Pages

ಸ್ವಾತಂತ್ರ್ಯ ಸಂಗ್ರಾಮ: "ಮೇಡಂ ಕಾಮಾ"




           
      “ಮುನ್ನುಗ್ಗು ಗೆಳೆಯ ಅಸಹಾಯಕಯರಾಗಿ ಸಾಯುತ್ತಿರುವ ನಿನ್ನ ಒಲವಿನ ಮಾತೃಭೂಮಿಯ ಮಕ್ಕಳನ್ನು ನೀನು ನೈಜವಾದ ಸ್ವಾತಂತ್ರ್ಯದೆಡೆಗೆ ಕರೆದೊಯ್ಯಬೇಕು, ನೆನಪಿರಲಿ ‘ಭಾರತೀಯರಿಗಾಗಿ ಭಾರತ’ ಇದಕ್ಕಾಗಿ ನಾವೆಲ್ಲರೂ ಹೋರಾಡಬೇಕು.ಇದೇ ನಮ್ಮ ಗುರಿ”. ಈ ಸ್ಪೂರ್ತಿದಾಯಕ ವಾಕ್ಯಗಳಿಂದ ಭಾರತದ ಯುವ ಜನರಲ್ಲಿ ಕ್ರಾಂತಿಯ ಚಿಲುಮೆ, ಉತ್ಸಾಹ ಮೂಡಿಸಿದ ಕ್ರಾಂತಿಕಾರಿ ವೀರ ಮಹಿಳೆ ಮೇಡಂ ಕಾಮರವರು. ಇವರ ಪೂರ್ಣ ಹೆಸರು ಮೇಡಂ ಭಿಖಾಜಿ ರುಸುಂಜಿ ಕಾಮ. 1861 ಸೆಪ್ಟೆಂಬರ್ 24 ರಂದು ಬೊಂಬಾಯಿಯ ಪಾರ್ಸಿ ಶಾಲೆಯೊಂದರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ನಂತರ ಅನೇಕ ವಿದೇಶಿ ಭಾಷೆಗಳನ್ನು ಸಹ ಕಲಿತರು. ಹುಟ್ಟಿನಿಂದಲೇ ಆಗರ್ಭ ಶ್ರೀಮಂತರಾದರೂ ಸಹ ಐಶಾಮಿ ಜೀವನದತ್ತ ಇವರ ಮನಸ್ಸು ವಾಲಲೇ ಇಲ್ಲ. ತಮ್ಮ ಶ್ರೀಮಂತಿಕೆಯನ್ನು ಡಂಭಾಚಾರಕ್ಕೆ ಬಳಸದೆ, ಬದಲಾಗಿ ಇತರರ ಕಷ್ಟ ಕಾರ್ಪಣ್ಯಗಳಿಗಾಗಿ ಬಳಸಿಕೊಂಡರು. ಚಿಕ್ಕಂದಿನಿಂದಲೇ ಪರರ ಕಷ್ಟಗಳಿಗೆ ಸ್ಪಂದಿಸುವ ಮೇಡಂ ಕಾಮಾರವರ ಈ ವ್ಯಕ್ತಿತ್ವವೇ ಮುಂದೆ ಅವರಿಗೆ ದೇಶಾಭಿಮಾನವನ್ನು ಬೆಳೆಸಿತು. ಇವರ ದೇಶಾಭಿಮಾನ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರ ಪತಿ ಶ್ರೀ ಭಿಖಾಜಿ ವಿಕ್ರಮ್ ಕಾಮರವರನ್ನು ತೊರೆಯುವಷ್ಟು. ಇವರು ಭಾರತದಲ್ಲಿನ ಕ್ರಾಂತಿಕಾರಿಗಳಿಗಷ್ಟೇ ಅಲ್ಲ ಇಡೀ ವಿಶ್ವದಲ್ಲೆಡೆ ಇದ್ದ ಕ್ರಾಂತಿಕಾರಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದರು.

         1898 ರಲ್ಲಿ ಬೊಂಬಾಯಿಯ ಸುತ್ತಮುತ್ತ ಪ್ರದೇಶಗಳಲ್ಲಿದ್ದ ಜನರಿಗೆ ಪ್ಲೇಗ್ ಮಾರಿ ಕಾಡಲಾರಂಭಿಸಿತು. ಆಗ ಸುಖದ ಸುಪ್ಪತ್ತಿಗೆಯಲ್ಲಿದ್ದ ಕಾಮಾರವರು, ಅದನ್ನು ತೊರೆದು, ಪ್ಲೇಗ್ ಪೀಡಿತರು ನೆರವಿಗೆ ನಿಂತರು. ಇದರಿಂದಾಗಿ ಮೇಡಂ ಕಾಮಾರವರೂ ಸಹ ಅನಾರೋಗ್ಯಕ್ಕೆ ತುತ್ತಾದರು, ಚಿಕಿತ್ಸೆ ಪಡೆಯಲು ಪ್ಯಾರಿಸ್ ನಗರಕ್ಕೆ ತೆರಳಿದರು. ಅಲ್ಲಿದ್ದ ಕೆಲ ಭಾರತೀಯ ಕ್ರಾಂತಿಕಾರಿಗಳ ಪರಿಚಯವಾಯಿತು. ಅವರ ಸಹಾಯದಿಂದ ಮುಂದೆ ಲಂಡನ್ನಿಗೆ ತೆರಳಿ ಅಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಶ್ರೀಶ್ಯಾಮ ಕಿಷನ್ ವರ್ಮರನ್ನು ಭೇಟಿಯಾದರು. ಅವರಿಂದ ಮೇಡಂ ಕಾಮಾರವರಿಗೆ ಉತ್ತಮವಾದ ಮಾರ್ಗದರ್ಶನ ದೊರೆಯಿತು. ನಂತರ ಯುರೋಪಿನ ಹಲವಾರು ದೇಶಗಳ ಕ್ರಾಂತಿಕಾರಿಗಳ ಪರಿಚಯವಾಯಿತು. ಅವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿದ ಮೇಡಂ ಕಾಮಾರವರಿಗೆ ಕ್ರಾಂತಿಕಾರಿಗಳಿಗೆ ಮುಖ್ಯವಾಗಿ ಬೇಕಾದ ಆಯುಧಗಳೇನೆಂಬುದು ತಿಳಿದು ಬಂತು. ತಕ್ಷಣವೇ ಅವರು ಭಾರತದಲ್ಲಿನ ಕ್ರಾಂತಿಕಾರಿಗಳಿಗೆ ಕೆಲವು ಶಸ್ತ್ರಾಸ್ತ್ರಗಳು ಹಾಗೂ ಕ್ರಾಂತಿಕಾರಿ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆಯ ರೂಪದಲ್ಲಿ ರವಾನಿಸತೊಡಗಿದರು.

        ಜರ್ಮನಿಯ ಸ್ಟೂಗರ್ಟ್‍ನಲ್ಲಿ 1907 ರ ಆಗಸ್ಟ್‍ನಲ್ಲಿ ನಡೆದ “ವಿಶ್ವ ಸಮಾಜವಾದಿ ಸಮ್ಮೇಳನ”ದಲ್ಲಿ ಪ್ರತಿನಿಧಿಯಾಗಿ ತೆರಳಿದ ಮೇಡಂ ಕಾಮಾರವರು ಅಲ್ಲಿ ಸಮಾವೇಶಗೊಂಡಿದ್ದ ರಷ್ಯಾದ ಶಿಲ್ಪಿ ಲೆನಿನ್, ಜರ್ಮನಿಯ ಸಿಂಹಿಣಿ ಕ್ಲಾರಾ ಜೆಟ್‍ಕಿನ್, ಪೋಲೆಂಡಿನ ಹೋರಾಟಗಾರ್ತಿ ರೋಸಾಲುಕ್ಸೆಂಬರ್ಗ್ ಮುಂತಾದವರನ್ನು ಭೇಟಿ ಮಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಗೆ ಈ ಸಮ್ಮೇಳನವನ್ನು ದಾರಿ ದೀಪವಾಗಿ ಬಳಸಿಕೊಂಡರು. ಸಮ್ಮೇಳನದಲ್ಲಿ ತಮ್ಮ ಭಾಷಣ ಪ್ರಾರಂಭಿಸುವ ಮುನ್ನ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿದರು. ಅಲ್ಲಿ ನೆರೆದಿದ್ದ ಲಕ್ಷಾಂತರ ಕ್ರಾಂತಿಕಾರಿಗಳ ಮುಂದೆ ಭಾರತದಲ್ಲಿ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯದ ಬಗ್ಗೆ ವಿವರವಾಗಿ ಕಣ್ಣಿಗೆ ಕಟ್ಟುವಂತೆ ಹೇಳಿದರು. ನಮ್ಮ ದೇಶದ ಸ್ವತಂತ್ರಕ್ಕೆ ಇಡೀ ವಿಶ್ವದ ಜನತೆಯ ಬೆಂಬಲವನ್ನು ಈ ಮೂಲಕ ಪಡೆದರು. ಈ ಸಂದರ್ಭದಲ್ಲಿ ಅವರು ಮಾಡಿದ ಭಾಷಣಗಳ ಪ್ರತಿಗಳು ಮುದ್ರಿತವಾಗಿ ಭಾರತೀಯ ಕ್ರಾಂತಿಕಾರಿಗಳ ಕೈಸೇರಿತು. ಅವರಿಗೆ ಉತ್ಸಾಹವನ್ನು ತುಂಬಿತು. ಹೊರ ದೇಶದಲ್ಲಿದ್ದುಕೊಂಡೇ ಭಾರತದ ಕ್ರಾಂತಿಕಾರಿಗಳಿಗೆ ದಾರಿ ದೀಪವಾಗಿದ್ದ ಇವರ ಮೇಲೆ ಬ್ರಿಟೀಷ್ ಪೋಲಿಸರ ಹದ್ದಿನ ಕಣ್ಣುಬಿತ್ತು. ಇದ್ಯಾವುದಕ್ಕೂ ಜಗ್ಗದ ಮೇಡಂ ಕಾಮಾರವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸುತ್ತಾ ಹೋದರು. ಕ್ರಾಂತಿಕಾರಿಗಳ ಬಗ್ಗೆ ಅವರಿಗಿದ್ದ ಒಲವನ್ನು ಕಂಡ ಜನರು ಇವರನ್ನು “ಭಾರತದ ಕ್ರಾಂತಿಯ ಮಾತೆ” ಎಂದು ಘೋಷಿಸಿದರು. ವಿದೇಶಗಳಲ್ಲಿ ಓದುತ್ತಿದ್ದ ಭಾರತೀಯ ಯುವಕರಿಗೂ ಸಹ ಹುರಿದುಂಬಿಸಿ ಕ್ರಾಂತಿಯ ಬಗ್ಗೆ ತಿಳುವಳಿಕೆ ನೀಡಿ ಭಾರತದಲ್ಲಿ ಅವರು ಹೋರಾಡುವಂತೆ ಮಾಡಿದರು. ಮೇಡಂ ಕಾಮಾರವರ ಈ ಕ್ರಾಂತಿಕಾರಿ ಚಟುವಟಿಕೆಗಳು ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ಇದು ವಿಶ್ವದ ವಿವಿಧ ದೇಶಗಳಲ್ಲೂ ಪಸರಿಸ ತೊಡಗಿತು. ವಿಶ್ವದ ಯಾವುದೇ ದೇಶದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯದವಿರುದ್ಧ ಧನಿಯೆತ್ತಿ ನಿಂತರು. ಮೇಡಂ ಕಾಮಾರವರು ಈ ತೀವ್ರಕರ ಕ್ರಾಂತಿಕಾರಿ ಚಟುವಟಿಕೆಗಳಿಂದ ಹಿಮ್ಮೆಟ್ಟುವಂತೆ ಮಾಡಲು ಬ್ರಿಟೀಷ್ ಸರ್ಕಾರವು ಅವರ ಒಂದು ಲಕ್ಷ ರೂ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದರಿಂದ ಕಿಂಚಿತ್ತೂ ಧೃತಿಗೆಡದ ಮೇಡಂ ಕಾಮಾರವರು ತಮ್ಮ ಕೆಲಸ-ಕಾರ್ಯಗಳನ್ನು ಅದೇ ಉತ್ಸಾಹದಿಂದ ಮುಂದುವರೆಸುತ್ತಲೇ ಹೋದರು.

     ಮನಸ್ಸಿಗೆ ವಯಸ್ಸಾಗದಿದ್ದರೂ ದೇಹಕ್ಕೆ ವಯಸ್ಸಾಗುತ್ತದೆ, ಅಲ್ಲವೇ. ಹಾಗೆಯೇ ನಿರಂತರವಾಗಿ ದುಡಿಯುತ್ತಿದ್ದ ಅವರ ದೇಹ ದಣಿಯಲು ಪ್ರಾರಂಭಿಸಿತು. ತಮ್ಮ ಕೊನೆಗಾಲವನ್ನು ಸ್ವದೇಶದಲ್ಲಿ ಕಳೆಯಬೇಕೆಂದು ಆಸೆ ಪಟ್ಟ ಮೇಡಂ ಕಾಮಾರವರನ್ನು ಬ್ರಿಟಿಷ್ ಸರ್ಕಾರ ಬರಗೊಡಲಿಲ್ಲ. ಹಾಗೊಮ್ಮೆ ಅನುಮತಿ ಕೊಡಬೇಕೆಂದರೆ ಇಷ್ಟು ವರ್ಷಗಳ ಕಾಲ ಅವರು ನಡೆಸಿದ ಕ್ರಾಂತಿಕಾರಿ ಚಟುವಟಿಕೆಗಳು ತಪ್ಪು ಎಂದು ಬರೆದು ಕೊಡಬೇಕೆಂದು ಹೇರಿತು. ಸ್ವಾತಂತ್ರ್ಯ, ಕ್ರಾಂತಿಯೇ ತನ್ನ ಉಸಿರಾಗಿ ಭಾವಿಸಿದ್ದ ಮೇಡಂ ಕಾಮಾರವರು ಇದಕ್ಕೆ ಒಪ್ಪುವುದುಂಟೇ???? ಕೊನೆಗೆ ಬ್ರಿಟೀಷ್ ಸರ್ಕಾರವೇ ಈ 60 ರ ಹರೆಯದ ಮೇಡಂ ಕಾಮಾರವರಿಗೆ ಸೋತು ದೇಶಕ್ಕೆ ಬರಲು ಅನುಮತಿ ನೀಡಿತು. ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ಕಾಮಾರವರು ಸುಮ್ಮನೆ ಕೂರಲಿಲ್ಲಿ. ಬಳಲಿ ಬೆಂಡಾದ ತಮ್ಮ ದೇಹವನ್ನು ಹೊತ್ತುಕೊಂಡೇ ಎಲ್ಲೆಡೆ ಭಾಷಣಗಳನ್ನು ಮಾಡಿ ಕ್ರಾಂತಿಕಾರಿಗಳನ್ನು ಹುರಿದುಂಬಿಸಿದರು. ತಮ್ಮ ಕೊನೆಯುಸಿರೆಳೆಯುವವರೆಗೂ ಬಡವರಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಿದರು. ಭಾರತ ಸ್ವಾತಂತ್ರ್ಯ ಹೋರಾಟಗಾರರಿಗಷ್ಟೇ ಅಲ್ಲ ಇತರ ದೇಶದ ಸ್ವತಂತ್ರ್ಯ ಹೋರಾಟಗಾರರಿಗೂ ಉತ್ಸಾಹದ ಚಿಲುಮೆ, ಹಾಗೂ ಮಾರ್ಗದರ್ಶಿಯಾಗಿ ನಿಂತರು. ಇಷ್ಟೆಲ್ಲಾ ಸಾಹಸಗಳನ್ನು ಮಾಡಿದ ಈ ಅಧಮ್ಯ ಚೇತನ 1936 ಆಗಸ್ಟ್ 13 ರಂದು ಬೊಂಬಾಯಿಯ ಪಾರ್ಸಿ ಆಸ್ಪತ್ರೆಯೊಂದರಲ್ಲಿ ಕಣ್ಮರೆಯಾಗಿ ಹೋಯಿತು.

     “ಆನೆ ಸತ್ತರೂ ಸಾವಿರ, ಇದ್ದರೂ ಸಾವಿರ” ಎಂಬ ಗಾದೆ ಮಾತಿಗೆ ಉತ್ತಮ ಉದಾಹಣೆಯಾದರು ನಮ್ಮೆಲ್ಲರ ಹೆಮ್ಮೆಯ ‘ಭಾರತದ ಕ್ರಾಂತಿಯ ಮಾತೆ’ ಮೇಡಂ ಕಾಮಾ!!!!!

ಅನುವಾದ: "ನಾಗನಗರಿ"



ಮೂಲ ಲೇಖಕರು - ಜಾಈ ವಿಟೇಕರ್.                              


      ಬಹುಶ ನಿಮಗೆ ಈ ಕಥೆಯ ಬಗ್ಗೆ ನಂಬಿಕೆ ಬರದಿರಬಹುದು, ಆದರೆ ಇದು ಸುಳ್ಳಲ್ಲ ನಿಜ ಅಂತ ನನಗೊತ್ತು. ಏಕೆಂದರೆ ನಾನು ನಾಗನಗರಿಯನ್ನು ನೋಡಿದ್ದೇನೆ. ಅಲ್ಲಿ ಹಾವುಗಳು ಇರುತ್ತವೆ. 

     ಕತ್ತಲು ತುಂಬಿರುವ ದಟ್ಟವಾದ ಕಾಡಿನ ಮಧ್ಯೆ ಈ ನಾಗನಗರಿ ಇದೆ. ನೀವೇನಾದರು ಅದನ್ನು ನೋಡಿದರೆ ಜನ ಇಲ್ಲಿಯವರೆಗೆ ಹೇಗೆ ತಲುಪುತ್ತಾರೆ ಅಂತ ಯೋಚಿಸಲು ಶುರು ಮಾಡ್ತೀರ. ಕಾಡಿನಲ್ಲಿ ಒಣಗಿ ಬಿದ್ದಿರುವ ಮರಗಳ ಕೊಂಬೆ-ರೆಂಬೆಗಳು ರಸ್ತೆಯನ್ನೇ ಮುಚ್ಚಿ ಬಿಟ್ಟಿರುತ್ತವೆ. ಸಾಲದ್ದಕ್ಕೆ ಮುಳ್ಳಿನ ಗಿಡಗಳು, ಬೇಲಿಗಳು ಕೈ-ಕಾಲುಗಳಿಗೆ ಸುತ್ತಿಕೊಂಡು ಮುಂದೆ ಹೆಜ್ಜೆ ಇಡೋದಕ್ಕು ಕಷ್ಟ ಆಗುತ್ತೆ, ಹೀಗೆ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸಾಕಪ್ಪ-ಸಾಕು ವಾಪಸ್ ಹೊರಟು ಹೋಗೋಣ. ಈ ಕಾಡಿನಲ್ಲಿ ಹಾವುಗಳು-ಹಲ್ಲಿಗಳು ಹದ್ದುಗಳೇ ಇದ್ದುಕೊಳ್ಳಲಿ, ನಮಗಿಲ್ಲೇನು ಕೆಲಸ ಅನ್ನಿಸುತ್ತದೆ.  ನಾಗನಗರಿ ಇದೇ ಕಾಡಿನ ಒಂದು ತುದಿಯಲ್ಲಿ, ಬೆಟ್ಟಗಳ ತಪ್ಪಲಿನಲ್ಲಿ ಹಬ್ಬಿರುವ ಒಂದು ಕುಗ್ರಾಮ.  ಬೆಟ್ಟಗಳ ಮೇಲೆಲ್ಲ ಹರಡಿರುವ ಈ ದಟ್ಟಕಾಡನ್ನು ನೋಡಿದರೆ ಒಂದು ರೀತಿ ಹಚ್ಚ ಹಸುರಿನ ತೆಳುವಾದ ಬಟ್ಟೆಯನ್ನು ಬೆಟ್ಟಕ್ಕೆಲ್ಲಾ ಹೊದಿಸಿದಂತೆ ಕಾಣುತ್ತದೆ.  ಹಳ್ಳಿಯ ಮೇಲೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದುಗಳ ಗೋಲಿಯಾಕಾರದ ಕಣ್ಣುಗಳು ಬಹಳ ತರ್ಕಬದ್ಧವಾಗಿ ಭೂಮಿಯ ಮೇಲೆ ಹರಿದಾಡುವ ಇಲಿಗಳು ಮತ್ತು ಹಾವುಗಳನ್ನು ಹುಡುಕುತ್ತಿರುತ್ತವೆ.

      ಒಮ್ಮೊಮ್ಮೆ ದೊಡ್ಡದೊಡ್ಡ ಮರಗಳು ಬಿದ್ದಾಗ ಕಾಡಿನಲ್ಲಿ ಎಂತಹ ಪ್ರತಿಧ್ವನಿ ಉಂಟಾಗುತ್ತೆ ಅಂದರೆ-ಯಾರೋ ಒಬ್ಬ ದೈತ್ಯ ರಾಕ್ಷಸನ ಏಟಿನಿಂದ ಮರ ಉರುಳಿರುವ ಹಾಗೆ, ಅಥವಾ ಯಾವುದಾದರು ಆನೆ, ಕಾಡೆಮ್ಮೆಗಳೇ ಮರ ಬೀಳಿಸಿರಬಹುದೇನೋ ಅನ್ನೋ ಹಾಗೆ, ಆದರೆ ಇಂತಹ ಭಯಂಕರ ಶಬ್ದಗಳಿಂದಲೂ ನಾಗನಗರಿಯಲ್ಲಿರುವ ಜನರಿಗೆ ಭಯವೇ ಆಗುವುದಿಲ್ಲ.
ಹಳ್ಳಿಯಲ್ಲಿ ಎಲ್ಲಾ ರೀತಿಯ ಜನರು ವಾಸಿಸುತ್ತಾರೆ.  ಕೆಲವರು ಕಪ್ಪಗಿದ್ದರೆ ಕೆಲವರು ಬೆಳ್ಳಗೆ,  ಕೆಲವರು ಉದ್ದವಾಗಿದ್ದರೆ ಕೆಲವರು ಕುಳ್ಳಗೆ. ಈ ಜನರಿಗೆ ತಮ್ಮದೇ ಆದ ಬೇರೆ ಬೇರೆ  ಭಾಷೆಗಳಿವೆ. ಒಂದೆಡೆ ಮಾಂಸಹಾರಿಗಳಿದ್ದರೆ ಮತ್ತೊಂದೆಡೆ ಸಸ್ಯಹಾರಿಗಳು.  ಕೆಲವರು ಕಾಡಿನ ಮೂಲೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಮತ್ತು ಕೆಲವರು ದೂರದಲ್ಲಿರುವ ಮಸೀದಿಗಳಲ್ಲಿ ನಮಾಜ್ ಮಾಡುತ್ತಾರೆ.  ಕೆಲವರು ಶಿವನ ಆರಾಧಕರಾದರೆ ಇನ್ನು ಕೆಲವರು ದೇವಿ-ದೇವತೆಗಳ ಆರಾಧಕರು.  ಇಷ್ಟೆಲ್ಲಾ ವೈವಿದ್ಯತೆಯ ನಡುವೆಯೂ ನಾಗನಗರಿಯ ಜನ ಒಟ್ಟಾಗಿ ಒಗ್ಗಟ್ಟಿನಿಂದ ಬಹಳ ಸಂತೋಷದ ಜೀವನ ನಡೆಸುತ್ತಿದ್ದರು.

     ನನ್ನ ಹೆಸರು ಪ್ರೇಮ್. ನಾನು ನಾಗನಗರಿಯಿಂದ ನೂರಾರು ಮೈಲಿಗಳ ದೂರದಲ್ಲಿ ವಾಸವಾಗಿದ್ದೇನೆ.  ನಾನು ಆ ಹಳ್ಳಿಯ ಬಗ್ಗೆ ಕೇಳಿದ್ದೆ ಆದರೆ ಅಲ್ಲಿಗೆ ಎಂದೂ ಹೋಗಿರಲಿಲ್ಲ. ಏಕೆಂದರೆ ಅಲ್ಲಿಗೆ  ತಲುಪಲು ರೈಲು,ಬಸ್ಸು ಮತ್ತು ಎತ್ತಿನ ಬಂಡಿಗಳಲ್ಲಿ ದೂರ ಪ್ರಯಾಣ ಮಾಡಬೇಕಾಗುತ್ತದೆ. 

     ಹಿಂದಿನ ವರ್ಷ ನಮ್ಮ ಹಳ್ಳಿಯಲ್ಲಿ ಒಂದು ಭಯಾನಕ ಘಟನೆ ನಡೆಯಿತು.  ನಮ್ಮ ಜನರಿಗೆ ಧರ್ಮದ ಹುಚ್ಚುಹಿಡಿದಿತ್ತು. ಎಲ್ಲೋ ಬಹಳ ದೂರ ಕಾಣದ ಒಂದು ಪ್ರದೇಶದಲ್ಲಿ ದೇವಸ್ಥಾನವನ್ನೋ ಅಥವಾ ಮಸೀದಿಯನ್ನೋ ಸುಟ್ಟುಹಾಕಿದ್ದರು. ಅಷ್ಟಕ್ಕೆ ನಮ್ಮ ಹಳ್ಳಿಯ ಜನರು ಹುಚ್ಚರಾದರು.  ಪ್ರತಿಯೊಬ್ಬರ ನಡುವೆ ಜಗಳ-ಯುದ್ಧ ಶುರುವಾಯ್ತು. ಇದರಿಂದ ಹೆದರಿದ ಕೆಲವರು ರಾತ್ರೋ-ರಾತ್ರಿ ಊರು ಬಿಟ್ಟು ಓಡಿಹೋದರು. ಒಂದು ದಿನ ಬೆಳಗಿನ ಜಾವ ಮಂಪರು ನಿದ್ದೆಯಲ್ಲಿದ್ದ ನನಗೆ ಜಗಳ-ಘರ್ಷಣೆಗಳ ಶಬ್ದ ಕೇಳಿಸಿ, ಏನೆಂದು ಎದ್ದು ನೋಡಿದರೆ ಎಲ್ಲೆಡೆ ಬೆಂಕಿ ಬಿದ್ದಿತ್ತು.  ಆ ಬೆಂಕಿಯಲ್ಲಿ ಹಲವಾರು ಗುಡಿಸಲುಗಳು ನಾಶವಾಗಿದ್ದವು, ಅವುಗಳಲ್ಲಿ ನನ್ನ ಗುಡಿಸಲೂ ಇತ್ತು!!! ಗಡಿಬಿಡಿಯಲ್ಲಿ ಸ್ವಲ್ಪ ಬಟ್ಟೆಯ ರಾಶಿ, ಚಿಲ್ಲರೆ ಹಣ ಮತ್ತು ನನ್ನ ಪುಟ್ಟ ಗಣೇಶನ ಮೂರ್ತಿಯೊಂದಿಗೆ ನಾನು ಓಡಿದೆ. ದಿನವಿಡೀ, ರಾತ್ರಿಯಿಡೀ ಓಡುತ್ತಲೇ ಇದ್ದೆ.  ಹೇಗೆ ಓಡಿದೆ ಎಂದರೆ ನನ್ನ ಕಾಲುಗಳು, ಸೋತು ನಿಶ್ಯಕ್ತವಾಗಿ, ಹೊಡೆದು ಛಿದ್ರವಾಗುವವರೆಗೂ ಓಡಿದೆ. ನಂತರ ನಾನು ಒಂದು ರೈಲಿನಲ್ಲಿ ಧುಮುಕಿದೆ, ಬಸ್ಸಿನ ಮೇಲೆ ಹತ್ತಿದೆ, ಅದೂ ಯಾವ ಟಿಕೆಟ್ ಇಲ್ಲದೆ. ಪರವಾಗಿಲ್ಲ ಬಿಡಿ ನಾನೊಬ್ಬನೇ ಅಲ್ಲ ಎಲ್ಲರೂ ತಮ್ಮ ಪ್ರಾಣ ಉಳಿಸಿಕೊಳ್ಳುವ ತವಕದಲ್ಲಿ ಓಡುತ್ತಿದ್ದರು. ಅಂತೂ ಕೊನೆಗೆ ನಾನು ನಾಗನಗರಿ ತಲುಪಿದೆ. ಅಲ್ಲಿ ಬಾವಿಯ ಬಳಿ ಹಳ್ಳಿಯ ಕೆಲವರನ್ನು ನೋಡಿದೆ. ನೇರವಾಗಿ ಅವರ ಬಳಿ ಬಂದು ತಲುಪಿದೆ. ಆದರೆ ಅವರಿಗೆ ಏನಾದರೂ ಹೇಳೋಣ ಅನ್ನೋವಷ್ಟರಲ್ಲಿ ಮೂರ್ಛೆ ತಪ್ಪಿ ಕೆಳಗೆ ಬಿದ್ದು ಬಿಟ್ಟೆ. 

     ನಂತರ ಕಣ್ಣು ಬಿಟ್ಟಾಗ ಬಿಳಿ ಕೂದಲು, ಉದ್ದವಾದ ಬಿಳಿ ಗಡ್ಡ ಮತ್ತು ಹೊಳೆಯುತ್ತಿದ್ದ ಕಪ್ಪುಕಣ್ಣುಗಳಿದ್ದ ಒಬ್ಬ ಅಜ್ಜ ನನ್ನ ಹತ್ತಿರ ಕುಳಿತು ನನಗೆ ಸುಶ್ರೂಶೆ ಮಾಡುತ್ತಿದ್ದರು. ನಂತರ ಸ್ವಲ್ಪ ದಿನಗಳವರೆಗೆ ಅವರೇ ನನ್ನನ್ನು ನೋಡಿಕೊಂಡರು. ತಮ್ಮ ಕೈಗಳಿಂದ ಊಟ ತಿನ್ನಿಸುತ್ತಿದ್ದರು, ನನ್ನ ಕಾಲುಗಳನ್ನು ಒತ್ತಿ ಮಾಲೀಶ್ ಸಹ ಮಾಡುತ್ತಿದ್ದರು. ಇದರಿಂದ ನನ್ನ ನೋವು ದೂರವಾಯಿತು. ನನ್ನನ್ನು ನೋಡಲು ಅಜ್ಜನ ಸ್ನೇಹಿತರು, ಅಕ್ಕಪಕ್ಕದವರು ಸಾಲುಗಟ್ಟಿ ಬರುತ್ತಿದ್ದರು.

     ಒಂದು ದಿನ ನಾನು ಅಜ್ಜನ ಬಳಿ ಬಂದು ಹೇಳಿದೆ “ಅಜ್ಜ, ನಾನು ಇಂತಹ ಜನರನ್ನು ಎಲ್ಲಿಯೂ ನೋಡೇ ಇಲ್ಲ. ನಮ್ಮೂರಿನಲ್ಲಿ ಏನಾದರೂ ಬೇರೇ ದೇವರನ್ನು ಪೂಜಿಸಿದರೆ ಸಾಕು ಜಗಳಕ್ಕೆ ಅದೇ ಒಂದು ದೊಡ್ಡ ವಿಷಯವಾಗುತ್ತಿತ್ತು, ಆದರೆ ಇಲ್ಲಿ…............ ಈ ಸ್ಥಳವಂತೂ ಬಹಳ ಅದ್ಭುತ ಅನ್ನಿಸುತ್ತಿದೆ. ಅದಕ್ಕೆ ಅಜ್ಜ ಹೇಳಿದರು, “ಪ್ರೇಮ್ ನಾನು ನಿನಗೆ ನಾಗನಗರಿಯ ಕಥೆಯನ್ನು ಹೇಳುವೆ, ಈ ಕಥೆಯನ್ನು ನೀನು ನಿಮ್ಮೂರಿನ ಜನರಿಗೆ ಹೋಗಿ ಹೇಳು, ಬಹುಷಃ ಇದರಿಂದ ನಿನ್ನ ಗಾಯದ ಬರೆಗಳು ತುಂಬಬಹುದು. ಹಾಗೂ ಎಲ್ಲಾ ದುಃಖವೂ ದೂರವಾಗಬಹುದು”. ಅದಕ್ಕೆ ನಾನು ಹೇಳೆದೆ, “ಅಜ್ಜ ಇದು ಸಾಧ್ಯವೇ ಇಲ್ಲ. ನಮ್ಮ ಹಳ್ಳಿಯಲ್ಲಿ ಆದ ಘಟನೆಯನ್ನು ನೆನೆಸಿಕೊಂಡರೆ ಬಹಳ ಕ್ರೂರ ಅನ್ನಿಸುತ್ತೆ, ಅಲ್ಲದೆ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ನಾನು ಎಂದಿಗೂ ನಮ್ಮ ಹಳ್ಳಿಗೆ ವಾಪಸ್ ಹಿಂತಿರುಗುವುದಿಲ್ಲ"

     “ನೋಡು ಇದಕ್ಕಾಗಿಯಾದರೂ ನೀನು ನಿನ್ನ ಹಳ್ಳಿಗೆ ಹಿಂತಿರುಗುವುದು ಅವಶ್ಯಕವಾಗಿದೆ.” ಅಜ್ಜ ಬಹಳ ಕೋಮಲ ಧ್ವನಿಯಲ್ಲಿ ಹೇಳಿದರು. ನನಗೂ ಕಥೆ ಕೇಳುವ ಕುತೂಹಲವಿದ್ದುದರಿಂದ ಅವರೊಂದಿಗೆ ಹೆಚ್ಚು ಚರ್ಚಿಸಲು ಇಷ್ಟವಿಲ್ಲದೆ ಸುಮ್ಮನಾದೆ.ಅಜ್ಜ ಕಥೆಯನ್ನು ಹೇಳತೊಡಗಿದರು-

       ಬಹಳ ಹಿಂದಿನ ಮಾತಿದು, ಆ ದಿನಗಳಲ್ಲಿ ಶಿಕ್ಷಕರು, ಶಾಲೆಗಳು ಇರಲಿಲ್ಲ. ಮಕ್ಕಳು ಅವರ ತಂದೆ-ತಾಯಿರರೊಡನೆ ಗುಹೆಗಳಲ್ಲಿ ವಾಸಿಸುತ್ತಿದ್ದರು. ಗೆಡ್ಡೆ-ಗೆಣಸು, ಹಣ್ಣು-ಹಂಪಲು ಆರಿಸಿ ಶೇಕರಿಸುವುದರಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು. ಆಗ ಕಾಡುಗಳಲ್ಲಿ ಆನೆ, ಸಿಂಹ, ನರಿ-ತೋಳಗಳ ಹೆಸರು ನಿಶಾನೆಗಳಿರಲಿಲ್ಲ. ಇಡೀ ಕಾಡಿನಲ್ಲಿ ವಿಧ ವಿಧವಾದ ತೆವಳುವ ಜೀವಿಗಳು ಮಾತ್ರ ಇದ್ದವು. ನಿನಗೆ ಗೊತ್ತಿರುವಂತೆ, ಹಾವು, ಮೊಸಳೆ, ಆಮೆ, ಹಲ್ಲಿಗಳು ಇವೆಲ್ಲಾ ತೆವಳುವ ಮತ್ತು ಮೊಟ್ಟೆ ಇಡುವ ಜೀವಿಗಳು. ಪ್ರಕೃತಿಯಲ್ಲಿನ ಪ್ರತಿಯೊಂದು ನಿಯಮಕ್ಕೂ ಯಾವುದಾದರೊಂದು ಅಪವಾದ ಇದ್ದೇ ಇರುತ್ತದೆ, ಹೇಗೆಂದರೆ, ನಾವು ಹಾರುವ ಜೀವಿಗಳನೆಲ್ಲಾ ಪಕ್ಷಿಗಳು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಅಂದರೆ.......... ..... ಹೋಗಲಿ ಈ ಮಾತೆಲ್ಲಾ ಬಿಡು.
        ನಾಗನಗರಿಯ ಜೀವಿಗಳು ತಿಂಗಳಿಗೊಮ್ಮೆ ಒಂದು ಸಭೆ ಸೇರುತ್ತಿದ್ದವು. ಎಲ್ಲಾ ಜೀವಿಗಳು ಸಭೆಗೆ ತಪ್ಪದೇ ಬರುತ್ತಿದ್ದವು. ಮುದ್ದಾದ, ಸುಂದರವಾದ ಹಾವುಗಳು, ನಿಧಾನವಾಗಿ ಚಲಿಸುವ ವಿಚಾರವಾದಿ ಆಮೆಗಳು, ಚಪಲ, ಚಾಲಾಕಿ ಹಲ್ಲಿಗಳು, ನೀರಿನಿಂದ ಹೊರಬರಲು ಆಯಾಸವಾದಂತೆ, ಮಂಕಾಗಿರುವ ಮೊಸಳೆಗಳು ಹೀಗೆ. ಈ ಮಾಸಿಕ ಸಭೆಗೆ ಅಧ್ಯಕ್ಷ ಮಕರ. ಇದು ಕಾಡಿನ ಅತಿ ದೊಡ್ಡ ಮೊಸಳೆಯಾಗಿತ್ತು. ಅದು ಸುಮಾರು 25 ಅಡಿ ಉದ್ದವಿತ್ತೆಂದು ಜನ ಹೇಳುತ್ತಿದ್ದರು. ಬಿಡು ಅದರ ಅಸಲೀ ಉದ್ದ ಎಷ್ಟೆಂದು ಗೊತ್ತಿಲ್ಲದಿದ್ದರೂ ಕಾಡಿನಲ್ಲಿ ಅದರ ಶಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು, ಯಾರಾದರೂ ಒಬ್ಬರು ಶಕ್ತಿಶಾಲಿಯಾದರೆ ಉಳಿದವರೆಲ್ಲರೂ ಅವರ ನಿರ್ಧಾರಕ್ಕೆ ಹೂಂಗುಟ್ಟಲೇ ಬೇಕು.
      ಒಂದು ದಿನ ಒಂದು ವಿಸ್ಮಯ ಘಟನೆ ನಡೆಯಿತು. ಸಭೆಗೆ ಒಂದು ವಾರ ಮುಂಚಿನ ಮಾತು. “ಆಮೆಗಳಾದ ನೀವು ಇನ್ನು ಮುಂದೆ ನಮ್ಮ ಸಭೆಗೆ ಬರಬಾರದು” ಎಂದು ಮಕರ ಪತ್ರದ ಮೂಲಕ ಆಮೆಗಳಿಗೆ ಸಂದೇಶ ಕಳಿಸಿತು. ಆಮೆಗಳ ಗುಂಪಿನಲ್ಲಿದ್ದ ಮುದಿ ಆಮೆಗೆ ಪತ್ರ ಓದಿ ಬಹಳ ಕೋಪ ಬಂದು. “ಇದರ ಅರ್ಥವೇನು?, ನಮ್ಮೊಂದಿಗೆ ಈ ವ್ಯವಹಾರವೇಕೆ?” ಎಂದು ಕೂಗಾಡಿತು. ಮೊದಲೇ ಆಮೆಗಳ ಸಂಖ್ಯೆ ಇತರೆ ಜೀವಿಗಳಿಗಿಂತ ಕಡಿಮೆ ಇದ್ದುದರಿಂದ ಯಾವ ಆಮೆಗೂ ಸಭೆಗೆ ಹೋಗುವ ಧೈರ್ಯ ಬರಲಿಲ್ಲ. ಸಭೆ ಆರಂಭವಾಗುವ ಮೊದಲು ಮಕರ ನದಿಯ ತೀರದಲ್ಲಿದ್ದ ಕೆಂಪು ಹೂಗಳಿಂದ ತನ್ನ ಹಲ್ಲುಗಳನ್ನು ಸ್ವಚ್ಛಮಾಡಿಕೊಂಡಿತು. ಎಲ್ಲಾ ಜೀವಿಗಲೂ ಮಕರನ ಆಗಮನಕ್ಕಾಗಿ ಕಾಯುತ್ತಿದ್ದವು.
   “ಅಣ್ಣ-ತಮ್ಮಂದಿರೇ ಹಾಗೂ ಅಕ್ಕ-ತಂಗಿಯರೇ” ಮಕರ ಮತನ್ನು ಪ್ರಾರಂಭಿಸುತ್ತಿದ್ದಂತೆಯೇ ಎಲ್ಲವೂ, ಕೊನೆಗೆ ಹಾವುಗಳ ಸರದಾರ ನಾಗರಾಜನೂ ಕೂಡ ಸುಮ್ಮನಾದ. ಮಕರ ತನ್ನ ಮಾತನ್ನು ಮುಂದುವರೆಸಿತು, “ನಮಗೆ ಆಮೆಗಳ ಅವಶ್ಯಕತೆ ಇಲ್ಲ ಎಂದು ನಾನು ನಿರ್ಧರಿಸಿದ್ದೇನೆ. ಇಂದು ಅವರಿಗೆ ಸಭೆಗೆ ಬರಬಾರದೆಂದು ಆದೇಶಿಸಿದ್ದೇನೆ. ನನಗೆ ಅವರು ಏಕೆ ಇಷ್ಟವಿಲ್ಲ ಎಂದು ಹೇಳಬಲ್ಲಿರಾ?” ಎಲ್ಲಾ ಜೀವಿಗಳೂ ಪೆಚ್ಚು ಮೋರೆಯಿಂದ ನೋಡತೊಡಗಿದವು. ಆಶ್ಚರ್ಯದಿಂದ ಹಾವು ಬುಸುಗುಟ್ಟತೊಡಗಿತು. ಹಲ್ಲಿ ಮತ್ತು ಮೊಸಳೆಗಳು ಭಯದಿಂದ ಬಾಲವನ್ನು ಅಲ್ಲಾಡಿಸತೊಡಗಿದವು. “ಆದರೆ..........” ಒಂದು ಪುಟ್ಟ ಹಲ್ಲಿ ಹೇಳತೊಡಗಿತು.
     “ಆದರೆ-ಗೀದರೆ ಏನೂ ಇಲ್ಲ" ಮಕರ ಗದರಿತು. ಎಲ್ಲವೂ ಸುಮ್ಮನಾದವು.
      “ನನಗನ್ನಿಸುತ್ತೆ.........” ಮೊಸಳೆಯ ಒಂದು ಪುಟ್ಟ ಮರಿ ಮಧ್ಯೆ ಬಾಯಿಹಾಕಿತು.
      “ಏನೂ ಅನ್ನಿಸುವುದು ಬೇಡ...!!” ಮಕರ ಎಷ್ಟು ಎತ್ತರದ ಧ್ವನಿಯಲ್ಲಿ ಕೂಗಾಡಿತೆಂದರೆ ಮರದ ಮೇಲಿಂದ ಹಣ್ಣುಗಳು ನೆಲಕ್ಕೆ ಉದುರತೊಡಗಿದವು. ಇದರ ನಂತರ ಎಲ್ಲ ಜೀವಿಗಳು ಧೈರ್ಯ ಕಳೆದುಕೊಂಡು ಏನು ಮಾತಾನಾಡಲಿಲ್ಲ. ಮಕರ ತನ್ನ ಧ್ವನಿಯನ್ನು ಸರಿಪಡಿಸಿಕೊಳ್ಳುತ್ತಾ , ತನ್ನ ಹೊಳೆಯುವ ಹಲ್ಲುಗಳನ್ನು ತೋರಿಸುತ್ತಾ, “ಆಮೆಗಳು ಏಕೆ ಇಷ್ಟವಾಗುವುದಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ, ಅವು ತುಂಬಾ ನಿಧಾನವಾಗಿ ಚಲಿಸುತ್ತವೆ. ಜೊತೆಗೆ ಎಷ್ಟು ಮೂರ್ಖವೆಂದರೆ ತಮ್ಮ ಮನೆಗಳನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗುತ್ತವೆ. ಇದು ಮೂರ್ಖತನದ ಮಾತಲ್ಲವೇ?” ಈಗ ಈ ಹಲ್ಲಿಗಳನ್ನೇ ಕೇಳಿ ಇವು ಮರದ ಮೇಲೆ ಇರುತ್ತವೆ. ಹಾಗೆಂದು ಮರವನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗುತ್ತವೆಯೇ? ನೀವೇ ಹೇಳಿ.” 
        ಮೊದಲೇ ಹೆದರಿದ್ದ ಹಲ್ಲಿಗಳು ಸ್ವಲ್ಪ ಮೆಲು ಧ್ವನಿಯಲ್ಲಿ “ಇಲ್ಲ....ಆದರೂ.....” ಎಂದವು.
       “ಸುಮ್ಮನಿರಿ..!! ನನ್ನ ಮಾತು ಕೇಳಿ, ನಾನು ಆಮೆಗಳಿಗೆ ಕಾಡು ಬಿಟ್ಟು ಹೋಗಲು ಆಜ್ಞೆ ಮಾಡಿದ್ದೇನೆ. ಅವರು ಕಾಡು ಬಿಟ್ಟು ಹೋದರೆ ನಮಗೆ ಮೊದಲಿಗಿಂತಲೂ ಹೆಚ್ಚು ಆಹಾರ, ನೀರು, ಸ್ಥಳ ಸಿಗುತ್ತೆ. ನಾಳೆಯೇ ಅವರಿಗೆ ಕಾಡು ಬಿಟ್ಟು ಹೋಗಲು ಹೇಳೋಣ ಅನ್ಕೊಂಡೆ ಆದರೆ ಅವು ಮೊದಲೇ ನಿಧಾನವಾಗಿ ಚಲಿಸುತ್ತವೆ ಅದಕ್ಕೆ ಒಂದು ವಾರದ ಗಡುವು ನೀಡಿದ್ದೇನೆ. ಮುಂದಿನ ಮಂಗಳವಾರದ ಹೊತ್ತಿಗೆ ಒಂದು ಆಮೆಯೂ ಕಾಡಲ್ಲಿ ಕಾಣಿಸೊಲ್ಲ”
       ಅದರಂತೆ ಮಂಗಳವಾರದ ಹೊತ್ತಿಗೆ ಎಲ್ಲಾ ಆಮೆಗಳೂ ಕಾಡಿನಿಂದ ಹೊರಟು ಹೋದವು. ಪ್ರಾರಂಭದಲ್ಲಿ ಕೆಲವು ಜೀವಿಗಳಿಗೆ ಬೇಸರವೆನ್ನಿಸಿದರೂ ನಂತರ ಅವುಗಳಿಗೂ ಮಕರ ಒಳ್ಳೆ ಕೆಲಸ ಮಾಡಿದ ಎಂದೆನಿಸತೊಡಗಿತು. ಏಕೆಂದರೆ ಅವುಗಳಿಗೆ ಈಗ ಮೊದಲಿಗಿಂತಲೂ ಹೆಚ್ಚು ಆಹಾರ, ನೀರು, ಸ್ಥಳ ಸಿಕ್ಕಿತ್ತು.
       ಆದರೆ ಬಹಳ ಬೇಗನೆ ಕಾಡಿನ ಗಾಳಿಯಲ್ಲಿ ದುರ್ನಾತ ಬರಲು ಆರಂಭವಾಯಿತು. ಇದು ಕೊಳೆತ ಪದಾರ್ಥಗಳಿಂದ ಬರುತ್ತಿತ್ತು. ನೆಲದ ಮೇಲೆ ಬಿದ್ದ ಹಣ್ಣುಗಳು ಕೊಳೆಯುತ್ತಿದ್ದವು. ನದಿಗಳಲ್ಲಿ ಸತ್ತ ಪ್ರಾಣಿಗಳು ಕೊಳೆತು ನಾರುತ್ತಿದ್ದವು. ಆಮೆಗಳು ಇದೇ ಕೊಳೆತ ಪದಾರ್ಥಗಳನ್ನು ತಿಂದು ಬದುಕುತ್ತಿದ್ದವು. ಮಕರನೂ ಸಹ ತನ್ನ ವಿಶಾಲವಾದ ಪಂಜಗಳಿಂದ ಮೂಗನ್ನು ಮುಚ್ಚೆಕೊಂಡು ಹೊರ ಬರುತ್ತಿತ್ತು.  ಹೀಗೇ ಒಂದು ತಿಂಗಳು ಕಳೆಯಿತು....ಮತ್ತೆ ಮೊದಲಿನ ಕಥೆಯೇ ಶುರುವಾಯ್ತು. ಈ ಬಾರಿ ಹಾವುಗಳಿಗೆ ಮಕರನ ಪತ್ರ ತಲುಪಿತು. ಅವುಗಳಿಗೂ ಕಾಡನ್ನು ಬಿಟ್ಟು ಹೋಗಬೇಕಾಯಿತು. ಅಲ್ಲದೆ ಅವು ಸರಸರನೆ ಹರಿದು ಚಲಿಸುವುದರಿಂದ ಒಂದೇ ದಿನದ ಕಾಲಾವಕಾಶದಲ್ಲಿ ಕಾಡು ದಾಟಬೇಕಿತ್ತು. ಹಾವುಗಳ ಸರದಾರ ನಾಗರಾಜ ಮಕರನ ಬಳಿ ಬಂದು ತಮಗೆ ಕಾಡು ದಾಟಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಕೇಳಿಕೊಂಡರೂ ಮಕರ ಒಪ್ಪಲೇ ಇಲ್ಲ. “ಹಾವುಗಳು ತುಂಬಾ ಉದ್ದವಾಗಿಯೂ, ವಿಚಿತ್ರವಾಗಿಯೂ ಇರುತ್ತವೆ. ಅಲ್ಲದೆ ಅರ್ಥವಿಲ್ಲದೇ ಬುಸುಗುಟ್ಟುತ್ತಿರುತ್ತವೆ. ನಮಗೆ ಇಂತಹ ಜೀವಿಗಳ ಅವಶ್ಯಕತೆ ಇಲ್ಲ” ಎಂದು ಉಳಿದ ಮೊಸಳೆ, ಹಲ್ಲಿಗಳ ಮೇಲೆ ಗದರಿ ಸುಮ್ಮನಾಗಿಸಿಬಿಟ್ಟಿತು. ಮಕರನ ವಿರುದ್ದು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಬೇರೆ ದಾರಿ ಇಲ್ಲದೆ ಹಾವುಗಳೂ ಕಾಡನ್ನು ಬಿಟ್ಟು ಹೊರಟು ಹೋದವು.
      ಸ್ವಲ್ಪ ದಿನಗಳವರೆಗೆ ಮೊಸಳೆ,ಹಲ್ಲಿಗಳಿಗೆ ಹಾವುಗಳು ಇಲ್ಲದಿರುವುದು ಒಳ್ಳೆಯದೆನಿಸತೊಡಗಿತು. ಕಾರಣ ಅವುಗಳಿಗೆ ಹಾವೆಂದರೆ ಭಯ. ಈ ಹಾವುಗಳಿಗೆ ಯಾವಾಗ ಕೋಪ ಬಂದು ಯಾರ ಮೇಲೆ ತನ್ನ ವಿಷ ಕಕ್ಕುತ್ತೋ ಯಾರಿಗೊತ್ತು. ಒಂದು ಹನಿ ವಿಷವಾದರೂ ಸಾಕು ಅವರು ಸತ್ತಂತೆ ಎಂದು.
      ಕೆಲವು ವಾರಗಳು ಉರುಳಿದವು. ಜೀವಿಗಳೆಲ್ಲ ಸ್ವಲ್ಪ ನಿಶಕ್ತವಾದಂತೆ, ಗಾಬರಿಗೊಂಡತೆ ಕಂಡವು  ಕಾರಣ “ಇಲಿ”. ಈಗ ಅವುಗಳನ್ನು ತಿನ್ನುವ ಹಾವುಗಳೇ ಇಲ್ಲವಾದ್ದರಿಂದ ಇಲಿಗಳ ರಾಜ್ಯ ಹುಟ್ಟಿಕೊಂಡಿತ್ತು. ಎಲ್ಲಿ ನೋಡಿದರೂ ಇಲಿಗಳೇ, ಇಲಿಗಳು ಕಾಣಿಸತೊಡಗಿದವು. ಮರ-ಗಿಡಗಳ ಮೇಲೆ, ಹುಲ್ಲಿನ ಮೇಲೆ, ನೆಲದ ಮೇಲೆ ಎಲ್ಲೆಡೆಯೂ ಇಲಿಗಳೇ.....ಅವು ಮೊಸಳೆ, ಹಲ್ಲಿಗಳ ಮೊಟ್ಟೆಗಳನ್ನು ತಿಂದು ಹಾಕೆದವು. ಮೊಟ್ಟೆಗಳೇ ಇಲ್ಲದ ಮೇಲೆ ಮರಿಗಳು ಎಲ್ಲಿಂದ ತಾನೇ ಬರುತ್ತವೆ? ಸ್ವತಃ ಮಕರನ ಮೊಟ್ಟೆಗಳನ್ನೂ ಸಹ ಇಲಿಗಳು ತಿಂದು ಹಾಕಿದವು.
       ಈಗ ಮಕರನಿಗೆ ಒಂದು ಹೊಸ ಉಪಾಯ ಹೊಳೆಯಿತು. ಅದು ಮೊಸಳೆಗಳ ಸಭೆ ಕರೆದು ಹೇಳಿತು. “ಇಡೀ ಕಾಡೇ ನಮ್ಮದಾದರೆ ಎಷ್ಟು ಚೆನ್ನಾಗಿರುತ್ತೆ. ಅಲ್ಲವೇ? ಕೇವಲ ಮೊಸಳೆಗಳೇ ಇಲ್ಲಿದ್ದರೆ?? ಈ ಹಲ್ಲಿಗಳನ್ನೇ ನೋಡಿ ಒಂದು ಇದರ ಸ್ವಭಾವವೇ ವಿಚಿತ್ರ , ಮತ್ತೊಂದು ಇವು ತಮ್ಮ ಬಣ್ಣವನ್ನೂ ಬದಲಿಸುತ್ತಿರುತ್ತವೆ. ನಾವು ಇವನ್ನು ಹೇಗೆ ನಂಬುವುದು. ಒಂದು ಕ್ಷಣ ಕೆಂಪಗಿದ್ದರೆ, ಮತ್ತೊಂದು ಕ್ಷಣ ನೀಲಿಯಾಗಿರುತ್ತವೆ. ನಾವು ಇವುಗಳನ್ನೂ ಕಾಡಿನಿಂದ ಹೊರಗೆ ಅಟ್ಟಿಬಿಡೋಣ.”
    ಎಲ್ಲಾ ಮೊಸಳೆಗಳೂ ಮಕರನಿಗೆ ಹೆದರುತ್ತಿದ್ದವು. ಸುಮ್ಮನೆ ಎಲ್ಲವೂ ಮಕರನ ಮಾತಿಗೆ ಒಪ್ಪಿಗೆ ನೀಡುತ್ತಿದ್ದವು. ಹಾಗಾಗಿ ಎಲ್ಲವೂ ಚಪ್ಪಾಳೆಗಳೊಂದಿಗೆ ಮಕರನ ಮಾತನ್ನು ಸ್ವಾಗತಿಸಿದವು. ಮಕರನಿಗೆ ಬಹಳ ಸಂತೋಷವಾಯಿತು. ನಂತರ ಹಲ್ಲಿಗಳೂ ಕಾಡನ್ನು ಬಿಟ್ಟು ಹೋದವು.
      ಈಗಂತೂ ನಾನನಗರಿಯಲ್ಲಿ ಕೇವಲ ಮೊಸಳೆಗಳದ್ದೇ ಸಾಮ್ರಾಜ್ಯ. ಅವುಗಳಿಗೆ ಮಜವೋ ಮಜ. ಆದರೆ ಹಾಗಾಲಿಲ್ಲ.  ಅಲ್ಲಿ ಕೆಲವು ವಿಸ್ಮಯ ಘಟನೆಗಳು ಘಟಿಸುವುದಕ್ಕೆ ಆರಂಭಿಸಿತು. ಹೇಗೆಂದರೆ ಯಾರೋ ಹುಚ್ಚ ಕಾಡಿಗೆ ನುಸುಳಿ ಎಲ್ಲವನ್ನೂ ಉಲ್ಟಾ-ಪಲ್ಟಾ ಮಾಡಿದ ಹಾಗೆ. ಇಲಿಗಳ ಅಬ್ಬರವಂತೂ ದಿನಕ್ಕೆರಡರಷ್ಟು ರಾತ್ರಿಗೆ ನಾಲ್ಕರಷ್ಟು ಹೆಚ್ಚುತ್ತಾ ಬಂತು. ಎಷ್ಟರ ಮಟ್ಟಿಗೆಂದರೆ, ಇಲಿಗಳು ಮೊಸಳೆಗಳ ಮೇಲೆಯೇ ಕಬ್ಬಡ್ಡಿ ಆಡುವಷ್ಟು. ಕಪ್ಪೆಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಏಕೆಂದರೆ ಅವನ್ನು ತಿನ್ನಲು ಈಗ ಉಳಿದಿರುದು ಮೊಸಳೆಗಳಷ್ಟೆ.!!
      ಅಲ್ಲದೇ ಅವು ಎಷ್ಟು ದೊಡ್ಡದಾಗೆ ಬೆಳೆದಿತ್ತೆಂದರೆ ಮೊಸಳೆಗಳ ಪುಟ್ಟ ಮರಿಗಳನ್ನೂ ತಿಂದು ಹಾಕುತ್ತಿತ್ತು. ಹಲ್ಲಿಗಳು ಇಲ್ಲದ ಕಾರಣ ಕ್ರಿಮಿ ಕೀಟಗಳ ಸಂಖ್ಯೆಯಂತೂ ಕೋಟಿಗಟ್ಟಲೆ ಬೆಳೆದಿತ್ತು. ಈಗ ಎಲ್ಲಾ ಮೊಸಳೆಗಳೂ ಚಿಂತೆಗೀಡಾದವು.
    ಮೊಸಳೆಗಳ  ಜೀವನ ಬಹಳ ಕಷ್ಟವಾಗಿ ನಡೆಯುತ್ತಿತ್ತು. ಅವುಗಳಿಗೆ ತಮ್ಮ ಸುಖಮಯ ಜೀವನ ನಾಶವಾಗಲು ಕಾರಣವೇನೆಂದು ತಿಳಿಯಲೇ ಇಲ್ಲ. ಆದರೆ ಒಂದು ದಿನ ಒಂದು ಪುಟ್ಟ ಮೊಸಳೆಯ ಮರಿ ಸಭೆಯಲ್ಲಿ ತನ್ನ ಪುಟ್ಟ ಸ್ವರದಲ್ಲಿ  ಹೇಳಿತು. “ನಮ್ಮ ಕಾಡಿನಲ್ಲಿ ಸು-ಸಂತೋಷ ಕಳೆದು ಹೋಗಲು ಕಾರಣ ನಮಗೆ ಗೊತ್ತೇ ಇದೆ ಅಲ್ಲವೇ?” ಎಲ್ಲ ಮೊಸಳೆಗಳು ಸುಮ್ಮನಿದ್ದವು. ಎಲ್ಲವೂ ಭಯಭೀತವಾಗಿ ಮಕರನ ಕಡೆ ನೋಡಿದವು ಆದರೆ ಮಕರ ಇಂದು ಸ್ವಲ್ಪ ಅಶಕ್ತನಾಗಿ ಕಂಡಿತು.
     ಮಕರ ತನ್ನ ಬಾಲದ ಮೇಲೆ ಓಡಾಡುತ್ತಿದ್ದ ಇಲಿಗಳನ್ನು ಓಡಿಸುತ್ತಾ ಆ ಪುಟ್ಟ ಮೊಸಳೆಗೆ ಹೇಳಿತು. “ಹೌದು, ಹೌದು ಪುಟ್ಟ, ಏನು ಕಾರಣ ಎಂದು ಹೇಳು?”
           ಅದಕ್ಕೆ ಪುಟ್ಟ ಮೊಸಳೆ-“ಕಾಡಿನಲ್ಲಿ ಕಷ್ಟದ ದಿನಗಳು ಆಮೆಗಳು......" ಮಕರ ಎಲ್ಲರ ಮುಂದೆ ತಪ್ಪಿತಸ್ಥನಾಗಲು ಇಷ್ಟವಿಲ್ಲದೆ ಮಧ್ಯದಲ್ಲಿ ಬಾಯಿ ಹಾಕಿ ಹೇಳಿತು, “ಸರಿ ಸರಿ ಹೆಚ್ಚು ಮಾತಾಡುವ ಅವಶ್ಯಕತೆಯಿಲ್ಲ.” ಈಗ ಎಲ್ಲರಿಗೂ ಮಕರನ ಶಕ್ತಿಗೆ ಯಾವ ಮಹತ್ವವೂ ಇಲ್ಲ ಹಾಗೂ ಮಕರ ಹೇಳಿದ್ದೆಲ್ಲಾ ಸರಿಯಾಗಿರುವುದಿಲ್ಲ ಎಂದು ತಿಳಿದು ಬಂತು. ತಕ್ಷಣವೇ ಅವುಗಳು, ಆಮೆ, ಹಾವು ಹಾಗೂ ಹಲ್ಲಿಗಳಿಗೆ ಮತ್ತೆ ಕಾಡಿಗೆ ಹಿಂತಿರುಗಬೇಕೆಂದು ಸಂದೇಶ ಕಳಿಸಿದವು.
         ನಾಗನರಿಗರಿಯಲ್ಲಿ ಅಂದು ಉತ್ಸವದ ದಿನ ಎಲ್ಲ ಜೀವಿಗಳೂ ಮರಳಿ ಕಾಡಿಗೆ ಬಂದವು. ಎಲ್ಲವೂ ತಮ್ಮ ಪರಿವಾರಗಳೊಂದಿಗೆ ತಮ್ಮ-ತಮ್ಮ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು, ನಿಧಾನವಾಗಿ ನಡೆಸಿಕೊಂಡು ತಮ್ಮ ಮನೆಗಳಿಗೆ ಕರೆತಂದವು.
       ಎರಡು ತಿಂಗಳಲ್ಲಿಯೇ ಕಾಡು ಮೊದಲಿನಂತಾಯಿತು. ಇಲಿಗಳು ಓಡಿ ಹೋದವು, ಕ್ರಿಮಿ-ಕೀಟಗಳು ಮಾಯವಾದವು. ದುರ್ವಾಸನೆಯು ಸಮಾಪ್ತಿಯಾಯಿತು. ಮತ್ತೊಮ್ಮೆ ಎಲ್ಲರ ಜೀವನ ಎಂದಿನಂತೆ ಸಾಮಾನ್ಯವಾಗಿ ನಡೆಯತೊಡಗಿತು.

    ಅಜ್ಜ-“ಏನಪ್ಪಾ ಪ್ರೇಮ್, ಮಲಗಿ ಬಿಟ್ಟೇಯಾ? ನನ್ನ ಕಥೆ ಕೇಳ್ತಾ ಕೇಳ್ತಾ ನಿದ್ದೆ ಬಂದು ಬಿಟ್ಟಿತಾ?” ಎಂದರು.
ನಾನು ತಲೆ ಅಲ್ಲಾಡಿಸುತ್ತಾ, “ಇಲ್ಲ ಅಜ್ಜ, ನಾನು ಯೋಚನೆಯಲ್ಲಿ ಮುಳುಗಿದ್ದೆ, ನಮ್ಮ ಹಳ್ಳಿಗೆ ಹಿಂತಿರುಗಿ ಈ ಕಥೆಯನ್ನು ಹೇಳೋಣ ಅಂತ, ಆದರೆ ಯಾರೂ ಇದನ್ನು ನಂಬಲಿಲ್ಲ ಎಂದರೆ.”
      “ನೋಡು ಮಗು ನಾವು ಈ ಕಥೆಯನ್ನು ಮತ್ತೆ ಮತ್ತೆ ಹೇಳುವ ಕೆಲಸವನ್ನಷ್ಟೇ ಮಾಡಬಹುದು. ಕೆಲವರು ಕಥೆ ಕೇಳಿ ನಂಬದೇ ಇರಬಹುದು, ನಗಬಹುದು, ಇದೆಲ್ಲಾ ಸುಳ್ಳು ಅಂತಲೂ ಹೇಳಬಹುದು. ಕೆಲವರು ಕಥೆ ಕೇಳದೆಯೂ ಇರಬಹುದು. ಆದರೆ ಈ ವಿಶಾಲ ಜಗತ್ತಿನಲ್ಲಿ ನಮಗೆಲ್ಲರಿಗೂ ನಮ್ಮದೇ ಆದ ಯಾವುದಾದರೊಂದು ಸ್ಥಳ ಖಂಡಿತವಾಗಿಯೂ ಇದ್ದೇ ಇರುತ್ತದೆ ಎಂದು ಬಹುಷಃ ಎಲ್ಲರೂ ಒಂದಲ್ಲ ಒಂದು ದಿನ ಒಪ್ಪಿಕೊಳ್ಳಲೇ ಬೇಕು. 

                                            - ದೀಪಶ್ರೀ ಜೆ

ವಿಜ್ಞಾನ-ವಿಶೇಷ: "ವೈಜ್ಞ್ಞಾನಿಕ ಆಲೋಚನೆ "

 


"ವಿಜ್ಞಾನದ ಮೂಲದಲ್ಲಿ ಎರಡು ವಿರೋಧಾತ್ಮಕ ಮನೋವೃತ್ತಿಗಳ ನಡುವೆ ಅತ್ಯಗತ್ಯವಾದ ಒಂದು ಸಮತೋಲನವಿದೆ -
೧. ಹೊಸ ಆಲೋಚನೆಗಳ ಮುಕ್ತ ಸ್ವಾಗತ - ಅವು ಎಷ್ಟೇ ವಿಲಕ್ಷಣ ಅಥವಾ ಅಸಮಂಜಸವೆನಿಸಿದರೂ ಸಹ. 
೨. ಆಲೋಚನೆಗಳ ನಿರ್ದಯ, ನಿಷ್ಪಕ್ಷಪಾತ ಸಂದೇಹಾತ್ಮಕ ಪರಿಶೀಲನೆ. 
ಈ ಸಮತೋಲನದಿಂದಲೇ ದಟ್ಟ ಸತ್ಯಗಳನ್ನು ದಟ್ಟ ಅಸಂಬದ್ಧತೆಗಳಿಂದ ಹೊರತರಲು ಸಾಧ್ಯ." 
                                                                                        - ಕಾರ್ಲ್ ಸಾಗನ್


       ವಿಜ್ಞಾನ ಎಂಬುದು "ವಿಶೇಷವಾದ ಜ್ಞಾನ" ಎಂದೂ, ಅದನ್ನು "ವಿಕೃತ ಜ್ಞಾನ"ವಾಗಿಸಬಾರದೆಂದೂ ಅಭಿಪ್ರಾಯಗಳಿವೆ. ಆದರೆ ವಿಜ್ಞಾನವು ಸಾಮಾನ್ಯವಾದ ಜ್ಞಾನ, ಭಾವಾತೀತವಾದ ಉದ್ವೇಗರಹಿತ ಸತ್ಯಶೋಧನ. ವಿಜ್ಞಾನ ಹಾಗು ಸತ್ಯದ ನಡುವಿನ ಸಂಬಂಧದಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರವೇನೆಂದರೆ ವಿಜ್ಞಾನವು ಸತ್ಯದ ಗುಣಲಕ್ಷಣಗಳ ಬಗ್ಗೆಯಾಗಲಿ ಅಥವಾ ಸತ್ಯವು ಹೀಗೇಕೆ ಎಂಬುದರ ಬಗ್ಗೆಯಾಗಲಿ ತಾತ್ವಿಕ ಜಿಜ್ಞಾಸೆ ಮಾಡದು. ಸತ್ಯವು ಯಾರಿಗೆ ಎಷ್ಟೇ ಪ್ರಿಯವಾಗಿರಲಿ, ಅಪ್ರಿಯವಾಗಿರಲಿ ಅದರಿಂದ ವಿಜ್ಞಾನಕ್ಕೇನೂ ಇಲ್ಲ. ಸತ್ಯ ಇಂತಿಷ್ಟೇ ಎಂದು ಕಂಡುಕೊಳ್ಳುವುದು ಮಾತ್ರ ವಿಜ್ಞಾನದ ಗುರಿ. 
         
           ವೈಜ್ಞಾನಿಕ ಆಲೋಚನೆಯ ಪ್ರಮುಖ ಅಂಶಗಳು - ತರ್ಕ ಹಾಗು ಕಾರಣ. ನಡೆಯುತ್ತಿರುವ ಚಟುವಟಿಕೆಯ ತರ್ಕಬದ್ಧ ವಿವರಣೆ, ಕಾರಣಗಳು ಹಾಗು ಅವುಗಳನ್ನು ಪರಿಶೀಲಿಸಬಹುದಾದ ವಿಧಾನಗಳು ಇವೆ ಸೇರಿ ವೈಜ್ಞಾನಿಕ ಆಲೋಚನೆಯ ರಾಜಮಾರ್ಗದಲ್ಲಿ ನಡೆಸುತ್ತವೆ. ಭೌತಶಾಸ್ತ್ರಜ್ಞ ರಿಚರ್ಡ್ ಫೇಯ್ಮನ್ ರವರು ಹೇಳುವಂತೆ - "ವಿಜ್ಞಾನವು ಬಹುಪಾಲು ಅವಲೋಕನ ಹಾಗು ಅದರ ಸೂಕ್ಷ್ಮ ತಾರ್ಕಿಕ ಪರಿಶೀಲನೆ." ಈ ರೀತಿಯ ಆಲೋಚನಾ ಕ್ರಮವನ್ನು ಕುರಿತು ಸರ್ ಸಿ.ವಿ.ರಾಮನ್ ರವರು - "ಇದು ಪ್ರಕೃತಿಯನ್ನು ಪ್ರೀತಿಸು ಪರಿ. ಆದರೆ ಅಮೂರ್ತ ಅರ್ಚನೆಯಲ್ಲ, ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವ ಕ್ರಿಯೆ." ಎನ್ನುತ್ತಾರೆ. 

       ದಿನನಿತ್ಯದ ಜೀವನದಲ್ಲಿ ಗಮನಿಸಿದ್ದನ್ನು ಪ್ರಶ್ನಿಸಿ ಪರಿಶೀಲಿಸುವ ಅಭ್ಯಾಸವೇ ವಿಜ್ಞಾನ. ಪ್ರಕೃತಿ ಬಗ್ಗೆ ಮನುಷ್ಯ ಪಡೆದಿರುವ ಸಂಪೂರ್ಣ ಜ್ಞಾನ ಸೂಕ್ಷ್ಮ ಗಮನಿಸುವಿಕೆ, ಪರಿಶೀಲನೆ ಹಾಗು ಇದೇಕೆ ಹೀಗೆ ಎಂದು ಪ್ರಶ್ನಿಸಿಯೇ ಪಡೆದದ್ದು. ಹುಟ್ಟುತ್ತಾ ವಿಶ್ವಮಾನವನಾಗಿರುವ ಶಿಶುವಿನಲ್ಲಿ ಸಹಜ ಕುತೂಹಲ ಹೇಗೆ ಪ್ರಶ್ನಿಸುತ್ತದೆಯೋ ಹಾಗೆ ವಿಚಾರವಂತನಾದವನು ಪ್ರಶ್ನಿಸುತ್ತಾನೆ. ಎಲ್ಲಾ ಜ್ಞಾನಮಾರ್ಗಗಳಲ್ಲೂ "ಎಲ್ಲಿ, ಏಕೆ, ಏನು, ಹೇಗೆ, ಯಾವಾಗ, ಯಾರು" ಎಂಬತಹ ಪ್ರಶ್ನೆಗಳಿಂದಲೇ ವಿಚಾರಗಳ ವಿಕಾಸ ಸಾಧ್ಯ. ಈ ಬಗೆಯ ಕೌತುಕ ಕುತೂಹಲಗಳೇ ವೈಜ್ಞಾನಿಕ ದೃಷ್ಟಿಕೋನದ ಪ್ರಮುಖ ಅಂಗಗಳು. ನ್ಯೂಟನ್ ಸೇಬು ಏಕೆ ಕೆಳಗೆ ಬಿತ್ತು ಎಂದು ಆಲೋಚಿಸುವಂತೆ ಮಾಡಿದ್ದು ಈ ಬಗೆಯ ಕುತೂಹಲವೇ. ಆದರೆ ಈ ಸೇಬಿನ ಕಥೆ ಎಷ್ಟು ಸತ್ಯ ಎಂದು ಪ್ರಶ್ನಿಸುವುದು ಸಹ ಇದೇ ವೈಜ್ಞಾನಿಕ ಆಲೋಚನೆಯ ಫಲ! 

      ನಮ್ಮ ವಿಚಾರಗಳನ್ನು ನಾವೇ ಅಲ್ಲಗಳೆಯಲು ಸಾಧ್ಯವೇ ಎಂದು ಪರಿಶೀಲಿಸಿ ನೋಡುವುದು ವಿಜ್ಞಾನದ ಮೊದಲ ಮಜಲುಗಳಲ್ಲೊಂದು. ಹಲವು ಬಾರಿ ನಮ್ಮ ಆಲೋಚನೆ, ವಿಚಾರಗಳು ಅಲ್ಲಿಲ್ಲಿ ಕೇಳಿದ್ದನ್ನು, ಅವರಿವರು ಹೇಳಿದ್ದನ್ನು ನಂಬಿ ರೂಪಿತಗೊಂಡಿರುತ್ತವೆ. ಇಂದು ವಾಟ್ಸಾಪ್ಪ್, ಫೇಸ್ ಬುಕ್, ನ್ಯೂಸ್ ಚಾನಲ್ ಗಳು ಮುಂತಾದ ಮಾಧ್ಯಮಗಳು ನಮ್ಮ ವಿಚಾರ ಅಭಿಪ್ರಾಯಗಳನ್ನು ಕಟ್ಟಿಕೊಡುತ್ತವೆ. ಇವುಗಳನ್ನು ವಿವೇಚಿಸುವ ಗೋಜಿಗೆ ಹೋಗದೆ ನಂಬಿಕೊಳ್ಳುವ ಮನೋವೃತ್ತಿ ಅವೈಜ್ಞಾನಿಕವಾಗುತ್ತದೆ. 2012ಕ್ಕೆ ಪ್ರಪಂಚ ಮುಳುಗಿಹೋಗುವುದು ಎಂದು ಬೊಬ್ಬೆಯಿಟ್ಟ ಮಾಧ್ಯಮಗಳು ಇವೇ ಎಂದು ನೆನಪಿರಲಿ! ಆದ ಕಾರಣ ನೆಚ್ಚಿಕೊಂಡ ಸಂಗತಿಗಳನ್ನು ಸಂದರ್ಭ ಒದಗಿ ಬಂದಾಗ ಪರಿಶೀಲಿಸಿ, ವಿರುದ್ಧವಾದ ವಿಚಾರಗಳ ಸಮ್ಮುಖದಲ್ಲಿ ಒರೆಗೆ ಹಚ್ಚುಬೇಕು. ಇದು ಮನುಷ್ಯನ ರೂಢಿಗತ ಸ್ವಭಾವಕ್ಕೆ ವಿರುದ್ಧವೆನಿಸಿದರೂ ವೈಜ್ಞಾನಿಕ ಹೌದು.  

       ಹೆಚ್ಚಿನ ಸಾಕ್ಷಿಗಳಿಗಾಗಿ ಹುಡುಕುವುದು, ನಿರ್ಣಾಯಕ ಸಾಕ್ಷಿ ಸಿಗುವವರೆಗೂ ಅನುಮಾನದ ದೃಷ್ಟಿ ಹೊಂದಿರುವುದು ಸಹ ವೈಜ್ಞಾನಿಕವೇ ಹೌದು. ನ್ಯೂಟನ್ ಹಾಗು ಸೇಬಿನ ಕಥೆಯ ಸತ್ಯಾಸತ್ಯತೆ ನಂಬದೆ, ಅದು ಕೇವಲ ಮಿತಕ ಮಾತ್ರವೇ ಎಂದು ಪ್ರಶ್ನಿಸಿ ಪರೀಕ್ಷಿಸಿದವರು ಈ ಬಗೆಯ ವಿಜ್ಞಾನಿಗಳು! ಯಾವುದನ್ನೂ ಕೊನೆಯ ಮಾತೆಂದು ವಿಜ್ಞಾನ ಒಪ್ಪದು, ಪದೇ ಪದೇ ಪರಿಶೀಲಿಸುವುದು. 1927ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬಲ್ ಪ್ರಶಸ್ತಿ ಕೋಲಿಕ್ ಆಮ್ಲದ ರಚನೆ ಕಂಡುಹಿಡಿದನೆಂದು ಹೆನ್ರಿಕ್ ವಿಲ್ಯಾಂಡ್ ಗೆ ನೀಡಲಾಯಿತು, ಆದರೆ ಅದೇ ವರ್ಷ ಆತ ಕಂಡುಹಿಡಿದ ರಚನೆ ತಪ್ಪೆಂದು ಕಂಡುಹಿಡಿಯಲಾಯಿತು. ವಿಜ್ಞಾನದಲ್ಲಿ ಯಾರೂ ಅಧಿಕೃತರಲ್ಲ, ಸತ್ಯವೊಂದೇ ಅಧಿಕೃತ. ಸತ್ಯದ ಶೋಧನ ನಿರಂತರವಾದದ್ದು ಆದ್ದರಿಂದಲೇ ವೈಜ್ಞಾನಿಕವಾಗಿ ಆಲೋಚಿಸ ಬಯಸಿದರೆ ಇಂದು ಆಲೋಚಿಸಿ ನಾಳೆ ಬಿಡಲಾಗದು ಅದೊಂದು ಜೀವನ ಕ್ರಮವಾಗಲೇ ಬೇಕಾಗುತ್ತದೆ. 

      ವೈಜ್ಞಾನಿಕ ಆಲೋಚನೆಯನ್ನು ಕ್ರಮಬದ್ಧವಾಗಿ ಬೆಳೆಸಿಕೊಳ್ಳುವ ಪ್ರಕ್ರಿಯೆಯನ್ನು ನ್ಯೂಟನ್ ನ ಸೇಬಿನ ಕಥೆಯ ಸತ್ಯ ಹುಡುಕುವ ಮೂಲಕ ನಾಂದಿಯಾಡುವಿರೇನೊ ನೋಡಿ!! 

ವಿನೋದ: "ಅಂಕಲ್ ನ ಸ್ಪೀಚು"

 

ರಾಜ್ಯಶಾಸ್ತ್ರ ವಿಭಾಗ ಎಂಬ ಪಿಚ್ಚು,
ಅಲ್ಲಿ ಅಂಕಲ್ ನ ಸ್ಪೀಚು
ನಿರಂತರ ಕೋಚು
ನಾನ್ ಸ್ಟಾಪ್ ವಾಚು
ಮಾತೆಂಬ ಬ್ಯಾಟಿಂಗ್ ನಿಂದ ಅದು ನುಚ್ಚು
ವಿಷಯದಲ್ಲಿರಲಿಲ್ಲ ಒಂದಕ್ಕೊಂದು ಮ್ಯಾಚು
ಆಫ್ ಆಯ್ತು ಮೈಂಡ್ ಸ್ವಿಚ್
ಹಿಡಿತ ತಪ್ಪಿತು ದೇಹದ ಕ್ಲಚ್ಚು
ಕೊಠಡಿ ತಾಪವೂ ಹೆಚ್ಚು
ಧಗೆಯಲ್ಲಿ ಹೊತ್ತಿಸಿದಂತಿತ್ತು ದೇಹಕ್ಕೆ ಕಿಚ್ಚು
ಹತ್ತುತ್ತಿತ್ತು ನಿಧಾನವಾಗಿ ಹುಚ್ಚು
ಹಸಿವಿನಿಂದ ಹಿಡಿಯಿತು ಹೊಟ್ಟೆ ಕಚ್ಚು
ಅನಿಸಿತ್ತು ಯಾರನ್ನಾದರೂ ಹಿಡಿದು ಕೊಚ್ಚು
ಅಂಕಲ್ ಹಾಕುತ್ತಿದ್ದದ್ದು ಬ್ಲೇಡಲ್ಲ... ಮಚ್ಚು
ಕೊನೆಗೂ ತಿಳಿಯಲಿಲ್ಲ ಅವರಿಗೆ ನಮ್ಮ ಪೇಚು
ಎದ್ದು ಓಡಲು ಸಾಲಲಿಲ್ಲ ಕೆಚ್ಚು
ನಮ್ಮ ಸ್ಥಿತಿ ದೇವರಿಗೇ ಮೆಚ್ಚು
ಮನ ಹೇಳಿತು ಏನಾದರೊಂದು ಗೀಚು
ಕೊನೆಗೂ ಮುಗಿಯಿತು ಅಂಕಲ್ ಸ್ಪೀಚು
ಹರುಷದಿ ಬೆಂಚನ್ನು ಚಚ್ಚೊ ಚಚ್ಚು.....!!

                                       - ರೂಪ ಮತ್ತು ಉಷಾಗಂಗೆ

ನಾ ಕಂಡಂತೆ: "26, ನಾನ್ಯಾರು?"

      

      ಮೂರು ವರ್ಷದ ಕೆಳಗೆ ಅವಳೊಂದಿಗೆ ಮಾತನಾಡಿದ್ದು, ನನಗೆ ಇನ್ನೂ ನೆನಪಿದೆ. ಆಗ ತಾನೇ ಇಂಜಿನಿಯರಿಂಗ್ ಮುಗಿಸಿದ್ದಳು. ಕಾಲೇಜಿನಲ್ಲಿ ನನಗೆ ಒಂದು ವರ್ಷ ಜೂನಿಯರ್ ಅವಳು. ಭವಿಷ್ಯದ ಬಗ್ಗೆ, ತನ್ನ ಕನಸುಗಳ ಬಗ್ಗೆ, ಆಕಾಂಕ್ಷೆಗಳ ಬಗ್ಗೆ ಹೇಳಿದ್ದಳು. ಉತ್ತಮ ವಿಶ್ವದ ವಿನ್ಯಾಸ ಮಾಡ ಬಯಸಿದ ಇಂಜಿನಿಯರ್, ತನ್ನ ಕಲೆಯಿಂದ ದನಿಯಿಲ್ಲದವರ ದನಿಯಾಗ ಬಯಸಿದ ಕಲೆಗಾರ್ತಿ. 
        ಈಗ ನಾನು ಅದೇ ಹುಡುಗಿ ಎಂದು ಈ ಮಹಿಳೆ ಹೇಳುವಾಗ ನಾನು ಬೆರಗುಗೊಂಡಿದ್ದೇನೆ. ಸರಳ-ಮಿತವ್ಯಯದ ಜೀವನಶೈಲಿಯ ಬಗ್ಗೆ ಉತ್ಸಾಹ-ಅಭಿಮಾನದಿಂದ ವಾದಿಸುತ್ತಿದ್ದ ಆ ಹುಡುಗಿಯು ಒಂದು ಸಂಜೆ ವಿಹಾರಕ್ಕೆ ಹೊರೆ ಹೊತ್ತು ಮೆರವಣಿಗೆ ಹೊರಟ ಭಾರತೀಯ ವಧುವಿನಂತೆ ತಯಾರಾಗಿರುವ ಈ ಮಹಿಳೆಯೇ!? ಅತ್ಯುತ್ಸಾಹದಿಂದ ತನ್ನ ಗಂಡನ ಕಾರು, ಕಾಳಜಿ, ಕಳಕಳಿಯ ಬಗ್ಗೆ ಈಕೆ ಮಾತನಾಡುತ್ತಿರುವಾಗ, ತನ್ನದೇ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಬಯಸಿದ್ದ ಆ ಹುಡುಗಿ ಎಲ್ಲಿ ಕಳೆದು ಹೊದಳೋ ಎಂದು ಕಾಡುತ್ತಿದೆ. ಕಾಲೇಜು ದಿನಗಳಲ್ಲಿ ಎಷ್ಟು ಉತ್ಸಾಹಭರಿತ ಹಾಗು ವಿಶ್ವಾಸತ್ಮಕವಾಗಿದ್ದಳೆಂದು ನನಗೆ ನೆನಪಿದೆ. ಹೊಸ ವಿಷಯ ತಿಳಿವ ಕುತೂಹಲ, ಹೊಸ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಕಾತುರ! ಇವಳಲ್ಲಿ ಉದಯಗೊಂಡಿರುವ ಮಹಿಳೆಯು ಇವಳಲ್ಲೊಮ್ಮೆ ಅರಳಿದ್ದ ಹುಡುಗಿಯನ್ನು ಹಿಸುಕಿ ಹಾಕಿರುವಳೆ? ಆ ಹುಡುಗಿ - ಕನಸು ಕಟ್ಟುವ ಧೈರ್ಯ ಮಾಡಿದ್ದವಳು, ಪ್ರಶ್ನಿಸುವ ಛಲವಿದ್ದವಳು, ಪ್ರಯೋಗಗಳಿಗೆ ತೆರೆದುಕೊಂಡಿದ್ದವಳು, ಅವಕಾಶಗಳನ್ನು ಅನ್ವೇಶಿಸುತ್ತಿದ್ದವಳು. 
      ನನಗೆ ಈ ಮಹಿಳೆಯ ಕುರಿತು ಯಾವುದೇ ದೂರುಗಳಿಲ್ಲ. ಆಕೆಯ ಜೀವನ, ಆಕೆಯ ಅಭಿರುಚಿ, ಆಕೆಯ ಆಯ್ಕೆ. ನಾನು ಅವೆಲ್ಲವನ್ನೂ ಗೌರವಿಸುತ್ತೇನೆ. ನನ್ನ ಒಂದೇ ಒಂದು ಚಿಂತೆ ಈಕೆ ಒಮ್ಮೆ ಆಗಿದ್ದ ಹುಡುಗಿ. ಆ ಹುಡುಗಿ ಎಲ್ಲಿ ಮಾಯವಾದಳು? ತನ್ನ ಮನಸ್ಸಿನ ಯಾವುದಾದರು ಕತ್ತಲೆ ಮೂಲೆಯಲ್ಲಿ ಅವಳನ್ನು ಹೂತಿಟ್ಟಳೇನೋ? ತನ್ನ ಈಗಿನ ಜೀವನದ ಬಗ್ಗೆ ಮತನಾಡುವಾಗ, ಈಕೆ ಹೇರಳತನದ ಪ್ರದರ್ಶನವನ್ನೇಕೆ ಮಾಡುತ್ತಿದ್ದಾಳೆ? ಅವಳೇನಾದರೂ ಅಪ್ರಜ್ಞಾಪೂರ್ವಕವಾಗಿ ತನ್ನ ಕಳೆದುಕೊಂಡ ಕನಸುಗಳನ್ನು ಈ ಭೌತಿಕ ಹೇರಳತನದಿಂದ ಸರಿದೂಗಿಸಿದ್ದೇನೆ ಎಂದು ಹೇಳಬಯಸುತ್ತಿದ್ದಾಳೆಯೇ? ಅವಳು ಇಂಜಿನಿಯರ್. 'x'ನ ಮೌಲ್ಯದಲ್ಲಿ ಆದ ಇಳಿಕೆ, 'y'ನ ಮೌಲ್ಯದಲ್ಲಿ ಆದ ಏರಿಕೆಯಿಂದ ಸರಿದೂಗಿಸಲಾಗದು ಏಕೆಂದರೆ ಅವೆರಡೂ ಒಂದೇ ಸಮೀಕರಣದ ಭಾಗಗಳಲ್ಲ ಎಂಬುದನ್ನು ಅರಿಯುವಷ್ಟು ಜಾಣೆ!
      ಬಹುಶ ನಾನೇ ಅತಿಯಾಗಿ ವಿಮರ್ಶಿಸುತ್ತಿರುವೆನೇನೋ. ಇದು ಕೇವಲ ನನ್ನೊಳಗಿನ ನಿರಾಶಾವಾದವಿರಬಹುದು. ನನ್ನ ಪೂರ್ವನಿರ್ಧಾರಿತ ಸಂಕುಚಿತ ದೃಷ್ಟಿಕೋನವಿರಬಹುದು. ನನಗೆ ಸಂಪೂರ್ಣ ವಿವರಗಳು ತಿಳಿದಿಲ್ಲ. ಅರಿವಿಲ್ಲದೆ ತೀರ್ಮಾನಗಳಿಗೆ ಜಿಗಿಯುತ್ತಿರುವೆನೇನೋ. ಆಕೆ ಹೊಸದಾಗಿ ಕಂಡುಕೊಂಡಿರುವ ವೈವಾಹಿಕ ಆನಂದ ಹಾಗು ಸಂಪದ್ಭರಿತತೆ ಆಕೆಯ ಕನಸುಗಳನು ನನಸಾಗಿಸುವುದರಲ್ಲಿ ಸಹಾಯಕವಿರಲೂಬಹುದು. ಅಥವಾ ಹೊಸ ಕನಸುಗಳ ನಿರ್ಮಾಣಕ್ಕೆ ಎಡೆ ಮಾಡಿಕೊಡುವಂತಿರಬಹುದು, ಯಾರಿಗೆ ಗೊತ್ತು? ಯಾವುದು ವಿಕಾಸವಾಗದೋ, ಅದು ವರ್ಜಿತವಾಗಿಬಿಡುತ್ತದೆ.
        ಆದರೂ ಕಳೆದ ವರ್ಷ ಆಕೆಗೆ ವಯಸ್ಸು 24, ವಿವಾಹವಾದಳು. ಈಗ 25, ತಾಯಿಯಾಗಿದ್ದಾಳೆ. ವಿವಾಹ ಹಾಗು ತಾಯ್ತನ ಎರಡನ್ನೂ ಗೌರವಿಸುತ್ತಾ, ಮುಂದಿನ ವರ್ಷ "26, ನಾನ್ಯಾರು?" ಎಂದು ಆತ್ಮವಿಮರ್ಶೆ ಕೈಗೊಂಡರೆ ಹೇಗೋ  ಎಂದು ಮನಸ್ಸು ಆಲೋಚಿಸುತ್ತಿದೆ. ಈ ಮಹಿಳೆ ಕಂಡುಕೊಳ್ಳುವ ಉತ್ತರ ಈಕೆ ಒಮ್ಮೆ ಆಗಿದ್ದ ಹುಡುಗಿಯನ್ನು ನಿರಾಶೆಗೊಳಿಸದಿರಲಿ ಎಂದು ಪ್ರಾರ್ಥಿಸುತ್ತೇನೆ.

                                                                                                                                                - ಮಂಜುನಾಥ್ ಎ ಎನ್
 (ಆಂಗ್ಲದಲ್ಲಿ: http://anamkal.blogspot.com/2014/07/25-who-am-i.html)

ಕವನ: "ದಾಮಿನಿ"



      ನಿರ್ಭಯಾ ಘಟನೆಗೆ ತಲ್ಲಣಿಸಿದ ಮನ ರಾತ್ರಿಯೆಲ್ಲ ನಿದ್ದೆದೂರಾಗಿ ಒದ್ದಾಡುತಿರುವಾಗ ಆ ತುಮುಲಗಳನ್ನೆಲ್ಲ ಹೊರಹಾಕಿದ ಪ್ರಯತ್ನವೇ ಈ ಕವನ, ನೊಂದ ಹೆಣ್ಣುಮಕ್ಕಳ ಆತ್ಮಗಳಿಗೆ ಅಂಕಿತ ಈ ಪದ್ಯ, ಹೋರಾಡುವ ಮನಗಳಿಗೆ ಅರ್ಪಣೆ ಈ ಕವನ...


ದಾರುಣವದು ದುರ್ದಿನದಲಿ 
ದಾಂಡಿಗರ ದಾಂಧಲೆಯಲಿ 
ಧ್ವಂಸಳಾದೆ ದಯೆತೋರದ 
ದುಷ್ಟ ಜನರ ಧರೆಯಲಿ 

ನೆತ್ತರಿನ ಮಡುವಿನಲಿ 
ನೆಂದು ಹೋದರೂ ನೀನು 
ನಂದಲಿಲ್ಲ ನಂಬಿಕಾಗ್ನಿ 
ನರಳುತಿದ್ದರೂನು 

ದೇಶವಿಡೀ ಕಂಪಿಸಿ 
ದುರಂತಕಾಗಿ ದುಃಖಿಸಿ 
ದಾಮಿನಿಯರ ದುರ್ಗತಿಯ 
ದಾರಿಯನ್ನು ಅಳಿಸಿ ಎಂದು 

ಬದುಕ ಬಯಸಿದೆ ನೀನು 
ಛಲದಿ ಸಹಿಸಿದೆ 
ಇಂದು ನಾಳೆ ಎಂದಾದರೂ 
ಗೆಲುವೆ ಎಂದೆಣಿಸಿದೆ 

ಆ ದುರುಳರ ದಮನವಿನ್ನು 
ದೂರದಲ್ಲಿ ಇಲ್ಲವೆಂದು 
ಧೂರ್ತರಿಗೆ ದಂಡವಂತು 
ದೊರಕದಿರುವುದಿಲ್ಲವೆಂದು 

ದಿನವು ದೂಡಿದೆ ನೀನು 
ದಾರಿ ನೋಡಿದೆ 
ಮತ್ತೇಕೆ ಮೌನವಾದೆ 
ನಮ್ಮನೇಕೆ ದೂಡಿ ಹೋದೆ 

ಓ ಗೆಳತಿ ಈ ಅಂತ್ಯವು 
ಮುಗಿದಾ ಕಥೆಯಲ್ಲ 
ಮೌನ ವಹಿಸಿ ಸಹಿಸಿದವರೂ 
ಎದ್ದು ನಿಂತರಲ್ಲ 

ದಫನದಾಗ್ನಿ ದಳ್ಳುರಿಯು 
ದೀವಿಗೆಯಾಗಿಹುದಿಲ್ಲಿ 
ದಾನವರ ದೌರ್ಜನ್ಯವು 
ದುಸ್ಸಹವಿನ್ನಿಲ್ಲಿ

ನೀ ಸಹಿಸಿದ ದುಷ್ಕೃತ್ಯಕೆ 
ಜಗವೇ ಜರ್ಜರಿತಗೊಂಡು 
ಪೈಶಾಚಿಕ ಕೃತ್ಯಕೆ 
ಪ್ರಪಂಚ ಪರದೆ ಸೀಳಿಕೊಂಡು 

ತಂಡ ತಂಡ ಮಾಡಿಕೊಂಡು 
ಕೆಂಪು ಕೆಂಡ ಕಾರಿಕೊಂಡು 
ನಾವ್ ಸಹಿಸೆವು ನಾಯಕರೆ 
ಎದ್ದು ಹೊರಗೆ ಬನ್ನಿರೆಂದು 

ನಾರಿ ಭಕ್ಷಕಾರಿಗಳಿಗೆ 
ಶೂಲ ಶಿಕ್ಷೆ ಹಾಕಿರೆಂದು 
ಧಾತ್ರಿಯರು ದ್ರೋಹಿಗಳಿಗೆ 
ಧಕ್ಕೆ ಉಂಟು ಮಾಡಲೆಂದು 

ಧಿಕ್ಕಾರದ ದನಿ ಎದ್ದಿದೆ 
ದೈತ್ಯದಲೆಯು ದಡದಲಿಂದು

- ಉಷಾಗಂಗೆ

ವ್ಯಕ್ತಿ ಪರಿಚಯ: "ಪಂಜೆ ಮಂಗೇಶ ರಾಯರು"




ನಾಗರ ಹಾವೆ, ಹಾವೊಳು ಹೂವೆ,
ಬಾಗಿಲ ಬಿಲದೊಳು ನಿನ್ನಯ ಠಾವೆ,
ಕೈಗಳ ಮುಗಿವೆ ಹಾಲನ್ನೀವೆ,
ಬಾ ಬಾ ಬಾ ಬಾ ಬಾ ಬಾ ಬಾ.
      ಬಹುಶಃ ಈ ಹಾಡನ್ನು ಕೇಳದ ಕನ್ನಡಿಗರೇ ಇಲ್ಲವೇನೊ. ಮಕ್ಕಳು ಕನ್ನಡ ಪದಗಳನ್ನು ಕಲಿಯಲೆಂದೆ ಮಕ್ಕಳ ಸಾಹಿತ್ಯವನ್ನು ರಚಿಸಿದ ಬರಹಗಾರರಲ್ಲಿ ಪಂಜೆ ಮಂಗೇಶ ರಾಯರು ಪ್ರಮುಖರು. ಮಕ್ಕಳ ಸಾಹಿತ್ಯ ಪಿತಾಮಹ, ಕನ್ನಡ ಸಣ್ಣ ಕಥೆಗಳ ಜನಕ, ಕನ್ನಡ ಪ್ರಬಂಧಗಳ ಆರಂಭಕರ್ತ ಎಂದೇ ಖ್ಯಾತರಾಗಿರುವ ಪಂಜೆಯವರು ಜನಿಸಿದ್ದು ಫೆಬ್ರವರಿ 22, 1874 ರಂದು. ರಾಮಪ್ಪಯ್ಯ ಮತ್ತು ಸೀತಮ್ಮರವರ ಮಗನಾಗಿ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಜನಿಸಿದ ಪಂಜೆಯವರು, ಚಿಕ್ಕಂದಿನಿಂದಲೇ ತಂದೆಯನ್ನು ಕಳೆದುಕೊಂಡರು. ತಾಯಿ ಸೀತಮ್ಮ ಕಷ್ಟದಲ್ಲಿ ತಮ್ಮ 6 ಮಕ್ಕಳನ್ನೂ ಬೆಳೆಸಿದರು. ಪಂಜೆಯವರು ಕಷ್ಟದಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಬಿಎ ಪದವಿಯ ಜೊತೆಗೆ ಶಿಕ್ಷಕ ಡಿಪ್ಲಮೋ ಗಳಿಸಿದರು.
      ಓದುತ್ತಿರುವಾಗಲೇ ತಮ್ಮ ಕನ್ನಡ ಪ್ರೌಢಿಮೆಯ ಕಾರಣದಿಂದ ಅನುವಾದಕರ ಉದ್ಯೋಗ ಸಂಪಾದಿಸಿದರು. ನಂತರ ಕೊಡಗಿನಲ್ಲಿ ಶಾಲಾ ಇನ್ ಸ್ಪೆಕ್ಟರ್ ಆಗಿ ಸೇರಿಕೊಂಡರು. ಶಾಲೆಯ ದುಸ್ಥಿತಿಯನ್ನು ಗಮನಿಸಿದ ಅವರು ತಮ್ಮ ಅಲ್ಪ ಸಂಬಳದಲ್ಲಿಯೇ ಹಲವಾರು ಕಲ್ಯಾಣ ಕಾರ್ಯಕ್ರಮಗಳಿಗೆ ನೆರವು ನೀಡಿದ್ದಲ್ಲದೆ, ತಾವೇ ಹಲವಾರು ಯೋಜನೆಗಳನ್ನು ಆರಂಭಿಸಿದರು. ಹೊಸ ಶಿಕ್ಷಣದ ಕಲಿಕೆಯ ವಿಧಾನಗಳನ್ನು ಕಂಡುಹಿಡಿದ ಅವರು, ಶಿಕ್ಷಕರಲ್ಲಿ ಕಲಿಕೆಯ ಪ್ರೀತಿಯನ್ನು ಮೂಡಿಸಿದರು. “ಬಾಲ ಸಾಹಿತ್ಯ ಮಂಡಳಿ”ಯನ್ನೂ ಆರಂಭಿಸಿದರು. ನಂತರ ಮಡಿಕೇರಿಯಲ್ಲಿ ಕೆಲವು ಕಾಲ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು.
       ಚಿಕ್ಕಂದಿನಿಂದಲೂ ಅಶುಕವಿತೆಗಳನ್ನು ಬರೆಯುತ್ತಿದ್ದ ಅವರು ಕೊಂಕಣಿ ಮತ್ತು ಕನ್ನಡದಲ್ಲಿ ತಾವು ರಚಿಸಿದ ಕವಿತೆಗಳನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಹೇಳುತ್ತಿದ್ದರು. 1912ರಿಂದಲೇ ತಮ್ಮ ಸಾಹಿತ್ಯಕೃಷಿ ಆರಂಭಿಸಿದ ಅವರು ಸುವಾಸಿನಿ ಮತ್ತು ಸತ್ಯದೀಪಿಕ ಪತ್ರಿಕೆಗಳಿಗೆ ಬರೆಯಲಾರಂಭಿಸಿದರು.  “ಹರಟೆಮಲ್ಲ”, “ಕವಿಶಿಷ್ಯ”, “ರಾ ಮ ಪಂ” ಕಾವ್ಯನಾಮಗಳಿಂದ ಕಥೆ, ಲೇಖನಗಳನ್ನು ಬರೆಯುತ್ತಿದ್ದರು. ತುಳು ಮತ್ತು ಕನ್ನಡ ಜನಪದ ಕಥೆಗಳನ್ನು ದಾಖಲು ಮಾಡಿದರು. ಬೋಧನಾ ವಿಧಾನಗಳ ಬಗ್ಗೆ, ವ್ಯಾಕರಣ, ಪದಗಳ ಬಗ್ಗೆ, ಭೂಗೋಳಶಾಸ್ತ್ರದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದರು. ಜೊತೆಗೆ ಐತಿಹಾಸಿಕ, ಸಾಹಿತ್ಯಿಕ ಸಂಶೋಧನಾ ಕೃತಿಗಳನ್ನು ರಚಿಸಿದರು. ಸಣ್ಣಕತೆಗಳನ್ನು, ಕವನಗಳನ್ನು, ಮಕ್ಕಳ ಪದ್ಯಗಳನ್ನು, ಹಾಸ್ಯಕೃತಿಗಳನ್ನು ರಚಿಸಿದರು. ಕೋಟಿ ಚೆನ್ನಯ ಎಂಬ ಸಣ್ಣ ಕಾದಂಬರಿ ಸಿನಿಮಾ ಆಗಿದೆ. ಮೊದಲ ಪತ್ತೇದಾರಿ ಕಾದಂಬರಿ ಬರೆದವರು ಇವರು. ಇಂಗ್ಲಿಷ್ ನಲ್ಲಿ ಸಹ ಇವರು ಬರೆದಿದ್ದಾರೆ. ನಾಟಕ, ಅನುವಾದ, ಪತ್ರಿಕೋದ್ಯಮದಲ್ಲಿಯೂ ಸಹ ಕೃಷಿ ಮಾಡಿದ್ದಾರೆ.
ಪತ್ನಿ ಗಿರಿಜಾಬಾಯಿ ಮತ್ತು ಅವರ ಐವರು ಮಕ್ಕಳೂ ಸಹ ಇವರ ಸಾಹಿತ್ಯ ಕೃಷಿಗೆ ಮತ್ತು ಇತರ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ಇವರು 1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1937ರಲ್ಲಿ ನ್ಯುಮೋನಿಯ ಕಾರಣದಿಂದ ಮೃತರಾದರು.
       ನವೋದಯ ಸಾಹಿತ್ಯದ ಕರ್ತೃವಾದ ಪಂಜೆಯವರು ಕನ್ನಡ ಸಾಹಿತ್ಯ ಬೆಳೆಯಲು ಕಾರಣರಾದವರಲ್ಲಿ ಒಬ್ಬರು ಎಂಬುದರಲ್ಲಿ ಎರಡನೆಯ ಮಾತಿಲ್ಲ. 

                                                                   - ಡಾ।। ಸುಧಾ.ಜಿ

ಪುಸ್ತಕ ಪ್ರೀತಿ: "ಮಂಕುತಿಮ್ಮನ ಕಗ್ಗ"

   
ತಿಮ್ಮಗುರು 'ಡಿ ವಿ ಗುಂಡಪ್ಪ'ರವರು


     ಕನ್ನಡದ ದಾರ್ಶನಿಕ ಕವಿ ಎಂದೇ ಪ್ರಖ್ಯಾತರಾದ ಡಿವಿಜಿಯವರ (ಡಿ ವಿ ಗುಂಡಪ್ಪ) ‘ಮಂಕುತಿಮ್ಮನ ಕಗ್ಗ’ ವಿಶ್ವ ಸಾಹಿತ್ಯದಲ್ಲಿಯೇ ಅಪರೂಪ ಕೃತಿ ಎಂದರೆ ಬಹುಶಃ ತಪ್ಪಾಗಲಾರದು. ಈ ಕೃತಿಯನ್ನು, ಬಹಳಷ್ಟು ಸಾರಿ ಓದಲೆತ್ನಿಸಿ, ಅರ್ಥವಾಗಲು ಕಷ್ಟ ಎನ್ನುವ ಕಾರಣದಿಂದ ಅದನ್ನು ಪಕ್ಕದಲ್ಲಿಟ್ಟದ್ದುಂಟು. ಆದರೆ ಅದರ ಬಗೆಗಿನ ವಿಶ್ಲೇಷಣೆ ಮತ್ತು ಪದೇ ಪದೇ ಕೇಳುತ್ತಿದ್ದ ‘ಹುಲ್ಲಾಗು ಬೆಟ್ಟದಡಿ’, ‘ನಗುವು ಸಹಜದ ಧರ್ಮ’ – ಈ ರೀತಿಯಾದ ಕೆಲವು ಮುಕ್ತಕಗಳು ಓದುವ ಆಸೆಯನ್ನು ಕೆರಳಿಸುತ್ತಿದ್ದವು. ಕೊನೆಗೊಮ್ಮೆ ಶ್ರೀ ಶ್ರೀಕಾಂತ್‍ರವರ ತಾತ್ಪರ್ಯ ಸಮೇತವಾದ ಕಗ್ಗ ಓದಿದ ಮೇಲೆ ಬಹಳಷ್ಟು ಅಂಶಗಳು ಸ್ಪಷ್ಟವಾದವು. ಅದಾದ ನಂತರ ಕಗ್ಗವನ್ನು ನಿಯತವಾಗಿ ಓದಲಾರಂಭಿಸಿದೆ. ಕನ್ನಡದ ಅಮೂಲ್ಯ ಕೃತಿಗಳಲ್ಲಿ ಒಂದೆನಿಸಿದ ಇದರ ಬಗ್ಗೆ ಒಂದು ಲೇಖನ ಬರೆಯಬೇಕೆನಿಸಿತು. ಆ ಪ್ರಯತ್ನವೇ ಈ ಲೇಖನ.
      ವ್ಯಕ್ತಿ ಏಕೆ ಬದುಕಬೇಕು? ಹುಟ್ಟಿದ ಮೇಲೆ ನಾವಾಗಿಯೇ ಸಾಯಲಾರದ್ದಕ್ಕಾಗಿ ಬದುಕಬೇಕೇ? ಹೊಟ್ಟೆಹೊರೆಯುವುದಕ್ಕಿಂತ ಮಿಗಿಲಾದ ಯೋಚನೆಗಳು ಮನುಷ್ಯರ ಬಾಳಿಗೆ ಅವಶ್ಯವೇ? ಎನ್ನುವ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸುತ್ತಾರೆ ಡಿ.ವಿ.ಜಿ.ಯವರು. ಹೊಟ್ಟೆಪಾಡಿಗಾಗಿ ಬದುಕುವುದಕ್ಕಿಂತ ಉನ್ನತ ಉದ್ದೇಶ ಇದೆ ಎನ್ನುತ್ತಾರೆ. ಯಾವ ಉದ್ದೇಶದ ಸಾಧನೆಗಾಗಿ, ಎಂಥಾ ಮನೋಭಾವ ಬೆಳೆಸಿಕೊಳ್ಳಬೇಕು, ಜೀವನವನ್ನು ಹೇಗೆ ನಡೆಸಿ ಸಾರ್ಥಕಗೊಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಡಿ.ವಿ.ಜಿಯವರು ತಮ್ಮ ತತ್ವ ಚಿಂತನೆ ಮತ್ತು ಅನುಭವಗಳ ಆಧಾರದ ಮೇಲೆ ಬರೆದಿರುವ ಕೃತಿಯೇ ಮಂಕುತಿಮ್ಮನ ಕಗ್ಗ. ವ್ಯಕ್ತಿ ಮತ್ತು ಸಮಾಜದಲ್ಲಿ ಜೀವನೋತ್ಸಾಹ ಹಾಗೂ ಜೀವನೋತ್ಕರ್ಷ ಇರಬೇಕೆನ್ನುವುದೇ ಅವರ ಸಿದ್ಧಾಂತದ ಮುಖ್ಯಾಂಶಗಳು.
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (1887-1975) ರವರು ಹುಟ್ಟಿದ್ದು ಮಾರ್ಚ್ 17ರಂದು ಮುಳುಬಾಗಿಲಿನಲ್ಲಿ. ಅವರು ಓದಿದ್ದು ಕೇವಲ ಪ್ರೌಢಶಾಲೆಯವರೆಗೆ ಮಾತ್ರ. ತಮಿಳು ಮನೆತನದಲ್ಲಿ ಹುಟ್ಟಿ, ತೆಲುಗು ಪ್ರಧಾನವಾಗಿದ್ದ ಭಾಗದಲ್ಲಿ ಡಿವಿಜಿಯವರು ಬೆಳೆದರು ಮತ್ತು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದರು ಎಂದರೆ ಬಹುಶಃ ಯಾರೂ ನಂಬುವುದಿಲ್ಲವೇನೋ. ಕನ್ನಡದ ಸಾಹಿತ್ಯ ಕ್ಷೇತ್ರವನ್ನು ಸಂಪದ್ಭರಿತಗೊಳಿಸಿದ ಅವರನ್ನು ಆಧುನಿಕ ಭಾರತ ಸಾಹಿತ್ಯದ ಅಶ್ವತ್ಥವೃಕ್ಷ ಎನ್ನಲಾಗಿದೆ. ಜ್ಞಾನದ ಎಲ್ಲಾ ಕ್ಷೇತ್ರಗಳಲ್ಲೂ ಅಧ್ಯಯನ ಮಾಡಿರುವ ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಡಿವಿಜಿಯವರು ಮುಟ್ಟದ ಸಾಹಿತ್ಯ ಪ್ರಾಕಾರಗಳಿಲ್ಲ. ಕಾವ್ಯ, ಅನುವಾದ, ನಾಟಕ, ಪ್ರಬಂಧ, ಜೀವನಚರಿತ್ರೆ, ತತ್ವಶಾಸ್ತ್ರ, ಧಾರ್ಮಿಕ, ರಾಜಕೀಯ, ಮಕ್ಕಳ ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವರು ತಮ್ಮ ಛಾಪನ್ನು ಮೂಡಿಸಿದ್ದಾರೆ.
      ಬಹಳ ಸರಳಜೀವಿಯಾಗಿದ್ದ ಅವರು, ನೇರ ನಡೆನುಡಿಯುಳ್ಳವರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಸ್ವಾಭಿಮಾನಿಯಾಗಿದ್ದರು. ಅತ್ಯಂತ ಕಷ್ಟದ ದಿನಗಳಲ್ಲಿಯೂ ಯಾರ ಮುಂದೆಯೂ ಕೈಚಾಚಲಿಲ್ಲ, ಅಧಿಕಾರಸ್ಥರಿಂದ ಸಹಾಯ ಬೇಡಲಿಲ್ಲ. ಸಹಾಯಾರ್ಥ ಬಂದಂತಹ ಚೆಕ್ಕುಗಳನ್ನು ಅವರೆಂದೂ ನಗದೀಕರಿಸಲೇ ಇಲ್ಲ. ಕಷ್ಟಗಳಿದ್ದಾಗ್ಯೂ ಎದೆಗುಂದಲಿಲ್ಲ, ಹತಾಶರಾಗಲಿಲ್ಲ, ಅವರ ಮುಖದ ಮೇಲಿನ ಮುಗುಳ್ನಗೆ ಮಾಸಲೇ ಇಲ್ಲ. ಅವರ ಪ್ರಸಿದ್ಧ ಕವನದ ಹೆಸರು ‘ವನಸುಮ’, ಅವರಿಗೆ ಅನ್ವರ್ಥನಾಮ. ಮೈಸೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತು. ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡರು. 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅವರಿಗೆ 1 ಲಕ್ಷ ರೂಗಳನ್ನು ಕೊಟ್ಟರೆ, ಅದನ್ನವರು ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನವಾಗಿ ಕೊಟ್ಟುಬಿಟ್ಟರು. ಕರ್ನಾಟಕ ಸರ್ಕಾರ ಅವರಿಗೆ 500 ರೂಗಳ ಮಾಸಾಶನ ಕೊಟ್ಟರೆ ಅವರದನ್ನು ತೆಗೆದುಕೊಳ್ಳಲಿಲ್ಲ, ತಾವು ಮಾಡಿದ್ದೆಲ್ಲಾ ಸೇವೆ ಎಂಬುದು ಅವರ ಮನೋಭಾವವಾಗಿತ್ತು. ಅವರ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಮಂಕುತಿಮ್ಮನ ಕಗ್ಗ ಕೇವಲ ಕೆಲವು ಸಾಲುಗಳ ಪದ್ಯವಲ್ಲ, ನೀತಿ ಬೋಧನೆಯಲ್ಲ, ಬದಲಿಗೆ ಅವರ ಜೀವನದ ಅನುಭವಗಳ ಕಾವ್ಯ ರೂಪ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ.
      ಜೀವನದ ವಿವಿಧ ಆಯಾಮಗಳ ಬಗ್ಗೆ ಪದ್ಯ ರೂಪದಲ್ಲಿ ಬಂದಿರುವ ಅವರ ಕಗ್ಗವನ್ನು ಕಂಠಪಾಠ ಮಾಡಿಕೊಂಡು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಅವರ ಕಗ್ಗ ಓದಲು ಮಾತ್ರವಲ್ಲದೆ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಉತ್ತಮನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಏಕೆಂದರೆ ಡಿವಿಜಿಯವರು ಇದನ್ನು ಬೇರೆಯವರು ಅನುಸರಿಸಲಿ ಎಂದು ಬರೆದಿಲ್ಲ, ತಾವು ಅನುಸರಿಸಿದ್ದನ್ನು, ಸಾಧಿಸಿದ್ದನ್ನು ಬರೆದಿದ್ದಾರೆ. ಆದ್ದರಿಂದಲೇ ಅವರು ಕೊನೆಯಲ್ಲಿ ‘ಲೋಕತಾಪದಿ ಬೆಂದವನು, ತಂಪನ್ನು ಬಯಸಿದವನು, ವ್ಯಾಕರಣ ಕಾವ್ಯಲಕ್ಷಣಗಳನ್ನು ಪರಿಗಣಿಸಿದೆ, ಈ ಕಂತೆಯಲಿ ತನ್ನ ನಂಬಿಕೆಯನ್ನು ನೇಯ್ದಿದ್ದಾನೆ’ ಎಂದು ಕಗ್ಗದ ಬಗ್ಗೆ ಬರೆದಿದ್ದಾರೆ.
      ಇದು ಸಾಹಿತ್ಯಿಕವಾಗಿ, ದಾರ್ಶನಿಕವಾಗಿಯೂ ಕನ್ನಡದಲ್ಲಿ ಬಂದಿರುವ ಒಂದು ಅತ್ಯುನ್ನತ ಕೃತಿ ಎಂದರೆ ತಪ್ಪಾಗಲಾರದು. ಆದ್ದರಿಂದ ಇಂತಹ ಕೃತಿಯನ್ನು ಕನ್ನಡಿಗರಿಗೆ ನೀಡಿದ ಡಿವಿಜಿಯವರಿಗೆ ನಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಲೇಬೇಕು.
      ಡಿವಿಜಿಯವರು ತಮ್ಮ ಕಗ್ಗದಲ್ಲಿ ಮನುಷ್ಯನ ವಿವಿಧ ಜಂಜಾಟಗಳನ್ನು ತೆಗೆದುಕೊಂಡು ಬರೆದಿದ್ದಾರೆ, ವ್ಯಕ್ತಿ ಜೀವನದ ಎಲ್ಲಾ ಆಯಾಮಗಳನ್ನೂ ಚಿತ್ರಿಸಿದ್ದಾರೆ. ವಿಶ್ವಕ್ಕೆ ಅಳಿವಿಲ್ಲ, ಅದು ಅನಂತ ಎಂಬುದರಿಂದ ಆರಂಭಿಸಿ ಮನುಷ್ಯರಲ್ಲಿರಬೇಕಾದ ವಿವಿಧ ಗುಣಗಳ ಬಗ್ಗೆ, ಜೀವನವನ್ನು ಎದುರಿಸಬೇಕಾದ ರೀತಿಯ ಬಗ್ಗೆ ಬರೆದಿದ್ದಾರೆ. ಅವರ ಕಗ್ಗದ ವ್ಯಾಪ್ತಿಯೂ ಅನಂತವೇನೋ ಎನಿಸಿಬಿಡುತ್ತದೆ. ಅವರ ಕೆಲವು ಪದ್ಯಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇದರ ಸವಿಯನ್ನುಂಡವರು ಖಂಡಿತವಾಗಿಯೂ 'ಮಂಕುತಿಮ್ಮನ ಕಗ್ಗ'ವನ್ನು ಪೂರ್ತಿಯಾಗಿ ಓದುವರೆಂಬುದು ನಮ್ಮ ದೃಢ ವಿಶ್ವಾಸ.

ಜೀವನವನ್ನು ಸಮೃದ್ಧಿಗೊಳಿಸಲೋಸುಗ ಪ್ರತಿಯೊಬ್ಬರು ಹೋರಾಟ ಮಾಡಬೇಕು ಎನ್ನುವ ಅವರು ಹೇಳುವುದು ಹೀಗೆ :
ಗೌರವಿಸು ಜೀವನವ ಗೌರವಿಸು ಚೇತನವ |
ಆರದೋ ಜಗವೆಂದು ಭೇದವೆಣಿಸದಿರು |
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ ||

ಹೇಗೆ ಹೋರಾಟ ಮಾಡಬೇಕೆಂಬುದರ ಬಗ್ಗೆ ಅವರು ಈ ರೀತಿ ಹೇಳುತ್ತಾರೆ :
ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ |
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ – ಮಂಕುತಿಮ್ಮ ||

ವ್ಯಕ್ತಿ ಯಾವ ರೀತಿ ಬದುಕಬೇಕು ಎಂಬುದನ್ನು ಈ ಕೆಳಕಂಡ ಪದ್ಯಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿರುತ್ತಾರೆ :
ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ ಋತವ ಬಿಡದಿರಲಿ |
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ |
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ |
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ |
ಎಲ್ಲರೊಳಗೊಂದಾಗು ಮಂಕುತಿಮ್ಮ ||

ನಗುವಿನ ಮಹತ್ವವನ್ನು ಹೀಗೆ ಬರೆಯುತ್ತಾರೆ :
ನಗುವುದು ಸಹಜದ ಧರ್ಮ ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ |
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||

ಹೆಸರಿನ ಹಂಬಲ ಬೇಡ ಮನುಷ್ಯನಿಗೆ ಎನ್ನುವ ಇವರು ಆ ಬಗ್ಗೆ ಈ ರೀತಿಯಾಗಿ ಹೇಳುತ್ತಾರೆ :
ಅಕ್ಕಿಯೊಳಗನ್ನವನು ಮೊದಲಾರು ಕಂಡವರು |
ಅಕ್ಕರದ ಬರಹಕ್ಕೆ ಮೊದಲಿಗನದಾರು |
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳು |
ದಕ್ಕುವುದೆ ನಿನಗೆ ಜಸ - ಮಂಕುತಿಮ್ಮ ||

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|
ಫಲಮಾಗುವಂದು ತುತ್ತೂರಿ ದನಿಯಿಲ್ಲ|
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ||

ಮನುಷ್ಯ ಹೇಡಿಯಂತೆ ಸಾಯಬಾರದು, ಧೈರ್ಯದಿಂದ ಬದುಕನ್ನೆದುರಿಸಬೇಕು ಎಂಬುದನ್ನು ಹೀಗೆ ಬರೆಯುತ್ತಾರೆ :
ಸತ್ತೆನೆಂದೆನಬೇಡ ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ವದೂಟೆಯೆನಬೇಡ |
ಮೃತ್ಯುವೆನ್ನುವುದೊಂದು ತೆರೆಯಿಳಿತ ; ತೆರೆಯೇರು |
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ ||

ಸಮಾಜದಲಿ ಒಂದಾಗಿ ಬದುಕಲೇಬೇಕು ಎಂಬುದನ್ನು ಸಾರುತ್ತ ಅವರು ಹೀಗೆ ಬರೆಯುತ್ತಾರೆ :
ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ |
ಇಬ್ಬರಾಗುವೆನೆಂದನಂತೆ ಪರಬೊಮ್ಮಂ |
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? |
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ ||

ಈ ಕಗ್ಗವನ್ನು ಕಾದಂಬರಿಯಂತೆ ಒಮ್ಮೆ ಓದಿ ಪಕ್ಕಕ್ಕಿಡದೆ ದಿನವೂ ಕೆಲವು ಪದ್ಯಗಳನ್ನು ಓದಿ, ಅದನ್ನು ನಮ್ಮ ಜೀವನದಲಿ ಅಳವಡಿಸಿಕೊಳ್ಳಲಾದರೆ, ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ, ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ, ಆ ಮೂಲಕ ನಾವು ಉತ್ಕೃಷ್ಟ ವ್ಯಕ್ತಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾವ್ಯ ಜಗತ್ತಿನಲ್ಲಿ ಇದರ ಸ್ಥಾನ ಅತ್ಯಂತ ಮೇಲ್ಮಟ್ಟದ್ದು. ಇದನ್ನು ಇತರ ಭಾಷೆಗಳಿಗೆ ಅನುವಾದಿಸಲಾದರೆ, ಎಷ್ಟೋ ಜನರು ಇದರ ಉಪಯುಕ್ತತೆಯನ್ನು ಪಡೆಯಬಹುದು. 

- ಡಾ।। ಸುಧಾ.ಜಿ