ಪ್ರೀತಿಯನ್ನು ಹೇಗೆ ಸಂಭಾಳಿಸುವುದು? ಈ ಪ್ರಶ್ನೆ ಕವಿತಾಳ ಮುಂದೆ ಬೃಹದಾಕಾರವಾಗಿ ನಿಂತುಬಿಟ್ಟಿತು.
ಅಷ್ಟು ಮುದ್ದಾದ ಮಗು, ಅಮ್ಮನ ಬಗ್ಗೆ ಅತೀವ ಪ್ರೀತಿಯಿದ್ದ ಮಗು ಏಕಾಏಕಿ ರೆಬೆಲ್ ಆಗಿ ನಿಂತುಬಿಟ್ಟಿದ್ದಳು. ಅಮ್ಮನ ಯಾವ ಮಾತನ್ನೂ ಕೇಳದಂತಾಗಿದ್ದಳು. ಇವಳು ನನ್ನ ಮಗಳೇನಾ ಎಂದು ಕವಿತಾ ಅಂದುಕೊಳ್ಳುವಷ್ಟು ಪ್ರೀತಿ ಬದಲಾಗಿಬಿಟ್ಟಿದ್ದಳು.
ಕವಿತ ಒಚಿಟಿ ತಾಯಿ. ಕುಡುಕ ಗಂಡನ ಜೊತೆ ಏಗಲಾಗದೆ, ದಿನನಿತ್ಯ ಅವನ ಕೆಟ್ಟ ಮಾತುಗಳು, ಏಟುಗಳನ್ನು ಸಹಿಸಕೊಳ್ಳಲಾಗದೆ, ಅಪ್ಪ ಅಮ್ಮ ಏನು ಹೇಳಿದರೂ ಕೇಳಿಸಿಕೊಳ್ಳದೆ 10 ವರ್ಷದ ಮಗಳೊಂದಿಗೆ ಹೊರಬಂದಿದ್ದಳು. ಕುಟುಂಬದವರ ನೆರವಿಲ್ಲದೆ ಕೆಲವು ಗೆಳತಿಯರ ನೆರವಿನೊಂದಿಗೆ ಟೈಲರಿಂಗ್ ಕಲಿತು ಕೇವಲ ಐದು ವರ್ಷಗಳ ಅವಧಿಯಲ್ಲಿಯೇ 15 ಜನರನ್ನು ಕೆಲಸಕ್ಕಿಟ್ಟುಕೊಂಡು ಒಂದು ಸಣ್ಣ ಗಾರ್ಮೆಂಟ್ಸ್ ಆರಂಭಿಸಿದ್ದಳು. ಒಳ್ಳೆಯ ಆದಾಯವಿತ್ತು.
ಮಗಳಿಗೆ ತಂದೆಯ ಕೊರತೆ ಗೊತ್ತಾಗಬಾರದೆಂದು ಕೇಳಿದ್ದನ್ನೆಲ್ಲವನ್ನೂ ತೆಗೆದುಕೊಟ್ಟಳು. ಒಳ್ಳೆಯ ಶಾಲೆಗೆ ಸೇರಿಸಿದಳು. ಸ್ಕೇಟಿಂಗ್, ಡ್ಯಾನ್ಸ್ ಹೀಗೆ ಏನು ಕೇಳಿದರೂ ಇಲ್ಲವೆನ್ನಲಿಲ್ಲ. ಪ್ರೀತಿ ಕೂಡ ತಾಯಿಯ ಪ್ರೀತಿಯನ್ನೇನೂ ದುರುಪಯೋಗಪಡಿಸಿಕೊಂಡಿರಲಿಲ್ಲ. ಚೆನ್ನಾಗಿ ಓದುತ್ತಿದ್ದಳು, ಸ್ನೇಹಿತೆಯರೊಂದಿಗೆ ಚೆನ್ನಾಗಿದ್ದಳು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದಳು, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹಾಗಾಗಿ ಕವಿತಾಳಿಗೆ ಯಾವುದೇ ಟೆನ್ಷನ್ ಇರಲಿಲ್ಲ.
ಪ್ರೀತಿಯ ಸಹಾಯ ಮಾಡುವ ಗುಣದಿಂದಾಗಿಯೇ ಕವಿತಾಳ ತಂದೆ- ತಾಯಿ ಮತ್ತೆ ಹತ್ತಿರವಾಗಿದ್ದರು. ಒಮ್ಮೆ ಕವಿತಾಳ ಅಮ್ಮನಿಗೆ ತುಂಬಾ ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ 3 ದಿನ ಇವಳೇ ಅಲ್ಲಿದ್ದು ನೋಡಿಕೊಂಡಿದ್ದಳು. ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರವಿದ್ದರೂ ಅವರ ಮನೆಗೆ ಹೋಗಿ ಒಂದು ವಾರ ನೋಡಿಕೊಂಡಿದ್ದಳು. ಅಪ್ಪ ಅಮ್ಮನಿಗೆ ಅವಳ ಬಗ್ಗೆ ಸಾಕಷ್ಟು ಪ್ರೀತಿ ಬೆಳೆದಿತ್ತು. ಆಗಾಗ ಅವಳನ್ನು ನೋಡುವ ನೆಪದಲ್ಲಿ ಮಗಳ ಮನೆಗೆ ಹೋಗಲಾರಂಭಿಸಿದ್ದರು. ಮೊಮ್ಮಗಳ ಹಠಕ್ಕೆ ಮಣಿದು ಉಳಿದುಕೊಳ್ಳುತ್ತಿದ್ದರು.
ಒಂದು ವರ್ಷದಿಂದೀಚೆಗೆ ಕವಿತಾ ಗಾರ್ಮೆಂಟ್ಸ್ ನಲ್ಲಿ ಹೆಚ್ಚು ತೊಡಗಿಸಿಕೊಂಡುಬಿಟ್ಟಿದ್ದಳು. ಅಮ್ಮ, ಅಪ್ಪ ಮನೆಯಲ್ಲಿಯೇ ಇದ್ದುದ್ದರಿಂದ ಪ್ರೀತಿಯ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ.
ಅಮ್ಮ ಒಮ್ಮೆ “ಕವಿತಾ, ಇತ್ತೀಚೆಗೆ ಪ್ರೀತಿ ಬಹಳ ಬದಲಾಗುತ್ತಿದ್ದಾಳೆ ಅನಿಸುತ್ತಿದೆ” ಎಂದಾಗ “ಅಯ್ಯೊ, ಬಿಡಮ್ಮ, ಕಾಲೇಜಿಗೆ ಸೇರಿದ್ದಾಳಲ್ಲ, ನಮಗೆ ಹಾಗನಿಸುತ್ತದೆ” ಎಂದು ತೇಲಿಸಿಬಿಟ್ಟಿದ್ದಳು. ಹಾಗೆಯೇ ಆರು ತಿಂಗಳು ಕಳೆದುಹೋದವು. ಮಗಳು ಮೊದಲಿನಂತಿಲ್ಲ ಅನಿಸಿದರೂ ಬಿಸಿನೆಸ್ ನಲ್ಲಿ ಮುಳುಗಿಹೋದ್ದರಿಂದ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.
ಆದರೆ ತಾಯಿ “ನೀನು ಅವಳನ್ನು ಕೇಳು. ಸರಿಯಾಗಿ ಊಟ ಮಾಡುತ್ತಿಲ್ಲ, ಯಾವಾಗಲೂ ಒಬ್ಬಳೇ ಇರುತ್ತಾಳೆ. ಅವಳ ರೂಮಿಗೆ ಯಾರನ್ನೂ ಸೇರಿಸುತ್ತಿಲ್ಲ. ಆದರೆ ಇತ್ತೀಚೆಗೆ ಬಟ್ಟೆ ಒಗೆಯಲು ಹಾಕಬೇಕೆಂದುಕೊಂಡು ಅವಳ ರೂಮಿಗೆ ಹೋದಾಗ ಕೆಟ್ಟ ವಾಸನೆ ಬರುತ್ತಿತ್ತು” ಎಂದರು.
“ಅಯ್ಯೊ, ಅಷ್ಟು ತಲೆ ಕೆಡಿಸಿಕೊಳ್ಳಬೇಡಮ್ಮ. ಸ್ವಲ್ಪ ಸೋಮಾರಿಯಾಗಿದ್ದಾಳೆ ಅನಿಸುತ್ತೆ. ಎರಡು ಮೂರು ದಿನ ಸ್ನಾನ ಮಾಡಿರೋಲ್ಲ, ಸೆಂಟ್ ಹಾಕ್ಕೊಂಡಿರ್ತಾಳೆ. ಜೊತೆಗೆ ಎಲ್ಲಾ ಗಲೀಜು ಬಟ್ಟೆ, ಶೂಸ್ ಅಲ್ಲೇ ಇಟ್ಟಿದ್ದಾಳೆ ಅನಿಸುತ್ತೆ” ಎಂದುಬಿಟ್ಟಳು.
ಅದಾದ ಮೂರು ತಿಂಗಳಿಗೆ ಅಮ್ಮ ಒಂದು ಬಾಟಲ್ ತಂದುಕೊಟ್ಟು “ಇದೇನು ನೋಡು, ಇದೇ ವಾಸನೆ ಬರ್ತಾ ಇರೋದು” ಎಂದರು.
ಸ್ಥಂಭೀಭೂತಳಾದಳು ಕವಿತಾ. ಹೆಂಡದ ಬಾಟಲ್ ಆಗಿತ್ತದು. ಒಂದು ಘಳಿಗೆ ತನ್ನ ಕಣ್ಣನ್ನೇ ತಾನು ನಂಬದಾದಳು. ಹಾಗೆಯೇ ಸೋಫಾದ ಮೇಲೆ ಕುಸಿದು ಕುಳಿತಳು. ತನ್ನನ್ನು ತಾನು ಸಂಭಾಳಿಸಿಕೊಂಡು ಸಂಜೆ ಮಗಳೊಂದಿಗೆ ಮಾತನಾಡಲು ನಿರ್ಧರಿಸಿದಳು.
ಪ್ರೀತಿ ರಾತ್ರಿ 9ಕ್ಕೆ ಮನೆಗೆ ಬಂದಳು. “ಎಲ್ಲಿಗೆ ಹೋಗಿದ್ದೆ ಇಷ್ಟೊತ್ತಿನವರೆಗೆ?”
“ಎಲ್ಲಾ ಫ್ರೆಂಡ್ಸ್ ಸೇರಿದ್ದರು, ಪಾರ್ಟಿ ಇತ್ತು, ಹೋಗಿದ್ದೆ.”
ಅವಳು ಉತ್ತರಿಸುತ್ತಿದ್ದ ರೀತಿ, ನಿಂತಿದ್ದ ರೀತಿ ನೋಡಿದ ತಕ್ಷಣವೇ ಕವಿತಾಳಿಗೆ ಮಗಳ ಸ್ಥಿತಿ ಅರ್ಥವಾಯಿತು. “ನಾಳೆ ಮಾತಾಡೋಣ, ಈಗ ಹೋಗಿ ಮಲಗಿಕೊ” ಎಂದಳು. ಪ್ರೀತಿ ಮತ್ತೇನೂ ಮಾತನಾಡದೆ ಒಳಹೋದಳು.
ಅಳುತ್ತಿದ್ದ ಅಮ್ಮನಿಗೆ ಧೈರ್ಯ ತುಂಬಿದರೂ ಮನಸ್ಸಿನಲ್ಲಿ ‘ಇದೇನಾಗಿ ಹೋಯಿತು’ ಎಂಬ ಪ್ರಶ್ನೆ ಮೂಡಿತು.
ಬೆಳಿಗ್ಗೆ ಮಾತನಾಡಬೇಕಾದರೆ ಅವಳಿಗೆ ಅರ್ಥವಾದದ್ದಿಷ್ಟು. ಪ್ರೀತಿಗೆ ಅಮ್ಮ ತನ್ನನ್ನು ಪ್ರೀತಿಸುವುದಿಲ್ಲ, ಅದಕ್ಕೆ ಸಮಯ ಕೊಡುತ್ತಿಲ್ಲ ಎಂಬ ಭಾವನೆ ಬೆಳೆದುಬಿಟ್ಟಿತ್ತು. ಜೊತೆಗೆ ಅಮ್ಮ ಗಾರ್ಮೆಂಟ್ಸ್ ನ ಮ್ಯಾನೇಜರ್ ಜೊತೆ ಓಡಾಡುತ್ತಿದ್ದುದ್ದನ್ನು ತಪ್ಪಾಗಿ ತಿಳಿದಿದ್ದಳು. ಇದೆಲ್ಲವನ್ನೂ ಅವಳ ತಲೆಯಲ್ಲಿ ತುಂಬಿದ್ದು ಮಾಜಿ ಗಂಡ ಎಂದು ತಿಳಿಯಿತು. ಇದರೊಂದಿಗೆ ಅಜ್ಜಿ ತಾತನ ಜೊತೆಗೆ ಸಹ ತುಂಬಾ ಬಾಂಧವ್ಯ ಇರದಿದ್ದರಿಂದ ಪ್ರೀತಿ ಯಾರೊಂದಿಗೂ ತನ್ನ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ.
ಕೋಪ ತಡೆಯಲಾಗದೆ ಮಗಳ ಮೇಲೆ ಕೈಮಾಡಿಬಿಟ್ಟಳು. “ನಾನು ನಿನಗೆ ಏನು ಕಡಿಮೆ ಮಾಡಿದ್ದೆ? ನಿನಗೆ ಎಲ್ಲವನ್ನೂ ಕೊಡಲೋಸ್ಕರ ನಾನು ಹಗಳಿರುಳೂ ಕೆಲಸ ಮಾಡುತ್ತಿದ್ದರೆ, ಮ್ಯಾನೇಜರ್ ಜೊತೆ ಸಂಬಂಧ ಕಟ್ಟುತ್ತೀಯಾ? ಏನಾಗಿದೆ ನಿನಗೆ?” ಪ್ರಶ್ನಿಸಿದಳು.
“ನೀನೆಲ್ಲವನ್ನೂ ಕೊಟ್ಟಿದ್ದೀಯ, ಆದರೆ ಅಷ್ಟು ಮಾತ್ರ ಸಾಕಾ? ನೀನು ನನ್ನ ಜೊತೆ ಮಾತನಾಡಿ ಎಷ್ಟು ದಿನವಾಯಿತು? ಊಟ ತಿನಿಸಿ ಎಷ್ಟು ದಿನವಾಯಿತು? ನನ್ನ ಜೊತೆ ಮಲಗಿ ಎಷ್ಟು ದಿನವಾಯಿತು? . . . . . ಹೀಗೆ ಪ್ರಶ್ನಿಸುತ್ತಾ ಪ್ರೀತಿಯ ಕೋಪ ತಾರಕಕ್ಕೇರಿ ಅಳಲಾರಂಭಿಸಿದಳು. ಸ್ವಲ್ಪ ಹೊತ್ತು ಅತ್ತಾದ ಮೇಲೆ “ನನಗೆ ನೀನು ಬೇಡ. ನನಗೆ ಹೇಗೆ ಬೇಕೊ ಹಾಗಿರ್ತೀನಿ. ನೀನು ಬೇಡ ಎಂದರೆ ನಿನ್ನನ್ನು ಬಿಟ್ಟು ನಮ್ಮಪ್ಪನ ಮನೆಗೆ ಹೋಗ್ತೀನಿ. ಅವರೂ ಬೇಡ ಎಂದರೆ ಎಲ್ಲಾದರೂ ಹಾಳಾಗ್ ಹೋಗ್ತೀನಿ” ಎಂದವಳೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟಳು.
ಗರಬಡಿದಂತೆ ಕುಳಿತುಬಿಟ್ಟಳು ಕವಿತಾ. ತನ್ನ ಕಿವಿಯನ್ನು ತಾನೇ ನಂಬಲಾರದಾದಳು. ‘ನನ್ನ ಪ್ರೀತಿಯ ಹುಡುಗಿ ಈ ರೀತಿ ಮಾತನಾಡಲು ಸಾಧ್ಯವೇ?’ ಅನಿಸಿತು. ಏನೂ ತೋಚದೆ ಆತ್ಮೀಯ ಗೆಳತಿಗೆ ಫೋನ್ ಮಾಡಿದಳು. ಅವಳು ಎಲ್ಲವನ್ನೂ ಕೇಳಿಕೊಂಡ ಮೇಲೆ “ತಕ್ಷಣವೇ ಡಿ ಅಡಿಕ್ಷನ್ ಸೆಂಟರ್ ಗೆ ಸೇರಿಸೋಣ, ಮಧ್ಯಾಹ್ನ ಬರುತ್ತೇನೆ. ಗೊತ್ತಿರುವ ಜಾಗದಲ್ಲಿ ವಿಚಾರಿಸೋಣ” ಎಂದಳು.
ಇಬ್ಬರೂ ಬಹಳಷ್ಟು ಕಡೆಗಳಲ್ಲಿ ವಿಚಾರಿಸಿದರು. ಎಲ್ಲೂ ಅವರಿಗೆ ಸಮಾಧಾನವಾಗಲಿಲ್ಲ. ಕೆಲವೆಡೆ ಬಹಳ ಕ್ರೂರವಾದ ಚಿಕಿತ್ಸೆ ಎನಿಸಿದರೆ ಇನ್ನೂ ಕೆಲವೆಡೆ ಬಹಳ ಗಲೀಜಾಗಿತ್ತು. ಎಲ್ಲಾ ನೋಡಿ ಕೊನೆಗೆ ಒಂದು ಸೆಂಟರ್ ಗೆ ಹೋಗಿ ಮಾತನಾಡುತ್ತಿದ್ದಾಗ, ಅಲ್ಲಿ ಪರವಾಗಿಲ್ಲ ಎನಿಸಿ, ಅಲ್ಲಿಂದ ಹೊರಟರು. ಆಗಲೇ ಕವಿತಾಳ ಕಿವಿಗೆ ಒಂದು ಹುಡುಗಿಯ
ಆರ್ತನಾದ ಕಿವಿಗೆ ಬಿದ್ದಿತು “ನನಗೊಂದು ಹನಿ ಪ್ರೀತಿ ಕೊಡಿ, ನನಗೊಂದು ಹನಿ ಪ್ರೀತಿ ಕೊಡಿ.” ಗಕ್ಕನೆ ನಿಂತುಬಿಟ್ಟಳು ಕವಿತಾ.
ಪ್ರೀತಿ ಸಹ “ನನಗೆ ನಿನ್ನ ಪ್ರೀತಿ ಸಿಗುತ್ತಿಲ್ಲ” ಎಂದಿದ್ದಳು. ಅಂದರೆ ಪ್ರೀತಿಗೆ ಸಮಸ್ಯೆ ಬಂದಿರುವುದು ಪ್ರೀತಿಯ ಕೊರತೆಯಿಂದಾಗಿ. ಮನೆಯಲ್ಲಿ ಸಿಗದ ಪ್ರೀತಿಯನ್ನು ಹೊರಗಡೆ ಅರಸಿದ್ದಳು. ಸಿಕ್ಕ ಸ್ನೇಹಿತರು ಇಂತಹವರೇ ಆಗಿದ್ದರಿಂದ ಕುಡಿತದ ಅಭ್ಯಾಸವಾಗಿಬಿಟ್ಟಿತ್ತು, ಕುಡಿಯುತ್ತಾ ತನ್ನ ನೋವನ್ನು ಮರೆಯಲೆತ್ನಿಸಿದ್ದಳು.
ಹಾಗಿದ್ದರೆ ಈ ಅಂಶ ಸರಿಯೆನಿಸಿತು. ಮಗಳು ಬದಲಾಗುವುದಾದರೆ ಒಂದು ಹನಿ ಏಕೆ, ತಾಯಿಯೆದೆಯಲ್ಲಿರುವ ಸಾಗರದಷ್ಟು ಪ್ರೀತಿಯನ್ನೂ ಅರ್ಪಿಸಲು ಸಿದ್ಧಳಿದ್ದಳಾಕೆ. ಯಾಕೆ ಪ್ರಯತ್ನಿಸಬಾರದೆನಿಸಿತು.
ರಾತ್ರಿ ಪ್ರೀತಿಯ ರೂಮಿಗೆ ಊಟವನ್ನು ತೆಗೆದುಕೊಂಡು ಹೋದಳು. ಮಲಗಿದ್ದ ಮಗಳ, ಕೆನ್ನೆ ನೇವರಿಸಿದಳು. ಬೆಚ್ಚಿ ಬಿದ್ದು ಎದ್ದ ಪ್ರೀತಿ ಆಶ್ಚರ್ಯದಿಂದ ತಾಯಿಯನ್ನೇ ನೋಡಿದಳು. “ಪುಟ್ಟಾ, ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ನನ್ನಿಂದ ತಪ್ಪಾಗಿದೆ, ನಾನು ಸರಿಪಡಿಸಿಕೊಳ್ಳಲು ಸಿದ್ಧಳಿದ್ದೇನೆ, ಇದು ನಮ್ಮಿಬ್ಬರಿಗೂ ಪರೀಕ್ಷೆ, ಇಬ್ಬರೂ ಒಟ್ಟಿಗೆ ಪರೀಕ್ಷೆ ಎದುರಿಸಿ ಪಾಸಾಗೋಣ. ನಿನ್ನ ಜೊತೆ ನಾನಿರ್ತೀನಿ, ನನ್ನ ಜೊತೆ ನೀನಿರ್ತೀಯಾ?” ಕೇಳಿದಳು.
ಪ್ರೀತಿ ಉತ್ತರವನ್ನೇನೂ ಕೊಡದೆ ಮೌನವಾಗಿ ಅಮ್ಮನ್ನನ್ನೇ ದಿಟ್ಟಿಸಿದಳು. ‘ಬಾ’ ಎನ್ನುವಂತೆ ಕರೆದ ತಾಯಿ ತೋಳಿಗೆ ಬರಲು ಮುಂದೆ ಬಂದವಳು ಹಾಗೆಯೇ ನಿಂತುಬಿಟ್ಟಳು. ಕವಿತಾಳೇ ಮುಂದೆ ಹೋಗಿ ಪ್ರೀತಿಯನ್ನು ತಬ್ಬಿಕೊಂಡುಬಿಟ್ಟಳು. ತಕ್ಷಣವೇ ಪ್ರೀತಿ ಗಟ್ಟಿಯಾಗಿ ಅಮ್ಮನನ್ನು ಅಪ್ಪಿಕೊಂಡು ಜೋರಾಗಿ ಅಳಲಾರಂಭಿಸಿದಳು. ಕವಿತಾಳ ಕಣ್ಣುಗಳಿಂದಲೂ ಕಣ್ಣೀರು ಹರಿಯುತ್ತಿತ್ತು. ತಾಯಿ – ಮಗಳು ಹಾಗೆಯೇ ಅಪ್ಪಿಕೊಂಡು ಇಡೀ ರಾತ್ರಿಯನ್ನು ಕಳೆದರು.
6 ತಿಂಗಳಾದ ನಂತರ ಪ್ರೀತಿ ಕಾಲೇಜಿಗೆ ಹೋಗುತ್ತಾ “ಅಮ್ಮ, ಇಂದು ತಡವಾಗಿ ಬರ್ತೀನಿ. ಸುಜಾತಳ ಮನೆಗೆ ಹೋಗುತ್ತಿದ್ದೇನೆ” ಎಂದಳು.
“ಏನು ವಿಶೇಷ?”
“ಅವಳಿಗೂ ಒಂದು ಹನಿ ಪ್ರೀತಿ ಬೇಕಂತೆ” ಕಣ್ಣುಮಿಟುಕಿಸುತ್ತಾ ನುಡಿದಳು ಪ್ರೀತಿ. ಕವಿತಾಳ ಮೊಗದಲ್ಲಿ ನಗು ಅರಳಿತು!!
- ಸುಧಾ ಜಿ