[ಜೆ ಬಿ ಎಸ್ ಹಾಲ್ಡೇನ್ ರವರು ಬ್ರಿಟಿಷ್ ವಿಜ್ಞಾನಿಗಳು. ಫಿಸಿಯಾಲಜಿ, ಜೆನಿಟಿಕ್ಸ್, ವಿಕಾಸವಾದಿ ಜೀವಶಾಸ್ತ್ರ, ಮತ್ತು ಗಣಿತದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಜೊತೆಗೆ ಸ್ಟಾಟಿಸ್ಟಿಕ್ಸ್ ಮತ್ತು ಬಯೋಸ್ಟಾಟಿಸ್ಟಿಕ್ಸ್ ಗೆ ನೂತನ ಕೊಡುಗೆಯನ್ನು ನೇಡಿದ್ದಾರೆ. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಹಾಲ್ಡೇನ್ ರವರು, ಅವರ ಪೀಳಿಗೆಯ ಅತ್ಯಂತ ಮೇಧಾವಿ ಎಂದು ಆರ್ಥರ್ ಸಿ ಕ್ಲಾರ್ಕ್ ರವರು ಹೇಳಿದ್ದಾರೆ. ತಮ್ಮ ಸಮಾಜವಾದಿ, ನಾಸ್ತಿಕವಾಡಿ, ಮಾರ್ಕ್ಸ್ ವಾದಿ, ಮಾನವೀಯತಾವಾದಿ ಅಭಿಪ್ರಾಯಗಳಿಂದಾಗಿ ಅವರು ದೇಶ ಬಿಟ್ಟು ಬಂದು ಭಾರತದಲ್ಲಿ ನೆಲೆಸಿದರು. ೧೯೬೧ರಲ್ಲಿ ಭಾರತದ ಪ್ರಜೆಯಾದರು. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಬರೆದಿರುವ ಹಲವರು ಲೇಖನಗಳಲ್ಲಿ ಈ ಲೇಖನ ಸಹ ಒಂದು]
ಬಹುತೇಕ ವೈಜ್ಞಾನಿಕ ಕೆಲಸಗಾರರು ತಮ್ಮ ವಿಷಯದ ಬಗ್ಗೆ ಜ್ಞಾನವನ್ನು ಹರಡಲು ಮತ್ತು ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸುತ್ತಾರೆ. ಸಾಮಾನ್ಯ ಜನತೆಗಾಗಿ ವಿಜ್ಞಾನದ ಬಗ್ಗೆ ಬರೆಯುತ್ತಾ ಎರಡನ್ನೂ ಮಾಡಬಹುದು. ಅದನ್ನು ಹೇಗೆ ಮಾಡುವುದೆಂಬುದರ ಬಗ್ಗೆ ಕೆಲವು ಸಲಹೆಗಳನ್ನು ಕೊಡುತ್ತೇನೆ. ಆದರೆ ಯಾವುದೇ ಓದುಗ ನನ್ನ ವಿಧಾನ ಏಕೈಕವಾದದ್ದು ಎಂದು ಭಾವಿಸದಿರಲಿ. ಸಾಹಿತ್ಯಿಕ ಜೋಡಣೆ, ಜೈವಿಕ ಜೋಡಣೆಯಂತೆ. ಯಾವ ಉತ್ಪನ್ನ ಬೇಕು ಮತ್ತು ಕಚ್ಚಾ ಪದಾರ್ಥಗಳು ಯಾವುವು, ಸಲಕರಣೆಗಳು ಏನು ಎಂಬುದರ ಮೇಲೆ ವಿಧಾನವು ನಿರ್ಧಾರವಾಗುತ್ತದೆ. ನನ್ನ ಮೆದುಳೇ ಒಂದು ಸಾಧನವಾದ್ದರಿಂದ, ನಿಮ್ಮದಕ್ಕಿಂತ ಭಿನ್ನವಾದ್ದರಿಂದ, ನನ್ನ ವಿಧಾನಗಳೂ ಸಹ ಬೇರೆಯೇ ಆಗಿರುತ್ತವೆ.
ಬರವಣಿಗೆಯ ಕೆಲಸ ಸುಲಭವಲ್ಲ ಮತ್ತು ಬರೆಯುವ ವಿಧಾನಕ್ರಮವನ್ನು ದ್ವೇಷಿಸಿದರೆ ಬರವಣಿಗೆ ಅಸಾಧ್ಯವೆಂದು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು. ವಿಜ್ಞಾನಕ್ಕಿರುವಂತೆ ಸಾಹಿತ್ಯಕ್ಕೆ ತನ್ನದೇ ಆದ ವಿಧಾನಕ್ರಮವಿದೆ. ಎಲ್ಲಿಯವರೆಗೂ ನೀವು ಒಂದಷ್ಟು ಉತ್ತಮ ಮಾನದಂಡವನ್ನು ಅಳವಡಿಸಿಕೊಳ್ಳುವುದಿಲ್ಲವೊ, ಅಲ್ಲಿಯವರೆಗೂ ನೀವು ಗುರಿ ತಲುಪಲಾರಿರಿ. ಆದ್ದರಿಂದ ನೀವು ನಿಮ್ಮ ಮೊದಲ ಅಥವಾ ಎರಡನೆಯ ಪ್ರಯತ್ನದಲ್ಲಿಯೇ ಯಶಸ್ಸನ್ನು ಕಂಡುಬಿಡುತ್ತೀರೆಂದು ಆಶಿಸಬೇಡಿ.
ನೀವು ಯಾರಿಗಾಗಿ ಬರೆಯುತ್ತಿರುವಿರಿ! ಇದು ವಿಷಯದ ಆಯ್ಕೆಗಿಂತ ಬಹಳ ಮುಖ್ಯವಾದದ್ದು. ಏಕೆಂದರೆ 18ನೇ ಶತಮಾನದ ಭೌತಶಾಸ್ತ್ರದ ಇತಿಹಾಸದ ಬಗೆಗಿನ ಲೇಖನ ನಿಮಗೆ ದೈನಂದಿಕದಲ್ಲಿ ದೊರೆಯುವುದಿಲ್ಲ. ‘ದಿ ಟೈಮ್ಸ್ ಪತ್ರಿಕೆ’ ಮಿನರಾಲಜಿ ಬಗೆಗಿನ ಸೋವಿಯತ್ ಕೆಲಸದ ಬಗ್ಗೆ ಸರಿಯಾಗಿ ಬರೆಯುವುದು ಅಸಂಭವ. ‘ಡೈಲಿ ವರ್ಕರ್ ಪತ್ರಿಕೆ’ ಬ್ರಿಟಿಷ್ ಸುಡಾನ್‍ನಲ್ಲಿ ಹತ್ತಿ ಬೆಳೆಯುವಿಕೆಯ ಬಗ್ಗೆ ಪ್ರಶಂಸನೀಯ ಲೇಖನ ಬರೆಯುವ ಸಂಭವ ಅತಿ ಕಡಿಮೆ. ಜೊತೆಗೆ ನಿಮ್ಮ ಲೇಖನ ಎಷ್ಟು ಉದ್ದವಿರಬೇಕು, ಅದು ಎಲ್ಲಿ ಪ್ರಕಟವಾಗುವುದು ಎಂಬುದರ ಮೇಲೆ ಲೇಖನವನ್ನು ನಿರ್ಧರಿಸಬೇಕು.
ಈಗ ವಸ್ತುವಿಷಯಕ್ಕೆ ಬರೋಣ. ನೀವು ಯಾವುದೋ ಒಂದು ನಿರ್ದಿಷ್ಟ ಸಂಶೋಧನಾ ಕೆಲಸವನ್ನೋ ಅಥವಾ ನಿರ್ದಿಷ್ಟ ತತ್ವಅಳವಡಿಕೆಯ ವಿಷಯದ ಬಗ್ಗೆ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಯಾವುದೋ ಸಾಮಾನ್ಯ ತತ್ವವನ್ನು ಆಯ್ಕೆಮಾಡಿಕೊಂಡು ಅದನ್ನು ಅರ್ಥಮಾಡಿಸಲು ವಿವಿಧ ವಿಭಾಗಗಳ ವೈಜ್ಞಾನಿಕ ಕೆಲಸದ ಬಗ್ಗೆ ಬರೆಯಲು ಆರಿಸಿಕೊಳ್ಳಬಹುದು. ಉದಾಹರಣೆಗೆ “ಉಪಯುಕ್ತ ಆಕಸ್ಮಿಕ”ಗಳ ಬಗ್ಗೆ ಅತ್ಯುತ್ತಮ ಲೇಖನ ಬರೆಯಬಹುದು. ಪ್ರೀಸ್ಟ್ಲಿ ಆಕಸ್ಮಿಕವಾಗಿ ಒಂದು ಉಷ್ಣಮಾಪಕವನ್ನು (ಥರ್ಮಾಮೀಟರ್) ಬೀಳಿಸಿದರು. ಪಾದರಸದ ಸ್ಥಿತಿ ಅವರಿಗೆ ಆಕ್ಸಿಜೆನ್ ಕಂಡುಹಿಡಿಯಲು ದಾರಿಯನ್ನು ತೋರಿಸಿತು. ಟಾಕಮೈನ್ ಸುಪ್ರಾರೀನಲ್ ಗ್ರಂಥಿಗಳಿಗೆ ಸ್ವಲ್ಪ ಅಮೋನಿಯ ಚೆಲ್ಲಿಬಿಟ್ಟರು ಮತ್ತು ಅದರಿಂದ ಅಡ್ರಿನಾಲಿನ್‍ಅನ್ನು ಹರಳು ಮಾಡಿದರು.
ನೀವು ವಿಜ್ಞಾನ ಇತಿಹಾಸದ ವಿದ್ಯಾರ್ಥಿ ಅಲ್ಲದಿದ್ದರೆ, ಬಹುಶಃ ಹೆಚ್ಚು ವಿಶೇಷವಾದ ವಸ್ತುವಿಷಯದ ಬಗ್ಗೆ ಬರೆಯುವುದು ಉತ್ತಮ. ನೆನಪಿಡಿ ನೀವು ಅದನ್ನು ಹೇಳುವ ವಿಧಾನ ಹೆಚ್ಚು ಆಸಕ್ತಿದಾಯಕವಾಗಿರಬೇಕು. ಇಲ್ಲಿಯವರೆಗೂ ಬಹುಶಃ ನೀವು ಎರಡು ರೀತಿಯ ಲೇಖನಗಳನ್ನು ಬರೆದಿರುತ್ತೀರಿ. ಮೊದಲನೆಯದು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ. ಅಲ್ಲಿ ನೀವು ವಿಷಯದ ಬಗ್ಗೆ ನಿಮಗೆ ಎಷ್ಟು ಗೊತ್ತೆಂಬುದನ್ನು ತೋರಿಸಲು ಪ್ರಯತ್ನಿಸುವಿರಿ. ಇನ್ನೊಂದು, ಒಂದು ಸಣ್ಣ ವಿಷಯವನ್ನು ಸಹ ಆಳವಾಗಿ ಪರಿಶೀಲಿಸುವ ವೈಜ್ಞಾನಿಕ ಲೇಖನಗಳು ಅಥವಾ ತಾಂತ್ರಿಕ ಲೇಖನಗಳು. ಈಗ ನೀವು ಇದಕ್ಕಿಂತ ವಿಭಿನ್ನವಾದದ್ದನ್ನು ಮಾಡಬೇಕೆಂಬ ಉತ್ಸಾಹದಲ್ಲಿದ್ದೀರಿ. ನೀವು ಏನೋ ಹೆಚ್ಚುಗಾರಿಕೆ ತೋರಿಸಲು ಪ್ರಯತ್ನಿಸುತ್ತಿಲ್ಲ ಅಥವಾ ನಿಮ್ಮ ಓದುಗರು ಆ ಕಾರ್ಯಾಚರಣೆ ಮಾಡುವಷ್ಟು ಪ್ರವೀಣರಾಗಬೇಕಾಗಿಲ್ಲದ್ದರಿಂದ ನಿಖರವಾಗಿ ಹೇಳಬೇಕೆಂಬ ಗುರಿಯನ್ನೂ ಹೊಂದಿಲ್ಲ. ಅವರಲ್ಲಿ ಆಸಕ್ತಿ ಅಥವಾ ಕುತೂಹಲ ಮೂಡಿಸುವುದು ನಿಮ್ಮ ಉದ್ದೇಶವಾಗಿರುತ್ತದೆಯೇ ಹೊರತು ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲ. ಆದ್ದರಿಂದ, ಆ ವಿಷಯದ ಬಗ್ಗೆ ನೀವು ಲೇಖನದಲ್ಲಿ ಬರೆಯುವುದಕ್ಕಿಂತ ಬಹಳ ಹೆಚ್ಚಿಗೆ ತಿಳಿದುಕೊಂಡಿರಬೇಕು. ಅದರಲ್ಲಿ ಒಂದು ಸುಸಂಬದ್ಧ ಲೇಖನ ಬರೆಯಲು ಅವಶ್ಯವಿರುವ ವಸ್ತುಗಳನ್ನು ಆರಿಸಿಕೊಳ್ಳಬೇಕು. ನನಗೆ ಬಂದಿರುವ ಬಹಳಷ್ಟು ಲೇಖನಗಳು ಪರೀಕ್ಷಾ ಉತ್ತರಪತ್ರಿಕೆಗಳಂತಿರುತ್ತವೆ. ಲೇಖಕರು ವಿಷಯವನ್ನು ನೋಡಿದ್ದಾರೆ ಮತ್ತು ಅದರ ಸಾರಾಂಶವನ್ನು ಬರೆಯಲು ಯತ್ನಿಸಿದ್ದಾರೆ ಎಂಬ ಭಾವನೆಯನ್ನು ಓದುಗರಲ್ಲಿ ಮೂಡಿಸಲೆತ್ನಿಸುತ್ತಾರೆ. ಈ ಸಂಕ್ಷಿಪ್ತ ರೂಪ ಪಠ್ಯಪುಸ್ತಕ ವಿಷಯಕ್ಕೆ ಸೂಕ್ತವಾದರೂ ಜನಪ್ರಿಯ ಲೇಖನಗಳ ಓದುಗರನ್ನು ಆಕರ್ಷಿಸುವುದಿಲ್ಲ, ಏಕೆಂದರೆ ಈ ರೀತಿಯ ಓದುಗರು ತಾರ್ಕಿಕವಾಗಿ ಯೋಚಿಸಲು ಇಚ್ಛಿಸುವುದಿಲ್ಲ.
ಹಾಗೆಂದ ಮಾತ್ರಕ್ಕೆ ನೀವು ಮೂರ್ಖರಿಗೆ ಬರೆಯಿರಿ ಎಂದಲ್ಲ. ಅಂದರೆ ನೀವು ವಿಜ್ಞಾನದ ಗೊತ್ತಿರದ ವಾಸ್ತವಾಂಶಗಳನ್ನು ಹೇಳುತ್ತಿರುವಾಗ, ಪದೇ ಪದೇ ದಿನನಿತ್ಯದ ಅನುಭವಗಳಿಂದ ಅರಿತಿರುವ, ಗೊತ್ತಿರುವ ವಾಸ್ತವಾಂಶಗಳನ್ನು ಹೇಳಬೇಕು. ಆದ್ದರಿಂದ ಗೊತ್ತಿರುವ ವಿಷಯದಿಂದ ಆರಂಭಿಸುವುದು ಒಳ್ಳೆಯದು. ಅದು ಬಾಂಬ್ ಸ್ಫೋಟವಿರಬಹುದು, ಹಕ್ಕಿ ಹಾಡು ಅಥವಾ ಚೀಸ್ ಬಗ್ಗೆ ಆಗಿರಬಹುದು. ಇದು ನಿಮಗೆ ಯಾವುದೋ ಒಂದು ವೈಜ್ಞಾನಿಕ ತತ್ವವನ್ನು ಸಾಬೀತುಪಡಿಸುವ ಅವಕಾಶ ನೀಡುತ್ತದೆ.
ಈಗ ಒಂದು ಗೊತ್ತಿರುವ ಸಾಮ್ಯತೆಯನ್ನೇ ಪರಿಗಣಿಸಿ. ಬಾಂಬ್‍ನಲ್ಲಿ ಆಗುವ ಬಿಸಿ ಅನಿಲ ಉತ್ಪತ್ತಿಯನ್ನು ಕೆಟಲ್‍ನ ಆವಿಗೆ, ಪಕ್ಷಿಯಲ್ಲಿ ಆಗುವ ಪ್ರತಿ ವರ್ಷದ ಬದಲಾವಣೆಗಳನ್ನು ಮನುಷ್ಯರಲ್ಲಿ ಆಗುವ ಬದಲಾವಣೆಗಳಿಗೆ, ಕ್ಯಾಸೀನ್‍ನಿಂದ ಕ್ಯಾಲ್ಷಿಯಂ ಲವಣಗಳ ರಚನೆಗೆ ಸೋಪ್ ನೊರೆಯ ರಚನೆಯನ್ನು ಹೋಲಿಸಿ.
ನಿಮಗೆ ಸಾಕಷ್ಟು ಮಾಹಿತಿ ಗೊತ್ತಿದ್ದರೆ, ಆಗ ನೀವು ನಿಮ್ಮ ಗುರಿಯನ್ನು ಒಂದು ದೊಡ್ಡ ನೆಗೆತದಲ್ಲಲ್ಲದೆ, ಚಿಕ್ಕ ಚಿಕ್ಕ ನೆಗೆತಗಳೊಂದಿಗೆ ಸಾಧಿಸಬಹುದು. ಈ ರೀತಿಯಲ್ಲಿ ನೀವು ಲೇಖನವನ್ನು ಬರೆಯಲು ಆರಂಭಿಸಿದರೆ, ಆಗ ಬಹುಶಃ ನಿಮಗೇ ನಿಮ್ಮ ಅಜ್ಞಾನದ ಅರಿವಾಗುತ್ತದೆ, ವಿಶೇಷವಾಗಿ ಪರಿಮಾಣಾತ್ಮಕ ವಿಷಯಗಳಲ್ಲಿ. ಬೇಸಿಗೆ ಕಾಲದಲ್ಲಿ ರಾಬಿನ್ ಪಕ್ಷಿಯ ಗೊನಾಡ್‍ಗಳ ಲೈಂಗಿಕ ಕೋಶಗಳು ಹೇಗೆ ಚಿಕ್ಕ ಮರಿಯದ್ದಾಗಿಬಿಡುತ್ತದೆ.,ಲಂಡನ್ನಲ್ಲಿ ನೀರಿಗಿಂತ ಎಷ್ಟು ಹೆಚ್ಚು ಕ್ಯಾಲ್ಸಿಯಂ ಹಾಲಿನಲ್ಲಿದೆ, ಸ್ಫೋಟಗೊಳ್ಳುವ ಬಾಂಬ್‍ನ ಗರಿಷ್ಟ ಉಷ್ಣಾಂಶವೆಷ್ಟು! ಒಂದು ಸಾವಿರ ಪದಗಳ ತಾರ್ಕಿಕವಾದ ಲೇಖನವನ್ನು ಪ್ರಾಮಾಣಿಕವಾಗಿ ಬರೆಯಲು ನೀವು 12 ಘಂಟೆಗಳ ಶ್ರಮ ಹಾಕಬೇಕಾಗುತ್ತದೆ. ಜನರ ಜೊತೆ ನಿಮ್ಮನ್ನೂ ನೀವು ಶಿಕ್ಷಿತರನ್ನಾಗಿಸಿಕೊಳ್ಳಬೇಕು. ನೀವು ಲೇಖನ ಬರೆದ ಮೇಲೆ, ಈ ವಿಷಯದ ಬಗ್ಗೆ ಅರಿವಿರದ ನಿಮ್ಮ ಸ್ನೇಹಿತರಿಗೆ ಕೊಡಿ ಅಥವಾ 6 ತಿಂಗಳುಗಳ ಕಾಲ ಪಕ್ಕಕ್ಕಿಟ್ಟುಬಿಡಿ. ನಂತರ ನಿಮಗೇ ಅದು ಅರ್ಥವಾಗುತ್ತದೆಯಾ ನೋಡಿ. ನೀವು ಹಿಂದೆ ಬರೆದಾಗ ಸರಳ ಎಂದುಕೊಂಡ ವಾಕ್ಯಗಳು ಈಗ ಸಂಕೀರ್ಣ ಎನಿಸಬಹುದು. ಅದನ್ನು ಒಟ್ಟುಗೂಡಿಸಲು ಕೆಲವು ಸಲಹೆಗಳು ಇಲ್ಲಿವೆ. (ನೆನಪಿಡಿ, ನಾನಿಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಮಾತ್ರ ಮಂಡಿಸುತ್ತಿದ್ದೇನೆ. ಪ್ರೊ।। ಹಾಗ್ಬೆನ್ ವಾಕ್ಯಗಳನ್ನು ರಚಿಸುವಾಗ ನನ್ನ ಕೆಲವು ಪ್ಯಾರಾಗಳಿಗಿಂತ ಸುದೀರ್ಘವಾದ ವಾಕ್ಯಗಳನ್ನು ಬರೆಯುತ್ತಾರೆ, ಆದರೂ ಅವರ ಪುಸ್ತಕಗಳೂ ಚೆನ್ನಾಗಿಯೇ ಮಾರಾಟಗೊಳ್ಳುತ್ತವೆ) ಕೆಲವೆಡೆ ಅರ್ಧವಿರಾಮ ಅಥವಾ ಸೆಮಿಕೊಲನ್ ಬದಲು ಪೂರ್ತಿ ವಿರಾಮ ಬಳಸಬಹುದೇ ಎಂಬುದನ್ನು ಪರಿಶೀಲಿಸಿ. ಸಾಧ್ಯವಾದರೆ ಅದನ್ನು ಮಾಡಿ. ಅದು ನಿಮ್ಮ ಓದುಗನಿಗೆ ಉಸಿರಾಡಲು ಸಮಯಾವಕಾಶ ಕಲ್ಪಿಸಿಕೊಡುತ್ತದೆ. ಪ್ಯಾಸಿವ್ ಕ್ರಿಯಾಪದದ ಬದಲು ಅಯ್ಕ್ಟಿವ್ ಕ್ರಿಯಾಪದ ಬಳಸಬಹುದೇ? “ಬಹಳಷ್ಟು ಜನರಿಂದ ಆರೋಗ್ಯಕ್ಕೆ ತೆರೆದ ಕಿಟಕಿಗಳು ಉತ್ತಮ ಎಂದು ಭಾವಿಸಲಾಗಿದೆ” ಎನ್ನುವ ಬದಲಿಗೆ ಹೀಗೆ ಬರೆಯಿರಿ - “ಬಹಳಷ್ಟು ಜನ ತೆರೆದ ಕಿಟಕಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ." ನೀವು ವಾಕ್ಯಗಳನ್ನು ಬಳಸಬೇಕಾದರೆ ನೀವು ಮಂಡಿಸುತ್ತಿರುವ ವಾಸ್ತವಾಂಶಗಳನ್ನು ಹೇಗೆ ಹಂತಹಂತವಾದ ರೀತಿಯಲ್ಲಿಯೇ ಇದನ್ನೂ ಮಂಡಿಸಿ. “ಅತ್ಯಂತ ಯೋಗ್ಯವಾದದ್ದು ಮಾತ್ರ ಉಳಿಯುತ್ತದ್ದಾದ್ದರಿಂದ ಜೀವ ತಳಿಯೂ ಬದಲಾಗುತ್ತದೆ” ಎನ್ನುವುದರ ಬದಲಿಗೆ “ಪ್ರತಿ ಪೀಳಿಗೆಯಲ್ಲಿಯೂ ಅತ್ಯಂತ ಯೋಗ್ಯ ಸದಸ್ಯರು ಮಾತ್ರ ಉಳಿದುಕೊಳುತ್ತಾರೆ, ಆದ್ದರಿಂದ ಜೀವ ತಳಿ ಬದಲಾಗುತ್ತದೆ” ಎಂದು ಬರೆಯಿರಿ.
ವೈಜ್ಞಾನಿಕ ಸಂಶೋಧನಾ ಇತಿಹಾಸದಲ್ಲಿ ಸಾಮಾನ್ಯವಾಗಿ ಪರಿಣಾಮ ಅದರ ಕಾರಣಕ್ಕಿಂತ ಮುಂಚಿತವಾಗಿಯೇ ತಿಳಿದಿರುತ್ತದೆ. ಗಣಿತದ ಬಹಳಷ್ಟು ಥಿಯರಮ್‍ಗಳನ್ನು ಔಪಚಾರಿಕವಾಗಿ ಸಾಬೀತುಪಡಿಸುವ ಮುನ್ನವೇ ಅದನ್ನು ಸತ್ಯವೆಂದು ನಂಬಲಾಗುತ್ತದೆ. ನಿಮ್ಮ ಸಿದ್ಧಾಂತವನ್ನು ಸಾಬೀತುಪಡಿಸುವ ಮುನ್ನವೇ ಸಾರಿಬಿಟ್ಟರೆ, ಯೂಕ್ಲಿಡ್ ಹೇಳಿದಂತೆ, ಆಗ ನೀವು ನಿಮ್ಮ ಮಾಯಾಟೋಪಿಯಿಂದ ಮೊಲಗಳನ್ನು ತೆಗೆಯುವವರಂತೆ ಕಾಣಿಸುತ್ತೀರಿ. ಆದರೆ ನೀವು ನಿಧಾನವಾಗಿ ಸಿದ್ಧಾಂತದ ಬಗ್ಗೆ ಅರಿವು ಮೂಡಿಸಿದರೆ, ನೀವು ಕಡಿಮೆ ಬುದ್ಧಿವಂತರೆಂಬ ಅಭಿಪ್ರಾಯ ಮೂಡಬಹುದು ಆದರೆ ನಿಮ್ಮ ಓದುಗನಿಗೆ ನಿಮ್ಮ ವಾದ ಅರ್ಥವಾಗಿ ವಿಷಯವನ್ನು ತಿಳಿದುಕೊಳ್ಳಲು ಇನ್ನೂ ಸ್ವಲ್ಪ ಸುಲಭವಾಗುತ್ತದೆ.
ವೈಜ್ಞಾನಿಕ ಮತ್ತು ಅದರಲ್ಲೂ ಗಣಿತ ಲೇಖನಗಳಲ್ಲಿ ಮಾಯಾಟೋಪಿ ಮತ್ತು ಮೊಲದ ವಿಧಾನ ಬಹಳ ಖುಷಿ ಕೊಡುವಂತಿರುತ್ತದೆ ಮತ್ತು ಕೆಲವೊಮ್ಮೆ ಅದು ಅವಶ್ಯಕವೂ ಹೌದು. ಹಾಗೆ ಮಾಡುತ್ತಾ ನೀವು ಗಂಭೀರ ವಿದ್ಯಾರ್ಥಿಗೆ ಯೋಚಿಸಲು ಸುಲಭ ವಿಧಾನವನ್ನು ಕಲಿಯಲು ಸಹಾಯ ಮಾಡಬಹುದು. ಆದರೆ ಒಬ್ಬ ಸಾಧಾರಣ ಓದುಗನನ್ನು ಅಶ್ಚರ್ಯಗೊಳಿಸಿಬಿಡುತ್ತೀರ. ನಿಧಾನವಾಗಿ ಮುಂದುವರೆಯಿರಿ ಮತ್ತು ಅವರಿಗೆ ಹಂತಹಂತವಾಗಿ ಹೇಳಿಕೊಡಿ. ನೀವು ಆಲೋಚನೆ ಮಾಡುವಾಗ ಕೆಲವನ್ನು ಬಿಟ್ಟರೂ ಅಥವಾ ಹಿಂದೆ ಮುಂದಕ್ಕೆ ಆಲೋಚಿಸಿದರೂ, ಲೇಖನವನ್ನು ಬರೆಯುವಾಗ, ನೀವು ನಿಮ್ಮ ವಾದದ ಮೂಲಕ, ತಾರ್ಕಿಕವಾಗಿ ಅರ್ಥಮಾಡಿಸಿ. ನೀನು ನಿಮ್ಮ ಲೇಖನವನ್ನು ಬರೆದಿರಬೇಕಾದರೆ ಅದು ಅಪೂರ್ಣ, ಅಥವಾ ಚೆನ್ನಾಗಿಲ್ಲ ಎನಿಸಬಹುದು. ವಾಸ್ತವಾಂಶಗಳ ಮತ್ತು ಅಮೂರ್ತ ವಾದಗಳ ದಾಖಲು ಪುಸ್ತಕ ಎನಿಸಬಹುದು. ವಿಮರ್ಶಕ ಅದಕ್ಕೆ ಇನ್ನಷ್ಟು ಮಾಹಿತಿ ತುಂಬಬೇಕು ಎಂದು ಹೇಳಬಹುದು. ಆದರೆ ಮಾಹಿತಿಗಾಗಿ ಮಾಹಿತಿಯನ್ನು ತುಂಬುವುದನ್ನು ನಾನು ವಿರೋಧಿಸುತ್ತೇನೆ. ವಸ್ತುವಿಷಯಕ್ಕಿಂತ ತಮ್ಮ ಶೈಲಿಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಕೆಲವು ಲೇಖಕರು, ಚಾರ್ಲ್ಸ್ ಲ್ಯಾಂಬ್ ಅಥವಾ ರಾಬರ್ಟ್ ಲಿಂಡ್‍ರವರ ಲಕ್ಷಣಗಳಿವು. ಆದರೆ ಇದಕ್ಕೆ ವೈಜ್ಞಾನಿಕ ಲೇಖನದಲ್ಲಿ ಸ್ಥಾನವಿಲ್ಲ.
ಇನ್ನೊಂದೆಡೆ ಓದುಗ ಈ ನಿಮ್ಮ ಲೇಖನವನ್ನು ತನ್ನ ಜ್ಞಾನಭಂಡಾರಕ್ಕೆ ಸಂಬಂಧಿಸಿ ನೋಡಲು ಸಾಧ್ಯವಾಗುವಂತೆ ಬರೆಯಬೇಕು. ನಿಮಗೆ ಗೊತ್ತಿರುವ ವಾಸ್ತವಾಂಶಗಳನ್ನು ಅಥವಾ ಗೊತ್ತಿರುವ ಸಾಹಿತ್ಯವನ್ನು ಪ್ರಸ್ತಾಪಿಸಿ ಈ ಕೆಲಸ ಮಾಡಬಹುದು. ಡೈಲಿ ವರ್ಕರ್ ಪತ್ರಿಕೆಯ ನನ್ನ ಲೇಖನಗಳಲ್ಲಿ ನಾನು ಮಾರ್ಕ್ಸ್ ರವರನ್ನು ಪ್ರಸ್ತಾಪಿಸಿರುವುದರಿಂದ ತೀವ್ರವಾದ ಟೀಕೆಗೆ ಒಳಗಾಗಿದ್ದೇನೆ. ಆದರೆ ನಾನು ಹೆಚ್ಚುಪ್ರಸ್ತಾಪಿಸುವುದು ಎಂಗೆಲ್ಸ್ ರವರನ್ನು. ಎಕೆಂದರೆ ನನ್ನ ಬಹಳಷ್ಟು ಓದುಗರು, ಈ ಬರಹಗಾರರ ಕೃತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಬದಲಾವಣೆಯ ಬಗೆ ಎಂಗೆಲ್ಸ್ ಕೆಲವು ವಿಷಯಗಳನ್ನು ಹೇಳಿದ್ದಾರೆ. ಹೆರಾಕ್ಲಿಟಸ್ ಅವರಿಗಿಂತ ಮುಂಚೆ ಹೇಳಿದ್ದಾರೆ. ಬರ್ಗ್‍ಸನ್ ಮತ್ತು ವೈಟ್‍ಹೆಡ್ ಅವರ ನಂತರ ಹೇಳಿದ್ದಾರೆ. ಆದರೆ ನನ್ನ ಓದುಗರಲ್ಲಿ ಹೆರಾಕ್ಲಿಟಸ್, ಬರ್ಗ್‍ಸನ್ ಅಥವಾ ವೈಟ್‍ಹೆಡ್ ಅನ್ನು ಒಬ್ಬರು ಓದಿದ್ದರೆ, ಎಂಗೆಲ್ಸ್ ರವರನ್ನು ನೂರು ಜನ ಓದಿದ್ದಾರೆ, ಹಾಗಾಗಿ ನಾನು ಅವರ ಹೇಳಿಕೆಗಳನ್ನು ಬಳಸಿಕೊಳ್ಳಲಿಚ್ಛಿಸುತ್ತೇನೆ. ನಾನು ಕ್ಲಾಸಿಕಲ್ ಪಂಡಿತರಿಗೆ ಭಾಷಣ ಮಾಡುತ್ತಿದ್ದರೆ ಎಂಗೆಲ್ಸ್ ಅದನ್ನು ಇನ್ನೂ ಉತ್ತಮವಾಗಿ ಹೇಳಿದ್ದಾರೆ ಎನಿಸಿದರೂ ಬಹುಶಃ ಹೆರಾಕ್ಲಿಟಸ್‍ರವರ ವಿಚಾರ ಪ್ರಸ್ತಾಪಿಸಬೇಕು. ನನ್ನ ಹಿಂದಿನ ಪುಸ್ತಕ ಜೆನೆಟಿಕ್ಸ್ ನಲ್ಲಿ ಡಾಂಟೆಯವರ ಡಿವೈನ್ ಕಾಮಿಡಿಯ ಏಳು ಸೂಕ್ತಿಗಳಿವೆ. ಡಾಂಟೆಯನ್ನು ಅಲ್ಲಿ ತಂದಿರುವುದಕ್ಕೆ ನನ್ನ ಬಗ್ಗೆ ಟೀಕೆ ಇದೆ. ಆದರೆ ನನಗೆ ಮಾನವ ಚಿಂತನೆಯ ಮುಂದುವರೆಕೆಯನ್ನು ತೋರಿಸುವುದು ಸೂಕ್ತ ಎಂದನಿಸಿತು. ಬದಲಾವಣೆಗಳು ದೈವಿಕ ನಿರ್ಣಯ ಎಂಬ ಡಾಂಟೆಯವರ ತತ್ವವನ್ನು ನಾನು ಒಪ್ಪುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಅವರಿಗೊಂದು ತತ್ವವಿತ್ತು ಎನ್ನುವುದನ್ನು ಹೇಳಲು ಇಚ್ಛಿಸುತ್ತೇನೆ.
ಮಾನವ ಜ್ಞಾನ ಮತ್ತು ಪ್ರಯತ್ನಗಳ ಐಕ್ಯತೆಯ ಬಗ್ಗೆ ಒತ್ತು ನೀಡಿದರೆ, ಜನಪ್ರಿಯ ವಿಜ್ಞಾನ ನಿಜವಾಗಿ ಸಮಾಜಕ್ಕೆ ಹೆಚ್ಚು ಉಪಯುಕ್ತ ಎಂದು ನಾನು ಭಾವಿಸುತ್ತೇನೆ. ಆದರೆ ಈ ಅಂಶವನ್ನು ವಿಜ್ಞಾನದ ಸಾಮಾನ್ಯ ಕಲಿಕೆಯಲ್ಲಿ ಒತ್ತಿ ಹೇಳುವುದಿಲ್ಲ. ಉತ್ತಮ ಜನಪ್ರಿಯ ವಿಜ್ಞಾನ ನಿಜವಾಗಿ ಈ ತಪ್ಪನ್ನು ಸರಿಪಡಿಸಬೇಕು, ತಂತ್ರಜ್ಞಾನದಿಂದ ಹೇಗೆ ವಿಜ್ಜಾನ ಸೃಷಿಯಾಗುತ್ತದೆ ಮತ್ತು ಹೇಗೆ ವಿಜ್ಜಾನ ತಂತ್ರಜ್ಞಾನವನ್ನು ಸೃಷ್ಟಿಮಾಡುತ್ತದೆ; ವೈಜ್ಞಾನಿಕ ಮತ್ತು ಇತರ ರೂಪಗಳ ಜೊತೆ ಚಿಂತನೆಗೆ ಇರುವ ಸಂಬಂಧವನ್ನು ತೋರಿಸಿಕೊಡಬೇಕು. ಜನಪ್ರಿಯ ವೈಜ್ಞಾನಿಕ ಲೇಖನ ಎಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ಸುದ್ದಿಗಳನ್ನೂ ಸೇರಿಸಿಕೊಳ್ಳಬೇಕು. ಸಾಮಾನ್ಯ ನಿಯಮವಾಗಿ ನಾನು ವಿವಿಯ ಆನರ್ಸ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗೆ ಪರಿಚಿತವಲ್ಲದ ಒಂದೊ ಎರಡೊ ವಿಷಯಗಳನ್ನು ಸೇರಿಸಲು ಇಚ್ಚಿಸುತ್ತೇನೆ. ಯಾವುದೇ ಒಂದು ಅನ್ವೇಷಣೆಯ ಪ್ರಕಟಣೆಗೂ ಮತ್ತು ಅದನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದಕ್ಕೂ 5 ವರ್ಷಗಳ ಅಂತರವಿರುವುದರಿಂದ ಅವುಗಳನ್ನು ಲೇಖನಗಳಲ್ಲಿ ಸೇರಿಸುವುದು ಒಳಿತು.
ಬಹಳಷ್ಟು ಅನ್ವೇಷಣೆಗಳನ್ನು ನಂತರದ ಸಂಶೋಧಕರು ಖಚಿತಪಡಿಸಿಲ್ಲ. ಒಂದು ಹೆಸರಾಂತ ಪತ್ರಿಕೆ ಈ ರೀತಿಯ ಅನ್ವೇಷಣೆಗಳನ್ನು ಪ್ರಕಟಿಸುತ್ತದೆ. ನನ್ನಂತೆ ಆ ಬರಹಗಾರ ವಾಸ್ತವವಾಗಿ ಸಂಶೋಧನೆಯಲ್ಲಿ ತೊಡಗಿದ್ದರೆ, ಮತ್ತು ಅವನ ಉಜ್ವಲ ವಿಚಾರಗಳು ಪಶ್ಚಿಮಕ್ಕೆ ಹೋಗುವುದನ್ನು ಕಂಡಿದ್ದರೆ, ಇಂತಹ ಬಲೆಗೆ ಅವರು ಬೀಳುವ ಸಾಧ್ಯತೆ ಕಡಿಮೆ. ಆರಂಭಿಕ ಹಂತಗಳಲ್ಲಿ, ಜನಪ್ರಿಯ ಬರವಣಿಗೆಯ ಲೇಖನಗಳಲ್ಲಿ, ಮೊದಲು ಲೇಖನದ ಸಾರಾಂಶವನ್ನು ಬರೆಯುವುದು ಒಳ್ಳೆಯದು. ಆದರೆ ನಾನೇ ಈ ಕೆಲಸ ಮಾಡುವುದು ಕಡಿಮೆ. ಪ್ರತಿಯೊಬ್ಬರು ಜನಪ್ರಿಯ ವಿಜ್ಞಾನ ಲೇಖನಗಳನ್ನು ತಮ್ಮದೇ ರೀತಿಯಲ್ಲಿ ಬರೆಯಬೇಕು. ನಾನು ಕೇವಲ ಒಂದು ವಿಧವನ್ನಷ್ಟೇ ವಿವರಿಸಿದ್ದೇನೆ. ನಾನು ಇದೊಂದೇ ದಾರಿಯೆಂದೊ ಅಥವಾ ಇದೇ ಅತ್ಯುತ್ತಮ ರೀತಿಯೆಂದೊ ಖಂಡಿತ ಸಾರಿಕೊಳ್ಳುವುದಿಲ್ಲ.
(ಮೂಲ: ಜೆ ಬಿ ಎಸ್ ಹಾಲ್ಡೇನ್)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ