Pages

ಲಾವಣೆ - ಅಕ್ಷರದವ್ವನ ಕಥೆ

 ಲಾವಣಿ - ಅಕ್ಷರದವ್ವನ ಕಥೆ


ಅಕ್ಷರದವ್ವನ ಕಥೆಯನು ಹೇಳುವೆವು

ಕೇಳಿರಿ ನೀವು ಜನರೆಲ್ಲಾ

ಅಕ್ಷರಕ್ರಾಂತಿಯ ಮಾಡಿದ ದಿಟ್ಟೆ

ಸಾವಿತ್ರಿಬಾಯಿ ಕಥೆಯನ್ನು


ಸಾವಿರದ ಎಂಟನೂರ ಮೂವತ್ತೊಂದರಲಿ

ಮಹಾರಾಷ್ಟ್ರದಲಿ ಜನಿಸಿದರು

ವಿವಾಹವಾಗಿ ಬಾಲ್ಯದಲ್ಲಿಯೇ 

ಜ್ಯೋತಿಭಾ ಮನೆಯನು ಸೇರಿದರು


ರೀತಿರಿವಾಜು ಉಲ್ಲಂಘಿಸಿಯೇ

ಜ್ಯೋತಿಭಾರವರು ಗುರುವಾದರು

ಅಕ್ಷರ ಕಲಿತ ಸಾವಿತ್ರಿಬಾಯಿ

ದೇಶದ ಮೊದಲ ಶಿಕ್ಷಕಿಯಾದ್ರು


ಹೆಣ್ಣುಮಕ್ಕಳಿಗೆ ಶಾಲೆಯ ತೆರೆದು

ಪಾಠವ ಮಾಡಲು ಹೊರಟಾಗ

ಸಗಣಿಯ ಎರಚಿ ಬೆದರಿಸಲೆತ್ನಿಸಿ 

ವಿಫಲರಾದರು ಜನರಾಗ


ಹಿಂಜರಿಯದೆ ಕೆಲಸವ ಮಾಡಲು

ಫುಲೆಯು ಧೈರ್ಯವ ನೀಡಿದರು

ಅಂಜದೆ ಅಳುಕದೆ ಪಾಠವ ಮಾಡಲು

ಫಾತಿಮಾರವರು ಜೊತೆಯಾದರು


ಬಾಲ್ಯವಿವಾಹ, ವಿಧವಾ ಸಮಸ್ಯೆ

ಬಾಲಕಿಯರ ಗರ್ಭಪಾತ

ಎಲ್ಲವ ಕಂಡು ನೊಂದ ಅವರು

ಬಾಲಿಕಾಶ್ರಮವ ಕಟ್ಟಿದರು


ಹೆಣ್ಣುಮಕ್ಕಳಿಗೆ ಸ್ಟೈಫಂಡ್ ನೀಡುತ

ಉತ್ತೇಜನವ ನೀಡಿದರು

ಮರಾಠಿಯಲ್ಲಿ ಕವಿತೆಯ ಬರೆದು  

ಮೊದಲ ಕವಯಿತ್ರಿ ಎನಿಸಿದರು


ಸಮಾಜದೆಲ್ಲರ ಏಳಿಗೆ ಬಯಸುತ 

ಫುಲೆಯವರೊಂದಿಗೆ ಕೈಜೋಡಿಸಿ

"ಸತ್ಯಶೋಧಕ ಸಮಾಜ" ಕಟ್ಟಿ

ಜನರಿಗೆ ದಾರಿಯ ತೋರಿದರು


ಪ್ಲೇಗಿನ ಹಾವಳಿ ಎಲ್ಲೆಡೆ ಕಾಣಲು

ಹೆದರದೆ ಸೇವೆಗೆ ಸಜ್ಜಾದರು

ರೋಗಿಯ ಸೇವೆ ಮಾಡುತ ಇದ್ದಾಗ

ರೋಗಕೆ ತಾವೆ ಬಲಿಯಾದರು


ಬದುಕಿನುದ್ದಕೂ ಸೇವೆಯ ಮಾಡುತ

ಎಲ್ಲರ ಮನದಲಿ ನೆಲೆಸಿಹರು

ಅವರ ಹಾದೀಲಿ ನಡೆಯುತ ನಾವು

ಅಕ್ಷರದವ್ವನ ನೆನೆಯೋಣ

ಸಾವಿತ್ರಿಫುಲೆಯರ ನೆನೆಯೋಣ

- ವಿಜಯಲಕ್ಷ್ಮಿ ಎಂ ಎಸ್ ಮತ್ತು  

ಸುಧಾ ಜಿ

ಲಾವಣಿ - ಭಗತ್ ಸಿಂಗ್ ರ ವೀರಗಾಥೆ

 

(ಸುಧಾ ಜಿ ಮತ್ತು ವಿಜಯಲಕ್ಷ್ಮಿ ಎಂ ಎಸ್)


ಭಗತಸಿಂಗರ ಕಥೆಯನು ಹೇಳುವೆ

ಕೇಳಿರಿ ನೀವು ಜನರೆಲ್ಲ

ವೀರಯೋಧನ ತ್ಯಾಗದ ಕಥೆಯ 

ಆಲಿಸಿ ನೀವು ಜನರೆಲ್ಲ


ಸಾವಿರದ ಒಂಬೈನೂರೇಳರ ಸೆಪ್ಟೆಂಬರ್

ಇಪ್ಪತ್ತೆಂಟರ ಶುಭದಿನದಲ್ಲಿ

ವಿದ್ಯಾವತಿ ಕಿಶನರ ಮಗನಾಗಿ ಜನಿಸಿದ

ಪಂಜಾಬಿನ ಬಂಗಾದಲ್ಲಿ 


ಶಾಲೆಯಿಂದಲೇ ವಿಚಾರದೊಲವು

ಪುಸ್ತಕ ಪ್ರೀತಿ ಬೆಳೆದಾಯ್ತು

ಮುಷ್ಕರ, ಸಂಪು, ಚಳವಳಿಯಲ್ಲಿ

ಸುಖದೇವರ ಜೊತೆಯಾಯ್ತು


ನಡೆಯಿತು ಜಲ್ಯನ್‌ವಾಲಾಬಾಗ್ನಲ್ಲಿ 

ಭಾರತೀಯರ ನರಮೇಧ

ಭಗತನು ಅಂದೇ ಪಣವನು ತೊಟ್ಟನು 

ಆಂಗ್ಲರ ತೊಲಗಿಸಲಿಲ್ಲಿಂದ


ಚೌರಿಚೌರಾದ ಘಟನೆಯ ನಂತರ

ಗಾಂಧಿ ಬಿಟ್ಟರು ಚಳವಳಿಯ

ಭಗತರು ತೊರೆದರು ಪೂರ್ಣವಾಗಿ

ಮಂದಗತಿಯ ದಾರಿಯ


ಮನೆಯಲಿ ಮದುವೆಯ ವಿಚಾರ ಬರಲು

ಭಗತರು ಹೊರಟರು ಅಲ್ಲಿಂದ

ಕ್ರಾಂತಿಕಾರಿ ಆಜ಼ಾದರು ದೊರಕಲು

ಸ್ನೇಹ ಬೆಳೆಯಿತು ಒಲವಿಂದ


ರಷ್ಯಾದಲ್ಲಿನ ಕಾರ್ಮಿಕ ಕ್ರಾಂತಿ

ಭಗತರ ಮನವ ಸೆಳೆದಿತ್ತು

ಅಲ್ಲಿನ ಹಾಗೆ ಶ್ರಮಿಕರ ರಾಜ್ಯದ 

ಸ್ಥಾಪನೆ ಕನಸು ಮೂಡಿತ್ತು


ಭಾರತದಿಂದಲೆ ಆಂಗ್ಲರ ಓಡಿಸಿ

ಸಮಸಮಾಜವ ಕಟ್ಟಬೇಕು

ಎಲ್ಲರ ಶ್ರಮಕೆ ಬೆಲೆಯು ದೊರೆತು

ಓದು ಕೆಲಸ ಸಿಗಬೇಕು


ಜಾತಿ ಧರ್ಮದ ಭೇದವ ತೊರೆದು

ಎಲ್ಲರು ಒಂದೆಂದೆ ಸಾರಿದರು

ಯುವಜನರನ್ನು ಒಂದುಗೂಡಿಸಲು

ಎಚ್ ಎಸ್ ಆರ್ ಎ ಕಟ್ಟಿದರು


ಸೈಮನ್ ಕಮಿಷನ್ ಬರಲು ದೇಶಕೆ

ತಡೆಯಲು ಎಲ್ಲರೂ ಕೂಡಿದರು

ಚಳುವಳಿ ದಿನದಿ ಪೋಲಿಸ್ ಹೊಡೆತಕೆ

ಮರಣ ಹೊಂದಿದರು ಲಜಪತರು


ಸಾವಿಗೆ ಸೇಡನು ತೀರ್ಮಾನಿಸಿತು 

ಹೋರಾಟಗಾರರು ಗುಂಪು ಸೇರಿ

ಅಧಿಕಾರಿಯನು ಕೊಂದರು ಭಗತರು 

ಆಜಾದ್ ರಾಜ್ಗುರು ಜೊತೆ ಸೇರಿ


ವೇಷವ ಮರೆಸಿ ಹೊರಟರು ಅವರು

ದುರ್ಗಾಭಾಬಿಯ ಜೊತೆಯಲ್ಲಿ

ಕಲ್ಕತ್ತಾಗೆ ತೆರಳಿದ ಭಗತರು

ದೇಶಯೋಧರ ಸೇರಿದರಲ್ಲಿ


ಆಗ್ರಾಗೆ ಬಂದ ಆಜಾದ್ ಭಗತರು

ಎಲ್ಲರನೊಂದು ಮಾಡಿದರು

ಶಕ್ತಿಯ ಹೆಚ್ಚಿಸಿ ಕ್ರಾಂತಿಯ ಮಾಡಲು

ಯೋಜನೆಯನ್ನು ಹಾಕಿದರು


ಊಟ ನಿದ್ದೆ ಚಿಂತೆಯೆ ಮಾಡದೆ

ಕ್ರಾಂತಿಯ ಯೋಚನೆ ಮಾಡಿದರು

ಆಂಗ್ಲರ ಮೇಲೆ ದಾಳಿಯ ನಡೆಸಲು

ತಂತ್ರವನೊಂದನು ಹೂಡಿದರು


ಕ್ರಾಂತಿಕಾರಿಗಳ ಬಂಧನ ಕಾಯಿದೆ

ತಂದರು ಬ್ರಿಟಿಷರು ವೇಗದಲಿ

ಅಂಗೀಕರಿಸಲು ಮಸೂದೆಯನ್ನು

ಸೇರಿದರೆಲ್ಲ ಅಸೆಂಬ್ಲಿಯಲ್ಲಿ


ಮಸೂದೆ ಜಾರಿಯ ಚರ್ಚೆಯ ಮಧ್ಯದಿ

ಭಗತರು ದತ್ತರು ಎದ್ದಾಯ್ತು

ಜನರಿಲ್ಲದ ಕಡೆ ಬಾಂಬನು ಸ್ಫೋಟಿಸಿ

ಕರಪತ್ರಗಳನು ಹಂಚಾಯ್ತು


ತಾವೇ ಬಂಧನಕೊಳಗಾದ ಧೀರರ 

ಕಂಡು ಜನತೆ ಬೆರಗಾಯ್ತು

ವಿಚಾರಣೆ ಎಂಬ ನಾಟಕವೊಂದು

ಕೋರ್ಟಿನಲ್ಲಿ ಶುರುವಾಯ್ತು


ಬೇಡಿಕೆ ಮೂಲಕ ಸ್ವಾತಂತ್ರ್ಯ ಸಿಗದು

ಎಂಬುದ ನಾವು ಅರಿತೆವು

ಕಿವುಡು ಸರ್ಕಾರಕೆ ಕೇಳಿಸಲೆಂದೆ 

ಜೋರಾದ ಸದ್ದನು ಮಾಡಿದೆವು


ಸುಳ್ಳು ಸಾಕ್ಷಿಗಳ ಹುಟ್ಟಿಸಿದಾಂಗ್ಲರು

ಆರೋಪಗಳನು ಹೊರಿಸಿದರು

ವಂಚನೆಯಿಂದಲೆ ಕ್ರಾಂತಿಕಾರರಿಗೆ

ಜೀವಾವಧಿ ಶಿಕ್ಷೆಯ ನೀಡಿದರು


ಸೆರೆಮನೆಯಲ್ಲಿನ ಸ್ಥಿತಿಗತಿ ಕಂಡು

ಉಪವಾಸವನ್ನು ಮಾಡಿದರು

ಅರವತ್ಮೂರು ದಿನಗಳ ನಂತರ 

ಜತಿನರು ಮರಣ ಹೊಂದಿದರು 


ಸ್ಯಾಂಡರ್ಸ್ ಹತ್ಯೆಯ ಆಪಾದನೆಯು

ಭಗತರ ಮೇಲೆ ಬಂದಾಯ್ತು

ಮತ್ತೆ ವಿಚಾರಣೆ ಎಂಬ ನಾಟಕ

ಕೋರ್ಟಿನಲ್ಲಿ ಶುರುವಾಯ್ತು


ಕ್ರಾಂತಿಕಾರಿಗಳು ಕೋರ್ಟನು ಬಳಸಿ

ಕ್ರಾಂತಿಯ ಪ್ರಚಾರ ಮಾಡಿದರು

ಆಂಗ್ಲ ವಿರೋಧಿ ಹೋರಾಟ ಮಾಡಲು 

ದೇಶದ ಜನರಿಗೆ ಹೇಳಿದರು


ಭಗತ್, ಸುಖದೇವ್ ರಾಜಗುರುವಿಗೆ 

ಗಲ್ಲು ಶಿಕ್ಷೆಯ ನೀಡಾಯ್ತು

ಇನ್ನುಳಿದವರಿಗೆ ಶಾಶ್ವತ ಬಂಧನ 

ಸಜೆಯನ್ನು ಕೊಟ್ಟಾಯ್ತು


ಕ್ರಾಂತಿಕಾರಿಗಳು ಗಲ್ಲಿನ ಶಿಕ್ಷೆಯ 

ಸಂತಸದಿಂದಲೆ ಒಪ್ಪಿದರು

ಆದರೂ ದೇಶದ ಎಲ್ಲೆಡೆ ಜನತೆ

ವಿರೋಧವನ್ನು ಮಾಡಿದರು


ಭಗತರ ತಂದೆಯು ಸರಕಾರಕೊಂದು

ಮನವಿಪತ್ರವನು ನೀಡಿದರು

ನೊಂದ ಭಗತರು ದಯಾಭಿಕ್ಷೆಯು 

ಅಪಮಾನವೆಂದು ಹೇಳಿದರು


ತಾಯಿ ವಿದ್ಯಾವತಿ ಹೇಳಿದರಂದು

ಉದಾತ್ತ ಸಾವು ನಿನದೆಂದು

ನೇಣಿಗೆ ಹೋಗುವ ಮುನ್ನ ಘೋಷಿಸು 

ಕ್ರಾಂತಿಯು ಚಿರಾಯು ಎಂದೆಂದು


ಸಾವು ಸನಿಹದೆ ಬರುತಿರುವಾಗಲೂ

ಓದಲವರು ಶುರುಮಾಡಿದರು

ಕೊನೆಯ ಕ್ಷಣದಲೂ ಲೆನಿನರ ಚರಿತೆಯ

ಪೂರ್ಣವಾಗಿ ಮುಗಿಸಿದರು


ಸಾವಿರದ ಒಂಬೈನೂರ ಮುವತ್ತೊಂದರ

ಮಾರ್ಚ್ ಇಪ್ಪತ್ಮೂರಂದು

ಹಾಡುತ ಹೊರಟರು ಗೆಳೆಯರೊಂದಿಗೆ

ಗಲ್ಲಿಗೇರುವ ದಿನದಂದು 


ಸಾರಿದರವರು ದೇಶದ ಜನತೆಗೆ 

ಅಂಜದಿರಿ ನೀವ್ ಅಳುಕದಿರಿ

ಇಂದಲ್ಲ ನಾಳೆ ಆಂಗ್ಲರನೋಡಿಸಿ 

ನವ ಸಮಾಜವ ಕಟ್ಟುವಿರಿ


ಘೋಷಣೆ ಕೂಗುತ ಹರುಷದಿ ಹಾಡುತ

ಅವರು ನೇಣಿಗೆ ಮುತ್ತನಿತ್ತರು 

ಸಾವಿಗೂ ಅಂಜದ ಅವರನು ಕಂಡು

ಅಧಿಕಾರಿಗಳು ದಂಗಾದರು


ವೀರರ ಕೊರಳುಲಿ ಸ್ತಬ್ಧವಾದರೂ

ಲಕ್ಷ ಲಕ್ಷ ದನಿ ಮೊಳಗಿತು

ಭಗತ್ ಸಿಂಗ್ ರ ತ್ಯಾಗವು ಜನಕೆ

ಸ್ಫೂರ್ತಿಯ ಸೆಲೆಯೆ ಆಯಿತು


ದೇಶದ ಎಲ್ಲೆಡೆ ಜನರ ಹೋರಾಟ

ಬಹಳ ವೇಗದಿ ಬೆಳೆದಾಯ್ತು

ಬ್ರಿಟಿಷರೆ ತೊಲಗಿ ಚಳುವಳಿಯಂದು

ಕ್ವಿಟ್ವಿಂಡಿಯ ಘೋಷವಾಯ್ತು


ಭಾರತ ಬಿಟ್ಟು ಬ್ರಿಟಿಷರು ತೊಲಗಲು 

ದೇಶಕೆ ಸ್ವಾತಂತ್ರ್ಯ ಬಂದಾಯ್ತು 

ಗಣತಂತ್ರ ರಾಜ್ಯದ ರಚನೆಯೊಂದಿಗೆ

ನಮಗೇ ಅಧಿಕಾರ ಸಿಕ್ಕಾಯ್ತು


ಏಳು ದಶಕಗಳೆ ಕಳೆದರು ಕೂಡಾ

ಭಗತರ ಕನಸು ಕೈಗೂಡಿಲ್ಲ

ಬಡತನ, ಹಸಿವು, ಬಿಕ್ಕಟ್ಟಿನಿಂದ

ದೇಶವು ಇನ್ನೂ ಪಾರಾಗಿಲ್ಲ


ಧೀರ ಯೋಧನಿಗೆ ನಮನವ ಸಲಿಸಲು

ನಾವಿಂದು ಒಂದಾಗಬೇಕು

ಅವರ ಕನಸಾದ ಸಮಸಮಾಜವ

ಕಟ್ಟುವ ಕಂಕಣ ತೊಡಬೇಕು  

              ****


ಕಥೆ - ಕಂಬನಿಯ ಹನಿ ಜಾರಿದಾಗ


ಅಂದು ಅಂಬೇಡ್ಕರ್ ಜಯಂತಿ. ಫೋಟೋಗೆ ಮುಖವೇ ಕಾಣಿಸದಷ್ಟು ಹೂವಿನ ಅಲಂಕಾರ, ಮುಂದೆ ದೀಪಗಳು, ಮಂಗಳಾರತಿ ತಟ್ಟೆ, ಕರ್ಪೂರ, ತೆಂಗಿನಕಾಯಿ, ಊದುಕಡ್ಡಿ. ಬೇಜಾರಾಯಿತು ಸುಮಾಳಿಗೆ. ಯಾವ ಧೀಮಂತ ವ್ಯಕ್ತಿ ತನ್ನ ಜನರಲ್ಲಿದ್ದ ಮೌಢ್ಯತೆಯನ್ನು ಅಳಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರೋ ಅವರಿಗೆ ಈ ರೀತಿಯ ಪೂಜೆಯೇ? ಏನು ಮಾಡುವುದು? ಈ ಪದ್ಧತಿಯನ್ನು ನಿಲ್ಲಿಸಲು ಸಾಧ್ಯವೇ? ನಿಜವಾದ ರೀತಿಯಲ್ಲಿ ನಮನ ಸಲ್ಲಿಸಲು ಸಾಧ್ಯವೇ? ಸುಮಾಳ ಚಿಂತನೆಯ ಜಾಡು ಇದು.
ಮಂಗಳಾರತಿ ಮಾಡಿ, ಕಡ್ಡಿ ಹಚ್ಚಿ ತೆಂಗಿನಕಾಯಿ ಒಡೆದರು. ಅದರಲ್ಲೂ ಮತ್ತೆ ಗುಂಪುಪಾರಿಕೆ. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಪೈಪೋಟಿಯ ಮೇಲೆ ದೊಡ್ಡ ದೊಡ್ಡ ಹಾರಗಳನ್ನು ಹಾಕಿದರು. ಒಂದಷ್ಟು ಜನ ಒಂದಷ್ಟು ಬೇಡದ ವಿಷಯವನ್ನು ಹೇಳಿದ ಮೇಲೆ ಕೊನೆಗೆ ಸಭೆ ಮುಗಿಯಿತು. ಎಲ್ಲರೂ ಹೊರನಡೆದರು. ಸುಮಾ ಸಹ ಎದ್ದು ಹೊರಬರಲು ಸಿದ್ಧವಾದಳು. ಹೊರಬರುವ ಮುನ್ನ ಅವಳಿಗೆ ಮತ್ತೊಮ್ಮೆ ಆ ನಾಯಕನ ಫೋಟೊ ನೋಡಬೇಕೆನಿಸಿತು. ನೋಡಿದರೆ, ಅವರ ಕಣ್ಣಿಂದ ಕಣ್ಣೀರ ಹನಿಯೊಂದು ಜಾರಿದಂತೆ ಭಾಸವಾಯಿತವಳಿಗೆ. ಇದೇನು ಭ್ರಮೆ ಎಂದು ಕಣ್ಣುಜ್ಜಿ ನೋಡಿದರೆ, ಅದು ಭ್ರಮೆಯಾಗಿರಲಿಲ್ಲ.
ಅಂಬೇಡ್ಕರ್ ಅವರು ಫೋಟೊದಿಂದ ಹೊರಬಂದು ಜೀವಂತವಾಗಿ ನಿಂತಿದ್ದರು. ಅವಳಿಗೆ ಆಶ್ಚರ್ಯವಾಯಿತು.

ಅವಳು “ಬಾಬಾ ನೀವು, ಇಲ್ಲಿ” ಕೇಳಿದಳು. 
“ಹೌದಮ್ಮ, ನಾನೇ” ಎಂದರು. 
“ಬಾಬಾ, ನಿಮ್ಮ ಕಣ್ಣುಗಳೇಕೆ ತೇವವಿದೆ”? 
“ಇಲ್ಲಿ ನನ್ನ ಪರಿಸ್ಥಿತಿಯನ್ನು ನೋಡಿ.” 
“ಅಂತಾದ್ದೇನಾಯ್ತು ಬಾಬಾ?” 
“ಮತ್ತೇನಾಗಬೇಕಮ್ಮ, ನಾ ಅಂದುಕೊಂಡಿದ್ದೆ ಒಂದು, ಇಲ್ಲಿ ಆಗುತ್ತಿರುವುದೇ ಎಂದು. ನಾ ಅಂದುಕೊಂಡಿದ್ದೆಲ್ಲ, ನನ್ನ ಕಣ್ಣೆದುರೇ ಮಣ್ಣಾಗಿ ಹೋಗುತ್ತಿರುವಾಗ, ಇನ್ನೇನಾಗಬೇಕು?” ಪ್ರಶ್ನಿಸಿದರು.
“ಏನಂದುಕೊಂಡಿದ್ದೀರಿ ಬಾಬಾ ನೀವು?” ಕೇಳಿದಳು ಸುಮ. 
“ಬಾಮ್ಮ ತೋರಿಸುತ್ತೇನೆ” ಜೊತೆಗೆ ಕರೆದೊಯ್ದರು ಅವಳನ್ನು.
ಮಹಾರಾಷ್ಟ್ರದ 20ನೇ ಶತಮಾನದ ಆದಿಭಾಗಕ್ಕೆ. ಅಲ್ಲಿನ ಸಮಾಜದಲ್ಲಿನ ಅಸ್ಪೃಶ್ಯರನ್ನು, ಅಲ್ಲಿನ ಬಡತನ, ಅನಕ್ಷರತೆ, ನೋವು, ರೋಗರುಜಿನ ಕಂಡಳು. ನಂತರ ಬಾಬಾ ಬಾಲಕನಾಗಿದ್ದಾಗ ಅನುಭವಿಸಿದ ನೋವು-ಅಪಮಾನ, ಛಲದಿಂದ ಮುಂದೆ ಓದಿದ್ದು, ತನ್ನ ಜನರಿಗಾಗಿ ವಿದೇಶದಿಂದ ಹಿಂತಿರುಗಿದ್ದು, ಮಹಾರಾಜರ ಆಸ್ಥಾನದಲ್ಲಿ ಮತ್ತೆ ಅವಮಾನಗಳನ್ನು ಎದುರಿಸಿದ್ದು, ತಮ್ಮ ಜನರ ಪರವಾಗಿ ಹೋರಾಟವನ್ನು ಕೈಗೊಂಡಿದ್ದು, ಅವರಲ್ಲಿ ಅರಿವು, ಧೈರ್ಯ ತುಂಬಲು ಓಡಾಡಿದ್ದು, ಕಾಂಗ್ರೆಸ್ ನೊಂದಿಗೆ ಮಾತುಕತೆ, ಬ್ರಿಟಿಷ್ ರೊಂದಿಗೆ ಮಾತುಕತೆ, ಸಂವಿಧಾನಾತ್ಮಕ ಸಭೆಯಲ್ಲಿ ಉತ್ಕೃಷ್ಟ ಸಂವಿಧಾನ ರಚಿಸಲು ಎಲ್ಲಾ ರೀತಿಯ ಜ್ಞಾನ , ಅನುಭವವನ್ನು ಧಾರೆ ಎರೆದಿದ್ದು, ಸ್ವಾತಂತ್ರ್ಯಾನಂತರವೂ ಹೋರಾಟವನ್ನು ಮುಂದುವರೆಸಿದ್ದು, ಎಲ್ಲವನ್ನೂ ಕಂಡಳು.
“ನಾನು ಕನಸು ಕಂಡ ಸಮಾಜ, ಕಡೇ ಮನುಷ್ಯನವರೆಗೆ, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲೆಂದು. ಇಂದು ಏನಾಗುತ್ತಿದೆ, ನ್ಯಾಯ ಸಮಾನತೆ ದೊರೆತಿದೆಯೇ? ಅಸ್ಪೃಶ್ಯತೆ ನಿವಾರಣೆಯಾಗಿದೆಯಾ? ರಾಜಕಾರಣಿಗಳ ಸ್ವಾರ್ಥ, ಜಾತಿ ಮುಖಂಡರ ಸ್ವಾರ್ಥ ಹೇಗೆ ವಿದ್ಯಾರ್ಥಿ-ಯುವಜನರನ್ನು, ಅಮಾಯಕ ಜನರನ್ನು ಹಾಳುಮಾಡುತ್ತಿದೆ. ಇದಕ್ಕಾಗಿಯೇ ನಾನು ಹೋರಾಡಿದ್ದು. ಶಿಕ್ಷಣ, ಸಂಘಟನೆ ಎಂದೆ. ಅದನ್ನು ಇವರು ಯಾವ ರೀತಿ ಅರ್ಥೈಸಿದ್ದಾರೆ. ಉತ್ತಮ ಸಂವಿಧಾನವನ್ನು ಕೊಡಬೇಕೆಂದು ಬಯಸಿದೆ, ಶ್ರಮಿಸಿದೆ. ಕುಡಿತ ಬಿಡಿ ಎಂದೆ, ಆದರೆ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ, ನನಗೆ ದುಃಖವಾಗುತ್ತಿದೆ. ಇದಕ್ಕಾಗಿಯೇ ನಾನು ಜೀವನ ಮುಡಿಪಾಗಿಟ್ಟದ್ದು. ನನ್ನ ಜನರ ಪರಿಸ್ಥಿತಿ ನೆನೆಸಿಕೊಂಡು ನೋವಾಗುತ್ತಿದೆ."
“ಬಾಬಾ, ನೀವೇ ಹೇಳಿರುವಿರಲ್ಲ, ಆಶಾವಾದ ಇರಬೇಕೆಂದು?”
“ಹೌದು ಇಷ್ಟು ದಿನ ಬಿಟ್ಟಿರಲಿಲ್ಲ, ಇಂದಲ್ಲ ನಾಳೆ ಜನ ಅರ್ಥಮಾಡಿಕೊಳ್ಳುತ್ತಾರೆಂದುಕೊಂಡೆ. ಆದರೆ ಈಗ ನನ್ನನ್ನು ಒಬ್ಬ ದೇವರನ್ನಾಗಿ ಮಾಡಿ ಗೋಡೆಗೆ ನೇತುಹಾಕಿಬಿಟ್ಟಿದ್ದಾರಲ್ಲ. ಇನ್ನು ನನ್ನ ತತ್ವ, ಸಿದ್ಧಾಂತಗಳನ್ನು ಏನು ಅರ್ಥಮಾಡಿಕೊಳ್ಳುತ್ತಾರೆ, ಏನು ಪಾಲಿಸುತ್ತಾರೆ? ಈಗ ನನ್ನ ನಂಬಿಕೆ ಛಿದ್ರವಾಗಿದೆ. ಬೌದ್ಧನಾಗಿ ಪರಿವರ್ತನೆಗೊಂಡಾಗ ಈ ಹಿಂದೂ ಸಮಾಜ ಬದಲಾಗುವುದಿಲ್ಲವೆಂಬ ಹತಾಶೆ, ನೋವು ಮತ್ತೆ ನನ್ನನ್ನು ಈಗ ಆವರಿಸಿದೆ. ಎಲ್ಲೆಡೆ ನನ್ನ ಜನ ಈ ರೀತಿಯ ಅಂಧಕಾರದಲ್ಲಿ ಮುಳುಗಿರುವುದು ಕಂಡಾಗ ಕಣ್ಣು ತೇವವಾಗದಿರುವುದೇ?”
ಸುಮ ನಿರುತ್ತರಳಾದಳು. ಎಲ್ಲ ಬಲ್ಲ ನಾಯಕನಿಗೆ ಅವಳು ಏನು ತಾನೇ ಹೇಳಬಲ್ಲವಳಾಗಿದ್ದಳು?
ಆದರೂ ಒಂದು ಪ್ರಯತ್ನವೆಂಬಂತೆ, “ಬಾಬಾ, ಎಲವೂ ಹಾಳಾಗಿಲ್ಲ, ಇನ್ನೂ ಆಶೆಯಿದೆ.”
“ಎಲ್ಲಿದೆಯಮ್ಮ, ನನಗಂತೂ ಬದಲಾವಣೆಯ ಒಂದು ಕಿಡಿಯೂ ಕಾಣುತ್ತಿಲ್ಲ.”
ಅಷ್ಟರಲ್ಲಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಒಳಬಂದರು. ಸುಮ ಅವರನ್ನು ತರಾಟೆಗೆ ತೆಗೆದುಕೊಂಡಳು. “ನಿಮಗೆ 8 ಘಂಟೆಗೆ ಬನ್ನಿ ಎಂದರೆ ಈಗಲಾ ಬರುವುದು? ನಿಮಗೆ ಅಂಬೇಡ್ಕರ್ ರವರ ಬಗ್ಗೆ ಗೌರವವಿಲ್ಲವೇ? ನೆನ್ನೆ ಮತ್ತೆ ತರಗತಿಯಲ್ಲಿ ಅಷ್ಟೊಂದು ಮಾತನಾಡಿದಿರಿ?” ಕೇಳಿದಳು.
“ಮೇಡಮ್ ನಿಮಗೆ ಬಹಳ ಹಿಂದಿನಿಂದಲೂ ಒಂದು ಉಚಿತ ವೈದ್ಯಕೀಯ ಶಿಬಿರದ ಬಗ್ಗೆ ಹೇಳಿದ್ದು, ಈ ದಿನ ಮಾಡಲೆಂದೇ. ನಮ್ಮ ಅಳಿಲ ಸೇವೆ ಎಂದು. ಹಳ್ಳಿಯಲ್ಲಿ ಎಲ್ಲಾ ಸಿದ್ಧತೆ ಮಾಡಿದ್ದೇವೆ. ಅದಕ್ಕಾಗಿ ಇಷ್ಟು ಸಮಯ ಬೇಕಾಯಿತು. 11 ಘಂಟೆಗೆ ಆರಂಭವಾಗುತ್ತದೆ. ನಿಮಗೆ ಮತ್ತು ಇತರರಿಗೆ ಹೇಳಿಹೋಗಲೆಂದು ಬಂದೆವು ಮೇಡಮ್, ನೀವೂ ಬರಬೇಕು.”
ಸುಮಾಳಿಗೆ ಬಹಳ ಸಂತೋಷವಾಯಿತು. “ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ಆದರೆ ಬೆಳಿಗ್ಗೆ ಇಲ್ಲಿಗೇಕೆ ಬರಲಿಲ್ಲ?”
“ನಾವಿಲ್ಲಿ ಬಂದಿದ್ದರೆ ಕೇವಲ ಮಂಗಳಾರತಿ ತೆಗೆದುಕೊಂಡು, ಬಾಬಾರವರ ಫೋಟೊಗೆ ಒಂದು ಹೂ ಇಟ್ಟು, ಸಿಹಿ ತಿಂದು ಮನೆಗೆ ಹೋಗುತ್ತಿದ್ದೆವು. ನಮಗೆ ಆ ರೀತಿ ಮಾಡಲು ಇಷ್ಟವಿರಲಿಲ್ಲ. ಬಾಬಾರವರನ್ನು ದೇವರಂತೆ ಫ್ರೇಮ್ ನಲ್ಲಿ ಇಡಲು ಇಷ್ಟವಿಲ್ಲ. ಅವರು ನಮಗಿಂತ ಬಡತನದಲ್ಲಿ ಓದಿದರು. ಕಷ್ಟಪಟ್ಟು ಓದಿ, ಅಷ್ಟೊಂದು ದೊಡ್ಡ ಪದವಿ ತೆಗೆದುಕೊಂಡು, ಅಲ್ಲಿಯೇ ಎಲ್ಲೊ ಒಳ್ಳೆ ಕೆಲಸ ಸಿಗುತ್ತಿರಲಿಲ್ಲವೇ ಮೇಡಮ್. ಆದರೆ ಅವರು ಇಲ್ಲಿ ಬಂದರು, ನಮಗಾಗಿ. ಸಮಾಜದ ಒಳಿತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು. ನಮಗೆ ಅಷ್ಟು ಎತ್ತರಕ್ಕೆ ಏರಲಿಕ್ಕೆ ಸಾಧ್ಯವಾ ಗೊತ್ತಿಲ್ಲ, ಆದರೆ ಅಳಿಲ ಸೇವೆಯನ್ನಾದರೂ ಮಾಡಬೇಕೆಂದು ಅಂದುಕೊಂಡಿದ್ದೀವೆ ಮೇಡಮ್” ಎಂದರು.
ಸುಮಾಳಿಗೆ ತನ್ನ ವಿದ್ಯಾರ್ಥಿಗಳೇನಾ ಈ ರೀತಿ ಮಾತನಾಡುತ್ತಿರುವುದು ಎನಿಸಿತು. “ಭೇಷ್, ಒಳ್ಳೆಯ ಆಲೋಚನೆ. ನಾನು ಖಂಡಿತ ಬರುತ್ತೇನೆ, ಏನಾದರೂ ಹಣ ಬೇಕಿತ್ತಾ?” ಕೇಳಿದಳು.
“ಇಲ್ಲ ಮೇಡಮ್, ಎಲ್ಲಾ ಹೊಂದಿಸಿಕೊಂಡಿದ್ದೀವೆ. ನೀವು ಬನ್ನಿ. ನಾವಿನ್ನು ಹೋಗುತ್ತೇವೆ, ಇನ್ನೂ ಕೆಲಸವಿದೆ” ಎಂದೆನ್ನುತ್ತ ಆ 20 ಮಕ್ಕಳ ತಂಡ ಹೊರಗೆ ಹೋಯಿತು. ಜಾತಿಮತ ಭೇದವಿಲ್ಲದೆ ಹೋದ ಆ ಮಕ್ಕಳನ್ನೇ ಮೆಚ್ಚುಗೆಯಿಂದ ನೋಡುತ್ತ ಸುಮ ಒಂದು ಕ್ಷಣ ಮೈಮರೆತಳು.
ಹೊರನಡೆಯಲು ಮುಂದೆ ಹೆಜ್ಜೆ ಇಟ್ಟಾಗ ಅಷ್ಟೊತ್ತು ಕಾಣದಾಗಿದ್ದ ಬಾಬಾ ಮತ್ತೆ ಅವಳಿಗೆ ಕಂಡರು. ಅವರ ಮುಖದ ಮೇಲೆ ಹರುಷದ ನಗುವಿತ್ತು, ಗೆಲುವಿನ ಭರವಸೆಯಿತ್ತು. 
ಸುಮ ಮಾತನಾಡುವ ಮುನ್ನ ಅವರೇ ಮಾತನಾಡಿದರು. “ಇಂತಹ ಮಕ್ಕಳು ಇರುವಾಗ ನನ್ನ ಹೋರಾಟ ವ್ಯರ್ಥವಾಗಲಿಲ್ಲ, ನನ್ನ ಆಶೆಗೆ ಭಂಗ ಬಂದಿಲ್ಲ. ಇಂದಲ್ಲ ನಾಳೆ ಬದಲಾವಣೆ ಖಚಿತವಾಗಿ ಬರುತ್ತದೆ ಎಂದು ಈಗ ನಂಬಿಕೆ ಬಂತು” ಎಂದರು.
“ಬಾಬಾ, ನಿಮ್ಮಂತಹವರು ಈ ದೇಶದಲ್ಲಿ ಸಾವಿರ ಸಂಖ್ಯೆಯಲ್ಲಿ ಹುಟ್ಟಲಿ ಎಂದು ಹಾರೈಸಿ” ಎಂದಳು ಸುಮ.
“ನನಗಿಂತ ಹೆಚ್ಚಾಗಿ ಈ ದೇಶದ ಸುಧಾರಣೆಗೆ ಹೋರಾಡಿದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ರಾಮ್ ಮೋಹನ್ ರಾಯ್, ವಿದ್ಯಾಸಾಗರ್, ವಿವೇಕಾನಂದ, ನೇತಾಜಿ, ಭಗತ್ ಸಿಂಗ್, ಅಶ್ಫಾಕುಲ್ಲಾ, ಖಾನ್ ಅಬ್ದುಲ್ ಗಫಾರ್ ಖಾನ್ ಮುಂತಾದ ಮಹನೀಯರು ಹುಟ್ಟಲಿ” ಎಂದರು.
ಬಸವಣ್ಣನವರ “ಎನಗಿಂತ ಕಿರಿಯರಿಲ್ಲ” ಎನ್ನುವ ಮಾತು ಸುಮಳಿಗೆ ನೆನಪಿಗೆ ಬಂತು. ಇವರೇ ಧೀಮಂತ ಚೇತನ ಎಂದುಕೊಂಡರೆ ಇತರರ ಬಗ್ಗೆ ಇದ್ದ ಅವರ ಗೌರವ, ಅವರ ಮನೋಭಾವವನ್ನು, ಮೇರು ವ್ಯಕ್ತಿತ್ವವನ್ನು ಎತ್ತಿ ತೋರಿಸಿತು.
ಬಾಬಾರಿಗೆ ಏನೋ ಹೇಳಹೊರಟಳು ಸುಮ. ಅವರು ಕಾಣಿಸಲಿಲ್ಲ. ರೂಮಿನಲ್ಲಿ ಅವಳೊಬ್ಬಳೇ ಉಳಿದಳು. ಫೋಟೊ ನಿಚ್ಚಳವಾಗಿ ಕಾಣಿಸಿತು. ಬಾಬಾ ಫೋಟೋದಲ್ಲಿ ನಗುತ್ತಿದ್ದರು. ಅದು ಸಾರ್ಥಕತೆಯ ನಗುವಾಗಿತ್ತು. ಕಣ್ಣಂಚಿನಲ್ಲಿ ಕಂಬನಿ ಇರಲಿಲ್ಲ.

- ಸುಧಾ ಜಿ 

ಆರೋಗ್ಯಧಾಮ - ಅರಳುವ ಹೂಗಳು 3 - ಋತುಸ್ರಾವವಾದಾಗ ಮಾಡಬೇಕಾದದ್ದೇನು?


ಮೊದಲ ಸಲ ಋತುಸ್ರಾವ ಆದಾಗ ಹುಡುಗಿಯರಿಗೆ ಸಾಮಾನ್ಯವಾಗಿ ಗಾಬರಿಯಾಗುತ್ತದೆ. ಅದ್ದರಿಂದ ಈ ಬಗ್ಗೆ ಶಿಕ್ಷಕಿಯರು ಅಥವಾ ತಾಯಂದಿರು ಅಥವಾ ಅಕ್ಕಂದಿರು ಮೊದಲೇ ಸಂಪೂರ್ಣವಾಗಿ ವಿಷಯ ತಿಳಿಸಿಹೇಳಿದ್ದರೆ, ಅನವಶ್ಯಕವಾಗಿ ಗಾಬರಿ ಆಗುವುದು ತಪ್ಪುತ್ತದೆ. ಸಾಮಾನ್ಯವಾಗಿ ರಕ್ತಸ್ರಾವ 3-7 ದಿನಗಳವರೆಗೂ ಇರುತ್ತದೆ. ಈ ಸಮಯದಲ್ಲಿ ಸುಮಾರು 50-80 ಮಿಲಿಲೀಟರ್ ರಕ್ತ ದೇಹದಿಂದ ಹೊರ ಹೋಗುವುದರಿಂದ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಅಂದರೆ ಹಾಲು, ತರಕಾರಿ, ಬೇಳೆ, ಕಾಳುಗಳು, ಮೊಟ್ಟೆ ಮಾಂಸ ಇತ್ಯಾದಿ ಆಹಾರವನ್ನು ತೆಗೆದುಕೊಳ್ಳಬೇಕು.
ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲದಿದ್ದರೆ, ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಮುಟ್ಟಾದರೆ ಹೊರಗಿರಬೇಕು, ಸ್ನಾನ ಮಾಡಬಾರದು ಎಂಬ ನಂಬಿಕೆಗಳು ಉಂಟು. ಆದರೆ ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಸ್ನಾನ ಮಾಡಿಕೊಳ್ಳಬೇಕು; ಗುಪ್ತಾಂಗಗಳನ್ನು ತೊಳೆದುಕೊಳ್ಳಬೇಕು. ಮೆತ್ತನೆಯ ಹತ್ತಿಬಟ್ಟೆಯನ್ನು ಅಥವಾ ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ನ್ಯಾಪ್ಕಿನ್ ಬಳಸಬಹುದು. ಪ್ರತಿದಿನ ಬಟ್ಟೆಯನ್ನು ಬದಲಿಸಬೇಕು. ರಕ್ತಸ್ರಾವ ಹೆಚ್ಚಿರುವರು 2-3 ಬಾರಿಯಾದರೂ ಬದಲಿಸಬೇಕು. ಬಟ್ಟೆಯನ್ನು ಚೆನ್ನಾಗಿ ಒಗೆದು, ಬಿಸಿಲಿನಲ್ಲಿ, ಸ್ವಚ್ಛವಾದ ಜಾಗದಲ್ಲಿ ಒಣಗಿಸಬೇಕು. ಇಲ್ಲದಿದ್ದಲ್ಲಿ ಕ್ರಿಮಿಕೀಟಗಳಿಂದ ಹಾನಿ ತಪ್ಪಿದ್ದಲ್ಲ. ಹೊರಗೆ ಎಲ್ಲರಿಗೆ ಕಾಣುವಂತೆ ಹಾಕಬಾರದು ಎಂಬ ಭಾವನೆಯಿಂದ ಎಷ್ಟೊ ಮನೆಗಳಲ್ಲಿ ಸ್ವಚ್ಛವಿರದ, ಬಿಸಿಲಿರದ ಜಾಗಗಳಲ್ಲಿ ಒಣಗಿಸಲು ಹಾಕುತ್ತಾರೆ. ಇದರಿಂದ ರೋಗಗಳು ಹೆಚ್ಚಾಗುತ್ತವಷ್ಟೆ. ನ್ಯಾಪ್ಕಿನ್ ಬಳಸಿದ್ದಾದರೆ, ಅದನ್ನು ಎಲ್ಲೆಂದರಲ್ಲಿ ಹಾಗೆಯೇ ಬಿಸಾಡದೆ, ಪೇಪರ್‍ನಲ್ಲಿ ಸುತ್ತಿ ಕಸದ ಬುಟ್ಟಿಗೆ ಹಾಕಬೇಕು.
ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು; ಬಹಳ ಸುಸ್ತಾದರೆ ವಿಶ್ರಾಂತಿ ತೆಗೆದುಕೊಳ್ಳಬಹುದು. ಕೆಲವು ಹೆಣ್ಣು ಮಕ್ಕಳಿಗೆ ಹೊಟ್ಟೆನೋವು, ಸೊಂಟನೋವು, ಕಾಲುನೋವು ಕಂಡು ಬರುತ್ತದೆ. ವಿಶ್ರಾಂತಿ ತೆಗೆದುಕೊಂಡರೂ ಕಡಿಮೆ ಆಗದಿದ್ದರೆ, ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಋತುಸ್ರಾವದ ಬಗೆಗಿನ ತಪ್ಪು ಕಲ್ಪನೆಗಳು
1. ಆಹಾರದಲ್ಲಿ, ಪಾನೀಯದಲ್ಲಿ ಪಥ್ಯವಿರಬೇಕು. ಹಾಲು, ಮೊಸರು ಸ್ವೀಕರಿಸಬಾರದು.
2. ರಕ್ತಸ್ರಾವ ಕಡಿಮೆಯಾದರೆ ರಕ್ತ ಗರ್ಭಕೋಶದಲ್ಲಿಯೆ ಸಂಗ್ರಹವಾಗಿ ಸಮಸ್ಯೆ ಉಂಟುಮಾಡುತ್ತದೆ.
3. ಮಕ್ಕಳಾದ ಮೇಲೆ ಮುಟ್ಟಿನ ನೋವು ನಿವಾರಣೆಯಾಗುತ್ತದೆ.
4. ಮುಟ್ಟಿನ ಆರಂಭದಿಂದ ಕೊನೆಯವರೆಗೆ ಒಂದೇ ರೀತಿಯ ರಕ್ತಸ್ರಾವವಿರಬೇಕು, ಹೆಚ್ಚುಕಡಿಮೆಯಾಗಬಾರದು.
5. ಋತುಸ್ರಾವ ಮೈಲಿಗೆಯಾದ್ದರಿಂದ ಹೊರಗೆ ಕೂರಬೇಕು, ಯಾರನ್ನೂ ಮುಟ್ಟಬಾರದು, ಸ್ನಾನ ಮಾಡಬಾರದು, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ಬಾಗವಹಿಸಬಾರದು.
6. ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಂತಿಲ್ಲ.
7. ಮುಟ್ಟಿಗೆ ಮುಂಚೆ ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಾಗಲೇಬೇಕು, ಅಂದರೆ, ಸಿಟ್ಟು, ಸಿಡುಕು, ಅಸಹನೆ ಇತ್ಯಾದಿ ಬಂದೇ ಬರುತ್ತದೆ.
8.  2-3 ತಿಂಗಳುಗಳು ಮುಟ್ಟಾಗದಿದ್ದರೆ ಗರ್ಭಿಣಿ ಎಂದು ಭಾವಿಸಲಾಗುತ್ತದೆ. 
ಡಾ. ಪೂರ್ಣಿಮಾ ಮತ್ತು ಡಾ. ಸುಧಾ ಜಿ

(ಮುಂದಿನ ಸಂಚಿಕೆಯಲ್ಲಿ – ಋತುಸ್ರಾವಕ್ಕೆ ಸಂಬಂಧಿಸಿದ ತೊಂದರೆಗಳು)

ವ್ಯಕ್ತಿ ಪರಿಚಯ - ರಾಣಿ ಗಾಯಿಡಿನ್ ಲ್ಯೂ




"ನಾವು ನಾಗಾಗಳು, ನಾಗಗಳಾಗಿಯೇ ಬದುಕುತ್ತೇವೆ ನಾವು ಸ್ವತಂತ್ರರು ಯಾವುದೇ ವಿದೇಶಿಯರಿಗೂ ನಮ್ಮ ಮೇಲೆ ಅಧಿಕಾರ ಚಲಾಯಿಸಲು ನಾವು ಬಿಡೆವು. ಬ್ರಿಟಿಷರು ನಮ್ಮ ಮೇಲೆ ಹೇರಿರುವ ಮನೆ ತೆರಿಗೆಯನ್ನು ನಾವೆಂದೂ ಕಟ್ಟಲಾರೆವು ನಾವು ಬ್ರಿಟಿಷರ ಸೇವಕರಲ್ಲ" ಎಂದು ಬ್ರಿಟಿಷರ ವಿರುದ್ಧ ಗುಡುಗಿದ ದಿಟ್ಟ ಮಹಿಳೆ ರಾಣಿ ಗಾಯಿಡಿನ್ ಲ್ಯೂ. 
ರಾಣಿ ಎಂದರೆ ಯಾವುದೇ ರಾಜ ಮನೆತನದ ಮಹಿಳೆಯಲ್ಲ. ತನ್ನ ಹೋರಾಟದ ಫಲವಾಗಿ 1937 ರಲ್ಲಿ ನೆಹರೂರವರಿಂದ ರಾಣಿ ಎಂದು ಹೆಸರು ಪಡೆದರು.
ಗಾಯಿಡಿನ್ಲ್ಯೂ ಹುಟ್ಟಿದ್ದು ಈಗಿನ ಮಣಿಪುರದ ತಮೆಂಗ್ ಲಾಂಗ್ ಜಿಲ್ಲೆಯ ಲಂಗ್ ಕಾವ್ ನಲ್ಲಿ. 1915 ಜನವರಿ 26 ರಂದು ನಾಗ ಪುರೋಹಿತ ಕುಟುಂಬದ ಲೊತನಾಂಗ್ ಮತ್ತು ಕೆಲುವತ್ಲಿನ್ ಲಿ ರವರ ಮಗಳಾಗಿ ಜನಿಸಿದರು. ಆ ಮಗುವಿಗೆ " ಗಾಯಿಡಿನ್ಲ್ಯೂ" ಎಂದು ನಾಮಕರಣ ಮಾಡಿದರು. 'ಗಾಯಿ' ಎಂದರೆ ಒಳ್ಳೆಯ ಹಾಗೂ 'ಡಿನ್' ಎಂದರೆ ಮಾರ್ಗ ತೋರಿಸುವವರು ಎಂದರ್ಥ.
ಬಾಲ್ಯದಲ್ಲಿಯೇ ವಿಶೇಷ ಪ್ರತಿಭಾವಂತೆ, ಶಾಂತಸ್ವರೂಪಿಯಾಗಿದ್ದ ಗಾಯಿಡಿನ್ಲ್ಯೂ ಬಡವರು, ನಿರ್ಗತಿಕರಿಗಾಗಿ ಮನಮಿಡಿಯುತ್ತಿದ್ದಳು. ಕರುಣಾಮಯಿಯಾಗಿದ್ದ ಇವಳು, ತಂದೆ ತಾಯಿಯಲ್ಲದೆ ಎಲ್ಲರ ಪ್ರೀತಿಪಾತ್ರಳಾಗಿದ್ದಳು.
ಅಂದು ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಹಲವಾರು ತಂತ್ರಗಳನ್ನು ಹೆಣೆಯುತ್ತಿದ್ದರು. ಅದರಲ್ಲಿ ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಒಂದು. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವುದರ ಜೊತೆಗೆ ಮತಾಂತರ ಚಟುವಟಿಕೆಯನ್ನು ಮಾಡುತ್ತಿದ್ದರು. ಇದಕ್ಕೆ ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ಬಲಿಯಾಗುತ್ತಿದ್ದರು. ದೇಶದಲ್ಲೆಡೆಯಲ್ಲೂ ಇದು ನಡೆಯುತ್ತಿತ್ತು. ಬುಡಕಟ್ಟು ಜನರು ಗುಡ್ಡಗಾಡು ಬೆಟ್ಟದ ತಪ್ಪಲುಗಳಲ್ಲಿ ವಾಸಿಸುತ್ತಿದ್ದ ಕಾರಣ ನಾಡಿನ ಇತರ ಭಾಗಗಳೊಂದಿಗೆ ಇವರಿಗೆ ಸಂಪರ್ಕವಿರಲಿಲ್ಲ. ಇಂತಹ ಪರಿಸ್ಥಿತಿಯ ಉಪಯೋಗ ಪಡೆದ ಬ್ರಿಟಿಷರು ತಮ್ಮ ಮತಾಂತರ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದರು.
ಇಂತಹ ಬ್ರಿಟಿಷರ ಕುತಂತ್ರಗಳಿಂದ ನಾಗಾ ಜನರು ತಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಯೆಡೆಗೆ ನಡೆದರು. ಇದನ್ನು ಅರಿತ ಅಲ್ಲಿನ ಚಾದೂನಾಂಗ್ ಎಂಬ ಯುವಕ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದನು. ಈತನ ಹೋರಾಟದಿಂದ ಸ್ಪೂರ್ತಿಗೊಂಡ ಗಾಯಿಡಿನ್ಲ್ಯೂ ಕೂಡ ಹೋರಾಡಲು ನಿರ್ಧರಿಸಿದಳು. ಅದರಂತೆ ಚಾ಼ದೋನಾಂಗ್ ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವಂತೆ ಕೇಳಿದಳು. ಆದರೆ ಅವನು ಮಹಿಳೆಯರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದನು. ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಅವನೊಡನೆ ವಾದಿಸಿ, ಅವನು ಹಾಕಿದ ಸವಾಲುಗಳನ್ನೆಲ್ಲಾ ಎದುರಿಸಿದಳು. ಆಗ ಅವಳ ವಯಸ್ಸು ಕೇವಲ ಹದಿಮೂರು ವರ್ಷ. 
ಹೀಗೆ ಚಾ಼ದೋನಾಂಗ್ ಅನುಯಾಯಿಯಾಗಿ ತನ್ನ ಹೋರಾಟ ಪ್ರಾರಂಭಿಸಿದಳು ಗಾಯಿಡಿನ್ಲ್ಯೂ. ಇಬ್ಬರೂ ಬೆಟ್ಟಗುಡ್ಡ ಕಾಡುಗಳನ್ನೆಲ್ಲಾ ಅಲೆದು, ಜನರಲ್ಲಿ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ನಾಗಗಳಲ್ಲಿದ್ದ ಮೂರು ಪಂಗಡವನ್ನು ಸೇರಿಸಿ "ಝೆಲಿಯಂಗ್ ರಾಂಗ್" ಎಂಬ ಹೊಸ ಪಂಗಡವನ್ನು ಕಟ್ಟಿದರು. ನಾಗಾ ಸಂಸ್ಕೃತಿ, ಆಚಾರ ವಿಚಾರಗಳ ರಕ್ಷಣೆಗೆ "ಹರಕ್ಕಾ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. 
ಬ್ರಿಟಿಷರು ಜನರ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲು ಹಲವಾರು ತೆರಿಗೆಗಳನ್ನು ವಿಧಿಸುತ್ತಿದ್ದರು. ಇದನ್ನೆಲ್ಲಾ ವಿರೋಧಿಸಲು ಚಳವಳಿಗಳನ್ನು ಪ್ರಾರಂಭಿಸಿದರು. ಈ ಹೋರಾಟದಲ್ಲಿ ಗಾಯಿಡಿನ್ಲ್ಯೂ ಪ್ರಮುಖ ಪಾತ್ರ ವಹಿಸಿದಳು. 
ಬ್ರಿಟಿಷರ ವಿರುದ್ಧ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವನ್ನರಿತ ಗಾಯಿಡಿನ್ಲ್ಯೂ ಮಹಿಳೆಯರನ್ನೆಲ್ಲಾ ಒಗ್ಗೂಡಿಸಿ "ಮಹಿಳಾ ಸೈನ್ಯ"ವನ್ನು ಕಟ್ಟಿದಳು. ಜನಸಾಮಾನ್ಯರಿಗೆ, ಅದರಲ್ಲೂ ಮಹಿಳೆಯರಿಗೆ ಬ್ರಿಟಿಷರು ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಳು. ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸುವಂತೆ ಉತ್ತೇಜಿಸುತ್ತಿದ್ದಳು. ಮಹಿಳೆಯರಿಗೆ ಮಾರಕಾಸ್ತ್ರಗಳನ್ನು ಉಪಯೋಗಿಸುವಂತೆ ತರಬೇತಿಯನ್ನು ನೀಡುತ್ತಿದ್ದಳು. ಯೋಧಗೀತೆ, ಸಂಪ್ರದಾಯ ಹಾಗೂ ಆಚರಣೆಗಳ ಕುರಿತು ಹಾಡುಗಳನ್ನು ಸಂಯೋಜಿಸಿ ಕಲಿಸುತ್ತಿದ್ದಳು. ಮಹಿಳೆಯರು ಆರ್ಥಿಕವಾಗಿ ಸದೃಢರಾಗುವಂತೆ ಅವರಿಗೆ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದರು. ಮಹಿಳೆಯರ ವಿದ್ಯಾಭ್ಯಾಸದ ಕಡೆಗೂ ತನ್ನ ಗಮನವನ್ನಿರಿಸಿದ್ದಳು.
ಚಳವಳಿಗಳಲ್ಲಿ ಹೋರಾಡುವುದರ ಜೊತೆಗೆ ಜನರು ಅಸ್ವಸ್ಥರಾದಾಗ ಅವರಿಗೆ ಔಷದೋಪಚಾರವನ್ನು ನೀಡುತ್ತಿದ್ದಳು. ಇದರಿಂದ ಗಾಯಿಡಿನ್ಲ್ಯೂಮತ್ತಷ್ಟು ಜನಾನುರಾಗಿಗಳಾದರು. 
ಚಾ಼ದೋನಾಂಗ್ ಮತ್ತು ಗಾಯಿಡಿನ್ಲ್ಯೂರ ಹೋರಾಟ ತೀವ್ರಗೊಳ್ಳುತ್ತಿದ್ದರಿಂದ ಕಂಗೆಟ್ಟ ಬ್ರಿಟಿಷ್ ಸರ್ಕಾರ ಅವರನ್ನು ದಮನ ಮಾಡಲು ಕಾಯುತ್ತಿತ್ತು. ಇದಕ್ಕಾಗಿ ತಂತ್ರವನ್ನು ಹೂಡಿತು. ಪೋಲಿಸ್ ಅಧಿಕಾರಿಯ ಪತ್ನಿಗೆ ಹುಷಾರಿಲ್ಲ, ಅವರಿಗೆ ಔಷಧ ನೀಡಬೇಕೆಂದು ಹೇಳಿಕಳುಹಿಸಿದರು. ಬಂದ ಚಾ಼ಂದೋನಾಂಗ್ ನನ್ನು ಬಂಧಿಸಿದರು. ನಂತರ ದೇಶದ್ರೋಹದ ಆಪಾದನೆಯನ್ನು ಹೊರಿಸಿ 1931 ಆಗಸ್ಟ್ 29 ರಂದು ಗಲ್ಲಿಗೇರಿಸಿದರು.
ಚಾ಼ದೋನಾಂಗ್ ನ ಮರಣದ ನಂತರ ಗಾಯಿಡಿನ್ಲ್ಯೂ ಚಳವಳಿಯ ನೇತೃತ್ವವನ್ನು ವಹಿಸಿ ತನ್ನನ್ನು "ನಾಗಾ ಕ್ರಾಂತಿದಳದ ನೇತಾ" ಎಂದು ಘೋಷಿಸಿಕೊಂಡಳು. ಇವಳ ಹೋರಾಟದ ವೇಗವನ್ನು ಕಂಡ ಬ್ರಿಟಿಷರು ಅವಳನ್ನು ಬಂಧಿಸಲು ಕಾಯುತ್ತಿದ್ದರು. ಇವಳ ಕರೆಯಿಂದ ಪ್ರೇರಣೆಗೊಂಡ ಐನೂರಕ್ಕೂ ಹೆಚ್ಚು ನಾಗಾ ಯುವಕರು ಮುಂದೆ ಬಂದರು. ಅವರಿಗೆ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಉಪಯೋಗದ ಬಗ್ಗೆ ತರಬೇತಿ ನೀಡಿದಳು. ಈಕೆ ಗೆರಿಲ್ಲಾ ಯುದ್ಧ ನೀತಿಯನ್ನು ಅನುಸರಿಸುತ್ತಿದ್ದಳು. ಇವರ ಹೋರಾಟ ಅಸ್ಸಾಂ, ನಾಗಾಲ್ಯಾಂಡ್, ಮಣಿಪುರಗಳಷ್ಟೇ ಅಲ್ಲದೆ, ಹಳ್ಳಿಗಳಿಗೂ ವ್ಯಾಪಿಸಿತು. ಸಾವಿರಾರು ಜನರು ಇವರೊಂದಿಗೆ ಕೈ ಜೋಡಿಸಿದರು. ಕೆಲವೇ ಕೆಲವು ಸಮಯದಲ್ಲಿ ಇಷ್ಟು ತೀವ್ರಗೊಂಡ ಹೋರಾಟದಿಂದ ಬ್ರಿಟಿಷರು ಭಯಗೊಂಡರು. 
ಗಾಯಿಡಿನ್ಲ್ಯೂರ ಕೆಲಸ ಕಾರ್ಯಗಳನ್ನು ಮೆಚ್ಚಿದ ಅಸ್ಸಾಂನ ಹಂಗ್ರಾಮ ಗ್ರಾಮದ ಜನರು ಸುವ್ಯವಸ್ಥಿತ ಕೋಟೆಯನ್ನು ನಿರ್ಮಿಸಿ ಅವರನ್ನು ಅಲ್ಲೇ ನೆಲೆಸುವಂತೆ ಕೇಳಿಕೊಂಡರು. 
ಗಾಯಿಡಿನ್ಲ್ಯೂ ತನ್ನ ಹೆಸರನ್ನು ಕಿರಾಂಗಲೆ ಎಂದು ಬದಲಾಯಿಸಿಕೊಂಡು ತನ್ನ ಹೋರಾಟವನ್ನು ಇನ್ನೂ ತೀವ್ರಗೊಳಿಸಿದಳು. 1928 -30 ರಲ್ಲಿ ಬ್ರಿಟಿಷರು ಮತ್ತು ಅಂಗಾಮಿ ನಾಗಾಗಳ ನಡುವೆ ಯುದ್ಧ ನಡೆದಿತ್ತು. ಪರಿಣಾಮವಾಗಿ ಅಂಗಾಮಿ ನಾಗಾಗಳಲ್ಲಿ ದ್ವೇಷ ಇನ್ನೂ ಹೊಗೆಯಾಡುತ್ತಿತ್ತು. ಇದರ ಉಪಯೋಗ ಪಡೆದ ಗಾಯಿಡಿನ್ಲ್ಯೂ ಇವರ ಸಂಪರ್ಕವನ್ನು ಮಾಡಿ ಅವರನ್ನು ತನ್ನ ಸೇನೆಗೆ ಸೇರಿಸಿಕೊಂಡರು. ಇದರಿಂದ ಆತಂಕಗೊಂಡ ಅಂದಿನ ಜಿಲ್ಲಾಧಿಕಾರಿ ಅವರನ್ನು ಹತ್ತಿಕ್ಕುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದನು. ಬ್ರಿಟಿಷರು ಗಾಯಿಡಿನ್ ಸ್ವಗ್ರಾಮ ಲಂಗಕಾವ್ ಮೇಲೆ ಧಾಳಿ ನಡೆಸಿದರು. ಎಲ್ಲಾ ಮನೆಯನ್ನೂ ಶೋಧಿಸಿದರು. ಸಂಗ್ರಹಿಸಿಟ್ಟ ಧನ ಧಾನ್ಯಗಳನ್ನು ನಾಶ ಮಾಡಿದರು. ಕೆಲವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗದಂತೆ ನಿರ್ಬಂಧಿಸಿದರು. ಗಾಯಿಡಿನ್ಲ್ಯೂ ಸುಳಿವು ನೀಡಿದವರಿಗೆ ಬಹುಮಾನದ ಜೊತೆಗೆ ತೆರಿಗೆ ಸುಂಕಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿತು. ಗಾಯಿಡಿನ್ ವಿರುದ್ಧ ಅಪಪ್ರಚಾರ ಮಾಡಲಾರಂಭಿಸಿತು. ಆದರೂ ತನ್ನ ಹೋರಾಟ ನಿಲ್ಲಿಸಲಿಲ್ಲ ಗಾಯಿಡಿನ್ಲ್ಯೂ
ಕೊನೆಗೆ ಗಾಯಿಡಿನ್ ಮೇಲೆ ವ್ಯಾಪಾರಿಗಳ ಹತ್ಯೆಯ ಆರೋಪ ಮಾಡಿ ಬಂಧನದ ಆದೇಶ ಹೊರಡಿಸಿತು. ನೇರವಾಗಿ ಬಂಧಿಸಲು ಸಾಧ್ಯವಿಲ್ಲವೆಂದು ತಿಳಿದ ಸರ್ಕಾರ ಬೇರೆ ಮಾರ್ಗವನ್ನು ಅನುಸರಿಸಿತು. ಗ್ರಾಮದ ಜನರಿಗೆ ಹಿಂಸೆ ನೀಡಲಾರಂಭಿಸಿತು. ಮತ್ತು ಗಾಯಿಡಿನ್ಲ್ಯೂ ಜೊತೆ ನಿಕಟ ಸಂಪರ್ಕ ಹೊಂದಿದ್ದ ಡಾ. ಹರಾಲುಗೆ ಆಸೆ ಆಮಿಷಗಳನ್ನೊಡ್ಡಿ ಅವನಿಂದ ಮಾಹಿತಿ ಪಡೆಯಿತು. ಅಷ್ಟರಲ್ಲಿ ಜನರು ಅನುಭವಿಸುತ್ತಿದ್ದ ಹಿಂಸೆಯನ್ನು ನೋಡಿ ನೊಂದ ಗಾಯಿಡಿನ್ಲ್ಯೂ ಬ್ರಿಟಿಷರನ್ನು ಎದುರಿಸಿ ಅಕ್ಟೋಬರ್ 12, 1932ರಂದು ಹೊರಬಂದು ಬಂಧನಕ್ಕೊಳಗಾದರು. ಸುಮಾರು ಎರಡು ತಿಂಗಳು ಕೊಹಿಮಾ ಜೈಲಿನಲ್ಲಿ ವಿಚಾರಣೆ ನಡೆಸಿ, ಸುಳ್ಳು ಆಪಾದನೆ ಹೊರಿಸಿ, ಹೆಚ್ಚಿನ ವಿಚಾರಣೆಗಾಗಿ ಇಂಫಾಲ್ ಗೆ ಕರೆದೊಯ್ದರು. ಅಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಗಾಯಿಡಿನ್ಲ್ಯೂರವರನ್ನು ಬಿಡುಗಡೆ ಮಾಡಲು ಹಲವಾರು ಜನರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳ ಬಿಡುಗಡೆಯಿಂದ ಚಳವಳಿ ತೀವ್ರ ಸ್ವರೂಪ ತಾಳುತ್ತದೆಯೆಂದು ಮನಗಂಡು ಬಿಡುಗಡೆ ಮಾಡಲಿಲ್ಲ. ಕೊನೆಗೆ ಹದಿನೈದು ವರ್ಷಗಳ ಕಾಲ ಸೆರೆಮನೆ ವಾಸದಿಂದ ಅಂದರೆ 1947ರಲ್ಲಿ ಬಿಡುಗಡೆ ಆಯಿತು. 
ಬಿಡುಗಡೆಯಾಗಿ ಬಂದ ಗಾಯಿಡಿನ್ಲ್ಯೂ ಸುಮ್ಮನೆ ಕೂರಲಿಲ್ಲ. ಸ್ವಾತಂತ್ರ್ಯಾನಂತರ ಸಹ ಅವರು ತಮ್ಮ ಜನರ ಏಳಿಗೆಗಾಗಿ ದುಡಿಯಲಾರಂಭಿಸಿದರು. 1952ರವರೆಗೆ ವಿಮ್ ರಾಪ್ ಹಳ್ಳಿಯಲ್ಲಿ ತಮ್ಮ ತಮ್ಮನೊಂದಿಗಿದ್ದರು. ನಂತರ ತಮ್ಮ ಹುಟ್ಟೂರು ಲಾಂಗ್ ಕಾವ್ ಗೆ ತೆರಳಿದರು.
ಅವರು ಭಾರತದಿಂದ ಬೇರ್ಪಡಬೇಕೆಂಬ ಬೇಡಿಕೆಯುಳ್ಳ ನಾಗಾ ನ್ಯಾಷನಲ್ ಕೌನ್ಸಿಲ್ ನ ವಿರುದ್ಧವಾಗಿದ್ದರು. ಬದಲಿಗೆ ಅವರು ಭಾರತ ಭೂಪ್ರದೇಶದಲ್ಲಿಯೇ ಜೆಲಿಯನ್ ಗ್ರಾಂಗ್ ಪ್ರದೇಶ ಬೇರೆಯಾಗಿರಬೇಕೆಂಬುದರ ಪರವಾಗಿದ್ದರು. ಅವರ ವಿರುದ್ಧ ಎನ್ ಎನ್ ಸಿ ಗೆ ಮತ್ತು ಬ್ಯಾಪ್ಟಿಸ್ಟ್ ನಾಯಕರಿಗೆ ಆಕ್ರೋಶವಿತ್ತು ಹಾಗೂ ಅದಕ್ಕಾಗಿ ಅವರು ಜೀವಬೆದರಿಕೆಯನ್ನೂ ಎದುರಿಸಬೇಕಾಯಿತು. ಆದರೆ ಅವರು ಅದಾವುದಕ್ಕೂ ಹಿಂಜರಿಯಲಿಲ್ಲ. 1960ರಲ್ಲಿ ಅವರು ತಮ್ಮ ಉದ್ದೇಶ ಸಾಧನೆಗಾಗಿ ಭೂಗತರಾದರು.
ಸುಮಾರು ಸಾವಿರ ಜನರ ಸೈನ್ಯವೊಂದನ್ನು ಕಟ್ಟಿ ಜೆಲಿಯನ್ ಗ್ರಾಂಗ್ ಜಿಲ್ಲೆಗಾಗಿ ಆಗ್ರಹಿಸಿದರು. ಅಸ್ಸಾಂ ಸರ್ಕಾರ ಭೂಗತ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕೋರಿತು. 1966ರಲ್ಲಿ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಭೇಟಿ ಮಾಡಿದ ನಂತರ, 6 ವರ್ಷಗಳ ಭೂಗತ ಬದುಕಿನ ನಂತರ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ಅಡವಿಯಿಂದ ಹೊರಬಂದರು. ಅವರ ಸೈನ್ಯದ ಕೆಲವರನ್ನು ನಾಗಾಲ್ಯಾಂಡ್ ನ ಸಶಸ್ತ್ರ ಪೋಲಿಸ್ ಪಡೆಗೆ ಸೇರಿಸಿಕೊಳ್ಳಲಾಯಿತು. ನಾಗಾಲ್ಯಾಂಡ್ ಸರ್ಕಾರ ಆಕೆಗೆ ಸರ್ಕಾರಿ ನಿವಾಸವನ್ನು ನೀಡುವುದರ ಜೊತೆಗೆ ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಟ್ಟಿತು.
ಸಂಸ್ಕೃತಿಯ ಉಳಿವಿಗಾಗಿ ದೇಶದಾದ್ಯಂತ ಹೋರಾಟ ನಡೆಸಿದ ಗಾಯಿಡಿನ್ಲ್ಯೂ 1993 ರ ಫೆಬ್ರುವರಿ 17 ರಂದು ನಿಧನರಾದರು. ಇವರು ಕೇವಲ ನಾಗಾ ಸಂಸ್ಕೃತಿಯ ಉಳಿವಿಗಾಗಿ ಅಲ್ಲದೇ ಇಡೀ ಸಮಗ್ರ ಭಾರತದ ಬಗ್ಗೆಯೂ ಚಿಂತಿಸುತ್ತಿದ್ದರು. ಇವರ ಹೋರಾಟಕ್ಕಾಗಿ ಭಾರತ ಸರ್ಕಾರ ಇವರನ್ನು "ಸ್ವಾತಂತ್ರ್ಯ ಹೋರಾಟಗಾರ್ತಿ"  ಎಂದು ಗುರುತಿಸಿ ತಾಮ್ರಪತ್ರವನ್ನು ನೀಡಿ ಗೌರವಿಸಿತು. 1966 ರಲ್ಲಿ ಭಾರತೀಯ ಅಂಚೆ ಇಲಾಖೆ ಇವರ ಭಾವಚಿತ್ರವಿರುವ ಚೀಟಿಯನ್ನು ಹೊರ ತಂದಿತು. 

1982ರಲ್ಲಿ ಭಾರತ ಸರ್ಕಾರ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1996ರಲ್ಲಿ ಮರಣೋತ್ತರವಾಗಿ "ಬಿರ್ಸಾ ಮುಂಡಾ" ಪ್ರಶಸ್ತಿಯನ್ನು ನೀಡಿತು. ಇವರ ಹೆಸರಿನಲ್ಲಿ "ಸ್ತ್ರೀಶಕ್ತಿ ಪುರಸ್ಕಾರ" ವನ್ನು ಪ್ರಾರಂಭಿಸಿದೆ. ಬಿ.ಬಿ.ಸಿ ಯವರು ಇವರ ಬಗ್ಗೆ ಸಾಕ್ಷ್ಯಚಿತ್ರವನ್ನು ತೆಗೆದಿದ್ದಾರೆ. 
ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಅನೇಕ ಮಹನೀಯರಲ್ಲಿ ಇವರೊಬ್ಬರು. ಇಂತಹವರನ್ನು ಸ್ಮರಿಸಿ ಅವರ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ವಿಜಯಲಕ್ಷ್ಮಿ ಎಂ ಎಸ್


ಅನುಭವ - 'ಆತ್ಮಾಲೋಕನದ ಆಸುಪಾಸು'



 ಇಂದಿನ ನನ್ನ ವಿಚಾರ ವಿನಿಮಯವನ್ನು ವರ ಕವಿ ಬೇಂದ್ರೆಯವರ ಸರ್ವಕಾಲಿಕ ಹೇಳಿಕೆಯೊಂದಿಗೆ ಆರಂಭಿಸುವೆ. ಅವರ ನುಡಿ ಮುತ್ತು ಇಂತಿದೆ- ' ನಿನ್ನೊಳಗೆ ನೀ ಹೊಕ್ಕಿ ನಿನ್ನನ್ನು ನೀ ಕಂಡು ನೀನೇ ನೀನಾಗು ಗೆಳೆಯಾ'. ಈ ಹೇಳಿಕೆ ಆತ್ಮಾವಲೋಕನದ ಬಗೆಗೆ ಬಹು ನಿಖರವಾಗಿ, ಸ್ಪಷ್ಟವಾಗಿ ಹೇಳುತ್ತದೆ. ಇಷ್ಟಕ್ಕೂ ಆತ್ಮಾವಲೋಕನ ಎಂದರೇನು? ಅದು ಹೇಗೆ ಮಾಡಬೇಕು? ಅದರಿಂದಾಗುವ ಪ್ರಯೋಜನವೇನು? ಅದನ್ನು ಯಾರು ಮಾಡಬೇಕು? ಯಾವಾಗ ಮಾಡಬೇಕು? ಎಂಬೀ ಪ್ರಶ್ನೆಗಳು ಪುಂಕಾನು ಪುಂಖವಾಗಿ ಮನದಾಳದಲ್ಲಿ ಎದ್ದು, ಮನ ಕೆದಕಿ ಭಾವ ತರಂಗಗಳನ್ನು ಏಳಿಸುತ್ತಿವೆ ಅಲ್ಲವೇ? ನಿಜ ಅದು ಈ ಹೊತ್ತು ಆಗಲೇ ಬೇಕು!!!... ಹಾಗೆ ಆದಾಗಲೇ ವ್ಯಕ್ತಿ ತನ್ನಂತರಾಳಕ್ಕಿಳಿದು ತನ್ನ ತಾ ಹೆಕ್ಕುವುದು ಸಾಧ್ಯವಾದೀತು...

ಯಾರು, ಯಾವಾಗ, ಹೇಗೆ ಬೇಕಾದರೂ ಅವರಿಚ್ಛೆಯಂತೆ ಮಾಡಬಹುದಾದ ಹುಡುಕಾಟವಿದು...  ಆತನ ಅಥವಾ ಆಕೆಯ ಅಂತರಾಳದಲ್ಲಿ ಎನನ್ನು ಹುಡುಕಬೇಕು ಎಂಬುದೇ ಬಹು ದೊಡ್ಡ ಸಮಸ್ಯೆ. ಒಮ್ಮೆ ವ್ಯಕ್ತಿ ತನ್ನೊಳಗನ್ನು ಹುಡುಕಿದರೆ ತನ್ನಲಡಗಿರುವ ಮೂಲ ದ್ರವ್ಯಗಳನ್ನು ಅಂದರೆ ಸಾಮರ್ಥಗಳನ್ನು ಕಂಡುಕೊಳ್ಳಲು ಹಾಗೂ ಮಿತಿಗಳನ್ನು ಗುರುತಿಸುವುದೂ ಕೂಡ ಸಾಧ್ಯ. ಇದರಿಂದಾಗುವ ಪ್ರಯೋಜನ ಮಾತ್ರ ವ್ಯಕ್ತಿಯ ಕಲ್ಪನೆಗೂ ನಿಲುಕದ್ದು.  'ವ್ಯಕ್ತಿ ತನ್ನಲ್ಲಿನ ವಿಶೇಷತೆಗಳನ್ನು ಹೆಕ್ಕಿ ಅವುಗಳನ್ನು ಮೊನಚುಗೊಳಿಸಿ ತನ್ನ ತಾ ವಿಭಿನ್ನವಾಗಿ ಅನಾವರಣಗೊಳಿಸುವ ಹುಡುಕಾಟವೇ ಆತ್ಮಾವಲೋಕನ'. ಇಂತಹಾ ಹುಡುಕಾಟದಿಂದ ವ್ಯಕ್ತಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡು ತನ್ನ ಮಿತಿಯನ್ನು ಮೀರುವುದಕ್ಕೆ ನಾಂದಿಯಾಗುತ್ತದೆ. ಇದರಿಂದ ವ್ಯಕ್ತಿ ವ್ಯಕ್ತಿತ್ವದೆಡೆಗೆ ಚಲಿಸಲೂ ಕೂಡಾ ಸಾಧ್ಯವಾಗುತ್ತದೆ.

ಯಾವ ವ್ಯಕ್ತಿ ತನ್ನ ಅಸ್ಥಿತ್ವ ಸ್ಥಾಪನೆಗೆ ಪ್ರಯತ್ನಿಸುತ್ತಾನೋ/ ಪ್ರಯತ್ನಿಸುತ್ತಾಳೋ ಅಂತಹವರು ಸವಾಲುಗಳನ್ನು ಸ್ವೀಕರಿಸಿ ಅದರ ಸಾಧನೆಯ ಮಾರ್ಗದಲ್ಲಿ ತಮ್ಮ ಮಿತಿಗಳನ್ನು ಮೀರುತ್ತಾರೆ. ತಮ್ಮ ಸಾಮರ್ಥಗಳನ್ನು ವೃದ್ಧಿಸಿಕೊಳ್ಳುತ್ತಲೇ ತನಗಾಗಿ ತನ್ನ ವ್ಯವಸ್ಥೆಯಲ್ಲಿಯೇ ತಾ ಬಯಸಿದ ಸ್ಥರದಲ್ಲಿ ತನ್ನ ತಾ ನೆಲೆಗೊಳಿಸಲು ಕಾರಣೀಕತೃ ಆಗುತ್ತಾನೆ/ಳೆ.ಇದಕ್ಕೆ ಅತ್ಯುತ್ತಮ ಉದಾಹರಣೆ  'ಎಡ್ಮಂಡ್ ಹಿಲರಿ'. ಈತನ ಸಾಧನೆ ಬಗೆಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ಆದರೆ ಆತ ಎದುರುಗೊಂಡ ಎಡರು ತೊಡರುಗಳು, ಒತ್ತಡಗಳು ಮತ್ತು ವೈಫಲ್ಯ ಬಹುತೇಕರಿಗೆ ಪರಿಚಿತವಿಲ್ಲದಿರಬಹುದು.

ಈತ 1952 ರಲ್ಲಿ ಮೌಂಟ್ ಎವರೆಸ್ಟ್ ಶಿಖರವೇರುವ ಪ್ರಯತ್ನದಲ್ಲಿ ವಿಫಲನಾಗ್ತಾನೆ. ಆಗ ಅತಿಯಾದ ನಿರಾಸೆ, ಹತಾಶೆ ಅವನನ್ನು ಕಾಡುತ್ತೆ. ಎಲ್ಲರಲ್ಲಿ ಸೋಲು ಒತ್ತಡವನ್ನು ಹೆಚ್ಚಿಸುವಂತೆ ಆತನಿಗೂ ಆಗುತ್ತೆ. ಆತ ತನ್ನನ್ನು ತಾನು ನಿಭಾಯಿಸಲು ಪ್ರಯತ್ನಿಸುವಾಗಲೇ ಆತನ ಅಭಿಮಾನಿಗಳು ಆತನ ಪ್ರಯತ್ನದಿಂದಲೇ ಪ್ರೇರೇಪಿತರಾಗಿ ಆತನನ್ನು ಸನ್ಮಾನಿಸಲು ತೀರ್ಮಾನಿಸಿ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನವನ್ನ ಕೊಡ್ತಾರೆ. ನಿಮಗಚ್ಚರಿ ಅಲ್ಲವೇ!? ಸೋತವನಿಗೆ ಸನ್ಮಾನವೇ? ಎಂದು!?... ಒಂದು ಮಾತು ನೆನಪಿರಲಿ ಅದುವರೆವಿಗೂ ಅವರು ಏರಿದ ಎತ್ತರವನ್ನು ಯಾರೂ ಏರಲಾಗಿರಲಿಲ್ಲ ಹಾಗೂ ಅದೊಂದು ಕ್ಲಿಷ್ಟಕರ ಸವಾಲು. ಅವರ ಪ್ರಯತ್ನದಲ್ಲಿ ಇಹಲೋಕ ತ್ಯಜಿಸುವ ಎಲ್ಲಾ ಸಾಧ್ಯತೆಗಳೂ ಇತ್ತು... ಆದರೀ ಕಾರ್ಯಕ್ರಮ ಆತನನ್ನ ಸಾಧಕರ ಸಾಲಿನಲ್ಲಿ ನಿಲ್ಲಿಸುವಂತ ನಿರ್ಧಾರಕ್ಕೆ ಆತ ಬರಬಹುದೆಂದು ಸ್ವತಃ ಹಿಲರಿ ಕೂಡ ಅಂದುಕೊಂಡಿರಲಿಕ್ಕಿಲ್ಲ!. ಅಂತಹ ಅದ್ಭುತವಾದ ನಿರ್ಧಾರವನ್ನು ಆತ ತೆಗೆದುಕೊಳ್ಳಲು ಆ ಕಾರ್ಯಕ್ರಮ ನಾಂದಿಯಾಯ್ತು.

ಆ ಸಮಾರಂಭದಲ್ಲಿ ಆತ ಹೇಳಿದ ಮಾತು, ತೆಗೆದುಕೊಂಡ ನಿರ್ಧಾರ, ಮೊದಲ ಪ್ರಯತ್ನದಲ್ಲಿ ಆತ ಎಸಗಿದ ಎಲ್ಲಾ ತಪ್ಪುಗಳಿಗೂ ಸಮರ್ಪಕ ಉತ್ತರ ಕಂಡುಕೊಳ್ಳಲು ಸಹಾಯಕವಾಗುತ್ತೆ ಹಾಗೇಯೇ ತನ್ನಲ್ಲಿನ ಸಾಮರ್ಥ್ಯ ಗುರುತ್ವಗೊಳಿಸಲೂ ಕೂಡ ಕಾರಣವಾಗುತ್ತೆ. ಸಮಾರಂಭದಲ್ಲಿ ಕಾರ್ಯಕ್ರಮ ಆಯೋಜಕರು ನೇತು ಹಾಕಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇ ದಿಟ್ಟಿಸುತ್ತಾ ಹೇಳುವ ಮಾತಾದರೂ ಎಂಥಹದ್ದು ನೋಡಿ ಹೇಗಿದೆ " ಮೌಂಟ್ ಎವರೆಸ್ಟ್ ನೀನು ನನ್ನನ್ನು ಸೋಲಿಸಿರಬಹುದು ಆದರೆ ಒಂದು ಮಾತು ನೆನಪಿಡು, ನೀನು ಬೆಳೆಯುವಷ್ಟು ಬೆಳದಾಗಿದೆ. ನಾನಿನ್ನೂ ಬೆಳೆಯುತ್ತಿದ್ದೇನೆ ಮುಂದಿನ ಸಲ ನಿನ್ನನ್ನು ನನ್ನ ಕಾಲ ಕೆಳಗೆ ಮೆಟ್ಟಿ ನಿಲ್ಲುತ್ತೇನೆ" ಎಂಥಾ ಸವಾಲು? ಎಷ್ಟು ದೃಢ ನಿರ್ಧಾರ?  'ಸೋಲೇ ಗೆಲುವಿನ ಸೋಪಾನ' ಎಂಬ ನುಡಿಗನುಗುಣವಾಗಿ ತನ್ನ ತಾ ಹತಾಶೆಗೆ ತಳ್ಳದೇ ಸೋಲನ್ನೇ ಎದುರಿಸುವ ಪರಿ ಅನುಕರಣೀಯ ಹಾಗೂ ಅನನ್ಯವಾದುದು. ಅದರಂತೆ ಆತ ಸಂಪೂರ್ಣ ಸಿದ್ಧತೆಯೊಂದಿಗೆ 1953 ರಲ್ಲಿ ಮತ್ತೊಂದು ಯತ್ನ ಕೈಗ್ಳೊತಾನೆ. ಫಲಿತಾಂಶವಿಂದು ನಮ್ಮ ಮುಂದಿದೆ.  23.05.1953 ರಲ್ಲಿ ಮೌಂಟ್ ಎವರೆಸ್ಟನ ತುತ್ತ ತುದಿಯಲ್ಲಿ ನಿಂತು ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾ ಹಲವರ ನಂಬಿಕೆಗಳನ್ನು ಹುಸಿ ಮಾಡಿ ಬಿಡ್ತಾನೆ. ' ಸಾಧನೆ ಸಾಧಕನಿಗಲ್ಲದೇ ಮತ್ತಾರಿಗೆ ಒಲಿಯುವುದು' ಹೇಳಿ?.

ಭವಿಷ್ಯದ ಕಡೆಗೆ ಮುಖ ಮಾಡಿರುವ ನಿಮಗೂ ಸಮಸ್ಯೆಗಳು ಕಾಡಬಹುದು, ಸೋಲಿನ ಕಹಿ ನಿಮ್ಮನ್ನು ನಿರಾಸೆಯ ಕೂಪಕ್ಕೆ ತಳ್ಳಬಹುದು. ಅಂತಹಾ ಸಂದರ್ಭಗಳಲ್ಲಿ ಸಮಾಧಾನ ಚಿತ್ತದಿಂದ ಆಗಿರುವ ಪ್ರಯತ್ನಗಳೆಡೆಗೆ ಗಮನ ಹರಿಸಿ, ನಿರಾಸೆಯ ಒತ್ತಡವನ್ನು ನಿರ್ವಹಣೆ ಮಾಡಿ. ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಸರ್ವೇ ಸಾಮಾನ್ಯ ಎಂಬಷ್ಟು ಸಹಜವಾಗಿ ಎದುರಾಗುವುವು. ಕೆಲವೊಮ್ಮೆ ಅವುಗಳ ಪ್ರವೇಶ ಅನಿಶ್ಚಿತ. ಒಮ್ಮೊಮ್ಮೆ ಮನ ಬೇಡವೆಂದರೂ ಅನಿರೀಕ್ಷಿತವಾಗಿ ದುತ್ತನೆ ಎದುರಾಗಬಹುದು. ಒಂದು ರೀತಿಯಲ್ಲಿ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ನಿಯಮಗಳೆನ್ನಬಹುದು. ಅವುಗಳನ್ನು ಬಹು ಎಚ್ಚರಿಕೆಯಿಂದ ಹಾಗೂ ತಂತ್ರಗಾರಿಕೆಯಂದ ನಿರ್ವಹಣೆ ಮಾಡಬೇಕೇ ಹೊರತು ಹತಾಶರಾಗಿ ಕೂಡುವುದಲ್ಲ. ಆದ್ದರಿಂದಲೇ ಹಿರಿಯರು ಹೇಳುವುದು " ಜೀವನದಲ್ಲಿ ಸಮಸ್ಯೆಗಳು ಕಡ್ಡಾಯ ಆದರೆ ಅದರಿಂದ ನಾವು ಎಷ್ಟು ಬಾಧಿತರಾಗುತ್ತೇವೆ ಎಂಬುದು ನಮ್ಮ ಆಯ್ಕೆಯಾಗಬೇಕು".

ಇನ್ನು ಸಾಧನೆಯ ಹಾದಿಯಲ್ಲಿ ಚಲಿಸುವಾಗ ಹಲವಾರು ಅಂಶಗಳೆಡೆಗೆ ತುಂಬಾ ಮುತುವರ್ಜಿ ವಹಿಸಿ ಪೂರಕ ಪ್ರಯತ್ನಗಳಲ್ಲಿ ಮುಳುಗಿ ಹೋಗ್ತೀವಿ. ಆದರೆ ಅವಶ್ಯಕವಾಗಿ ಗಮನಿಸಲೇಬೇಕಾದ ಸೂಕ್ಷ್ಮ ಅಥವಾ ನಿಮ್ಮ ಮಾತಿನಲ್ಲೇ ಹೇಳುವುದಾದರೆ ಸಣ್ಣ ಸಣ್ಣ ಸಂಗತಿಗಳನ್ನು ಗಮನಿಸದೇ ಕಡೆಗಣಿಸಿ ಬಿಡುತ್ತೇವೆ. ಈ ವಿಷಯ ಹೇಳುವ ಹೊತ್ತಲ್ಲಿ ವಿಶ್ವ ವಿಖ್ಯಾತ ಶಿಲ್ಪ ಕಲಾವಿದ ಮೈಕೆಲಾಂಜಲೋ ತನ್ನ ಶಿಷ್ಯನಿಗೆ ಹೇಳಿದ ಮಾತು ನೆನಪಾಗ್ತಿದೆ. ಒಮ್ಮೆ ಮೈಕಲಾಂಜಲೋ ತಾನೇ ನಿರ್ಮಿಸಿದ ಅತ್ಯಂತ ಸುಂದರವಾದ ಕಲಾಕೃತಿಯನ್ನು ಮತ್ತೆ ಮತ್ತೆ ಅವಲೋಕನ ಮಾಡ್ತಾ ಇರೋದನ್ನ ಆತನ ಶಿಷ್ಯ ಗಮನಿಸಿ, ಗುರುಗಳೇ ನೀವೇ ಕೆತ್ತಿದ ಕಲಾ ಕೃತಿಯಲ್ಲಿ ಲೋಪಗಳಿರುವುದುಂಟೇ? ಶ್ರೇಷ್ಠತೆಯ ಉತ್ತುಂಗದಲ್ಲಿರುವುದು ಬಿಡಿ ಎನ್ನುತ್ತಾನಂತೆ.ಆಗ ಮೈಕಲಾಜಲೋ ಹೇಳುವ ಮಾತು ಪ್ರತಿಯೋರ್ವ ಸಾಧಕನಿಗೆ ಇರಲೇ ಬೇಕಾದ ತಾಳ್ಮೆ , ಅರಿವಿನ ಪ್ರಜ್ಞೆ ಹಾಗೂ ಉತ್ತುಂಗಕ್ಕೆ ಏರಬಯಸುವ ಪ್ರತಿ ವ್ಯಕ್ತಿ ಹೇಗೆ ಕಾರ್ಯತತ್ಪರನಾಗಬೇಕೆಂಬುದಕ್ಕೆ ಅದ್ಭುತವಾದ ಸಾಕ್ಷಿಯಾಗುತ್ತದೆ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳಲೇ ಬೇಕಾದ, ಅತ್ಯಗತ್ಯವಾದ , ಹಾಗೂ ಇಂದಿನ ಜಗತ್ತಿಗೆ ಅನಿವಾರ್ಯದ ಮಾತದು  "ಬೃಹತ್ ಕಾರ್ಯ ಸಣ್ಣ ಸಣ್ಣ ಕೆಲಸದ ಮೊತ್ತ".

ಪ್ರತಿ ವ್ಯಕ್ತಿಯ ಅಂತರಂಗಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ ಈ ಮಾತು. ಅತಿ ದೊಡ್ಡ ಸಾಧನೆ ಆರಂಭವಾಗುವುದು ಅತಿ ಸಣ್ಣ ಮೊದಲ ಪ್ರಯತ್ನದಿಂದಲೇ ಅಲ್ಲವೇ? ಆದರೆ ನಾವು ಸಣ್ಣ ಸಣ್ಣ ಕೆಲಸಗಳನ್ನು ಕಡೆಗಣಿಸಿ ಬಿಡುತ್ತೇವೆ. ನೂರಾರು ಕಿಲೋ ಮೀಟರ್ ನೆಡೆದು ಬಿಡುವ ನಮ್ಮ ಸಾಹಸ ಆರಂಭವಾಗುವುದು ಕೂಡ ನಮ್ಮ ಮೊದಲ ಹೆಜ್ಜೆಯಿಂದಲೇ ತಾನೇ? ಹಾಗೆಯೇ ಸಾಧನೆಗೆ ಸಜ್ಜಾಗಿ ನಿಂತಾಗ ನಮ್ಮ ಎಲ್ಲಾ ಅಗತ್ಯಗಳನ್ನು ಹೇಗೆ ಪೂರೈಸಿಕೊಳ್ಳುತ್ತೇವೆ ಹಾಗೂ ಎಷ್ಟು ತೃಪ್ತರಾಗುತ್ತೇವೆ ಎಂಬುದೂ ಕೂಡ ಅಷ್ಟೇ ಪ್ರಮುಖವಾದುದು ಎಂಬುದನ್ನು ನಾವು ಮರೆಯುವಂತಿಲ್ಲ. ಅದು ಬೆಳಿಗ್ಗೆ ಉಲ್ಲಾಸದಿಂದ ಎಚ್ಚರಗೊಳ್ಳುವುದರಿಂದ ಮೊದಲುಗೊಂಡು ರಾತ್ರಿ ಪ್ರಪುಲ್ಲ ಮನಃಸ್ಥಿತಿಯೊಂದಿಗೆ ಮಲಗುವವರೆಗಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡುವುದೆಂದರೆ ಗಂಟೆ ಗಟ್ಟಲೇ ಓದುವುದು ಅಥವಾ ಆಟ ಆಡುವುದು ಅಥವಾ ಹಾಡುತ್ತಾ ಕುಣಿಯುವುದೆಂದರ್ಥವಲ್ಲ. ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಆಸಕ್ತಿ ಇರುವ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಬೇಕು. ಓದು ಅಧ್ಯಯನವಾಗಿ ಮಾರ್ಪಾಟಾಗಬೇಕು ಆಗ ಅದು ವಿಸ್ತೃತಗೊಳ್ಳುತ್ತಾ ವ್ಯಕ್ತಿ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಸೋಲಿನ ನೆರಳೂ ಕೂಡ ಸ್ಪರ್ಷಿಸುವುದಿಲ್ಲ. ಅನಿವಾರ್ಯ ಕಾರಣಗಳಿಂದ ಹಿನ್ನಡೆಯಾದರೂ ಅದು ವ್ಯಕ್ತಿಯು ವಸ್ತುಸ್ಥಿತಿಯನ್ನು ಗ್ರಹಿಸುವ ಮನಸ್ಥಿತಿಯಲ್ಲಿರಿಸುತ್ತದೆ. ಹೀಗಾಗಿ, ಸಾಧನೆಯ ಹಾದಿಯಲ್ಲಿ ನಮ್ಮ ಊಟ, ತಿಂಡಿ, ಮನರಂಜನೆ, ಇತ್ಯಾದಿಗಳು ಮಿತಿಯೆಂಬ ಚೌಕಟ್ಟಿನೊಳಗೆ ಸಹಜವಾಗಿ ನೆಡೆಯುತ್ತಿರಬೇಕು. ಆಗ ಮಾತ್ರ ಸಾಧನೆಗೆ ಅಗತ್ಯವಾದ ಚೈತನ್ಯ ಆಗಿಂದಾಗ್ಗೆ ಮರುಪೂರಣವಾಗುತ್ತಾ ವ್ಯಕ್ತಿ ಸಮತೋಲನದಲ್ಲಿರಲು ಸಾಧ್ಯವಾಗುತ್ತದೆ ಎಂಬುದನ್ನು ದೃಢವಾಗಿ ಹೇಳುವೆ.

ಈ ಮಾತು ಹೇಳುವಾಗ ಗುರುವಿನ ಆಕರ್ಷಕ ಮಾತಿನ ಪ್ರಭಾವಕ್ಕೆ ಒಳಗಾದ ವಿದ್ಯಾರ್ಥಿಯೊಬ್ಬ ಅವರ ಬಳಿ ಬಂದು ನಾನು ನಿಮ್ಮಂತಾಗಲು ಎಷ್ಟು ವರ್ಷ ಪ್ರಯತ್ನ ಮಾಡಬೇಕೆಂದು ಕೇಳಿದ ಘಟನೆ ನೆನಪಾಗ್ತಿದೆ.  ಆಗ ಗುರು ಹುಡುಗನ ತಲೆ ನೇವರಿಸಿ ನಕ್ಕು ಹೇಳ್ತಾನೆ ಕನಿಷ್ಠ ಐದು ವರ್ಷ. ಹುಡುಗ ಉತ್ತೇಜಿತನಾಗಿ ಮತ್ತೆ ಪ್ರಶ್ನೆ ಮಾಡ್ತಾನೆ ನಾನು ಶ್ರಮವಹಿಸಿ ಹೆಚ್ಚು ಕಾಲ ಪ್ರಯತ್ನ ಪಟ್ಟರೆ ಎಷ್ಟು ವರ್ಷ ಬೇಕಾಗಬಹುದು?

ಗುರುವಿನ ಕಣ್ಣುಗಳು ಕಿರಿದಾದರೂ ನಸು ನಕ್ಕು ಉತ್ತರಿಸ್ತಾನೆ ಕನಿಷ್ಟ ಏಳು ವರ್ಷ. ಹುಡುಗನಿಗೆ ಬೇಸರವಾದರೂ ಮತ್ತೆ ಕೇಳ್ತಾನೆ ಹಗಲು ರಾತ್ರಿ ಎನ್ನದೇ ಊಟ ನಿದ್ರೆ ಕಡೆಗಣಿಸಿ ಪ್ರಯತ್ನಿಸಿದರೆ? ಗುರು ನಿರ್ವಿಕಾರವಾಗಿ ಹೇಳ್ತಾನೆ ಕನಿಷ್ಠ ಹತ್ತು ವರ್ಷ ಗರಿಷ್ಠ ಎಷ್ಟಾದರೂ ಆಗಬಹುದು!?. ಹುಡುಗನ ತಾಳ್ಮೆ ಮೀರುತ್ತೆ ಆದರೂ ಹಠಕ್ಕೆ ಬಿದ್ದವನಂತೆ ಮತ್ತೆ ಪ್ರಶ್ನಿಸ್ತಾನೆ ಅದು ಹೇಗೆ ಸಾಧ್ಯ ಶ್ರಮ ಹೆಚ್ಚಾದಂತೆ ಸಮಯ ಕಡಿಮೆ ಆಗಬೇಕು ತಾನೇ? ಹುಡುಗನ  ಮರು ಪ್ರಶ್ನೆಗೆ ಗುರು ತಾಳ್ಮೆ ಕಳೆದು ಕೊಳ್ಳದೆ ಉತ್ತರಿಸ್ತಾನೆ  'ಸಾಧನೆಯೆಡೆಗೆ ಒಂದು ಕಣ್ಣಿದ್ದು ಬಿಟ್ಟರೆ ಪ್ರಯತ್ನಕ್ಕೆ ಒಂದೇ ಕಣ್ಣಾಗುತ್ತದೆ ಮಗು ಆದ್ದರಿಂದ ಹೆಚ್ಚು ಸಮಯ ಬೇಕು. ಅಲ್ಲದೇ ನಿನ್ನಲ್ಲಿನ ಮೂಲ ದ್ರವ್ಯಗಳು ಚೇತನಗೊಳ್ಳಬೇಕೆಂದರೆ ಇತರೆ ಅಗತ್ಯಗಳೂ ಕೂಡ ಪೂರೈಕೆಯಾಗಬೇಕಲ್ಲವೆ? ಬೃಹತ್ ಸಾಧನೆಗೆ ಕಠಿಣ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಇತರೆ ಅಂಶಗಳೂ ಕೂಡ " ಎಂದಂದು 'ಒಳ್ಳೆಯದಾಗಲಿ' ಎಂದು ಹರಸುತ್ತಾನೆ.  ಈ ಉದಾಹರಣೆಯ ವಿಶ್ಲೇಷಣೆಯಿಂದ ತಾವು ಗ್ರಹಿಸಬೇಕಾದ ಅಂಶ ಯಾವುದೆಂದು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತಾ ಮತ್ತೊಂದು ವಾಸ್ತವತೆಯನ್ನು ತಮ್ಮ ಮುಂದಿರಿಸಲು ಪ್ರಯತ್ನಿಸುವೆ.

ಇಂದು ಯಾರನ್ನೇ ಆಗಲಿ ವ್ಯವಸ್ಥೆಯ ಬಗೆಗೆ ಮಾತಾಡಿಸಿ ನೋಡಿ ಪ್ರತಿಯೊಬ್ಬರ ಅಂಬೋಣ ಸುಲಭವಾಗಿ ಗ್ರಹಿಸಿ ಬಿಡಬಹುದು. ಏನಿರಬಹುದು ಅವರ ಉತ್ತರ?  ನೀವೀಗ ಗ್ರಹಿಸುತ್ತಿರುವುದು ಸರಿ. ' ವ್ಯವಸ್ಥೆ ಸರಿಯಿಲ್ಲ, ಆಮೂಲಾಗ್ರ ಬದಲಾವಣೆ ಬೇಕು' ಎಂದು ಬಹಳ ಸುಲಭವಾಗಿ ಹೇಳಿ ಬಿಡುವರು. ಆದರೆ, ವ್ಯವಸ್ಥೆಯ ಪ್ರಮುಖ  ಭಾಗವೇ ಪ್ರತಿಯೋರ್ವ ವ್ಯಕ್ತಿ ಎಂಬುದರ ಅರಿವಿರದೆ ಹೇಳುವರೋ ಅಥವಾ ತಾವು ಸರಿ ಇದ್ದೇವೆ ಹಾಗಾಗಿ ವ್ಯವಸ್ಥೆ ಸರಿಯಾಗಬೇಕೆಂದು ಬಯಸುವರೋ ತಿಳಿಯದು. ವ್ಯವಸ್ಥೆಯಲ್ಲಿರುವ ಪ್ರತಿ ವ್ಯಕ್ತಿಯ ಪಾತ್ರದಿಂದಲೇ ಸಮುದಾಯ ಅಥವಾ ಸಮಾಜ ತನ್ನ ಅಸ್ಮಿತೆ ಕಂಡುಕೊಳ್ಳುವುದೆಂಬ ಸತ್ಯವನ್ನು ತಳ್ಳಿ ಬಿಡುವುದು ಮಾತ್ರ ಅತ್ಯಂತ ಸೋಜಿಗದ ಸಂಗತಿ!?... ಪ್ರತಿ ವ್ಯಕ್ತಿ ತನ್ನಾಳಕ್ಕಿಳಿದು ತನ್ನ ಮಿತಿ ಮೀರುವುದೆಂದರೆ ತನ್ನ ಕೊರತೆಗಳನ್ನು ನೀಗಿಸುವುದು ಹಾಗೂ ಪ್ರಪಂಚಕ್ಕೆ ಮುಕ್ತವಾಗಿ ತೆರೆದುಕೊಳ್ಳವುದು ಎಂದರ್ಥವಲ್ಲವೇ? ಪ್ರತಿ ವ್ಯಕ್ತಿ ತನ್ನೊಳಗನ್ನು ಹುಡುಕುವ ಯತ್ನದಲ್ಲಿ ವಿಭಿನ್ನವಾಗಿ ನೆಲೆಗೊಳ್ಳುವುದರಿಂದಲೇ ಜಗತ್ತಿಗೊಂದಿಷ್ಟು ಒಳಿತು ಮಾಡಲಾರನೇ?

ಅಚ್ಚರಿಯಾಗುತ್ತಿದೆಯೇ!? ವ್ಯವಸ್ಥೆ ಬದಲಾಗಬೇಕೆನ್ನುವ ಪ್ರತಿ ಮನಸ್ಸು ತನ್ನ ಕೊಡುಗೆ ಸಮಷ್ಟಿ ಕಡೆಗೆ ಎಷ್ಟು? ಹಾಗೂ ಬದಲಾವಣೆ ವೈಯಕ್ತಿಕ ಹಂತದಲ್ಲಿ ಜರುಗಿದಾಗ ಮಾತ್ರ ಸಮಾಜದ ಬದಲಾವಣೆ  ಸಾಧ್ಯವೆಂಬ ಸತ್ಯ ವ್ಯಕ್ತಿಗೆ ಅಂತರ್ಗತವಾಗದಿದ್ದರೆ ಸಾಧ್ಯವಾದೀತೆ? ಬೇರೆಯವರ ಮಿತಿ ಗುರುತಿಸುವ ನಾವು ಮೊದಲು ನಮ್ಮ ಮಿತಿಗಳನ್ನು ಗುರುತಿಸ ಬೇಕಲ್ಲವೇ? ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ ಹೀಗಳೆಯುವ ನಾವು ನಮ್ಮಲ್ಲಿನ ದೋಷಗಳನ್ನು ಕಂಡುಕೊಳ್ಳಬೇಕಲ್ಲವೇ? ಜಗತ್ತಿನಲ್ಲಿ ಬದಲಾವಣೆ ನಿರೀಕ್ಷಿಸುವ ನಾವು ಮೊದಲು ಬದಲಾಗಬೇಕಲ್ಲವೇ?  ಇದಕ್ಕೆಂದೇ  ಮಹಾತ್ಮ ಗಾಂಧಿಯವರು ನುಡಿದದ್ದು 'ಬದಲಾವಣೆಯ ಹರಿಕಾರ ನೀನೇ ಆಗು' ಎಂದು. ಇದನ್ನೇ ದಾಸರು ಹಾಡಿ ನಲಿಯುತ್ತಾ ಸಂಗೀತದರಮನೆಯಲ್ಲಿ ಸಾಹಿತ್ಯ ಸಮೀಕರಿಸಿ  ಮೊನಚಾಗಿ ಚುಚ್ಚಿದ್ದು  'ಲೋಕದ ಡೊಂಕ ನೀವೇಕೆ ತಿದ್ದುವಿರಿ?' ಎಂದು. ಬಹು ಹಿಂದೆ ಸಾಕ್ರಟಿಸ್ ಹೇಳಿದ್ದು ಕೂಡ ಇದೆ ' ಪ್ರಪಂಚದಲ್ಲಿ ಶಾಶ್ವತವಾಗಿರುವುದು ಬದಲಾವಣೆ ಮಾತ್ರ' 

'ಬದಲಾವಣೆ ಜಗದ ನಿಯಮ' ಎಂಬ ಹೇಳಿಕೆಗೆ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಸಾಧಕರಿಗೆ ಹೇಳುವ ಮಾತಿನಲ್ಲಿಯೂ ಕೂಡ ಪ್ರತಿಧ್ವನಿಸುತ್ತದೆ.  " ಯಾವುದೇ ವ್ಯಕ್ತಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಾಗ ಇದ್ದ ಸ್ಥಿತಿಯಲ್ಲಿಯೇ ಮುಂದುವರೆದರೆ ಸಾಧನೆ ಸಾಧ್ಯವಿಲ್ಲ"  ಇದರರ್ಥ ಯಾವುದೇ ವ್ಯಕ್ತಿ/ ಸಂಸ್ಥೆ/ ಸಮುದಾಯ ಸವಾಲನ್ನು ಸ್ವೀಕರಿಸಿದ ನಂತರ ಪ್ರಸ್ತುತ ಸನ್ನಿವೇಶದಲ್ಲಿರುವ ಅನಾವಶ್ಯಕ ಅಂಶಗಳನ್ನು ಗುರುತಿಸಬೇಕು ಹಾಗು ಮಾರ್ಪಾಟಿನ ಅಗತ್ಯ ಇದ್ದರೆ ಸೂಕ್ತ ಕ್ರಮ ತೆಗೆದುಕೊಂಡು ಪೂರಕವಾದ ಸಿದ್ದತೆಯೊಂದಿಗೆ ಮುಂದುವರಿಯಬೇಕು. ಇಲ್ಲದಿದ್ದರೆ ಸಾಧನೆಯೆಡೆಗೆ ಮುನ್ನೆಡೆಯುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅಭಿವೃದ್ಧಿ ಎಂದರೆ ಬದಲಾವಣೆಯ ಮತ್ತೊಂದು ಮಜಲು ಎಂಬುದನ್ನು ಯಾರೂ ಯಾವುದೇ ಕಾರಣಕ್ಕೂ ಮರೆಯಬಾರದು. ಯಾವುದೇ ಸಮಾಜ ಅಥವಾ ಸಮುದಾಯದ ಇಂದಿನ ರೀತಿ ನೀತಿಗಳನ್ನು ಗಮನಿಸಿ ಬದಲಾವಣೆಯ ಸ್ಪರ್ಶಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ನಮ್ಮ ಆಚರಣೆಗಳು ಹೀಗೆಂದು ಆ ಗ್ರಂಥದಲ್ಲಿದೆ ಅಥವಾ ನಮ್ಮ ಹಿರೀಕರು ಹೇಳಿಬಿಟ್ಟಿದ್ದಾರೆ ಎಂಬ ಪೊಳ್ಳುವಾದ ಮುಂದಿಟ್ಟು ಅಸ್ಪೃಶ್ಯತೆ, ಮೇಲು ಕೀಳು, ತಾರತಮ್ಯ ಮಡಿ ಮೈಲಿಗೆ... ಹೀಗೆ ಒಂದೇ ಎರಡೇ ಅರ್ಥರಹಿತ ಆಚರಣೆಗಳನ್ನು ಇನ್ನೂ ಜತನದಿಂದ ಮುಂದುವರಿಸುವ ನಿಲುವು ಎಷ್ಟರಮಟ್ಟಿಗೆ ಸರಿ ? ಚಿಂತಿಸುವ ಅಗತ್ಯವಿಲ್ಲವೇ? ಬದಲಾವಣೆ ಗಾಳಿ ಅಗತ್ಯವಿಲ್ಲವೇ ? ಮತ್ತೆ ಮತ್ತೆ ದಯವಿಟ್ಟು ಯೋಚಿಸಿ ಮುಂಬರುವ ದಿನಗಳು ನಮ್ಮವು. ಇಂದಿನ ನಮ್ಮ ನಿರ್ಧಾರ ಮುಂದೆ ಕ್ರಿಯಾಶೀಲ ಸಮಾಜದ ನಿರ್ಮಾಣಕ್ಕೆ ಕಾರಣವಾಗದೇ? ಈ ವಿಶ್ಲೇಷಣೆಯ ಮೂಲ ಆಶಯ ಸಾಮರ್ಥ್ಯದ ಉನ್ನತೀಕರಣ ಸಮಾಜದ ಕಲ್ಯಾಣಕ್ಕಾಗಿ ವೈಯಕ್ತಿಕ ಹಂತದಲ್ಲಿಯೇ ಆರಂಭವಾಗಬೇಕೆಂಬುದಷ್ಟೇ... ನಮ್ಮ ನಿರೀಕ್ಷೆ . ಇದಕ್ಕಾಗಿ ಅತ್ಯಗತ್ಯವಾಗಿ ಆಗಬೇಕಿರುವುದು ಯವಜನತೆ ತಮ್ಮಲ್ಲಿನ ವಿಶೇಷತೆಗಳನ್ನು ಕಂಡುಕೊಳ್ಳುವುದು ಹಾಗೂ ಮನುಷ್ಯತ್ವದ ತಳಹದಿಯಲ್ಲಿ ಬದುಕು ಕಟ್ಟಿ ಕೊಳ್ಳುವ ಪ್ರಯತ್ನ ಮಾಡುವುದು. ಈ ಆಲೋಚನೆ ಅಂತರಂಗಕ್ಕಿಳಿದಾಗ ಪ್ರಸಕ್ತ ಸಮಾಜದ ವಿಧ್ಯಾಮಾನಗಳಾಗಿಬಿಟ್ಟಿರುವ ಅತ್ಯಾಚಾರ, ಅಪಚಾರ ಅವಹೇಳನ, ಅಸಹಿಷ್ಣುತೆ, ಧರ್ಮ ಆಧರಿಸಿ ಪ್ರತ್ಯೇಕಿಸುವಿಕೆ,  ಜಾತಿ ವಿಂಗಡನೆ, ಲಿಂಗತಾರತಮ್ಯ... ಇತ್ಯಾದಿ ಮಲಿನಕಾರಕಗಳಿಂದ ಸಮುದಾಯ ಅಥವಾ ಸಮಾಜವನ್ನು ಹೊರಗೆಳೆವ ಸಲುವಾಗಿ ಯುವಜನತೆ ಜಾಗೃತರಾಗಬೇಕಿದೆ... ಆಗ ಮಾತ್ರ ಹೊಸ ಅಲೆ ಎದ್ದು ಸಮಾಜ ರೂಪಾಂತರಗೊಳ್ಳುವುದೆಂದು ಆಶಿಸಬಹುದಲ್ಲವೇ?

ವೈವಿಧ್ಯತೆ, ಜಾತ್ಯಾತೀತತೆ ಹಾಗೂ ಧರ್ಮ ನಿರಪೇಕ್ಷತೆಯ ಮೂಲ ಮಂತ್ರಗಳ ಆದರ್ಶದ ಸೂತ್ರದನ್ವಯ ರೂಪುಗೊಂಡ ಪ್ರಜಾಪ್ರಭುತ್ವ ನಮ್ಮದು. ಯಾವುದೇ ಕಾರಣಕ್ಕೂ ಒಂದು ಧರ್ಮ, ಒಂದು ಜಾತಿ, ಒಂದೇ ರೀತಿಯ ಆಚಾರಗಳ ಅಡವಳಿಕೆ ಸಾಧ್ಯವಿಲ್ಲದ ಮಾತು. ರಾಜಕೀಯ ಪ್ರೇರಿತವಾದ ನೆಡೆಗಳು, ಉಳ್ಳವರ ದಬ್ಬಳಿಕೆ, ಧಾರ್ಮಿಕ ಅಂಧಾನುಕರಣೆ, ಮಹಿಳೆಯರನ್ನು ದ್ವಿತೀಯ ದರ್ಜೆಯಲ್ಲಿ ನೆಡೆಸಿಕೊಳ್ಳುವುದು, ವಿಚಾರವಂತಿಕೆ ಬೆಳೆಸಿಕೊಳ್ಳದಿರುವುದು, ಕೋಮುವಾದದ ಪ್ರಭಾವಕ್ಕೆ ಸುಲಭವಾಗಿ ನಿಲುಕುವುದು ಯುವ ಜನರು ಎಂಬುದೇ ಆತಂಕಕಾರೀ ವಿಷಯ. ಯುವ ಮನಗಳಿಂದು ದೇಶ ಕಟ್ಟುವ ಕಟ್ಟುವ ಕಾರ್ಯವನ್ನು ವಿಭಿನ್ನ ದೃಷ್ಟಿಯುಳ್ಳ ಮನಗಳನ್ನು ಬೆಸೆಯವ ಮೂಲಕ ಮಾಡಬೇಕಿದೆ. ಆದರಿದು ಶ್ರೀ ಸಾಮಾನ್ಯರ ಮನಕ್ಕೆ ಕಸಿವಿಸಿಯಾಗದಂತೆ ಅವರ ಬದುಕು ಅಯೋಮಯ ಆಗದಂತೆ ಬಹು ಸಹಜ ಎಂಬಂತೆ ಆಗಬೇಕೆಂಬುದೇ ನಮ್ಮ ಮುಂದಿರುವ ಸವಾಲು. ಹೇಗೆ ಸಾಧ್ಯ? ಕ್ರಾಂತಿಯ ಹೊರತು ಸಾಧ್ಯವಿಲ್ಲವೆಂದು ಮನ ಚೀರುತ್ತಿದೆ ಎಂಬುದ ನಾ ಬಲ್ಲೆ. ಬಹುಶಃ 

ಗುರು-ಶಿಷ್ಯರ ಈ ಸಂಭಾಷಣೆ ತಮಗೆ ತಮ್ಮ ಮುಂದಿನ ನೆಡೆಯ ಬಗೆಗೆ ಬೆಳಕು ಚೆಲ್ಲುವುದೆಂದು ಆಶಿಸುವೆ...

ಒಮ್ಮೆ ಬಾಲಕನೋರ್ವ ತನ್ನ ಗುರುಗಳ ಬಳಿ ಬಂದು ಈ ಸಮಾಜ ಬದಲಿಸಲು ನಾನೇನು ಮಾಡಬೇಕು? ಎಂದು ಪ್ರಶ್ನೆ ಮಾಡ್ತಾನೆ. ಗುರುವಿಗೆ ಆತಂಕ ಹಾಗೂ ಗಾಬರಿ ಒಟ್ಟೊಟ್ಟಿಗೆ ಆದರೂ ಸಮಾಧಾನದಿಂದ ಯಾಕೆ ? ಮಗು ಏನಾಯಿತು? ಅಂತ ಮರು ಪ್ರಶ್ನೆ ಕೇಳ್ತಾರೆ ಆಗ ಬಾಲಕ ಹೇಳ್ತಾನೆ ಸಮಾಜ ಕೆಟ್ಟೋಗಿದೆ ಹೀಗೆ ಮುಂದುವರೆದರೆ ಜೀವ ಸಂಕುಲವೇ ನಶಿಸಿ ಹೋಗುತ್ತೆ. ಹೇಳಿ ನಾನೇನು ಮಾಡಬಹುದು? ಗುರು ಪ್ರಸನ್ನ ಚಿತ್ತದಿಂದ 

ನುಡೀತಾನೆ 'ಓದು ಮಗು...ಓದು... ' ತಕ್ಷಣ ಹುಡುಗ ಮತ್ತೊಂದು ಪ್ರಶ್ನೆ ಕೇಳ್ತಾನೆ... ಓದುವುದರಿಂದ ಏನಾಗುತ್ತೆ? ಏನನ್ನು ಓದಬೇಕು? ಗುರು ಪ್ರಾಂಜಲ ಮನಸ್ಸಿನಿಂದ ಧೀರ್ಘ ಶ್ವಾಸ ತೆಗೆದುಕೊಂಡು ಹೇಳುವ ಮಾತು ಎಲ್ಲರ ಹೃದಯ ಬಡಿತದೊಂದಿಗೆ  ಮಿಳಿತವಾಗಬೇಕು... ಓದು ಮನಸ್ಸನ್ನು ಅರಳಿಸುತ್ತೆ. ಅದಕ್ಕಾಗಿ ಒಳ್ಳೆಯ ಸಾಹಿತ್ಯ ಓದು. ಇತಿಹಾಸದ ಓದು ಯಾವುದೇ ಸಮಾಜ ಅಥವಾ ಸಮುದಾಯ ಬೆಳೆದು ಬಂದ ದಾರಿ, ಕಾಲಕ್ರಮೇಣ ತನ್ನ ವಿಶೇಷತೆಗಳನ್ನು  ಸಾಂದ್ರೀಕೃತಗೊಳಿಸಿಕೊಳ್ಳುತ್ತಾ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪರಿ ಗ್ರಹಿಕೆಗೆ ನಿಲುಕುತ್ತೆ. ಹಾಗೆಯೇ ವೈಚಾರಿಕ ಲೇಖನಗಳು ವ್ಯಕ್ತಿ ರೂಪಾಂತರಗೊಳ್ಳಬೇಕಾದ ಬಗೆಯನ್ನು ತಿಳಿಸಿಕೊಡುತ್ತದೆ. ಮುಂದಾಗಬೇಕಿರುವ ಬದಲಾವಣೆಗಳನ್ನು ಹಾಗೂ ಸ್ವರೂಪಗಳನ್ನು ಹೃಧ್ಯವಾಗಿಸುತ್ತದೆ. ಅಂದರೆ ಓದು ಅಧ್ಯಯನವಾಗಿ ಮಾರ್ಪಡುವುದರಿಂದ ಆಗುವ ಮೊದಲ ಪರಿಣಾಮ ವ್ಯಕ್ತಿಯ ಆಂತರ್ಯದ ಅವಲೋಕನ. ತನ್ಮೂಲಕ ಬದಲಾವಣೆಯ ಅಲೆ. ಹೀಗಾಗಿ   ಸಮಾಜ ಬದಲಿಸುವ ನಿನ್ನ ಇಚ್ಛೆ ನಿನ್ನಿಂದಲೇ ಆರಂಭವಾಗಬೇಕೇ ಹೊರತು ಹೊರಗಿನಿಂದಲ್ಲ ಮಗು.... ಪ್ರತಿಯೊಬ್ಬರೂ ಮುಕ್ತವಾಗಿ ಸಮಾಜಕ್ಕೆ ತೆರೆದುಕೊಂಡಂತೆಲ್ಲಾ ಸಮಾಜ ತನ್ನಿಂದ ತಾನೇ ಬದಲಾಗಿ ಮಾನವೀಯತೆಯ ಸ್ಪರ್ಶದಲ್ಲಿ ಪುನರ್ ರಚನೆಗೊಳ್ಳಬಹುದು ಎಂಬ ವಿಚಾರ ಸರಣಿಯನ್ನು ಮುಂದಿರಿಸುವ ಗುರು ಆದರ್ಶ ಪ್ರಾಯನಾಗುತ್ತಾನೆ. ಪ್ರಶ್ನಿಸುವ ಬಾಲಕ ನಮ್ಮ ನಿಮ್ಮೆಲ್ಲರಲ್ಲೂ ಲೀನವಾಗಬೇಕು. ಎಲ್ಲಿಯೇ ಆಗಲಿ ಕ್ರಾಂತಿಯಾಗಲೇ ಬೇಕೆಂಬ ಆಕ್ರೋಶದ ಮಾತುಗಳಿಗಿಂತ ತನ್ನಿಂದ ತಾನೇ ಮನಗಳು ಜಾಗೃತಗೊಳ್ಳಲಿ. ಒಳಿತು ಚಿಂತಿಸುವ ಪರಿವರ್ತಿತ ಮನಗಳು ಸುಸ್ಥಿರ ಸಮಾಜ ಕಟ್ಟಲಾರವೇ? ಮನುಜನ ಮನುಜನಂತೆ ನಡೆಸಿಕೊಳ್ಳಲಾರವೇ?ತಾರತಮ್ಯದ ದಳ್ಳುರಿಯಿಂದ ಹೊರಬರಲಾರವೇ? ಸಿರಿವಂತಿಕೆ- ಬಡತನದ ವೈಪರೀತ್ಯಗಳ ಕಿತ್ತೆಸೆಯಲಾರವೇ? ತನ್ನಂತೆ ಇತರರ ನೆಡೆಸಿಕೊಳ್ಳಲಾರರೇ? .... ಸಾಲು ಸಾಲು ಪ್ರಶ್ನೆಗಳೊಂದಿಗೆ ... 
'ಮನುಜ ಮತ ವಿಶ್ವ ಪಥ ಜಪಿಸುತ್ತಾ... ಎಲ್ಲರೊಂದಿಗೆ ಉತ್ತರ ಹುಡುಕುವತ್ತ ಮುನ್ನೆಡೆವ ಮನಸ್ಥಿತಿಯೊಂದಿಗೆ ವಿರಮಿಸುವೆ....
ಶುಭವಾಗಲಿ....
.......ಸುವ್ವೀ.....

(20/01/18 ರಂದು ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾರೋಪ ಸಮಾರಂಭದ ಭಾಷಣದ ಲಿಖಿತ ರೂಪ....)


ಶಾಲಾ ಡೈರಿ - ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಸಮಾಜದ ಪಾತ್ರ



ಅಮೇರಿಕಾದ ಪ್ರಸಿದ್ಧ ಬರಹಗಾರರಾದ ಮಾರ್ಕ್ ಟ್ವೇನ್‍ರವರು “ಶಾಲೆಯೊಂದನ್ನು ತೆರೆಯಿರಿ, ಜೈಲೊಂದನ್ನು ಮುಚ್ಚಿರಿ” ಎಂದಿದ್ದಾರೆ. ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ತರಗತಿಗಳಲ್ಲ, ಪ್ರಯೋಗಾಲಯ, ಗ್ರಂಥಾಲಯಗಳಲ್ಲ. ಬದಲಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾಗುವ ಶಿಕ್ಷಕರು. ಏಕೆಂದರೆ ಉತ್ತಮ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಾರೆ. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಸಮಾಜದ ಬೆಳವಣಿಗೆಗೆ ಕಾರಣಕರ್ತರಾಗುತ್ತಾರೆ. ಇಂದು ನನಗೆ ಕೊಟ್ಟಿರುವ ವಿಷಯವಿದು. 

“ಅಂತಹ ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಸಮಾಜದ ಪಾತ್ರ”
ಸಮಾಜದಲ್ಲಿ ಎರಡು ವೃತ್ತಿಗಳು ಬಹಳ ಮಹತ್ವಪೂರ್ಣವಾಗಿವೆ. ಒಂದು ವೈದ್ಯ ವೃತ್ತಿ, ಇನ್ನೊಂದು ಶಿಕ್ಷಕ ವೃತ್ತಿ. ವೈದ್ಯ ಜೀವ ಕೊಟ್ಟರೆ, ಶಿಕ್ಷಕರು ಜೀವನ ಕೊಡುತ್ತಾರೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದಿನ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಕರು ಮಕ್ಕಳಿಗೆ ಬದುಕನ್ನು ಕಟ್ಟಿಕೊಳ್ಳಲು ಹೇಳಿಕೊಡುವ ಮಾರ್ಗದರ್ಶಕರಾಗಿರುತ್ತಾರೆ. 

ಮರಿಯಾ ಮಾಂಟೆಸ್ಸೊರಿ, ಆಂಟನ್ ಮಕರೆಂಕೊ, ಗಿಜುಭಾಯ್ ಬಡೇಕಾ, ಆನ್ ಸುಲೀವನ್ ರಂತಹ ಶಿಕ್ಷಕರು ನಮ್ಮ ಸಮಾಜಕ್ಕೆ ಅಗತ್ಯ. ಮಾಂಟೆಸ್ಸೊರಿ ವಿಧಾನವೆನ್ನುವ ಶಿಕ್ಷಣ ಕ್ರಮವನ್ನು ರೂಪಿಸಿದ ಮರಿಯಾರವರು ಮಕ್ಕಳಿಗೆ ಹೊರೆಯಾಗದಂತೆ, ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡುವುದನ್ನು ಹೇಳಿಕೊಟ್ಟರು. ಬುದ್ಧಿಮಾಂದ್ಯ ಮಕ್ಕಳನ್ನು ಸಹ ಉತ್ತಮವಾಗಿ ತಿದ್ದಿದರು. ಮಕರೆಂಕೊ ರಷ್ಯಾದ ಯುದ್ಧಾನಂತರದ ಪರಿಸ್ಥಿತಿಯಲ್ಲಿ ಅನಾಥ ಮಕ್ಕಳು - ಭಿಕ್ಷುಕರಾಗಿದ್ದವರು, ಕಳ್ಳರಾಗಿದ್ದವರು, ವೇಶ್ಯಾವಾಟಿಕೆಯಲ್ಲಿದ್ದಂತಹ ಮಕ್ಕಳನ್ನು ತೆಗೆದುಕೊಂಡು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರು. ಗಿಜುಭಾಯ್ ಬಡೇಕಾ ಮಾಂಟೆಸ್ಸೊರಿ ವಿಧಾನವನ್ನು ಗುಜರಾತ್‍ನಲ್ಲಿ ಮಾಡಿ ತೋರಿಸಿದವರು. ಸರ್ಕಾರಿ ಶಾಲೆ ಮಕ್ಕಳು ಯಾವ ಮಟ್ಟಕ್ಕೆ ಬೇಕಾದರೂ ಏರಬಲ್ಲರು ಎಂಬುದನ್ನು ತೋರಿಸಿಕೊಟ್ಟರು. ಆನ್ ಸುಲೀವನ್ ಹೆಲೆನ್ ಕೆಲ್ಲರ್ ರವರ ಗುರುಗಳು. ಕಿವುಡಿ, ಮೂಕಿ, ಕುರುಡಿಯಾಗಿದ್ದ ಹೆಲೆನ್ ರನ್ನು ನೋಡಿಕೊಳ್ಳಲು ಬಂದಾಕೆ ಸ್ಪರ್ಶ ಜ್ಞಾನದ ಮೂಲಕ ಆಕೆಗೆ ಜ್ಞಾನ ನೀಡಿದ್ದಲ್ಲದೆ, ಮಾತನಾಡಲು ಸಾಧ್ಯವಾಗುವಂತೆ ಮಾಡಿದರು. 

ಯಾವುದೇ ಸಮಾಜಕ್ಕೆ ಇಂತಹ ಶಿಕ್ಷಕರು ಬೇಕು. ಆದರೆ ನಮ್ಮ ಸಮಾಜದಲ್ಲಿನ ಶಿಕ್ಷಣ ವ್ಯವಸ್ಥೆಯ ಚಿತ್ರಣವೇನು? ಇಲ್ಲಿ ಕೆಲಸ ಮಾಡುವ ಶಿಕ್ಷಕರು ಮಾಂಟೆಸ್ಸೊರಿಯಂತೆ ಆಗಬಲ್ಲರೇನು. 

ಒಂದೆಡೆ ಶಿಕ್ಷಣದ ಬಗೆಗಿನ ಸಮಾಜದ ಧೋರಣೆ. ಶಿಕ್ಷಣವೆಂದರೆ ಅಂಕಗಳಿಕೆ. ಸಿಕ್ಕಾಪಟ್ಟೆ ಸಿಲಬಸ್ ಓದಿ, ಹೆಚ್ಚು ಅಂಕ ಗಳಿಸಬೇಕು. ಹೆಚ್ಚು ಹೊರೆ ಹೊತ್ತು, ಟ್ಯೂಷನ್‍ಗೆ ಕಳಿಸಿ, ಕಲೆ, ಸಂಗೀತ, ನಾಟಕ, ಸಾಹಿತ್ಯ, ಕ್ರೀಡೆ ಎಲ್ಲವನ್ನೂ ದೂರವಿಟ್ಟು ಕೇವಲ ಓದಬೇಕು. ಶಾಲೆಯಲ್ಲೂ ಹಾಗೆಯೇ, ಮನೆಯಲ್ಲಿ, ಸಮಾಜದಲ್ಲಿ ಗುರುತಿಸುವಿಕೆ ಅಂಕಗಳಿಂದ. ಒಟ್ಟು ಇದು ಹುಚ್ಚು ಓಟದಂತೆ. 

ಜೊತೆಗೆ ಮನೆಯವರ ಧೋರಣೆ. ತಮ್ಮ ಮಕ್ಕಳೇ ಶ್ರೇಷ್ಟ, ಯಾವಾಗಲೂ ಮೊದಲಿರಬೇಕು. ಶಿಕ್ಷಕರು ತಿದ್ದಲು ಹೋದರೆ ಅದಕ್ಕೆ ವಿರೋಧ, ಇಲ್ಲವೇ ಬೆದರಿಕೆ. ಶಿಕ್ಷಕರು ಹೇಗೆ ತಿದ್ದಬೇಕು?

ಇದರೊಂದಿಗೆ, ಶಿಕ್ಷಕರಿಗಿರುವ ಕೆಲಸಗಳು. ಬಿಸಿಯೂಟ, ವರದಿ ಸಲ್ಲಿಕೆ, ರೆಕಾರ್ಡ್ ನಿರ್ವಹಣೆ, ಜನಗಣತಿ, ಚುನಾವಣಾ ಕಾರ್ಯಗಳು ಇತ್ಯಾದಿ. ಅದರ ಮೇಲೆ ಬಹಳಷ್ಟು ಶಾಲೆಗಳು – ಏಕೋಪಾಧ್ಯಾಯ ಶಾಲೆಗಳು. ಶಾಲಾ ಕಾಲೇಜುಗಳಲ್ಲಿ ಅವಶ್ಯವಿರುವಷ್ಟು ಶಿಕ್ಷಕರು ಇಲ್ಲ. ತಂದೆ ತಾಯಿಗಳು, ಪೋಷಕರು, ಸಮಾಜದ ಇತರರು ಇದರ ಬಗ್ಗೆ ಆಲೋಚಿಸಿದ್ದಾರೆಯೇ?

ಮೇಲಾಗಿ ಪ್ರಾಥಮಿಕ ಹಂತಕ್ಕೆ ಹೇಳಿಕೊಡುವ ಶಿಕ್ಷಕರು ಚಿಕ್ಕ ವಯಸ್ಸಿನವರು, ಅನನುಭವಿಗಳು, ಹೆಚ್ಚು ಓದಿಲ್ಲದೇ ಇರುವವರು. ವಾಸ್ತವವಾಗಿ ಬಹಳಷ್ಟು ದೇಶಗಳಲ್ಲಿ ಪ್ರಾಥಮಿಕ ಹಂತಕ್ಕೆ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಗಳಿಸಿರಲೇಬೇಕು.

ಇಷ್ಟೆಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಶಿಕ್ಷಕರು ಉತ್ತಮ ಶಿಕ್ಷಕರಲ್ಲ, ಅವರಿಗೆ ಸಂಬಳ ದಂಡ ಇತ್ಯಾದಿ ಮಾತುಕತೆ. ಖಾಸಗಿ ಶಾಲೆಗಳಿಗೆ ಹೋಲಿಸಿಕೊಂಡಾಗ, ಸರ್ಕಾರಿ ಶಾಲೆಗಳಲ್ಲಿ ಸಂಬಳ ಪರವಾಗಿಲ್ಲ ಎನಿಸಿದರೂ, ಅದು ಸಾಕಾಗುವುದಿಲ್ಲ. ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಇದರ ಜೊತೆಗೆ ಸರ್ಕಾರಿ ಶಿಕ್ಷಕರ ಮೇಲೆ ಇನ್ನೊಂದು ತೂಗುಗತ್ತಿ – ವಿದ್ಯಾರ್ಥಿಗಳು ನಪಾಸಾದರೆ ನಿಮ್ಮ ಇಂಕ್ರಿಮೆಂಟ್ ಕಟ್ ಎಂದು. 85 % ಬಂದಿರುವ ವಿದ್ಯಾರ್ಥಿಗೆ 90% ಕೊಡಿಸುವುದು ಹೆಚ್ಚಲ್ಲ, ಆದರೆ ಫೇಲಾದ ಅಥವಾ 35% ಬಂದವರಿಗೆ 60% ಕೊಡುವುದು ಬಹಳ ಮೇಲು. 

ಇಲ್ಲಿ ಶಿಕ್ಷಕರಲ್ಲಿ ದೋಷವಿಲ್ಲವೆಂದಲ್ಲ. ಇದ್ದಾರೆ, ಪಾಠ ಮಾಡದೆ, ಬಡ್ಡಿ ವ್ಯಾಪಾರ ಮಾಡುತ್ತಾ ಓಡಾಡುವವರು. ಆದರೆ ಅವರ ಸಂಖ್ಯೆ ಎಷ್ಟು. 10% ಅಥವಾ 20% ಅಥವಾ 30%. ಹಾಗಿದ್ದರೆ ಉಳಿದ 60-70% ಶಿಕ್ಷಕರು ಪಾಠ ಮಾಡುವವರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಯತ್ನಿಸುವವರೇ. ಆದರೆ ಅವರ ಕ್ರಿಯಾಶೀಲತೆಗೆ, ಅವರ ಧೈರ್ಯಕ್ಕೆ, ವಿದ್ಯಾರ್ಥಿಗಳನ್ನು ತಿದ್ದಬೇಕೆನ್ನುವ ಅವರ ತಪನಕ್ಕೆ ಸಮಾಜದ ಬೆಂಬಲವಿದೆಯೇ. ವಿದ್ಯಾರ್ಥಿಗಳನ್ನು ನೀನು ತಪ್ಪು ಮಾಡಿದ್ದೀಯ, ಪೋಷಕರನ್ನು ಕರೆದು ತಾ ಎಂದರೆ ಅವನು/ಅವಳು ಯಾರಿಂದಲೊ ಫೋನ್ ಮಾಡಿಸುತ್ತಾರೆ, ಬೆದರಿಕೆ ಒಡ್ಡುತ್ತಾರೆ, ಇಲ್ಲ ಬಲಹೀನ ಮನಸುಳ್ಳವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಎಲ್ಲೆಡೆಯೂ ಸಿಕ್ಕಿಹಾಕಿಕೊಳ್ಳುವುದು ಶಿಕ್ಷಕರೇ. 

ಒಳ್ಳೆಯದನ್ನು ಮಾಡಲೆತ್ನಿಸುವವರನ್ನು ವ್ಯವಸ್ಥೆ ಬಲಿಪಶು ಮಾಡುತ್ತದೆ. ಊರಿನ ಜನ ನೋಡುತ್ತಿರುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಶಿಕ್ಷಕರು ಹೋರಾಟ ನಡೆಸುತ್ತಾ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಆದರೆ ಅವರು ಇನ್ನಷ್ಟು ಉತ್ತಮಗೊಳ್ಳಲು ಸಮಾಜದ ಬೆಂಬಲವಿಲ್ಲದೆ ಸಾಧ್ಯವಿಲ್ಲ. ಸಮಾಜ ಭ್ರಷ್ಟವಾದರೆ ಶಿಕ್ಷಕರ ಮೇಲೆ ಅದರ ಪರಿಣಾಮ ಇಲ್ಲದಿರಲು ಸಾಧ್ಯವೇ. ಸಮಾಜ ಚೆನ್ನಾಗಿದ್ದರೆ ಉತ್ತಮ ಶಿಕ್ಷಕರ ರೂಪಿಸುವಿಕೆ ಸಾಧ್ಯ.

ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಮಯದಲ್ಲಿ ಹೋರಾಟಗಾರರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ರಾಷ್ಟ್ರೀಯ ಶಾಲೆ ಕಾಲೇಜುಗಳನ್ನು ತೆರೆದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದ, ಹೋರಾಟಗಾರರನ್ನು ತಯಾರಿಸಿದ ಗುರುವೃಂದ ಬಂತಾಗ. ಆಗ ನಮ್ಮ ದೇಶದಲ್ಲಿ ಬಂದಂತಹ ವಿಜ್ಞಾನಿಗಳಂತಹವರನ್ನು, ಹೋರಾಟಗಾರರಂತಹವರನ್ನು, ಈಗ ಶಿಕ್ಷಣ ವ್ಯವಸ್ಥೆ ಯಾಕೆ ರೂಪಿಸಲು ಸಾಧ್ಯವಾಗುತ್ತಿಲ್ಲ.

ಯಾವುದೇ ದೇಶ ಪ್ರಗತಿ ಸಾಧಿಸಬೇಕೆಂದರೆ ಮೊದಲ ಆದ್ಯತೆ ಕೊಡಬೇಕಾಗಿರುವುದು ಶಿಕ್ಷಣಕ್ಕೆ. ಉದಾಹರಣೆಗೆ ಇತ್ತೀಚಿನ ದಿನದಲ್ಲಿ ಫಿನ್‍ಲ್ಯಾಂಡ್ ವಿಶ್ವದಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು, ಶಿಕ್ಷಕರನ್ನು ಹೊಂದಿದೆ. 40 ವರ್ಷಗಳ ಹಿಂದೆ ಫಿನ್‍ಲ್ಯಾಂಡ್ ಹಲವಾರು ಸಮಸ್ಯೆಗಳಿದ್ದಂತಹ ದೇಶ. ಆದರೆ ಸಮಾಜ, ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡಲು ಇಚ್ಛಿಸಿತು. ಹಾಗಾಗಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಿತು. ಆದ್ದರಿಂದ ಶಿಕ್ಷಣದ ರೂಪುರೇಷೆಯನ್ನು ಬದಲಾಯಿಸಿದರು. ಈಗ ಅಲ್ಲಿ ಪ್ರಗತಿ ಇದೆ, ಅಪರಾಧದ ಸಂಖ್ಯೆ ಕಡಿಮೆ ಇದೆ, ಭ್ರಷ್ಟಾಚಾರ ಕಡಿಮೆ ಇದೆ. 

ಅಂತಹ ಬದಲಾವಣೆ ನಮ್ಮಲ್ಲೂ ಬರಬೇಕೆಂದರೆ, ನಮ್ಮ ಸರ್ಕಾರವೂ ಅಂತಹ ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜ ಅದಕ್ಕೆ ಆಗ್ರಹಿಸಬೇಕು. ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಲು ತನ್ನ ಸಲಹೆಗಳನ್ನು ಕೊಡಬೇಕು. ಅಂತಹ ಸಮಾಜದಲ್ಲಿ ಮಾತ್ರ ಉತ್ತಮ ಶಿಕ್ಷಕರು ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದುಬರುತ್ತಾರೆ. ಅವರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ಆ ಪ್ರಜೆಗಳು ಸಮಾಜದ ಪ್ರಗತಿಗೆ ಕೆಲಸ ಮಾಡುತ್ತಾರೆ. ಉತ್ತಮ ಸಮಾಜ ರೂಪಿಸುತ್ತಾರೆ. 

ಅಂತಹ ಕಾರ್ಯದಲ್ಲಿ ನಾವೆಲ್ಲರೂ ನಮ್ಮ ಕೈಲಾದ ರೀತಿಯಲ್ಲಿ ಭಾಗವಹಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.
(ಕೊಳ್ಳೇಗಾಲದ ಲಯನ್ಸ್ ಕ್ಲಬ್ ನವರು ಸಂಘಟಿಸಿದ ಶಿಕ್ಷಕರ ದಿನಾಚರಣೆಯಂದು ಮಾಡಿದ ಭಾಷಣ) 
- ಸುಧಾ ಜಿ