಿಯೇ ಪಡೆದುಕೊಂಡಿದ್ದಾಳೆಂದಾಗ ನಿಟ್ಟುಸಿರು ಬಿಟ್ಟು ಆದರೂ ತಾಯಿ ನೊಂದುಕೊಳ್ಳುತ್ತಾಳೆಂದು ಪೆÇೀಲೀಸ್ ಕಂಪ್ಲೆಂಟು ನೀಡಿದರು.
ಆಕೆ ವಾಪಸ್ಸು ಬರಲಿಲ್ಲವಾದರೂ ಪಂಡಿತರ ಮನೆಯಲ್ಲಿ ಆ ಮಗುವಿನಿಂದ ಸಡಗರ ಹೆಚ್ಚಿತು. ವೇದಿಕಾಳಂತೂ ತನ್ನ ಪ್ರಿಯವಾದ ಟಿ.ವಿಯನ್ನು ಮರೆತು ಅದರ ಜೊತೆ ಆಡುತ್ತಾ ಸಂಭ್ರಮಿಸುತ್ತಿದ್ದಳು. ಆದರೆ ಮಗುವಿನ ಅಳು ಪಂಡಿತರ ಪೂಜೆಗೆ ಭಂಗವನ್ನುಂಟುಮಾಡುತ್ತಿತ್ತು. ಇರುವ ಕೆಲಸದ ಜೊತೆಗೆ ಮಗುವಿನ ಕೆಲಸವೂ ಸೇರಿ ಪಾರ್ವತಿ ಒಂದು ದಿನ ಗಂಡನ ಪೂಜೆಗೆ ಅಣಿ ಮಾಡಲು ಹೋಗಿ ಆತುರದಲ್ಲಿ ಪಂಡಿತರನ್ನು ಮುಟ್ಟಿಬಿಟ್ಟಳು. ಸಿಡಿಮಿಡಿಗೊಂಡ ಪಂಡಿತರು ಮಡಿ ಹಾಳಾಯಿತೆಂದು ಮತ್ತೊಮ್ಮೆ ಸ್ನಾನಕ್ಕೆ ತೆರಳಿದರು.
ಇತ್ತ ಮಣಿ ಮತ್ತು ಪಾಲ್‍ರ ಪ್ರೀತಿ ವಿಷಯ ಗೊತ್ತಾಗಿ ಮಣಿಯ ಅಣ್ಣ ಸೂರ್ಯಪ್ರಕಾಶ್ ಪಾಲ್‍ನನ್ನು ಹಿಡಿದು ಚಚ್ಚುತ್ತಿರುವಾಗ ಏನೂ ಮಾಡಲಾಗದ ಮಣಿ ಪಂಡಿತರನ್ನು ಕರೆತಂದು ಅದನ್ನು ತಪ್ಪಿಸುತ್ತಾಳಾದರೂ ಈ ವಿಷಯ ತಿಳಿದು ಪಂಡಿತರು ಬೇಸರಗೊಳ್ಳುತ್ತಾರೆ. ಜಮೀನ್ದಾರರಿಗೆ ಬೇಗನೆ ಮಗಳ ಮದುವೆ ಮಾಡಿರೆಂದು ಹೇಳಿ, ಮಣಿಗೆ, ಮಗಳಾದವಳು ತಂದೆಯ ಇಚ್ಛೆಗನುಸಾರವಾಗಿ ನಡೆಯಬೇಕೆಂದಷ್ಟೆ ಹೇಳಿ ಹೊರಟರು. ಆದರೆ ಮಣಿ ಅತ್ತಿಗೆಯ ಸಹಾಯದಿಂದ ಯಾರಿಗೂ ತಿಳಿಯದಂತೆ ಪಾಲ್‍ನೊಂದಿಗೆ ಹೊರಟುಬಿಟ್ಟಳು. 
ಮರುದಿನ ಮಗುವಿನ ತಾಯಿ ಸಿಗಲಿಲ್ಲವೆಂದು ಇನ್ಸ್‍ಪೆಕ್ಟರ್ ಪಂಡಿತರಿಗೆ ತಿಳಿಸಿದರು. ಆಗ ಪಾರ್ವತಿಯು ಪಂಡಿತರಿಗೆ ನೀವೆ ಹೇಳಿದಂತೆ ಪ್ರತಿಯೊಂದು ಘಟನೆಯೂ ಭಗವಂತನ ಇಚ್ಚೆಯಂತೆ ನಡೆಯುತ್ತದೆ. ಹಾಗಿರುವಾಗ ಈ ಮಗು ಬಂದಿರುವುದು ಭಗವಂತನ ಇಚ್ಛೆಯಿಂದಲ್ಲವೆ, ತಾಯಿ ಸಿಗುವವರೆಗೂ ಮಗು ಇಲ್ಲೇ ಇರಲಿ ಎಂದಳು. ಪಂಡಿತರಿಗೂ ಹೌದೆನಿಸಿ ಸುಮ್ಮನಾದರು.
ಎಷ್ಟು ದಿನಗಳಾದರೂ ತಾಯಿಯ ಪತ್ತೆಯಾಗದ ಕಾರಣ ಇನ್ಸ್‍ಪೆಕ್ಟರ್ ಮಗುವನ್ನು ಅನಾಥಾಲಯಕ್ಕೆ ಸೇರಿಸುವುದು ಒಳ್ಳೆಯದೆಂದರು. ಆದರೆ ಪಂಡಿತರು, ಮಗು ಬ್ರಾಹ್ಮಣರ ಬಾಲಕ, ಈ ಮನೆಯಲ್ಲಿ ಅವನೊಬ್ಬ ಭಾರವಾಗಲಾರ, ದೇವಾಲಯದ ನನ್ನ ಶಿಷ್ಯರ ಜೊತೆಯಲ್ಲಿಯೇ ಬೆಳೆಯುತ್ತಾನೆ ಎಂದಾಗ ಪಾರ್ವತಿಯು, ರಾತ್ರಿ ತನ್ನ ಮನದಾಸೆಯನ್ನು ಬಿಚ್ಚಿಟ್ಟು, ಆ ಮಗುವನ್ನು ತನ್ನ ಮಗನಾಗಿ ಸ್ವೀಕರಿಸಲು ಅನುಮತಿ ಕೇಳುತ್ತಾಳೆ. ಜೊತೆಗೆ ಈ ಮಗು ಪಂಡಿತರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದಾಗ, ಪಂಡಿತರು ಸಮ್ಮತಿಸೂಚಕವಾಗಿ ಆ ಮಗುವಿಗೆ 'ಕಾರ್ತಿಕೇಯ' ನೆಂದು ನಾಮಕರಣ ಮಾಡಿದರು.
ಹೀಗಿರುವಾಗ ಒಮ್ಮೆ ಮಗು ಜೋರಾಗಿ ಅಳುತಿತ್ತು. ಧ್ಯಾನಾಸಕ್ತರಾಗಿದ್ದ ಪಂಡಿತರು ಮಗುವಿನ ಅಳುವಿನಿಂದ ಎಚ್ಚರಗೊಂಡರು. ತಮ್ಮ ಪತ್ನಿಯನ್ನು ಅನೇಕ ಬಾರಿ ಕರೆದರು. ಮನೆಯಲ್ಲಿ ಯಾರು ಇರದ ಕಾರಣ ತಾವೇ ತೊಟ್ಟಿಲ ಬಳಿಗೆ ಬಂದು ಅಳುತ್ತಿದ್ದ ಮಗುವನ್ನು ತಮ್ಮ ಕರ್ಕಶ ಧ್ವನಿಯಿಂದ ಸುಮ್ಮನಿರಿಸ ಹೋದರು. ಪ್ರಯೋಜನವಾಗಲಿಲ್ಲ. ಗಿರಿಗಿಟ್ಲೆಯ ಶಬ್ಧ ಮಾಡಿದರೂ ಅಳು ನಿಲ್ಲಲಿಲ್ಲ. ಕೊನೆಗೂ ಸೋತ ಪಂಡಿತರು ಮೊದಲ ಬಾರಿಗೆ ಎಂದೂ ಮುಟ್ಟದ ಮಗುವನ್ನು ಎತ್ತಿಕೊಂಡುಬಿಟ್ಟರು. ಭುಜದ ಮೇಲೆ ಮಲಗಿಸಿಕೊಂಡ ಪಂಡಿತರು ಸಮಾಧಾನಿಸತೊಡಗಿದಾಗ ಮಗು ತನ್ನ ಅಳುವನ್ನು ನಿಲ್ಲಿಸಿತು. ಸಂತಸಗೊಂಡ ಪಂಡಿತರು ಸ್ತೋತ್ರವೊಂದನ್ನು ಹಾಡುತ್ತ ಮಗುವಂತೆ ಕುಣಿದರು. ಮಗುವನ್ನು ನಗಿಸಿದರು. ಈ ದೃಶ್ಯ ತುಂಬಾ ಸುಂದರವಾಗಿದ್ದು ಅವರ ಅಭಿನಯ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವಂಥದ್ದಾಗಿದೆ.
   ಸ್ವಲ್ಪ ಸಮಯದ ನಂತರ ಮನೆಗೆ ವಾಪಸ್ಸು ಬಂದ ತಾಯಿ ಮಗಳಿಬ್ಬರಿಗೂ ಆಶ್ಚ್ರರ್ಯವೋ ಆಶ್ಚರ್ಯ. ಪಂಡಿತರು ಮಗುವನ್ನು ತಮ್ಮ ಹೊಟ್ಟೆಯ ಮೇಲೆ ಮಲಗಿಸಿಕೊಂಡು ತಾವೂ ಸುಖನಿದ್ರೆಗೆ ತೆರಳಿಬಿಟ್ಟಿದ್ದರು. ಅಂದಿನಿಂದ ಪಂಡಿತರು ಮಗುವಿನ ಜೊತೆ ಬಿಡದೆ ತಾವೂ ಮಗುವಿನಂತಾಗಿ ಬಿಟ್ಟರು. ಕಾರ್ತಿಕೇಯನು ಆ ಮನೆಯಲ್ಲಿ ತೆವಳುತ್ತಾ, ಅಂಬೆಗಾಲಿಡುತ್ತಾ, ಪುಟ್ಟ ಹೆಜ್ಜೆಗಳನ್ನು ಕಲಿತು ನಡೆಯುವಂತಾದನು. ಪಾಠಶಾಲೆಯಲ್ಲಿ, ಗಂಗಾತೀರದಲ್ಲಿ, ಪೂಜಾ ಗೃಹದಲ್ಲೂ ಪಂಡಿತರಿಗೆ ಕಾರ್ತಿಕೇಯನು ಅಂಟಿಕೊಂಡೇ ಇರುತ್ತಿದ್ದನು. ಪಂಡಿತರೂ ಅವನನ್ನು ಬಿಟ್ಟಿರುತ್ತಿರಲಿಲ್ಲ. ಕಾರ್ತಿಕೇಯನು ಪಂಡಿತರ ವಿಧಿ ವಿಧಾನಗಳನ್ನರಿತು ಅವರೊಂದಿಗೇ ಕಾಲ ಕಳೆಯುತ್ತಿದ್ದನು.
ಗಂಗಾ ತೀರದಲ್ಲಿ ದಯಾಶಂಕರ್ ಪಾಂಡೆ ಎಂಬ ಶಾಸ್ತ್ರಿಗಳು ಸಣ್ಣ ಪುಟ್ಟ ಪೂಜೆಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾರೆ. ದೇವಾಲಯದ ಪ್ರಧಾನ ಅರ್ಚಕರಾದ ಪಂಡಿತರೆಂದರೆ ಅಸೂಯೆ. ಜಮೀನ್ದಾರರ ಮಗನ ಜೊತೆ ಸ್ನೇಹವೂ ಇತ್ತು. ಸೂರ್ಯಪ್ರಕಾಶ್‍ನಂತೂ ತಂಗಿ ವಿದೇಶಿ ಯುವಕನೊಂದಿಗೆ ಓಡಿಹೋದ ನಂತರ ಮತ್ತೂ ವಿವೇಕವನ್ನು ಕಳೆದುಕೊಂಡಿದ್ದ. ಕಂಡ ವಿದೇಶಿಯರ ಮೇಲೆಲ್ಲಾ ಕಿಡಿಕಾರುತ್ತಿದ್ದ. ಈ ಮನಸ್ಥಿತಿಯಲ್ಲಿ ಕೋಮುವಾದಿಗಳ ಸಂಗ ಮಾಡಿ ಧರ್ಮಾಂಧನಾಗಿಬಿಟ್ಟ.
ಒಂದು ದಿನ ದಯಾಶಂಕರ್ ಶಾಸ್ತ್ರಿಗಳು ಪಂಡಿತರ ಮನೆಗೆ ಆಗಮಿಸಿದರು. ಬಾಗಿಲಲ್ಲೇ ನಿಂತು ಕಾರ್ತಿಕೇಯನ ತಾಯಿ ಬಂದಿರುವುದಾಗಿ ವ್ಯಂಗವಾಗಿ ತಿಳಿಸಿದರು. ಹೊರಗೆ ನಿಂತಿದ್ದ ಆಕೆ ಒಳಬಂದಾಕ್ಷಣ ಪಂಡಿತರಿಗೆ ಸಿಡಿಲೆರಗಿದಂತಾಗಿ ಹಿಂದಕ್ಕೆ ಸರಿದುಬಿಟ್ಟರು. ಬುರ್ಖಾ ಧರಿಸಿದ್ದ ಆಕೆ ಕೋಮುಗಲಭೆಯ ಕಾರಣ ಮಗುವನ್ನು ಕರೆದುಕೊಂಡು ಹೋಗಲಾಗಲಿಲ್ಲವೆಂದು ಹೇಳುತ್ತಿದ್ದರೂ ಇವ್ಯಾವುದೂ ಪಂಡಿತರ ಕಿವಿಗೆ ಬೀಳಲಿಲ್ಲ. ತನ್ನ ಧರ್ಮ ಪತ್ನಿಯೇ ವಂಚಿಸಿದಳೆಂದು ಕುಗ್ಗಿಹೋದರು. ಆದರೆ ಪಾರ್ವತಿಯು ತಾನು ಹೇಳಿದ ಸುಳ್ಳಿನಿಂದ ತಲೆತಗ್ಗಿಸಿದಳು. ಪತಿಯ ಸ್ಥಿತಿಯನ್ನು ನೋಡಿ ಗಾಬರಿಗೊಂಡಳು. ಪತಿಯ ಕೋಪಕ್ಕೆ ಹೆದರಿ ಇಷ್ಟು ವರ್ಷ ಸಾಕಿದ ಮಗನನ್ನು ಒಲ್ಲದ ಮನಸ್ಸಿನಿಂದ ಎಳೆದುತಂದು ಅವನ ತಾಯಿಗೆ ಒಪ್ಪಿಸಿದಳು. ಬಾವೂಜಿ ಬಾವೂಜಿ ಎಂದು ಚೀರುತ್ತಲೇ ಕಾರ್ತಿಕೇಯನು ಮನೆಯಿಂದ ಮರೆಯಾದನು. ಆ ಮನೆಯಲ್ಲಿನ ನಗು, ಸಂತೋಷವನ್ನೂ ತನ್ನೊಂದಿಗೇ ಕರೆದುಕೊಂಡು ಹೋಗಿಬಿಟ್ಟನು. 
ಮರುದಿನವೇ ಎಲ್ಲಾ ಶುಭ್ರತಾ ಕಾರ್ಯಗಳು ನಡೆದು ಕಾರ್ತಿಕೇಯನ ವಸ್ತುಗಳೆಲ್ಲವನ್ನು ಬಿಸಾಡಿದರು. ಆದರೆ ಮನದಲ್ಲಿನ ಅವನ ನೆನಪು, ಅಗಲಿಕೆಯ ನೋವು ಮಾತ್ರ ಯಾರಿಂದಲೂ ಹೋಗಲಿಲ್ಲ. ಪಂಡಿತರಂತೂ ಇದು ಶಿವನಿಗೆ ಬಗೆದ ದ್ರೋಹವೆಂದು ತಲ್ಲಣಿಸಿಹೋದರು. ಧರ್ಮಕ್ಕೆ ತನ್ನಿಂದಾದ ಅಪಚಾರಕ್ಕೆ ಪಂಡಿತರು ಮೌನ ವ್ರತವನ್ನು ತಳೆದುಬಿಟ್ಟರು. ಜೊತೆಗೆ ಕಾರ್ತಿಕೆಯನ ನೆನಪು ಅವರನ್ನು ಬೆಂಬಿಡದೆ ಕಾಡಿಸಿಬಿಟ್ಟಿತು.
ಪಂಡಿತರು ಒಬ್ಬ ಮುಸಲ್ಮಾನ ಹುಡುಗನನ್ನು ಜೊತೆಯಲ್ಲಿರಿಸಿಕೊಂಡು ಹಿಂದೂ ಧರ್ಮವನ್ನೆ ಅಪವಿತ್ರಗೊಳಿಸಿದ್ದಾರೆಂದು ಪ್ರಧಾನ ಅರ್ಚಕರ ಸ್ಥಾನದಿಂದ ಕೆಳಗಿಸಲು ಸೂರ್ಯಪ್ರಕಾಶ್ ಮತ್ತು ದಯಾಶಂಕರ ಪಾಂಡೆ ಅವರ ಮನೆಗೆ ದಂಡೆತ್ತಿ ಬಂದರು. ಆದರೆ ಪಂಡಿತರು ತಮ್ಮ ಮೌನವ್ರತವನ್ನು ಅಂತಿಮಗೊಳಿಸಿ ಅತ್ಯಂತ ಕಠಿಣವಾದ ಚಂದ್ರಾಯಣ ವ್ರತವನ್ನು ಸ್ವೀಕರಿಸಿರುವುದನ್ನು ತಿಳಿದು ದಂಗಾಗಿ ನಿಂತುಬಿಟ್ಟರು. ವ್ರತದ ಪ್ರಕಾರ ಅಮಾವಾಸ್ಯೆಯ ನಂತರ ಹುಣ್ಣಿಮೆಯವರೆಗೂ ಮೊದಲ ದಿನ ಒಂದು ತುತ್ತು, ಎರಡನೆಯ ದಿನ ಎರಡು ತುತ್ತು ಹೀಗೆ ದಿನ ದಿನಕ್ಕೆ ಕೇವಲ ಒಂದು ತುತ್ತು ಹೆಚ್ಚುತ್ತಾ ಹೋಗಿ ಹುಣ್ಣಿಮೆಯ ನಂತರ ಹಾಗೆಯೇ ಒಂದೊಂದು ತುತ್ತು ಕಡಿಮೆಯಾಗಿ ಕೊನೆ ದಿನಕ್ಕೆ ಒಂದು ತುತ್ತು ಮಾತ್ರ ಸೇವಿಸುತ್ತಾರೆ. ಒಂದು ತಿಂಗಳ ನಂತರ ವ್ರತವು ಪೂರ್ಣಗೊಳ್ಳುವುದೆಂದು ತಿಳಿದು ಮರುಮಾತಾಡದೆ ಅವರು ಹಿಂತಿರುಗಿದರು. ಪಂಡಿತರ ಹದಗೆಡುತ್ತಿದ್ದ ಆರೋಗ್ಯವನ್ನು ನೋಡಿ ಕೊರಗುತ್ತಿದ್ದ ಪಾರ್ವತಿ ಮತ್ತು ವೇದಿಕ ವ್ರತ ಮುಗಿದ ನಂತರ ನಿಟ್ಟುಸಿರಿಟ್ಟರು. ಇದರ ನಂತರ ಜನರಿಗೆ ಪಂಡಿತರ ಮೇಲಿನ ಪೂಜ್ಯ ಭಾವ ಮತ್ತೂ ಹೆಚ್ಚಾಯಿತು.
ಸೇವಾಪುರಿಯಲ್ಲಿ ಭುಗಿಲೆದ್ದ ಕೋಮುಗಲಭೆ ಕಾಳ್ಗಿಚ್ಚಿನಂತೆ ಬನಾರಸ್ಸಿನವರೆಗೂ ಹರಡಿತು. ಎಲ್ಲೆಲ್ಲೂ ದಂಗೆ ಜಗಳಗಳು ಶುರುವಾದವು. ಆ ಗಲಭೆಯಲ್ಲಿ ಮಣಿಯ ಪತಿ ಪಾಲ್ ಮರಣಿಸಿದನು. ವಿಧವೆ ಮಣಿ ದಿಕ್ಕಿಲ್ಲದೆ ತಂದೆಯ ಮನೆಗೆ ವಾಪಸ್ಸು ಬಂದಳು. ಅವಳ ಅಣ್ಣ ಇದಕ್ಕೆ ಒಪ್ಪುವುದಿಲ್ಲವಾದರೂ ಪಂಡಿತರು  ವಿಧವಾ ಸಂಪ್ರದಾಯದಂತೆ ಆಕೆಗೆ ಆಶ್ರಯ ನೀಡಬೇಕೆಂದು ಹೇಳಿದರು
. ಒಂದು ದಿನ ಕಾರ್ತಿಕೇಯನ ತಾಯಿ ಗಾಬರಿಯಿಂದ ಓಡಿಬಂದು ಮಗನನ್ನು ಕಾಪಾಡಿರೆಂದು ಗೋಗರೆದಳು. ಪಾರ್ವತಿ ಆಕೆಯನ್ನು ಒಳಗಡೆಯೂ ಬರಗೊಡಲಿಲ್ಲ. ಪೂಜೆಯಲ್ಲಿರುವ ಪಂಡಿರು ಸ್ವಲ್ಪವೂ ಗಮನವೀಯಲಿಲ್ಲ. ಕಾರ್ತಿಕೇಯನಿಗೆ ಅಮ್ಮನನ್ನು, ಬಾವೂಜಿಯನ್ನು ಕೂಗು ಎಂದು ಹೇಳಿಕೊಡುತ್ತಾಳಾದರೂ ಕಾರ್ತಿಕೇಯನು ಪಂಡಿತರು ಪೂಜೆಯಲಿದ್ದುದನ್ನು ಕಂಡು ತಾಯಿಯನ್ನೆ ಸುಮ್ಮನಿರೆಂದು ಬಾಯಿ ಮೇಲೆ ಬೆರಳಿಡುತ್ತಾನೆ. ಆದರೂ ಯಾವುದೆ ಪ್ರಯೋಜನವಾಗದೆ ತಾಯಿ ಮಗ ತೆರಳಿಬಿಟ್ಟರು.
ಬೆಳಿಗ್ಗೆ ನಡದ ಘಟನೆಯಿಂದ ನೊಂದ ಪಾರ್ವತಿ ಮತಿಯಿರದವಳಂತೆ ರಾತ್ರಿ ಪಂಡಿತರಿಗೆ ಊಟ ಬಡಿಸುತ್ತಾ "ನಾವು ಆ ಮಗುವನ್ನು ಕಾಪಾಡದೆ ಇರುವುದರಿಂದ ಧರ್ಮವನ್ನು ರಕ್ಷಿಸಿದಂತಾಯಿತಲ್ಲವೆ" ಎಂದು ಕುಹಕವಾಡಿದಳು. ಕೋಪದಿಂದ ಪಂಡಿತರು ಊಟ ಮಾಡದೆಯೇ ಎದ್ದು ಹೊರಟರು. ಮರುದಿನ ಜಮೀನ್ದಾರರ ಮನೆಯಲ್ಲಿ ಹೋಮವೊಂದಕ್ಕೆ ಆಗಮಿಸಿದ ಪಂಡಿತರು ಸೂರ್ಯಪ್ರಕಾಶ್‍ನ ಮಿತ್ರರು (ಕೋಮುವಾದಿಗಳು) ಹಿಂದಿನ ದಿನ ಒಬ್ಬ ತಾಯಿ ಮಗನನ್ನು ಅಟ್ಟಿಸಿಕೊಂಡು ಹೊಡೆದದ್ದನ್ನು ವರ್ಣಿಸುತ್ತಿರುವಾಗ ಅದನ್ನು ಕೇಳಲಾಗದ ಪಂಡಿತರು ಅಸಹನೆಯಿಂದ ಒಂದು ನಿಮಿಷವೂ ನಿಲ್ಲದೆ ಹೊರಟು ಬಿಟ್ಟರು. ಅಂದು ಆ ಸಾಧುವು ಹೇಳಿದ ಮಾತುಗಳೇ ಪಂಡಿತರ ಕಿವಿಯಲ್ಲಿ ಮೊಳಗತೊಡಗಿದವು. ಸುಮ್ಮನಿರಲು ಆಗದೆ ಶಾಸ್ತ್ರಗಳ ಪುಟಗಳನ್ನು ತಿರುವಿಹಾಕಿದರು.
ಜ್ಞಾನೋದಯಗೊಂಡ ಪಂಡಿತರು ಧೃಡನಿರ್ಧಾರದಿಂದ ಹೊರಟು ನಿಂತರು. ಸೂರ್ಯಪ್ರಕಾಶನ ಗುಂಪು ಎಸಗುತ್ತಿದ್ದ ಕೃತ್ಯವನ್ನು ಕಣ್ಣಾರೆ ಕಂಡು ತತ್ತರಿಸಿಹೋದರು. ಗಲ್ಲಿಗಲ್ಲಿಗಳ ರಕ್ತಪಾತದಲ್ಲಿ ಮುಸ್ಲಿಂ ಬಾಂಧವರ ಮೃತ ದೇಹಗಳ ನಡುವೆ ಕಾರ್ತಿಕೇಯನ್ನು ಹುಡುಕುತ್ತಾ ಒಂದು ವಠಾರಕ್ಕೆ ಬಂದರು. ತಾನು ಸಾಕಿದ ಕಂದಮ್ಮನು ಇನ್ನೂ ಬದುಕಿರುವನಾ? ಎಂಬ ಆಸೆಯಿಂದ 'ಕಾರ್ತಿಕೇಯ' ಎಂದು ಕರೆದರು. ಸುಟ್ಟು ಕರಕಲಾದ ಆ ನಿರ್ಮಾನುಷ ಸ್ಥಳದಲ್ಲಿ ಮಗು ಜೀವಂತವಾಗಿರುತ್ತದೆಯೇ ಎಂಬ ಭಯದಿಂದ ಮತ್ತೊಮ್ಮೆ ' ಕಾರ್ತಿಕೇಯ' ಎಂದು ಕೂಗಿದರು. ಅಷ್ಟರಲ್ಲಿ ಮಹಡಿಮನೆಯಿಂದ ಕಾರ್ತಿಕೇಯನು ಬಾವೂಜಿ ಎಂದು ಕೂಗಿದನು. ಪಂಡಿತರ ಹೋದ ಜೀವ ಬಂದಂತಾಗಿ ಮೊಗದಲ್ಲಿ ನಗು ಅರಳಿತು. ಅಷ್ಟರಲ್ಲಿ ಕೋಮುವಾದಿಗಳ ಗುಂಪು ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ಕೊಲ್ಲಲು ಅಟ್ಟಿಸಿಕೊಂಡು ಬಂದಿತು. ಪಂಡಿತರನ್ನು ಕಂಡು ಆ ಗುಂಪು ನಿಂತುಬಿಟ್ಟಿತು.
ಆದರೆ ಸೂರ್ಯ ಪ್ರಕಾಶನು ಮಗುವಿನಿಂದ ಇವರ ತಲೆ ಕೆಟ್ಟಿದೆ ಒಂದೇ ಕ್ಷಣದಲ್ಲಿ ಅವನನ್ನು ಮುಗಿಸುವೆನೆಂದು ಕತಿ ್ತಎತ್ತಲು ಹೋಗುತ್ತಿದ್ದಂತೆ ಪಂಡಿತರು ಅವನ ಕೈಯನ್ನು ಹಿಡಿದು ನಿಲ್ಲಿಸಿದರು. "ನನ್ನ ಹತ್ತಿರ ಧರ್ಮದ ಪಾಠ ಕಲಿತ ನಿನ್ನನ್ನು ಅಧರ್ಮದ ಹಾದಿಯಲ್ಲಿ ನಡೆಯಲು ಬಿಡಲಾರೆ. ಧರ್ಮ ಕೇವಲ ಸಾಧನವಲ್ಲ. ಕರ್ತವ್ಯ, ಕರ್ಮವೂ ಕೂಡ. ಏಕತೆಯೇ ಧರ್ಮ, ಸದ್ಭಾವನೆಯೇ ಧರ್ಮ, ಭೇದಭಾವವನ್ನು ತೊರೆಯುವುದೇ ಧರ್ಮ, ‘ಮಾನವತೆಯೇ' ಧರ್ಮ. ನಿನ್ನ ಕತ್ತಿ, ನಿನ್ನ ಈ ಗುಂಪು, ನೀವು ಮಾಡುತ್ತಿರುವ ಕೃತ್ಯ ಧರ್ಮವಲ್ಲ" ಎಂದು ಹೇಳುವ ದೃಶ್ಯ ರೋಮಾಂಚನವುಂಟು ಮಾಡುತ್ತದೆ. ಸೂರ್ಯಪ್ರಕಾಶನು ಉಂಟು ಮಾಡುತ್ತಿದ್ದ ರಕ್ತಪಾತವನ್ನು ನೋಡಿಯೂ ಏನೂ ಮಾಡಲಾಗದೆ ಪರಿತಪಿಸುತ್ತಿದ್ದ ದಯಾಶಂಕರ್ ಶಾಸ್ತ್ರಿ ಪಂಡಿತರ ನಿಲುವಿಗೆ ತಲೆಬಾಗಿದನು. ಪಂಡಿತರು ಎಲ್ಲರ ಮುಂದೆಯೇ ಕಾರ್ತಿಕೇಯನನ್ನು ಕರೆದು ಎತ್ತಿಕೊಂಡು ಹೊರಟರು. ಪಂಡಿತರಿಗೆ ನಮಸ್ಕರಿಸಿ ಅವರ ಹಿಂದೆಯೇ ಶಾಸ್ತ್ರಿಗಳೂ ಹೊರಟರು. ಹಿಂದೆಯೇ ಕತ್ತಿಗಳನ್ನು ಬಿಸುಟು ಜನರೂ ಹೊರಟರು. ಕೊನೆಯಲ್ಲಿ ಏಕಾಂಗಿಯಾಗಿ ನಿಂತಿದ್ದ ಸೂರ್ಯ ಪ್ರಕಾಶನೂ ಕತ್ತಿಯನ್ನು ಬಿಸುಟು ಹೊರಟುಬಿಟ್ಟನು.
ಕೇವಲ ವೈಯುಕ್ತಿಕ ದ್ವೇಷ, ಸ್ವಾರ್ಥ ಸಾಧನೆಗಾಗಿ ಕೆಲವು ವ್ಯಕ್ತಿಗಳು ಹಿಂದೂ-ಮುಸ್ಲಿಮ್ ಧರ್ಮದ ಹೆಸರಿನಲ್ಲಿ ಅರ್ಥವಿಲ್ಲದೆ ಬಡಿದಾಡುವುದಲ್ಲದೆ, ಇಡೀ ಸಮುದಾಯವೇ ಹೊತ್ತಿ ಉರಿಯುವ ಹಾಗೆ ಗಲಭೆಯನ್ನು ಎಬ್ಬಿಸುತ್ತಾರೆ ಎನ್ನುವುದನ್ನು ಈ ಸಿನಿಮಾ ಸ್ಪಷ್ಟವಾಗಿ ತೋರಿಸುತ್ತದೆ. ಮತದ ಹೆಸರಿನಲ್ಲಿ ಹುಚ್ಚರಂತಾಗಿ, ಮಾನವೀಯತೆಯನ್ನು ಮರೆತು ರಕ್ಕಸರಂತೆ ಹೆಂಗಸರು, ಗಂಡಸರೆನ್ನುವ ಭೇದವಿಲ್ಲದೆ, ಮಕ್ಕಳು ಮುದುಕರೆನ್ನದೆ ಅವರ ರಕ್ತವನ್ನು ಹರಿಸಿ ಧರ್ಮ ಸಂಸ್ಥಾಪನೆ ಮಾಡಿದೆವೆಂದು ವಿಕೃತ ಭಾವದಿಂದ ಬೀಗುವುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಿದೆ.
ಆದರೆ ನಿಜವಾದ ಧರ್ಮವೇನೆಂಬುದನ್ನು ನಾವು ಪಂಡಿತ ಚತುರ್ವೇದಿಯವರ ನಡವಳಿಕೆಯಿಂದ ಅರ್ಥೈಸಬಹುದಾಗಿದೆ. ಆರಂಭದಲ್ಲಿ ಕಠೋರ ಮನಸ್ಸಿನವರಂತೆ ಕಂಡರೂ ಅಂತಿಮವಾಗಿ ಅವರಲ್ಲಿರುವ ನಿಜವಾದ ಧಾರ್ಮಿಕ ಜ್ಞಾನ ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಅವರಿಗಷ್ಟೇ ಅಲ್ಲದೆ ನಮಗೂ ಮನವರಿಕೆ ಮಾಡಿಕೊಡುತ್ತದೆ. ತಮ್ಮ ಜ್ಞಾನದಿಂದ ಧರ್ಮದ ನಿಜವಾದ ಅರ್ಥ ತಿಳಿದು ಕೋಮುವಾದಿಗಳ ಕೃತ್ಯವನ್ನು ತಡೆಗಟ್ಟುವುದಲ್ಲದೆ, ಅವರಲ್ಲೂ ಬದಲಾವಣೆ ತರುತ್ತಾರೆ. ಅಂತಿಮವಾಗಿ ಮಾನವೀಯತೆ ಜಯ ಗಳಿಸುವುದನ್ನು ನಾವು ಕಾಣಬಹುದಾಗಿದೆ. ಸಿನಿಮಾ ನೋಡಿದ ನಂತರ ನಮ್ಮ ಮನಸ್ಸಿನಲ್ಲಿ ಉಳಿಯುವ ಅಂಶವೆಂದರೆ ‘ಮಾನವೀಯತೆಯುಳ್ಳ ಧರ್ಮ ಮಾತ್ರವೇ ನಿಜವಾದ ಧರ್ಮ’ ಎಂಬುದು. 


ಅನುವಾದ: "ಜೀವಜಾಲ"



(ಇದು 150 ವರ್ಷಗಳ ಹಿಂದೆ, ರೆಡ್ ಇಂಡಿಯನ್‍ರಲ್ಲಿ ಬಹಳ ವಿವೇಕಿ ಮತ್ತು ಅಗಾಧವಾಗಿ ಗೌರವಿಸಲ್ಪಡುತ್ತಿದ್ದ ಮುಖ್ಯಸ್ಥ ಚೀಫ್ ಸಿಯಾಟೆಲ್ ವಾಷಿಂಗ್ಟನ್‍ನಲ್ಲಿ ಸರ್ಕಾರ ಅವರ ಜಮೀನನ್ನು ಕೊಂಡುಕೊಳ್ಳಬೇಕೆಂದಾಗ ಸರ್ಕಾರವನ್ನು ಉದ್ದೇಶಿಸಿ ಮಾಡಿದ ಭಾಷಣ. ಪರಿಸರದ ಬಗ್ಗೆ ಮಾಡಿರುವ ಎಲ್ಲ ಭಾಷಣಗಳಲ್ಲಿ ಅತ್ಯಂತ ಸ್ಪಷ್ಟ, ಪರಿಣಾಮಕಾರಿಯಾದ ಭಾಷಣ ಎನಿಸಲ್ಪಟ್ಟಿದೆ.)

ಆಕಾಶವನ್ಹೇಗೆ ಕೊಂಡುಕೊಳ್ಳುವಿರಿ? ಸಿಯಾಟೆಲ್ ಮುಖ್ಯಸ್ಥ ಆರಂಭಿಸಿದರು.
ಗಾಳಿ, ಮಳೆಯನ್ಹೇಗೆ ನಿಮ್ಮದಾಗಿಸಿಕೊಳ್ಳುವಿರಿ?

ಹೇಳಿದ್ದರು ಅಮ್ಮ ನನಗೆ,
ಈ ಭೂಮಿಯ ಪ್ರತಿಯೊಂದು ಭಾಗವೂ ನಮ್ಮವರಿಗೆ ಪವಿತ್ರವೆಂದು.
ಪ್ರತಿಯೊಂದು ಮರ, ಪ್ರತಿಯೊಂದು ಸಮುದ್ರ ತೀರ,
ಕಗ್ಗತ್ತಲ ಕಾಡಿನ ಪ್ರತಿ ಮಂಜು,
ಪ್ರತಿ ಹುಲ್ಲುಗಾವಲು ಮತ್ತು ಸುತ್ತ ಗುಂಯ್‍ಗುಡುವ ಕೀಟ,
ಎಲ್ಲವೂ ನನ್ನ ಜನರ ನೆನಪಿನಲ್ಲಿ ಪವಿತ್ರವೆಂದು.

ಅಪ್ಪ ಹೇಳಿದ್ದರು ನನಗೆ,
ಮರಗಳಲ್ಲಿ ಹರಿವ ಜೀವರಸದ ಬಗ್ಗೆ ಗೊತ್ತು ನನಗೆ,
ನನ್ನದೇ ರಕ್ತನಾಳಗಳಲ್ಲಿ ಹರಿವ ರಕ್ತದ ಅರಿವಿರುವಂತೆ.
ಭೂಮಿಯೊಳಗೊಂದು ಭಾಗ ನಾವು, ನಮ್ಮೊಳಗೊಂದು ಭಾಗವದು.
ಸುವಾಸನೆಭರಿತ ಹೂಗಳು ನಮ್ಮ  ಅಕ್ಕತಂಗಿಯರು
ಕರಡಿ ಜಿಂಕೆ, ಹದ್ದುಗಳು ನಮ್ಮ ಅಣ್ಣತಮ್ಮಂದಿರು.
ಕಲ್ಲು, ಕಣಿವೆ, ಹುಲ್ಲುಗಾವಲು,   
ಕುದುರೆಮರಿಗಳು – ಎಲ್ಲವೂ ಒಂದೇ ಕುಟುಂಬದವರು.

ನನ್ನ ಪೂರ್ವಜರ ದನಿ ಹೇಳಿತು ನನಗೆ,
ತೊರೆಗಳಲ್ಲಿ, ನದಿಗಳಲ್ಲಿ ಹೊಳೆವ ಹರಿವ ನೀರು
ನೀರು ಮಾತ್ರವಲ್ಲವದು, ನಿನ್ನ ಮುತ್ತಾತನ ತಾತನ ರಕ್ತವೆಂದು.
ಸರೋವರಗಳ ಸ್ವಚ್ಛ ಜಲದಿ ಕಾಣುವ ಅಸ್ಪಷ್ಟ ಛಾಯೆ
ನಮ್ಮ ಜನರ ಜೀವನದ ನೆನಪುಗಳ ಸಾರುತ್ತವೆಂದು.

ನೀರಿನ ಝುಳುಝುಳು ನಿನ್ನ ಮುತ್ತಜ್ಜಿಯ ಅಜ್ಜಿಯ ದನಿಯೆಂದು,
ನದಿಗಳು ನಮ್ಮ ಸೋದರರೆಂದು, ನಮ್ಮ ದಾಹ ತಣಿಸುತ್ತವೆ
ನಮ್ಮ ದೋಣಿಗಳ ತೇಲಿಸುತ್ತವೆ, ಮಕ್ಕಳನ್ನು ಪೆÇೀಷಿಸುತ್ತವೆ.
ನಿನ್ನ ಸೋದರನಿಗೆ ನೀ ನೀಡುವ ಪ್ರೀತಿಯನ್ನೇ ನದಿಗಳಿಗೂ ನೀಡಬೇಕೆಂದು.

ನನ್ನಜ್ಜನ ದನಿ ಹೇಳಿತು ನನಗೆ
ಗಾಳಿ ಅತ್ಯಮೂಲ್ಯ, ತನ್ನ ಚೇತನವನ್ನದು,
ಅದು ಬೆಂಬಲಿಸುವ ಎಲ್ಲ ಜೀವರಾಶಿಯೊಂದಿಗೆ ಹಂಚಿಕೊಳ್ಳುತ್ತದೆ.
ನಮಗೆ ಮೊದಲ ಉಸಿರನ್ನು ನೀಡುವ ಗಾಳಿಯೇ
ನಮ್ಮ ಕೊನೆಯುಸಿರನ್ನೂ ಸ್ವೀಕರಿಸುತ್ತದೆ.
ಭೂಮಿ ಮತ್ತು ಗಾಳಿಯನ್ನು ದೂರವಿಡಬೇಕು, ಪವಿತ್ರವಾಗಿಡಬೇಕು,
ಹೂಗಿಡಗಳ ತೋಟದಿಂದ ಸಿಹಿಯಾಗಿರುವ
ಗಾಳಿಯ ಸವಿಯಲು ಹೋಗುವಂತಹ ಸ್ಥಳದಂತೆ.

ಕೊನೆಯ ರೆಡ್ ಸ್ತ್ರೀ-ಪುರುಷ ಮರೆಯಾದಾಗಲೂ,
ಅವರ ನೆನಪು ಕೇವಲ ಹುಲ್ಲುಗಾವಲನ್ನು ದಾಟುವ ಮೋಡಗಳ ನೆರಳಿನಂತಾದಾಗಲೂ,
ಆಗಲೂ ಈ ತೀರಗಳು, ಕಾಡುಗಳು ಇನ್ನೂ ಇರುತ್ತವೆಯೇ?
ನನ್ನ ಜನರ ಚೇತನ ಇನ್ನೂ ಇರುತ್ತದೆಯೇ?
ನನ್ನ ಪೂರ್ವಜರು ಹೇಳಿದರು, ಇದು ನಮಗೆ ಗೊತ್ತು:
ಭೂಮಿ ನಮಗೆ ಸೇರಿದ್ದಲ್ಲ. ನಾವು ಭೂಮಿಗೆ ಸೇರಿದವರು.

ನನ್ನ ಅಜ್ಜಿಯ ದನಿ ಹೇಳಿತು,
ನಿನಗೆ ಕಲಿಸಿದ್ದನ್ನು ನಿನ್ನ ಮಕ್ಕಳಿಗೆ ಕಲಿಸು.
ಭೂಮಿ ನಮ್ಮ ತಾಯಿ.
ಭೂಮಿಗೆ ಏನಾಗುತ್ತದೋ ಅದು ಅವಳ ಮಕ್ಕಳಿಗೂ ಆಗುತ್ತದೆ.

ನನ್ನ ದನಿ ಕೇಳಿ ಮತ್ತು ನನ್ನ ಪೂರ್ವಜರ ದನಿ ಕೇಳಿ,
ಸಿಯಾಟೆಲ್ ಮುಖ್ಯಸ್ಥ ಹೇಳಿದರು:
ನಿಮ್ಮ ಜನರ ಹಣೆಬರಹ ನಮಗೆ ನಿಗೂಢ
ಎಲ್ಲಾ ಕಾಡೆಮ್ಮೆಗಳನ್ನು ಕಡಿದರೆ ಪರಿಣಾಮ ಏನಾಗುವುದು?
ಎಲ್ಲಾ ಕುದುರೆಗಳನ್ನು ಪಳಗಿಸಿದರೆ ಫಲಿತಾಂಶ ಏನಾಗುವುದು?
ಕಾಡಿನ ನಿಗೂಢ ಮೂಲೆಮೂಲೆಗಳಲ್ಲೂ ಮನುಷ್ಯನ ವಾಸನೆ
ಪಸರಿಸಿದರೆ ವಾತಾವರಣ ಏನಾಗುವುದು?

ಬೆಟ್ಟಗಳ ನೋಟ, ಮಾತನಾಡುವ ಕಂಬಿಗಳಿಂದ ಆವರಿಸಿದರೆ,
ಪೆÇದೆಗಳು ಎಲ್ಲಿರುತ್ತವೆ? ಹಾಳಾಗುತ್ತವೆ.
ಹದ್ದುಗಳು ಎಲ್ಲಿರುತ್ತವೆ? ಹಾರಿಹೋಗುತ್ತವೆ
ವೇಗವಾಗಿ ಓಡುವ ಮರಿಕುದುರೆ ಮತ್ತು ಬೇಟೆಗೆ
ವಿದಾಯ ಹೇಳಿದಾಗ ಏನಾಗುವುದು?
ಬದುಕಿನ ಅಂತ್ಯವದು, ಉಳಿವಿನ ಆರಂಭವದು.

ಇದು ನಮಗೆಲ್ಲ ಗೊತ್ತು: ನಮ್ಮ ರಕ್ತ ನಮ್ಮನ್ನು ಒಂದುಗೂಡಿಸಿದಂತೆ
ಎಲ್ಲವೂ ಸಂಬಂಧಿತವೆಂದು ನಮಗೆ ಗೊತ್ತು.
ಜೀವಜಾಲವನ್ನು ನಾವು ನೂಲಲಿಲ್ಲ,
ನಾವದರಲ್ಲೊಂದು ಎಳೆಯಷ್ಟೇ.
ಆ ಜಾಲಕ್ಕೆ ನಾವೇನು ಮಾಡುತ್ತೇವೋ, ಅದು ನಮಗೇ ನಾವು ಮಾಡಿಕೊಳ್ಳುತ್ತೇವೆ.

ಈ ಭೂಮಿಯನ್ನು ನಾವು ಪ್ರೀತಿಸುತ್ತೇವೆ, ನವಜಾತ ಶಿಶು ತನ್ನಮ್ಮನ ಎದೆಬಡಿತವನ್ನು ಪ್ರೀತಿಸುವಂತೆ.
ನಾವು ನಿಮಗೆ ಭೂಮಿಯನ್ನು ಮಾರಿದರೆ, ನಾವು ಜತನಗೊಳಿಸಿದಂತೆ ನೀವೂ ಕಾಳಜಿ ವಹಿಸಿ.
ನೀವು ಪಡೆದಾಗ ಈ ಭೂಮಿ ಹೇಗಿತ್ತು ಎಂಬುದ ನಿಮ್ಮ ಸ್ಮೃತಿಪಟಲದಿಂದ ಅಳಿಸದಿರಿ.
ಭೂಮಿ, ಗಾಳಿ, ನದಿಗಳನ್ನು ರಕ್ಷಿಸಿ, ನಿಮ್ಮ ಮಕ್ಕಳ ಮಕ್ಕಳಿಗಾಗಿ.
ಪ್ರೀತಿಸಿ ಅದನ್ನು, ನಾವದನ್ನು ಪ್ರೀತಿಸಿದಂತೆ.


- ಅನುವಾದ (ಡಾ।। ಸುಧಾ.ಜಿ)

ಪುಸ್ತಕ ಪ್ರೀತಿ: "ಟೊಳ್ಳು ಗಟ್ಟಿ - ಟಿ ಪಿ ಕೈಲಾಸಂ"

    



 ಹಿರಿಯಣ್ಣಯ್ಯನಿಗೆ ಇಬ್ಬರು ಪುತ್ರರು- ಪುಟ್ಟು, ಮಾಧು. ಪತ್ನಿ ಭಾಗಿರಥಮ್ಮ ,ಹಿರಿ ಸೊಸೆ ಪಾತು ಕಿರಿ ಸೊಸೆ ಸಾತು, ಸೋದರಿ ನಾಗಮ್ಮ(ವಿಧವೆ) ...ಇಷ್ಟು ಮಂದಿ ಆ ಮನೆಯ ಸದಸ್ಯರು. ಪುಟ್ಟು ಓದಿನಲ್ಲಿ ಯಾವಾಗ್ಲೂ ಫಸ್ಟ್  ....ಪುಸ್ತಕದ ಹುಳೂನೆ ಅವ. ಅದು ಬಿಟ್ಟರೆ ಲೋಕದಲ್ಲಿ ಎಲ್ಲವೂ ವ್ಯರ್ಥವೆಂಬ ಭಾವನೆ ಅವನದು. ಖಾಯಿಲೆಯ ತಾಯಿಯನ್ನೂ ಲೆಕ್ಕಿಸದವ.
    ಮಾಧು....ಬಡಪಾಯಿ... ಓದಿನಲ್ಲಿ ಹಿಂದೆ ಗುಣದಲ್ಲಿ ಮುಂದೆ. ತನ್ನ ಆಟ ಪಾಠಗಳನ್ನು ಮರೆತು ತಾಯಿಗೆ ಔಷಧಿ,  ಸಣ್ಣ ಪಾಪಗೆ  ಹಾಲು ತರುವಲ್ಲಿ ಅವರ ಆರೈಕೆ ಮಾಡೋದರಲ್ಲೆ ಅವನು ಮಗ್ನನಾಗಿರುತ್ತಾನೆ.
  ಹಿರಿಯಣ್ಣಯ್ಯನಿಗೆ ಪುಟ್ಟುವೇ ಒಂದು ಕೋಡಿದ್ದಂತೆ, ಮನೆಯ ಕೀರ್ತಿಪುತ್ರರತ್ನನೆಂದು ಅವನಿಗೆ ಹೆಚ್ಚೇ ಸಮ್ಮಾನ ಸೌಕರ್ಯಗಳನ್ನು ಮಾಡುತ್ತಿರುತ್ತಾನೆ. ಮಾಧು ಒಂದು ದಂಡಪಿಂಡ ಪಾಸಾಗದವನೆಂದು ಅವನಿಗೆ ಊಟದಲ್ಲೂ ಕೊರತೆ ಮಾಡಿ ಮಲಗಲು ಹೊದಿಕೆಯೂ ನೀಡದೆ ಶಿಕ್ಷಿಸುತ್ತಿರುತ್ತಾನೆ.

     ಒಂದಿನ ರಾತ್ರಿ ಮಲಗಿರೋವಾಗ ಮನೆಗೆ  ಬೆಂಕಿ ಹತ್ತುದ ಕಂಡು ಪುಟ್ಟು ತನ್ನ ಪಾಡಿಗೆ ತಾ ಎದ್ದು ಹೊರ ಓಡುತ್ತಾನೆ. ಆದರೆ ಮಾಧು ತನ್ನ ತಾಯಿಯನ್ನ ಹಸುಳೆ ಕಂದನ್ನ ಒಳ ಮಲಗಿದ್ದ ಅಪ್ಪನನ್ನ ಎಬ್ಬಿಸಿ ಕಾಪಾಡುತ್ತಾನೆ. ಪುಟ್ಟೂನ ಮರೆತನೆಂದು ಅಪ್ಪನು ಶಪಿಸಿ ದೂರಿದಾಗ ಅವನ ಹುಡುಕಲು ಪ್ರಾಣವನ್ನು ಲೆಕ್ಕಿಸದೆ ಬೆಂಕಿ ಹತ್ತಿದ್ದ ಭಾಗಕ್ಕೆ ಹೋಗಿ ಗಾಯಗೊಂಡು ಮೂರ್ಛೆ ಹೋಗುತ್ತಾನೆ. ಪುಟ್ಟು ಹೊರಗೆ ಇದ್ದಾನೆಂದು ತಿಳಿದು ರಾಮಾಶಾಸ್ತ್ರಿ (ಹಿರಿಯಣ್ಣನಿಗೆ ಪರಿಚಿತ) ಮತ್ತು ನೆರೆಹೊರೆಯವರು ಬಂದು ಮಾಧೂನ ಕಾಪಾಡ್ತಾರೆ. ಮಾಧುವಿನ ಧೈರ್ಯ ಮತ್ತು ಸಮಯಪ್ರಜ್ಞೆಗೆ ತುಂಬಾ ಮೆಚ್ಕೋತಾರೆ. ಆಗ ರಾಮಾಶಾಸ್ತ್ರಿ ಹೇಳುವ ಮಾತು...."ಈಗ್ಲಾದ್ರೂ ತಿಳೀತಾ ಹಿರಿಯಣ್ಣೋರೆ.. ಪಾಸಾದ್ರೇನು ಆಗ್ದಿದ್ರೇನು... ಟೊಳ್ಳು ಟೊಳ್ಳೇ ಗಟ್ಟಿ ಗಟ್ಟೀನೆ".

     ಕನ್ನಡ ನಾಟಕ ರಂಗವು ಹಳೇ ಪುರಾಣದ ನಾಟಕಗಳನ್ನೆ ಮತ್ತೆ ಮತ್ತೆ ತಿರುಗಿ ಮುರುಗಿ ಅವನ್ನೇ ಆಡಿಸುತ್ತ ಜನರಿಗೆ ನಾಟಕಗಳಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಂತಹ ಕಾಲದಲ್ಲಿ ಹೊಸ ಪ್ರಯೋಗದಂತೆ ಬಂದು ಯಶಸ್ವಿಕಂಡ  ಕೈಲಾಸಂರ ಮೊದಲ ನಾಟಕವೇ 'ಟೊಳ್ಳು ಗಟ್ಟಿ  ಅಥವಾ ಮಕ್ಕಳಿಸ್ಕೂಲು ಮನೇಲಲ್ವೆ'. ಸಮಾಜದ ಓರೆಕೋರೆಗಳನ್ನು ತಿದ್ದುವ  ನಾಟಕಗಳನ್ನು ಹೊರತಂದ ಕೈಲಾಸಂರವರು (ಸ್ವತಃ ಓದಿ ಸ್ವತಃ ಓದಿನಲ್ಲಿ ಮುಂದಿದ್ದರೂ ಅದೊಂದೆ ಮುಖ್ಯವಲ್ಲ ಎಂಬುದನ್ನು ಮನಮುಟ್ಟಿಸುತ್ತಾರೆ) 'ಟೊಳ್ಳು ಗಟ್ಟಿ'ಯಲ್ಲಿ ಸಮಾಜದಲ್ಲಿನ ಶಿಕ್ಷಣದ ಬಗೆಗಿನ ತಪ್ಪು ಕಲ್ಪನೆಯನ್ನು ಬಹಳ ಸೂಕ್ಷ್ಮವಾಗಿ ಟೀಕಿಸಿದ್ದಾರೆ.   

    ಅವರ ಈ ನಾಟಕದಲ್ಲಿ ಆಡಂಬರವಿಲ್ಲ ಸಂಬಂಧಗಳ ವೈಭವ ವರ್ಣನೆಯಿಲ್ಲ ನಾಯಕನ ಆರ್ಭಟವಿಲ್ಲ ಬದಲಿಗೆ ಸಾಮಾನ್ಯ ವಿದ್ಯಾರ್ಥಿ ಅದರಲೂ ಪಾಸಾಗದೆ ಅವಮಾನಿತನೂ ಆದರೆ ಸರಳ ಹೃದಯವಂತನು.
     ಈ ಸಹಜತೆಗೆ ನೈಜತೆಗೆ ಜನರು ಮಾರುಹೋದರು. ಜೀವನ ಕನ್ನಡಿಗಳಂತ ಈ ನಾಟಕಗಳು ಅತಿ ಕಡಿಮೆ ಸಮಯದಲ್ಲೇ ಜನರ ಮನಸೂರೆಗೊಂಡವು.  ಕೈಲಾಸಂರಿಂದ ನಾಟಕ ಕ್ಷೇತ್ರದ ದಿಕ್ಕೇ ಬದಲಾದ್ದರಿಂದ ಕ್ರಾಂತಿಕಾರಕ ಪ್ರಯೋಗಗಳು ನಡೆದುದರಿಂದ

    ಆಧುನಿಕ ಕನ್ನಡ ನಾಟಕ ರಂಗದ ಹರಿಕಾರನೆಂದೆನಿಸಿಕೊಂಡರು.

   ಈ ನಾಟಕದ ಮುಖ್ಯ ಪಾತ್ರಗಳಾದ ಮಾಧು ಮತ್ತು ನಾಗಮ್ಮ ಪಾತ್ರಗಳನ್ನು ಕೈಲಾಸಂರೇ ಖುದ್ದು ನಟಿಸಿ ಸೈ ಅನಿಸಿಕೊಂಡುದುದೀಗ ಇತಿಹಾಸವಷ್ಟೆ. ನಾಟಕದಲ್ಲಿ ಮಾಧುವಿನಂತೆ ಹೆಚ್ಚು ಗಮನ ಸೆಳೆಯುವ ಪಾತ್ರ ವಿಧವೆ..ನಾಗಮ್ಮ.  ಬ್ರಾಹ್ಮಣರ ಮನೆಯಲ್ಲಿ ಮುಖಕ್ಕೆ ಅರಿಶಿನ ಬಳಸ್ದೆ ಸೋಪು ಬಳಸಿ ಅಪಚಾರವೆಸೆಗಿದ ಹಿರಿ ಸೊಸೆ ಪಾತುಗೆ ನಾಗಮ್ಮ ಮಂಗಳಾರತಿ ಎತ್ತುವ ದೃಶ್ಯದಲ್ಲೆ ಆಕೆಯ ಮೊದಲ ಆಗಮನ. ಆಕೆಯ ಸಿಡಿಮಿಡಿ, ವಿನಾಕಾರಣ ಸಾತು (ಸಾತು ಮನೆಗೆ ಬಂದಾಗಲೇ ಪತಿ ತೀರಿಕೊಂಡನೆಂದು,ಅವಳ ಕಾಲ್ಗುಣ ಚೆನ್ನಾಗಿಲ್ಲವೆಂದು) ಪಾತುವನ್ನು(ಶ್ರೀಮಂತರ ಹೆಣ್ಣು ಸೊಕ್ಕೆಂದು ಕೆಲಸ ಮಾಡಳೆಂದು) ಶಪಿಸುವಾಗ ಕೋಪ ಬರುವುದು ಸಹಜ. ಆದರೆ ಕೈಲಾಸಂರು ನಾಗಮ್ಮನ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಯನ್ನು ಅಣಕಿಸಿದ್ದಾರೆ. ಇದೇ ಸಂಸಾರದ ಕಥೆಯನ್ನು ಮುಂದುವರೆಸಿ 'ಸಾತು ತೌರ್ಮನೆ' ನಾಟಕದಲ್ಲಿ ಸಾತುವಿನ ತಾಯಿ ನರಸಮ್ಮ ನಾಗಮ್ಮಳ ಮನಸ್ಥಿತಿ ಗೆ ಆಕೆಗೆ ಬಂದಿರುವ ಕಷ್ಟವೇ ಕಾರಣಳೆಂದು ಮಗಳಿಗೆ ಸಮಾಧಾನಿಸುತ್ತಾಳೆ. ಆಕೆಯ ಕಷ್ಟ ಕೊರಗುಗಳಿಗೆ ಮರುಗುತ್ತಾಳೆ.

    ಹೀಗೆ ಸಮಾಜದ ಸಮಸ್ಯೆಗಳನ್ನು ತಿದ್ದುವಂಥ ಕಥಾವಸ್ತುವಿರುವ ಅವರ ನಾಟಕಗಳ  ಭಾಷಾಶೈಲಿ ವಿಶೇಷವಾದುದು.ಆರಂಭದಲ್ಲಿ ಓದಿಕೊಳ್ಳಲು ಕ್ಲಿಷ್ಟವೆನಿಸಿದರೂ  ಪಳಗಿದ ಮೇಲೆ ನವೀನ ರಂಜನೆ ಕೊಡುವ ಶೈಲಿ ಅದು. ಅದನ್ನು ಓದಿಯೇ ಅನುಭವಿಸಬೇಕು.
    ಕೂತಲ್ಲಿ ಕಂಪನಿ ನಿಂತಲ್ಲಿ ನಾಟಕ ಎಂಬಂತೆ ಅವರು ನಾಟಕಗಳನ್ನು ಎಂದೂ ಕೂತು ಬರೆದವರಲ್ಲ. ಅವರಿಂದ ಕೇಳಿಸಿಕೊಂಡ ಸ್ನೇಹಿತರು ಸಂಗ್ರಹಿಸಿದ್ದೆಂದರೆ ಆಶ್ಚರ್ಯವಾಗುವುದು. ಅಪಾರ ಪಾಂಡಿತ್ಯವಂತರೂ ಮುಖ್ಯವಾಗಿ ಮಾನವೀಯತೆಯ ಪ್ರತಿರೂಪದಂತಿರುವ ಕೈಲಾಸಂರಿಂದ ಕನ್ನಡ ಭಾಷೆಯು ಹೊಸ ಮೆರುಗನ್ನು ಪಡೆದು 'ಕನ್ನಡಕ್ಕೊಬ್ಬನೇ ಕೈಲಾಸಂ' ಎಂಬ ಬಿರುದುನಿಂದ ಕನ್ನಡಿಗರ ಮನದಲಿ ವಿಶೇಷ ಸ್ಥಾನ ಪಡೆದರು. 

                                                          -   ಉಷಾಗಂಗೆ 

ಕಥೆ: "ನಮ್ಮವರು ಯಾರು?"


        ಯಾರೂ ಶಾಸ್ತ್ರಿಗಳ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅಷ್ಟೇ ಏಕೆ ಶಾಸ್ತ್ರಿಗಳನ್ನು ಒಳಕರೆದು ಒಂದು ಲೋಟ ಮಜ್ಜಿಗೆ ಅಥವಾ ಪಾನಕವನ್ನು ಸಹ ನೀಡಿರಲಿಲ್ಲ. ಬೆಳೆಗ್ಗೆಯಿಂದ ಉಪವಾಸವಿದ್ದ ಶಾಸ್ತ್ರಿಗಳಿಗೆ ಬಿಸಿಲಿನಲ್ಲಿ ಸುತ್ತಾಡಿ ತಲೆ ಸುತ್ತಿ ಬಂದಂತಾಯಿತು. ನಾಲ್ಕೇ ಹೆಜ್ಜೆ ಹಾಕಿದರೆ ದೇವಸ್ಥಾನವೇ ಸಿಗುತ್ತದಲ್ಲಾ ಎಂದು ಕೊಂಡು ಎಲ್ಲಿಲ್ಯೂ ನಿಲ್ಲದೆ ಮುಂದೆ ನಡೆದರು. ಆದರೆ ಎರಡು ಹೆಜ್ಜೆ ಹಾಕುವಷ್ಟರಲ್ಲಿ ಬಸವಳಿದು ಬಿದ್ದುಬಿಟ್ಟರು.


        ಜನ ಸಂತೆಯಂತೆ ಸುತ್ತಲೂ ನೆರೆದುಬಿಟ್ಟರು. ಏನು,ಏನು ಎಂದು ಎಲ್ಲರೂ ಕೇಳುವವರೇ, ಆದರೆ ಯಾರೂ ಶಾಸ್ತ್ರಿಗಳನ್ನು ಮುಟ್ಟಲಿಲ್ಲ. ಕೆಲವರಿಗೆ ಶಾಸ್ತ್ರಿಗಳ ಮಡಿವಂತಿಕೆಯ ಭಯ; ಇತರರಿಗೆ ತಮ್ಮ ತಮ್ಮ ಕೆಲಸಗಳ ಆತುರ.


        ಅಲ್ಲಿ0iÉು ನೀರು ಹಿಡಿಯುತ್ತಿದ್ದ ಫಾತಿಮಾ ಇದನ್ನೆಲ್ಲಾ ನೋಡಿದಳು. ಯಾರಾದರೂ ನೀರನ್ನಾದರೂ ಚಿಮುಕಿಸಸಬಾರದೇ ಎನಿಸಿತು. ಆದರೆ ಎಲ್ಲರೂ ಸುಮ್ಮನೆ ಇರುವುದನ್ನು ಕಂಡು ಮನೆಯ ಒಳಗೋಡಿ ಗಂಡನನ್ನು ಕರೆದಳು.


        “ಬೇಡ, ಬೇಡ, ಆಮೇಲೆ ಶಾಸ್ತ್ರಿಗಳು ನಮ್ಮನ್ನಿಲ್ಲಿ ಇರಿಸಗೊಡುವುದಿಲ್ಲ.” ಪಾಷಾ ನುಡಿದ.  “ಅದೆಲ್ಲಾ ಆಮೇಲೆ ಯೋಚಿಸೋಣ, ಮೊದಲು ಅವರಿಗೆ ಏನಾಗಿದೆ ನೋಡಿ” ಪಾಷಾ ಅಲ್ಲಿಗೆ ಹೋಗುತ್ತಲೇ “ನೀರು ತಾ” ಎಂದ. ಬೇಡ’ ಬೇಡ’’ ಎಂದು ಕೆಲವರು ಹೇಳುತ್ತಿದ್ದರೂ ಶಾಸ್ತ್ರಿಗಳನ್ನು ಎತ್ತಿಕೊಂಡು ಬಮ್ದು ಮನೆಯ ಮುಂದಿನ ಜಗಲಿಯ ಮೇಲೆ ನೆರಳಿನಲ್ಲಿ ಮಲಗಿಸಿ ನೀರನ್ನು ಚಿಮುಕಿಸಿದ, ‘ಶಾಸ್ತ್ರಿಗಳೇ’ ಮೆಲ್ಲಗೆ ಎಬ್ಬಿಸಿದ.


        ನಿಧಾನವಾಗಿ ಕಣ್ಬಿಟ್ಟ ಶಾಸ್ತ್ರಿಗಳಿಗೆ ಸ್ವಲ್ಪ ಸಮಯದ ನಂತರ ತಾವು ಎಲ್ಲಿದ್ದೇವೆ ಎಂದು ಅರಿವಾಯಿತು. ಫಾತಿಮ ಒಳಗಡೆಯಿಂದ ಎಳನೀರನ್ನು ತಂದು ಗಂಡನ ಕೈಯಲ್ಲಿ ಕೊಟ್ಟು “ಕುಡಿಸಿ” ಎಂದಳು. “ಬೇಡ ಸುಮ್ಮನಿರು”.


        ಶಾಸ್ತ್ರಿಗಳಿಗೆ ಪೂರ್ತಿ ಎಚ್ಚರವಾಯಿತು. ಆದರೆ ಸುಸ್ತಿನಿಂದಾಗಿ ಮೇಲೇಳಲು ವಿಫಲರಾದರು. ಫಾತಿಮಾ ತಾನೇ, “ಶಾಸ್ತ್ರಿಗಳೇ ದಯವಿಟ್ಟು ಈ ಎಳನೀರನ್ನು ಕುಡಿಯಿರಿ” ಇದು ನಮ್ಮ ಮರದಿಂದ ಬೆಳಿಗ್ಗೆ ಕಿತ್ತದ್ದು. “ಇದಕ್ಕೇನೂ ದೋಷವಿಲ್ಲವಲ್ಲ”, ಕಳಕಳಿಯಿಂದ ಹೇಳಿದಳು. ಶಾಸ್ತ್ರಿಗಳಿಗೆ ಕಣ್ತುಂಬಿ ಬಂದಿತು.


        ಈಕೆಯನ್ನು ಅವರು ಮ್ಲೇಚ್ಚರು ಎಂದು ಹೀಯಾಳಿಸಿದ್ದರು. ಕುಡಿಯಲು ನೀರು ಇಲ್ಲದಿದ್ದಾಗ ದೇವಸ್ಥಾನದ ಆವರಣದಲ್ಲಿದ್ದ ಬಾವಿಯಿಂದ ನೀರನ್ನು ಕೊಡಿ ಎಂದು ಕೇಳಿದಾಗ ಇಲ್ಲವೆಂದಿದ್ದರು. ಫಾತಿಮಾ ಮಕ್ಕಳು ಪ್ರಸಾದಕ್ಕೆ ಬಂದಾಗ ಕೋಲು ಹಿಡಿದು ಕಳಿಸಿದ್ದರು.


        ಅವರ ಕಣ್ಣಲ್ಲಿ ನೀರು ಕಂಡು ಪಾಷಾ , ಫಾತಿಮಾಳನ್ನು ಗದರಿಸಿದ “ನೀನು ಅದನ್ನು ತೆಗೆದುಕೊಂಡುಹೋಗಿ ಒಳಗಿಡು. ಹಾಗೆ ಆ ದೇವಸ್ಥಾನದಲ್ಲಿರುವ ರಾಜೂಗೆ ನೀರು ತಾಲು ಹೇಳು.”


        ಅಷ್ಟರಲ್ಲಿ ಫಾತಿಮಾ ಮಗಳು,”ತಾತಾ, ಕುಡಿ ತಾತಾ, ಕುಡಿದ್ರೆ ಶಕ್ತಿ ಬರುತ್ತೆ ಅಂತಾ ಅಮ್ಮ ಯಾವಾಗ್ಲೂ ಹೇಳ್ತಾ ಇರ್ತಾಳೆ.” ಮುದ್ದಾಗಿ ನುಡಿದಳು. ಶಾಸ್ತ್ರಿಗಳಿಗೆ ಈಗಂತೂ ತಮ್ಮ ಬಗ್ಗೆ ನಾಚಿಕೆ ಎನಿಸಿತು. ಈ ಮುಗ್ಧ ಮಗುವಿನೊಂದಿಗೆ ತಾವು ನಡೆದುಕೊಂಡ ರೀತಿ ನೆನಒಇಗೆ ಬಂದು ಸಂಕಟ ಪಟ್ಟರು.


        ನಿಧಾನವಾಗಿ “ಫಾತಿಮಾ ಅದನ್ನು ಕೊಡಮ್ಮಾ” ಎಂದರು. “ಬೇಡ ಶಾಸ್ತ್ರಿಗಳೇ”, ತಡೆಯಲೆತ್ನಿಸಿದ ಪಾಷಾ. “ಇರಲಿ ಕೊಡಪ್ಪಾ, ಇಷ್ಟು ದಿನದ ಪಾಪ ತೊಳೆದು ಹೋಗುತ್ತೆ.” ಎಂದು, ಎಳ ನೀರನ್ನು ಕುಡಿದು ನಿಧಾನವಾಗಿ ಮೇಲೆದ್ದು ಕುಳಿತುಕೊಂಡರು.


        “ಶಾಸ್ತ್ರಿಗಳೇ, ಈ ಬಿಸಿಲಿನಲ್ಲಿ ಎಲ್ಲಿ ಹೋಗಿದ್ದಿರಿ? ಛತ್ರಿಯನ್ನಾದರೂ ತೆಗೆದುಕೊಂಡು ಹೋಗಬಾರದಿತ್ತೇ? ಶಾಸ್ತ್ರಿಗಳು ತಮ್ಮ ಸಮಸ್ಯೆಯನ್ನು ಹೇಳಿದರು.


        ಈ ಸಮಸ್ಯೆಗೆ ಏನು ಉತ್ತರ ಹೇಳಬಲ್ಲ? ಆತ ಮೌನವಾಗಿ ನಿಂತ. ಫಾತಿಮಾ ಅವನನ್ನು ಕರೆದು ಕಿವಿಯಲ್ಲಿ ಏನೋ ಹೇಳಿದಳು. ಪಾಷಾ ಅವಳನ್ನು ಗದರುತ್ತಿರುವುದನ್ನು ಕಂಡು ಶಾಸ್ತ್ರಿಗಳು “ಏನದು ಪಾಷಾ?” ಕೇಳಿದರು. “ಏನಿಲ್ಲ ಶಾಸ್ತ್ರಿಗಳೇ” ಸಂಕೋಚದಿಂದಲೇ ನಿಂತ. “ಏನಮ್ಮಾ ಅದು?”, “ಶಾಸ್ತ್ರಿಗಳೇ ನಿಮಗೇನೂ ಅಭ್ಯಂತರವಿಲ್ಲದಿದ್ದರೆ ನಮ್ಮ ಮನೆ ಅಂಗಳದಲ್ಲಿ ಮಾಡಿಕೊಳ್ಳಲಿ ಎಂದೆ. ಅದಕ್ಕೆ ಅವರು. . . .. . . ಪಾಷಾ ಮಧ್ಯಪ್ರವೇಶಿಸಿ, “ಅದು ಹೇಗೆ ಸಾಧ್ಯ? ನೀನು ಸುಮ್ನಿರು.” ಎಂದ.


        ಶಾಸ್ತ್ರಿಗಳು ಏನೂ ಮಾತನಾಡದೆ ಆ ದಂಪತಿಗಳನ್ನೇ ನೋಡುತ್ತಾ ಕುಳಿತರು. “ಶಾಸ್ತ್ರಿಗಳೇ ನಿಮ್ಮ ಕಷ್ಟ ನೋಡಲಾರದೆ ಹಾಗೆಂದೆ. ಬೇಕಿದ್ದರೆ ನಾವು ಎರಡು ದಿನಗಳ ಮಟ್ಟಿಗೆ ನನ್ನ ತಾಯಿ ಮನೆಗೆ ಹೋಗಿ ಬರ್ತೀವಿ. ಇಲ್ಲೇ ಒಲೆ ಹಾಕೊಳ್ಳಿ ಸೌದೇನೂ ಇಲ್ಲೇ ಇದೆ.” ಫಾತಿಮಾ ಮಾತು.


        “ಈ ಜನಗಳನ್ನೇ ನಾನು ಇಷ್ಟು ದಿನ ಪರಕೀಯರೆಂದು ದೂರವಿಟ್ಟಿದ್ದು” ಎಂದುಕೊಂಡರು ಶಾಸ್ತ್ರಿಗಳು.


        “ಶಾಸ್ತ್ರಿಗಳೇ, ಅವಳಿಗೆ ಕೆಲವೊಮ್ಮೆ ಎಲ್ಲಿ, ಹೇಗೆ ಮಾತನಾಡಬೇಕು ಎಂದು ಗೊತ್ತಾಗೊಲ್ಲ , ದಯವಿಟ್ಟು ಕ್ಷಮಿಸಿಬಿಡಿ. ನಡೀರಿ ನಿಮ್ಮನ್ನು ದೇವಸ್ಥಾನದವರೆಗೂ ಬಿಟ್ಟು ಬರ್ತೇನೆ. ನೀವು ಮತ್ತೆ ಸ್ನಾನ ಮಾಡಿ ಊಟ ಮಾಡಬೇಕೇನೊ. ಇನ್ನೊಂದು ಎಳನೀರು ಕುಡಿದುಬಿಡಿ” ಎಂದ ಪಾಷಾ ಎಳನೀರನ್ನು ಕತ್ತರಿಸಲಾರಂಭಿಸಿದ.


        “ಶಾಸ್ತ್ರಿಗಳೇ, ನಿಮಗೆ ನೋವುಂಟು ಮಾಡಿದ್ದರೆ ಕ್ಷಮಿಸಿ,” ಎಂದು ಹೇಳಿ, ಒಳಗೆ ಹೊರಟ ಫಾತಿಮಾಳನ್ನು ತಡೆದು, “ಇಲ್ಲಮ್ಮಾ ನಾಳೆ ಇಲ್ಲಿಗೇ ಬಂದು ನಮ್ಮ ಕೆಲಸ ಮಾಡಿಕೊಳ್ಳುತ್ತೇವೆ.  ಆದ್ರೆ ನೀವು ಎಲ್ಲಿಗೂ ಹೋಗಬೇಕಿಲ್ಲ.” ಎಂದರು. ಫಾತಿಮಾ ಸಂತೋಷಗೊಂಡಳು. ಪಾಷಾ ಎಳನೀರನ್ನು ಕತ್ತರಿಸುವುದನ್ನು ನಿಲ್ಲಿಸಿ ಆಶ್ಚರ್ಯಚಕಿತನಾಗಿ ಶಾಸ್ತ್ರಿಗಳ ಕಡೆ ನೋಡಿದ. ಇದಾವುದನ್ನೂ ಗಮನಿಸದೆ ಶಾಸ್ತ್ರಿಗಳು ಮಗುವಿನ ಕೈ ಹಿಡಿದು, “ಮುನ್ನಿ ನಾಳೆ ಪ್ರಸಾದ ಕೊಡ್ತೀನಿ, ಬರ್ತೀಯಾ” ಎಂದರು.

                                                                                                    -   ಸುಧಾ ಜಿ