ಮರಗಳು, ಟೆಲಿಗ್ರಾಫ್ ಕಂಬಗಳು ಹಿಂದಕ್ಕೆ ಓಡುತ್ತಿದ್ದವು. ರೈಲುಗಾಡಿ ಶೂನ್ಯವನ್ನು ಭೇದಿಸುತ್ತ, ಗಾಳಿಯೊಡನೆ ಯುದ್ಧಮಾಡುತ್ತ ಹುಷಾರಾಗಿ ಮುಂದಕ್ಕೆ ಸಾಗುತ್ತಿತ್ತು. ಕಿಟಕಿ ಪಕ್ಕದಲ್ಲಿ ಕುಳಿತು, ತಲೆಯನ್ನು ಕಿಟಕಿಗೆ ವಾಲಿಸಿ ಹೊರಗೆ ನೋಡುತ್ತಾ ಕುಳಿತಿದ್ದೆ. ಗಿಡಗಳು ಓಟವನ್ನು ನೋಡುತ್ತಿದ್ದೆ. ರೈಲಿನ ಚಕ್ರಗಳ ಶಬ್ಧವನ್ನು ಕೇಳುತ್ತಾ ಕುಳಿತ್ತಿದ್ದೆ. ಬೇಜಾರಾಯಿತು. ಬ್ಯಾಗಿನಿಂದ ಪುಸ್ತಕವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದೆ.
“ನಿಮ್ಮ ಹೆಸರೇನು?” ಕೇಳಿದಳು ನಾಲ್ಕೈದು ವರ್ಷದ ಹುಡುಗಿಯೊಬ್ಬಳು. ಇನ್ನೊಬ್ಬ ಚಿಕ್ಕ ಹುಡುಗ ನನ್ನ ಉತ್ತರಕ್ಕಾಗಿಯೆ ಕುತೂಹಲದಿಂದ ನೋಡುತ್ತಾ ನಿಂತಿದ್ದ.
ಆ ಮಕ್ಕಳೂ, ಅವರ ತಾಯಿ ಹಿಂದಿನ ಸ್ಟೇಷನ್‍ನಲ್ಲಿ ಹತ್ತಿರುವಂತಿತ್ತು. ನಾನು ಸರಿಯಾಗಿ ಗಮನಿಸಿರಲಿಲ್ಲ. ಆ ಮಕ್ಕಳು ಮಾಡುತ್ತಿದ್ದ ಚೇಷ್ಟೆ, ಹಾಕುತ್ತಿದ್ದ ಪ್ರಶ್ನೆಗಳು, ಆಕೆ ಕೊಡುತಿದ್ದ ಉತ್ತರಗಳು, ನಾನು ಅಷ್ಟಾಗಿ ಗಮನಿಸದಿದ್ದರೂ ಎಲ್ಲವೂ ಕೇಳಿಸುತ್ತಿತ್ತು.
ಮಕ್ಕಳಿಬ್ಬರೂ ಮುದ್ದಾಗಿ, ಆರೋಗ್ಯವಾಗಿದ್ದರು. ದೊಡ್ಡ ದೊಡ್ಡ ಹೂಗಳ ಸಿಲ್ಕ್ ಗೌನ್ ಹಾಕಿಕೊಂಡಿದ್ದಳು ಆ ಹುಡುಗಿ. ಹುಡುಗ ಸಹ ಇನ್‍ಶರ್ಟ್ ಮಾಡಿ, ಬಿಳಿಯ ಬುಷ್ ಕೋಟ್ ಧರಿಸಿ, ಅದರ ಮೇಲೆ ಟೈ ಹಾಕಿಕೊಂಡಿದ್ದ. ಇಬ್ಬರು ಬೆಲೆಬಾಳುವ ಬೂಟುಗಳನ್ನು ಧರಿಸಿದ್ದರು. ತಾಯಿ ಸಹ ಒಡವೆಗಳನ್ನು ಧರಿಸಿ ಸ್ವಲ್ಪ ತಯಾರಾಗಿಯೆ ಬಂದಿದ್ದು, ಆ ಮಕ್ಕಳ ತಾಯಿ ಅನಿಸಿಕೊಳ್ಳುವಂತೆಯೇ ಇದ್ದಳು. ಸಣ್ಣ ಅಂಚಿನ ಕೆಂಪು ರೇಶಿಮೆ ಸೀರೆ, ರಿಸ್ಟ್ ವಾಚ್ ಹಾಕಿಕೊಂಡು ಬಹಳ ಆಧುನಿಕವಾಗಿದ್ದಳು.
ಆ ಮಕ್ಕಳು ಕೇಳಿದ ಪ್ರಶ್ನೆಯನ್ನು ಮನಸ್ಸಿನಲ್ಲಿಯೆ ಅರ್ಥ ಮಾಡಿಕೊಂಡು ನಗುತ್ತಾ ಕೇಳಿದೆ, “ನಿನಗೇಕೆ ನನ್ನ ಹೆಸರು?” ಸ್ವಲ್ಪ ನಾಚಿಕೆಯಿಂದ ಆ ಹುಡುಗಿ “ಸುಮ್ಮನೆ” ಎಂದಳು.
“ಮೊದಲು ನಿನ್ನ ಹೆಸರೇನು ಹೇಳು?.” “ಮಂಜುಲತಾ”- ಉತ್ಸಾಹದಿಂದ ಹೇಳಿದಳು.
“ಮಂಜುಲತಾ? ಬಹಳ ಚೆನ್ನಾಗಿದೆ” ಎಂದೆ.
“ಏನದು ಮಂಜುಲತಾ? ಮಂಜುಳಾ ಅಂತ ಹೇಳು. ಅವಳ ಹೆಸರು ಮಂಜುಳಾ ಅಂತಾನೆ!” ಎಂದಳು ಆ ಮಕ್ಕಳ ತಾಯಿ ನನ್ನ ಕಡೆ ನೋಡುತ್ತಾ.
ಮಗು ಅಳು ಮುಖವನ್ನು ಮಾಡಿಕೊಂಡು, “ಉಹೂ ಅಲ್ಲ, ನನಗೆ ಆ ರೀತಿ ಬೇಡ. ನನ್ನ ಹೆಸರು ಮಂಜುಲತಾನೆ” ಎಂದಳು ಬಿಂಕವಾಗಿ.
“ಏನದು ಅಷ್ಟುದ್ದ ಹೆಸರು? ಈ ದಿನಗಳಲ್ಲಿ ಅದೇನು ಫ್ಯಾಶನ್ನೆ?” ಅಂದಳು ಅವರಮ್ಮ.
ಆ ಮಗುವಿಗೆ ಉತ್ತರಿಸಲಾಗಲಿಲ್ಲ. ಆಕೆ ನನ್ನನ್ನೆ ಮದ್ಯವರ್ತಿಯಾಗಿಟ್ಟುಕೊಂಡು, “ನೀವೆ ಹೇಳಿ ಮಂಜುಳಾ ಚೆನ್ನಾಗಿದೆಯೋ, ಮಂಜುಲತಾ ಚೆನ್ನಾಗಿದೆಯೋ?” ಕೇಳಿದಳು.
ನಾನು ನಕ್ಕೆ. ಆ ಮಗುವನ್ನು ನೋಡಿದರೆ ‘ಅಯ್ಯೊ ಪಾಪ’ ಎನ್ನಿಸಿತು.
“ಅವಳಿಗೆ ಯಾವ ಹೆಸರು ಇಷ್ಟವಿದ್ದರೆ ಅದನ್ನೆ ಇಟ್ಟುಕೊಳ್ಳಲಿ ಬಿಡಿ. ಸರೀನಾ ಮಗು?” ಎಂದೆ ಮಗುವಿನ ಕೆನ್ನೆಯನ್ನು ಮುಟ್ಟುತ್ತಾ.
ಆಕೆ ಒಂದು ರೀತಿಯಾಗಿ ನಕ್ಕಳು. ಮಗುವಿನ ಮುಖ ಮತ್ತೆ ಕಳೆಗೂಡಿತು.
“ನಿನ್ನ ತಮ್ಮನ ಹೆಸರೇನು ಮಂಜುಲತಾ?” ಎಂದೆ.
“ನನ್ನ ಹೆಸರು ಶರತ್ ಕುಮಾರ್. ನನ್ನ ತಾಯಿ ವೆಂಕಟೇಶ್ವರ್ ರಾವ್ ಅಂತಾನೂ ಕರೀತಾಳೆ” ಅಂದ ಆ ಹುಡುಗ.
“ಅದೇನು ಎರಡು ಹೆಸರಾ ನಿನಗೆ?” ಕೇಳಿದೆ.
ಆಕೆ ತಕ್ಷಣವೇ “ಅವನು ಹೊಟ್ಟೆಯಲ್ಲಿದ್ದಾಗ, ನನ್ನ ತಾಯಿ, ಈ ಸಾರಿ ಗಂಡು ಮಗು ಬೇಕೆಂದು ಹರಕೆ ಹೊತ್ತಳು ಅದಕ್ಕೆ ನಮ್ಮವರೆಲ್ಲಾ ಆ ಹೆಸರನ್ನೆ ಕರೆಯುತ್ತಾರೆ” ಎಂದಳು.
‘ಆದರೆ ನಿನಗೇನು ಇಷ್ಟವೋ’ ಎಂದು ಕೇಳಲು ಹೋಗಿ ಸುಮ್ಮನಾದೆ. ಮತ್ತೆ ಆ ಹುಡುಗನಿಗೆ ತಾಯಿಯ ಜೊತೆ ಜಗಳವೇಕೆಂದು.
“ಊಂ, ನಿನ್ನ ಹೆಸರೂ ಕೂಡ ಚೆನ್ನಗಿದೆ, ಶರತ್ ಕುಮಾರ್” ಎಂದೆ.
“ನಿಮ್ಮ ಹೆಸರೇನು ಹೇಳಲೇ ಇಲ್ಲಾ” ಎಂದರು ಆಕೆ.
ನಾನು ನಕ್ಕೆ. “ನನ್ನ ಹೆಸರು ನಿಮಗೆ ಇಷ್ಟವಾಗುವುದಿಲ್ಲ ಬಿಡಿ, ಬಹಳ ಹಳೆಯ ಹೆಸರು. ಈ ದಿನಗಳ ಫ್ಯಾಶನ್ ಏನೂ ಅಲ್ಲ.” ಪ್ರತಿಯೊಂದು ಪದವನ್ನು ಒತ್ತಿಒತ್ತಿ ಹೇಳಿದೆ.
“ಮ್ಯಾಡಮ್, ಟಿಕೆಟ್ ಪ್ಲೀಸ್.” ಪರ್ಸ್ ತೆಗೆದು ಟಿಕೆಟ್ ಅನ್ನು ಟಿಸಿಗೆ ತೋರಿಸಿ ಮತ್ತೆ ಒಳಗಿಟ್ಟೆ. ಆಕೆ....... ಆಕೆಯ ಹೆಸರೇನು ನನಗೆ ತಿಳಿಯದು, ರೈಲು ಇಳಿಯುವವರೆಗೂ ನನಗೆ ಆಕೆಯ ಹೆಸರು ಗೊತ್ತಾಗಲೇ ಇಲ್ಲ. ಆದ್ದರಿಂದ ದುರ್ಗಾಂಬ ಎನ್ನುತ್ತೇನೆ. ಪಾಪ ಆ ಹೆಸರು ಆಕೆಗೆ ಹಿಡಿಸುವುದಿಲ್ಲ. ದುರ್ಗಾಂಬ ಸಹ ನನ್ನಂತೆಯೆ ಒಂದು ಟಿಕೆಟ್ ತೆಗೆದು ಕೊಟ್ಟಳು. ಅದನ್ನು ತೆಗೆದುಕೊಂಡ ಟಿಸಿ “ಮಕ್ಕಳಿಬ್ಬರಿಗೂ ಟಿಕೆಟ್ ಇರಬೇಕಮ್ಮ” ಎಂದರು.
“ಅರೇ ಅವರಿಬ್ಬರೂ ಇನ್ನೂ ಚಿಕ್ಕವರು. ಹುಡುಗನಿಗೆ ಇನ್ನೂ ಮೂರೂ ಸಹ ತುಂಬಿಲ್ಲ.”
ನನಗೆ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಆ ಟಿಸಿ ಕೂಡಾ ಆಕೆಯನ್ನು ಬಿಟ್ಟು, ‘ನಿಮ್ಮ ಹೆಣ್ಣು ಜಾತಿಯ ಸುಳ್ಳಿಗೆ ನೀನೇ ಸಾಕ್ಷ್ಯ' ಎನ್ನುವಂತೆ ನನ್ನತ್ತ ನೋಡಿದ.
ಟಿಸಿ ಮತ್ತೆ ಆಕೆಗೆ ಮತ್ತೆ ಹೇಳಿದ, “ಇಲ್ಲಮ್ಮ. ಈ ಮಕ್ಕಳಿಬ್ಬರಿಗೂ ಟಿಕೆಟ್ ಇರಬೇಕು.”
ಆಕೆ..... ದುರ್ಗಾಂಬ.....ದಬಾಯಿಸುವ ಧೋರಣೆಯಲ್ಲಿ ಮಾತನಾಡಿದಳು. “ರಾಜಮಂಡ್ರಿ ಸ್ಟೇಷನ್ ಮಾಸ್ಟರ್‍ಅನ್ನು ಕೇಳಿಯೇ ಹತ್ತಿದೆ. ಟಿಕೆಟ್ ಬೇಕಾಗಿಲ್ಲ ಎಂದರು.”
ಟಿಸಿ ಒಂದು ನಿಮಿಷ ಮೌನವಾಗಿದ್ದು, “ಅವರು ಏನಾದರೂ ಬರೆದುಕೊಟ್ಟರೆ?”
“ಇಲ್ಲ. ಆ ರೀತಿ ಏನಾದರೂ ಬರೆಸಿಕೊಳ್ಳಬೇಕೆಂದು ನನಗೆ ತೋಚಲಿಲ್ಲ. ಇಲ್ಲದಿದ್ದರೆ ರಾಜಮಂಡ್ರಿಯಲ್ಲೇ.....”
“ಅಮ್ಮ, ನಾವು ಹತ್ತಿದ್ದು ರಾಜಮಂಡ್ರಿಯಲ್ಲಾ?” ಆಶ್ಚರ್ಯದಿಂದ ತನ್ನ ಕಣ್ಣುಗಳನ್ನು ಅಗಲಿಸುತ್ತಾ ಕೇಳಿದ ಹುಡುಗ.
ದುರ್ಗಾಂಬ ಮಗನ ಕಡೆ ಕಣ್ಣು ಕೆಂಪಗೆ ಮಾಡಿ ನೋಡುತ್ತಿದ್ದರೆ, ಟಿಸಿ ಎರಡು ಹೆಜ್ಜೆ ಮುಂದೆ ಹಾಕಿ ಹೇಳಿದ, “ಹಣ ತೆಗೆದಿಡಿ. ಉಳಿದ ಟಿಕೆಟ್‍ಗಳನ್ನು ಪರಿಶೀಲಿಸಿ ಬರುತ್ತೇನೆ.”
ಆಕೆ ಎರಡು ನಿಮಿಷ ಹಾಗೆಯೇ ಕುಳಿತಳು. ನಿಧಾನವಾಗಿ ಹ್ಯಾಂಡ್ ಬ್ಯಾಗಿನಿಂದ ನೋಟುಗಳನ್ನು ಹೊರತೆಗೆದು ಲೆಕ್ಕ ಮಾಡುತ್ತಾ ಕುಳಿತಳು. ಮತ್ತೆ ಟಿಸಿ ಬಂದು ಮಾರ್ವಾಡಿಯಂತೆ ನಿಂತನು. “ಹೋಗಲಿ ಚಿಕ್ಕವನನ್ನಾದರೂ ಬಿಡುವುದಿಲ್ಲವೇ” ಮತ್ತೆ ಆಶೆಯಿಂದ ಕೇಳಿದಳಾಕೆ. ಎಷ್ಟೋ ಪರಿಚಯವಿದೆ ಎನ್ನುವಂತೆ ಆತನನ್ನು ನೋಡಿದಳು.
ಟಿಸಿ ಮಾತನಾಡಲಿಲ್ಲ. ಚಕಚಕನೆ ಬರೆದು, ಪುರ್ರೆಂದು ಎರಡು ಹಾಳೆ ಹರಿದು ನೋಟುಗಳನ್ನು ತೆಗೆದುಕೊಂಡ. ತಾಯಿಯನ್ನು ದಂಗುಬಡಿಸಿದ ಆ ದೊಡ್ಡ ಮನುಷ್ಯನನ್ನು ವಿಸ್ಮಯದಿಂದ ನೋಡಿದರು ಆ ಮಕ್ಕಳು. ಅವನನ್ನು ದಬಾಯಿಸಲಾಗದ ತಾಯಿಯತ್ತ ಸಹಾನುಭೂತಿಯಿಂದ ನೋಡಿದರು. ಟಿಸಿ ಹೋಗುತ್ತಲೇ ಆ ಹುಡುಗ ಅಮ್ಮನ ಬಳಿ ಬಂದ. “ಅಮ್ಮಾ, ಯಾರೇ ಅವರು? ಪೋಲಿಸಾ?”
ಆಕೆ ಮುಖವನ್ನು ಬಿಗಿ ಮಾಡುತ್ತಾ ಅಂದಳು, “ಯಾರೋ ದರಿದ್ರದವ. ಉದ್ಯೋಗ ಹೋಗುವವರೆಗೂ ಈ ರೀತಿಯಾಗಿಯೇ ದೋಚಿಕೊಂಡು ತಿನ್ನುತ್ತಾನೆ.”
ಕೈಗೆ ಬಿಲ್ಲು ಕೊಟ್ಟಮೇಲೆ ದೋಚಿಕೊಳ್ಳುವುದು ಎಂದರೆ ಏನರ್ಥ ಎಂದು ಕೇಳೋಣ ಎಂದುಕೊಂಡೆ.
“ಅಮ್ಮಾ, ನಾವು ಕವ್ವೂರಿನಲ್ಲಿ ಅಲ್ಲವಾ ಹತ್ತಿದ್ದು?” ಅವಳ ಕೋಪವೆಲ್ಲಾ ಮಗನ ಮೇಲೆ ಹೋಯಿತು.
“ಎಲ್ಲೊ ಹತ್ತಿದೆವು. ಅವನ ಎದುರಲ್ಲಾ ನೀನು ಕೇಳೋದು?”
“ಏನು ಕೇಳಿದರೆ?”
“ಹಾಳಾದವನೇ, ಎದುರು ಪ್ರಶ್ನೆ ಹಾಕಬೇಡ.”
ತಾಯಿಯ ಕೋಪವನ್ನು ನೋಡಿದರೆ ನಿಜಕ್ಕೂ ಭಯವಾಯಿತು ಶರತ್‍ಗೆ. ನಿಧಾನವಾಗಿ ಅಕ್ಕನ ಬಳಿ ಸೇರಿಕೊಂಡ.
“ಅಕ್ಕಾ, ಅವನು ಪೋಲಿಸ್ ತರಹ ಚೆನ್ನಾಗಿದ್ದಾನಲ್ಲವೇ?”
ಹೌದೆನ್ನುವಂತೆ ಬೇಗ ತಲೆಯಾಡಿಸಿದಳು ಅಕ್ಕ.
“ನಾವು ಪೋಲಿಸ್ ಆಟ ಆಡಿಕೊಳ್ಳೋಣವೇ. ನಾನು ಟಿಕೆಟ್ ಕೇಳುತ್ತೀನಿ. ನೀನು ಕೊಡಬೇಕು.”
“ನನ್ನ ಹತ್ತಿರ ಇಲ್ಲವಲ್ಲ.”
ಮಕ್ಕಳು ಸ್ವಲ್ಪ ಹೊತ್ತು ಯೋಚಿಸಿದರು. ತಾಯಿಯನ್ನು ನೋಡುತ್ತಾ ಮುದ್ದಾಗಿ ಕೇಳಿದರು, “ಅಮ್ಮಾ, ಟಿಕೆಟ್ ಕೊಡ್ತೀಯಾ, ಆಡಿಕೊಳ್ಳುತ್ತೇವೆ.” ನಗು ಬಂತು ನನಗೆ.
ಅವರಮ್ಮ ಕೋಪಗೊಂಡಳು. “ಹಾಳಾದ ಆಟ.”
“ಟಿಕೆಟ್ಟಾಟ ಚೆನ್ನಾಗಿರುತ್ತಮ್ಮ.”
“ಛಿ. ಹಾಳಾದ್ದು. ಟಿಕೆಟ್ ಕಲೆಕ್ಟರ್ ಆಟ ಯಾಕೆ? ಡಾಕ್ಟರ್ ಆಟ ಆಡಿಕೊಳ್ಳಿ.”
“ಛಿ, ಡಾಕ್ಟರ್ ಆಟ ನನಗೆ ಬೇಡ. ಇಂಡಿಷನ್ . . . . ನೋವು.”
ನಾನು ಸುಮ್ಮನಿರಲಾರದೆ ದುರ್ಗಾಂಬಳತ್ತ ತಿರುಗಿ, “ನಿಮ್ಮ ಮಗನ ಮನಸ್ಸು ಮೆತ್ತನೆಯದ್ದು” ಅಂದೆ.
“ಆಂ, ಅವನ ಮಾತಿಗೇನು ಬಿಡಿ. ಯಾವಾಗಲೂ ಹಾಗೆಯೇ ಮಾತನಾಡುತ್ತಾನೆ. ಡಾಕ್ಟರ್ ಅಂದ್ರೆ ಮುಖ ಗಂಟುಹಾಕಿಕೊಳ್ಳುತ್ತಾನೆ.”
“ಡಾಕ್ಟರ್ ಆಗಬೇಕೆಂದರೆ ಮಗುವಿಗೆ ಅದರ ಬಗ್ಗೆ ಆಸಕ್ತಿ ಇರಬೇಕಲ್ಲವೇ?”
“ಅವನ ಮುಖ! ಅವನಿಗೇನು ಗೊತ್ತಾಗುತ್ತೆ? ಡಾಕ್ಟರ್ ಅಂದ್ರೆ ಹೆಸರಿಗೆ ಹೆಸರು, ದುಡ್ಡಿಗೆ ದುಡ್ಡು. ಮಕ್ಕಳಿಗೆ ಅವೆಲ್ಲಾ ಗೊತ್ತಾಗುತ್ತಾ?”
“ಮತ್ತೆ ಹುಡುಗಿಯನ್ನೇನೂ ಓದಿಸುತ್ತೀರಿ?”
“ಅವಳಿಗೇಕೆ ಓದು? ಹೆಣ್ಣು ಮಗು. ಅಷ್ಟು ಓದಲೇ ಬೇಕು ಎಂದರೆ ಹತ್ತನೇ ತರಗತಿಯವರೆಗೆ ಓದಿಸುತ್ತೇನೆ. ನಾನೂ ಅಷ್ಟೇ.”
ತನಗೆ ತಾಯಿಯೇನೋ ಕೊರತೆ ಉಂಟುಮಾಡುತ್ತಿದ್ದಾಳೆ ಎನ್ನುವಂತೆ ಮಂಜುಲತ ನನ್ನತ್ತ ದೈನ್ಯತೆಯಿಂದ ನೋಡಿದಳು. ನಾನು ನಗುತ್ತಾ ಆಕೆಯೊಡನೆ, “ಮಂಜುಲತಾ ಡಾಕ್ಟರ್ ಆಗಬೇಕು. ನೋಡಿ, ಇಷ್ಟು ಮೆತ್ತನೆ ಕೈಗಳಿಂದ ರೋಗಿಯನ್ನು ಮುಟ್ಟಿದರೆ, ಇನ್ನು ಔಷಧಿಯೇಕೆ ಬೇಕು ಹೇಳಿ” ಅಂದೆ. ಆಕೆ ಸ್ವಲ್ಪ ನಕ್ಕರು.
ನಿಧಾನವಾಗಿ ಮಕ್ಕಳಿಬ್ಬರೂ ನನ್ನ ಹತ್ತಿರ ಬಂದರು.
“ಏನ್ರಿ, ನಿಮ್ಮ ಹೆಸರು ಮಂಜುಲತಾನೇನಾ?” ಹಠಾತ್ತಾಗಿ ಕೇಳಿದಳು ಮಂಜುಲತಾ. ಹೌದೆನ್ನುತ್ತೇನೋ ಎನ್ನುವಂತೆ ಆಶೆಯಿಂದ ನೋಡಿದಳು. ನನ್ನ ಹೆಸರು ತಿಳಿದುಕೊಳ್ಳಬೇಕೆನ್ನುವ ಆಶೆ ಆ ಮಕ್ಕಳಿಬ್ಬರಿಗೂ.
“ನನಗೆ ಹೆಸರಿಲ್ಲವಮ್ಮ” ಎಂದೆ ನಗುತ್ತಾ.
ಆಶ್ಚರ್ಯದಿಂದ ನೋಡುತ್ತಾ ಮಂಜುಲತಾ, “ನಿಜವಾಗಿಯೂ ನಿಮಗೆ ಹೆಸರಿಲ್ಲವೇ. ನಿಮ್ಮನ್ನು ಎಲ್ಲರೂ ಏನೆಂದು ಕರೆಯುತ್ತಾರೆ.”
“ನೀವು ಮಾತ್ರ ಅತ್ತೆ ಎಂದು ಕರೆಯಿರಿ, ಚೆನ್ನಾಗಿದೆಯಾ?”
ರೈಲತ್ತೆ, ರೈಲತ್ತೆ.... ಕಿರುಚಿದರು ಮಕ್ಕಳು.
ಹಾಡುತ್ತಾ ಬಂದ ಭಿಕ್ಷುಕಿಯನ್ನು ಕಂಡ ಮಕ್ಕಳ ಹಠಾತ್ತಾಗಿ ಚೇಷ್ಟೆ ನಿಲ್ಲಿಸಿ ಅವಳತ್ತ ನೋಡುತ್ತಾ ನಿಂತರು. ದುರ್ಗಾಂಬ ಚಿಲ್ಲರೆಗೋಸ್ಕರ ಬ್ಯಾಗ್ ತೆರೆದಳು.
“ಅಮ್ಮಾ, ನಾನು ಕೊಡುತ್ತೇನೆ, ನಾನು ಕೊಡುತ್ತೇನೆ” ಎಂದು ಕೂಗತೊಡಗಿದರು ಮಕ್ಕಳು.
“ದೊಡ್ಡವಳು ನಾನಿರುವಾಗ ನಿಮಗೇಕೆ ದೊಡ್ಡಸ್ತಿಕೆ” ಎಂದು ದುರ್ಗಾಂಬ ಭಿಕ್ಷುಕಿಯ ಕೈಯ್ಯಲ್ಲಿ ದುಡ್ಡು ಹಾಕಿದಳು. ಮಕ್ಕಳು ಸುಮ್ಮನಾದರು.
ನಾನು ಎರಡು ಆಣೆಗಳನ್ನು ತೆಗೆದು ಮಕ್ಕಳ ಕೈಯ್ಯಲ್ಲಿ ಕೊಟ್ಟೆ. ಅವರಿಬ್ಬರೂ ಸಂತೋಷದಿಂದ ಆ ಭಿಕ್ಷುಕಿಯ ಕೈಯ್ಯಲ್ಲಿ ಹಾಕಿದರು. ಮಂಜುಲತ ಅವರಮ್ಮನ ಹತ್ತಿರ ಹೋಗಿ ಕುಳಿತುಕೊಂಡಳು. ಕೇಳಿದಳು, “ಅಮ್ಮಾ, ಅವಳ ಕಣ್ಣೇಕೆ ಹಾಗೆ ಮುಚ್ಚಿ ಹೋಗಿದೆ?” “ಅವಳು ಕುರುಡಿ, ಕಣ್ಣು ಕಾಣಿಸುವುದಿಲ್ಲ.”
“ಯಾಕೆ ಕಾಣಿಸುವುದಿಲ್ಲ?” ಹುಡುಗ ಕೂಡ ಅಲ್ಲಿ ಸೇರಿಕೊಂಡ.
“ಅವಳು ಏನೋ ಪಾಪ ಮಾಡಿದ್ದಾಳೆ.” “ಏನು ಮಾಡಿದ್ದಾಳಮ್ಮ?”
“ಏನೋ, ನಮಗೇನು ಗೊತ್ತಾಗುತ್ತೆ, ದೇವರಿಗೆ ಗೊತ್ತಾಗುತ್ತೆ.”
“ದೇವರು ಗುಡಿಯಲ್ಲಿಯೇ ಇರ್ತಾನಲ್ಲಾ? ಅವನಿಗೆ ಹೇಗೆ ಗೊತ್ತಾಗುತ್ತೆ?”
“ತಪ್ಪು. ದೇವರನ್ನು ಅವನು ಎನ್ನಬಹುದಾ?” “ಅಕ್ಕ. ದೇವರನ್ನು ಅವರು ಅನ್ನಬೇಕೆ.”
“ಅಮ್ಮಾ, ದೇವರಿಗೆ ಹೇಗೆ ಗೊತ್ತಾಗುತ್ತೆ?” “ಅಬ್ಬಾ, ಏನ್ರೊ ನಿಮ್ಮ ಪ್ರಶ್ನೆಗಳು. ದೇವರಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಗೊತ್ತಾಗುತ್ತೆ.”
ಆ ಭಿಕ್ಷುಕಿ ಮತ್ತೆ ಹಾಡು ಹೇಳುತ್ತಾ ವಾಪಸ್ ಬಂದಳು.
“ಅಮ್ಮಿ, ಒಂದು ಸಾರಿ ಹಾಡುವುದನ್ನು ನಿಲ್ಲಿಸು” ಎಂದೆ ಗಟ್ಟಿಯಾಗಿ. ಹಾಡು ನಿಂತಿತು.
“ನಿನ್ನ ಕಣ್ಣುಗಳು ಹೇಗೆ ಹೋದವು, ಹುಟ್ಟಿನಿಂದಲೇನಾ, ಅಥವಾ ಮಧ್ಯದಲ್ಲಿ ಏನಾದರೂ ಖಾಯಿಲೆಯಾಗಿ ಹೋಯಿತಾ?” ಕೇಳಿದೆ. ಮಕ್ಕಳಿಬ್ಬರೂ ನನ್ನ ಹತ್ತಿರ ಬಂದರು.
“ಯಾರಮ್ಮ ನೀನು ತಾಯಿ? ಇಷ್ಟು ಕರುಣೆಯಿಂದ ಕೇಳುತ್ತಿದ್ದೀಯ? ಎಷ್ಟು ಬಾರಿ ಹೇಳಿಕೊಂಡ್ರೆ ಅಷ್ಟು ಬಾರಿ ನನ್ನ ಹೊಟ್ಟೆ ತಣ್ಣಗಾಗುತ್ತಮ್ಮ.” ಒಂದು ಗಂಟಿನಿಂದ ಸಣ್ಣ ಚೀಲವನ್ನು ತೆಗೆದು ಅದರಲ್ಲಿ ದುಡ್ಡನ್ನು ಹಾಕಿಕೊಳ್ಳುತ್ತ, “ಒಂದು ವರ್ಷವಾಯಿತಮ್ಮ, ಯಾರೋ ಮಹಾತಾಯಿ ಶೋಕಿಯಿಂದ ಕಾರಿನಲ್ಲಿ ತಿರುಗುತ್ತಾ ನನ್ನ ಮೇಲೆ ಹತ್ತಿಸಿದಳು. ಧರ್ಮಾಸ್ಪತ್ರೆಯಲ್ಲಿ ನಾಲ್ಕು ತಿಂಗಳಿದ್ದೆ. ಕಣ್ಣುಗಳು ಹೋದವು. ಅದಕ್ಕೆ ಮುಂಚೆ ತರಕಾರಿ ಮಾರುತ್ತಾ ಬದುಕುತ್ತಿದ್ದೆ. ಈ ತಿರುಪೆ ಎತ್ತುವ ಬದುಕು ಕರ್ಮಾನೆ ತಾಯಿ,” ಎಂದು ಉತ್ತರಿಸಿ, ಮತ್ತೆ ಹಾಡಿಕೊಳ್ಳುತ್ತಾ ಹೊರಟುಹೋದಳು.
ನಾನು ದುರ್ಗಾಂಬಳತ್ತ ನೋಡಿದೆ, ‘ಆ ವ್ಯಕ್ತಿ ಮಾಡಿದ ಪಾಪವೇನು ಈಗ ಹೇಳು ಎನ್ನುವಂತೆ.’
“ಇಷ್ಟು ಸುಳ್ಳು ಹೇಳದಿದ್ದರೆ ಆಕೆಯ ಹೊಟ್ಟೆ ತುಂಬುತ್ತದಾ? ಬಿಡಿ,” ಎಂದಳು. ವಿನಾಕಾರಣದ ದ್ವೇಷವೇಕೊ ಆ ವ್ಯಕ್ತಿಯ ಮೇಲೆ.
“ಅಮ್ಮಾ, ಅವಳು ಏನು ಹೇಳಿದ್ದು? ಕಾರ್ ಕೆಳಗೆ ಬಿದ್ದು ಹೋದೆ ಎಂದಳಲ್ಲವೇ?”
“ಬಿದ್ದರೆ ಮಾತ್ರ. ಕೈಗೋ ಕಾಲಿಗೋ ಏಟು ತಗಲಬೇಕೆ ಹೊರತು ಕಣ್ಣೇ ಹೋಗಬೇಕೆ?” ಎಂದಳು. ಮಕ್ಕಳು ಕಕ್ಕಾಬಿಕ್ಕಿಯಾದರು.
“ಒಳ್ಳೆಯವರನ್ನು ಕರೆದುಕೊಂಡು ಹೋಗಿ ರೈಲು ಕೆಳಗೆ ಹಾಕಿದರೂ ಅವರು ಸಾಯುವುದಿಲ್ಲವೇ?” ಕೇಳಿದೆ.
ದುರ್ಗಾಂಬ ಕೇಳಿದರೂ ಕೇಳಿಸಲಿಲ್ಲವೇನೋ ಎಂಬಂತೆ ಸುಮ್ಮನಾದಳು.
“ಅಮ್ಮ, ಅವಳು ಯಾವತ್ತೂ ದೇವರಿಗೆ ತೆಂಗಿನಕಾಯಿ ಹೊಡೆಯಲಿಲ್ಲವೇ?” ಕೇಳಿದರು ಮಕ್ಕಳು ತಾಯಿಯನ್ನು.
“ಏನು, ನೀವು ಹೊಡೆಯುತ್ತೀರಾ?” ನಾನು ಮಕ್ಕಳನ್ನು ಕೇಳಿದೆ.
ಕುಮಾರ್ ಉತ್ಸಾಹದಿಂದ ಹೇಳಿದ – “ನಾನೂ, ನಮ್ಮಕ್ಕ ಸಹ ದೇವರಿಗೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ, ನಮ್ಮ ಅಮ್ಮ ಮಾಡಿಸುತ್ತಾಳೆ.”
"ಯಾಕೆ?”
“ಪುಣ್ಯ ಬರುತ್ತದೆ.”
“ಪುಣ್ಯ ಅಂದ್ರೆ.....?”
“ಪುಣ್ಯ ಅಂದ್ರೆ.....” ಸ್ವಲ್ಪ ಹೊತ್ತು ಆ ಕಡೆ ಈ ಕಡೆ ನೋಡಿ, “ಅಮ್ಮಾ, ಪುಣ್ಯ ಅಂದ್ರೆ ಏನು?” ತಾಯಿಯನ್ನು ಕೇಳಿದ.
ನಾನು ತಕ್ಷಣವೇ ಮಧ್ಯಪ್ರವೇಶಿಸಿ, “ಸರಿ ಪುಣ್ಯ ಬಂದ್ರೆ..?”
“ದೊಡ್ಡ ಉದ್ಯೋಗ ಸಿಗುತ್ತದೆ. ತುಂಬಾ ಹಣ ಬರುತ್ತೆ. ದೊಡ್ಡ ಮನೆ ಕಟ್ಟಿಕೊಳ್ಳಬಹುದು.”
ಮಗನ ಮಾತುಗಳನ್ನು ಕೇಳಿ ಮುಸಿಮುಸಿ ನಕ್ಕಳು ದುರ್ಗಾಂಬ.
ಆ ಮಕ್ಕಳಿಬ್ಬರನ್ನು ನೋಡಿದರೆ ನನಗೆ ಏನೋ ವೇದನೆಯಾಯಿತು. ಹೇಗೆ ಹೇಳಿದರೆ ಹಾಗೆ ಕೇಳುವ ವಿನಯವಂತಿಕೆ ಇರುವ ಮಕ್ಕಳವರು. ಏನು ನೋಡಿದರೂ ಕೇಳಿ ಕೇಳಿ ತಿಳಿದುಕೊಳ್ಳಬೇಕೆನ್ನುವ ಉತ್ಸಾಹ ಇರುವ ಮಕ್ಕಳು. ಆದರೆ ಎಷ್ಟು ಕಾಲ ಇರುತ್ತದೆ ಈ ಉತ್ಸಾಹ. ಅವರಿಗೆ ಎಲ್ಲಾ ತಪ್ಪು ಮಾತುಗಳನ್ನೇ ಕಲಿಸುತ್ತಿದ್ದರೆ, ಅವರು ಕಲಿಯುವಂತಹುದು ಏನಿರುತ್ತದೆ?
ಹಸುಗಂದಮ್ಮಗಳ ಹೃದಯಗಳು ಒಳ್ಳೆಯ ಭೂಮಿಯಂತೆ. ಅವುಗಳಲ್ಲಿ ಯಾವ ರೀತಿಯ ಬೀಜಗಳನ್ನು ಬಿತ್ತಿದರೆ ಅದೇ ರೀತಿಯ ಗಿಡಗಳೇ ಬೆಳೆಯುತ್ತವೆಯಲ್ಲವೇ?
“ಏಯ್, ಗಾಡಿ ನಿಲ್ಲುತ್ತಿದೆ, ಮತ್ತೆ ಸ್ಟೇಷನ್ ಬರುತ್ತದೆ. ಸುಮ್ಮನೆ ಕುಳಿತುಕೊಳ್ಳಿ. ಜನ ಬಂದು ಮೇಲೆ ಬೀಳುತ್ತಾರೆ. ಖಾಲಿ ಇಲ್ಲ ಹೋಗಿ ಎನ್ನಿ. ಅವರೇ ಹೋಗುತ್ತಾರೆ” ದುರ್ಗಾಂಬಳ ಬೋಧನೆ.
ಆ ಸ್ಟೇಷನ್ ಮುಂಚಿನ ಸ್ಟೇಷನ್‍ನಲ್ಲಿಯೂ ಆಕೆ ಹಾಗೆಯೇ ಹೇಳಿದ್ದಂತೆ ನೆನಪು.
“ಯಾಕಮ್ಮಾ ಹೋಗು ಎನ್ನುವುದು? ಖಾಲಿಯೇ ಇದೆಯಲ್ಲಾ?”
“ಮೂರ್ಖರೇ, ಮಾತನಾಡದೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ. ಇಲ್ಲಿ ನೋಡಿ, ಈ ಬ್ಯಾಗ್ ನಿಮ್ಮ ಪಕ್ಕದಲ್ಲಿ ಇಟ್ಟುಕೊಳ್ಳಿ. ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಿ.”
ಮಕ್ಕಳಿಬ್ಬರೂ ಕಾಲುಗಳನ್ನು ಅಗಲವಾಗಿ ಚಾಚಿಕೊಂಡು ಬೆಂಚನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡು ಕುಳಿತರು. ರೈಲು ನಿಂತಿತು. ಬ್ಯಾಗ್ ಹಿಡಿದು ಎದ್ದೆ.
“ನೀವು ಇಲ್ಲಿಯೇ ಇಳಿಯುತ್ತೀರಾ?” ಕೇಳಿದರಾಕೆ. “ಹೌದು” ಎಂದೆ.
ಮಕ್ಕಳತ್ತ ನೋಡಿದೆ, ‘ತಪ್ಪು, ಆ ರೀತಿ ಕುಳಿತುಕೊಳ್ಳಬಾರದು’ ಅನ್ನುವಂತೆ ಮುಖದ ಮೇಲೆ ಕೈಹಾಕಿ ನಗುತ್ತಾ ತೋರಿಸಿದೆ. ಅವರೂ ನಕ್ಕರು. ನನ್ನಂತೆ ಮುಖದ ಮೇಲೆ ಬೆರಳನ್ನಿಟ್ಟುಕೊಂಡರು.
ಆ ಮುಖಗಳಲ್ಲಿ ನಗು ಮಿಂಚುತ್ತಿತ್ತು. ಅವರ ಎಳೆ ಮನಸ್ಸುಗಳಲ್ಲಿ ಅಂಟಿದ ಕಲ್ಮಶಗಳ ಒಳಗಿನಿಂದ ಕಾಂತಿಯಿಂದ ಪ್ರಕಾಶಿಸುತ್ತಿರುವಂತೆ ಊಹಿಸಿದೆ. ಇನ್ನೊಂದು ಇಪ್ಪತ್ತು ವರ್ಷಗಳಾದ ನಂತರ ಈ ಮಕ್ಕಳನ್ನು ಭೇಟಿಯಾದರೆ, ಆಗ ಹೇಗಿರುತ್ತಾರೋ? ನೋಡಲು ಸಾಧ್ಯವಾದರೆ?
“ಹೋಗುತ್ತಿದ್ದೀರಾ ರೈಲತ್ತೆ” ಎನ್ನುತ್ತಾ ಮಂಜುಲತಾ ಬೆಂಚಿನಿಂದ ಕೆಳಗಿಳಿದಳು.
“ಹೌದಮ್ಮ, ನನ್ನ ಊರು ಇದೇ. ನಾನು ಇಲ್ಲಿಯೇ ಇಳಿಯುತ್ತಿದ್ದೀನಿ.”
ದೀನವಾಗಿ ನೋಡಿದರು ಮಕ್ಕಳು.
ನಗುತ್ತಾ ನಾನೆಂದೆ, “ನನ್ನ ಹೆಸರೂ ಮಂಜುಲತಾನೆ. ರೈಲತ್ತೆ ಅಲ್ಲ.”
“ಭಲೇ ಚೆನ್ನಾಗಿದೆ, ರೈಲತ್ತೆ ಹೆಸರೂ ಕೂಡ ನನ್ನ ಹೆಸರೇ. ಮಂಜುಲತಾನೇ.”
ರೈಲು ಇಳಿದು, ಮಕ್ಕಳನ್ನು ನೋಡುತ್ತಾ ಪ್ಲಾಟ್‍ಫಾರ್ಮ್ ಮೇಲೆ ನಿಂತುಕೊಂಡೆ.
“ಅಮ್ಮ, ರೈಲತ್ತೆ ಒಳ್ಳೆಯವರಲ್ಲವೇ?” ಮಕ್ಕಳು ಅವರಮ್ಮನನ್ನು ಕೇಳುವುದು ಕೇಳಿಸಿತು.
“ಆ, ಎಲ್ಲರೂ ಒಳ್ಳೆಯವರೇ, ----“ ಅಂದಳಾಕೆ.
ರೈಲು ಚಲಿಸಿತು. ಮಕ್ಕಳಿಬ್ಬರೂ ಕಿಟಕಿ ಹತ್ತಿರಕ್ಕೆ ಬಂದು ಕೈ ಬೀಸಿದರು.
ಅವರು ಬಹಳ ದುರಾದೃಷ್ಟವಂತರೇನೋ ಎನಿಸಿತು ಆ ಘಳಿಗೆ. ಆ ಹುಡುಗ ಡಾಕ್ಟರ್ ಆಗುತ್ತಾನಾ? ಆ ಹುಡುಗಿ? ಹತ್ತನೇ ತರಗತಿಗೇ ಶಾಲೆ ಬಿಟ್ಟುಬಿಡುತ್ತಾಳಾ?
ಅವರ ಮಕ್ಕಳಿಗೆ ಮತ್ತೆ ಇವರೂ ಕೂಡ ಹೀಗೆಯೇ ಹೇಳಿಕೊಡುತ್ತಾರಾ????
ಅನುವಾದ - ಸುಧಾ ಜಿ