Pages

ನಾಟಕ - ಅಗ್ನಿ ಪರ್ವತಗಳಲ್ಲಿ ಅರಳಿದ ಹೂಗಳು



(ಹಿನ್ನೆಲೆಯಲ್ಲಿ ದುಃಖಭರಿತ ಹಿಂದೂಸ್ಥಾನಿ ಸಂಗೀತದ ಆಲಾಪನೆ. ನಂತರ ಕೂಗಾಟ, ಕಿರುಚಾಟ, ಚೀತ್ಕಾರಗಳು ಕೇಳಿಬರುತ್ತವೆ. ಪೈಶಾಚಿಕ ನಗು, ಕೂಗು, ಆವರಿಸುತ್ತದೆ. ಒಟ್ಟಾರೆ ಗಲಭೆಯ ವಾತಾವರಣ)

ಧ್ವನಿ-1 : ಅವನನ್ನು ಬಿಡಬೇಡ ಕೊಲ್ಲು. (ಚೀತ್ಕಾರ)
ಧ್ವನಿ-2 : ಮೂರನೆ ಮನೆಗೆ ಮಾತ್ರ ಬೆಂಕಿ ಹಾಕಿ ಪೆಟ್ರೋಲ್ ಸುರಿರಿ. ಯಾರನ್ನೂ ಹೊರಗೆ ಬಿಡಬೇಡಿ. (ಕಿರುಚಾಟ, ಸುಡುವ ಶಬ್ಧ ಕೇಳಿಬರುತ್ತದೆ)
ಗುಂಪು-1: ಅದಲ್ಲ, ಅದಲ್ಲ. ಅದರ ಪಕ್ಕದ ಅಂಗಡಿ ಒಡಿ. ನುಗ್ರೋ, ಎಲ್ಲಾನೂ ಎತ್ಕೊಳ್ರೋ.
ಧ್ವನಿ-3 : ಏ.ಏ, ಅವನು ನಮ್ಮ ಕಡೆಯವನು. ನೀನು ಬಾರೋ, ಸಾಯಿಸೋ, ಹೇಡಿ, ಅವನನ್ನು ಕೊಲ್ಲು, ಇಲ್ಲಾಂದ್ರೆ.....
ಧ್ವನಿ-4 : ಏನೋ, ಕೊಲ್ಲಲ್ವಾ, ಇವನಿಗೇ ಚಾಕು ಹಾಕ್ರೋ. (ಚೀತ್ಕಾರ)
ಧ್ವನಿ-5 : ದಯವಿಟ್ಟು ನನ್ನ ಮಗಳಿಗೆ ಏನೂ ಮಾಡ್ಬೇಡಿ. ಬೇಕಿದ್ರೆ ನನ್ನನ್ನ ಸಾಯಿಸ್ಬಿಡಿ (ಹೆಣ್ಣಿನ ಕೂಗಾಟ). ಅಯ್ಯೋ ನಾನ್ಯಾಕೆ ಬದುಕಬೇಕು.
ಗುಂಪು-2: ಪೊಲೀಸ್. ಪೊಲೀಸ್.
ಧ್ವನಿ-3 : ಅವರೇನೂ ಮಾಡಲ್ಲ.
ಗುಂಪು-2: ಯೇ ಅಂಧರ್‍ಕಿ ಬಾತ್ ಹೈ, ಪೊಲೀಸ್ ಹಮಾರಾ ಸಾಥ್ ಹೈ.
ಧ್ವನಿ-2 : ಲಾಠಿ, ಕತ್ತಿ ತಗೊಳ್ಳಿ. ನೀನು ಇವರನ್ನ ಪಕ್ಕದ ಬೀದಿಗೆ ಕರ್ಕೊಂಡು ಹೋಗು. ನೀನು ಇವರನ್ನ ಬಜಾರ್‍ಗೆ ಕರ್ಕೊಂಡು ಹೋಗು. ತಗೋ, ಕಂಪೆನಿಗಳ ಲಿಸ್ಟ್.
(ವಿಚಿತ್ರವಾದ ಕೂಗುಗಳು, ಉನ್ಮಾದದ ನಗು, ಘೋಷಣೆಗಳು ಕೇಳಿ ಬರುತ್ತವೆ)
ಬಾಲಕ : (ಬಾಗಿಲು ತಟ್ಟುತ್ತಾ) ಫಾತಿಮಾ ಆಂಟಿ, ಫಾತಿಮಾ ಆಂಟಿ, ಬೇಗ ಓಡಿಹೋಗಿ. (ಉತ್ತರ ಬರುವುದಿಲ್ಲ)
ಬಾಲಕ : ರೆಹಮಾನ್, ರೆಹಮಾನ್ (‘ಓ’ ಎಂಬ ಶಬ್ದ ಮನೆಯಿಂದ ಕೇಳಿಬರುತ್ತದೆ). ಬೇಡ ಹೊರಗೆ ಓಡಿ ಹೋಗಿ. ಅವರು ಪೆಟ್ರೋಲ್ ಬಾಂಬ್ ಹಿಡ್ಕೊಂಡ್ ಬರ್ತಿದ್ದಾರೆ)
ರೆಹಮಾನ್: (ಒಳಗಿನಿಂದ) ಯಾರೋ, ಮೂರ್ತಿ?
ಮೂರ್ತಿ : ನನಗೂ ಗೊತ್ತಿಲ್ಲ. ಬೇಗ ಓಡಿ ಹೋಗಿ.
(ರೆಹಮಾನ್, ಫಾತಿಮಾ ಹೊರಗೆ ಓಡಿಹೋಗುತ್ತಾರೆ. ಕೈಯಲ್ಲಿ ಪುಟ್ಟ ಗಂಟು)
(ಹಿಂದೂಸ್ಥಾನಿ ಸಂಗೀತದ ಆಲಾಪನೆ ಕೇಳಿ ಬರುತ್ತದೆ)
ಭುಗಿಲೆದ್ದ ಕೋಮು ಗಲಭೆ, 64 ಬಲಿ, ಸತ್ತವರಲ್ಲಿ 10 ಎಳೆಯ ಕಂದಮ್ಮಗಳು. ನಿಲ್ಲದ ಹಿಂಸಾಚಾರ. ಮರೆತ ಮಾನವೀಯತೆ  ಮೆರೆದ ಪೈಶಾಚಿಕತೆ.
ದೃಶ್ಯ -2
(ಮನೆಯ ದೃಶ್ಯ. ಮನೆ ಹಿರಿಯ ಚಿಂತೆಯಿಂದ ಯೋಚಿಸುತ್ತಾ ಕುಳಿತಿದ್ದಾನೆ. ಹೆಂಡತಿಯೂ ಚಿಂತೆಯಲ್ಲಿ ಮುಳುಗಿದ್ದಾಳೆ. 14 ವರ್ಷದ ಬಾಲಕ ಕಿವಿ ಮುಚ್ಚುವಂತೆ ಬಟ್ಟೆ ಸುತ್ತಿಕೊಂಡು ತಂದೆಯ ತೊಡೆಯ ಮೇಲೆ ಮಲಗಿದ್ದಾನೆ. ಬಾಗಿಲು ಬಡಿಯುವ ಶಬ್ದ ಕೇಳುತ್ತದೆ. ಎಲ್ಲರೂ ಆತಂಕ, ಗಾಬರಿ, ಭಯದಿಂದ ಬಾಗಿಲು ಬಡಿಯುವ ಶಬ್ದ ಕೇಳುತ್ತದೆ. ಮತ್ತೆ ‘ದಡದಡ’ ಬಾಗಿಲು ಬಡೆಯುವ ಶಬ್ದ. ‘ಯಾರು’ ಎಂಬ ಕೂಗಿಗೆ ‘ಕಾಪಾಡಿ, ಕಾಪಾಡಿ’ ಎನ್ನುವ ಮಹಿಳೆಯ ಅಳುಧ್ವನಿ, ಮನೆಹಿರಿಯ ಮೊದಲು ಕಿಟಕಿಯ ಮೂಲಕ ನೋಡಿ ನಂತರ ಬಾಗಿಲು ತೆಗೆಯುತ್ತಾನೆ. ಹೊರಗೆ ಫಾತಿಮಾ, ರೆಹಮಾನ್‍ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದಾಳೆ. ಇಬ್ಬರೂ ಕ್ಷಣಕಾಲ ದಿಟ್ಟಿಸಿ ನೋಡುತ್ತಾರೆ. ಅಷ್ಟರಲ್ಲಿ ಚೀತ್ಕಾರದ ದನಿ ಬರುತ್ತದೆ.)
ಹಿರಿಯ : ಬೇಗ ಒಳಗಡೆ ಬನ್ನಿ. (ಇಬ್ಬರೂ ಒಳಗೆ ಬರುವರು, ಬಾಗಿಲು ಮುಚ್ಚುತ್ತಾನೆ. ಫಾತಿಮಾ ಮೂಲೆಯಲ್ಲಿ ನಿಂತುಕೊಂಡೇ ಅಳಲಾರಂಭಿಸುತ್ತಾಳೆ)
ಮಗು : ಏಯ್, ರೆಹಮಾನ್.
ಫಾತಿಮಾ : ಇವರು ಮನುಷ್ಯರಾ. ನಾನೇನು ಮಾಡಲಿ. ಎಲ್ಲಿಗೆ ಹೋಗ್ಲಿ. ಆ ಮಗೂಗೆ ಏನು ಕೊಡ್ಲಿ. ಅಲ್ಹಾ, ನಮಗ್ಯಾಕೆ ಇಂತ ಕಷ್ಟ ಕೊಟ್ಟೆ.
ಹಿರಿಯ : ಸಮಾಧಾನ ಮಾಡ್ಕೋಮ್ಮ. ಆಮೇಲೆ ಎಲ್ಲಾ ಸರಿಹೋಗುತ್ತೆ. ರಘು, ಹುಡುಗನಿಗೆ ಏನಾದರೂ ತಿನ್ನೋದಕ್ಕೆ ಕೊಡಪ್ಪಾ.
ಫಾತಿಮಾ: ಏನು ಸರಿಹೋಗುತ್ತೆ. 10 ವರ್ಷದ ಹಿಂದೆ ಹೇಗೋ ನೆಮ್ಮದಿಯಾಗಿ ಹಳ್ಳೀಲಿದ್ವಿ. ಆಗ್ಲೂ ಹೀಗೆ ಮಾಡಿದ್ರು. ಅಲ್ಲಿಂದ ಓಡ್ಸಿದ್ರು. ಇವರಪ್ಪ, ಇದು ನಾನು ಹುಟ್ಟಿದ ಜಾಗ, ಬಿಡಲ್ಲ ಅಂದದ್ದಕ್ಕೆ ಮನೆಗೆ ಬೀಗ ಹಾಕಿ ಹೊಡೆದ್ರು. ಜೀವ ಉಳಿದ್ರೆ ಯಾವತ್ತಾದ್ರೂ ಹೋಗೋಣ ಅಂದ್ಕೊಂಡಿದ್ರು. ಇಲ್ಲಿ, ಎಂಗಾದ್ರೂ ಜೀವನ ಮಾಡ್ಬಹುದು ಅಂತ ಬಂದ್ವಿ. ಓದ್ ವರ್ಷದ ಎಲೆಕ್ಷನ್‍ಗೂ ಮುಂಚೆ ಗಲಾಟೆ ಆಯ್ತು. ವ್ಯಾಪಾರಕ್ಕೆ ಅಂತ ಓಗಿದ್ದ ಇವ್ರಪ್ಪನ ಕೊಂದ್ರು. ಈ ಮಗೂಗೋಸ್ಕರ ಜೀವ ಇಟ್ಕಂಡು, ಅಲ್ಲಿ ಇಲ್ಲಿ ಕೆಲಸ ಮಾಡ್ಕೊಂಡು ಸಾಕ್ದೆ. ಇವತ್ತು ಎಲ್ಲಾನೂ ನಾಶನ ಮಾಡಿದ್ರು. ನೀವೇ ಹೇಳಿ. ನಾ ಏನ್ ಮಾಡ್ಲಿ. ಎಲ್ಲಿಗೆ ಹೋಗ್ಲಿ. ಇರೋದ್‍ಕಿಂತ ಸಾಯೋದೇ ವಾಸಿ.
ಹಿರಿಯ: ಸತ್ತು ಏನ್ ಮಾಡ್ತೀಯಮ್ಮ.
ಫಾತಿಮಾ: ಬದುಕಿದ್ ಏನ್ ಮಾಡ್ಲಿ. ಎಲ್ಲೋದ್ರು ರಾಕ್ಷಸರೇ ಜನ ಸಾಯೋದು. ಮನೆ ಹತ್ಕೊಳ್ಳೋದು, ಮನುಷ್ಯರನ್ನ ಜೀವಂತ ಸುಡೋದು. ಇದನ್ನೇ ನೋಡ್ತಾ, ನೋಡ್ತಾ, ನಾ ಹುಚ್ಚಿಯಾಗಿಬಿಡ್ತೀನಿ.
ಹಿರಿಯ: ಸಮಾಧಾನ ಮಾಡ್ಕೊಳಮ್ಮಾ. ಈ ಮಗನ ಭವಿಷ್ಯ ಬಗ್ಗೆ ಯೋಚನೆ ಮಾಡು 
ಫಾತಿಮಾ : ಅವನಿಗೆ ಇನ್ನೇನಿದೆ. ಇನ್ನೆಲ್ಲಾದ್ರೂ ಸಾಯೋಕೆ. ನಮ್ಮಂತವರನ್ನ ಬದುಕೋಕೆ ಬಿಡ್ತಾರಾ. ಎಲ್ಲೋದ್ರು ಅಷ್ಟೇ. ಎಲ್ಲಾ ರಾಕ್ಷಸರು. ಗರ್ಭಿಣಿ ಹೆಂಗಸ ಹೊಟ್ಟೆ ಸೀಳಿ ಮಗು ಎಳೆಯೋರಿಗೆ ನನ್ನ ಮಗ ಏನು?
ರೆಹಮಾನ್: (ಅಳುತ್ತಾ) ಅಮ್ಮೀ....
ಹಿರಿಯ : ಆ ಮಗು ಮುಂದೆ ಏನ್ ಮಾತಾಡ್ತೀಯ. ಪ್ರಪಂಚ ಎಲ್ಲಾ ಹೀಗೆ ಇಲ್ಲ. ಎಲ್ಲಾ ಕಡೆ ಒಳ್ಳೇ ಜನರೂ ಇದ್ದಾರೆ.
ಫಾತಿಮಾ : ಎಲ್ಲಿ, ಎಲ್ಲಿ ತೋರಿಸಿ, ನನಗೆ ತೋರಿಸಿ. ಆ ಒಳ್ಳೆಯವ್ರು ನನ್ನ ಮನೆ ಉಳಿಸಿದ್ರಾ. ಇವರಪ್ಪನ್ನ ಉಳಿಸಿದ್ರಾ. ಪಕ್ಕದ ಮನೆ ನೂರ್‍ಳನ್ನ ಉಳಿಸಿದ್ರಾ. ಎಲ್ಲಿ, ಅವರು ಎಲ್ಲಿದ್ದಾರೆ?
ಹಿರಿಯ : ನಾನು, ನೀನು ನೋಡಿರೊ ಪ್ರಪಂಚ ಚಿಕ್ಕದು. ಫಾತಿಮಾ, ಪ್ರಪಂಚ ಇದಕ್ಕಿಂತ ವಿಶಾಲವಾಗಿದೆ. ಬೇರೆಯವರಿಗೋಸ್ಕರ ಸಹಾಯ ಮಾಡೋ ಜನ, ಜೀವ ಕೊಡೋ ಜನಾನು ಇದ್ದಾರೆ.
ಫಾತಿಮಾ: ಎಲ್ಲಿದ್ದಾರೆ? ಹೇಳಿ ಅವರ್ಯಾಕೆ ಇಲ್ಲಿಲ್ಲ.
ಹಿರಿಯ: ಇದ್ದಾರೆ. ಇದ್ದಾರೆ, ತಮ್  ಜುಟ್ಟನ್ನ ಈ ನರರಾಕ್ಷಸರ ಕೈಗೆ ಕೊಟ್ಟು ಕುಳಿತಿದ್ದಾರೆ.
ಫಾತಿಮಾ: ಇಲ್ಲ, ಇಲ್ಲ, ನನಗೆ ನಂಬಿಕೆ ಬರ್ತಾ ಇಲ್ಲ.
ಹಿರಿಯ: ಹೌದು, ಊರಿಗೆ ಊರೇ ಹತ್ತಿ ಉರೀತಿರುವಾಗ, ಬೆಂಕಿಯ ಶಾಖಕ್ಕೆ ತಂಗಾಳಿ ಇದೆ ಅನ್ನೋದೇ ಮರೆತು ಹೋಗುತ್ತೆ. ಆದರೆ ಬೆಂಕೀನೆ ಸರ್ವಸತ್ಯ ಅಲ್ಲ. ಬೆಂಕಿ ಆರಲೇಬೇಕು. ತಂಗಾಳಿ ಬೀಸಲೇಬೇಕು. ಅದಕ್ಕೂ ಮುನ್ನ ಬೆಂಕೀನ ಆರಿಸೊ ಕೆಲಸ ನಾವು ಮಾಡಬೇಕು. ಕೇಳಮ್ಮ, ನನ್ನ ಜೀವನದಲ್ಲಿ ನೋಡಿದ ಒಂದು ಕಥೆ ಹೇಳ್ತೀನಿ.
ರಾಮಳ್ಳಿ ಅಂತ ಒಂದು ಸಣ್ಣ ಊರು. ಹೆಚ್ಚಿಗೆ ಬಡವರಿದ್ದ ಆ ಊರಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದರು. ಊರಿಗೆ ಸೂರ್ಯನ ಬೆಳಕು ಬೀರುವ ಸಮಯಕ್ಕೆ ಸರಿಯಾಗಿ ಸಂಗೀತದ ಸ್ವರ ಕೇಳಿಸುತ್ತಿತ್ತು. ಊರಿನ ಪುರೋಹಿತರ ಮಗಳು ಕಾತ್ಯಾಯಿನಿ ಬಹಳ ಚೆನ್ನಾಗಿ ಸಂಗೀತ ಕಲಿತಿದ್ದಳು. ನಮ್ಮೂರಿನ ಹಿರಿಯ ಮೌಲ್ವಿಯೊಬ್ಬರು ಅವಳ ಸಂಗೀತದಲ್ಲೇ ತಮ್ಮ ಎಷ್ಟೋ ಕಷ್ಟ, ದುಃಖಗಳನನು ಮರೀತಾ ಇದ್ರು. ಆ ಹುಡುಗಿ ಹಾಡೋದಿಕ್ಕೆ ಶುರು ಮಾಡಿದ್ರೆ.....
(ರಂಗ ನಿಧಾನವಾಗಿ ಕತ್ತಲಾಗುತ್ತೆ)
ದೃಶ್ಯ-3
(ಹಿನ್ನೆಲೆಯಲ್ಲಿ ಕರ್ನಾಟಕ ಸಂಗೀತದಲ್ಲಿ ಆಲಾಪನೆ. ರಂಗದ ಮೇಲೆ ನಿಧಾನವಾಗಿ ಬೆಳಕು ಬರುತ್ತದೆ)
ಹಾಡು. ದಯವಿಲ್ಲದ ಧರ್ಮ ಯಾವುದಯ್ಯ
ದಯವೇ ಧರ್ಮದ ಮೂಲವಯ್ಯ
(ಕಾತ್ಯಾಯಿನಿ ಈ ಹಾಡಿಗೆ ತಕ್ಕಂತೆ ಕೆಲವು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾಳೆ. ಮೌಲ್ವಿ ನಿಧಾನವಾಗಿ ಬಂದು ಅಲ್ಲೇ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ)
ಕಾತ್ಯಾಯಿನಿ: (ಮೌಲ್ವಿಯನ್ನು ನೋಡಿ) ಯಾವಾಗ ಬಂದಿರಿ?
ಮೌಲ್ವಿ : ಈಗ ತಾನೆ ಬಂದೆ ಬೇಟಿ. ತಗೊ (ಪೊಟ್ಟಣವನ್ನು ಕೊಡುವನು)
ಕಾತ್ಯಾಯಿನಿ: ಏನಿದು?
ಮೌಲ್ವಿ: ಇವತ್ತು ಮೊಹರಂ ಕಡೇ ದಿನ ಅಲ್ವಾ. ಅದ್ಕೆ ಮಕ್ಕಳಿಗೆ ಭಟ್ಟರ ಹೋಟೆಲಿಂದ ಸಿಹಿ ತಂದೆ. ಹಾಂ. ಬೇಟಿ, ಮನಸಿಗ್ಯಾಕೋ ಬೇಸರ. ಮೊನ್ನೆ ಹಾಡ್ತಿದ್ಯಲ್ಲಾ ಆ ವಚನ ಹಾಡು.
ಕಾತ್ಯಾಯಿನಿ: (ತಂಬೂರಿಯನ್ನು ಸರಿಪಡಿಸಿಕೊಳ್ಳುತ್ತಾ ಹಾಡುವಳು)
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇತರ ಹಳಿಯಲು ಬೇಡ (ವ್ಹಾ, ವ್ಹಾ, ಹಾಯ್ ಅಲ್ಲಾ)
ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ ಇದೇ ಕೂಡಲ ಸಂಗಮದೇವನೊಲಿವ ಪರಿ ||ಕಳಬೇಡ||
(ವ್ಹಾ, ವ್ಹಾ, ವ್ಹಾ, ಹಾಯ್ ಸುಭಾನಲ್ಲಾ)
ಮೌಲ್ವಿ : ಬೇಟಿ, ನಿನ್ನ ಸಂಗೀತ ಇಲ್ದೆ ಇದ್ದಿದ್ರೆ, ಹಜ್ ಯಾತ್ರೆಗೆ ಕಾಯೋದ್ರಲ್ಲಿ ಹುಚ್ಚನಾಗ್ತಿದ್ದೆ.
ಕಾತ್ಯಾಯಿನಿ: ನಿಮಗೆ ಬೇಕಾದಷ್ಟು ಹಣ ಸೇರ್ತಾ.
ಮೌಲ್ವಿ : ಇನ್ನೂ ಇಲ್ಲಾ ಬೇಟಿ, ಆಂ, ಸೇರುತ್ತೆ ಬಿಡು. ಅಲ್ಲಾ ಕೈ ಬಿಡಲ್ಲ.
ಕಾತ್ಯಾಯಿನಿ: (ನಗುತ್ತಾ) ಹಾಗಿದ್ರೆ , ನಿಮ್ಮ ಮರ ಹೂ ಬಿಟ್ಟಿಲ್ಲ.
ಮೌಲ್ವಿ : ಬಿಡುತ್ತೆ ಬೇಟಿ ಬಿಡುತ್ತೆ. ಮರ ಹೂ ಬಿಡುತ್ತೆ. ನಾನು ಹಜ್‍ಗೆ ಹೋಗೇ ಹೋಗ್ತೀನಿ.
(ಅಷ್ಟರಲ್ಲಿ ನಾರಾಯಣ ಶಾಸ್ತ್ರಿಗಳು ಬರುತ್ತಾರೆ)
ನಾ.ಶಾಸ್ತ್ರಿ: ಕಾತ್ಯಾ, ಹೋಗಮ್ಮ. ತಿಂಡಿ, ತಿನ್ನು ಹೋಗು, ಹೊತ್ತಾಯ್ತು.
ಮೌಲ್ವಿ : ಅರೆ ಇನ್ನೂ ತಿಂಡಿ ತಿಂದಿಲ್ವಾ? ಹೋಗು ಬೇಟಿ. ಚಿಕ್ಕ ವಯಸ್ಸಲ್ಲಿ ತುಂಬಾ ಹಸಿದುಕೊಂಡು ಇರಬಾರದು. (ಕಾತ್ಯಾ ಒಳಗೆ ಹೋಗುತ್ತಾಳೆ) ಶಾಸ್ತ್ರಿ, ನಿನ್ನ ಮಗಳು ಅದೆಷ್ಟು ಚೆನ್ನಾಗಿ ಹಾಡ್ತಾಳೆ. ಅವಳ ಸಂಗೀತ ಕೇಳ್ತಾ ಇದ್ರೆ ನಾನು ಎಲ್ಲಿದೀನಿ ಅನ್ನೋದೆ ಮರೆತು ಹೋಗುತ್ತೆ.
ನ್ಯಾ.ಶಾಸ್ತ್ರಿ : ನಿನ್ನ ಸಂಗೀತದ ಹುಚ್ಚನ್ನ  ಅವಳಿಗೆ ಹಚ್ಚಿದೀಯ. ನಿನ್ನ ಪ್ರೋತ್ಸಾಹ ಇಲ್ಲದಿದ್ರೆ ಅವಳೆಲ್ಲಿ ಕಲೀತಾ ಇದ್ದಳು. ಅವಳು ಹಾಡೋದನ್ನ ಕೇಳೋದಕ್ಕೆ ನನಗೂ ಇಷ್ಟಾನೇ..... (ನಿಟ್ಟುಸಿರು ಬಿಡುತ್ತಾ) ಆದ್ರೆ  ಏನೂ ಮಾಡೋದು, ಸಂಗೀತ ಅವಳಿಗೆ ಮದುವೆ ಮಾಡೋದಿಲ್ವಲ್ಲಾ......
ಮೌಲ್ವಿ : ಯಾಕೆ ಯೋಚ್ನೆ ಮಾಡ್ತೀಯಾ. ಅಲ್ಹಾ ಯಾವತ್ತೂ ಬಡವರ ಕೈ ಬಿಡಲ್ಲ. ನಮ್ಮ ಬೇಟಿಗೆ ಬಂದು ಒಳ್ಳೆ ಗಂಡು ಸಿಕ್ಕೇ ಸಿಗುತ್ತೆ. ಮದುವೆ ಆಗೇ ಆಗುತ್ತೆ. 
ನ್ಯಾ. ಶಾಸ್ತ್ರಿ : ನೀನು ಹರಸಿದ ಹಾಗೇ ಆಗ್ಲಿ. ಈ ಜೀವ ಹೋಗೋದ್ರೊಳಗೆ ಅವಳ ಮದುವೆ ಆಗ್ಬಿಟ್ರೆ ಸಾಕು.
ಮೌಲ್ವಿ : ಛಿ, ಏನು ಮಾತು ಅಂತ ಆಡ್ತೀಯಾ
ನ್ಯಾ. ಶಾಸ್ತ್ರಿ : (ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ) ಅವಳಿಗೋಸ್ಕರಾನೆ ನಾನು ಜೀವ ಹಿಡಿದುಕೊಂಡಿದ್ದೀನಿ. ತಾಯಿ ಇಲ್ಲದ ತಬ್ಬಲಿ. ಬೆನ್ನಿನ ಹಿಂದೆ ಮುಂದೆ ಯಾರೂ ಇಲ್ಲ.
ಮೌಲ್ವಿ : ಹುಂ. ಒಂದು ರೀತೀಲಿ ನಾವಿಬ್ಬರದೂ ಒಂದೇ ಕಥೆ. ನೀನು ಮಗಳಿಗೋಸ್ಕರ ಜೀವ ಹಿಡ್ಕೊಂಡಿದೀಯ, ನಾನು ಹಜ್ ಯಾತ್ರೆಗೆ ಜೀವ ಹಿಡ್ಕೊಂಡಿದೀನಿ.
ಮೌಲ್ವಿ : ಇರಲಿ ಬಿಡು. ಹುಂ. ನಾನು ಯಾರನ್ನೋ ನೋಡಬೇಕು. ರಂಗಪ್ಪ ಹಳೇ ಬಾಕಿ ಕೊಡ್ತೀನಿ ಅಂದಿದಾನೆ. ಈ ಸಲ ಬೆಳೆ ಚೆನ್ನಾಗಿ ಆಗಿದ್ರೆ ಆಗ್ಲೇ ಹೋಗ್ತಿದ್ದೆ. (ಆಕಾಶ ನೋಡುತ್ತಾ) ಆದ್ರೆ, ಮಳೆ ಬರೋ ಹಾಗಿಲ್ಲ. ಸರಿ, ನಾ ಹೊರಟೆ.
(ಮೌಲ್ವಿ ಹೊರಡುತ್ತಾರೆ)
ದೃಶ್ಯ-4
(ಹಳ್ಳಿಯ ಹೋಟೆಲ್. ಇಬ್ಬರು ಯುವಕರು. ಇಸ್ಮಾಯಿಲ್, ಮಹೇಶ್-ಟೀ ಕುಡಿಯುತ್ತಾ ಕುಳಿತಿದ್ದಾರೆ. ಒಂದಿಬ್ಬರು ಟೀ ಕುಡಿಯುತ್ತಾ, ಬೀಡಿ ಸೇದುತ್ತಾ ಕುಳಿತಿದ್ದಾರೆ. ಅಲ್ಲಿಗೆ ಕೃಷ್ಣ ಬರುತ್ತಾನೆ.)
ಇಸ್ಮಾಯಿಲ್: ಹೋ, ಬಾರೋ ಕೃಷ್ಣ ಬೆಂಗ್ಳೂರಿಂದ ಯಾವಾಗ್ ಬಂದ್ಯೋ?
ಕೃಷ್ಣ : ರಾತ್ರಿ ಬಂದೆ.
ಮಹೇಶ್ : ಭಟ್ರೆ, ನಮ್ಮ ಕೃಷ್ಣಂಗೆ ಟೀ ಕೊಡಿ. 
ಕೃಷ್ಣ : ದಾಸಪ್ಪನವರ ಹಾಡು ಕೇಳಿ ಬಹಳ ದಿನಗಳಾಗಿತ್ತು.
ಕೃಷ್ಣ : ನಮ್ಮ ಭಟ್ರ ಟೀ ಕುಡ್ದು ಬಹಳ ದಿನ ಆಗಿತ್ತು. ಇಸ್ಮಾಯಿಲ್, ನಮ್ಮ ವಾಲಿಬಾಲ್ ಟೀಮ್ ಹೇಗಿದೆ. (ಇಸ್ಮಾಯಿಲ್ ತಲೆ ಕೆಳಗೆ ಹಾಕುವನು)
ಭಟ್ರು : (ಟೀ ಕೊಡುತ್ತಾ) ಚೆನ್ನಾಗಿದೀಯಾ, ಕೃಷ್ಣ.
ಕೃಷ್ಣ : ಚೆನ್ನಾಗಿದ್ದೀನಿ ಭಟ್ರೆ.
ಮಹೇಶ್ : ಕೃಷ್ಣ, ಈ ಸಲ ಟೂರ್ನಮೆಂಟ್‍ನಲ್ಲಿ ಫೈನಲ್‍ನಲ್ಲಿ ಸೋತುಬಿಟ್ವಿ.
ಇಸ್ಮಾಯಿಲ್: ಯುಗಾದಿ ಹಬ್ಬಕ್ಕೆ ಮಾತ್ರ ಬಿಡಬಾರದು. ಏನಾದ್ರು ಮಾಡಿ ಗೆಲ್ಲಲೇ ಬೇಕು. ಕೃಷ್ಣ, ನೀನು ಆ ಟೈಮಿಗೆ ಬರ್ತೀಯಲ್ಲಾ.
ಕೃಷ್ಣ : ಮತ್ತೇ, ಬಂದೇ ಬರ್ತೀನಿ.
ಇಸ್ಮಾಯಿಲ್ : ಹಾಂಗಾದ್ರೆ, ಪ್ರಾಕ್ಟೀಸ್ ಶುರು ಮಾಡೇ ಬಿಡೋಣ.
ಮಹೇಶ್ : ಸರಿ ಮತ್ತೇ. ಸಾಯಂಕಾಲಾನೇ ಎಲ್ಲಾ ಸೇರ್ಬೇಕು ಅಂತ ಹೇಳ್ಬಿಡು.
(ಅಷ್ಟರಲ್ಲಿ ಮೌಲ್ವಿ ಬರುತ್ತಾರೆ)
ಕೃಷ್ಣ : ನಮಸ್ಕಾರ, ಮೌಲ್ವಿ ಸಾಹೇಬರಿಗೆ
ಮೌಲ್ವಿ : ಅರೆ, ಕೃಷ್ಣಾ, ಯಾವಾಗ ಬಂದೇ ಬೇಟಾ.
ಕೃಷ್ಣ : ರಾತ್ರಿ ಬಂದೆ. ಚೆನ್ನಾಗಿದ್ದೀರಾ?
ಭಟ್ರು : ನಮ್ಮ ಮೌಲ್ವಿ ಸಾಹೇಬರಿಗೆ ಹಜ್ ಯಾತ್ರೆ ಒಂದು ಬಿಟ್ಟರೆ ಎಲ್ಲವೂ ಚೆನ್ನಾಗೇ ಇದೆ. (ಎಲ್ಲರೂ ನಗುವರು)
ಮೌಲ್ವಿ : ನಿಮಗೆಲ್ಲಾ ನಗು. ಅಲ್ಲಾ, ಮುಸಲ್ಮಾನನಾಗಿ ಹುಟ್ಟಿದ ಮೇಲೆ ಹಜ್ó ಯಾತ್ರೆ ಮಾಡ್ದೇ ಹೋದ್ರೆ, ಏನ್ ಪುಣ್ಯ ಬರುತ್ತೆ.
ಒಬ್ಬ : ಅದೇನೋ ಸರಿ, ಆದ್ರೆ ಹಜ್óಗೆ ಹಣ ಸೇರ್ಸೋ ಆತುರದಲ್ಲಿ ತಿನ್ನದೆ ಸತ್ತು ಹೋದ್ರೆ ಹೇಗೆ ಅಂತ, (ಎಲ್ಲರೂ ನಗುವರು)
ಮೌಲ್ವಿ : (ಸ್ವಲ್ಪ ಭಯದಿಂದ) ಇಲ್ಲ, ಇಲ್ಲ, ಹಜ್ó ಯಾತ್ರೆ ಮಾಡ್ದೆ ಸಾಯೋದಿಲ್ಲ, ಈ ಸಲ ಬೆಳೆ ಚೆನ್ನಾಗಿ ಬಂದ್ರೆ, ಈ ವರ್ಷಾನೆ ಹೋಗ್ತೀನಿ. ಏನ್ ಮಾಡೋದು? ಅಲ್ಹಾನ ಇಚ್ಛೆ ಏನಿದೆಯೋ? ಅವನಿಗೆ ಬೇಕೂ ಅಂದಾಗ ಕರೆಸ್ಕೊಳ್ತಾನೆ.
ಇನ್ನೊಬ್ಬ: ಅಲ್ಲಾ ಮೌಲ್ವಿಜೀ, ಈಗ ಹಜ್ ಗೆ ಹೋಗ್ದೇ ಇದ್ರೆ ಏನಾಗುತ್ತೆ? ಎಲ್ರೂ ಹೋಗೇ ಹೋಗ್ತಾರ!
ಮೌಲ್ವಿ: ಆ ಪ್ರಶ್ನೆನೇ ಇಲ್ಲಾ, ಬೇರೆಯವ್ರ ಕಥೆ ಏನಾದ್ರೂ ಆಗ್ಲಿ. ನನಗಂತೂ ಹಜ್ಜಿಗೆ ಹೋಗೋದೇ ಕಡೆ ಆಸೆ. ನಿಮಗೆಲ್ಲಾ ಕಾಶಿ ಹೇಗೋ, ಹಾಗೆ ನಮಗೆ ಹಜ್
ಭಟ್ರು : ಕಾಶೀ, ಹಜ್ ಒಂದೇ ಕಡೆ ಇದ್ದಿದ್ರೆ, ನಮ್ಮ ಶಾಸ್ತ್ರಿಗಳು, ಮೌಲ್ವಿ ಸಾಹೇಬ್ರು ಒಟ್ಟಿಗೆ ಪ್ರಯಾಣ ಬೆಳೆಸ್ತಾ ಇದ್ರೋ ಏನೋ. (ಎಲ್ಲರೂ ನಗುವರು)
ಒಬ್ಬ : ಅಂದಂಗೆ, ಶಾಸ್ತ್ರಿಗಳ ಮಗಳಿಗೆ ನಾಳೆ ನಿಶ್ಚಿತಾರ್ಥವಂತೆ.
ಮೌಲ್ವಿ : ಹೌದು, ಹುಡುಗ ಎಷ್ಟು ಒಳ್ಳೆಯವನು. ಬುದ್ಧಿವಂತ. ಪಾಪ, ಶಾಸ್ತ್ರಿ ಇದಕ್ಕೋಸ್ಕರಾನೇ ಜೀವ ಹಿಡ್ಕೊಂಡಿದ್ದ. ಎಲ್ಲಾ ಅಲ್ಹಾನ ದಯೆ.
ಭಟ್ರು : ಒಳ್ಳೇ ಹುಡುಗಿ. ಒಳ್ಳೇ ಕಡೆ ಸೇರಿದ್ರೆ ನಮಗೂ ಸಂತೋಷ.
ಮೌಲ್ವಿ : ಹಾಂ. ನಾನಿನ್ನು ಹೊರಡ್ತೀನಿ. (ಮೌಲ್ವಿ ಹೊರಡುವರು. ಹುಡುಗರೂ ಹೊರಡುವರು)
(ಸ್ವಗತ) ರಂಗಪ್ಪ ದುಡ್ಡು ಕೊಟ್ಟು, ಬೆಳೆ ಚೆನ್ನಾಗಿ ಬಂದ್ಬಿಟ್ರೆ ಸಾಕು. ಹಜ್óಗೆ ಹೋಗ್ಬಹುದು. ಆದ್ರೆ ಮಳೆ ಬರದೇ ಹೋದ್ರೆ ಏನ್ ಮಾಡೋದು. ಇಲ್ಲ, ಇಲ್ಲ. ಮಳೆ ಬಂದೇ ಬರುತ್ತೆ. ನನ್ ಮರದಲ್ಲಿ ಹೂ ಬಿಟ್ಟೇ ಬಿಡುತ್ತೆ. ನಾನು ಹಜ್ ಗೆ ಹೋಗೇ ಹೋಗ್ತಿನಿ.
ಹಾಡು: ಬರುವನು ವಸಂತ ತರುವನು ಸಂತಸ
ಒಣಗಿದ ರೆಂಬೆಗೆ ಚಿಗುರನು ತುಂಬುತ
ಬಾಡಿದ ಮುಖದೊಳು ಚಿಮ್ಮಿಸಿ ಸುಹಾಸ || ಬರುವನು ||
ದೃಶ್ಯ-5
(ಶಾಸ್ತ್ರಿಗಳ ಮನೆಯ ಮುಂಭಾಗ ನಿಶ್ಚಿತಾರ್ಥದ ಸಂಭ್ರಮ. ಮೌಲ್ವಿ, ಶಾಸ್ತ್ರಿಗಳು ಹೊರಗೆ ಕುಳಿತಿದ್ದಾರೆ. ಹುಡುಗರು ಓಡಾಡುತ್ತಿದ್ದಾರೆ)
ಕಾತ್ಯಾಯಿನಿ: (ಮೌಲ್ವಿಗೆ) ಹಣ್ಣು, ಎಲೆ ಅಡಿಕೆ ತಗೊಳ್ಳಿ.
ಮೌಲ್ವಿ : (ತೆಗೆದುಕೊಳ್ಳುತ್ತಾ) ಕುಳಿತಿಕೊ ಬೇಟಿ. ಇನ್ನೆಷ್ಟು ದಿನ ಇಲ್ಲಿರ್ತೀಯಾ?
ಕಾತ್ಯಾ: ಯಾಕೆ, ಬೇಗ ಕಳಿಸಬೇಕು ಅಂತಾನಾ?
ಮೌಲ್ವಿ : ಛೆ, ಛೆ, ಛೆ! ಇಲ್ಲಾ ಬೇಟಿ. ನೀನು ಹೋದ ಮೇಲೆ ಹೆಂಗೆ ಕಾಲ ಕಳೆಯೋದು ಅಂತಾನೆ ಯೋಚ್ನೆ. ಅದ್ರಲ್ಲೂ ಸಂಗೀತ ಕೇಳೋಕೆ ಯಾರ ಹತ್ತಿರ ಹೋಗಲಿ. ಎಲ್ಲಾ ಬಿಕೋ ಅನ್ಸುತ್ತೆ.
ಕಾತ್ಯಾ : (ಗದ್ಗದಿತಳಾಗಿ) ಅಲ್ಲಿಗೆ ಹೋದ ಮೇಲೆ ಸಂಗೀತ ಮುಂದುವರೆಸೋ ನಂಬಿಕೇನೇ ಇಲ್ಲ.
ಮೌಲ್ವಿ : ನನಗೆ ತುಂಬಾ ಕೇಳ್ಬೇಕು ಅನ್ಸಿದಾಗ ನಾನೇ ಅಲ್ಲಿಗೆ ಬಂದ್ಬಿಡ್ತೀನಿ.
(ಅಷ್ಟರಲ್ಲಿ ಹುಡುಗ, ಅವನ ತಂದೆ-ತಾಯಿ ಹೊರಡಲೆಂದು ಹೊರಕ್ಕೆ ಬರುವನು)
ನಾರಾಯಣಾಚಾರ್: ನಾವಿನ್ನು ಬರ್ತೀವಿ. ಸಮಯ ಆಯ್ತು. (ಮೌಲ್ವಿಗೆ) ನಮಸ್ಕಾರ (ಮೌಲ್ವಿ ಪ್ರತಿ ನಮಸ್ಕಾರ ಮಾಡುವರು) ಹಾಂ, (ಶಾಸ್ತ್ರಿಗೆ) ಸ್ವಲ್ಪ ಈ ಕಡೆ ಬನ್ನಿ. ನಾನು ಹೇಳಿದ್ದೆಲ್ಲಾ ಜ್ಞಾಪಕ ಇದೆಯೆಲ್ಲಾ? (ಅವರಿಬ್ಬರೂ ಮಾತನಾಡುತ್ತಾರೆ, ಎಲ್ಲರೂ ಹೊರಟ ಮೇಲೆ ಶಾಸ್ತ್ರಿಗಳು ಸ್ವಲ್ಪ ಚಿಂತಿತರಾಗಿರುವಂತೆ ಕಾಣುತ್ತಾರೆ)
ಕಾತ್ಯಾ: ಅಪ್ಪಾಜಿ ನಾನು ಒಳಗೆ ಹೋಗಿರ್ತೀನಿ. (ಕಾತ್ಯಾ ಒಳಗೆ ಹೋಗುವಳು)
ಮೌಲ್ವಿ: ಏನ್ ಶಾಸ್ತ್ರಿ, ಯೋಚ್ನೆ ಮಾಡ್ತಿದಿಯಾ. ಮಗಳು ಹೊರಟು ಹೋಗ್ತಾಳಂತ?
ಶಾಸ್ತ್ರಿ : (ನಿಟ್ಟುಸಿರು ಬಿಡುತ್ತಾ) ಚಿನ್ನ, ವಾಚು, ಸರ, ಬಟ್ಟೆ, ಎಲ್ಲಾ ಕೊಟ್ಟು, 20,000 ಹಣದ ಗಂಟು ಕೊಡ್ಬೇಕು. ಮದುವೆಯೇನೊ ಯುಗಾದಿ ಆದ ಮೇಲೆ. ಆದ್ರೆ, ಹೇಗಪ್ಪಾ ಎಲ್ಲಾನು ಹೊಂದಿಸೋದು ಅನ್ನೋದೆ ಯೋಚ್ನೆ ಆಗಿದೆ.
ಮೌಲ್ವಿ : ಯೋಚ್ನೆ ಮಾಡಿದ್ರೆ ಆಯ್ತದಾ? ಹುಟ್ಸಿದ್ ದೇವರು ಹುಲ್ ಮೇಯಿಸ್ತಾನಾ? ಎಲ್ಲಾ ಆಯ್ತದೆ ಬಿಡು.
ಶಾಸ್ತ್ರಿ : ಹಾಗೆ ಅಂದ್ಕೊಂಡು ಕುಳಿತ್ರೆ ಆಗುತ್ತಾ?
ಮೌಲ್ವಿ : ಯೋಚನೆ ಮಾಡ್ತಾ ಇದ್ರೆ ಆಯ್ತದಾ? ನೀನು ಹಿಂಸೆ ಮುಖ ಸಪ್ಪೆ ಮಾಡಿ ಕುಳಿತ್ರೆ, ಬೇಟಿ ಏನು ಅಂದ್ಕೊಳ್ತಾಳೆ.
ಶಾಸ್ತ್ರಿ : ವರದಕ್ಷಿಣೆ ವಿಷಯ ಅವಳಿಗಿನ್ನೂ ತಿಳಿಸೇ ಇಲ್ಲ.
ಮೌಲ್ವಿ : ಬೇಡ ಬಿಡು. ಆ ಮಗೂ ತಲೇಗ್ಯಾಕೆ ಯೋಚ್ನೆ ತುಂಬೋದು. ಹಾಂ. ನಾನಿನ್ನು ಹೊರಡ್ತೀನಿ. ಕೆರೆಗೆ ನೀರು ಬಿಟ್ಟಿದ್ದಾರಂತೆ. ಗದ್ದೆ ಕಡೆ ಹೋಗಿ ನೀರು ಬಿಟ್ಟು ಬಿರ್ತೀನಿ.
(ಮೌಲ್ವಿ ಹೊರಡುವನು)
ದೃಶ್ಯ-6
(ಹಿನ್ನೆಲೆಯಲ್ಲಿ ಮನೆ ಹಿರಿಯನ ಧ್ವನಿ)
ಧ್ವನಿ : ಹೀಗೇ ಐದಾರು ತಿಂಗಳು ಕಳೆಯಿತು. ಮೌಲ್ವಿಗೆ ತಕ್ಕ ಮಟ್ಟಿಗೆ ಬೆಳೆಯಾಗಿತ್ತು. ಅವರಿಗೆ ಕೊಡಬೇಕಾದ ಹಣ ಕೊಟ್ಟಿದ್ದ. ಆ ದಿನ ಬೆಳೆ ಮಾರಿದ ಹಣ ಮೌಲ್ವಿಯ ಕೈ ಸೇರಿತ್ತು. ಮೌಲ್ವಿ ಎಲ್ಲಾ ಹಣವನ್ನು ಎಣಿಸಿ ನೋಡಿದರೆ ಹಜ್ó ಯಾತ್ರೆಗೆ ಬೇಕಾಗುವಷ್ಟು ಹಣ ಸೇರಿತ್ತು. ಮೌಲ್ವಿಯ ಸಂತೋಷಕ್ಕೆ ಪಾರವೇ ಇಲ್ಲ. ಮತ್ತೆಮತ್ತೆ ಹಣ ಎಣಿಸಿದರು, ಕುಣಿದರು, ನಿಂತೆಡೆ ನಿಲ್ಲಲಾರದೇ ಹೋದರು.
ಹಾಡು:
(ಈ ಸಂತೋಷದ ವಿಷಯವನ್ನು ತಿಳೀಸಲು ಶಾಸ್ತ್ರಿಗಳ ಮನೆಗೆ ಓಡೋಡಿ ಬಂದರು. ಆದರೆ ಮನೆಯ ಮುಂದೆ ವಿಚಿತ್ರ ಮೌನವಿದೆ. ಒಳಗಡೆ ಏನೋ, ಜೋರಾಗಿ ಮಾತನಾಡುವ ಶಬ್ದ. ಮೌಲ್ವಿಗೆ ಭಯವಾಯಿತು ಏನಾಗಿದೆಯೋ ಎನ್ನುತ್ತಾ...)
(ಧ್ವನಿ ನಿಲ್ಲುತ್ತದೆ. ರಂಗದ ಮೇಲೆ ಬೆಳಕು ಮೌಲ್ವಿ ಬಾಗಿಲ ಹತ್ತಿರ ನಿಂತು)
ಮೌಲ್ವಿ : ಬೇಟಿ, ಬೇಟಿ (ಜೋರಾಗಿ) ಬೇಟಿ, ಶಾಸ್ತ್ರಿ....
(ಕಾತ್ಯಾಯಿನಿ ಕಣ್ಣೀರು ಸುರಿಸುತ್ತಲೇ ಬಿಡುವಳು)
ಅರೆ, ಏನಾಯ್ತು ಬೇಟಿ, ಯಾಕ್ ಅಳ್ತಿದೀಯಾ ಹೇಳು ಬೇಟಿ.
ಕಾತ್ಯಾ : ಅವರು, ವರದಕ್ಷಿಣೆ ಕೊಡ್ದೆ ಮದುವೇನೆ ಆಗಲ್ಲ ಅಂತೀದಾರೆ.
ಮೌಲ್ವಿ : ಹಾಂ, ಛೆ ಇದೇನಾಯ್ತು.
(ಅಷ್ಟರಲ್ಲಿ ನಾರಾಯಣಾಚಾರ್ ಹೊರಗೆ ಬರುತ್ತಾರೆ. ಮುಖ ಉಗ್ರಗೊಂಡಿದೆ. ಶಾಸ್ತ್ರಿಗಳು ದೈನ್ಯತೆಯಿಂದ ನಿಲ್ಲಿಸೋದಿಕ್ಕೆ ಪ್ರಯತ್ನ ಮಾಡ್ತಿದಾರೆ)
ನಾರಾಯಣಾಚಾರ್: (ಖಂಡಿತವಾದ ಸ್ವರದಲ್ಲಿ) ನಾನು ಕಟ್ಟುನಿಟ್ಟಿನ ಮನುಷ್ಯ. ಮಾತು ಅಂದ್ರೆ ಮಾತು. ಮದುವೆಗೆ ಇನ್ನೆರಡು ದಿನ ಇದೆ. ಇನ್ನೂ ಅಡ್ಜೆಸ್ಟ್ ಆಗಲ್ಲ ಅಂತಾನೆ ಇದೀರಲ್ರಿ.
ಶಾಸ್ತ್ರಿ : ದಯವಿಟ್ಟು ಸಮಾಧಾನ ಮಾಡ್ಕೊಳ್ಳಿ. ಬರಬೇಕಾದ ದುಡ್ಡು ಬಂದಿಲ್ಲ. ಮದುವೆಗೆ ಎಲ್ಲಾ ವ್ಯವಸ್ಥೆನೂ ಮಾಡಿದ್ದೀನಿ. ನಾನೇ ಖಂಡಿತ ಕೊಡ್ತೀನಿ. 
ನಾರಾಯಣಾಚಾರ್ : ಅದೆಲ್ಲಾ ಸಾಧ್ಯ ಇಲ್ಲ. ಏನೋ ಕಷ್ಟ ಅಂತ ನಾನೂ ಇಲ್ಲಿಯವರೆಗೆ ಸುಮ್ಮನೆ ಇದ್ದೆ. ನೀವು ಈ ರೀತಿ ಜನ ಅಂತ ಗೊತ್ತಿರಲಿಲ್ಲ.
ಶಾಸ್ತ್ರಿ : ಇಲ್ಲ. ನಾನು ಮೋಸ ಮಾಡಲ್ಲ. ಖಂಡಿತ ಕೋಡ್ತೀನಿ. ಮದುವೆ ನಿಂತುಹೋದ್ರೆ ನನ್ನ ಮಾನ, ಮರ್ಯಾದೆ ಮೂರು ಕಾಸಿಗೆ ಉಳಿಯೋಲ್ಲ. ದಯವಿಟ್ಟು ಕರುಣೆ ತೋರಿಸಿ.
ನಾರಾಯಣಾಚಾರ್: ಅದಕ್ಕೆ ನಾನೇನ್ರಿ ಮಾಡ್ಲಿ. ಅಷ್ಟು ಮರ್ಯಾದಸ್ಥರಾಗಿದ್ದರೆ ವರದಕ್ಷಿಣೆ ಕೊಟ್ಟು ಮಾತಾಡಬೇಕಿತ್ತು. ನಿಮ್ಮ ಜೊತೆ ಮಾತನಾಡುತ್ತಾ ಇರೋದಿಕ್ಕೆ ಸಮಯ ಇಲ್ಲ. ನಮ್ಮ ಹುಡುಗನಿಗೇನೂ ಬರ ಇಲ್ಲ.
ಶಾಸ್ತ್ರಿ : ಅಯ್ಯೋ, ದಯವಿಟ್ಟು ಹಾಗೆ ಮಾಡ್ಬೇಡಿ. ನಾನು ನೇಣು ಹಾಕೋ ಬೇಕಾಗುತ್ತೆ. ನಿಮ್ಮ ಕಾಲು ಕಟ್ಕೊಳ್ತೀನಿ.
ಕಾತ್ಯಾ : ಅಪ್ಪಾಜಿ, ಬೇಡ ಅಪ್ಪಾಜಿ. ಈ ಮದುವೆ ನಿಂತುಹೋದ್ರು ಸರಿಯೇ. ನೀನು ಯಾರ ಕಾಲನ್ನೂ ಹಿಡಿಬೇಡ.
ಶಾಸ್ತ್ರಿ : (ಕೋಪದಿಂದ ಗದರಿಸುವನು) ನೀನು ಸುಮ್ಮನಿರಮ್ಮ.
ಮೌಲ್ವಿ : ಬೇಟಿ ನೀನು ಒಳಗಡೆ ಹೋಗು. (ನಾರಾಯಣಾಚಾರ್ ಕಡೆ ನೋಡಿ) ಸ್ವಾಮಿ. ಅವರು ಬಡವರು. ಆದ್ರೆ ಸತ್ಯಕ್ಕೆ ಹೆದರೋವ್ರು. ಕಷ್ಟದಲ್ಲಿರೋದ್ರಿಂದ ಏನೋ ಹಣ ಹೊಂದಿಸಿಕೊಳ್ಳೋದಿಕ್ಕೆ ಆಗಿಲ್ಲ. ಮದುವೆ ನಿಲ್ಲೋ ಮಾತು ಬೇಡ.
ನಾರಾಯಣಾಚಾರ್ : ನೋಡ್ರಿ ನಾನೇನು ಭಿಕ್ಷೆ ಬೇಡೋಕೆ ಬಂದಿಲ್ಲ. ಕೊಟ್ಟ ಮಾತನ್ನು ಉಳಿಸ್ಕೋ ಬೇಕ್ರಿ.
ಮೌಲ್ವಿ : ಆ ಮಗು ಮುಖ ನೋಡಿ ಮದುವೆ ನಿಂತು ಹೋದ್ರೆ ಅವಳ ಭವಿಷ್ಯ ಏನು?
ನಾರಾಯಣಾಚಾರ್ : ಇಷ್ಟೆಲ್ಲಾ ಮಾತಾಡ್ತೀರಲ್ಲಾ, ನೀವು ಕೊಡ್ತೀರೇನ್ರಿ.
(ಎಲ್ಲರೂ ಕ್ಷಣಕಾಲ ಮಂಕಾಗುವರು. ಮೌಲ್ವಿಯ ಮುಖ ವಿವರ್ಣವಾಗುವುದು. ಒಮ್ಮೆ ಕಾತ್ಯಾಯಿನಿಯ ಮುಖವನ್ನು ಮತ್ತೊಮ್ಮೆ ದೂರದಲ್ಲೆಲ್ಲೊ ದೃಷ್ಟಿಯಿಟ್ಟು ನೋಡುವನು)
ಕಾತ್ಯಾ : ಯಾರೂ ಕೊಡೋದು ಬೇಡ. ಹಣಕ್ಕಾಗಿಯೇ ಮದುವೆ ಅನ್ನೋದಾದ್ರೆ, ನನಗೆ ಈ ಮದುವೆ ಬೇಡವೇ ಬೇಡ.
ಮೌಲ್ವಿ : (ಕೋಪದಿಂದ) ಬೇಟಿ! (ನಂತರ ಮೃದುವಾಗಿ) ಅªರು ಹೇಳೋದ್ರಲ್ಲೂ ಸತ್ಯ ಇದೆ ಬೇಟಿ. ಇಷ್ಟೊಂದು ಮಾತಾಡೋನು ನಾನು ಯಾಕೆ ಕೊಡಬಾರದು. (ಜೇಬಿನಿಂದ ದುಡ್ಡು ತೆಗೆಯುತ್ತಾ) ತೆಗೆದುಕೊಳ್ಳಿ. ಇದರಲ್ಲಿ 15,000 ಇದೆ. ಉಳಿದ ಹಣವನ್ನು ನಾಳೆ ಕೊಡ್ತೀನಿ.
ಕಾತ್ಯಾ-ಶಾಸ್ತ್ರಿ : ಬೇಡ, ಬೇಡ.
ಕಾತ್ಯಾ : ನೀವ್ಯಾಕೆ ಹಣ ಕೊಡಬೇಕು. ನನ್ನ ಸಂತೋಷಕೋಸ್ಕರ ನಿಮ್ಮ ಸಂತೋಷಾನ ಬಲಿ ಕೊಡಲಾರೆ.
ಮೌಲ್ವಿ : ಅರೆ ಬೇಟಿ ! ನನ್ನ ಸಂತೋಷಾನ ಎಲ್ಲಿ ಬಲಿ ಕೊಟ್ಟೆ.
ಕಾತ್ಯಾ : ಬೇಡ, ಅದು ನಿಮ್ಮ ಹಜ್ ಯಾತ್ರೆ ಹಣ. ನಿಮ್ಮ ಜೀವನದ ಕಡೇ ಆಸೆ.
ಮೌಲ್ವಿ : ಬೇಟಿ, ಹಜ್ ಹೋಗೋ ಪುಣ್ಯಕ್ಕಿಂತ, ನಿನ್ನ ಭವಿಷ್ಯ ಕಡಿಮೇನಾ. ಹಾಂ. ಹಾಂ. (ನಾರಾಯಣಾಚಾರ್‍ಗೆ) ನೀವು ತಗೊಳ್ಳಿ. ಚಿಕ್ಕ ಹುಡುಗಿ, ಏನೋ ಮನಸ್ಸಿಗೆ ಬಂದದ್ದೆಲ್ಲಾ ಹೇಳುತ್ತೆ. (ನಾರಾಯಣಾಚಾರ್ ಹಣ ತೆಗೆದುಕೊಳ್ಳುವನು. ಅದೇ ಸಮಯಕ್ಕೆ ಮದುಮಗ ಅಲ್ಲಿಗೆ ಬರುತ್ತಾನೆ). ಮುಂದಿನ ಕಾರ್ಯಗಳು ಬೇಗ ಆಗ್ಲಿ, ಶಾಸ್ತ್ರಿ ನಡಿ. ಮಾಡೋದಿಕ್ಕೆ ಬೇಕಾದಷ್ಟು ಕೆಲಸ ಇದೆ.
ಶಾಸ್ತ್ರಿ : ಬೇಡ, ಇದೆಲ್ಲಾ ಯಾಕೆ?
ಮೌಲ್ವಿ : (ಗದರಿಸುತ್ತಾ) ನಡೆಯಯ್ಯಾ, ನೀನು ಚಿಕ್ಕ ಮಕ್ಕಳ ಥರ ಆಡ್ತೀಯಲ್ಲಾ.
ಮದುಮಗ : ಬೇಡ ಮೌಲ್ವಿಯವರೇ. (ಎಲ್ಲರೂ ಆಶ್ಚರ್ಯದಿಂದ) ಅವನೆಡೆಗೆ ನೋಡುವರು. ಇನ್ನೊಬ್ಬರ ಆಸೆ, ಆಕಾಂಕ್ಷೆಗಳ ಸಮಾಧಿ ಮೇಲೆ ಸುಖ ಅನುಭವಿಸಬೇಕು ಅನ್ನೋ ಆಸೆ ನನಗಿಲ್ಲ. ಅಪ್ಪಾ, ಅವರ ದುಡ್ಡು ವಾಪಸ್ ಕೊಟ್ಬಿಡಿ.
ನಾರಾಯಣಾಚಾರ್ : ದೊಡ್ಡವರ ವಿಷಯದಲ್ಲಿ ನಿಂದೇನೋ ತಲೆಹರಟೆ. ಹೋಗೋ.
ಮೌಲ್ವಿ : ಬೇಟಾ. ನೀನೇನೂ ಯೋಚ್ನೆ ಮಾಡಬೇಡ. ನನ್ನ ಆಸೆ ನಿಜವಾಗ್ಲೂ ಇವತ್ತು ಪೂರ್ತಿಯಾಯಿತು.
ಮದುಮಗ : ಇಲ್ಲ ಮೌಲ್ವಿಯವರೇ, ನಾನು ಇಷ್ಟಪಟ್ಟಿದ್ದು ಹಣ ಅಲ್ಲ. ಕಾತ್ಯಾಯಿನಿಯನ್ನ.
ಮೌಲ್ವಿ : ತುಂಬ ಸಂತೋಷ, ತುಂಬಾ ಸಂತೋಷ ಬೇಟ. ಆ ಮಗೂನ ಚೆನ್ನಾಗಿ ನೋಡ್ಕೊ.
ಮದುಮಗ : ಕಾತ್ಯಾಯಿನಿ ನನಗೆ ಎಲ್ಲಾ ಹೇಳಿದಾಳೆ. ನಿಮ್ಮ ಹಜ್ó ಯಾತ್ರೆ ನಿಲ್ಲಿಸಿ, ನನ್ನ ಮದುವೆ ನಡೀಬೇಕು.
ಮೌಲ್ವಿ : ಅರೆ ಬೇಟಾ, ನನ್ನ ಹಜ್ ಯಾತ್ರೆ ಆಯ್ತು. ಇವತ್ತೊ ನಿಜವಾಗ್ಲೂ ನನ್ನ ಹಜ್ ಯಾತ್ರೆ ಆಯ್ತು. ಆದ್ರೆ ಬಹಳ ದೂರ ಹೋಗ್ದೆ, ಇಲ್ಲೇ ಮುಗಿಸ್ಬಿಟ್ಟ. ಇಂತ ಭಾಗ್ಯ ಯಾರಿಗಿದೆ.
ಮದುಮಗ : ಆದರೆ.........
ಮೌಲ್ವಿ : (ಸ್ವಲ್ಪ ಗಡುಸಾಗಿ) ಆದ್ರೆ ಗಿದ್ರೆ ಏನೂ ಇಲ್ಲ. ನನಗೆ ಒಂದೇ ಒಂದು  ಮಾತು ಕೊಡು. ಬೇಟಿನ ಚೆನ್ನಗಿ ನೋಡ್ಕೋ.
(ಮಧುಮಗನ ಕಣ್ಣಲ್ಲಿ ನೀರು. ಮೌಲ್ವಿಯ ಕೈ ಹಿಡಿದುಕೊಳ್ಳುತ್ತಾನೆ. ಏನೂ ಮಾತನಾಡುವುದಿಲ್ಲ)
ಮೌಲ್ವಿ : ಹಾಂ. ನಡೀರಿ, ನಡೀರಿ. ಮಾಡೋ ಕೆಲಸ ಬೇಕಾದಷ್ಟಿದೆ. ಶಾಸ್ತ್ರಿ, ನಡೀ ಯಾರ್ಯಾರಿಗೇ ಹೇಳ್ಬೇಕೋ ಹೇಳು ನಡೀ. ನಾನು ಮನೆಗೆ ಹೋಗಿ ಬರ್ತೀನಿ. (ಮೌಲ್ವಿ ಹೊರಡುವನು. ಮೌಲ್ವಿ ನಡಿಯುತ್ತಾ ಹೋಗುತ್ತಿರುತ್ತಾನೆ)
(ಸ್ವಗತ) ಹಾಯ್ ಅಲ್ಹಾ, ನಿನ್ನ ಮನಸ್ಸಲ್ಲಿ ಏನಿದೆಯೋ ಯಾರಿಗ್ಗೊತ್ತು..... ನನಗೆ ಆಗ್ತಾ ಇರೋ ಸಂತೋಷಾನಾ ತಡೆದುಕೊಳ್ಳೋಕೇ ಆಗ್ತಾ ಇಲ್ಲ. ಜೀವ ಹಗುರ ಆಗೋಗಿದೆ. ತೇಲಾಡೋ ಹಾಗಿದೆ. ಈ ಸಂತೋಷ ಹಜ್ ಗೆ ಹೋಗಿದ್ರೂ ಸಿಗ್ತಾ ಇರಲಿಲ್ವೋ ನೀನು! ಹಾಂ, ಇದೇ ನನ್ನ ಹಜ್ ಯಾತ್ರೆ. ಇದೇ ನನ್ನ ಹಜ್ ಯಾತ್ರೆ.
(ಮನೆ ಹತ್ತಿರ ಬರುತ್ತಾನೆ. ಮರದತ್ತ ಕಣ್ಣರಳಿಸಿ ನೋಡುತ್ತಾನೆ)
ಅರೆ! ನನ್ನ ಮರದ ತುಂಬಾ ಹೂವು.
ಹಾಡು:
(ರಂಗ ನಿಧಾನವಾಗಿ ಕತ್ತಲಾಗುತ್ತದೆ)

ದೃಶ್ಯ-7
(ಮನೆಯ ದೃಶ್ಯ. ಮನೆ ಹಿರಿಯ ಕನಸಿನಲ್ಲಿರುವಂತೆ ಕುಳಿತಿದ್ದಾನೆ. ಎಲ್ಲರ ಕಣ್ಣಲ್ಲೂ ನಿರು. ಫಾತಿಮಾ ಒಂದು ಮೂಲೆಯಲ್ಲಿ ಕುಳಿತಿದಾಳೆ. ಪಕ್ಕದಲ್ಲಿ ರೆಹಮಾನ್, ರಘು ಒಂದಷ್ಟು ತಿಂಡಿ ಹಿಡಿದುಕೊಂಡು ಬರುತ್ತಾನೆ)
ರಘು : (ರೆಹಮಾನ್ ಬಳಿ ಬಂದು) ರೆಹಮಾನ್, ತಗೋ.
(ರೆಹಮಾನ್ ಒಮ್ಮೆ ತಿಂಡಿಯತ್ತ ನೋಡಿ, ತಲೆಕೆಳಗೆ ಹಾಕುತ್ತಾನೆ)
ಮನೆಹಿರಿಯ : ತಗೋಪ್ಪ, ಸಂಕೋಚ ಮಾಡ್ಕೋಬೇಡ.
ರಘು : ತಗೊಳ್ಳೋ. ಆಟ ಆಡುವಾಗ ನನ್ನ ಹತ್ತಿರ ಕಿತ್ಕೊಂಡು ತಿನ್ತಾ ಇದ್ದೆ. ನಮ್ಮನೆ ತಿಂಡಿ ತುಂಬಾ ಇಷ್ಟ ಅಂರತ.
(ಫಾತಿಮಾ, ರೆಹಮಾನ್ ಇಬ್ಬರೂ ಮಾತನಾಡುವುದಿಲ್ಲ. ರಘು ಅವನ ಕೈಹಿಡಿದುಕೊಂಡು ತಿಂಡಿಯನ್ನು ಕೈಗೆ ಹಾಕುತ್ತಾನೆ. ಅವನನ್ನು ಕರೆದುಕೊಂಡು ಹೋಗಿ, ಸ್ವಲ್ಪ ಬದಿಯಲ್ಲಿ ಕೂರಿಸುತ್ತಾನೆ. ತಾನೂ ಜೊತೆಯಲ್ಲಿ ಕುಳಿತು ಒಟ್ಟಿಗೆ ತಿಂಡಿ ತಿನ್ನುತ್ತಾನೆ. ಏನೋ ಹೇಳುತ್ತಾನೆ. ರೆಹಮಾನ್ ಮುಖದಲ್ಲಿ ನಗು ಕಾಣಿಸುತ್ತದೆ)

-  ಎಸ್.ಎನ್.ಸ್ವಾಮಿ


ಅನುವಾದಿತ ಕವಿತೆ - ಮಡಿದ ಯೋಧನನು ಮನೆಗೆ ತಂದರು ಅವರು

ಆಲ್ಫ್ರೆಡ್ ಟೆನ್ನಿಸನ್ ರವರ "ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್" (Home they brought her Warrior Dead) ಕವಿತೆಯ ಅನುವಾದ 


ಆಲ್ಫ್ರೆಡ್ ಟೆನ್ನಿಸನ್


ಮಡಿದ ಯೋಧನನು ಮನೆಗೆ ತಂದರು ಅವರು
ಮಡದಿ ಮೂರ್ಛಿತಳಾಗದೆ, ಚೀರಿ ರೋದಿಸದೆ
ಕುಳಿತು ಸುತ್ತಲೂ ಲಲನೆ ನುಡಿದರೂ
ಅಳದೆ ಇರದಿರೆ ಮಡದಿ ಮಡಿಯುವಳು||

ಮಧುರ ನುಡಿಗಳಿಂ ಹೊಗಳಿ ಯೋಧನ
ಮೆಚ್ಚಿ ಕರೆಯಲು ಯೋಗ್ಯನೀತನು
ನೈಜ ಗೆಳೆಯನು, ವೈರಿ ಮಾನ್ಯನು ಎಂದರೂ;
ಚಲಿಸಲೊಲ್ಲದೆ, ಮಡದಿ ಕುಳಿತಿರೆ ನುಡಿಯದೆ||

ಇರಲು ತಾಣದಿಂ ನಾರಿಯೋರ್ವಳು;
ವೀರನಲ್ಲಿಗೆ ಬಂದಳೂ,
ಮೊಗದ ಮರೆಯನು ತೆಗೆದಳಾದರೂ
ಮಡದಿ ಚಲಿಸದೆ ಅಳದಿರೇ||

ತೊಂಬತ್ತು ತುಂಬಿದ ದಾದಿಯೋರ್ವಳು
ಮಗುವ ತೊಡೆಯ ಮೇಲಿರಿಸಲು
ಬಿರುಗಾಳಿಯಂದದಿ ಮಡದಿ ಕಣ್ಣೀರೊಡೆಯಲು
ನುಡಿದಳಾಕೆಯು, “ಮಧುರ ಮಗುವೆ, ಬದುಕುವೆನು ನಿನಗಾಗಿಯೇ”।।


ಅನುವಾದ - ಗಂಗಾಧರಯ್ಯ ಜಿ

ಕಥೆ - ಚೆನ್ನಮ್ಮನ ನಿಷ್ಠೆ


ಚೆನ್ನಮ್ಮ ನಿಯತ್ತಿನ ಹೆಂಗಸು. ಬಂಗಾರದ ಕೆಲಸ ಮಾಡುವ ಸತ್ಯಮ್ಮನ ಮನೆಯಲ್ಲಿ ದಿನಾ ಪಾತ್ರೆ ಉಜ್ಜಿ, ನೆಲ ಒರೆಸಿ, ಬಟ್ಟೆ, ನೀರು, ಕಸ –ಒಂದಲ್ಲ, ಎರಡಲ್ಲ. ಅಂಗಡಿಗೆ ಹೋಗಿ ಬರೋದ್ರಿಂದ ಹಿಡಿದು ಅಟ್ಟದ ಧೂಳು ಹೊಡೆಯುವ ಎಲ್ಲಾ ಕೆಲಸಗಳನ್ನೂ ಚೆನ್ನಮ್ಮನೇ ಮಾಡುತ್ತಿದ್ದಳು. 

8 ಮಕ್ಕಳ ತಾಯಿಯಾದ ಅವಳು, ಅದರಲ್ಲಿ 4 ಮಕ್ಕಳ ಸಾವನ್ನು ಕಣ್ಣಾರೆ ನೋಡಿದ್ದ ನತದೃಷ್ಟೆ ಕೂಡ. ಯಾರ ಪ್ರೀತಿಯನ್ನೂ ಪಡೆದುಕೊಂಡು ಬಂದಿಲ್ಲದ ಅವಳಿಗೆ ಕುಡುಕ ಗಂಡನ ಹಿಂಸೆಯೂ ದಿನಚರಿಯಂತೆ ನಡೆಯುತ್ತಿತ್ತು. ಮೊದಲು ಒಂದು ಹೊತ್ತು ಊಟಕ್ಕೂ ಹೆಣಗಾಡುತ್ತಿದ್ದ ಚೆನ್ನಮ್ಮನಿಗೆ ಸತ್ಯಮ್ಮನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ, ಅವಳ ಹಸಿವಿನ ಬಾಧೆ ತೀರಿತು. ಮಕ್ಕಳು ಎರಡೊತ್ತು ತಿಂದು ಚೆನ್ನಗಾದವು. ಸತ್ಯಮ್ಮ ನೀಡುತ್ತಿದ್ದ ಹಳೆಯ ಬಟ್ಟೆಗಳು ಮಕ್ಕಳ ಮತ್ತು ಚೆನ್ನಮ್ಮನ ಮೈಮುಚ್ಚಿದವು. ಇದರಿಂದ ಚೆನ್ನಮ್ಮನ ನಿಷ್ಠೆ, ಶ್ರಮ ಸತ್ಯಮ್ಮನಿಗಾಗಿ ಇಮ್ಮಡಿಸಿತು. 
ಸತ್ಯಮ್ಮನೆ ಬರುಬರುತ್ತಾ ಚೆನ್ನಮ್ಮನ ಪ್ರಾಮಾಣಿಕತೆಗೆ ಬೆರಗಾಗಿ ಮನೆಯ ಜವಾಬ್ದಾರಿಯನ್ನು ಪೂರ್ಣವಾಗಿ ಕೊಟ್ಟುಬಿಟ್ಟು ದೇವರ ಮನೆಯಲ್ಲಿ ಪೂಜೆ, ಧ್ಯಾನವೆಂದು ಕೂರುತ್ತಿದ್ದಳು. ಒಮ್ಮೊಮ್ಮೆ ಎಲ್ಲಾ ಚೆನ್ನಮ್ಮನಿಗೆ ಬಿಟ್ಟು ತವರಿಗೆ ವಾರಗಟ್ಟಲೆ ಹೊರಟುಬಿಡುತ್ತಿದ್ದಳು. ವಂಚನೆ, ಸುಳ್ಳು, ಕಳ್ಳತನ ಏನೂ ಅದರಿಂದ ಚೆನ್ನಮ್ಮ ತನ್ನ ಒಡತಿಯ ನಂಬಿಕೆಗೆ ಅನುಗುಣವಾಗಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಳು. ಸತ್ಯಮ್ಮನ ಮಕ್ಕಳ ಪಾಲನೆಯನ್ನು ಹೆಚ್ಚಾಗಿ ಚೆನ್ನಮ್ಮನೇ ನೋಡಿಕೊಳ್ಳುತ್ತಿದ್ದಳು. 
ಇನ್ನು ಸತ್ಯಮ್ಮನ ಗಂಡ ಬಂಗಾರದ ಅಂಗಡಿಯ ವ್ಯವಹಾರದಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದನು. ಬೆಳಿಗ್ಗೆ ಚೆನ್ನಮ್ಮ ಮನೆಗೆ ಬಂದರೆ ನಿರುಮ್ಮಳನಾಗಿ ಅಂಗಡಿಗೆ ಹೊರಟುಬಿಡುತ್ತಿದ್ದನು. ಸಂಜೆ ಆತ ಬರುವವರೆಗೂ ಇದ್ದು, ಚೆನ್ನಮ್ಮ ಉಳಿದ ಅಡುಗೆ ತೆಗೆದುಕೊಂಡು ಹಿಂತಿರುಗುತ್ತಿದ್ದಳು. ಇವಳ ಈ ಮಾತ್ರದ ನೆಮ್ಮದಿಯನ್ನು ಸಹಿಸದ ನಾದಿನಿಯರು ಬೆಳಿಗ್ಗೆಯಿಂದ ರಾತ್ರಿವರೆಗೂ ‘ಇವಳಿಗೇನು ಅಲ್ಲಿ ಕೆಲಸ’ ಎಂದು ಜರೆದರೂ, ಅವಳ ನಡತೆ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿದರೂ, ಆ ನೋವನ್ನು ನುಂಗಿ ತನ್ನ ಮಕ್ಕಳ ಹಸಿವು ನೀಗಿಸಿದ ಆ ಮನೆಯ ಋಣವನ್ನು ಮರೆಯದೆ ತನ್ನ ಸರ್ವಸ್ವವೂ ಸತ್ಯಮ್ಮನಿಗಾಗಿಯೇ ಎಂದು ಭಾವಿಸಿದಳು. 
ಹೀಗಿರುವಾಗ ಒಂದು ದಿನ ಊರಿಗೆ ಹೊರಟಾಗ ಆಕೆಯ ಗಂಡ ಮನೆಯಲ್ಲಿ ಬಂಗಾರದ ತಾಳಿಬೊಟ್ಟುಗಳ ಲೆಕ್ಕ ಹಾಕಿ, ಹತ್ತತ್ತು ಬೊಟ್ಟುಗಳನ್ನು ಗಂಟು ಹಾಕಿ, ಅಲ್ಲೇ ರೂಮಿನ ಬೀರುವಿನಲ್ಲಿಟ್ಟು ಬೀಗ ಹಾಕಲು ಮರೆತು ಅಂಗಡಿಗೆ ಹೋದ. ಎಂದಿನಂತೆ ಚೆನ್ನಮ್ಮ ಕೆಲಸಕ್ಕೆ ಬಂದು ಹೋದಳು. ರಾತ್ರಿ ಮನೆಗೆ ಬಂದು ಬೀರುವಿಗೆ ಬೀಗ ಹಾಕದುದನ್ನು ನೋಡಿ ಗಾಬರಿಯಿಂದ ಮತ್ತೆ ತಾಳಿ ಬೊಟ್ಟುಗಳ ಗಂಟುಗಳನ್ನು ಎಣಿಸಿದ. ಅದರಲ್ಲಿ ಒಂದು ಗಂಟು ಕಾಣೆಯಾಗಿದ್ದುದ್ದನ್ನು ನೋಡಿ ಅವಾಕ್ಕಾದ. ರಾತ್ರಿಯೆಲ್ಲಾ ಚಿಂತಿಸಿ, ಮರುದಿನ ಚೆನ್ನಮ್ಮನನ್ನು ಅನುಮಾನದಿಂದ ಪ್ರಶ್ನಿಸಿದ. ತನಗೇನೂ ತಿಳಿದಿಲ್ಲವೆಂದು ಹೇಳಿದರೂ ಆತ ಪೂರ್ತಿ ನಂಬಲಾರದೆ ಹೋದ. ಕೊನೆಗೆ ‘ಹೋಗಲಿ ಬಿಡು ಅನ್ಯಾಯದಿಂದ ಸಂಪಾದಿಸಿದ ಸಂಪತ್ತು ಬಹು ಕಾಲ ನಿಲ್ಲದು’ ಎಂದುಬಿಟ್ಟ. 
ಇದನ್ನು ಕೇಳಿ ಅರಗಿಸಿಕೊಳ್ಳಲಾಗದ ಚೆನ್ನಮ್ಮ “ಸ್ವಾಮಿ ನಾನು ಬಡವಳೆ ನಿಜ. ಒಂದು ಹೊತ್ತಿನ ಊಟಕ್ಕೆ ಇನ್ನೊಬ್ಬರ ಮನೆ ಬಚ್ಚಲು ಗುಡಿಸುವೆನಾದರು ಅನ್ನ ನೀಡೋ ಮನೆಗೆ ಅನ್ಯಾಯ ಮಾಡೋವಷ್ಟು ಕೀಳು ಹೆಂಗಸು ನಾನಲ್ಲ. ಕಳ್ಳತನ ಮಾಡೊ ಬುದ್ಧಿ ಇದ್ದಿದ್ರೆ ನಿಮ್ಮನೆ ಮುಸುರೆ ಕೆಲಸಕ್ಕೆ ಯಾಕ್ ಬರ್ತಿದ್ದೆ. ಇಷ್ಟು ವರ್ಷ ನಿಮ್ಮನೆಗೆ ದುಡಿದದ್ದಕ್ಕೆ ನೀವು ನನ್ ಮೇಲೆ ಇಟ್ಟಿರೊ ನಂಬಿಕೆ ಇದೇನ ಸ್ವಾಮಿ?" ಎಂದು ಗದ್ಗದಿತಳಾದಳು. 
ಆಗ ಆತ ಸ್ವಲ್ಪವೂ ಯೋಚಿಸದೆ “ಈ ಮನೆಗೆ ಬೇರೆಯವರು ಯಾರ್ ಬರ್ತಾರೆ. ನೆನ್ನೆ ತಾನೆ ಇದ್ದ ಗಂಟು ಈಗಿಲ್ಲ ಅಂದ್ರೆ ಏನರ್ಥ?” ಎಂದುಬಿಟ್ಟನು. ಇನ್ನು ಮಾತಾಡಿ ಪ್ರಯೋಜನವಿಲ್ಲೆಂದು, ನಂಬಿಕೆ ಇಲ್ಲದ ಕಡೆ ಒಂದು ಘಳಿಗೆಯೂ ನಿಲ್ಲಬಾರದೆಂದು, ಕಣ್ಣೀರಿಡುತ್ತಾ ಹೊರಟುಬಿಟ್ಟಳು. 
ಕೆಲದಿನಗಳ ನಂತರ ಹಿಂತಿರುಗಿ ಬಂದ ಸತ್ಯಮ್ಮನಿಗೆ ವಿಷಯ ತಿಳಿದು ಗಂಡನ ಮೇಲೆ ಕೂಗಾಡಿದಳು. “ನೀವೇ ಎಲ್ಲೊ ಇಟ್ಟು ಮರೆತ್ತಿದ್ದೀರ, ನಮ್ಮ ಚೆನ್ನಮ್ಮ ಅಂತಹವಳಲ್ಲ, ಅವಳನ್ನು ಅನುಮಾನಿಸಲು ನಿಮಗೆ ಮನಸಾದರೂ ಹೇಗೆ ಬಂತು?” ಎಂದು ರೇಗಿದಳು. ತಕ್ಷಣವೇ ಚೆನ್ನಮ್ಮನ ಮನೆಗೆ ಬಂದು ಏನು ಹೇಳಿದರೂ ಕೇಳದೆ ಚೆನ್ನಮ್ಮನನ್ನು ಮನೆಗೆ ಕರೆದುಕೊಂಡು ಹೋದಳು. 
ಮೊದಲಿನಂತಲ್ಲದಿದ್ದರೂ ಚೆನ್ನಮ್ಮ ಸತ್ಯಮ್ಮನಿಗಾಗಿ ಅರೆಮನಸ್ಸಿನಿಂದ ಕೆಲಸಕ್ಕೆ ಹೋಗುತ್ತಿದ್ದಳು. ಏಕೆಂದರೆ ಆಕೆಯ ಗಂಡನಲ್ಲಿ ಇನ್ನು ಅನುಮಾನ ಹೋಗದಿರುವುದನ್ನು ಗಮನಿಸಿದ್ದಳು. 
ಒಂದು ದಿನ ದೀಪಾವಳಿ ಹಬ್ಬಕ್ಕೆಂದು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಚೆನ್ನಮ್ಮನಿಗೆ ಮಲಗುವ ಕೋಣೆಯ ದೊಡ್ಡ ಮಂಚವನ್ನು ಕದಲಿಸಲಾಗಲಿಲ್ಲ. ಕೊನೆಗೆ ಗಂಡ ಹೆಂಡತಿ ಇಬ್ಬರೂ ಕೈಹಾಕಿದರು. ಮಂಚ ಜರುಗಿದ ಕೂಡಲೇ ಯಾವುದೋ ವಸ್ತು ಬಿದ್ದು ಠಣ್ ಎಂಬ ಶಬ್ದವಾಯಿತು. ಏನೆಂದು ನೋಡಿದರೆ, ಅಂದು ಮಾಯವಾಗಿದ್ದ ತಾಳಿಬೊಟ್ಟುಗಳ ಗಂಟು. ಮಂಚ ಮತ್ತು ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಆ ಗಂಟು ಕೆಳಗೆ ಬಿದ್ದು ಎಲ್ಲರ ಮುಂದೆ ಚೆನ್ನಮ್ಮ ನಿರ್ದೋಷಿ ಎಂದು ಸಾರಿತು. 
ಅಂದು ಸತ್ಯಮ್ಮನ ಗಂಡ ತನ್ನ ತಪ್ಪಿನ ಅರಿವಾಗಿ ತಲೆತಗ್ಗಿಸಿದನು. ವಿಚಾರಿಸದೆ ತನ್ನ ಅಜಾಗ್ರತೆಯಿಂದ ಆಗಿದ್ದ ಪ್ರಮಾದವನ್ನು, ಏನು ಅರಿಯದ ಚೆನ್ನಮ್ಮನನ್ನು ವೃಥಾ ಅನುಮಾನಿಸಿದಕ್ಕೆ ನಾಚಿದನು. ತಕ್ಷಣವೇ ಚೆನ್ನಮ್ಮನಿಗೆ ಕೈ ಮುಗಿದು ಕ್ಷಮೆ ಕೇಳಿದನು. 
ಇದನ್ನು ನೋಡಲಾಗದೆ ಚೆನ್ನಮ್ಮ, “ನೀವು ದೊಡ್ಡವರು, ನನಗೆ ಅನ್ನ ನೀಡೋ ದೇವರು, ನನಗೆ ಕೈಮುಗೀಬೇಡಿ. ನನ್ನ ಮಕ್ಕಳು ನಿಮ್ಮಿಂದ ಹೊಟ್ಟೆ ತುಂಬಾ ಊಟ ಮಾಡ್ತಾ ಇದ್ದಾರೆ. ನಿಮಗೆ ನಾನು ಎಷ್ಟು ಮಾಡಿದರೂ ಕಡಿಮೇನೆ” ಎಂದಳು. 
ಆಕೆಯ ವಿನಯ, ಸ್ವಾಮಿಭಕ್ತಿ ನೋಡಿ ಇಬ್ಬರ ಕಣ್ಣಲ್ಲೂ ನೀರಾಡಿತು. ಮಕ್ಕಳು ಅಂದ ತಕ್ಷಣ ಏನನಿಸಿತೋ ಏನೋ ಆತ ‘ನಾಳೆ ಅವರನ್ನು ಬೆಳಿಗ್ಗೆಯೇ ಕರೆದುಕೊಂಡು ಬಾ’ ಎಂದನು. 
ಮರುದಿನ ಸತ್ಯಮ್ಮ ಮತ್ತು ಆಕೆಯ ಗಂಡ ಆ ಮಕ್ಕಳನ್ನು ಹತ್ತಿರದ ಶಾಲೆಗೆ ಸೇರಿಸಿ ಚೆನ್ನಮ್ಮನಿಗೆ ಕೃತಜ್ಞತೆ ಸಲ್ಲಿಸಿದರು. ತನ್ನ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲವಲ್ಲ ಎಂದು ಮರುಗುತ್ತಿದ್ದ ಆಕೆಗೆ ಅವರ ಉಪಕಾರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯದೆ ಕಾಲಿಗೆ ಬೀಳಹೋದಳು. ಅಷ್ಟರಲ್ಲೇ ಅವಳನ್ನು ಹಿಡಿದೆತ್ತಿದ ಸತ್ಯಮ್ಮ, “ನೀನು ಮಾಡುತ್ತಿರುವ ಸೇವೆಗೆ ನಿನ್ನ ಪ್ರಾಮಾಣಿಕತೆಗೆ ಇದು ಏನೇನೂ ಅಲ್ಲ ತಾಯಿ” ಎಂದು ಗಂಡಹೆಂಡತಿಯರಿಬ್ಬರೂ ಕಣ್ತುಂಬಿಕೊಂಡರು.


- ಉಷಾಗಂಗೆ   



ಅನುವಾದಿತ ನಾಟಕ - ಅಗ್ನಿಪರೀಕ್ಷೆ


[
ಪರ್ಸಿವಲ್ ವೈಲ್ಡ್ ರವರ "ಅವರ್ ಆಫ್ ಟ್ರುಥ್" (Hour of Truth) ನಾಟಕದ ಅನುವಾದ]

ಪಾತ್ರಗಳು:
ರಾಬರ್ಟ್ ಬಾಲ್ಡ್ವಿನ್
ಮಾರ್ಥಾಆತನ ಪತ್ನಿ
ಜಾನ್ಆತನ ಮಗ
ಈವಿ - ಆತನ ಮಗಳು
ಮಾರ್ಷಲ್ - ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರು

 [ಅದು ಸುಡು ಬೇಸಿಗೆಯ ಮಧ್ಯಾಹ್ನ. ನೆತ್ತಿಯ ಮೇಲಿನ ಸೂರ್ಯ ಮತ್ತು ಕೆಳಗೆ ಕಾದ ನೆಲ ಎರಡೂ ನಿರ್ದಯಿಗಳು. ದೂರದಲ್ಲಿ ಕಾಣುತ್ತಿರುವ ಮೋಡಗಳು ಧಗೆಯ ಶಮನದ ಆಸೆಯನ್ನು ನೀಡುತ್ತಿವೆ. ಒಂದು ಸಣ್ಣ ಮನೆಯ ಕಿಟಕಿಯ ಬಳಿ ಬಾಲ್ಡ್ವಿನ್ಮನೆಯವರು ತಮ್ಮ ಹಿರಿಯನ ಬರುವಿಕೆಗೆ ಕಾಯುತ್ತಿದ್ದಾರೆ.
 27 ವರ್ಷದ ಯುವಕ ಜಾನ್ ತತ್ವಜ್ಞಾನಿಯಂತೆ ಕುಳಿತಿದ್ದಾನೆ, ದಿನಕ್ಕೆ ಏನೂ ವಿಶೇಷ ಮಹತ್ವವಿಲ್ಲ ಎಂಬಂತೆ. ಆದರೆ ಆತನ ತಾಯಿ ಅರ್ಧ ಘಂಟೆಯಿಂದ ಹಾಗೆಯೇ ಕುಳಿತಿದ್ದಾಳೆ. ಮಗಳು ತನ್ನ ಉದ್ವಿಗ್ನತೆಯನ್ನು ಮುಚ್ಚಿಡಲು ಯಾವುದೇ ಯತ್ನವನ್ನು ಮಾಡುವುದಿಲ್ಲ.
 ಅಲ್ಲೊಂದು ರೀತಿಯ ಬಿಗುವಾದ ಮೌನವಿದೆ. ಆದರೆ ಯಾರೊಬ್ಬರೂ ಮೌನವನ್ನು ಮುರಿಯಲೆತ್ನಿಸುವುದಿಲ್ಲ. ಹತ್ತು ನಿಮಿಷಗಳಲ್ಲಿ ಮಗಳು ಹತ್ತನೆಯ ಬಾರಿಗೆ ಕಿಟಕಿಯ ಬಳಿ ಹೋಗಿ ರಸ್ತೆಯತ್ತ ನೋಡುತ್ತಿದ್ದಾಳೆ]
ಮಾರ್ಥಾಈಗಾಗಲೇ ಅವರು ಮನೆಯಲ್ಲಿರಬೇಕಿತ್ತು
ಈವಿ - ಹೌದಮ್ಮಾ.
ಮಾರ್ಥಾಅವರು ತಮ್ಮ ಕೊಡೆಯನ್ನು ಮರೆತಿಲ್ಲ ಅಂದ್ಕೊಂಡಿದ್ದೀನಿ. ಅವರಿಗೆ ಇದರ ಬಗ್ಗೆ ಎಲ್ಲ ಬಹಳ ಮರೆವು.
ಈವಿ - ಹೌದಮ್ಮಾ.
ಮಾರ್ಥಾಮಳೆ ಬರೋಹಾಗಿದೆ ಈವಿ, ನಿನಗೆ ಹಾಗನಿಸೋಲ್ಲವಾ? (ಉತ್ತರಕ್ಕೆ ಕಾಯದೆ ಅವಳು ಕಿಟಕಿಯ ಹತ್ತಿರ ಹೋಗಿ ಕಳವಳದಿಂದ ಹೊರನೋಡುತ್ತಾಳೆ) ಮೋಡ ಕವಿದಿದೆ. (ಅಲ್ಲಿಂದ ಕಡೆ ಬರುತ್ತಾಳೆ. ಅಷ್ಟರಲ್ಲಿ ಮಿಂಚು ಕಾಣಿಸುತ್ತದೆ. ಜಾನ್ ನಿಧಾನವಾಗಿ ಎದ್ದು ಮಧ್ಯದಲ್ಲಿರುವ ಟೇಬಲ್ ಬಳಿ ಬಂದು ಪುಸ್ತಕವೊಂದರ ಹಾಳೆಗಳನ್ನು ತಿರುಗಿಸಲಾರಂಭಿಸುತ್ತಾನೆ. ತಾಯಿ ಆತನೆಡೆಗೆ ತಿರುಗುತ್ತಾಳೆ.) ಜಾನ್, ನಿಮ್ಮ ತಂದೆಯ ರೂಮಿಗೆ ಓಡಿಹೋಗಿ ಕಿಟಕಿಗಳು ಮುಚ್ಚಿವೆಯಾ ನೋಡಿ ಬಾ. ಹೋಗಪ್ಪಾ, ಒಳ್ಳೆಯ ಹುಡುಗ ನೀನು
ಜಾನ್ - ಸರಿ (ಹೋಗುವನು)
ಈವಿ - (ಸ್ವಲ್ಪ ತಡೆದು) ಅಮ್ಮಾ, (ಉತ್ತರವಿಲ್ಲ) ಅಮ್ಮಾ! (ತಾಯಿ ನಿಧಾನವಾಗಿ ತಿರುಗುವಳು) ಗ್ರೇಷಮ್ ಗೆ ಅಪ್ಪನಿಂದ ಏನು ಬೇಕಾಗಿತ್ತು? ಅಪ್ಪಾ ಏನಾದರೂ ತಪ್ಪು ಮಾಡಿದರಾ?
ಮಾರ್ಥಾ – (ಹೆಮ್ಮೆಯಿಂದ) ನಿಮ್ಮ ತಂದೆಯೇಇಲ್ಲ, ಈವಿ.  
ಈವಿ - ಹಾಗಾದರೆ ಗ್ರೇಷಮ್ ಅಪ್ಪಂಗೆ ಹೇಳಿಕಳಿಸಿದ್ದಾದರೂ ಏಕೆ?
ಮಾರ್ಥಾಅವರೊಂದಿಗೆ ಏನೋ ಮಾತನಾಡೋಕೆ.
ಈವಿ - ಯಾವುದರ ಬಗ್ಗೆ? ಗ್ರೇಷಮ್ ರನ್ನು ಬಂಧಿಸಲಾಗಿದೆ. ನಾಳೆ ಅವರ ವಿಚಾರಣೆ ನಡೆಯಲಿದೆ. ಅವರಿಗೆ ಅಪ್ಪನಿಂದ ಏನು ಬೇಕಾಗಿರಬಹುದು?
ಮಾರ್ಥಾ - ನಿಮ್ಮ ತಂದೆ ಸಾಕ್ಷಿ ನೀಡಬೇಕಾಗಿದೆ.
ಈವಿ - ಹೌದು, ಆದರೆ ಅವರು ಸಾಕ್ಷಿ ಹೇಳೋದು ಗ್ರೇಷಮ್ ವಿರುದ್ಧ. ಹೀಗಿರೋವಾಗ ಗ್ರೇಷಮ್ ಅವರನ್ನೇಕೆ ನೋಡಬೇಕು ಅಂತ ಬಯಸ್ತಾನೆ?
ಮಾರ್ಥಾ - ನನಗದು ಗೊತ್ತಿಲ್ಲ ಈವಿ. ನಿಮ್ಮ ತಂದೆ ವ್ಯವಹಾರದ ವಿಷಯದ ಬಗ್ಗೆ ಹೆಚ್ಚೇನೂ ಹೇಳೋದಿಲ್ಲ ಅನ್ನೋದು ನಿನಗೆ ಗೊತ್ತು. (ಸ್ವಲ್ಪ ತಡೆದು) ಪತ್ರಿಕೆಗಳಲ್ಲಿ ನೋಡೋವರೆಗೆ ಬ್ಯಾಂಕಿನಲ್ಲಿ ಏನೋ ಸವಸ್ಯೆಯಾಗಿದೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ನನ್ನ ಹಣವನ್ನು ಅಲ್ಲಿಂದ ತೆಗೆ ಅಂತ ಸಹ ನಿಮ್ಮ ತಂದೆ ನನಗೆ ಹೇಳಲಿಲ್ಲ. ಹಾಗೆ ಮಾಡಿದರೆ ತಾನು ಗ್ರೇಷಮ್ ಗೆ ನಿಷ್ಠನಾಗಿರುವುದಿಲ್ಲ ಎಂದುಕೊಂಡರು (ಈವಿ ತಲೆದೂಗುತ್ತಾಳೆ) ನನಗೇ ಅನುಮಾನ ಬಂದಾಗ ಅವರಿಷ್ಟಕ್ಕೆ ವಿರುದ್ಧವಾಗಿ ಹಣವನ್ನು ವಾಪಸ್ಸು ಪಡೆದುಕೊಂಡೆ.
ಈವಿ - (ಸ್ವಲ್ಪ ತಡೆದು) ಇದರಲ್ಲಿ ಅಪ್ಪನ ಕೈ ಏನಾದರೂ....... (ಪೂರ್ಣಗೊಳಿಸಲು ಇಚ್ಛಿಸುವುದಿಲ್ಲ)
ಮಾರ್ಥಾ - ಬ್ಯಾಂಕ್  ದಿವಾಳಿತನಕ್ಕಾ? ನಿನಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಲ್ಲವೇ, ಈವಿ?
ಈವಿ - ಅವರಿಗೆ ಏನು ನಡೆಯುತ್ತಿದೆ ಎಂಬುದು ಗೊತ್ತಿರಲಿಲ್ಲವೇ? ಪತ್ರಿಕೆಯವರು ಏನು ಹೇಳುತ್ತಿದ್ದಾರೆ ಎಂದು ನಿನಗೆ ಗೊತ್ತು.
ಮಾರ್ಥಾ - ಪತ್ರಿಕೆಯವರು ನಿಮ್ಮ ತಂದೆಯ ಬಗ್ಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ ಈವಿ .
ಈವಿ - ಬಹುಶಃ ಇಲ್ಲ. ಆದರೆ ಅಪ್ಪನಿಗೆ ಅವರ ಬ್ಯಾಂಕಿನ ವ್ಯವಹಾರದ ಬಗ್ಗೆ ಏನೂ ತಿಳಿಯಲಿಲ್ಲ ಎನ್ನುವುದಾದರೆ, ಅಪ್ಪ ಒಬ್ಬ ಮೂರ್ಖರಾಗಿರಬೇಕು ಎಂದರು. ಅಪ್ಪನಿಗೆ ಮತ್ತು ಗ್ರೇಷಮ್ ರಿಗೆ ಮಾತ್ರ ಬಗ್ಗೆ ತಿಳಿದಿರಲು ಸಾಧ್ಯ ಎಂದರು. ಅಪ್ಪ ಏಕೆ ವ್ಯವಹಾರವನ್ನು ತಡೆಯಲಿಲ್ಲ ಅಂತ ಪ್ರಶ್ನಿಸಿದರು.
ಮಾರ್ಥಾ - ನಿಮ್ಮ ತಂದೆ ಗ್ರೇಷಮ್ ಆಜ್ಞೆನ ಪಾಲಿಸಿದ್ರು
ಈವಿ - (ತಿರಸ್ಕಾರದಿಂದ) ಗ್ರೇಷಮ್ ಆಜ್ಞೆ! ಅಪ್ಪ ಅದನ್ನು ಅನುಸರಿಸಲೇ ಬೇಕಿತ್ತೇನು?
ಮಾರ್ಥಾ – (ಸ್ವಲ್ಪ ತಡೆದು) ಈವಿ, ನಿಮ್ಮ ತಂದೆ ತಮ್ಮ ಇಡೀ ಜೀವನದಲ್ಲಿ ಯಾವುದೇ ತಪ್ಪನ್ನುಅವರಿಗೆ ಅದು ತಪ್ಪು ಅಂತ ತಿಳಿದೂ ತಿಳಿದೂ ಮಾಡಿದ್ದಾರೆ ಅಂತ ನಾನು ನಂಬೋದಿಲ್ಲ. ಆಕಸ್ಮಿಕವಾಗಿ ಅವರಿಗೆ ಗ್ರೇಷಮ್ ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಾಯಿತು.
ಈವಿ - ನಿನಗೆ ಹೇಗೆ ಗೊತ್ತು?
ಮಾರ್ಥಾ - ನನಗೆ ಗೊತ್ತಿಲ್ಲ. ಆದರೆ ಊಹಿಸಬಲ್ಲೆ. ಅವರು ಏನೋ ಹೇಳಿದರು (ಕಾತರದಿಂದ) ನೋಡು ಈವಿ, ಅವರು ಯಾವ ತಪ್ಪನ್ನೂ ಮಾಡಿರೋಕೆ ಸಾಧ್ಯವಿಲ್ಲ. ಪೊಲೀಸಿನೋರು ಅವರ ಮೇಲೆ ಕಾನೂನು ರೀತ್ಯಾ ಅಪವಾದ ಹೊರಿಸಿಲ್ಲ
ಈವಿ - (ನಿಧಾನವಾಗಿ) ಇಲ್ಲ. ಅವರು ಅಪ್ಪನ ಮೇಲೆ ಅಪವಾದ ಹೊರಿಸಿಲ್ಲ. ಏಕೆ ಅಂದ್ರೆ ಅಪ್ಪಾ ಗ್ರೇಷಮ್ ವಿರುದ್ಧ ಸಾಕ್ಷಿ ಹೇಳಬೇಕು ಅಂತ ಅವರು ಇಷ್ಟ ಪಡ್ತಾರೆ. ಹಾಗಾಗಿ ನಾವು ಅದರಿಂದ ಸಮಾಧಾನ ಪಟ್ಕೊಳ್ಳೋಕ್ಕಾಗಲ್ಲ.
(ಜಾನ್ ಹಿಂತಿರುಗುವನು)
ಮಾರ್ಥಾ – ( ಅವಕಾಶವನ್ನು ಉಪಯೋಗಿಸಿಕೊಂಡು) ಕಿಟಕಿಗಳು ತೆರೆದಿದ್ದವೇ ಜಾನ್?
ಜಾನ್ – (ತಟಕ್ಕನೆ) ಕಿಟಕಿ ಮುಚ್ಚಿದ್ದೇನೆ? (ಟೇಬಲ್ ಬಳಿ ಹೋಗಿ ಮತ್ತೆ ಪುಸ್ತಕವನ್ನು ನೋಡಲಾರಂಭಿಸುತ್ತಾನೆ) ಅಮ್ಮಾ....... ನೋಡಿಲ್ಲಿ...... ಗ್ರೇಷಮ್ ಗೆ ಅಪ್ಪನಿಂದ ಏನಾಗಬೇಕು?
ಈವಿ - (ತಲೆಯಾಡಿಸುತ್ತಾ) ನಾನೂ ಅದೇ ಪ್ರಶ್ನೆ ಕೇಳ್ತಿದೀನಿ.
ಮಾರ್ಥಾ - ನನಗೆ ಗೊತ್ತಿಲ್ಲ ಜಾನ್ .
ಜಾನ್ - ನೀನು ಅವರನ್ನು ಕೇಳಲಿಲ್ಲವೇ? (ತಾಯಿ ಉತ್ತರ ನೀಡುವುದಿಲ್ಲ) ಏನು?
ಮಾರ್ಥಾ - ನಾನು ಅವರನ್ನು ಕೇಳಿದೆ. ಅವರೇನೂ ಹೇಳಲಿಲ್ಲ ಜಾನ್ . (ಕಳವಳದಿಂದ) ನಿಮ್ಮ ತಂದೆಗೆ ಬ್ಯಾಂಕಿನ ಅವ್ಯವಹಾರದ ಬಗ್ಗೆ ತಿಳಿದಿತ್ತು ಅಂತ ನನಗನ್ನಿಸೊಲ್ಲ.
ಜಾನ್ – (ಒಂದು ಕ್ಷಣದ ಯೋಚನೆಯ ನಂತರ) ನೆನ್ನೆ ನಾನು ಅಸಿಸ್ಟೆಂಟ್ ಕ್ಯಾಷಿಯರ್ ಜೊತೆ ಮಾತನಾಡುತ್ತಿದ್ದೆ
ಈವಿ - ಡೊನೊವನ್ ಜೊತೆಗಾ?
ಜಾನ್ - ಹೌದು. ಅವರನ್ನು ನಾನು ಅಥ್ಲೆಟಿಕ್ ಕ್ಲಬ್ ನಲ್ಲಿ ನೋಡಿದೆ. ಬ್ಯಾಂಕ್ ದಿವಾಳಿಯಾಗೋವರೆಗೂ ವ್ಯವಹಾರದಲ್ಲಿ ಏನಾದರೂ ತಪ್ಪಿದೆ ಅಂತ ಯಾರಿಗೂ ಗೊತ್ತಿರಲಿಲ್ಲವಂತೆ. ಡೊನೊವನ್ ಅಲ್ಲಿ 8 ವರ್ಷದಿಂದ ಇದ್ದಾರೆ. ತನ್ನ ಜೀವನ ಸುಭದ್ರವಾಗಿದೆ ಅಂತ ಅವನೂ ಭಾವಿಸಿದ್ದ. ಅದರ ಆಧಾರದ ಮೇಲೆಯೇ ಮದುವೆಯಾಗಿದ್ದ. ಆದರೆ ಇದ್ದಕ್ಕಿದ್ದಂತೆ ಸುದ್ಧಿ- ಬರಸಿಡಿಲು ಬಂದು ಎರಗಿದ ಹಾಗೆ!
ಈವಿ - ಅಪ್ಪಾ?
ಜಾನ್ಅಪ್ಪನಿಗೆ ಗೊತ್ತಿದ್ದಿರಬೇಕು ಎಂದು ಆತ ಹೇಳ್ತಾನೆ. ಆದರೆ ಬೇರೆ ಯಾರಿಗೂ ಗೊತ್ತಿರಲಿಲ್ಲ ಅಂತ ಆಣೆ ಹಾಕ್ತಾನೆ. ನೋಡು, ಅಪ್ಪಾ ಬೇರೆಯವರೆಲ್ಲರಿಗಿಂತ ಗ್ರೇಷಮ್ ಗೆ ಹತ್ತಿರವಾಗಿದ್ರು. ಅದು ಅವರನ್ನು ಒಳ್ಳೆಯ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಸಿದೆ.
ಮಾರ್ಥಾಏನು ಹಾಗೆಂದರೆ, ಜಾನ್?
ಜಾನ್ಗ್ರೇಷಮ್ ವಿರುದ್ಧ ಅಪ್ಪ ಒಬ್ಬರೇ ಸಾಕ್ಷಿ. ಮತ್ತು ನಾನು ಅವರ ಹೆಸರನ್ನು ಹೊತ್ತವನು- ಜಾನ್ ಗ್ರೇಷಮ್ ಬಾಲ್ಡ್ವಿನ್- ನಿಮ್ಮ ಸೇವೆಯಲ್ಲಿ!
ಮಾರ್ಥಾ - ನಿಮ್ಮ ತಂದೆ ಅವರ ಕರ್ತವ್ಯ ಮಾಡುತ್ತಾರೆ, ಜಾನ್, ಅದರ ಫಲಿತಾಂಶ ಏನೇ ಆಗಿರಲಿ.
ಜಾನ್ – (ತಟಕ್ಕನೆ) ಅದು ನನಗೆ ಗೊತ್ತು. ಆದರೆ ಯಾವುದು ಸರಿ ಎಂಬುದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. (ಅವನೆಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತಾರೆ) ಜಾನ್  ಗ್ರೇಷಮ್ 20 ವರ್ಷಗಳಲ್ಲಿ ಶ್ರೀಮಂತನಾಗಿದ್ದಾನೆ. ಆದರೆ ಅವರ ಕಾರ್ಯದರ್ಶಿಯಾಗಿ ದುಡಿದ ಇವರು ವರ್ಷಕ್ಕೆ 5000 ವಷ್ಟೇ ಪಡೆಯುತ್ತಿದ್ದರು.
ಮಾರ್ಥಾ - ನಿಮ್ಮ ತಂದೆ ಅದರ ಬಗ್ಗೆ ಯಾವಾಗಲೂ ದೂರಿಲ್ಲ.
ಜಾನ್ಅದೇ ದುರದೃಷ್ಟಕರ. ಅವರು ಯಾರನ್ನೂ ದೂರಿಲ್ಲ. ಸರಿ. ನಾಳೆ ಅವರಿಗೆ ಅವಕಾಶ ಸಿಗುತ್ತದೆ. ಅವರು ಕಟಕಟೆಯಲ್ಲಿ ನಿಲ್ಲುತ್ತಾರೆ. ಅವರ ಸಾಕ್ಷ್ಯದ ನಂತರ ಜಾನ್ ಗ್ರೇಷಮ್ ನನ್ನು ಅವ್ರು ಯಾರಿಗೂ ಹಾನಿಮಾಡಲಾಗದ ಜಾಗಕ್ಕೆ ಸ್ವಲ್ಪ ದಿನ ತಳ್ಳುತ್ತಾರೆ. ತನ್ನ ಕೆಲಸಗಾರರಿಗೆ ಕಡಿಮೆ ಸಂಬಳ ನೀಡುವುದರಲ್ಲಿ ಸಂತೃಪ್ತನಾಗಿರಲಿಲ್ಲ; ಅವರ ಠೇವಣಿಗಾರರನ್ನು ಸಹ ಮೋಸಗೊಳಿಸಬೇಕಿತ್ತಾ! ಅವರಿಗೆ ತಕ್ಕ ಶಾಸ್ತಿ ಇದು!
ಮಾರ್ಥಾ – (ಅಂಜಿಕೆಯಿಂದ) ನೀನೀ ರೀತಿ ಮಾತನಾಡುವುದು ನಿನ್ನ ತಂದೆಗೆ ಇಷ್ಟವಾಗುತ್ತದೆಂದು ನನಗನಿಸುವುದಿಲ್ಲ.
ಜಾನ್ – (ತಿರಸ್ಕಾರದಿಂದ ಭುಜಗಳನ್ನು ಕುಣಿಸುವನು)
ಮಾರ್ಥಾ - ನಿಮ್ಮ ತಂದೆಗೆ ಗ್ರೇಷಮ್ ವಿರುದ್ಧ ಏನೂ ಆರೋಪವಿಲ್ಲ. ಅವರು ಸತ್ಯವನ್ನು ಹೇಳುತ್ತಾರೆ - ಸತ್ಯವನ್ನು ಮಾತ್ರ ಹೇಳುತ್ತಾರೆ.
ಜಾನ್ಅವರೇನು ಸುಳ್ಳು ಹೇಳುತ್ತಾರೆಂದು ನಾನು ಭಾವಿಸಿದ್ದೇನೆ ಎಂದು ಕೊಂಡೆಯಾ? ಅಪ್ಪಾ ಹೇಳುವುದಿಲ್ಲ! ಅವರು ಸತ್ಯವನ್ನೇ ಹೇಳುತ್ತಾರೆ - ಸತ್ಯವನ್ನು ಮಾತ್ರಅಷ್ಟೇ ಸಾಕು!
ಈವಿ - (ಕಿಟಕಿಯ ಹತ್ತಿರದಿಂದ ) ಅಪ್ಪಾ ಬರುತ್ತಿದ್ದಾರೆ!
(ಹೊರಗಡೆ ಬಾಗಿಲಿನ ಕೀಲಿಯನ್ನು ತಿರುಗಿಸಿದ ಶಬ್ಧವಾಗುತ್ತದೆ. ಈವಿ ಬಾಗಿಲಿನ ಹತ್ತಿರ ಓಡುತ್ತಾಳೆ)
ಮಾರ್ಥಾಈವಿ! ನೀನಿಲ್ಲೇ ಇರು. ಮೊದಲು ನಾನು ಮಾತನಾಡುತ್ತೇನೆ. (ಆತುರದಿಂದ ಹೊರಹೋಗುತ್ತಾಳೆ. ಜಾನ್ ಮತ್ತು ಈವಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತರೆ)
ಜಾನ್ಗ್ರೇಷಮ್ ಅವರಿಗೆ ಏನು ಹೇಳಬಹುದೆಂಬುದೇ ಆಶ್ಚರ್ಯ. (ಈವಿ ಭುಜವನ್ನು ಹಾರಿಸುತ್ತಾಳೆ. ಜಾನ್ ಕಿಟಕಿಯತ್ತ ತೆರಳುತ್ತನೆ) ಮಳೆ ಬರಲಾರಂಭಿಸುತ್ತದೆ.
ಈವಿ - ಹೌದು. (ಸ್ವಲ್ಪ ಕಾಲ ಏನೂ ಸದ್ದಿಲ್ಲ. ಇದ್ದಕ್ಕಿದ್ದಂತೆ ಜಾನ್ ಬಾಗಿಲನ್ನು ತೆರೆಯುತ್ತಾನೆ)
ಜಾನ್ - ಹಲೋ ಅಪ್ಪಾ!
ಬಾಲ್ಡ್ವಿನ್– (ಒಳಗೆ ಬರುತ್ತಾನೆ. ಮಾರ್ಥಾ ಹಿಂಬಾಲಿಸುತ್ತಾಳೆ) ಹೇಗಿದ್ದೀಯಾ? ನನ್ನ ಹುಡುಗ? (ಜಾನ್ ನೊಂದಿಗೆ ಕೈಕುಲುಕುತ್ತಾನೆ) ಈವಿ !
ಮಾರ್ಥಾರಾಬರ್ಟ್, ನಿನ್ನ ಶೂಸ್ ಒದ್ದೆಯಾಗಿಲ್ಲ ತಾನೆ?
ಬಾಲ್ಡ್ವಿನ್– (ತಲೆಯಾಡಿಸುತ್ತಾ) ಇಲ್ಲ. ನಾನು ಕಾರಿನಲ್ಲಿ ಬಂದೆ. ನನ್ನ ಮೇಲೆ ಒಂದು ಹನಿಯೂ ಇಲ್ಲ. ನೋಡು? (ಕುರ್ಚಿಯ ಮೇಲೆ ಕೂರುತ್ತಾನೆ. ಅಸಹನೀಯ ಮೌನ ಆವರಿಸುತ್ತದೆ)
ಜಾನ್ಅಪ್ಪಾ, ಈಗ ನೀವೇನಾದರೂ ಹೇಳಬೇಕಾದ ಸಮಯ ಬಂದಿದೆ ಅನಿಸೋದಿಲ್ವಾ?
ಬಾಲ್ಡ್ವಿನ್ – ಏನಾದರೂ ಹೇಳಬೇಕು? ನನಗೇನೂ ಅರ್ಥವಾಗುತ್ತಿಲ್ಲ, ಜಾನ್
ಜಾನ್ಜನ ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಹಲವಾರು ವಿಷಯಗಳನ್ನು......
ಬಾಲ್ಡ್ವಿನ್ಯಾವ ರೀತಿಯ ವಿಷಯಗಳನ್ನು, ಜಾನ್?
ಜಾನ್ - ನೀವೇ ಊಹಿಸಬಹುದು, ಕೊಳೆತ ವಿಚಾರಗಳು. ಅದನ್ನು ನನಗೆ ವಿರೋಧಿಸಲಾಗಲ್ಲ.
ಬಾಲ್ಡ್ವಿನ್ಏಕೆ, ಜಾನ್?
ಜಾನ್ಏಕೆಂದರೆ, ನನಗೆ ಗೊತ್ತಿರಲಿಲ್ಲ.
ಬಾಲ್ಡ್ವಿನ್- ನಿನಗದರ ಬಗ್ಗೆ ತಿಳಿದಿರಬೇಕಿತ್ತೇ? ನಿನ್ನ ತಂದೆಯ ಬಗ್ಗೆ ನಿನಗೆ ತಿಳಿದಿದೆ ಎಂಬುದೇ ಸಾಲದಾಗಿತ್ತೇ?
ಜಾನ್ – (ಸ್ವಲ್ಪ ತಡೆದು) ದಯವಿಟ್ಟು ಕ್ಷಮಿಸಿ ಅಪ್ಪಾ.
ಬಾಲ್ಡ್ವಿನ್- ಬ್ಯಾಂಕ್ ದಿವಾಳಿಯಾಗುತ್ತಿದೆ, ಎಲ್ಲವೂ ಮುಳುಗಿಹೋಗುತ್ತಿದೆ ಎನ್ನುವ ಎರಡು ದಿನಗಳ ಮುಂಚೆ ನನಗೆ ಗ್ರೇಷಮ್ ಮಾಡಿದ್ದರ ಬಗ್ಗೆ ತಿಳಿಯಿತು. (ಸ್ವಲ್ಪ ತಡೆಯುತ್ತಾನೆ. ಎಲ್ಲರೂ ಗಾಢವಾಗಿ ಕೇಳುತ್ತಿದ್ದಾರೆ) ಅದನ್ನೆಲ್ಲಾ ಸರಿಮಾಡಬೇಕೆಂದು ನಾನು ಹೇಳಿದೆ. ಆದರೆ ಅವನು ಸಾಧ್ಯವಿಲ್ಲ ಎಂದು ಹೇಳಿದ........
ಈವಿ - (ತಂದೆ ಮುಂದುವರೆಸದಿದ್ದರಿಂದ) ನಂತರ ಏನಾಯಿತು?
ಬಾಲ್ಡ್ವಿನ್ಎಲ್ಲವನ್ನೂ ಸರಿಪಡಿಸಲು ಸಾಧ್ಯವಾದದ್ದನ್ನೆಲ್ಲಾ ಮಾಡಬೇಕೆಂದು ಹೇಳಿದೆ. ಅದರಲ್ಲಿ ಮೊದಲ ಕೆಲಸ ಬ್ಯಾಂಕ್ ಅನ್ನು ಮುಚ್ಚುವುದಾಗಿತ್ತು. ಆದರೆ ಅವನಿಗೆ ಅದನ್ನು ಮಾಡಲಿಷ್ಟವಿರಲಿಲ್ಲ.
ಮಾರ್ಥಾಆದರೆ ಅವರು ಅದನ್ನು ಮುಚ್ಚಿದರು!
ಬಾಲ್ಡ್ವಿನ್- ನಾನೇ ಅವನಿಂದ ಮಾಡಿಸಿದೆ. ಅವನಿಗೆ ಕೋಪ ಬಂದಿತ್ತು. ಬಹಳ ಕೋಪ ಬಂದಿತ್ತು. ಆದರೆ ಚಾವಟಿ ನನ್ನ ಕೈಯಲ್ಲಿತ್ತು.
ಈವಿ - ಪತ್ರಿಕೆಗಳು ಬಗ್ಗೆ ಬರೆದಿಲ್ಲ.
ಬಾಲ್ಡ್ವಿನ್ಅವರಿಗೆ ಹೇಳಬೇಕಾದ ಅವಶ್ಯಕತೆ ಇದೆ ಎಂದು ನನಗನಿಸಲಿಲ್ಲ
ಜಾನ್ಆದರೆ ಮಧ್ಯದಲ್ಲಿ ನಿಮ್ಮ ಹೆಸರು ಮರೆಯಲ್ಲಿರುವಂತೆ ನೋಡಿಕೊಂಡಿರಿ.
ಬಾಲ್ಡ್ವಿನ್ಅದು ನಾಳೆ ಸ್ಪಷ್ಟವಾಗುತ್ತದೆ, ಅಲ್ಲವೇ? (ಸ್ವಲ್ಪ ತಡೆಯುತ್ತಾನೆ) ಇಂದು ಗ್ರೇಷಮ್ ನನಗೆ ಹೇಳಿಕಳಿಸಿದ್ದ. ವಿಚಾರಣೆ ಇನ್ನು 24 ಘಂಟೆಗಳಲ್ಲಿ ಆರಂಭವಾಗುತ್ತದೆ. ಅವನ ವಿರುದ್ಧ ನಾನೊಬ್ಬನೇ ಸಾಕ್ಷಿ. ಅವನು ಕೇಳಿದಏನೆಂದು ಊಹಿಸಿ ನೋಡೋಣ........
ಜಾನ್ – (ಕೋಪದಿಂದ) ಅವನ ಜೀವವನ್ನು ಉಳಿಸಲು ನೀವು ಸುಳ್ಳು ಹೇಳಬೇಕಾಗಿತ್ತು ಅಲ್ಲವೇ? ಪ್ರಮಾಣ ಮಾಡಿ ಸುಳ್ಳು ಹೇಳಬೇಕಾಗಿತ್ತು?
ಬಾಲ್ಡ್ವಿನ್ಅದೇನು ಅವಶ್ಯಕತೆಯಿರಲಿಲ್ಲ ಜಾನ್ . ನನಗೆ ಮಂದ ನೆನಪಿನ ಸಮಸ್ಯೆ ಎಂದಷ್ಟೇ ಹೇಳಬೇಕಾಗಿತ್ತು. ನನಗೆ ಗೊತ್ತಿರುವುದನ್ನೆಲ್ಲಾ ಹೇಳಿದರೆ ಜಾನ್ ಗ್ರೇಷಮ್ ಜೈಲಿಗೆ ಹೋಗುತ್ತಾನೆ. ಭೂಮಿಯ ಯಾವುದೇ ಶಕ್ತಿ ಅದನ್ನು ತಡೆಯಲಾರದು. ಆದರೆ ಅವನಿಗೆ ನಾನು ಕೆಲವು ವಿಷಯಗಳನ್ನುಕೆಲವು ಅವಶ್ಯಕ ವಿಷಯಗಳನ್ನು ಮರೆಯಬೇಕಾಗಿದೆ. ಅವರು ನನ್ನನ್ನು ಪ್ರಶ್ನಿಸಿದಾಗ ನಾನುನನಗೆ ನೆನಪಿಲ್ಲಎನ್ನಬಹುದು. ಅವರೇನು ನನಗೆ ನೆನಪಿದೆ ಎಂದು ಸಾಬೇತುಗೊಳಿಸಲಾರರು. ಅಲ್ಲಿದೆ ನೋಡು ವಿಷಯ
ಜಾನ್ಅದು ಸುಳ್ಳಲ್ಲವೇ ಅಪ್ಪಾ!
ಬಾಲ್ಡ್ವಿನ್– (ಮುಗುಳ್ನಗುತ್ತಾ) ಖಂಡಿತ. ಆದರೆ ಇಂತಹುದು ಪ್ರತಿದಿನವೂ ನಡೆಯುಇತ್ತದೆ. ಅವರು ನನ್ನನ್ನೇನೂ ಮಾಡಲಾರರು. ಅವನನ್ನು ಶಿಕ್ಷಿಸದೆ ಇರಲಾರರು.
ಮಾರ್ಥಾಎಷ್ಟು ಧೈರ್ಯ ಅವರಿಗೆ. ನಿಮ್ಮನ್ನು ರೀತಿ ಮಾಡಲು ಕೇಳಬೇಕೆಂದರೆ ಎಷ್ಟು ಧೈರ್ಯ...........
ಈವಿ - ನೀವೇನು ಹೇಳಿದಿರಿ ಅಪ್ಪಾ?
ಬಾಲ್ಡ್ವಿನ್– (ಮುಗುಳ್ನಕ್ಕು ಜಾನ್ ಕಡೆಗೆ ನೋಡಿ) ನೀನೇನು ಹೇಳುತ್ತಿದ್ದೆ?
ಜಾನ್ - ಹಾಳಾಗಿ ಹೋಗು ಎನ್ನುತ್ತಿದ್ದೆ.
ಬಾಲ್ಡ್ವಿನ್– (ತಲೆದೂಗುತ್ತಾ) ನಾನೂ ಅದನ್ನೇ ಮಾಡಿದೆ.
ಜಾನ್ - ಬೇಷ್ ಅಪ್ಪಾ!
ಮಾರ್ಥಾ – (ತನ್ನಷ್ಟಕ್ಕೆ ತಾನೇ) ನನಗೆ ಗೊತ್ತಿತ್ತು! ನನಗೆ ಗೊತ್ತಿತ್ತು!
ಬಾಲ್ಡ್ವಿನ್ಆದರೆ ಜಾನ್, ನಾನು ನಿನ್ನ ಪದಗಳನ್ನು ಬಳಸಲಿಲ್ಲ. ಅವನು ನನಗೆ ತುಂಬಾ ಹಳೆಯ ಸ್ನೇಹಿತ. ಆದರೆ ನಾನು ಯಾವುದೇ ಮುಲಾಜಿಟ್ಟುಕೊಳ್ಳಲಿಲ್ಲ. ನನ್ನ ಮನಸ್ಸಿನಲ್ಲಿರುವುದು ಆತನಿಗೆ ಅರ್ಥವಾಯಿತು. .
ಈವಿ - ನಂತರ ಏನು ಹೇಳಿದರು?
ಬಾಲ್ಡ್ವಿನ್- ಹೇಳಲು ಹೆಚ್ಚಿಗೇನೂ ಇರಲಿಲ್ಲ. ಆತನಿಗೇನೂ ಆಶ್ಚರ್ಯವಾಗಲಿಲ್ಲ. 35 ವರ್ಷಗಳಿಂದ ಅವನು ನನ್ನನ್ನು ನೋಡಿದ್ದಾನೆ. (ಹೆಮ್ಮೆಯಿಂದ) ನನ್ನನ್ನು ಅಷ್ಟು ದಿನಗಳಿಂದ ತಿಳಿದ ಯಾರಿಗೇ ಆಗಲಿ ನಾನು ನನ್ನ ಪ್ರಜ್ಞೆಯೊಂದಿಗೆ ಚೌಕಾಸಿ ಮಾಡುತ್ತೇನೆಂದು ಖಂಡಿತ ನಿರೀಕ್ಷಿಸಲಾರರು. ಜಾನ್ ಗ್ರೇಷಮ್ ಅಲ್ಲದೆ ಇನ್ನಾರೇ ಆಗಿದ್ದರೂ ಅವರ ಮುಖದ ಮೇಲೆ ಹೊಡೆಯುತ್ತಿದ್ದೆ. ಆದರೆ ಜಾನ್ ಗ್ರೇಷಮ್ ಮತ್ತು ನಾನು ಚಿಕ್ಕಂದಿನಿಂದ ಒಟ್ಟಿಗಿದ್ದವರು. ಜೊತೆ ಜೊತೆಗೆ ದುಡಿದವರು. ಆತ ಸ್ವಂತ ವ್ಯವಹಾರ ಆರಂಭಿಸಿದಾಗಿನಿಂದಲೂ ನಾನವನ ಜೊತೆ ಇದ್ದೆ. ಆದರೆ ಅವನು ಹತಾಶನಾಗಿದ್ದಾನೆ. ಅವನಿಗೆ ತಾನೇನು ಮಾಡುತ್ತಿದ್ದೇನೆಂದು ಸಹ ಗೊತ್ತಾಗುತ್ತಿಲ್ಲ. ಇಲ್ಲದಿದ್ದರೆ ಅವನು ನನಗೆ ಹಣದ ಆಮಿಷ ಒಡ್ಡುತ್ತಿರಲಿಲ್ಲ.
ಜಾನ್ – (ಕೋಪದಿಂದ) ಹಣ ನೀಡಲು ಬಂದರೇ, ಅಪ್ಪಾ?
ಬಾಲ್ಡ್ವಿನ್ಆತ ಹಣವನ್ನು ತುರ್ತು ಅವಶ್ಯಕತೆಗೆಂದು ತೆಗೆದಿಟ್ಟಿದ್ದ. ಅವರು ಅವನನ್ನು ಶಿಕ್ಷಿಸದೆ ಇದ್ದರೆ ಅವನು ಅದನ್ನು ನನಗೆ ಕೊಡುತ್ತಾನೆ. ಕಾನೂನು ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾನು ನಾಳೆ ಸಂಜೆಯವರೆಗೂ ಬದುಕಿದ್ದರೆ ಖಂಡಿತ ಅವನನ್ನು ಶಿಕ್ಷಿಸುತ್ತಾರೆ. (ನಿಟ್ಟುಸಿರಿಡುವನು) ಅವನಿಗೆ ಶಿಕ್ಷೆಯಾಗುವಲ್ಲಿ ನನ್ನದೇನೂ ಭಾಗವಿಲ್ಲ ಎಂಬುದು ಭಗವಂತನೇ ಬಲ್ಲ....... ( ಅರ್ಧಕ್ಕೆ ನಿಲ್ಲಿಸುವನು. ಈವಿ ಆತನ ಕೈ ಮುಟ್ಟುವಳು) ಯುವಕನಾಗಿ, ಮುದುಕನಾಗಿ ನಾನವನಿಗೆ, ಅವನೊಂದಿಗೆ ನನ್ನ ಜೀವನದ ಅಮೂಲ್ಯ ಭಾಗವನ್ನು ಕಳೆದಿದ್ದೇನೆ. ನಾನವನಿಗೆ ನಿಯತ್ತಾಗಿದ್ದೆ. ನಾನವನಿಗೆ ಎಂದೂ ನಿಯತ್ತಾಗಿದ್ದೆ. ಆದರೆ ಜಾನ್ ಗ್ರೇಷಮ್ ಪ್ರಾಮಾಣಿಕತೆ ತೊರೆದರೆ ನನ್ನ ಅವನ ನಡುವೆ ಸಂಬಂಧ ಕಡಿದುಹೋಗುತ್ತದೆ!
ಮಾರ್ಥಾ – (soಜಿಣಟಥಿ ಅಳುತ್ತ) ರಾಬರ್ಟ್! ರಾಬರ್ಟ್!
ಬಾಲ್ಡ್ವಿನ್ಜೀವಿಸಲು ನನಗೆ ಕೆಲವೇ ವರ್ಷಗಳು ಉಳಿದಿವೆ, ಅದನ್ನು ನಾನು ಹಿಂದೆ ಬದುಕಿದ್ದ ಹಾಗೆಯೇ ಕಳೆಯುವೆ. ನಾನು ನನ್ನ ಸಮಾಧಿಗೆ ಸ್ವಚ್ಛವಾಗಿಯೇ ತೆರಳುವೆ
(ಎದ್ದು ಕಿಟಕಿಯ ಬಳಿ ಹೋಗಿ ಹೊರನೋಡುವನು) ಮಳೆ ನಿಂತಿದೆಯಲ್ಲವೇ?
ಈವಿ - (ತಂದೆಯ ಹಿಂದೆ ಹೋಗಿ ಆತನ ಕೈ ಹಿಡಿಯುತ್ತಾ) ಹೌದು ಅಪ್ಪಾ.
ಬಾಲ್ಡ್ವಿನ್- ನಾಳೆ ಸುಂದರ ದಿನವಾಗಿರುತ್ತದೆ. (ಸ್ವಲ್ಪ ಕಾಲ ಮೌನ)
ಜಾನ್ಅಪ್ಪಾ!
ಬಾಲ್ಡ್ವಿನ್ಏನು?
ಜಾನ್ಗ್ರೇಷಮ್ ನಿಮಗೆಷ್ಟು ಕೊಡುತ್ತೇನೆ ಎಂದರು?
ಬಾಲ್ಡ್ವಿನ್– (ಸರಳವಾಗಿ) ಒಂದು ಲಕ್ಷ ಡಾಲರ್ ಗಳು.
 ಈವಿ - ಏನು?
ಮಾರ್ಥಾರಾಬರ್ಟ್!
ಬಾಲ್ಡ್ವಿನ್ಯಾರಿಗೂ ತಿಳಿಯದಂತೆ ಅದನ್ನು ನನಗಾಗಿ ತೆಗೆದಿಟ್ಟಿದ್ದ. ಅದು ತನ್ನ ಸ್ವಂತ ಲಾಭದಿಂದ, ಠೇವಣಿದಾರರ ದುಡ್ಡಿನಿಂದಲ್ಲವೆಂದು  ಹೇಳುತ್ತಿದ್ದಾನೆ. ಅದರಲ್ಲೇನೋ ವ್ಯತ್ಯಾಸವಿರುವಂತೆ.
ಈವಿ - (ಹಿಪ್ನಟಿಸಂಗೆ ಒಳಗಾದಂತೆ) ನಿಮಗೆ ಒಂದು ಲಕ್ಷ ಡಾಲರ್ ಕೊಡುತ್ತೇನೆ ಎಂದು ಹೇಳಿದರೇ?
ಬಾಲ್ಡ್ವಿನ್– (ಅವಳ ಆಶ್ಚರ್ಯದಿಂದ ನೋಡಿ ಮುಗುಳ್ನಗುತ್ತಾ) ನನ್ನಹೌದುಎಂಬ ಒಂದೇ ಪದದಿಂದ ಅದನ್ನು ನನ್ನದಾಗಿಸಿಕೊಳ್ಳಬಹುದಿತ್ತು. ಅಥವಾ ತಲೆ ಅಲ್ಲಾಡಿಸಿದ್ದರೂ ಆಗಿತ್ತು ಅಥವಾ ಬರಿಯ ಕಣ್ಣೋಟದಲ್ಲೇ..........
ಜಾನ್ಅವರು ಏನು ಹೇಳ ಬಯಸಿದರು ಎಂಬುದು ನಿಮಗೆ ಹೇಗೆ ಗೊತ್ತಾಯಿತು?
 ಬಾಲ್ಡ್ವಿನ್ಅವನ ಮಾತೇ ಸಾಕು.
ಜಾನ್ಈಗಲೂ?
ಬಾಲ್ಡ್ವಿನ್ಅವನು ನನ್ನೊಂದಿಗೆ ಯಾವತ್ತೂ ಸುಳ್ಳು ಹೇಳಿಲ್ಲ. (ಸ್ವಲ್ಪ ತಡೆಯುತ್ತಾನೆ) ನನ್ನ ನೋಟದಿಂದ ಏನನ್ನೋ ಅರ್ಥಮಾಡಿಕೊಂಡಿರಬೇಕು. ಅದನ್ನವನು ಗಮನಿಸಿದ. ಒಂದು ಡ್ರಾ ಹೊರತೆಗೆದು ಒಂದು ಲಕ್ಷವನ್ನು ತೋರಿಸಿದ
ಜಾನ್ - ನೋಟಿನ ರೂಪದಲ್ಲಿಯೇ?
ಬಾಲ್ಡ್ವಿನ್- ಹೌದು 1000 ಬಿಲ್ ಗಳ ರೂಪದಲ್ಲಿ. ಅವೆಲ್ಲಾ ನಿಜವಾದವು. ನಾನೇ ಪರೀಕ್ಷಿಸಿದೆ.
ಈವಿ - (ನಿಧಾನವಾಗಿ) ಅದಕ್ಕೆ ಅವನಿಗೆ ನೀವುನನಗೆ ನೆನಪಿಲ್ಲಎಂದು ಹೇಳಬೇಕು.
ಬಾಲ್ಡ್ವಿನ್– (ಮುಗುಳ್ನಗುತ್ತಾ ) ಹೌದು. ಕೇವಲ ಎರಡು ಪದಗಳು ಮಾತ್ರ
ಜಾನ್ಆದರೆ ನೀವದನ್ನು ಮಾಡುವುದಿಲ್ಲ?
ಬಾಲ್ಡ್ವಿನ್– (ತಲೆಯಾಡಿಸುತ್ತ) ಅವನ್ನು ಹೇಳಲು ಹೊರಟರೆ ಎರಡು ಪದಗಳು ನನ್ನ ಗಂಟಲು ಕಟ್ಟಿಸುತ್ತವೆ. ಬೇರೆ ಇನ್ನಾರಿಗೊ ಬಹುಶಃ ಸುಲಭವಾಗಬಹುದು. ಆದರೆ ನನಗೆ? ನನ್ನ ಇಡೀ ಗತಕಾಲ ಎದ್ದುನಿಂತು ನನ್ನ ಮುಖದ ಮೇಲೆ ಹೊಡೆಯುತ್ತಿತ್ತು. ಅಂದರೆ ಪ್ರಪಂಚಕ್ಕೆ ನಾನು ಇಷ್ಟು ದಿನವೂ ಸುಳ್ಳಿನ ಆಧಾರದ ಮೇಲೆಯೇ ಬದುಕುತ್ತಿದ್ದೀನಿ ಎಂಬುದನ್ನು ತೋರಿಸುತ್ತಿತ್ತು. ನಾನು ಭಾವಿಸಿದಂತೆ ನಾನು ಗೌರವಾನ್ವಿತ ವ್ಯಕ್ತಿಯಾಗಿರುತ್ತಿರಲಿಲ್ಲ. ಜಾನ್ ಗ್ರೇಷಮ್ ದುಡ್ಡು ನೀಡಿದಾಗ ನಾನು ಕೋಪಗೊಂಡೆ. ಆದರೆ ನಾನದನ್ನು ತಿರಸ್ಕರಿಸಿದಾಗ, ಅವನು ಆಶ್ಚರ್ಯ ವ್ಯಕ್ತಪಡಿಸಲಿಲ್ಲ. ಆಗ ನಾನು ಸಂತುಷ್ಟಗೊಂಡೆ. ಅದು ನನಗೆ ನೀಡಿದ ಪ್ರಶಂಸೆಯಾಗಿತ್ತು. ನಿಮಗೆ ರೀತಿ ಅನಿಸುವುದಿಲ್ಲವೇ?
ಜಾನ್ – (ನಿಧಾನವಾಗಿ) ಬಹಳ ದುಬಾರಿ ಪ್ರಶಂಸೆ
ಬಾಲ್ಡ್ವಿನ್ಏನು?
ಜಾನ್ - ನಿಮ್ಮಿಂದ ಒಂದು ಲಕ್ಷ ಡಾಲರ್ ವೆಚ್ಚಮಾಡಿಸಿದ ಪ್ರಶಂಸೆ.
ಬಾಲ್ಡ್ವಿನ್ಒಂದು ಲಕ್ಷ ಡಾಲರ್ ಬೆಲೆ ಪ್ರಶಂಸೆಗಿದೆ. ನನ್ನ ಇಡೀ ಜೀವನದಲ್ಲಿ ಖರ್ಚು ಮಾಡಲು ನನ್ನಲಿ ಎಂದೂ ಅಷ್ಟು ಹಣವಿರಲಿಲ್ಲ. ಜಾನ್, ಆದರೆ ನನ್ನ ಬಳಿ ಅದು ಇದ್ದರೆ, ಇದಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಖರ್ಚು ಮಾಡುವ ರೀತಿ ನನಗಂತೂ ಗೊತ್ತಿಲ್ಲ.
ಜಾನ್ – (ನಿಧಾನವಾಗಿ) ಹೌದು. ಹಾಗೆಯೇ ಮಾಡುತ್ತಿದ್ದಿರಿ.
ಮಾರ್ಥಾ – (ಸ್ವಲ್ಪ ತಡೆದು) ಠೇವಣಿದಾರರು ತುಂಬಾಲ್ಡ್ವಿನ್ಕಳೆದುಕೊಳ್ಳುವರೇ ರಾಬರ್ಟ್.
ಬಾಲ್ಡ್ವಿನ್– (ಒತ್ತಿ ಹೇಳುವನು) ಠೇವಣಿದಾರರು ಒಂದು ಸೆಂಟ್ ಅನ್ನೂ ಕಳೆದುಕೊಳ್ಳುವುದಿಲ್ಲ
ಈವಿ - (ಆಶ್ಚರ್ಯಚಕಿತಳಾಗಿ) ಆದರೆ ಪತ್ರಿಕೆಗಳು........
ಬಾಲ್ಡ್ವಿನ್– (ಮಧ್ಯ ಪ್ರವೇಶಿಸಿ) ಅವರು ಏನನ್ನಾದರೂ ಬರೆಯಲೇಬೇಕಿತ್ತು. ಅವರು ಊಹಿಸಿಕೊಂಡರು. ಆದರೆ ನನಗೆ ಗೊತ್ತು. ನಾನು ಹೇಳುತ್ತಿದ್ದೇನೆ.
ಮಾರ್ಥಾ - ಹಾಗೆ ಎಂದು ನೀವೆಂದೂ ಹೇಳಿಲ್ಲ.
ಬಾಲ್ಡ್ವಿನ್ಗ್ರೇಷಮ್ ಹೇಳಲಿ ಎಂದು ಬಿಟ್ಟೆ. ಅದು ನಾಳೆ ಹೊರಬರುತ್ತದೆ
ಜಾನ್ - ನಾಳೆ ಏತಕ್ಕೆ? ಮುಂಚೆಯೇ ನೀವೇಕೆ ಹೇಳಲಿಲ್ಲ? ಪತ್ರಿಕೆಯವರು ನಿಮ್ಮನ್ನು ಹಲವಾರು ಬಾರಿ ಕೇಳಿದ್ದಾರೆ
ಬಾಲ್ಡ್ವಿನ್ಉತ್ತರ ಹೇಳಲೇ ಬೇಕೆಂಬ ಅಗತ್ಯವೇನೂ ಇರಲಿಲ್ಲ, ಜಾನ್ .
ಜಾನ್ಅದು ನಿಮ್ಮ ನಿಜವಾದ ಕಾರಣವಲ್ಲ. ನಿಜವಾಗಿಯೂ ಅದೇ ಕಾರಣವೇ ಅಪ್ಪಾ? ಪತ್ರಿಕೆಯವರು ಬರೆಯುತ್ತಾರೆಂದು ನಿಮಗೆ ಗೊತ್ತಿತ್ತು. (ಬಾಲ್ಡ್ವಿನ್ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ ಏನೋ ಅರ್ಥವಾದಂತೆ ಜಾನ್ ಮುಖ ಬೆಳಗುತ್ತದೆ) ಗ್ರೇಷಮ್ ತಾವೇ ಹೇಳಲೆಂದು ಬಿಟ್ಟಿರಿ. ಏಕೆಂದರೆ ಅದು ಅವರ ಪರವಾಗಿರುತ್ತದೆ! ಅಲ್ಲವೇ?
ಬಾಲ್ಡ್ವಿನ್- ಹೌದು...... ಬ್ಯಾಂಕ್ ದಿವಾಳಿತನದಿಂದಲೂ ನಾವು ಸ್ವಲ್ಪ ಉಳಿಸಲು ಸಾಧ್ಯವಾಯಿತು. ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಿತ್ತು, ಎರಡು ಪಟ್ಟು. ಗ್ರೇಷಮ್ ಬಳಿ ಇರುವುದೂ ಸೇರಿದರೆ ಸರಿಹೋಗುತ್ತದೆ.
ಈವಿ - ಒಂದು ಲಕ್ಷ ಬಿಟ್ಟರೂ? (ಬಾಲ್ಡ್ವಿನ್ಉತ್ತರಿಸುವುದಿಲ್ಲ)
ಜಾನ್ – (ಒತ್ತಾಯಿಸುತ್ತ) ಗ್ರೇಷಮ್ ನಿಮಗಾಗಿ ತೆಗೆದಿಟ್ಟಿರುವ ಹಣವನ್ನು ಬಿಟ್ಟರೂ?
ಬಾಲ್ಡ್ವಿನ್- ಹೌದು. ಇಂದಿನವರೆಗೆ ಒಂದು ಲಕ್ಷ ಇದೆಯೆಂದು ನನಗೆ ಗೊತ್ತಿರಲಿಲ್ಲ. ಗ್ರೇಷಮ್ ನನಗೆ ಹೇಳಿರಲಿಲ್ಲ. ಅದಿಲ್ಲದೆಯೇ ನಾವು ಹೊಂದಿಸಿದೆವು
ಈವಿ - ಓಹೋ!
ಜಾನ್ - ನೀವು ಸಮಸ್ಯೆಗೆ ಪರಿಹಾರ ಕಂಡುಹಿಡಿದಿರುವಿರಿ?
ಬಾಲ್ಡ್ವಿನ್- ಬಹಳ ಸುಲಭವಾಗಿ  (ಮುಗುಳ್ನಗುವನು) ಮಾರ್ಷಲ್ ಮತ್ತೆ ಸಂಘಟಿಸಲು ಆರಂಭಿಸುವರು. ನ್ಯಾಷನಲ್ ಬ್ಯಾಂಕ್ ಮಾರ್ಷಲ್. ಎಲ್ಲವೂ ಇಷ್ಟು ಚೆನ್ನಾಗಿದೆ ಎಂಬುದರ ಬಗ್ಗೆ ಆತನಿಗೆ ಸ್ವಲ್ಪವೂ ಗೊತ್ತಿಲ್ಲ. (ಮೌನ)
ಜಾನ್ಅವರು ಗ್ರೇಷಮ್ ನನ್ನು ಶಿಕ್ಷಿಸುವರಲ್ಲವೇ?
ಬಾಲ್ಡ್ವಿನ್- ಬಹುಶಃ.
ಜಾನ್ಏತಕ್ಕಗಿ?
ಬಾಲ್ಡ್ವಿನ್- ಬ್ಯಾಂಕ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ----
ಜಾನ್ – (ಮಧ್ಯಪ್ರವೇಶಿಸಿ) ಓಹ್, ಅದು ನನಗೆ ಗೊತ್ತು. ಆದರೆ ಆತ ಯಾವ ಅಪರಾಧ ಮಾಡಿದ್ದಾರೆ?
ಬಾಲ್ಡ್ವಿನ್- ಬ್ಯಾಂಕ್ ದುಡ್ಡನ್ನು ದುರುಪಯೋಗ ಪಡಿಸಿಕೊಂಡಿರುವುದು ಅಪರಾಧವೇ.
ಜಾನ್ಯಾರೂ ಏನೂ ಕಳೆದುಕೊಳ್ಳದಿದ್ದರೆ?
ಬಾಲ್ಡ್ವಿನ್ಆದರೂ ಅದು ಅಪರಾಧವೇ?
ಜಾನ್ಅದಕ್ಕಾಗಿ ಅವರನ್ನು ಶಿಕ್ಷಿಸಲಿರುವರು!
ಬಾಲ್ಡ್ವಿನ್ಅವನನ್ನು ಹಾಗೆಯೇ ಬಿಡಲಾರರು ಜಾನ್, ಆತ ತುಂಬಾ ಪ್ರಮುಖ ವ್ಯಕ್ತಿ.
ಜಾನ್ - ನಿಮಗೆ ಅದು ಸರಿಯೆನಿಸುತ್ತಾ ಅಪ್ಪಾ?
ಬಾಲ್ಡ್ವಿನ್- ನನ್ನ ಅಭಿಪ್ರಾಯಕ್ಕೆ ಬೆಲೆ ಇಲ್ಲ ಜಾನ್ .
ಜಾನ್ಆದರೆ ನಿಮಗೇನನಿಸುತ್ತದೆ?
ಬಾಲ್ಡ್ವಿನ್- ನನಗೆ  - ನನಗೆ ಆತನನ್ನು ಕಂಡರೆ ಅಯ್ಯೋ ಎನಿಸುತ್ತದೆ.
ಜಾನ್ – (ನಿಧಾನವಾಗಿ) ಅದು ಕೇವಲ ಟೆಕ್ನಿಕಾಲಿಟಿ ಅಷ್ಟೇ ಅಪ್ಪಾ. ಯಾರೂ ಒಂದು ಸೆಂಟನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಗ್ರೇಷಮ್ ಗೆ ಬಹಳ ಕಷ್ಟವಾಗುತ್ತದೆ
ಬಾಲ್ಡ್ವಿನ್– (ಸ್ವಲ್ಪ ತಡೆದು) ಹೌದು ಜಾನ್ .
ಈವಿ - (ಅಂಜಿಕೆಯಿಂದ) ನೀವು ಅವನನ್ನು ಬಿಟ್ಟುಬಿಟ್ಟರೆ, ಅದೇನು ಅಷ್ಟು ಭಯಾನಕ ವಿಷಯವೇ?
ಬಾಲ್ಡ್ವಿನ್– (ಮುಗುಳ್ನಗುತ್ತ) ನನಗೆ ರೀತಿ ಮಾಡಲು ಸಾಧ್ಯವಾಗಿದ್ದರೆ ಎನಿಸುತ್ತೆ. ಆದರೆ ನಾನೇನೂ ನ್ಯಾಯಾಧೀಶನಲ್ಲವಲ್ಲ.
ಈವಿ - ಅಲ್ಲ. ಆದರೆ.......
ಬಾಲ್ಡ್ವಿನ್ಆದರೆ ಏನು?
ಈವಿ - ನೀವೊಬ್ಬರೇ ಆತನ ವಿರುದ್ಧ ಸಾಕ್ಷಿ.
ಬಾಲ್ಡ್ವಿನ್– (ಆಶ್ಚರ್ಯಚಕಿತನಾಗಿ) ಈವಿ!
ಜಾನ್ಅವಳ ಮಾತು ಸರಿಯಾಗಿದೆ ಅಪ್ಪಾ!
ಬಾಲ್ಡ್ವಿನ್- ನೀನೂ ಅದೇ ರೀತಿ ಹೇಳುವೆಯಾ ಜಾನ್?
ಜಾನ್ಜಾನ್ ಗ್ರೇಷಮ್ ನನ್ನು ಜೈಲಿನಲ್ಲಿ ಹಾಕಿದರೆ, ಅದು ಎಂತಹ ಅಸಹ್ಯ ಸಂಗತಿ...... ನಿಮ್ಮ ಮಗನಿಗೆ ಅವರ ಹೆಸರಿಟ್ಟು ನಂತರ..... ನನಗೆಜಾನ್ ಗ್ರೇಷಮ್ ಬಾಲ್ಡ್ವಿನ್ಬಹಳ ಚೆನ್ನಾಗಿರುತ್ತದೆ ಅಲ್ಲವೇ?
ಮಾರ್ಥಾ – (ಸ್ವಲ್ಪ ತಡೆದುರಾಬರ್ಟ್, ನೀವು ಮೊದಲು ಹೇಳಿದ್ದನ್ನು ನಾನು ಅರ್ಥಮಾಡಿಕೊಂಡೆನೆಂದು ನನಗೆ ಖಚಿತವಾಗಿಲ್ಲ. ಗ್ರೇಷಮ್ ಗಾಗಿ ನೀವೇನು ಮಾಡಬೇಕೆಂದು ಅವರು ಬಯಸಿದರು
ಬಾಲ್ಡ್ವಿನ್ಅವನನ್ನು ನಾಳೆ ಬಿಡುಗಡೆಗೊಳಿಸಬೇಕೆಂದು.
ಮಾರ್ಥಾ - ನಿಮಗೆ ಅದನ್ನು ಮಾಡಲು ಸಾಧ್ಯವಿದೆಯೇ?
ಬಾಲ್ಡ್ವಿನ್- ಹೌದು.
ಮಾರ್ಥಾ - ಹೇಗೆ?
ಬಾಲ್ಡ್ವಿನ್ವಿಚಾರಣೆಯಲ್ಲಿ ನನಗೆ ಭಯಾನಕ(ಕ್ಲಿಷ್ಟ) ಪ್ರಶ್ನೆಗಳನ್ನು ಹಾಕಿದಾಗನನಗೆ ನೆನಪಿಲ್ಲಎಂದು ಹೇಳುವುದರಿಂದ
ಮಾರ್ಥಾಓಹ್! ಅಂದರೆ ನಿಮಗೆ ಎಲ್ಲವೂ ನೆನಪಿದೆ?
ಬಾಲ್ಡ್ವಿನ್- ಹೌದು. ಎಲ್ಲವು.
ಜಾನ್ಅವರು ಏನನ್ನು ಕೇಳಿದರೂ?
ಬಾಲ್ಡ್ವಿನ್- ನೆನಪು ತರಿಸಿಕೊಳ್ಳಬಹುದು. ನನ್ನ ಬಳಿ ನೋಟ್ಸ್ ಇದೆ.
ಜಾನ್ಆದರೆ ನೋಟ್ಸ್ ಇಲ್ಲದೆ ನಿಮಗೆ ನೆನಪಿರಲಾರದು?
ಬಾಲ್ಡ್ವಿನ್- ಹಾಗಂದರೆ ಏನು, ಜಾನ್ ?
ಜಾನ್ – (ಉತ್ತರ ಹೇಳದೆ) ವಾಸ್ತವಿಕವಾಗಿ ನೀವು ಎಲ್ಲದಕ್ಕೂ ನಿಮ್ಮ ನೋಟ್ಸ್ ಅನ್ನು ನಂಬಬೇಕಾಗುತ್ತದೆ. ಅಲ್ಲವೇ?
ಬಾಲ್ಡ್ವಿನ್- ಪ್ರತಿಯೊಬ್ಬರೂ ಸಹ ಅದನ್ನೇ ಮಾಡುವುದು.
ಜಾನ್ - ಹಾಗಾದರೆನನಗೆ ನೆನಪಿಲ್ಲಎಂದರೆ ಅದು ಸತ್ಯಕ್ಕೆ ದೂರವೇನೂ ಆಗುವುದಿಲ್ಲ ಅಲ್ಲವೇ?
ಮಾರ್ಥಾಗ್ರೇಷಮ್ ನಿಮ್ಮಿಂದ ಹೆಚ್ಚೇನೂ ಬಯಸುತ್ತಿಲ್ಲ ಎನಿಸುತ್ತೆ.
ಬಾಲ್ಡ್ವಿನ್ಮಾರ್ಥಾ 
ಮಾರ್ಥಾರಾಬರ್ಟ್, ನಾನೂ ನಿಮ್ಮಷ್ಟೇ ಗೌರವಾನ್ವಿತಳು........
ಬಾಲ್ಡ್ವಿನ್ಅದು ಹೇಳದೆಯೇ ತಿಳಿಯುತ್ತೆ ಮಾರ್ಥಾ .
ಮಾರ್ಥಾನಿಮ್ಮ ಹಳೆಯ ಸ್ನೇಹಿತನನ್ನು ಜೈಲಿಗೆ ಕಳಿಸುವುದು ಸರಿ ಎಂದು ನನಗನಿಸುವುದಿಲ್ಲ (ಮಾತನಾಡುತ್ತಲೇ ಕೈಮೇಲೆ ಎತ್ತುವಳು) ಈಗ ಮಧ್ಯದಲ್ಲಿ ಮಾತನಾಡಬೇಡಿ! ನಾನೂ ಯೋಚಿಸುತ್ತಿದ್ದೇನೆ. ಜಾನ್ ಗೆ ಹೆಸರಿಟ್ಟಾಗ ಗ್ರೇಷಮ್ ಅವನ ಧರ್ಮಪಿತನಾಗಿ ನಿಂತಾಗ ನಮಗೆಷ್ಟು ಹೆಮ್ಮೆಯಿತ್ತು! ನಾವು ಚರ್ಚಿನಿಂದ ಹಿಂತಿರುಗಿ ಬಂದಾಗ ನೀವು ಹೇಳಿದಿರಿನೀವೇನು ಹೇಳಿದಿರಿ ಎಂದು ನಿಮಗೆ ನೆನಪಿದೆಯೇ?
ಬಾಲ್ಡ್ವಿನ್ಇಲ್ಲ. ಏನದು?
ಮಾರ್ಥಾ – “ಮಾರ್ಥಾ, ನಮ್ಮ ಮಗ ಅವನಿಗೆ ನಾವು ಕೊಟ್ಟಿರುವ ಹೆಸರಿಗೆ ತಕ್ಕವನಾಗಿರಲಿ,” ಎಂದಿರಿ! ಅದು ನಿಮಗೆ ನೆನಪಿದೆಯೇ?
ಬಾಲ್ಡ್ವಿನ್ - ಹೌದು, ಅಸ್ಪಷ್ಟವಾಗಿ.
ಜಾನ್ - ಹಾ! ಬರಿ ಅಸ್ಪಷ್ಟವಾಗಿಯೇ ಅಪ್ಪಾ?
ಬಾಲ್ಡ್ವಿನ್ - ಹಾಗಂದರೇನು ಜಾನ್?
       ಮಾರ್ಥಾ : (ಜಾನ್ ಗೆ ಉತ್ತರಿಸಲು ಅವಕಾಶ ನೀಡುವುದಿಲ್ಲ) ಜಾನ್ ಗ್ರೇಷಮ್ ಹೆಸರು - ನಮ್ಮ ಮಗನ ಹೆಸರು - ನಿಮ್ಮಿಂದಾಗಿ ದುಃಖಕ್ಕೆ ಒಳಗಾಗಬೇಕೆಂದರೆ ಅದು ಬಹಳ ದುಃಖದಾಯಕ ರಾಬರ್ಟ್.
ಬಾಲ್ಡ್ವಿನ್ – (ಸ್ವಲ್ಪ ತಡೆದು) ಮಾರ್ಥಾ , ಹಾಗಾದರೆ ನಾನು ಲಂಚವನ್ನು ಒಪ್ಪಿಕೊಳ್ಳಬೇಕೆಂದು ಹೇಳುತ್ತಿದ್ದೀಯಾ?
ಈವಿ - ಅದನ್ನು ಲಂಚವೆಂದು ಏಕೆ ಕರೆಯುತ್ತೀಯಾ ಅಪ್ಪಾ?
ಬಾಲ್ಡ್ವಿನ್ – (ಕಹಿಯಾಗಿ) ಏಕಲ್ಲ? ಗ್ರೇಷಮ್ ಅದಕ್ಕೆ ಇನ್ನು ಸುಂದರವಾದ ಹೆಸರನ್ನು ಕೊಟ್ಟಿದ್ದ. ನನಗೆ ಇಷ್ಟು ದಿನ ಕಡಿಮೆ ವೇತನ ನೀಡಿದೆ ಎಂದು ಹೇಳಿದ. ನಿನಗೆ ಗೊತ್ತು ಬ್ಯಾಂಕ್ ದಿವಾಳಿಯಾದಾಗ ನನಗೆ ವರ್ಷಕ್ಕೆ 5000 ಮಾತ್ರ ಸಿಗುತ್ತಿತ್ತು.......
ಜಾನ್ – (ಅಸಹನೀಯತೆಯಿಂದ) ಹೌದು, ಹೌದು!
ಬಾಲ್ಡ್ವಿನ್ - ನನಗೆ ಅವನು ಕೊಟ್ಟ ವೇತನ ಮತ್ತು ಎಷ್ಟು ಬೆಲೆಯುಳ್ಳವನಾಗಿದ್ದೆ ಎಂಬುದರ ವ್ಯತ್ಯಾಸವೇ ಒಂದು ಲಕ್ಷ ಎಂದು ಹೇಳಿದ.
ಮಾರ್ಥಾಅದೂ ಸತ್ಯವೇ. ನೀವು ಅವನಿಗೆ ನಂಬಿಕರ್ಹವಾಗಿ ಕೆಲಸ ಮಾಡಿದ್ದೀರಿ.
ಬಾಲ್ಡ್ವಿನ್ಆತ ನನಗೆ ಕೊಡಬೇಕಾದದ್ದನ್ನು ಕೊಟ್ಟಿದ್ದರೆ, ನಾನೇ ಈಗ ಅಷ್ಟು ಹಣ ಕೂಡಿಸಲಾಗುತ್ತಿತ್ತು ಎಂದ.
ಜಾನ್ಅದೂ ನಿಜವೇ, ಅಲ್ಲವೇ ಅಪ್ಪಾ?
ಬಾಲ್ಡ್ವಿನ್ಯಾರಿಗೆ ಗೊತ್ತು? ನನ್ನ ಸಂಬಳ ಜಾಸ್ತಿ ಮಾಡೆಂದು ನಾನೇನು ಅವನನ್ನು ಯಾವತ್ತೂ ಕೇಳಲಿಲ್ಲ. ಆತ ಹೆಚ್ಚಿಸಿದರೂ ಅದು ಅವನಿಚ್ಛೆಯಿಂದಲೇ. (ಮೌನವಿದೆ. ಸುತ್ತಲೂ ನೋಡುವನು) ನೀನೇನು ಅಂದುಕೊಳ್ಳುತ್ತಿ ಈವಿ?
ಈವಿ - (ಹಿಂಜರಿಕೆಯಿಂದಲೇ) ನಾಳೆ ನೀವು ಕಟಕಟೆಯನ್ನು ಹತ್ತಿದಾಗಲೇ..?
ಬಾಲ್ಡ್ವಿನ್ - ಹೌದು.
ಈವಿ - ಜಾನ್ ಗ್ರೇಷಮ್ ನನ್ನು ಜೈಲಿಗೆ ಹಾಕಿದರೆ ಜನ ಏನೆನ್ನುವರು?
ಬಾಲ್ಡ್ವಿನ್ - ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎನ್ನುವರು ಈವಿ . ಇದಕ್ಕಿಂತ ಹೆಚ್ಚೇನೂ ಅಲ್ಲ
ಈವಿ - ಹಾಗನ್ನುವರೇ?
ಬಾಲ್ಡ್ವಿನ್ಏಕೆ, ಇನ್ನೇನು ಹೇಳಬೇಕು?
ಈವಿ - ನನಗೆ ಹಾಗನಿಸುವುದಿಲ್ಲ. ಇತರ ಜನರು ನಿಮ್ಮ ಆತ್ಮೀಯ ಸ್ನೇಹಿತನಿಗೆ ದ್ರೋಹ ಬಗೆ ಎಂದುಕೊಳ್ಳುತ್ತಾರೆ.
ಬಾಲ್ಡ್ವಿನ್ - ನೀನೂ ಅವರಂತೆಯೇ ಭಾವಿಸುವುದಿಲ್ಲವಲ್ಲ ಈವಿ?
ಈವಿ - ಜನರಿಗೆ ತಾವು ದುಡ್ಡನ್ನು ಕಳೆದುಕೊಳ್ಳುವುದಿಲ್ಲ ಎಂದು ಗೊತ್ತಾದಾಗ, ಜಾನ್ ಗ್ರೇಷಮ್ ಅವರ ಪ್ರತಿಯೊಂದು ಸೆಂಟನ್ನು ಕೊಡುವೆನೆಂದು ಹೇಳಿದಾಗ ಅವರಿಗೆ ಗ್ರೇಷಮ್ ಜೈಲಿಗೆ ಹೋಗುವುದು ಇಷ್ಟವಾಗುವುದಿಲ್ಲ. ಅವರ ಬಗ್ಗೆ ಕರುಣೆ ತೋರುತ್ತಾರೆ.
ಬಾಲ್ಡ್ವಿನ್ - ಹೌದು. ಹಾಗೆಯೇ ಆಗುತ್ತದೆ. ಹಾಗೆಯೇ ಆಗಲಿ.
ಜಾನ್ಆದರೆ ಅವರನ್ನು ಜೈಲಿಗೆ ಕಳಿಸಲು ಸಹಾಯ ಮಾಡಿದ ವ್ಯಕ್ತಿಯನ್ನು ಜನರು ಸರಿಯಾಗಿ ನೋಡಲಾರರು.
ಮಾರ್ಥಾ - ನೀವು ನಿಮ್ಮ ಆತ್ಮೀಯ ಸ್ನೇಹಿತನಿಗೆ ಮೋಸ ಮಾಡಿದಿರಿ ಎಂದುಕೊಳ್ಳುತ್ತರೆ.
ಜಾನ್ - ನಾಳೆ ನೀವು ಕೋರ್ಟಿನಲ್ಲಿ ನೋಟ್ಸ್ ತೆಗೆದರೆ, ಅವರನ್ನು ಜೈಲಿಗೆ ಖಚಿತ! (ತಿರಸ್ಕಾರದಿಂದ ಮಾತನ್ನು ಅಲ್ಲಿಗೆ ನಿಲ್ಲಿಸುವನು)
ಈವಿ - ಗ್ರೇಷಮ್ ನಿಜವಾಗಲೂ ಯಾವ ತಪ್ಪನ್ನು ಮಾಡಿಲ್ಲ.
ಜಾನ್ಅದು ಕೇವಲ ಟೆಕ್ನಿಕಾಲಿಟಿಯಷ್ಟೇ. ಯಾರೂ ಒಂದು ಸೆಂಟನ್ನು ಕಳೆದುಕೊಳ್ಳುವುದಿಲ್ಲ. ಯಾರಿಗೂ ಅವನನ್ನು ಶಿಕ್ಷಿಸುವುದು ಬೇಕಿಲ್ಲ.
ಈವಿ - ನಿಮ್ಮೊಬ್ಬರನ್ನು ಬಿಟ್ಟು ಅಪ್ಪಾ!
ಜಾನ್ಹೌದು. ನಿಮ್ಮ ಮಗನಿಗೆ ಯಾರ ಹೆಸರನ್ನಿಟ್ಟಿರೋ ಅವರನ್ನೇ ನೀವು ಜೈಲಿಗೆ ಕಳಿಸಲು ಸಿದ್ಧರಾಗಿರುವಿರಿ!
ಮಾರ್ಥಾ – (ಸ್ವಲ್ಪ ತಡೆದು) ಕರುಣೆ ತೋರಬೇಕೆಂಬುದು ನನ್ನ ಅಭಿಮತ, ರಾಬರ್ಟ್.
ಬಾಲ್ಡ್ವಿನ್ಕರುಣೆ ತೋರುವುದೇ?
ಮಾರ್ಥಾಗ್ರೇಷಮ್ ನಿಮ್ಮ ಜೊತೆ ಯಾವಾಗಲೂ ಒಳ್ಳೆಯವರಾಗಿಯೇ ಇದ್ದರು.
(ಮತ್ತೆ ಮೌನ. ವಿಚಿತ್ರವಾಗಿ ಒಬ್ಬರು ಈವಿನ್ನೊಬ್ಬರನ್ನು ನೋಡಲು ನಿರಾಕರಿಸುತ್ತಾರೆ) ಹಾ! ಈಗೇನು ಮಾಡುವೆ, ರಾಬರ್ಟ್?
ಬಾಲ್ಡ್ವಿನ್ಏನು ನಿನ್ನ ಮಾತಿನರ್ಥ?
ಮಾರ್ಥಾ - ಬ್ಯಾಂಕ್ ಮುಚ್ಚಿದಾಗಿನಿಂದ ನಿಮಗೆ ಉದ್ಯೋಗವಿಲ್ಲ.
ಬಾಲ್ಡ್ವಿನ್ – (ಭುಜ ಹಾರಿಸುತ್ತಾ) ಓಹೋ, ನನಗೆ ಕೆಲಸ ಸಿಗುತ್ತದೆ.
ಮಾರ್ಥಾ – (ತಲೆಯಲ್ಲಾಡಿಸುತ್ತಾ) ವಯಸ್ಸಿನಲ್ಲಿ?
ಬಾಲ್ಡ್ವಿನ್ಅವರು ಮನುಷ್ಯನನ್ನು ನೋಡುತ್ತಾರೆ.
ಮಾರ್ಥಾ - ಹೌದು, ಇದನ್ನೇ ಒಂದು ತಿಂಗಳ ಕೆಳಗೆ ಹೇಳಿದ್ದಿರಿ.
ಜಾನ್ಡೊನೋವನ್ ನಿಂದ ನನಗೆ ಗೊತ್ತಾಗಿದ್ದೇನೆಂದರೆ
ಬಾಲ್ಡ್ವಿನ್ – (ತ್ವರಿತವಾಗಿ) ಏನು ಗೊತ್ತಾಯಿತು?
ಜಾನ್ಆತ ನ್ಯಾಷನಲ್ ಬ್ಯಾಂಕಿಗೆ ಹೋಗಿದ್ದಾನೆ, ಗೊತ್ತಿರಬೇಕಲ್ಲವೇ?
ಬಾಲ್ಡ್ವಿನ್ - ಹೌದು, ಆತ ಪುನರ್ ಸಂಘಟನೆಯಲ್ಲಿ ಸಹಾಯ ಮಾಡುತ್ತಿದ್ದಾನೆ.
ಜಾನ್ಅವರು ನಿಮ್ಮನ್ನು ಅಲ್ಲಿ ತೆಗೆದುಕೊಳ್ಳಲಾರರು
ಬಾಲ್ಡ್ವಿನ್ಅವರಲ್ಲಿ ಈಗಾಗಲೇ ಸಾಕಷ್ಟು ಜನ ಇದ್ದಾರೆ. ಅವರು ನನಗೆ ಗುಮಾಸ್ತನ ಕೆಲಸ ಕೊಡಲಾಗಲಿಲ್ಲ.
ಜಾನ್ಅದು ಅವರು ನಿಮಗೆ ಹೇಳಿದ್ದು,
ಬಾಲ್ಡ್ವಿನ್ಅದು ನಿಜವಲ್ಲವೇ?
ಜಾನ್ – (ತಲೆಯಲ್ಲಾಡಿಸುತ್ತಾ) ಜಾನ್ ಗ್ರೇಷಮ್ ನಷ್ಟೇ ತಪ್ಪಿತಸ್ಥನಾಗಿರುವ ಮಾರ್ಥಾನುಷ್ಯನನ್ನು ಕೆಲಸಕ್ಕೆ ತೆಗೆದುಕೊಳ್ಳಲಾರೆನೆಂದು ಬ್ಯಾಂಕಿನ ಅಧ್ಯಕ್ಷ ಮಾರ್ಷಲ್ ಹೇಳಿದರು.
ಬಾಲ್ಡ್ವಿನ್ಆದರೆ ನಾನು ತಪ್ಪಿತಸ್ಥನಲ್ಲವಲ್ಲ!
ಜಾನ್ಯಾರಿಗೆ ಗೊತ್ತು ಅದು?
ಬಾಲ್ಡ್ವಿನ್ - ನಾಳೆ ಪ್ರತಿಯೊಬ್ಬರಿಗೂ ತಿಳಿಯುತ್ತದೆ.
ಜಾನ್ಆದರೆ ಅವರು ನಿಮ್ಮನ್ನು ನಂಬುವರೇ? ನೀವು ನಿಮ್ಮ ಜೀವವನ್ನು ರಕ್ಷಿಸಿಕೊಳ್ಳಲೆತ್ನಿಸುತ್ತಿರುವಿರಿ ಎಂದುಕೊಳ್ಲಲಾರರೇ?
ಬಾಲ್ಡ್ವಿನ್ - ಬ್ಯಾಂಕ್ ದಿವಾಳಿತನದ ಬಗ್ಗೆ ನನಗೆ ಎರಡು ದಿನಗಳ ಮೊದಲಷ್ಟೇ ತಿಳಿಯಿತು.
ಜಾನ್ಅದನ್ನು ನಂಬುವವರು ಯಾರು?
ಬಾಲ್ಡ್ವಿನ್ಅವರು ನಂಬಲೇಬೇಕಾಗುತ್ತದೆ!
ಜಾನ್ಯಾವ ರೀತಿ ನಂಬಿಸುವಿರಿ? ನೀವು ಎಲ್ಲಿ ಹೋದರೂ ವಿಷಯ ನಿಮಗೆ ವಿರುದ್ಧವಾಗಿ ಹೋಗುತ್ತದೆ, ಅಪ್ಪಾ. ನೀವು ಗ್ರೇಷಮ್ ವಿರುದ್ಧ ಸಾಕ್ಷಿ ಹೇಳುವುದರಿಂದ ಪರಿಸ್ಥಿತಿಯೇನೂ ಬದಲಾಗುವುದಿಲ್ಲ. ನಿಮಗೇನಾದರೂ ಕೆಲಸ ಸಿಕ್ಕರೆ ಅದು ಅವರೊಂದಿಗೆ ಮಾತ್ರ! ( ವಿಚಾರ ಬಾಲ್ಡ್ವಿನ್ನನ್ನು ಚಕಿತಗೊಳಿಸುತ್ತದೆ. ಅಚ್ಚರಿಯನ್ನೂ ವ್ಯಕ್ತ ಪಡಿಸುತ್ತಾನೆ)
ಗ್ರೇಷಮ್ ಜೈಲಿಗೆ ಹೋಗದಿದ್ದರೆ ವ್ಯಾಪಾರ ಶುರುಮಾಡುತ್ತಾರೆ ಅಲ್ಲವೇ? ನಿಮಗೆ ಆಗ ಪಾಲುದಾರರ ಸ್ಥಾನಕ್ಕಿಂತ ಕಡಿಮೆಯದೇನನ್ನೂ ನೀಡಲು ಸಾಧ್ಯವಿಲ್ಲ.
ಬಾಲ್ಡ್ವಿನ್ - ಪಾಲುಗಾರಿಕೆಯೇ?
ಜಾನ್ (ಅರ್ಥಪೂರ್ಣವಾಗಿ) ಒಂದು ಲಕ್ಷ ಬಂಡವಾಳದೊಂದಿಗೆ ನೀವು ವ್ಯಾಪಾರದಲ್ಲಿ ತೊಡಗಬಹುದು ಅಪ್ಪಾ.
ಬಾಲ್ಡ್ವಿನ್ಜಾನ್!
ಜಾನ್ - ಬಂಡವಾಳ ಲೆಕ್ಕಕ್ಕೆ ಬರುವುದಿಲ್ಲಬಿಡಿ. ಅದರ ಜೊತೆಗೆ ನಿಮ್ಮ ಬಗ್ಗೆ ಅವರು ಕೃತಜ್ಞತೆಯನ್ನು ಹೊಂದಿರುತ್ತಾರೆ. (ಮೌನವಿದೆ)
ಮಾರ್ಥಾಒಂದು ಲಕ್ಷವೆಂದರೆ ನಮಗೆ ಬಹಳ ಹೆಚ್ಚಿನದೆ ರಾಬರ್ಟ್. ನಿಮಗೆ ತಕ್ಷಣ ಕೆಲಸ ಸಿಗದಿದ್ದರೆ ಜಾನ್ ನಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ.
ಜಾನ್ವಾರಕ್ಕೆ 60 ಡಾಲರ್ ಗಳು ಅಪ್ಪಾ.
ಈವಿ - ಅದು ಬಹಳ ಕಾಲ ನಡೆಯುವುದಿಲ್ಲ.
ಮಾರ್ಥಾಜಾನ್ ಮೇಲೆ ಹೇರುವುದೂ ಸರಿಯಿಲ್ಲ.
ಜಾನ್ – (ಕೋಪದಿಂದ) ನನ್ನ ಬಗ್ಗೆ ಏನೂ ಚಿಂತಿಸಬೇಡಿ. (ಈವಿ ಅಳಲಾರಂಭಿಸುತ್ತಳೆ) ನೋಡಿ ಅಪ್ಪಾ, ನೀವು ಪತ್ರಿಕೆಯವರಿಗೆ ಏನನ್ನೂ ಹೇಳಿಲ್ಲ. ನಾಳೆಯೂ ನೀವು ಏನೂ ಹೇಳದಿದ್ದರೆ ನಿಮ್ಮ ಸ್ನೇಹಿತನ ಜೊತೆ ನೀವಿದ್ದಿರಿ ಎಂಬುದನ್ನು ಬಿಟ್ಟರೆ ಇನ್ನೇನೂ ಅಲ್ಲ. ಅದೇ ಸರಿ. ಅಷ್ಟನ್ನೇ ಆತ ನಿಮಗೂ ಮಾಡುತ್ತಾನೆ.
ಬಾಲ್ಡ್ವಿನ್ – (ಮನವಿ ಮಾಡುವ ರೀತಿಯಲ್ಲಿ ಎಲ್ಲರ ಮುಖ ನೋಡುತ್ತಾನೆ. ಅವರು ವಿಮುಖರಾಗಿದ್ದಾರೆ. ಆಗ) ನಿಮಗೆ - ನಿಮಗೆ ನಾನು ಹಣವನ್ನು ತೆಗೆದುಕೊಳ್ಳಬೇಕಾಗಿದೆ? (ಉತ್ತರವಿಲ್ಲ) ಒಬ್ಬರಾದರೂಹೌದುಎನ್ನಿ (ಉತ್ತರವಿಲ್ಲ) ಅಥವಾಇಲ್ಲ’ (ದೀರ್ಘ ಮೌನ. ಅಂತಿಮವಾಗಿ) ನಾನು ಗ್ರೇಷಮ್ ಜೊತೆ ಪಾಲುಗಾರಿಕೆಗೆ ಹೋಗಲಾರೆ.
ಮಾರ್ಥಾ – (ತ್ವರೆಯಾಗಿ) ಏಕೆ?
ಬಾಲ್ಡ್ವಿನ್ಜನ ಅವನನ್ನು ನಂಬುವುದಿಲ್ಲ.
ಜಾನ್ - ಹಾಗಿದ್ದಲ್ಲಿ ನೀವು ಬೇರೆಯವರೊಂದಿಗೆ ಹೋಗಬಹುದು ಅಪ್ಪಾ. ಒಂದು ಲಕ್ಷ ತುಂಬಾಲ್ಡ್ವಿನ್ದೊಡ್ಡ ಮೊತ್ತ.
ಬಾಲ್ಡ್ವಿನ್ – (ಕಿಟಕಿಯ ಬಳಿ ಹೋಗಿ ಹೊರನೋಡುವನು) ದಿನ ಬರುತ್ತದೆಂದು ನಾನೆಂದೂ ಭಾವಿಸಿರಲಿಲ್ಲ. ನನಗೆ ಗೊತ್ತು - ನನಗೆ ಗೊತ್ತು - ಪರವಾಗಿಲ್ಲ ....... ಹಣವನ್ನು ನಾನು ತೆಗೆದುಕೊಂಡರೆ ಅಗೌರವದ ಕೆಲಸ ಮಾಡುತ್ತಿದ್ದೇನೆಂದು ನನಗೆ ಗೊತ್ತು. ನಿಮಗೂ ಗೊತ್ತು! ನೀನು, ನೀನು ಮತ್ತು ನೀನು! ಎಲ್ಲರೂ ! ಬನ್ನಿ, ಒಪ್ಪಿಕೊಳ್ಳಿ!
ಜಾನ್ – (ದೃಢವಾಗಿ) ಯಾರಿಗೂ ಇದರ ಬಗ್ಗೆ ಗೊತ್ತಾಗುವುದಿಲ್ಲ.
ಬಾಲ್ಡ್ವಿನ್ಆದರೆ ನಮ್ಮೊಳಗೆ ಜಾನ್! ಪ್ರಪಂಚಕ್ಕೆ ನಾವು ಏನೇ ಆದರೂ ನಮ್ಮೊಳಗೆ ನಾವು ಪ್ರಾಮಾಣಿಕರಾಗಿರಬೇಕಲ್ಲವೇ, ನಮ್ಮ ನಾಲ್ವರೊಳಗೆ? (ಆತನ ನೋಟ ಜಾನ್ ನಿಂದ ಈವಿ ಯತ್ತ ಹೊರಳುತ್ತದೆ. ಅವಳು ತಲೆ ಬಾಗಿಸಿರುವಳು. ಹೆಂಡತಿ ತಲೆ ಬಾಗಿಸಿ ಕಸೂತಿ ಹಣೆಯುವುದರಲ್ಲಿ ತೊಡಗಿರುವಳು. ಆತ ಮಾರ್ಥಾಳ ತಲೆ ಎತ್ತಿ ಅವಳನ್ನೇ ದೃಷ್ಟಿಸುವನು. ನೋಡಿ ನಡುಗುವನು) ಮೋಸಗಾರರು! ಸುಳ್ಳರು! ಗೋಮುಖವ್ಯಾಘ್ರರು! ಕಳ್ಳರು! ನಾನೇನೂ ನಿಮಗಿಂತ ಹೆಚ್ಚೇನೂ ಅಲ್ಲ. ನಾವು ನಮ್ಮ ಆತ್ಮಗಳನ್ನು ನೋಡಿಕೊಂಡಿದ್ದೇವೆ. ಅವು ದೂರದವರೆಗೆ ದುರ್ನಾತ ಹೊಡೆಯುತ್ತವೆ! ಏಕೆ? ಯಾರೊಬ್ಬರೂ ಉತ್ತರ ನೀಡುತ್ತಿಲ್ಲ?
ಮಾರ್ಥಾ – (ಕೆಳಧ್ವನಿಯಲ್ಲಿ) ಅದೇನು ತಪ್ಪಲ್ಲ ರಾಬರ್ಟ್.
ಬಾಲ್ಡ್ವಿನ್ – ಅದು ಸರಿಯಲ್ಲ.
ಜಾನ್ – (ನೇರವಾಗಿ ಎದುರಿಸುತ್ತಾ) ಒಂದು ಲಕ್ಷವೆಂದರೆ ಬಹಳ ದೊಡ್ಡ ಮೊತ್ತ ಅಪ್ಪಾ.
ಬಾಲ್ಡ್ವಿನ್ – (ನಿಧಾನವಾಗಿ ತಲೆಯಾಡಿಸುತ್ತಾ) ಈಗ ನೀನು ನನ್ನನ್ನು ನೇರವಾಗಿ ನೋಡಬಗುದು ಮಗು, ಸಾಧ್ಯವಿಲ್ಲವೇ?
ಜಾನ್ – ( ಅಲುಗಾಡದೆ) ಅಪ್ಪಾ, ನೀವೇಕೆ ತಿರಸ್ಕರಿಸಿದಿರಿ? ನಾವೇನು ಹೇಳುತ್ತೇವೆ ಎಂದು ಹೆದರಿಕೆಯಿತ್ತಲ್ಲವೇ ನಿಮಗೆ?
ಬಾಲ್ಡ್ವಿನ್ – (ದೀರ್ಘಮೌನದ ನಂತರ) ಹೌದು ಜಾನ್ .
ಜಾನ್ ಬಗ್ಗೆ ಯಾರೊಬ್ಬರಿಗೂ ತಿಳಿಯುವುದಿಲ್ಲ
ಬಾಲ್ಡ್ವಿನ್ - ನಮ್ಮ ನಾಲ್ವರನ್ನು ಬಿಟ್ಟು.
ಜಾನ್ - ಹೌದುಅಪ್ಪಾ. (ಇದ್ದಕ್ಕಿದ್ದಂತೆ ದೂರವಾಗುವರು. ಈವಿ ಮೌನವಾಗಿ ಅಳುತ್ತಿದ್ದಾಳೆ. ಮಾರ್ಥಾ ಕಡಿಮೆ ಭಾವೋದ್ವೇಗ ಉಳ್ಳವಳಾದ್ದರಿಂದ ತನ್ನ ಮೂಗನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಕಸೂತಿ ಹಣೆಯುವುದರಲ್ಲಿ ಮಗ್ನಳಾಗಿದ್ದಾಳೆ. ಜಾನ್ ಇನ್ನೇನು ಮಾಡಲು ಉಳಿದಿಲ್ಲವೆಂಬಂತೆ ಕಿಟಕಿಯಾಚೆ ನೋಡುತ್ತಾನೆಬಾಲ್ಡ್ವಿನ್ ಒಲೆಯ ಹತ್ತಿರ ಬಂದು ಮುಷ್ಠಿಯನ್ನು ಸಡಿಲಗೊಳಿಸುತ್ತಾ ಮತ್ತೆ ಬಿಗಿಯುತ್ತಾ ನಿಂತಿದ್ದಾನೆ) ಯಾರೋ ಬರುತ್ತಿದ್ದಾರೆ.
ಮಾರ್ಥಾ – (ತಲೆ ಎತ್ತುತ್ತಾ) ಯಾರದು?
ಜಾನ್ - ನನಗೆ ಕಾಣಿಸುತ್ತಿಲ್ಲ. (ಆಕಸ್ಮಿಕ ಗ್ರಹಿಕೆಯಿಂದ) ಮಾರ್ಷಲ್ ರವರಿದ್ದಂತಿದೆ.
ಬಾಲ್ಡ್ವಿನ್ – ಮಾರ್ಷಲ್ ರವರೇ? (ಕರೆಗಂಟೆಯ ಸದ್ದು ಕೇಳಿಸುತ್ತದೆ. ಬಾಗಿಲು ಕಾಣಿಸುವ ಕಿಟಕಿಯ ಬಳಿ ಹೋಗುತ್ತಾನೆ) ಹೌದು, ಮಾರ್ಷಲ್ ರವರೇ!
ಮಾರ್ಥಾ - ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರು?
ಬಾಲ್ಡ್ವಿನ್ - ಹೌದು. ಅವರಿಗೆ ಇಲ್ಲೇನು ಕೆಲಸವಿದೆ?
ಈವಿ - ಅವರನ್ನು ಒಳಗೆ ಕರೆಯಲೇ ಅಪ್ಪಾ?
ಬಾಲ್ಡ್ವಿನ್ – ಖಚಿಡಿತವಾಗಿ (ಈವಿ ಹೊರಹೋಗುತ್ತಾಳೆ)
ಮಾರ್ಥಾ – (ಬೇಗನೆ ಬಾಲ್ಡ್ವಿನ್ಬಳಿ ಹೋಗುತ್ತಾಳೆ) ರಾಬರ್ಟ್! ನೀವೇನು ಹೇಳುತ್ತೀರಾ ಎಂಬುದರ ಬಗ್ಗೆ ಹುಷಾರಾಗಿರಿ. ನಾಳೆ ನೀವು ಸಾಕ್ಷ್ಯ ಹೇಳಬೇಕಾಗಿದೆ.
ಬಾಲ್ಡ್ವಿನ್ – (ಉದ್ವಿಗ್ನತೆಯಿಂದ) ಹಾ! ಆಯ್ತು.
ಮಾರ್ಥಾಅವರೇ ಮಾತಾಡಲಿ. ನೀವೇನು ಹೇಳಬೇಡಿ. (ಈವಿ ಒಳಬರುವಳು. ಮಾರ್ಷಲ್ ಬರುವರು)
ಮಾರ್ಷಲ್ಮದ್ಯಾಹ್ನವನ್ನು ಮನೆಯಲ್ಲಿಯೇ ಕಳೆಯುತ್ತಿರುವಿರಾ
ಹೇಗಿದ್ದೀರಿ ಶ್ರೀಮತಿ ಬಾಲ್ಡ್ವಿನ್ (ಕೈ ಕುಲುಕುವನು) ನೀವು ಬಾಲ್ಡ್ವಿನ್?
ಮಾರ್ಥಾ - ನಾವು ಈಗಷ್ಟೇ ಹೊರ ಹೊರಟಿದ್ದೆವು. ಬಾ ಈವಿ .
ಮಾರ್ಷಲ್ಓಹ್! ನೀವು ನನ್ನಿಂದಾಗಿ ಹೊರಹೋಗಬೇಕಾಗಿಲ್ಲ. ನಾನು ಹೇಳಬೇಕಾದದ್ದನ್ನು ನೀವೂ ಕೇಳಬಹುದು. (ಬಾಲ್ಡ್ವಿನ್ಕಡೆಗೆ ತಿರುಗುವನು) ಬಾಲ್ಡ್ವಿನ್ , ನಿಮಗೇನಾದರೂ ವಾರದಲ್ಲಿ ನ್ಯಾಷನಲ್ ಬ್ಯಾಂಕ್ ಬಳಿ ಬರಬೇಕೆಂದೆನಿಸಿದರೆ ನಿಮಗಾಗಿ ಒಂದು ಕೆಲಸ ಕಾದಿರುತ್ತದೆ
ಬಾಲ್ಡ್ವಿನ್ – (ಸಿಡಿಲುಹೊಡೆದವನಂತೆ) ನಿಜವಾಗಿಯೂ ಹೇಳುತ್ತಿದ್ದೀರಾ ಮಾರ್ಷಲ್?
ಮಾರ್ಷಲ್ – (ಮುಗುಳ್ನಗುತ್ತಾ) ಇಲ್ಲದಿದ್ದರೆ ನಾನು ಇಲ್ಲಿಯವರೆಗೂ ಬರಬೇಕಾಗಿರಲಿಲ್ಲ. (ಗಂಭೀರವಾಗಿ ಮುಂದುವರೆಸುವರು) ಇಂದು ನಾನು ಗ್ರೇಷಮ್ ನನ್ನು ಭೇಟಿಯಾಗಲು ಹೋಗಿದ್ದೆ. ನಿನಗೆ ಅವನು ತೋರಿಸಿದ ಆಮಿಷದ ಬಗ್ಗೆ ಹೇಳಿದ. ಆದರೆ ನೀನು ತಪ್ಪು ಎಂದು ಭಾವಿಸಿದ್ದನ್ನು ನೀನು ಎಷ್ಟೇ ಹಣ ನೀಡಿದರೂ ಮಾಡುವುದಿಲ್ಲವೆಂದು ಅವನಿಗೆ ಗೊತ್ತಿತ್ತುಬಾಲ್ಡ್ವಿನ್, ನಿನ್ನ ಬಗ್ಗೆ ಆತ ಸರ್ವೋಚ್ಛ ಪ್ರಶಂಸೆಯನ್ನು ಮಾಡಿದ. ನೀನು ಅವನ ವಿರುದ್ಧ ಸಾಕ್ಷಿ ಹೇಳಲು ಕಟಕಟೆಯನ್ನು ಹತ್ತುವ ಬದಲಿಗೆ ಆತನೇ ತಪ್ಪೊಪ್ಪಿಕೊಂಡ.
ಬಾಲ್ಡ್ವಿನ್ – ( ಕುರ್ಚಿಯಲ್ಲಿ ಕುಸಿಯುತ್ತ) ತಪ್ಪೊಪ್ಪಿಕೊಂಡ!
ಮಾರ್ಷಲ್ಇಡೀ ಕಥೆಯನ್ನು ಹೇಳಿದ (ಮಾರ್ಥಾಳ ಕಡೆಗೆ ತಿರುಗಿ) ನಾಳೆ ಪ್ರತಿಯೊಬ್ಬರೂ ಏನು ಹೇಳುತ್ತಿರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನಿಮ್ಮ ಪತಿಯ ಬಗ್ಗೆ ನನಗೆ ಎಷ್ಟು ಗೌರವವಿದೆ ಎಂಬುದನ್ನು ಮಾತ್ರ ಹೇಳಬಲ್ಲೆ! ಎಷ್ಟು ಪ್ರಾಮಾಣಿಕವಾಗಿ...................
ಮಾರ್ಥಾ – (ಆತನ ಕೈಯನ್ನು ಹಿಡಿದುಕೊಳ್ಳುತ್ತಾ) ದಯವಿಟ್ಟು! ದಯವಿಟ್ಟು! ಅವರು ಅಳುತ್ತಿರುವುದು ಕಾಣಿಸುತ್ತಿಲ್ಲವೇ?

ಇಂಗ್ಲಿಷ್ ನಿಂದ  ಅನುವಾದ - ಸುಧಾ ಜಿ