Pages

ವ್ಯಕ್ತಿ ಪರಿಚಯ - ಎಂ.ಎಲ್.ವಸಂತಕುಮಾರಿ



ಸಂಗೀತತ್ರಯರಲ್ಲಿ ಒಬ್ಬರಾದ ಎಂ.ಎಲ್.ವಸಂತಕುಮಾರಿಯವರು ಜನಿಸಿದ್ದು ಜುಲೈ 3, 1928 ರಂದು. ತಂದೆ ತಂಜಾವೂರು ಜಿಲ್ಲೆಯ ಕೊತನೂರಿನ ಅಯ್ಯಾಸ್ವಾಮಿ ಅಯ್ಯರ್. ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದರು. ತಾಯಿ ಲಲಿತಾಂಗಿಯನ್ನು ಸಾಕಿದವರು ಕಲೆಗೆ ಹೆಸರುವಾಸಿಯಾಗಿದ್ದ ದೇವದಾಸಿ ಕುಟುಂಬದ ಪೆರುಮಾಳ್ ಕೋಯಿಲ್ ನಾರಾಯಣಮ್ಮ. ಲಲಿತಾಂಗಿಯವರು ಸಹ ಸಂಗೀತವನ್ನು ‌ಕಲಿತಿದ್ದರು. ಸಾಮಾಜಿಕ ಬದಲಾವಣೆಗಳಿಂದ ದೇವದಾಸಿ ಹಿನ್ನೆಲೆಯಿಂದ ಬಂದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿರಲಿಲ್ಲ. ಇಂತಹ ಸಮಯದಲ್ಲಿ ಆಗ ತಾನೇ ನಮ್ಮಲ್ಲಿಗೆ ಕಾಲಿಟ್ಟಿದ್ದ ಗ್ರಾಮಫೋನ್ ಕಂಪನಿಗಳು ಇವರುಗಳಿಗೆ ಅವಕಾಶಗಳನ್ನು ಕೊಟ್ಟವು. ಇದರ ಉಪಯೋಗವನ್ನು ಪಡೆದುಕೊಂಡ ಲಲಿತಾಂಗಿಯವರು "ಸುದಾಂತಿರದೀಪಂ" ಎಂಬ ಗೀತೆಯನ್ನು ಹಾಡಿದರು. ಇದು ಗ್ರಾಮಫೋನ್ ಡಿಸ್ಕಿನಲ್ಲಿ ಧ್ವನಿಮುದ್ರಣಗೊಂಡ ಮೊದಲ ದೇಶಭಕ್ತಿಗೀತೆಯಾಗಿದೆ. ಇದಲ್ಲದೆ‌ ಲಲಿತಾಂಗಿಯವರು‌ ನರಸಿಂಹದಾಸರವರ ಹತ್ತಿರ ಪುರಂದರದಾಸರ ಕೃತಿಗಳನ್ನು ಕಲಿತರು. ಇವರು 1940ರಲ್ಲಿ "ಪುರಂದರ ಮಣಿಮಾಲಾ" ಗ್ರಂಥವನ್ನು ಪ್ರಕಟಿಸಿದರು. 

ಇಂತಹ ಸಂಗೀತ ಪರಿಸರದಿಂದ ಬಂದ ವಸಂತಕುಮಾರಿಯವರಿಗೆ ಸಹಜವಾಗಿ ಸಂಗೀತದೆಡೆಗೆ ಒಲವಿತ್ತು. ಆದರೆ ತಂದೆತಾಯಿಗೆ ಇವರನ್ನು ವೈದ್ಯಳಾಗಿ ಮಾಡಬೇಕೆಂಬ‌ ಆಸೆಯಿತ್ತು. ಮಗಳನ್ನು ಜಾರ್ಜ್ ಟೌನಿನ ಗುಡ್ ಷೆಪರ್ಡ್ ಕಾನ್ವೆಂಟಿಗೆ ಸೇರಿಸಿದರು. ಅಲ್ಲಿ ಸೀನಿಯರ್ ಬ್ರಿಡ್ಜ್ ವರೆಗೆ ಓದಿದರು. ಇದರಿಂದ ವಸಂತರವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ಒಳ್ಳೆಯ ಹಿಡಿತವಿತ್ತು. 
ವಸಂತರವರು ತಾಯಿಯೊಡನೆ ಹಾಡಲು ಹೋಗುತ್ತಿದ್ದರು. 1940 ರ ಜುಲೈ 27 ರಂದು ತಾಯಿಯೊಡನೆ ತಮ್ಮ ಮೊದಲ ಕಾರ್ಯಕ್ರಮವನ್ನು ನೀಡಿದರು. ಇದಾದ ನಂತರ 1940 ಆಗಸ್ಟ್‌ 3 ರಂದು ನವದೆಹಲಿಯಲ್ಲಿ ತಾಯಿಯ ಅನಾರೋಗ್ಯದ ಕಾರಣ ಇವರೇ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ  ಮದ್ರಾಸ್ ಲಲಿತಾಂಗಿ ವಸಂತಕುಮಾರಿ ಎಂಬ ಹೆಸರಿನಿಂದ ಹಾಡಿದರು. ಈ ಕಾರ್ಯಕ್ರಮದಲ್ಲಿ ಅಪಾರ ಮೆಚ್ಚುಗೆಯನ್ನು ಪಡೆದರು. ಅಂದಿನಿಂದ ಎಂ.ಎಲ್.ವಿ ಎಂದೇ ಪರಿಚಿತರಾದರು. 
ಮಗಳ ಸಂಗೀತಾಸಕ್ತಿಯನ್ನು ಕಂಡ ತಂದೆ ತಾಯಿಯೇ ಮೊದಲು ಸಂಗೀತ ಅಭ್ಯಾಸವನ್ನು ಮಾಡಿಸಿದರು. ಸಾಮಾನ್ಯವಾಗಿ ಗುರುಗಳನ್ನು ಅರಸಿ ಶಿಷ್ಯರು ಹೋಗುತ್ತಾರೆ. ಆದರೆ ಎಂ ಎಲ್ ವಿ ರವರ ವಿಷಯದಲ್ಲಿ ಗುರುವೇ ಇವರನ್ನು ಕರೆಸಿಕೊಂಡರು. ಸುಪ್ರಸಿದ್ದ ಜೆ ಎನ್ ಬಾಲಸುಬ್ರಹ್ಮಣ್ಯಂರವರು ವಸಂತರವರು ಹಾಡುವುದನ್ನು ಕೇಳಿ ಸ್ವತಃ ತಾವೇ ಅವರನ್ನು ಕರೆದು ಸಂಗೀತವನ್ನು ಕಲಿಸಿದರು. ಹೀಗೆ ಜೆಎನ್ ಬಿ ರವರ ಶಿಷ್ಯರಾದ ಎಂಎಲ್ ವಿ ಸುಮಾರು ಹತ್ತು ವರ್ಷಗಳ ಕಾಲ ಅವರ ಬಳಿ ಅಭ್ಯಾಸ ಮಾಡಿದರೂ ಅವರ ಉಸಿರಿರುವವರೆಗೂ ಅವರ ಶಿಷ್ಯೆಯಾಗಿಯೇ ನಡೆದುಕೊಂಡರು. 
ಹೀಗಿರುವಾಗ ತಾಯಿಯ ಆರೋಗ್ಯ ಹದಗೆಟ್ಟಿತು. ಮನೆಯ ಎಲ್ಲಾ ಜವಾಬ್ದಾರಿಯೂ ಇವರಿಗೇ ಸೇರಿತು.‌  ಸಂಗೀತ ಕಾರ್ಯಕ್ರಮ ನೀಡಿ ಹಣ ಸಂಪಾದಿಸುವುದು ಇವರಿಗೆ ಅನಿವಾರ್ಯವಾಯಿತು. ನಂತರ ಇವರು ಸಿನಿಮಾ ಕ್ಷೇತ್ರಕ್ಕೂ ಹಿನ್ನೆಲೆ ಗಾಯಕಿಯಾಗಿ ಕಾಲಿರಿಸಿದರು. ಕನ್ನಡದ ಹಂಸಗೀತೆ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.
ಸದ್ಗುರು ಸಂಗೀತಾ ಸಭೆಯ ಸಂಘಟಕರಾಗಿದ್ದ ಆರ್ ಕೃಷ್ಣಮೂರ್ತಿಯವರೊಂದಿಗೆ ವಸಂತರವರ ವಿವಾಹ‌ ನಡೆಯಿತು. ವಿವಾಹದ ನಂತರ ಇವರ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಪತಿ ಕೃಷ್ಣಮೂರ್ತಿಯವರು ಯಾವ ವ್ಯವಹಾರದಲ್ಲೂ ಪ್ರಗತಿ ಕಾಣದೆ ಇಸ್ಪೀಟು ಮೊದಲಾದ ಹವ್ಯಾಸಗಳಲ್ಲಿ ಮುಳುಗಿಹೋದರು‌. ಮಗಳು ಶ್ರೀವಿದ್ಯಾ ಮತ್ತು ಮಗ ಶಂಕರರಾಮನ್ ಇವರನ್ನು ಬೆಳೆಸುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡರು. ಮಗಳ ಭರತನಾಟ್ಯಕ್ಕೆ ಇವರೇ ಪದಂಗಳನ್ನು ಹಾಡುತ್ತಿದ್ದರು.  ಇವೆಲ್ಲಾ ಜವಾಬ್ದಾರಿಗಳ ನಡುವೆಯೂ ಇವರು ಧೃತಿಗೆಡದೆ ತಮ್ಮ ಗಾಯನವನ್ನು ಮುಂದುವರಿಸಿದರು.
ಪ್ರಾರಂಭದಲ್ಲಿ ಇವರ ಸಂಗೀತ ತಾಯಿ ಲಲಿತಾಂಗಿ ಮತ್ತು ಗುರು ಜೆ ಎನ್ ಬಿರವರ ಸಂಗೀತದ ಮಿಶ್ರಣದಂತ್ತಿದ್ದರೂ ಕ್ರಮೇಣ ತಮ್ಮದೇ ಆದ ಶೈಲಿಯಲ್ಲಿ ಹಾಡಲಾರಂಭಿಸಿದರು. ಇವರಿಗಿಂತ ಮೊದಲೇ ಬಂದ  ಎಂ ಎಸ್ ಸುಬ್ಬುಲಕ್ಷ್ಮಿ ಮತ್ತು ಪಟ್ಟಮ್ಮಾಳ್ ರವರು ಇವರ ಹಾದಿಯನ್ನು ಸುಗಮಗೊಳಿಸಿದ್ದರು‌. ಇವರನ್ನು ಅವರಿಬ್ಬರೂ ಪ್ರತಿಸ್ಪರ್ಧಿ ಎನ್ನದೆ ಪ್ರೀತಿ ವಿಶ್ವಾಸದಿಂದಲೇ ಕಾಣುತ್ತಿದ್ದರು. ಇವರು ಕರ್ನಾಟಕ ಸಂಗೀತದ ಜೊತೆಗೆ ಅನ್ಯ ಭಾಷೆಗಳ ಕಡೆಗೂ ತಮ್ಮ ಗಮನ ಹರಿಸಿದರು. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲೂ ಹಾಡುತ್ತಿದ್ದರು. ತಾಯಿಯಂತೆ ದಾಸರ ಕೃತಿಗಳನ್ನು ಕಲಿತರು. ಅಲ್ಲದೆ ತಮ್ಮ ಸಂಗೀತ ಕಛೇರಿಗಳಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಪುರಂದರ ಕೃತಿಗಳನ್ನು ಹಾಡುತ್ತಿದ್ದರು. ಅಲ್ಲದೆ ವಚನಗಳ ಅಧ್ಯಯನ ಮಾಡಿ ಅವುಗಳಿಗೆ ರಾಗಸಂಯೋಜನೆಯನ್ನು ಮಾಡಿ ಹಾಡುತ್ತಿದ್ದರು. ದಾಸರ ಪದಗಳನ್ನು ಕರ್ನಾಟಕ ಸಂಗಿತದ ಜೊತೆಗೆ ಪರಿಚಯಿಸುವುದರಲ್ಲಿ ಇವರ ಪಾಲು ದೊಡ್ಡದು. ತಾಯಿಯ ನಿಧನಾನಂತರ ಅವರ ಸ್ಮರಣಾರ್ಥ 1955 ರಲ್ಲಿ ಪುರಂದರ ಮಣಿಮಾಲಾದ ಎರಡನೇ ಆವೃತ್ತಿಯನ್ನು ಹೊರ ತಂದರು‌.
ಎಂ ಎಲ್ ವಿ ರವರು ತಮ್ಮ  ಗುರುಗಳಂತೆ ಸಹವಾದಕರನ್ನು ಪ್ರೋತ್ಸಾಹಿಸುತ್ತಿದ್ದರು. ಇವರ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಇವರು ಯಾರೇ ಆಗಲಿ ಸಹಾಯ ಕೇಳಿಕೊಂಡು ಬಂದರೆ ಇಲ್ಲವೆನ್ನುತ್ತಿರಲಿಲ್ಲ.  ಇವರಿಗೆ ಸಂಗೀತ ಕಲಿಸುವುದೆಂದರೆ ಬಲು ಪ್ರೀತಿ. ಇವರು ಹೆಚ್ಚಿನ ಶಿಷ್ಯರನ್ನು ಹೊಂದಿದ್ದ ಗುರು ಎಂದೇ ಹೆಸರುವಾಸಿಯಾಗಿದ್ದರು. ಅವರಲ್ಲಿ ಸರಸ್ವತಿ ಶ್ರೀನೀವಾಸನ್, ಟಿ. ಎಂ. ಪ್ರಭಾವತಿ, ಚಾರುಮತಿ ರಾಮಚಂದ್ರನ್, ಕನ್ಯಾಕುಮಾರಿ, ಸುಧಾ ರಘುನಾಥನ್, ಯೋಗ ಸಂತಾನಂ ಪ್ರಮುಖರು.
ಇಷ್ಟೆಲ್ಲಾ ಸಂಗೀತ ಸೇವೆ ಮಾಡಿದ ಇವರಿಗೆ ದೊರೆತ ಪ್ರಶಸ್ತಿಗಳು ಹಲವಾರು. ಇವರು ತಮ್ಮ 26 ನೇ ವಯಸ್ಸಿನಲ್ಲಿ "ಸಂಗೀತವಾಣಿ" ಎಂಬ ಬಿರುದನ್ನು ಪಡೆದರು‌. ಪುರಂದರದಾಸರ ಕೃತಿಗಳನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪುರಂದರದಾಸ ಸಮಿತಿಯವರು "ಸಂಗೀತ ರತ್ನಾಕರ" ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ತಿರುಪ್ಪಾವೈ ಕೃತಿಗಳನ್ನು ಧ್ವನಿ ಮುದ್ರಿಸಿದ್ದಕ್ಕಾಗಿ "ತಿರುಪ್ಪಾವೈ ಮಣಿ" ಪ್ರಶಸ್ತಿಯನ್ನು ಪಡೆದರು. 1967 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. 1970 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ 1977 ರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಡೆದರು. 1978 ರಲ್ಲಿ ಇಸೈ ಪೆರಿಜ್ಞಾರ್ ಪ್ರಶಸ್ತಿಯನ್ನು, ಇಸೈ ಚೆಲ್ವಂ‌ ಪ್ರಶಸ್ತಿಯನ್ನು ಪಡೆದರು. ತಿರುಪತಿ ತ್ಯಾಗರಾಜಸ್ವಾಮಿ ಟ್ರಸ್ಟ್ ನಿಂದ "ಸಪ್ತಗಿರಿ ವಿದ್ವಾನ್" ಪ್ರಶಸ್ತಿ, 1985 ರಲ್ಲಿ 'ಸಂಗೀತ ಕಲಾಶಿಖಾಮಣಿ' ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದರು.

ಇಷ್ಟೆಲ್ಲಾ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ತಮ್ಮ ಕೊನೆಯ ದಿನಗಳನ್ನು ರಿಷಿ ವ್ಯಾಲಿಯಲ್ಲಿ ಮಕ್ಕಳಿಗೆ ಸಂಗೀತ ಕಲಿಸುತ್ತಾ ಕಳೆದಿದ್ದರು. ಸಂಗೀತ ಕಲಿಸುತ್ತಾ ತಮ್ಮ  ನೋವನ್ನು ಮರೆಯುತ್ತಿದ್ದರು. ಎಂ ಎಂದರೆ ಮಾಧುರ್ಯ, ಎಲ್ ಎಂದರೆ ಲಯ, ವಿ ಎಂದರೆ ವಿದ್ವತ್ ಎಂದೇ ಖ್ಯಾತರಾಗಿದ್ದ ಇವರು  ಅಕ್ಟೋಬರ್ 31, 1990 ರಂದು ಕೊನೆಯುಸಿರೆಳೆದರು. ಯಾರೂ ಮರೆಯದ ವಸಂತಗಾನದಿಂದ ಈಗಲೂ ಎಲ್ಲರ ಮನದಲ್ಲೂ  ಉಳಿದಿದ್ದಾರೆ ಎಂ ಎಲ್ ವಸಂತಕುಮಾರಿಯವರು.

ವಿಜಯಲಕ್ಷ್ಮಿ ಎಂ ಎಸ್   


ಅನುವಾದಿತ ಕವಿತೆ - ಬುದ್ಧನಾಗುವುದು ಸುಲಭ




ಒಂದು ರಾತ್ರಿ ಮೌನವಾಗಿ
ಮನೆಮಠ ಮಡದಿ ಮಕ್ಕಳ
ತೊರೆದು
ಸತ್ಯಾನ್ವೇಷಣೆಯಲಿ
ತೆರಳಿಬಿಡುವುದು 
ಸುಲಭ

ಏಕೆಂದರೆ
ಯಾರೂ ನಿಮ್ಮತ್ತ
ಬೆರಳು ಮಾಡುವುದಿಲ್ಲ 
ಹೆಚ್ಚೇನು ಪ್ರಶ್ನೆಗಳ
ಕೇಳುವುದಿಲ್ಲ
ಯಾವ ಅಪನಿಂದೆಯೂ ಬಾರದು
ಶಬ್ದದ ಬಾಣಗಳಿಂದ
ದೇಹ ಮನಗಳ ಘಾಸಿಗೊಳಿಸುವುದಿಲ್ಲ ಯಾರೂ

ಆದರೆ
ಎಂದಾದರೂ ಆಲೋಚಿಸಿದ್ದೀರಾ
ಅವರ ಸ್ಥಾನದಿ  ಸ್ತ್ರೀಯೋರ್ವಳಿದ್ದಿದ್ದರೆ
ಮೌನವಾಗಿ ಹೊರನಡೆದಿದ್ದರಾಕೆ
ಒಂದು ರಾತ್ರಿ
ಮನೆಮಠ ಪತಿ ನವಜಾತ ಶಿಶುವ
ತೊರೆದು
ಸತ್ಯಾನ್ವೇಷಣೆಗಾಗಿ

ನಂಬುತ್ತಿದ್ದರೆ ಯಾರಾದರೂ
ಅವಳ ಈ ಮಾತನ್ನು

ಚಾರಿತ್ರ್ಯವಧೆಯ ಆತಂಕವಿರುತ್ತಿತ್ತು
ಅವಳ ಸ್ತ್ರೀತ್ವವನ್ನು
ಅಪಮಾನಗೊಳಿಸಲಾಗುತ್ತಿತ್ತು
ಇಡೀ ಸಮಾಜವೇ ಒಂದಾಗಿ
ಅವಳ ವಿರುದ್ಧ
ಎದ್ದುನಿಲ್ಲುತ್ತಿತ್ತು
ಮತ್ತು
ಇದು ಅವಳ ಸತ್ಯಾನ್ವೇ಼ಷಣೆಯ ಕಥೆಯಾಗುತ್ತಿತ್ತು

ಬುದ್ಧನಾಗುವುದು ಸುಲಭ
ಆದರೆ ಸ್ತ್ರೀಯಾಗುವುದು ಕಠಿಣ!!
    - ಸುಧಾ ಜಿ

ಪುಸ್ತಕ ಪ್ರೀತಿ - ಅಮೆರಿಕಾದಲ್ಲಿ ನಾನು




ಬಿ.ಜಿ.ಎಲ್. ಸ್ವಾಮಿಯವರು ತಮ್ಮ ಹಾಸ್ಯದ ಧಾಟಿಯಲ್ಲೇ "ಅಮೆರಿಕಾದಲ್ಲಿ ನಾನು" ಪ್ರವಾಸ ಕಥನವನ್ನು ಬರೆದಿದ್ದಾರೆ. ಸ್ವಾಮಿಯವರಿಗೆ ಸರ್ಕಾರವು ವಿದೇಶದಲ್ಲಿ ವ್ಯಾಸಂಗ ಮಾಡಲು ವೇತನವನ್ನು ನೀಡಿತು. ಜೊತೆಗೆ ಎರಡು ಷರತ್ತುಗಳನ್ನು ಹಾಕಿತು. ಮೊದಲನೆಯದು ವ್ಯಾಸಂಗ ಮಾಡುವ ಸಂಸ್ಥೆಯಲ್ಲಿ ಅವರಿಗೊಂದು ಸ್ಥಳವನ್ನು ಮೀಸಲಿಡಬೇಕು ಹಾಗೂ ಹೊರದೇಶಕ್ಕೆ ಪ್ರಯಾಣಕ್ಕೆಂದಿರುವ ವಾಹನಗಳಲ್ಲಿ ಇವರಿಗೊಂದು ಸ್ಥಳ ಕೊಡಬೇಕು. ಪ್ರಯಾಣದ ಏರ್ಪಾಡನ್ನು ಸರ್ಕಾರವೇ ವಹಿಸಿಕೊಂಡಿತು. "ನಿಮ್ಮ ಪ್ರಯಾಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರಿ ಒಂಟಿ ಕಾಲಿನ ಮೇಲೆ ನಿಂತಿರಿ! ನಾಳೆ ಹೊರಡಿರೆಂದು ಹೇಳಿದರೂ ಹೊರಡುವುದಕ್ಕೆ ಸಿದ್ಧರಾಗಿರಿ!! ನಾವು ನಿರ್ದೇಶಿಸಿದ ವಾಹನದಲ್ಲಿ ನೀವು ಯಾನ ಮಾಡುವುದಕ್ಕೆ ಸಿದ್ಧರಿಲ್ಲವಾದರೆ ನಿಮಗೆ ಕೊಟ್ಟಿರುವ ವೇತನ ದಕ್ಕದೆ ಹೋದೀತು!!! ಜೋಕೆ" ಎಂದು ಸ್ವಾಮಿಯವರು ಹಾಸ್ಯದ ಧಾಟಿಯಲ್ಲಿ ಹೇಳಿದ್ದಾರೆ.
ವಿಮಾನಯಾನ ದುಬಾರಿಯಾಗಿದ್ದರಿಂದ ಸರ್ಕಾರ ಇವರಿಗೆ ಸಮುದ್ರಯಾನದ ಏರ್ಪಾಟು ಮಾಡಿಕೊಡಲು ಒಪ್ಪಿಕೊಂಡಿತು‌. ಆಗ ಎರಡನೇ ಮಹಾಯುದ್ಧದ ಸಮಯವಾದ್ದರಿಂದ ಎಲ್ಲ ಹಡಗುಗಳಲ್ಲಿ ಸೈನಿಕರು ತಾಯ್ನಾಡಿಗೆ ಹಿಂದಿರುಗುತ್ತಿದ್ದರು. ಆದ್ದರಿಂದ ಎಲ್ಲಾ ಹಡಗುಗಳು ಪ್ರಯಾಣಿಕರಿಂದ ತುಂಬಿತ್ತು. ಮುನ್ನೂರು ಜನರು ಹೋಗಬಹುದಾದ ಹಡಗಿನಲ್ಲಿ ಐನೂರು ಜನರು ಪ್ರಯಾಣಿಸುತ್ತಿದ್ದರು. ಇಂತಹ ಹಡಗಿನಲ್ಲಿ ಸೈನಿಕರೊಡನೆ ಸ್ವಾಮಿಯವರು ತಮ್ಮ ಪ್ರಯಾಣವನ್ನು ಬೆಳೆಸಿದರು.  
ಒಂದು ದೇಶದಿಂದ ಮತ್ತೊಂದು ದೇಶದಲ್ಲಿ ಸಂಸ್ಕೃತಿಯು ಬೇರೆ ಬೇರೆಯದಾಗಿರುತ್ತದೆ. ಉಡುಗೆತೊಡುಗೆಗಳು ಬೇರೆಬೇರೆಯಾಗಿರುತ್ತವೆ. ಅಮೆರಿಕಾದಲ್ಲಿ ಗಂಡಸರು ಚರ್ಚಿಗೆ ಹೋದಾಗ ತಮ್ಮ ಹ್ಯಾಟ್ ತೆಗೆಯಬೇಕು. ಹೆಂಗಸರು ಹ್ಯಾಟ್ ಇಲ್ಲದೆ ಹೋದರೆ ಅಗೌರವ ಎನ್ನುವರು. ಹಾಗೆಯೇ ಹಿರಿಯರಿಗೆ ನಮಸ್ಕರಿಸುವಾಗ ಹ್ಯಾಟ್ ತೆಗೆದು ನಮಸ್ಕರಿಸಬೇಕು. ಈ ರೀತಿ ಹ್ಯಾಟಿಗೆ ಪ್ರಾಮುಖ್ಯತೆ ಇರುವ ನಾಡಿನಲ್ಲಿ ಸ್ವಾಮಿಯವರಿಗೆ ಹ್ಯಾಟು ಹಾಕಿಕೊಳ್ಳಲು ಬೇಸರ. ಆದ್ದರಿಂದ ತಮ್ಮ ಉಡುಗೆಗೆ ತಕ್ಕನಾದ ಕಾಶ್ಮೀರಿ ಕಸೂತಿ ಕಲೆಯ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು. ಇವರ ಟೋಪಿ ಅಮೆರಿಕನ್ನರಿಗೆ ಆಕರ್ಷಣೀಯವಾಗುತ್ತು. ಹಲವರು ಇವರ ಟೋಪಿಯನ್ನು ನೋಡುವ ಸಲುವಾಗಿ ಇವರನ್ನು ಹಿಂಬಾಲಿಸುತ್ತಿದ್ದರು.  ಇದನ್ನು ನೋಡಿದ  ಪೋಲಿಸ್ ಇವರನ್ನು "ನಿಮಗೇನಾದರು ತೊಂದರೆ ಕೊಡುತ್ತಿದ್ದಾರಾ?" ಎಂದು ಕೇಳಿದರು. ಇದರಿಂದ ಅನಾವಶ್ಯಕವಾಗಿ ಬೇರೆಯವರ ಕುತೂಹಲವನ್ನು ಕೆರಳಿಸಬಾರದು ಎಂದು ಟೋಪಿಯ ಬಳಕೆಯನ್ನು ಕಡಿಮೆ ಮಾಡಿದರು. ಒಮ್ಮೆ ಪಾರ್ಟಿಯೊಂದರಲ್ಲಿ ಇವರ ಟೋಪಿಯ ಮೋಡಿಗೆ ಒಳಗಾದ ಅಮೆರಿಕಾದ ಮಹಿಳೆಯು ಇವರ ಟೋಪಿಯನ್ನು  ಎರವಲಾಗಿ ತೆಗೆದುಕೊಂಡಿದ್ದರು.
ಏಪ್ರಿಲ್ 18 ಅಮೆರಿಕನ್ನರಿಗೆ ಪವಿತ್ರ ದಿನವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಪಾಲ್ ರಿವೀರ್ ಬ್ರಿಟಿಷರ ವಿರುದ್ಧ ಹೋರಾಡಿ ಗೆಲವು ಸಾಧಿಸಿದ ದಿನ. ಪ್ರತಿವರ್ಷವೂ ಈ ದಿನದಂದು ಹಾರ್ವರ್ಡ್ ವಿದ್ಯಾಪೀಠದ ವಿದ್ಯಾರ್ಥಿಗಳು ಅದರ ನೆನಪಿಗೋಸ್ಕರ ಅದರ ಅಣಕು ದೃಶ್ಯವನ್ನು ಪ್ರದರ್ಶಿಸುತ್ತಿದ್ದರು. ಅದರಂತೆ ಸ್ವಾಮಿಯವರು ಸೇರಿದ ವರ್ಷ ಅದರ ಉಸ್ತುವಾರಿ ಇವರ ತಂಡದವರದಾಗಿತ್ತು. ಎಲ್ಲರೂ ತಯಾರಾಗಿ ಅದನ್ನು ನಿರ್ವಹಿಸಿದರು. 
ಸ್ವಾಮಿಯ ಗೆಳೆಯರೊಬ್ಬರು ತಮ್ಮ ಮಡದಿಯೊಂದಿಗೆ ಅಮೆರಿಕಾಗೆ ಬಂದರು. ಗೆಳೆಯನ ಮಡದಿ ಎಲ್ಲಿಗೆ ಹೋದರೂ ಸೀರೆಯನ್ನೇ ಧರಿಸುತ್ತಿದ್ದರು. ಇಲ್ಲಿಯೂ ಸಹ ಅವರು ಸೀರೆಯನ್ನು ಧರಿಸಿಕೊಂಡು ಆಮಂತ್ರಣ ಕೂಟಕ್ಕೆ ಹೋದರು. ಅಮೆರಿಕನ್ ಮಹಿಳೆಯರು ಸೀರೆಯ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಲವರು ಬಣ್ಣಕ್ಕೆ ಸೋತರು. ಕೆಲವರು‌ ಅದರ ಉದ್ದವನ್ನು ಕೇಳಿ ಗಾಬರಿಯಾದರು. ಮತ್ತೆ ಕೆಲವರು ಅದನ್ನು ಧರಿಸುವ ರೀತಿ ಕೇಳಿ ಆಶ್ಚರ್ಯಪಟ್ಟರು. ಕೊನೆಗೆ ಅವರು ಭಾರತಕ್ಕೆ ಹಿಂದಿರುಗುವಾಗ ನೆನಪಿಗಾಗಿ ಇಲ್ಲಿಯವರಿಗೆ ಸೀರೆಯೊಂದನ್ನು ಕೊಟ್ಟು ಹೋದರು. ಅದರ ಉಪಯೋಗ ತಿಳಿಯದ ಅಮೆರಿಕಾದ ಗೆಳತಿಯರು ಸೀರೆಯನ್ನು ತಮಗೆ ತೋಚಿದಂತೆ ಕತ್ತರಿಸಿಕೊಂಡು ತಮ್ಮ ಉಡುಪಿನ ಜೊತೆ ಸೇರಿಸಿ ಬೇಕಾದ ವಿನ್ಯಾಸವನ್ನು ಮಾಡಿಕೊಂಡರು.
ಅಭಿವೃದ್ಧಿ ಹೊಂದಿದ ಅಮೆರಿಕಾದಂತಹ ದೇಶದಲ್ಲೂ ಸಹ ಕಳ್ಳತನ, ದರೋಡೆ ನಡೆಯತ್ತದೆ ಎಂದರೆ ಆಶ್ಚರ್ಯ. ಇಂತಹ ಒಂದು ಅನುಭವ ಸ್ವಾಮಿಯವರಿಗೂ ಆಗಿತ್ತು. ಕೆಲಸದ ಬೇಸರ ಕಳೆಯಲು ಬೆಳದಿಂಗಳ ರಾತ್ರಿಯಲಿ ಸುತ್ತಾಡಲು ಹೊರಗೆ ಹೋಗಿದ್ದ ಇವರನ್ನು ಮೂವರು ಯುವಕರು ತಡೆದು ಪಿಸ್ತೋಲ್ ತೋರಿಸಿ ಪರ್ಸನ್ನು ಕಸಿದುಕೊಂಡು ಓಡಿ ಹೋದರು. ಸ್ವಾಮಿಯವರು ಇವರನ್ನು ನಿಜವಾದ ಕಳ್ಳರೆಂದುಕೊಂಡಿದ್ದರು. ಮಾರನೇ ದಿನ ಆ ಮೂವರೂ ಬಂದು‌ ಅವರನ್ನು ಕ್ಷಮಾಪಣೆ ಕೇಳಿದರು. ಆ ಯುವಕರು ಬೇರಾರೂ ಅಲ್ಲ ಇವರ ವಿದ್ಯಾರ್ಥಿಗಳೇ. ಇವರಿಗೆ ಅಮೆರಿಕಾದ ಇನ್ನೊಂದು ಕಪ್ಪು ಮುಖದ ಬಗ್ಗೆ ಅರಿವುಂಟು ಮಾಡಲು ಈ ರೀತಿ ಮಾಡಿದೆವು ಎಂದರು. 
ಅಮೆರಿಕಾದಲ್ಲಿ ಸುಲಭವಾಗಿ ಹಣ ಗಳಿಸುವ ಇನ್ನೊಂದು ಮಾರ್ಗವೆಂದರೆ rocket ಅಂದರೆ ವರ್ತಕರನ್ನು ಹೆದರಿಸಿ ಅವರಿಂದ ಹಣ ಕೇಳುವುದು. ಇದು ಎಲ್ಲಾ ಕ್ಷೇತ್ರದಲ್ಲೂ ಕಾಣುತ್ತಿತ್ತು. ರಾಜಕೀಯದಲ್ಲೂ ಇದರ ಹಾವಳಿಯಿತ್ತು. ಅಮೆರಿಕಾದಲ್ಲಿ 1949 ರಲ್ಲಿ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿತ್ತು. ಸ್ವಾಮಿಯವರಿಗೆ ಹುಷಾರಿಲ್ಲದ ಕಾರಣ ವೈದ್ಯರಲ್ಲಿಗೆ ಬಂದಿದ್ದರು. ಆ ಸಮಯದಲ್ಲಿ ಅಪರಿಚಿತ ಧಾಂಡಿಗನೊಬ್ಬ‌ ಒಳ ಬಂದು ವೈದ್ಯರನ್ನು ತಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಕೇಳಿದ. ಹಾಗೆಯೇ ಸ್ವಾಮಿಯವರನ್ನು ಏನೂ ಮಾತನಾಡಬಾರದು ಎಂದು ಹೆದರಿಸಿ ಕುಳ್ಳರಿಸಿದ್ದನು. ವೈದ್ಯರಿಗೆ " ನಿನ್ನ ಮಗಳಿಗೆ ಕೆಲಸ ಕೊಡಿಸುತ್ತೇನೆ ನಮ್ಮ ಪಕ್ಷಕ್ಕೆ ಮತ ಹಾಕು ಇಲ್ಲದಿದ್ದರೆ ನಿನಗೆ ನಿನ್ನ ಮಗಳು ಸಿಗುವುದಿಲ್ಲ" ಎಂದು ಹೆದರಿಸಿದ. ಹೇಗೋ ಪೋಲಿಸರಿಗೆ ವಿಷಯ ತಿಳಿಸಿ ಇಬ್ಬರೂ ಪಾರಾದರು.
ಅಮೆರಿಕಾದಲ್ಲಿ ಸ್ವಾಮಿಯವರಿಗೆ ಅನೇಕ ಗೆಳೆಯರು ದೊರೆತರು. ಅವರಲ್ಲಿ ಟಬ್ ದಂಪತಿಗಳು ಒಬ್ಬರು. ಬಾಸ್ಟನ್ ಗೆ ಬಂದ ಮೇಲೆ ಸ್ವಾಮಿಯವರಿಗೆ ಫೋನ್ ಕರೆಯೊಂದು ಬಂದಿತು." ನಾನು ಟಬ್ ನಿನ್ನನ್ನು ನೋಡಲು ಬರುತ್ತಿದ್ದೇನೆ" ಎನಲು ನಿದ್ದೆಯಲ್ಲಿದ್ದ ಸ್ವಾಮಿಯವರಿಗೆ ಮನೆಯೊಡತಿ ಸ್ನಾನದ ಟಬ್ ಕೊಡುತ್ತೇನೆ ಎಂದು ಹೇಳಿರಬೇಕು ಎಂದುಕೊಂಡರು. ಆದರೆ ಅಮೆರಿಕನ್ನರ ಹೆಸರುಗಳು ಇದೇ ರೀತಿಯಿವೆ ಎಂದು ಯಾರೋ ನೋಡಲು ಬರುತ್ತಿರಬೇಕು ಎಂದುಕೊಂಡರು. ಬಂದ ಟಬ್ ಇವರನ್ನು ನೋಡಿ" ನೀನು ನನ್ನ ಸ್ವಂತ ಮಗನಂತೆ ಇದ್ದೀಯ ನಾನು ನಿನಗೆ ತಂದೆ, ಮಿಸೆಸ್ ಟಬ್ ನಿನ್ನ ತಾಯಿಯಂತೆ" ಎಂದರು. ಟಬ್ ದಂಪತಿಗಳು ಇವರನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಜೊತೆಯಲ್ಲಿ ಕರೆದುಕೊಂಡು ಹೋದರು. ಒಮ್ಮೊಮ್ಮೆ ಟಬ್ ನ ಮರೆಗಳಿತನದಿಂದ ಆ ದಂಪತಿಗಳಲ್ಲಿ ಕಲಹ ನಡೆಯುತ್ತಿತ್ತು‌ ಸ್ವಾಮಿಯವರು ಮೂಕಪ್ರೇಕ್ಷಕರಂತೆ ಇರುತ್ತಿದ್ದರು.
ಕ್ರಿ.ಶ 1620 ರಲ್ಲಿ ಅಮೆರಿಕನ್ ಸಂಸ್ಕೃತಿ ಪ್ರಾರಂಭವಾಯಿತು. ಚರ್ಚ್ ಆಫ್ ಇಂಗ್ಲೆಂಡ್ ನ ಮತಸಂಪ್ರದಾಯವನ್ನು ಒಪ್ಪದ ಹಲವು ಮಂದಿ "ಇಂಡಿಪೆಂಡೆಂಟ್‌"ಎಂಬ ಪಂಗಡವನ್ನು ಕಟ್ಟಿಕ್ಕೊಂಡು 'ಮೇ ಫ್ಲವರ್' ಎಂಬ ಹಡಗಿನಲ್ಲಿ ಅಮೇರಿಕಾಕ್ಕೆ ಬಂದು ಪ್ಲೀಮತ್ ಎಂಬಲ್ಲಿ ನೆಲೆಸಿದರು. ಇವರುಗಳೇ ಅಮೆರಿಕನ್ ಸಂಸ್ಕೃತಿಯ ಮಾತಾಪಿತೃಗಳು. ಅಂದೇ ಅಮೆರಿಕಾದ ಸಂಸ್ಕೃತಿಯ ಆರಂಭ ಎನ್ನಬಹುದು. ಇವರನ್ನು ಮೇ ಫ್ಲವರ್ ಮನೆತನದವರು ಎನ್ನುತ್ತಾರೆ. ಇವರು ಹಠಮಾರಿತನ, ಪ್ರತಿಷ್ಠೆ, ದುರಹಂಕಾರಗಳಿಗೆ ಹೆಸರಾದವರು. ಇವರನ್ನು ಹದಿನಾರಾಣೆ ಬಾಸ್ಟೋನಿಯರ್ ಎನ್ನುತ್ತಾರೆ. ಇವರು ಇತರರ ಜೊತೆ ಬೆರೆಯುವುದಿಲ್ಲ. ಈ ಅನುಭವ ಸ್ವಾಮಿಯವರಿಗೂ ಆಗಿದೆ. ಒಮ್ಮೆ ಇವರು ಮನೆಗೆ ಹಿಂತಿರುಗಿ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಅಲ್ಲೇ ವಯಸ್ಸಾದ ಮಹಿಳೆಯೊಬ್ಬಳು ಕುಳಿತ್ತಿದ್ದಳು. ಇವರು ಆಕೆಯನ್ನು ಬಸ್ಸಿನ ಬಗ್ಗೆ ಕೇಳಿದಾಗ ಆಕೆ ಉತ್ತರಿಸದೆ "ಎದುರು ಅಂಗಡಿಗೆ ಹೋಗಿ ಮ್ಯಾಪ್ ತೆಗೆದುಕೊಂಡು ನಿನ್ನ ಸಂಶಯವನ್ನು ನಿವಾರಿಸಿಕೋ" ಎಂದಳು.
ಹೀಗೆ ಸ್ವಾಮಿಯವರು ತಮ್ಮ ವಿದೇಶಿ ಅನುಭವವನ್ನು ನವಿರಾದ ಹಾಸ್ಯದಲ್ಲಿ ಹೇಳಿದ್ದಾರೆ. ಹಾಸ್ಯಜೀವಿಯಾದ ಇವರು ತಮ್ಮ ಬರವಣಿಗೆಯಲ್ಲೂ ಹಾಸ್ಯವನ್ನು ತರುತ್ತಿದ್ದರು. ಇವರ 'ಹಸುರು ಹೊನ್ನು', 'ಪ್ರಾಧ್ಯಾಪಕನ ಪೀಠದಲ್ಲಿ', 'ತಮಿಳು ತಲೆಗಳ ನಡುವೆ', 'ಕಾಲೇಜುರಂಗ' ಮೊದಲಾದ ಕೃತಿಗಳು ನಮ್ಮ ಅರಿವಿಲ್ಲದೇ ಓದಿಸಿಕೊಂಡು ಹೋಗುತ್ತದೆ.


ಪುಟ್ಕಥೆಗಳು



ಪುಟ್ಕಥೆ - 1
ಕಸ ಗುಡಿಸುವವರನ್ನು ಕಂಡರೆ ಅಸಹ್ಯ ಪಡುತ್ತಿದ್ದವಳು ಅವರ ಮುಷ್ಕರದಲ್ಲಿ ಭಾಗಿಯಾದಳು. "ನೀವಿಲ್ಲದಿದ್ದರೆ ನಾವು ಉತ್ತಮ ಪರಿಸರದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅರ್ಥವಾಗಿದೆ" ವಿಶ್ವವಿದ್ಯಾಲಯದ ಎಲ್ಲೆಡೆ ಬಿದ್ದಿದ್ದ ಕಸದ ರಾಶಿ ತೋರಿಸಿ ನುಡಿದಳು!!

ಪುಟ್ಕಥೆ - 2
ನೆನ್ನೆಯವರೆಗೆ ಧರ್ಮದ ಹೆಸರಿನಲ್ಲಿ ದೂರದೂರ ಇದ್ದವರು, ಪ್ರವಾಹದ ನಂತರ ಇಂದು ಮಂದಿರದಲ್ಲಿ ಉಳಿದುಕೊಂಡು, ಚರ್ಚ್ ನಲ್ಲಿ ಸಂಗ್ರಹಿಸಲ್ಪಟ್ಟ ಆಹಾರ ಧಾನ್ಯಗಳಲ್ಲಿ ಮಸೀದಿಯಲ್ಲಿ ತಯಾರಿಸಿದ ಊಟವನ್ನುಣ್ಣುತ್ತಾ ನಿಜವಾದ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ!!

ಪುಟ್ಕಥೆ - 3
"ಗುತ್ತಿಗೆಯ ಆಧಾರದಲ್ಲಿ ಕೆಲಸದಲ್ಲಿದ್ರೆ ಕೆಲಸ ಮಾಡುತ್ತೀರ. ನಾವು ನಿಮ್ಮ ಕೆಲಸವನ್ನು ಪರ್ಮನೆಂಟ್ ಮಾಡಿ ಸಂಬಳವನ್ನು ಕೊಟ್ಟ ಮೇಲೆ ನೀವು ಸರಿಯಾಗಿ ಕೆಲಸ ಮಾಡುತ್ತೀರ ಎಂದು ಏನು ಗ್ಯಾರಂಟಿ?" ಕೇಳಿದರು ಅಧಿಕಾರಿಗಳು.
"ಸರ್, ಶ್ರಮವನ್ನೇ ನಂಬಿ ಬದುಕಿರುವವರು ನಾವು, ಇನ್ನೊಬ್ಬರ ದಾನದಲ್ಲಿ ಬದುಕೋಲ್ಲ. ಜೊತೆಗೆ ನಾವು ನಿಮ್ಮಂತಲ್ಲ, ನೆನ್ನೆ ಸಂಜೆ ನಮ್ಮ ಬೇಡಿಕೆಗಳನ್ನು ಒಪ್ಪಿದ್ದೇವೆ ಎಂದು ಹೇಳಿ ಇಂದು ಬೆಳಿಗ್ಗೆ ಉಲ್ಟಾ ಹೊಡೆದಿರಲ್ಲಾ?" ಹೇಳಿದರು ಡಿ ಗ್ರೂಪ್ ನೌಕರರು!!

ಪುಟ್ಕಥೆ - 4
ಡಿ ಗ್ರೂಪ್ ನೌಕರರ ಅಹೋರಾತ್ರಿ ಮುಷ್ಕರ ನಡೆಯುತ್ತಿತ್ತು. ಅಲ್ಲಿಯೇ ಕೆಲವು ನೌಕರರು ಎಲ್ಲರಿಗೂ ಅಡಿಗೆ ಮಾಡಿದರು. ಬಂದಿದ್ದ ವಿವಿಧ ಸಂಘಟನೆಗಳ ನಾಯಕರಿಗೆ ಊಟ ಮಾಡಲು ಆಹ್ವಾನವನಿತ್ತರು. ನೆಪಗಳನ್ನೊಡ್ಡಿ ಹೊರಟುಹೋದ ನಾಯಕರನ್ನು ಮತ್ತೆ ಹತ್ತಿರ ಸೇರಿಸಲಿಲ್ಲ ಆ ಸ್ವಾಭಿಮಾನವುಳ್ಳ ಮುಷ್ಕರನಿರತರು!!

ಪುಟ್ಕಥೆ - 5
ಶಿಕ್ಷಕರ ದಿನಾಚರಣೆಯಂದು ಶಾಲೆಯಲ್ಲಿ ಹಬ್ಬದ ವಾತಾವರಣ, ಮಕ್ಕಳು ಶಾಲೆಯನ್ನು ತುಂಬಾ ಚೆನ್ನಾಗಿ ಅಲಂಕರಿಸಿದ್ದರು. ಒಂದು ಚಿತ್ರ ಎಲ್ಲರನ್ನೂ ಆಕರ್ಷಿಸಿತ್ತು, ಅದನ್ನು ನೋಡಿದ ಎಲ್ಲಾ ಶಿಕ್ಷಕರ ಕಂಗಳಲ್ಲಿ ಆನಂದಭಾಷ್ಪವಿತ್ತು. ಆ ಚಿತ್ರ - ಶಿಕ್ಷಕರ ದೇಹವೇ ಏಣಿಯಾಗಿ, ಅದರ ಮೇಲೆ ಹತ್ತಿ ಮಕ್ಕಳು ನಕ್ಷತ್ರಗಳನ್ನು ಮುಟ್ಟಲೆತ್ನಿಸುತ್ತಿದ್ದುದ್ದಾಗಿತ್ತು!!
        
ಪುಟ್ಕಥೆ - 6
"ನಾನು ಸಮಾಜ ಸೇವೆಗೆ ಹೋಗಿ ಬರುತ್ತೇನೆ, ನೀನು ಮಗುವನ್ನು ನೋಡಿಕೊ" ಹೇಳಿದನಾತ.
"ನಿನ್ನನ್ನು ಕಟ್ಟಿಕೊಳ್ಳುವ ಮುನ್ನ, ಈ ಮಗುವಾಗುವ ಮುನ್ನ ನಾನೂ ಸಹ ಸಮಾಜಸೇವೆಯಲ್ಲಿ ತೊಡಗಿದ್ದೆ. ಆದ್ದರಿಂದ ಇಬ್ಬರೂ ಎರಡನ್ನೂ ಹಂಚಿಕೊಳ್ಳಲೇಬೇಕು" ದೃಢವಾಗಿ ಹೇಳಿದಳವಳು!!

ಪುಟ್ಕಥೆ - 7
"ಬಾರೋ, ಈ ಬಿಸ್ಕತ್ ಪ್ಯಾಕ್ ತೆಗೆದುಕೊ" ಬಟ್ಟೆ ಹರಿದಿದ್ದ, ಪೌಷ್ಟಿಕಾಂಶದ ಕೊರತೆಯಿದ್ದ ಹಾಡಿಯ ಹುಡುಗನನ್ನು ಕರೆದಳಾಕೆ ಉಚಿತ ವೈದ್ಯಕೀಯ ಶಿಬಿರದ ಸಂದರ್ಭದಲ್ಲಿ.
ಬರಲಿಲ್ಲ ಅವನು.
"ನೀವೇ ಹೇಳಿದಿರಲ್ಲ ಎಲ್ಲರಿಗೂ ಒಂದೊಂದೇ ಎಂದು, ಈಗಾಗಲೇ ನೀವು ಕೊಟ್ಟಿದ್ದೀರಿ"  ಪ್ರಾಮಾಣಿಕತೆಯಿಂದ ಉತ್ತರಿಸಿದನಾ ಹುಡುಗ!!

ಪುಟ್ಕಥೆ - 8
ಗುಡ್ಡ ಕುಸಿದಾಗ ಎಲ್ಲವನ್ನೂ ಕಳೆದುಕೊಂಡವಳು ತೆವಳುತ್ತಾ ಸುರಕ್ಷಿತ ಪ್ರದೇಶಕ್ಕೆ ಬಂದಳು. "ಜೀವವೊಂದಿದ್ದರೆ ಎಲ್ಲವನ್ನೂ ಗಳಿಸಿಕೊಳ್ಳಬಹುದು" ಎಂದರಾರೊ. "ಅಲ್ಲ, ಗಳಿಸಿಕೊಳ್ಳಬಹುದು ಎಂಬ ಧೈರ್ಯವಿದ್ದರೆ ಮಾತ್ರ ಅದು ಸಾಧ್ಯ!" ಎಂದಳಾಕೆ.

ಪುಟ್ಕಥೆ - 9
ಮಳೆಸಂತ್ರಸ್ಥರಿಗೆ ವೈದ್ಯಕೀಯ ನೆರವನ್ನು ನೀಡಲು ಹೋದವರಿಗೆ  ಅಲ್ಲಿನವರು ಟೀ, ಬಿಸ್ಕತ್ ಕೊಟ್ಟಾಗ ಆ ಕಾರ್ಯಕರ್ತರ ಕಣ್ತುಂಬಿ ಬಂದಿತ್ತು!!

ಪುಟ್ಕಥೆ - 10
ವೈದ್ಯಕೀಯ ನೆರವಿನ ಅಗತ್ಯವೇನು, ಅವರಿಗೆ ಬೇಕಿರುವುದು ಆಹಾರ, ಬಟ್ಟೆ ಎಂದು ವಾದಿಸಿದ್ದಳು ಆ ವೈದ್ಯೆ. ಆದರೆ ವೈದ್ಯಕೀಯ ಶಿಬಿರದಲ್ಲಿ ಒಬ್ಬಾಕೆ ಬಂದು "ಅಮ್ಮ ನೀವು ಮಾಡಿದ್ದು ನಮಗೆ ಬಹಳ ಉಪಕಾರವಾಯಿತು, ನಮ್ಮನ್ನು ಪರೀಕ್ಷೆ ಮಾಡಿದ್ದೇ ಅಲ್ಲದೆ ಉಚಿತವಾಗಿ ಔಷಧಿಯನ್ನೂ ಕೊಟ್ಟಿದ್ದೀರಿ, ಇಲ್ಲದಿದ್ದರೆ ನಮಗೆ ವೈದ್ಯರ ಬಳಿ ಹೋಗಲಾಗುತ್ತಿರಲಿಲ್ಲ, ಏಕೆಂದರೆ ಕೂಲಿ ಸಿಗುತ್ತಿಲ್ಲ!!" ಎಂದಳು.

ಪುಟ್ಕಥೆ - 11
೧೮ ಎಕರೆ ಶ್ರೀಮಂತ ಕಾಫಿ ಮಾಲೀಕರ ಮನೆ ತೋಟ ಪೂರ್ತಿ ಕೊಚ್ಚಿಕೊಂಡು ಹೋದಾಗ ಗಂಜಿ  ಹೋಗಲು ಅವಮಾನವೆನಿಸಿದಾಗ ಅವರಿಗೆ ಆಶ್ರಯವನ್ನಿತ್ತದ್ದು ಅವರ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಕೂಲಿಯಾಳು!!

ಪುಟ್ಕಥೆ - 12
"ವೈದ್ಯಕೀಯ ಕೋರ್ಸ್ ಸೇರಿಕೊಂಡಿದ್ದು ನಾನು ಹಣ ಮಾಡಲು. ಮೇಷ್ಟ್ರ ಮಾತಿಗೆ ಕಟ್ಟುಬಿದ್ದು ಅಂಕಗಳಿಗಾಗಿ ಇಲ್ಲಿ ಬಂದೆ. ನಾನು ಮಾಡಿದ ಅಳಿಲ ಸೇವೆಗೇ ಎಷ್ಟು ಜನ ಕೈಮುಗಿದರು, ದೊಡ್ಡವರೂ ಸಹ ಕಾಲಿಗೆ ಬೀಳಲು ಬಂದರು, ಹಿರಿಯರು ನೂರ್ಕಾಲ ಚೆನ್ನಾಗಿ ಬಾಳಪ್ಪ ಎಂದು ಆಶೀರ್ವದಿಸಿದರು, ಇದನ್ನೆಲ್ಲಾ ಅನುಭವಿಸಿದ ಮೇಲೆ ನಾನು ಇನ್ನು ಜನರ ವೈದ್ಯನಾಗಬೇಕೆಂದು ತೀರ್ಮಾನಿಸಿಬಿಟ್ಟಿದ್ದೇನೆ" ಎಂದ ಆ ಭಾವಿ ವೈದ್ಯ ಭಾವುಕನಾಗಿ!!

ಪುಟ್ಕಥೆ - 13
"ನಮಗೆ ಬೇಡ ಸರ್, ನನಗೆ ಎರಡು ದಿನದಿಂದ ಟೆಂಪೊ ಓಡಿಸಲು ಕೆಲಸ ಸಿಕ್ಕಿದೆ, ಪಕ್ಕದ ಮನೆಯವರಿಗೆ ಕೂಲಿ ಸಿಕ್ಕಿಲ್ಲ, ಅವಶ್ಯಕತೆ ಹೆಚ್ಚಿರುವವರಿಗೆ ನನ್ನ ಪಾಲಿನದನ್ನು ಕೊಟ್ಟುಬಿಡಿ" ಎಂದಾತ ಹೇಳಿದಾಗ ಆಹಾರ ಪದಾರ್ಥ ವಿತರಿಸಲು  ಕಾರ್ಯಕರ್ತ ದಂಗುಬಡಿದುಹೋದ!!

ಪುಟ್ಕಥೆ - 14
"ನಮಗೇನೂ ಪರಿಹಾರ ಬೇಕಿಲ್ಲ ಮೇಡಮ್, ನಾವು ಎಲ್ಲವನ್ನೂ ಕಳೆದುಕೊಂಡಿದ್ದರೂ ಬದುಕುವ ಛಲ ಕಳೆದುಕೊಂಡಿಲ್ಲ, ನಮಗೆ ಕೂಲಿ ಕೆಲಸ ಕೊಡಿಸಿ" ಎಂದು ಯುವಕನೊಬ್ಬ ಹೇಳಿದಾಗ 'ನಮ್ಮ ಜನ ಸೋಮಾರಿಗಳು' ಎನ್ನುವವರ ಮುಖಕ್ಕೆ ಅಪ್ಪಳಿಸಿದಂತಿತ್ತು!!



 ಸುಧಾ ಜಿ

ಕವನ

ಗೋಡೆಗೆರಚಿದ ಚಹಾ
ವರ್ಣ ಕಾರಂಜಿ!
ಒತ್ತಡದ ಒದ್ದಾಟ
ನವರಸದ ಊಟ!
ಮತ್ತದೇ ಅನುನಯ
ಹಾಡಿದ್ದೇ ಹಾಡು!
ನೀನೋ ಕ್ಷಮಯಾ ಧರಿತ್ರಿ!
ದಿವ್ಯರೂಪಳು ನೀನು!
ಬೆಳ್ಳಗಿನ ಬಿಳಿಯ ತೊಗಲಿನ
ಬಿಳಿಯ ಕಾಗೆಯು ಅವನು!
ಕೆನ್ನೆಗೇರಿದ ಕೈಯ
ಪಡಿಯಚ್ಚು ಮೊಗತುಂಬ!
ಮತ್ತದೇ ಮದರಂಗಿ
ಮನದಲ್ಲಿ ರಾಗ!
ಬಿಸಿಲ್ಗುದುರೆಯ ಮೇಲೆ
ಜೀವನದ ಓಟ!
ಅರಿತು ನಿಂತಾಗ ನಿನ್ನ
ಹೊಸ ದಿಕ್ಕು, ಹೊಸ ಪಯಣ!
ಮೋಡ ಸರಿಸಿಹ ತಾರೆ ನೀನು!

*******


ಬಾಹು ಬಂಧನದಲಿ
ಬಿಗಿದಪ್ಪಿ, ಒಪ್ಪಿ
ನುಡಿದ ಸೊಲ್ಲದು 
ಅಲ್ಲ, ನಿತ್ಯ ಸತ್ಯ!
ಜೀವನದ ವಾಸ್ತವದಿ
ಹಿತ ಬಯಸಿ
ನಿಲುವವನು
ನಿತ್ಯ ಸಂಗಾತಿ!
ಹಳೆಯ ಮೌಢ್ಯವು ಸಾಕು
ಪತಿ ಕಾಯ್ವ ಸತಿ ನೀನು
ಮೌನ ಗೌರಿಯೆ ನೀನು
ಮಾತನಾಡು!
ಮುದ್ದಿನರಗಿಳಿ ನೀನು!
ಸುಖದ ಸೌಭಾಗ್ಯ ನೀನು
ನಿನ್ನಾತ್ಮ, ನಿನ್ನಿರವು ಅವನವಲ್ಲ!

- ಸಂಧ್ಯಾ ಪಿ ಯಸ್

ಲಘುಬರಹ - ಇಷ್ಟೇ....



ಈ ಪ್ರಯಾಣದಲ್ಲಿ ನಾವೆಲ್ಲ ಮುಖಾಮುಖಿಯಾಗುತ್ತೇವೆ.. ಪರಿಚಿತರಾಗುತ್ತೇವೆ. ಸಮಾನ ಮನಸ್ಕತೆಯೋ, ಸಂವೇದನೆಗಳ ಪ್ರಭಾವವೋ, ಮತ್ತೇನು ಕಾರಣವೋ ಮಿತ್ರರೂ, ಆತ್ಮೀಯರೂ ಆಗಬಹುದು. ಕೆಲವರು  ಸಿಕ್ಕಾಗ ನಾಲ್ಕು ಮಾತು, ಬೊಗಸೆ ನಗು ಹಂಚಿಕೊಳ್ಳಬಹುದು. ಮನಸ್ಸು, ಸಮಯ ಅನುಕೂಲಿಸಿದಾಗ  ಪರಸ್ಪರ ಮೆಸೇಜುಗಳೂ ಹರಿದಾಡಬಹುದು.(ಆರೋಗ್ಯಕರ ಸಂದೇಶಗಳೂ ಇರುತ್ವೆ!!)  ಬದುಕು ಇದೆಲ್ಲದಕ್ಕಿಂತ ದೊಡ್ಡದಲ್ವ!? ಮಾತು ಮೌನವಾಗತ್ತೆ.. ದುಃಖಗಳು ಶಕುನ ಹಾಡುತ್ವೆ! ಕ್ರಿಯಾಶೀಲ ಮನಸ್ಸಿನೊಳಗೊಬ್ಬ ಸೋಮಾರಿಯಪ್ಪನೋ, ಸೋಮಾರಿಯವ್ವನೋ ನೆಲೆ ನಿಲ್ತಾರೆ!! ಗುಂಪು ರೇಜಿಗೆ ಅನ್ನಿಸ್ತವೆ...ಇನ್ಬಾಕ್ಸ್ ಇಣುಕೋದು ಬೇಡ ಅನ್ಸತ್ತೆ! ಕಮೆಂಟುಗಳು ಅಸಮಾಧಾನ ತರಿಸ್ತವೆ! ಒಂದು ಮೌನದ ಗೆರೆ ಹಾದುಹೋಗತ್ತೆ.
ಕಾಡೋದು ಇದ್ಯಾವುದೂ ಅಲ್ಲ, ಆತ್ಮೀಯರಾದವರ ಮಧ್ಯೆಯೂ ಒಂದು ಮೌನ ಸುಳಿದಿರುತ್ತದೆ ಅಂತಿಟ್ಕೊಳ್ಳೋಣ. ಅಂಥದ್ದೊಂದು ಗೆಳೆತನದ ಮಧ್ಯೆ ಮತ್ತಾರೋ ಇಣುಕಿ 'ನೀವು ಮುಂಚಿನಂತಿಲ್ಲವಾ!? ಸಿಟ್ಟಾ? ಯಾರದ್ದು ತಪ್ಪು?ಹೀಗೇಕಾಯ್ತು? ಓ,ಅದಕ್ಕೇನಾ ಅಂತಹ ಸ್ಟೇಟಸ್ (ಸ್ಟೇಟಸ್ ಹಾಕಿದವರಿಗೂ ಆ ಅರ್ಥದ ಕಲ್ಪನೆಗಳೇ ಬಂದಿರುವುದಿಲ್ಲ!) ಅಂತಹ ಚಿತ್ರಗಳು....ಇತ್ಯಾದಿತ್ಯಾದಿ..!!
ದುರ್ಬಲ ಮನಸ್ಸುಗಳಾದರೆ ಅದೆಲ್ಲ ನಿಜವೆಂದೇ ಭಾವಿಸಿ ಮತ್ತೇನೋ ಘಟಿಸಬಹುದು. ಅಕಾರಣವಾಗಿ ಮಧುರ ಬಂಧಗಳು ಹಳಸಲೂಬಹುದು.
ಯಾರೂ ಯಾರ ಆಸ್ಥಾನದಲ್ಲಿಯೂ ಗೊತ್ತಿಲ್ಲದ್ದನ್ನು ಹೇಳುವ ಅಥವಾ ಇರುವುದನ್ನು ತಿರುಚಿ ಸಾರುವ ಕೆಲಸ ಮಾಡಬಾರದು ಅನ್ನುವುದನ್ನು ನಮಗೆ ಯಾರು ಹೇಳಿಕೊಡಬೇಕು!?
ಗೆರೆಯನ್ನು ನಾವು ನಾವೇ ಅಳಿಸಿಕೊಂಡು ಮತ್ತದೇ ಪ್ರೀತಿಯ ಪರಿಮಳದ ಹಾಡ ದಿಕ್ಕು ದಿಕ್ಕಿಗೆ ಚೆಲ್ಲಬೇಕು!!
ಮತ್ತೂ ಮನುಷ್ಯರು ಗೆರೆ ಅಳಿಸುವ ,ಗೋಡೆ ಕೆಡವುವ ಕ್ರಿಯೆಯನ್ನಷ್ಟೇ ಮಾಡಬೇಕು!!
ಏನಂತೀರಿ....!?
   - ರಂಗಮ್ಮ ಹೊದೇಕಲ್

ಕಥೆ - ಒಂದು ಹನಿ ಪ್ರೀತಿ



ಪ್ರೀತಿಯನ್ನು ಹೇಗೆ ಸಂಭಾಳಿಸುವುದು? ಈ ಪ್ರಶ್ನೆ ಕವಿತಾಳ ಮುಂದೆ ಬೃಹದಾಕಾರವಾಗಿ ನಿಂತುಬಿಟ್ಟಿತು.

ಅಷ್ಟು ಮುದ್ದಾದ ಮಗು, ಅಮ್ಮನ ಬಗ್ಗೆ ಅತೀವ ಪ್ರೀತಿಯಿದ್ದ ಮಗು ಏಕಾಏಕಿ ರೆಬೆಲ್ ಆಗಿ ನಿಂತುಬಿಟ್ಟಿದ್ದಳು. ಅಮ್ಮನ ಯಾವ ಮಾತನ್ನೂ ಕೇಳದಂತಾಗಿದ್ದಳು. ಇವಳು ನನ್ನ ಮಗಳೇನಾ ಎಂದು ಕವಿತಾ ಅಂದುಕೊಳ್ಳುವಷ್ಟು ಪ್ರೀತಿ ಬದಲಾಗಿಬಿಟ್ಟಿದ್ದಳು.

ಕವಿತ ಒಚಿಟಿ ತಾಯಿ. ಕುಡುಕ ಗಂಡನ ಜೊತೆ ಏಗಲಾಗದೆ, ದಿನನಿತ್ಯ ಅವನ ಕೆಟ್ಟ ಮಾತುಗಳು, ಏಟುಗಳನ್ನು ಸಹಿಸಕೊಳ್ಳಲಾಗದೆ, ಅಪ್ಪ ಅಮ್ಮ ಏನು ಹೇಳಿದರೂ ಕೇಳಿಸಿಕೊಳ್ಳದೆ 10 ವರ್ಷದ ಮಗಳೊಂದಿಗೆ ಹೊರಬಂದಿದ್ದಳು. ಕುಟುಂಬದವರ ನೆರವಿಲ್ಲದೆ ಕೆಲವು ಗೆಳತಿಯರ ನೆರವಿನೊಂದಿಗೆ ಟೈಲರಿಂಗ್ ಕಲಿತು ಕೇವಲ ಐದು ವರ್ಷಗಳ ಅವಧಿಯಲ್ಲಿಯೇ 15 ಜನರನ್ನು ಕೆಲಸಕ್ಕಿಟ್ಟುಕೊಂಡು ಒಂದು ಸಣ್ಣ ಗಾರ್ಮೆಂಟ್ಸ್ ಆರಂಭಿಸಿದ್ದಳು. ಒಳ್ಳೆಯ ಆದಾಯವಿತ್ತು.

ಮಗಳಿಗೆ ತಂದೆಯ ಕೊರತೆ ಗೊತ್ತಾಗಬಾರದೆಂದು ಕೇಳಿದ್ದನ್ನೆಲ್ಲವನ್ನೂ ತೆಗೆದುಕೊಟ್ಟಳು. ಒಳ್ಳೆಯ ಶಾಲೆಗೆ ಸೇರಿಸಿದಳು. ಸ್ಕೇಟಿಂಗ್, ಡ್ಯಾನ್ಸ್ ಹೀಗೆ ಏನು ಕೇಳಿದರೂ ಇಲ್ಲವೆನ್ನಲಿಲ್ಲ. ಪ್ರೀತಿ ಕೂಡ ತಾಯಿಯ ಪ್ರೀತಿಯನ್ನೇನೂ ದುರುಪಯೋಗಪಡಿಸಿಕೊಂಡಿರಲಿಲ್ಲ. ಚೆನ್ನಾಗಿ ಓದುತ್ತಿದ್ದಳು, ಸ್ನೇಹಿತೆಯರೊಂದಿಗೆ ಚೆನ್ನಾಗಿದ್ದಳು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದಳು, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹಾಗಾಗಿ ಕವಿತಾಳಿಗೆ ಯಾವುದೇ ಟೆನ್ಷನ್ ಇರಲಿಲ್ಲ.

ಪ್ರೀತಿಯ ಸಹಾಯ ಮಾಡುವ ಗುಣದಿಂದಾಗಿಯೇ ಕವಿತಾಳ ತಂದೆ- ತಾಯಿ ಮತ್ತೆ ಹತ್ತಿರವಾಗಿದ್ದರು. ಒಮ್ಮೆ ಕವಿತಾಳ ಅಮ್ಮನಿಗೆ ತುಂಬಾ ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ 3 ದಿನ ಇವಳೇ ಅಲ್ಲಿದ್ದು ನೋಡಿಕೊಂಡಿದ್ದಳು. ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರವಿದ್ದರೂ ಅವರ ಮನೆಗೆ ಹೋಗಿ ಒಂದು ವಾರ ನೋಡಿಕೊಂಡಿದ್ದಳು. ಅಪ್ಪ ಅಮ್ಮನಿಗೆ ಅವಳ ಬಗ್ಗೆ ಸಾಕಷ್ಟು ಪ್ರೀತಿ ಬೆಳೆದಿತ್ತು. ಆಗಾಗ ಅವಳನ್ನು ನೋಡುವ ನೆಪದಲ್ಲಿ ಮಗಳ ಮನೆಗೆ ಹೋಗಲಾರಂಭಿಸಿದ್ದರು. ಮೊಮ್ಮಗಳ ಹಠಕ್ಕೆ ಮಣಿದು ಉಳಿದುಕೊಳ್ಳುತ್ತಿದ್ದರು.

ಒಂದು ವರ್ಷದಿಂದೀಚೆಗೆ ಕವಿತಾ ಗಾರ್ಮೆಂಟ್ಸ್ ನಲ್ಲಿ ಹೆಚ್ಚು ತೊಡಗಿಸಿಕೊಂಡುಬಿಟ್ಟಿದ್ದಳು. ಅಮ್ಮ, ಅಪ್ಪ ಮನೆಯಲ್ಲಿಯೇ ಇದ್ದುದ್ದರಿಂದ ಪ್ರೀತಿಯ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ.

ಅಮ್ಮ ಒಮ್ಮೆ “ಕವಿತಾ, ಇತ್ತೀಚೆಗೆ ಪ್ರೀತಿ ಬಹಳ ಬದಲಾಗುತ್ತಿದ್ದಾಳೆ ಅನಿಸುತ್ತಿದೆ” ಎಂದಾಗ “ಅಯ್ಯೊ, ಬಿಡಮ್ಮ, ಕಾಲೇಜಿಗೆ ಸೇರಿದ್ದಾಳಲ್ಲ, ನಮಗೆ ಹಾಗನಿಸುತ್ತದೆ” ಎಂದು ತೇಲಿಸಿಬಿಟ್ಟಿದ್ದಳು. ಹಾಗೆಯೇ ಆರು ತಿಂಗಳು ಕಳೆದುಹೋದವು. ಮಗಳು ಮೊದಲಿನಂತಿಲ್ಲ ಅನಿಸಿದರೂ ಬಿಸಿನೆಸ್ ನಲ್ಲಿ ಮುಳುಗಿಹೋದ್ದರಿಂದ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಆದರೆ ತಾಯಿ “ನೀನು ಅವಳನ್ನು ಕೇಳು. ಸರಿಯಾಗಿ ಊಟ ಮಾಡುತ್ತಿಲ್ಲ, ಯಾವಾಗಲೂ ಒಬ್ಬಳೇ ಇರುತ್ತಾಳೆ. ಅವಳ ರೂಮಿಗೆ ಯಾರನ್ನೂ ಸೇರಿಸುತ್ತಿಲ್ಲ. ಆದರೆ ಇತ್ತೀಚೆಗೆ ಬಟ್ಟೆ ಒಗೆಯಲು ಹಾಕಬೇಕೆಂದುಕೊಂಡು ಅವಳ ರೂಮಿಗೆ ಹೋದಾಗ ಕೆಟ್ಟ ವಾಸನೆ ಬರುತ್ತಿತ್ತು” ಎಂದರು.

“ಅಯ್ಯೊ, ಅಷ್ಟು ತಲೆ ಕೆಡಿಸಿಕೊಳ್ಳಬೇಡಮ್ಮ. ಸ್ವಲ್ಪ ಸೋಮಾರಿಯಾಗಿದ್ದಾಳೆ ಅನಿಸುತ್ತೆ. ಎರಡು ಮೂರು ದಿನ ಸ್ನಾನ ಮಾಡಿರೋಲ್ಲ, ಸೆಂಟ್ ಹಾಕ್ಕೊಂಡಿರ್ತಾಳೆ. ಜೊತೆಗೆ ಎಲ್ಲಾ ಗಲೀಜು ಬಟ್ಟೆ, ಶೂಸ್ ಅಲ್ಲೇ ಇಟ್ಟಿದ್ದಾಳೆ ಅನಿಸುತ್ತೆ” ಎಂದುಬಿಟ್ಟಳು.

ಅದಾದ ಮೂರು ತಿಂಗಳಿಗೆ ಅಮ್ಮ ಒಂದು ಬಾಟಲ್ ತಂದುಕೊಟ್ಟು “ಇದೇನು ನೋಡು, ಇದೇ ವಾಸನೆ ಬರ್ತಾ ಇರೋದು” ಎಂದರು.

ಸ್ಥಂಭೀಭೂತಳಾದಳು ಕವಿತಾ. ಹೆಂಡದ ಬಾಟಲ್ ಆಗಿತ್ತದು. ಒಂದು ಘಳಿಗೆ ತನ್ನ ಕಣ್ಣನ್ನೇ ತಾನು ನಂಬದಾದಳು. ಹಾಗೆಯೇ ಸೋಫಾದ ಮೇಲೆ ಕುಸಿದು ಕುಳಿತಳು. ತನ್ನನ್ನು ತಾನು ಸಂಭಾಳಿಸಿಕೊಂಡು ಸಂಜೆ ಮಗಳೊಂದಿಗೆ ಮಾತನಾಡಲು ನಿರ್ಧರಿಸಿದಳು.

ಪ್ರೀತಿ ರಾತ್ರಿ 9ಕ್ಕೆ ಮನೆಗೆ ಬಂದಳು. “ಎಲ್ಲಿಗೆ ಹೋಗಿದ್ದೆ ಇಷ್ಟೊತ್ತಿನವರೆಗೆ?”

“ಎಲ್ಲಾ ಫ್ರೆಂಡ್ಸ್ ಸೇರಿದ್ದರು, ಪಾರ್ಟಿ ಇತ್ತು, ಹೋಗಿದ್ದೆ.”

ಅವಳು ಉತ್ತರಿಸುತ್ತಿದ್ದ ರೀತಿ, ನಿಂತಿದ್ದ ರೀತಿ ನೋಡಿದ ತಕ್ಷಣವೇ ಕವಿತಾಳಿಗೆ ಮಗಳ ಸ್ಥಿತಿ ಅರ್ಥವಾಯಿತು. “ನಾಳೆ ಮಾತಾಡೋಣ, ಈಗ ಹೋಗಿ ಮಲಗಿಕೊ” ಎಂದಳು. ಪ್ರೀತಿ ಮತ್ತೇನೂ ಮಾತನಾಡದೆ ಒಳಹೋದಳು.

ಅಳುತ್ತಿದ್ದ ಅಮ್ಮನಿಗೆ ಧೈರ್ಯ ತುಂಬಿದರೂ ಮನಸ್ಸಿನಲ್ಲಿ ‘ಇದೇನಾಗಿ ಹೋಯಿತು’ ಎಂಬ ಪ್ರಶ್ನೆ ಮೂಡಿತು.

ಬೆಳಿಗ್ಗೆ ಮಾತನಾಡಬೇಕಾದರೆ ಅವಳಿಗೆ ಅರ್ಥವಾದದ್ದಿಷ್ಟು. ಪ್ರೀತಿಗೆ ಅಮ್ಮ ತನ್ನನ್ನು ಪ್ರೀತಿಸುವುದಿಲ್ಲ, ಅದಕ್ಕೆ ಸಮಯ ಕೊಡುತ್ತಿಲ್ಲ ಎಂಬ ಭಾವನೆ ಬೆಳೆದುಬಿಟ್ಟಿತ್ತು. ಜೊತೆಗೆ ಅಮ್ಮ ಗಾರ್ಮೆಂಟ್ಸ್ ನ ಮ್ಯಾನೇಜರ್ ಜೊತೆ ಓಡಾಡುತ್ತಿದ್ದುದ್ದನ್ನು ತಪ್ಪಾಗಿ ತಿಳಿದಿದ್ದಳು. ಇದೆಲ್ಲವನ್ನೂ ಅವಳ ತಲೆಯಲ್ಲಿ ತುಂಬಿದ್ದು ಮಾಜಿ ಗಂಡ ಎಂದು ತಿಳಿಯಿತು. ಇದರೊಂದಿಗೆ ಅಜ್ಜಿ ತಾತನ ಜೊತೆಗೆ ಸಹ ತುಂಬಾ ಬಾಂಧವ್ಯ ಇರದಿದ್ದರಿಂದ ಪ್ರೀತಿ ಯಾರೊಂದಿಗೂ ತನ್ನ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ.

ಕೋಪ ತಡೆಯಲಾಗದೆ ಮಗಳ ಮೇಲೆ ಕೈಮಾಡಿಬಿಟ್ಟಳು. “ನಾನು ನಿನಗೆ ಏನು ಕಡಿಮೆ ಮಾಡಿದ್ದೆ? ನಿನಗೆ ಎಲ್ಲವನ್ನೂ ಕೊಡಲೋಸ್ಕರ ನಾನು ಹಗಳಿರುಳೂ ಕೆಲಸ ಮಾಡುತ್ತಿದ್ದರೆ, ಮ್ಯಾನೇಜರ್ ಜೊತೆ ಸಂಬಂಧ ಕಟ್ಟುತ್ತೀಯಾ? ಏನಾಗಿದೆ ನಿನಗೆ?” ಪ್ರಶ್ನಿಸಿದಳು.

“ನೀನೆಲ್ಲವನ್ನೂ ಕೊಟ್ಟಿದ್ದೀಯ, ಆದರೆ ಅಷ್ಟು ಮಾತ್ರ ಸಾಕಾ? ನೀನು ನನ್ನ ಜೊತೆ ಮಾತನಾಡಿ ಎಷ್ಟು ದಿನವಾಯಿತು? ಊಟ ತಿನಿಸಿ ಎಷ್ಟು ದಿನವಾಯಿತು? ನನ್ನ ಜೊತೆ ಮಲಗಿ ಎಷ್ಟು ದಿನವಾಯಿತು? . . . . . ಹೀಗೆ ಪ್ರಶ್ನಿಸುತ್ತಾ ಪ್ರೀತಿಯ ಕೋಪ ತಾರಕಕ್ಕೇರಿ ಅಳಲಾರಂಭಿಸಿದಳು. ಸ್ವಲ್ಪ ಹೊತ್ತು ಅತ್ತಾದ ಮೇಲೆ “ನನಗೆ ನೀನು ಬೇಡ. ನನಗೆ ಹೇಗೆ ಬೇಕೊ ಹಾಗಿರ್ತೀನಿ. ನೀನು ಬೇಡ ಎಂದರೆ ನಿನ್ನನ್ನು ಬಿಟ್ಟು ನಮ್ಮಪ್ಪನ ಮನೆಗೆ ಹೋಗ್ತೀನಿ. ಅವರೂ ಬೇಡ ಎಂದರೆ ಎಲ್ಲಾದರೂ ಹಾಳಾಗ್ ಹೋಗ್ತೀನಿ” ಎಂದವಳೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟಳು.

ಗರಬಡಿದಂತೆ ಕುಳಿತುಬಿಟ್ಟಳು ಕವಿತಾ. ತನ್ನ ಕಿವಿಯನ್ನು ತಾನೇ ನಂಬಲಾರದಾದಳು. ‘ನನ್ನ ಪ್ರೀತಿಯ ಹುಡುಗಿ ಈ ರೀತಿ ಮಾತನಾಡಲು ಸಾಧ್ಯವೇ?’ ಅನಿಸಿತು. ಏನೂ ತೋಚದೆ ಆತ್ಮೀಯ ಗೆಳತಿಗೆ ಫೋನ್ ಮಾಡಿದಳು. ಅವಳು ಎಲ್ಲವನ್ನೂ ಕೇಳಿಕೊಂಡ ಮೇಲೆ “ತಕ್ಷಣವೇ ಡಿ ಅಡಿಕ್ಷನ್ ಸೆಂಟರ್ ಗೆ ಸೇರಿಸೋಣ, ಮಧ್ಯಾಹ್ನ ಬರುತ್ತೇನೆ. ಗೊತ್ತಿರುವ ಜಾಗದಲ್ಲಿ ವಿಚಾರಿಸೋಣ” ಎಂದಳು.

ಇಬ್ಬರೂ ಬಹಳಷ್ಟು ಕಡೆಗಳಲ್ಲಿ ವಿಚಾರಿಸಿದರು. ಎಲ್ಲೂ ಅವರಿಗೆ ಸಮಾಧಾನವಾಗಲಿಲ್ಲ. ಕೆಲವೆಡೆ ಬಹಳ ಕ್ರೂರವಾದ ಚಿಕಿತ್ಸೆ ಎನಿಸಿದರೆ ಇನ್ನೂ ಕೆಲವೆಡೆ ಬಹಳ ಗಲೀಜಾಗಿತ್ತು. ಎಲ್ಲಾ ನೋಡಿ ಕೊನೆಗೆ ಒಂದು ಸೆಂಟರ್ ಗೆ ಹೋಗಿ ಮಾತನಾಡುತ್ತಿದ್ದಾಗ, ಅಲ್ಲಿ ಪರವಾಗಿಲ್ಲ ಎನಿಸಿ, ಅಲ್ಲಿಂದ ಹೊರಟರು. ಆಗಲೇ ಕವಿತಾಳ ಕಿವಿಗೆ ಒಂದು ಹುಡುಗಿಯ

ಆರ್ತನಾದ ಕಿವಿಗೆ ಬಿದ್ದಿತು “ನನಗೊಂದು ಹನಿ ಪ್ರೀತಿ ಕೊಡಿ, ನನಗೊಂದು ಹನಿ ಪ್ರೀತಿ ಕೊಡಿ.” ಗಕ್ಕನೆ ನಿಂತುಬಿಟ್ಟಳು ಕವಿತಾ.

ಪ್ರೀತಿ ಸಹ “ನನಗೆ ನಿನ್ನ ಪ್ರೀತಿ ಸಿಗುತ್ತಿಲ್ಲ” ಎಂದಿದ್ದಳು. ಅಂದರೆ ಪ್ರೀತಿಗೆ ಸಮಸ್ಯೆ ಬಂದಿರುವುದು ಪ್ರೀತಿಯ ಕೊರತೆಯಿಂದಾಗಿ. ಮನೆಯಲ್ಲಿ ಸಿಗದ ಪ್ರೀತಿಯನ್ನು ಹೊರಗಡೆ ಅರಸಿದ್ದಳು. ಸಿಕ್ಕ ಸ್ನೇಹಿತರು ಇಂತಹವರೇ ಆಗಿದ್ದರಿಂದ ಕುಡಿತದ ಅಭ್ಯಾಸವಾಗಿಬಿಟ್ಟಿತ್ತು, ಕುಡಿಯುತ್ತಾ ತನ್ನ ನೋವನ್ನು ಮರೆಯಲೆತ್ನಿಸಿದ್ದಳು.

ಹಾಗಿದ್ದರೆ ಈ ಅಂಶ ಸರಿಯೆನಿಸಿತು. ಮಗಳು ಬದಲಾಗುವುದಾದರೆ ಒಂದು ಹನಿ ಏಕೆ, ತಾಯಿಯೆದೆಯಲ್ಲಿರುವ ಸಾಗರದಷ್ಟು ಪ್ರೀತಿಯನ್ನೂ ಅರ್ಪಿಸಲು ಸಿದ್ಧಳಿದ್ದಳಾಕೆ. ಯಾಕೆ ಪ್ರಯತ್ನಿಸಬಾರದೆನಿಸಿತು.

ರಾತ್ರಿ ಪ್ರೀತಿಯ ರೂಮಿಗೆ ಊಟವನ್ನು ತೆಗೆದುಕೊಂಡು ಹೋದಳು. ಮಲಗಿದ್ದ ಮಗಳ, ಕೆನ್ನೆ ನೇವರಿಸಿದಳು. ಬೆಚ್ಚಿ ಬಿದ್ದು ಎದ್ದ ಪ್ರೀತಿ ಆಶ್ಚರ್ಯದಿಂದ ತಾಯಿಯನ್ನೇ ನೋಡಿದಳು. “ಪುಟ್ಟಾ, ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ನನ್ನಿಂದ ತಪ್ಪಾಗಿದೆ, ನಾನು ಸರಿಪಡಿಸಿಕೊಳ್ಳಲು ಸಿದ್ಧಳಿದ್ದೇನೆ, ಇದು ನಮ್ಮಿಬ್ಬರಿಗೂ ಪರೀಕ್ಷೆ, ಇಬ್ಬರೂ ಒಟ್ಟಿಗೆ ಪರೀಕ್ಷೆ ಎದುರಿಸಿ ಪಾಸಾಗೋಣ. ನಿನ್ನ ಜೊತೆ ನಾನಿರ್ತೀನಿ, ನನ್ನ ಜೊತೆ ನೀನಿರ್ತೀಯಾ?” ಕೇಳಿದಳು.

ಪ್ರೀತಿ ಉತ್ತರವನ್ನೇನೂ ಕೊಡದೆ ಮೌನವಾಗಿ ಅಮ್ಮನ್ನನ್ನೇ ದಿಟ್ಟಿಸಿದಳು. ‘ಬಾ’ ಎನ್ನುವಂತೆ ಕರೆದ ತಾಯಿ ತೋಳಿಗೆ ಬರಲು ಮುಂದೆ ಬಂದವಳು ಹಾಗೆಯೇ ನಿಂತುಬಿಟ್ಟಳು. ಕವಿತಾಳೇ ಮುಂದೆ ಹೋಗಿ ಪ್ರೀತಿಯನ್ನು ತಬ್ಬಿಕೊಂಡುಬಿಟ್ಟಳು. ತಕ್ಷಣವೇ ಪ್ರೀತಿ ಗಟ್ಟಿಯಾಗಿ ಅಮ್ಮನನ್ನು ಅಪ್ಪಿಕೊಂಡು ಜೋರಾಗಿ ಅಳಲಾರಂಭಿಸಿದಳು. ಕವಿತಾಳ ಕಣ್ಣುಗಳಿಂದಲೂ ಕಣ್ಣೀರು ಹರಿಯುತ್ತಿತ್ತು. ತಾಯಿ – ಮಗಳು ಹಾಗೆಯೇ ಅಪ್ಪಿಕೊಂಡು ಇಡೀ ರಾತ್ರಿಯನ್ನು ಕಳೆದರು.

6 ತಿಂಗಳಾದ ನಂತರ ಪ್ರೀತಿ ಕಾಲೇಜಿಗೆ ಹೋಗುತ್ತಾ “ಅಮ್ಮ, ಇಂದು ತಡವಾಗಿ ಬರ್ತೀನಿ. ಸುಜಾತಳ ಮನೆಗೆ ಹೋಗುತ್ತಿದ್ದೇನೆ” ಎಂದಳು.

“ಏನು ವಿಶೇಷ?”

“ಅವಳಿಗೂ ಒಂದು ಹನಿ ಪ್ರೀತಿ ಬೇಕಂತೆ” ಕಣ್ಣುಮಿಟುಕಿಸುತ್ತಾ ನುಡಿದಳು ಪ್ರೀತಿ. ಕವಿತಾಳ ಮೊಗದಲ್ಲಿ ನಗು ಅರಳಿತು!!

-  ಸುಧಾ ಜಿ