Pages

ವ್ಯಕ್ತಿ ಪರಿಚಯ: "ಕಾಜಿ ನಜ್ರುಲ್ ಇಸ್ಲಾಂ"

“ವಿದ್ರೋಹಿ ಕವಿ” ಕಾಜಿ ನಜ್ರುಲ್ ಇಸ್ಲಾಂ


ಶೋಷಣೆ, ದಮನದ ವಿರುದ್ಧ ತಮ್ಮ ದನಿಯನ್ನೆತ್ತಿ, ತಮ್ಮ ಕ್ರಾಂತಿಕಾರಿ ಧೋರಣೆ ಮತ್ತು ಸಾಮಾಜಿಕ – ರಾಜಕೀಯ ನ್ಯಾಯಕ್ಕಾಗಿನ ಹೋರಾಟದಿಂದ “ವಿದ್ರೋಹಿ ಕವಿ” ಎಂದು ಪ್ರಖ್ಯಾತರಾದ ಕಾಜಿ ನಜ್ರುಲ್ ಇಸ್ಲಾಂರವರು ಹುಟ್ಟಿದ್ದು ಮೇ 24, 1899ರಲ್ಲಿ. ಪ್ರಸಿದ್ಧ ಬಂಗಾಳಿ ಕವಿ, ಬರಹಗಾರರು, ಸಂಗೀತಗಾರರು, ಕ್ರಾಂತಿಕಾರಿ ಮತ್ತು ಬಾಂಗ್ಲಾದೇಶದ ರಾಷ್ಟ್ರಕವಿ ಎಂದು ಪ್ರಸಿದ್ಧರಾದವರು, ಜನಿಸಿದ್ದು ಅವಿಭಜಿತ ಬಂಗಾಳದ (ಪ್ರಸ್ತುತ ಭಾರತದಲ್ಲಿದೆ) ಬರ್ದ್ವಾನ್ ಜಿಲ್ಲೆಯ ಚುರುಲಿಯ ಎಂಬ ಗ್ರಾಮದಲ್ಲಿ. 

ತಂದೆ ಕಾಜಿ ಫಕೀರ್ ಅಹ್ಮದ್, ಸ್ಥಳೀಯ  ಮಸೀದಿಯನ್ನು ನೋಡಿಕೊಳ್ಳುತ್ತಿದ್ದರು. ತಾಯಿ ಜಹೀದಾ ಖಾತುನ್. ತಂದೆಯ ಅಕಾಲ ಮರಣದಿಂದ ಇಡೀ ಕುಟುಂಬ ಬಹಳ ಸಂಕಷ್ಟಗಳಿಗೆ ಒಳಗಾಯಿತು. ತಂದೆಯ ಸಾವಿನ ನಂತರ ಮನೆಯ ಜವಾಬ್ದಾರಿಯನ್ನು ವಹಿಸಬೇಕಾಗಿ ಬಂದದ್ದರಿಂದ ಮಸೀದಿಯಲ್ಲಿ ಮ್ಯುಜೀನ್ ಆಗಿ (ಮಸೀದಿಯಲ್ಲಿ ನಮಾಜಿಗೆ ಕರೆಯುವ ಕೆಲಸ) ಕೆಲಸ ಮಾಡಿದರು.  ಶಾಲೆಯಲ್ಲಿ ಶಿಕ್ಷಕರಿಗೆ ಸಹಾಯವನ್ನು ಮಾಡತೊಡಗಿದರು. 

ನಂತರ ನಾಟಕ ಗುಂಪೊಂದನ್ನು ಸೇರಿಕೊಂಡು ಅವರೊಂದಿಗೆ ಹಲವೆಡೆ ಹೋದರು. ಅಲ್ಲಿ ಅಭಿನಯ, ಹಾಡು ಮತ್ತು ಕವಿತೆ ಬರೆಯುವುದನ್ನು ಕಲಿತರು. ತಮ್ಮ ಕೆಲಸ ಮತ್ತು ಅನುಭವಗಳೊಂದಿಗೆ ಬಂಗಾಳಿ ಮತ್ತು ಸಂಸ್ಕೃತ ಸಾಹಿತ್ಯ ಕಲಿತರು. ಹಿಂದೂ ಗಂಥಗಳನ್ನು, ಪುರಾಣಗಳನ್ನು ಓದಿದರು. ತಮ್ಮ ಗುಂಪಿಗಾಗಿ ಹಲವಾರು ಜನಪದ ನಾಟಕಗಳನ್ನು ರಚಿಸಿದರು. ಶಕುನಿಯ ಕೊಲೆ, ರಾಜ ಯುಧಿಷ್ಟಿರನ ನಾಟಕ, ದಾತ ಕರ್ಣ, ಅಕ್ಬರ್ ಬಾದ್‍ಶಾಹ್, ಕವಿ ಕಾಳಿದಾಸ, ಇತ್ಯಾದಿ. 

1910ರಲ್ಲಿ ಆ ಗುಂಪನ್ನು ಬಿಟ್ಟು ಹೈಸ್ಕೂಲ್ ಸೇರಿಕೊಂಡರು. ಅಲ್ಲಿ ಶಿಕ್ಷಕರೂ, ಯುಗಾಂತರ ಸಂಘಟನೆಯ ಸದಸ್ಯರಾದ ನಿವಾರಣ್‍ಚಂದ್ರ ಘಟಕ್‍ರವರಿಂದ ಪ್ರಭಾವಿತರಾದರು. ಶುಲ್ಕ ತೆರಲಾರದೆ ಶಾಲೆ ಬಿಟ್ಟ ಅವರು ಕವಿಗಳ ಗುಂಪಿನಲ್ಲಿ ಸೇರಿಕೊಂಡರು. ಬಹಳ ಬೇಗ ಆರ್ಥಿಕ ಬಿಕ್ಕಟ್ಟಿನಿಂದಾಗಿ ಓದನ್ನು ಬಿಟ್ಟು ಅಡಿಗೆಯವರಾಗಿ ಕೆಲಸ ಮಾಡತೊಡಗಿದರು. ನಂತರ ಅಸಾನ್‍ಸೋಲ್‍ನಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡತೊಡಗಿದರು. 1914 ರಲ್ಲಿ ಮತ್ತೆ ಓದಲಾರಂಭಿಸಿದರು. ಬಂಗಾಳಿ, ಸಂಸ್ಕೃತ, ಅರೇಬಿಕ್, ಪರ್ಷಿಯನ್ ಸಾಹಿತ್ಯವನ್ನು ಓದಿದರು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಸಹ ಕಲಿತರು.

1917ರಲ್ಲಿ ಭಾರತ ಸೈನ್ಯವನ್ನು ಸೇರಿದರು, ಹವಲ್ದಾರ್ ಆದರು. 1919ರಲ್ಲಿ ಅವರು ತಮ್ಮ ಪ್ರಥಮ ಕೃತಿ “ಸೌಗಾಥ್”ಅನ್ನು ಪ್ರಕಟಿಸಿದರು. ರವೀಂದ್ರನಾಥ ಟಾಗೋರ್ ಮತ್ತು ಶರತ್‍ಚಂದ್ರ ಚಟರ್ಜಿ ಹಾಗೂ ಪರ್ಶಿಯನ್ ಕವಿಗಳಾದ  ರುಮಿ ಮತ್ತು ಒಮರ್ ಖಯ್ಯೂಂರವರಿಂದ ಪ್ರಭಾವಿತರಾದರು. ಅವರ ಮೊದಲ ಗದ್ಯ ಕೃತಿ “ಬಾಂದುಲೇರ್ ಆತ್ಮಕಹಿನಿ”  (ಅಲೆಮಾರಿಯ ಜೀವನ) 

1920 ರಲ್ಲಿ ಸೈನ್ಯವನ್ನು ತೊರೆದು ಬಂಗೀಯ ಮುಸಲ್ಮಾನ್ ಸಾಹಿತ್ಯ ಸಮಿತಿಯನ್ನು ಸೇರಿ ತಮ್ಮ ಪ್ರಥಮ ಕವನ “ಬಂಧನ್ ಹರಾ” (ಸಂಕೋಲೆಯಿಂದ ಮುಕ್ತಿ) ಎಂಬ ಕವನ ಪ್ರಕಟಿಸಿದರು. 1922 “ವಿದ್ರೋಹಿ” ಕವಿತೆ ‘ಬಿಜಲಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ರಾಜಕೀಯ ಕವಿತೆ “ಆನಂದಮಯಿರ್ ಆಗಮನೆ” (ಆನಂದಮಯಿಯ ಆಗಮನ) ಅವರೇ ಆರಂಭಿಸಿದ್ದ ‘ಧೂಮಕೇತು’ ಪತ್ರಿಕೆಯಲ್ಲಿ ಪ್ರಕಟವಾಯಿತು. ಬ್ರಿಟಿಷ್ ದಮನವನ್ನು ವಿರೋಧಿಸಿ ಕವನಗಳನ್ನು ಬರೆಯಲಾರಂಭಿಸಿದರು. ಬ್ರಿಟಿಷ್ ವಿರೋಧಿ ಎಂದು ಪೋಲೀಸರು ಅವರನ್ನು ಬಂಧಿಸಿದರು. ಏಪ್ರಿಲ್ 14, 1923 ರಂದು ಅವರನ್ನು ಹುಗ್ಲಿ ಜೈಲಿಗೆ ವರ್ಗಾಯಿಸಲಾಯಿತು. ಬ್ರಿಟಿಷರು ಖೈದಿಗಳನ್ನು ನೋಡಿಕೊಳ್ಳುತ್ತಿದ್ದ ಅಮಾನುಷ ರೀತಿಯನ್ನು ಖಂಡಿಸಿ ಅವರು 40 ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡಿದರು. ಡಿಸೆಂಬರ್, 1923ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾಗುವವರೆಗೆ ಜೈಲಿನಲ್ಲಿಯೇ ಅವರು ಹಲವಾರು ಕವನಗಳನ್ನು ರಚಿಸಿದರು. 1920 ರ ದಶಕದಲ್ಲಿ ಅವರ ಹಲವಾರು ಕವನಗಳನ್ನು ಬ್ರಿಟಿಷರು ದೇಶದ್ರೋಹಿ ಕವನಗಳೆಂದು ನಿಷೇಧಿಸಿದರು. ಹಲವಾರು ಬಾರಿ ನಜರುಲ್‍ರವರು ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಂದ ಬಂಧನಕ್ಕೊಳಗಾದರು.

ನಜರುಲ್‍ರವರು ಖಿಲಾಫತ್ ಹೋರಾಟವನ್ನು ಧಾರ್ಮಿಕ ಮೂಲಭೂತವಾದಿ ಹೋರಾಟವೆಂದು ತಿರಸ್ಕರಿಸಿದರು. ಜೊತೆಗೆ, ಧರ್ಮದ ಮತ್ತು ರಾಜಕೀಯದ ಹೆಸರಿನಲ್ಲಿ ನಡೆಸುವ ಕಟುವಾದ ಧಾರ್ಮಿಕ ಮೂಢತೆಯನ್ನು ಅವರು ವಿರೋಧಿಸಿದರು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಕೇಳುತ್ತಿಲ್ಲ ಎಂಬ ಕಾರಣಕ್ಕಾಗಿ ಅವರು ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ನೀತಿಯನ್ನು ವಿರೋಧಿಸಿದರು. “ಶ್ರಮಿಕ್ ಪ್ರಜಾ ಸ್ವರಾಜ್ ದಳ”ವನ್ನು ಸ್ಥಾಪಿಸಿ, ಜನತೆಯನ್ನು ಬ್ರಿಟಿಷರ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿದರು. ಅವರ ದೇಶಪ್ರೇಮಿ ಹಾಡುಗಳು ಜನತೆಯನ್ನು ಹೋರಾಟಕ್ಕೆ ಹುರಿದುಂಬಿಸಿದವು.

ಧಾರ್ಮಿಕ ಮೂಢನಂಬಿಕೆಗಳನ್ನು ವಿರೋಧಿಸಿದ ಅವರು, “ಒಂದೇ ಬಳ್ಳಿಯ ಎರಡು ಹೂಗಳು - ಹಿಂದೂ ಮತ್ತು ಮುಸಲ್ಮಾನರು” ಎಂದು ತಮ್ಮ ಕವನದಲ್ಲಿ ಸಾರಿದ್ದರು. ದೇಶದ ಎಲ್ಲ ಜನತೆ ಬ್ರಿಟಿಷರ ವಿರುದ್ಧ ಐಕ್ಯತೆಯಿಂದ ಹೋರಾಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅವರ ಧರ್ಮನಿರಪೇಕ್ಷತೆ ಬರಹದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕಂಡುಬಂದಿತು. 1921ರಲ್ಲಿ ಅವರು ಪ್ರಮೀಳಾ ದೇವಿಯವರನ್ನು ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಉಂಟಾದ್ದರಿಂದ 1924ರಲ್ಲಿ ವಿವಾಹವಾದರು. ಅವರು ಮಕ್ಕಳ ಹೆಸರುಗಳು ಸಹ ಅದನ್ನು ಸಾಬೀತುಗೊಳಿಸುತ್ತದೆ. ಕೃಷ್ಣ ಮೊಹಮ್ಮದ್, ಬುಲ್‍ಬುಲ್, ಸವ್ಯಸಾಚಿ ಮತ್ತು ಅನಿರುದ್ಧ.  

1926ರ ನಂತರ ಅವರು ಸಮಾಜದ ಬಲಹೀನ ವರ್ಗಗಳಿಗಾಗಿ ಹಾಡುಗಳನ್ನು ಬರೆಯಲಾರಂಭಿಸಿದರು. 1933ರಲ್ಲಿ ಲೇಖನಗಳ ಸಂಗ್ರಹವನ್ನು “ಮಾಡರ್ನ್ ವರ್ಲ್ಡ್ ಲಿಟರೇಚರ್” (ಆಧುನಿಕ ವಿಶ್ವ ಸಾಹಿತ್ಯ) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅವರು ಸುಮಾರು 800 ಶಾಸ್ತ್ರೀಯ ರಾಗಗಳನ್ನು, ಕೀರ್ತನೆಗಳನ್ನು ಬರೆದಿದ್ದಾರೆ. ದೇಶಪ್ರೇಮಿ ಗೀತೆಗಳ 10 ಸಂಪುಟಗಳನ್ನು ಪ್ರಕಟಿಸಿದ್ದಾರೆ. 1934 ರಲ್ಲಿ ಭಾರತದ ಸಿನಿಮಾರಂಗಕ್ಕೆ ಸೇರಿದ ಅವರು ಭಕ್ತಧ್ರುವ ಸಿನಿಮಾದಲ್ಲಿ ನಟಿಸಿದರು. 1940 ರಲ್ಲಿ ನವಯುಗ ಪತ್ರಿಕೆಯ ಸಂಪಾದಕರಾದರು. 1928ರಲ್ಲಿ ಎಚ್‍ಎಂವಿ ಗ್ರಾಮಾಫೆÇೀನ್ ಕಂಪನಿಗೆ ಬರಹಗಾರರು, ಸಂಗೀತ ನಿರ್ದೇಶಕರು ಆದರು. ಸುಮಾರು 4000 ಹಾಡುಗಳನ್ನು ಬರೆದು, ರಾಗ ಸಂಯೋಜಿಸಿದ್ದಾರೆ. ಅದನ್ನು ಒಟ್ಟಾಗಿ ನಜರುಲ್ ಗೀತಿ (ನಜರುಲ್ ಗೀತೆಗಳು) ಎಂದು ಕರೆಯಲಾಗಿದೆ. 

1939ರಲ್ಲಿ ಪತ್ನಿ ಲಕ್ವ ಹೊಡೆಯಿತು. ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಅವರಿಗೆ ಇದು ಇನ್ನೊಂದು ಆಘಾತವನ್ನು ನೀಡಿತು. 43 ವಯಸ್ಸಿನಲ್ಲಿ (1942) ಅವರು ಗೊತ್ತಿರದ ಖಾಯಿಲೆಯೊಂದಕ್ಕೆ ತುತ್ತಾಗಿ ಕಂಠ ಮತ್ತು ನೆನಪಿನ ಶಕ್ತಿಯನ್ನು ಕಳೆದುಕೊಂಡರು. ಬ್ರಿಟಿಷರು ಸಂಚಿನಿಂದ ಅವರಿಗೆ ಕೊಟ್ಟ ನಿಧಾನ ವಿಷವೇ ಕಾರಣವೆಂದು ಹೇಳಲಾಗಿದೆ. ಇದರಿಂದಾಗಿ ಅವರ ಆರೋಗ್ಯ ಕ್ರಮೇಣವಾಗಿ ಹದಗೆಡುತ್ತಾ ಹೋಯಿತು. 

1945 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಅವರ ಬಂಗಾಳಿ ಸಾಹಿತ್ಯ ಕೃಷಿಗಾಗಿ “ಜಗತ್ತಾರಿಣಿ ಚಿನ್ನದ ಪದಕ” ನೀಡಿತು.
1952 ರಲ್ಲಿ ಒಂದು ಗುಂಪು “ನಜ್ರುಲ್ ಚಿಕಿತ್ಸಾ ಸಮಾಜ” ಎಂಬುದನ್ನು ಸ್ಥಾಪಿಸಿ ಅವರನ್ನು ಮತ್ತು ಅವರ ಪತ್ನಿಯನ್ನು ಲಂಡನ್, ನಂತರ ವಿಯೆನ್ನಾಗೆ ಕಳಿಸಿತು. ನಜರುಲ್‍ರವರು ಪಿಕ್ಸ್ ಖಾಯಿಲೆಗೆ ತುತ್ತಾಗಿದ್ದಾರೆ ಮತ್ತು ಅದಕ್ಕೆ ಚಿಕಿತ್ಸೆ ಇಲ್ಲವೆಂದು ವೈದ್ಯರು ಹೇಳಿದ ನಂತರ ಅವರು 1953ರಲ್ಲಿ ಕಲ್ಕತ್ತಾಗೆ ಮರಳಿದರು.
1960ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿತು.
1962ರಲ್ಲಿ ಪ್ರಮೀಳಾ ದೇವಿಯವರು ತೀರಿಕೊಂಡರು. ನಜ್ರುಲ್ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತ ಸರ್ಕಾರದ ಅನುಮತಿಯೊಂದಿಗೆ ಬಾಂಗ್ಲಾದೇಶದ ಸರ್ಕಾರ ನಜರುಲ್‍ರವರನ್ನು ಢಾಕಾಗೆ ಕರೆಸಿಕೊಂಡು “ಗೌರವ ಪೌರತ್ವ”ವನ್ನು ನೀಡಿತು. “ಬಾಂಗ್ಲಾದೇಶದ ರಾಷ್ಟ್ರಕವಿ” ಎಂದು ಘೋಷಿಸಿತು. 

ಉತ್ತಮ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಆಗಸ್ಟ್ 29, 1976 ರಂದು ನಜರುಲ್‍ರವರು ತೀರಿಕೊಂಡರು. ತಮ್ಮ ಕವನಗಳಲ್ಲಿ ಆಶಿಸಿದಂತೆ ಅವರನ್ನು ಢಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಮಸೀದಿಯ ಪಕ್ಕದಲ್ಲಿ ಸಮಾಧಿ ಮಾಡಲಾಯಿತು. ಲಕ್ಷಾಂತರ ಜನ ಅವರಿಗೆ ನಮನವನ್ನು ಸಲ್ಲಿಸಿದರು. ಬಾಂಗ್ಲಾದೇಶ ಎರಡು ದಿನಗಳ ರಾಷ್ಟ್ರೀಯ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಭಾರತದ ಸಂಸತ್ತಿನಲ್ಲಿಯೂ ಸಹ ಅವರ ಗೌರವಾರ್ಥ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ಅವರ ಕೃತಿಗಳು
ಕವಿತೆ–ಅಗ್ನಿ ವೀಣ, ಸಂಚಿತ, ಫಣಿಮಾನಸ, ಚಕ್ರವಾಕ, ಸಾತ್ ಭಾಯ್ ಚಂಪಾ, ನಿರ್ಝರ್, ನತೂನ್ ಚಾಂದ್, ಮೊರು ಭಾಸ್ಕರ್, ಸಂಚಯನ, ಸಾಮ್ಯವಾದಿ, ಸರ್ವಹರಾ,
ಸಣ್ಣ ಕಥೆಗಳು –ರಿಕ್ತೇರ್ ಬೇದನ್ (ನಿರ್ಗತಿಕನ ವೇದನೆ), ಶಿವುಲಿಮಾಲ (ಶಿವುಲಿಯ ಹಾರ) ವ್ಯಥಾರ್ ದಾನ್ (ವ್ಯಥೆಯ ದಾನ)
ಕಾದಂಬರಿಗಳು - ಬಂಧನ್ ಹರಾ (ಸಂಕೋಲೆಯಿಂದ ಮುಕ್ತ) ಮೃತ್ಯುಶುಧಾ (ಸಾವಿಗಾಗಿನ ಹಸಿವು)
ನಾಟಕಗಳು –ಜಿಮಿಲಿ (ಕಿಟಕಿ ಬಾಗಿಲುಗಳು) ಅಲೆಯಾ (ಮರೀಚಿಕೆ) ಪುತುಲೆರ್ ಬಿಯೆ (ಗೊಂಬೆ ಮದುವೆ) ಝರ್ (ಚಂಡಮಾರುತ) ಪಿಲೆ ಪಾಟ್ಕ ಪುತುಲೇರ್ ಬಿಯೆ ( ಮಕ್ಕಳಿಗಾಗಿ ಕವನ ಮತ್ತು ನಾಟಕಗಳು) ಶಿಲ್ಪಿ (ಕಲಾವಿದ)
ಲೇಖನಗಳು – ಯುಗ್ ವಾಣಿ (ಯುಗದ ಸಂದೇಶ) ಜಿಂಗೆ ಫೂಲ್ ದುರ್ದಿನೇರ್ ಯಾತ್ರಿ (ದುರ್ದಿನದಲ್ಲಿಯಾತ್ರಿಕ) ರುದ್ರ ಮಂಗಲ್, ಧೂಮಕೇತು
 
ನಜರುಲ್‍ರವರು ಬಂಗಾಳಿ ಭಾಷೆಯ ಮೊಟ್ಟಮೊದಲ ಗಜಲ್ ಬರಹಗಾರರಾದರು. ಅಲ್ಲಿಯವರೆಗೂ, ಗಜûಲ್ ಪರ್ಶಿಯನ್ ಮತ್ತು ಉರ್ದುನಲ್ಲಿ ಮಾತ್ರ ಇತ್ತು. ಜೊತೆಗೆ ಇಸ್ಲಾಮಿಕ್ ಹಾಡುಗಳನ್ನು ಬಂಗಾಳಿ ಸಂಗೀತಕ್ಕೆ ಅಳವಡಿಸಿದರು. ಬಾಂಗ್ಲಾದೇಶದಲ್ಲಿ ಇಂದಿಗೂ ಆ ಹಾಡುಗಳು ಜನಪ್ರಿಯವಾಗಿವೆ. ಅಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ಅವರು ಕಾಳಿ ಕೀರ್ತನೆಗಳನ್ನು, ಶ್ಯಾಮ ಸಂಗೀತ (ಕೃಷ್ಣನ ಗೀತೆಗಳು), ಭಜನ್ ಮತ್ತು ಇತರೆ ಕೀರ್ತನೆಗಳನ್ನು ಬರೆದರು.

ಸ್ವಾತಂತ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಜ್ರುಲ್ರವರು ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದರು.
ಅವರ ನಾರಿ ಕವಿತೆಯಲ್ಲಿ ಈ ರೀತಿ ಬರೆದಿದ್ದಾರೆ:
ಹಾಡುವೆ ನಾ ಸಮಾನತೆಯ ಹಾಡ;
ಲಿಂಗ ವ್ಯತ್ಯಾಸವೆನ್ನುವುದು ನನ್ನ ದೃಷ್ಟಿಯಲಿ
ಕಡೆಗಣಿಸಬಹುದಾದ ವಿಷಯ.
ವಿಶ್ವದಲ್ಲಿ ಮಹಾನವಾಗಿರುವುದೆಲ್ಲ,
ಎಲ್ಲ ಉಪಯುಕ್ತ ಮತ್ತು ಒಳ್ಳೆಯ ಕಾರ್ಯಗಳು
ಅರ್ಧದ ಗೌರವ ಸ್ತ್ರೀಗೆ ಸಲ್ಲಬೇಕು
ಉಳಿದರ್ಧ ಮಾತ್ರ ಪುರುಷನಿಗೆ ಸಲ್ಲಬೇಕು.

ಅಷ್ಟು ಮಾತ್ರವಲ್ಲದೆ ಅವರು ಎಲ್ಲೆಡೆ ಸ್ತ್ರೀ ಪುರುಷರಿಬ್ಬರ ಪಾತ್ರಗಳ ಬೆರಕೆಯನ್ನು ಮತ್ತು ಜೀವನದಲ್ಲಿ ಇಬ್ಬರ ಮಹತ್ವವನ್ನು ಸಾರಿದ್ದಾರೆ. ಸ್ತ್ರೀ ಮತ್ತು ಪುರುಷರಿಬ್ಬರು ಒಂದು ಬಂಡಿಯ ಎರಡು ಗಾಲಿಗಳಂತೆ ಎಂದಿದ್ದಾರೆ.
 
ಸ್ತ್ರೀಯರ ಬಗೆಗಿನ ಅವರ ಗೌರವ ಅದ್ವಿತೀಯವಾಗಿತ್ತು. ಅವರ ಕವನ ಬರಾಂಗನ (ವೇಶ್ಯೆ) ಯಲ್ಲಿ ವಾರಾಂಗನೆಯನ್ನು ತಾಯಿ ಎಂದು ಕರೆದು ಸಂಪ್ರದಾಯವಾದಿ ಸಮಾಜನ್ನು ದಿಗ್ಭ್ರಾಂತಗೊಳಿಸಿದರು. ಅವರು “ವೇಶ್ಯೆಯೂ ಸಹ ಮನುಷ್ಯಳೇ, ಅವರೂ ಸಹ ನಮ್ಮ ತಾಯಂದಿರ, ಅಕ್ಕಂದಿರ ಸಮೂಹಕ್ಕೆ ಸೇರಿಕೊಳ್ಳುತ್ತಾರೆ” ಎಂದಿದ್ದಾರೆ. ಅವರ ಕವನ ಬರಾಂಗನದಲ್ಲಿ ಈ ರೀತಿ ಹೇಳಿದ್ದಾರೆ:
ತಾಯಿ, ನಿನ್ನನ್ನು ವಾರಂಗನೆಯೆಂದು ಕರೆಯುವರು ಯಾರು?
ನಿನ್ನನ್ನು ಉಗುಳುವವರು ಯಾರು?
ಬಹುಶಃ ನೀನೂ ಸಹ ಸೀತೆಯಂತೆ
ಪವಿತ್ರಳಾದ ತಾಯಿಯಿಂದಲೇ ಹಾಲನ್ನು ಕುಡಿದಿದ್ದೀಯಾ,
ಅಪವಿತ್ರ ತಾಯಿಯ ಮಗ ಕಾನೂನುಬಾಹಿರನಾದರೆ
ಅಪವಿತ್ರ ತಂದೆಯ ಮಗನೂ ಅಷ್ಟೆ!
ಇದು ಅವರ ಧೀರೋದಾತ್ತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ಸ್ತ್ರೀ ಸಮಾನತೆಯನ್ನೆ ಅಂಗೀಕರಿಸದ ಸಮಾಜದಲ್ಲಿ ವೇಶ್ಯೆಯನ್ನು ತಾಯಿ ಎಂದು ಕರೆಯುವುದು ಸಾಮಾನ್ಯವೇನಾಗಿರಲಿಲ್ಲ.
 
ಹಿಂದು-ಮುಸ್ಲಿಂ ಐಕ್ಯತೆಯನ್ನು, ಮಾನವೀಯತೆಯನ್ನು ಪ್ರತಿಪಾದಿಸಿದ ಅವರು ಈ ರೀತಿ ಹೇಳಿದ್ದಾರೆ:
ಹಿಂದು ಸಹೋದರನೇ ಬಾ. ಮುಸಲ್ಮಾನ್ ಸಹೋದರನೇ ಬಾ. ಬೌದ್ಧ, ಕ್ರಿಶ್ಚಿಯನ್ ಸಹೋದರನೇ ಬಾ. ಎಲ್ಲ ಅಡೆತಡೆಗಳನ್ನು ಮೀರೋಣ. ನಮ್ಮೆಲ್ಲ ಸಣ್ಣತನಗಳನ್ನು, ಸುಳ್ಳುಗಳನ್ನು, ಸ್ವಾರ್ಥಗಳನ್ನು ಶಾಶ್ವತವಾಗಿ ತೊರೆಯೋಣ. ಸಹೋದರರನ್ನು ಸಹೋದರರೆಂದು ಕರೆಯೋಣ. ಇನ್ನೆಂದೂ ಜಗಳವಾಡದಿರೋಣ.”
 
“ಎಲ್ಲ ದೇಶಗಳ ಮತ್ತು ಎಲ್ಲಾ ಕಾಲಗಳ ಜನತೆ ಒಟ್ಟಾಗಬೇಕು. ಮಾನವೀಯತೆಯ ಮಹಾನ್ ಒಕ್ಕೂಟವಾಗಬೇಕು. ಒಂದು ಮಹಾನ ಐಕ್ಯತೆಯ ಕೊಳಲ ವಾದನವನ್ನು ಎಲ್ಲರೂ ಕೇಳಿಸಿಕೊಳ್ಳಲಿ. ಒಂದು ಹೃದಯಕ್ಕೆ ನೋವಾದರೂ ಎಲ್ಲ ಹೃದಯಗಳು ಸಮಾನವಾಗಿ ಸ್ಪಂದಿಸಬೇಕು. ಒಬ್ಬ ವ್ಯಕ್ತಿ ಅಪಮಾನಿತನಾದರೂ, ಅದು ಇಡೀ ಮನುಕುಲದ ಅಪಮಾನ, ಎಲ್ಲರಿಗೂ ಅಪಮಾನವೆಂದು ಪರಿಗಣಿಸಬೇಕು.”
 
ಅವರ ಶ್ರೀಮಂತ ಭಾಷೆ, ಹೊಸ ಶೈಲಿ, ಉತ್ಸಾಹ ಇವೆಲ್ಲವೂ ಯುವ ಓದುಗರ ಅಪಾರ ಮೆಚ್ಚುಗೆಯನ್ನು ಗಳಿಸಿತು. ನಜ್ರುಲ್ರವರ ಬರಹದಲ್ಲಿ ಪ್ರೀತಿ, ಸ್ವಾತಂತ್ರ್ಯ ಮತ್ತು ಕ್ರಾಂತಿಯನ್ನು ಕಾಣಬಹುದು, ಮಾನವೀಯ ಮೌಲ್ಯಗಳನ್ನು ಕಾಣಬಹುದು. ಧಾರ್ಮಿಕ ಮೂಢಾಚರಣೆಗಳ, ಮೂಲಭೂತವಾದದ, ಲಿಂಗ ಅಸಮಾನತೆಯ, ಕೋಮುವಾದದ ಖಂಡನೆಯನ್ನು ಕಾಣಬಹುದು. ಇಂದಿಗೂ ಸಹ ಬಂಗಾಳಿ ಸಮುದಾಯದಲ್ಲಿ (ಭಾರತ ಮತ್ತು ಬಾಂಗ್ಲಾದೇಶ ಎರಡರಲ್ಲಿಯೂ) ನಜ್ರುಲ್ ಗೀತೆಗಳು ಬಹಳ ಪ್ರಸಿದ್ಧಿಯಾಗಿವೆ ಮತ್ತು ಮನೆಮಾತಾಗಿವೆ.

- ಡಾ।। ಸುಧಾ.ಜಿ

ಕಾಮೆಂಟ್‌ಗಳಿಲ್ಲ: