(ಸುಧಾ ಜಿ ಮತ್ತು ವಿಜಯಲಕ್ಷ್ಮಿ ಎಂ ಎಸ್)
ಭಗತಸಿಂಗರ ಕಥೆಯನು ಹೇಳುವೆ
ಕೇಳಿರಿ ನೀವು ಜನರೆಲ್ಲ
ವೀರಯೋಧನ ತ್ಯಾಗದ ಕಥೆಯ
ಆಲಿಸಿ ನೀವು ಜನರೆಲ್ಲ
ಸಾವಿರದ ಒಂಬೈನೂರೇಳರ ಸೆಪ್ಟೆಂಬರ್
ಇಪ್ಪತ್ತೆಂಟರ ಶುಭದಿನದಲ್ಲಿ
ವಿದ್ಯಾವತಿ ಕಿಶನರ ಮಗನಾಗಿ ಜನಿಸಿದ
ಪಂಜಾಬಿನ ಬಂಗಾದಲ್ಲಿ
ಶಾಲೆಯಿಂದಲೇ ವಿಚಾರದೊಲವು
ಪುಸ್ತಕ ಪ್ರೀತಿ ಬೆಳೆದಾಯ್ತು
ಮುಷ್ಕರ, ಸಂಪು, ಚಳವಳಿಯಲ್ಲಿ
ಸುಖದೇವರ ಜೊತೆಯಾಯ್ತು
ನಡೆಯಿತು ಜಲ್ಯನ್‌ವಾಲಾಬಾಗ್ನಲ್ಲಿ
ಭಾರತೀಯರ ನರಮೇಧ
ಭಗತನು ಅಂದೇ ಪಣವನು ತೊಟ್ಟನು
ಆಂಗ್ಲರ ತೊಲಗಿಸಲಿಲ್ಲಿಂದ
ಚೌರಿಚೌರಾದ ಘಟನೆಯ ನಂತರ
ಗಾಂಧಿ ಬಿಟ್ಟರು ಚಳವಳಿಯ
ಭಗತರು ತೊರೆದರು ಪೂರ್ಣವಾಗಿ
ಮಂದಗತಿಯ ದಾರಿಯ
ಮನೆಯಲಿ ಮದುವೆಯ ವಿಚಾರ ಬರಲು
ಭಗತರು ಹೊರಟರು ಅಲ್ಲಿಂದ
ಕ್ರಾಂತಿಕಾರಿ ಆಜ಼ಾದರು ದೊರಕಲು
ಸ್ನೇಹ ಬೆಳೆಯಿತು ಒಲವಿಂದ
ರಷ್ಯಾದಲ್ಲಿನ ಕಾರ್ಮಿಕ ಕ್ರಾಂತಿ
ಭಗತರ ಮನವ ಸೆಳೆದಿತ್ತು
ಅಲ್ಲಿನ ಹಾಗೆ ಶ್ರಮಿಕರ ರಾಜ್ಯದ
ಸ್ಥಾಪನೆ ಕನಸು ಮೂಡಿತ್ತು
ಭಾರತದಿಂದಲೆ ಆಂಗ್ಲರ ಓಡಿಸಿ
ಸಮಸಮಾಜವ ಕಟ್ಟಬೇಕು
ಎಲ್ಲರ ಶ್ರಮಕೆ ಬೆಲೆಯು ದೊರೆತು
ಓದು ಕೆಲಸ ಸಿಗಬೇಕು
ಜಾತಿ ಧರ್ಮದ ಭೇದವ ತೊರೆದು
ಎಲ್ಲರು ಒಂದೆಂದೆ ಸಾರಿದರು
ಯುವಜನರನ್ನು ಒಂದುಗೂಡಿಸಲು
ಎಚ್ ಎಸ್ ಆರ್ ಎ ಕಟ್ಟಿದರು
ಸೈಮನ್ ಕಮಿಷನ್ ಬರಲು ದೇಶಕೆ
ತಡೆಯಲು ಎಲ್ಲರೂ ಕೂಡಿದರು
ಚಳುವಳಿ ದಿನದಿ ಪೋಲಿಸ್ ಹೊಡೆತಕೆ
ಮರಣ ಹೊಂದಿದರು ಲಜಪತರು
ಸಾವಿಗೆ ಸೇಡನು ತೀರ್ಮಾನಿಸಿತು
ಹೋರಾಟಗಾರರು ಗುಂಪು ಸೇರಿ
ಅಧಿಕಾರಿಯನು ಕೊಂದರು ಭಗತರು
ಆಜಾದ್ ರಾಜ್ಗುರು ಜೊತೆ ಸೇರಿ
ವೇಷವ ಮರೆಸಿ ಹೊರಟರು ಅವರು
ದುರ್ಗಾಭಾಬಿಯ ಜೊತೆಯಲ್ಲಿ
ಕಲ್ಕತ್ತಾಗೆ ತೆರಳಿದ ಭಗತರು
ದೇಶಯೋಧರ ಸೇರಿದರಲ್ಲಿ
ಆಗ್ರಾಗೆ ಬಂದ ಆಜಾದ್ ಭಗತರು
ಎಲ್ಲರನೊಂದು ಮಾಡಿದರು
ಶಕ್ತಿಯ ಹೆಚ್ಚಿಸಿ ಕ್ರಾಂತಿಯ ಮಾಡಲು
ಯೋಜನೆಯನ್ನು ಹಾಕಿದರು
ಊಟ ನಿದ್ದೆ ಚಿಂತೆಯೆ ಮಾಡದೆ
ಕ್ರಾಂತಿಯ ಯೋಚನೆ ಮಾಡಿದರು
ಆಂಗ್ಲರ ಮೇಲೆ ದಾಳಿಯ ನಡೆಸಲು
ತಂತ್ರವನೊಂದನು ಹೂಡಿದರು
ಕ್ರಾಂತಿಕಾರಿಗಳ ಬಂಧನ ಕಾಯಿದೆ
ತಂದರು ಬ್ರಿಟಿಷರು ವೇಗದಲಿ
ಅಂಗೀಕರಿಸಲು ಮಸೂದೆಯನ್ನು
ಸೇರಿದರೆಲ್ಲ ಅಸೆಂಬ್ಲಿಯಲ್ಲಿ
ಮಸೂದೆ ಜಾರಿಯ ಚರ್ಚೆಯ ಮಧ್ಯದಿ
ಭಗತರು ದತ್ತರು ಎದ್ದಾಯ್ತು
ಜನರಿಲ್ಲದ ಕಡೆ ಬಾಂಬನು ಸ್ಫೋಟಿಸಿ
ಕರಪತ್ರಗಳನು ಹಂಚಾಯ್ತು
ತಾವೇ ಬಂಧನಕೊಳಗಾದ ಧೀರರ
ಕಂಡು ಜನತೆ ಬೆರಗಾಯ್ತು
ವಿಚಾರಣೆ ಎಂಬ ನಾಟಕವೊಂದು
ಕೋರ್ಟಿನಲ್ಲಿ ಶುರುವಾಯ್ತು
ಬೇಡಿಕೆ ಮೂಲಕ ಸ್ವಾತಂತ್ರ್ಯ ಸಿಗದು
ಎಂಬುದ ನಾವು ಅರಿತೆವು
ಕಿವುಡು ಸರ್ಕಾರಕೆ ಕೇಳಿಸಲೆಂದೆ
ಜೋರಾದ ಸದ್ದನು ಮಾಡಿದೆವು
ಸುಳ್ಳು ಸಾಕ್ಷಿಗಳ ಹುಟ್ಟಿಸಿದಾಂಗ್ಲರು
ಆರೋಪಗಳನು ಹೊರಿಸಿದರು
ವಂಚನೆಯಿಂದಲೆ ಕ್ರಾಂತಿಕಾರರಿಗೆ
ಜೀವಾವಧಿ ಶಿಕ್ಷೆಯ ನೀಡಿದರು
ಸೆರೆಮನೆಯಲ್ಲಿನ ಸ್ಥಿತಿಗತಿ ಕಂಡು
ಉಪವಾಸವನ್ನು ಮಾಡಿದರು
ಅರವತ್ಮೂರು ದಿನಗಳ ನಂತರ
ಜತಿನರು ಮರಣ ಹೊಂದಿದರು
ಸ್ಯಾಂಡರ್ಸ್ ಹತ್ಯೆಯ ಆಪಾದನೆಯು
ಭಗತರ ಮೇಲೆ ಬಂದಾಯ್ತು
ಮತ್ತೆ ವಿಚಾರಣೆ ಎಂಬ ನಾಟಕ
ಕೋರ್ಟಿನಲ್ಲಿ ಶುರುವಾಯ್ತು
ಕ್ರಾಂತಿಕಾರಿಗಳು ಕೋರ್ಟನು ಬಳಸಿ
ಕ್ರಾಂತಿಯ ಪ್ರಚಾರ ಮಾಡಿದರು
ಆಂಗ್ಲ ವಿರೋಧಿ ಹೋರಾಟ ಮಾಡಲು
ದೇಶದ ಜನರಿಗೆ ಹೇಳಿದರು
ಭಗತ್, ಸುಖದೇವ್ ರಾಜಗುರುವಿಗೆ
ಗಲ್ಲು ಶಿಕ್ಷೆಯ ನೀಡಾಯ್ತು
ಇನ್ನುಳಿದವರಿಗೆ ಶಾಶ್ವತ ಬಂಧನ
ಸಜೆಯನ್ನು ಕೊಟ್ಟಾಯ್ತು
ಕ್ರಾಂತಿಕಾರಿಗಳು ಗಲ್ಲಿನ ಶಿಕ್ಷೆಯ
ಸಂತಸದಿಂದಲೆ ಒಪ್ಪಿದರು
ಆದರೂ ದೇಶದ ಎಲ್ಲೆಡೆ ಜನತೆ
ವಿರೋಧವನ್ನು ಮಾಡಿದರು
ಭಗತರ ತಂದೆಯು ಸರಕಾರಕೊಂದು
ಮನವಿಪತ್ರವನು ನೀಡಿದರು
ನೊಂದ ಭಗತರು ದಯಾಭಿಕ್ಷೆಯು
ಅಪಮಾನವೆಂದು ಹೇಳಿದರು
ತಾಯಿ ವಿದ್ಯಾವತಿ ಹೇಳಿದರಂದು
ಉದಾತ್ತ ಸಾವು ನಿನದೆಂದು
ನೇಣಿಗೆ ಹೋಗುವ ಮುನ್ನ ಘೋಷಿಸು
ಕ್ರಾಂತಿಯು ಚಿರಾಯು ಎಂದೆಂದು
ಸಾವು ಸನಿಹದೆ ಬರುತಿರುವಾಗಲೂ
ಓದಲವರು ಶುರುಮಾಡಿದರು
ಕೊನೆಯ ಕ್ಷಣದಲೂ ಲೆನಿನರ ಚರಿತೆಯ
ಪೂರ್ಣವಾಗಿ ಮುಗಿಸಿದರು
ಸಾವಿರದ ಒಂಬೈನೂರ ಮುವತ್ತೊಂದರ
ಮಾರ್ಚ್ ಇಪ್ಪತ್ಮೂರಂದು
ಹಾಡುತ ಹೊರಟರು ಗೆಳೆಯರೊಂದಿಗೆ
ಗಲ್ಲಿಗೇರುವ ದಿನದಂದು
ಸಾರಿದರವರು ದೇಶದ ಜನತೆಗೆ
ಅಂಜದಿರಿ ನೀವ್ ಅಳುಕದಿರಿ
ಇಂದಲ್ಲ ನಾಳೆ ಆಂಗ್ಲರನೋಡಿಸಿ
ನವ ಸಮಾಜವ ಕಟ್ಟುವಿರಿ
ಘೋಷಣೆ ಕೂಗುತ ಹರುಷದಿ ಹಾಡುತ
ಅವರು ನೇಣಿಗೆ ಮುತ್ತನಿತ್ತರು
ಸಾವಿಗೂ ಅಂಜದ ಅವರನು ಕಂಡು
ಅಧಿಕಾರಿಗಳು ದಂಗಾದರು
ವೀರರ ಕೊರಳುಲಿ ಸ್ತಬ್ಧವಾದರೂ
ಲಕ್ಷ ಲಕ್ಷ ದನಿ ಮೊಳಗಿತು
ಭಗತ್ ಸಿಂಗ್ ರ ತ್ಯಾಗವು ಜನಕೆ
ಸ್ಫೂರ್ತಿಯ ಸೆಲೆಯೆ ಆಯಿತು
ದೇಶದ ಎಲ್ಲೆಡೆ ಜನರ ಹೋರಾಟ
ಬಹಳ ವೇಗದಿ ಬೆಳೆದಾಯ್ತು
ಬ್ರಿಟಿಷರೆ ತೊಲಗಿ ಚಳುವಳಿಯಂದು
ಕ್ವಿಟ್ವಿಂಡಿಯ ಘೋಷವಾಯ್ತು
ಭಾರತ ಬಿಟ್ಟು ಬ್ರಿಟಿಷರು ತೊಲಗಲು
ದೇಶಕೆ ಸ್ವಾತಂತ್ರ್ಯ ಬಂದಾಯ್ತು
ಗಣತಂತ್ರ ರಾಜ್ಯದ ರಚನೆಯೊಂದಿಗೆ
ನಮಗೇ ಅಧಿಕಾರ ಸಿಕ್ಕಾಯ್ತು
ಏಳು ದಶಕಗಳೆ ಕಳೆದರು ಕೂಡಾ
ಭಗತರ ಕನಸು ಕೈಗೂಡಿಲ್ಲ
ಬಡತನ, ಹಸಿವು, ಬಿಕ್ಕಟ್ಟಿನಿಂದ
ದೇಶವು ಇನ್ನೂ ಪಾರಾಗಿಲ್ಲ
ಧೀರ ಯೋಧನಿಗೆ ನಮನವ ಸಲಿಸಲು
ನಾವಿಂದು ಒಂದಾಗಬೇಕು
ಅವರ ಕನಸಾದ ಸಮಸಮಾಜವ
ಕಟ್ಟುವ ಕಂಕಣ ತೊಡಬೇಕು
****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ