Pages

ಕವನ - ಅಕ್ಕ



ಎಂಥ ಎದೆಗಾರಿಕೆಯೇ
ಅಕ್ಕ ನಿನ್ನದು
ನಡೆದುಬಿಟ್ಟೆ
ಹುಟ್ಟುಡುಗೆಯಲಿ
ನಾನು ನನದೆಂಬ
ಲವಲೇಶ ನಿನಗಿಲ್ಲ
ಮೊಲೆ ಮುಡಿಗಳ
ಕಾಣ್ವರೆಂಬ ಅಂಜಿಕೆಯಿಲ್ಲ...

ಕಟ್ಟೆಳೆಯ ಧಿಕ್ಕರಿಸಿ ಹೊರಟೆ
ಇಹದ ಗಂಡ ಸಾವ ಕೆಡುವನೆಂದು
ಪರದ ಗಂಡನ ಸಂಗ ಬಯಸಿ
ಅನಭಾವದ ಪತಿಗೆ ಚಿತ್ತವಿತ್ತೆ
ಅದೇನು ಗುಂಡಿಗೆಯೇ ನಿನ್ನದು...

ಆಡುವ ಬಾಯಿಗೆ
ದೇವರಿಗೆ ಬಿಟ್ಟವಳಾದೆ
ಹೆಣ್ಣ ಜರಿವ ಜಗಕೆ
ದಿಟ್ಟ ಬೆಟ್ಟವಾದೆ
ಕಾಪಿಡುವ ಹೆಣ್ತನವ
ಎದೆಸೆಟೆಸಿ ತೆರೆದು ಮುಕ್ತವಾಗಿದೆ...

ಹೆಣ್ಣಿನಾತ್ಮಕೆ ಪ್ರತ್ಯಯದ ಮೂಲ
ಕುದಿಸದೇ ಕಾಯ ತಪಸ್ವಿಯಾದೆ
ಮಾಯದಾ ಬದುಕು ಕಳಚಿ
ಲೌಕಿಕಕೆ ಪರದೆ ಹಾಕಿ ವಿಮುಖವಾಗಿ
ಒಳಗಿನಂದಕೆ ಒಲಿದ ಪ್ರಭೆ...

ವಿರೂಪವನೊಲಿದ ಭವದ ಬಾಲೆ
ಛಲಕೆ ಹೆಸರಾದೆ
ಬಯಕೆಯ ಕತ್ತಲೆಯಾವರಿಸಿ
ಕೆಣಕಿದ ನಯನಗಳಾಟವ
ವಚನಾಮೃತದಿ ತೋಯಿಸಿ
ಮಣಿಸಿದ ಧೀರ ವನಿತೆ...

ಪ್ರಶ್ನೆಯಾಗಿ ಕಾಡುತಿರುವೆ
ಅಕ್ಕ ನಿನದೆಂಥ ಪರಿತ್ಯಾಗ
ಜಗದರಿವೆ ಹರಿದು
ಹೆರಳನೇಕೆ ಹರಡಿದೆ
ಇಹದ ಗಂಡಿನಾಟಕೆ
ಪರದ ಪತಿಯ ನಂಟೋ
ಜೀವಕಂಟಿದೊಡವೆ 
ಕಾಯ್ದೆ ಜತನದಿ...

ಉಡುತಡಿಯ ಕಿಡಿ
ಉರಿದುರಿದು ಬೆಳಗಿದೆ
ಸ್ತ್ರೀ ಕುಲದ ಹಣತೆ
ಜೀವ ಜಗದ ಪರಂಜ್ಯೋತಿ...
 - ಡಾ. ಸುವರ್ಣ 

ಕಾಮೆಂಟ್‌ಗಳಿಲ್ಲ: