ಈ ಕವನ ನನ್ನ ಮನದಾಳದ ಮಾತುಗಳು. ಇದು ನನ್ನ ಜೀವನದಲ್ಲಿ ನಡೆದ ಘಟನೆ. ನನ್ನ ತಂದೆ
ತೀರಿಕೊಳ್ಳುವ ೨ ವರ್ಷಗಳ ಮುಂಚೆ ನಡೆಯಿತು ಈ ಸಂಭಾಷಣೆ. ನಂತರ ಅವರಿಗೆ ಲಕ್ವ ಹೊಡೆದು,
ಮತ್ತೆ ಮಾತನಾಡಲೇ ಇಲ್ಲ. ಅದೇ ಅವರ ಕೊನೆನುಡಿಗಳಾದವು. ಈ ಕವನ ಕೇವಲ ಪದಗಳಲ್ಲ, ನನ್ನ
ನೋವಿನ ಅಶ್ರುಗಳು. ಏಕೆಂದರೆ ನಾನವರ ಸ್ವಂತ ಮಗಳಲ್ಲದಿದ್ದರೂ ನನ್ನನ್ನು ಅಪಾರವಾಗಿ
ಪ್ರೀತಿಸಿದರು. ದೇವರನ್ನು ನೋಡಲು ಯಾರಿಗಾದರೂ ಸಾಧ್ಯವೋ ಇಲ್ಲವೋ ನನಗೆ ಗೊತ್ತಿಲ್ಲ,
ಆದರೆ ನಾನು ಅವರಲ್ಲಿ ದೇವರ ರೂಪವನ್ನು ಕಂಡಿದ್ದೇನೆ.
ಮಾತಿಲ್ಲದೆ, ಮೌನವಾಗಿ
ಚಿಪ್ಪೊಳಗೆ ಹೋಗುವ ಮುನ್ನ
ಅಪ್ಪಾಜಿ ನನಗೆ ಹೇಳಿದ ಒಂದೇ ಪದ -
ಅಪ್ಪಾಜಿ ನನಗೆ ಹೇಳಿದ ಒಂದೇ ಪದ -
ಲಾಲ್ ಸಲಾಮ್.
ಗೊತ್ತಾಗಲಿಲ್ಲ ಅಂದು
ಅದೇನೇ
ಅಪ್ಪಾಜಿಯ ಕೊನೆಯ ಮಾತೆಂದು.
ಆವತ್ತು ಹೇಳಿದ ಆ ಮಾತಲ್ಲಿದ್ದದ್ದು,
ಗಾಂಭೀರ್ಯವೊ, ಆತ್ಮವಿಶ್ವಾಸವೊ?
ಅಹಂಕಾರವೊ,
ದುರಭಿಮಾನವೊ?
ಇವು ಯಾವುದು ಅಲ್ಲೆಂದು
ಅದು ಬರಿ ನೋವಿನ ವಿಲಾಪವೆಂದು
ಅದು ಬರಿ ನೋವಿನ ವಿಲಾಪವೆಂದು
ಗೊತ್ತಾಗಿದ್ದು ನಂತರವೇ.
ನೋವಿನ ಆ ಮಾತುಗಳು,
ಗಾಂಭೀರ್ಯದ ಆ ಧ್ವನಿ
ನನ್ನ ಕಿವಿಗಳಿಗೆ ಕೇಳೋಕೆ ....ಇಂದಿಲ್ಲ..
ಆ ಕಂಗಳ ವಿಷಾದಛಾಯೆ
ಪ್ರೀತಿಯ
ಆ ಮುಖಭಾವ
ನನ್ನ ಕಣ್ಣುಗಳಿಗೆ
ನೋಡೋಕೆ.....ಇಂದಿಲ್ಲ
ಆದ್ರೂ....ಅಪ್ಪಾಜಿ ನಿನ್ನ
ನಿಶ್ಚಲವಾದ ನಿಶ್ಯಬ್ದವಾದ
ದೇಹವನು ಕಂಡು
ಸುರಿದದ್ದು
ನನ್ ಕಣ್ಣುಗಳಲ್ಲಿ ....
ಕಣ್ಣೀರಲ್ಲ .. ರಕ್ತ.
ಜೀವನದಲಿ ನೀ ಎಂದಾದರೂ
ಶಿಸ್ತನ್ನು ಪಾಲಿಸಿದೆಯಾ?
ಅದೇ ಶಿಸ್ತುಗಳು ನಿನ್ನನ್ನು
ಹೀಗೆ ಮಲಗಿಸಿಬಿಟ್ಟಿದೆಯಾ?
ಒಂದಿನವೂ ಕೂಡ
ದೇವರ ಸ್ತುತಿಸದೆ ನೀನಿರಲಿಲ್ಲ
ಆದ್ರೂ ....
ಆ ದೇವರೆ ನಿನ್ನನ್ನು ಮೌನವಾಗಿ
ಶಿಕ್ಷಿಸಿದನೋ, ಏನೋ?
ಇಂದು ನಿನ್ ಬಾಯಲ್ಲಿ ಬರಲಿಲ್ಲ
ಒಂದೂ ದೇವರ ವಾಕ್ಯ ;
ಮುಂಜಾನೆಯ ಮೊದಲ ವಾಕ್ಯವೇ,
ನೀ ನನಗೇ ಹೇಳಿದ ಲಾಲ್ ಸಲಾಮ್!
ಅದೇನೇ ಇರಲಿ ಅಪ್ಪಾಜಿ
ಕೊನೆಯದಾಗಿ
ನೀ ನನಗೆ ಹೇಳಿದ
ಆ ಮಾತನ್ನು .....
ಅದೊಂದು ನೋವಿನ ನೆನಪಾಗಿ....
ಮಿಂಚುವ ಮೂರ್ತಿಯಾಗಿ
ನನ್ ಮನಸಲ್ಲಿ
ಮನಸಾರೆ
ಪ್ರತಿಷ್ಠಾಪಿಸಿರುವೆ
ನನ್ ಪ್ರೀತಿಯ ಅಪ್ಪಾಜಿಯ ಎಂದೆಂದೂ
ನೆನಪಿನ
ಆ ಲಾಲ್ ಸಲಾಮ್ ಅನ್ನು
- ಶೀಬಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ