ಚಿತ್ರ ಕೃಪೆ: ಅಂತರ್ಜಾಲ |
ಬೆಳಿಗ್ಗೆ ಎದ್ದಾಗಿನಿಂದಲೂ ಕೆಲಸ ಮಾಡಿ ಮಾಡಿ ಆಶಾಗೆ ಸುಸ್ತಾಗಿತ್ತು. ಹಿಂದಿನ ರಾತ್ರಿ ಆರಂಭವಾದ ಜ್ವರ ಸ್ವಲ್ಪ ಕಡಿಮೆಯಾಗಿದ್ದರೂ ಸುಸ್ತಿತ್ತು. ಆಫೀಸಿಗೆ ಹೋಗಲೆಂದು ಕಷ್ಟ ಪಟ್ಟುಕೊಂಡೆ ಎಲ್ಲಾ ಸಿದ್ಧತೆ ಮಾಡಿಕೊಂಡಳು. ತಿಂಡಿ ತಿನ್ನಲೆಂದು ತಟ್ಟೆಗೆ ದೋಸೆ ಹಾಕಿಕೊಂಡು ಬಂದು ಡೈನಿಂಗ್ ಟೇಬಲ್ ಮೇಲೆ ತಟ್ಟೆ ಇಟ್ಟವಳಿಗೆ, ಕಾಫಿ ಕಪ್ ಅಡಿಗೆ ಮನೆಯಲ್ಲೇ ಇಟ್ಟುಬಂದದ್ದು ನೆನಪಿಗೆ ಬಂದು ಒಳಗೆ ಹೋದಳು.
ಕಾಫಿ ಕಪ್ ತೆಗೆದುಕೊಂಡು ಹೊರಬರುವಷ್ಟರಲ್ಲಿ ಮಗ ಅವಳ ತಟ್ಟೆಯಲ್ಲಿ ತಿಂಡಿ ತಿನ್ನಲಾರಂಭಿಸಿದ್ದ. ಬೆಳಿಗ್ಗೆ ತಿಂಡಿ ಬೇಡವೆಂದು ಅವನು ಹೇಳಿದ್ದರಿಂದ ಅವಳು ಅವನಿಗೆ ದೋಸೆ ಹಾಕಿರಲಿಲ್ಲ. ಕೇಳಿದ್ದಕ್ಕೆ, “ಅಯ್ಯೊ, ಮಮ್ಮಿ ಹಸಿವಾಯಿತು ತಿನ್ನುತ್ತಿದ್ದೇನೆ. ಮತ್ತೆ ಮಾಡಿಕೊ ಹೋಗು” ಉಡಾಫೆಯಿಂದ ಮಾತನಾಡಿದ. “ನನಗೆ ಟೈಮ್ ಆಯಿತು, ನೀನು ಮೊದಲೇ ಹೇಳಬೇಕಿತ್ತು” ಎಂದಿದ್ದಕ್ಕೆ, “ಎಲ್ಲಾದಕ್ಕೂ ಸಿಸ್ಟಮ್, ಡಿಸಿಪ್ಲಿನ್ ಅನ್ನಬೇಡ. ಈಗೇನು ನಾನು ತಿನ್ನಲೊ ಬೇಡವೊ?”
ತಿನ್ನಬೇಡ ಅನ್ನಲಾದೀತೇ? ಬರೀ ಕಾಫಿ ಕುಡಿದು ಆಫೀಸಿಗೆ ಹೊರಡಬೇಕೆಂದು ಗಾಡಿ ಕೀ ತೆಗೆದುಕೊಂಡು ಹೆಲ್ಮೆಟ್ ಹಾಕಿಕೊಳ್ಳುವಷ್ಟರಲ್ಲಿ ಗಂಡ ಬಂದು, “ನೀನಿವತ್ತು ಬಸ್‍ನಲ್ಲಿ ಹೋಗು, ನಿನ್ನ ಮೈದನನಿಗೆ ಗಾಡಿ ಬೇಕಂತೆ” ಎಂದ. ಇನ್ನೇನೂ ಮಾತನಾಡದೆ ಬಿಎಂಟಿಸಿ ಹತ್ತಿದಳು. ಅಲ್ಲಿಂದಲೆ ಹೊರಟದ್ದರಿಂದ ಸೀಟೇನೊ ಸಿಕ್ಕಿತು, ಆದರೆ ಎರಡು ಸ್ಟಾಪ್ ಆದ ನಂತರ ಹಿರಿಯರೊಬ್ಬಾಕೆ ಬಂದರೆಂದು ಸೀಟು ಬಿಟ್ಟುಕೊಟ್ಟಳು. ಹಿಂದಕ್ಕೆ ತಿರುಗಿ ನೋಡಿದಾಗ, ಅಲ್ಲಿ ಲೇಡಿಸ್ ಸೀಟ್‍ನಲ್ಲಿ ಒಬ್ಬಾತ ಕುಳಿತದ್ದು ಕಂಡು, ಅಲ್ಲಿ ಹೋಗಿ “ಎದ್ದೇಳಿ” ಅಂದಳು. ಅದಕ್ಕೆ ಆ ವ್ಯಕ್ತಿ “ಯಾಕೆ ಮೇಡಮ್ ನಮಗೂ ಸುಸ್ತಾಗಿದೆ, ಎಲ್ಲಾದಕ್ಕೂ ಸಮಾನತೆ ಅಂತೀರ, ಇದರಲ್ಲಿ ಮಾತ್ರ ರಿಸರ್ವೇಶನ್ ಯಾಕೆ?” ವಾದ ಮುಂದುವರೆಯಿತು. ಕಂಡಕ್ಟರ್‍ನ ಕೇಳಿದರೆ, “ಮೇಡಮ್ ರಷ್ ಎಷ್ಟಿದೆ ನೋಡಿ, ನಾನು ಟಿಕೆಟ್ ಕೊಡಲೊ, ಈ ವಾದ ಕೇಳಲೊ” ಎಂದ. ವಾದವಿವಾದ ಮುಂದುವರೆದು ಆ ವ್ಯಕ್ತಿ “ಒಂದು ಸೀಟಿಗೆ ಇಷ್ಟು ವಾದ ಮಾಡಬೇಕಾ?” ಎಂದು ಇಳಿದುಹೋದ.
ಮುಂದಿನ ಸ್ಟಾಪ್‍ನಲ್ಲಿ ಇಳಿದು ಆಫೀಸಿಗೆ ಹೋದರೆ ಅಲ್ಲಿ ಅವಳ ಛೇರ್ ಬದಲಾಗಿತ್ತು. ಪಕ್ಕದಲ್ಲಿದ್ದ ಸಹೋದ್ಯೋಗಿ “ನನಗೆ ಪ್ರಾಬ್ಲಮ್ ಇದೆ ಮೇಡಮ್, ಅದಕ್ಕೆ ನಾನೇ ಬದಲಾಯಿಸಿದೆ” ಎಂದ. “ಅಲ್ಲಾ, ಸರ್, ಇನ್ನೂ ಅಲ್ಲೆಲ್ಲಾ ಛೇರ್‍ಗಳು ಇವೆಯಲ್ಲ” ಎಂದಿದ್ದಕ್ಕೆ, ಆತ, “ಏನ್ ಮೇಡಮ್, ಅವರೆಲ್ಲ ಸುಮ್ನೆ ಇರ್ತಾರಾ? ಅದಕ್ಕೆ ನಿಮ್ಮದನ್ನು ಹಾಕಿಕೊಂಡೆ, ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ, ಒಂದು ಸೀಟಿಗಾಗಿ ಇಷ್ಟೊಂದು ಮಾತ್ಯಾಕೆ” ಎನ್ನುವುದೇ. ಸರಿ ಇನ್ನೇನು ಮಾಡಲಾದೀತು, ಕುಳಿತುಕೊಂಡಳು.
ಸಂಜೆ ಮನೆಗೆ ಬಂದ ಮೇಲೆ ಕಾಫಿ ಕುಡಿಯುತ್ತಾ ಟಿವಿ ನೋಡುತ್ತಿದ್ದರೆ ಮಗ ಬಂದವನೇ, “ಮಮ್ಮಿ, ನೀನು ಆ ಕಡೆ ಕುಳಿತುಕೊ, ನನಗಿಲ್ಲಿ comfortable ಆಗಿರುತ್ತೆ” ಎಂದ. ಅದಕ್ಕೆ ಆಶಾ, “ಹೌದಪ್ಪ, ನಾನು ಅದಕ್ಕೇ ಬಂದು ಇಲ್ಲಿ ಕುಳಿತುಕೊಂಡೆ,” ಎಂದಳು. "ನೀನು ಈ ಕಡೆ ಅಡ್ಜೆಸ್ಟ್ ಮಾಡಿಕೊ, ಒಂದು ಸೀಟ್‍ಗೆ ಎಷ್ಟು ಮಾತಾಡ್ತೀಯಾ?” ಎನ್ನಬೇಕೆ!
ರಾತ್ರಿ ಎಲ್ಲಾ ಕೆಲಸ ಮುಗಿಸಿ ಮಲಗಬೇಕಾದರೆ 11 ಘಂಟೆ. ಬೆಳಿಗ್ಗೆ 4ಕ್ಕೆ ಎದ್ದಿದ್ದರೂ ಅವಳಿಗೆ ನಿದ್ದೆ ಬರಲಿಲ್ಲ. ಏಕೆಂದರೆ ಅವಳ ಮನಸ್ಸನ್ನು ಕಾಡುತ್ತಿದ್ದದ್ದು ಒಂದೇ ಪ್ರಶ್ನೆ, ಒಂದು ಸೀಟಿಗಾಗಿಯೇ? ಅದು ಕೇವಲ ಒಂದು ಸೀಟೇ? ಅದು ತನ್ನ ಹಕ್ಕಲ್ಲವೇ, ಅಸ್ತಿತ್ವವಲ್ಲವೇ? ನನ್ನ ಅನಿಸಿಕೆ, ಅಭಿಪ್ರಾಯಗಳಿಗೆ ಬೆಲೆ ಇಲ್ಲವೇ? ನಮಗೇ ಬೆಲೆ ಇಲ್ಲವೇ? ಅದು ಕೇವಲ ಒಂದು ಸೀಟಾದರೆ, ಅವರೂ ಬಿಟ್ಟುಕೊಡಬಹುದಲ್ಲವೇ? ಪ್ರಶ್ನೆಗಳು ಮುತ್ತಿದವು, ಕಾಡಿಸಿದವು.
ಅಸಹಾಯಕತೆಯಿಂದ ಅವಳಿಗೆ ಅಳು ಬಂತು, ಅದನ್ನೂ ಮೀರಿ ಕೋಪ ಬಂತು. ಏಕೆ? ನಾವೇ ಎಲ್ಲದಕ್ಕೂ ಯಾಕೆ ಬಗ್ಗಬೇಕು? ಏನೋ ನಿರ್ಧಾರ ಮಾಡಿದವಳಿಗೆ ನೆಮ್ಮದಿಯ ನಿದ್ರೆ ಬಂತು.
ಬೆಳಿಗ್ಗೆ ಯಥಾಪ್ರಕಾರ ಮಗ ಬಂದಾಗ, ಅವಳು ಅವನ ಬ್ಲಾಕ್ ಮೇಲ್‍ಗೆ ಬಗ್ಗಲಿಲ್ಲ. “ನೀನು ತಿನ್ನುವುದಾದರೆ ನೀನೇ ಮಾಡಿಕೊ, ಆದರೆ ನನ್ನ ತಟ್ಟೆಯಲ್ಲಿ ತಿನ್ನಬೇಡ. ನಾನು ಆಫೀಸಿಗೆ ಹೋಗಬೇಕು. ನಿನಗೆ ತಿಂಡಿ ಮಾಡಿಲ್ಲ, ಹೇಗೂ ಕಾಲೇಜು ಇಲ್ಲವಲ್ಲ, ನೀನೇ ಮಾಡಿಕೊ” ಎಂದು ಹೇಳಿ ತಿಂಡಿ ಮುಗಿಸಿದಳು.
ಗಾಡಿ ಕೀ ತೆಗೆದುಕೊಳ್ಳುವಾಗ, ಗಂಡ, “ಆಶಾ ಇವತ್ತೊಂದು ದಿನ..” ಅವನಿಗೆ ಮುಂದುವರೆಸಲು ಬಿಡದೆ, “ನಿಮ್ಮ ತಮ್ಮನಿಗೆ ಗಾಡಿ ಬೇಕಾದರೆ ನಿಮ್ಮದನ್ನು ಕೊಟ್ಟು ನೀವು ಬಸ್‍ನಲ್ಲಿ ಹೋಗಿ, ನಾನು ಇವತ್ತು ಕೊಡಲಾರೆ, ನನಗೆ ತುಂಬಾ ಕೆಲಸವಿದೆ, ಸಂಜೆ ಲೇಟಾಗುತ್ತೆ,” ಎಂದು ಹೇಳಿ ಹೆಲ್ಮೆಟ್ ತೆಗೆದುಕೊಂಡು ಹೊರನಡೆದಳು
ಅಫೀಸಿಗೆ ಹೋದ ತಕ್ಷಣ ತನ್ನ ಛೇರ್ ಎಳೆದುಕೊಂಡು ಕುಳಿತಳು.
ಮತ್ತೆ ಆ ದಿನ, ಮರುದಿನ, ನಂತರದ ದಿನಗಳಲ್ಲಿ ಅವಳಿಗೆ ಯಾರೊಂದಿಗೂ ಒಂದು ಸೀಟಿಗಾಗಿ ಅಂಗಲಾಚುವ ಪರಿಸ್ಥಿತಿ ಬರಲಿಲ್ಲ.
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ