Pages

ಕಥೆ: "ಯಾರು ಧನ್ಯ?"

ವರುಷಕ್ಕೊಮ್ಮೆ ಬರುವ ಊರ ಉತ್ಸವದಂದು ಗ್ರಾಮಸ್ಥರೆಲ್ಲ ದೇವಾಲಯದ ಮುಂದೆ ಸಾಲುಸಾಲುಗಳಲ್ಲಿ ಕಿಕ್ಕಿರಿದು ನಿಂತಿದ್ದರು. ಪ್ರತಿಯೊಬ್ಬರೂ ದೊಡ್ಡ ದೊಡ್ಡ ಹಾಲಿನ ಪಾತ್ರೆಗಳನ್ನು ಹಿಡಿದು ದೇವರ ಅಭಿಷೇಕ ಮಾಡಿಸಲು ಕಾತರರಾಗಿದ್ದರು. ಅಂದು ಊರಿನ ಯಾರ ಮನೆಯಲ್ಲೂ ಒಂದು ತೊಟ್ಟು ಹಾಲು ಸಿಗುವುದಿಲ್ಲ. ಅಭಿಷೇಕ ಮುಗಿದ ನಂತರ ದೇವಾಲಯದಲ್ಲಿ ಉಣಬಡಿಸುವ ಪ್ರಸಾದವೇ ಊರಿನವರಿಗೆಲ್ಲಾ ಅಂದಿನ ಭೋಜನ. ಅದುವರೆಗೂ ಒಂದು ತೊಟ್ಟೂ ನೀರು ಕುಡಿಯದ, ಇನ್ನೊಬ್ಬರಿಗೂ ಕುಡಿಸದ ಆ ಜನರಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತಿತ್ತು.
ಆದರೆ, ಜನಸ್ತೋಮದಲ್ಲಿ ಅಮ್ಮನ ಸೆರಗು ಹಿಡಿದು ನಿಂತಿದ್ದ ಅಶೋಕನಲ್ಲಿ ಮಾತ್ರ ಒಂದು ರೀತಿಯ ಅತೃಪ್ತಿ ಕಾಣುತಿತ್ತು. ಕಾರಣ, ಅವನಿಗೆ ಕಥೆ ಹೇಳುವ ಪ್ರೀತಿಯ ಅಜ್ಜನಿಗೆ ಆರೋಗ್ಯ ಸರಿಯಿರಲಿಲ್ಲ. ದಿಕ್ಕುದೆಸೆಯಿಲ್ಲದ ಆ ಅಜ್ಜ ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿದ್ದ. ಮಕ್ಕಳ ಕಂಡರೆ ಕುಣಿಯುವ ಅಜ್ಜನು, ಕಥೆ ಹೇಳುತ್ತಾ, ತಾಳ ಹಾಕುತ್ತ, ಹಾಡುತ್ತಾ ಮಕ್ಕಳಲ್ಲಿ ಮಗುವಾಗುತ್ತಿದ್ದನು. ಮಕ್ಕಳಿಗಿಂತ ಹೆಚ್ಚು ಖುಶಿ ಪಡುತ್ತಾ ತನ್ನ ಒಂಟಿತನ ಮರೆಯುತ್ತಿದ್ದನು. ಆದ್ದರಿಂದ ಊರಿನ ಮಕ್ಕಳೆಲ್ಲಾ ಯಾವಾಗಲೂ ಅಜ್ಜನ ಸುತ್ತ ಗುಂಪುಗೂಡುತ್ತಿದ್ದರು. ಅವರಲ್ಲಿ ಅಶೋಕನೂ ಕೂಡ. ಜೊತೆಗೆ ಅಶೋಕನಿಗೆ ಅಜ್ಜನ ಬಗ್ಗೆ ವಿಶೇಷ ಮಮತೆ.
ಬೆಳಿಗ್ಗೆ ಅಜ್ಜನಿಗಾಗಿ ಅಶೋಕ ಗುಡಿಸಲಿಗೆ ಹೋದಾಗ ಜ್ವರದಿಂದ ಮಲಗಿದ್ದ ಅಜ್ಜ ನೆನ್ನೆಯಿಂದಲೂ ಏನೂ ತಿನ್ನದಿರುವುದನ್ನು ತಿಳಿದು ಮರುಗಿದ. ಕೂಡಲೇ ಏನೋ ಹೊಳೆದಂತಾಗಿ ಮನೆಗೆ ಬಂದು ತಿಂಡಿಗಾಗಿ ಹುಡುಕಾಡಿದ. ಆದರೆ ಮನೆಯಲ್ಲಿ ಒಲೆಯನ್ನೇ ಉರಿಸಿರಲಿಲ್ಲ. ಹಾಲನ್ನಾದರೂ ಕೊಡು ಎಂದು ಅಮ್ಮನನ್ನು ಪೀಡಿಸಿದರೆ ಅಭಿಷೇಕವಾಗುವವರೆಗೂ ಕೊಡೆನೆಂದು, ಅದಕ್ಕೂ ಮುಂಚೆ ಹಟ ಮಾಡಿದರೆ ದೇವರಿಗೆ ಕೋಪ ಬಂದು ಶಾಪ ಕೊಡುವನೆಂದು ಹೆದರಿಸಿದಳು. 
ವಿಧಿಯಿಲ್ಲದೇ ಅಭಿಷೇಕವಾಗುವ ತನಕ ಕಾಯುವುದಾಗಿ ಅಮ್ಮನ ಜೊತೆಯೇ ನಿಂತಿದ್ದ. ದೇವರಿಗೆ ಹಾಲು ಕುಡಿಸಿದ ನಂತರ ಉಳಿದ ಹಾಲು ಯಾವಾಗ ತನ್ನ ಕೈಸೇರುವುದೆಂದು ಅಶೋಕನ ಮನಸ್ಸು ತುಡಿಯುತಿತ್ತು. ಗರ್ಭಗುಡಿಗೆ ಹತ್ತಿರವಾದಷ್ಟು ಅಶೋಕನಿಗೆ ಸಂತಸವಾಗುತ್ತಿತ್ತು. ಸದಾ ಕಲ್ಲಾಗಿರುವ ಈ ದೇವರು ಎಲ್ಲಾ ಹಾಲನ್ನು ಹೇಗೆ ಕುಡಿಯುವನೆಂದು ಕುತೂಹಲ ಉಂಟಾಗಿ ಬಗ್ಗಿ ನೋಡಿದ. ಒಳಗೆ ಕಂಡು ಬಂದ ದೃಶ್ಯ ಅವನಿಗೆ ಸಹಿಸಲಾಗಲಿಲ್ಲ. ದೊಡ್ಡ ಮಡಕೆಯ ಹಾಲನ್ನು ವಿಗ್ರಹದ ಮೇಲೆ ಧಾರಾಕಾರವಾಗಿ ಸುರಿಯುತ್ತಿದ್ದರು. ಆ ಹಾಲು ಸಣ್ಣ ದಾರಿಯ ಮೂಲಕ ಹೊರಗೆ ಹರಿದುಹೋಗುತ್ತಿತ್ತು. “ಇದೇನಮ್ಮ ಹಾಲನ್ನೆಲ್ಲಾ ಹೀಗೆ ಕೆಳಗೆ ಸುರಿಯುತ್ತಿದ್ದಾರೆ, ದೇವರು ಹಾಲು ಕುಡಿಯುತ್ತಿಲ್ಲ” ಎಂಬ ಅಶೋಕನ ಮುಗ್ಧ ಪ್ರಶ್ನೆಗೆ ಅಮ್ಮ, “ತಲೆಹರಟೆ ಮಾಡಬೇಡ, ಸುಮ್ಮನೆ ನಿಂತುಕೊ” ಎಂದು ಗದರಿಸಿ ಸುಮ್ಮನಾಗಿಸಿದಳು.
‘ಎಷ್ಟೊಂದು ಹಾಲು ಚೆಲ್ಲುತ್ತಿದ್ದಾರಲ್ಲ’ ಎಂದುಕೊಂಡು ಅಶೋಕ ಕಿಟಕಿಯ ಬಳಿ ಹೋಗಿ ಹೊರನೋಡಿದ. ಆ ಹಾಲು ಒಂದು ಸಣ್ಣ ತೊಟ್ಟಿಯಲ್ಲಿ ತುಂಬಿ ಹೊರಚೆಲ್ಲುತ್ತಿತ್ತು. ಪಕ್ಕದಲ್ಲೇ ಪೂಜಾರಿಯೊಬ್ಬ ಪ್ರಸಾದ ತಯಾರಿಸಲು ಹಾಲನ್ನು ಬೇಕಾಬಿಟ್ಟಿಯಾಗಿ ಚೆಲ್ಲುತ್ತಾ ಇನ್ನೊಂದು ತಪ್ಪಲೆಗೆ ಸುರಿಯುತ್ತಿದ್ದ.
ಎಷ್ಟು ಕಾದರೂ ಹಾಲು ಖಂಡಿತ ಸಿಗುವುದಿಲ್ಲವೆಂದು ಅರಿತ ಪುಟ್ಟ ಹುಡುಗ ಸ್ವಲ್ಪವೂ ತಡ ಮಾಡದೆ ಅಮ್ಮನತ್ತ ನುಗ್ಗಿ ಹಾಲಿನ ಪಾತ್ರೆ ಕಸಿದು, ಅಮ್ಮ ಕೂಗುತ್ತಿದ್ದರೂ ನಿಲ್ಲದೆ, ಹಿಡಿಯಲು ಬಂದವರ ಕೈಗೆ ಸಿಗದೆ ಓಡಿದ. ಅಜ್ಜನ ಮನೆಗೆ ಹೋಗಿ ಲೋಟಕ್ಕೆ ಹಾಲು ಬಗ್ಗಿಸಿ ಅಜ್ಜನನ್ನು ಎಬ್ಬಿಸಿ ಹಾಲು ಕುಡಿಸಿದ. ಕಣ್ಣಲ್ಲಿ ನೀರು ತಂದುಕೊಂಡ ಅಜ್ಜ ಅಶೋಕನ ಹಣೆಗೆ ಮುತ್ತಿಟ್ಟ. ಇನ್ನು ತನ್ನಮ್ಮ ಹೊಡೆದರೂ, ಬೈದರೂ ಪರವಾಗಿಲ್ಲ, ವ್ಯರ್ಥವಾಗುತ್ತಿದ್ದ ಹಾಲನ್ನು ಹಸಿವಾಗಿದ್ದ ಅಜ್ಜನಿಗೆ ಕುಡಿಸಿದೆ ಎಂದು ಅಶೋಕನಲ್ಲಿ ಧನ್ಯತಾ ಭಾವ ಮೂಡಿತು. 

- ದೀಪಶ್ರೀ ಜೆ

ಕಾಮೆಂಟ್‌ಗಳಿಲ್ಲ: