ಅಂದು ಅಂಬೇಡ್ಕರ್ ಜಯಂತಿ. ಫೋಟೋಗೆ ಮುಖವೇ ಕಾಣಿಸದಷ್ಟು ಹೂವಿನ ಅಲಂಕಾರ, ಮುಂದೆ ದೀಪಗಳು, ಮಂಗಳಾರತಿ ತಟ್ಟೆ, ಕರ್ಪೂರ, ತೆಂಗಿನಕಾಯಿ, ಊದುಕಡ್ಡಿ. ಬೇಜಾರಾಯಿತು ಸುಮಾಳಿಗೆ. ಯಾವ ಧೀಮಂತ ವ್ಯಕ್ತಿ ತನ್ನ ಜನರಲ್ಲಿದ್ದ ಮೌಢ್ಯತೆಯನ್ನು ಅಳಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರೋ ಅವರಿಗೆ ಈ ರೀತಿಯ ಪೂಜೆಯೇ? ಏನು ಮಾಡುವುದು? ಈ ಪದ್ಧತಿಯನ್ನು ನಿಲ್ಲಿಸಲು ಸಾಧ್ಯವೇ? ನಿಜವಾದ ರೀತಿಯಲ್ಲಿ ನಮನ ಸಲ್ಲಿಸಲು ಸಾಧ್ಯವೇ? ಸುಮಾಳ ಚಿಂತನೆಯ ಜಾಡು ಇದು.
ಮಂಗಳಾರತಿ ಮಾಡಿ, ಕಡ್ಡಿ ಹಚ್ಚಿ ತೆಂಗಿನಕಾಯಿ ಒಡೆದರು. ಅದರಲ್ಲೂ ಮತ್ತೆ ಗುಂಪುಪಾರಿಕೆ. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಪೈಪೋಟಿಯ ಮೇಲೆ ದೊಡ್ಡ ದೊಡ್ಡ ಹಾರಗಳನ್ನು ಹಾಕಿದರು. ಒಂದಷ್ಟು ಜನ ಒಂದಷ್ಟು ಬೇಡದ ವಿಷಯವನ್ನು ಹೇಳಿದ ಮೇಲೆ ಕೊನೆಗೆ ಸಭೆ ಮುಗಿಯಿತು. ಎಲ್ಲರೂ ಹೊರನಡೆದರು. ಸುಮಾ ಸಹ ಎದ್ದು ಹೊರಬರಲು ಸಿದ್ಧವಾದಳು. ಹೊರಬರುವ ಮುನ್ನ ಅವಳಿಗೆ ಮತ್ತೊಮ್ಮೆ ಆ ನಾಯಕನ ಫೋಟೊ ನೋಡಬೇಕೆನಿಸಿತು. ನೋಡಿದರೆ, ಅವರ ಕಣ್ಣಿಂದ ಕಣ್ಣೀರ ಹನಿಯೊಂದು ಜಾರಿದಂತೆ ಭಾಸವಾಯಿತವಳಿಗೆ. ಇದೇನು ಭ್ರಮೆ ಎಂದು ಕಣ್ಣುಜ್ಜಿ ನೋಡಿದರೆ, ಅದು ಭ್ರಮೆಯಾಗಿರಲಿಲ್ಲ.
ಅವಳು “ಬಾಬಾ ನೀವು, ಇಲ್ಲಿ” ಕೇಳಿದಳು.
“ಹೌದಮ್ಮ, ನಾನೇ” ಎಂದರು.
“ಬಾಬಾ, ನಿಮ್ಮ ಕಣ್ಣುಗಳೇಕೆ ತೇವವಿದೆ”?
“ಇಲ್ಲಿ ನನ್ನ ಪರಿಸ್ಥಿತಿಯನ್ನು ನೋಡಿ.”
“ಅಂತಾದ್ದೇನಾಯ್ತು ಬಾಬಾ?”
“ಮತ್ತೇನಾಗಬೇಕಮ್ಮ, ನಾ ಅಂದುಕೊಂಡಿದ್ದೆ ಒಂದು, ಇಲ್ಲಿ ಆಗುತ್ತಿರುವುದೇ ಎಂದು. ನಾ ಅಂದುಕೊಂಡಿದ್ದೆಲ್ಲ, ನನ್ನ ಕಣ್ಣೆದುರೇ ಮಣ್ಣಾಗಿ ಹೋಗುತ್ತಿರುವಾಗ, ಇನ್ನೇನಾಗಬೇಕು?” ಪ್ರಶ್ನಿಸಿದರು.
“ಏನಂದುಕೊಂಡಿದ್ದೀರಿ ಬಾಬಾ ನೀವು?” ಕೇಳಿದಳು ಸುಮ.
“ಬಾಮ್ಮ ತೋರಿಸುತ್ತೇನೆ” ಜೊತೆಗೆ ಕರೆದೊಯ್ದರು ಅವಳನ್ನು.
ಮಹಾರಾಷ್ಟ್ರದ 20ನೇ ಶತಮಾನದ ಆದಿಭಾಗಕ್ಕೆ. ಅಲ್ಲಿನ ಸಮಾಜದಲ್ಲಿನ ಅಸ್ಪೃಶ್ಯರನ್ನು, ಅಲ್ಲಿನ ಬಡತನ, ಅನಕ್ಷರತೆ, ನೋವು, ರೋಗರುಜಿನ ಕಂಡಳು. ನಂತರ ಬಾಬಾ ಬಾಲಕನಾಗಿದ್ದಾಗ ಅನುಭವಿಸಿದ ನೋವು-ಅಪಮಾನ, ಛಲದಿಂದ ಮುಂದೆ ಓದಿದ್ದು, ತನ್ನ ಜನರಿಗಾಗಿ ವಿದೇಶದಿಂದ ಹಿಂತಿರುಗಿದ್ದು, ಮಹಾರಾಜರ ಆಸ್ಥಾನದಲ್ಲಿ ಮತ್ತೆ ಅವಮಾನಗಳನ್ನು ಎದುರಿಸಿದ್ದು, ತಮ್ಮ ಜನರ ಪರವಾಗಿ ಹೋರಾಟವನ್ನು ಕೈಗೊಂಡಿದ್ದು, ಅವರಲ್ಲಿ ಅರಿವು, ಧೈರ್ಯ ತುಂಬಲು ಓಡಾಡಿದ್ದು, ಕಾಂಗ್ರೆಸ್ ನೊಂದಿಗೆ ಮಾತುಕತೆ, ಬ್ರಿಟಿಷ್ ರೊಂದಿಗೆ ಮಾತುಕತೆ, ಸಂವಿಧಾನಾತ್ಮಕ ಸಭೆಯಲ್ಲಿ ಉತ್ಕೃಷ್ಟ ಸಂವಿಧಾನ ರಚಿಸಲು ಎಲ್ಲಾ ರೀತಿಯ ಜ್ಞಾನ , ಅನುಭವವನ್ನು ಧಾರೆ ಎರೆದಿದ್ದು, ಸ್ವಾತಂತ್ರ್ಯಾನಂತರವೂ ಹೋರಾಟವನ್ನು ಮುಂದುವರೆಸಿದ್ದು, ಎಲ್ಲವನ್ನೂ ಕಂಡಳು.
“ಹೌದಮ್ಮ, ನಾನೇ” ಎಂದರು.
“ಬಾಬಾ, ನಿಮ್ಮ ಕಣ್ಣುಗಳೇಕೆ ತೇವವಿದೆ”?
“ಇಲ್ಲಿ ನನ್ನ ಪರಿಸ್ಥಿತಿಯನ್ನು ನೋಡಿ.”
“ಅಂತಾದ್ದೇನಾಯ್ತು ಬಾಬಾ?”
“ಮತ್ತೇನಾಗಬೇಕಮ್ಮ, ನಾ ಅಂದುಕೊಂಡಿದ್ದೆ ಒಂದು, ಇಲ್ಲಿ ಆಗುತ್ತಿರುವುದೇ ಎಂದು. ನಾ ಅಂದುಕೊಂಡಿದ್ದೆಲ್ಲ, ನನ್ನ ಕಣ್ಣೆದುರೇ ಮಣ್ಣಾಗಿ ಹೋಗುತ್ತಿರುವಾಗ, ಇನ್ನೇನಾಗಬೇಕು?” ಪ್ರಶ್ನಿಸಿದರು.
“ಏನಂದುಕೊಂಡಿದ್ದೀರಿ ಬಾಬಾ ನೀವು?” ಕೇಳಿದಳು ಸುಮ.
“ಬಾಮ್ಮ ತೋರಿಸುತ್ತೇನೆ” ಜೊತೆಗೆ ಕರೆದೊಯ್ದರು ಅವಳನ್ನು.
ಮಹಾರಾಷ್ಟ್ರದ 20ನೇ ಶತಮಾನದ ಆದಿಭಾಗಕ್ಕೆ. ಅಲ್ಲಿನ ಸಮಾಜದಲ್ಲಿನ ಅಸ್ಪೃಶ್ಯರನ್ನು, ಅಲ್ಲಿನ ಬಡತನ, ಅನಕ್ಷರತೆ, ನೋವು, ರೋಗರುಜಿನ ಕಂಡಳು. ನಂತರ ಬಾಬಾ ಬಾಲಕನಾಗಿದ್ದಾಗ ಅನುಭವಿಸಿದ ನೋವು-ಅಪಮಾನ, ಛಲದಿಂದ ಮುಂದೆ ಓದಿದ್ದು, ತನ್ನ ಜನರಿಗಾಗಿ ವಿದೇಶದಿಂದ ಹಿಂತಿರುಗಿದ್ದು, ಮಹಾರಾಜರ ಆಸ್ಥಾನದಲ್ಲಿ ಮತ್ತೆ ಅವಮಾನಗಳನ್ನು ಎದುರಿಸಿದ್ದು, ತಮ್ಮ ಜನರ ಪರವಾಗಿ ಹೋರಾಟವನ್ನು ಕೈಗೊಂಡಿದ್ದು, ಅವರಲ್ಲಿ ಅರಿವು, ಧೈರ್ಯ ತುಂಬಲು ಓಡಾಡಿದ್ದು, ಕಾಂಗ್ರೆಸ್ ನೊಂದಿಗೆ ಮಾತುಕತೆ, ಬ್ರಿಟಿಷ್ ರೊಂದಿಗೆ ಮಾತುಕತೆ, ಸಂವಿಧಾನಾತ್ಮಕ ಸಭೆಯಲ್ಲಿ ಉತ್ಕೃಷ್ಟ ಸಂವಿಧಾನ ರಚಿಸಲು ಎಲ್ಲಾ ರೀತಿಯ ಜ್ಞಾನ , ಅನುಭವವನ್ನು ಧಾರೆ ಎರೆದಿದ್ದು, ಸ್ವಾತಂತ್ರ್ಯಾನಂತರವೂ ಹೋರಾಟವನ್ನು ಮುಂದುವರೆಸಿದ್ದು, ಎಲ್ಲವನ್ನೂ ಕಂಡಳು.
“ನಾನು ಕನಸು ಕಂಡ ಸಮಾಜ, ಕಡೇ ಮನುಷ್ಯನವರೆಗೆ, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲೆಂದು. ಇಂದು ಏನಾಗುತ್ತಿದೆ, ನ್ಯಾಯ ಸಮಾನತೆ ದೊರೆತಿದೆಯೇ? ಅಸ್ಪೃಶ್ಯತೆ ನಿವಾರಣೆಯಾಗಿದೆಯಾ? ರಾಜಕಾರಣಿಗಳ ಸ್ವಾರ್ಥ, ಜಾತಿ ಮುಖಂಡರ ಸ್ವಾರ್ಥ ಹೇಗೆ ವಿದ್ಯಾರ್ಥಿ-ಯುವಜನರನ್ನು, ಅಮಾಯಕ ಜನರನ್ನು ಹಾಳುಮಾಡುತ್ತಿದೆ. ಇದಕ್ಕಾಗಿಯೇ ನಾನು ಹೋರಾಡಿದ್ದು. ಶಿಕ್ಷಣ, ಸಂಘಟನೆ ಎಂದೆ. ಅದನ್ನು ಇವರು ಯಾವ ರೀತಿ ಅರ್ಥೈಸಿದ್ದಾರೆ. ಉತ್ತಮ ಸಂವಿಧಾನವನ್ನು ಕೊಡಬೇಕೆಂದು ಬಯಸಿದೆ, ಶ್ರಮಿಸಿದೆ. ಕುಡಿತ ಬಿಡಿ ಎಂದೆ, ಆದರೆ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ, ನನಗೆ ದುಃಖವಾಗುತ್ತಿದೆ. ಇದಕ್ಕಾಗಿಯೇ ನಾನು ಜೀವನ ಮುಡಿಪಾಗಿಟ್ಟದ್ದು. ನನ್ನ ಜನರ ಪರಿಸ್ಥಿತಿ ನೆನೆಸಿಕೊಂಡು ನೋವಾಗುತ್ತಿದೆ."
“ಬಾಬಾ, ನೀವೇ ಹೇಳಿರುವಿರಲ್ಲ, ಆಶಾವಾದ ಇರಬೇಕೆಂದು?”
“ಹೌದು ಇಷ್ಟು ದಿನ ಬಿಟ್ಟಿರಲಿಲ್ಲ, ಇಂದಲ್ಲ ನಾಳೆ ಜನ ಅರ್ಥಮಾಡಿಕೊಳ್ಳುತ್ತಾರೆಂದುಕೊಂಡೆ. ಆದರೆ ಈಗ ನನ್ನನ್ನು ಒಬ್ಬ ದೇವರನ್ನಾಗಿ ಮಾಡಿ ಗೋಡೆಗೆ ನೇತುಹಾಕಿಬಿಟ್ಟಿದ್ದಾರಲ್ಲ. ಇನ್ನು ನನ್ನ ತತ್ವ, ಸಿದ್ಧಾಂತಗಳನ್ನು ಏನು ಅರ್ಥಮಾಡಿಕೊಳ್ಳುತ್ತಾರೆ, ಏನು ಪಾಲಿಸುತ್ತಾರೆ? ಈಗ ನನ್ನ ನಂಬಿಕೆ ಛಿದ್ರವಾಗಿದೆ. ಬೌದ್ಧನಾಗಿ ಪರಿವರ್ತನೆಗೊಂಡಾಗ ಈ ಹಿಂದೂ ಸಮಾಜ ಬದಲಾಗುವುದಿಲ್ಲವೆಂಬ ಹತಾಶೆ, ನೋವು ಮತ್ತೆ ನನ್ನನ್ನು ಈಗ ಆವರಿಸಿದೆ. ಎಲ್ಲೆಡೆ ನನ್ನ ಜನ ಈ ರೀತಿಯ ಅಂಧಕಾರದಲ್ಲಿ ಮುಳುಗಿರುವುದು ಕಂಡಾಗ ಕಣ್ಣು ತೇವವಾಗದಿರುವುದೇ?”
ಸುಮ ನಿರುತ್ತರಳಾದಳು. ಎಲ್ಲ ಬಲ್ಲ ನಾಯಕನಿಗೆ ಅವಳು ಏನು ತಾನೇ ಹೇಳಬಲ್ಲವಳಾಗಿದ್ದಳು?
ಆದರೂ ಒಂದು ಪ್ರಯತ್ನವೆಂಬಂತೆ, “ಬಾಬಾ, ಎಲವೂ ಹಾಳಾಗಿಲ್ಲ, ಇನ್ನೂ ಆಶೆಯಿದೆ.”
“ಎಲ್ಲಿದೆಯಮ್ಮ, ನನಗಂತೂ ಬದಲಾವಣೆಯ ಒಂದು ಕಿಡಿಯೂ ಕಾಣುತ್ತಿಲ್ಲ.”
ಅಷ್ಟರಲ್ಲಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಒಳಬಂದರು. ಸುಮ ಅವರನ್ನು ತರಾಟೆಗೆ ತೆಗೆದುಕೊಂಡಳು. “ನಿಮಗೆ 8 ಘಂಟೆಗೆ ಬನ್ನಿ ಎಂದರೆ ಈಗಲಾ ಬರುವುದು? ನಿಮಗೆ ಅಂಬೇಡ್ಕರ್ ರವರ ಬಗ್ಗೆ ಗೌರವವಿಲ್ಲವೇ? ನೆನ್ನೆ ಮತ್ತೆ ತರಗತಿಯಲ್ಲಿ ಅಷ್ಟೊಂದು ಮಾತನಾಡಿದಿರಿ?” ಕೇಳಿದಳು.
“ಮೇಡಮ್ ನಿಮಗೆ ಬಹಳ ಹಿಂದಿನಿಂದಲೂ ಒಂದು ಉಚಿತ ವೈದ್ಯಕೀಯ ಶಿಬಿರದ ಬಗ್ಗೆ ಹೇಳಿದ್ದು, ಈ ದಿನ ಮಾಡಲೆಂದೇ. ನಮ್ಮ ಅಳಿಲ ಸೇವೆ ಎಂದು. ಹಳ್ಳಿಯಲ್ಲಿ ಎಲ್ಲಾ ಸಿದ್ಧತೆ ಮಾಡಿದ್ದೇವೆ. ಅದಕ್ಕಾಗಿ ಇಷ್ಟು ಸಮಯ ಬೇಕಾಯಿತು. 11 ಘಂಟೆಗೆ ಆರಂಭವಾಗುತ್ತದೆ. ನಿಮಗೆ ಮತ್ತು ಇತರರಿಗೆ ಹೇಳಿಹೋಗಲೆಂದು ಬಂದೆವು ಮೇಡಮ್, ನೀವೂ ಬರಬೇಕು.”
ಸುಮಾಳಿಗೆ ಬಹಳ ಸಂತೋಷವಾಯಿತು. “ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ಆದರೆ ಬೆಳಿಗ್ಗೆ ಇಲ್ಲಿಗೇಕೆ ಬರಲಿಲ್ಲ?”
“ನಾವಿಲ್ಲಿ ಬಂದಿದ್ದರೆ ಕೇವಲ ಮಂಗಳಾರತಿ ತೆಗೆದುಕೊಂಡು, ಬಾಬಾರವರ ಫೋಟೊಗೆ ಒಂದು ಹೂ ಇಟ್ಟು, ಸಿಹಿ ತಿಂದು ಮನೆಗೆ ಹೋಗುತ್ತಿದ್ದೆವು. ನಮಗೆ ಆ ರೀತಿ ಮಾಡಲು ಇಷ್ಟವಿರಲಿಲ್ಲ. ಬಾಬಾರವರನ್ನು ದೇವರಂತೆ ಫ್ರೇಮ್ ನಲ್ಲಿ ಇಡಲು ಇಷ್ಟವಿಲ್ಲ. ಅವರು ನಮಗಿಂತ ಬಡತನದಲ್ಲಿ ಓದಿದರು. ಕಷ್ಟಪಟ್ಟು ಓದಿ, ಅಷ್ಟೊಂದು ದೊಡ್ಡ ಪದವಿ ತೆಗೆದುಕೊಂಡು, ಅಲ್ಲಿಯೇ ಎಲ್ಲೊ ಒಳ್ಳೆ ಕೆಲಸ ಸಿಗುತ್ತಿರಲಿಲ್ಲವೇ ಮೇಡಮ್. ಆದರೆ ಅವರು ಇಲ್ಲಿ ಬಂದರು, ನಮಗಾಗಿ. ಸಮಾಜದ ಒಳಿತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು. ನಮಗೆ ಅಷ್ಟು ಎತ್ತರಕ್ಕೆ ಏರಲಿಕ್ಕೆ ಸಾಧ್ಯವಾ ಗೊತ್ತಿಲ್ಲ, ಆದರೆ ಅಳಿಲ ಸೇವೆಯನ್ನಾದರೂ ಮಾಡಬೇಕೆಂದು ಅಂದುಕೊಂಡಿದ್ದೀವೆ ಮೇಡಮ್” ಎಂದರು.
ಸುಮಾಳಿಗೆ ತನ್ನ ವಿದ್ಯಾರ್ಥಿಗಳೇನಾ ಈ ರೀತಿ ಮಾತನಾಡುತ್ತಿರುವುದು ಎನಿಸಿತು. “ಭೇಷ್, ಒಳ್ಳೆಯ ಆಲೋಚನೆ. ನಾನು ಖಂಡಿತ ಬರುತ್ತೇನೆ, ಏನಾದರೂ ಹಣ ಬೇಕಿತ್ತಾ?” ಕೇಳಿದಳು.
“ಇಲ್ಲ ಮೇಡಮ್, ಎಲ್ಲಾ ಹೊಂದಿಸಿಕೊಂಡಿದ್ದೀವೆ. ನೀವು ಬನ್ನಿ. ನಾವಿನ್ನು ಹೋಗುತ್ತೇವೆ, ಇನ್ನೂ ಕೆಲಸವಿದೆ” ಎಂದೆನ್ನುತ್ತ ಆ 20 ಮಕ್ಕಳ ತಂಡ ಹೊರಗೆ ಹೋಯಿತು. ಜಾತಿಮತ ಭೇದವಿಲ್ಲದೆ ಹೋದ ಆ ಮಕ್ಕಳನ್ನೇ ಮೆಚ್ಚುಗೆಯಿಂದ ನೋಡುತ್ತ ಸುಮ ಒಂದು ಕ್ಷಣ ಮೈಮರೆತಳು.
ಹೊರನಡೆಯಲು ಮುಂದೆ ಹೆಜ್ಜೆ ಇಟ್ಟಾಗ ಅಷ್ಟೊತ್ತು ಕಾಣದಾಗಿದ್ದ ಬಾಬಾ ಮತ್ತೆ ಅವಳಿಗೆ ಕಂಡರು. ಅವರ ಮುಖದ ಮೇಲೆ ಹರುಷದ ನಗುವಿತ್ತು, ಗೆಲುವಿನ ಭರವಸೆಯಿತ್ತು.
ಸುಮ ಮಾತನಾಡುವ ಮುನ್ನ ಅವರೇ ಮಾತನಾಡಿದರು. “ಇಂತಹ ಮಕ್ಕಳು ಇರುವಾಗ ನನ್ನ ಹೋರಾಟ ವ್ಯರ್ಥವಾಗಲಿಲ್ಲ, ನನ್ನ ಆಶೆಗೆ ಭಂಗ ಬಂದಿಲ್ಲ. ಇಂದಲ್ಲ ನಾಳೆ ಬದಲಾವಣೆ ಖಚಿತವಾಗಿ ಬರುತ್ತದೆ ಎಂದು ಈಗ ನಂಬಿಕೆ ಬಂತು” ಎಂದರು.
“ಬಾಬಾ, ನಿಮ್ಮಂತಹವರು ಈ ದೇಶದಲ್ಲಿ ಸಾವಿರ ಸಂಖ್ಯೆಯಲ್ಲಿ ಹುಟ್ಟಲಿ ಎಂದು ಹಾರೈಸಿ” ಎಂದಳು ಸುಮ.
“ನನಗಿಂತ ಹೆಚ್ಚಾಗಿ ಈ ದೇಶದ ಸುಧಾರಣೆಗೆ ಹೋರಾಡಿದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ರಾಮ್ ಮೋಹನ್ ರಾಯ್, ವಿದ್ಯಾಸಾಗರ್, ವಿವೇಕಾನಂದ, ನೇತಾಜಿ, ಭಗತ್ ಸಿಂಗ್, ಅಶ್ಫಾಕುಲ್ಲಾ, ಖಾನ್ ಅಬ್ದುಲ್ ಗಫಾರ್ ಖಾನ್ ಮುಂತಾದ ಮಹನೀಯರು ಹುಟ್ಟಲಿ” ಎಂದರು.
ಬಸವಣ್ಣನವರ “ಎನಗಿಂತ ಕಿರಿಯರಿಲ್ಲ” ಎನ್ನುವ ಮಾತು ಸುಮಳಿಗೆ ನೆನಪಿಗೆ ಬಂತು. ಇವರೇ ಧೀಮಂತ ಚೇತನ ಎಂದುಕೊಂಡರೆ ಇತರರ ಬಗ್ಗೆ ಇದ್ದ ಅವರ ಗೌರವ, ಅವರ ಮನೋಭಾವವನ್ನು, ಮೇರು ವ್ಯಕ್ತಿತ್ವವನ್ನು ಎತ್ತಿ ತೋರಿಸಿತು.
ಬಾಬಾರಿಗೆ ಏನೋ ಹೇಳಹೊರಟಳು ಸುಮ. ಅವರು ಕಾಣಿಸಲಿಲ್ಲ. ರೂಮಿನಲ್ಲಿ ಅವಳೊಬ್ಬಳೇ ಉಳಿದಳು. ಫೋಟೊ ನಿಚ್ಚಳವಾಗಿ ಕಾಣಿಸಿತು. ಬಾಬಾ ಫೋಟೋದಲ್ಲಿ ನಗುತ್ತಿದ್ದರು. ಅದು ಸಾರ್ಥಕತೆಯ ನಗುವಾಗಿತ್ತು. ಕಣ್ಣಂಚಿನಲ್ಲಿ ಕಂಬನಿ ಇರಲಿಲ್ಲ.
- ಸುಧಾ ಜಿ