[ಈ ಅಂಕಣದಲ್ಲಿ ನಾವು ಸಾಮಾನ್ಯತೆಯಿಂದ ಮಹಾನತ್ತೆಯತ್ತ ಸಾಗುತ್ತಿರುವ ಕಿರಿಯರು - ಹಿರಿಯರ ಬಗ್ಗೆ ವರದಿ ನೀಡಲಿಚ್ಛಿಸುತ್ತೇವೆ. ಹುಟ್ಟಿದಾಗಲೇ ಯಾರೂ ಮಹಾನರಾಗಿ ಹುಟ್ಟುವುದಿಲ್ಲ, ಮಹಾನತೆ ನಮ್ಮ ಕ್ರಿಯೆಗಳಿಂದಾಗುತ್ತದೆ. ಮಹಾನರಾದವರ ಸಾಧನೆಯ ಹಿಂದೆ ಶ್ರಮವಿದೆ, ದೃಢಸಂಕಲ್ಪವಿದೆ. ಪ್ರತಿಯೊಬ್ಬರು ಮನಸ್ಸು ಮಾಡಿದಲ್ಲಿ ಮಹಾನತೆಯತ್ತ ಸಾಗಬಹುದೆಂಬುದೇ ನಮ್ಮ ಅಭಿಪ್ರಾಯ.]
ಈ ಬಾರಿಯ ನಮ್ಮ ಕಥಾನಾಯಕ ರಿಯಾನ್ ಹ್ರೆಲ್‍ಜಾಕ್, ಕೆನಡಾದವನು. ಹುಟ್ಟಿದ್ದು ಮೇ 31, 1991. ಸೂಸನ್ ಮತ್ತು ಮಾರ್ಕ್ ಅವನ ತಾಯ್ತಂದೆಯರು ಈಗವನಿಗೆ 27 ವರ್ಷ. ಆದರೆ ಅವನು ಮಹಾನತೆಯತ್ತ ಸಾಗಲು ಆರಂಭಿಸಿದ್ದು ಕೇವಲ 6 ವರ್ಷದವನಿದ್ದಾಗ.
ಒಂದು ದಿನ ರಿಯಾನ್‍ನ ತರಗತಿಯ ಟೀಚರ್ ಆಫ್ರಿಕಾದಲ್ಲಿ ಬಹಳ ಕಷ್ಟವಿದೆ, ಕುಡಿಯಲು ಶುದ್ಧ ನೀರು ಸಿಗುವುದಿಲ್ಲ, ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕು, ಶುದ್ಧ ನೀರು ಸಿಗದೆ ಪ್ರತಿ ವರ್ಷ ಎಷ್ಟೊ ಸಾವಿರ ಮಕ್ಕಳು ಸಾಯುತ್ತಿದ್ದಾರೆ ಎಂದು ಹೇಳಿ, ಅಲ್ಲಿನ ಮಕ್ಕಳಿಗೆ ನೀರು ಒದಗಿಸಲು ಬಾವಿ ತೋಡಲು 70 ಡಾಲರ್‍ಗಳು ಬೇಕೆಂದರು. ಮನೆಗೆ ಬಂದ ಒಂದನೇ ತರಗತಿಯ ಪೋರ ತಾಯಿಯ ಬಳಿ 70 ಡಾಲರ್ ಬೇಕೆಂದ. ತಾಯಿಗೆ ಅದರ ಕಾರಣವನ್ನೂ ವಿವರಿಸಿದ. ಆದರೆ ತಾಯಿ ಅದು ದೊಡ್ಡ ಮೊತ್ತವೆಂದು, ಕೊಡಲು ಸಾಧ್ಯವಿಲ್ಲವೆಂದಳು. ಆದರೆ ರಿಯಾನ್ ಬಿಡಬೇಕಲ್ಲ. ಅವನ ತಾಯಿ ಅವನ ಮನಸ್ಸನ್ನು ಬೇರೆಡೆಗೆ ತಿರುಗಿಸಲು, “ನೀನು ಮಾಡುವ ಕೆಲಸಗಳನ್ನಲ್ಲದೆ ಇತರ ಮನೆಯ ಕೆಲಸಗಳನ್ನು ಮಾಡಿಕೊಟ್ಟರೆ, ನಿನಗೆ ಹಣವನ್ನು ಕೊಡುತ್ತೇನೆ” ಎಂದರು. ರಿಯಾನ್ ತಕ್ಷಣವೇ ‘ಮಾಡುತ್ತೇನೆ’ ಎಂದ. ಅಂದಿನಿಂದ ಅವನು ಶಾಲೆಯಿಂದ ಬಂದ ಮೇಲೆ ಹೊರಗಡೆ ತೋಟವನ್ನು ನೋಡಿಕೊಳ್ಳುವುದು, ಕಾರನ್ನು, ಕಿಟಕಿ-ಬಾಗಿಲುಗಳನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾರಂಭಿಸಿದ, ಅದೂ ಅವನ ಸೋದರರು ಆಟವಾಡುತ್ತಿದ್ದಾಗ ಅಥವಾ ಟಿವಿ ನೋಡುತ್ತಿದ್ದಾಗ. ಪ್ರತಿ ಬಾರಿಯೂ ತಾಯಿ ಕೊಟ್ಟ 2 ಡಾಲರ್‍ಗಳನ್ನು ಅವನು ಹಳೆಯ ಬಿಸ್ಕತ್ ಡಬ್ಬಿಯಲ್ಲಿ ಹಾಕಿಡುತ್ತಿದ್ದ.
ನಾಲ್ಕು ತಿಂಗಳುಗಳ ನಂತರ 75 ಡಾಲರ್‍ಗಳನ್ನು ಒಟ್ಟುಗೂಡಿಸಿದ. ಅದನ್ನು ತೆಗೆದುಕೊಂಡು ಶಾಲೆಗೆ ಹೋಗಿ, ಆಫ್ರಿಕಾದ ಜನರಿಗೆ ನೀರು ಒದಗಿಸಲೆಂದೇ ಅಸ್ತಿತ್ವಕ್ಕೆ ಬಂದಿದ್ದ ಕೆನಡಾದ ‘ವಾಟರ್ ಕ್ಯಾನ್’ ಎಂಬ ಸರ್ಕಾರಿಯೇತರ ಸಂಸ್ಥೆಯ ಸದಸ್ಯರಿಗೆ ನೀಡಿದ. ಅವರು 75 ಡಾಲರ್‍ಗಳಿಂದ ಹ್ಯಾಂಡ್ ಪಂಪ್ ಹಾಕಬಹುದಷ್ಟೇ, ಬಾವಿ ತೋಡಲು ಬೇಕಿರುವುದು 2500 ಡಾಲರ್‍ಗಳು ಎಂದು ಹೇಳಿದರು. ಒಂದೇ ಮನಸ್ಸಿನಿಂದ ರಿಯಾನ್ ‘ಸಂಗ್ರಹಿಸುತ್ತೇನೆ’ ಎಂದ. ಅವನ ಈ ದೃಢಸಂಕಲ್ಪವನ್ನು ನೋಡಿದ, ಕೇಳಿದ, ಕುಟುಂಬದ ಸ್ನೇಹಿತರು, ಬಂಧುಬಳಗದವರು ಮತ್ತಿತರ ಜನರು, ಮಕ್ಕಳು ಸಹ ಈ ಯೋಜನೆಗೆ ಹಣ ಕಳಿಸಲಾರಂಭಿಸಿದರು. ಆ ಹಣದಲ್ಲಿ ಉಗಾಂಡಾದ ಅಂಗೋಲಾದಲ್ಲಿ ಶಾಲೆಯೊಂದರ ಪಕ್ಕದಲ್ಲಿ ಬಾವಿಯನ್ನು ತೋಡಲಾಯಿತು.
ಆದರೆ ಇದರೊಂದಿಗೆ ರಿಯಾನ್ ತನ್ನ ಸೇವೆಗೆ ಇತಿಶ್ರೀ ಹಾಡಲಿಲ್ಲ. ಬದಲಿಗೆ ಇನ್ನಷ್ಟು ಉತ್ಸುಕನಾಗಿ ಹಣ ಸಂಗ್ರಹಿಸಲಾರಂಭಿಸಿದ. ‘ರಿಯಾನ್ ವೆಲ್ ಫೌಂಡೇಶನ್’ ಸ್ಥಾಪಿಸಿದ. 2015ರಷ್ಟರಲ್ಲಿ ಅವನು ಮಿಲಿಯಾಂತರ ಡಾಲರ್‍ಗಳನ್ನು ಸಂಗ್ರಹಿಸಿ, ಅದರಿಂದ 1000 ಬಾವಿಗಳನ್ನು 15 ದೇಶಗಳಲ್ಲಿ ತೋಡಿಸಿ, 824,038 ಜನರಿಗೆ ಶುದ್ಧವಾದ ಕುಡಿಯುವ ನೀರು ದೊರಕುವಂತೆ ಮಾಡಿದ್ದಾನೆ. ತನ್ನ ಕೆಲಸದಲ್ಲಿ ಮುಂದುವರೆಯುತ್ತಿದ್ದಾನೆ.
- ಸುಧಾ ಜಿ
[ಕೃಪೆ : "ಅಪೂರ್ವ ಕಣ್ಮಣಿ" ಮಾಸಪತ್ರಿಕೆ]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ