ಮೂಲ :
ಜೆ.ಎಂ.ಬ್ಯಾರಿ (ಟ್ವೆಲ್ ಪೌಂಡ್ ಲುಕ್-1950)
ನಾಟಕ
ರೂಪಾಂತರ : ಎಸ್.ಎನ್.ಸ್ವಾಮಿ
(ಇದನ್ನು
ಹತ್ತು ವರ್ಷಗಳ ಹಿಂದೆ ನಡೆದ ಕಥೆಯೆಂದು ತಿಳಿದುಕೊಳ್ಳಬೇಕು. ನಿಮಗೆ ಅನುಕೂಲವಾಗಿದ್ದರೆ,
ಈ ದೃಶ್ಯವು ನಿಮ್ಮ
ಮನೆಯಲ್ಲೇ ನಡೆಯುತ್ತಿದೆ ಎಂದುಕೊಳ್ಳಬೇಕು. ಮತ್ತೆ ನೀವೇ ಗಿರೀಶ್‍ಮೂರ್ತಿ ಎಂದುಕೊಳ್ಳಬೇಕು.
ಮನೆಯ ಅಲಂಕಾರ ನಿರರ್ಥಕವಾದ ಪ್ರದರ್ಶನ ಆಗಿರಬಹುದು, ಆದರೆ ನಿಮಗೆ ಅದರ ಬಗ್ಗೆ ಆಕ್ಷೇಪಣೆಯಿದ್ದರೆ
ಅದನ್ನು ಸರಿಪಡಿಸಬಹುದು; ಕೇವಲ
ರೇಷ್ಮೆ ಬಟ್ಟೆ ಅಥವಾ ಭವ್ಯ ಮೇಜುಗಳ ಸಣ್ಣ ವಿಷಯಕ್ಕೆ ನೀವು ಗಿರೀಶ್ ಮೂರ್ತಿಯಾಗದೆ ಉಳಿಯಬಾರದು
ನೋಡಿ. ಆತನನ್ನು ನಗರದ ಪ್ರತಿಷ್ಟಿತ ವ್ಯಕ್ತಿಯನ್ನಾಗಿ ಮಾಡುವುದು ನಮಗಿಷ್ಟ. ಆದರೆ (ನಿಮ್ಮನ್ನು
ಕಳೆದುಕೊಳ್ಳಬಾರದಲ್ಲ) ಪೆನ್ನನ್ನು ಗೀಚಿ ಒಬ್ಬ ಅಗರ್ಭ ಶ್ರೀಮಂತ ಡಾಕ್ಟರ್, ಪ್ರಗತಿಪರ ಉದ್ಯಮಿ, ಪ್ರಸಿದ್ಧ ಸಾಹಿತಿ, ಸರ್ಕಾರದ ಕಾರ್ಯದರ್ಶಿ ಅಥವಾ ನಿಮ್ಮಿಷ್ಟ
ಬಂದಂತೆ ಮಾಡಬಹುದು. ಆತನು ದಪ್ಪನಾದ ಕೆಂಪು ಕತ್ತಿರುವ, ಪ್ರಫುಲ್ಲನಾದ ದುಂಡನೆಯ ವ್ಯಕ್ತಿಯೆಂದು ನಾವು
ಊಹಿಸಿಕೊಳ್ಳುತ್ತೇವೆ. ಆದರೆ ಆತ ಸಣ್ಣಗಿರುವ ವಿಷಯ ನಿಮಗೆ ಗೊತ್ತಿದ್ದರೆ ಅದನ್ನು ಬಿಟ್ಟು
ಬಿಡುತ್ತೇವೆ.
ಆ ದಿನವೇ, ನಿಮ್ಮ ಜೀವನದಲ್ಲಿ ಎಲ್ಲವೂ ಸುಲಲಿತವಾಗಿ,
ಸರಿಯಾಗಿಯೇ
ನಡೆಯುತ್ತಿದೆ ಎಂದುಕೊಂಡು ಆರಾಮವಾಗಿದ್ದಾಗಲೇ ಎಲ್ಲವೂ ಎಡವಟ್ಟಾಗಿದ್ದು.
ಗಿರೀಶನ ವಿಷಯದಲ್ಲಿ ಹಾನಿಯುಂಟಾಗಿದ್ದು ಓರ್ವ
ಮಹಿಳೆಯಿಂದ. ಆಕೆ ಬಹಳ ಒಳ್ಳೆಯ ಸಮಯದಲ್ಲಿ ಗಿರೀಶನ ಮನೆಗೆ ಬಂದಳು. ಜೊತೆಗೆ ಅವನನ್ನು
ಮೆಚ್ಚುವುದಿಲ್ಲವೆಂದು ಹೇಳಿದಳು. ಆಕೆಯನ್ನು ಆತ ತನ್ನ ಮನೆಯಿಂದೋಡಿಸಿದ್ದೇನೊ ನಿಜ. ಸ್ವಲ್ಪ
ಸಮಯದಲ್ಲಿಯೇ ಆತನೂ ಹೊರಗೋದ. ಆದರೆ ಅದು ಅವನ ಇಡೀ ಬೆಳಗಿನ ಸಮಯವನ್ನು ಹಾಳು ಮಾಡಿತು. ಇದೇ ನಾಟಕದ
ವಿಷಯ ಮತ್ತು ಇಷ್ಟು ಸಾಕೆನಿಸುತ್ತದೆ.
ಗಿರೀಶ್ ಮೂರ್ತಿಯು ಇನ್ನು ಕೆಲವೇ ದಿನಗಳಲ್ಲಿ
ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾನೆ. ನಾವು ಆತನನ್ನು ಭವ್ಯ ಕಟ್ಟಡದ ಬೆಚ್ಚಗಿರುವ
ಬೆಂಗಳೂರಿನ (ಅಥವಾ ಮೈಸೂರೇ?) ಆತನ ಮನೆಯಲ್ಲಿ ಕಾಣಬಹುದು. ಹಾಗೂ ಆತನ ಪತ್ನಿಯ ಜೊತೆ ಪ್ರಶಸ್ತಿ ಸಮಾರಂಭದ
ರಿಹರ್ಸಲ್ ಮಾಡುತ್ತಿರುವುದನ್ನು ನೋಡಬಹುದು. ಅದು ಸಂತೋಷದ ವಿಷಯವೇ! ಸರೋಜಾ ಮೂರ್ತಿ (ಹಾಗೆ ಆಕೆಯನ್ನು ನಾವು ಕಡೆಯ ಬಾರಿಗೆ ಕರೆಯಬಹುದು) ಅತ್ಯಂತ ಬೆಲೆಬಾಳುವ
ರೇಷ್ಮೆ ಸೀರೆಯನ್ನು ಉಟ್ಟಿದ್ದಾಳೆ; ಆಕೆ ರಾಜಗಾಂಭೀರ್ಯದಲ್ಲಿ ಕುಳಿತಿದ್ದಾಳೆ. ಆಕೆಯ ಕತ್ತಿನ ಸುತ್ತ
ತೂಗುತ್ತಿರುವ ಆಭರಣಗಳನ್ನು ನೋಡಿದರೇ ಸಾಕು, ಆಕೆಯ ಗಂಡ ಅದೆಷ್ಟು ಉದಾರಿಯೆಂಬುದು
ತಿಳಿಯುತ್ತದೆ. ಆಕೆ ಅಸಾಧಾರಣ ಮತ್ತು ಹೆಮ್ಮೆಯಿಂದಿರುವ ಮಹಿಳೆ ಇರಬೇಕು. ಹಾಗಿದ್ದರೂ, ಆಕೆ ಯಾರಿಗೆ ತುಂಬಾ ಹೆದರುತ್ತಾಳೋ ಆ
ವ್ಯಕ್ತಿಯು ಪಕ್ಕದಲ್ಲಿಯೇ ನಿಂತಿದ್ದಾನೇನೊ ಎಂಬಂತೆ ಮುಖದಲ್ಲಿ ಭೀತಿಯಿದೆ ಮತ್ತು ಆಕೆ
ಕುಗ್ಗಿದ್ದಾಳೆ. ಗಿರೀಶನಿಗೆ ಸೂಚನೆ ಕೊಡುವಂತೆ ಎದ್ದು ನಿಲ್ಲುತ್ತಾಳೆ. ಆತ ಅರ್ಧಂಬರ್ಧ ಉಡುಪು
ಧರಿಸಿದ್ದಾನೆ. ಅಂದರೆ ಸೂಟು ಬೂಟು ಧರಿಸಿಯಾಗಿದೆ, ಆದರೆ ಗೌನ್ ಇನ್ನೂ ಬರಬೇಕಾಗಿದೆ. ತಲೆಬಾಗಿ,
ಮೆಲುನಡಿಗೆಯಲ್ಲಿ ಆತ
ಹೆಂಡತಿಯ ಹತ್ತಿರ ಹೋಗಿ, ದೈನ್ಯ
ಭಾವದಿಂದ ಕೈಕುಲುಕಿ, ಕಾಲಿಗೆ
ನಮಸ್ಕಾರ ಮಾಡುವಂತೆ ಬಗ್ಗುತ್ತಾನೆ. ಆಕೆ ಆತನ ಎರಡೂ ಭುಜಗಳನ್ನು ಹಿಡಿದು, ‘ಇರಲಿ, ಇರಲಿ, ಎದ್ದೇಳಿ’ ಎನ್ನುತ್ತಾಳೆ. ಆತ ಮೇಲಕ್ಕೆದ್ದು ಆಕೆಗೆ,
ಜೊತೆಗೆ ರೂಮಿನಲ್ಲಿರುವ
ಎಲ್ಲಾ ಕುರ್ಚಿಗಳಿಗೂ ತಲೆಬಾಗುತ್ತಾ ಹೋಗುತ್ತಾನೆ. ಇದೊಂದು ಮನೆಯಲ್ಲಿ ನಡೆದ ಮಹಾ ಸಂತೋಷದ
ದೃಶ್ಯ. ಮತ್ತು ಗಿರೀಶ ಅದೆಷ್ಟು ತನ್ಮಯನಾಗಿ, ಗಾಂಭೀರ್ಯದಿಂದ ಮಾಡುತ್ತಿದ್ದನೆಂದರೆ
ಎದುರುಗಡೆ ಗಣ್ಯರೇ ಬಂದು ರಿಹರ್ಸಲ್ ಮಾಡುತ್ತಿದ್ದಾರೇನೋ ಎನ್ನುವಂತಿತ್ತು.)
ಗಿರೀಶ್ ಮೂರ್ತಿ : (ಸಂತೃಪ್ತಿಯಿಂದ)
ನೋಡೋದಿಕ್ಕೆ ಪರವಾಗಿಲ್ಲ ಅನ್ಸುತ್ತಾ, ಹಾಂ?
ಸರೋಜಾ ಮೂರ್ತಿ : (ಬಿಡುಗಡೆಯ ಭಾವದಿಂದ)
ಸರಿಯಾಗೇ ಬಂದಿದೆ ಅನ್ಸುತ್ತೆ.
ಗಿರೀಶ್ ಮೂರ್ತಿ : ಆದರೆ ಗಂಭೀರವಾಗಿತ್ತು
ತಾನೆ?
ಸರೋಜಾ ಮೂರ್ತಿ : ಹೌದೌದು. ಗೌನ್ ಬಂದ ಮೇಲಂತೂ ಇನ್ನೂ ಚೆನ್ನಾಗಿರುತ್ತೆ.
ಗಿರೀಶ್ ಮೂರ್ತಿ : ಗೌನ್. ಹೌದು ಗೌನ್
ಅದಕ್ಕೊಂದು ಕಳೆ ಕೊಡುತ್ತೆ. ಅಲ್ಲಿ ಸರಿಯಾಗಿ ನಾಲ್ಕು ರಿವಾಜುಗಳಿವೆ. (ಮಾತಿಗೆ ತಕ್ಕಂತೆ
ನಟಿಸುತ್ತಾ) ಕೈಕುಲುಕುವುದು - ಬಗ್ಗಿ ನಮಸ್ಕಾರ ಮಾಡೋದು - ಭುಜ ಹಿಡಿದು ಎತ್ತುವುದು – ಮತ್ತೆ ಪ್ರಶಸ್ತಿ ಪಡೆಯೋದು. ಚಿಕ್ಕದಾದರೂ
ಚೊಕ್ಕವಾದ ಕಾರ್ಯಕ್ರಮ. ಸುಂದರವಾದದ್ದು. (ಮೃದುವಾಗಿ) ಏನಾದರೂ ಹೇಳೋದಿದೆಯಾ?
ಸರೋಜಾ ಮೂರ್ತಿ : ಇಲ್ಲ, ಹಾಂ – ಇಲ್ಲ, ಇಲ್ಲ. (ಕುರ್ಚಿಯ ಕಾಲುಗಳಿಗೇ ನಮಸ್ಕಾರ ಮಾಡಲು
ಹೋಗುತ್ತಿರುವುದನನ್ನು ನೋಡಿ ದುರ್ಬಲಳಾಗಿ) ಏನು ಮಾಡಬೇಕು ಅನ್ನೋದನ್ನ ಚೆನ್ನಾಗಿ ಗೊತ್ತಿದೆ
ಅನ್ನೋವರೆಗೂ, ರಿಹರ್ಸಲ್
ಮಾಡಿದೀನಿ ಅಂತ ನೀವು ತಿಳಿದಿಲ್ಲ ತಾನೆ?
(ಆತ ಸ್ವರ್ಗಸುಖದಿಂದ ಪ್ರಸನ್ನನಾಗಿದ್ದನು.
ಆದರೆ ಅಂತಹ ಕ್ಷುಲ್ಲಕವಾದ ಟೀಕೆ ಯಾರನ್ನೇ ಆಗಲಿ ಕೆರಳಿಸುವಂತಹುದು)
ಗಿರೀಶ್ ಮೂರ್ತಿ : ಇಲ್ಲ. ಹುಚ್ಚುಚ್ಚಾಗಿ
ಏನೇನೋ ಮಾತಾಡಬೇಡ. ನಿನ್ನ ಅಭಿಪ್ರಾಯ ಕೇಳೋವರೆಗೂ ಸುಮ್ಮನಿರು.
ಸರೋಜಾ ಮೂರ್ತಿ : (ನಾಚಿಕೆಯಿಂದ) ಸಾರಿ.
(ಅಷ್ಟರಲ್ಲಿ ಅಡುಗೆಭಟ್ಟ ಬಂದು ವಿಸಿಟಿಂಗ್ ಕಾರ್ಡ್ ಕೊಡುತ್ತಾನೆ)
ಗಿರೀಶ್ ಮೂರ್ತಿ : ಹಾಂ! ಹೌದು. ಯಾರನ್ನಾದರೂ
ಕಳುಹಿಸಿ ಅಂತ ಫೋನ್ ಮಾಡಿದ್ದೆ. ಯಾರೊ ಲೇಡಿ ಬಂದಿರಬೇಕು, ಅಲ್ವಾ ಭಟ್ರೆ?
ಭಟ್ಟ : ಹೌದು.
ಗಿರೀಶ್ ಮೂರ್ತಿ : ಸರಿ, ಒಳಗಡೆ ಕಳುಹಿಸು. (ಬಹಳ ವಿಶ್ವಾಸದಿಂದ
ಕೇಳುತ್ತಾನೆ) ಕೆಳಗಡೆ ಬಂದಿರುವವರು ಇಷ್ಟಪಡ್ತಾರೆ, ಅಲ್ವಾ?
ಭಟ್ಟ : (ಪ್ರಸನ್ನಚಿತ್ತದಿಂದ) ಅದರಲ್ಲೂ
ಹೆಂಗಸರು.
ಕಾತ್ಯಾಯಿನಿ : (ಉಪಯೋಗಿಸಿಕೊಳ್ಳಲು
ಸರಿಪಡಿಸಿಕೊಳ್ಳುತ್ತಾ) ಹೌದು. (‘ಹೌದು ಮೇಡಮ್’ ಅಲ್ಲ. ಹಾಗೆಂದು ಕರೆಯಬೇಕಾಗಿತ್ತು) ಇಲ್ಲಿ ಕೆಲಸ ಮಾಡಬೇಕಾದರೆ ಇದನ್ನು
(ತನ್ನ ಓವರ್‍ಕೋಟ್ ಬಗ್ಗೆ) ತೆಗೆದರೇ ಉತ್ತಮ ಅನ್ನಿಸುತ್ತೆ.
ಗಿರೀಶ್ ಮೂರ್ತಿ : ಸರಿಯಾಗೇ ಹೇಳಿದೆ. ಹಾಂ!
ಆಕೆನ ಒಳಗಡೆ ಕಳುಹಿಸು. (ಅಡುಗೆಭಟ್ಟ ತನ್ನ ಮಹತ್ಕಾರ್ಯಕ್ಕೆ ತೆರಳುತ್ತಾನೆ) ಆಕೆಗೆ
ಯಾತಕ್ಕೋಸ್ಕರ ಕರೆಸಿದ್ದು ಅಂತ ನೀನೇ ಹೇಳು ಸರೋಜ. ನಾನು ಬಟ್ಟೆ ಬದಲಾಯಿಸಿ ಬರುತ್ತೇನೆ. (ತನ್ನ
ಬಗ್ಗೆ ತಾನೇ ಹೇಳಿಕೊಳ್ಳಲಾರದಷ್ಟು ವಿನಯವಂತ. ಆ ಉದ್ದೇಶಕ್ಕಾಗಿಯೇ ಮನೆಯಲ್ಲಿ ಹೆಂಡತಿಯಿರಲು
ಇಷ್ಟಪಡುತ್ತಾನೆ) ನಿನಗೆ ಹೇಗೆ ಚೆನ್ನಾಗಿ ಬರುತ್ತೋ ಹಾಗೇ ನನ್ನ ಬಗ್ಗೆ ಹೇಳು. (ಸಂತೋಷದಿಂದ
ನಗುತ್ತಾ) ಭಟ್ಟರು ಹೇಳಿದ್ದು ಕೇಳಿಸ್ತಾ, ‘ಅದರಲ್ಲೂ ಹೆಂಗಸರು.’ ಅವರು ಸರಿಯಾಗೇ ಹೇಳಿದ್ರು. Success! ಯಶಸ್ಸು! ಗಂಡಸರಿಗಿಂತ ಹೆಂಗಸರೇ ಹೆಚ್ಚು
ಇಷ್ಟಪಡುತ್ತಾರೆ. ಅದು ಸರಿಯಾದದ್ದೇ. ಅವರು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ನೀನು ಮಾತಾಡು
ಸರೋಜ. ಈ ರೇಷ್ಮೆ ಸೀರೆ ನೋಡಿ ಯಾವ ಹೆಂಗಸಾದರೂ ಹೊಟ್ಟೆಕಿಚ್ಚಿನಿಂದ ನರಳ ಬೇಕು. ಅವರ ಬಗ್ಗೆ
ನನಗ್ಗೊತ್ತು. ನಮ್ಮ ಎಲ್ಲಾ ಸ್ನೇಹಿತೆಯರಿಗೂ ತೋರಿಸು. ಅವರು ಒಂದು ವಾರ ನರಳೋ ಹಾಗೆ ಮಾಡುತ್ತೆ.
(ಈ ಭಾವನೆಗಳು ಅವನ ಮನಸ್ಸನ್ನು ಹಗುರಗೊಳಿಸಿದವು
ಮತ್ತು ಇದೀಗ ಶಾಂತಿಭಂಗದ ವಸ್ತುವೊಂದು ಒಳಬಂದಿತು. ಆಕೆ ಕೇವಲ ಒಬ್ಬ ಸ್ಟೆನೋಗ್ರಾಫರ್.
ಸಾಮಾನ್ಯವಾಗಿ ಕಾಣದಿರುವ ಒಳ್ಳೆ ಅಭಿರುಚಿಯುಳ್ಳ ಬಟ್ಟೆ ಧರಿಸಿದ್ದಾಳೆ; ಆಕೆ ಚಿಕ್ಕ ಟೈಪ್‍ರೈಟರ್ ಒಂದನ್ನು
ಗುಲಾಮಗಿರಿಯ ಸಂಕೇತದ ಬದಲು ತುಂಬಾ ಸ್ನೇಹಭಾವದಿಂದ ತಾನೇ ಹಿಡಿದುಕೊಂಡು ಬರುತ್ತಿದ್ದಾಳೆ. ಆಕೆಯ
ಕಣ್ಣುಗಳು ಸ್ವಚ್ಛವಾಗಿ ಹೊಳೆಯುತ್ತಿವೆ. ಸರೋಜಾ ಮೂರ್ತಿಗೆ ತದ್ವಿರುದ್ಧವಾಗಿ ಆಕೆ ಸ್ವಾವಲಂಬಿ
ಮತ್ತು ಪ್ರಶಾಂತವಾಗಿದ್ದಳು)
ಕಾತ್ಯಾಯಿನಿ : (ಗೌರವದಿಂದ, ಆದರೂ ಸರೋಜಾ ಮೂರ್ತಿ ಮಾತನಾಡುವವರೆಗೂ
ಕಾಯಬೇಕಾಗಿತ್ತು) ನಮಸ್ಕಾರ ಮೇಡಮ್.
ಸರೋಜಾ ಮೂರ್ತಿ : (ಆಕೆ ಗೊಂದಲಗೊಂಡು ಮತ್ತು
ಸ್ಟೆನೊ ನಾಲಗೆ ಸದಾ ಸಿದ್ಧವಾಗಿದೆ ಎಂಬುದನ್ನು ಗಮನಿಸದೆ) ನಮಸ್ಕಾರ. (ನಿಜವಾಗಿಯೂ ಸರೋಜಾ
ಮೂರ್ತಿ ಮೊದಲನೆ ಭೇಟಿಯಲ್ಲೇ ಈ ಮಹಿಳೆಯನ್ನು ಇಷ್ಟಪಡುತ್ತಾಳೆ. ಮತ್ತೆ ಈ ಮಹಿಳೆ - ಹಾಗೇನಾದರೂ
ಹೇಳಬಹುದಾದರೆ – ಆಕೆಯನ್ನು
ಇಷ್ಟಪಡುತ್ತಾಳೆ. ಸರೋಜಾ ಮೂರ್ತಿಗೆ ಕೈಗೊಬ್ಬ, ಕಾಲಿಗೊಬ್ಬ ಆಳುಗಳಿದ್ದಾರೆ. ಆಕೆ ಸ್ವಲ್ಪ
ಹೊಟ್ಟೆಕಿಚ್ಚಿನಿಂದಲೇ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಮಹಿಳೆಯನ್ನು ರೆಪ್ಪೆ ಮಿಟುಕಿಸದೆ
ನೋಡುತ್ತಾಳೆ) ಅದು ಟೈಪ್‍ರೈಟಿಂಗ್ ಮೆಷಿನ್ನಾ?
ಸರೋಜಾ ಮೂರ್ತಿ : ಹೌದೌದು. ನಾನೂ ರೇಷ್ಮೆ
ಸೀರೆ ತೆಗೀಬೇಕು ಅಂತಿದ್ದೆ. ಆದರೆ ಹೊಸದಾಗಿ ತಂದಿದ್ದು. ಸರಿಹೋಗುತ್ತಾ ಅಂತ ನೋಡ್ತಾ ಇದ್ದೆ.
ಫಂಕ್ಷನ್ಸ್ ಬಿಟ್ಟು ಬೇರೆ ಕಡೆ ಉಪಯೋಗಿಸಬೇಕು ಅಂದರೆ ಸಂಕೋಚ ಆಗುತ್ತೆ. (ಮುಖದಲ್ಲಿ ಯಾವ ಸಂಕೋಚದ
ಭಾವವೂ ಇಲ್ಲ. ಬದಲಿಗೆ ತನ್ನ ರೇಷ್ಮೆ ಸೀರೆಯ ವೈಭವಕ್ಕೆ ಅಂಟಿಕೊಳ್ಳುತ್ತಿದ್ದಾಳೆ - ಸ್ಪಷ್ಟವಾಗಿ
ಅಲ್ಲದಿದ್ದರೂ ಚಂಚಲತೆಯಿಂದ. ಎಷ್ಟೇ ಆದರೂ ಪ್ರತಿಷ್ಟೆಯ ಪ್ರಶ್ನೆ)
ಸರೋಜಾ ಮೂರ್ತಿ : ಎಷ್ಟು ಬೇಗ ಮಾಡ್ತೀರ! ಯಾವ
ಕೆಲಸವನ್ನಾದರೂ ಮಾಡೋದಕ್ಕೆ ಸಾಧ್ಯವಾದರೆ ಸಂತೋಷವಾಗಲೇಬೇಕು. ಅದರಲ್ಲೂ ಚೆನ್ನಾಗಿ ಮಾಡಿದರೆ!
ಕಾತ್ಯಾಯಿನಿ : ನಿಜ ಹೇಳಬೇಕೆಂದೆರೆ, ತುಂಬಾ ಚೆನ್ನಾಗಿದೆ. (ನಿಷ್ಕಪಟದಿಂದ
ಹೊಗಳಿದಳು)
ಸರೋಜಾ ಮೂರ್ತಿ : (ರೇಷ್ಮೆ ಸೀರೆಯ
ಹೆಮ್ಮೆಯಿಂದ ಕೆಂಪಾಗಿ) ಹೌದು, ತುಂಬಾ ಚೆನ್ನಾಗಿದೆ. (ಅದರ ಸೌಂದರ್ಯ ಆಕೆಗೆ
ಧೈರ್ಯ
ಕೊಡುತ್ತದೆ) ದಯವಿಟ್ಟು ಕುಳಿತುಕೊಳ್ಳಿ.
ಕಾತ್ಯಾಯಿನಿ : (ಏನೇ ಆಗಲಿ, ಹೇಳದಿದ್ದರೂ ಕುಳಿತುಕೊಳ್ಳುವಂತಹ ಹೆಣ್ಣು)
ನಿಮಗೆ ಪತ್ರಗಳ ಹಲವಾರು ಛಿoಠಿies
ಮಾಡಿಕೊಡಬೇಕು
ಅನ್ಸುತ್ತೆ? ನನಗೆ
ಏನನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಎಂಪ್ಲಾಯ್‍ಮೆಂಟ್ ಬ್ಯೂರೊನವರು ಈ ಅಡ್ರೆಸ್‍ನ ಕೈಗೆ ಕೊಟ್ಟು,
ಇಲ್ಲಿಗೆ ಹೋಗಿ ಅಂತ
ಹೇಳಿದರು, ಅಷ್ಟೇ!
ಸರೋಜಾ ಮೂರ್ತಿ : (ಹೆಚ್ಚುಕಡಿಮೆ ಕೆಲಸದಾಳಿನ
ವಿನಯದಿಂದ) ನನ್ನ ಕೆಲಸ ಅಲ್ಲ. ನಮ್ಮ ಯಜಮಾನರದ್ದು. ಮತ್ತೆ ಅವರಿಗೆ ಬೇಕಾಗಿರೋದು copies ಅಲ್ಲ. (ಗಿರೀಶನ ಬಗ್ಗೆ ಹೆಮ್ಮೆಯಿಂದ ಉಬ್ಬುತ್ತಾ)
ಸಾಕಷ್ಟು ಪತ್ರಗಳಿಗೆ ಉತ್ತರ ಕಳುಹಿಸಬೇಕು - ನೂರಾರು congratulation
letters ಮತ್ತು telegrams.
ಕಾತ್ಯಾಯಿನಿ : (ದಿನದ ಕೆಲಸದಲ್ಲಿ ಇವೆಲ್ಲಾ
ಸೇರಿಕೊಂಡಿದೆಯೇನೋ ಎಂಬಂತೆ) ಹೌದಾ?
ಸರೋಜಾ ಮೂರ್ತಿ : (ಪ್ರತಿಯೊಬ್ಬ ಹೆಂಡತಿಯೂ
ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಗಿರೀಶ ನಿರೀಕ್ಷಿಸುತ್ತಾನೆಂಬುದನ್ನು
ನೆನಪಿಸಿಕೊಳ್ಳುತ್ತಾ) ನಮ್ಮ ಯಜಮಾನರು ಅಸಾಧಾರಣದವರು. ಅವರಿಗೆ ಭಾರತ ರತ್ನ ಪದವಿ
ಕೊಡುತ್ತಿದ್ದಾರೆ. (ವಿರಾಮ. ಆದರೆ ಕಾತ್ಯಾ ನೆಲಕ್ಕೇನೂ ಕುಸಿಯಲಿಲ್ಲ) ಭಾರತ ರತ್ನ
ಕೊಡುತ್ತಿರುವುದು ಅವರು ಮಾಡಿರುವ ಸೇವೆಗಳಿಗೆ, ಬೇರೆ ಬೇರೆ ರಂಗಗಳಲ್ಲಿ – (ಏನೋ ಹೊಳೆದು) ಅದೇ ಅವರ ಸೇವೆಗಳಿಗೆ.
(ಗಿರೀಶನಿಗೆ ನ್ಯಾಯ ಒದಗಿಸುತ್ತಿಲ್ಲವೆಂದು ಅರಿತುಕೊಂಡು) ನನಗಿಂತ ಅವರೇ ಚೆನ್ನಾಗಿ ಹೇಳ್ತಾರೆ.
ಕಾತ್ಯಾಯಿನಿ : (ವ್ಯಾಪಾರದ ರೀತಿಯಲ್ಲಿ)
ಅವರಿಗೆ ಬರುವ ಶುಭಾಶಯಗಳಿಗೆ ಉತ್ತರಿಸಬೇಕು?
ಸರೋಜಾ ಮೂರ್ತಿ : (ಇದು ಕಷ್ಟಕರವಾದ
ಕೆಲಸವೆಂದು ಭಯಗೊಳ್ಳುತ್ತಾ) ಹೌದು.
ಕಾತ್ಯಾಯಿನಿ : (ಗೆಲುವಿನಿಂದ) ಈ ಕೆಲಸದಲ್ಲಿ
ನನಗೆ ಸ್ವಲ್ಪ ಅನುಭವವಿದೆ. (ಟೈಪ್ ಮಾಡಲು ಆರಂಭಿಸುತ್ತಾಳೆ)
ಸರೋಜಾ ಮೂರ್ತಿ : ಆದರೆ ಅವರ ಉತ್ತರ ಏನೂ ಅಂತ
ಗೊತ್ತಿಲ್ಲದೆ, ಶುರು
ಮಾಡೋದಿಕ್ಕಾಗಲ್ಲ.
ಕಾತ್ಯಾಯಿನಿ : ಸುಮ್ಮನೆ, specimen ಅಷ್ಟೇ. ಅದು ಮಾಮೂಲಿಯಾಗೇ ಇರುತ್ತಲ್ಲ?
ಸರೋಜಾ ಮೂರ್ತಿ : (ಆಕೆಗೆ ಇದೊಂದು ಹೊಸ
ವಿಚಾರ) ಮಾಮೂಲಿಯಾಗಿ? ಸಾಮಾನ್ಯವಾಗಿ
ಒಂದು ರೀತಿ ಅಂತ ಇರುತ್ತಾ?
ಕಾತ್ಯಾಯಿನಿ : ಹೌದು. (ಆಕೆ ಟೈಪ್ ಮಾಡಲು
ಆರಂಭಿಸುತ್ತಾಳೆ. ಸರೋಜಾ ಮೂರ್ತಿ ಅರ್ಧ ಸುಪ್ತಾವಸ್ಥೆಯಲ್ಲಿ ಆಕೆಯ ಚುರುಕಿನ ಬೆರಳುಗಳನ್ನು
ನೋಡಿದಳು. ನಿರುಪಯೋಗಿ ಮಹಿಳೆಯೊಬ್ಬಳು ಉಪಯೋಗಿ ಮಹಿಳೆಯನ್ನು ಗಮನಿಸುತ್ತಾ ನಿಟ್ಟುಸಿರು
ಬಿಡುತ್ತಾಳೆ. ಆಕೆಗೇ ಏಕೆಂಬುದು ತಿಳಿದಿಲ್ಲ)
ಕಾತ್ಯಾಯಿನಿ : (ಕೃತಜ್ಞತೆಯಿಂದ) ಹೌದು,
ತುಂಬಾ ಸಂತೋಷವಾಗುತ್ತೆ.
ಸರೋಜಾ ಮೂರ್ತಿ : ಇವರೇ ಸ್ಟೆನೋಗ್ರಾಫರ್.
ಮಿಸೆಸ್‍ಲಮೂರ್ತಿ ; (ಮತ್ತೆ ತನ್ನ ಹೆಚ್ಚುಗಾರಿಕೆಗೆ ಕಾರಣವನ್ನು
ನೆನಪಿಸಿಕೊಳ್ಳುತ್ತಾ) ಆದರೆ ಕ್ಷಮಿಸಿ. ಅದೇನೂ ತುಂಬ ಉಪಯೋಗಕ್ಕೆ ಬರಲ್ಲ ಅನ್ಸುತ್ತೆ. ಇದು ಬೇರೆ
ವಿಷಯ, ಹಾಗಂತ
ನಮ್ಮ ಯಜಮಾನರು ಹೇಳು ಎಂದಿದ್ದಾರೆ. ಈ ಗೌರವವನ್ನು ಪಡೆದುಕೊಳ್ಳಲು ಅವರು ಯಾವ ರೀತಿಯ
ಪ್ರಯತ್ನವನ್ನೂ ಮಾಡಲಿಲ್ಲ. ಅವರಿಗೂ ಇದು ಸಂಪೂರ್ಣವಾಗಿ, ಆಶ್ಚರ್ಯಕರವಾಗಿ...
ಕಾತ್ಯಾಯಿನಿ : (ಅವಳಂತೂ ಮಹಾ ವಾಸ್ತವವಾದಿ,
ವ್ಯಂಗ್ಯದ ವ್ಯಾಪಾರಿ)
ಅದನ್ನೇ ಬರೆದಿರೋದು.
ಸರೋಜಾ ಮೂರ್ತಿ : (ವ್ಯಂಗ್ಯವೆಂದರೆ ತಣ್ಣಗೆ
ಪ್ರತಿಕ್ರಿಯೆ ನೀಡುವಾಕೆ) ನಿಮಗೆ ಹೇಗೆ ಗೊತ್ತಾಯ್ತು?
ಕಾತ್ಯಾಯಿನಿ : ಊಹಿಸಿದೆ.
ಸರೋಜಾ ಮೂರ್ತಿ : ಸಾಮಾನ್ಯವಾಗಿ ಹಾಗೇನಾ?
ಕಾತ್ಯಾಯಿನಿ : ಹೌದು.
ಸರೋಜಾ ಮೂರ್ತಿ : ಅವರ್ಯಾರೂ ಪ್ರಶಸ್ತಿ
ಪಡೆಯೋದಿಕ್ಕೆ ಪ್ರಯತ್ನ ಮಾಡೋದಿಲ್ವೆ?
ಕಾತ್ಯಾಯಿನಿ : ಅದು ನನಗೆ ಗೊತ್ತಿಲ್ಲ. ಆ
ರೀತಿ ಉತ್ತರ ಬರಿಬೇಕೂಂತ ನಮಗೆ ಹೇಳಿದ್ದಾರೆ.
(ಈಗ ಅವಳಿಗೆ ಪತ್ರದಲ್ಲಿ ಮುಖ್ಯವಾದ ವಿಷಯವೆಂದರೆ, ಒಂದು ಪತ್ರಕ್ಕೆ ಹತ್ತು ರೂ.ನಂತೆ ನೂರು
ಪ್ರತಿಗಳು)
ಸರೋಜಾ ಮೂರ್ತಿ : (ಗೊತ್ತಿರುವ ವಿಷಯಕ್ಕೆ
ಬರುತ್ತಾ) ಇನ್ನೊಂದು ವಿಷಯ ಹೇಳಬೇಕು. ನಮ್ಮ ಯಜಮಾನರು ಕೀರ್ತಿಗಾಗಿ ಚಿಂತಿಸುವಂತಹ
ವ್ಯಕ್ತಿಯಲ್ಲ. ಎಲ್ಲಿಯತನಕ ತನ್ನ ಕರ್ತವ್ಯವನ್ನು...
ಕಾತ್ಯಾಯಿನಿ : ಸರಿ, ಅದನ್ನೇ ಸೇರಿಸ್ತಾ ಇದ್ದೇನೆ.
ಸರೋಜಾ ಮೂರ್ತಿ : ಹೌದಾ? ಆದರೆ ಅವರಿಗೆ ಬೇಕಾಗಿರೋದು ಪ್ರಮಖವಾಗಿ ಒಂದು
ವಿಷಯ. ಅದು ಎಲ್ಲರಿಗೂ ಗೊತ್ತಾಗಬೇಕು. ಅಂದರೆ, ತಮಗೆ ಬಂದ ಈ ಪ್ರಶಸ್ತಿಯನ್ನು ಬೇಡ ಎಂದೇ
ಹೇಳುತ್ತಿದ್ದರು. ಆದರೆ ಕೇವಲ...
ಕಾತ್ಯಾಯಿನಿ : ಅದನ್ನೂ ಇಲ್ಲಿ
ಸೇರಿಸಿದ್ದೇನೆ.
ಸರೋಜಾ ಮೂರ್ತಿ : ಏನನ್ನ?
ಕಾತ್ಯಾಯಿನಿ : (ಓದುತ್ತಾ) “ನಿಜವಾಗಿಯೂ ನನ್ನ ಪತ್ನಿಯ ಮತ್ತು ಸ್ನೇಹಿತರ
ಸಂತೋಷಕ್ಕಲ್ಲದಿದ್ದರೆ ಪ್ರಶಸ್ತಿಯನ್ನು ನಿರಾಕರಿಸಲು ಅವಕಾಶ ಮಾಡಿಕೊಡಿ ಎಂದು
ಕೇಳಿಕೊಳ್ಳುತ್ತಿದ್ದೆ.”
ಸರೋಜಾ ಮೂರ್ತಿ : (ಭಾರವಾದ ಧ್ವನಿಯಲ್ಲಿ) ಅದೇ
ವಿಷಯ ಅಂತ ನಿಮಗೆ ಹೇಗೆ ಗೊತ್ತಾಯ್ತು?
ಕಾತ್ಯಾಯಿನಿ : ಇದಾ?
ಸರೋಜಾ ಮೂರ್ತಿ : (ಪ್ರಶ್ನೆ ಕೇಳುವ ಹಕ್ಕನ್ನು
ಪಡೆದುಕೊಂಡಿರುವಾಕೆ) ಅವರೆಲ್ಲ ಇದೇ ಕಾರಣಕ್ಕೆ ಒಪ್ಪಿಕೊಳ್ತ್ತಾರಾ?
ಕಾತ್ಯಾಯಿನಿ : ಅದೇ ರೀತಿ ಉತ್ತರ ಬರೀಬೇಕೂಂತ
ಹೇಳಿದ್ದಾರೆ.
ಸರೋಜಾ ಮೂರ್ತಿ : (ಯೋಚನಾರಹಿತಳಾಗಿ) ಒಳ್ಳೆ,
ನಮ್ಮೆಜಮಾನರು ನಿಮಗೆ
ಗೊತ್ತಿದೆಯೇನೋ ಅನ್ನೋ ಹಾಗಿದೆ.
ಕಾತ್ಯಾಯಿನಿ : ನಿಜವಾಗಿಯೂ, ನನಗೆ ಅವರ ಹೆಸರೂ ಸಹ ತಿಳಿದಿಲ್ಲ.
ಸರೋಜಾ ಮೂರ್ತಿ : (ತಕ್ಷಣ ತನಗೆ ಅವನ ಬಗ್ಗೆ
ಗೊತ್ತಿದೆ ಎನ್ನುವುದನ್ನು ತೋರಿಸುತ್ತಾ) ಹೋ! ಇದು ಅವರಿಗೆ ಇಷ್ಟವಾಗೋದಿಲ್ಲ.
(ಈಗ ಆನಂದ ತನ್ನ casual wear ನಲ್ಲಿ ಬರುತ್ತಾನೆ. ಉಲ್ಲಾಸಭರಿತನಾಗಿ
ಕಾಣುತ್ತಾ, ಖುಷಿಯಿಂದಿರುವ
ಅವನಿಗಾಗಿ ಕಣ್ಣೀರು ಸುರಿಸೋಣ. ಹೇಗಾದರಾಗಲಿ ಕಾಟ ಕೊಡುವ ಕಾತ್ಯಾಯಿನಿಗೂ ಸಹ ಆಶ್ಚರ್ಯವೇ)
ಗಿರೀಶ್ ಮೂರ್ತಿ : (ಕಾಲರ್
ಸರಿಪಡಿಸಿಕೊಳ್ಳುತ್ತಾ) ಹಾಂ! ಹಾಂ! ನಮಸ್ಕಾರ.
ಗಿರೀಶ್ ಮೂರ್ತಿ : ಅವಳು ಇಂದು ಒಬ್ಬ ಸಾಧಾರಣ
ಸ್ಟೆನೊಗ್ರಾಫರ್. ನನ್ನವಳಿಗೆ ನಾಲ್ಕು ಜನ ಸೇವಕರಿದ್ದಾರೆ. ಹೊ! ಅವಳು ರೇಷ್ಮೆ
ಸೀರೆಯುಟ್ಟುಕೊಂಡು ಬರೋದನ್ನ ನೋಡಬೇಕು!
(ಅವರಿಬ್ಬರೂ ಒಬ್ಬರನ್ನೊಬ್ಬರನ್ನು ಬಾಯ್ತೆರೆದುಕೊಂಡು ನೋಡುತ್ತಾರೆ. ಆದರೆ
ಮಾತುಕತೆಯಿಲ್ಲ. ಮೊದಲು ಆಶ್ಚರ್ಯಗೊಂಡರೂ ನಂತರ ಪರಿಸ್ಥಿತಿ ಹಾಸ್ಯಮಯವಾಗಿ ಕಾಣುತ್ತದೆ. ಆದರೆ
ಆನಂದ ಸಿಡಿಲು ಬಡಿದವನಂತೆ ನಿಂತಿದ್ದಾನೆ)
ಸರೋಜಾ ಮೂರ್ತಿ : (ಯಾವುದನ್ನೂ ನೋಡದೆ) ನಾನು
ಆಕೆಗೆ ಏನ್ ಹೇಳ್ತಾ ಇದ್ದೆ ಅಂದ್ರೆ...
ಗಿರೀಶ್ ಮೂರ್ತಿ : ಹೆ! ಏನು? (ತನ್ನನ್ನೇ ಸಂಭಾಳಿಸಿಕೊಳ್ಳುತ್ತಾ) ನನಗೆ ಬಿಡು
ಸರೋಜ. ನಾನು ನೋಡಿಕೊಳ್ತೇನೆ. (ತಾನು ಯಜಮಾನರನ್ನು ರೇಗಿಸಿದನೇನೋ ಎಂಬ ಭಯಭೀತಿಯೊಂದಿಗೆ ಸರೋಜಾ
ಮೂರ್ತಿ ಹೋಗುತ್ತಾಳೆ. ಆನಂದ ಒಳನುಗ್ಗಿದಾಕೆಯನ್ನು ವಿಚಾರಿಸಿಕೊಳ್ಳುತ್ತಾನೆ)
ಗಿರೀಶ್ ಮೂರ್ತಿ : (ಅತ್ಯಂತ ತಿರಸ್ಕಾರದಿಂದ)
ನೀನು?
ಕಾತ್ಯಾಯಿನಿ : (ಅದನ್ನು ಒಪ್ಪಿಕೊಳ್ಳುವಂತೆ)
ಹೌದು! ಬಹಳ ವಿಚಿತ್ರವಾಗಿದೆ.
ಗಿರೀಶ್ ಮೂರ್ತಿ : ಇಲ್ಲಿಗೆ ಬರೋ ಧೈರ್ಯ
ಮಾಡಿದ್ದಕ್ಕೆ ನಾಚಿಕೆ ಆಗಬೇಕು.]
ಕಾತ್ಯಾಯಿನಿ : ನನ್ನನ್ನ ನಂಬಿ. ನನಗೆ
ನಿಮಗಿಂತ ಕಡಿಮೆ ಆಶ್ಚರ್ಯವೇನೂ ಆಗಿಲ್ಲ. ಬರೇ ವ್ಯಾಪಾರದ ರೀತೀಲಿ ನನ್ನನ್ನ ಇಲ್ಲಿಗೆ
ಕಳುಹಿಸಿದರು. ನನಗೆ ಮನೆಯ ಅಡ್ರೆಸ್ ಮಾತ್ರ ಹೇಳಿದ್ದರು. ಹೆಸರನ್ನೂ ಹೇಳಿರಲಿಲ್ಲ.
ಗಿರೀಶ್ ಮೂರ್ತಿ : (ಅವಳನ್ನು ಕೀಳಾಗಿ ನೋಡುತ್ತಾ)
ಸಾಧಾರಣವಾದ ವ್ಯಾಪಾರದ ರೀತಿಯಲ್ಲಿ! ಈ ಮಟ್ಟಕ್ಕೆ ಬಂದು ಬಿದ್ದಿದ್ದೀಯ – ಒಬ್ಬ ಸ್ಟೆನೊಗ್ರಾಫರ್!
ಕಾತ್ಯಾಯಿನಿ : (ವಿಚಲಿತಗೊಳ್ಳದೆ) ಹಾಗೆ
ತಿಳಿದುಕೊಳ್ಳಿ.
ಗಿರೀಶ್ ಮೂರ್ತಿ : ಅದೂ ಬಹಳ ಕಷ್ಟಪಟ್ಟು.
ಕಾತ್ಯಾಯಿನಿ : (ಕೆಲವು ಕರಾಳ
ನೆನಪುಗಳೊಂದಿಗೆ) ಇನ್ನೂ ಕೆಟ್ಟ ಕಷ್ಟಗಳಿಂದ.
ಗಿರೀಶ್ ಮೂರ್ತಿ : (ಅಯ್ಯೊ, ಕೀಳುನಗೆಯೊಂದಿಗೆ) ನನ್ನ ಶುಭಾಷಯಗಳು.
ಕಾತ್ಯಾಯಿನಿ : ಥ್ಯಾಂಕ್ಯೂ ಯು ಗಿರೀಶ್.
ಗಿರೀಶ್ ಮೂರ್ತಿ : (ಅಕೆ ಕುಗ್ಗದೆ ಹೋದುದನ್ನು
ನೋಡಿ ರೇಗಿಕೊಂಡು - ಬೇರಾವ ಗಂಡಸಿಗಾದರೂ ಆಗುತ್ತಿದ್ದ ಹಾಗೆ) ಹೆ! ನನ್ನನ್ನ ಏನಂತ ಕರೆದಿರಿ
ಮೇಡಮ್?
ಕಾತ್ಯಾಯಿನಿ : ಗಿರೀಶ್ ಅಲ್ಲವೆ? ಅಯ್ಯೊ ದೇವರೇ! ನಾನು ಹೆಚ್ಚುಕಡಿಮೆ ಮರೆತೇಬಿಟ್ಟಿದ್ದೇನೆ.
ಗಿರೀಶ್ ಮೂರ್ತಿ : ನಿನಗೆ ನಾನು ಗಿರೀಶ್
ಅಲ್ಲ. ನನ್ನ ಹೆಸರು, ಗಿರೀಶ್
ಮೂರ್ತಿ?
ಕಾತ್ಯಾಯಿನಿ : ಹೌದು ಅದನ್ನು ಮರೆತಿರಲಿಲ್ಲ.
ಅದರೊಂದಿಗೆ ನನ್ನ ಹೆಸರೂ ಸೇರಿಕೊಂಡಿತ್ತು.
ಗಿರೀಶ್ ಮೂರ್ತಿ: (ಉತ್ತಮ ನಡೆತೆಯಿಂದ)
ಅದನ್ನು ಬರೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುವವರೆಗೂ ನಿನ್ನ ಹೆಸರಿನೊಂದಿಗೆ ಆ ಹೆಸರೂ
ಇತ್ತು.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : (ಹಿಗ್ಗಿನಿಂದ) ನಿನ್ನನ್ನು
ಇಲ್ಲಿ ನೋಡಿದ್ದರಿಂದ ಕೋಪ ಬಂತು. ಆದರೆ ಇನ್ನೊಮ್ಮೆ ಯೋಚಿಸಿದಾಗ ಸಂತೋಷವೂ ಆಯಿತು. (ತನ್ನ ಆಳವಾದ
ನೈತಿಕ ಸ್ವಭಾವದಿಂದ) ಇದರಲ್ಲಿ ನಿರ್ದಯವಾದ ನ್ಯಾಯವಿದೆ.
ಕಾತ್ಯಾಯಿನಿ : (ಕರುಣೆಯೊಂದಿಗೆ) ಹೇಳಿ.
ಗಿರೀಶ್ ಮೂರ್ತಿ : ಇಲ್ಲಿಗೆ ನಿನ್ನನ್ನ
ಕರೆಸಿದ್ದು ಯಾಕೆ ಅಂತ ಗೊತ್ತಾ?
ಕಾತ್ಯಾಯಿನಿ : ಈಗ ತಾನೇ ಅದನ್ನ
ತಿಳಿದುಕೊಳ್ತಾ ಇದ್ದೆ. ನಿಮಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿದೆ. ನಿಮಗೆ ಬರೋ ಶುಭಾಷಯ
ಪತ್ರಗಳಿಗೆ ಉತ್ತರ ಬರೀಬೇಕು.
ಗಿರೀಶ್ ಮೂರ್ತಿ : ಅದೇ! ಅದೇ! ನೀನು
ನನ್ನಲ್ಲಿ ಕೆಲಸಕ್ಕೆ ಬಂದಿದೀಯ.
ಕಾತ್ಯಾಯಿನಿ : ನಾನು! ಯಾರು ಮಿಸೆಸ್
ಮೂರ್ತಿಯಾಗಿಬೇಕಿತ್ತೋ ಅವಳು!
ಕಾತ್ಯಾಯಿನಿ : (ಆಲೋಚಿಸುತ್ತಾ) ಅದು
ನಿಮ್ಮನ್ನ ಯೋಚನೆಗೀಡು ಮಾಡುತ್ತೆ ಅಂದುಕೊಂಡಿದ್ದೆ.
ಕಾತ್ಯಾಯಿನಿ : ನನಗೆ ವಾಶ್ ಮಾಡೋದಿಕ್ಕಾದ್ರೂ
ಬಿಡ್ತಾರಾ ಅಂತ ಒಂದು ಅನುಮಾನವಿದೆ, ಗಿರೀಶ್ ಮೂರ್ತಿ?
(ಅವಳ ಅಭಿರುಚಿ ಅವನಿಗೆ ಅಸಹ್ಯವಾಗುತ್ತದೆ)
ಗಿರೀಶ್ ಮೂರ್ತಿ : (ಠೀವಿಯಿಂದ) ನೀನು
ಹೋಗಬಹುದು. ಕೆಲವೇ ಮೆಟ್ಟಿಲುಗಳು ನಿನ್ನನ್ನು ನನ್ನ ಮುಗ್ಧ ಮಕ್ಕಳಿಂದ ಬೇರ್ಪಡಿಸುತ್ತವೆ ಅನ್ನೋ
ಯೋಚನೇನೇ...
(ಅವಳ ಮುಖದಲ್ಲಿ ಹೊಸಬೆಳಕು ಬಂದುದೇಕೆ ಎಂಬುದೇ ಅವನಿಗೆ ಅರ್ಥವಾಗಲಿಲ್ಲ)
ಕಾತ್ಯಾಯಿನಿ : (ನಿಧಾನವಾಗಿ) ನಿಮಗೆ
ಮಕ್ಕಳಿದ್ದಾರ?
ಗಿರೀಶ್ ಮೂರ್ತಿ : (ಗರ್ವದಿಂದ) ಎರಡು.
(ಅವಳೇಕೆ ಉತ್ತರ ಕೊಡಲು ಅಷ್ಟೊಂದು ನಿಧಾನ ಮಾಡುತ್ತಾಳೆಂಬುದು ಅವನಿಗೆ
ಅರ್ಥವೇ ಆಗಲಿಲ್ಲ)
ಕಾತ್ಯಾಯಿನಿ : (ಅಧಿಕ ಪ್ರಸಂಗತನದಿಂದ) ಬಹಳ
ಒಳ್ಳೆಯ ಸಂಖ್ಯೆ.
ಗಿರೀಶ್ ಮೂರ್ತಿ : (ಭಾರಿ ಜಂಭದಿಂದ) ಎರಡೂ
ಗಂಡು.
ಕಾತ್ಯಾಯಿನಿ : ಎಲ್ಲದರಲ್ಲೂ ಯಶಸ್ವಿ, ಅವೂ ನಿಮ್ಮ ಹಾಗೆ ಇವೆಯಾ, ಗಿರೀಶ್ ಮೂರ್ತಿ?
ಗಿರೀಶ್ ಮೂರ್ತಿ : (ಉಬ್ಬಿಹೋಗಿ) ಅವೂ ನನ್ನ
ಹಾಗೆಯೇ!
ಕಾತ್ಯಾಯಿನಿ : ತುಂಬಾ ಒಳ್ಳೆಯದು. (ಇಂತಹ
ವಿಷಯದಲ್ಲಿ ಅವಳು ಭಂಡಳಾಗಿರಬಹುದು)
ಗಿರೀಶ್ ಮೂರ್ತಿ : ದಯವಿಟ್ಟು, ಹೊರಟು ಹೋಗ್ತೀಯಾ?
ಕಾತ್ಯಾಯಿನಿ : ನನ್ನ ಬಾಸ್‍ಗೆ ಏನು ಹೇಳಲಿ?
ಗಿರೀಶ್ ಮೂರ್ತಿ : ಅದು ನನಗೆ
ಸಂಬಂಧಪಟ್ಟಿದ್ದಲ್ಲ.
ಕಾತ್ಯಾಯಿನಿ : ನಿಮ್ಮ ಹೆಂಡತಿಗೆ ಏನು
ಹೇಳ್ತೀರಾ?
ಗಿರೀಶ್ ಮೂರ್ತಿ : ನಾನು ಏನೇ ಹೇಳಿದ್ರೂ ನನ್ನ
ಹೆಂಡತಿ ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳುತ್ತಾಳೆಂದು ಹೆಮ್ಮೆಯಿಂದ ಹೇಳಬಲ್ಲೆ. (ಆಕೆ
ನಗುತ್ತಾಳೆ. ಅದನ್ನು ಮುಂದಿನ ಮಾತು ವಿವರಿಸದಿದ್ದರೆ ಆಕೆ ನಕ್ಕಿದ್ದು ಯಾಕೆಂದು ದೇವರಿಗೇ
ಗೊತ್ತು)
ಕಾತ್ಯಾಯಿನಿ : ಅದೇ ಗಿರೀಶ್.
ಗಿರೀಶ್ ಮೂರ್ತಿ : ಅಂದರೆ?
ಕಾತ್ಯಾಯಿನಿ : ಗಂಡಸರು, ಮತ್ತೆ ಹೆಂಗಸರ ಬಗ್ಗೆ ನಿಮಗಿರುವ ಆಳವಾದ
ತಿಳುವಳಿಕೆ ಬಗ್ಗೆ, ಇನ್ನೂ
ಆ ಹಳೇ ನಂಬಿಕೆಯನ್ನೇ ಇಟ್ಟುಕೊಂಡಿದ್ದೀರಲ್ಲಾ, ಅದಕ್ಕೇ ನಗು ಬಂತು.
ಗಿರೀಶ್ ಮೂರ್ತಿ : (ಅವಳ ನೈತಿಕತೆಯಂತೇ ಅವಳ
ಬುದ್ಧಿವಂತಿಕೆಯೂ ಕೂಡ ಕಡಿಮೆಯೆಂದೇ ಯೋಚಿಸುತ್ತಾ) ನನ್ನ ಹೆಂಡತಿ ಬಗ್ಗೆ ನನಗೆ ಚೆನ್ನಾಗಿ
ಗೊತ್ತಿದೆ ಎಂದುಕೊಂಡಿದ್ದೇನೆ.
ಕಾತ್ಯಾಯಿನಿ : ನನಗೂ ಹಾಗೇ ಅನ್ಸುತ್ತೆ. ಒಂದು ವಿಷಯ ನೆನಪಿಗೆ
ಬರ್ತಾ ಇದೆ. ನಾನು ನಿಮ್ಮ ಹೆಂಡತಿಯಾಗಿದ್ದಾಗಲೂ, ನನ್ನ ಬಗ್ಗೆ ನೀವು ಹೀಗೆ ತಿಳಿದುಕೊಂಡಿದ್ರಿ.
(ಅವಳ ಜೊತೆ ಅವನು ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾನೆ. ಬಾಗಿಲ ಕಡೆ ಕೈ ತೋರಿಸುತ್ತಿದ್ದಾನೆ.
ಆದರೆ ಆಕೆ ಕೆಟ್ಟದಾಗಿ ಹೋಗುವಾಕೆ ಅಲ್ಲ) ಆಯ್ತು ಬರ್ತೇನೆ, ಗಿರೀಶ್ ಮೂರ್ತಿ. ಬೆಲ್ ಮಾಡೋದಿಲ್ವೆ? ನಾಲ್ಕು ಜನ ಸೇವಕರು ನನಗೆ ದಾರಿ
ತೋರಿಸುವುದಕ್ಕೆ?
(ಆದರೆ ಆತ ಸಂಕೋಚಪಡುತ್ತಾನೆ)
ಗಿರೀಶ್ ಮೂರ್ತಿ : (ಅವನು ಅವನೇ ಆಗಿದ್ದರೂ
ಸಹ) ನೀನು ಇಲ್ಲೇ ಇರೋದ್ರಿಂದ ನಿನ್ನಿಂದ ಒಂದು ವಿಷಯ ಗೊತ್ತಾಗಬೇಕು. (ಕಡಿಮೆ ಕುತೂಹಲದಿಂದ
ಕೇಳಬೇಕೆಂದು ಯೋಚಿಸುತ್ತಾ) ಹೇಳು, ಯಾರವನು?
(ವಿಚಿತ್ರ ಹೆಂಗಸು – ಆಕೆ ಆತನಿಗೆ ಯಾವಾಗಲೂ ವಿಚಿತ್ರವಾಗಿದ್ದಳೆಂದು
ಈಗ ಸ್ಪಷ್ಟವಾಗುತ್ತಿದೆ - ಸಹನೆಯಿಂದ ನಗುತ್ತಿದ್ದಾಳೆ)
ಕಾತ್ಯಾಯಿನಿ : ನಿಮಗೆ ಹುಡುಕೋದಿಕ್ಕೆ ಆಗಲೇ
ಇಲ್ವಾ?
ಗಿರೀಶ್ ಮೂರ್ತಿ : ನನಗೆ ಯಾವಾಗಲೂ
ಸ್ಪಷ್ಟವಾಗಲಿಲ್ಲ.
ಗಿರೀಶ್ ಮೂರ್ತಿ : ನೀನ್ ಹೇಳ್ತೀಯಾ ತಾನೆ?
ಸರಿ ಹಾಗಾದರೆ. ಮಾತು
ಅಂದ್ರೆ ಮಾತು.
ಗಿರೀಶ್ ಮೂರ್ತಿ : (ತಿರಸ್ಕಾರದ ನಗೆ ನಕ್ಕು)
ಅವನು ನಿನ್ನನ್ನ ಬೇಗನೆ ಬಿಟ್ಟುಬಿಟ್ಟ ಅನ್ನೋದಂತು ಸ್ಪಷ್ಟವಾಗಿದೆ.
ಕಾತ್ಯಾಯಿನಿ : ಹೌದು, ತುಂಬಾ ಬೇಗ.
ಗಿರೀಶ್ ಮೂರ್ತಿ : ನಾನು ನಿನಗೆ ಮೊದಲೇ
ಹೇಳಬೇಕೂ ಅಂತಿದ್ದೆ. (ಆಕೆ ಮೋನಾಲಿಸಾ ನಗೆಯೊಂದಿಗೆ ಆತನನ್ನು ಪರೀಕ್ಷಿಸುತ್ತಿದ್ದಾಳೆ. ಕರಡಿ
ಜಾತಿಗೆ ಸೇರಿದ ಮನುಷ್ಯ ದೈನ್ಯದಿಂದ ಕೇಳಬೇಕಾಯಿತು) ಅವನು ಯಾರು? ಅದಾಗಿದ್ದು ಬಹಳÀ ಹಿಂದೆ, ಮತ್ತೆ ಈಗ ನಮ್ಮಿಬ್ಬರಿಗೂ ಅದರಿಂದ ಏನೂ
ಆಗಲ್ಲ. ಕಾತ್ಯಾ, ಅವನು
ಯಾರು ಹೇಳು?
ಕಾತ್ಯಾಯಿನಿ : (ತಾಯಿಯಂತೆ ತಲೆ
ಅಲ್ಲಾಡಿಸುತ್ತಾ) ಕೇಳದಿದ್ದರೇ ಉತ್ತಮ.
ಗಿರೀಶ್ ಮೂರ್ತಿ : ನಾನು ಕೇಳೇ ಕೇಳ್ತಿನಿ.
ಹೇಳು.
ಕಾತ್ಯಾಯಿನಿ : ನಿಮಗೆ ಹೇಳದೆ ಇರೋದೇ
ಒಳ್ಳೆಯದು.
ಗಿರೀಶ್ ಮೂರ್ತಿ : ಹಾಗಾದರೆ, ದೇವರೇ, ನನ್ನ ಸ್ನೇಹಿತರಲ್ಲೇ ಒಬ್ಬನು? ಯಾರು? ಕೇಶವನಾ? (ತಲೆ ಅಲ್ಲಾಡಿಸುತ್ತಾಳೆ) ನನ್ನ ಮನೆಗೆ ಈಗಲೂ
ಬರುತ್ತಿರುವವರಲ್ಲಿ ಒಬ್ಬನಿರಬೇಕು.
ಕಾತ್ಯಾಯಿನಿ : ಇಲ್ಲ ಅನ್ಸುತ್ತೆ.
(ನೆನಪಿನಾಳಕ್ಕೆ ಇಳಿಯುತ್ತಾ) ಹತ್ತು ವರ್ಷದ ಹಿಂದೆ! ಆ ರಾತ್ರಿ ನೀವು ಮನೆಗೆ ಹೋದಾಗ ನನ್ನ
ಕಾಗದವನ್ನು ನೋಡಿದಿರಾ?
ಗಿರೀಶ್ ಮೂರ್ತಿ : (ಅಶಾಂತಿಯಿಂದ) ಹೌದು.
ಕಾತ್ಯಾಯಿನಿ : ಆದನ್ನು ವಿಸ್ಕಿ ಬಾಟಲಿಗೆ
ಒರಗಿಸಿಟ್ಟಿದ್ದೆ. ನೀವದನ್ನ ನೋಡೇ ನೋಡ್ತೀರ ಅಂತ ಯೋಚಿಸಿದೆ. ಆ ರೂಮು ಸಹ ಇದಕ್ಕಿಂತ ಬೇರೆ
ರೀತಿಯೇನೂ ಇರಲಿಲ್ಲ. ಕುರ್ಚಿ ಮೇಜುಗಳನ್ನು ಹೀಗೆ ಬಹಳ ಅಂದವಾಗಿ ಜೋಡಿಸಿತ್ತು. ಹಾಂ! ನನಗೀಗ
ಎಲ್ಲವೂ ಚೆನ್ನಾಗಿ ನೆನಪಿಗೆ ಬರುತ್ತಿದೆ. ನೀವು ನನ್ನನ್ನು ನೋಡಲಿಲ್ಲ. ಗಿರೀಶ್, ಶಾಲನ್ನು ಹೊದ್ದುಕೊಂಡು, ಕಾಗದವನ್ನು ಅಲ್ಲಿಟ್ಟು, ಕೊನೆಬಾರಿಗೆ ಎಲ್ಲಾ ಕಡೆ ಒಂದು ಸುತ್ತು ಹಾಕಿ,
ನಂತರ ರಾತ್ರಿಯಲ್ಲಿ
ನುಸುಳಿಕೊಂಡು ಅವನನ್ನು...
ಗಿರೀಶ್ ಮೂರ್ತಿ: ಯಾರನ್ನು?
ಕಾತ್ಯಾಯಿನಿ : ಅವನನ್ನೇ. ಗಂಟೆಗಳು
ಉರುಳಿದವು. ರೂಮಿನಲ್ಲಿ ಗಡಿಯಾರದ ಟಿಕ್‍ಟಿಕ್ ಶಬ್ಧ ಬಿಟ್ಟರೆ ಬೇರೆ ಯಾವ ಶಬ್ಧವೂ ಇಲ್ಲ. ಸುಮಾರು
ಮಧ್ಯರಾತ್ರಿಯ ಸಮಯ. ನೀವೊಬ್ಬರೇ ವಾಪಸ್ ಬಂದಿರಿ. ನೀವು...
ಗಿರೀಶ್ ಮೂರ್ತಿ : (ಒರಟಾಗಿ) ನಾನೇನು ಒಬ್ಬನೇ
ಇರಲಿಲ್ಲ.
ಕಾತ್ಯಾಯಿನಿ : (ಮನಸ್ಸಿನಲ್ಲಿದ್ದ ಚಿತ್ರ
ಹಾಳಾಯಿತು) ಇಲ್ಲ? ಹೊ!
(ಆಪಾದಿತಳ ದನಿಯಲ್ಲಿ) ಹಾಗಾದರೆ ಇಷ್ಟು ವರ್ಷಗಳ ಕಾಲ ನಾನು ತಪ್ಪಾಗಿ ಅರ್ಥಮಾಡಿಕೊಂಡಿದ್ದೆ.
(ಅವನ ಮುಖವನ್ನೇ ಗಮನಿಸುತ್ತಾಳೆ) ಏನೋ, ತುಂಬಾ ಕುತೂಹಲಕಾರವಾದದ್ದೇ ನಡೆದಿತ್ತೇನೋ?
ಅಲ್ಲಾ?
ಗಿರೀಶ್ ಮೂರ್ತಿ : (ಗದರಿಸುತ್ತಾ) ತುಂಬಾ ಕೋಪ
ಬರಿಸುವಂತದ್ದೇನೋ.
ಕಾತ್ಯಾಯಿನಿ : (ಪುಸಲಾಯಿಸುತ್ತಾ) ದಯವಿಟ್ಟು
ಅದೇನೂಂತ ಹೇಳಿ.
ಗಿರೀಶ್ ಮೂರ್ತಿ : ಅದರ ಬಗ್ಗೆ ಈಗ ಮಾತಾಡೋದು
ಬೇಡ. ಆ ಮನುಷ್ಯ ಯಾರೂಂತ ಹೇಳು. ತನ್ನ ಹೆಂಡತಿ ಯಾರೊಂದಿಗೆ ಓಡಹೋದಳು ಅಂತ ತಿಳಿದುಕೊಳ್ಳೋದಿಕ್ಕೆ
ಗಂಡನಿಗೆ ಹಕ್ಕಿದೆ.
ಕಾತ್ಯಾಯಿನಿ : (ಯಾರಿಗಾದರೂ ರೋಸಿಹೋಗುವಂತೆ
ತನ್ನ ನಾಲಿಗೆಯನ್ನು ಸದಾ ಸಿದ್ದವಾಗಿಟ್ಟುಕೊಂಡಿರುವಾಕೆ) ಖಂಡಿತವಾಗಿ. ಹಾಗೇನೇ ಅದನ್ನ ತನ್ನ ಗಂಡ
ಹೇಗೆ ತೆಗೆದುಕೊಂಡ ಅಂತ ತಿಳಿದುಕೊಳ್ಳೋಕೆ ಹೆಂಡತಿಗೆ ಹಕ್ಕಿದೆ. (ಹೆಂಗಸರಿಗೆ ಇಷ್ಟವಾದ ಚೌಕಾಸಿಯ
ಬುದ್ಧಿ ಇಲ್ಲಿ ಅವಳ ಸಹಾಯಕ್ಕೆ ಬರುತ್ತದೆ) ಗಿರೀಶ್, ಒಂದು ಮಾತು. ಅಲ್ಲಿ ಏನಾಯ್ತು ಅಂತ ನೀವ್
ಹೇಳಿ. ಆತ ಯಾರೂಂತ ನಾನ್ ಹೇಳ್ತೀನಿ.
ಕಾತ್ಯಾಯಿನಿ : (ಕುಟ್ಟಿ ಪುಡಿಪುಡಿಯಾಗದೆ)
ಅದನ್ನ ಮತ್ತೆ ನೋಡಬೇಕು. ತೋರಿಸಿ. (ಅವನ ಕಣ್ಣು ಮೇಜಿನತ್ತ ಹಾಯುತ್ತಿರುವುದನ್ನು ಗಮನಿಸಿದಳು)
(ಇದೇ ಪ್ರಪಥಮ ಬಾರಿಗೆ ಅವರಿಬ್ಬರೂ ಒಪ್ಪಂದಕ್ಕೆ
ಬರುತ್ತಾರೆ ಮತ್ತು ಗಿರೀಶ್ ಮೂರ್ತಿ ತನ್ನನ್ನೇ ಮರೆತು ಸೋಫಾದಲ್ಲಿ ಅವಳ ಪಕ್ಕವೇ
ಕುಳಿತುಕೊಳ್ಳುತ್ತಾನೆ. ಆತ ಅವಳಿಗೆ ಏನನ್ನೋ ಹೇಳಬೇಕೆನ್ನುವುದನ್ನು ಮಾತ್ರವೇ
ಯೋಚಿಸುತ್ತಿದ್ದಾನೆ. ಆದರೆ ಆಕೆ ತನ್ನ ಜಾಗದ ಬಗ್ಗೆ ಎಚ್ಚರದಿಂದ ಇದ್ದಾಳೆ)
ಕಾತ್ಯಾಯಿನಿ : (ಅಭಿರುಚಿಯಿಲ್ಲದೆ) ಅದೇ,
ಹಳೇ ರೀತೀನೆ. (ಅವನು
ಕೋಪದಿಂದ ದೂರ ಸರಿದು ಕುಳಿತುಕೊಳ್ಳುತ್ತಾನೆ) ಮುಂದುವರೆಸಿ, ಗಿರೀಶ್.
ಗಿರೀಶ್ ಮೂರ್ತಿ : (ಯಾವುದನ್ನೇ ಆಗಲಿ ತನ್ನ
ಉಪಯೋಗಕ್ಕೆ ಬರುವಂತೆ ಹಾರಿಸಿ ಮಾತನಾಡುವವ) ಸರಿ, ನಿನಗೇ ಗೊತ್ತಿದ್ದ ಹಾಗೆ, ಆ ರಾತ್ರಿ ಕ್ಲಬ್‍ನಲ್ಲಿ ಊಟ ಮಾಡ್ತಾ ಇದ್ದೆ.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : ಆನಂದಕುಮಾರ್ ಕಾರಿನಲ್ಲೇ
ಮನಗೆ ಬಂದೆ. ಲಂಬೇಶ್ ನನ್ನ ಜೊತೆಯಲ್ಲಿದ್ದ. ‘ಒಂದರೆಡು ನಿಮಿಷ ಒಳಗಡೆ ಬನ್ನಿ’ ಅಂತ ಕರೆದೆ.
ಕಾತ್ಯಾಯಿನಿ : ಆನಂದಕುಮಾರ್, ಲಂಬೇಶ್? ಹಾಂ, ಇನ್ನೂ ನೆನಪಿದೆ. ಲಂಬೇಶ್ ಪರಿಷತ್‍ನಲ್ಲಿದ್ದರು.
ಗಿರೀಶ್ ಮೂರ್ತಿ : ಇಲ್ಲ, ಅದು ಆನಂದಕುಮಾರ್. ಅವರಿಬ್ಬರೂ ನನ್ನ ಜೊತೆ
ಮನೆಗೆ ಬಂದರು, ಆಮೇಲೆ...
(ಇದ್ದಕ್ಕಿದ್ದಂತೆ ಕೋಪದಿಂದ) ಅವನೇನಾ?
ಕಾತ್ಯಾಯಿನಿ : (ದಿಗ್ಭ್ರಮೆಯಾಗಿ) ಯಾರು?
ಗಿರೀಶ್ ಮೂರ್ತಿ : ಲಂಬೇಶನಾ?
ಕಾತ್ಯಾಯಿನಿ : ಏನು?
ಡಾ.ಆನಂದಮೂತಿ : ಆ ಮನುಷ್ಯ.
ಕಾತ್ಯಾಯಿನಿ : ಯಾವ ಮನುಷ್ಯ? (ಅರ್ಥಮಾಡಿಕೊಂಡು) ಹೊ! ಹೊ! ಇಲ್ಲಾ! ಅವರು
ನಿಮ್ಮ ಜೊತೆ ಮನೆಗೆ ಬಂದರು ಅಂತ ಹೇಳ್ತಾ ಇದೀರಾ ಅಂದುಕೊಂಡೆ.
ಗಿರೀಶ್ ಮೂರ್ತಿ : ಬಹುಶಃ ಕತ್ತಲಾಗಿತ್ತು.
ಕಾತ್ಯಾಯಿನಿ : ಕತ್ತಲಾಗಿರಲಿಲ್ಲ. ಇರಲಿ
ಹೇಳಿ.
ಗಿರೀಶ್ ಮೂರ್ತಿ : ಕ್ಲಬ್‍ನಲ್ಲಿ ನಡೆದ
ಮಾತುಕತೆಯನ್ನ ಮುಗಿಸೋದಿಕ್ಕೆ ಅಂತ ಒಳಗಡೆ ಬಂದರು.
ಕಾತ್ಯಾಯಿನಿ : ನೋಡಿದ್ರೆ, ಮಾತುಕತೆ ಬಹಳ ಕುತೂಹಲಿಕಾರಿಯಾದದ್ದೇ ಅಂತ
ಕಾಣ್ಸುತ್ತೆ.
ಗಿರೀಶ್ ಮೂರ್ತಿ : ಕೈಗಾರಿಕೋದ್ಯಮಿಯ
ಹೆಂಡತಿಯೊಬ್ಬಳು ಯಾರ ಜೊತೇನೋ ಓಡಿಹೋಗಿದ್ದಳು. ಅದೇ ವಿಷಯ ಪೇಪರ್ ತುಂಬಾ ತುಂಬಿಹೋಗಿತ್ತು. ಅವಳ
ಹೆಸರೇನೋ...
ಕಾತ್ಯಾಯಿನಿ : ಅದು ಬೇಕಾ?
ಗಿರೀಶ್ ಮೂರ್ತಿ : ಬೇಡ ಬಿಡು. (ಇಲ್ಲಿಗೆ ಆ
ಹೆಂಗಸಿನ ಕಥೆ ಮುಗೀತು) ಆ ವಿಷಯದ ಬಗ್ಗೇನೇ ಮಾತಾಡ್ತಾ ಇದ್ವಿ. (ವಕ್ರಮುಖ ಧರಿಸಿ) ನಾನು ಸ್ವಲ್ಪ
ಬಿಸಿಯಾಗೇ ಇದ್ದೆ.
ಕಾತ್ಯಾಯಿನಿ : (ಅಹಿತಕರ ಆನಂದದಿಂದ) ನಾನು
ಊಹಿಸಿಕೊಳ್ಳಬಲ್ಲೆ. “ಅವನಿಗೆ
ಸರಿಯಾಗೇ ಆಯ್ತು. ತನ್ನ ಹೆಂಡತಿಯನ್ನು ನೋಡಿಕೊಳ್ಳೋದಿಕ್ಕೆ ಆಗದ ಮನಷ್ಯ, ಅವಳನ್ನು ಕಳೆದುಕೊಳ್ಳೋದೆ ಸರಿ” ಅಂತ ನೀವು ಹೇಳ್ತಾ ಇದ್ದಿರಬಹುದು.
ಗಿರೀಶ್ ಮೂರ್ತಿ : (ಕಹಿಯಾಗಿ) ಬಹುಶಃ ಅದೇ
ರೀತಿ ಏನೋ.
ಕಾತ್ಯಾಯಿನಿ : ಮತ್ತೆ, ಅಷ್ಟೂ ಸಮಯ ಕಾಗದ ಅಲ್ಲೇ ಬಿದ್ದಿತ್ತು,
ಕಾಯ್ತಾ. ಬಹುಶಃ ಗಡಿಯಾರ
ಬಿಟ್ಟರೆ ನಿಮ್ಮಲ್ಲಿ ಯಾರಿಗೂ ಕಾಗದವೊಂದು ಅಲ್ಲಿದೆಯೆಂದು ಗೊತ್ತಿರಲಿಲ್ಲ. ಗಿರೀಶ್, ನೀವು ತುಂಬಾ ಒಳ್ಳೆಯವರು, ಅಲ್ವಾ? ಹೇಳಿ. (ಅವನ ಮುಖದಲ್ಲಿ ಒಳ್ಳೆಯತನದ ಯಾವ
ಲಕ್ಷಣವೂ ಇಲ್ಲ. ಅನಕ್ಷರಸ್ಥ ಮಹಿಳೆ ತಪ್ಪು ವಿಶೇಷಣವನ್ನು ಉಪಯೋಗಿಸಿದ್ದಾಳೆ) ಆಂ, ಕಾಗದದಲ್ಲಿ ಏನು ಬರೆದಿದ್ದೆ ಅನ್ನೋದೇ ಮರೆತು
ಹೋಗಿದೆ.
ಗಿರೀಶ್ ಮೂರ್ತಿ : (ಅವಳನ್ನು ಕುಟ್ಟಿ
ಪುಡಿಪುಡಿ ಮಾಡುವಂತೆ) ನನಗೂ ಅಷ್ಟೆ. ಅದರೆ ಅದು ಇನ್ನೂ ನನ್ನಲ್ಲಿ ಇದೆ.
ಗಿರೀಶ್ ಮೂರ್ತಿ : ಅದು ನಿನಗೆ ನನ್ನ ಪ್ರೆಸೆಂಟೇಷನ್ ತಗೊ. (ಆ ದುರ್ವಿಧಿಯ ಕಾಗದ, ಸತ್ತುಹೋದ ಸಣ್ಣ ವಸ್ತು, ಬೀಗ ಜಡಿದ ಡ್ರಾಯರಿನಿಂದ ಬೆಳಕಿಗೆ ಬಂತು)
ಕಾತ್ಯಾಯಿನಿ : (ತೆಗೆದುಕೊಳ್ಳುತ್ತಾ) ಹೌದು
ಗಿರೀಶ್, ಇದೇ
ಕಾಗದ. ಅದ್ಹೇಗೆ ಮುದುರಿದ್ದೀರಾ! (ಅವಳು ಓದುತ್ತಾಳೆ, ಕುತೂಹಲ ಇಲ್ಲ ಅಂತೇನಿಲ್ಲ)
ಕಾತ್ಯಾಯಿನಿ : ತಿಳಿದುಕೊಳ್ಳಲೇಬೇಕು ಅಂತ
ನಿರ್ಧಾರ ಮಾಡಿದ್ದೀರಾ?
“ಪ್ರಿಯ ಯಜಮಾನರೇ - ಹಾಗೆಂದು ಕಡೆಯ ಬಾರಿಗೆ ಕರೆಯುತ್ತಿದ್ದೇನೆ - ನಾನು
ಹೋಗುತ್ತಿದ್ದೇನೆ. ನೀವು ಹೇಳೋ ಹಾಗೆ, ಓಡಿಹೋಗುತ್ತಿದ್ದೇನೆ. ನನ್ನ ಬಗ್ಗೆ
ಕ್ಷಮೆಯನ್ನು ಕೇಳುವುದಕ್ಕೆ ಅಥವಾ ವಿವರಿಸುವುದಕ್ಕೆ ಪ್ರಯತ್ನ ಪಡುವುದಿಲ್ಲ. ಏಕೆಂದರೆ ನೀವು
ಕ್ಷಮಿಸುವುದಿಲ್ಲ ಅಥವಾ ವಿವರಣೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿಮಗೆ ಸ್ವಲ್ಪ
ಆಘಾತವಾಗಬಹುದು; ಆದರೆ
ಅದು ಕೇವಲ ನಿಮ್ಮ ಜಂಭಕ್ಕೆ; ನಿಮ್ಮಂತಹ
ಒಬ್ಬ ಗಂಡಸನ್ನು ಯಾವ ಹೆಂಗಸಾದರೂ ಬಿಟ್ಟುಬಿಡುವಷ್ಟು ಮೂರ್ಖಳಾಗಬಹುದೇ ಎಂಬುದು ನಿಮಗೆ ಅತ್ಯಂತ
ಆಶ್ಚರ್ಯದ ವಿಷಯವಾಗಬಹುದು. ನಿಮಗೆ ಸೇರಿದ ಯಾವುದನ್ನೂ ತೆಗೆದುಕೊಳ್ಳುತ್ತಿಲ್ಲ. ನೀವು
ಸಂತೋಷದಿಂದಿರಿ. ನಿಮ್ಮ ಅವಿಶ್ವಾಸಿ - ಕಾತ್ಯಾ.
ದಯವಿಟ್ಟು ಗಮನಿಸಿ: ಆತ ಯಾರೆಂದು ಹುಡುಕುವ
ಅಗತ್ಯವಿಲ್ಲ. ನೀವು ಪ್ರಯತ್ನಿಸಬಹುದು. ಆದರೆ ಯಶಸ್ವಿಯಾಗುವುದಿಲ್ಲ. (ಆ ಕೊಳಕು ಪದಾರ್ಥವನ್ನು
ಆಕೆ ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಾಳೆ) ಇದನ್ನು ನಾನೇ ಇಟ್ಟುಕೊಳ್ಳಬಹುದಾ?
ಗಿರೀಶ್ ಮೂರ್ತಿ : ಖಂಡಿತವಾಗಿಯೂ ಇಟ್ಕೊ.
ಕಾತ್ಯಾಯಿನಿ : (ನಿರ್ಲಜ್ಜೆಯಿಂದ) ಟೈಪ್
ಮಾಡಿದ ಪ್ರತಿಯೊಂದು ಬೇಕಿದ್ದರೆ...
ಗಿರೀಶ್ ಮೂರ್ತಿ : (ತನ್ನ ಅಜ್ಜಿಯನ್ನು
ಹೆದರಿಸುತ್ತಿದ್ದ ಸ್ವರದಲ್ಲಿ) ಅದು ನಿನ್ನ ಕೆಲಸವಲ್ಲ. (ಅಳುಕುತ್ತಾ) ಅದನ್ನು ಕೊನೆಯಲ್ಲಿ
ಅವರಿಗೆ ತೋರಿಸಬೇಕಾಯಿತು.
ಕಾತ್ಯಾಯಿನಿ : ಅವರು ಅದನ್ನು ಓದುತ್ತಾ
ಇದ್ದುದನ್ನು ಚಿತ್ರಿಸಿಕೊಳ್ಳಬಲ್ಲೆ.
ಗಿರೀಶ್ ಮೂರ್ತಿ : ಭಿಕಾರಿ ದರ್ಜಿಯ ಮಗಳು.
ಕಾತ್ಯಾಯಿನಿ : ನಾನು ಯಾವತ್ತೂ ಅಷ್ಟೆ.
ಗಿರೀಶ್ ಮೂರ್ತಿ : ನಾವು ಎರಡು ದಿನ ಎಲ್ಲಾ
ಕಡೆ ಹುಡುಕಿದ್ವಿ.
ಕಾತ್ಯಾಯಿನಿ : ಖಾಸಗಿ ಪತ್ತೇದಾರರೇ?
ಗಿರೀಶ್ ಮೂರ್ತಿ : ಅವರಿಗೆ ನಿನ್ನ ದಾರಿ
ಸಿಗಲಿಲ್ಲ.
ಕಾತ್ಯಾಯಿನಿ : (ನಗುತ್ತಾ) ಇಲ್ಲಾ?
ಗಿರೀಶ್ ಮೂರ್ತಿ : ಕೊನೆಗೆ, ಅಪರಿಚಿತ ವ್ಯಕ್ತಿಯ ಜೊತೆ ಓಡಿ ಹೋಗಿದ್ದಾಳೆ
ಎನ್ನುವ ಕಾರಣದ ಮೇಲೆ ಕೋರ್ಟಿನಲ್ಲಿ ಡೈವೋರ್ಸ್ ಸಿಕ್ತು. ನಾನು ಸ್ವತಂತ್ರನಾದೆ.
ಕಾತ್ಯಾಯಿನಿ : ಅದನ್ನು ಪೇಪರ್‍ನಲ್ಲಿ
ನೋಡಿದೆ. ನಿಮ್ಮ ಬಗ್ಗೆ ಕೇಳಿದ್ದು ಅದೇ ಕೊನೆ.
ಗಿರೀಶ್ ಮೂರ್ತಿ : (ಪ್ರತಿಯೊಂದು ಪದವೂ ಆಕೆಗೆ
ಒಂದೊಂದು ಹೊಡೆತ) ನನಗೆ ಸಾಧ್ಯವಾದ ಕೂಡಲೇ ಮತ್ತೆ ಮದುವೆಯಾದೆ.
ಕಾತ್ಯಾಯಿನಿ : ಜನ ಹೇಳ್ತಾರೆ, ಅದು ಮೊದಲನೆ ಹೆಂಡತಿಗೆ ವರ ಕೊಟ್ಟ ಹಾಗೆ ಅಂತ.
ಗಿರೀಶ್ ಮೂರ್ತಿ : ನಾನು ಅವರಿಗೆ
ತೋರಿಸಿಕೊಟ್ಟೆ.
ಕಾತ್ಯಾಯಿನಿ : ಒಬ್ಬ ಹೆಂಗಸು ಮೂರ್ಖಳಾದರೆ,
ಆರಿಸಿಕೊಳ್ಳೋದಿಕ್ಕೆ
ಸಾಕಷ್ಟಿದಾರೆ ಅನ್ನೋದನ್ನ ಅವರಿಗೆ ತೋರಿಸಿದಿರಿ.
ಗಿರೀಶ್ ಮೂರ್ತಿ : ಕುಮಾರ್ ಸಹಾಯದಿಂದ ಆ ಕೆಲಸ
ಮಾಡಿದೆ.
ಕಾತ್ಯಾಯಿನಿ : (ಅವನನ್ನು ಧರೆಗಿಳಿಸುತ್ತಾ)
ಹಾಗಿದ್ದರೂ ಸಹ, ಆತ
ಯಾರೂಂತ ಆಶ್ಚರ್ಯ ಅಯ್ತು?
ಗಿರೀಶ್ ಮೂರ್ತಿ : ನಾನು ಸಾಕಷ್ಟು ಯೋಚನೆ
ಮಾಡಿದೆ. ಹಣ ಅಲ್ಲ - ಸೌಂದರ್ಯ ಇರಬೇಕು. ಒಂದು ಗೊಂಬೆಯಂತಹ ಮುಖ. (ವಿಚಲಿತನಾಗಿ ಅವಳ ಮುಖ
ನೋಡುತ್ತಾ) ನನ್ನಲ್ಲಿದ್ದ ಎಲ್ಲವನ್ನೂ ನೀನು ಬಿಟ್ಟು ಹೋಗಬೇಕು ಅಂದರೆ, ಅವನಲ್ಲಿ ಅದ್ಭುತವಾದದ್ದು ಏನೋ ಇತ್ತು
ಅನ್ಸುತ್ತೆ.
ಕಾತ್ಯಾಯಿನಿ : (ಅವನೊಬ್ಬ ಮುಠ್ಠಾಳ
ಎನ್ನುವಂತೆ) ಅಯ್ಯೋ ಗಿರೀಶ. ಪಾಪ!
ಗಿರೀಶ್ ಮೂರ್ತಿ : ಬಹಳ ದಿನದಿಂದ ನಡೀತಾ
ಇರಲಿಲ್ಲ. ಇಲ್ಲ ಅಂದಿದ್ರೆ ನಿನ್ನಲ್ಲಿ ಬದಲಾವಣೆ ಆಗೋದನ್ನ ಕಂಡು ಹೀಡೀತಾ ಇದ್ದೆ.
ಕಾತ್ಯಾಯಿನಿ : ಕಂಡು ಹಿಡಿಯೋದಕ್ಕೆ
ಆಗ್ತಿತ್ತಾ?
ಗಿರೀಶ್ ಮೂರ್ತಿ : ನಿನ್ನ ಬಗ್ಗೆ ನನಗೆ
ಚೆನ್ನಾಗಿ ಗೊತ್ತಿತ್ತು.
ಕಾತ್ಯಾಯಿನಿ : ತಾವು ನಿಜಕ್ಕೂ ಅದ್ಭುತ
ವ್ಯಕ್ತಿ.
ಗಿರೀಶ್ ಮೂರ್ತಿ : ಅವನು ಅಂತಹವನಾ? ನಿಜ ಹೇಳು.
ಗಿರೀಶ್ ಮೂರ್ತಿ : ನೀನೇ ಕೊಟ್ಟ ಮಾತು.
ಕಾತ್ಯಾಯಿನಿ : ನಾನು ಹೇಳಲೇಬೇಕು
ಅನ್ನೋದಾದ್ರೆ – (ಆಕೆ
ಭಾರಿ ಖಳನಾಯಕಿ, ಆದರೆ
ಈ ವಿಷಯದಲ್ಲಿ ಅವನನ್ನು ನೋಯಿಸುವುದಕ್ಕೆ ಇಷ್ಟಪಡುತ್ತಿಲ್ಲವೆಂದು ಅರ್ಥಮಾಡಿಕೊಳ್ಳಬೇಕು) ನಾನು
ಮಾತು ಕೊಟ್ಟಿದ್ದಕ್ಕೆ ಕ್ಷಮಿಸಿಬಿಡಿ. (ಅವನನ್ನೇ ನೋಡುತ್ತಾ) ಯಾರೂ ಇರಲಿಲ್ಲ, ನಿಜವಾಗಿಯೂ ಯಾರೂ ಇಲ್ಲ.
ಗಿರೀಶ್ ಮೂರ್ತಿ : (ಎದ್ದೇಳುತ್ತಾ) ನನ್ನ
ಜೊತೆ ಆಟ ಆಡಬಹುದೂಂತ ನೀನು ತಿಳ್ಕೊಂಡಿದ್ದೀಯಾ.
ಕಾತ್ಯಾಯಿನಿ : ನೀವು ಇಷ್ಟಪಡೋದಿಲ್ಲಾಂತ
ಮೊದಲೇ ಹೇಳಿದೆ.
ಗಿರೀಶ್ ಮೂರ್ತಿ : ನಂಬೋದಿಕ್ಕೆ ಸಾಧ್ಯವೇ ಇಲ್ಲ.
ಕಾತ್ಯಾಯಿನಿ : ಅದು ನಿಜ. ನನಗ್ಗೊತ್ತು,
ನಂಬೋದಿಕ್ಕೆ ಸಾಧ್ಯವೇ
ಇಲ್ಲಾಂತ. ಆದರೆ ಅದೇ ಸತ್ಯ.
ಕಾತ್ಯಾಯಿನಿ : ಪಾಪ, ನಿಮ್ಮ ಧರ್ಮ ಯಾವುದು ಅಂತ ನಿಮಗೇ ಗೊತ್ತಿಲ್ಲ.
ನಿಮ್ಮ ವೈಭವಯುತ ಸಂಸ್ಕಾರದವರೆಗೂ ನಿಮಗೆ ಗೊತ್ತಾಗುವುದೇ ಇಲ್ಲ. (ಜೀವನ ಆಕೆಗೆ ಕಲಿಸಿದ ಪಾಠಮೊಂದು ಇಲ್ಲಿದೆ) ಒಬ್ಬನ ಧರ್ಮವೆಂದರೆ ಅವನಿಗೆ
ಅತ್ಯಂತ ಆಸಕ್ತಿ ಇರೋ ಯಾವುದಾದರೂ ಒಂದು. ನಿಮ್ಮದು ಯಶಸ್ಸು?
ಗಿರೀಶ್ ಮೂರ್ತಿ : ನಿನ್ನ ಕಾಗದಾನೇ ಅದು
ಸುಳ್ಳೂಂತ ಹೇಳುತ್ತೆ.
ಕಾತ್ಯಾಯಿನಿ : ಅದನ್ನು ಬೇಕೂ ಅಂತಾನೇ
ಮಾಡಿದ್ದು. ಸತ್ಯ ಗೊತ್ತಾದರೆ ನಿಮಗೆ ಸ್ವತಂತ್ರರಾಗಲು (ವಿಚ್ಛೇದನ ಪಡೆಯಲು) ಕಷ್ಟವಾಗಬಹುದು
ಅನ್ನೋ ಯೋಚನೆ ಬಂತು. ನನಗೆ ಸ್ವಾತಂತ್ರ್ಯ ಸಿಕ್ಕ ಮೇಲೆ, ನಿಮಗೂ ಸಿಗಬೇಕಾದದ್ದು ನ್ಯಾಯ ಅನ್ನಿಸಿತು.
ಅವರು ಹೇಗೆ ಅರ್ಥಮಾಡಿಕೊಂಡರು ಅಂತ ನೀವು ಹೇಳಿದ್ರೋ, ಅವರು ಅದೇ ರೀತಿ ಅರ್ಥ ಮಾಡಿಕೊಳ್ಳಲಿ ಅಂತಾನೇ
ಕಾಗದದಲ್ಲಿ ಹಾಗೆ ಬರೆದೆ. ಮತ್ತೆ, ಕಾನೂನು ಸಹ ನಿಮ್ಮ ಅಭಿಪ್ರಾಯಾನೇ ಬೆಂಬಲಿಸುತ್ತೆ ಅಂತ ನನಗೆ
ಗೊತ್ತಿತ್ತು. ಯಾಕೆಂದರೆ, ನಿಮ್ಮ
ಹಾಗೇ ನಿಮ್ಮ ಕಾನೂನಿಗೂ ಸಹ ಮಹಿಳೆಯರ ಬಗ್ಗೆ ಆಳವಾದ ತಿಳುವಳಿಕೆ ಇದೆ ನೋಡಿ.
ಗಿರೀಶ್ ಮೂರ್ತಿ : (ನೇರವಾಗಿ ನಿಲ್ಲುವುದಕ್ಕೆ
ಪ್ರಯತ್ನಿಸುತ್ತಾ) ಅದ್ರೂ ನಿನ್ನನ್ನ ನಂಬಲಿಕ್ಕೆ ಆಗ್ತಾ ಇಲ್ಲ.
ಕಾತ್ಯಾಯಿನಿ : (ಈ ಬಡಪಾಯಿ ಮನುಷ್ಯನನ್ನು
ಕರುಣೆಯಿಂದ ನೋಡುತ್ತಾ) ಬಹುಶಃ ಹಾಗೇ ತಿಳಿದುಕೊಳ್ಳೋದು ಉತ್ತಮ ಅನ್ಸುತ್ತೆ. ಅದು ಸತ್ಯಕ್ಕಿಂತ
ಕಡಿಮೆ ತೊಂದರೆ ಕೊಡುತ್ತೆ. ಆದರೆ ನನಗೆ ನೀವೊಬ್ಬರೇ ಇದ್ದದ್ದು. (ಅವಳ ಜೀವನವನ್ನು
ಒಟ್ಟುಗೂಡಿಸಿ) ನೀವೇ ಸಾಕಾಯ್ತು.
ಗಿರೀಶ್ ಮೂರ್ತಿ : ಯಾವ ಹುಚ್ಚು ಕ್ಷಣ ಕ...
ಕಾತ್ಯಾಯಿನಿ : ಕ್ಷಣ ಕ ಅಲ್ಲ ಗಿರೀಶ್. ಅದರ
ಬಗ್ಗೆ ಒಂದು ವರ್ಷದಿಂದ ಯೋಚ್ನೆ ಮಾಡ್ತಾ ಇದ್ದೆ.
ಗಿರೀಶ್ ಮೂರ್ತಿ : ಒಂದು ವರ್ಷದಿಂದ?
(ದಿಗ್ಭ್ರಮೆಯಿಂದ)
ಇದನ್ನು ಕೇಳಿದರೆ ನಾನು ನಿನಗೆ ಒಳ್ಳೆಯ ಗಂಡನಾಗಿರಲಿಲ್ಲ ಅಂತ ಯಾರಾದರೂ ಯೋಚನೆ ಮಾಡ್ತಾರೆ.
ಕಾತ್ಯಾಯಿನಿ : (ದುಃಖದ ನಗೆಯಿಂದ) ನಿಮ್ಮ
ಪ್ರಕಾರ ನೀವು ಒಳ್ಳೆಯ ಗಂಡನೇ!
ಗಿರೀಶ್ ಮೂರ್ತಿ : (ಧೈರ್ಯದಿಂದ) ಹೌದು,
ಹಾಗೇನೆ.
ಕಾತ್ಯಾಯಿನಿ : ಒಬ್ಬ ನೀತಿವಂತ ಗಂಡ, ಮತ್ತೆ ಮಾತುಗಾರ, ಹಾಗೇನೇ ಧರ್ಮದಾತ.
ಗಿರೀಶ್ ಮೂರ್ತಿ : (ಗಟ್ಟಿ ನೆಲದ ಮೇಲೆ
ನಿಂತು) ಎಲ್ಲಾ ಹೆಂಗಸರೂ ನಿನ್ನ ಬಗ್ಗೆ ಅಸೂಯೆಪಟ್ಟರು.
ಕಾತ್ಯಾಯಿನಿ : ಇನೊಬ್ಬರು ಅಸೂಯೆಪಡುವಷ್ಟು
ನನ್ನನ್ನು ಪ್ರೀತಿಸಿದ್ರಿ.
ಗಿರೀಶ್ ಮೂರ್ತಿ : ನಿನ್ನನ್ನು ಐಷಾರಾಮದಲ್ಲಿ
ಮುಳುಗಿಸಿದ್ದೆ.
ಕಾತ್ಯಾಯಿನಿ : (ತನ್ನ ಮಹಾಸತ್ಯವನ್ನು
ಹೊರಹಾಕುತ್ತಾ) ಅದೇನೇ.
ಗಿರೀಶ್ ಮೂರ್ತಿ : (ಶೂನ್ಯ ನೋಟದಿಂದ) ಏನು?
ಕಾತ್ಯಾಯಿನಿ : (ಎಲ್ಲಾ ಮುಗಿದುಹೋಗಿದ್ದರಿಂದ
ಶಾಂತವಾಗಿ) ನಾನು ನಿಮ್ಮ ತುಂಬಿದ ಭೋಜನಕೂಟಗಳಲ್ಲಿ, ಮೈತುಂಬಾ ಆಭರಣಗಳೊಂದಿಗೆ, ಸುತ್ತಲೂ ಸೇರಿದ್ದ ನಿಮ್ಮ ‘ತುಂಬಿಕೊಂಡ’ ಸ್ನೇಹಿತರ ನಡುವೆ ಕುಳಿತಿದ್ದಾಗ, ನೀವು ಅದೆಷ್ಟು ಸಂತೋಷದಿಂದ ಉಬ್ಬಿ ಹೋಗ್ತಾ
ಇದ್ರಿ.
ಗಿರೀಶ್ ಮೂರ್ತಿ : (ದೂರುವ ದನಿಯಲ್ಲಿ)
ಅವರೇನೂ ಅಷ್ಟು ದಪ್ಪವಾಗಿರಲಿಲ್ಲ.
ಕಾತ್ಯಾಯಿನಿ : (ಮತ್ತೊಂದು ಸಣ್ಣ ವಿಷಯ)
ಸಣ್ಣಗಿದ್ದವರನ್ನು ಬಿಟ್ಟರೆ ಉಳಿದವರು. ಗಿರೀಶ್, ತುಂಬಾ ಆಭರಣಗಳು ಒಬ್ಬ ಮಹಿಳೆಯನ್ನು
ಊಹಿಸಲಾರದಷ್ಟು ಹಿಗ್ಗಿಸುತ್ತೆ ಅಥವಾ ಕುಗ್ಗಿಸುತ್ತೆ ಅನ್ನೋದನ್ನ ಯಾವತ್ತಾದರೂ ಗಮನಿಸಿದ್ದೀರಾ?
ಗಿರೀಶ್ ಮೂರ್ತಿ : (ಕೂಗುತ್ತಾ) ಇಲ್ಲಾ.
(ಆಕೆಯೊಡನೆ ವಾದ ಮಾಡುವುದರಲ್ಲಿ ಅರ್ಥವಿದೆಯೇ?) ಅಷ್ಟೇ ಅಲ್ಲ. ನಮ್ಮ ಭೋಜನಕೂಟಗಳಲ್ಲಿ ಎಲ್ಲಾ
ಜನರು ಇದ್ದರು. ನಮ್ಮ ಕಾಲದ ಎಲ್ಲಾ ಪ್ರತಿಷ್ಠಿತ ವ್ಯಕ್ತಿಗಳು ಬರುತ್ತಿದ್ದರು. ಬರೀ
ಸಾಹಿತಿಗಳಲ್ಲ, ರಾಜಕಾರಣ
ಗಳು, ಕಲೆಗಾರರು,
ವ್ಯಾಪಾರಿಗಳು...
ಕಾತ್ಯಾಯಿನಿ : ಬರೀ ಅದ್ಭುತವಾದ, ಕಣ್ಣುಕುಕ್ಕುವ ಯಶಸ್ಸು. ಹೊ! ಹೊಟ್ಟೆ ತುಂಬಿದ
ಮೇಲೆ ಬರುವ ದೊಡ್ಡ ಮಾತುಗಳು – ಯಾರು ಚೆನ್ನಾಗಿ ಮುಂದುವರೆದ, ಯಾರು ಜಾರಿ ಬಿದ್ದ, ಹೊಸ ಮನೆಯ ಬೆಲೆ ಎಷ್ಟು, ಯಾರಿಗೆ ಪ್ರಶಸ್ತಿ ಬಂತು, ಹೊಸ ಕಾರು, ಹೊಸ ಚಿನ್ನದ ತಟ್ಟೆ, ಹೊಸದಾಗಿ ಡಾಕ್ಟರೇಟ್ ಅಥವಾ ಜ್ಞಾನಪೀಠ ಯಾರಿಗೆ
ಸಿಗುತ್ತೆ, ಇವುಗಳ
ಬಗ್ಗೇನೆ.
ಗಿರೀಶ್ ಮೂರ್ತಿ : (ಮೊದಲಿಂದ ಕೊನೆಯವರೆಗೂ
ಉತ್ತರ ಕೊಡಲಾರದವನು) ನನಗಿಂತ ಯಾರಾದರೂ ದೊಡ್ಡವರಾಗ್ತಾ ಇದ್ರಾ? ಅದರಿಂದಾಗಿ ನೀನು?
ಕಾತ್ಯಾಯಿನಿ : ಅದರಿಂದಾಗಿ ನಾನು! ಅಯ್ಯೋ
ಗಿರೀಶ. ನೀವು... ಮತ್ತೆ ನಿಮ್ಮ ಮಹಾನ್ ಧರ್ಮ...
ಗಿರೀಶ್ ಮೂರ್ತಿ : (ಪ್ರಾಮಾಣ ಕ ಹೃದಯ) ನನ್ನ
ಧರ್ಮ? ಧರ್ಮದ
ಬಗ್ಗೆ ನಾನು ಯಾವತ್ತೂ ಮಾತನಾಡಿದವನಲ್ಲ, ಆದರೆ...
ಗಿರೀಶ್ ಮೂರ್ತಿ : (ಬೆಳಗಿನ ಪತ್ರಿಕೆಯನ್ನು
ಉದ್ದರಿಸುತ್ತಾ) ಮಹತ್ವಾಕಾಂಕ್ಷೆ – ಮಹಾನ್ ವ್ಯಕ್ತಿಗಳ ಕಡೆಯ ಕೊರತೆ.
ಕಾತ್ಯಾಯಿನಿ : ಮಹಾನ್ ವ್ಯಕ್ತಿಗಳ!
ಕಾತ್ಯಾಯಿನಿ : (ಬಾಲಿಶ ಮಾತುಗಳಿಗೆ ನಗುತ್ತಾ)
ಸ್ವಲ್ಪವೂ ಇಲ್ಲ. ಅದಕ್ಕೊಂದು ದಾರಿಯಿದೆ ಎನಿಸಿದ ಕೂಡಲೇ, ಎಲ್ಲಾ ನೋಡಿ ನಗು ಬರ್ತಾ ಇತ್ತು. ನಿಮ್ಮ
ಬಗ್ಗೆ ಬಹಳ ಕನಿಕರ ಅನ್ಸುತ್ತೆ. ನಿಮಗೆ ನೀವೇ ಸಹಾಯ ಮಾಡಿಕೊಳ್ಳೋದಿಕ್ಕೂ ಆಗ್ಲಿಲ್ಲಾ ಅಂತ.
ಯಶಸ್ಸು ಅನ್ನೋದು ಭಯಂಕರ ಕೊಡುಗೆ. ಅತಿ ಪ್ರೀತಿಯೂ ಸಹ.
ಗಿರೀಶ್ ಮೂರ್ತಿ : (ಕೊನೆಗೂ ಆಕೆ ಯಾವುದರ
ಬಗ್ಗೆ ಮಾತನಾಡುತ್ತಿದ್ದಾಳೆಯೆಂದು ಅರ್ಥ ಮಾಡಿಕೊಳ್ಳುತ್ತಾ) ನನ್ನ ಯಶಸ್ಸಿನಿಂದಾಗೇ ನನ್ನನ್ನ
ಬಿಟ್ಟೆ ಅಂತ ಹೇಳ್ತಾ ಇಲ್ಲ ತಾನೆ?
ಕಾತ್ಯಾಯಿನಿ : ಹೌದು, ಅದಕ್ಕಾಗಿಯೇ ಬಿಟ್ಟೆ. (ಇದೀಗ ಅವಳು ಅವನಿಗೆ
ಅರ್ಥವಾಗುತ್ತಿದ್ದಾಳೆ) ಅದನ್ನ ಸಹಿಸೋದಕ್ಕೆ ಆಗಲಿಲ್ಲ. ಆಗೀಗ ಸೋಲು ಬಂದಿದ್ದರೆ... ಆದರೆ ಯಶಸ್ಸು ಉಸಿರು ಕಟ್ಟಿಸ್ತಾ ಇತ್ತು. (ಭಾವನೆಗಳಲ್ಲಿ ಕಠಿಣಳು)
ಅದನ್ನ ಬಿಟ್ಟುಬಿಡಬೇಕೆಂಬ ಅದಮ್ಯ ಆಕಾಂಕ್ಷೆ; ಯಶಸ್ವಿಯಾಗದ ಜನರ ನಡುವೆ ಇರಬೇಕೆಂಬ ಆಸೆ.
ಗಿರೀಶ್ ಮೂರ್ತಿ : (ಸರಿಯಾದ ಉತ್ಸಾಹದಿಂದ) ಆ
ರೀತಿ ಬಹಳ ಜನ ಇದ್ದಾರೆ.
ಕಾತ್ಯಾಯಿನಿ : ನಮ್ಮ ಗುಂಪಿನಲ್ಲಿ ಯಾರೂ
ಇರಲಿಲ್ಲ. ಅವರು ಬೀಳ್ತಾ ಇದಾರೆ ಅಂದ ಕೂಡಲೇ ನಮ್ಮ ಕಣ ್ಣನಿಂದ ಮರೆಯಾಗ್ತಾ ಇದ್ದರು.
ಗಿರೀಶ್ ಮೂರ್ತಿ : (ಅದನ್ನೇ ಹಿಡಿದುಕೊಂಡು)
ಕೇಳು, ನಾನೀಗ
ಹಲವು ಕೋಟಿಗಳ ಒಡೆಯ.
ಕಾತ್ಯಾಯಿನಿ : (ಮುಖವೇನೂ ಕೆಂಪಾಗಲಿಲ್ಲ)
ನಿಮಗೆ ನಿಮ್ಮ ಬೆಲೆ ಅಷ್ಟೇ. ಆದರೆ ನನಗೆ ನಿಮ್ಮ ಬೆಲೆ ಎಷ್ಟು ಅಂತ ಹೇಳ್ತೇನೆ ಕೇಳಿ.
ಹೆಚ್ಚುಕಡಿಮೆ ಒಂದು ಹತ್ತು ಸಾವಿರ. ಮೊದಲು ನಾನು ಹತ್ತು ಸಾವಿರ ದುಡಿಯಬಹುದು ಎಂಬ ಧೈರ್ಯ ಬಂದ
ಮೇಲೆ, ಪ್ರಪಂಚದಲ್ಲಿ
ಒಬ್ಬಂಟಿಯಾಗಿಯೇ ಪಯಣ ಬೆಳೆಸಬಹುದು ಎಂಬ ನಿರ್ಧಾರಕ್ಕೆ ಬಂದೆ. ಮತ್ತೆ, ಅಷ್ಟನ್ನು ಗಳಿಸಿದ ಕೂಡಲೇ ನಿಮ್ಮನ್ನು
ಬಿಟ್ಟೆ.
ಗಿರೀಶ್ ಮೂರ್ತಿ : (ತೂಕ ಮಾಡುತ್ತಾ) ಹತ್ತು
ಸಾವಿರ!
ಕಾತ್ಯಾಯಿನಿ : ಒಬ್ಬ ಹೆಂಗಸಿನ ಬೆಲೆ,
ನಿಮ್ಮ ಪ್ರಕಾರ. ಅದನ್ನು
ಗಳಿಸಲಾರದೆ ಹೋದರೆ, ಅವಳು
ನಿಮಗೇ ಜೋತು ಬೀಳಬೇಕು.
ಗಿರೀಶ್ ಮೂರ್ತಿ : (ಶ್ರೀಮಂತಿಕೆಯನ್ನು
ನೆನಪಿಸಿಕೊಳ್ಳುತ್ತಾ) ನೀನು ಮದುವೆಯಾದಾಗ ನನಗೆ ಅದಕ್ಕಿಂತ ಹೆಚ್ಚು ಬೆಲೆ ಕೊಟ್ಟಿದ್ದೆ.
ಕಾತ್ಯಾಯಿನಿ : (ಅದನ್ನೇ
ನೆನಪಿಸಿಕೊಳ್ಳುತ್ತಾ) ಆಹಾ, ಆಗ
ನನಗೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ. ನೀವು ಒಬ್ಬ ಮನುಷ್ಯರಾಗಿದ್ದರೆ!
ಗಿರೀಶ್ ಮೂರ್ತಿ : ಒಬ್ಬ ಮನುಷ್ಯ? ಒಬ್ಬ ಮನುಷ್ಯ ಅಂದರೆ ಏನು ನಿನ್ನ ಅರ್ಥ?
ಕಾತ್ಯಾಯಿನಿ : (ಶ್ರೀಮಂತಿಕೆ ಬಿಟ್ಟು) ಅವರ
ಬಗ್ಗೆ ನೀವು ಕೇಳಿಲ್ಲವೆ? ಅವರೊಂದು
ರೀತಿ ಚೆನ್ನಾಗಿರ್ತಾರೆ. ಆಕೆ ಮದುವೆಯಾದಾಗ, ತಾನೇ ಕೆಳಮಟ್ಟದವಳಾದರೂ, ಒಂದು ಒಳ್ಳೆಯ ಜೀವನ ನಡೆಸಬೇಕು ಅಂತ
ಒಳಗಿನೊಂದು ಬಯಕೆಯಿರುತ್ತೆ. ಜೊತೆಗೆ ಕೆಟ್ಟತನಗಳ ಬಗ್ಗೆಯೂ ಅರಿವಿರುತ್ತೆ. ಅವನಲ್ಲೇ ಎಲ್ಲಾ ಇದೆ
ಅಂತ ಗೊತ್ತು. ಅವನಲ್ಲೇನಾದರೂ ಒಳ್ಳೆಯತನ ಇದ್ರೆ, ಅವಳ ಒಳ್ಳೆಯತನ ಅದನ್ನ ಕಂಡುಹಿಡಿಯುತ್ತೆ.
ಮೂಲಭೂತ ಅವಶ್ಯಕತೆಗಳಿಗೆ ಅವರು ತಮ್ಮೆಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸುತ್ತಾರೆ. ಅದಕ್ಕೇ
ಗಿರೀಶ್, ನಾನು
ಬೇಕೂಂತ ನಿಮ್ಮನ್ನು ಬಿಡಲಿಲ್ಲ. ನಿಮ್ಮನ್ನು ವಿವರಿಸೋದಕ್ಕೆ, ಎಲ್ಲಾ ರೀತಿಯ ಸಿದ್ಧಾಂತಗಳನ್ನು ಸೃಷ್ಟಿಸಿದೆ.
ನಿಮ್ಮ ಗಟ್ಟಿತನ – ಅತಿ
ಭಾವುಕತೆಯ ಸುಂದರ ಬಯಕೆ; ನಿಮ್ಮ
ಒರಟುತನ – ಅದು
ನಿಮ್ಮಲ್ಲಿರೋ ಶಕ್ತಿ; ನೀವು
ಅಸಹ್ಯಪಟ್ಟುಕೊಳ್ಳುವುದು – ಅದು
ನಿಮ್ಮ ಪೌರುಷ; ನಿಮ್ಮ
ಆದರ್ಶಗಳ ಬಯಕೆ – ಒಂದು
ಸ್ಪಷ್ಟ ನೋಟ; ಮಹಿಳೆಯರ
ಬಗ್ಗೆ ನಿಮಗಿರುವ ಅಗೌರವದ ಅಭಿಪ್ರಾಯಗಳು – ಅದೊಂದು ತಮಾಷೆ ವಿಷಯ. ಹೀಗೆಲ್ಲಾ ಯೋಚಿಸಲು
ಪ್ರಯತ್ನಪಟ್ಟೆ. ನನ್ನನ್ನು ನಿಮ್ಮ ಜೊತೆಯೇ ಉಳಿಸಿಕೊಳ್ಳಲು ನಿಮಗೇ ಹೊಂದಿಕೊಂಡೆ. ಆದರೆ ಕಡೆಗೆ
ನಾನು ಬಿಡಲೇ ಬೇಕಾಯ್ತು; ನಿಮಗಿದ್ದದ್ದು
ಒಂದೇ ಗುಣ, ಅದೇ
ಯಶಸ್ಸು; ಅದು
ನಿಮ್ಮಲ್ಲಿ ಎಷ್ಟಿತ್ತೆಂದರೆ ಅದು ಬೇರೆಲ್ಲವನ್ನೂ ನುಂಗಿಬಿಟ್ಟಿತು.
ಗಿರೀಶ್ ಮೂರ್ತಿ : (ಮುಖ್ಯವಾದ ವಿಷಯದಿಂದ
ತಪ್ಪಿಸಿಕೊಳ್ಳಲು ಅವಕಾಶ ಕೊಡದೆ) ಆ ಹತ್ತು ಸಾವಿರ ಹೇಗೆ ಸಂಪಾದಿಸಿದೆ?
ಕಾತ್ಯಾಯಿನಿ : ಅದಕ್ಕೇ ಆರು ತಿಂಗಳು
ಬೇಕಾಯ್ತು. ಆದರೆ ನ್ಯಾಯವಾಗೇ ಸಂಪಾದಿಸಿದೆ. (ಹೆಣ್ಣುಮಕ್ಕಳು ಮಲ್ಲಿಗೆ ಹೂವನ್ನು ಸವರುವಂತೆ ಆಕೆ
ಟೈಪ್‍ರೈಟರನ್ನು ಸವರುತ್ತಾಳೆ) ಇದನ್ನು ಕಲಿತೆ. ಇದನ್ನು ಬಾಡಿಗೆ ತೆಗೆದುಕೊಂಡು, ನಾನೇ ಕಲಿತೆ. ನನ್ನ ಸ್ನೇಹಿತರಿಂದ ಸ್ವಲ್ಪ
ಕೆಲಸ ಸಿಕ್ಕಿತು. ಮೊದಲು ಮೆಷಿನ್ ದುಡ್ಡು ವಾಪಸ್ ಕೊಟ್ಟೆ. ಆಮೇಲೆ ನಾನು ಹೊರಗೆ ಹೋಗುವುದಕ್ಕೆ
ಸ್ವತಂತ್ರಳು ಅಂದುಕೊಂಡ ಕೂಡಲೇ ಹೊರಟುಬಿಟ್ಟೆ.
ಗಿರೀಶ್ ಮೂರ್ತಿ : ನೀನು ವೈಭವದ ಮಡಿಲಲ್ಲಿ
ಮಲಗಿರುವಾಗಲೇ, ಇದೆಲ್ಲಾ
ನನ್ನ ಮನೇಲೇ ನಡೀತು. (ಆಕೆ ತಲೆಯಲ್ಲಾಡಿಸಿದಳು) ದೇವರೇ, ನೀನು ಆಗಲೇ ನಿರ್ಧರಿಸಿದ್ದೆ.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : (ದಿಟ್ಟಿಸಿ ನೋಡುತ್ತಾ)
ನೀನು ನನ್ನನ್ನು ಅದೆಷ್ಟು ದ್ವೇಷಿಸಿರಬೇಕು.
ಗಿರೀಶ್ ಮೂರ್ತಿ : ವಂದನೆಗಳು.
ಕಾತ್ಯಾಯಿನಿ : ನನಗೆ ಆಶ್ಚರ್ಯವಾಗುತ್ತೆ.
ಕಾತ್ಯಾಯಿನಿ : (ಪ್ರೀತಿಯ ಸ್ನೇಹಿತರು,
ನನ್ನಂತಹವರು, ನಿಮ್ಮಂತಹವರು ಮುಂದಿದ್ದಾರೇನೋ ಎನ್ನುವ ಹಾಗೆ)
ನಿಮ್ಮ ಹಲವಾರು ಯಶಸ್ಸುಗಳಿಂದ ನಿಮ್ಮ ಸ್ನೇಹಿತರಿಗೆ ಒಂದಂತೂ ಗೊತ್ತಿತ್ತು. ಅವರು ಮೇಲಕ್ಕೆ ಬರದೇ
ಹೋದರೆ ಎಲ್ಲೋ ಹೋಗಿ ನಿಂತುಬಿಡುತ್ತಾರೆಂಬ ಭಯ ಕಾಡುತ್ತಿತ್ತೇನೋ; ಅದಕ್ಕೆ ಅವರಲ್ಲಿ ಒಂದಿಬ್ಬರು ಕೆಲವೊಮ್ಮೆ
ದುಃಖದಲ್ಲಿರುತ್ತಿದ್ದರು.
ಗಿರೀಶ್ ಮೂರ್ತಿ : (ಅಪವಿತ್ರತೆಯ ಬಗ್ಗೆ
ಭಯಭೀತನಾಗಿರುವವನು) ಆ ಸೋತು ಸುಣ್ಣವಾಗಿರೋ ಜನರ ನಡುವೆ ನೀನು ಜೀವನ ಮಾಡ್ತೀಯಾ – ಯಶಸ್ಸು ಗಳಿಸೋದಕ್ಕೆ ಪ್ರಯತ್ನಿಸೋದು ಮತ್ತು
ಸೋಲೋದು. ಅದನ್ನು ಬಿಟ್ಟರೆ ಅವರಲ್ಲಿ ಇನ್ನೇನಿದೆ?
ಕಾತ್ಯಾಯಿನಿ : ಅದೇ, ಅದೇ. ಅವರು ಪ್ರಯತ್ನ ಮಾಡ್ತಾ ಇರ್ತಾರೆ;
ಆದರೆ ಸೋಲ್ತಾರೆ.
ಗಿರೀಶ್ ಮೂರ್ತಿ : ಮತ್ತೆ ಯಾವಾಗಲೂ ಸೋಲ್ತಾನೆ
ಇರ್ತಾರೆ.
ಕಾತ್ಯಾಯಿನಿ : ಯಾವಾಗಲೂ ನಾನು ಅವರಿಗೆ
ಹೇಳ್ತಾ ಇರ್ತೇನೆ – ಅಯ್ಯೋ
ಪಾಪ ಅಂತ. ಅವರು ನನಗೆ ಹೇಳ್ತಾ ಇರ್ತಾರೆ – ಅಯ್ಯೋ ಪಾಪ ಅಂತ. ಅದೇ ನಮ್ಮನ್ನು
ಮನುಷ್ಯರನ್ನಾಗಿಸುತ್ತೆ. ಅದಕ್ಕೇ ಅವರೆಂದರೆ ನನಗೆ ಬೇಸರ ಆಗೋದೇ ಇಲ್ಲ.
ಗಿರೀಶ್ ಮೂರ್ತಿ : (ಪೂರ್ಣ ಧ್ವನಿಯಿಂದ)
ವ್ಹಾ! ಕಾತ್ಯಾ, ಈಗ
ನಾನು ಹಲವು ಕೋಟಿಗಳ ಅಧಿಪತಿ.
ಕಾತ್ಯಾಯಿನಿ : ಹೌದು. ನೀವು ದಪ್ಪ ಆಗ್ತಾ
ಇದೀರಿ, ಗಿರೀಶ್.
ಗಿರೀಶ್ ಮೂರ್ತಿ : ಇಲ್ಲ, ದಪ್ಪ ಆಗ್ತಾ ಇಲ್ಲ.
ಕಾತ್ಯಾಯಿನಿ : ಆ ದಪ್ಪಗಿದ್ದ ವ್ಯಕ್ತಿ,
ನಮ್ಮ ಭೋಜನಕೂಟಗಳಲ್ಲಿ
ಯಾವಗಲೂ ನಿದ್ದೆ ಹೊಡೀತಿದ್ದರಲ್ಲ, ಅವರ ಹೆಸರೇನು?
ಗಿರೀಶ್ ಮೂರ್ತಿ : ಯಾರು, ಡಾ.ಭವಪ್ರಿಯಾ?
ಕಾತ್ಯಾಯಿನಿ : ಹೌದು, ಅವರೇ. ಅದ್ಭುತ ಯಶಸ್ಸಿನ ಸರಿಯಾದ
ಚಿತ್ರವೆಂದರೆ, ನನಗೆ
ಹೊಳೆಯೋದೆ ಡಾ.ಭವಪ್ರಿಯ. ಅವರೆಷ್ಟು ತುಂಬಿಕೊಂಡಿದ್ದರೆಂದರೆ, ಅವರು ಸಿಕ್ಕಾಪಟ್ಟೆ ದಪ್ಪ ಇದ್ದರು. ಕುರ್ಚಿ
ಮೇಲೆ ಈ ರೀತಿ ಕುಳಿತುಕೊಳ್ತಾ ಇದ್ದರು. (ಅವಳ ಎರಡೂ ಕೈಗಳು ಹೊಟ್ಟೆಯ ಮುಂದೆ ಕೂಡಿಕೊಳ್ಳುತ್ತವೆ)
ತಮ್ಮ ಯಶಸ್ಸನ್ನೆಲ್ಲಾ ಹಿಡಿದಿಟ್ಟುಕೊಂಡಿದ್ದಾರೇನೋ ಎಂಬಂತೆ. ನೀವು ಅದಕ್ಕೇ ಪ್ರಯತ್ನಿಸ್ತಾ
ಇದೀರಿ. ಆಗ ನಿಮಗೆ ಇನ್ನೂ ಹಲವು ಕೋಟಿಗಳು ಒಟ್ಟಿಗೇ ಸಿಗುತ್ತೆ.
ಗಿರೀಶ್ ಮೂರ್ತಿ : (ನಿಜವಾಗಿಯೂ ಇದುವರೆಗೂ
ಶಾಂತವಾಗಿದ್ದವನು) ದಯವಿಟ್ಟು, ನನ್ನ ಮನೆ ಬಿಟ್ಟು ಹೋಗ್ತೀಯಾ?
ಕಾತ್ಯಾಯಿನಿ : (ಅವಳ ಹಳೆಯದಾದ
ಓವರ್‍ಕೋಟನ್ನು ಹಾಕಿಕೊಳ್ಳುತ್ತಾ) ಆದರೆ ನಾವು ಕೋಪದಿಂದ ಬೇರೆಯಾಗೋದು ಬೇಡ. ನಾನು ಈಗ
ನೋಡೋದಿಕ್ಕೆ ಹೇಗೆ ಕಾಣ ್ತೀನಿ? ಆಗಿನ ಪೇಲವವಾದ, ಮರಗಟ್ಟಿಹೋದ, ನಿನ್ನ ಕಾರುಗಳಲ್ಲಿ ಓಡಾಡುತ್ತಿದ್ದ ಒಂದು
ವಸ್ತುವಿಗೆ ಹೋಲಿಸಿದರೆ?
ಗಿರೀಶ್ ಮೂರ್ತಿ : (ಒಡೆಯನ ಶೈಲಿಯಲ್ಲಿ) ನೀನು
ಹೇಗಿದ್ದೆ ಅಂತ ಮರೆತುಬಿಡ್ತೀನಿ. ಒಂದಂತೂ ನಿಜ, ನೀನು ನನ್ನ ಹೆಂಡತಿಗೆ ಆರತಿ ಎತ್ತೋದಕ್ಕೂ
ಲಾಯಕ್ಕಿಲ್ಲ.
ಕಾತ್ಯಾಯಿನಿ : ಅದು ಆಕೆಯ ಚಿತ್ರ, ಹೌದಲ್ಲಾ?
ಗಿರೀಶ್ ಮೂರ್ತಿ : (ಅವನು ಸಿಕ್ಕ ಅವಕಾಶವನ್ನು
ಹಿಡಿದುಕೊಳ್ಳುತ್ತಾ) ಅವಳ ಮದುವೆಯ ಸೀರೆಯಲ್ಲಿ. ಅವಳ ಪೈಂಟಿಂಗ್ ಮಾಡಿದವರು ಎಮ್‍ಎಸ್‍ಎನ್.
ಕಾತ್ಯಾಯಿನಿ : (ದುಷ್ಟತನದಿಂದ) ಡಾಕ್ಟರೇಟ್?
ಗಿರೀಶ್ ಮೂರ್ತಿ : (ಮೋಸಹೋಗಿ) ಹೌದು.
ಕಾತ್ಯಾಯಿನಿ : (ಮಿಸೆಸ್ ಮೂರ್ತಿಯನ್ನು
ಇಷ್ಟಪಡುತ್ತಾಳೆ. ಅವಳ ಕಲ್ಪನೆಯ ಚಿತ್ರ) ಅದು ಬಹಳ ಸುಂದರವಾದ ಮುಖ.
ಗಿರೀಶ್ ಮೂರ್ತಿ : (ಆ ವಸ್ತುವನ್ನು ಹೊಂದಿದವನ
ಹೆಮ್ಮೆಯಿಂದ) ಎಲ್ಲರೂ ಸುಂದರಿಯೆಂದು ಒಪ್ಪಿಕೊಂಡಿದ್ದಾರೆ.
ಕಾತ್ಯಾಯಿನಿ : ಅವಳ ಕಣ್ಣುಗಳಲ್ಲಿ ಸಂತಸದ
ಹೊಳಪಿದೆ. ಅವಳಲ್ಲಿ ವ್ಯಕ್ತಿತ್ವವಿದೆ.
ಗಿರೀಶ್ ಮೂರ್ತಿ : (ಹರಾಜು ಹಾಕುವವನ
ಶೈಲಿಯಲ್ಲಿ) ಬುದ್ಧಿವಂತಿಕೆಗೆ ಪ್ರಸಿದ್ಧಳು.
ಕಾತ್ಯಾಯಿನಿ : ಅದೆಲ್ಲಾ ಅವಳ ಪೈಂಟಿಂಗ್
ಮಾಡಿದ ಹಿಂದಿನ ದಿನಗಳ ಕಥೆ. ಅದೊಂದು ದೈವಿಕವಾದ ಮುಖ ಸಹ. (ಕೂಡಲೇ ಕೋಪದಿಂದ ತಿರುಗುತ್ತಾಳೆ) ಹೋ,
ಗಿರೀಶ್. ನೀನೊಬ್ಬ ಪಶು.
ಗಿರೀಶ್ ಮೂರ್ತಿ : (ತತ್ತರಿಸುತ್ತಾ) ಹೆಯ್ ?
ಏನಂದೆ?]
ಕಾತ್ಯಾಯಿನಿ : ಆಕೆ ಒಬ್ಬ ಉದಾತ್ತ
ಹೆಂಗಸಾಗಬಹುದಿತ್ತು ಅಥವಾ ತಾಯಿಯಾಗಬಹುದಿತ್ತು. ಆ ಸುಂದರ ಜೀವಿ. ಅಯ್ಯೋ, ಈಗ ಕೆಲವು ನಿಮಿಷಗಳ ಹಿಂದೆ ನೋಡಿದಾಗ
ಜೀವಂತಿಕೆ ಇಲ್ಲದಿರೋ ಹೆಂಗಸಂತೆ ಕಂಡಳು. ನಾನು ನಿನ್ನಿಂದ ತಪ್ಪಿಸಿಕೊಂಡಿದ್ದರಿಂದ
ಕ್ಷಮಿಸಬಹುದು. ಆದರೆ ಆ ಪಾಪದ ಹೆಂಗಸು. ಅಯ್ಯೋ, ಗಿರೀಶ್, ಗಿರೀಶ್.
ಗಿರೀಶ್ ಮೂರ್ತಿ : (ಬಾಗಿಲತ್ತ ಕೈ
ತೋರಿಸುತ್ತಾ) ಥ್ಯಾಂಕ್ ಯೂ. ತನ್ನ ಗಂಡನ ಬಗ್ಗೆ ಹೆಮ್ಮೆ ಮತ್ತು ವೈವಾಹಿಕ ಜೀವನದಲ್ಲಿ
ಸಂತೋಷಪಟ್ಟ ಒಬ್ಬ ಮಹಿಳೆಯಿದ್ದರೆ, ಅದು ಮಿಸೆಸ್ ಮೂರ್ತಿ, ನನ್ನ ಹೆಂಡತಿ.
ಗಿರೀಶ್ ಮೂರ್ತಿ : ನೀನೇನು
ಆಶ್ಚರ್ಯಪಡಬೇಕಾಗಿಲ್ಲ.
ಗಿರೀಶ್ ಮೂರ್ತಿ : (ಬಿಸಿಯೇರಿ) ಅವಳ ರೀತೀನೆ
ಇಷ್ಟ ಆಗೊಲ್ಲ.
ಕಾತ್ಯಾಯಿನಿ : ನಾನೇನಾದ್ರೂ ಗಂಡನಾಗಿದ್ರೆ
ಆಗಾಗ ಹೆಂಡತಿಯ ಮುಖ ನೋಡ್ತಾ ಇದ್ದೆ – ಎಲ್ಲಾ ಗಂಡಂದಿರಿಗೂ ಇದು ನನ್ನ ಸಲಹೆ;
ಆಗಾಗ್ಗೆ ನಿಮ್ಮ
ಹೆಂಡತಿಯ ಮುಖ ನೋಡ್ತಾ ಇರಿ. ಅವರಲ್ಲೇನಾದರೂ ಹೊಸ ಕಳೆ, ಹತ್ತು ಸಾವಿರದ ಲಕ್ಷಣವೇನಾದರೂ ಇದೆಯಾ ಅಂತ.
ಇಬ್ಬರು ಗಂಡು ಮಕ್ಕಳಲ್ಲಾ? ಇಬ್ಬರೂ
ನಿಮ್ಮ ಹಾಗೇನಾ?
ಗಿರೀಶ್ ಮೂರ್ತಿ : ಅದನ್ನು ಕಟ್ಟಿಕೊಂಡು
ನಿನಗೇನಾಬೇಕು?
ಕಾತ್ಯಾಯಿನಿ : (ಸ್ನಿಗ್ಧ ಕಣ್ಣುಗಳಲ್ಲಿ)
ನಾನು ಅದರ ಬಗ್ಗೆ ಯೋಚಿಸ್ತಾ ಇದ್ದೆ. ನಿಮ್ಮಂತೇ ಆಗೋ ಇಬ್ಬರು ಗಂಡು ಮಕ್ಕಳು! ಅದೆಲ್ಲೋ ಎರಡು
ಪುಟ್ಟ ಹುಡುಗಿಯರ ಜೀವಗಳಿವೆ. ಅವುಗಳು ಬೆಳೆದ ಮೇಲೆ, ಆ ಮುದ್ದು ಮುಖದ ಹುಡುಗಿಯರು, ಗಂಡಸರಿಗೋಸ್ಕರ ಇರುವವರು... ಬೇಡ, ಮುಂದೆ ಬೇಡ, ಇರಲಿ. ನಮಸ್ಕಾರ ಗಿರೀಶ್ ಮೂರ್ತಿ?
ಗಿರೀಶ್ ಮೂರ್ತಿ : (ಸ್ವಲ್ಪ ಮನುಷ್ಯರ
ದುರ್ಬಲತೆ ತೋರಿಸುತ್ತಾ) ನೀನು ಹೋಗುವ ಮೊದಲು ‘ತಪ್ಪಾಯ್ತು’ ಅಂತ ಹೇಳು.
ಕಾತ್ಯಾಯಿನಿ : ಯಾಕೆ?
ಗಿರೀಶ್ ಮೂರ್ತಿ : ನನ್ನನ್ನ
ಬಿಟ್ಟುಹೋಗಿದ್ದಕ್ಕೆ. ಅದರಿಂದಾಗಿ ತುಂಬಾ ಬೇಜಾರಾಯ್ತು ಅಂತ ಹೇಳಿಹೋಗು. ನೀನು ಹಾಗೆ ಮಾಡ್ತೀಯ
ಅಂತ ನನಗೆ ಗೊತ್ತಿದೆ? (ಅವಳು
ನಗುತ್ತಾಳೆ, ತಲೆಯಾಡಿಸುತ್ತಾಳೆ.
ಅವನು ಸಣ್ಣತನದವನು. ಜೋರಾಗಿ ಕೂಗುತ್ತಾನೆ) ನನ್ನ ಇಡೀ ದಿನಾನೇ ಹಾಳು ಮಾಡಿದೆ.
ಕಾತ್ಯಾಯಿನಿ : (ಸಮಾಧಾನಗೊಳಿಸಲು) ಅದಕ್ಕಾಗಿ
ನನಗೂ ಬೇಸರವಾಗುತ್ತೆ. ಅದೊಂದು ಸೂಜಿ ಚುಚ್ಚಿದ ಹಾಗೆ ಗಿರೀಶ್. ನಿಮ್ಮ ವಿಜಯೋತ್ಸವದ
ಸಂದರ್ಭದಲ್ಲಿ, ನಿಮ್ಮ
ಹಳೇ ಸ್ನೇಹಿತೆ ನೀನು ಯಶಸ್ವಿಯಾಗಲಿಲ್ಲ ಎಂದಳು ಅನ್ನೋದು ದೊಡ್ಡ ವಿಷಯ ಏನಲ್ಲ. ನೀವು ಬಹಳ ಬೇಗ
ಅದನ್ನು ಮರೆತುಬಿಡ್ತೀರಿ. ಒಬ್ಬ ಸ್ಟೆನೊ ಏನನ್ನುತ್ತಾಳೆ ಅನ್ನೋದನ್ನ ಯಾರು ಮನಸ್ಸಿಗೆ
ಹಾಕ್ಕೊಳ್ತಾರೆ?
ಗಿರೀಶ್ ಮೂರ್ತಿ : (ಸಮಾಧಾನಗೊಂಡು) ಯಾರೂ
ಇಲ್ಲ. ವಾರಕ್ಕೆ ಒಂದು ಸಾವಿರ ದುಡಿಯೋ ಸ್ಟೆನೊ.
ಕಾತ್ಯಾಯಿನಿ : (ಹೆಮ್ಮೆಯಿಂದ) ಅಷ್ಟು ಕಡಿಮೆ
ಅಲ್ಲ. ಅದಕ್ಕಿಂತಲೂ ಸಾಕಷ್ಟು ಜಾಸ್ತಿ.
ಗಿರೀಶ್ ಮೂರ್ತಿ : (ಸರಾಗವಾಗಿ) ಅದ್ಭುತ.
(ಸಣ್ಣಗೆ ಬಾಗಿಲು ಬಡಿದ ಶಬ್ಧ)
ಸರೋಜಾ ಮೂರ್ತಿ : ಒಳಗೆ ಬರಬಹುದೆ?
ಗಿರೀಶ್ ಮೂರ್ತಿ : (ಸ್ವಲ್ಪ ದೈನತೆಯಿಂದಲೇ)
ಅದು ಮಿಸೆಸ್ ಮೂರ್ತಿ.
ಕಾತ್ಯಾಯಿನಿ : ನಾನೇನೂ ಹೇಳಲ್ಲ. ಬಾಗಿಲು
ಬಡಿಯದೇ ಗಂಡನ ರೂಮಿಗೆ ಬರಲು ಆಕೆಗೆ ಅಂಜಿಕೆ.]
ಗಿರೀಶ್ ಮೂರ್ತಿ : ಹಾಗೇನಿಲ್ಲ. (ಹೆಂಡತಿಯ
ದಾಸನಂತೆ) ಬಾ, ಒಳಗೆ
ಬಾ ಸರೋಜ. (ಸರೋಜ ಬರುತ್ತಾಳೆ, ಗೌನ್‍ನೊಂದಿಗೆ. ಈ ಕಾಟದ ವ್ಯಕ್ತಿ ಇಲ್ಲಿರುವಾಗ ಅದನ್ನಿಲ್ಲಿ ತರಬಾರದೆಂಬ
ಬುದ್ಧಿಯಿರಬೇಕಿತ್ತು)
ಸರೋಜಾ ಮೂರ್ತಿ : (ಅದಕ್ಕೆ ಸ್ವಾಗತ
ದೊರೆಯುತ್ತೆ ಎಂದು ಯೋಚಿಸಿ ತಂದಿದ್ದಳು) ಗಿರೀಶ್, ಗೌನ್ ಬಂದಿದೆ.
ಗಿರೀಶ್ ಮೂರ್ತಿ : (ಈ ಕ್ಷಣ ಅದನ್ನು
ಇಷ್ಟಪಡುವುದಿಲ್ಲ) ಸರಿ, ಸರಿ.
ಸರೋಜಾ ಮೂರ್ತಿ : ಆದರೆ ಇದನ್ನು ಹಾಕಿಕೊಂಡು
ನೊಡೋದಿಕ್ಕೆ, ಪ್ರ್ಯಾಕ್ಟೀಸ್
ಮಾಡೋದಿಕ್ಕೆ ಆತುರದಲ್ಲಿದ್ದೀರಾ ಅಂದುಕೊಂಡಿದ್ದೆ. (ಅದನ್ನು ನೋಡಿ ಕಾತ್ಯಾಯಿನಿ ನಗುತ್ತಾಳೆ.
ನಗುತ್ತಿದ್ದಾಳೋ ಇಲ್ಲವೋ ಅಂತ ನೋಡಬಾರದಿತ್ತು ಅಂದುಕೊಂಡನು)
ಗಿರೀಶ್ ಮೂರ್ತಿ : (ತೀಕ್ಷ್ಣವಾಗಿ) ಅಲ್ಲಿಡು.
(ಮಿಸೆಸ್ ಮೂರ್ತಿಯ ಮುಖ ಕೆಂಪಗಾಗುತ್ತದೆ.
ಅದನ್ನು ಪಕ್ಕದಲ್ಲಿಡುತ್ತಾಳೆ)
ಕಾತ್ಯಾಯಿನಿ : (ತಾನೇ ಪರಾಜಿತಳಾಗುವ
ಸೌಜನ್ಯದಿಂದ) ನಿಜ ಹೇಳಬೇಕೂಂದ್ರೆ, ಗೌನ್ ತುಂಬಾ ಚೆನ್ನಾಗಿದೆ.
ಸರೋಜಾ ಮೂರ್ತಿ : (ಸಹಾಯಗೊಂಡು) ಹೌದು.
(ಅವನನ್ನು ತಪಿÀ್ಪತಸ್ಥನನ್ನಾಗಿ ಮಾಡಬಹುದು ಎಂದುಕೊಂಡಿದಾಳೆ. ಆಕೆಗೆ ಸಾಧ್ಯವೇ? ಅವನೇನೂಂತ ತೋರಿಸುತ್ತಾನೆ)
ಗಿರೀಶ್ ಮೂರ್ತಿ : (ಒಂದು ಕಣ್ಣನ್ನು ಕಾತ್ಯಾಳ
ಮೇಲಿಟ್ಟು) ಸರೋಜ, ನಿನ್ನ
ಕತ್ತಿಗೆ ಇನ್ನಷ್ಟು ಆಭರಣಗಳು ಬೇಕೆನಿಸುತ್ತೆ.
ಸರೋಜಾ ಮೂರ್ತಿ : (ದುರ್ಬಲಳಾಗುತ್ತಾ) ಇನ್ನೂ!?
ಗಿರೀಶ್ ಮೂರ್ತಿ : ಕೆಲವು ಮುತ್ತಿನ ಸರಗಳು.
ಅದನ್ನು ನಾನು ನೋಡ್ತೀನಿ ಬಿಡು. ನನಗದು ಆಟ ಆಡೋ ರೀತಿ. (ಕಾತ್ಯಾ ತನ್ನ ದುಃಖವನ್ನು
ಮರೆಮಾಚುತ್ತಾಳೆ. ಅವಳಿಗೆ ಹೋಗು ಎಂದರೆ ಸಾಕಾಗಿದೆ. ಅವನು ಬೆಲ್ ಮಾಡುತ್ತಾನೆ) ಇನ್ನು ಹೆಚ್ಚು
ಹೊತ್ತು ನಿಮ್ಮನ್ನು ಉಳಿಸಿಕೊಳ್ಳುವುದಿಲ್ಲ.
ಕಾತ್ಯಾಯಿನಿ : ಥ್ಯಾಂಕ್ ಯೂ.
ಸರೋಜಾ ಮೂರ್ತಿ : ನೀವು ಆಗ್ಲೇ ಹೋಗ್ತಾ ಇದೀರಾ?
ನೀವು ಬಹಳ ಬೇಗ ಕೆಲಸ
ಮಾಡ್ತೀರಾ!
ಗಿರೀಶ್ ಮೂರ್ತಿ : ಸರೋಜ, ಆಕೆ ನಮಗೆ ಸರಿ ಹೋಗೋದಿಲ್ಲ.
ಸರೋಜಾ ಮೂರ್ತಿ : ಹೋ, ಸಾರಿ, ಸಾರಿ.
ಕಾತ್ಯಾಯಿನಿ : ಇರಲಿ ಬಿಡಿ, ಏನೂ ಮಾಡೋದಿಕ್ಕಾಗಲ್ಲ. ನಾನಿನ್ನು ಬರ್ತೀನಿ
ಮೇಡಮ್. ಬರ್ತೀನಿ ಗಿರೀಶ್ ಮೂರ್ತಿ.
(ವಿನಯದಲ್ಲಿ ಉದ್ದಟತನವಿರುವ ಅನುಮಾನವಿದೆ. ಭಟ್ಟ ಬಂದು ಅವಳನ್ನು
ಕರೆದುಕೊಂಡು ಹೋಗುತ್ತಾನೆ. ಆಕೆ ಹೋದ ಮೇಲೆ ರೂಮಿನಲ್ಲಿ ಉಸಿರಾಡುವಂತಾಗುತ್ತದೆ. ಗಿರೀಶ್ ಮೂರ್ತಿ
ಅದನ್ನು ಗಮನಿಸುತ್ತಾನೆ)
ಸರೋಜಾ ಮೂರ್ತಿ : (ಯಾವಾಗಲೂ ತಪ್ಪನ್ನೇ ಹೇಳುವ
ಅಭ್ಯಾಸವಿರುವವಳು) ಆಕೆ ಬಹಳ ಒಳ್ಳೆ ಟೈಪಿಸ್ಟ್ ಅನ್ನಿಸುತ್ತೆ.
ಸರೋಜಾ ಮೂರ್ತಿ : (ವಿನೀತ ಭಾವದಿಂದ) ಅದು ಸರಿ.
ಅದು ನಿಮಗೇ ಚೆನ್ನಾಗಿ ಗೊತ್ತು. (ಇದು ನಿಜವಾದ ಮಹಿಳೆಯ ರೀತಿ ನೀತಿ)
ಗಿರೀಶ್ ಮೂರ್ತಿ : (ಅದನ್ನು ದೃಢಪಡಿಸುವ
ಕಾತುರತೆಯಿಂದ) ಮುತ್ತಿನ ಹಾರಗಳನ್ನು ನಿನಗೆ ಕೊಡಿಸಬೇಕು ಅಂದಾಗ, ಅದ್ಹೇಗೆ ಬೆಚ್ಚಿಬಿದ್ದಳು.
ಸರೋಜಾ ಮೂರ್ತಿ : ಹೌದಾ? ನಾನು ನೋಡಲೇ ಇಲ್ಲ. ಹಾಗೇ ಇರಬೇಕು.
ಗಿರೀಶ್ ಮೂರ್ತಿ : (ಹುಬ್ಬುಗಂಟಿಕ್ಕಿ) ಇರಬಹುದೇನು?
ಅದು ನನಗೆ ಚೆನ್ನಾಗಿ
ತಿಳಿಯುತ್ತೆ. ಹೆಂಗಸರ ವಿಷಯ ನನಗೆ ಚೆನ್ನಾಗಿ ಗೊತ್ತು.
ಸರೋಜಾ ಮೂರ್ತಿ : ಹೌದು, ಹೌದು.
ಗಿರೀಶ್ ಮೂರ್ತಿ : (ಅಷ್ಟು ವಿಶ್ವಾಸವುಳ್ಳ
ಮನುಷ್ಯ ಈ ರೀತಿ ಕೇಳೋದು ಸ್ವಲ್ಪ ವಿಚಿತ್ರ) ಸರೋಜ, ನಿನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು,
ಅಲ್ವಾ? ಪುಸ್ತಕ ಓದೋ ಹಾಗೆ ನಿನ್ನನ್ನ ಓದಬಲ್ಲೆ,
ಅಲ್ಲಾ?
ಸರೋಜಾ ಮೂರ್ತಿ : (ದುರ್ಬಲಳಾಗಿ) ಹೌದು,
ಗಿರೀಶ್.
ಗಿರೀಶ್ ಮೂರ್ತಿ : (ಖುಷಿಯಾಗಿ, ಆದರೆ ಪ್ರಶ್ನಾರ್ಥಕವಾಗಿ) ಆ ಬಡ ಒಂಟಿ
ಪಿಶಾಚಿಯ ಜೀವನಕ್ಕೂ ನಿನಗೂ ಅದೆಷ್ಟು ವ್ಯತ್ಯಾಸವಿದೆ, ಅಲ್ಲಾ?
ಸರೋಜಾ ಮೂರ್ತಿ : ಹೌದು. ಆದರೆ ಆಕೆ ಮುಖದಲ್ಲಿ
ಬಹಳ ತೃಪ್ತಿ ಕಾಣ ಸ್ತಾ ಇತ್ತು.
ಗಿರೀಶ್ ಮೂರ್ತಿ : (ಕಾಲಲ್ಲಿ ಒದೆಯುತ್ತಾ)
ಅದೆಲ್ಲಾ ತೋರಿಕೆಗೆ. ಏನು?
ಸರೋಜಾ ಮೂರ್ತಿ : (ಹೆದರಿಕೆಯಿಂದ) ನಾನೇನೂ
ಹೇಳ್ಲಿಲ್ಲ.
ಗಿರೀಶ್ ಮೂರ್ತಿ : (ತಟ್ಟನೆ) ಯಾರಾದರು
ನೋಡಿದರೆ, ನೀನು
ಅವಳ ಬಗ್ಗೆ ಅಸೂಯೆ ಪಡ್ತಾ ಇದೀಯ ಅನ್ಕೋತಾರೆ.
ಸರೋಜಾ ಮೂರ್ತಿ : ಅಸೂಯೆ!? ಇಲ್ಲ, ಇಲ್ಲ. ಆದರೆ ಅವಳಲ್ಲಿ ಅದೆಷ್ಟು ಜೀವಂತಿಕೆ
ಇದೆ ಅನ್ಸುತ್ತೆ. ಅದರಲ್ಲೂ ಆ ಮೆಷಿನ್ ಜೊತೆ ಕೆಲಸ ಮಾಡೋವಾಗ.
ಗಿರೀಶ್ ಮೂರ್ತಿ : ಜೀವಂತಿಕೆ? ಅದೊಂದು ಜೀವನಾನೇ ಅಲ್ಲ. ನಿನ್ನಲ್ಲಿ
ಜೀವಂತಿಕೆ ಇದೆ. (ಸ್ವಲ್ಪ ಬಿಗಿಯಾಗಿ) ನನಗೆ ಸಾಕಷ್ಟು ಕೆಲಸ ಇದೆ, ಸರೋಜ. (ಅವನು ತನ್ನ ಮೇಜಿನ ಮೇಲೆ
ಕೂರುತ್ತಾನೆ)
ಸರೋಜಾ ಮೂರ್ತಿ : (ಕರ್ತವ್ಯಬದ್ಧಳಾಗಿ) ಸಾರಿ,
ನಾನು ಹೋಗ್ತೇನೆ.
ಗಿರೀಶ್, (ಅಸಂಗತವಾಗಿ)
ಅವು ತುಂಬಾ ದುಬಾರೀನಾ?
ಗಿರೀಶ್ ಮೂರ್ತಿ : ಯಾವುದು?
ಸರೋಜಾ ಮೂರ್ತಿ : ಆ ಮೆಷಿನ್?
(ಅವಳು ಹೋದ ಮೇಲೆ ಅವಳ ಪ್ರಶ್ನೆಯ ಅರ್ಥ ಅವನನ್ನು ಬೆಚ್ಚಿಬೀಳಿಸುತ್ತದೆ.
ಪರದೆಯು ಅವನನ್ನು ನಮ್ಮಿಂದ ಮರೆಮಾಚುತ್ತದೆ. ಆದರೆ ಆತ ಮತ್ತೆ ಸೌಮ್ಯವಾಗುತ್ತಾನೆಂದು ನಮಗೆ
ಖಾತ್ರಿಯಿದೆ. ಈಗ ನಾವು ಆರಾಮವಾಗಿ ಉಸಿರಾಡಬಹುದು. ಏಕೆಂದರೆ, ನನ್ನಲ್ಲಾಗಲಿ ಅಥವಾ ನಿಮ್ಮಲ್ಲಾಗಲಿ ಗಿರೀಶ್
ಮೂರ್ತಿಯಂತವಹವರು ಇಲ್ಲ)