Pages

ವ್ಯಕ್ತಿ ಪರಿಚಯ - ರಾಣಿ ಗಾಯಿಡಿನ್ ಲ್ಯೂ




"ನಾವು ನಾಗಾಗಳು, ನಾಗಗಳಾಗಿಯೇ ಬದುಕುತ್ತೇವೆ ನಾವು ಸ್ವತಂತ್ರರು ಯಾವುದೇ ವಿದೇಶಿಯರಿಗೂ ನಮ್ಮ ಮೇಲೆ ಅಧಿಕಾರ ಚಲಾಯಿಸಲು ನಾವು ಬಿಡೆವು. ಬ್ರಿಟಿಷರು ನಮ್ಮ ಮೇಲೆ ಹೇರಿರುವ ಮನೆ ತೆರಿಗೆಯನ್ನು ನಾವೆಂದೂ ಕಟ್ಟಲಾರೆವು ನಾವು ಬ್ರಿಟಿಷರ ಸೇವಕರಲ್ಲ" ಎಂದು ಬ್ರಿಟಿಷರ ವಿರುದ್ಧ ಗುಡುಗಿದ ದಿಟ್ಟ ಮಹಿಳೆ ರಾಣಿ ಗಾಯಿಡಿನ್ ಲ್ಯೂ. 
ರಾಣಿ ಎಂದರೆ ಯಾವುದೇ ರಾಜ ಮನೆತನದ ಮಹಿಳೆಯಲ್ಲ. ತನ್ನ ಹೋರಾಟದ ಫಲವಾಗಿ 1937 ರಲ್ಲಿ ನೆಹರೂರವರಿಂದ ರಾಣಿ ಎಂದು ಹೆಸರು ಪಡೆದರು.
ಗಾಯಿಡಿನ್ಲ್ಯೂ ಹುಟ್ಟಿದ್ದು ಈಗಿನ ಮಣಿಪುರದ ತಮೆಂಗ್ ಲಾಂಗ್ ಜಿಲ್ಲೆಯ ಲಂಗ್ ಕಾವ್ ನಲ್ಲಿ. 1915 ಜನವರಿ 26 ರಂದು ನಾಗ ಪುರೋಹಿತ ಕುಟುಂಬದ ಲೊತನಾಂಗ್ ಮತ್ತು ಕೆಲುವತ್ಲಿನ್ ಲಿ ರವರ ಮಗಳಾಗಿ ಜನಿಸಿದರು. ಆ ಮಗುವಿಗೆ " ಗಾಯಿಡಿನ್ಲ್ಯೂ" ಎಂದು ನಾಮಕರಣ ಮಾಡಿದರು. 'ಗಾಯಿ' ಎಂದರೆ ಒಳ್ಳೆಯ ಹಾಗೂ 'ಡಿನ್' ಎಂದರೆ ಮಾರ್ಗ ತೋರಿಸುವವರು ಎಂದರ್ಥ.
ಬಾಲ್ಯದಲ್ಲಿಯೇ ವಿಶೇಷ ಪ್ರತಿಭಾವಂತೆ, ಶಾಂತಸ್ವರೂಪಿಯಾಗಿದ್ದ ಗಾಯಿಡಿನ್ಲ್ಯೂ ಬಡವರು, ನಿರ್ಗತಿಕರಿಗಾಗಿ ಮನಮಿಡಿಯುತ್ತಿದ್ದಳು. ಕರುಣಾಮಯಿಯಾಗಿದ್ದ ಇವಳು, ತಂದೆ ತಾಯಿಯಲ್ಲದೆ ಎಲ್ಲರ ಪ್ರೀತಿಪಾತ್ರಳಾಗಿದ್ದಳು.
ಅಂದು ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಹಲವಾರು ತಂತ್ರಗಳನ್ನು ಹೆಣೆಯುತ್ತಿದ್ದರು. ಅದರಲ್ಲಿ ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಒಂದು. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವುದರ ಜೊತೆಗೆ ಮತಾಂತರ ಚಟುವಟಿಕೆಯನ್ನು ಮಾಡುತ್ತಿದ್ದರು. ಇದಕ್ಕೆ ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ಬಲಿಯಾಗುತ್ತಿದ್ದರು. ದೇಶದಲ್ಲೆಡೆಯಲ್ಲೂ ಇದು ನಡೆಯುತ್ತಿತ್ತು. ಬುಡಕಟ್ಟು ಜನರು ಗುಡ್ಡಗಾಡು ಬೆಟ್ಟದ ತಪ್ಪಲುಗಳಲ್ಲಿ ವಾಸಿಸುತ್ತಿದ್ದ ಕಾರಣ ನಾಡಿನ ಇತರ ಭಾಗಗಳೊಂದಿಗೆ ಇವರಿಗೆ ಸಂಪರ್ಕವಿರಲಿಲ್ಲ. ಇಂತಹ ಪರಿಸ್ಥಿತಿಯ ಉಪಯೋಗ ಪಡೆದ ಬ್ರಿಟಿಷರು ತಮ್ಮ ಮತಾಂತರ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದರು.
ಇಂತಹ ಬ್ರಿಟಿಷರ ಕುತಂತ್ರಗಳಿಂದ ನಾಗಾ ಜನರು ತಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಯೆಡೆಗೆ ನಡೆದರು. ಇದನ್ನು ಅರಿತ ಅಲ್ಲಿನ ಚಾದೂನಾಂಗ್ ಎಂಬ ಯುವಕ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದನು. ಈತನ ಹೋರಾಟದಿಂದ ಸ್ಪೂರ್ತಿಗೊಂಡ ಗಾಯಿಡಿನ್ಲ್ಯೂ ಕೂಡ ಹೋರಾಡಲು ನಿರ್ಧರಿಸಿದಳು. ಅದರಂತೆ ಚಾ಼ದೋನಾಂಗ್ ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವಂತೆ ಕೇಳಿದಳು. ಆದರೆ ಅವನು ಮಹಿಳೆಯರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದನು. ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಅವನೊಡನೆ ವಾದಿಸಿ, ಅವನು ಹಾಕಿದ ಸವಾಲುಗಳನ್ನೆಲ್ಲಾ ಎದುರಿಸಿದಳು. ಆಗ ಅವಳ ವಯಸ್ಸು ಕೇವಲ ಹದಿಮೂರು ವರ್ಷ. 
ಹೀಗೆ ಚಾ಼ದೋನಾಂಗ್ ಅನುಯಾಯಿಯಾಗಿ ತನ್ನ ಹೋರಾಟ ಪ್ರಾರಂಭಿಸಿದಳು ಗಾಯಿಡಿನ್ಲ್ಯೂ. ಇಬ್ಬರೂ ಬೆಟ್ಟಗುಡ್ಡ ಕಾಡುಗಳನ್ನೆಲ್ಲಾ ಅಲೆದು, ಜನರಲ್ಲಿ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ನಾಗಗಳಲ್ಲಿದ್ದ ಮೂರು ಪಂಗಡವನ್ನು ಸೇರಿಸಿ "ಝೆಲಿಯಂಗ್ ರಾಂಗ್" ಎಂಬ ಹೊಸ ಪಂಗಡವನ್ನು ಕಟ್ಟಿದರು. ನಾಗಾ ಸಂಸ್ಕೃತಿ, ಆಚಾರ ವಿಚಾರಗಳ ರಕ್ಷಣೆಗೆ "ಹರಕ್ಕಾ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. 
ಬ್ರಿಟಿಷರು ಜನರ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲು ಹಲವಾರು ತೆರಿಗೆಗಳನ್ನು ವಿಧಿಸುತ್ತಿದ್ದರು. ಇದನ್ನೆಲ್ಲಾ ವಿರೋಧಿಸಲು ಚಳವಳಿಗಳನ್ನು ಪ್ರಾರಂಭಿಸಿದರು. ಈ ಹೋರಾಟದಲ್ಲಿ ಗಾಯಿಡಿನ್ಲ್ಯೂ ಪ್ರಮುಖ ಪಾತ್ರ ವಹಿಸಿದಳು. 
ಬ್ರಿಟಿಷರ ವಿರುದ್ಧ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವನ್ನರಿತ ಗಾಯಿಡಿನ್ಲ್ಯೂ ಮಹಿಳೆಯರನ್ನೆಲ್ಲಾ ಒಗ್ಗೂಡಿಸಿ "ಮಹಿಳಾ ಸೈನ್ಯ"ವನ್ನು ಕಟ್ಟಿದಳು. ಜನಸಾಮಾನ್ಯರಿಗೆ, ಅದರಲ್ಲೂ ಮಹಿಳೆಯರಿಗೆ ಬ್ರಿಟಿಷರು ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಳು. ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸುವಂತೆ ಉತ್ತೇಜಿಸುತ್ತಿದ್ದಳು. ಮಹಿಳೆಯರಿಗೆ ಮಾರಕಾಸ್ತ್ರಗಳನ್ನು ಉಪಯೋಗಿಸುವಂತೆ ತರಬೇತಿಯನ್ನು ನೀಡುತ್ತಿದ್ದಳು. ಯೋಧಗೀತೆ, ಸಂಪ್ರದಾಯ ಹಾಗೂ ಆಚರಣೆಗಳ ಕುರಿತು ಹಾಡುಗಳನ್ನು ಸಂಯೋಜಿಸಿ ಕಲಿಸುತ್ತಿದ್ದಳು. ಮಹಿಳೆಯರು ಆರ್ಥಿಕವಾಗಿ ಸದೃಢರಾಗುವಂತೆ ಅವರಿಗೆ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದರು. ಮಹಿಳೆಯರ ವಿದ್ಯಾಭ್ಯಾಸದ ಕಡೆಗೂ ತನ್ನ ಗಮನವನ್ನಿರಿಸಿದ್ದಳು.
ಚಳವಳಿಗಳಲ್ಲಿ ಹೋರಾಡುವುದರ ಜೊತೆಗೆ ಜನರು ಅಸ್ವಸ್ಥರಾದಾಗ ಅವರಿಗೆ ಔಷದೋಪಚಾರವನ್ನು ನೀಡುತ್ತಿದ್ದಳು. ಇದರಿಂದ ಗಾಯಿಡಿನ್ಲ್ಯೂಮತ್ತಷ್ಟು ಜನಾನುರಾಗಿಗಳಾದರು. 
ಚಾ಼ದೋನಾಂಗ್ ಮತ್ತು ಗಾಯಿಡಿನ್ಲ್ಯೂರ ಹೋರಾಟ ತೀವ್ರಗೊಳ್ಳುತ್ತಿದ್ದರಿಂದ ಕಂಗೆಟ್ಟ ಬ್ರಿಟಿಷ್ ಸರ್ಕಾರ ಅವರನ್ನು ದಮನ ಮಾಡಲು ಕಾಯುತ್ತಿತ್ತು. ಇದಕ್ಕಾಗಿ ತಂತ್ರವನ್ನು ಹೂಡಿತು. ಪೋಲಿಸ್ ಅಧಿಕಾರಿಯ ಪತ್ನಿಗೆ ಹುಷಾರಿಲ್ಲ, ಅವರಿಗೆ ಔಷಧ ನೀಡಬೇಕೆಂದು ಹೇಳಿಕಳುಹಿಸಿದರು. ಬಂದ ಚಾ಼ಂದೋನಾಂಗ್ ನನ್ನು ಬಂಧಿಸಿದರು. ನಂತರ ದೇಶದ್ರೋಹದ ಆಪಾದನೆಯನ್ನು ಹೊರಿಸಿ 1931 ಆಗಸ್ಟ್ 29 ರಂದು ಗಲ್ಲಿಗೇರಿಸಿದರು.
ಚಾ಼ದೋನಾಂಗ್ ನ ಮರಣದ ನಂತರ ಗಾಯಿಡಿನ್ಲ್ಯೂ ಚಳವಳಿಯ ನೇತೃತ್ವವನ್ನು ವಹಿಸಿ ತನ್ನನ್ನು "ನಾಗಾ ಕ್ರಾಂತಿದಳದ ನೇತಾ" ಎಂದು ಘೋಷಿಸಿಕೊಂಡಳು. ಇವಳ ಹೋರಾಟದ ವೇಗವನ್ನು ಕಂಡ ಬ್ರಿಟಿಷರು ಅವಳನ್ನು ಬಂಧಿಸಲು ಕಾಯುತ್ತಿದ್ದರು. ಇವಳ ಕರೆಯಿಂದ ಪ್ರೇರಣೆಗೊಂಡ ಐನೂರಕ್ಕೂ ಹೆಚ್ಚು ನಾಗಾ ಯುವಕರು ಮುಂದೆ ಬಂದರು. ಅವರಿಗೆ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಉಪಯೋಗದ ಬಗ್ಗೆ ತರಬೇತಿ ನೀಡಿದಳು. ಈಕೆ ಗೆರಿಲ್ಲಾ ಯುದ್ಧ ನೀತಿಯನ್ನು ಅನುಸರಿಸುತ್ತಿದ್ದಳು. ಇವರ ಹೋರಾಟ ಅಸ್ಸಾಂ, ನಾಗಾಲ್ಯಾಂಡ್, ಮಣಿಪುರಗಳಷ್ಟೇ ಅಲ್ಲದೆ, ಹಳ್ಳಿಗಳಿಗೂ ವ್ಯಾಪಿಸಿತು. ಸಾವಿರಾರು ಜನರು ಇವರೊಂದಿಗೆ ಕೈ ಜೋಡಿಸಿದರು. ಕೆಲವೇ ಕೆಲವು ಸಮಯದಲ್ಲಿ ಇಷ್ಟು ತೀವ್ರಗೊಂಡ ಹೋರಾಟದಿಂದ ಬ್ರಿಟಿಷರು ಭಯಗೊಂಡರು. 
ಗಾಯಿಡಿನ್ಲ್ಯೂರ ಕೆಲಸ ಕಾರ್ಯಗಳನ್ನು ಮೆಚ್ಚಿದ ಅಸ್ಸಾಂನ ಹಂಗ್ರಾಮ ಗ್ರಾಮದ ಜನರು ಸುವ್ಯವಸ್ಥಿತ ಕೋಟೆಯನ್ನು ನಿರ್ಮಿಸಿ ಅವರನ್ನು ಅಲ್ಲೇ ನೆಲೆಸುವಂತೆ ಕೇಳಿಕೊಂಡರು. 
ಗಾಯಿಡಿನ್ಲ್ಯೂ ತನ್ನ ಹೆಸರನ್ನು ಕಿರಾಂಗಲೆ ಎಂದು ಬದಲಾಯಿಸಿಕೊಂಡು ತನ್ನ ಹೋರಾಟವನ್ನು ಇನ್ನೂ ತೀವ್ರಗೊಳಿಸಿದಳು. 1928 -30 ರಲ್ಲಿ ಬ್ರಿಟಿಷರು ಮತ್ತು ಅಂಗಾಮಿ ನಾಗಾಗಳ ನಡುವೆ ಯುದ್ಧ ನಡೆದಿತ್ತು. ಪರಿಣಾಮವಾಗಿ ಅಂಗಾಮಿ ನಾಗಾಗಳಲ್ಲಿ ದ್ವೇಷ ಇನ್ನೂ ಹೊಗೆಯಾಡುತ್ತಿತ್ತು. ಇದರ ಉಪಯೋಗ ಪಡೆದ ಗಾಯಿಡಿನ್ಲ್ಯೂ ಇವರ ಸಂಪರ್ಕವನ್ನು ಮಾಡಿ ಅವರನ್ನು ತನ್ನ ಸೇನೆಗೆ ಸೇರಿಸಿಕೊಂಡರು. ಇದರಿಂದ ಆತಂಕಗೊಂಡ ಅಂದಿನ ಜಿಲ್ಲಾಧಿಕಾರಿ ಅವರನ್ನು ಹತ್ತಿಕ್ಕುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದನು. ಬ್ರಿಟಿಷರು ಗಾಯಿಡಿನ್ ಸ್ವಗ್ರಾಮ ಲಂಗಕಾವ್ ಮೇಲೆ ಧಾಳಿ ನಡೆಸಿದರು. ಎಲ್ಲಾ ಮನೆಯನ್ನೂ ಶೋಧಿಸಿದರು. ಸಂಗ್ರಹಿಸಿಟ್ಟ ಧನ ಧಾನ್ಯಗಳನ್ನು ನಾಶ ಮಾಡಿದರು. ಕೆಲವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗದಂತೆ ನಿರ್ಬಂಧಿಸಿದರು. ಗಾಯಿಡಿನ್ಲ್ಯೂ ಸುಳಿವು ನೀಡಿದವರಿಗೆ ಬಹುಮಾನದ ಜೊತೆಗೆ ತೆರಿಗೆ ಸುಂಕಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿತು. ಗಾಯಿಡಿನ್ ವಿರುದ್ಧ ಅಪಪ್ರಚಾರ ಮಾಡಲಾರಂಭಿಸಿತು. ಆದರೂ ತನ್ನ ಹೋರಾಟ ನಿಲ್ಲಿಸಲಿಲ್ಲ ಗಾಯಿಡಿನ್ಲ್ಯೂ
ಕೊನೆಗೆ ಗಾಯಿಡಿನ್ ಮೇಲೆ ವ್ಯಾಪಾರಿಗಳ ಹತ್ಯೆಯ ಆರೋಪ ಮಾಡಿ ಬಂಧನದ ಆದೇಶ ಹೊರಡಿಸಿತು. ನೇರವಾಗಿ ಬಂಧಿಸಲು ಸಾಧ್ಯವಿಲ್ಲವೆಂದು ತಿಳಿದ ಸರ್ಕಾರ ಬೇರೆ ಮಾರ್ಗವನ್ನು ಅನುಸರಿಸಿತು. ಗ್ರಾಮದ ಜನರಿಗೆ ಹಿಂಸೆ ನೀಡಲಾರಂಭಿಸಿತು. ಮತ್ತು ಗಾಯಿಡಿನ್ಲ್ಯೂ ಜೊತೆ ನಿಕಟ ಸಂಪರ್ಕ ಹೊಂದಿದ್ದ ಡಾ. ಹರಾಲುಗೆ ಆಸೆ ಆಮಿಷಗಳನ್ನೊಡ್ಡಿ ಅವನಿಂದ ಮಾಹಿತಿ ಪಡೆಯಿತು. ಅಷ್ಟರಲ್ಲಿ ಜನರು ಅನುಭವಿಸುತ್ತಿದ್ದ ಹಿಂಸೆಯನ್ನು ನೋಡಿ ನೊಂದ ಗಾಯಿಡಿನ್ಲ್ಯೂ ಬ್ರಿಟಿಷರನ್ನು ಎದುರಿಸಿ ಅಕ್ಟೋಬರ್ 12, 1932ರಂದು ಹೊರಬಂದು ಬಂಧನಕ್ಕೊಳಗಾದರು. ಸುಮಾರು ಎರಡು ತಿಂಗಳು ಕೊಹಿಮಾ ಜೈಲಿನಲ್ಲಿ ವಿಚಾರಣೆ ನಡೆಸಿ, ಸುಳ್ಳು ಆಪಾದನೆ ಹೊರಿಸಿ, ಹೆಚ್ಚಿನ ವಿಚಾರಣೆಗಾಗಿ ಇಂಫಾಲ್ ಗೆ ಕರೆದೊಯ್ದರು. ಅಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಗಾಯಿಡಿನ್ಲ್ಯೂರವರನ್ನು ಬಿಡುಗಡೆ ಮಾಡಲು ಹಲವಾರು ಜನರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳ ಬಿಡುಗಡೆಯಿಂದ ಚಳವಳಿ ತೀವ್ರ ಸ್ವರೂಪ ತಾಳುತ್ತದೆಯೆಂದು ಮನಗಂಡು ಬಿಡುಗಡೆ ಮಾಡಲಿಲ್ಲ. ಕೊನೆಗೆ ಹದಿನೈದು ವರ್ಷಗಳ ಕಾಲ ಸೆರೆಮನೆ ವಾಸದಿಂದ ಅಂದರೆ 1947ರಲ್ಲಿ ಬಿಡುಗಡೆ ಆಯಿತು. 
ಬಿಡುಗಡೆಯಾಗಿ ಬಂದ ಗಾಯಿಡಿನ್ಲ್ಯೂ ಸುಮ್ಮನೆ ಕೂರಲಿಲ್ಲ. ಸ್ವಾತಂತ್ರ್ಯಾನಂತರ ಸಹ ಅವರು ತಮ್ಮ ಜನರ ಏಳಿಗೆಗಾಗಿ ದುಡಿಯಲಾರಂಭಿಸಿದರು. 1952ರವರೆಗೆ ವಿಮ್ ರಾಪ್ ಹಳ್ಳಿಯಲ್ಲಿ ತಮ್ಮ ತಮ್ಮನೊಂದಿಗಿದ್ದರು. ನಂತರ ತಮ್ಮ ಹುಟ್ಟೂರು ಲಾಂಗ್ ಕಾವ್ ಗೆ ತೆರಳಿದರು.
ಅವರು ಭಾರತದಿಂದ ಬೇರ್ಪಡಬೇಕೆಂಬ ಬೇಡಿಕೆಯುಳ್ಳ ನಾಗಾ ನ್ಯಾಷನಲ್ ಕೌನ್ಸಿಲ್ ನ ವಿರುದ್ಧವಾಗಿದ್ದರು. ಬದಲಿಗೆ ಅವರು ಭಾರತ ಭೂಪ್ರದೇಶದಲ್ಲಿಯೇ ಜೆಲಿಯನ್ ಗ್ರಾಂಗ್ ಪ್ರದೇಶ ಬೇರೆಯಾಗಿರಬೇಕೆಂಬುದರ ಪರವಾಗಿದ್ದರು. ಅವರ ವಿರುದ್ಧ ಎನ್ ಎನ್ ಸಿ ಗೆ ಮತ್ತು ಬ್ಯಾಪ್ಟಿಸ್ಟ್ ನಾಯಕರಿಗೆ ಆಕ್ರೋಶವಿತ್ತು ಹಾಗೂ ಅದಕ್ಕಾಗಿ ಅವರು ಜೀವಬೆದರಿಕೆಯನ್ನೂ ಎದುರಿಸಬೇಕಾಯಿತು. ಆದರೆ ಅವರು ಅದಾವುದಕ್ಕೂ ಹಿಂಜರಿಯಲಿಲ್ಲ. 1960ರಲ್ಲಿ ಅವರು ತಮ್ಮ ಉದ್ದೇಶ ಸಾಧನೆಗಾಗಿ ಭೂಗತರಾದರು.
ಸುಮಾರು ಸಾವಿರ ಜನರ ಸೈನ್ಯವೊಂದನ್ನು ಕಟ್ಟಿ ಜೆಲಿಯನ್ ಗ್ರಾಂಗ್ ಜಿಲ್ಲೆಗಾಗಿ ಆಗ್ರಹಿಸಿದರು. ಅಸ್ಸಾಂ ಸರ್ಕಾರ ಭೂಗತ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕೋರಿತು. 1966ರಲ್ಲಿ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಭೇಟಿ ಮಾಡಿದ ನಂತರ, 6 ವರ್ಷಗಳ ಭೂಗತ ಬದುಕಿನ ನಂತರ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ಅಡವಿಯಿಂದ ಹೊರಬಂದರು. ಅವರ ಸೈನ್ಯದ ಕೆಲವರನ್ನು ನಾಗಾಲ್ಯಾಂಡ್ ನ ಸಶಸ್ತ್ರ ಪೋಲಿಸ್ ಪಡೆಗೆ ಸೇರಿಸಿಕೊಳ್ಳಲಾಯಿತು. ನಾಗಾಲ್ಯಾಂಡ್ ಸರ್ಕಾರ ಆಕೆಗೆ ಸರ್ಕಾರಿ ನಿವಾಸವನ್ನು ನೀಡುವುದರ ಜೊತೆಗೆ ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಟ್ಟಿತು.
ಸಂಸ್ಕೃತಿಯ ಉಳಿವಿಗಾಗಿ ದೇಶದಾದ್ಯಂತ ಹೋರಾಟ ನಡೆಸಿದ ಗಾಯಿಡಿನ್ಲ್ಯೂ 1993 ರ ಫೆಬ್ರುವರಿ 17 ರಂದು ನಿಧನರಾದರು. ಇವರು ಕೇವಲ ನಾಗಾ ಸಂಸ್ಕೃತಿಯ ಉಳಿವಿಗಾಗಿ ಅಲ್ಲದೇ ಇಡೀ ಸಮಗ್ರ ಭಾರತದ ಬಗ್ಗೆಯೂ ಚಿಂತಿಸುತ್ತಿದ್ದರು. ಇವರ ಹೋರಾಟಕ್ಕಾಗಿ ಭಾರತ ಸರ್ಕಾರ ಇವರನ್ನು "ಸ್ವಾತಂತ್ರ್ಯ ಹೋರಾಟಗಾರ್ತಿ"  ಎಂದು ಗುರುತಿಸಿ ತಾಮ್ರಪತ್ರವನ್ನು ನೀಡಿ ಗೌರವಿಸಿತು. 1966 ರಲ್ಲಿ ಭಾರತೀಯ ಅಂಚೆ ಇಲಾಖೆ ಇವರ ಭಾವಚಿತ್ರವಿರುವ ಚೀಟಿಯನ್ನು ಹೊರ ತಂದಿತು. 

1982ರಲ್ಲಿ ಭಾರತ ಸರ್ಕಾರ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1996ರಲ್ಲಿ ಮರಣೋತ್ತರವಾಗಿ "ಬಿರ್ಸಾ ಮುಂಡಾ" ಪ್ರಶಸ್ತಿಯನ್ನು ನೀಡಿತು. ಇವರ ಹೆಸರಿನಲ್ಲಿ "ಸ್ತ್ರೀಶಕ್ತಿ ಪುರಸ್ಕಾರ" ವನ್ನು ಪ್ರಾರಂಭಿಸಿದೆ. ಬಿ.ಬಿ.ಸಿ ಯವರು ಇವರ ಬಗ್ಗೆ ಸಾಕ್ಷ್ಯಚಿತ್ರವನ್ನು ತೆಗೆದಿದ್ದಾರೆ. 
ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಅನೇಕ ಮಹನೀಯರಲ್ಲಿ ಇವರೊಬ್ಬರು. ಇಂತಹವರನ್ನು ಸ್ಮರಿಸಿ ಅವರ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ವಿಜಯಲಕ್ಷ್ಮಿ ಎಂ ಎಸ್


ಕಾಮೆಂಟ್‌ಗಳಿಲ್ಲ: