Pages

ಪುಟ್ಕಥೆಗಳು


ಪುಟ್ಕಥೆ - ೧

"ಬರೀ ಓದುವುದಷ್ಟೇ ಬುದ್ಧಿವಂತಿಕೆಯಲ್ಲ. ಬೇರೆ ಬೇರೆ ರೀತಿಯ ಬುದ್ಧಿವಂತಿಕೆಗಳಿವೆ. ಈಗ ನೋಡಿ ನಾನು ಹತ್ತನೆ ತರಗತಿಯಲ್ಲಿ ಎರಡು ಬಾರಿ ಫೇಲಾಗಿ, ಹೇಗೋ ಕಷ್ಟ ಪಟ್ಟು ಪಾಸಾಗಿ, ಚಿತ್ರಕಲಾ ಶಾಲೆಯನ್ನು ಸೇರಿದೆ, ಚಿನ್ನದ ಪದಕ ಗಳಿಸಿದೆ."
ಐದು ವರ್ಷಗಳ ಶಾಲಾಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಆ ಬಾಲಕ ಉತ್ಸುಕತೆಯಿಂದ ಶಿಕ್ಷಕಿಯ ಮಾತು ಕೇಳಲಾರಂಭಿಸಿದ!!

ಪುಟ್ಕಥೆ - ೨
"ಸ್ನೇಹಕ್ಕಾಗಿ ನೀನೇ ಸ್ವಲ್ಪ ತಗ್ಗಿದರೆ ಅದು ಅವಮಾನ ಹೇಗಾಗುತ್ತದೆ? ನಿನಗೆ ಹಾಗನಿಸಿದರೆ ಅದು ಸ್ನೇಹವೇ ಅಲ್ಲ" ಅಮ್ಮ ಹೇಳಿದಳು. 
ಫೋನ್ ಎತ್ತಿಕೊಂಡು ಸ್ನೇಹಿತನಿಗೆ ಕರೆ ಮಾಡುವಷ್ಟರಲ್ಲಿ ಆ ಕಡೆಯಿಂದ ಕರೆ ಬಂತು. ಎಲ್ಲಾ ಅಮ್ಮಂದಿರೂ ಒಂದೇ ರೀತಿ ಇರ್ತಾರೆಯೆ? ಪ್ರಶ್ನೆ ಇವನಿಗೆ!!

ಪುಟ್ಕಥೆ - ೩
ತಗ್ಗಿಬಗ್ಗಿ ನಡೆದರೇನೇ ಬದುಕು ಚೆನ್ನಾಗಿರುತ್ತದೆ ಎಂದಿದ್ದರು ಹಿರಿಯರು. ಅದನ್ನೇ ನಂಬಿಕೊಂಡು ಬಂದಿದ್ದವಳಿಗೆ ಬದುಕು ಘೋರವೆನಿಸಲಾರಂಭಿಸಿತ್ತು ದೌರ್ಜನ್ಯ ಸಹಿಸುವಾಗಲೆಲ್ಲಾ.
ಸಿಡಿದೆದ್ದು ನಿಂತಳು, ಬದುಕು ಸುಂದರವೆನಿಸತೊಡಗಿತು!!

ಪುಟ್ಕಥೆ - ೪
"ಮರ್ಯಾದೆ ಮೌನದಲ್ಲಿದೆ ಎಂದು ಹೇಳುವವರ ಮಾತಿನ ಅರ್ಥ ಅವರ ಮರ್ಯಾದೆ ನಿಮ್ಮ ಮೌನದಲ್ಲಿದೆ ಎಂದು. ಆದರೆ ನಿಮ್ಮ ಮರ್ಯಾದೆ ಇರುವುದು ನಿಮ್ಮ ಪ್ರತಿಭಟನೆಯಲ್ಲಿ!" ಹೇಳಿದರು ವೈದ್ಯರು ಕಾರ್ಯಾಗಾರದಲ್ಲಿ. ಮರುದಿನ ವಿದ್ಯಾರ್ಥಿನಿಯರು ತಾವು ಮರ್ಯಾದೆಯುಳ್ಳವರು ಎಂಬುದನ್ನು ಸಾಬೀತುಪಡಿಸಿದರು!!

ಪುಟ್ಕಥೆ - ೫

"ನಿನ್ನನ್ನು ತಿರಸ್ಕರಿಸಿ ನಾ ತಪ್ಪುಮಾಡಿದೆ. ನಮ್ಮ ಸಂಬಂಧವನ್ನು ಮತ್ತೆ ಕಟ್ಟಿಕೊಳ್ಳುವುದು ಹೇಗೆ, ನೀನಿಲ್ಲದೆ ನಾನು ಬದುಕಲಾರೆ" ಹೇಳಿದನಾತ.
"ಅಪನಂಬಿಕೆಯಲಿ ಕಡಿದುಹೋದ ಸಂಬಂಧ ಮತ್ತೆ ಸುಧಾರಿಸಲು ಸಾಧ್ಯವಿಲ್ಲ, ಅದಕ್ಕೆ ಅವಕಾಶ, ಸಮಯ ಎರಡೂ ನೀಡಬಾರದು. ನಿನಗೂ ಅದು ಚುಚ್ಚುತ್ತಿರುತ್ತದೆ!" ಹೇಳಿದಳಾಕೆ!!

ಪುಟ್ಕಥೆ - ೬
"ಅಮ್ಮ ಮೊದಲ ಬಾರಿ ನೋಡಿದ ತಕ್ಷಣವೇ ಯಾರನ್ನಾದರೂ ಯಾಕೆ ಪೂರ್ತಿ ನಂಬಬಾರದು?" ಕೇಳಿದರು ಮಕ್ಕಳು.
"ಈ ಭತ್ತವನ್ನು ನೋಡಿದ ತಕ್ಷಣ ಕಾಳಾವುದು, ಜೊಳ್ಳಾವುದು ತಿಳಿಯುತ್ತಾ?" ಕೇಳಿದಳಮ್ಮ!!

ಪುಟ್ಕಥೆ - ೭
ಮಕ್ಕಳ್ಯಾರೂ ಮಾತು ಕೇಳುತ್ತಿಲ್ಲ, ಯಾರನ್ನೂ ನಾನು ಬದಲಾಯಿಸಲಾಗುತ್ತಿಲ್ಲ ಎಂದು ಭಾವಿಸಿ, ಬೇಸತ್ತು ರಾಜಿನಾಮೆ ಪತ್ರವನ್ನು ಮುಖ್ಯೋಪಾಧ್ಯಾಯರಿಗೆ ನೀಡಲು ಹೋಗುತ್ತಿದ್ದಾಗ ಹುಡುಗಿಯೊಬ್ಬಳು ಟೀಚರ್ ಗೆ ಚೀಟಿಯೊಂದನ್ನು ಕೊಟ್ಟು ಹೊರಟೇಬಿಟ್ಟಳು. ಅದರಲ್ಲಿದ್ದದ್ದು ಒಂದೇ ವಾಕ್ಯ 'ಟೀಚರ್, ನಿಮ್ಮಿಂದಾಗಿ ನಾ ಮತ್ತೆ ಬದುಕನ್ನು ಪ್ರೀತಿಸಲಾರಂಭಿಸಿರುವೆ!' 

ಪುಟ್ಕಥೆ - ೮
"ಅಪ್ಪ ನೀವೇಕೆ ಸಿಗರೇಟ್, ಮದ್ಯಸೇವನೆಯಂತಹ ಚಟಕ್ಕೆ ಬಲಿಯಾಗಲಿಲ್ಲ?" ಪ್ರಶ್ನಿಸಿದ ಕಾಲೇಜು ಓದುತ್ತಿದ್ದ ಮಗ.
"ನಿನ್ನಿಂದ, ನಿಮ್ಮ ಅಮ್ಮನಿಂದ  ದೂರವಾಗಿಬಿಡುತ್ತೇನೆ ಎಂಬ ಭಯದಿಂದ. ಭವಿಷ್ಯದಲ್ಲಿ ನಿಮಗೆ ಭಾರವಾಗಿರಬಾರದೆಂಬ ಜವಾಬ್ದಾರಿಯಿಂದ!!" ಉತ್ತರಿಸಿದರು ಅಪ್ಪ.

ಪುಟ್ಕಥೆ - ೯
"ತುಟಿ ಕಚ್ಚಿ ನೋವನ್ನು ಸಹಿಸುತ್ತಿರುವುದು ಏಕೆ? ಯಾರೊಂದಿಗಾದರೂ ಹೇಳಿಕೊಳ್ಳಬಾರದೇ?" ಕೇಳಿದಳು ಗೆಳತಿ.
"ಹೇಳಿಕೊಂಡರೆ ಹೋಗುವ ನೋವಲ್ಲವಿದು. ಹೇಳಿಕೊಂಡ ನಂತರ ಆ ಇನ್ನೊಬ್ಬರು ನಮ್ಮ ಈ ನೋವನ್ನು ಹರಾಜು ಹಾಕುವುದಿಲ್ಲ ಎನ್ನುವ ಗ್ಯಾರಂಟಿ ಏನು? ಜೊತೆಗೆ ಆತ್ಮೀಯ ಸ್ನೇಹಿತರಿಗೆ ಹಂಚುವುದಾದರೆ ಖುಷಿಯನ್ನೇ ಹಂಚಬೇಕಲ್ಲವೇ!!" ಮರುಪ್ರಶ್ನಿಸಿದಳಾಕೆ.

ಪುಟ್ಕಥೆ - ೧೦
ಹೆನ್ರಿಕ್ ಇಬ್ಸೆನ್ ನ ಗೊಂಬೆ ಮನೆ ಓದುತ್ತಿದ್ದವಳಿಗೆ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ತಾನೂ ಸಹ  ಇಷ್ಟು ವರ್ಷಗಳ ಕಾಲ, ಆ ನಾಟಕದ ನಾಯಕಿ ನೋರಾಳಂತೆ ಗೊಂಬೆಯಾಗಿ ಬದುಕ್ಕಿದ್ದೆಂದು ಅರ್ಥವಾಯಿತು. ಜೈಲಿನಂತಹ ಮನೆಯಿಂದ ಹೊರಬಿದ್ದ ನಾಯಕಿ ಇಡೀ ಯೂರೋಪಿನ ಜನಮಾನಸವನ್ನು ಅಲುಗಾಡಿಸಿದಂತೆ ಇವಳ ಮನವನ್ನೂ  ಕಲಕಿಬಿಟ್ಟಳು!!

ಪುಟ್ಕಥೆ - ೧೧
"ಈ ಮುಷ್ಕರವೆಲ್ಲಾ ಬೇಕೇನಪ್ಪ?" ಮೂಲಸೌಕರ್ಯಗಳಿಗಾಗಿ ಮುಷ್ಕರ ಹೂಡಿದ್ದ ವಿದ್ಯಾರ್ಥಿಗಳನ್ನು ಕೇಳಿದರು ಶಿಕ್ಷಕರು.
"ಸರ್ ಮರ್ತೋಯ್ತಾ? ಮೇಷ್ಟ್ರುಗಳು ಬೇಕೆಂದು ನಾವು ಮುಷ್ಕರ ಹೂಡಿದ್ದರಿಂದಲೇ ಅಲ್ವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಂಡಿದ್ದು!"

ಪುಟ್ಕಥೆ - ೧೨
ಬಹಳ ಆಸೆಪಟ್ಟು ಹಣ ಕೂಡಿಸಿಟ್ಟು ವಿದೇಶ ಪ್ರವಾಸ ಮಾಡಬೇಕೆಂದುಕೊಂಡ ಅಮ್ಮ ಕೊನೆ ಘಳಿಗೆಯಲ್ಲಿ ಬೇಡವೆಂದು ನಿರ್ಧರಿಸಿದ್ದು ಯಾಕೆಂಬುದು ನಮಗೆ ಗೊತ್ತಾದದ್ದು ಒಂದು ವರ್ಷದ ನಂತರ; ನಮ್ಮ ಅಜ್ಜಿತಾತನ ಹೆಸರನ್ನು ನಮ್ಮೂರಿನ ಹೊಸ ಹೈಸ್ಕೂಲಿನ ಕಟ್ಟಡದ ಮೇಲೆ ನೋಡಿದಾಗಲೇ!!

ಪುಟ್ಕಥೆ - ೧೩
ಅಮ್ಮ ಮಹಿಳಾ ಸಂಘ ಸೇರಿಕೊಂಡು ಹೋರಾಟಕ್ಕಿಳಿದಾಗ ಮಕ್ಕಳಿಗೆ ಶಾಕ್.
"ಬಂಗಾಳದ ಮಾತಂಗಿನಿ ಹಜ್ರಾ ಸ್ವಾತಂತ್ರ್ಯ ಚಳುವಳಿಗೆ  ಸೇರಿಕೊಂಡಾಗ ಆಕೆಗೆ ೬೦ ವರ್ಷ, ನನಗೆ ಇನ್ನೂ ೫೮ ವರ್ಷಗಳಷ್ಟೇ" ಅಂದರಾಕೆ!! 

ಪುಟ್ಕಥೆ - ೧೪
"ಅಮ್ಮ ನೋಡು ನಾವು ಬಂದುಬಿಟ್ಟೆವು, ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ, ಮನೆಗೆ ಹೋಗೋಣ ಬಾ" ಕರೆದರು ಮಕ್ಕಳು.
"ಇಲ್ಲ ಮಕ್ಕಳೆ, ನನ್ನ ವೃದ್ಧಾಪ್ಯದ ಸಂಗಾತಿಗಳನ್ನು ಬಿಟ್ಟು ನಾನು ಬರಲಾರೆ. ನನಗೆ ಅವಶ್ಯಕತೆ ಇದ್ದಾಗ ನೀವ್ಯಾರು ಇರಲಿಲ್ಲ, ಅವರಿದ್ದರು!!" ವೃದ್ಧಾಶ್ರಮದಲ್ಲಿದ್ದ ತಾಯಿ ಹೇಳಿದರು.

ಪುಟ್ಕಥೆ - ೧೫
ನಗರದಲ್ಲಿ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದ ಮಗಳ ಮನೆಗೆ ಬಂದಳಮ್ಮ. ಸಂಜೆ ೫ಕ್ಕೆ ಬರುತ್ತೇನೆಂದ ಮಗಳು ಒಂಬತ್ತಾದರೂ ಮನೆಗೆ ಬಾರದಿದ್ದಾಗ 'ಒಂದು ವರ್ಷದಲ್ಲಿ ಇಷ್ಟು ಬದಲಾವಣೆಯೇ' ಎಂದು ನೊಂದುಕೊಂಡಳು.
೯ಕ್ಕೆ  ಅವಳೊಂದಿಗೆ ಬಂದ ಗೆಳತಿ "ಆಂಟಿ, ನಿಮಗಿಷ್ಟ ಅಂತ ಈ ಬೆಂಗಾಲಿ ಸ್ವೀಟ್ ತರಲು ಸಂಜೆ ೫ ಘಂಟೆಯಿಂದ ನನ್ನನ್ನು ಅಲೆಸಿದಳು" ಸ್ವೀಟ್ ಡಬ್ಬ ಟೀಪಾಯಿ ಮೇಲಿಟ್ಟು ಸುಸ್ತಾಗಿ ಕುಳಿತಾಗಲೇ ತಾಯಿಗೆ ತನ್ನ ತಪ್ಪಿನರಿವಾಗಿದ್ದು!!

ಪುಟ್ಕಥೆ - ೧೬
ಆಕೆಗದು ಸಂಕಟಮಯ ಪರಿಸ್ಥಿತಿ. ಸಾವುಬದುಕಿನ ಮಧ್ಯದಲ್ಲಿ ಹೋರಾಟ  ನಡೆಸುತ್ತಿರುವ ತಂದೆಯ ಜೊತೆ ಇರಬೇಕೇ ಇಲ್ಲವೇ ವಿದೇಶದಲ್ಲಿ ಹೆರಿಗೆಯಾಗಲಿರುವ ಮಗಳ ಬಳಿ ಹೋಗಬೇಕೆ?
ಆಗ ತಾಯಿ ಹೇಳಿದ್ದು - "ಈಗ ನಿನ್ನ ಮಗಳಿಗೆ ನಿನ್ನ ಅವಶ್ಯಕತೆ ಹೆಚ್ಚು, ಹಿಂದಿನದನ್ನು ಕೈಬಿಡುತ್ತಿರಬೇಕು, ಮುನ್ನುಗ್ಗುತ್ತಿರಬೇಕು. ನೀನು ಹೋಗು!!"

ಪುಟ್ಕಥೆ - ೧೭
"ಅಪ್ಪ ಅಮ್ಮನ ಹತ್ತಿರ ಬಸ್ ಪಾಸ್ ಗಾಗಿ ಕಾಸು ತೆಗೆದುಕೊಳ್ಳುವ ನಿಮಗೆ ನಮ್ಮ ಕಷ್ಟ ಹೇಗೆ ಅರ್ಥವಾಗಬೇಕು?  ಬೆಳಿಗ್ಗೆ ೮ ಕ್ಕೆ ಮುಂಚೆ ಎದ್ದೇಳದ ನೀವುಗಳು ಉಚಿತ ಬಸ್ ಪಾಸ್ ಕೊಟ್ಟರೆ ನಾವು ಸೋಮಾರಿಗಳಾಗ್ತೀವಿ ಅಂತೀರಲ್ಲ, ಯಾವತ್ತಾದರೂ ನಮ್ಮಂತೆ ೪ ಘಂಟೆಗೆ ಎದ್ದು ಪೇಪರ್, ಹಾಲು ಹಾಕಲು ಹೋಗಿದ್ದೀರಾ? ಕಬ್ಬನ್ನು ತರಿಯಲು ಹೋಗಿ ಈ ರೀತಿ ತರಚಿಸಿಕೊಂಡಿದ್ದೀರಾ?" ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಉತ್ತರಿಸಲಾಗದೆ ತಲೆತಗ್ಗಿಸಿದರು ಉಚಿತ ಬಸ್ ಪಾಸ್ ವಿರುದ್ಧ ಮಾತನಾಡಿದ್ದ ಅವರ ಕೆಲವು ಸಹಪಾಠಿಗಳು!!

ಪುಟ್ಕಥೆ - ೧೮
ತನ್ನ ತಾಯಿ ಸತ್ತಾಗಲೂ ಬದಲಾಗದ ವ್ಯಕ್ತಿ ಪತ್ನಿ ಸತ್ತ ತಕ್ಷಣ ಬದಲಾಗಿದ್ದನ್ನು ಕಂಡು ಪ್ರಶ್ನಿಸಿದಳು ಮಗಳು. ಅದಕ್ಕವನು ಹೇಳಿದ್ದು - "ಒಳ್ಳೆಯ ಮಗನಾಗಲಿಲ್ಲ, ಒಳ್ಳೆಯ ಪತಿಯಾಗಲಿಲ್ಲ, ಈಗೊಂದು ಕಡೇ ಅವಕಾಶವಿದೆ, ಒಳ್ಳೆಯ ಅಪ್ಪನಾಗಲು, ಇದನ್ನು ಕಳೆದುಕೊಳ್ಳಲು ಇಷ್ಟವಿಲ್ಲ!!"

ಪುಟ್ಕಥೆ - ೧೯
ಸ್ಚಚ್ಛ ಭಾರತದ ಬಗ್ಗೆ ಹೇಳತೊಡಗಿದ ಜನಪ್ರತಿನಿಧಿ. ತಕ್ಷಣವೇ ಮಹಿಳೆಯರೆಲ್ಲಾ "ಸರ್, ನಮ್ಮ ಹಳ್ಳಿಯಲ್ಲಿ ನೀರು ಸಿಗುವಂತೆ ಮಾಡಿ, ಆಗ ನೋಡಿ ಇಡೀ ಹಳ್ಳಿ ಹೇಗಿರುತ್ತೆ" ಎಂದರು.
'ಆಯ್ತು ಮಾಡಿಸೋಣ' ಎಂದು ಹೇಳಿ ಹೋದ ಜನಪ್ರತಿನಿಧಿ ಇನ್ನೂ ಕಾಣಿಸಿಕೊಂಡಿಲ್ಲವಂತೆ!!

ಪುಟ್ಕಥೆ - ೨೦
"ಅಯ್ಯೋ, ಏನೂ ಕೆಲಸವನ್ನೇ ಮಾಡಲಾಗದಷ್ಟು ಸುಸ್ತು, ಅಮ್ಮನ ಜೊತೆಯಾದರೂ ಹರಟೆ ಹೊಡೆಯೋಣ' ಎಂದುಕೊಂಡು ಮಗಳು ಫೋನ್ ಮಾಡಿದ ತಕ್ಷಣ ೯೦ ವರ್ಷದ ಅಮ್ಮ "ನಾನು ಈಗಷ್ಟೇ ಯೂಟ್ಯೂಬ್ ನಲ್ಲಿ ನೋಡಿಕೊಂಡು, ಮೆಕ್ಸಿಕನ್ ರೈಸ್ ಮಾಡಿದೆ" ಎನ್ನಬೇಕೇ!!
  
- ಸುಧಾ ಜಿ 

ಕಾಮೆಂಟ್‌ಗಳಿಲ್ಲ: