"ಮನಸಿದ್ದರೆ ಮಾರ್ಗ" ಎಂಬುವುದಕ್ಕೆ ದುರ್ಗಾಪುರದ ಮಹಿಳೆಯರು ಮಾಡಿದ ಕೆಲಸವೇ ಸಾಕ್ಷಿ. ಇದಕ್ಕೆಲ್ಲಾ ಕಾರಣ ಜಸಿಂತ. ಮಾಲಪಲ್ಲಿಯ ದಿಬ್ಬಾಯಿ ಮತ್ತು ರತ್ನಮ್ಮನ ಎಂಟನೆಯ ಮಗಳಾಗಿ ಜನಿಸಿದಳು ಜಸಿಂತ. ಸಂಬಂಧಿ ತೇರೇಸಮ್ಮಳ ಸಹಾಯದಿಂದ ಶಾಲೆಗೆ ಸೇರಿದಳು. ರಜಾದಿನಗಳಲ್ಲಿ ಹೊಲಿಗೆ ಮೊದಲಾದವುಗಳನ್ನು ಕಲಿತಳು. ಓದುವುದೆಂದರೆ ಬಲು ಪ್ರೀತಿ. ಸ್ನೇಹಿತರಿಂದ ಪುಸ್ತಕಗಳನ್ನು ಪಡೆದು ಓದಿ ಹೊರ ಜಗತ್ತಿನ ವಿದ್ಯಮಾನಗಳನ್ನು ತಿಳಿಯುತ್ತಿದ್ದಳು. ಇಂಟರ್‌ನಲ್ಲಿ ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದದೆ ತನ್ನ ಊರಿಗೆ ಮರಳಿ ಬಂದಳು.
ಊರಿನಲ್ಲಿ ಮಹಿಳೆಯರು ಮನೆಗಳಲ್ಲಿ ಪಾಯಿಖಾನೆಗಳಿಲ್ಲದೆ ಹೊರಹೋಗುತ್ತಿರುವ ವಿಷಯ ಜಸಿಂತಾಳಿಗೆ ಮುಜುಗರ ತರುತ್ತಿತ್ತು. ಎರಡು ಪಕ್ಷಗಳ ನಡುವಿನ ರಾಜಕೀಯ ವೈಷಮ್ಯ, ಮೇಲ್ಜಾತಿಯವರ ತುಳಿತ, ಕೌಟುಂಬಿಕ ದೌರ್ಜನ್ಯಗಳು ಮಹಿಳೆಯರಿಗೆ ಸಹಿಸಲಸಾಧ್ಯವಾಗಿತ್ತು. "ಊಟ ಬಟ್ಟೆಗೆ ಇಲ್ಲದ ರಾಜಕೀಯ ಊರು ನಾಶ ಆಗೋಕೆ ಬಂದಿರೋದು" ಎನ್ನುವ ಜನರ ಮಾತಿನಿಂದ ಜಸಿಂತಾಳಿಗೆ ಅರ್ಥವಾಯಿತು ಅಲ್ಲಿನ ಜನರ ಪರಿಸ್ಥಿತಿ.
ಜಸಿಂತಾಳಿಗೆ ಗೆಳತಿ ಭಾರತಿಯು ಊರಿನ ಮತ್ತಷ್ಟು ವಿಷಯಗಳನ್ನು ತಿಳಿಸಿದಳು. ಮಹಿಳೆಯರು ಹೊರಗೋಗಿ ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಿದ್ದರು. ಆದರೆ ಪುರುಷರು ತಾವು ಕೆಲಸಕ್ಕೆ ಹೋಗದೆ ಅವರಿಂದ ಹಣವನ್ನು ಪಡೆದು ತಮ್ಮ ಖರ್ಚಿಗೆ ಉಪಯೋಗಿಸಿಕೊಳ್ಳುತ್ತಿದ್ದರು. ದಿನವೆಲ್ಲಾ ಕಾಡುಹರಟೆ ಹೊಡೆಯುತ್ತಾ, ಇಸ್ಪೀಟಾಟ ಆಡುತ್ತಾ ವ್ಯರ್ಥವಾಗಿ ಸಮಯ ಕಳೆಯುತ್ತಿದ್ದರು. ಪಂಚಾಯತಿ ಆಫೀಸನ್ನು ಕಟ್ಟುವ ವಿಷಯವಾಗಿ ಊರಿನಲ್ಲಿ ರಾಜಕೀಯ ವೈಷಮ್ಯ ಹೆಚ್ಚಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಜಸಿಂತಾ ಹೇಗಾದರೂ ಇದನ್ನು ತಡೆಯಬೇಕು ಎಂದು ನಿರ್ಧರಿಸಿದಳು.
ಜಸಿಂತಾ ಗೆಳತಿ ಪ್ರಮೀಳಳೊಂದಿಗೆ ಮಾತನಾಡುತ್ತಾ "ಆ ಪಂಚಾಯತಿ ಆಫೀಸ್ ಕಟ್ಟಡ ಕಟ್ಟೋದೆಲ್ಲಾದರೂ ಇರಲಿ, ಊರು ಸ್ಮಶಾನವಾಗಿ ಹೋಯ್ತು. ಇಷ್ಟಕ್ಕೂ ಆ ಆಫೀಸ್ ಯಾಕೆ? ಅಧಿಕಾರಕ್ಕಾಗಿ, ದೊಡ್ಡಸ್ತಿಕೆಗಾಗಿ ಒದ್ದಾಡೋವರೆಲ್ಲಾ ಕುಳಿತು ಹೊಡೆದಾಡೋದಕ್ಕೆ ತಾನೇ. ನಮ್ಮೂರಲ್ಲಿ ಮೂರು ಸಾವಿರ ಜನ ಹೆಂಗಸರಿದ್ದಾರೆ. ಪಾಯಿಖಾನೆಗಳಿಲ್ಲ ಹೆಂಗಸರೆಲ್ಲಾ ಎಷ್ಟು ಅವಸ್ಥೆ ಪಡ್ತೇವೋ, ಎಷ್ಟು ತೊಂದರೆಯೋ ಹೇಳೋದಕ್ಕಾಗೋದಿಲ್ಲ. ಈ ಪಂಚಾಯತಿ ಆಫೀಸನ್ನು ಪಾಯಿಖಾನೆ ಮನೆಗಳಾಗಿ ಬದಲಾಯಿಸಿದರೆ ಪೀಡೆ ತೊಲಗಿಹೋಗುತ್ತೆ. ನನಗೇನಾದರೂ ಅಧಿಕಾರ ಇದ್ದಿದ್ರೆ ಆ ಸ್ಥಳದಲ್ಲಿ ಪಾಯಿಖಾನೆಗಳ ಮನೆಗಳನ್ನೇ ಕಟ್ಟಿಸ್ತೇನೆ. ಆ ಸರಪಂಚ್ ತಮ್ಮ ಪ್ರಾಣ ಹೋದರೂ ಆ ಕೆಲಸ ಮಾಡೋದಿಲ್ಲ" ಎಂದಳು.
ಇದನ್ನೆಲ್ಲಾ ಕೇಳಿದ ಪ್ರಮೀಳಾ "ನಮ್ಮಿಂದ ಈ ಕೆಲಸ ಸಾಧ್ಯವಾಗುವುದಾ ಯೋಚಿಸು" ಎಂದಳು.
"ಊರಿನ ಮಹಿಳೆಯರೆಲ್ಲರ ಬೆಂಬಲ ಸಿಗುತ್ತದೆ" ಎಂಬ ಜಸಿಂತಾಳ ಮಾತಿನಿಂದ ಪ್ರಮೀಳ ಮತ್ತು ಅವಳ ಅಣ್ಣಂದಿರು ಸಹಾಯ ಹಸ್ತ ನೀಡಿದರು. ಪ್ರಮೀಳ ಜಸಿಂತಾಳನ್ನು ಸಿವಿಲ್ ಇಂಜನಿಯರ್ ವೀಣಾರವರ ಬಳಿ ಕರೆದುಕೊಂಡು ಹೋದಳು. ವೀಣಾ ಕೆಲಸ ಮಾಡಲು ಒಪ್ಪಿಕೊಂಡರು. ಹಾಗೆಯೇ ಮಹಿಳಾ ಮೇಸ್ತ್ರಿ ಗೌರಮ್ಮನ ಪರಿಚಯ ಮಾಡಿಸಿಕೊಟ್ಟರು.
ಎಲ್ಲರೂ ದುರ್ಗಾಪುರಕ್ಕೆ ಬಂದರು. ರಹಸ್ಯವಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ನಿಟ್ಟಿನಲ್ಲಿ ಮೊದಲಿಗೆ ಮಹಿಳೆಯರನ್ನು ಭೇಟಿ ಮಾಡಿದರು ಹಾಗೂ ವಿಷಯವನ್ನು ತಿಳಿಸಿದರು. ಮೊದಲಿಗೆ "ದೊರೆಗಳ ಮೇಲೆ ತಿರುಗಿ ಬೀಳೋದು ನಮ್ಮ ಕೈಲಾಗುವುದಾ? ಸಂದೇಹದಿಂದ ಕೇಳಿದರು. ಸಮಸ್ಯೆಯನ್ನು ವಿವರವಾಗಿ ತಿಳಿಸಿದಾಗ ಎಲ್ಲರೂ ಕೈ ಜೋಡಿಸಲು ಸಿದ್ಧರಾದರು. ಎಲ್ಲರಿಗೂ ಆದಷ್ಟು ಈ ವಿಷಯ ಗೋಪ್ಯವಾಗಿಡಬೇಕೆಂದು ತಿಳಿಸಲಾಯಿತು.
"ಒಗ್ಗಟ್ಟಿನಲ್ಲಿ ಬಲವಿದೆ" ಎಂಬಂತೆ ಎಲ್ಲರೂ ಸಹಾಯ ಮಾಡಿದರು. ಒಬ್ಬರು ಕಟ್ಟಲು ಸ್ಥಳ ಕೊಟ್ಟರು. ಇನ್ನೊಬ್ಬರು ಹಣದ ಬದಲಾಗಿ ಚಿನ್ನದ ಸರವನ್ನು ಕೊಟ್ಟರು. ಊರಿನ ಪ್ರಮುಖರು ತಮ್ಮ ವ್ಯಾಜ್ಯದ ಪ್ರಯುಕ್ತ ಗುಂಟೂರಿಗೆ ಹೋಗಿದ್ದರು. ಅವರು ಹಿಂತಿರುಗಿ ಬರುವಷ್ಟರಲ್ಲಿ ತಮ್ಮ ಕೆಲಸವನ್ನು ಮುಗಿಸಬೇಕೆಂದು ಪ್ರಾರಂಭಿಸಿದರು.
ಕೇವಲ ಹನ್ನೆರಡು ದಿನಗಳಲ್ಲಿ ಪಾಯಿಖಾನೆ ಕೊಠಡಿಗಳನ್ನು ಕಟ್ಟಿ ಮುಗಿಸಿದರು. ಊರಿನ ಪ್ರಮುಖರೆಲ್ಲರೂ ಬಂದು ನೋಡುವುದರೊಳಗಾಗಿ ಕೆಲಸ ಮುಗಿಸಿ ಬೋರ್ಡ್ ಗಳನ್ನು ಹಾಕಿದರು.
ಊರಿಗೆ ಹಿಂತಿರುಗಿದವರು ತಮ್ಮ ಊರಿನಲ್ಲಾದ ಬದಲಾವಣೆಗಳನ್ನು ಕಂಡು ಕೋಪಗೊಂಡರು. ಒಬ್ಬರ ಮೇಲೊಬ್ಬರ ದ್ವೇಷ ಮತ್ತಷ್ಟು ಹೆಚ್ಚಾಯಿತು. ಆದರೆ ಮನೆಯಲ್ಲೂ ಸಹ ಹೆಂಗಸರು ಬದಲಾಗಿದ್ದರಿಂದ ತಕ್ಷಣ ಏನೂ ಮಾಡಲಾಗಲಿಲ್ಲ.
ಇದಕ್ಕೆಲ್ಲಾ ಕಾರಣ ಜಸಿಂತಾ ಎಂದು ತಿಳಿದಾಗ ಎಲ್ಲರ ಕೋಪಕ್ಕೆ ಗುರಿಯಾದಳು. ಅವಳೊಬ್ಬಳೇ ಮನೆಯಲ್ಲಿದ್ದಾಗ ಕೆಲ ಜನರು ಮನೆಗೆ ನುಗ್ಗಿ ಅವಳ ಮೇಲೆ ಅತ್ಯಾಚಾರ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ನೋವಿನಿಂದ"ಅಮ್ಮಾ" ಎಂದು ಕಿರುಚುತ್ತಾ ಹೊರಗೋಡಿದಳು ಜಸಿಂತಾ.
ಅಪ್ಪ ದಿಬ್ಬಾಯಿ ಬಂದವನೆ ಸುಟ್ಟು ಹೋಗುತ್ತಿದ್ದ ಮಗಳನ್ನು ನೋಡುತ್ತಾ "ನನ್ತಾಯಿ ಊರು ನಿನ್ನನ್ನು ಬಲಿ ತಗಂಡುಬಿಡ್ತಲ್ಲಾ" ಎಂದು ರೋಧಿಸಲಾರಂಭಿಸಿದನು. ಊರಿಗೆಲ್ಲಾ ಸುದ್ದಿ ಹರಡಿ ಎಲ್ಲರೂ ಬಂದು ಜಸಿಂತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಜಸಿಂತಾ ಕಣ್ಣ್ಮುಚ್ಚಿ ಮಲಗಿದ್ದಳು.
ಗೆಳತಿಯರೆಲ್ಲರೂ ನೋಡಲು ಬಂದರು. ಅವರ ಬರುವನ್ನೇ ಕಾಯುತ್ತಿದ್ದವಳಂತೆ ಕಣ್ತೆರೆದಳು. "ಇಷ್ಟೇನಾ, ಮನುಷ್ಯರು ಯಾವಾಗಲೂ ಕ್ರೂರಿಗಳಾಗಿರುತ್ತಾರಾ? ನಾವು ಯಾರೂ ಏನೂ ಮಾಡಲಾರೆವಾ, ಪ್ರಪಂಚವನ್ನು ಬದಲಾಯಿಸುವುದು ಸಾಧ್ಯವಿಲ್ಲವಾ?" ಎಂದು ಪ್ರಶ್ನಿಸುತ್ತಿದ್ದವು ಅವಳ ಕಂಗಳು. ನಂತರ ಮುಚ್ಚಿಕೊಂಡವು. ರಾಜಕೀಯ ವೈಷಮ್ಯಕ್ಕೆ ಬಲಿಯಾದ ಜಸಿಂತಾಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲು ಮಹಿಳೆಯರೆಲ್ಲರೂ ಪ್ರತಿಭಟನೆ ಪ್ರಾರಂಭಿಸಿದರು. ಹೀಗೆ ಒಂದಾದ ಸ್ತ್ರೀ ಶಕ್ತಿಯನ್ನು ಯಾರಿಂದಲೂ ತಡೆಯಲಾಗಲಿಲ್ಲ.
ತೆಲುಗು ಲೇಖಕಿ ಓಲ್ಗರವರು "ಆಕಾಶಂಲೋ ಸಗಂ" ಕಾದಂಬರಿಯಲ್ಲಿ ಮಹಿಳೆ ಹೇಗೆ ಮನೆಯವರಿಂದ ಹಾಗೂ ಹೊರಗೂ ಶೋಷಿತಳಾಗುತ್ತಾಳೆ ಎಂಬುದನ್ನು ತಿಳಿಸಿದ್ದಾರೆ. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬಂತೆ ವಿದ್ಯೆ ಕಲಿತ ಜಸಿಂತಾಳನ್ನು ಎಲ್ಲರ ದನಿಯಾಗಿ ಬಿಂಬಿಸಿದ್ದಾರೆ. ತಮ್ಮ ದಿನನಿತ್ಯದ ಕೆಲಸಕ್ಕಾಗಿ ಮುಜುಗರ ಪಡುತ್ತಿದ್ದದ್ದನ್ನು ತಪ್ಪಿಸಿದರೂ ಅದಕ್ಕಾಗಿ ಬಲಿಯಾದ ಜಸಿಂತಾ ಎಲ್ಲರಿಗೂ ಮಾದರಿಯಾಗುತ್ತಾಳೆ.
ಇದನ್ನು ತೆಲುಗು ಭಾಷೆಯಿಂದ ಅಷ್ಟೇ ಅಚ್ಚುಕಟ್ಟಾಗಿ ಮಿಸ್ ಸಂಪತ್ (ಟಿ ಎಸ್ ರುಕ್ಮಾಯಿ) ರವರು ಕನ್ನಡಕ್ಕೆ ಅನುವಾದಿಸಿದ್ದಾರೆ.
- ವಿಜಯಲಕ್ಷ್ಮಿ ಎಂ ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ