Pages

ಮೊದಲು ಮಾನವನಾಗು - ಕಲೋಪಾಸಕನಾದ ಸುಧಾರಕ


{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿರುವುದನ್ನು, ಆ ದ್ವೇಷ ದಂಗೆಗಳಾಗಿ ಮಾರ್ಪಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ, ಜೀವಹರಣವಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದ್ವೇಷದಿಂದ ನಾವೇನೂ ಸಾಧಿಸಲು, ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ನಾವು ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ತಮ್ಮ ಹಿತಾಸಕ್ತಿಗಾಗಿ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ನಾವು ನೀವೆಲ್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಅನಿಸಿಕೆ, ಅಭಿಪ್ರಾಯಗಳನ್ನು, ಬರಹಗಳನ್ನು, ಕವನಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಮಹಾನ್ ಕವಿಗಳಲ್ಲೊಬ್ಬರಾದ ಶ್ರೀ ವಿ ಕೃ ಗೋಕಾಕ್ ರವರ ಕವನ}


ಧರ್ಮದ ಹೆಸರಿನಲಿ ಮಾಯವಾಯ್ತು
ನಮ್ಮ ಹಿರಿಮೆಯೆಲ್ಲ!
ಉರುಳುತಿರುವ ಕಾಲಚಕ್ರವನು ಕಾಣದೆ
ನಿಂತಲ್ಲಿಯೆ ನಿಂತು ನಾವು
ನಗೆಗೇಡಿಗಳಾದೆವೆಂದೆ
ಮನ್ವಂತರವನ್ನು ಮರೆತು ಗತಿಯ ಕಾಣದೆ.

ಹಳ್ಳಿಗರನು ಮುರಿವಗೌಡ
ಮೋಸಗೊಳಿಸುವಕ್ಕರಿಗನು
ಜನಗಣತಿಯ ಮದ್ಯ ಕುಡಿದ ರಾಜಕಾರಣಿ
ಧರ್ಮ ಮತದ ಮಣ್ಣು ತುಂಬಿ
ಕಣ್ಣು ಕಳೆಯುತಿರುವ ಕುರುಡ
ಇವರ ಮುರಿದ ದಿನವೆ ನಾಡಿಗಿಹುದು ಪಾರಣೆ.

ಸರಸ್ವತಿಯ ದೊಂಬರಾಟ
ವಿದ್ಯೆಯಿಂದು; ತಳ್ಳಿಬಿಡಿರಿ
ಅನ್ನ ಸಮಸ್ಯೆಯನು ಬಿಡಿಸದಂಥ ವಿದ್ಯೆಯು
ವಿದ್ಯೆಯೆಂತು? ಭ್ರಮೆಯು ಬೇಡ.
ಇದ್ದುದನಿದ್ದಂತೆ ತೋರ
ಲಳಿಯಬಹುದು ಜನದ ಕುಂಭಕರ್ಣ ನಿದ್ರೆಯು.  

ವಿ ಕೃ ಗೋಕಾಕ್      

ಕಾಮೆಂಟ್‌ಗಳಿಲ್ಲ: