Pages

ಆರೋಗ್ಯಧಾಮ - ಅರಳುವ ಹೂಗಳು 1


[ಇಪ್ಪತೊಂದನೆ ಶತಮಾನಕ್ಕೆ  ನಾವು  ಕಾಲಿಟ್ಟರೂ, ನಮ್ಮ ಸಮಾಜದಲ್ಲಿನ್ನೂ ಹೆಣ್ಣಿನ ಬಗೆಗಿನ ಪುರುಷಪ್ರಧಾನ ಧೋರಣೆ ಬದಲಾಗಿಲ್ಲ. ಸ್ತ್ರೀಯರು ಪುರುಷರ ಭೋಗದ ವಸ್ತುಗಳು, ಸಂತಾನೋತ್ಪತ್ತಿಯ ಸಾಧನಗಳು ಎಂದೇ ಪರಿಗಣಿಸಲಾಗುತ್ತಿದೆ. ನಾಗರೀಕತೆಯ ಬೆಳವಣಿಗೆಯೊಂದಿಗೆ ಸ್ತ್ರಿ ಸಮಾನತೆ, ಮಹಿಳಾ ವಿಮೋಚನೆಯ ವಿಚಾರಗಳು ಬೆಳೆಯುತ್ತಿದ್ದು, ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಆದರೆ ಸ್ತ್ರೀಯರ ಬಗೆಗಿನ ಕೀಳು ಧೋರಣೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ನಮ್ಮ ಸಮಾಜದಲ್ಲಿ ಸ್ತ್ರೀಯರನ್ನು ಅಜ್ಞಾನದಲ್ಲಿಯೆ ಇಡಲಾಗಿದೆ. ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಸಹ ಅವರಿಗೆ ಅರಿವಿರುವುದಿಲ್ಲ. ವಿದ್ಯಾವಂತ ಹೆಣ್ಣುಮಕ್ಕಳಲ್ಲಿಯೂ ಸಹ ಈ ಸಮಸ್ಯೆಯನ್ನು ಕಾಣಬಹುದು. ಹೆಣ್ಣು ಮಕ್ಕಳಿಗೆ ತಮ್ಮ ದೇಹದ ಬಗ್ಗೆ, ಅಂಗಾಂಗಗಳ ಬಗ್ಗೆ, ಅವುಗಳ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನೀಡಿಲ್ಲ. ಜೊತೆಗೆ, ಆ ಬಗ್ಗೆ ಪ್ರಶ್ನೆ ಕೇಳುವುದೇ ತಪ್ಪು ಎಂಬ ಧೋರಣೆಯನ್ನು ಸಮಾಜ ಸೃಷ್ಟಿಸಿದೆ.
ಈ ಕಾರಣದಿಂದಲೇ ಹೆಣ್ಣುಮಕ್ಕಳು ಸುಲಭವಾಗಿಯೇ ಟಿ.ವಿ, ಸಿನೆಮಾ ಮತ್ತು ಇತರ ಮಾಧ್ಯಮಗಳಿಂದ, ಸ್ನೇಹಿತರಿಂದ ಕೇಳುವುದನ್ನೆಲ್ಲಾ, ನೋಡುವುದನ್ನೆಲ್ಲಾ ನಂಬುತ್ತಾ ಹೋಗುತ್ತಾರೆ. ಇದರಿಂದ ಹಲವಾರು ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ತಮ್ಮ ದೈಹಿಕ ಬೆಳವಣಿಗೆಯ ಬಗ್ಗೆ ಸರಿಯಾಗಿ ಅರಿವಿರದಂತಹ ಮಕ್ಕಳು ಅನವಶ್ಯಕ ಸಂಕೋಚ, ನಾಚಿಕೆ, ಕೀಳರಿಮೆ ಬೆಳೆಸಿಕೊಳ್ಳುತ್ತಾರೆ; ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುತ್ತಾರೆ.
ಅದರಿಂದ ಆಗುವಂತಹ ಅನಾಹುತಗಳೆಷ್ಟೋ. ಈ ಅಜ್ಣಾನದ ಕಾರಣದಿಂದಲೇ ಹೆಣ್ಣು ಮಕ್ಕಳು ಹಲವಾರು ಅನಾರೋಗ್ಯಗಳಿಗೆ, ಸಾಮಾಜಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ.
ಹೆಣ್ಣುಮಕ್ಕಳಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಪ್ರಕೃತಿಸಹಜವಾದದ್ದು. ಈ ಸಹಜ ಬದಲಾವಣೆಗಳು ಸರಿಯಾಗಿ ಅರಿತುಕೊಂಡರೆ, ಹೆಣ್ಣುಮಕ್ಕಳು ಸಹಜ ರೀತಿಯ ಜೀವನವನ್ನು ನಡೆಸಬಹುದು. ಬದಲಾವಣೆಗಳಿಗೆ ತಮ್ಮನ್ನೇ ಅಳವಡಿಸಿಕೊಂಡು ಬೆಳೆಯಬಹುದು ಮತ್ತು ಬದುಕಬಹುದು. ಈ ಬಗ್ಗೆ ಹೆಣ್ಣುಮಕ್ಕಳಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ, ಅದು ಅವರ ಬೆಳವಣಿಗೆಗೆ ಪೂರಕವಾಗಲಿ ಎಂಬುದೇ ನಮ್ಮ ಆಶಯ.

ಹದಿಹರೆಯದಲ್ಲಿ ಹೆಣ್ಣುಮಕ್ಕಳಲ್ಲಾಗುವ ಬದಲಾವಣೆ

ಹುಡುಗಿಯರು ಬಾಲ್ಯಾವಸ್ಥೆಯನ್ನು ದಾಟಿದ ನಂತರದ ಘಟ್ಟವನ್ನು ಕಿಶೋರಾವಸ್ಥೆ ಅಥವಾ ಹದಿಹರೆಯ ಎನ್ನುತ್ತೇವೆ. ಈ ಹಂತದಲ್ಲಿ ಹೆಣ್ಣುಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುವುದು ಸಹಜ.
ಹುಡುಗಿಯರು ದೈಹಿಕವಾಗಿ ಬೆಳೆಯಲಾರಂಭಿಸುತ್ತಾರೆ. ಅವರ ಕೈ ಮತ್ತು ಕಾಲುಗಳು ಬೆಳೆಯಲಾರಂಭಿಸುತ್ತವೆ. ಹೃದಯ, ಶ್ವಾಸಕೋಶಗಳು, ಜಠರ, ಮೂತ್ರಪಿಂಡಗಳು ಮತ್ತು ಮಾಂಸಖಂಡಗಳು ಬೆಳೆಯತೊಡಗುತ್ತವೆ; ವಯಸ್ಕರ ಗಾತ್ರವನ್ನು ತಲುಪುತ್ತವೆ. ತಲೆಯ ಗಾತ್ರ ಶೇಕಡ 90 ರಷ್ಟು 5 ವರ್ಷದೊಳಗೆ ಬೆಳೆದಿರುತ್ತದೆ. ಉಳಿದ ಶೇಕಡ 10ರಷ್ಟು ಹದಿಹರೆಯದಲ್ಲಿ ಬೆಳೆಯುತ್ತದೆ. ಪಚನಕ್ರಿಯೆ, ಉಸಿರಾಟದ ಕ್ರಿಯೆ ಮತ್ತು ರಕ್ತ ಪರಿಚಲನಾಕ್ರಿಯೆ ತೀವ್ರವಾಗುತ್ತದೆ; ಬೆಳೆಯುತ್ತಿರುವ ಮಕ್ಕಳ ಅವಶ್ಯಕತೆಗೆ ಅನುಸಾರವಾಗಿ ಶಕ್ತಿಯನ್ನು ನೀಡುತ್ತದೆ. ಮುಖದ ಚಹರೆ ಬದಲಾಗುತ್ತದೆ - ಮೂಗು ದೊಡ್ಡದಾಗುತ್ತದೆ, ಬಾಯಿ ಅಗಲವಾಗುತ್ತದೆ, ಗದ್ದ ಪ್ರಮುಖವಾಗಿ ಕಾಣಿಸತೊಡಗುತ್ತದೆ. ಮಾಂಸಖಂಡಗಳ ಬೆಳವಣಿಗೆಯಿಂದ ಎತ್ತರವಾಗುತ್ತಾಳೆ, ದೇಹದ ಕೊಬ್ಬು ಕರಗುತ್ತದೆ.
ಈ ಹಂತದಲ್ಲಿ ಸಂತನೋತ್ಪತ್ತಿಯ ಅಂಗಾಂಗಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಸಂತನೋತ್ಪತ್ತಿಗೆ ಅವಶ್ಯವಿರುವ ಆಂತರಿಕ ಮತ್ತು ಬಾಹ್ಯ ಅಂಗಾಂಗಗಳನ್ನು ಸೇರಿಸಿ ಸಂತಾನೋತ್ಪತ್ತಿಯ ರಚನೆ ಎನ್ನಲಾಗಿದೆ. ಮಗುವಿನ ಹುಟ್ಟಿನ ಜೊತೆಗೆ ಬರುವ ಅಂಗಾಂಗಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಋತುಸ್ರಾವದ ಹಂತದವರೆಗೂ ನಿಷ್ಕ್ರಿಯವಾಗಿರುತ್ತದೆ.
ಹದಿಹರೆಯದ ಹಂತದಲ್ಲಿ ಕೇಂದ್ರ ನರಮಂಡಲ ವ್ಯವಸ್ಥೆ ಕೆಲವು ಹಾರ್ಮೋನುಗಳ ಚಟುವಟಿಕೆಗಳನ್ನು ಆರಂಭಿಸುತ್ತದೆ.  ಈ ಹಾರ್ಮೋನುಗಳ ಸ್ರವಿಕೆ ದೈಹಿಕ ಮತ್ತು ಲೈಂಗಿಕ  ಬದಲಾವಣೆಗಳನ್ನು ತಂದು ಸಂತಾನೋತ್ಪತ್ತಿಗೆ ಅಂಗಾಂಗಗಳನ್ನು ಸಿದ್ಧಗೊಳಿಸುತ್ತದೆ.
ಈ ಸಮಯದಲ್ಲಿಯೇ ಹುಡುಗಿಯರಲ್ಲಿ ಸ್ತನಗಳು ಮತ್ತು ಅದರ ಕಪ್ಪು ಭಾಗ (ಮೊಲೆ ತೊಟ್ಟು) ಬೆಳೆಯಲಾರಂಭಿಸುತ್ತವೆ. ಗುಪ್ತಾಂಗಗಳ ಮೇಲೆ, ಕಂಕುಳಲ್ಲಿ ಕೂದಲು ಬೆಳೆಯುತ್ತದೆ. ಬಿಳಿಮುಟ್ಟು ಆಗಲಾರಂಭಿಸುತ್ತದೆ. ಇದರೊಂದಿಗೆ ಅಂಡನಾಳ, ಅಂಡಕೋಶ ಇತ್ಯಾದಿಗಳೂ ಬೆಳೆಯಲಾರಂಭಿಸುತ್ತವೆ.
ಹುಡುಗಿಯರು ಮಾನಸಿಕವಾಗಿಯೂ ಸಹ ಬೆಳೆಯಲಾರಂಭಿಸುತ್ತಾರೆ. ತಿಳುವಳಿಕೆ, ವ್ಯವಹಾರ ಜ್ಞಾನ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಹುಡುಗಾಟ ಕಡಿಮೆಯಾಗಿ ಗಾಂಭೀರ್ಯ ಮೂಡುತ್ತದೆ. ಪ್ರಪಂಚವನ್ನು ಅರಿಯಬೇಕೆನ್ನುವ ಕುತೂಹಲ, ಹುಮ್ಮಸ್ಸು ಮೂಡುತ್ತದೆ; ದೊಡ್ಡವಳಾಗುತ್ತಿದ್ದೇನೆ ಧೈರ್ಯ ಬರುತ್ತದೆ; ಅತ್ಯಂತ ಕ್ರಿಯಾಶೀಲರಾಗುತ್ತಾರೆ.
ಆದರೆ, ತನ್ನ ದೈಹಿಕ ಬೆಳವಣಿಗೆಯ ಬಗ್ಗೆ ಸರಿಯಾಗಿ ಅರಿವಿರದಿದ್ದರೆ ನಾಚಿಕೆ, ಸಂಕೋಚ ಬೆಳೆಯುತ್ತದೆ. ಯಾರೊಂದಿಗೂ ಸೇರದೆ ಒಂಟಿಯಾಗಿರುವ ಸ್ವಭಾವ ಬೆಳೆಯುತ್ತದೆ. ಕುಟುಂಬದವರು ಈ ಬಗ್ಗೆ ಸರಿಯಾಗಿ ವಿವರಿಸದೆ ಇತಿಮಿತಿಗಳನ್ನು ಹಾಕುವುದರಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡೆನೆಂಬ ಭಾವದಿಂದ ತಂದೆ-ತಾಯಿಯರಲ್ಲಿ ಸಿಟ್ಟು, ಸಿಡುಕು ಮೂಡುತ್ತದೆ. ಸ್ನೇಹಿತೆಯರಲ್ಲಿ, ಉಪಾಧ್ಯಾಯರಲ್ಲಿ ಸಂಬಂಧ ತೀವ್ರವಾಗುತ್ತದೆ. ಹುಡುಗರ ಬಗ್ಗೆ ಆಕರ್ಷಣೆಯೂ ಬೆಳೆಯುತ್ತದೆ. ಆದರೆ ಈ ಮಾನಸಿಕ ಬೆಳವಣಿಗೆಗಳು ಎಲ್ಲ ಹೆಣ್ಣುಮಕ್ಕಳಲ್ಲಿಯೂ ಒಂದೇ ರೀತಿ ಇರುತ್ತವೆ ಎಂದರೆ ತಪ್ಪಾಗುತ್ತದೆ. ಈ ಬೆಳವಣಿಗೆಗಳಲ್ಲಿ ಆ ಹೆಣ್ಣುಮಗಳ ಕುಟುಂಬ, ಶಾಲೆ, ಗೆಳತಿಯರು, ಬಂಧುಗಳು, ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.  ಈ ವಿಷಯಗಳ ಬಗ್ಗೆ ವಿವರಿಸಿ ಹೇಳುವುದರಿಂದ ಅವರಲ್ಲಾಗುವ ಅಸಹಜ ಬದಲಾವಣೆಗಳನ್ನು, ಹಾನಿಕಾರಕ ಬೆಳವಣಿಗೆಗಳನ್ನು ತಡೆಗಟ್ಟಬಹುದು.
(ಮುಂದಿನ ಸಂಚಿಕೆಯಲ್ಲಿ – ಋತುಸ್ರಾವ ಎಂದರೇನು?)
- ಡಾ. ಪೂರ್ಣಿಮಾ ಮತ್ತು ಡಾ. ಸುಧಾ ಜಿ 

ಕಾಮೆಂಟ್‌ಗಳಿಲ್ಲ: