Pages

ಸ್ವಾತಂತ್ರ್ಯ ಯೋಧರು - ಅದಮ್ಯ ಚೇತನ ನೇತಾಜಿ ಸುಭಾಷ್ ಚಂದ್ರ ಬೋಸ್


ಭಾರತ ಕಂಡ ಧೀರೋದಾತ್ತ ನಾಯಕರಲ್ಲಿ ನೇತಾಜಿಯವರು ಅಗ್ರಗಣ್ಯರೆಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಹೋರಾಟದ ಬಿಸಿ ಎಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುವ ವೇಳೆಯಲ್ಲಿ ಅಹಿಂಸಾವಾದಿಗಳ ಸಂಧಾನಪರ ನೀತಿಯು ಜನರ ಉತ್ಸಾಹಕ್ಕೆ ತಣ್ಣೀರೆರಚುತ್ತಿತ್ತು. ಬ್ರಿಟಿಷ್ ಸರ್ಕಾರವು ಎಂತಹ ನೀಚ ಕೃತ್ಯವೆಸಗಿದರೂ ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು, ಸರ್ಕಾರ ನೋವು ನೀಡಿದರೆ ಅದನ್ನು ಸಹಿಸಬೇಕೇ ವಿನಾ ಪ್ರತಿನೋವು ಕೊಡಬಾರದು ಎಂಬ ಅರ್ಥವಿಲ್ಲದ ನೀತಿಯಿಂದ ಬೇಸತ್ತಿದ್ದ ಜನರಿಗೆ ತಮ್ಮಲ್ಲಿ ಕುದಿಯುತ್ತಿದ್ದ ಬಡಬಾಗ್ನಿಯನ್ನು ಹೊರಚೆಲ್ಲಲು ಒಬ್ಬ ಪ್ರಚಂಡ ನಾಯಕನಿಗಾಗಿ ಪರಿತಪಿಸುತ್ತಿದ್ದಾಗ ಎದ್ದವರೇ ನೇತಾಜಿ.
1897ರ ಜನವರಿ 23 ರಂದು ಒರಿಸ್ಸಾ ರಾಜ್ಯದ ಕಟಕ್ ನಗರದಲ್ಲಿ ಪ್ರಖ್ಯಾತ ವಕೀಲರಾದ ಜಾನಕೀನಾಥ್ ಬೋಸ್ ಮತ್ತು ಪ್ರಭಾವತಿ ದೇವಿಯವರ ಮಗನಾಗಿ ಸುಭಾಷ್ ಜನಿಸಿದರು. ತಂದೆ ತಾಯಿಯರ ವ್ಯಕ್ತಿತ್ವದಿಂದ ಪ್ರಭಾವಿತರಾದ ಬೋಸ್‍ರವರು, ಪ್ರಮುಖವಾಗಿ ತಮ್ಮ ತಾಯಿಯ ಆದರ್ಶಗಳು ಮತ್ತು ದೇಶಪ್ರೇಮವು ಅವರನ್ನು ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಯೋಧನನ್ನಾಗಿಸಿತು. 
ಬಾಲ್ಯದಲ್ಲಿ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿದ್ದ ಚಳುವಳಿ, ಮುಷ್ಕರ, ವಿದೇಶಿ ಸರಕುಗಳ ಬಹಿಷ್ಕಾರ ಮುಂತಾದ ಘಟನೆಗಳು ಇವರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹೊತ್ತಿಸಿತು. ಅಲ್ಲದೆ ಇವರು ಓದುತ್ತಿದ್ದ ಯೂರೋಪಿಯನ್ ಶಾಲೆಯಲ್ಲಿ ಆಂಗ್ಲರ ಮಕ್ಕಳಿಗಿದ್ದ ವಿಶೇಷ ಸವಲತ್ತುಗಳು ನಮಗೇಕಿಲ್ಲವೆಂದು ಚಿಂತಿಸುತ್ತಿದ್ದರು. ವಿದ್ಯಾರ್ಥಿಯಾಗಿರುವಾಗಲೇ ನಾಯಕನಾಗಿ ಮಾನವ ಹಕ್ಕುಗಳ ಪರ ಹೋರಾಡಿ ಕಾಲೇಜಿನಿಂದ ಬಹಿಷ್ಕರಿಸಲ್ಪಟ್ಟರು. ಧೃತಿಗೆಡದ ಬೋಸರು ಆ ಸಮಯದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಆತ್ಮಸ್ಥೈರ್ಯವನ್ನು ಇನ್ನೂ ಬಲಗೊಳಿಸಿಕೊಂಡರು. 
ಇಂಗ್ಲೆಂಡಿನಲ್ಲಿ 1920ರಲ್ಲಿ ತಂದೆಯ ಸಲಹೆಯಂತೆ ಇಂಡಿಯನ್ ಸಿವಿಲ್ ಸರ್ವಿಸ್ ಅರ್ಹತಾ ಪರೀಕ್ಷೆಯಲ್ಲಿ 4 ನೇ  ಸ್ಥಾನ ಪಡೆದು ಉತ್ತೀರ್ಣರಾದರು. ಆದರೆ ಅವರು ಆಳುವ ಸರ್ಕಾರದ ಸೇವಕನಾಗಲು ಸುತರಾಂ ಒಪ್ಪದೆ, ಸರ್ಕಾರಿ ಸವಲತ್ತುಗಳನ್ನೊಳಗೊಂಡ ಉನ್ನತ ಪದವಿಯನ್ನು ತ್ಯಜಿಸಿ, ದೌರ್ಜನ್ಯಕ್ಕೆ ಸಿಲುಕಿದ ಜನರನ್ನು ರಕ್ಷಿಸಲೋಸುಗ ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಜ್ಜಾದರು. 

ಕಾಂಗ್ರೆಸ್ಸನ್ನು ಸೇರಿದ ಸುಭಾಷರಿಗೆ ಗಾಂಧೀಜಿಯವರು ತಳೆದ ನಿಲುವು ಮತ್ತು ಕೈಗೊಂಡ ಕಾರ್ಯಗಳಾವುದರಿಂದಲೂ ಸ್ವಾತಂತ್ರ್ಯ ಲಭಿಸುವ ಲಕ್ಷಣಗಳು ಯಾವುದೂ ಇವರಿಗೆ ಕಂಡುಬರಲಿಲ್ಲ. ತಮ್ಮದೇ ಆದಂಥ ಕಾರ್ಯ ವೈಖರಿ ಮತ್ತು ತೀಕ್ಷ ಭಾಷಣಗಳಿಂದ ಜನಮನ ಸೂರೆಗೊಂಡರು. ಅನೇಕ ಬಾರಿ ಕಠಿಣ ಜೈಲುವಾಸ ಅನುಭವಿಸಿದರು. ಬಹುಬೇಗನೆ ಜನಪ್ರಿಯರಾಗಿ 1927ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರು. 
ನಂತರ ಗಾಂಧೀಜಿಯವರು ಹಾಗೂ ಸುಭಾಷರಿಗೆ ಭಿನ್ನಾಭಿಪ್ರಾಯಗಳು ಕಂಡುಬಂದವು. ಕಾಂಗ್ರೆಸ್‍ನಲ್ಲಿ ಒಡಕು ಉಂಟಾಗಿ ಎರಡನೇ ಬಾರಿ ಕೂಡ ಗಾಂಧೀಜಿಯವರ ತೀವ್ರ ವಿರೋಧದೊಂದಿಗೆ ಸಹ ಎಲ್ಲರ ಆಶಯದಂತೆ ಅಧ್ಯಕ್ಷರಾಗಿ ಆಯ್ಕೆಯಾದರು. ಅಧಿಕಾರ ದಾಹ ಎಳ್ಳಷ್ಟೂ ಇರದ ಸುಭಾಷರು ಅಹಿಂಸಾವಾದಿಗಳ ವರ್ತನೆಯಿಂದ ನೊಂದು 1939 ಏಪ್ರಿಲ್ 29ರಂದು ಅಧಿಕಾರ ಸ್ಥಾನಕ್ಕೆ ರಾಜೀನಾಮೆ ನೀಡಿದರು. 
ನಂತರ ಕಾಂಗ್ರೆಸ್ ನಲ್ಲೇ ಮೋತಿಲಾಲ್ ನೆಹರೂರವರೊಂದಿಗೆ ಸೇರಿ  ‘ಫಾರ್ವರ್ಡ್ ಬ್ಲಾಕ್’ ನಿರ್ಮಿಸಿ ಎಂದಿಗಿಂತಲೂ ಹೆಚ್ಚಿನ ಚಟುವಟಿಕೆಗಳಲ್ಲಿ ನಿರತರಾದರು. ದೇಶದೆಲ್ಲೆಡೆ ಸಂಚರಿಸಿ ಜನರನ್ನು ಒಗ್ಗೂಡಿಸಿದರು. ಹೋದೆಡೆಯೆಲ್ಲಾ ಜನರ ಮಹಾಪೂರವೇ ನೇತಾಜಿಯವರ ಹಿಂದೆ ಹರಿದುಬರುತ್ತಿತ್ತು. ಅವರ ಮಾತುಗಳಲ್ಲಿ ಅಂತಹ ಸೆಳೆತವಿತ್ತು. ಇವರ ಜನಪ್ರಿಯತೆಯನ್ನು ಸಹಿಸದ ಗಾಂಧೀವಾದಿಗಳು ಇವರನ್ನು ಕಾಂಗ್ರೆಸ್‍ನಿಂದ ಹೊರಹಾಕಿದರು. 
ನೇತಾಜಿಯವರು ಫಾರ್ವರ್ಡ್ ಬ್ಲಾಕ್‍ನ ಮೂಲಕ ಕಾನೂನುಭಂಗ ಚಳುವಳಿಗೆ ಕರೆ ನೀಡಿ ಗೃಹಬಂಧನಕ್ಕೊಳಗಾದರು. ವೀರನಾಯಕನಿಗೆ ಸುಮ್ಮನೆ ಕೂರಲಾಗುವುದೇ? ಒಬ್ಬ ಮೌಲ್ವಿಯ ವೇಷದಲ್ಲಿ ಚತುರತೆಯಿಂದ ಪರಾಗಿ ಜರ್ಮನಿಯನ್ನು ತಲುಪಿದರು. ನಂತರ ಜಪಾನಿಗೆ ತೆರಳಿ ರಾಸ್ಬಿಹಾರಿ ಬೋಸ್ ರವರು ಸ್ಥಾಪಿಸಿದ್ದ ಐ ಎನ್ ಎ ನಾಯಕತ್ವವನ್ನು ವಹಿಸಿದರು. ಹೀಗೆ ದೇಶವಿದೇಶಗಳಲ್ಲಿನ ಬಾರತೀಯರನ್ನು, ಯುದ್ಧಖೈದಿಗಳನ್ನು ಒಗ್ಗೂಡಿಸಿ ಸೈನ್ಯ ಶಕ್ತಿಯನ್ನು ನಿರ್ಮಿಸಿದರು. 

ಬಂಡವಾಳಶಾಹಿಯನ್ನು ವಿರೋಧಿಸಿದ ನೇತಾಜಿಯವರಿಗೆ ಅಧಿಕಾರ ಜನಸಾಮಾನ್ಯರ ಕೈಗೆ ಬರಬೇಕೆಂಬ ಆಸೆಯಿತ್ತು. ದೇಶದಲ್ಲಿ ಶ್ರೀಮಂತ-ಬಡವ, ಮೇಲ್ಜಾತಿ- ಕೆಳಜಾತಿ, ಗಂಡು- ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಇವರು ಬಹಳಷ್ಟು ಶ್ರಮಿಸಿದರು. ಹೆಣ್ಣುಮಕ್ಕಳೂ ಸಮಾಜದಲ್ಲಿ ಸಮಾನರು; ಅವರು ಅಬಲೆಯರಲ್ಲ. ಅವರಲ್ಲಿರುವ ಮನೋಬಲ ಅಮೋಘವೆಂದು ಗುರುತಿಸಿ ಐಎನ್‍ಎ ನಲ್ಲಿ ಮಹಿಳಾ ಪಡೆಯನ್ನು ನಿರ್ಮಿಸಿದರು. 1943 ಅಕ್ಟೋಬರ್ 22ರಂದು ಸಿಂಗಪೂರಿನಲ್ಲಿ ಮಹಿಳಾ ಯೋಧರ ಪಡೆಯೊಂದನ್ನು ಸ್ಥಾಪಿಸಿದರು. 

ಆಗಿನ ಕಾಲದಲ್ಲಿ ಮನೆಯ ಹೊಸ್ತಿಲಿನಿಂದ ಹೊರಬರುವುದು ಕೂಡ ಮಹಿಳೆಗೆ ದುಸ್ತರವಾಗಿತ್ತು. ಆದರೂ ಸುಭಾಷರ ಕರೆಗೆ ಓಗೊಟ್ಟು ಹೆಣ್ಣು ಮಕ್ಕಳು ಸೈನ್ಯವನ್ನು ಸೇರಿದರು. ‘ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಹುದು’ ಎಂಬ ಮಾತಿಗೆ ಅನುಗುಣವಾಗಿ ಆ ನಾರಿಯರು ಬಂದೂಕುಗಳನ್ನು ಹಿಡಿದು ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಪಥ ಅತ್ಯಂತ ಕಠಿಣ ಎಂದರಿತೂ ವಿದೇಶದಲ್ಲಿ ಸೈನಿಕ ತರಬೇತಿ ಪಡೆದು ಯುದ್ಧಕ್ಕೆ ಸನ್ನದ್ಧರಾದರು. ಅದರ ಹಿಂದಿನ ಪ್ರೇರಕ ಶಕ್ತಿ, ಸುಭಾಷ್.
ನೇತಾಜಿಯವರು ಹೆಣ್ಣುಮಕ್ಕಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು ಈ ರೀತಿಯ ಅಪಾಯಕಾರಿ ಕೆಲಸಗಳಲ್ಲಿ, ಅದರಲ್ಲೂ ಸೈನ್ಯದಲ್ಲಿರಬಾರದು ಎಂಬುದನ್ನು ನಂಬದೆ ಸ್ತ್ರೀ ಅಬಲೆಯಲ್ಲ ಸಬಲೆ, ಪ್ರತಿಯೊಬ್ಬ ಹೆಣ್ಣಿನಲ್ಲೂ ದಿಟ್ಟತನವಿದೆ ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ತ್ರೀಯರು ಸಹ ಸಮಸಮನಾಗಿ ಭಾಗಿಯಾಗಬೇಕೆಂದು ನಂಬಿ, ಹೆಣ್ಣು ಮಕ್ಕಳು ಹೋರಾಟದಲ್ಲಿ ಧುಮುಕುವಂತೆ ಪ್ರೇರೇಪಿಸಿದರು. “ನಮಗೆ ಬೇಕಿರುವುದು ಸಹಸ್ರ ಸಹಸ್ರ ಝಾನ್ಸಿ ರಾಣಿಯರು, ಕೇವಲ ಒಬ್ಬರಲ್ಲ,” ಎಂದು ಹೇಳಿ ಅಸಂಖ್ಯಾತ ಹೆಣ್ಣುಮಕ್ಕಳಲ್ಲಿ ದೇಶಕ್ಕಾಗಿ ಜೀವತ್ಯಾಗ ಮಾಡುವ ಮನೋಸ್ಥೈರ್ಯವನ್ನು ತುಂಬಿದರು. ಇಂತಹ ವೀರ ರಾಣಿಯರ ಪಡೆಯೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್. ಇಡೀ ಜಗತ್ತಿನಲ್ಲಿ ಮೊಟ್ಟಮೊದಲನೆಯ ಮಹಿಳಾ ರೆಜಿಮೆಂಟ್. ಸೈನ್ಯದಲ್ಲಿಯೂ ಸಹ ಹೆಣ್ಣುಮಕ್ಕಳನ್ನು ಪುರುಷರಿಗೆ ಸಮಾನವಾಗಿ ನೋಡಿಕೊಂಡ ನೇತಾಜಿ ಅವರನ್ನು ತಮ್ಮ ಸಹವರ್ತಿಗಳಾಗಿ ಕಂಡರು. ಲಿಂಗತಾರತಮ್ಯವಿಲ್ಲದ, ಜಾತಿ, ಭಾಷೆ, ಕೋಮು ಇತ್ಯಾದಿಗಳ ಭೇದವಿಲ್ಲದ ಒಂದು ಪುಟ್ಟ ಭಾರತ ಅಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದೇ ರೀತಿಯ ಸಮಾಜವನ್ನು ಭಾರತದುದ್ದಗಲಕ್ಕೂ ಕಟ್ಟಲು ನೇತಾಜಿ ಆಶಿಸಿದ್ದರು. 
ಇವರ ಶಿಸ್ತು, ಪಥಸಂಚಲನ ಮತ್ತು ಶಸ್ತ್ರಗಳನ್ನು ಬಳಸುವ ವೈಖರಿ ಕಂಡು ಮೊದಲು ಅನುಮಾನಿಸಿದ ಜಪಾನಿಯರೇ ಅಚ್ಚರಿಗೊಂಡರು. ಈ ಅದ್ಭುತ ಕಾರ್ಯ ಸಾಧ್ಯವಾದದ್ದು ನೇತಾಜಿಯವರಿಂದ ಮಾತ್ರ. ಅವರ ದೃಷ್ಟಿಕೋನ ಪ್ರಗತಿಪರವಾದದ್ದು. ನಂತರ ಇವರು ಬ್ರಿಟಿಷರ ಮೇಲೆ ಯುದ್ಧ ಘೋಷಿಸಿ, ಅಚಲ ವಿಶ್ವಾಸದಿಂದ ಮುನ್ನುಗ್ಗಿದರು. ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡರು. 1944 ಫೆಬ್ರವರಿ 4 ರಂದು ಅರಕಾನ್‍ನಲ್ಲಿ ನಡೆದ ಯುದ್ಧದಲ್ಲಿ ನೇತಾಜಿ ಸೈನ್ಯ ಬ್ರಿಟಿಷ್ ಸೇನೆಯನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ನಂತರ ಬರ್ಮಾದ ಕಡೆಯಿಂದ ಇಂಪಾಲ ಮತ್ತು ಕೊಹಿಲಾಗಳಲ್ಲಿ ಯುದ್ಧ ಮುಂದುವರಿಸಿದರು. ಆ ದಟ್ಟ ಅಡವಿಯಲ್ಲಿ ನಿದ್ರಾಹಾರವಿಲ್ಲದೆ ಯೋಧರು ಯುದ್ಧ ಮಾಡಿದರು. ಜೊತೆಗೆ ಭೋರಿಡುವ ಮಳೆ ಬೇರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬ್ರಿಟಿಷರ ವೈಮಾನಿಕ ದಾಳಿಯಿಂದ ಯೋಧರು ತತ್ತರಿಸಿಹೋದರು. ಇತ್ತ ಕಡೆ ಜಪಾನ್ ಸಹಾಯವೂ ನಿಂತು ಹೋಯಿತು.
ಐಎನ್‍ಎ ದಿಗ್ವಿಜಯಕ್ಕೆ ಪ್ರಕೃತಿ ವಿಕೋಪದ ಜೊತೆಗೆ ಕಾಲರಾ, ಮಲೇರಿಯಾ ಮಾರಕವಾಗಿ ಪರಿಣಮಿಸಿತು. ಜೊತೆಗೆ 1945 ರಲ್ಲಿ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲನ್ನಪ್ಪಿತು. ಇನ್ನು ರಷ್ಯಾದ ನೆರವು ಅವಶ್ಯಕವೆಂದರಿತು ಅವರು ವಿಮಾನ ಪ್ರಯಾಣ ಕೈಗೊಂಡರು. ಮಾರ್ಗ ಮಧ್ಯೆ ಅಪಘಾತದಲ್ಲಿ ಮರಣಿಸಿದರೆಂಬ ಸುದ್ದಿ ಕೇಳಿ ಬಂದಿತು. ಐಎನ್‍ಎ ಸೈನಿಕರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಬಹಳಷ್ಟು ಜನರಿಗೆ ಗಲ್ಲು ಶಿಕ್ಷೆ, ಗಡಿಪಾರು ಶಿಕ್ಷೆ ವಿಧಿಸಿತು. ರಾಷ್ಟ್ರದ್ಯಾಂತ ಬ್ರಿಟಿಷರ ವಿರುದ್ಧ, ಐಎನ್‍ಎ ಸೈನಿಕರ ಪರ ಜನತೆ ಪ್ರತಿಭಟನೆಗಳನ್ನು ಮಾಡಿದರು. ನಂತರ ಆಗಸ್ಟ್ 15 1947ರಂದು ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. 
ಸ್ವಾತಂತ್ರ್ಯವನ್ನೇ ತಮ್ಮ ಜೀವನವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಅದಕ್ಕಾಗಿ ಮುಡಿಪಾಗಿಟ್ಟು, ಆ ಹೋರಾಟದಲ್ಲಿ ಮಡಿದ ಆ ಅಮರ ಚೇತನ ಇಂದಿಗೂ ಭಾರತೀಯರಿಗೆ ಪ್ರಾತಃಸ್ಮರಣೀಯರೇ. ಅವರ ತ್ಯಾಗ, ಬಲಿದಾನಗಳೂ ಇಂದಿಗೂ ಎಲ್ಲಾ ಜನರಿಗೆ ಮಾರ್ಗದರ್ಶಕವೇ. ಮಹಿಳೆಯರು ಅಬಲೆಯರಲ್ಲ ಎಂದು ವಿಶ್ವಕ್ಕೆ ಸಾರಿದ ಆ ವಿಶ್ವಮಾನ್ಯ ವ್ಯಕ್ತಿ ಜಗತ್ತಿನ ಎಲ್ಲಾ ಮಹಿಳೆಯರಿಗೂ, ಅವರ ಹೋರಾಟಗಳಿಗೂ ಆದರ್ಶವೇ ಆಗಿದ್ದಾರೆ.   
-  ದೀಪಶ್ರೀ ಜೆ

ಮೊದಲು ಮಾನವನಾಗು - ಕಲೋಪಾಸಕನಾದ ಸುಧಾರಕ


{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿರುವುದನ್ನು, ಆ ದ್ವೇಷ ದಂಗೆಗಳಾಗಿ ಮಾರ್ಪಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ, ಜೀವಹರಣವಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದ್ವೇಷದಿಂದ ನಾವೇನೂ ಸಾಧಿಸಲು, ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ನಾವು ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ತಮ್ಮ ಹಿತಾಸಕ್ತಿಗಾಗಿ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ನಾವು ನೀವೆಲ್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಅನಿಸಿಕೆ, ಅಭಿಪ್ರಾಯಗಳನ್ನು, ಬರಹಗಳನ್ನು, ಕವನಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಮಹಾನ್ ಕವಿಗಳಲ್ಲೊಬ್ಬರಾದ ಶ್ರೀ ವಿ ಕೃ ಗೋಕಾಕ್ ರವರ ಕವನ}


ಧರ್ಮದ ಹೆಸರಿನಲಿ ಮಾಯವಾಯ್ತು
ನಮ್ಮ ಹಿರಿಮೆಯೆಲ್ಲ!
ಉರುಳುತಿರುವ ಕಾಲಚಕ್ರವನು ಕಾಣದೆ
ನಿಂತಲ್ಲಿಯೆ ನಿಂತು ನಾವು
ನಗೆಗೇಡಿಗಳಾದೆವೆಂದೆ
ಮನ್ವಂತರವನ್ನು ಮರೆತು ಗತಿಯ ಕಾಣದೆ.

ಹಳ್ಳಿಗರನು ಮುರಿವಗೌಡ
ಮೋಸಗೊಳಿಸುವಕ್ಕರಿಗನು
ಜನಗಣತಿಯ ಮದ್ಯ ಕುಡಿದ ರಾಜಕಾರಣಿ
ಧರ್ಮ ಮತದ ಮಣ್ಣು ತುಂಬಿ
ಕಣ್ಣು ಕಳೆಯುತಿರುವ ಕುರುಡ
ಇವರ ಮುರಿದ ದಿನವೆ ನಾಡಿಗಿಹುದು ಪಾರಣೆ.

ಸರಸ್ವತಿಯ ದೊಂಬರಾಟ
ವಿದ್ಯೆಯಿಂದು; ತಳ್ಳಿಬಿಡಿರಿ
ಅನ್ನ ಸಮಸ್ಯೆಯನು ಬಿಡಿಸದಂಥ ವಿದ್ಯೆಯು
ವಿದ್ಯೆಯೆಂತು? ಭ್ರಮೆಯು ಬೇಡ.
ಇದ್ದುದನಿದ್ದಂತೆ ತೋರ
ಲಳಿಯಬಹುದು ಜನದ ಕುಂಭಕರ್ಣ ನಿದ್ರೆಯು.  

- ವಿ ಕೃ ಗೋಕಾಕ್      

ಮಹಾನತೆಯತ್ತ - ಜೀತಪದ್ಧತಿಯ ವಿರೋಧಿ ಹೋರಾಟಗಾರ ಇಕ್ಬಾಲ್ ಮಸೀಹ್

[ಈ ಅಂಕಣದಲ್ಲಿ ನಾವು ಸಾಮಾನ್ಯತೆಯಿಂದ ಮಹಾನತ್ತೆಯತ್ತ ಸಾಗುತ್ತಿರುವ ಕಿರಿಯರು - ಹಿರಿಯರ ಬಗ್ಗೆ ವರದಿ ನೀಡಲಿಚ್ಛಿಸುತ್ತೇವೆ. ಹುಟ್ಟಿದಾಗಲೇ ಯಾರೂ ಮಹಾನರಾಗಿ ಹುಟ್ಟುವುದಿಲ್ಲ, ಮಹಾನತೆ ನಮ್ಮ ಕ್ರಿಯೆಗಳಿಂದಾಗುತ್ತದೆ. ಮಹಾನರಾದವರ ಸಾಧನೆಯ ಹಿಂದೆ ಶ್ರಮವಿದೆ, ದೃಢಸಂಕಲ್ಪವಿದೆ. ಪ್ರತಿಯೊಬ್ಬರು ಮನಸ್ಸು ಮಾಡಿದಲ್ಲಿ ಮಹಾನತೆಯತ್ತ ಸಾಗಬಹುದೆಂಬುದೇ ನಮ್ಮ ಅಭಿಪ್ರಾಯ.]

1982ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ ಇಕ್ಬಾಲ್‍ನನ್ನು ತಾಯ್ತಂದೆಯರು ಬಡತನದ ಕಾರಣದಿಂದಾಗಿ ಕಾರ್ಪೆಟ್ ಕಾರ್ಖಾನೆಗೆ ಬಾಲಕಾರ್ಮಿಕನಾಗಿ ಮಾರಿದರು. ಅಲ್ಲಿ ಇಕ್ಬಾಲ್ ಅಮಾನವೀಯ ಯಾತನೆ ಅನುಭವಿಸಿದ.  
ಜೀತ ಪದ್ಧತಿಯ ವಿರುದ್ಧ ಅಲ್ಲಿ ಹೋರಾಡುತ್ತಿರುವ ‘ಜೀತಪದ್ಧತಿ ವಿಮೋಚನಾ ರಂಗ’ದಿಂದ 1992ರಲ್ಲಿ ಮುಕ್ತನಾದ. ತಾನು ಸ್ವತಂತ್ರನಾದ ತಕ್ಷಣ ತನ್ನ ಪಾಡಿಗೆ ತನ್ನನ್ನು ನೋಡಿಕೊಳ್ಳದೆ, ಬಾಲಶ್ರಮದ ವಿರುದ್ಧ ಹೋರಾಟ ಆರಂಭಿಸಿದ. 
ಕಾರ್ಪೆಟ್ ಮಾಫಿಯಾದವರ ವಿರುದ್ಧ ಕೆಲಸ ಮಾಡುವುದು ಅಪಾಯಕರ ಎಂದು ತಿಳಿದಿದ್ದರೂ ಆ ಎಲ್ಲಾ ಅಪಾಯಗಳನ್ನು ಎದುರಿಸುತ್ತಾ, ತನ್ನ ಜೀವವನ್ನೇ ಪಣವಾಗಿಟ್ಟು ಸುಮಾರು 3000 ಮಕ್ಕಳನ್ನು ಬಾಲಶ್ರಮದಿಂದ ಬಿಡುಗಡೆಗೊಳಿಸಿದ. ಮಕ್ಕಳು ಮಾಡುವ ಕಾರ್ಪೆಟ್‍ಗಳನ್ನು ಬಹಿಷ್ಕರಿಸಿ ಎಂದು ಎಲ್ಲರಲ್ಲೂ ಮನವಿ ಮಾಡಿದ. ವಿಮೋಚನಾ ರಂಗದ ಹೋರಾಟದ ಪರಿಣಾಮವಾಗಿ ಕಾರ್ಪೆಟ್ ರಫ್ತು ಕಡಿಮೆಯಾಯಿತು. ಈ ಹೋರಾಟವನ್ನು ಸಹಿಸದ ‘ಕಾರ್ಪೆಟ್ ಮಾಫಿಯಾ’ದಿಂದ 1995ರ ಏಪ್ರಿಲ್ 16ರಂದು ಅವನನ್ನು ಹತ್ಯೆ ಮಾಡಿದರು. 
ಇದಕ್ಕೂ ಮುಂಚೆ ಅವನು ಅಮೆರಿಕಾಗೆ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಮಾತನಾಡಲು ಹೋಗಿದ್ದ. 

ಇವನ ಭಾಷಣದಿಂದ ಸ್ಫೂರ್ತಿ ಪಡೆದ ಅಮೇರಿಕಾದ ಶಾಲೆಯ ಅಮಾಂಡಾ ಎಂಬ ಹೆಣ್ಣುಮಗಳು ಮತ್ತು ಇತರ ಮಕ್ಕಳು “ಇಕ್ಬಾಲ್‍ನಿಗಾಗಿ ಒಂದು ಶಾಲೆ” ಎಂಬ ಯೋಜನೆಯಡಿ ಸಾಕಷ್ಟು ಹಣವನ್ನು ಸಂಗ್ರಹಿಸಿ ಹಿಂದುಳಿದ ದೇಶಗಳಲ್ಲಿ ಶಾಲೆಗಳನ್ನು ಕಟ್ಟಿಸಿದ್ದಾರೆ; ಕಟ್ಟಿಸಲು ಹಣ ಸಂಗ್ರಹಿಸುತ್ತಿದ್ದಾರೆ.
“ವಿಶ್ವದ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಖಚಿತಪಡಿಸುವುದು ನನ್ನ ಅತ್ಯಂತ ದೊಡ್ಡ ಕನಸಾಗಿದೆ” ಎಂಬುದು ಅವನ ಧ್ಯೇಯವಾಕ್ಯವಾಗಿತ್ತು.   

- ಸುಧಾ ಜಿ      

ಕವನ - ಹೌದು ನಾ ಸ್ತ್ರೀವಾದಿಯೇ



ವಿರೋಧಿಸಿದಾಗ ಅನ್ಯಾಯವನು 
ಧಿಕ್ಕರಿಸಿದಾಗ ದೌರ್ಜನ್ಯವನು 
ಖಂಡಿಸಿದಾಗ ಕಿರುಕುಳವನು 
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಕಲಿಸಿದರೆ ಮಗನಿಗೆ ಮನೆಗೆಲಸ
ಕಳಿಸಿದರೆ ಮಗಳ ಕರಾಟೆ ಕ್ಲಾಸ
ಮಾಡಿದರೆ ನಾನು ಕಛೇರಿ ಕೆಲಸ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಮನೆಗೆಲಸದಿ ಗಂಡ ಜೊತೆಗಿರಲೆಂದರೆ
ಮನೆಗೆಲಸಕೂ ಸಂಬಳ ಕೊಡಿರೆಂದರೆ
ಮಗನೂ ಮಗಳು ಸಮಾನರೆಂದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಬಸ್ಸಲಿ ಸೀಟಿಗೆ ಆಗ್ರಹಿಸಿದರೆ
ಮೈಮುಟ್ಟಬೇಡಿರೆಂದು ರೇಗಿದರೆ
ರಸ್ತೇಲಿ ಕೀಟಲೆ ಪ್ರತಿಭಟಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ವರದಕ್ಷಿಣೆ ಮದುವೆಗೆ ಬರನೆಂದರೆ
ಬಾಲ್ಯವಿವಾಹ ತಡೆಯಲೆತ್ನಿಸಿದರೆ
ಸ್ತ್ರೀಶಿಶುಹತ್ಯೆ ನಿಲ್ಲಿಸಲೆತ್ನಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಮಗನ ದುರ್ವರ್ತನೆ ತಿದ್ದಿದರೆ
ಗಂಡನ ಕಾಮೆಂಟ್ ಖಂಡಿಸಿದರೆ
ಮಗಳಿಗೆ ಸ್ವಾತಂತ್ರ್ಯವ ನೀಡಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ಕಛೇರೀಲಿ ಕಿರುಕುಳ ಪ್ರಶ್ನಿಸಿದರೆ
ಅವಮಾನದ ಕೆಲಸ ಬೇಡವೆಂದರೆ
ಅಧಿಕಾರಿ ಅತ್ಯಾಚಾರ ಧಿಕ್ಕರಿಸಿದರೆ
ನೀನು ಸ್ತ್ರೀವಾದಿಯೇ 
ಕೇಳುವರೆಲ್ಲ

ನ್ಯಾಯವನು ಬಯಸುವುದು
ಸಮಾನತೆಗೆ ಆಗ್ರಹಿಸುವುದು
ಸ್ವಾತಂತ್ರ್ಯವನ್ನು ಕೇಳುವುದು 
ಸ್ತ್ರೀವಾದಿತನದ ಸಂಕೇತವಾದರೆ
ಹೌದು ನಾ ಸ್ತ್ರೀವಾದಿಯೇ!

---ಸುಧಾ ಜಿ

(ಲಿಂಗತಾರತಮ್ಯವಿರದ ಸಮಾಜ ನಮ್ಮ ಗುರಿ)

ಕವನ - ಕೆಂಪು ಗುಲಾಬಿ ರೋಜಾ


ಅದೋ ಅಲ್ಲಿ ನೋಡಿ ಜನಸಾಗರ
ಕೈಗಳಲ್ಲಿ ಕೆಂಗುಲಾಬಿಗಳ ಹೂಹಾರ
ಮೊಗದಲ್ಲಿ ಹೆಮ್ಮೆ, ನಡಿಗೆಯಲ್ಲಿ ಬಲ್ಮೆ
ನೆಚ್ಚಿನ ಗೆಳತಿಗೆ ಅರ್ಪಿಸಲು ತಮ್ಮೊಲುಮೆ

ಯಾರೀಕೆ ರೋಜಾ? ಸದ್ದುಮಾಡದೆ ಸುದ್ದಿಯಾದವಳು!
ಲೆನಿನ್‍ನಿಂದ 'ಕಮ್ಯುನಿಸ್ಟ್ ಹದ್ದು' ಬಿರುದು ಪಡೆದವಳು!
ವಿಶ್ವದ ಶ್ರಮಿಕರಿಗಾಗಿ ಕಣ್ಣೀರು ಮಿಡಿದಳು
ತನುಮನ ಅವರಿಗಾಗಿಯೇ ಮೀಸಲಿಟ್ಟಳು!

ಬೇಡ ನಮಗೆ ರಾಜಿಮಾರ್ಗ ಎಂದಳು
ಮಾಕ್ರ್ಸ್ ಮಾರ್ಗದರ್ಶನಕ್ಕೆ ಮಾರುಹೋದಳು
ಲೀಪ್ಕ್‍ನೆಶ್ಟ್‍ರೊಡಗೂಡಿ ತೂಗಿಯೇ ಬಿಟ್ಟಳು
ಸ್ಪಾರ್ಟಕಸ್ ಎಂಬ ಹೋರಾಟದ ತೊಟ್ಟಿಲು!

ಅಂಜಲಿಲ್ಲ ಅಳುಕಲಿಲ್ಲ ದಿಟ್ಟೆ
ಹೇಡಿ ಫ್ರೀಕಾಪ್ರ್ಸ್‍ಗಳ ಧಾಳಿಗೆ
ದುಷ್ಟರು ದುರುಳರು ಕೊಚ್ಚಿ ಕಾಲುವೆಗೆಸೆದರೂ
ಹದ್ದಿನಂತೆ ಎತ್ತರಕ್ಕೇರಿಯೇ ಏರಿದಳು!

ಬರ್ಲಿನ್‍ನ ಕ್ರಮ ಕೊಳೆತು ನಾರುವ ಹೆಣ
ನಾನಿದ್ದೆ. ನಾನಿದ್ದೇನೆ, ನಾನಿರುವೆ ರಣರಿಂಗಣ
ಕ್ರಾಂತಿಯ ಕಿಡಿಹಚ್ಚಿ ಘೋಷ ಮೊಳಗಿದ ರೋಜಾ
ಇದೋ ನಿನಗೆ ವಿಶ್ವದ ಕ್ರಾಂತಿಕಾರಿಗಳ ಲಾಲ್ ಸಲಾಮ್!!
- ಶ್ರೀದೇವಿ 



ಕವನ - ಬದುಕಬೇಕಿದೆ ನನ್ನ ನಾಳಿನ ಕನಸುಗಳಿಗಾಗಿ



ನಿಮ್ಮ ಮೊನಚಾದ ಮಾತುಗಳಿಂದ 
ನನ್ನ ಕಾಡಬಹುದು
ನಿಮ್ಮ ತಿರುಚಿದ ಆಪಾದನೆಗಳಿಂದ 
ನನ್ನ ತಿವಿಯಬಹುದು
ನಿಮ್ಮ ಕೊಂಕು ಮಾತುಗಳಿಂದ
ನನ್ನ ಚುಚ್ಚಬಹುದು
ನಿಮ್ಮ ತಿರಸ್ಕಾರಭರಿತ ಹೇಳನಗಳಿಂದ
ನನ್ನ ರೆಕ್ಕೆಗಳ ಮುರಿಯಲೆತ್ನಿಸಬಹುದು  
ನಿಮ್ಮ ನಿರುತ್ಸಾಹದ ಮಾತುಗಳಿಂದ
ನನ್ನ ಉತ್ಸಾಹವ ಕೊಲ್ಲಲೆತ್ನಿಸಬಹುದು
ನಾ ಬಿದ್ದರೆ ನಗಬಹುದು
ಅತ್ತರೆ ಸಂತಸ ಪಡಬಹುದು
ನನ್ನ ಭಾವನೆಗಳ ಹೊಸಕುವ 
ಪ್ರಯತ್ನ ನಡೆಸಬಹುದು

ಆದರೂ
ನನಗೆ ಬದುಕುವಾಸೆಯಿದೆ
ನನಗಾಗಿ, ನನ್ನವರಿಗಾಗಿ
ನಾ ನಂಬಿದ ಪ್ರೀತಿಗಾಗಿ
ಬಿದ್ದಾಗ ಮೇಲೆತ್ತಿದವರಿಗಾಗಿ
ನೊಂದಾಗ ಸಂತ್ಯೆಸಿದವರಿಗಾಗಿ
ಪ್ರೀತಿಯ ಒಂದೆರಡು ಹನಿ ನೀಡಿದವರಿಗಾಗಿ
ನನ್ನ ನಾ ಕಂಡುಕೊಳ್ಳಲು 
ನೆರವಾದವರಿಗಾಗಿ
ನಾ ಬದುಕಬೇಕಿದೆ ಇಂದು
ನನ್ನ ನಾಳಿನ ಕನಸುಗಳಿಗಾಗಿ

- ಗಿರಿಜಾ ಕೆ ಎಸ್

ಕವನ - ಕಾಡಲ್ಲ ಮನದ ಬೀಡು



ನಿನ್ನದು ನಿನಗೆ ನಡಿ...
ಅವನದೆ ಮನೆ, ಮಕ್ಕಳು, ಮಂದಿ.
ಇಲ್ಲಿ ಎಲ್ಲವು ನಂದೆ
ಭ್ರಮಿಸುತ್ತಲೇ
ಬೇಕೆನಿಸಿದ್ದು, ಬೇಡವಾದದ್ದು ಕೊಟ್ಟು
ಬಿಡುಗಡೆ..ಪಡೆದೆ
ಬೇಕಿಲ್ಲ ಕಾಡುಮೇಡು
ಇಲ್ಲೇ ಎಲ್ಲ ಅರಿಯದ್ದು
ಅರಿತಿದ್ದು ಬಸವಳಿದಿದ್ದು
ಓಕರಿಸಿದ್ದು ಅಬ್ಬ ಒಂದೆರೆಡೆ.
ಇಲ್ಲ ಹೋಗಲಿಲ್ಲ
ಅರಸಲಿಲ್ಲ, ಅರಸಿಯಾಗಿ ಅಲ್ಲ...
ಸೇವಕಿಯಾಗಿಯು ಅಲ್ಲ..
ಬೇಯಿಸಿದೆ, ನಾನೇ ಉಣ್ಣಬೇಕಲ್ಲ 
ಉಪ್ಪು ಹುಳಿ ಕಾರ
ಒಪ್ಪ ಓರಣ, ಒಂಥರಾ ಖುಷಿ.
ಮಕ್ಕಳು ಅಮ್ಮ ಬೊಂಬಾಟ್.
ನಗು ಕಣ್ಣಲ್ಲಿ ಮಾತಲ್ಲಿ
ಸಾಕು ಬೇಕಿಲ್ಲ  ಯಾರಗೊಡವೆ.
ತೀರಾ ಗಾಂಧಿತನ ಬೇಡ ಕಂಡ್ರೋ
ಬಚಾಯಿಸಿ ಕೊಳ್ಳಿ
ತೀರ ಇಲ್ಲದವರಿಗೆ ಓಡಿ
ನೆರವಾಗಿ, ಬೇಕಿಲ್ಲ ಜಗವ
ಬದಲಿಸುವ ಮೋಹ 
ನನಗೆ, ನಿಮಗೆ.
ಬದಲಾಗದು. ಗೊತ್ತಲ್ಲವೆ?
ಗಾಂಧಿ, ಬುದ್ದ , ಬಸವ 
ಓದಿದ್ದು , ಬಾಯಿಪಾಟ ಮಾಡಿದ್ದು
ಬೋಧಿಸಿದ್ದು. 
ಇದ್ದುದರಲ್ಲಿ ಕಾಲುಚಾಚು
ಬದುಕು ಕಲಿತು, ಕಲಿಸಿ
ನಡೆಯುತ್ತಲೇ ಇರುವೆ
ಕೆಲವೊಮ್ಮೆ ಸೈಕಲ್ ಲು..
 ಇಂಥವೆ ಪಾಠ ಪ್ರವಚನ.
ಕೇಳೊಲ್ಲ ಯಾರು, 
ಬಿಡೋಲ್ಲ ನಾವು.
ಬೀಳೋದು ಏಳೋದು
ಅವರಿಗೆ ಅವರೆ ಗುರು, ಸಿಸ್ಯ.
ಇಲ್ಲ ನಿನ್ನ ಹಾದಿ ನಂದಲ್ಲ..
ಬೇಕಿಲ್ಲ...
ಕೆಲಸ ಮಾಡು,
ಉಣ್ಣು ನಡಿ, ಉಪದೇಶ ನಂದಲ್ಲ.
ಸಂಗಾತ ನಿನಗೆ ನೀನೆ
ಅರಳು, ಉರಳು, ಹೊರಳು.
ನಕ್ಕು ಹೊರಡು...
ಅಲ್ಲ ನಿನ್ನ ದಾರಿ ನಂದಲ್ಲ .....
ನೀ ಇಲ್ಲದಿರೆ
ಮನೆಯಲ್ಲ ಬಿಕೊ
ಬೇಗ ಬಂದುಬಿಡು
ಪೋನನಲ್ಲಿ ಮಗಳ ಉವಾತ
ಯಾಕೋ ಶುಗರ್
ತುಸ ಹೆಚ್ಚೇ ..ಮರೆಯದೆ
ರೊಟ್ಟಿಗಳೇ ಇರಲಿ.
ದಣಿವೆಂದು ಮರೆಯದಿರು.
ನಾ ಇಲ್ಲದ ಬದುಕು
ನೋಡು, ಅಗ ತಿಳಿಯುತ್ತೆ ...
ನಿರಂತರದ ಅವನಬ್ಬರ..
ಎಲ್ಲೋ ಹರಿಯುವ
ಜುಳುಜುಳು ನೀರು
ಮನಕ್ಕೆ ತಂಪು ತಂಪು
ಇರಲಿ ಮುದ ತೆಕ್ಕೆಗೆ
ಬಾರದಿದ್ದರೇನು...
ಇಲ್ಲ ಈ ನಡೆ ನಿನ್ನದಲ್ಲ
ಇಲ್ಲಿ ಒಂಟಿಯು ಅಲ್ಲ
ಜಂಟಿಯು ಅಲ್ಲ
ಬೇಡದಿದ್ದರು ಒಡಲ ತುಂಬ
ಲಕ್ಷಲಕ್ಷ ಸವಾಲು,
 ನಿಲ್ಲದ ಅಹವಾಲು.
ಎಲ್ಲಕ್ಕು ಸಮಪಾಲು
ಸಮಬಾಳು. 
ಮುಳ್ಳಬೇಲಿಗಳಲಿ
ಓಟ, ಅರಳುವುದಷ್ಟೆ
ಗೊತ್ತಿರುವ ಪಾಟ.
ಲೋಕದ ಜೋಳಿಗೆಯಲಿ ಬೆಲ್ಲವಾಗಿ  
ಮನದ ಹಾದಿಯಲಿ ಕಲ್ಲಾಗಿ
ಮಣ್ಣಿನ ಹೂಜಿಯಲಿ ನೀರಾಗಿ 
ಮಾತುಬಾರದ ಒಲವಿಗೆ ಜೀವವಾದೆನೆ.
ನಡೆ ನಿನ್ನ ದಾರಿಯವಳಲ್ಲ.
ಇರಲಿ ಇಂಥವೇ ನೂರಾರು
ಸಂಕಟ, ದುಮ್ಮಾನಗಳು

ಹರುಷದಿ ಎದೆಗಪ್ಪಿ ಸಂತೈಸಿ
ನಾ ನಡೆವೆನೆ.
- ಸವಿತಾ ರವಿಶಂಕರ್