ಹಬ್ಬಕ್ಕ್ಕೆ ಕುಂಕುಮಕ್ಕೆ ಮನೆಗೆ, ಗೊಂಬೆ ಆರತಿಗೆ, ಇವತ್ತು ನಮ್ಮನೆ ಅತಿಥಿ ನೀವು, ಮಗಳೊಂದಿಗೆ ಬನ್ನಿ ಎಂದಾಗ, ವಿಜಯಲಕ್ಷ್ಮಿಯವರ ಶ್ರೀಯುತ ಗುರುರಾಜ್ ರವರು ಕರೆದಾಗ ಮೊದಲು ಅವಕ್ಕಾದವಳು ನಾನು. ಹೆಂಗಸರಷ್ಟೆ ಕರೆಯುವವರು ಎಂದುಕೊಂಡಿದ್ದ ನನಗೆ ನಗು ಖುಷಿ. ನನ್ನ ಶ್ರೀಯುತರ ಆಫೀಸಿನಲ್ಲಿ ಸಹದ್ಯೋಗಿಯಾದ ಇವರ ನುಡಿ, ನಡೆ ಸೌಜನ್ಯ, ಮಮಕಾರದ ಎಲ್ಲೆಯನ್ನೆಂದು ದಾಟಿದ್ದೇ ಇಲ್ಲ.........
"ದೂರ ಬೆಟ್ಟದಲ್ಲೊಂದು ಮನೆ ಇರಬೇಕು ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು" ತಾರುಣ್ಯದ ಕನಸು. ಗೊಂಬೆಯಂತ ಮಕ್ಕಳು ರಾಮನ ಗುಣಗಳಿರುವ ಗಂಡ ನನ್ನವನಾದಾಗ ಮನೆಯಲ್ಲಿ ದಸರಾ ಹಬ್ಬ ಇದ್ದು ಮನೆ ತುಂಬ ಗೊಂಬೆಗಳಿರಬೇಕು ಎಂಬ ಭಾವ ವಿಜಯಕ್ಕನ ಮನೆಗೆ ಬಂದಾಗ ಅನಿಸಿದ್ದು ಸತ್ಯ. ಅವರ ಮೊದಲ ಭೇಟಿಯ ಉಪಚಾರ ಅಕ್ಕ ಭಾವ ಇದ್ದಿದ್ದರೆ ಹೀಗೆ ಇರುತ್ತಿತ್ತೇನೋ ಎಂಬಂತೆ ಎನಿಸಿತು.
ಹಬ್ಬಗಳೆಂದರೆ ನನಗಂತು ದೂರ ದೂರ. ಗದ್ದಲ, ಗೌಜುಗಳನೆಂದೂ ಪ್ರೀತಿಸಿದ ನನಗೆ ಇವುಗಳನ್ನು ಕರ್ತವ್ಯದಂತೆ ಪಾಲಿಸಿದ್ದೇ ಹೆಚ್ಚು. ಆಡಂಬರ, ಬರಿ ಪ್ರತಿಷ್ಟೆಯ ಸಂಕೇತವಾಗಿರುವ ಇವುಗಳನ್ನು ತಿರಸ್ಕಾರದಿಂದ ಕಂಡಿದ್ದೇ ಹೆಚ್ಚು.
ಯಾರ ಮನೆಗೆ ಕುಂಕುಮಕ್ಕೂ ಹೋಗದ ನಾನು ಗುರು ದಂಪತಿಗಳ ಒತ್ತಾಯಗಳಿಲ್ಲದ ನಿರ್ಮಲ ನೇರನುಡಿ ಅವರ ಮನೆಗೆ ನಡೆಸಿತು.
ಮನೆ ಕಟ್ಟಿದ ರೀತಿ, ಒಳಾಂಗಣ, ಮನೆಯ ಶೈಲಿ, ಮನೆ ಜನರ ಸರಳತೆ ವಿಚಿತ್ರವಾದ ಆಪ್ಯತೆಯನ್ನು, ಎಷ್ಟು ಸಹಜವಾಗಿ ಇದ್ದಾರಲ್ಲ ಎಂಬ ಗೌರವ ಮೂಡಿಸಿತು. ಹಬ್ಬದ ಸಖ್ಯತೆ ಮೊದಲಬಾರಿ ಎಂಬಂತೆ ಅನುಭವಿಸಿದೆ.
ಹೊಳಿಗೆ , ಬಾಳೆಕಾಯಿ ಚಿಪ್ಸ್ ಸವಿಯುತ್ತ ಒಂದೊಂದೆ ಗೊಂಬೆಗಳ ಸಾಲುಗಳನ್ನ ಅವಲೋಕಿಸತೊಡಗಿದೆ. ಗೊಂಬೆ ಜೋಡಿಸುವುದು ಕಲೆ ಎಂದಿತು ಮನಸ್ಸು. ಅಪರಿಮಿತ ತಾಳ್ಮೆ, ಮನಸ್ಸಿನ ಸಂಭ್ರಮಗಳಿಲ್ಲದಿದ್ದರೆ ಇದು ಅಸಾಧ್ಯ ಎನಿಸಿದ್ದಂತು ಸುಳ್ಳಲ್ಲ.....
ಮಾರುಕಟ್ಟೆ ಸಾಲು, ಶೆಟ್ಟರ ದಂಪತಿಗಳ ಅಂಗಡಿ, ಹಣ್ಣಿನ ಬುಟ್ಟಿ ಅಂಗಡಿಯ ಅಜ್ಜಿ, ಸರಕು ಸಾಮಾಗ್ರಿಗಳುಳ್ಳ ಏಕಾಂಗಿ ವ್ಯಾಪಾರಸ್ಥರು ನೋಡುತ್ತ ಪುಟ್ಟ ಮಕ್ಕಳಂತೆ ಸಂಭ್ರಮಿಸಿದೆ. ಎರಡನೆಯ ಸಾಲು ಮದುವೆಮನೆ ವಿವಿಧ ನಮೂನೆಯ ದಂಪತಿಗಳ ನಡುವೆ ನವದಂಪತಿಗಳ ಮದುವೆ ಅಕ್ಕ ಪಕ್ಕ ಗದ್ದಲ ತೋರುವ ಗೊಂಬೆಗಳು.
ಮತ್ತೊಂದು ಸಾಲು ಸೈನಿಕರ ದಳ, ನೃತ್ಯಗಾರರ ಗುಂಪುಗಳು ಕೊನೆಸಾಲಿನಲ್ಲಿ ರಾಮ, ರಾವಣರ ದರ್ಬಾರುಗಳು, ಕುಂಬಕರ್ಣನ ಅಂಥಃಪುರ, ಕೃಷ್ಣನಬಾಲ್ಯದ ವಿವಿಧ ಪವಾಡಗಳ ಸಾಲು. ದಶಾವತಾರ ಓ ಕಣ್ಮನಗಳಿಗೆ ಬಣ್ಣದ ಓಕುಳಿ ತಂಪು ನಮ್ಮಮನಗಳಲ್ಲಿ ಹರಿದಿತ್ತು. ಬೆಟ್ಟಗುಡ್ಡ , ಅರಣ್ಯ, ಜಲಪಾತ, ತೋಟ, ಕಾಡು, ಹಸಿರೇ ಹಸಿರು ನವಧಾನ್ಯಗಳಲ್ಲಿ ತುಂಬಿದ ಗದ್ದೆ ಮನುಜನ ಎಲ್ಲ ಸಂಸ್ಕೃತಿಯ ಮಜಲುಗಳು ಇಲ್ಲಿ ತಾಯಿ ಮಗಳ ಕೈಜೋಡಣೆಯಲ್ಲಿ ಅರಳಿದ್ದವು. ಬಾಲ್ಯದ ಹೊಂಬಳದ ಕೆಳಗಿನ ಮೆಟ್ಟಲು ಮನೆಯಲ್ಲಿ ಅಜ್ಜಿ ಕರಿಗೊಂಬಿ ಜೋಡಿಸುತ್ತಿದ್ದದ್ದು ಮಸಕುಮಸಕು ನೆನಪುಗಳು ಅಕ್ಕದಿರೊಂದಿಗೆ ಆಡಿದ್ದು, ನಲಿದದ್ದು ಮಸಕು ಮಸಕು ನೆನಪು....
ಒರಗಿತ್ತಿ ರತ್ನ ಹಾಗು ನನ್ನ ಮಗಳು ಅದಿತಿ "ಚಂದನದ ಗೊಂಬಕ್ಕ...ಗಂಧವ ತೇಯೋವಳೆ..ಗುಂಡುಗುಲಗಂಜಿ ಮುಡಿಯೋಳೆ ಬೊಂಬಕ್ಕ....ರಂಬೆ ಬಾ ಹಸೆಗೆ, ಜಗುಲಿಗೆ ಅಡ್ಡರ ಮುಡಿಸುವ ದೊಡ್ಡರಮನೆಗೆ ಅಡ್ಡಗಂಗಳದಿ ಚಲುವ ಬೊಂಬಕ್ಕನ ಅಡ್ಡ ಮುಡಿ ಹೂವ ಮೂಡಿಸಿದರು." ಅಂತ ಆರತಿ ಹಾಡುತ ನಿಂತಾಗ ಎಷ್ಟೆ ವಯಸ್ಸಾದರು ಬಾಲ್ಯ ಮೀರಲೆ ಇಲ್ಲ ಇವರು ಅಂತ ಗೊಣಗುಡುತ, ಚಕ್ಕಲಿ, ಕೊಡಬೋಳೆ, ಆಂಬೊಡೆ ಬಾಯಾಡಿಸುತ ಬರಿ ಇಷ್ಟೇ ಆಯಿತು ಜೀವನ ಅಂತ ಗೊಣಗುಡುತ ನಡೆಯುತ ಬದುಕಲಿ ಇಂಥವೆಲ್ಲ ಇದ್ದರೇನೆ ಚಂದ ಅಂತಾನು ಹೇಳ್ತಾ ನಡೆಯುವ ಅವಳ ಕಂಡಾಗ ನಗುತ ಎಷ್ಟೋ ಸಲ ಅರ್ಥವಿಲ್ಲದ ಧಾವಂತ ಮನಸಲ್ಲಿ ಅಂದುಕೊಂಡದ್ದು ಉಂಟು. ಯಾರದೋ ಮನೆಯಲಿ, ಯಾರದಾರದೊ ಅನಿಸಿಕೆಗಳೊಡನೆ, ಆಸೆ, ಕನಸುಗಳೊಡನೆ ಬದುಕುವ ಪರಿಯೇ ಬದುಕಾದಾಗ ಈ ಸಂಭ್ರಮಗಳು ಹೇಗೆ ಎಲ್ಲಿ ಬದುಕಿನ ಚಿಲುಮೆಗಳಾಗಿ ಹೇಗೆ ಬದಲಾಗಬಲ್ಲವು ಎಂದು ಯೋಚಿಸುವುದರೊಳಗೆ ಎರಡನೆ ಶನಿವಾರ ಸಂಪನ್ನವಾಗಿ ಸಂಜೆ ಅವಳೊಡನೆ ಅವಳ ತಂಗಿ ಮನೆಗೆ ಹೋಗದಿದ್ದರೆ ಮನದಲ್ಲಿ ನೊಂದುಕೊಳ್ಳುವಳಲ್ಲ ಎನ್ನುತ್ತಲೇ ದೇವಿ ಇಂದು ಗ್ರೇ ಕಲರ್ ನಲ್ಲಿ ರಾರಾಜಿಸುತ್ತಾಳೆ ಎಂದು color ದಸರಾ ಯು ಟ್ಯೂಬ್ ವಿಡಿಯೋ ಹೇಳಿದ್ದು ನೆನಪಾಗಿ ಆ ಬಣ್ಣದ ಸೀರೆಯುಟ್ಟು ಜುಮುಕಿಯೊಡನೆ ರೆಡಿಯಾದೆ...ಮಗಳು ಚಂದನದ ಬೊಂಬಕ್ಕ ಅಂತ ನೋಡಿದಾಗ ನಗುತ್ತ ಹಾಡತೊಡಗಿದಳು......
- ಸವಿತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ