Pages

ಶಾಲಾ ಡೈರಿ - ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಸಮಾಜದ ಪಾತ್ರ



ಅಮೇರಿಕಾದ ಪ್ರಸಿದ್ಧ ಬರಹಗಾರರಾದ ಮಾರ್ಕ್ ಟ್ವೇನ್‍ರವರು “ಶಾಲೆಯೊಂದನ್ನು ತೆರೆಯಿರಿ, ಜೈಲೊಂದನ್ನು ಮುಚ್ಚಿರಿ” ಎಂದಿದ್ದಾರೆ. ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ತರಗತಿಗಳಲ್ಲ, ಪ್ರಯೋಗಾಲಯ, ಗ್ರಂಥಾಲಯಗಳಲ್ಲ. ಬದಲಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾಗುವ ಶಿಕ್ಷಕರು. ಏಕೆಂದರೆ ಉತ್ತಮ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಾರೆ. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಸಮಾಜದ ಬೆಳವಣಿಗೆಗೆ ಕಾರಣಕರ್ತರಾಗುತ್ತಾರೆ. ಇಂದು ನನಗೆ ಕೊಟ್ಟಿರುವ ವಿಷಯವಿದು. 

“ಅಂತಹ ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಸಮಾಜದ ಪಾತ್ರ”
ಸಮಾಜದಲ್ಲಿ ಎರಡು ವೃತ್ತಿಗಳು ಬಹಳ ಮಹತ್ವಪೂರ್ಣವಾಗಿವೆ. ಒಂದು ವೈದ್ಯ ವೃತ್ತಿ, ಇನ್ನೊಂದು ಶಿಕ್ಷಕ ವೃತ್ತಿ. ವೈದ್ಯ ಜೀವ ಕೊಟ್ಟರೆ, ಶಿಕ್ಷಕರು ಜೀವನ ಕೊಡುತ್ತಾರೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದಿನ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಕರು ಮಕ್ಕಳಿಗೆ ಬದುಕನ್ನು ಕಟ್ಟಿಕೊಳ್ಳಲು ಹೇಳಿಕೊಡುವ ಮಾರ್ಗದರ್ಶಕರಾಗಿರುತ್ತಾರೆ. 

ಮರಿಯಾ ಮಾಂಟೆಸ್ಸೊರಿ, ಆಂಟನ್ ಮಕರೆಂಕೊ, ಗಿಜುಭಾಯ್ ಬಡೇಕಾ, ಆನ್ ಸುಲೀವನ್ ರಂತಹ ಶಿಕ್ಷಕರು ನಮ್ಮ ಸಮಾಜಕ್ಕೆ ಅಗತ್ಯ. ಮಾಂಟೆಸ್ಸೊರಿ ವಿಧಾನವೆನ್ನುವ ಶಿಕ್ಷಣ ಕ್ರಮವನ್ನು ರೂಪಿಸಿದ ಮರಿಯಾರವರು ಮಕ್ಕಳಿಗೆ ಹೊರೆಯಾಗದಂತೆ, ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡುವುದನ್ನು ಹೇಳಿಕೊಟ್ಟರು. ಬುದ್ಧಿಮಾಂದ್ಯ ಮಕ್ಕಳನ್ನು ಸಹ ಉತ್ತಮವಾಗಿ ತಿದ್ದಿದರು. ಮಕರೆಂಕೊ ರಷ್ಯಾದ ಯುದ್ಧಾನಂತರದ ಪರಿಸ್ಥಿತಿಯಲ್ಲಿ ಅನಾಥ ಮಕ್ಕಳು - ಭಿಕ್ಷುಕರಾಗಿದ್ದವರು, ಕಳ್ಳರಾಗಿದ್ದವರು, ವೇಶ್ಯಾವಾಟಿಕೆಯಲ್ಲಿದ್ದಂತಹ ಮಕ್ಕಳನ್ನು ತೆಗೆದುಕೊಂಡು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರು. ಗಿಜುಭಾಯ್ ಬಡೇಕಾ ಮಾಂಟೆಸ್ಸೊರಿ ವಿಧಾನವನ್ನು ಗುಜರಾತ್‍ನಲ್ಲಿ ಮಾಡಿ ತೋರಿಸಿದವರು. ಸರ್ಕಾರಿ ಶಾಲೆ ಮಕ್ಕಳು ಯಾವ ಮಟ್ಟಕ್ಕೆ ಬೇಕಾದರೂ ಏರಬಲ್ಲರು ಎಂಬುದನ್ನು ತೋರಿಸಿಕೊಟ್ಟರು. ಆನ್ ಸುಲೀವನ್ ಹೆಲೆನ್ ಕೆಲ್ಲರ್ ರವರ ಗುರುಗಳು. ಕಿವುಡಿ, ಮೂಕಿ, ಕುರುಡಿಯಾಗಿದ್ದ ಹೆಲೆನ್ ರನ್ನು ನೋಡಿಕೊಳ್ಳಲು ಬಂದಾಕೆ ಸ್ಪರ್ಶ ಜ್ಞಾನದ ಮೂಲಕ ಆಕೆಗೆ ಜ್ಞಾನ ನೀಡಿದ್ದಲ್ಲದೆ, ಮಾತನಾಡಲು ಸಾಧ್ಯವಾಗುವಂತೆ ಮಾಡಿದರು. 

ಯಾವುದೇ ಸಮಾಜಕ್ಕೆ ಇಂತಹ ಶಿಕ್ಷಕರು ಬೇಕು. ಆದರೆ ನಮ್ಮ ಸಮಾಜದಲ್ಲಿನ ಶಿಕ್ಷಣ ವ್ಯವಸ್ಥೆಯ ಚಿತ್ರಣವೇನು? ಇಲ್ಲಿ ಕೆಲಸ ಮಾಡುವ ಶಿಕ್ಷಕರು ಮಾಂಟೆಸ್ಸೊರಿಯಂತೆ ಆಗಬಲ್ಲರೇನು. 

ಒಂದೆಡೆ ಶಿಕ್ಷಣದ ಬಗೆಗಿನ ಸಮಾಜದ ಧೋರಣೆ. ಶಿಕ್ಷಣವೆಂದರೆ ಅಂಕಗಳಿಕೆ. ಸಿಕ್ಕಾಪಟ್ಟೆ ಸಿಲಬಸ್ ಓದಿ, ಹೆಚ್ಚು ಅಂಕ ಗಳಿಸಬೇಕು. ಹೆಚ್ಚು ಹೊರೆ ಹೊತ್ತು, ಟ್ಯೂಷನ್‍ಗೆ ಕಳಿಸಿ, ಕಲೆ, ಸಂಗೀತ, ನಾಟಕ, ಸಾಹಿತ್ಯ, ಕ್ರೀಡೆ ಎಲ್ಲವನ್ನೂ ದೂರವಿಟ್ಟು ಕೇವಲ ಓದಬೇಕು. ಶಾಲೆಯಲ್ಲೂ ಹಾಗೆಯೇ, ಮನೆಯಲ್ಲಿ, ಸಮಾಜದಲ್ಲಿ ಗುರುತಿಸುವಿಕೆ ಅಂಕಗಳಿಂದ. ಒಟ್ಟು ಇದು ಹುಚ್ಚು ಓಟದಂತೆ. 

ಜೊತೆಗೆ ಮನೆಯವರ ಧೋರಣೆ. ತಮ್ಮ ಮಕ್ಕಳೇ ಶ್ರೇಷ್ಟ, ಯಾವಾಗಲೂ ಮೊದಲಿರಬೇಕು. ಶಿಕ್ಷಕರು ತಿದ್ದಲು ಹೋದರೆ ಅದಕ್ಕೆ ವಿರೋಧ, ಇಲ್ಲವೇ ಬೆದರಿಕೆ. ಶಿಕ್ಷಕರು ಹೇಗೆ ತಿದ್ದಬೇಕು?

ಇದರೊಂದಿಗೆ, ಶಿಕ್ಷಕರಿಗಿರುವ ಕೆಲಸಗಳು. ಬಿಸಿಯೂಟ, ವರದಿ ಸಲ್ಲಿಕೆ, ರೆಕಾರ್ಡ್ ನಿರ್ವಹಣೆ, ಜನಗಣತಿ, ಚುನಾವಣಾ ಕಾರ್ಯಗಳು ಇತ್ಯಾದಿ. ಅದರ ಮೇಲೆ ಬಹಳಷ್ಟು ಶಾಲೆಗಳು – ಏಕೋಪಾಧ್ಯಾಯ ಶಾಲೆಗಳು. ಶಾಲಾ ಕಾಲೇಜುಗಳಲ್ಲಿ ಅವಶ್ಯವಿರುವಷ್ಟು ಶಿಕ್ಷಕರು ಇಲ್ಲ. ತಂದೆ ತಾಯಿಗಳು, ಪೋಷಕರು, ಸಮಾಜದ ಇತರರು ಇದರ ಬಗ್ಗೆ ಆಲೋಚಿಸಿದ್ದಾರೆಯೇ?

ಮೇಲಾಗಿ ಪ್ರಾಥಮಿಕ ಹಂತಕ್ಕೆ ಹೇಳಿಕೊಡುವ ಶಿಕ್ಷಕರು ಚಿಕ್ಕ ವಯಸ್ಸಿನವರು, ಅನನುಭವಿಗಳು, ಹೆಚ್ಚು ಓದಿಲ್ಲದೇ ಇರುವವರು. ವಾಸ್ತವವಾಗಿ ಬಹಳಷ್ಟು ದೇಶಗಳಲ್ಲಿ ಪ್ರಾಥಮಿಕ ಹಂತಕ್ಕೆ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಗಳಿಸಿರಲೇಬೇಕು.

ಇಷ್ಟೆಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಶಿಕ್ಷಕರು ಉತ್ತಮ ಶಿಕ್ಷಕರಲ್ಲ, ಅವರಿಗೆ ಸಂಬಳ ದಂಡ ಇತ್ಯಾದಿ ಮಾತುಕತೆ. ಖಾಸಗಿ ಶಾಲೆಗಳಿಗೆ ಹೋಲಿಸಿಕೊಂಡಾಗ, ಸರ್ಕಾರಿ ಶಾಲೆಗಳಲ್ಲಿ ಸಂಬಳ ಪರವಾಗಿಲ್ಲ ಎನಿಸಿದರೂ, ಅದು ಸಾಕಾಗುವುದಿಲ್ಲ. ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಇದರ ಜೊತೆಗೆ ಸರ್ಕಾರಿ ಶಿಕ್ಷಕರ ಮೇಲೆ ಇನ್ನೊಂದು ತೂಗುಗತ್ತಿ – ವಿದ್ಯಾರ್ಥಿಗಳು ನಪಾಸಾದರೆ ನಿಮ್ಮ ಇಂಕ್ರಿಮೆಂಟ್ ಕಟ್ ಎಂದು. 85 % ಬಂದಿರುವ ವಿದ್ಯಾರ್ಥಿಗೆ 90% ಕೊಡಿಸುವುದು ಹೆಚ್ಚಲ್ಲ, ಆದರೆ ಫೇಲಾದ ಅಥವಾ 35% ಬಂದವರಿಗೆ 60% ಕೊಡುವುದು ಬಹಳ ಮೇಲು. 

ಇಲ್ಲಿ ಶಿಕ್ಷಕರಲ್ಲಿ ದೋಷವಿಲ್ಲವೆಂದಲ್ಲ. ಇದ್ದಾರೆ, ಪಾಠ ಮಾಡದೆ, ಬಡ್ಡಿ ವ್ಯಾಪಾರ ಮಾಡುತ್ತಾ ಓಡಾಡುವವರು. ಆದರೆ ಅವರ ಸಂಖ್ಯೆ ಎಷ್ಟು. 10% ಅಥವಾ 20% ಅಥವಾ 30%. ಹಾಗಿದ್ದರೆ ಉಳಿದ 60-70% ಶಿಕ್ಷಕರು ಪಾಠ ಮಾಡುವವರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಯತ್ನಿಸುವವರೇ. ಆದರೆ ಅವರ ಕ್ರಿಯಾಶೀಲತೆಗೆ, ಅವರ ಧೈರ್ಯಕ್ಕೆ, ವಿದ್ಯಾರ್ಥಿಗಳನ್ನು ತಿದ್ದಬೇಕೆನ್ನುವ ಅವರ ತಪನಕ್ಕೆ ಸಮಾಜದ ಬೆಂಬಲವಿದೆಯೇ. ವಿದ್ಯಾರ್ಥಿಗಳನ್ನು ನೀನು ತಪ್ಪು ಮಾಡಿದ್ದೀಯ, ಪೋಷಕರನ್ನು ಕರೆದು ತಾ ಎಂದರೆ ಅವನು/ಅವಳು ಯಾರಿಂದಲೊ ಫೋನ್ ಮಾಡಿಸುತ್ತಾರೆ, ಬೆದರಿಕೆ ಒಡ್ಡುತ್ತಾರೆ, ಇಲ್ಲ ಬಲಹೀನ ಮನಸುಳ್ಳವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಎಲ್ಲೆಡೆಯೂ ಸಿಕ್ಕಿಹಾಕಿಕೊಳ್ಳುವುದು ಶಿಕ್ಷಕರೇ. 

ಒಳ್ಳೆಯದನ್ನು ಮಾಡಲೆತ್ನಿಸುವವರನ್ನು ವ್ಯವಸ್ಥೆ ಬಲಿಪಶು ಮಾಡುತ್ತದೆ. ಊರಿನ ಜನ ನೋಡುತ್ತಿರುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಶಿಕ್ಷಕರು ಹೋರಾಟ ನಡೆಸುತ್ತಾ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಆದರೆ ಅವರು ಇನ್ನಷ್ಟು ಉತ್ತಮಗೊಳ್ಳಲು ಸಮಾಜದ ಬೆಂಬಲವಿಲ್ಲದೆ ಸಾಧ್ಯವಿಲ್ಲ. ಸಮಾಜ ಭ್ರಷ್ಟವಾದರೆ ಶಿಕ್ಷಕರ ಮೇಲೆ ಅದರ ಪರಿಣಾಮ ಇಲ್ಲದಿರಲು ಸಾಧ್ಯವೇ. ಸಮಾಜ ಚೆನ್ನಾಗಿದ್ದರೆ ಉತ್ತಮ ಶಿಕ್ಷಕರ ರೂಪಿಸುವಿಕೆ ಸಾಧ್ಯ.

ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಮಯದಲ್ಲಿ ಹೋರಾಟಗಾರರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ರಾಷ್ಟ್ರೀಯ ಶಾಲೆ ಕಾಲೇಜುಗಳನ್ನು ತೆರೆದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದ, ಹೋರಾಟಗಾರರನ್ನು ತಯಾರಿಸಿದ ಗುರುವೃಂದ ಬಂತಾಗ. ಆಗ ನಮ್ಮ ದೇಶದಲ್ಲಿ ಬಂದಂತಹ ವಿಜ್ಞಾನಿಗಳಂತಹವರನ್ನು, ಹೋರಾಟಗಾರರಂತಹವರನ್ನು, ಈಗ ಶಿಕ್ಷಣ ವ್ಯವಸ್ಥೆ ಯಾಕೆ ರೂಪಿಸಲು ಸಾಧ್ಯವಾಗುತ್ತಿಲ್ಲ.

ಯಾವುದೇ ದೇಶ ಪ್ರಗತಿ ಸಾಧಿಸಬೇಕೆಂದರೆ ಮೊದಲ ಆದ್ಯತೆ ಕೊಡಬೇಕಾಗಿರುವುದು ಶಿಕ್ಷಣಕ್ಕೆ. ಉದಾಹರಣೆಗೆ ಇತ್ತೀಚಿನ ದಿನದಲ್ಲಿ ಫಿನ್‍ಲ್ಯಾಂಡ್ ವಿಶ್ವದಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು, ಶಿಕ್ಷಕರನ್ನು ಹೊಂದಿದೆ. 40 ವರ್ಷಗಳ ಹಿಂದೆ ಫಿನ್‍ಲ್ಯಾಂಡ್ ಹಲವಾರು ಸಮಸ್ಯೆಗಳಿದ್ದಂತಹ ದೇಶ. ಆದರೆ ಸಮಾಜ, ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡಲು ಇಚ್ಛಿಸಿತು. ಹಾಗಾಗಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಿತು. ಆದ್ದರಿಂದ ಶಿಕ್ಷಣದ ರೂಪುರೇಷೆಯನ್ನು ಬದಲಾಯಿಸಿದರು. ಈಗ ಅಲ್ಲಿ ಪ್ರಗತಿ ಇದೆ, ಅಪರಾಧದ ಸಂಖ್ಯೆ ಕಡಿಮೆ ಇದೆ, ಭ್ರಷ್ಟಾಚಾರ ಕಡಿಮೆ ಇದೆ. 

ಅಂತಹ ಬದಲಾವಣೆ ನಮ್ಮಲ್ಲೂ ಬರಬೇಕೆಂದರೆ, ನಮ್ಮ ಸರ್ಕಾರವೂ ಅಂತಹ ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜ ಅದಕ್ಕೆ ಆಗ್ರಹಿಸಬೇಕು. ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಲು ತನ್ನ ಸಲಹೆಗಳನ್ನು ಕೊಡಬೇಕು. ಅಂತಹ ಸಮಾಜದಲ್ಲಿ ಮಾತ್ರ ಉತ್ತಮ ಶಿಕ್ಷಕರು ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದುಬರುತ್ತಾರೆ. ಅವರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ಆ ಪ್ರಜೆಗಳು ಸಮಾಜದ ಪ್ರಗತಿಗೆ ಕೆಲಸ ಮಾಡುತ್ತಾರೆ. ಉತ್ತಮ ಸಮಾಜ ರೂಪಿಸುತ್ತಾರೆ. 

ಅಂತಹ ಕಾರ್ಯದಲ್ಲಿ ನಾವೆಲ್ಲರೂ ನಮ್ಮ ಕೈಲಾದ ರೀತಿಯಲ್ಲಿ ಭಾಗವಹಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.
(ಕೊಳ್ಳೇಗಾಲದ ಲಯನ್ಸ್ ಕ್ಲಬ್ ನವರು ಸಂಘಟಿಸಿದ ಶಿಕ್ಷಕರ ದಿನಾಚರಣೆಯಂದು ಮಾಡಿದ ಭಾಷಣ) 
- ಸುಧಾ ಜಿ 


1 ಕಾಮೆಂಟ್‌:

RAJIV N. MAGAL ಹೇಳಿದರು...

ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು ಸತ್ಯ...ಆದರೆ, ಆ ವ್ಯವಸ್ಥೆಯ ಬಗ್ಗೆ ಟೀಕೆಗಳು, ಟಿಪ್ಪಣಿಗಳು, ಸಲಹೆಗಳು, ಸೂಚನೆಗಳನ್ನು ನೀಡಬೇಕಾದವರು ಪೋಷಕರು ಮಾತ್ರ...ಕಾರಣ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಶಾಲೆಯ ಅಧ್ಯಾಪಕರು ಕಾಮೆ೦ಟ್ ಮಾಡುವುದು ಅ೦ದುಕೊ೦ದಷ್ಟು ಸುಲಭವಲ್ಲ...ನೌಕರಿ ಕಳೆದುಕೊಳ್ಳುವ ಭೀತಿಯ ಕಾರಣ. ಈ ಭೀತಿಯಿ೦ದ ನಷ್ಟ ಅನುಭವಿಸುವವರು ವಿದ್ಯಾರ್ಥಿಗಳೇ, ಪೋಷಕರೇ ಹಾಗು ಆ ಶಾಲೆಯ ಟೀಚರ್ ಗಳು ಸಹ.....ಶಾಲೆಯ ಕೀರ್ತಿ ಹಾಗು ಮಕ್ಕಳ ಯಶಸ್ಸು ಇವೆರಡೂ ಒ೦ದೇ ನಾಣ್ಯದ ಎರಡು ಮುಖಗಳಾಗಿರುತ್ತವೆ ಎ೦ಬ ಹಿನ್ನೆಲೆಯಲ್ಲಿ ಶೈಕ್ಷಣಿಕ ಪದ್ದತಿ ಗಟ್ಟಿಮುಟ್ಟಾಗಿರಬೇಕಲ್ಲವೇ? ಅಭಿಪ್ರಾಯಗಳಲ್ಲಿ ವ್ಯತ್ಯಾಸವಿರಬಹುದು ಆದರೆ ಉದ್ದೇಶ ಒ೦ದೇ ಆಗಿರಬೇಕಿದೆ!!!