Pages

ಕವನಾಮೃತ : ಬಿರುಗಾಳಿ - ದಿನಕರ ದೇಸಾಯಿ


[ಕನ್ನಡದ ಹೆಮ್ಮೆಯ ಕವಿ-ಕವಯತ್ರಿಯರ ಕವನಗಳು 
ಓದುಗರ ಆಸ್ವಾದಕ್ಕಾಗಿ]

ಬಿರುಗಾಳಿಯೇ ಬೇಕು ನಮ್ಮ ಉದ್ಧಾರಕ್ಕೆ
ಪೊಳ್ಳು ಮರಗಳನೆಲ್ಲ ಭೂಮಿಗುರುಳಿಸಲಿಕ್ಕೆ

ಬೊಡ್ಡೆಯೊಂದಿಗೆ ಅಡ್ಡ ಟೊಂಗೆಗಳನೂ ಸೀಳಿ
ಹುಳಿಕಾಯಿಗಳನೆಲ್ಲ ಉರುಳಿಸಲಿ ಬಿರುಗಾಳಿ

ಚಂಡಮಾರುತದಲ್ಲಿ ಹಾರಿ ಹೋಗಲಿ ಬೆಂಡು
ಸಪ್ತ ಸಾಗರದಾಚೆ ಹರಕುಚಿಂದಿಯ ಮುಂಡು

ಸೋರುವಾ ಮಾಡಗಳು ಮುರಿದು ಬಿದ್ದರೆ ಶಾಂತಿ
ನಾರುವಾ ಗೂಡುಗಳು ಕಳಚಿ ಬಿದ್ದರೆ ಕ್ರಾಂತಿ

ದರಗೆಲ್ಲ ದೂರಾಗಿ ಚೊಕ್ಕವಾಗಲಿ ನೆಲವು
ಬಿರುಗಾಳಿಯಲ್ಲಿಯೇ ಬರಲಿ ನರನಿಗೆ ಗೆಲವು
 ದಿನಕರ ದೇಸಾಯಿ


ಕಾಮೆಂಟ್‌ಗಳಿಲ್ಲ: