Pages

ಅನುಭವ - 'ಆತ್ಮಾಲೋಕನದ ಆಸುಪಾಸು'



 ಇಂದಿನ ನನ್ನ ವಿಚಾರ ವಿನಿಮಯವನ್ನು ವರ ಕವಿ ಬೇಂದ್ರೆಯವರ ಸರ್ವಕಾಲಿಕ ಹೇಳಿಕೆಯೊಂದಿಗೆ ಆರಂಭಿಸುವೆ. ಅವರ ನುಡಿ ಮುತ್ತು ಇಂತಿದೆ- ' ನಿನ್ನೊಳಗೆ ನೀ ಹೊಕ್ಕಿ ನಿನ್ನನ್ನು ನೀ ಕಂಡು ನೀನೇ ನೀನಾಗು ಗೆಳೆಯಾ'. ಈ ಹೇಳಿಕೆ ಆತ್ಮಾವಲೋಕನದ ಬಗೆಗೆ ಬಹು ನಿಖರವಾಗಿ, ಸ್ಪಷ್ಟವಾಗಿ ಹೇಳುತ್ತದೆ. ಇಷ್ಟಕ್ಕೂ ಆತ್ಮಾವಲೋಕನ ಎಂದರೇನು? ಅದು ಹೇಗೆ ಮಾಡಬೇಕು? ಅದರಿಂದಾಗುವ ಪ್ರಯೋಜನವೇನು? ಅದನ್ನು ಯಾರು ಮಾಡಬೇಕು? ಯಾವಾಗ ಮಾಡಬೇಕು? ಎಂಬೀ ಪ್ರಶ್ನೆಗಳು ಪುಂಕಾನು ಪುಂಖವಾಗಿ ಮನದಾಳದಲ್ಲಿ ಎದ್ದು, ಮನ ಕೆದಕಿ ಭಾವ ತರಂಗಗಳನ್ನು ಏಳಿಸುತ್ತಿವೆ ಅಲ್ಲವೇ? ನಿಜ ಅದು ಈ ಹೊತ್ತು ಆಗಲೇ ಬೇಕು!!!... ಹಾಗೆ ಆದಾಗಲೇ ವ್ಯಕ್ತಿ ತನ್ನಂತರಾಳಕ್ಕಿಳಿದು ತನ್ನ ತಾ ಹೆಕ್ಕುವುದು ಸಾಧ್ಯವಾದೀತು...

ಯಾರು, ಯಾವಾಗ, ಹೇಗೆ ಬೇಕಾದರೂ ಅವರಿಚ್ಛೆಯಂತೆ ಮಾಡಬಹುದಾದ ಹುಡುಕಾಟವಿದು...  ಆತನ ಅಥವಾ ಆಕೆಯ ಅಂತರಾಳದಲ್ಲಿ ಎನನ್ನು ಹುಡುಕಬೇಕು ಎಂಬುದೇ ಬಹು ದೊಡ್ಡ ಸಮಸ್ಯೆ. ಒಮ್ಮೆ ವ್ಯಕ್ತಿ ತನ್ನೊಳಗನ್ನು ಹುಡುಕಿದರೆ ತನ್ನಲಡಗಿರುವ ಮೂಲ ದ್ರವ್ಯಗಳನ್ನು ಅಂದರೆ ಸಾಮರ್ಥಗಳನ್ನು ಕಂಡುಕೊಳ್ಳಲು ಹಾಗೂ ಮಿತಿಗಳನ್ನು ಗುರುತಿಸುವುದೂ ಕೂಡ ಸಾಧ್ಯ. ಇದರಿಂದಾಗುವ ಪ್ರಯೋಜನ ಮಾತ್ರ ವ್ಯಕ್ತಿಯ ಕಲ್ಪನೆಗೂ ನಿಲುಕದ್ದು.  'ವ್ಯಕ್ತಿ ತನ್ನಲ್ಲಿನ ವಿಶೇಷತೆಗಳನ್ನು ಹೆಕ್ಕಿ ಅವುಗಳನ್ನು ಮೊನಚುಗೊಳಿಸಿ ತನ್ನ ತಾ ವಿಭಿನ್ನವಾಗಿ ಅನಾವರಣಗೊಳಿಸುವ ಹುಡುಕಾಟವೇ ಆತ್ಮಾವಲೋಕನ'. ಇಂತಹಾ ಹುಡುಕಾಟದಿಂದ ವ್ಯಕ್ತಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡು ತನ್ನ ಮಿತಿಯನ್ನು ಮೀರುವುದಕ್ಕೆ ನಾಂದಿಯಾಗುತ್ತದೆ. ಇದರಿಂದ ವ್ಯಕ್ತಿ ವ್ಯಕ್ತಿತ್ವದೆಡೆಗೆ ಚಲಿಸಲೂ ಕೂಡಾ ಸಾಧ್ಯವಾಗುತ್ತದೆ.

ಯಾವ ವ್ಯಕ್ತಿ ತನ್ನ ಅಸ್ಥಿತ್ವ ಸ್ಥಾಪನೆಗೆ ಪ್ರಯತ್ನಿಸುತ್ತಾನೋ/ ಪ್ರಯತ್ನಿಸುತ್ತಾಳೋ ಅಂತಹವರು ಸವಾಲುಗಳನ್ನು ಸ್ವೀಕರಿಸಿ ಅದರ ಸಾಧನೆಯ ಮಾರ್ಗದಲ್ಲಿ ತಮ್ಮ ಮಿತಿಗಳನ್ನು ಮೀರುತ್ತಾರೆ. ತಮ್ಮ ಸಾಮರ್ಥಗಳನ್ನು ವೃದ್ಧಿಸಿಕೊಳ್ಳುತ್ತಲೇ ತನಗಾಗಿ ತನ್ನ ವ್ಯವಸ್ಥೆಯಲ್ಲಿಯೇ ತಾ ಬಯಸಿದ ಸ್ಥರದಲ್ಲಿ ತನ್ನ ತಾ ನೆಲೆಗೊಳಿಸಲು ಕಾರಣೀಕತೃ ಆಗುತ್ತಾನೆ/ಳೆ.ಇದಕ್ಕೆ ಅತ್ಯುತ್ತಮ ಉದಾಹರಣೆ  'ಎಡ್ಮಂಡ್ ಹಿಲರಿ'. ಈತನ ಸಾಧನೆ ಬಗೆಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ಆದರೆ ಆತ ಎದುರುಗೊಂಡ ಎಡರು ತೊಡರುಗಳು, ಒತ್ತಡಗಳು ಮತ್ತು ವೈಫಲ್ಯ ಬಹುತೇಕರಿಗೆ ಪರಿಚಿತವಿಲ್ಲದಿರಬಹುದು.

ಈತ 1952 ರಲ್ಲಿ ಮೌಂಟ್ ಎವರೆಸ್ಟ್ ಶಿಖರವೇರುವ ಪ್ರಯತ್ನದಲ್ಲಿ ವಿಫಲನಾಗ್ತಾನೆ. ಆಗ ಅತಿಯಾದ ನಿರಾಸೆ, ಹತಾಶೆ ಅವನನ್ನು ಕಾಡುತ್ತೆ. ಎಲ್ಲರಲ್ಲಿ ಸೋಲು ಒತ್ತಡವನ್ನು ಹೆಚ್ಚಿಸುವಂತೆ ಆತನಿಗೂ ಆಗುತ್ತೆ. ಆತ ತನ್ನನ್ನು ತಾನು ನಿಭಾಯಿಸಲು ಪ್ರಯತ್ನಿಸುವಾಗಲೇ ಆತನ ಅಭಿಮಾನಿಗಳು ಆತನ ಪ್ರಯತ್ನದಿಂದಲೇ ಪ್ರೇರೇಪಿತರಾಗಿ ಆತನನ್ನು ಸನ್ಮಾನಿಸಲು ತೀರ್ಮಾನಿಸಿ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನವನ್ನ ಕೊಡ್ತಾರೆ. ನಿಮಗಚ್ಚರಿ ಅಲ್ಲವೇ!? ಸೋತವನಿಗೆ ಸನ್ಮಾನವೇ? ಎಂದು!?... ಒಂದು ಮಾತು ನೆನಪಿರಲಿ ಅದುವರೆವಿಗೂ ಅವರು ಏರಿದ ಎತ್ತರವನ್ನು ಯಾರೂ ಏರಲಾಗಿರಲಿಲ್ಲ ಹಾಗೂ ಅದೊಂದು ಕ್ಲಿಷ್ಟಕರ ಸವಾಲು. ಅವರ ಪ್ರಯತ್ನದಲ್ಲಿ ಇಹಲೋಕ ತ್ಯಜಿಸುವ ಎಲ್ಲಾ ಸಾಧ್ಯತೆಗಳೂ ಇತ್ತು... ಆದರೀ ಕಾರ್ಯಕ್ರಮ ಆತನನ್ನ ಸಾಧಕರ ಸಾಲಿನಲ್ಲಿ ನಿಲ್ಲಿಸುವಂತ ನಿರ್ಧಾರಕ್ಕೆ ಆತ ಬರಬಹುದೆಂದು ಸ್ವತಃ ಹಿಲರಿ ಕೂಡ ಅಂದುಕೊಂಡಿರಲಿಕ್ಕಿಲ್ಲ!. ಅಂತಹ ಅದ್ಭುತವಾದ ನಿರ್ಧಾರವನ್ನು ಆತ ತೆಗೆದುಕೊಳ್ಳಲು ಆ ಕಾರ್ಯಕ್ರಮ ನಾಂದಿಯಾಯ್ತು.

ಆ ಸಮಾರಂಭದಲ್ಲಿ ಆತ ಹೇಳಿದ ಮಾತು, ತೆಗೆದುಕೊಂಡ ನಿರ್ಧಾರ, ಮೊದಲ ಪ್ರಯತ್ನದಲ್ಲಿ ಆತ ಎಸಗಿದ ಎಲ್ಲಾ ತಪ್ಪುಗಳಿಗೂ ಸಮರ್ಪಕ ಉತ್ತರ ಕಂಡುಕೊಳ್ಳಲು ಸಹಾಯಕವಾಗುತ್ತೆ ಹಾಗೇಯೇ ತನ್ನಲ್ಲಿನ ಸಾಮರ್ಥ್ಯ ಗುರುತ್ವಗೊಳಿಸಲೂ ಕೂಡ ಕಾರಣವಾಗುತ್ತೆ. ಸಮಾರಂಭದಲ್ಲಿ ಕಾರ್ಯಕ್ರಮ ಆಯೋಜಕರು ನೇತು ಹಾಕಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇ ದಿಟ್ಟಿಸುತ್ತಾ ಹೇಳುವ ಮಾತಾದರೂ ಎಂಥಹದ್ದು ನೋಡಿ ಹೇಗಿದೆ " ಮೌಂಟ್ ಎವರೆಸ್ಟ್ ನೀನು ನನ್ನನ್ನು ಸೋಲಿಸಿರಬಹುದು ಆದರೆ ಒಂದು ಮಾತು ನೆನಪಿಡು, ನೀನು ಬೆಳೆಯುವಷ್ಟು ಬೆಳದಾಗಿದೆ. ನಾನಿನ್ನೂ ಬೆಳೆಯುತ್ತಿದ್ದೇನೆ ಮುಂದಿನ ಸಲ ನಿನ್ನನ್ನು ನನ್ನ ಕಾಲ ಕೆಳಗೆ ಮೆಟ್ಟಿ ನಿಲ್ಲುತ್ತೇನೆ" ಎಂಥಾ ಸವಾಲು? ಎಷ್ಟು ದೃಢ ನಿರ್ಧಾರ?  'ಸೋಲೇ ಗೆಲುವಿನ ಸೋಪಾನ' ಎಂಬ ನುಡಿಗನುಗುಣವಾಗಿ ತನ್ನ ತಾ ಹತಾಶೆಗೆ ತಳ್ಳದೇ ಸೋಲನ್ನೇ ಎದುರಿಸುವ ಪರಿ ಅನುಕರಣೀಯ ಹಾಗೂ ಅನನ್ಯವಾದುದು. ಅದರಂತೆ ಆತ ಸಂಪೂರ್ಣ ಸಿದ್ಧತೆಯೊಂದಿಗೆ 1953 ರಲ್ಲಿ ಮತ್ತೊಂದು ಯತ್ನ ಕೈಗ್ಳೊತಾನೆ. ಫಲಿತಾಂಶವಿಂದು ನಮ್ಮ ಮುಂದಿದೆ.  23.05.1953 ರಲ್ಲಿ ಮೌಂಟ್ ಎವರೆಸ್ಟನ ತುತ್ತ ತುದಿಯಲ್ಲಿ ನಿಂತು ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾ ಹಲವರ ನಂಬಿಕೆಗಳನ್ನು ಹುಸಿ ಮಾಡಿ ಬಿಡ್ತಾನೆ. ' ಸಾಧನೆ ಸಾಧಕನಿಗಲ್ಲದೇ ಮತ್ತಾರಿಗೆ ಒಲಿಯುವುದು' ಹೇಳಿ?.

ಭವಿಷ್ಯದ ಕಡೆಗೆ ಮುಖ ಮಾಡಿರುವ ನಿಮಗೂ ಸಮಸ್ಯೆಗಳು ಕಾಡಬಹುದು, ಸೋಲಿನ ಕಹಿ ನಿಮ್ಮನ್ನು ನಿರಾಸೆಯ ಕೂಪಕ್ಕೆ ತಳ್ಳಬಹುದು. ಅಂತಹಾ ಸಂದರ್ಭಗಳಲ್ಲಿ ಸಮಾಧಾನ ಚಿತ್ತದಿಂದ ಆಗಿರುವ ಪ್ರಯತ್ನಗಳೆಡೆಗೆ ಗಮನ ಹರಿಸಿ, ನಿರಾಸೆಯ ಒತ್ತಡವನ್ನು ನಿರ್ವಹಣೆ ಮಾಡಿ. ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಸರ್ವೇ ಸಾಮಾನ್ಯ ಎಂಬಷ್ಟು ಸಹಜವಾಗಿ ಎದುರಾಗುವುವು. ಕೆಲವೊಮ್ಮೆ ಅವುಗಳ ಪ್ರವೇಶ ಅನಿಶ್ಚಿತ. ಒಮ್ಮೊಮ್ಮೆ ಮನ ಬೇಡವೆಂದರೂ ಅನಿರೀಕ್ಷಿತವಾಗಿ ದುತ್ತನೆ ಎದುರಾಗಬಹುದು. ಒಂದು ರೀತಿಯಲ್ಲಿ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ನಿಯಮಗಳೆನ್ನಬಹುದು. ಅವುಗಳನ್ನು ಬಹು ಎಚ್ಚರಿಕೆಯಿಂದ ಹಾಗೂ ತಂತ್ರಗಾರಿಕೆಯಂದ ನಿರ್ವಹಣೆ ಮಾಡಬೇಕೇ ಹೊರತು ಹತಾಶರಾಗಿ ಕೂಡುವುದಲ್ಲ. ಆದ್ದರಿಂದಲೇ ಹಿರಿಯರು ಹೇಳುವುದು " ಜೀವನದಲ್ಲಿ ಸಮಸ್ಯೆಗಳು ಕಡ್ಡಾಯ ಆದರೆ ಅದರಿಂದ ನಾವು ಎಷ್ಟು ಬಾಧಿತರಾಗುತ್ತೇವೆ ಎಂಬುದು ನಮ್ಮ ಆಯ್ಕೆಯಾಗಬೇಕು".

ಇನ್ನು ಸಾಧನೆಯ ಹಾದಿಯಲ್ಲಿ ಚಲಿಸುವಾಗ ಹಲವಾರು ಅಂಶಗಳೆಡೆಗೆ ತುಂಬಾ ಮುತುವರ್ಜಿ ವಹಿಸಿ ಪೂರಕ ಪ್ರಯತ್ನಗಳಲ್ಲಿ ಮುಳುಗಿ ಹೋಗ್ತೀವಿ. ಆದರೆ ಅವಶ್ಯಕವಾಗಿ ಗಮನಿಸಲೇಬೇಕಾದ ಸೂಕ್ಷ್ಮ ಅಥವಾ ನಿಮ್ಮ ಮಾತಿನಲ್ಲೇ ಹೇಳುವುದಾದರೆ ಸಣ್ಣ ಸಣ್ಣ ಸಂಗತಿಗಳನ್ನು ಗಮನಿಸದೇ ಕಡೆಗಣಿಸಿ ಬಿಡುತ್ತೇವೆ. ಈ ವಿಷಯ ಹೇಳುವ ಹೊತ್ತಲ್ಲಿ ವಿಶ್ವ ವಿಖ್ಯಾತ ಶಿಲ್ಪ ಕಲಾವಿದ ಮೈಕೆಲಾಂಜಲೋ ತನ್ನ ಶಿಷ್ಯನಿಗೆ ಹೇಳಿದ ಮಾತು ನೆನಪಾಗ್ತಿದೆ. ಒಮ್ಮೆ ಮೈಕಲಾಂಜಲೋ ತಾನೇ ನಿರ್ಮಿಸಿದ ಅತ್ಯಂತ ಸುಂದರವಾದ ಕಲಾಕೃತಿಯನ್ನು ಮತ್ತೆ ಮತ್ತೆ ಅವಲೋಕನ ಮಾಡ್ತಾ ಇರೋದನ್ನ ಆತನ ಶಿಷ್ಯ ಗಮನಿಸಿ, ಗುರುಗಳೇ ನೀವೇ ಕೆತ್ತಿದ ಕಲಾ ಕೃತಿಯಲ್ಲಿ ಲೋಪಗಳಿರುವುದುಂಟೇ? ಶ್ರೇಷ್ಠತೆಯ ಉತ್ತುಂಗದಲ್ಲಿರುವುದು ಬಿಡಿ ಎನ್ನುತ್ತಾನಂತೆ.ಆಗ ಮೈಕಲಾಜಲೋ ಹೇಳುವ ಮಾತು ಪ್ರತಿಯೋರ್ವ ಸಾಧಕನಿಗೆ ಇರಲೇ ಬೇಕಾದ ತಾಳ್ಮೆ , ಅರಿವಿನ ಪ್ರಜ್ಞೆ ಹಾಗೂ ಉತ್ತುಂಗಕ್ಕೆ ಏರಬಯಸುವ ಪ್ರತಿ ವ್ಯಕ್ತಿ ಹೇಗೆ ಕಾರ್ಯತತ್ಪರನಾಗಬೇಕೆಂಬುದಕ್ಕೆ ಅದ್ಭುತವಾದ ಸಾಕ್ಷಿಯಾಗುತ್ತದೆ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳಲೇ ಬೇಕಾದ, ಅತ್ಯಗತ್ಯವಾದ , ಹಾಗೂ ಇಂದಿನ ಜಗತ್ತಿಗೆ ಅನಿವಾರ್ಯದ ಮಾತದು  "ಬೃಹತ್ ಕಾರ್ಯ ಸಣ್ಣ ಸಣ್ಣ ಕೆಲಸದ ಮೊತ್ತ".

ಪ್ರತಿ ವ್ಯಕ್ತಿಯ ಅಂತರಂಗಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ ಈ ಮಾತು. ಅತಿ ದೊಡ್ಡ ಸಾಧನೆ ಆರಂಭವಾಗುವುದು ಅತಿ ಸಣ್ಣ ಮೊದಲ ಪ್ರಯತ್ನದಿಂದಲೇ ಅಲ್ಲವೇ? ಆದರೆ ನಾವು ಸಣ್ಣ ಸಣ್ಣ ಕೆಲಸಗಳನ್ನು ಕಡೆಗಣಿಸಿ ಬಿಡುತ್ತೇವೆ. ನೂರಾರು ಕಿಲೋ ಮೀಟರ್ ನೆಡೆದು ಬಿಡುವ ನಮ್ಮ ಸಾಹಸ ಆರಂಭವಾಗುವುದು ಕೂಡ ನಮ್ಮ ಮೊದಲ ಹೆಜ್ಜೆಯಿಂದಲೇ ತಾನೇ? ಹಾಗೆಯೇ ಸಾಧನೆಗೆ ಸಜ್ಜಾಗಿ ನಿಂತಾಗ ನಮ್ಮ ಎಲ್ಲಾ ಅಗತ್ಯಗಳನ್ನು ಹೇಗೆ ಪೂರೈಸಿಕೊಳ್ಳುತ್ತೇವೆ ಹಾಗೂ ಎಷ್ಟು ತೃಪ್ತರಾಗುತ್ತೇವೆ ಎಂಬುದೂ ಕೂಡ ಅಷ್ಟೇ ಪ್ರಮುಖವಾದುದು ಎಂಬುದನ್ನು ನಾವು ಮರೆಯುವಂತಿಲ್ಲ. ಅದು ಬೆಳಿಗ್ಗೆ ಉಲ್ಲಾಸದಿಂದ ಎಚ್ಚರಗೊಳ್ಳುವುದರಿಂದ ಮೊದಲುಗೊಂಡು ರಾತ್ರಿ ಪ್ರಪುಲ್ಲ ಮನಃಸ್ಥಿತಿಯೊಂದಿಗೆ ಮಲಗುವವರೆಗಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡುವುದೆಂದರೆ ಗಂಟೆ ಗಟ್ಟಲೇ ಓದುವುದು ಅಥವಾ ಆಟ ಆಡುವುದು ಅಥವಾ ಹಾಡುತ್ತಾ ಕುಣಿಯುವುದೆಂದರ್ಥವಲ್ಲ. ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಆಸಕ್ತಿ ಇರುವ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಬೇಕು. ಓದು ಅಧ್ಯಯನವಾಗಿ ಮಾರ್ಪಾಟಾಗಬೇಕು ಆಗ ಅದು ವಿಸ್ತೃತಗೊಳ್ಳುತ್ತಾ ವ್ಯಕ್ತಿ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಸೋಲಿನ ನೆರಳೂ ಕೂಡ ಸ್ಪರ್ಷಿಸುವುದಿಲ್ಲ. ಅನಿವಾರ್ಯ ಕಾರಣಗಳಿಂದ ಹಿನ್ನಡೆಯಾದರೂ ಅದು ವ್ಯಕ್ತಿಯು ವಸ್ತುಸ್ಥಿತಿಯನ್ನು ಗ್ರಹಿಸುವ ಮನಸ್ಥಿತಿಯಲ್ಲಿರಿಸುತ್ತದೆ. ಹೀಗಾಗಿ, ಸಾಧನೆಯ ಹಾದಿಯಲ್ಲಿ ನಮ್ಮ ಊಟ, ತಿಂಡಿ, ಮನರಂಜನೆ, ಇತ್ಯಾದಿಗಳು ಮಿತಿಯೆಂಬ ಚೌಕಟ್ಟಿನೊಳಗೆ ಸಹಜವಾಗಿ ನೆಡೆಯುತ್ತಿರಬೇಕು. ಆಗ ಮಾತ್ರ ಸಾಧನೆಗೆ ಅಗತ್ಯವಾದ ಚೈತನ್ಯ ಆಗಿಂದಾಗ್ಗೆ ಮರುಪೂರಣವಾಗುತ್ತಾ ವ್ಯಕ್ತಿ ಸಮತೋಲನದಲ್ಲಿರಲು ಸಾಧ್ಯವಾಗುತ್ತದೆ ಎಂಬುದನ್ನು ದೃಢವಾಗಿ ಹೇಳುವೆ.

ಈ ಮಾತು ಹೇಳುವಾಗ ಗುರುವಿನ ಆಕರ್ಷಕ ಮಾತಿನ ಪ್ರಭಾವಕ್ಕೆ ಒಳಗಾದ ವಿದ್ಯಾರ್ಥಿಯೊಬ್ಬ ಅವರ ಬಳಿ ಬಂದು ನಾನು ನಿಮ್ಮಂತಾಗಲು ಎಷ್ಟು ವರ್ಷ ಪ್ರಯತ್ನ ಮಾಡಬೇಕೆಂದು ಕೇಳಿದ ಘಟನೆ ನೆನಪಾಗ್ತಿದೆ.  ಆಗ ಗುರು ಹುಡುಗನ ತಲೆ ನೇವರಿಸಿ ನಕ್ಕು ಹೇಳ್ತಾನೆ ಕನಿಷ್ಠ ಐದು ವರ್ಷ. ಹುಡುಗ ಉತ್ತೇಜಿತನಾಗಿ ಮತ್ತೆ ಪ್ರಶ್ನೆ ಮಾಡ್ತಾನೆ ನಾನು ಶ್ರಮವಹಿಸಿ ಹೆಚ್ಚು ಕಾಲ ಪ್ರಯತ್ನ ಪಟ್ಟರೆ ಎಷ್ಟು ವರ್ಷ ಬೇಕಾಗಬಹುದು?

ಗುರುವಿನ ಕಣ್ಣುಗಳು ಕಿರಿದಾದರೂ ನಸು ನಕ್ಕು ಉತ್ತರಿಸ್ತಾನೆ ಕನಿಷ್ಟ ಏಳು ವರ್ಷ. ಹುಡುಗನಿಗೆ ಬೇಸರವಾದರೂ ಮತ್ತೆ ಕೇಳ್ತಾನೆ ಹಗಲು ರಾತ್ರಿ ಎನ್ನದೇ ಊಟ ನಿದ್ರೆ ಕಡೆಗಣಿಸಿ ಪ್ರಯತ್ನಿಸಿದರೆ? ಗುರು ನಿರ್ವಿಕಾರವಾಗಿ ಹೇಳ್ತಾನೆ ಕನಿಷ್ಠ ಹತ್ತು ವರ್ಷ ಗರಿಷ್ಠ ಎಷ್ಟಾದರೂ ಆಗಬಹುದು!?. ಹುಡುಗನ ತಾಳ್ಮೆ ಮೀರುತ್ತೆ ಆದರೂ ಹಠಕ್ಕೆ ಬಿದ್ದವನಂತೆ ಮತ್ತೆ ಪ್ರಶ್ನಿಸ್ತಾನೆ ಅದು ಹೇಗೆ ಸಾಧ್ಯ ಶ್ರಮ ಹೆಚ್ಚಾದಂತೆ ಸಮಯ ಕಡಿಮೆ ಆಗಬೇಕು ತಾನೇ? ಹುಡುಗನ  ಮರು ಪ್ರಶ್ನೆಗೆ ಗುರು ತಾಳ್ಮೆ ಕಳೆದು ಕೊಳ್ಳದೆ ಉತ್ತರಿಸ್ತಾನೆ  'ಸಾಧನೆಯೆಡೆಗೆ ಒಂದು ಕಣ್ಣಿದ್ದು ಬಿಟ್ಟರೆ ಪ್ರಯತ್ನಕ್ಕೆ ಒಂದೇ ಕಣ್ಣಾಗುತ್ತದೆ ಮಗು ಆದ್ದರಿಂದ ಹೆಚ್ಚು ಸಮಯ ಬೇಕು. ಅಲ್ಲದೇ ನಿನ್ನಲ್ಲಿನ ಮೂಲ ದ್ರವ್ಯಗಳು ಚೇತನಗೊಳ್ಳಬೇಕೆಂದರೆ ಇತರೆ ಅಗತ್ಯಗಳೂ ಕೂಡ ಪೂರೈಕೆಯಾಗಬೇಕಲ್ಲವೆ? ಬೃಹತ್ ಸಾಧನೆಗೆ ಕಠಿಣ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಇತರೆ ಅಂಶಗಳೂ ಕೂಡ " ಎಂದಂದು 'ಒಳ್ಳೆಯದಾಗಲಿ' ಎಂದು ಹರಸುತ್ತಾನೆ.  ಈ ಉದಾಹರಣೆಯ ವಿಶ್ಲೇಷಣೆಯಿಂದ ತಾವು ಗ್ರಹಿಸಬೇಕಾದ ಅಂಶ ಯಾವುದೆಂದು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತಾ ಮತ್ತೊಂದು ವಾಸ್ತವತೆಯನ್ನು ತಮ್ಮ ಮುಂದಿರಿಸಲು ಪ್ರಯತ್ನಿಸುವೆ.

ಇಂದು ಯಾರನ್ನೇ ಆಗಲಿ ವ್ಯವಸ್ಥೆಯ ಬಗೆಗೆ ಮಾತಾಡಿಸಿ ನೋಡಿ ಪ್ರತಿಯೊಬ್ಬರ ಅಂಬೋಣ ಸುಲಭವಾಗಿ ಗ್ರಹಿಸಿ ಬಿಡಬಹುದು. ಏನಿರಬಹುದು ಅವರ ಉತ್ತರ?  ನೀವೀಗ ಗ್ರಹಿಸುತ್ತಿರುವುದು ಸರಿ. ' ವ್ಯವಸ್ಥೆ ಸರಿಯಿಲ್ಲ, ಆಮೂಲಾಗ್ರ ಬದಲಾವಣೆ ಬೇಕು' ಎಂದು ಬಹಳ ಸುಲಭವಾಗಿ ಹೇಳಿ ಬಿಡುವರು. ಆದರೆ, ವ್ಯವಸ್ಥೆಯ ಪ್ರಮುಖ  ಭಾಗವೇ ಪ್ರತಿಯೋರ್ವ ವ್ಯಕ್ತಿ ಎಂಬುದರ ಅರಿವಿರದೆ ಹೇಳುವರೋ ಅಥವಾ ತಾವು ಸರಿ ಇದ್ದೇವೆ ಹಾಗಾಗಿ ವ್ಯವಸ್ಥೆ ಸರಿಯಾಗಬೇಕೆಂದು ಬಯಸುವರೋ ತಿಳಿಯದು. ವ್ಯವಸ್ಥೆಯಲ್ಲಿರುವ ಪ್ರತಿ ವ್ಯಕ್ತಿಯ ಪಾತ್ರದಿಂದಲೇ ಸಮುದಾಯ ಅಥವಾ ಸಮಾಜ ತನ್ನ ಅಸ್ಮಿತೆ ಕಂಡುಕೊಳ್ಳುವುದೆಂಬ ಸತ್ಯವನ್ನು ತಳ್ಳಿ ಬಿಡುವುದು ಮಾತ್ರ ಅತ್ಯಂತ ಸೋಜಿಗದ ಸಂಗತಿ!?... ಪ್ರತಿ ವ್ಯಕ್ತಿ ತನ್ನಾಳಕ್ಕಿಳಿದು ತನ್ನ ಮಿತಿ ಮೀರುವುದೆಂದರೆ ತನ್ನ ಕೊರತೆಗಳನ್ನು ನೀಗಿಸುವುದು ಹಾಗೂ ಪ್ರಪಂಚಕ್ಕೆ ಮುಕ್ತವಾಗಿ ತೆರೆದುಕೊಳ್ಳವುದು ಎಂದರ್ಥವಲ್ಲವೇ? ಪ್ರತಿ ವ್ಯಕ್ತಿ ತನ್ನೊಳಗನ್ನು ಹುಡುಕುವ ಯತ್ನದಲ್ಲಿ ವಿಭಿನ್ನವಾಗಿ ನೆಲೆಗೊಳ್ಳುವುದರಿಂದಲೇ ಜಗತ್ತಿಗೊಂದಿಷ್ಟು ಒಳಿತು ಮಾಡಲಾರನೇ?

ಅಚ್ಚರಿಯಾಗುತ್ತಿದೆಯೇ!? ವ್ಯವಸ್ಥೆ ಬದಲಾಗಬೇಕೆನ್ನುವ ಪ್ರತಿ ಮನಸ್ಸು ತನ್ನ ಕೊಡುಗೆ ಸಮಷ್ಟಿ ಕಡೆಗೆ ಎಷ್ಟು? ಹಾಗೂ ಬದಲಾವಣೆ ವೈಯಕ್ತಿಕ ಹಂತದಲ್ಲಿ ಜರುಗಿದಾಗ ಮಾತ್ರ ಸಮಾಜದ ಬದಲಾವಣೆ  ಸಾಧ್ಯವೆಂಬ ಸತ್ಯ ವ್ಯಕ್ತಿಗೆ ಅಂತರ್ಗತವಾಗದಿದ್ದರೆ ಸಾಧ್ಯವಾದೀತೆ? ಬೇರೆಯವರ ಮಿತಿ ಗುರುತಿಸುವ ನಾವು ಮೊದಲು ನಮ್ಮ ಮಿತಿಗಳನ್ನು ಗುರುತಿಸ ಬೇಕಲ್ಲವೇ? ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ ಹೀಗಳೆಯುವ ನಾವು ನಮ್ಮಲ್ಲಿನ ದೋಷಗಳನ್ನು ಕಂಡುಕೊಳ್ಳಬೇಕಲ್ಲವೇ? ಜಗತ್ತಿನಲ್ಲಿ ಬದಲಾವಣೆ ನಿರೀಕ್ಷಿಸುವ ನಾವು ಮೊದಲು ಬದಲಾಗಬೇಕಲ್ಲವೇ?  ಇದಕ್ಕೆಂದೇ  ಮಹಾತ್ಮ ಗಾಂಧಿಯವರು ನುಡಿದದ್ದು 'ಬದಲಾವಣೆಯ ಹರಿಕಾರ ನೀನೇ ಆಗು' ಎಂದು. ಇದನ್ನೇ ದಾಸರು ಹಾಡಿ ನಲಿಯುತ್ತಾ ಸಂಗೀತದರಮನೆಯಲ್ಲಿ ಸಾಹಿತ್ಯ ಸಮೀಕರಿಸಿ  ಮೊನಚಾಗಿ ಚುಚ್ಚಿದ್ದು  'ಲೋಕದ ಡೊಂಕ ನೀವೇಕೆ ತಿದ್ದುವಿರಿ?' ಎಂದು. ಬಹು ಹಿಂದೆ ಸಾಕ್ರಟಿಸ್ ಹೇಳಿದ್ದು ಕೂಡ ಇದೆ ' ಪ್ರಪಂಚದಲ್ಲಿ ಶಾಶ್ವತವಾಗಿರುವುದು ಬದಲಾವಣೆ ಮಾತ್ರ' 

'ಬದಲಾವಣೆ ಜಗದ ನಿಯಮ' ಎಂಬ ಹೇಳಿಕೆಗೆ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಸಾಧಕರಿಗೆ ಹೇಳುವ ಮಾತಿನಲ್ಲಿಯೂ ಕೂಡ ಪ್ರತಿಧ್ವನಿಸುತ್ತದೆ.  " ಯಾವುದೇ ವ್ಯಕ್ತಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಾಗ ಇದ್ದ ಸ್ಥಿತಿಯಲ್ಲಿಯೇ ಮುಂದುವರೆದರೆ ಸಾಧನೆ ಸಾಧ್ಯವಿಲ್ಲ"  ಇದರರ್ಥ ಯಾವುದೇ ವ್ಯಕ್ತಿ/ ಸಂಸ್ಥೆ/ ಸಮುದಾಯ ಸವಾಲನ್ನು ಸ್ವೀಕರಿಸಿದ ನಂತರ ಪ್ರಸ್ತುತ ಸನ್ನಿವೇಶದಲ್ಲಿರುವ ಅನಾವಶ್ಯಕ ಅಂಶಗಳನ್ನು ಗುರುತಿಸಬೇಕು ಹಾಗು ಮಾರ್ಪಾಟಿನ ಅಗತ್ಯ ಇದ್ದರೆ ಸೂಕ್ತ ಕ್ರಮ ತೆಗೆದುಕೊಂಡು ಪೂರಕವಾದ ಸಿದ್ದತೆಯೊಂದಿಗೆ ಮುಂದುವರಿಯಬೇಕು. ಇಲ್ಲದಿದ್ದರೆ ಸಾಧನೆಯೆಡೆಗೆ ಮುನ್ನೆಡೆಯುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅಭಿವೃದ್ಧಿ ಎಂದರೆ ಬದಲಾವಣೆಯ ಮತ್ತೊಂದು ಮಜಲು ಎಂಬುದನ್ನು ಯಾರೂ ಯಾವುದೇ ಕಾರಣಕ್ಕೂ ಮರೆಯಬಾರದು. ಯಾವುದೇ ಸಮಾಜ ಅಥವಾ ಸಮುದಾಯದ ಇಂದಿನ ರೀತಿ ನೀತಿಗಳನ್ನು ಗಮನಿಸಿ ಬದಲಾವಣೆಯ ಸ್ಪರ್ಶಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ನಮ್ಮ ಆಚರಣೆಗಳು ಹೀಗೆಂದು ಆ ಗ್ರಂಥದಲ್ಲಿದೆ ಅಥವಾ ನಮ್ಮ ಹಿರೀಕರು ಹೇಳಿಬಿಟ್ಟಿದ್ದಾರೆ ಎಂಬ ಪೊಳ್ಳುವಾದ ಮುಂದಿಟ್ಟು ಅಸ್ಪೃಶ್ಯತೆ, ಮೇಲು ಕೀಳು, ತಾರತಮ್ಯ ಮಡಿ ಮೈಲಿಗೆ... ಹೀಗೆ ಒಂದೇ ಎರಡೇ ಅರ್ಥರಹಿತ ಆಚರಣೆಗಳನ್ನು ಇನ್ನೂ ಜತನದಿಂದ ಮುಂದುವರಿಸುವ ನಿಲುವು ಎಷ್ಟರಮಟ್ಟಿಗೆ ಸರಿ ? ಚಿಂತಿಸುವ ಅಗತ್ಯವಿಲ್ಲವೇ? ಬದಲಾವಣೆ ಗಾಳಿ ಅಗತ್ಯವಿಲ್ಲವೇ ? ಮತ್ತೆ ಮತ್ತೆ ದಯವಿಟ್ಟು ಯೋಚಿಸಿ ಮುಂಬರುವ ದಿನಗಳು ನಮ್ಮವು. ಇಂದಿನ ನಮ್ಮ ನಿರ್ಧಾರ ಮುಂದೆ ಕ್ರಿಯಾಶೀಲ ಸಮಾಜದ ನಿರ್ಮಾಣಕ್ಕೆ ಕಾರಣವಾಗದೇ? ಈ ವಿಶ್ಲೇಷಣೆಯ ಮೂಲ ಆಶಯ ಸಾಮರ್ಥ್ಯದ ಉನ್ನತೀಕರಣ ಸಮಾಜದ ಕಲ್ಯಾಣಕ್ಕಾಗಿ ವೈಯಕ್ತಿಕ ಹಂತದಲ್ಲಿಯೇ ಆರಂಭವಾಗಬೇಕೆಂಬುದಷ್ಟೇ... ನಮ್ಮ ನಿರೀಕ್ಷೆ . ಇದಕ್ಕಾಗಿ ಅತ್ಯಗತ್ಯವಾಗಿ ಆಗಬೇಕಿರುವುದು ಯವಜನತೆ ತಮ್ಮಲ್ಲಿನ ವಿಶೇಷತೆಗಳನ್ನು ಕಂಡುಕೊಳ್ಳುವುದು ಹಾಗೂ ಮನುಷ್ಯತ್ವದ ತಳಹದಿಯಲ್ಲಿ ಬದುಕು ಕಟ್ಟಿ ಕೊಳ್ಳುವ ಪ್ರಯತ್ನ ಮಾಡುವುದು. ಈ ಆಲೋಚನೆ ಅಂತರಂಗಕ್ಕಿಳಿದಾಗ ಪ್ರಸಕ್ತ ಸಮಾಜದ ವಿಧ್ಯಾಮಾನಗಳಾಗಿಬಿಟ್ಟಿರುವ ಅತ್ಯಾಚಾರ, ಅಪಚಾರ ಅವಹೇಳನ, ಅಸಹಿಷ್ಣುತೆ, ಧರ್ಮ ಆಧರಿಸಿ ಪ್ರತ್ಯೇಕಿಸುವಿಕೆ,  ಜಾತಿ ವಿಂಗಡನೆ, ಲಿಂಗತಾರತಮ್ಯ... ಇತ್ಯಾದಿ ಮಲಿನಕಾರಕಗಳಿಂದ ಸಮುದಾಯ ಅಥವಾ ಸಮಾಜವನ್ನು ಹೊರಗೆಳೆವ ಸಲುವಾಗಿ ಯುವಜನತೆ ಜಾಗೃತರಾಗಬೇಕಿದೆ... ಆಗ ಮಾತ್ರ ಹೊಸ ಅಲೆ ಎದ್ದು ಸಮಾಜ ರೂಪಾಂತರಗೊಳ್ಳುವುದೆಂದು ಆಶಿಸಬಹುದಲ್ಲವೇ?

ವೈವಿಧ್ಯತೆ, ಜಾತ್ಯಾತೀತತೆ ಹಾಗೂ ಧರ್ಮ ನಿರಪೇಕ್ಷತೆಯ ಮೂಲ ಮಂತ್ರಗಳ ಆದರ್ಶದ ಸೂತ್ರದನ್ವಯ ರೂಪುಗೊಂಡ ಪ್ರಜಾಪ್ರಭುತ್ವ ನಮ್ಮದು. ಯಾವುದೇ ಕಾರಣಕ್ಕೂ ಒಂದು ಧರ್ಮ, ಒಂದು ಜಾತಿ, ಒಂದೇ ರೀತಿಯ ಆಚಾರಗಳ ಅಡವಳಿಕೆ ಸಾಧ್ಯವಿಲ್ಲದ ಮಾತು. ರಾಜಕೀಯ ಪ್ರೇರಿತವಾದ ನೆಡೆಗಳು, ಉಳ್ಳವರ ದಬ್ಬಳಿಕೆ, ಧಾರ್ಮಿಕ ಅಂಧಾನುಕರಣೆ, ಮಹಿಳೆಯರನ್ನು ದ್ವಿತೀಯ ದರ್ಜೆಯಲ್ಲಿ ನೆಡೆಸಿಕೊಳ್ಳುವುದು, ವಿಚಾರವಂತಿಕೆ ಬೆಳೆಸಿಕೊಳ್ಳದಿರುವುದು, ಕೋಮುವಾದದ ಪ್ರಭಾವಕ್ಕೆ ಸುಲಭವಾಗಿ ನಿಲುಕುವುದು ಯುವ ಜನರು ಎಂಬುದೇ ಆತಂಕಕಾರೀ ವಿಷಯ. ಯುವ ಮನಗಳಿಂದು ದೇಶ ಕಟ್ಟುವ ಕಟ್ಟುವ ಕಾರ್ಯವನ್ನು ವಿಭಿನ್ನ ದೃಷ್ಟಿಯುಳ್ಳ ಮನಗಳನ್ನು ಬೆಸೆಯವ ಮೂಲಕ ಮಾಡಬೇಕಿದೆ. ಆದರಿದು ಶ್ರೀ ಸಾಮಾನ್ಯರ ಮನಕ್ಕೆ ಕಸಿವಿಸಿಯಾಗದಂತೆ ಅವರ ಬದುಕು ಅಯೋಮಯ ಆಗದಂತೆ ಬಹು ಸಹಜ ಎಂಬಂತೆ ಆಗಬೇಕೆಂಬುದೇ ನಮ್ಮ ಮುಂದಿರುವ ಸವಾಲು. ಹೇಗೆ ಸಾಧ್ಯ? ಕ್ರಾಂತಿಯ ಹೊರತು ಸಾಧ್ಯವಿಲ್ಲವೆಂದು ಮನ ಚೀರುತ್ತಿದೆ ಎಂಬುದ ನಾ ಬಲ್ಲೆ. ಬಹುಶಃ 

ಗುರು-ಶಿಷ್ಯರ ಈ ಸಂಭಾಷಣೆ ತಮಗೆ ತಮ್ಮ ಮುಂದಿನ ನೆಡೆಯ ಬಗೆಗೆ ಬೆಳಕು ಚೆಲ್ಲುವುದೆಂದು ಆಶಿಸುವೆ...

ಒಮ್ಮೆ ಬಾಲಕನೋರ್ವ ತನ್ನ ಗುರುಗಳ ಬಳಿ ಬಂದು ಈ ಸಮಾಜ ಬದಲಿಸಲು ನಾನೇನು ಮಾಡಬೇಕು? ಎಂದು ಪ್ರಶ್ನೆ ಮಾಡ್ತಾನೆ. ಗುರುವಿಗೆ ಆತಂಕ ಹಾಗೂ ಗಾಬರಿ ಒಟ್ಟೊಟ್ಟಿಗೆ ಆದರೂ ಸಮಾಧಾನದಿಂದ ಯಾಕೆ ? ಮಗು ಏನಾಯಿತು? ಅಂತ ಮರು ಪ್ರಶ್ನೆ ಕೇಳ್ತಾರೆ ಆಗ ಬಾಲಕ ಹೇಳ್ತಾನೆ ಸಮಾಜ ಕೆಟ್ಟೋಗಿದೆ ಹೀಗೆ ಮುಂದುವರೆದರೆ ಜೀವ ಸಂಕುಲವೇ ನಶಿಸಿ ಹೋಗುತ್ತೆ. ಹೇಳಿ ನಾನೇನು ಮಾಡಬಹುದು? ಗುರು ಪ್ರಸನ್ನ ಚಿತ್ತದಿಂದ 

ನುಡೀತಾನೆ 'ಓದು ಮಗು...ಓದು... ' ತಕ್ಷಣ ಹುಡುಗ ಮತ್ತೊಂದು ಪ್ರಶ್ನೆ ಕೇಳ್ತಾನೆ... ಓದುವುದರಿಂದ ಏನಾಗುತ್ತೆ? ಏನನ್ನು ಓದಬೇಕು? ಗುರು ಪ್ರಾಂಜಲ ಮನಸ್ಸಿನಿಂದ ಧೀರ್ಘ ಶ್ವಾಸ ತೆಗೆದುಕೊಂಡು ಹೇಳುವ ಮಾತು ಎಲ್ಲರ ಹೃದಯ ಬಡಿತದೊಂದಿಗೆ  ಮಿಳಿತವಾಗಬೇಕು... ಓದು ಮನಸ್ಸನ್ನು ಅರಳಿಸುತ್ತೆ. ಅದಕ್ಕಾಗಿ ಒಳ್ಳೆಯ ಸಾಹಿತ್ಯ ಓದು. ಇತಿಹಾಸದ ಓದು ಯಾವುದೇ ಸಮಾಜ ಅಥವಾ ಸಮುದಾಯ ಬೆಳೆದು ಬಂದ ದಾರಿ, ಕಾಲಕ್ರಮೇಣ ತನ್ನ ವಿಶೇಷತೆಗಳನ್ನು  ಸಾಂದ್ರೀಕೃತಗೊಳಿಸಿಕೊಳ್ಳುತ್ತಾ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪರಿ ಗ್ರಹಿಕೆಗೆ ನಿಲುಕುತ್ತೆ. ಹಾಗೆಯೇ ವೈಚಾರಿಕ ಲೇಖನಗಳು ವ್ಯಕ್ತಿ ರೂಪಾಂತರಗೊಳ್ಳಬೇಕಾದ ಬಗೆಯನ್ನು ತಿಳಿಸಿಕೊಡುತ್ತದೆ. ಮುಂದಾಗಬೇಕಿರುವ ಬದಲಾವಣೆಗಳನ್ನು ಹಾಗೂ ಸ್ವರೂಪಗಳನ್ನು ಹೃಧ್ಯವಾಗಿಸುತ್ತದೆ. ಅಂದರೆ ಓದು ಅಧ್ಯಯನವಾಗಿ ಮಾರ್ಪಡುವುದರಿಂದ ಆಗುವ ಮೊದಲ ಪರಿಣಾಮ ವ್ಯಕ್ತಿಯ ಆಂತರ್ಯದ ಅವಲೋಕನ. ತನ್ಮೂಲಕ ಬದಲಾವಣೆಯ ಅಲೆ. ಹೀಗಾಗಿ   ಸಮಾಜ ಬದಲಿಸುವ ನಿನ್ನ ಇಚ್ಛೆ ನಿನ್ನಿಂದಲೇ ಆರಂಭವಾಗಬೇಕೇ ಹೊರತು ಹೊರಗಿನಿಂದಲ್ಲ ಮಗು.... ಪ್ರತಿಯೊಬ್ಬರೂ ಮುಕ್ತವಾಗಿ ಸಮಾಜಕ್ಕೆ ತೆರೆದುಕೊಂಡಂತೆಲ್ಲಾ ಸಮಾಜ ತನ್ನಿಂದ ತಾನೇ ಬದಲಾಗಿ ಮಾನವೀಯತೆಯ ಸ್ಪರ್ಶದಲ್ಲಿ ಪುನರ್ ರಚನೆಗೊಳ್ಳಬಹುದು ಎಂಬ ವಿಚಾರ ಸರಣಿಯನ್ನು ಮುಂದಿರಿಸುವ ಗುರು ಆದರ್ಶ ಪ್ರಾಯನಾಗುತ್ತಾನೆ. ಪ್ರಶ್ನಿಸುವ ಬಾಲಕ ನಮ್ಮ ನಿಮ್ಮೆಲ್ಲರಲ್ಲೂ ಲೀನವಾಗಬೇಕು. ಎಲ್ಲಿಯೇ ಆಗಲಿ ಕ್ರಾಂತಿಯಾಗಲೇ ಬೇಕೆಂಬ ಆಕ್ರೋಶದ ಮಾತುಗಳಿಗಿಂತ ತನ್ನಿಂದ ತಾನೇ ಮನಗಳು ಜಾಗೃತಗೊಳ್ಳಲಿ. ಒಳಿತು ಚಿಂತಿಸುವ ಪರಿವರ್ತಿತ ಮನಗಳು ಸುಸ್ಥಿರ ಸಮಾಜ ಕಟ್ಟಲಾರವೇ? ಮನುಜನ ಮನುಜನಂತೆ ನಡೆಸಿಕೊಳ್ಳಲಾರವೇ?ತಾರತಮ್ಯದ ದಳ್ಳುರಿಯಿಂದ ಹೊರಬರಲಾರವೇ? ಸಿರಿವಂತಿಕೆ- ಬಡತನದ ವೈಪರೀತ್ಯಗಳ ಕಿತ್ತೆಸೆಯಲಾರವೇ? ತನ್ನಂತೆ ಇತರರ ನೆಡೆಸಿಕೊಳ್ಳಲಾರರೇ? .... ಸಾಲು ಸಾಲು ಪ್ರಶ್ನೆಗಳೊಂದಿಗೆ ... 
'ಮನುಜ ಮತ ವಿಶ್ವ ಪಥ ಜಪಿಸುತ್ತಾ... ಎಲ್ಲರೊಂದಿಗೆ ಉತ್ತರ ಹುಡುಕುವತ್ತ ಮುನ್ನೆಡೆವ ಮನಸ್ಥಿತಿಯೊಂದಿಗೆ ವಿರಮಿಸುವೆ....
ಶುಭವಾಗಲಿ....
.......ಸುವ್ವೀ.....

(20/01/18 ರಂದು ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾರೋಪ ಸಮಾರಂಭದ ಭಾಷಣದ ಲಿಖಿತ ರೂಪ....)


ಕಾಮೆಂಟ್‌ಗಳಿಲ್ಲ: