ಮೂಲ ಲೇಖಕರು - ಜಾಈ ವಿಟೇಕರ್.
ಬಹುಶ ನಿಮಗೆ ಈ ಕಥೆಯ ಬಗ್ಗೆ ನಂಬಿಕೆ ಬರದಿರಬಹುದು, ಆದರೆ ಇದು ಸುಳ್ಳಲ್ಲ ನಿಜ ಅಂತ ನನಗೊತ್ತು. ಏಕೆಂದರೆ ನಾನು ನಾಗನಗರಿಯನ್ನು ನೋಡಿದ್ದೇನೆ. ಅಲ್ಲಿ ಹಾವುಗಳು ಇರುತ್ತವೆ.
ಕತ್ತಲು ತುಂಬಿರುವ ದಟ್ಟವಾದ ಕಾಡಿನ ಮಧ್ಯೆ ಈ ನಾಗನಗರಿ ಇದೆ. ನೀವೇನಾದರು ಅದನ್ನು ನೋಡಿದರೆ ಜನ ಇಲ್ಲಿಯವರೆಗೆ ಹೇಗೆ ತಲುಪುತ್ತಾರೆ ಅಂತ ಯೋಚಿಸಲು ಶುರು ಮಾಡ್ತೀರ. ಕಾಡಿನಲ್ಲಿ ಒಣಗಿ ಬಿದ್ದಿರುವ ಮರಗಳ ಕೊಂಬೆ-ರೆಂಬೆಗಳು ರಸ್ತೆಯನ್ನೇ ಮುಚ್ಚಿ ಬಿಟ್ಟಿರುತ್ತವೆ. ಸಾಲದ್ದಕ್ಕೆ ಮುಳ್ಳಿನ ಗಿಡಗಳು, ಬೇಲಿಗಳು ಕೈ-ಕಾಲುಗಳಿಗೆ ಸುತ್ತಿಕೊಂಡು ಮುಂದೆ ಹೆಜ್ಜೆ ಇಡೋದಕ್ಕು ಕಷ್ಟ ಆಗುತ್ತೆ, ಹೀಗೆ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸಾಕಪ್ಪ-ಸಾಕು ವಾಪಸ್ ಹೊರಟು ಹೋಗೋಣ. ಈ ಕಾಡಿನಲ್ಲಿ ಹಾವುಗಳು-ಹಲ್ಲಿಗಳು ಹದ್ದುಗಳೇ ಇದ್ದುಕೊಳ್ಳಲಿ, ನಮಗಿಲ್ಲೇನು ಕೆಲಸ ಅನ್ನಿಸುತ್ತದೆ. ನಾಗನಗರಿ ಇದೇ ಕಾಡಿನ ಒಂದು ತುದಿಯಲ್ಲಿ, ಬೆಟ್ಟಗಳ ತಪ್ಪಲಿನಲ್ಲಿ ಹಬ್ಬಿರುವ ಒಂದು ಕುಗ್ರಾಮ. ಬೆಟ್ಟಗಳ ಮೇಲೆಲ್ಲ ಹರಡಿರುವ ಈ ದಟ್ಟಕಾಡನ್ನು ನೋಡಿದರೆ ಒಂದು ರೀತಿ ಹಚ್ಚ ಹಸುರಿನ ತೆಳುವಾದ ಬಟ್ಟೆಯನ್ನು ಬೆಟ್ಟಕ್ಕೆಲ್ಲಾ ಹೊದಿಸಿದಂತೆ ಕಾಣುತ್ತದೆ. ಹಳ್ಳಿಯ ಮೇಲೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದುಗಳ ಗೋಲಿಯಾಕಾರದ ಕಣ್ಣುಗಳು ಬಹಳ ತರ್ಕಬದ್ಧವಾಗಿ ಭೂಮಿಯ ಮೇಲೆ ಹರಿದಾಡುವ ಇಲಿಗಳು ಮತ್ತು ಹಾವುಗಳನ್ನು ಹುಡುಕುತ್ತಿರುತ್ತವೆ.
ಒಮ್ಮೊಮ್ಮೆ ದೊಡ್ಡದೊಡ್ಡ ಮರಗಳು ಬಿದ್ದಾಗ ಕಾಡಿನಲ್ಲಿ ಎಂತಹ ಪ್ರತಿಧ್ವನಿ ಉಂಟಾಗುತ್ತೆ ಅಂದರೆ-ಯಾರೋ ಒಬ್ಬ ದೈತ್ಯ ರಾಕ್ಷಸನ ಏಟಿನಿಂದ ಮರ ಉರುಳಿರುವ ಹಾಗೆ, ಅಥವಾ ಯಾವುದಾದರು ಆನೆ, ಕಾಡೆಮ್ಮೆಗಳೇ ಮರ ಬೀಳಿಸಿರಬಹುದೇನೋ ಅನ್ನೋ ಹಾಗೆ, ಆದರೆ ಇಂತಹ ಭಯಂಕರ ಶಬ್ದಗಳಿಂದಲೂ ನಾಗನಗರಿಯಲ್ಲಿರುವ ಜನರಿಗೆ ಭಯವೇ ಆಗುವುದಿಲ್ಲ.
ಹಳ್ಳಿಯಲ್ಲಿ ಎಲ್ಲಾ ರೀತಿಯ ಜನರು ವಾಸಿಸುತ್ತಾರೆ. ಕೆಲವರು ಕಪ್ಪಗಿದ್ದರೆ ಕೆಲವರು ಬೆಳ್ಳಗೆ, ಕೆಲವರು ಉದ್ದವಾಗಿದ್ದರೆ ಕೆಲವರು ಕುಳ್ಳಗೆ. ಈ ಜನರಿಗೆ ತಮ್ಮದೇ ಆದ ಬೇರೆ ಬೇರೆ ಭಾಷೆಗಳಿವೆ. ಒಂದೆಡೆ ಮಾಂಸಹಾರಿಗಳಿದ್ದರೆ ಮತ್ತೊಂದೆಡೆ ಸಸ್ಯಹಾರಿಗಳು. ಕೆಲವರು ಕಾಡಿನ ಮೂಲೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಮತ್ತು ಕೆಲವರು ದೂರದಲ್ಲಿರುವ ಮಸೀದಿಗಳಲ್ಲಿ ನಮಾಜ್ ಮಾಡುತ್ತಾರೆ. ಕೆಲವರು ಶಿವನ ಆರಾಧಕರಾದರೆ ಇನ್ನು ಕೆಲವರು ದೇವಿ-ದೇವತೆಗಳ ಆರಾಧಕರು. ಇಷ್ಟೆಲ್ಲಾ ವೈವಿದ್ಯತೆಯ ನಡುವೆಯೂ ನಾಗನಗರಿಯ ಜನ ಒಟ್ಟಾಗಿ ಒಗ್ಗಟ್ಟಿನಿಂದ ಬಹಳ ಸಂತೋಷದ ಜೀವನ ನಡೆಸುತ್ತಿದ್ದರು.
ನನ್ನ ಹೆಸರು ಪ್ರೇಮ್. ನಾನು ನಾಗನಗರಿಯಿಂದ ನೂರಾರು ಮೈಲಿಗಳ ದೂರದಲ್ಲಿ ವಾಸವಾಗಿದ್ದೇನೆ. ನಾನು ಆ ಹಳ್ಳಿಯ ಬಗ್ಗೆ ಕೇಳಿದ್ದೆ ಆದರೆ ಅಲ್ಲಿಗೆ ಎಂದೂ ಹೋಗಿರಲಿಲ್ಲ. ಏಕೆಂದರೆ ಅಲ್ಲಿಗೆ ತಲುಪಲು ರೈಲು,ಬಸ್ಸು ಮತ್ತು ಎತ್ತಿನ ಬಂಡಿಗಳಲ್ಲಿ ದೂರ ಪ್ರಯಾಣ ಮಾಡಬೇಕಾಗುತ್ತದೆ.
ಹಿಂದಿನ ವರ್ಷ ನಮ್ಮ ಹಳ್ಳಿಯಲ್ಲಿ ಒಂದು ಭಯಾನಕ ಘಟನೆ ನಡೆಯಿತು. ನಮ್ಮ ಜನರಿಗೆ ಧರ್ಮದ ಹುಚ್ಚುಹಿಡಿದಿತ್ತು. ಎಲ್ಲೋ ಬಹಳ ದೂರ ಕಾಣದ ಒಂದು ಪ್ರದೇಶದಲ್ಲಿ ದೇವಸ್ಥಾನವನ್ನೋ ಅಥವಾ ಮಸೀದಿಯನ್ನೋ ಸುಟ್ಟುಹಾಕಿದ್ದರು. ಅಷ್ಟಕ್ಕೆ ನಮ್ಮ ಹಳ್ಳಿಯ ಜನರು ಹುಚ್ಚರಾದರು. ಪ್ರತಿಯೊಬ್ಬರ ನಡುವೆ ಜಗಳ-ಯುದ್ಧ ಶುರುವಾಯ್ತು. ಇದರಿಂದ ಹೆದರಿದ ಕೆಲವರು ರಾತ್ರೋ-ರಾತ್ರಿ ಊರು ಬಿಟ್ಟು ಓಡಿಹೋದರು. ಒಂದು ದಿನ ಬೆಳಗಿನ ಜಾವ ಮಂಪರು ನಿದ್ದೆಯಲ್ಲಿದ್ದ ನನಗೆ ಜಗಳ-ಘರ್ಷಣೆಗಳ ಶಬ್ದ ಕೇಳಿಸಿ, ಏನೆಂದು ಎದ್ದು ನೋಡಿದರೆ ಎಲ್ಲೆಡೆ ಬೆಂಕಿ ಬಿದ್ದಿತ್ತು. ಆ ಬೆಂಕಿಯಲ್ಲಿ ಹಲವಾರು ಗುಡಿಸಲುಗಳು ನಾಶವಾಗಿದ್ದವು, ಅವುಗಳಲ್ಲಿ ನನ್ನ ಗುಡಿಸಲೂ ಇತ್ತು!!! ಗಡಿಬಿಡಿಯಲ್ಲಿ ಸ್ವಲ್ಪ ಬಟ್ಟೆಯ ರಾಶಿ, ಚಿಲ್ಲರೆ ಹಣ ಮತ್ತು ನನ್ನ ಪುಟ್ಟ ಗಣೇಶನ ಮೂರ್ತಿಯೊಂದಿಗೆ ನಾನು ಓಡಿದೆ. ದಿನವಿಡೀ, ರಾತ್ರಿಯಿಡೀ ಓಡುತ್ತಲೇ ಇದ್ದೆ. ಹೇಗೆ ಓಡಿದೆ ಎಂದರೆ ನನ್ನ ಕಾಲುಗಳು, ಸೋತು ನಿಶ್ಯಕ್ತವಾಗಿ, ಹೊಡೆದು ಛಿದ್ರವಾಗುವವರೆಗೂ ಓಡಿದೆ. ನಂತರ ನಾನು ಒಂದು ರೈಲಿನಲ್ಲಿ ಧುಮುಕಿದೆ, ಬಸ್ಸಿನ ಮೇಲೆ ಹತ್ತಿದೆ, ಅದೂ ಯಾವ ಟಿಕೆಟ್ ಇಲ್ಲದೆ. ಪರವಾಗಿಲ್ಲ ಬಿಡಿ ನಾನೊಬ್ಬನೇ ಅಲ್ಲ ಎಲ್ಲರೂ ತಮ್ಮ ಪ್ರಾಣ ಉಳಿಸಿಕೊಳ್ಳುವ ತವಕದಲ್ಲಿ ಓಡುತ್ತಿದ್ದರು. ಅಂತೂ ಕೊನೆಗೆ ನಾನು ನಾಗನಗರಿ ತಲುಪಿದೆ. ಅಲ್ಲಿ ಬಾವಿಯ ಬಳಿ ಹಳ್ಳಿಯ ಕೆಲವರನ್ನು ನೋಡಿದೆ. ನೇರವಾಗಿ ಅವರ ಬಳಿ ಬಂದು ತಲುಪಿದೆ. ಆದರೆ ಅವರಿಗೆ ಏನಾದರೂ ಹೇಳೋಣ ಅನ್ನೋವಷ್ಟರಲ್ಲಿ ಮೂರ್ಛೆ ತಪ್ಪಿ ಕೆಳಗೆ ಬಿದ್ದು ಬಿಟ್ಟೆ.
ನಂತರ ಕಣ್ಣು ಬಿಟ್ಟಾಗ ಬಿಳಿ ಕೂದಲು, ಉದ್ದವಾದ ಬಿಳಿ ಗಡ್ಡ ಮತ್ತು ಹೊಳೆಯುತ್ತಿದ್ದ ಕಪ್ಪುಕಣ್ಣುಗಳಿದ್ದ ಒಬ್ಬ ಅಜ್ಜ ನನ್ನ ಹತ್ತಿರ ಕುಳಿತು ನನಗೆ ಸುಶ್ರೂಶೆ ಮಾಡುತ್ತಿದ್ದರು. ನಂತರ ಸ್ವಲ್ಪ ದಿನಗಳವರೆಗೆ ಅವರೇ ನನ್ನನ್ನು ನೋಡಿಕೊಂಡರು. ತಮ್ಮ ಕೈಗಳಿಂದ ಊಟ ತಿನ್ನಿಸುತ್ತಿದ್ದರು, ನನ್ನ ಕಾಲುಗಳನ್ನು ಒತ್ತಿ ಮಾಲೀಶ್ ಸಹ ಮಾಡುತ್ತಿದ್ದರು. ಇದರಿಂದ ನನ್ನ ನೋವು ದೂರವಾಯಿತು. ನನ್ನನ್ನು ನೋಡಲು ಅಜ್ಜನ ಸ್ನೇಹಿತರು, ಅಕ್ಕಪಕ್ಕದವರು ಸಾಲುಗಟ್ಟಿ ಬರುತ್ತಿದ್ದರು.
ಒಂದು ದಿನ ನಾನು ಅಜ್ಜನ ಬಳಿ ಬಂದು ಹೇಳಿದೆ “ಅಜ್ಜ, ನಾನು ಇಂತಹ ಜನರನ್ನು ಎಲ್ಲಿಯೂ ನೋಡೇ ಇಲ್ಲ. ನಮ್ಮೂರಿನಲ್ಲಿ ಏನಾದರೂ ಬೇರೇ ದೇವರನ್ನು ಪೂಜಿಸಿದರೆ ಸಾಕು ಜಗಳಕ್ಕೆ ಅದೇ ಒಂದು ದೊಡ್ಡ ವಿಷಯವಾಗುತ್ತಿತ್ತು, ಆದರೆ ಇಲ್ಲಿ…............ ಈ ಸ್ಥಳವಂತೂ ಬಹಳ ಅದ್ಭುತ ಅನ್ನಿಸುತ್ತಿದೆ. ಅದಕ್ಕೆ ಅಜ್ಜ ಹೇಳಿದರು, “ಪ್ರೇಮ್ ನಾನು ನಿನಗೆ ನಾಗನಗರಿಯ ಕಥೆಯನ್ನು ಹೇಳುವೆ, ಈ ಕಥೆಯನ್ನು ನೀನು ನಿಮ್ಮೂರಿನ ಜನರಿಗೆ ಹೋಗಿ ಹೇಳು, ಬಹುಷಃ ಇದರಿಂದ ನಿನ್ನ ಗಾಯದ ಬರೆಗಳು ತುಂಬಬಹುದು. ಹಾಗೂ ಎಲ್ಲಾ ದುಃಖವೂ ದೂರವಾಗಬಹುದು”. ಅದಕ್ಕೆ ನಾನು ಹೇಳೆದೆ, “ಅಜ್ಜ ಇದು ಸಾಧ್ಯವೇ ಇಲ್ಲ. ನಮ್ಮ ಹಳ್ಳಿಯಲ್ಲಿ ಆದ ಘಟನೆಯನ್ನು ನೆನೆಸಿಕೊಂಡರೆ ಬಹಳ ಕ್ರೂರ ಅನ್ನಿಸುತ್ತೆ, ಅಲ್ಲದೆ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ನಾನು ಎಂದಿಗೂ ನಮ್ಮ ಹಳ್ಳಿಗೆ ವಾಪಸ್ ಹಿಂತಿರುಗುವುದಿಲ್ಲ"
“ನೋಡು ಇದಕ್ಕಾಗಿಯಾದರೂ ನೀನು ನಿನ್ನ ಹಳ್ಳಿಗೆ ಹಿಂತಿರುಗುವುದು ಅವಶ್ಯಕವಾಗಿದೆ.” ಅಜ್ಜ ಬಹಳ ಕೋಮಲ ಧ್ವನಿಯಲ್ಲಿ ಹೇಳಿದರು. ನನಗೂ ಕಥೆ ಕೇಳುವ ಕುತೂಹಲವಿದ್ದುದರಿಂದ ಅವರೊಂದಿಗೆ ಹೆಚ್ಚು ಚರ್ಚಿಸಲು ಇಷ್ಟವಿಲ್ಲದೆ ಸುಮ್ಮನಾದೆ.ಅಜ್ಜ ಕಥೆಯನ್ನು ಹೇಳತೊಡಗಿದರು-
ಬಹಳ ಹಿಂದಿನ ಮಾತಿದು, ಆ ದಿನಗಳಲ್ಲಿ ಶಿಕ್ಷಕರು, ಶಾಲೆಗಳು ಇರಲಿಲ್ಲ. ಮಕ್ಕಳು ಅವರ ತಂದೆ-ತಾಯಿರರೊಡನೆ ಗುಹೆಗಳಲ್ಲಿ ವಾಸಿಸುತ್ತಿದ್ದರು. ಗೆಡ್ಡೆ-ಗೆಣಸು, ಹಣ್ಣು-ಹಂಪಲು ಆರಿಸಿ ಶೇಕರಿಸುವುದರಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು. ಆಗ ಕಾಡುಗಳಲ್ಲಿ ಆನೆ, ಸಿಂಹ, ನರಿ-ತೋಳಗಳ ಹೆಸರು ನಿಶಾನೆಗಳಿರಲಿಲ್ಲ. ಇಡೀ ಕಾಡಿನಲ್ಲಿ ವಿಧ ವಿಧವಾದ ತೆವಳುವ ಜೀವಿಗಳು ಮಾತ್ರ ಇದ್ದವು. ನಿನಗೆ ಗೊತ್ತಿರುವಂತೆ, ಹಾವು, ಮೊಸಳೆ, ಆಮೆ, ಹಲ್ಲಿಗಳು ಇವೆಲ್ಲಾ ತೆವಳುವ ಮತ್ತು ಮೊಟ್ಟೆ ಇಡುವ ಜೀವಿಗಳು. ಪ್ರಕೃತಿಯಲ್ಲಿನ ಪ್ರತಿಯೊಂದು ನಿಯಮಕ್ಕೂ ಯಾವುದಾದರೊಂದು ಅಪವಾದ ಇದ್ದೇ ಇರುತ್ತದೆ, ಹೇಗೆಂದರೆ, ನಾವು ಹಾರುವ ಜೀವಿಗಳನೆಲ್ಲಾ ಪಕ್ಷಿಗಳು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಅಂದರೆ.......... ..... ಹೋಗಲಿ ಈ ಮಾತೆಲ್ಲಾ ಬಿಡು.
ನಾಗನಗರಿಯ ಜೀವಿಗಳು ತಿಂಗಳಿಗೊಮ್ಮೆ ಒಂದು ಸಭೆ ಸೇರುತ್ತಿದ್ದವು. ಎಲ್ಲಾ ಜೀವಿಗಳು ಸಭೆಗೆ ತಪ್ಪದೇ ಬರುತ್ತಿದ್ದವು. ಮುದ್ದಾದ, ಸುಂದರವಾದ ಹಾವುಗಳು, ನಿಧಾನವಾಗಿ ಚಲಿಸುವ ವಿಚಾರವಾದಿ ಆಮೆಗಳು, ಚಪಲ, ಚಾಲಾಕಿ ಹಲ್ಲಿಗಳು, ನೀರಿನಿಂದ ಹೊರಬರಲು ಆಯಾಸವಾದಂತೆ, ಮಂಕಾಗಿರುವ ಮೊಸಳೆಗಳು ಹೀಗೆ. ಈ ಮಾಸಿಕ ಸಭೆಗೆ ಅಧ್ಯಕ್ಷ ಮಕರ. ಇದು ಕಾಡಿನ ಅತಿ ದೊಡ್ಡ ಮೊಸಳೆಯಾಗಿತ್ತು. ಅದು ಸುಮಾರು 25 ಅಡಿ ಉದ್ದವಿತ್ತೆಂದು ಜನ ಹೇಳುತ್ತಿದ್ದರು. ಬಿಡು ಅದರ ಅಸಲೀ ಉದ್ದ ಎಷ್ಟೆಂದು ಗೊತ್ತಿಲ್ಲದಿದ್ದರೂ ಕಾಡಿನಲ್ಲಿ ಅದರ ಶಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು, ಯಾರಾದರೂ ಒಬ್ಬರು ಶಕ್ತಿಶಾಲಿಯಾದರೆ ಉಳಿದವರೆಲ್ಲರೂ ಅವರ ನಿರ್ಧಾರಕ್ಕೆ ಹೂಂಗುಟ್ಟಲೇ ಬೇಕು.
ಒಂದು ದಿನ ಒಂದು ವಿಸ್ಮಯ ಘಟನೆ ನಡೆಯಿತು. ಸಭೆಗೆ ಒಂದು ವಾರ ಮುಂಚಿನ ಮಾತು. “ಆಮೆಗಳಾದ ನೀವು ಇನ್ನು ಮುಂದೆ ನಮ್ಮ ಸಭೆಗೆ ಬರಬಾರದು” ಎಂದು ಮಕರ ಪತ್ರದ ಮೂಲಕ ಆಮೆಗಳಿಗೆ ಸಂದೇಶ ಕಳಿಸಿತು. ಆಮೆಗಳ ಗುಂಪಿನಲ್ಲಿದ್ದ ಮುದಿ ಆಮೆಗೆ ಪತ್ರ ಓದಿ ಬಹಳ ಕೋಪ ಬಂದು. “ಇದರ ಅರ್ಥವೇನು?, ನಮ್ಮೊಂದಿಗೆ ಈ ವ್ಯವಹಾರವೇಕೆ?” ಎಂದು ಕೂಗಾಡಿತು. ಮೊದಲೇ ಆಮೆಗಳ ಸಂಖ್ಯೆ ಇತರೆ ಜೀವಿಗಳಿಗಿಂತ ಕಡಿಮೆ ಇದ್ದುದರಿಂದ ಯಾವ ಆಮೆಗೂ ಸಭೆಗೆ ಹೋಗುವ ಧೈರ್ಯ ಬರಲಿಲ್ಲ. ಸಭೆ ಆರಂಭವಾಗುವ ಮೊದಲು ಮಕರ ನದಿಯ ತೀರದಲ್ಲಿದ್ದ ಕೆಂಪು ಹೂಗಳಿಂದ ತನ್ನ ಹಲ್ಲುಗಳನ್ನು ಸ್ವಚ್ಛಮಾಡಿಕೊಂಡಿತು. ಎಲ್ಲಾ ಜೀವಿಗಲೂ ಮಕರನ ಆಗಮನಕ್ಕಾಗಿ ಕಾಯುತ್ತಿದ್ದವು.
“ಅಣ್ಣ-ತಮ್ಮಂದಿರೇ ಹಾಗೂ ಅಕ್ಕ-ತಂಗಿಯರೇ” ಮಕರ ಮತನ್ನು ಪ್ರಾರಂಭಿಸುತ್ತಿದ್ದಂತೆಯೇ ಎಲ್ಲವೂ, ಕೊನೆಗೆ ಹಾವುಗಳ ಸರದಾರ ನಾಗರಾಜನೂ ಕೂಡ ಸುಮ್ಮನಾದ. ಮಕರ ತನ್ನ ಮಾತನ್ನು ಮುಂದುವರೆಸಿತು, “ನಮಗೆ ಆಮೆಗಳ ಅವಶ್ಯಕತೆ ಇಲ್ಲ ಎಂದು ನಾನು ನಿರ್ಧರಿಸಿದ್ದೇನೆ. ಇಂದು ಅವರಿಗೆ ಸಭೆಗೆ ಬರಬಾರದೆಂದು ಆದೇಶಿಸಿದ್ದೇನೆ. ನನಗೆ ಅವರು ಏಕೆ ಇಷ್ಟವಿಲ್ಲ ಎಂದು ಹೇಳಬಲ್ಲಿರಾ?” ಎಲ್ಲಾ ಜೀವಿಗಳೂ ಪೆಚ್ಚು ಮೋರೆಯಿಂದ ನೋಡತೊಡಗಿದವು. ಆಶ್ಚರ್ಯದಿಂದ ಹಾವು ಬುಸುಗುಟ್ಟತೊಡಗಿತು. ಹಲ್ಲಿ ಮತ್ತು ಮೊಸಳೆಗಳು ಭಯದಿಂದ ಬಾಲವನ್ನು ಅಲ್ಲಾಡಿಸತೊಡಗಿದವು. “ಆದರೆ..........” ಒಂದು ಪುಟ್ಟ ಹಲ್ಲಿ ಹೇಳತೊಡಗಿತು.
“ಆದರೆ-ಗೀದರೆ ಏನೂ ಇಲ್ಲ" ಮಕರ ಗದರಿತು. ಎಲ್ಲವೂ ಸುಮ್ಮನಾದವು.
“ನನಗನ್ನಿಸುತ್ತೆ.........” ಮೊಸಳೆಯ ಒಂದು ಪುಟ್ಟ ಮರಿ ಮಧ್ಯೆ ಬಾಯಿಹಾಕಿತು.
“ಏನೂ ಅನ್ನಿಸುವುದು ಬೇಡ...!!” ಮಕರ ಎಷ್ಟು ಎತ್ತರದ ಧ್ವನಿಯಲ್ಲಿ ಕೂಗಾಡಿತೆಂದರೆ ಮರದ ಮೇಲಿಂದ ಹಣ್ಣುಗಳು ನೆಲಕ್ಕೆ ಉದುರತೊಡಗಿದವು. ಇದರ ನಂತರ ಎಲ್ಲ ಜೀವಿಗಳು ಧೈರ್ಯ ಕಳೆದುಕೊಂಡು ಏನು ಮಾತಾನಾಡಲಿಲ್ಲ. ಮಕರ ತನ್ನ ಧ್ವನಿಯನ್ನು ಸರಿಪಡಿಸಿಕೊಳ್ಳುತ್ತಾ , ತನ್ನ ಹೊಳೆಯುವ ಹಲ್ಲುಗಳನ್ನು ತೋರಿಸುತ್ತಾ, “ಆಮೆಗಳು ಏಕೆ ಇಷ್ಟವಾಗುವುದಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ, ಅವು ತುಂಬಾ ನಿಧಾನವಾಗಿ ಚಲಿಸುತ್ತವೆ. ಜೊತೆಗೆ ಎಷ್ಟು ಮೂರ್ಖವೆಂದರೆ ತಮ್ಮ ಮನೆಗಳನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗುತ್ತವೆ. ಇದು ಮೂರ್ಖತನದ ಮಾತಲ್ಲವೇ?” ಈಗ ಈ ಹಲ್ಲಿಗಳನ್ನೇ ಕೇಳಿ ಇವು ಮರದ ಮೇಲೆ ಇರುತ್ತವೆ. ಹಾಗೆಂದು ಮರವನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗುತ್ತವೆಯೇ? ನೀವೇ ಹೇಳಿ.”
ಮೊದಲೇ ಹೆದರಿದ್ದ ಹಲ್ಲಿಗಳು ಸ್ವಲ್ಪ ಮೆಲು ಧ್ವನಿಯಲ್ಲಿ “ಇಲ್ಲ....ಆದರೂ.....” ಎಂದವು.
“ಸುಮ್ಮನಿರಿ..!! ನನ್ನ ಮಾತು ಕೇಳಿ, ನಾನು ಆಮೆಗಳಿಗೆ ಕಾಡು ಬಿಟ್ಟು ಹೋಗಲು ಆಜ್ಞೆ ಮಾಡಿದ್ದೇನೆ. ಅವರು ಕಾಡು ಬಿಟ್ಟು ಹೋದರೆ ನಮಗೆ ಮೊದಲಿಗಿಂತಲೂ ಹೆಚ್ಚು ಆಹಾರ, ನೀರು, ಸ್ಥಳ ಸಿಗುತ್ತೆ. ನಾಳೆಯೇ ಅವರಿಗೆ ಕಾಡು ಬಿಟ್ಟು ಹೋಗಲು ಹೇಳೋಣ ಅನ್ಕೊಂಡೆ ಆದರೆ ಅವು ಮೊದಲೇ ನಿಧಾನವಾಗಿ ಚಲಿಸುತ್ತವೆ ಅದಕ್ಕೆ ಒಂದು ವಾರದ ಗಡುವು ನೀಡಿದ್ದೇನೆ. ಮುಂದಿನ ಮಂಗಳವಾರದ ಹೊತ್ತಿಗೆ ಒಂದು ಆಮೆಯೂ ಕಾಡಲ್ಲಿ ಕಾಣಿಸೊಲ್ಲ”
ಅದರಂತೆ ಮಂಗಳವಾರದ ಹೊತ್ತಿಗೆ ಎಲ್ಲಾ ಆಮೆಗಳೂ ಕಾಡಿನಿಂದ ಹೊರಟು ಹೋದವು. ಪ್ರಾರಂಭದಲ್ಲಿ ಕೆಲವು ಜೀವಿಗಳಿಗೆ ಬೇಸರವೆನ್ನಿಸಿದರೂ ನಂತರ ಅವುಗಳಿಗೂ ಮಕರ ಒಳ್ಳೆ ಕೆಲಸ ಮಾಡಿದ ಎಂದೆನಿಸತೊಡಗಿತು. ಏಕೆಂದರೆ ಅವುಗಳಿಗೆ ಈಗ ಮೊದಲಿಗಿಂತಲೂ ಹೆಚ್ಚು ಆಹಾರ, ನೀರು, ಸ್ಥಳ ಸಿಕ್ಕಿತ್ತು.
ಆದರೆ ಬಹಳ ಬೇಗನೆ ಕಾಡಿನ ಗಾಳಿಯಲ್ಲಿ ದುರ್ನಾತ ಬರಲು ಆರಂಭವಾಯಿತು. ಇದು ಕೊಳೆತ ಪದಾರ್ಥಗಳಿಂದ ಬರುತ್ತಿತ್ತು. ನೆಲದ ಮೇಲೆ ಬಿದ್ದ ಹಣ್ಣುಗಳು ಕೊಳೆಯುತ್ತಿದ್ದವು. ನದಿಗಳಲ್ಲಿ ಸತ್ತ ಪ್ರಾಣಿಗಳು ಕೊಳೆತು ನಾರುತ್ತಿದ್ದವು. ಆಮೆಗಳು ಇದೇ ಕೊಳೆತ ಪದಾರ್ಥಗಳನ್ನು ತಿಂದು ಬದುಕುತ್ತಿದ್ದವು. ಮಕರನೂ ಸಹ ತನ್ನ ವಿಶಾಲವಾದ ಪಂಜಗಳಿಂದ ಮೂಗನ್ನು ಮುಚ್ಚೆಕೊಂಡು ಹೊರ ಬರುತ್ತಿತ್ತು. ಹೀಗೇ ಒಂದು ತಿಂಗಳು ಕಳೆಯಿತು....ಮತ್ತೆ ಮೊದಲಿನ ಕಥೆಯೇ ಶುರುವಾಯ್ತು. ಈ ಬಾರಿ ಹಾವುಗಳಿಗೆ ಮಕರನ ಪತ್ರ ತಲುಪಿತು. ಅವುಗಳಿಗೂ ಕಾಡನ್ನು ಬಿಟ್ಟು ಹೋಗಬೇಕಾಯಿತು. ಅಲ್ಲದೆ ಅವು ಸರಸರನೆ ಹರಿದು ಚಲಿಸುವುದರಿಂದ ಒಂದೇ ದಿನದ ಕಾಲಾವಕಾಶದಲ್ಲಿ ಕಾಡು ದಾಟಬೇಕಿತ್ತು. ಹಾವುಗಳ ಸರದಾರ ನಾಗರಾಜ ಮಕರನ ಬಳಿ ಬಂದು ತಮಗೆ ಕಾಡು ದಾಟಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಕೇಳಿಕೊಂಡರೂ ಮಕರ ಒಪ್ಪಲೇ ಇಲ್ಲ. “ಹಾವುಗಳು ತುಂಬಾ ಉದ್ದವಾಗಿಯೂ, ವಿಚಿತ್ರವಾಗಿಯೂ ಇರುತ್ತವೆ. ಅಲ್ಲದೆ ಅರ್ಥವಿಲ್ಲದೇ ಬುಸುಗುಟ್ಟುತ್ತಿರುತ್ತವೆ. ನಮಗೆ ಇಂತಹ ಜೀವಿಗಳ ಅವಶ್ಯಕತೆ ಇಲ್ಲ” ಎಂದು ಉಳಿದ ಮೊಸಳೆ, ಹಲ್ಲಿಗಳ ಮೇಲೆ ಗದರಿ ಸುಮ್ಮನಾಗಿಸಿಬಿಟ್ಟಿತು. ಮಕರನ ವಿರುದ್ದು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಬೇರೆ ದಾರಿ ಇಲ್ಲದೆ ಹಾವುಗಳೂ ಕಾಡನ್ನು ಬಿಟ್ಟು ಹೊರಟು ಹೋದವು.
ಸ್ವಲ್ಪ ದಿನಗಳವರೆಗೆ ಮೊಸಳೆ,ಹಲ್ಲಿಗಳಿಗೆ ಹಾವುಗಳು ಇಲ್ಲದಿರುವುದು ಒಳ್ಳೆಯದೆನಿಸತೊಡಗಿತು. ಕಾರಣ ಅವುಗಳಿಗೆ ಹಾವೆಂದರೆ ಭಯ. ಈ ಹಾವುಗಳಿಗೆ ಯಾವಾಗ ಕೋಪ ಬಂದು ಯಾರ ಮೇಲೆ ತನ್ನ ವಿಷ ಕಕ್ಕುತ್ತೋ ಯಾರಿಗೊತ್ತು. ಒಂದು ಹನಿ ವಿಷವಾದರೂ ಸಾಕು ಅವರು ಸತ್ತಂತೆ ಎಂದು.
ಕೆಲವು ವಾರಗಳು ಉರುಳಿದವು. ಜೀವಿಗಳೆಲ್ಲ ಸ್ವಲ್ಪ ನಿಶಕ್ತವಾದಂತೆ, ಗಾಬರಿಗೊಂಡತೆ ಕಂಡವು ಕಾರಣ “ಇಲಿ”. ಈಗ ಅವುಗಳನ್ನು ತಿನ್ನುವ ಹಾವುಗಳೇ ಇಲ್ಲವಾದ್ದರಿಂದ ಇಲಿಗಳ ರಾಜ್ಯ ಹುಟ್ಟಿಕೊಂಡಿತ್ತು. ಎಲ್ಲಿ ನೋಡಿದರೂ ಇಲಿಗಳೇ, ಇಲಿಗಳು ಕಾಣಿಸತೊಡಗಿದವು. ಮರ-ಗಿಡಗಳ ಮೇಲೆ, ಹುಲ್ಲಿನ ಮೇಲೆ, ನೆಲದ ಮೇಲೆ ಎಲ್ಲೆಡೆಯೂ ಇಲಿಗಳೇ.....ಅವು ಮೊಸಳೆ, ಹಲ್ಲಿಗಳ ಮೊಟ್ಟೆಗಳನ್ನು ತಿಂದು ಹಾಕೆದವು. ಮೊಟ್ಟೆಗಳೇ ಇಲ್ಲದ ಮೇಲೆ ಮರಿಗಳು ಎಲ್ಲಿಂದ ತಾನೇ ಬರುತ್ತವೆ? ಸ್ವತಃ ಮಕರನ ಮೊಟ್ಟೆಗಳನ್ನೂ ಸಹ ಇಲಿಗಳು ತಿಂದು ಹಾಕಿದವು.
ಈಗ ಮಕರನಿಗೆ ಒಂದು ಹೊಸ ಉಪಾಯ ಹೊಳೆಯಿತು. ಅದು ಮೊಸಳೆಗಳ ಸಭೆ ಕರೆದು ಹೇಳಿತು. “ಇಡೀ ಕಾಡೇ ನಮ್ಮದಾದರೆ ಎಷ್ಟು ಚೆನ್ನಾಗಿರುತ್ತೆ. ಅಲ್ಲವೇ? ಕೇವಲ ಮೊಸಳೆಗಳೇ ಇಲ್ಲಿದ್ದರೆ?? ಈ ಹಲ್ಲಿಗಳನ್ನೇ ನೋಡಿ ಒಂದು ಇದರ ಸ್ವಭಾವವೇ ವಿಚಿತ್ರ , ಮತ್ತೊಂದು ಇವು ತಮ್ಮ ಬಣ್ಣವನ್ನೂ ಬದಲಿಸುತ್ತಿರುತ್ತವೆ. ನಾವು ಇವನ್ನು ಹೇಗೆ ನಂಬುವುದು. ಒಂದು ಕ್ಷಣ ಕೆಂಪಗಿದ್ದರೆ, ಮತ್ತೊಂದು ಕ್ಷಣ ನೀಲಿಯಾಗಿರುತ್ತವೆ. ನಾವು ಇವುಗಳನ್ನೂ ಕಾಡಿನಿಂದ ಹೊರಗೆ ಅಟ್ಟಿಬಿಡೋಣ.”
ಎಲ್ಲಾ ಮೊಸಳೆಗಳೂ ಮಕರನಿಗೆ ಹೆದರುತ್ತಿದ್ದವು. ಸುಮ್ಮನೆ ಎಲ್ಲವೂ ಮಕರನ ಮಾತಿಗೆ ಒಪ್ಪಿಗೆ ನೀಡುತ್ತಿದ್ದವು. ಹಾಗಾಗಿ ಎಲ್ಲವೂ ಚಪ್ಪಾಳೆಗಳೊಂದಿಗೆ ಮಕರನ ಮಾತನ್ನು ಸ್ವಾಗತಿಸಿದವು. ಮಕರನಿಗೆ ಬಹಳ ಸಂತೋಷವಾಯಿತು. ನಂತರ ಹಲ್ಲಿಗಳೂ ಕಾಡನ್ನು ಬಿಟ್ಟು ಹೋದವು.
ಈಗಂತೂ ನಾನನಗರಿಯಲ್ಲಿ ಕೇವಲ ಮೊಸಳೆಗಳದ್ದೇ ಸಾಮ್ರಾಜ್ಯ. ಅವುಗಳಿಗೆ ಮಜವೋ ಮಜ. ಆದರೆ ಹಾಗಾಲಿಲ್ಲ. ಅಲ್ಲಿ ಕೆಲವು ವಿಸ್ಮಯ ಘಟನೆಗಳು ಘಟಿಸುವುದಕ್ಕೆ ಆರಂಭಿಸಿತು. ಹೇಗೆಂದರೆ ಯಾರೋ ಹುಚ್ಚ ಕಾಡಿಗೆ ನುಸುಳಿ ಎಲ್ಲವನ್ನೂ ಉಲ್ಟಾ-ಪಲ್ಟಾ ಮಾಡಿದ ಹಾಗೆ. ಇಲಿಗಳ ಅಬ್ಬರವಂತೂ ದಿನಕ್ಕೆರಡರಷ್ಟು ರಾತ್ರಿಗೆ ನಾಲ್ಕರಷ್ಟು ಹೆಚ್ಚುತ್ತಾ ಬಂತು. ಎಷ್ಟರ ಮಟ್ಟಿಗೆಂದರೆ, ಇಲಿಗಳು ಮೊಸಳೆಗಳ ಮೇಲೆಯೇ ಕಬ್ಬಡ್ಡಿ ಆಡುವಷ್ಟು. ಕಪ್ಪೆಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಏಕೆಂದರೆ ಅವನ್ನು ತಿನ್ನಲು ಈಗ ಉಳಿದಿರುದು ಮೊಸಳೆಗಳಷ್ಟೆ.!!
ಅಲ್ಲದೇ ಅವು ಎಷ್ಟು ದೊಡ್ಡದಾಗೆ ಬೆಳೆದಿತ್ತೆಂದರೆ ಮೊಸಳೆಗಳ ಪುಟ್ಟ ಮರಿಗಳನ್ನೂ ತಿಂದು ಹಾಕುತ್ತಿತ್ತು. ಹಲ್ಲಿಗಳು ಇಲ್ಲದ ಕಾರಣ ಕ್ರಿಮಿ ಕೀಟಗಳ ಸಂಖ್ಯೆಯಂತೂ ಕೋಟಿಗಟ್ಟಲೆ ಬೆಳೆದಿತ್ತು. ಈಗ ಎಲ್ಲಾ ಮೊಸಳೆಗಳೂ ಚಿಂತೆಗೀಡಾದವು.
ಮೊಸಳೆಗಳ ಜೀವನ ಬಹಳ ಕಷ್ಟವಾಗಿ ನಡೆಯುತ್ತಿತ್ತು. ಅವುಗಳಿಗೆ ತಮ್ಮ ಸುಖಮಯ ಜೀವನ ನಾಶವಾಗಲು ಕಾರಣವೇನೆಂದು ತಿಳಿಯಲೇ ಇಲ್ಲ. ಆದರೆ ಒಂದು ದಿನ ಒಂದು ಪುಟ್ಟ ಮೊಸಳೆಯ ಮರಿ ಸಭೆಯಲ್ಲಿ ತನ್ನ ಪುಟ್ಟ ಸ್ವರದಲ್ಲಿ ಹೇಳಿತು. “ನಮ್ಮ ಕಾಡಿನಲ್ಲಿ ಸು-ಸಂತೋಷ ಕಳೆದು ಹೋಗಲು ಕಾರಣ ನಮಗೆ ಗೊತ್ತೇ ಇದೆ ಅಲ್ಲವೇ?” ಎಲ್ಲ ಮೊಸಳೆಗಳು ಸುಮ್ಮನಿದ್ದವು. ಎಲ್ಲವೂ ಭಯಭೀತವಾಗಿ ಮಕರನ ಕಡೆ ನೋಡಿದವು ಆದರೆ ಮಕರ ಇಂದು ಸ್ವಲ್ಪ ಅಶಕ್ತನಾಗಿ ಕಂಡಿತು.
ಮಕರ ತನ್ನ ಬಾಲದ ಮೇಲೆ ಓಡಾಡುತ್ತಿದ್ದ ಇಲಿಗಳನ್ನು ಓಡಿಸುತ್ತಾ ಆ ಪುಟ್ಟ ಮೊಸಳೆಗೆ ಹೇಳಿತು. “ಹೌದು, ಹೌದು ಪುಟ್ಟ, ಏನು ಕಾರಣ ಎಂದು ಹೇಳು?”
ಅದಕ್ಕೆ ಪುಟ್ಟ ಮೊಸಳೆ-“ಕಾಡಿನಲ್ಲಿ ಕಷ್ಟದ ದಿನಗಳು ಆಮೆಗಳು......" ಮಕರ ಎಲ್ಲರ ಮುಂದೆ ತಪ್ಪಿತಸ್ಥನಾಗಲು ಇಷ್ಟವಿಲ್ಲದೆ ಮಧ್ಯದಲ್ಲಿ ಬಾಯಿ ಹಾಕಿ ಹೇಳಿತು, “ಸರಿ ಸರಿ ಹೆಚ್ಚು ಮಾತಾಡುವ ಅವಶ್ಯಕತೆಯಿಲ್ಲ.” ಈಗ ಎಲ್ಲರಿಗೂ ಮಕರನ ಶಕ್ತಿಗೆ ಯಾವ ಮಹತ್ವವೂ ಇಲ್ಲ ಹಾಗೂ ಮಕರ ಹೇಳಿದ್ದೆಲ್ಲಾ ಸರಿಯಾಗಿರುವುದಿಲ್ಲ ಎಂದು ತಿಳಿದು ಬಂತು. ತಕ್ಷಣವೇ ಅವುಗಳು, ಆಮೆ, ಹಾವು ಹಾಗೂ ಹಲ್ಲಿಗಳಿಗೆ ಮತ್ತೆ ಕಾಡಿಗೆ ಹಿಂತಿರುಗಬೇಕೆಂದು ಸಂದೇಶ ಕಳಿಸಿದವು.
ನಾಗನರಿಗರಿಯಲ್ಲಿ ಅಂದು ಉತ್ಸವದ ದಿನ ಎಲ್ಲ ಜೀವಿಗಳೂ ಮರಳಿ ಕಾಡಿಗೆ ಬಂದವು. ಎಲ್ಲವೂ ತಮ್ಮ ಪರಿವಾರಗಳೊಂದಿಗೆ ತಮ್ಮ-ತಮ್ಮ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು, ನಿಧಾನವಾಗಿ ನಡೆಸಿಕೊಂಡು ತಮ್ಮ ಮನೆಗಳಿಗೆ ಕರೆತಂದವು.
ಎರಡು ತಿಂಗಳಲ್ಲಿಯೇ ಕಾಡು ಮೊದಲಿನಂತಾಯಿತು. ಇಲಿಗಳು ಓಡಿ ಹೋದವು, ಕ್ರಿಮಿ-ಕೀಟಗಳು ಮಾಯವಾದವು. ದುರ್ವಾಸನೆಯು ಸಮಾಪ್ತಿಯಾಯಿತು. ಮತ್ತೊಮ್ಮೆ ಎಲ್ಲರ ಜೀವನ ಎಂದಿನಂತೆ ಸಾಮಾನ್ಯವಾಗಿ ನಡೆಯತೊಡಗಿತು.
ಅಜ್ಜ-“ಏನಪ್ಪಾ ಪ್ರೇಮ್, ಮಲಗಿ ಬಿಟ್ಟೇಯಾ? ನನ್ನ ಕಥೆ ಕೇಳ್ತಾ ಕೇಳ್ತಾ ನಿದ್ದೆ ಬಂದು ಬಿಟ್ಟಿತಾ?” ಎಂದರು.
ನಾನು ತಲೆ ಅಲ್ಲಾಡಿಸುತ್ತಾ, “ಇಲ್ಲ ಅಜ್ಜ, ನಾನು ಯೋಚನೆಯಲ್ಲಿ ಮುಳುಗಿದ್ದೆ, ನಮ್ಮ ಹಳ್ಳಿಗೆ ಹಿಂತಿರುಗಿ ಈ ಕಥೆಯನ್ನು ಹೇಳೋಣ ಅಂತ, ಆದರೆ ಯಾರೂ ಇದನ್ನು ನಂಬಲಿಲ್ಲ ಎಂದರೆ.”
“ನೋಡು ಮಗು ನಾವು ಈ ಕಥೆಯನ್ನು ಮತ್ತೆ ಮತ್ತೆ ಹೇಳುವ ಕೆಲಸವನ್ನಷ್ಟೇ ಮಾಡಬಹುದು. ಕೆಲವರು ಕಥೆ ಕೇಳಿ ನಂಬದೇ ಇರಬಹುದು, ನಗಬಹುದು, ಇದೆಲ್ಲಾ ಸುಳ್ಳು ಅಂತಲೂ ಹೇಳಬಹುದು. ಕೆಲವರು ಕಥೆ ಕೇಳದೆಯೂ ಇರಬಹುದು. ಆದರೆ ಈ ವಿಶಾಲ ಜಗತ್ತಿನಲ್ಲಿ ನಮಗೆಲ್ಲರಿಗೂ ನಮ್ಮದೇ ಆದ ಯಾವುದಾದರೊಂದು ಸ್ಥಳ ಖಂಡಿತವಾಗಿಯೂ ಇದ್ದೇ ಇರುತ್ತದೆ ಎಂದು ಬಹುಷಃ ಎಲ್ಲರೂ ಒಂದಲ್ಲ ಒಂದು ದಿನ ಒಪ್ಪಿಕೊಳ್ಳಲೇ ಬೇಕು.
- ದೀಪಶ್ರೀ ಜೆ
1 ಕಾಮೆಂಟ್:
Deepa, very relevant to today's situation.
ಕಾಮೆಂಟ್ ಪೋಸ್ಟ್ ಮಾಡಿ