Pages

ಕವನ - ಕಾಡಲ್ಲ ಮನದ ಬೀಡು



ನಿನ್ನದು ನಿನಗೆ ನಡಿ...
ಅವನದೆ ಮನೆ, ಮಕ್ಕಳು, ಮಂದಿ.
ಇಲ್ಲಿ ಎಲ್ಲವು ನಂದೆ
ಭ್ರಮಿಸುತ್ತಲೇ
ಬೇಕೆನಿಸಿದ್ದು, ಬೇಡವಾದದ್ದು ಕೊಟ್ಟು
ಬಿಡುಗಡೆ..ಪಡೆದೆ
ಬೇಕಿಲ್ಲ ಕಾಡುಮೇಡು
ಇಲ್ಲೇ ಎಲ್ಲ ಅರಿಯದ್ದು
ಅರಿತಿದ್ದು ಬಸವಳಿದಿದ್ದು
ಓಕರಿಸಿದ್ದು ಅಬ್ಬ ಒಂದೆರೆಡೆ.
ಇಲ್ಲ ಹೋಗಲಿಲ್ಲ
ಅರಸಲಿಲ್ಲ, ಅರಸಿಯಾಗಿ ಅಲ್ಲ...
ಸೇವಕಿಯಾಗಿಯು ಅಲ್ಲ..
ಬೇಯಿಸಿದೆ, ನಾನೇ ಉಣ್ಣಬೇಕಲ್ಲ 
ಉಪ್ಪು ಹುಳಿ ಕಾರ
ಒಪ್ಪ ಓರಣ, ಒಂಥರಾ ಖುಷಿ.
ಮಕ್ಕಳು ಅಮ್ಮ ಬೊಂಬಾಟ್.
ನಗು ಕಣ್ಣಲ್ಲಿ ಮಾತಲ್ಲಿ
ಸಾಕು ಬೇಕಿಲ್ಲ  ಯಾರಗೊಡವೆ.
ತೀರಾ ಗಾಂಧಿತನ ಬೇಡ ಕಂಡ್ರೋ
ಬಚಾಯಿಸಿ ಕೊಳ್ಳಿ
ತೀರ ಇಲ್ಲದವರಿಗೆ ಓಡಿ
ನೆರವಾಗಿ, ಬೇಕಿಲ್ಲ ಜಗವ
ಬದಲಿಸುವ ಮೋಹ 
ನನಗೆ, ನಿಮಗೆ.
ಬದಲಾಗದು. ಗೊತ್ತಲ್ಲವೆ?
ಗಾಂಧಿ, ಬುದ್ದ , ಬಸವ 
ಓದಿದ್ದು , ಬಾಯಿಪಾಟ ಮಾಡಿದ್ದು
ಬೋಧಿಸಿದ್ದು. 
ಇದ್ದುದರಲ್ಲಿ ಕಾಲುಚಾಚು
ಬದುಕು ಕಲಿತು, ಕಲಿಸಿ
ನಡೆಯುತ್ತಲೇ ಇರುವೆ
ಕೆಲವೊಮ್ಮೆ ಸೈಕಲ್ ಲು..
 ಇಂಥವೆ ಪಾಠ ಪ್ರವಚನ.
ಕೇಳೊಲ್ಲ ಯಾರು, 
ಬಿಡೋಲ್ಲ ನಾವು.
ಬೀಳೋದು ಏಳೋದು
ಅವರಿಗೆ ಅವರೆ ಗುರು, ಸಿಸ್ಯ.
ಇಲ್ಲ ನಿನ್ನ ಹಾದಿ ನಂದಲ್ಲ..
ಬೇಕಿಲ್ಲ...
ಕೆಲಸ ಮಾಡು,
ಉಣ್ಣು ನಡಿ, ಉಪದೇಶ ನಂದಲ್ಲ.
ಸಂಗಾತ ನಿನಗೆ ನೀನೆ
ಅರಳು, ಉರಳು, ಹೊರಳು.
ನಕ್ಕು ಹೊರಡು...
ಅಲ್ಲ ನಿನ್ನ ದಾರಿ ನಂದಲ್ಲ .....
ನೀ ಇಲ್ಲದಿರೆ
ಮನೆಯಲ್ಲ ಬಿಕೊ
ಬೇಗ ಬಂದುಬಿಡು
ಪೋನನಲ್ಲಿ ಮಗಳ ಉವಾತ
ಯಾಕೋ ಶುಗರ್
ತುಸ ಹೆಚ್ಚೇ ..ಮರೆಯದೆ
ರೊಟ್ಟಿಗಳೇ ಇರಲಿ.
ದಣಿವೆಂದು ಮರೆಯದಿರು.
ನಾ ಇಲ್ಲದ ಬದುಕು
ನೋಡು, ಅಗ ತಿಳಿಯುತ್ತೆ ...
ನಿರಂತರದ ಅವನಬ್ಬರ..
ಎಲ್ಲೋ ಹರಿಯುವ
ಜುಳುಜುಳು ನೀರು
ಮನಕ್ಕೆ ತಂಪು ತಂಪು
ಇರಲಿ ಮುದ ತೆಕ್ಕೆಗೆ
ಬಾರದಿದ್ದರೇನು...
ಇಲ್ಲ ಈ ನಡೆ ನಿನ್ನದಲ್ಲ
ಇಲ್ಲಿ ಒಂಟಿಯು ಅಲ್ಲ
ಜಂಟಿಯು ಅಲ್ಲ
ಬೇಡದಿದ್ದರು ಒಡಲ ತುಂಬ
ಲಕ್ಷಲಕ್ಷ ಸವಾಲು,
 ನಿಲ್ಲದ ಅಹವಾಲು.
ಎಲ್ಲಕ್ಕು ಸಮಪಾಲು
ಸಮಬಾಳು. 
ಮುಳ್ಳಬೇಲಿಗಳಲಿ
ಓಟ, ಅರಳುವುದಷ್ಟೆ
ಗೊತ್ತಿರುವ ಪಾಟ.
ಲೋಕದ ಜೋಳಿಗೆಯಲಿ ಬೆಲ್ಲವಾಗಿ  
ಮನದ ಹಾದಿಯಲಿ ಕಲ್ಲಾಗಿ
ಮಣ್ಣಿನ ಹೂಜಿಯಲಿ ನೀರಾಗಿ 
ಮಾತುಬಾರದ ಒಲವಿಗೆ ಜೀವವಾದೆನೆ.
ನಡೆ ನಿನ್ನ ದಾರಿಯವಳಲ್ಲ.
ಇರಲಿ ಇಂಥವೇ ನೂರಾರು
ಸಂಕಟ, ದುಮ್ಮಾನಗಳು
ಹರುಷದಿ ಎದೆಗಪ್ಪಿ ಸಂತೈಸಿ
ನಾ ನಡೆವೆನೆ.
ಸವಿತಾ ರವಿಶಂಕರ್

ಕಾಮೆಂಟ್‌ಗಳಿಲ್ಲ: