Pages

ಮಹಾನತೆಯತ್ತ - ಜೀತಪದ್ಧತಿಯ ವಿರೋಧಿ ಹೋರಾಟಗಾರ ಇಕ್ಬಾಲ್ ಮಸೀಹ್

[ಈ ಅಂಕಣದಲ್ಲಿ ನಾವು ಸಾಮಾನ್ಯತೆಯಿಂದ ಮಹಾನತ್ತೆಯತ್ತ ಸಾಗುತ್ತಿರುವ ಕಿರಿಯರು - ಹಿರಿಯರ ಬಗ್ಗೆ ವರದಿ ನೀಡಲಿಚ್ಛಿಸುತ್ತೇವೆ. ಹುಟ್ಟಿದಾಗಲೇ ಯಾರೂ ಮಹಾನರಾಗಿ ಹುಟ್ಟುವುದಿಲ್ಲ, ಮಹಾನತೆ ನಮ್ಮ ಕ್ರಿಯೆಗಳಿಂದಾಗುತ್ತದೆ. ಮಹಾನರಾದವರ ಸಾಧನೆಯ ಹಿಂದೆ ಶ್ರಮವಿದೆ, ದೃಢಸಂಕಲ್ಪವಿದೆ. ಪ್ರತಿಯೊಬ್ಬರು ಮನಸ್ಸು ಮಾಡಿದಲ್ಲಿ ಮಹಾನತೆಯತ್ತ ಸಾಗಬಹುದೆಂಬುದೇ ನಮ್ಮ ಅಭಿಪ್ರಾಯ.]

1982ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ ಇಕ್ಬಾಲ್‍ನನ್ನು ತಾಯ್ತಂದೆಯರು ಬಡತನದ ಕಾರಣದಿಂದಾಗಿ ಕಾರ್ಪೆಟ್ ಕಾರ್ಖಾನೆಗೆ ಬಾಲಕಾರ್ಮಿಕನಾಗಿ ಮಾರಿದರು. ಅಲ್ಲಿ ಇಕ್ಬಾಲ್ ಅಮಾನವೀಯ ಯಾತನೆ ಅನುಭವಿಸಿದ.  
ಜೀತ ಪದ್ಧತಿಯ ವಿರುದ್ಧ ಅಲ್ಲಿ ಹೋರಾಡುತ್ತಿರುವ ‘ಜೀತಪದ್ಧತಿ ವಿಮೋಚನಾ ರಂಗ’ದಿಂದ 1992ರಲ್ಲಿ ಮುಕ್ತನಾದ. ತಾನು ಸ್ವತಂತ್ರನಾದ ತಕ್ಷಣ ತನ್ನ ಪಾಡಿಗೆ ತನ್ನನ್ನು ನೋಡಿಕೊಳ್ಳದೆ, ಬಾಲಶ್ರಮದ ವಿರುದ್ಧ ಹೋರಾಟ ಆರಂಭಿಸಿದ. 
ಕಾರ್ಪೆಟ್ ಮಾಫಿಯಾದವರ ವಿರುದ್ಧ ಕೆಲಸ ಮಾಡುವುದು ಅಪಾಯಕರ ಎಂದು ತಿಳಿದಿದ್ದರೂ ಆ ಎಲ್ಲಾ ಅಪಾಯಗಳನ್ನು ಎದುರಿಸುತ್ತಾ, ತನ್ನ ಜೀವವನ್ನೇ ಪಣವಾಗಿಟ್ಟು ಸುಮಾರು 3000 ಮಕ್ಕಳನ್ನು ಬಾಲಶ್ರಮದಿಂದ ಬಿಡುಗಡೆಗೊಳಿಸಿದ. ಮಕ್ಕಳು ಮಾಡುವ ಕಾರ್ಪೆಟ್‍ಗಳನ್ನು ಬಹಿಷ್ಕರಿಸಿ ಎಂದು ಎಲ್ಲರಲ್ಲೂ ಮನವಿ ಮಾಡಿದ. ವಿಮೋಚನಾ ರಂಗದ ಹೋರಾಟದ ಪರಿಣಾಮವಾಗಿ ಕಾರ್ಪೆಟ್ ರಫ್ತು ಕಡಿಮೆಯಾಯಿತು. ಈ ಹೋರಾಟವನ್ನು ಸಹಿಸದ ‘ಕಾರ್ಪೆಟ್ ಮಾಫಿಯಾ’ದಿಂದ 1995ರ ಏಪ್ರಿಲ್ 16ರಂದು ಅವನನ್ನು ಹತ್ಯೆ ಮಾಡಿದರು. 
ಇದಕ್ಕೂ ಮುಂಚೆ ಅವನು ಅಮೆರಿಕಾಗೆ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಮಾತನಾಡಲು ಹೋಗಿದ್ದ. 

ಇವನ ಭಾಷಣದಿಂದ ಸ್ಫೂರ್ತಿ ಪಡೆದ ಅಮೇರಿಕಾದ ಶಾಲೆಯ ಅಮಾಂಡಾ ಎಂಬ ಹೆಣ್ಣುಮಗಳು ಮತ್ತು ಇತರ ಮಕ್ಕಳು “ಇಕ್ಬಾಲ್‍ನಿಗಾಗಿ ಒಂದು ಶಾಲೆ” ಎಂಬ ಯೋಜನೆಯಡಿ ಸಾಕಷ್ಟು ಹಣವನ್ನು ಸಂಗ್ರಹಿಸಿ ಹಿಂದುಳಿದ ದೇಶಗಳಲ್ಲಿ ಶಾಲೆಗಳನ್ನು ಕಟ್ಟಿಸಿದ್ದಾರೆ; ಕಟ್ಟಿಸಲು ಹಣ ಸಂಗ್ರಹಿಸುತ್ತಿದ್ದಾರೆ.
“ವಿಶ್ವದ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಖಚಿತಪಡಿಸುವುದು ನನ್ನ ಅತ್ಯಂತ ದೊಡ್ಡ ಕನಸಾಗಿದೆ” ಎಂಬುದು ಅವನ ಧ್ಯೇಯವಾಕ್ಯವಾಗಿತ್ತು.   

ಸುಧಾ ಜಿ      

ಕಾಮೆಂಟ್‌ಗಳಿಲ್ಲ: