Pages

ಕವನ: "ಬಡವನ ಸೇವೆ ಭಗವಂತನ ಸೇವೆ"



[ಮೇ 7 “ಗುರೂಜಿ” ಎಂದೇ ಪ್ರಸಿದ್ಧರಾದ ರವೀಂದ್ರನಾಥ ಟಾಗೋರ್‍ರವರ ಜನ್ಮದಿನ. ಈ ಸಂದರ್ಭದಲ್ಲಿ ಅವರ ಕವನ True Worship of God is to Serve Poor  ಇದರ ಅನುವಾದವನ್ನು ಪ್ರಕಟಿಸುತ್ತಿದ್ದೇವೆ]


ನೀನಾರ ಧ್ಯಾನವನು ಗೈಯುತಿಹೆ ಮೂಲೆಯೊಳು
ಮುಚ್ಚಿದಾ ಕಿಟಕಿಗಳ ಗುಡಿಯೊಳಗೆ ಒಂಟಿಯೊಳು?    
ಬಿಸುಡಲ್ಲಿ ಮಣಿಸರವ, ಗೀತೆಗಳ ಪಠನೆಯ
ಕಣ್ತೆರೆದು ನೋಡೆದುರು, ದೇವ ಗುಡಿಯೊಳಗಿಲ್ಲ||

ಗಟ್ಟಿನೆಲವನು ಬಿಡದೆ ಸತತ ಉಳುವವನಾ
ಕಲ್ಲನೊಡೆಯುತೆ ನುಣುಪುದಾಂ ಮಾಡುವನಾ;
ಮನದೊಳಗೆ ಅನವರತ ನೆಲೆಸಿರುವನು.
ಧೂಳಿನರಿವೆಯೊಳು ದೇವ ದುಡಿಯುತಿರೆ,
ಇಳಿ ಬಿಸುಟು, ನಿಲುವಂಗಿ, ಧೂಳಿನೊಳಗೆ||

ಜಗದ ಸೃಷ್ಟಿಯ ದೇವ ಬಿಡದೆ ಹೊತ್ತಿರುವಲ್ಲಿ
ಮುಕ್ತಿಯೆಂಬುದ ನೀನದೆಲ್ಲಿ ಪಡೆಯುವೆ ಮನುಜಾ?
ನಲವಿಂದ ದೇವ ತಾ ದುಡಿಯುತಿಹನು ;
ದುಡಿವರೊಳು ಅನವರತ ಬೆರೆತಿರುವನು||

ಜಪವ ಮಂತ್ರಗಳ ನಿಲಿಸಿ ಹೊರಗೆ ಬಾ;
ಧೂಪ ಪುಷ್ಪಗಳನಿರಿಸಿ ಹೊರಗೆ ಬಾ;
ಮಡಿಯರಿದರೇನಂತೆ? ಕೊಳಕಾದರೇನಂತೆ?
ನೋಡವನ ದುಡಿಮೆಯೊಳು, ನಿನ್ಹಣೆಯ ಬೆವರಿನೊಳು||

- ಜಿ ಗಂಗಾಧರಯ್ಯ

ಅನುವಾದ: "ದುಡ್ಡು"



[ಚಲಂ ಎಂದೇ ಪ್ರಖ್ಯಾತರಾಗಿರುವ ಗುಡಿಪಾಟಿ ವೆಂಕಟಾಚಲಂರವರು ಜನಿಸಿದ್ದು ಮೇ 19, 1894ರಲ್ಲಿ. 
ತೆಲುಗಿನ ಪ್ರಖ್ಯಾತ ಬರಹಗಾರರು ಮತ್ತು ತತ್ವಜ್ಞಾನಿಗಳಾದ ಚಲಂರವರು ಆಧುನಿಕ ತೆಲುಗು ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಬರಹಗಾರರಲ್ಲೊಬ್ಬರು. ಅವರ ಬಹಳ ಕೃತಿಗಳು ಮಹಿಳೆಯರ ಸಮಸ್ಯೆಗಳ ಬಗ್ಗೆ, ಅವರನ್ನು ಎದುರಿಸುವ ಬಗ್ಗೆ ಚರ್ಚಿಸುತ್ತವೆ. ಚಿಕ್ಕಂದಿನಲ್ಲಿ ಅವರ ತಂದೆಯ ಹೊಡೆತಕ್ಕೆ ಸಿಲುಕಿದ್ದ ಚಲಂರವರು ಆ ರೀತಿಯ ಶಿಕ್ಷಣವನ್ನು ತಿರಸ್ಕರಿಸಿ, ಮಕ್ಕಳ ಶಿಕ್ಷಣದ ಬಗ್ಗೆ, ಮಕ್ಕಳನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಮಕ್ಕಳ ಪ್ರಶ್ನಿಸುವ ಮನಸ್ಸು ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ಚಿತ್ರಿಸಿದ್ದಾರೆ. ಈ ಲೇಖನವನ್ನು ಅವರ “ಬಿಡ್ಡಲ ಶಿಕ್ಷಣ” ಎಂಬ ಪುಸ್ತಕದಿಂದ ಆರಿಸಲಾಗಿದೆ]

ಮಗ: ಅಪ್ಪ ನಾವು ಕಾರು ಕೊಂಡುಕೊಳ್ಳಬಾರದಾ?
ಅಪ್ಪ: ಕಾರು ಎಷ್ಟು ಬೆಲೆ ಗೊತ್ತಾ? ಹತ್ತು ಸಾವಿರ ರೂಪಾಯಿ.
ಮಗ: ನಮ್ಮ ಹತ್ತಿರ ಹತ್ತು ಸಾವಿರ ರೂಪಾಯಿಗಳು ಇಲ್ಲವಾ?
ಅಪ್ಪ: ಇಲ್ಲ, ಎಲ್ಲಿಂದ ಬರುತ್ತೆ?
ಮಗ: ಕಾರು ಕೊಂಡುಕೊಳ್ಳುವವರಿಗೆ ಎಲ್ಲಿಂದ ಬರುತ್ತೆ?
ಅಪ್ಪ: ಅವರು ಸಂಪಾದಿಸಿಕೊಳ್ಳುತ್ತಾರೆ.
ಮಗ: ನೀನೇಕೆ ಸಂಪಾದಿಸಬಾರದು?
ಅಪ್ಪ: ನನಗೆ ಆಗೋಲ್ಲ.
ಮಗ: ಆಗದಿದ್ದರೆ ಕಲಿತುಕೊಳ್ಳಬಾರದಾ?
ಅಪ್ಪ: ಹೇಗೆ?
ಮಗ: ಮತ್ತೆ ಆಗದಿದ್ದನ್ನೆಲ್ಲಾ ನನಗೆ ಕಲಿತುಕೊ ಅಂತೀಯಾ?
ಅಪ್ಪ: ಇದು ಕಲಿತುಕೊಂಡರೆ ಬರುವುದಲ್ಲ.
ಮಗ: ಅವರಿಗೆ ಹೇಗೆ ಬಂತು?
ಅಪ್ಪ: ಅವರಿಗೆ ಬುದ್ಧಿ ಇದೆ.
ಮಗ: ನಿನಗೇಕೆ ಇಲ್ಲ?
ಅಪ್ಪ: ದೇವರು ಕೊಡಲಿಲ್ಲ.
ಮಗ: ಯಾಕೆ ಕೊಡಲಿಲ್ಲ?
ಅಪ್ಪ: ಏನೋ!
ಮಗ: ನನಗೆ ದೇವರು ಲೆಕ್ಕದಲ್ಲಿ ಬುದ್ಧಿ ಕೊಡಲಿಲ್ಲ. ಮಾರ್ಕು ಕಡಿಮೆ ಬಂದರೆ ಹೊಡೆಯುತ್ತೀಯಲ್ಲಾ?
ಅಪ್ಪ: ಬರಲಿ ಅಂತಾ.
ಅಪ್ಪ: ನಿನ್ನನ್ನು ಹೊಡೆಯುವವರಿದ್ದರೆ ನಿನಗೂ ದುಡ್ಡು ಮಾಡಿಕೊಳ್ಳೋ ಬುದ್ಧಿ ಬರುತ್ತೇನೋ? ನಿನಗೆಷ್ಟು ಸಂಬಳ?
ಅಪ್ಪ: 320 ರೂಪಾಯಿಗಳು.
ಮಗ: ಯಾರು ಕೊಡ್ತಾರೆ?
ಅಪ್ಪ: ಕಂಪನಿಯವರು.
ಮಗ: ಅಷ್ಟೆ ಯಾಕೆ ಕೊಡ್ತಾರೆ. ಜಾಸ್ತಿ ಕೊಡಲ್ವಾ?
ಅಪ್ಪ: ನಾನು ಮಾಡುವ ಕೆಲಸ ಅಷ್ಟೆ.
ಮಗ: ಜಾಸ್ತಿ ಸಂಬಳ ಬರುವ ಕೆಲಸ ಇಲ್ಲವಾ?
ಅಪ್ಪ: ಇದ್ದಾವೆ.
ಮಗ: ಅದನ್ನು ನಿನಗೆ ಯಾಕೆ ಕೊಡುವುದಿಲ್ಲ. ನಿನಗೆ ಕೈಲಾಗುವುದಿಲ್ಲವಾ?
ಅಪ್ಪ: ಆಗುತ್ತೆ, ಆದರೆ ಕೊಡೋಲ್ಲ.
ಮಗ: ಅವರಿಗೆ ಯಾಕೆ ಕೊಟ್ಟರು?
ಅಪ್ಪ: ಅವರಿಗೆ ಅನುಭವ, ಬುದ್ಧಿ ಜಾಸ್ತಿ ಅಂದುಕೊಳ್ತಾರೆ.
ಮಗ: ಯಾಕಂದುಕೊಳ್ತಾರೆ?
ಅಪ್ಪ: ನನಗೇನು ಗೊತ್ತು?
ಮಗ: ಅವರನ್ನು ಕೇಳಬಾರದಾ?
ಅಪ್ಪ: ಕೇಳಿದರೂ ಲಾಭವಿಲ್ಲ.
ಮಗ: ಯಾರು ಯಾವಾಗ ಮಾತನಾಡಿದರೂ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಕಷ್ಟಪಟ್ಟು ಕೆಲಸ ಮಾಡಿದರೆ ಬರುತ್ತೆ.
ಮಗ: ನೀನು ಕಷ್ಟಪಟ್ಟು ಕೆಲಸ ಮಾಡುವುದಿಲ್ಲವಾ?
ಅಪ್ಪ: ಮಾಡ್ತೀನಿ.
ಮಗ: ಮತ್ತೆ ನಿನಗೆ ಬರುವುದಿಲ್ಲವಲ್ಲ? ಇನ್ನೂ ಕಷ್ಟಪಡು ಬರುತ್ತೆ.
ಅಪ್ಪ: ಇನ್ನು ನನ್ನ ಕೈಲಾಗೋಲ್ಲ, ಲಾಭವೂ ಇಲ್ಲ.
ಮಗ: ದೊಡ್ಡವರಿಗೆ ಉಪಯೋಗವಿಲ್ಲ, ಆದರೆ ಚಿಕ್ಕವರಿಗೆ ಮಾತ್ರ ಇನ್ನು ಕಷ್ಟಪಡು, ಇನ್ನು ಕಷ್ಟಪಡು ಅಂತಾ ಹೊಡೀತೀರಾ.
ಅಪ್ಪ: ಹೌದು, ಚಿಕ್ಕವರಿಗೆ ತಾಳ್ಮೆ ಜಾಸ್ತಿ.
ಮಗ: ಎಲ್ಲಿಂದ ಬರುತ್ತೆ ದುಡ್ಡು.
ಅಪ್ಪ: ಸರ್ಕಾರ ತಯಾರು ಮಾಡುತ್ತೆ.
ಮಗ: ಎಲ್ಲರಿಗೆ ಸರಿ ಹೋಗುವಷ್ಟು ಹೆಚ್ಚಾಗಿ ತಯಾರು ಮಾಡಲು ಸಾಧ್ಯವಿಲ್ಲವಾ?
ಅಪ್ಪ: ಎಲ್ಲರಿಗೂ ಸಾಕಾಗುವುದಿಲ್ಲ.
ಮಗ: ಹೇಗೆ ತಯಾರು ಮಾಡ್ತಾರೆ? ದುಡ್ಡು ಅಂದ್ರೆ ರೂಪಾಯಿ ತಾನೆ?
ಅಪ್ಪ: ನೋಟುಗಳನ್ನು ಅಚ್ಚು ಹಾಕುತ್ತಾರೆ.
ಮಗ: ಇನ್ನೂ ಹೆಚ್ಚು ನೋಟುಗಳನ್ನು ಅಚ್ಚು ಹಾಕಬಾರದು?
ಅಪ್ಪ: ಎಷ್ಟು ಬೇಕೋ ಅಷ್ಟು ಅಚ್ಚು ಹಾಕ್ತಾನೆ ಇದ್ದಾರೆ. 
ಮಗ: ಯಾರಿಗೆ ಬೇಕು?
ಅಪ್ಪ: ಸರ್ಕಾರಕ್ಕೆ.
ಮಗ: ಅವರಿಗೆ ಅವರು ಅಚ್ಚು ಹೊಡೆಸಿಕೊಂಡ್ರೆ ನಮಗೇ ಹೇಗೆ ಬರುತ್ತೆ?
ಅಪ್ಪ: ಸರ್ಕಾರಕ್ಕೆ ಕೆಲಸ ಮಾಡುವವರಿಗೆ ಕೊಡ್ತಾರೆ. ಅವರು ಅವರ ಕೆಳಗಿನ ಕೆಲಸದವರಿಗೆ ಕೊಡ್ತಾರೆ.
ಮಗ: ಎಲ್ಲರಿಗೂ ಬೇಕಾಗುವಷ್ಟು ಕೊಡಬಾರದಾ? ನಮಗೆ ಕಾರು ಕೊಳ್ಳಲು ಹತ್ತು ಸಾವಿರ ಅಚ್ಚು ಹಾಕಿಸಿ ಕೊಡಬಾರದಾ? ಕೆಲವರು ಅವರನ್ನು ಕೇಳಿ ತೆಗೆದುಕೊಂಡು ಕಾರು ಕೊಂಡುಕೊಳ್ಳುತ್ತಾರೆ. ನಿನಗೆ ಅವರನ್ನು ಕೇಳಲು ಆಗದು. ನಿನ್ನ ಮುಖ ನೋಡಿದ್ರೆ ಅವರು ಕೊಡುವುದಿಲ್ಲ.
ಅಪ್ಪ: ಅದೇನು?
ಮಗ: ಅಮ್ಮ ಹೇಳಿದ್ಳಲ್ಲಾ, ಅಪ್ಪನ ಮುಖ ನೋಡಿದ್ರೆ ಯಾರಿಗೂ ಏನೂ ಕೊಡುವ ಮನಸ್ಸಾಗುವುದಿಲ್ಲ. ಹೋಗಲಿ, ಸರ್ಕಾರ ಅಂದ್ರೆ ಯಾರು?
ಅಪ್ಪ: ಕೆಲವರು ಶ್ರೀಮಂತರು.
ಮಗ: ಅವರು ಹೇಗೆ ಶ್ರೀಮಂತರಾದರು?
ಅಪ್ಪ: ಜನರ ವಿಶ್ವಾಸದ ಮೂಲಕ.
ಮಗ: ನಿನ್ನ ಮೇಲೆ ಬರಬಾರದಾ ವಿಶ್ವಾಸ? ನೀನು ವಿಶ್ವಾಸ ತರೆಸಿಕೊ. ಆಗ ನೀನು ಜಾಸ್ತಿ ನೋಟುಗಳನ್ನು ಅಚ್ಚು ಹಾಕಿಸಿಕೊಂಡು, ನಿನಗೊಂದು ಕಾರು, ನನಗೊಂದು ಕಾರು, ಅಮ್ಮನಿಗೊಂದು ಕಾರು ಕೊಂಡುಕೊಳ್ಳಬಹುದು. ಹೌದು. ಎಲ್ಲಾ ಅವರೆ ತೆಗೆದುಕೊಂಡು ಬಿಟ್ರೆ ಬಡವರಿಗೆ ಏನು ಮಿಗುತ್ತೆ? ಜನ ಅವರನ್ನು ನಂಬಿದ್ದಕ್ಕಾಗಿ ಅವರಿಗೆ ಕಾರು, ಬಂಗಲೆ. ಅವರನ್ನು ನಂಬಿ ಅವರನ್ನು ಮೇಲೆ ತಂದ ಬೀದಿಯವರಿಗೆ ಮಾತ್ರ ತಿಂಡಿ ಕೂಡಾ ಇಲ್ಲ.
ಅಪ್ಪ: ಅದಕ್ಕಿಂತ ಇನ್ನೇನು ಮಾಡ್ತಾರೆ?
ಮಗ: ಯಾಕೆ ಸುಮ್ಮನಿರ್ತಾರೆ? ಒದೆಯುವುದಿಲ್ಲವೆ?
ಅಪ್ಪ: ಒದ್ದರೆ ಸರ್ಕಾರ ಸುಮ್ಮನಿರುವುದಿಲ್ಲ.
ಮಗ: ಇರದಿದ್ದರೆ?
ಅಪ್ಪ: ಈ ಆಡಳಿತ ಎಲ್ಲಾ ಯಾರು ನೋಡಿಕೊಳ್ತಾರೆ?
ಮಗ: ದುಡ್ಡೆಲ್ಲಾ ತಮಗೆ ತೆಗೆದುಕೊಳ್ಳದೆ ಆಳುವವರಿರುವುದಿಲ್ಲವಾ?
ಅಪ್ಪ: ಇರುವುದಿಲ್ಲ.
ಮಗ: ನೀನೂ ಅಷ್ಟೇನಾ?
ಅಪ್ಪ: ಈಗಲೇ ಅಲ್ವಾ ನಾಲ್ಕು ಕಾರು ಕೊಂಡುಕೊ ಅಂದೆ?
ಮಗ: ಹೌದು, ನಮ್ಮ ಸರ್ಕಾರ ಬಂದ್ರೆ. ಆದ್ರೂ ದುಡ್ಡು ಅನವಶ್ಯವಾಗಿ. . . .
ಅಪ್ಪ: ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಒಪ್ಪಿಕೊಂಡರೂ ಅವರ ಕೈಯಲ್ಲಿ ಆಗುವುದಿಲ್ಲ.
ಮಗ: ಅವರಿಗೆ ಹೇಗೆ ಆಗುತ್ತೆ? ಇವರಿಗೂ ಕಲಿಸಬಾರದಾ?
ಅಪ್ಪ: ಜನರಿಗೆ ಅವರ ಮೇಲೆ ವಿಶ್ವಾಸ ಬರುವುದಿಲ್ಲ.
ಮಗ: ದುಡ್ಡೆಲ್ಲಾ ಬಚ್ಚಿಟ್ಟುಕೊಳ್ಳುವವರನ್ನು ಬಿಟ್ಟರೆ ಜನರಿಗೆ ಬೇರೆಯವರ ಮೇಲೆ ವಿಶ್ವಾಸ ಬರುವುದಿಲ್ಲವಾ? ಒಂದು ವೇಳೆ ದುಡ್ಡು ಬಚ್ಚಿಟ್ಟುಕೊಳ್ಳುವವರಿಗೆ, ಸರ್ಕಾರದ ಕೆಲಸ ಮಾಡುವುದು ಸಾಧ್ಯವಿಲ್ಲವೇನೋ? ಹೋಗಲಿ ಅವರು ತೆಗೆದುಕೊಳ್ಳುವಷ್ಟು ತೆಗೆದುಕೊಂಡು ಇನ್ನಷ್ಟು ನೋಟುಗಳನ್ನು ಅಚ್ಚು ಹಾಕಿ ಎಲ್ಲರಿಗೂ ಕೊಡಬಾರದಾ? ಆಗ ಎಲ್ಲರಿಗೂ ತಿಂಡಿ, ಕಾರು ಇರುತ್ತಲ್ವಾ?
ಅಪ್ಪ: ಎಲ್ಲರಿಗೂನಾ? ಹಾಗೆ ಒಪ್ಪಿಕೊಳ್ಳುವುದಿಲ್ಲ.
ಮಗ: ಯಾಕೆ?
ಅಪ್ಪ: ಹಾಗೆ ಒಪ್ಪಿಕೊಂಡರೆ ಎಲ್ಲರಿಗೂ ಇರುತ್ತೆ. ಇನ್ನು ಶ್ರೀಮಂತರ ಹೆಚ್ಚುಗಾರಿಕೆ ಏನು?
ಮಗ: ಅದಕ್ಕೆ ಅಂತಾ ಹೆಚ್ಚು ಜನರನ್ನು ಬಡವರನ್ನಾಗಿ ಇಡ್ತಾರ?
ಅಪ್ಪ: ಅಂದ್ರೆ ನಿನ್ನ ಬಟ್ಟೆ, ನಿನ್ನ ಗೊಂಬೆಗಳೂ, ಪುಸ್ತಕಗಳು ನಮ್ಮ ಕೆಲಸದ ಮಗನ ಜೊತೆ ಹಂಚಿಕೊಳ್ತೀಯಾ? 
ಮಗ: ಊ…… ಹಂಚಿಕೊಳ್ಳುವುದಿಲ್ಲ. ಆದರೆ ಎಲ್ಲರಿಗೂ ಮೊದಲಿನಿಂದಲೇ ಸಮಾನವಾಗಿ ಇದ್ರೆ ನನಗೇ ಬೇಕು ಅಂತಾ, ನನಗೆ ಇರ್ಬೇಕು ಅಂತ ಬಚ್ಚಿಟ್ಟುಕೊಳ್ಳೋಲ್ಲ.
ಅಪ್ಪ: ಅವರೂ ಅಷ್ಟೆ. ಸಾಧ್ಯವಾದ್ರೆ ಬಚ್ಚಿಟ್ಟುಕೊಳ್ತಾರೆ, ಇಲ್ಲದಿದ್ದರೆ ವಿಧಿ ಇಲ್ಲದೆ ಹಂಚಿಕೊಳ್ತಾರೆ.
ಮಗ: ಹೋಗಲಿ, ಎಲ್ಲಾ ಕಡಿಮೆ ಬೆಲೆಗೆ ಮಾಡಬಾರದಾ? ಎಲ್ಲದಕ್ಕೂ ಬೆಲೆ ಹೆಚ್ಚಿಸುವುದು ಯಾಕೆ? ಯಾರು ಆ ಕೆಲಸ ಮಾಡುವುದು, ಸರ್ಕಾರಾನಾ?
ಅಪ್ಪ: ಸರ್ಕಾರ ಅಲ್ಲ. ಅದೇ ಜಾಸ್ತಿ ಆಗುತ್ತೆ. ಆ ವಸ್ತು ಕಡಿಮೆಯಾಗಿ, ಕೇಳುವವರು ಜಾಸ್ತಿಯಾದ್ರೆ. . . .
ಮಗ: ಮೊನ್ನೆ ನಮ್ಮ ಕ್ಲಾಸಿನಲ್ಲಿ ರಾಮರಾಜು ಇಲ್ವಾ, ರಾಜಯ್ಯನ ಮಗ, ಅವನು ಪುಸ್ತಕ ಕೊಂಡುಕೊಳ್ಳಲಿಲ್ಲ. ಟೀಚರ್ ಕೇಳಿದ್ರೆ ದುಡ್ಡಿಲ್ಲ ಅಂದ್ರೆ ಟೀಚರ್ ಅವನನ್ನು ಹೊಡೆದರು. ಅವನು ಹೇಗೆ ಅತ್ತಾ ಗೊತ್ತಾ? ರಾತ್ರಿ ಊಟ ಮಾಡುವುದಿಲ್ಲವಂತೆ. ಹೋಗಲಿ ಅವರಿಗಾದ್ರೂ ದುಡ್ಡು ಕೊಡಬಾರದೆ?
ಅಪ್ಪ: ಅಂತವರಿಗೆ ನಾವು ದುಡ್ಡು ಹಂಚಿದರೆ ನಿನಗೆಲ್ಲಿ ಇರುತ್ತದೆ? ನಿನಗೆ ತುಪ್ಪ, ಮೊಸರು ಇರುವುದಿಲ್ಲ . . . .
ಮಗ: ಅವರಿಗೇನು? ಅವರು ಎಷ್ಟು ಬೇಕಾದರೂ ನೋಟುಗಳನ್ನು ಅಚ್ಚು ಹಾಕಬಹುದಲ್ಲವೇ?
ಅಪ್ಪ: ಸುಮ್ಮನೆ ನಿನಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದೆ. ಅವರು ಆ ರೀತಿ ಮಾಡಲು ಅವಕಾಶವಿಲ್ಲ. ಅವರಿಗೂ ಸಂಬಳವೇ.
ಮಗ: ಯಾರು ಕೊಡುತ್ತಾರೆ?
ಅಪ್ಪ: ಅವರಿಗೆ ಅವರೇ ನೋಟುಗಳನ್ನು ಹೆಚ್ಚು ಹೆಚ್ಚು ಅಚ್ಚು ಹಾಕಿದರೆ ಹಣ ಅಗ್ಗವಾಗಿ ವಸ್ತುಗಳ ಬೆಲೆ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ. 
ಮಗ: ಈ ಹಣ ಎನ್ನುವುದೇ ಇಲ್ಲದಿದ್ದರೆ ಚೆನ್ನಾಗಿರುತ್ತಲಾ?
ಅಪ್ಪ: ವಸ್ತುಗಳನ್ನು ಹೇಗೆ ಕೊಂಡುಕೊಳ್ಳುತ್ತೀಯಾ? ಯಾವುದರಿಂದ?
ಮಗ: ಯಾಕೆ ಕೊಂಡುಕೊಳ್ಳಬೇಕು? ಯಾರಿಗೆ ಏನು ಬೇಕೊ ಅದನ್ನು ಸರ್ಕಾರ ಕೊಟ್ಟರಾಯಿತು.
ಅಪ್ಪ: ನಿನಗೆ ತುಪ್ಪ ಅಗತ್ಯವಿಲ್ಲ, ಕಾಫಿ ಬ್ರೆಡ್, ಮಾಂಸ ಕೂಡ ಬೇಡವೆಂದರೆ ಒಪ್ಪಿಕೊಳ್ಳುತ್ತೀಯ?
ಮಗ: ಓ, ಎಲ್ಲರಿಗೂ ಸುಖವಾಗಿ ಇರಲು ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ.
ಅಪ್ಪ: ಆದರೆ, ಕೆಲವರು ಆ ರೀತಿ ಒಪ್ಪಿಕೊಳ್ಳುವುದಿಲ್ಲ.
ಮಗ: ಒಪ್ಪಿಕೊಳ್ಳದಿದ್ದವರಿಗೆ ಒದ್ದರೆ ಸರಿ.
ಅಪ್ಪ: ಕಮ್ಯುನಿಸ್ಟ್ ಆಗಿ ಹೋಗುತ್ತಿದ್ದೀಯಲ್ಲ.
ಮಗ: ಅಂದರೆ?
ಅಪ್ಪ: ನಿನ್ನ ರೀತಿ ಮಾತನಾಡುವವನು ಎಂದರ್ಥ.
ಮಗ: ಅದೇ ಒಳ್ಳೆಯದು. ಈಗ ಬಹಳಷ್ಟು ಅನ್ಯಾಯವಾಗುತ್ತಿದೆ. ನೀನು ಕಮ್ಯುನಿಸ್ಟ್ ಆಗಿ ಬಿಡು. 
ಅಪ್ಪ: ಅವರು ದೇವರಿಲ್ಲ ಎನ್ನುತ್ತಾರೆ.
ಮಗ: ಅಂದರೆ ಏನು? ದೇವರಿಗೇನಾದರೂ ತೊಂದರೇನಾ? ಏನು ಇಲ್ಲ. ಅಷ್ಟು ಬೇಕೆಂದರೆ ದೇವರು ಎಲ್ಲರಿಗೂ ಬೇಕಾಗುವುದನ್ನು ಏರ್ಪಾಡು ಮಾಡಬಹುದಲ್ಲವೇ?
ಅಪ್ಪ: ಏನೋ, ನನಗದೆಲ್ಲ ಗೊತ್ತಿಲ್ಲ, ಹೋಗೋ!!!
-  ಡಾ।। ಸುಧಾ.ಜಿ

ವ್ಯಕ್ತಿ ಪರಿಚಯ: "ಕಾಜಿ ನಜ್ರುಲ್ ಇಸ್ಲಾಂ"

“ವಿದ್ರೋಹಿ ಕವಿ” ಕಾಜಿ ನಜ್ರುಲ್ ಇಸ್ಲಾಂ


ಶೋಷಣೆ, ದಮನದ ವಿರುದ್ಧ ತಮ್ಮ ದನಿಯನ್ನೆತ್ತಿ, ತಮ್ಮ ಕ್ರಾಂತಿಕಾರಿ ಧೋರಣೆ ಮತ್ತು ಸಾಮಾಜಿಕ – ರಾಜಕೀಯ ನ್ಯಾಯಕ್ಕಾಗಿನ ಹೋರಾಟದಿಂದ “ವಿದ್ರೋಹಿ ಕವಿ” ಎಂದು ಪ್ರಖ್ಯಾತರಾದ ಕಾಜಿ ನಜ್ರುಲ್ ಇಸ್ಲಾಂರವರು ಹುಟ್ಟಿದ್ದು ಮೇ 24, 1899ರಲ್ಲಿ. ಪ್ರಸಿದ್ಧ ಬಂಗಾಳಿ ಕವಿ, ಬರಹಗಾರರು, ಸಂಗೀತಗಾರರು, ಕ್ರಾಂತಿಕಾರಿ ಮತ್ತು ಬಾಂಗ್ಲಾದೇಶದ ರಾಷ್ಟ್ರಕವಿ ಎಂದು ಪ್ರಸಿದ್ಧರಾದವರು, ಜನಿಸಿದ್ದು ಅವಿಭಜಿತ ಬಂಗಾಳದ (ಪ್ರಸ್ತುತ ಭಾರತದಲ್ಲಿದೆ) ಬರ್ದ್ವಾನ್ ಜಿಲ್ಲೆಯ ಚುರುಲಿಯ ಎಂಬ ಗ್ರಾಮದಲ್ಲಿ. 

ತಂದೆ ಕಾಜಿ ಫಕೀರ್ ಅಹ್ಮದ್, ಸ್ಥಳೀಯ  ಮಸೀದಿಯನ್ನು ನೋಡಿಕೊಳ್ಳುತ್ತಿದ್ದರು. ತಾಯಿ ಜಹೀದಾ ಖಾತುನ್. ತಂದೆಯ ಅಕಾಲ ಮರಣದಿಂದ ಇಡೀ ಕುಟುಂಬ ಬಹಳ ಸಂಕಷ್ಟಗಳಿಗೆ ಒಳಗಾಯಿತು. ತಂದೆಯ ಸಾವಿನ ನಂತರ ಮನೆಯ ಜವಾಬ್ದಾರಿಯನ್ನು ವಹಿಸಬೇಕಾಗಿ ಬಂದದ್ದರಿಂದ ಮಸೀದಿಯಲ್ಲಿ ಮ್ಯುಜೀನ್ ಆಗಿ (ಮಸೀದಿಯಲ್ಲಿ ನಮಾಜಿಗೆ ಕರೆಯುವ ಕೆಲಸ) ಕೆಲಸ ಮಾಡಿದರು.  ಶಾಲೆಯಲ್ಲಿ ಶಿಕ್ಷಕರಿಗೆ ಸಹಾಯವನ್ನು ಮಾಡತೊಡಗಿದರು. 

ನಂತರ ನಾಟಕ ಗುಂಪೊಂದನ್ನು ಸೇರಿಕೊಂಡು ಅವರೊಂದಿಗೆ ಹಲವೆಡೆ ಹೋದರು. ಅಲ್ಲಿ ಅಭಿನಯ, ಹಾಡು ಮತ್ತು ಕವಿತೆ ಬರೆಯುವುದನ್ನು ಕಲಿತರು. ತಮ್ಮ ಕೆಲಸ ಮತ್ತು ಅನುಭವಗಳೊಂದಿಗೆ ಬಂಗಾಳಿ ಮತ್ತು ಸಂಸ್ಕೃತ ಸಾಹಿತ್ಯ ಕಲಿತರು. ಹಿಂದೂ ಗಂಥಗಳನ್ನು, ಪುರಾಣಗಳನ್ನು ಓದಿದರು. ತಮ್ಮ ಗುಂಪಿಗಾಗಿ ಹಲವಾರು ಜನಪದ ನಾಟಕಗಳನ್ನು ರಚಿಸಿದರು. ಶಕುನಿಯ ಕೊಲೆ, ರಾಜ ಯುಧಿಷ್ಟಿರನ ನಾಟಕ, ದಾತ ಕರ್ಣ, ಅಕ್ಬರ್ ಬಾದ್‍ಶಾಹ್, ಕವಿ ಕಾಳಿದಾಸ, ಇತ್ಯಾದಿ. 

1910ರಲ್ಲಿ ಆ ಗುಂಪನ್ನು ಬಿಟ್ಟು ಹೈಸ್ಕೂಲ್ ಸೇರಿಕೊಂಡರು. ಅಲ್ಲಿ ಶಿಕ್ಷಕರೂ, ಯುಗಾಂತರ ಸಂಘಟನೆಯ ಸದಸ್ಯರಾದ ನಿವಾರಣ್‍ಚಂದ್ರ ಘಟಕ್‍ರವರಿಂದ ಪ್ರಭಾವಿತರಾದರು. ಶುಲ್ಕ ತೆರಲಾರದೆ ಶಾಲೆ ಬಿಟ್ಟ ಅವರು ಕವಿಗಳ ಗುಂಪಿನಲ್ಲಿ ಸೇರಿಕೊಂಡರು. ಬಹಳ ಬೇಗ ಆರ್ಥಿಕ ಬಿಕ್ಕಟ್ಟಿನಿಂದಾಗಿ ಓದನ್ನು ಬಿಟ್ಟು ಅಡಿಗೆಯವರಾಗಿ ಕೆಲಸ ಮಾಡತೊಡಗಿದರು. ನಂತರ ಅಸಾನ್‍ಸೋಲ್‍ನಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡತೊಡಗಿದರು. 1914 ರಲ್ಲಿ ಮತ್ತೆ ಓದಲಾರಂಭಿಸಿದರು. ಬಂಗಾಳಿ, ಸಂಸ್ಕೃತ, ಅರೇಬಿಕ್, ಪರ್ಷಿಯನ್ ಸಾಹಿತ್ಯವನ್ನು ಓದಿದರು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಸಹ ಕಲಿತರು.

1917ರಲ್ಲಿ ಭಾರತ ಸೈನ್ಯವನ್ನು ಸೇರಿದರು, ಹವಲ್ದಾರ್ ಆದರು. 1919ರಲ್ಲಿ ಅವರು ತಮ್ಮ ಪ್ರಥಮ ಕೃತಿ “ಸೌಗಾಥ್”ಅನ್ನು ಪ್ರಕಟಿಸಿದರು. ರವೀಂದ್ರನಾಥ ಟಾಗೋರ್ ಮತ್ತು ಶರತ್‍ಚಂದ್ರ ಚಟರ್ಜಿ ಹಾಗೂ ಪರ್ಶಿಯನ್ ಕವಿಗಳಾದ  ರುಮಿ ಮತ್ತು ಒಮರ್ ಖಯ್ಯೂಂರವರಿಂದ ಪ್ರಭಾವಿತರಾದರು. ಅವರ ಮೊದಲ ಗದ್ಯ ಕೃತಿ “ಬಾಂದುಲೇರ್ ಆತ್ಮಕಹಿನಿ”  (ಅಲೆಮಾರಿಯ ಜೀವನ) 

1920 ರಲ್ಲಿ ಸೈನ್ಯವನ್ನು ತೊರೆದು ಬಂಗೀಯ ಮುಸಲ್ಮಾನ್ ಸಾಹಿತ್ಯ ಸಮಿತಿಯನ್ನು ಸೇರಿ ತಮ್ಮ ಪ್ರಥಮ ಕವನ “ಬಂಧನ್ ಹರಾ” (ಸಂಕೋಲೆಯಿಂದ ಮುಕ್ತಿ) ಎಂಬ ಕವನ ಪ್ರಕಟಿಸಿದರು. 1922 “ವಿದ್ರೋಹಿ” ಕವಿತೆ ‘ಬಿಜಲಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ರಾಜಕೀಯ ಕವಿತೆ “ಆನಂದಮಯಿರ್ ಆಗಮನೆ” (ಆನಂದಮಯಿಯ ಆಗಮನ) ಅವರೇ ಆರಂಭಿಸಿದ್ದ ‘ಧೂಮಕೇತು’ ಪತ್ರಿಕೆಯಲ್ಲಿ ಪ್ರಕಟವಾಯಿತು. ಬ್ರಿಟಿಷ್ ದಮನವನ್ನು ವಿರೋಧಿಸಿ ಕವನಗಳನ್ನು ಬರೆಯಲಾರಂಭಿಸಿದರು. ಬ್ರಿಟಿಷ್ ವಿರೋಧಿ ಎಂದು ಪೋಲೀಸರು ಅವರನ್ನು ಬಂಧಿಸಿದರು. ಏಪ್ರಿಲ್ 14, 1923 ರಂದು ಅವರನ್ನು ಹುಗ್ಲಿ ಜೈಲಿಗೆ ವರ್ಗಾಯಿಸಲಾಯಿತು. ಬ್ರಿಟಿಷರು ಖೈದಿಗಳನ್ನು ನೋಡಿಕೊಳ್ಳುತ್ತಿದ್ದ ಅಮಾನುಷ ರೀತಿಯನ್ನು ಖಂಡಿಸಿ ಅವರು 40 ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡಿದರು. ಡಿಸೆಂಬರ್, 1923ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾಗುವವರೆಗೆ ಜೈಲಿನಲ್ಲಿಯೇ ಅವರು ಹಲವಾರು ಕವನಗಳನ್ನು ರಚಿಸಿದರು. 1920 ರ ದಶಕದಲ್ಲಿ ಅವರ ಹಲವಾರು ಕವನಗಳನ್ನು ಬ್ರಿಟಿಷರು ದೇಶದ್ರೋಹಿ ಕವನಗಳೆಂದು ನಿಷೇಧಿಸಿದರು. ಹಲವಾರು ಬಾರಿ ನಜರುಲ್‍ರವರು ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಂದ ಬಂಧನಕ್ಕೊಳಗಾದರು.

ನಜರುಲ್‍ರವರು ಖಿಲಾಫತ್ ಹೋರಾಟವನ್ನು ಧಾರ್ಮಿಕ ಮೂಲಭೂತವಾದಿ ಹೋರಾಟವೆಂದು ತಿರಸ್ಕರಿಸಿದರು. ಜೊತೆಗೆ, ಧರ್ಮದ ಮತ್ತು ರಾಜಕೀಯದ ಹೆಸರಿನಲ್ಲಿ ನಡೆಸುವ ಕಟುವಾದ ಧಾರ್ಮಿಕ ಮೂಢತೆಯನ್ನು ಅವರು ವಿರೋಧಿಸಿದರು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಕೇಳುತ್ತಿಲ್ಲ ಎಂಬ ಕಾರಣಕ್ಕಾಗಿ ಅವರು ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ನೀತಿಯನ್ನು ವಿರೋಧಿಸಿದರು. “ಶ್ರಮಿಕ್ ಪ್ರಜಾ ಸ್ವರಾಜ್ ದಳ”ವನ್ನು ಸ್ಥಾಪಿಸಿ, ಜನತೆಯನ್ನು ಬ್ರಿಟಿಷರ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿದರು. ಅವರ ದೇಶಪ್ರೇಮಿ ಹಾಡುಗಳು ಜನತೆಯನ್ನು ಹೋರಾಟಕ್ಕೆ ಹುರಿದುಂಬಿಸಿದವು.

ಧಾರ್ಮಿಕ ಮೂಢನಂಬಿಕೆಗಳನ್ನು ವಿರೋಧಿಸಿದ ಅವರು, “ಒಂದೇ ಬಳ್ಳಿಯ ಎರಡು ಹೂಗಳು - ಹಿಂದೂ ಮತ್ತು ಮುಸಲ್ಮಾನರು” ಎಂದು ತಮ್ಮ ಕವನದಲ್ಲಿ ಸಾರಿದ್ದರು. ದೇಶದ ಎಲ್ಲ ಜನತೆ ಬ್ರಿಟಿಷರ ವಿರುದ್ಧ ಐಕ್ಯತೆಯಿಂದ ಹೋರಾಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅವರ ಧರ್ಮನಿರಪೇಕ್ಷತೆ ಬರಹದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕಂಡುಬಂದಿತು. 1921ರಲ್ಲಿ ಅವರು ಪ್ರಮೀಳಾ ದೇವಿಯವರನ್ನು ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಉಂಟಾದ್ದರಿಂದ 1924ರಲ್ಲಿ ವಿವಾಹವಾದರು. ಅವರು ಮಕ್ಕಳ ಹೆಸರುಗಳು ಸಹ ಅದನ್ನು ಸಾಬೀತುಗೊಳಿಸುತ್ತದೆ. ಕೃಷ್ಣ ಮೊಹಮ್ಮದ್, ಬುಲ್‍ಬುಲ್, ಸವ್ಯಸಾಚಿ ಮತ್ತು ಅನಿರುದ್ಧ.  

1926ರ ನಂತರ ಅವರು ಸಮಾಜದ ಬಲಹೀನ ವರ್ಗಗಳಿಗಾಗಿ ಹಾಡುಗಳನ್ನು ಬರೆಯಲಾರಂಭಿಸಿದರು. 1933ರಲ್ಲಿ ಲೇಖನಗಳ ಸಂಗ್ರಹವನ್ನು “ಮಾಡರ್ನ್ ವರ್ಲ್ಡ್ ಲಿಟರೇಚರ್” (ಆಧುನಿಕ ವಿಶ್ವ ಸಾಹಿತ್ಯ) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅವರು ಸುಮಾರು 800 ಶಾಸ್ತ್ರೀಯ ರಾಗಗಳನ್ನು, ಕೀರ್ತನೆಗಳನ್ನು ಬರೆದಿದ್ದಾರೆ. ದೇಶಪ್ರೇಮಿ ಗೀತೆಗಳ 10 ಸಂಪುಟಗಳನ್ನು ಪ್ರಕಟಿಸಿದ್ದಾರೆ. 1934 ರಲ್ಲಿ ಭಾರತದ ಸಿನಿಮಾರಂಗಕ್ಕೆ ಸೇರಿದ ಅವರು ಭಕ್ತಧ್ರುವ ಸಿನಿಮಾದಲ್ಲಿ ನಟಿಸಿದರು. 1940 ರಲ್ಲಿ ನವಯುಗ ಪತ್ರಿಕೆಯ ಸಂಪಾದಕರಾದರು. 1928ರಲ್ಲಿ ಎಚ್‍ಎಂವಿ ಗ್ರಾಮಾಫೆÇೀನ್ ಕಂಪನಿಗೆ ಬರಹಗಾರರು, ಸಂಗೀತ ನಿರ್ದೇಶಕರು ಆದರು. ಸುಮಾರು 4000 ಹಾಡುಗಳನ್ನು ಬರೆದು, ರಾಗ ಸಂಯೋಜಿಸಿದ್ದಾರೆ. ಅದನ್ನು ಒಟ್ಟಾಗಿ ನಜರುಲ್ ಗೀತಿ (ನಜರುಲ್ ಗೀತೆಗಳು) ಎಂದು ಕರೆಯಲಾಗಿದೆ. 

1939ರಲ್ಲಿ ಪತ್ನಿ ಲಕ್ವ ಹೊಡೆಯಿತು. ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಅವರಿಗೆ ಇದು ಇನ್ನೊಂದು ಆಘಾತವನ್ನು ನೀಡಿತು. 43 ವಯಸ್ಸಿನಲ್ಲಿ (1942) ಅವರು ಗೊತ್ತಿರದ ಖಾಯಿಲೆಯೊಂದಕ್ಕೆ ತುತ್ತಾಗಿ ಕಂಠ ಮತ್ತು ನೆನಪಿನ ಶಕ್ತಿಯನ್ನು ಕಳೆದುಕೊಂಡರು. ಬ್ರಿಟಿಷರು ಸಂಚಿನಿಂದ ಅವರಿಗೆ ಕೊಟ್ಟ ನಿಧಾನ ವಿಷವೇ ಕಾರಣವೆಂದು ಹೇಳಲಾಗಿದೆ. ಇದರಿಂದಾಗಿ ಅವರ ಆರೋಗ್ಯ ಕ್ರಮೇಣವಾಗಿ ಹದಗೆಡುತ್ತಾ ಹೋಯಿತು. 

1945 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಅವರ ಬಂಗಾಳಿ ಸಾಹಿತ್ಯ ಕೃಷಿಗಾಗಿ “ಜಗತ್ತಾರಿಣಿ ಚಿನ್ನದ ಪದಕ” ನೀಡಿತು.
1952 ರಲ್ಲಿ ಒಂದು ಗುಂಪು “ನಜ್ರುಲ್ ಚಿಕಿತ್ಸಾ ಸಮಾಜ” ಎಂಬುದನ್ನು ಸ್ಥಾಪಿಸಿ ಅವರನ್ನು ಮತ್ತು ಅವರ ಪತ್ನಿಯನ್ನು ಲಂಡನ್, ನಂತರ ವಿಯೆನ್ನಾಗೆ ಕಳಿಸಿತು. ನಜರುಲ್‍ರವರು ಪಿಕ್ಸ್ ಖಾಯಿಲೆಗೆ ತುತ್ತಾಗಿದ್ದಾರೆ ಮತ್ತು ಅದಕ್ಕೆ ಚಿಕಿತ್ಸೆ ಇಲ್ಲವೆಂದು ವೈದ್ಯರು ಹೇಳಿದ ನಂತರ ಅವರು 1953ರಲ್ಲಿ ಕಲ್ಕತ್ತಾಗೆ ಮರಳಿದರು.
1960ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿತು.
1962ರಲ್ಲಿ ಪ್ರಮೀಳಾ ದೇವಿಯವರು ತೀರಿಕೊಂಡರು. ನಜ್ರುಲ್ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತ ಸರ್ಕಾರದ ಅನುಮತಿಯೊಂದಿಗೆ ಬಾಂಗ್ಲಾದೇಶದ ಸರ್ಕಾರ ನಜರುಲ್‍ರವರನ್ನು ಢಾಕಾಗೆ ಕರೆಸಿಕೊಂಡು “ಗೌರವ ಪೌರತ್ವ”ವನ್ನು ನೀಡಿತು. “ಬಾಂಗ್ಲಾದೇಶದ ರಾಷ್ಟ್ರಕವಿ” ಎಂದು ಘೋಷಿಸಿತು. 

ಉತ್ತಮ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಆಗಸ್ಟ್ 29, 1976 ರಂದು ನಜರುಲ್‍ರವರು ತೀರಿಕೊಂಡರು. ತಮ್ಮ ಕವನಗಳಲ್ಲಿ ಆಶಿಸಿದಂತೆ ಅವರನ್ನು ಢಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಮಸೀದಿಯ ಪಕ್ಕದಲ್ಲಿ ಸಮಾಧಿ ಮಾಡಲಾಯಿತು. ಲಕ್ಷಾಂತರ ಜನ ಅವರಿಗೆ ನಮನವನ್ನು ಸಲ್ಲಿಸಿದರು. ಬಾಂಗ್ಲಾದೇಶ ಎರಡು ದಿನಗಳ ರಾಷ್ಟ್ರೀಯ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಭಾರತದ ಸಂಸತ್ತಿನಲ್ಲಿಯೂ ಸಹ ಅವರ ಗೌರವಾರ್ಥ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ಅವರ ಕೃತಿಗಳು
ಕವಿತೆ–ಅಗ್ನಿ ವೀಣ, ಸಂಚಿತ, ಫಣಿಮಾನಸ, ಚಕ್ರವಾಕ, ಸಾತ್ ಭಾಯ್ ಚಂಪಾ, ನಿರ್ಝರ್, ನತೂನ್ ಚಾಂದ್, ಮೊರು ಭಾಸ್ಕರ್, ಸಂಚಯನ, ಸಾಮ್ಯವಾದಿ, ಸರ್ವಹರಾ,
ಸಣ್ಣ ಕಥೆಗಳು –ರಿಕ್ತೇರ್ ಬೇದನ್ (ನಿರ್ಗತಿಕನ ವೇದನೆ), ಶಿವುಲಿಮಾಲ (ಶಿವುಲಿಯ ಹಾರ) ವ್ಯಥಾರ್ ದಾನ್ (ವ್ಯಥೆಯ ದಾನ)
ಕಾದಂಬರಿಗಳು - ಬಂಧನ್ ಹರಾ (ಸಂಕೋಲೆಯಿಂದ ಮುಕ್ತ) ಮೃತ್ಯುಶುಧಾ (ಸಾವಿಗಾಗಿನ ಹಸಿವು)
ನಾಟಕಗಳು –ಜಿಮಿಲಿ (ಕಿಟಕಿ ಬಾಗಿಲುಗಳು) ಅಲೆಯಾ (ಮರೀಚಿಕೆ) ಪುತುಲೆರ್ ಬಿಯೆ (ಗೊಂಬೆ ಮದುವೆ) ಝರ್ (ಚಂಡಮಾರುತ) ಪಿಲೆ ಪಾಟ್ಕ ಪುತುಲೇರ್ ಬಿಯೆ ( ಮಕ್ಕಳಿಗಾಗಿ ಕವನ ಮತ್ತು ನಾಟಕಗಳು) ಶಿಲ್ಪಿ (ಕಲಾವಿದ)
ಲೇಖನಗಳು – ಯುಗ್ ವಾಣಿ (ಯುಗದ ಸಂದೇಶ) ಜಿಂಗೆ ಫೂಲ್ ದುರ್ದಿನೇರ್ ಯಾತ್ರಿ (ದುರ್ದಿನದಲ್ಲಿಯಾತ್ರಿಕ) ರುದ್ರ ಮಂಗಲ್, ಧೂಮಕೇತು
 
ನಜರುಲ್‍ರವರು ಬಂಗಾಳಿ ಭಾಷೆಯ ಮೊಟ್ಟಮೊದಲ ಗಜಲ್ ಬರಹಗಾರರಾದರು. ಅಲ್ಲಿಯವರೆಗೂ, ಗಜûಲ್ ಪರ್ಶಿಯನ್ ಮತ್ತು ಉರ್ದುನಲ್ಲಿ ಮಾತ್ರ ಇತ್ತು. ಜೊತೆಗೆ ಇಸ್ಲಾಮಿಕ್ ಹಾಡುಗಳನ್ನು ಬಂಗಾಳಿ ಸಂಗೀತಕ್ಕೆ ಅಳವಡಿಸಿದರು. ಬಾಂಗ್ಲಾದೇಶದಲ್ಲಿ ಇಂದಿಗೂ ಆ ಹಾಡುಗಳು ಜನಪ್ರಿಯವಾಗಿವೆ. ಅಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ಅವರು ಕಾಳಿ ಕೀರ್ತನೆಗಳನ್ನು, ಶ್ಯಾಮ ಸಂಗೀತ (ಕೃಷ್ಣನ ಗೀತೆಗಳು), ಭಜನ್ ಮತ್ತು ಇತರೆ ಕೀರ್ತನೆಗಳನ್ನು ಬರೆದರು.

ಸ್ವಾತಂತ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಜ್ರುಲ್ರವರು ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದರು.
ಅವರ ನಾರಿ ಕವಿತೆಯಲ್ಲಿ ಈ ರೀತಿ ಬರೆದಿದ್ದಾರೆ:
ಹಾಡುವೆ ನಾ ಸಮಾನತೆಯ ಹಾಡ;
ಲಿಂಗ ವ್ಯತ್ಯಾಸವೆನ್ನುವುದು ನನ್ನ ದೃಷ್ಟಿಯಲಿ
ಕಡೆಗಣಿಸಬಹುದಾದ ವಿಷಯ.
ವಿಶ್ವದಲ್ಲಿ ಮಹಾನವಾಗಿರುವುದೆಲ್ಲ,
ಎಲ್ಲ ಉಪಯುಕ್ತ ಮತ್ತು ಒಳ್ಳೆಯ ಕಾರ್ಯಗಳು
ಅರ್ಧದ ಗೌರವ ಸ್ತ್ರೀಗೆ ಸಲ್ಲಬೇಕು
ಉಳಿದರ್ಧ ಮಾತ್ರ ಪುರುಷನಿಗೆ ಸಲ್ಲಬೇಕು.

ಅಷ್ಟು ಮಾತ್ರವಲ್ಲದೆ ಅವರು ಎಲ್ಲೆಡೆ ಸ್ತ್ರೀ ಪುರುಷರಿಬ್ಬರ ಪಾತ್ರಗಳ ಬೆರಕೆಯನ್ನು ಮತ್ತು ಜೀವನದಲ್ಲಿ ಇಬ್ಬರ ಮಹತ್ವವನ್ನು ಸಾರಿದ್ದಾರೆ. ಸ್ತ್ರೀ ಮತ್ತು ಪುರುಷರಿಬ್ಬರು ಒಂದು ಬಂಡಿಯ ಎರಡು ಗಾಲಿಗಳಂತೆ ಎಂದಿದ್ದಾರೆ.
 
ಸ್ತ್ರೀಯರ ಬಗೆಗಿನ ಅವರ ಗೌರವ ಅದ್ವಿತೀಯವಾಗಿತ್ತು. ಅವರ ಕವನ ಬರಾಂಗನ (ವೇಶ್ಯೆ) ಯಲ್ಲಿ ವಾರಾಂಗನೆಯನ್ನು ತಾಯಿ ಎಂದು ಕರೆದು ಸಂಪ್ರದಾಯವಾದಿ ಸಮಾಜನ್ನು ದಿಗ್ಭ್ರಾಂತಗೊಳಿಸಿದರು. ಅವರು “ವೇಶ್ಯೆಯೂ ಸಹ ಮನುಷ್ಯಳೇ, ಅವರೂ ಸಹ ನಮ್ಮ ತಾಯಂದಿರ, ಅಕ್ಕಂದಿರ ಸಮೂಹಕ್ಕೆ ಸೇರಿಕೊಳ್ಳುತ್ತಾರೆ” ಎಂದಿದ್ದಾರೆ. ಅವರ ಕವನ ಬರಾಂಗನದಲ್ಲಿ ಈ ರೀತಿ ಹೇಳಿದ್ದಾರೆ:
ತಾಯಿ, ನಿನ್ನನ್ನು ವಾರಂಗನೆಯೆಂದು ಕರೆಯುವರು ಯಾರು?
ನಿನ್ನನ್ನು ಉಗುಳುವವರು ಯಾರು?
ಬಹುಶಃ ನೀನೂ ಸಹ ಸೀತೆಯಂತೆ
ಪವಿತ್ರಳಾದ ತಾಯಿಯಿಂದಲೇ ಹಾಲನ್ನು ಕುಡಿದಿದ್ದೀಯಾ,
ಅಪವಿತ್ರ ತಾಯಿಯ ಮಗ ಕಾನೂನುಬಾಹಿರನಾದರೆ
ಅಪವಿತ್ರ ತಂದೆಯ ಮಗನೂ ಅಷ್ಟೆ!
ಇದು ಅವರ ಧೀರೋದಾತ್ತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ಸ್ತ್ರೀ ಸಮಾನತೆಯನ್ನೆ ಅಂಗೀಕರಿಸದ ಸಮಾಜದಲ್ಲಿ ವೇಶ್ಯೆಯನ್ನು ತಾಯಿ ಎಂದು ಕರೆಯುವುದು ಸಾಮಾನ್ಯವೇನಾಗಿರಲಿಲ್ಲ.
 
ಹಿಂದು-ಮುಸ್ಲಿಂ ಐಕ್ಯತೆಯನ್ನು, ಮಾನವೀಯತೆಯನ್ನು ಪ್ರತಿಪಾದಿಸಿದ ಅವರು ಈ ರೀತಿ ಹೇಳಿದ್ದಾರೆ:
ಹಿಂದು ಸಹೋದರನೇ ಬಾ. ಮುಸಲ್ಮಾನ್ ಸಹೋದರನೇ ಬಾ. ಬೌದ್ಧ, ಕ್ರಿಶ್ಚಿಯನ್ ಸಹೋದರನೇ ಬಾ. ಎಲ್ಲ ಅಡೆತಡೆಗಳನ್ನು ಮೀರೋಣ. ನಮ್ಮೆಲ್ಲ ಸಣ್ಣತನಗಳನ್ನು, ಸುಳ್ಳುಗಳನ್ನು, ಸ್ವಾರ್ಥಗಳನ್ನು ಶಾಶ್ವತವಾಗಿ ತೊರೆಯೋಣ. ಸಹೋದರರನ್ನು ಸಹೋದರರೆಂದು ಕರೆಯೋಣ. ಇನ್ನೆಂದೂ ಜಗಳವಾಡದಿರೋಣ.”
 
“ಎಲ್ಲ ದೇಶಗಳ ಮತ್ತು ಎಲ್ಲಾ ಕಾಲಗಳ ಜನತೆ ಒಟ್ಟಾಗಬೇಕು. ಮಾನವೀಯತೆಯ ಮಹಾನ್ ಒಕ್ಕೂಟವಾಗಬೇಕು. ಒಂದು ಮಹಾನ ಐಕ್ಯತೆಯ ಕೊಳಲ ವಾದನವನ್ನು ಎಲ್ಲರೂ ಕೇಳಿಸಿಕೊಳ್ಳಲಿ. ಒಂದು ಹೃದಯಕ್ಕೆ ನೋವಾದರೂ ಎಲ್ಲ ಹೃದಯಗಳು ಸಮಾನವಾಗಿ ಸ್ಪಂದಿಸಬೇಕು. ಒಬ್ಬ ವ್ಯಕ್ತಿ ಅಪಮಾನಿತನಾದರೂ, ಅದು ಇಡೀ ಮನುಕುಲದ ಅಪಮಾನ, ಎಲ್ಲರಿಗೂ ಅಪಮಾನವೆಂದು ಪರಿಗಣಿಸಬೇಕು.”
 
ಅವರ ಶ್ರೀಮಂತ ಭಾಷೆ, ಹೊಸ ಶೈಲಿ, ಉತ್ಸಾಹ ಇವೆಲ್ಲವೂ ಯುವ ಓದುಗರ ಅಪಾರ ಮೆಚ್ಚುಗೆಯನ್ನು ಗಳಿಸಿತು. ನಜ್ರುಲ್ರವರ ಬರಹದಲ್ಲಿ ಪ್ರೀತಿ, ಸ್ವಾತಂತ್ರ್ಯ ಮತ್ತು ಕ್ರಾಂತಿಯನ್ನು ಕಾಣಬಹುದು, ಮಾನವೀಯ ಮೌಲ್ಯಗಳನ್ನು ಕಾಣಬಹುದು. ಧಾರ್ಮಿಕ ಮೂಢಾಚರಣೆಗಳ, ಮೂಲಭೂತವಾದದ, ಲಿಂಗ ಅಸಮಾನತೆಯ, ಕೋಮುವಾದದ ಖಂಡನೆಯನ್ನು ಕಾಣಬಹುದು. ಇಂದಿಗೂ ಸಹ ಬಂಗಾಳಿ ಸಮುದಾಯದಲ್ಲಿ (ಭಾರತ ಮತ್ತು ಬಾಂಗ್ಲಾದೇಶ ಎರಡರಲ್ಲಿಯೂ) ನಜ್ರುಲ್ ಗೀತೆಗಳು ಬಹಳ ಪ್ರಸಿದ್ಧಿಯಾಗಿವೆ ಮತ್ತು ಮನೆಮಾತಾಗಿವೆ.

- ಡಾ।। ಸುಧಾ.ಜಿ

ಕಥೆ: "ಯಾರು ಧನ್ಯ?"

ವರುಷಕ್ಕೊಮ್ಮೆ ಬರುವ ಊರ ಉತ್ಸವದಂದು ಗ್ರಾಮಸ್ಥರೆಲ್ಲ ದೇವಾಲಯದ ಮುಂದೆ ಸಾಲುಸಾಲುಗಳಲ್ಲಿ ಕಿಕ್ಕಿರಿದು ನಿಂತಿದ್ದರು. ಪ್ರತಿಯೊಬ್ಬರೂ ದೊಡ್ಡ ದೊಡ್ಡ ಹಾಲಿನ ಪಾತ್ರೆಗಳನ್ನು ಹಿಡಿದು ದೇವರ ಅಭಿಷೇಕ ಮಾಡಿಸಲು ಕಾತರರಾಗಿದ್ದರು. ಅಂದು ಊರಿನ ಯಾರ ಮನೆಯಲ್ಲೂ ಒಂದು ತೊಟ್ಟು ಹಾಲು ಸಿಗುವುದಿಲ್ಲ. ಅಭಿಷೇಕ ಮುಗಿದ ನಂತರ ದೇವಾಲಯದಲ್ಲಿ ಉಣಬಡಿಸುವ ಪ್ರಸಾದವೇ ಊರಿನವರಿಗೆಲ್ಲಾ ಅಂದಿನ ಭೋಜನ. ಅದುವರೆಗೂ ಒಂದು ತೊಟ್ಟೂ ನೀರು ಕುಡಿಯದ, ಇನ್ನೊಬ್ಬರಿಗೂ ಕುಡಿಸದ ಆ ಜನರಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತಿತ್ತು.
ಆದರೆ, ಜನಸ್ತೋಮದಲ್ಲಿ ಅಮ್ಮನ ಸೆರಗು ಹಿಡಿದು ನಿಂತಿದ್ದ ಅಶೋಕನಲ್ಲಿ ಮಾತ್ರ ಒಂದು ರೀತಿಯ ಅತೃಪ್ತಿ ಕಾಣುತಿತ್ತು. ಕಾರಣ, ಅವನಿಗೆ ಕಥೆ ಹೇಳುವ ಪ್ರೀತಿಯ ಅಜ್ಜನಿಗೆ ಆರೋಗ್ಯ ಸರಿಯಿರಲಿಲ್ಲ. ದಿಕ್ಕುದೆಸೆಯಿಲ್ಲದ ಆ ಅಜ್ಜ ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿದ್ದ. ಮಕ್ಕಳ ಕಂಡರೆ ಕುಣಿಯುವ ಅಜ್ಜನು, ಕಥೆ ಹೇಳುತ್ತಾ, ತಾಳ ಹಾಕುತ್ತ, ಹಾಡುತ್ತಾ ಮಕ್ಕಳಲ್ಲಿ ಮಗುವಾಗುತ್ತಿದ್ದನು. ಮಕ್ಕಳಿಗಿಂತ ಹೆಚ್ಚು ಖುಶಿ ಪಡುತ್ತಾ ತನ್ನ ಒಂಟಿತನ ಮರೆಯುತ್ತಿದ್ದನು. ಆದ್ದರಿಂದ ಊರಿನ ಮಕ್ಕಳೆಲ್ಲಾ ಯಾವಾಗಲೂ ಅಜ್ಜನ ಸುತ್ತ ಗುಂಪುಗೂಡುತ್ತಿದ್ದರು. ಅವರಲ್ಲಿ ಅಶೋಕನೂ ಕೂಡ. ಜೊತೆಗೆ ಅಶೋಕನಿಗೆ ಅಜ್ಜನ ಬಗ್ಗೆ ವಿಶೇಷ ಮಮತೆ.
ಬೆಳಿಗ್ಗೆ ಅಜ್ಜನಿಗಾಗಿ ಅಶೋಕ ಗುಡಿಸಲಿಗೆ ಹೋದಾಗ ಜ್ವರದಿಂದ ಮಲಗಿದ್ದ ಅಜ್ಜ ನೆನ್ನೆಯಿಂದಲೂ ಏನೂ ತಿನ್ನದಿರುವುದನ್ನು ತಿಳಿದು ಮರುಗಿದ. ಕೂಡಲೇ ಏನೋ ಹೊಳೆದಂತಾಗಿ ಮನೆಗೆ ಬಂದು ತಿಂಡಿಗಾಗಿ ಹುಡುಕಾಡಿದ. ಆದರೆ ಮನೆಯಲ್ಲಿ ಒಲೆಯನ್ನೇ ಉರಿಸಿರಲಿಲ್ಲ. ಹಾಲನ್ನಾದರೂ ಕೊಡು ಎಂದು ಅಮ್ಮನನ್ನು ಪೀಡಿಸಿದರೆ ಅಭಿಷೇಕವಾಗುವವರೆಗೂ ಕೊಡೆನೆಂದು, ಅದಕ್ಕೂ ಮುಂಚೆ ಹಟ ಮಾಡಿದರೆ ದೇವರಿಗೆ ಕೋಪ ಬಂದು ಶಾಪ ಕೊಡುವನೆಂದು ಹೆದರಿಸಿದಳು. 
ವಿಧಿಯಿಲ್ಲದೇ ಅಭಿಷೇಕವಾಗುವ ತನಕ ಕಾಯುವುದಾಗಿ ಅಮ್ಮನ ಜೊತೆಯೇ ನಿಂತಿದ್ದ. ದೇವರಿಗೆ ಹಾಲು ಕುಡಿಸಿದ ನಂತರ ಉಳಿದ ಹಾಲು ಯಾವಾಗ ತನ್ನ ಕೈಸೇರುವುದೆಂದು ಅಶೋಕನ ಮನಸ್ಸು ತುಡಿಯುತಿತ್ತು. ಗರ್ಭಗುಡಿಗೆ ಹತ್ತಿರವಾದಷ್ಟು ಅಶೋಕನಿಗೆ ಸಂತಸವಾಗುತ್ತಿತ್ತು. ಸದಾ ಕಲ್ಲಾಗಿರುವ ಈ ದೇವರು ಎಲ್ಲಾ ಹಾಲನ್ನು ಹೇಗೆ ಕುಡಿಯುವನೆಂದು ಕುತೂಹಲ ಉಂಟಾಗಿ ಬಗ್ಗಿ ನೋಡಿದ. ಒಳಗೆ ಕಂಡು ಬಂದ ದೃಶ್ಯ ಅವನಿಗೆ ಸಹಿಸಲಾಗಲಿಲ್ಲ. ದೊಡ್ಡ ಮಡಕೆಯ ಹಾಲನ್ನು ವಿಗ್ರಹದ ಮೇಲೆ ಧಾರಾಕಾರವಾಗಿ ಸುರಿಯುತ್ತಿದ್ದರು. ಆ ಹಾಲು ಸಣ್ಣ ದಾರಿಯ ಮೂಲಕ ಹೊರಗೆ ಹರಿದುಹೋಗುತ್ತಿತ್ತು. “ಇದೇನಮ್ಮ ಹಾಲನ್ನೆಲ್ಲಾ ಹೀಗೆ ಕೆಳಗೆ ಸುರಿಯುತ್ತಿದ್ದಾರೆ, ದೇವರು ಹಾಲು ಕುಡಿಯುತ್ತಿಲ್ಲ” ಎಂಬ ಅಶೋಕನ ಮುಗ್ಧ ಪ್ರಶ್ನೆಗೆ ಅಮ್ಮ, “ತಲೆಹರಟೆ ಮಾಡಬೇಡ, ಸುಮ್ಮನೆ ನಿಂತುಕೊ” ಎಂದು ಗದರಿಸಿ ಸುಮ್ಮನಾಗಿಸಿದಳು.
‘ಎಷ್ಟೊಂದು ಹಾಲು ಚೆಲ್ಲುತ್ತಿದ್ದಾರಲ್ಲ’ ಎಂದುಕೊಂಡು ಅಶೋಕ ಕಿಟಕಿಯ ಬಳಿ ಹೋಗಿ ಹೊರನೋಡಿದ. ಆ ಹಾಲು ಒಂದು ಸಣ್ಣ ತೊಟ್ಟಿಯಲ್ಲಿ ತುಂಬಿ ಹೊರಚೆಲ್ಲುತ್ತಿತ್ತು. ಪಕ್ಕದಲ್ಲೇ ಪೂಜಾರಿಯೊಬ್ಬ ಪ್ರಸಾದ ತಯಾರಿಸಲು ಹಾಲನ್ನು ಬೇಕಾಬಿಟ್ಟಿಯಾಗಿ ಚೆಲ್ಲುತ್ತಾ ಇನ್ನೊಂದು ತಪ್ಪಲೆಗೆ ಸುರಿಯುತ್ತಿದ್ದ.
ಎಷ್ಟು ಕಾದರೂ ಹಾಲು ಖಂಡಿತ ಸಿಗುವುದಿಲ್ಲವೆಂದು ಅರಿತ ಪುಟ್ಟ ಹುಡುಗ ಸ್ವಲ್ಪವೂ ತಡ ಮಾಡದೆ ಅಮ್ಮನತ್ತ ನುಗ್ಗಿ ಹಾಲಿನ ಪಾತ್ರೆ ಕಸಿದು, ಅಮ್ಮ ಕೂಗುತ್ತಿದ್ದರೂ ನಿಲ್ಲದೆ, ಹಿಡಿಯಲು ಬಂದವರ ಕೈಗೆ ಸಿಗದೆ ಓಡಿದ. ಅಜ್ಜನ ಮನೆಗೆ ಹೋಗಿ ಲೋಟಕ್ಕೆ ಹಾಲು ಬಗ್ಗಿಸಿ ಅಜ್ಜನನ್ನು ಎಬ್ಬಿಸಿ ಹಾಲು ಕುಡಿಸಿದ. ಕಣ್ಣಲ್ಲಿ ನೀರು ತಂದುಕೊಂಡ ಅಜ್ಜ ಅಶೋಕನ ಹಣೆಗೆ ಮುತ್ತಿಟ್ಟ. ಇನ್ನು ತನ್ನಮ್ಮ ಹೊಡೆದರೂ, ಬೈದರೂ ಪರವಾಗಿಲ್ಲ, ವ್ಯರ್ಥವಾಗುತ್ತಿದ್ದ ಹಾಲನ್ನು ಹಸಿವಾಗಿದ್ದ ಅಜ್ಜನಿಗೆ ಕುಡಿಸಿದೆ ಎಂದು ಅಶೋಕನಲ್ಲಿ ಧನ್ಯತಾ ಭಾವ ಮೂಡಿತು. 

- ದೀಪಶ್ರೀ ಜೆ

ತಿಂಗಳ ವಿಶೇಷ: "ನಾಟಕ - ಅಮ್ಮನ ದಿನ"



[ಈ ನಾಟಕ ಇಂಗ್ಲಿಷ್ ನಾಟಕವೊಂದರ ಆಧಾರದ ಮೇಲೆ, ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲಾಗಿದೆ]
ಸುಮ ಶೀಲಾಳನ್ನು ಭೇಟಿ ಮಾಡಲು ಅವರ ಮನೆಗೆ ಬರುತ್ತಾಳೆ. ಇಬ್ಬರೂ ಬಹಳ ಹಳೆಯ, ಆತ್ಮೀಯ ಸ್ನೇಹಿತೆಯರು. ಕಾಲೇಜು ದಿನಗಳಿಂದಲೂ ಒಬ್ಬರನ್ನೊಬ್ಬರು ಅರಿತಿದ್ದರು.
ಸುಮ : ಶೀಲಾ ಈ ಬಾರಿಯಾದರೂ ಮಹಿಳಾ ದಿನದ ಕಾರ್ಯಕ್ರಮಕ್ಕೆ ಬರುತ್ತೀಯಾ?
ಶೀಲಾ : ಯಾವತ್ತು ಕಾರ್ಯಕ್ರಮ? 
ಸುಮ : ನಾಡಿದ್ದು.
ಶೀಲಾ : ಇಲ್ಲ ಸುಮ, ಬರಲು ಸಾಧ್ಯವಾಗುವುದಿಲ್ಲವೇನೋ.
ಸುಮ : ಏನೇ ಹಾಗೆಂದರೆ? ನಿನಗೆ ಬರಲು ಇಷ್ಟವಿದೆಯೋ ಇಲ್ಲವೊ?
ಶೀಲಾ : ನನಗೂ ಬರಲು ಇಷ್ಟ. ಆದರೆ ನಿನಗೆ ನಮ್ಮ ಮನೆಯ ಪರಿಸ್ಥಿತಿ ಗೊತ್ತಿಲ್ಲವೇ?
ಸುಮ : ಇದೇ ಹಳೆ ಕಥೆಯನ್ನು ವರ್ಷಾನುಗಟ್ಟಲೆಯಿಂದ ಹೇಳುತ್ತಲೇ ಬಂದಿದ್ದೀಯಾ.
ಶೀಲಾ : ನಾನೇನು ಮಾಡಲಿ ಸುಮ. ನಾಡಿದ್ದು ಸಂಜೆ ರಾಕೇಶ್ ಎಲ್ಲೊ ಟ್ರಿಪ್ ಹೊರಟಿದ್ದಾನೆ. ರಮ್ಯಳಿಗೆ ಯಾವುದೋ ಪಾರ್ಟಿ ಇದೆಯಂತೆ. ಜೊತೆಗೆ ಇವರು ಬರುವುದು ನಾಳೆ. ನಂತರ ಅವರ ಪ್ಲಾನ್ ಏನೋ ಯಾರಿಗೆ ಗೊತ್ತು.
ಸುಮ : ರಾಕೇಶ್ ಟ್ರಿಪ್ ಹೋಗೋದಕ್ಕು, ರಮ್ಯ ಪಾರ್ಟಿಗೆ ಹೋಗೋದಕ್ಕು, ನೀನು ಕಾರ್ಯಕ್ರಮಕ್ಕೆ ಬರೋದಿಕ್ಕು ಏನು ಸಂಬಂಧ?
ಶೀಲಾ : ಏನೇ ಹೀಗೆ ಕೇಳ್ತಾ ಇದ್ದೀಯ. ಅವರ ಬಟ್ಟೆ ಐರನ್ ಮಾಡಬೇಕು, ಪ್ಯಾಕ್ ಮಾಡಬೇಕು.
ಸುಮ : ನಿಲ್ಲಿಸಮ್ಮ ಸಾಕು, ಅವರೇನು ಚಿಕ್ಕ ಮಕ್ಕಳಾ? ಅವರಿಗೇ ಮಾಡಿಕೊಳ್ಳಲು ಹೇಳು.
ಶೀಲಾ : ಅದು ಹೇಗೆ ಸಾಧ್ಯ? ಇಷ್ಟು ವರ್ಷ ನಾನೇ ಮಾಡ್ತಾ ಬಂದಿದ್ದೀನಿ.
ಸುಮ : ಅದೇ ತಪ್ಪು ನೀನು ಮಾಡಿರೋದು. 
ಶೀಲಾ : ಮಕ್ಕಳಿಗೆ ನಾವು ಕೆಲಸ ಮಾಡಿಕೊಡಬಾರದಾ?
ಸುಮ : ಮಾಡಿಕೊಡಬೇಕು, ಅಗತ್ಯವಿದ್ದರೆ. ಆದರೆ ಅವರವರ ಕೆಲಸವನ್ನು ಅವರವರೇ ಮಾಡಿಕೋಬೇಕು. ಈಗ ನೋಡು ನಮ್ಮ ಮನೆಯಲ್ಲಿ ಸಂಜಯ್, ಸಂಜನಾ ಅವರೇ ಮಾಡಿಕೊಂಡು ಹೋಗುವುದಿಲ್ಲವಾ. ಎಷ್ಟೋ ಬಾರಿ ನನ್ನ ಕೆಲಸವನ್ನೂ ಮಾಡಿಕೊಡ್ತಾರೆ.
ಶೀಲಾ : ನೀನು ಬಿಡಮ್ಮ ಅದೃಷ್ಟವಂತಳು. ಅರ್ಥಮಾಡಿಕೊಳ್ಳುವ ಪತಿ, ಮಕ್ಕಳು (ನಿಟ್ಟುಸಿರಿಡುವಳು)
ಸುಮ : ಅದೃಷ್ಟ ಏನು ಬಂತು. ಇದೆಲ್ಲ ನಾನು ಮಾಡಿಕೊಂಡು ಬಂದದ್ದು. ಮದುವೆಯಾಗುವ ಮುನ್ನವೇ ಸುರೇಶ್ ಜೊತೆಗೆ ನನ್ನ ಎಲ್ಲಾ ಚಟುವಟಿಕೆಗಳ ಬಗ್ಗೆ ಹೇಳಿ, ಅವರು ಅಡ್ಡಿಪಡಿಸಬಾರದೆಂದೇ ಹೇಳಿದೆ. ಸ್ವಲ್ಪ ದಿನ ಹೊಂದಾಣಿಕೆಗೆ ಕಷ್ಟಾನೇ ಆಯಿತು. ಆದರೆ ನಂತರ ಎಲ್ಲವೂ ಸರಿಹೋಯಿತು. ಮಕ್ಕಳನ್ನು ನಾನು ಮೊದಲಿನಿಂದಲೂ ಈ ರೀತಿಯೇ ಬೆಳೆಸಿದೆ. ಹಾಗಾಗಿ ಸಮಸ್ಯೆಯೇ ಇಲ್ಲ
ಶೀಲಾ : ನಾನೇನು ಮಾಡಲಿ. ಇಷ್ಟು ವರ್ಷ ನಾನು ತಪ್ಪು ಮಾಡಿದೆ ಅನಿಸುತ್ತೆ. ಈಗ ಬದಲಾಯಿಸಲು ಸಾಧ್ಯವಿಲ್ಲ
ಸುಮ : ಈಗಲೂ ಕಾಲ ಮಿಂಚಿಲ್ಲ. ನೀನು ಮನಸ್ಸು ಮಾಡಿದರೆ ಎಲ್ಲ ಬದಲಾಗುತ್ತೆ.
ಶೀಲಾ : ನಿಜವಾಗಲೂ (ಆಶ್ಚರ್ಯದಿಂದ ಕೇಳಿದಳು. ಮರುಕ್ಷಣವೇ ನಿರಾಸೆಯಿಂದ) ಇಲ್ಲ ಬಿಡು ಆಗಲ್ಲ.
ಸುಮ : ಯಾಕಾಗಲ್ಲ. ನಿನ್ನ ಪತಿ, ಮಕ್ಕಳು ಕೆಟ್ಟವರೇನೂ ಅಲ್ಲ. ಅವರಿಗೆ ಅರ್ಥವಾಗುವಂತೆ ಯಾರೂ ಹೇಳಿಲ್ಲ. ನೀನು ಬಿಡಿಸಿ ಹೇಳು.
ಶೀಲಾ : ಇಲ್ಲ ಕಣೇ. ಈ ಬಗ್ಗೆ ಕೆಲವು ಸಾರಿ ಟಿವಿಯಲ್ಲಿ ಬಂದಾಗಲೂ ಅವರ್ಯಾರು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸುಮ : ಅದೆಲ್ಲ ಬಿಡು. ನೀನು ಮೊದಲು ರೆಡಿ ಇದ್ದೀಯ ಬದಲಾಗಲು, ಅದನ್ನು ಹೇಳು. ನೀನು ಬದಲಾಗದಿದ್ದರೆ, ಅವರು ಯಾರೂ ಬದಲಾಗಲ್ಲ.
ಶೀಲಾ : ನಮ್ಮ ಮನೆ ನಿಮ್ಮ ಮನೆಯಂತಾಗುತ್ತದೆ ಎಂದರೆ ನಾನು ಏನು ಬೇಕಾದರೂ ಮಾಡಲು ಸಿದ್ಧ. (ಉತ್ಸಾಹದಿಂದ ಹೇಳಿ, ಮರುಕ್ಷಣವೇ) ತುಂಬಾ ಕಷ್ಟಾನೇನೇ?
ಸುಮ : ಹೇ, ನೀನೊಬ್ಬಳು. ದೃಢವಾಗಿ ಇದ್ದರೆ ಎರಡೇ ದಿನದಲ್ಲಿ ಎಲ್ಲವೂ ಸರಿಹೋಗುತ್ತದೆ.
ಶೀಲಾ : ಸರಿ ಹೇಳು. ನಾನು ಏನು ಮಾಡಬೇಕು.
(ಸುಮ ಶೀಲಾಳ ಕಿವಿಯಲ್ಲಿ ಏನೋ ಹೇಳುವಳು.)
ಶೀಲಾ: (ಬೆಚ್ಚಿಬಿದ್ದು) ಏನೇ ನೀನು ಹೇಳುತ್ತಿರುವುದು? ನಿಜವಾಗಲೂ ನನ್ನ ಕೈಲಿ ಆಗುತ್ತಾ?
ಸುಮ : ಇದೇ ಪ್ರಶ್ನೆಯನ್ನೇ ಪದೇ ಪದೇ ಕೇಳಬೇಡ. ನೀನು ಹೀಗೆ ಇನ್ನೆಷ್ಟು ದಿನ ಇರುತ್ತೀಯ. ನಿನ್ನ ಆಸೆ, ಕನಸುಗಳಿಗೆ ಗೋರಿಯನ್ನು ಕಟ್ಟಿಕೊಂಡು. ನೀನು ಮನಸ್ಸು ಮಾಡಿದರೆ ಖಂಡಿತ ಆಗುತ್ತದೆ. ನೆನಪಿಸಿಕೊ ನೀನು ಕಾಲೇಜಿನಲ್ಲಿ ಹೇಗಿದ್ದೆ? ಎಷ್ಟು ಬೋಲ್ಡ್ ಆಗಿದ್ದೆ? ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೊ. 2 ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಬೇಕಾದ್ರೆ ಬೆಟ್ ಕಟ್ಟು. ನೀನು ಈ ಬಾರಿ ಕಾರ್ಯಕ್ರಮಕ್ಕೆ ಬರುತ್ತೀಯಾ. ಸುಧೀರ್ ನಿನ್ನನ್ನು ಕರೆತಂದುಬಿಡುತ್ತಾರೆ.
ಶೀಲಾ : (ಖುಷಿಯಿಂದ) ಹೌದೇನೆ? ಹಾಗಾದ್ರೆ ಪ್ರಯತ್ನಿಸಿಯೇ ಬಿಡುತ್ತೇನೆ.
(ಶೀಲಾಳಿಗೆ ಇನ್ನಷ್ಟು ಕಿವಿಮಾತು ಹೇಳಿ ಸುಮ ಹೊರಡುವಳು)
ಸುಮ ಕುಳಿತು ಪುಸ್ತಕ ಓದುತ್ತಿದ್ದಾಳೆ.
ರಾಕೇಶ್ :  (ಬಂದು ಬ್ಯಾಗ್ ಒಂದು ಕಡೆ, ಸಾಕ್ಸ್ ಒಂದು ಕಡೆ ಶೂ ಒಂದು ಕಡೆ ಹಾಕುತ್ತಾನೆ) ಮಮ್ಮಿ ಟೀ ಬೇಕು. (ಟೀ ಕೊಡುತ್ತಾಳೆ) ತಿನ್ನಲು ಏನಾದರೂ ಕೊಡು. (ಕೊಡುತ್ತಾಳೆ) ನೆನಪಿದೆ ಅಲ್ವಾ ಮಮ್ಮಿ. ನಾಡಿದ್ದು ನಾನು ಟ್ರಿಪ್ ಹೋಗ್ತಾ ಇರೋದು. ಎಲ್ಲಾ ರೆಡಿ ಮಾಡಿಟ್ಟು ಬಿಡು (ಆರ್ಡರ್ ಮಾಡುತ್ತಾನೆ.) ಕಳೆದ ಬಾರಿ ನೀನು ಕರ್ಚೀ¥sóï ಮರೆತುಬಿಟ್ಟಿದ್ದೆ. ಎಷ್ಟು ಕಷ್ಟ ಆಯ್ತು ಗೊತ್ತಾ? (ಆರೋಪಿಸುತ್ತಾನೆ)
ಶೀಲಾ ಮಾತನಾಡುವುದಿಲ್ಲ. ಏನೋ ಯೋಚಿಸುತ್ತಿರುತ್ತಾಳೆ. ಅಷ್ಟರಲ್ಲಿ ರಮ್ಯ ಬರುತ್ತಾಳೆ. 
ರಮ್ಯ : (ಟೀ ಕೇಳುತ್ತಾಳೆ. ಕೇವಲ ವ್ಯವಹಾರದಂತೆ ಅಮ್ಮನೊಂದಿಗೆ ಮಾತನಾಡುತ್ತಾಳೆ)
ರಮ್ಯ : ಮಮ್ಮಿ ನಾನು ನಾಡಿದ್ದು ಪಾರ್ಟಿಗೆ ಹೋಗಬೇಕು. ನನ್ನ ಬಟ್ಟೆ ಒಗೆದು ರೆಡಿ ಮಾಡಿಬಿಡು.
ಶೀಲಾ : (ನಿಧಾನವಾಗಿ ಉತ್ತರಿಸುತ್ತಾಳೆ) ಇಲ್ಲ ನನ್ನ ಕೈಲಾಗದು. ರಾಕೇಶ್ ನೀನೇ ಪ್ಯಾಕ್ ಮಾಡಿಕೊ (ಜೋರಾಗಿ ಮಾತನಾಡಲು ಪ್ರಯತ್ನಿಸುತ್ತಾಳೆ, ಆದರೆ ಸಾಧ್ಯವಾಗುವುದಿಲ್ಲ)
ರಾಕೇಶ್ ಮತ್ತು ರಮ್ಯ : (ಇಬ್ಬರೂ ಒಟ್ಟಿಗೇ ಕಿರುಚುತ್ತಾರೆ) ವಾಟ್
ರಾಕೇಶ್ :  ಏನ್ ಮಮ್ಮಿ ಹಾಗೆಂದ್ರೆ? 
(ನಿಜವಾದ ಕಾರಣ ಹೇಳೋಣ ಎಂದುಕೊಳ್ಳುತಾಳೆ.  ಆದರೆ ಅವರ ಪ್ರತಿಕ್ರಿಯೆ ನೋಡುತ್ತಾಳೆ
ಶೀಲಾ:  ಇಲ್ಲ ನನಗೆ ಹುಷಾರಿಲ್ಲ 
ರಾಕೇಶ್ :  ಏನಾಯ್ತು (ಕಾಳಜಿರಹಿತ ದನಿ)
ಶೀಲಾ : ಯಾಕೋ ತಲೆನೋವು ಅನಿಸುತ್ತೆ.
ರಾಕೇಶ್ :  ಅಷ್ಟೇನಾ, ನಾನೇನೋ ಅಂದ್ಕೊಂಡೆ. ಅಲ್ಲಿ ಮಾತ್ರೆ ಇದೆಯಲ್ಲ. ತೆಗೆದುಕೊ. ನಾಳೆ ಎಲ್ಲಾ ಸರಿಹೋಗುತ್ತೆ. 
(ಮಾತ್ರೆಯನ್ನು ಕೊಡುವ ಕಷ್ಟವನ್ನೂ ತೆಗೆದುಕೊಳ್ಳದೆ, ಇಬ್ಬರೂ ತಂತಮ್ಮ ಕೆಲಸಗಳಿಗೆ ಎದ್ದುಹೋಗುವರು)
ಶೀಲಾ. : ನೋವಿನಿಂದ ನಗುತ್ತಾಳೆ 
(ತನ್ನ ಮಕ್ಕಳು ಬೇರೆ ದಿನಗಳು ಈ ರೀತಿ ಇದ್ದರೂ, ಹುಷಾರಿಲ್ಲ ಎಂದಾಗಲೂ ಕಾಳಜಿ ವಹಿಸದೇ ಇದ್ದದ್ದನ್ನು ಕಂಡು ಕಣ್ತುಂಬಿ ಬಂತು. ಅವಳಿಗೆ ಸುಮ ಹೇಳಿದ್ದು ಈಗ ಸರಿ ಎನಿಸಿತು. ಅದನ್ನು ಜಾರಿಮಾಡಬೇಕೆಂಬ ತೀರ್ಮಾನ ಗಟ್ಟಿಯಾಯಿತು.)
(ರಾತ್ರಿಯೂ ಸಹ ಅವಳು ಯಾರನ್ನೂ ಊಟಕ್ಕೆ ಕರೆಯಲಿಲ್ಲ. ರೂಮಿನಲ್ಲಿ ಇರುತ್ತಾಳೆ)
ರಾಕೇಶ್ :  ಮಮ್ಮಿ ಊಟ ಬಡಿಸು ಬಾ
ಶೀಲಾ : ಆಗಲ್ಲ ಕಣೋ, ನೀನೇ ಬಡಿಸಿಕೊ.
ರಾಕೇಶ್ :  ತಲೆ ನೋವು ಇನ್ನೂ ಕಡಿಮೆ ಆಗಿಲ್ಲವಾ.
ಶೀಲಾ : ಇಲ್ಲ ಕಣೋ
ರಾಕೇಶ್ :  (ಅಸಹನೆಯಿಂದಲೇ) ಸುಮ್ ಸುಮ್ನೆ ಯವಾಗ್ಲೂ ಆ ಟಿವಿ ಮುಂದೆ ಕೂತಿರ್ತೀಯಾ. ಅದಕ್ಕೆ ತಲೆನೋವು. 
(ಉತ್ತರಿಸಲಿಲ್ಲ ಶೀಲ)
(ಅವನೇ ಏನೋ ಗೊಣಗುತ್ತ ಪಾತ್ರೆಯನ್ನು ಸದ್ದು ಮಾಡತೊಡಗಿದ)
ರಮ್ಯ : (ಅಲ್ಲಿಗೆ ಬಂದವಳು) ಏನೋ ನಿನ್ನ ಗೋಳು. 
ರಾಕೇಶ್ : (ಅಮ್ಮನ ಮೇಲೆ ಕಂಪ್ಲೇಂಟ್ ಹೇಳಿದ) ಮತ್ತೆ ನೋಡು ಅಮ್ಮನ್ನ
ರಮ್ಯ : (ಏನು ಹೇಳದೆ) ಆಯ್ತು ಬಾ, ನಾವಿಬ್ಬರು ಊಟ ಮಾಡೋಣ. 
ರಾಕೇಶ್ :  ಸರಿ ಬಡಿಸಿಕೊಡು 
ರಮ್ಯ : ಯಾಕಪ್ಪ ನಿನಗೆ ಕೈಯಿಲ್ಲವಾ. ನೀನೆ ಬಡಿಸಿಕೊ.
ರಾಕೇಶ್ :  ನೀನು ಹೆಣ್ಣುಮಗಳು.
ರಮ್ಯ : ನಾನು ನಿನ್ನ ತರಾನೆ ದುಡೀತೀನಪ್ಪ. ಅಮ್ಮನ ತರ ನಿನ್ನ ಸೇವೆ ಮಾಡ್ತೀನಿ ಅಂದ್ಕೋಬೇಡ.
(ಶೀಲಾಳಿಗೆ ಕೇಳಿಸಿಕೊಂಡು ಶಾಕ್ ಆಯಿತು. ಅಂದ್ರೆ ಮಗನ ಪ್ರಕಾರ ನಾನು ಹೆಣ್ಣು ಅದಕ್ಕೆ ಕೆಲಸ ಮಾಡಬೇಕು.
ಆದರೆ ಮಗಳ ಪ್ರಕಾರ ನಾನು ಕೆಲಸಕ್ಕೆ ಹೋಗಲ್ಲ, ಅದಕ್ಕೆ ಈ ಕೆಲಸ ಮಾಡಬೇಕು.
ಇವರಿಗೆ ಬುದ್ಧಿ ಕಲಿಸಬೇಕು. ನಮ್ಮ ಕೆಲಸ ಕ್ಷುಲ್ಲಕ ಎನ್ನುವ ಅವರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದಳು)
*********
(ಬೆಳಿಗ್ಗೆ ಶೀಲಾ ತಾನು ಮಾತ್ರ ಕಾಫಿ ಕುಡಿದು ರೂಮಿನಲ್ಲಿ ಪೇಪರ್ ಓದತೊಡಗಿದಳು)
ರಾಕೇಶ್ : (ಎದ್ದುಬಂದವನೇ) ಅಮ್ಮ ಕಾಫಿ. (ಯಾರೂ ಉತ್ತರಿಸಿಲಿಲ್ಲ. ರೂಮಿಗೆ ಬಂದು ಅಮ್ಮ ಪೇಪರ್ ಓದುತ್ತಾ ಇರೋದನ್ನು ನೋಡಿ) ಎಲ್ಲಮ್ಮ ಕಾಫಿ? 
ಶೀಲಾ : ಮಾಡಿಲ್ಲ.
ರಾಕೇಶ್ : ಯಾಕಮ್ಮ, ಇಷ್ಟೊತ್ತಾಗಿದೆ?
ಶೀಲಾ : ಇವತ್ತು ಭಾನುವಾರ.
ರಾಕೇಶ್ :  ಹೌದು, ಅದಕ್ಕೆ?
ಶೀಲಾ : ಇವತ್ತು ರಜ
ರಾಕೇಶ್ :  ಯಾರಿಗೆ, ನಿನಗಾ?
ಶೀಲಾ : ಹೌದು ನನಗೇ.
ರಾಕೇಶ್ :  ಏನಮ್ಮ ಇದು? ತಮಾಷೇನಾ? ಎದ್ದು ಕಾಫಿ ಮಾಡಿಕೊಡು ಬಾ.
ಶೀಲಾ : ಇಲ ಕಣೊ ನೆನ್ನೇನೆ ನಿಮಗೆ ಹೇಳಬೇಕಿತ್ತು. ಆದ್ರೆ ಹೇಳಲು ಕಷ್ಟ ಆಯ್ತು. ಆದ್ರೆ ನಿಮ್ಮ ವರ್ತನೆ ನೋಡಿದ ಮೇಲೆ ಈಗ ಹೇಳ್ತಾ ಇದ್ದೀನಿ. 
ರಾಕೇಶ್ :  ರಮ್ಯಾ ಬಾ ಇಲ್ಲಿ (ಏನೋ ಆದವನಂತೆ ಕಿರುಚಿದ)
ರಮ್ಯಾ : (ನಿದ್ದೆಗಣ್ಣಲ್ಲಿ ಎದ್ದು ಬಂದ ಅವಳು) ಏನೋ ಅದು, ನಿದ್ದೆ ಹಾಳುಮಾಡಿದೆ.
ರಾಕೇಶ್ :  ಇಲ್ಲಿ ಕೇಳು ನಿಮ್ಮಮ್ಮನ ಮಾತು.
ರಮ್ಯ : ಮತ್ತೇನೋ ಇವತ್ತು?
ರಾಕೇಶ್ :  ಇವತ್ತು ಭಾನುವಾರ ಅಂತೆ, ಅವಳಿಗೆ ರಜ ಅಂತೆ, ಏನೂ ಕೆಲಸ ಮಾಡುವುದಿಲ್ಲವಂತೆ.
ರಮ್ಯ : ಹಾ (ರಮ್ಯಾಳ ನಿದೆ ಓಡಿಹೋಯಿತು)
ರಮ್ಯ : ಹೌದೇನಮ್ಮ?
ಶೀಲಾ : ಹೌದು. ನಿಮಗೆಲ್ಲ ವಾರಕ್ಕೊಂದು ದಿನ ರಜ ಸಿಗುವುದಿಲ್ಲವೇ ಹಾಗೆ ನನಗೂ ರಜೆ ಬೇಡ್ವಾ?
ರಾಕೇಶ್: ಏನು ಮಹಾ ಕೆಲಸ ನೀವು ಮಾಡೋದು. ಬೆಳಿಗ್ಗೆ ಒಂದರ್ಧ ಘಂಟೆ, ಮಧ್ಯಾಹ್ನ ಒಂದರ್ಧ ಘಂಟೆ ರಾತ್ರಿ ಒಂದರ್ಧ ಘಂಟೆ. ಮನೆಗೆಲಸಕ್ಕೆ ಕಲಾ ಬರ್ತಾಳೆ.
ರಮ್ಯಾ: ಅವನು ಹೇಳೋದು ನಿಜ ಅಲ್ವೇನಮ್ಮ?
ಶೀಲಾ : ಹೌದಾ? ಹಾಗಿದ್ದರೆ ಇವತ್ತು ಆ ಅರ್ಧ ಘಂಟೆ ಕೆಲಸ ನೀವೆ ಮಾಡಿದ್ರೆ ನಿಮಗೂ ಗೊತ್ತಾಗುತ್ತೆ.
ರಮ್ಯ : ಅದೇನು ಮಹಾ. ತೋರಿಸಿಯೇ ಬಿಡ್ತೀವಿ. ಬಾರೋ ಅದೇನು ಮಹಾ ಕೆಲಸ. ಇಬ್ಬರೂ ಸೇರಿ ಮಾಡಿಬಿಡೋಣ.
ರಾಕೇಶ್ : ಇಲ್ಲಮ್ಮ ನಂಕೈಲಾಗಲ್ಲ. ನಾನು ಗಿರಿ ಮೂವಿಗೆ ಹೋಗಬೇಕು ಅಂದ್ಕೊಂಡಿದ್ದೀವಿ.
ರಮ್ಯಾ: ಅದೆಲ್ಲ ನಂಗೊತ್ತಿಲ್ಲ. ನೀನು ಬಂದು ಮಾಡಿದ್ರೆ ನಾನು ಮಾಡ್ತೀನಿ. ಇಲ್ಲದಿದ್ದ್ರೆ ಇಲ್ಲ. ಈಗ ಕಾಫಿ ಬೇಕೊ ಬೇಡ್ವೊ?
ರಾಕೇಶ್: ಕಾಫಿ ಬೇಕೇ ಬೇಕು.
ರಮ್ಯಾ: ಕಾಫಿ ಬೇಕು ಅಂದ್ರೆ ಬೇರೆ ಕೆಲಸ ಮಾಡಿಕೊಡು ಬಾ.
ರಾಕೇಶ್ : ಸರಿ ನಡಿ. (ತಾಯಿಯತ್ತ ತಿರುಗಿದವನು) ಮತ್ತೆ ನೀನು ತಿನ್ನಲ್ವಾ?
ಶೀಲಾ : (ಮಗ ಕೇಳಿದ ಪ್ರಶ್ನೆಗೆ ಬೇಸರಿಸಿದಳು. ನೋವಾದರೂ ಗಟ್ಟಿಯಾಗಿ) ಯಾಕೆ ನಾನು ಮಾಡಿದಾಗ ನೀವು ತಿನ್ನಲ್ವಾ? ಹಾಗೆ ಇದೂನು. ಆದ್ರೂ ನನ್ನ ಬಗ್ಗೆ ನೀವೇನೂ ಯೋಚನೆ ಮಾಡಬೇಡಿ.
ರಾಕೇಶ್ :  ಹೋಗಲಿ ನನ್ನ ಪ್ಯಾಕಿಂಗ್?
ಶೀಲಾ : ಇಲ್ಲ ಇವತ್ತಿನಿಂದ ಈ ಎಕ್ಸ್ಟ್ರಾ ಕೆಲಸ ನಾನು ಮಾಡೋಲ್ಲ. ನಿಮ್ಮಂತೆ ನನಗೂ 8 ಘಂಟೆ ಕೆಲಸ. 10ರಿಂದ 5. ಆದ್ರೆ ನೀವು ಕೆಲಸಕ್ಕೆ ಹೋಗಬೇಕಾಗಿರೋದ್ರಿಂದ ಅಯ್ಯೊ ಪಾಪ ಅಂತ 8 ರಿಂದ 4.
ರಮ್ಯ : (ಗಾಬರಿಯಿಂದ) ಮತ್ತೆ ರಾತ್ರಿ ಅಡಿಗೆ?
ಶೀಲಾ : ಅದನ್ನು ನೀವು ಮಾಡಬೇಕು.
ರಮ್ಯ : ಮಮ್ಮಿ ನಿನಗೆ ನಿಜವಾಗಲೂ ಏನೋ ಆಗಿದೆ
ರಾಕೇಶ್ :  ಸುಮ ಆಂಟಿ ಬಂದಿದ್ರಾ? ಅವರು ಬಂದು ಹೋದಾಗಲೆಲ್ಲ, ಈ ರೀತಿ ಏನೋ ಆಗುತ್ತೆ. ಅದಕ್ಕೆ ಹೀಗೆ ಆಡ್ತಾ ಇದ್ದಾರೆ ಮಮ್ಮಿ.
ಶೀಲಾ : ನನ್ನ ಗೆಳತಿಯನ್ನು ಏನೂ ಅನ್ನಬೇಡ. ಆ ಅಧಿಕಾರ ನಿನಗಿಲ್ಲ (ಗಟ್ಟಿಯಾಗಿ ಹೇಳಿದಳು. ಯಾವಾಗಲೂ ಸುಮಳನ್ನು ತಮಾಷೆ ಮಾಡುತ್ತಿದ್ದ ರಾಕೇಶ್ ಅವಳ ದನಿಯಲ್ಲಿನ ಗಟ್ಟಿತನ ಕೇಳಿ ದಂಗಾಗಿ ಸುಮ್ಮನಾಗಿಬಿಟ್ಟ)
(ಬೆಳಿಗ್ಗೆಯಿಡೀ ತಿಂಡಿ ಮಾಡುವುದರಲ್ಲಿ ಕಾಲ ಕಳೆದುಹೋಗುತ್ತೆ. ಅಡುಗೆಮನೆಯಲ್ಲಿ ಪಾತ್ರೆ ಶಬ್ದ, ಇಬ್ಬರೂ ಜಗಳವಾಡುತ್ತಿರುವ ಶಬ್ದ ಕೇಳಿಬರುತ್ತೆ. ಮಧ್ಯಾಹ್ನ ಏನೋ ಹೊರಗಡೆಯಿಂದ ತಂದುಕೊಳ್ಳುತ್ತಾರೆ.)
(ಸಂಜೆ 4ಕ್ಕೆ ಶೀಲಾಳ ಗಂಡ ಸುಧೀರ್ ಬರುತ್ತಾನೆ. ಬಂದ ತಕ್ಷಣವೇ ಕಾಫಿಯನ್ನೂ ಕೊಡದೆ ಕಂಪ್ಲೇಂಟ್ ಹೇಳುತ್ತಾರೆ)
ರಾಕೇಶ್ : ಅಪ್ಪ ನಿನಗೊಂದು ಸಂತಸದ ಸುದ್ದಿ(ವ್ಯಂಗ್ಯವಾಗಿ) ಇನ್ನು ಮುಂದೆ ತಮ್ಮ ಶ್ರೀಮತಿಯವರು ಭಾನುವಾರ ಕೆಲಸ ಮಾಡುವುದಿಲ್ಲವಂತೆ.
ರಮ್ಯಾ: (ಜೊತೆಗೆ) ಪ್ರತಿದಿನ 8 ಘಂಟೆ ಮಾತ್ರ ಕೆಲಸ ಮಾಡುತ್ತಾಳಂತೆ. ರಾತ್ರಿ ಅಡುಗೆ ನಾವು ಮೂವರು ಮಾಡಬೇಕಂತೆ. 
ಸುಧೀರ್ : (ಹಾಸ್ಯ ಎಂದುಕೊಂಡು) ಏನಿವತ್ತು? ಎಲ್ಲರೂ ನನ್ನನ್ನು ಫೂಲ್ ಮಾಡಲು ಹೊರಟಿದ್ದೀರಾ? ಇನ್ನು ಏಪ್ರಿಲ್ ಬಂದಿಲ್ಲವಲ್ಲ? 
ರಮ್ಯ : ಅಪ್ಪ ನಾವು ನಿನಗೆ ಸೀರಿಯಸ್ಸಾಗಿ ಹೇಳುತ್ತಿದ್ದರೆ, ನಿನಗೆ ಹಾಸ್ಯದ ತರ ಕಾಣುತ್ತಿದೆಯಾ?
ಸುಧೀರ್: (ಶಾಕ್ ನಿಂದ) ಏನು?
ರಾಕೇಶ್ : ಹೂನಪ್ಪ, ನಿಜ ಇದು. ಬೆಳಿಗ್ಗೆಯಿಂದಲೂ ಇದೇ ವಾದ. ನೋಡು ನಮ್ಮಿಬ್ಬರನ್ನ. ಬೆಳಿಗ್ಗೆಯಿಂದ ನಾವೇ ತಿಂಡಿ, ಕಾಫಿ ಮಾಡಿದ್ದು.
ಸುಧೀರ್ : ಶೀಲಾಗೆ ಏನಾಯ್ತು? ಹುಷಾರಿಲ್ಲವಾ? ಎಲ್ಲಿ ಶೀಲಾ?
ರಮ್ಯಾ : ಬೆಳಿಗ್ಗೆಯಿಂದಲೂ ರೂಮಿನಿಂದ ಹೊರಬಂದಿಲ್ಲ. ಏನೋ ಓದುತ್ತಾ ಬರೆಯುತ್ತಿದ್ದಾಳೆ. ನಾವು ಇಷ್ಟು ಒದ್ದಾಡ್ತಾ ಇದ್ದರೂ, ಒಂದು ಬಾರಿಯೂ ಹೊರಬರಲಿಲ್ಲ ಗೊತ್ತಾ?
ಸುಧೀರ್ : ಶೀಲಾ (ಎನ್ನುತ್ತಾ ರೂಮಿಗೆ ಹೋಗಬೇಕೆನ್ನುವಷ್ಟರಲ್ಲಿ, ಶೀಲಾ ರೂಮಿನಿಂದ ಹೊರಬರುತ್ತಾಳೆ)
ಶೀಲಾ : ಎಷ್ಟೊತ್ತಾಯ್ತು ಬಂದು? ರಮ್ಯಾ, ರಾಕೇಶ್ ಅಪ್ಪನಿಗೆ ಕಾಫಿ  ಕೊಟ್ಟಿರಾ?
ಸುಧೀರ್: (ಶಾಕ್ ತಿಂದವನಂತೆ) ಅದೇನು ಅವರಿಗೆ ಹೇಳುತ್ತಿದ್ದೀಯಾ? ನಾವು ಅಷ್ಟೊತ್ತಿಂದ ಮಾತನಾಡುತ್ತಿರುವುದು ನಿನಗೆ ಕೇಳಿಸಲಿಲ್ಲವೇ?
ಶೀಲಾ: ಇಲ್ಲ , ನಾನೇನೋ ಬರವಣಿಗೆಯಲ್ಲಿ ತೊಡಗಿದ್ದೆ. ಇಷ್ಟೊತ್ತಿಂದ ಮಾತನಾಡುತ್ತಿದ್ದಿರಿ ಎಂದರೆ ಅವರು ಈಗಾಗಲೇ ನಿಮಗೆ ಎಲ್ಲವನ್ನೂ ಹೇಳಿರಬೇಕಲ್ಲವೇ?
ಸುಧೀರ್ : ಏನಿದೆಲ್ಲ ಶೀಲಾ? ನಿನಗೆ ಹುಷಾರಿಲ್ಲದಿದ್ದರೆ ಒಂದೆರಡು ದಿನ ರೆಸ್ಟ್ ತೆಗೆದುಕೊ. ಅದು ಬಿಟ್ಟು (ಅನುನಯದ ದನಿಯಲ್ಲಿ ಹೇಳುತ್ತಾನೆ)
ಶೀಲಾ : ಇಲ್ಲ ಸುಧೀರ್. ಅವರು ಹೇಳಿದ್ದೆಲ್ಲ ಸತ್ಯ. ಇನ್ನು ಮುಂದೆ ಹಾಗೆಯೇ. ನನಗೂ ಸಹ 25 ವರ್ಷಗಳಿಂದಲೂ ಈ ಕೆಲಸ ಮಾಡಿ ಮಾಡಿ ಸಾಕಾಗಿದೆ.
ಸುಧೀರ್ : ಅರೆ, ನಾವು ಮೂವರು ಹೊರಗೆ ಹೋಗಿ ದುಡಿಯುತ್ತೇವೆ. ನೀನು ಮನೆಯಲ್ಲಿರುವವಳು, ನಿನಗೆ ಇದನ್ನು ಬಿಟ್ಟರೆ ಬೇರೇನು ಕೆಲಸವಿದೆ ಹೇಳು.
ಶೀಲಾ: ಸುಧೀರ್, ನೀವು ದಿನಕ್ಕೆ 8 ಘಂಟೆ ಮಾತ್ರ ದುಡಿಯುತ್ತೀರಿ. ಆದರೆ ನಾನು. ಬೆಳಿಗ್ಗೆ 5 ಘಂಟೆಯಿಂದ ರಾತ್ರಿ 11ರವರೆಗೆ ಕೆಲಸ ಮಾಡುತ್ತಲೇ ಇರುತ್ತೇನೆ.
ರಾಕೇಶ್ : 5 ಘಂಟೆಗೆ ಏಳುತ್ತೀಯಾ. ಒಪ್ಪಿಕೊಳ್ಳುತ್ತೇನೆ, ಆದರೆ 11 ಆದ ಮೇಲೆ ಏನು ಕೆಲಸವಿದೆ. ಕಲಾ ಬಂದು ಮನೆ ಕ್ಲೀನ್ ಮಾಡಿಕೊಳ್ಳುತ್ತಾಳೆ. 
ರಮ್ಯಾ : ಬಟ್ಟೆ ವಾಷಿಂಗ್ ಮೆಷಿನ್ ಗೆ  ಹಾಕುತ್ತೀಯಾ.
ಶೀಲಾ: ಹೌದಮ್ಮ, ಅದಾದ ಮೇಲೆ ಅದಷ್ಟಕ್ಕೆ ಅದು ಒಣಗುವುದಿಲ್ಲ, ಮಡಿಚಿಕೊಂಡು ಅಲ್ಮೀರಾದಲ್ಲಿ ಕುಳಿತುಕೊಳ್ಳುವುದಿಲ್ಲ, ಐರನ್ ಆಗುವುದಿಲ್ಲ. ಅದೆಲ್ಲ ನಾನೇ ಮಾಡಬೇಕು. ಇದಕ್ಕೆಲ್ಲ ಸಮಯ ಎಷ್ಟಾಗುತ್ತೆ ಯೋಚನೆ ಮಾಡಿದ್ದೀರಾ?
ಸುಧೀರ್ : ಮನೆಗೆ ಸಂಪಾದನೆ ಮಾಡಿಕೊಂಡು ಬರಬೇಕಾದರೆ ನಾನು ಹೊರ ಹೋಗಬೇಕು. ಅದರ ಜೊತೆ ಇಲ್ಲೂ ಮಾಡಬೇಕು ಎಂದರೆ?
ಶೀಲಾ: ನಾವು ಮನೆಯಲ್ಲಿ ಮಾಡುತ್ತಿರುವ ಕೆಲಸಗಳಿಗೆ ಪಟ್ಟಿ ಮಾಡಿ. ನೆನಪಿದೆಯಾ ನಿಮಗೆ, ನಾನು ಒಂದು ತಿಂಗಳು ಅಮ್ಮನ ಮನೆಗೆ ಹೋಗಿದ್ದಾಗ, ನೀವು ಅಡಿಗೆ ಮಾಡಲು ಬಂದ ಸಾವಿತ್ರಿಗೆ 5000 ಕೊಟ್ಟಿರಿ. ಅದೂ ಬೆಳಿಗ್ಗೆ ಮತ್ತು ರಾತ್ರಿಗೆ ಮಾತ್ರ. ಆಮೇಲೆ ಕಂಪ್ಲೇಂಟ್ ಹೇಳಿದ್ದು ಮರೆತುಹೋಯಿತೆ. ದಿನಾ ಅದನ್ನೇ ಬೇಯಿಸಿ ಹಾಕುತ್ತಿದ್ದಳು ಎಂದು. ಕಲಾಗೆ ನಾವು 2000 ರೂ ಕೊಡುತ್ತಿದ್ದೇವೆ. ಅವಳು ಕೆಲಸ ಮಾಡುವುದು ಬರಿ ಮುಕ್ಕಾಲು ಘಂಟೆ. ಪ್ರತಿಯೊಂದಕ್ಕೂ ಹೀಗೆ ಲೆಕ್ಕ ಮಾಡಿದರೆ ಎಷ್ಟು ಕೊಡಬೇಕು ನೀವೇ ಯೋಚನೆ ಮಾಡಿ. 
ರಾಕೇಶ್ : ಏನಮ್ಮ ಹೀಗೆಲ್ಲ ಲೆಕ್ಕಾಚಾರ ಮಾಡುತ್ತಿದ್ದೀಯಾ?
ಶೀಲಾ: ಮತ್ತೆ ನೀವುಗಳು ನಾನೇನು ಮಾಡುತ್ತಿದ್ದೀನಿ ಅಂತ ಕೇಳಿದರೆ ಲೆಕ್ಕ ಒಪ್ಪಿಸಬೇಕಲ್ಲವಾ?
ಸುಧೀರ್ : ಅಂದ್ರೆ ಏನೀಗ? ನಿನಗೆ ಸಂಬಳ ಕೊಡಬೇಕು ಅಂತಲೇ? ನಿನಗೆ ಬೇಕಾದ್ದನ್ನೆಲ್ಲ ನಾನೇ ತಂದುಕೊಡುತ್ತೀನಲ್ಲವಾ?
ಶೀಲಾ: ಇನ್ನು ಮುಂದೆ ಆ ಪರಿಸ್ಥಿತಿಯೂ ಬರಬಹುದು. ತಂದುಕೊಡುತ್ತೀರಾ, ಇಲ್ಲ ಎಂದು ನಾನು ಹೇಳಿಲ್ಲ. ನನಗೆ ನೀವು ಯಾವುದಕ್ಕೂ ಕೊರತೆ ಮಾಡಿಲ್ಲ (ಹೆಮ್ಮೆಯಿಂದ ನಗುತ್ತಾನೆ) ಆದರೆ ನಿಮಗೆ ಬೇಕನಿಸಿದ್ದು, ನಿಮಗೆ ಸಮಯವಾದಾಗ. ನನಗೆ ಬೇಕೆನಿಸಿದ್ದನ್ನು ಎಷ್ಟು ಬಾರಿ ನೀವು ತಿರಸ್ಕರಿಸಿದ್ದೀರಿ, ನೆನಪಿಸಿಕೊಳ್ಳಿ (ಅವನ ಮುಖ ಬಾಡುತ್ತದೆ)
ಸುಧೀರ್ : (ನಿಧಾನವಾಗಿ) ಹೌದು, ಅದು ನಿಜ, ಆದರೆ ಕೆಲಸದ ಅವಸರದಲ್ಲಿ... ...
ಶೀಲಾ: ನಿಮಗಾದರೆ ಕೆಲಸಗಳಿರುತ್ತೆ. ಆದರೆ ನಾನೇನಾದರೂ ನಿಮ್ಮಗಳ ಒಂದು ಕೆಲಸ ಮಾಡದಿದ್ದರೆ ಆಕಾಶ ಭೂಮಿ ಒಂದು ಮಾಡುವಂತೆ ಕೂಗಾಡುತ್ತೀರಾ?
ಸುಧೀರ್ : ಸರಿ ಈಗ ಏನು ಮಾಡುಬೇಕು ಹೇಳು
ಶೀಲಾ: ಪ್ರತಿ ಭಾನುವಾರ ನನಗೂ ರಜ ಬೇಕು. ಅವತ್ತು ನೀವುಗಳು ಸೇರಿ ಮನೆ ಕೆಲಸ ಮಾಡಬೇಕು. ಉಳಿದ ದಿನಗಳು ರಾತ್ರಿ ನೀವುಗಳು ನೆರವಿಗೆ ಬಂದರೆ ಅಡುಗೆ ಮಾಡುತ್ತೇನೆ. ಇಲ್ಲದಿದ್ದರೆ ಇಲ್ಲ. 
ರಾಕೇಶ್ : ಅಪ್ಪ, ನೆನ್ನೆ ಸುಮ ಆಂಟಿ ಬಂದಿದ್ದಾರೆ. ಅವರೇ ಅಮ್ಮನ ತಲೆಗೆ ಏನೋ ತುಂಬಿ ಹೋಗಿದ್ದಾರೆ.
ಶೀಲಾ: ಅವಳ ಬಗ್ಗೆ ಯಾಕೆ ಮಾತಾಡ್ತೀಯಾ? ಆ ಅಧಿಕಾರ ನಿನಗೆ ಯಾರೂ ಕೊಟ್ಟಿಲ್ಲ. ಅವಳ ಮನೆಯಲ್ಲಿ ನೋಡು ಪ್ರತಿ ಭಾನುವಾರ ಸಂಜಯ್, ಸಂಜನಾ, ಸುರೇಶ್ ಸೇರಿ ಅಡುಗೆ ಮಾಡುತ್ತಾರೆ. ಅವಳಿಗೆ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಒಟ್ಟಿಗೆ ಹೊರಹೋಗುತ್ತಾರೆ. 
ರಾಕೇಶ್ : ಆ ಸಂಜಯ್ ಗೆ ಮಾಡಲು ಬೇರೆ ಕೆಲಸವಿಲ್ಲ. ಯಾರೂ ಗೆಳೆಯರಿಲ್ಲ. ಯಾವಾಗ್ಲೂ ಅಮ್ಮನ ಸೆರಗನ್ನೇ ಹಿಡಿದುಕೊಂಡು ಓಡಾಡ್ತಾನೆ.
ಶೀಲಾ: ರಾಕೇಶ್, ಅವನ ಬಗ್ಗೆ ಮಾತನಾಡಬೇಡ. ಅವನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಏನಿದೆ?
ರಾಕೇಶ್: (ಶೀಲಾ ಆ ರೀತಿ ಹೇಳಿದ್ದಕ್ಕೆ ಬೇಜಾರು ಮಾಡಿಕೊಳ್ತಾನೆ) ನೋಡಪ್ಪ. 
ಶೀಲಾ : (ಸುಧೀರ್ ಮಾತನಾಡುವ ಮೊದಲೇ) ಅವರಿಗೆ ಯಾಕೆ ಹೇಳ್ತೀಯಾ. ನೀನೇ ಯೋಚನೆ ಮಾಡಿ ನೋಡು. ಸಂಜಯ್ ಬಿಟ್ಟುಬಿಡು. ನಿನ್ನ ಗೆಳೆಯ ಗಿರಿ ಇದ್ದಾನಲ್ಲ, ಅವನನ್ನೇ ಕೇಳಿ ನೋಡು, ಅವನ ಅಮ್ಮನಿಗೆ ಸಹಾಯ ಮಾಡ್ತಾನೋ ಇಲ್ಲವೋ ಅಂತ.
ರಾಕೇಶ್: (ನಿಧಾನವಾಗಿ) ಮಾಡ್ತಾನೆ.
ಶೀಲಾ : ಇದರ ಜೊತೆ ಇನ್ನು ಮುಂದೆ ಕೆಲವು ಕಂಡೀಷನ್ಸ್ ಇದೆ. ಸುಧೀರ್ ನೀವು ಸಂಜೆ ಹೊತ್ತು ಕ್ಲಬ್‍ಗೆ ಹೋಗೊ ಬದಲು ನನ್ನೊಂದಿಗೆ ವಾಕ್ ಬರಬೇಕು. ಇಲ್ಲದಿದ್ದರೆ ನಾನು ಸುಮಳ ಜೊತೆ ವಾಕಿಂಗ್ ಹೋಗ್ತೀನಿ. ನಿಮ್ಮ ಕಾಫಿ ನೀವೆ ಮಾಡಿಕೊಳ್ಳಬೇಕು. ಭಾನುವಾರ ಎಲ್ಲರೂ ಜೊತೆಯಲ್ಲಿ ಎಲ್ಲಿಗಾದರೂ ಹೋಗಬೇಕು. ನನ್ನನ್ನು ಮಾತ್ರ ಒಂಟಿ ಪಿಶಾಚಿಯನ್ನಾಗಿ ಬಿಟ್ಟು, ನೀವುಗಳು ಮಾತ್ರ ನಿಮ್ಮ ಕಾರ್ಯಕ್ರಮಗಳನ್ನು ಫಿಕ್ಸ್ ಮಾಡಿಕೊಳ್ಳೂದು ಏನೂ ಚೆನ್ನಾಗಿಲ್ಲ. 
ರಮ್ಯಾ : ಆದರೆ ನಮ್ಮ ಫ್ರೆಂಡ್ಸ್  ಮನೆಯಲ್ಲಿ ಫಂಕ್ಶನ್ ಇದ್ದರೆ?
ಶೀಲಾ: ಆಗ ನೀವು ಹೋಗಬಹುದು. ಹಾ. ಇನ್ನು ಮುಂದೆ ನಾನೂ ಸಹ ಸುಮಳ ಜೊತೆ ಅವರ ವೇದಿಕೆಗೆ ಸೇರಿಕೊಳ್ತಾ ಇದ್ದೀನಿ. 
(ಎಲ್ಲರೂ ಮೌನವಾಗಿಬಿಡುತ್ತಾರೆ. ಹಾಗೆಯೇ ಸ್ವಲ್ಪ ಸಮಯ ಕಳೆಯುತ್ತದೆ.) 
ಸುಧೀರ್ : ಶೀಲಾ ಏನಾಯ್ತು ನಿನಗೆ. ಯಾವಾಗಲೂ ಇಲ್ಲದ್ದು ಇದೇನು ಹೊಸದು. ಮಕ್ಕಳನ್ನು ನೋಡು. ಹೇಗೆ ಬೇಜಾರು ಮಾಡಿಕೊಂಡಿದ್ದಾರೆ.
ಶೀಲಾ : ಅವರ ಬಗ್ಗೆ ಹೇಳಿದಿರಿ. ನಿಮ್ಮ ಬಗ್ಗೆ ಹೇಳುತ್ತೀರಿ. ನನ್ನ ಅಭಿಪ್ರಾಯ ಯಾವಾಗಲಾದರೂ ಕೇಳಿದ್ದೀರಾ? ನಾನೂ ಒಬ್ಬ ಮನುಷ್ಯಳು. ನೀವೆಲ್ಲರೂ ನಿಮ್ಮ ಪಾಡಿಗೆ ನೀವಿದ್ದರೆ ನನ್ನ ಕತೆ ಏನು ಹೇಳಿ. ನನಗೆ ಹೊರಗೆ ಹೋಗಲು ಅವಕಾಶವಿದೆಯೇ? ಸ್ನೇಹಿತರ ಜೊತೆ ಬೆರೆಯಲು, ನನಗಿಷ್ಟ ಬಂದ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು. ನೀವು ಬಂದವರು ನನ್ನೊಂದಿಗೆ ಮಾತನಾಡುತೀರಾ? ಮಕ್ಕಳು ಮಾತಾಡುತ್ತಾರಾ. ನಿಮ್ಮ ನಿಮ್ಮ ಪ್ರಪಂಚದಲ್ಲಿ ನೀವಿರುತ್ತೀರಿ. ನಾನೇನು ಹಾಗಾದರೆ? ನಿಮ್ಮ ಮನೆಯ ಆಳೇ? ನಿಮಗೆ ಎಲ್ಲಾ ಸೇವೆ ಸೌಲಭ್ಯಗಳನ್ನು ಒದಗಿಸಲು. (ನೋವಿನಿಂದಲೇ ನುಡಿಯುತ್ತಾಳೆ) ಅದೇ ಸುರೇಶ್ ಅವರನ್ನು ನೋಡಿ. ಅವರೂ ಸಹ ನಿಮ್ಮ ಜೊತೆಯೇ ತಾನೇ ಕೆಲಸ ಮಾಡುತ್ತಿರುವುದು. ಸುಮಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ? ತಿಂಗಳಿಗೊಂದು ಬಾರಿಯಾದರೂ ಎಲ್ಲರೂ ಒಟ್ಟಿಗೆ ಹೊರ ಹೋಗುತ್ತಾರೆ. ಸಂಜಯ್, ಸಂಜನಾನ ನೋಡಿದರೆ ಎಷ್ಟು ಖುಷಿ ಆಗುತ್ತೆ. ನನ್ನ ಮಕ್ಕಳು ಆ ರೀತಿ ನನ್ನ ಜೊತೆ ಇರಬೇಕೆಂದು ಆಶಿಸುವುದರಲ್ಲಿ ತಪ್ಪೇನಿದೆ. ನೀವೇ ಹೇಳಿ?
(ಸುಧೀರ್ ಮೌನವಾಗಿ ಕುಳಿತುಕೊಳ್ಳುತ್ತಾನೆ.)
(ಶೀಲ ನೋವಿನಿಂದಲೇ ರೂಮಿಗೆ ಹೋಗುತ್ತಾಳೆ) 
ಶೀಲಾ : (ಅಪ್ಪ ಮಕ್ಕಳು ಹಾಲ್‍ನಲ್ಲಿಯೇ ಇರುತ್ತಾರೆ. ಬಹಳ ಹೊತ್ತಾದರೂ ಸುಧೀರ್ ರೂಮಿಗೆ ಬರದಿರುವುದು ಕಂಡು) (ಸ್ವಗತದಲ್ಲಿ)  ಇವರು ಬದಲಾಗುವುದೇ ಇಲ್ಲವೇನೊ  (ನೋವಿನಿಂದಲೇ ನಿದ್ರೆಗೆ ಜಾರುತ್ತಾಳೆ)
(ಬೆಳಿಗ್ಗೆ ಎದ್ದು ಹೊರಗೆ ಹಾಲ್‍ಗೆ ಬಂದರೆ ತಕ್ಷಣ ಶಾಕ್ ಆಗುತ್ತದೆ.
ರೂಮ್ ಅಲಂಕೃತಗೊಂಡಿದೆ. ಅಲ್ಲೊಂದೆಡೆ ದೊಡ್ಡದಾಗಿ “ಹ್ಯಾಪಿ ವುಮೆನ್ಸ್ ಡೇ ಮಮ್ಮಿ” ಎಂದೂ ಇನ್ನೊಂದೆಡೆ “ಹ್ಯಾಪಿ ವುಮೆನ್ಸ್ ಡೇ ಶೀಲ” ಎಂದು ಬರೆದಿರುವ ಪೋಸ್ಟರ್ ಇರುತ್ತದೆ. ಓಹ್ ಮಸ್ಕಾ ಹೊಡೆಯಲು ಎಂದುಕೊಂಡು ಕಾಫಿ ಇಡಲು ಹೋಗುತ್ತಾಳೆ
ರಾಕೇಶ್: ಗುಡ್ ಮಾರ್ನಿಂಗ್ ಮಮ್ಮಿ, ಕಾಫಿ ರೆಡಿ. (ಕೊಡುತ್ತಾನೆ. ಆಶ್ಚರ್ಯವಾಗುತ್ತದೆ) ಹ್ಯಾಪಿ ವುಮೆನ್ಸ್ ಡೇ.
ಸುಧೀರ್: ಇಗೊ ನಿನ್ನ ಪೇಪರ್ (ಜೊತೆಗೆ ಒಂದು ಹೂಗುಚ್ಛವನ್ನೂ ಸಹ) ಹ್ಯಾಪಿ ವುಮೆನ್ಸ್ ಡೇ
ರಮ್ಯ : ಅಮ್ಮ ಹ್ಯಾಪಿ ವುಮೆನ್ಸ್ ಡೇ. ಬೇಗ ರೆಡಿ ಆಗಿ ಬಾ. ನಾನಿವತ್ತು ತಿಂಡಿ ಮಾಡ್ತಾ ಇದ್ದೀನಿ. ಇವತ್ತು ಪೂರ್ತಿ ನಿನಗೆ ರೆಸ್ಟ್.
ಶೀಲಾ : ಹ್ಯಾಪಿ ವುಮೆನ್ಸ್ ಡೇ. ಏನು ಮಸ್ಕಾನಾ? ಪ್ರತಿ ಬಾರಿ ನೀವು ಹೇಳಿದ್ದನ್ನು ಕೇಳಿಬಿಡುತ್ತಿದ್ದೆ. ಈ ಬಾರಿ ಮಾತ್ರ ನೀವೇನೆ ಮಸ್ಕಾ ಹೊಡೆದ್ರೂ ನನ್ನ ನಿರ್ಧಾರ ಬದಲಾಗಲ್ಲ.
ರಾಕೇಶ್ :  ಇಲ್ಲ ಮಮ್ಮಿ ನೀನು ಹೇಳಿದ್ದನ್ನು ನಾವು ಮೂವರು ರಾತ್ರಿಯೆಲ್ಲ ಕುಳಿತು ಚರ್ಚಿಸಿದೆವು. ನೀನು ಹೇಳಿದ್ದು ಕರೆಕ್ಟ್ ಮಮ್ಮಿ. ನಿನ್ನ ಕೆಲಸ ನಾವು ಮೂವರು ಸೇರಿ ಸಹ ನೆನ್ನೆ ಮಾಡಲಾಗಲಿಲ್ಲ. ಆದರೂ ನೀನು ಇಷ್ಟು ವರ್ಷಗಳು ಏನೂ ಹೇಳದೆ ಮಾಡಿದ್ದೀಯ. ಅದರ ಬೆಲೆ ನೆನ್ನೆಯೇ ನಮಗೆ ಅರಿವಾಗಿದ್ದು. ವೀ ಆರ್ ಸಾರಿ. ಇನ್ನು ಮುಂದೆ ಹೀಗಾಗಲ್ಲ. ನಾವೆಲ್ಲರೂ ನಿನಗೆ ಹೆಲ್ಪ್ ಮಾಡುತ್ತೇವೆ.
ರಮ್ಯಾ : ಹೌದು ಅಮ್ಮ. (ಕಿವಿ ಹಿಡಿದುಕೊಂಡು) ಸಾರಿ. ಈ ಬಾರಿ ಕ್ಷಮಿಸಿಬಿಡು. ಇನ್ನು ಮುಂದೆ ಹೀಗಾಗೋಲ್ಲ. ಸುಮ ಆಂಟಿ ಮಾತ್ರ ಅವರ ಮಕ್ಕಳ ಬಗ್ಗೆ ಯಾಕೆ ಹೆಮ್ಮೆ ಪಡಬೇಕು. ನೀನು ಪಡಬಹುದು. ನೋಡು ಹಾಗೆ ನಿನ್ನನ್ನು ನೋಡಿಕೊಳ್ತೇವೆ.
ಸುಧೀರ್ : ಶೀಲಾ, ಇಷ್ಟು ವರ್ಷಗಳು ನಾನು ನಿನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಹೆಂಡತಿಗೆ ಬೇಕಾದ್ದನ್ನು ಕೊಡಿಸಿಬಿಟ್ಟರೆ ಒಳ್ಳೆಯ ಗಂಡ ಎಂದುಕೊಂಡೆ. ಇನ್ನು ಮುಂದೆ ಹೀಗಾಗೋಲ್ಲ. ನಿನಗೊಂದು ಸರ್ಪ್ರೈಸ್. ಈ ಭಾನುವಾರವೇ ನಾವೆಲ್ಲ ಸೇರಿ ನೀನು ಬಹಳ ದಿನಗಳಿಂದ ಕೇಳುತ್ತಿದ್ದ ಮೈಸೂರಿಗೆ ಹೋಗುತ್ತಿದ್ದೇವೆ.
(ಶೀಲಾ ತನ್ನ ಕಿವಿಯನ್ನೇ ನಂಬದಾದಳು.) 
(ಅಷ್ಟರಲ್ಲಿ ಮೂವರು ಗ್ರೀಟಿಂಗ್ ಕೊಟ್ಟು ವಿಷ್ ಮಾಡಿದರು)
ರಾಕೇಶ್ :  ಮಮ್ಮಿ ನನ್ನ ಪ್ಯಾಕಿಂಗ್ ನಾನೇ ಮಾಡಿಕೊಳ್ತೀನಿ. ನೀನೇನೋ ಬರೆಯುತ್ತಿದ್ದೆ ಎಂದಲ್ಲ, ಅದನ್ನು ಮಾಡಿಕೊ. ಜೊತೆಗೆ ನೀನು ಸಂಜೆ ಮಹಿಳಾ ದಿನದ ಕಾರ್ಯಕ್ರಮಕ್ಕೆ ಹೋಗಬೇಕಲ್ಲ.
ಸುಧೀರ್ - ಶೀಲಾ, ನಾನೇ ನಿನ್ನನ್ನು ಬಿಟ್ಟುಬರ್ತೀನಿ. ನಾನು ಆಫೀಸಿಗೆ ಹೋಗಿ ಬಂದುಬಿಡ್ತೀನಿ. ರೆಡಿಯಿರು. ವಾಪಸ್ಸು ನಾನೇ ಕರೆದುಕೊಂಡು ಬರ್ತೀನಿ.
ರಮ್ಯ : ಮಮ್ಮಿ, ನಾನು ನನ್ನ ಫ್ರೆಂಡ್ಸ್ ಜೊತೆ ಸಿನಿಮಾಗೆ ಹೋಗುವುದಿಲ್ಲ. ಯಾವಾಗ್ಲೂ ನಿನ್ನ ಜೊತೆ ಬಾ ಅಂತಾ ಇದ್ದೇಯಲ್ಲ,  ಇವತ್ತು ನಿನ್ನ ಜೊತೆ ನಾನು ಬರ್ತೀನಿ, ಖುಷಿನಾ?
ಶೀಲಾ : (ಖುಷಿಯಿಂದ) ಥ್ಯಾಂಕ್ಸ್, ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳಾ ದಿನದಂದು ಬಹಳ ಖುಷಿಯಾಗಿದ್ದೇನೆ. ಈಗ ನಿಮ್ಮಬ್ಬರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. (ಕರೆಯುವಂತೆ ಕೈಚಾಚುವಳು)
ಅವರಿಬ್ಬರೂ ಶೀಲಾಳ ಹತ್ತಿರ ಬಂದು ಅವಳ ತೊಡೆಯ ಮೇಲೆ ತಲೆಯಿಡುವರು.
ಸುಧೀರ್ : ಮತ್ತೆ ನನ್ನ ಬಗ್ಗೆ?
(ಶೀಲಾ ಏನೂ ಮಾತನಾಡದೆ ಹೆಮ್ಮೆ, ಖುಷಿಯ ನಗು ಬೀರುವಳು. ಸುಧೀರ್ ಸಹ ಮುಗುಳ್ನಗುತ್ತಾನೆ.)
- ಸುಧಾ ಜಿ