Pages

ಕವನ - ಹೌದು ನಾ ಸ್ತ್ರೀವಾದಿಯೇ



ವಿರೋಧಿಸಿದಾಗ ಅನ್ಯಾಯವನು 
ಧಿಕ್ಕರಿಸಿದಾಗ ದೌರ್ಜನ್ಯವನು 
ಖಂಡಿಸಿದಾಗ ಕಿರುಕುಳವನು 
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಕಲಿಸಿದರೆ ಮಗನಿಗೆ ಮನೆಗೆಲಸ
ಕಳಿಸಿದರೆ ಮಗಳ ಕರಾಟೆ ಕ್ಲಾಸ
ಮಾಡಿದರೆ ನಾನು ಕಛೇರಿ ಕೆಲಸ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಮನೆಗೆಲಸದಿ ಗಂಡ ಜೊತೆಗಿರಲೆಂದರೆ
ಮನೆಗೆಲಸಕೂ ಸಂಬಳ ಕೊಡಿರೆಂದರೆ
ಮಗನೂ ಮಗಳು ಸಮಾನರೆಂದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಬಸ್ಸಲಿ ಸೀಟಿಗೆ ಆಗ್ರಹಿಸಿದರೆ
ಮೈಮುಟ್ಟಬೇಡಿರೆಂದು ರೇಗಿದರೆ
ರಸ್ತೇಲಿ ಕೀಟಲೆ ಪ್ರತಿಭಟಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ವರದಕ್ಷಿಣೆ ಮದುವೆಗೆ ಬರನೆಂದರೆ
ಬಾಲ್ಯವಿವಾಹ ತಡೆಯಲೆತ್ನಿಸಿದರೆ
ಸ್ತ್ರೀಶಿಶುಹತ್ಯೆ ನಿಲ್ಲಿಸಲೆತ್ನಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಮಗನ ದುರ್ವರ್ತನೆ ತಿದ್ದಿದರೆ
ಗಂಡನ ಕಾಮೆಂಟ್ ಖಂಡಿಸಿದರೆ
ಮಗಳಿಗೆ ಸ್ವಾತಂತ್ರ್ಯವ ನೀಡಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಕಛೇರೀಲಿ ಕಿರುಕುಳ ಪ್ರಶ್ನಿಸಿದರೆ
ಅವಮಾನದ ಕೆಲಸ ಬೇಡವೆಂದರೆ
ಅಧಿಕಾರಿ ಅತ್ಯಾಚಾರ ಧಿಕ್ಕರಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ನ್ಯಾಯವನು ಬಯಸುವುದು
ಸಮಾನತೆಗೆ ಆಗ್ರಹಿಸುವುದು
ಸ್ವಾತಂತ್ರ್ಯವನ್ನು ಕೇಳುವುದು 
ಸ್ತ್ರೀವಾದಿತನದ ಸಂಕೇತವಾದರೆ
ಹೌದು ನಾ ಸ್ತ್ರೀವಾದಿಯೇ!

---ಸುಧಾ ಜಿ

(ಲಿಂಗತಾರತಮ್ಯವಿರದ ಸಮಾಜ ನಮ್ಮ ಗುರಿ)