Pages

ಚಕಮಕಿ - ಮೊದಲ ಕ್ರಷ್

 
ಮೊದಲ ಕರು ಪ್ರೀತಿಯಂತೆ. ಮೊದಲ ಕ್ರಷ್. 
ಅಯ್ಯೊ ಯಾವುದನ್ನ ಅಂತ ಹೇಳೋದು? ಕ್ರಷ್ ಆಗದೆ ಯಾವುದು ಇಷ್ಟವಾದದ್ದೇ ಇಲ್ಲ. ಇಷ್ಟವಾದದ್ದು ಇಂದಿಗು ನನ್ನಿಂದ ಯಾವುದು ದೂರವಾಗಿಯೇ ಇಲ್ಲ.
ಅದು ವ್ಯಕ್ತಿ, ವಸ್ತು, ಭಾವ, ಪ್ರದೇಶ, ಚಿಂತನೆ, ಘಟನೆ, ಓದಿದ ಕಲ್ಪನೆ, ಯಾಕೋ ಕಾರಣವೇ ಇಲ್ಲದೆ ಇಷ್ಟವಾಗುವ ಅಪರಿಚಿತರು, ಅರ್ಥವೇ ಇಲ್ಲದೆ ಇಷ್ಟವಾಗುವ ನನ್ನೂರಿನ ಭಾಷಾ ಶೈಲಿ ಮಾತಾಡೋ ಜನ ಒಂದೇ ಎರಡೆ ಅಬ್ಬಬ್ಬ ಕಣ್ಣಾಡಿಸಿದರೆ ಕ್ರಷ್ ಹೊಳೆಯೋ, ಅಲೆ ಎಬ್ಬಿಸಲು ಕಾರಣವಾಗುವ ಸಾಗರವೋ, ತುಂಬಿ ತುಳುಕುವಂತೆ ಮಾಡುವ ಮಳೆಯೋ ಈ ಕ್ರಷ್ ಏನಿದು ಇದರ ವ್ಯಾಪ್ತಿ ಒಬ್ಬ ವ್ಯಕ್ತಿ, ನಿಲುವು ಅಂತ ಒಪ್ಪಿಬಿಟ್ಟರೆ ಅದೊಂದು ಕಾಲದ ಅದ್ಬುತ ರಮ್ಯಕಲ್ಪನೆಯಷ್ಟೇ. 
'ಅಕ್ಕ ಭಾವ ಅಮೀರ್ ಖಾನ್ ನಂತೆ ಸ್ಮಾರ್ಟ್ ಇದ್ದಾರೆ ಕಣೆ, ಹೂ ಅಂದು ಬಿಡು , ನನಗಂತು ಅವರೇ ಭಾವನಾಗಬೇಕು ಬೇರೆ ಯಾರಾದರು ನಾ ಒಪ್ಪೋಲ್ಲ ನೋಡು' ಎಂದಾಗ ತಮ್ಮನ ಮಾತಿನಲ್ಲಿ ಇಣುಕಲಿಲ್ಲವೆ ಈ ಕ್ರಷ್. 
'ಜಾಣ, ದುಡಿಯುವ ಹುಮ್ಮಸ್ಸು ಇದೆ ಕಣೆ, ಯೋಚಿಸಬೇಡ ಅವನಿಗೇನು ಆಸ್ತಿ ಇಲ್ಲ ಅಂತ, ಗಂಡಿಗೆ ದುಡಿಯುವ ಹಂಬಲ ಇರಬೇಕು ಹೂ ಅಂದುಬಿಡು' ಎಂದ ಅಪ್ಪನ ಮಾತಿನಲ್ಲಿ ಇರಲಿಲ್ಲವೇ ಈ ಕ್ರಷ್?
ನಾ ಬಯಸಿ ಉಟ್ಟ, ಬಟ್ಟೆ, ಬಣ್ಣಗಳಲ್ಲಿ, ಆದರಿಸಿ ಉಪಚರಿಸಿ ಹಿಂದೆ ಮುಂದೆ ಸುತ್ತುವ ಪುಣ್ಯಾತ್ಮರೊಂದಿಗೆ ಓಡಾಡುವುದಿಲ್ಲವೇ ಈ ಕ್ರಷ್?
ಕೇಡಿಗಳನ್ನು ಒದ್ದು ಹೆಂಗಸನ್ನು ಕಾಪಾಡುವ ರಾಜ್ ಮಾತಿನ ವರಸೆ ಅಭಿನಯಗಳ ನಡುವೆ ಮನ ತುಂಬಿಕೊಂಡು ಬೆಳೆದ ಚಿತ್ರಗಳಲ್ಲಿ ತುಂಬಿಲ್ಲವೇ ಈ ಕ್ರಷ್? 
ಹಣ್ಣೆಂದರೆ ಮಾವು. ಕೈ ಮೈ ಆದರು ಸೀಸನ್ ಮುಗಿಯುವವರೆಗು ಕಾರ್ ಹುಣ್ಣಮಿ ಬಂದಾತು ಇನ್ನು ತಿನ್ನಬೇಡ ಮಾವು ಅಂತ ಅಮ್ಮ ಬೈದರು ಜೂಸ್ ಅಂಗಡಿಯಲಿ ಮಾವು ಕಂಡಾಕ್ಷಣ ಅದರ ಜೂಸನ್ನೆ ಬಯಸುವ ಮನಸಿಗೆ ಆಗಲಿಲ್ಲವೆ ಅದರೊಂದಿಗೆ ಕ್ರಷ್. 
ತೋಟದಲಿ ಅರಳಿ ನಿಂತ ಹೂಗಳು ಉಟ್ಟಸೀರೆಗೆ ಮ್ಯಾಚಿಂಗ್ ಎಂದೆನಿಸಿ ಗಾಡಿ ಹತ್ತುವೆ ಬಂದೆ ಇರು ರವಿ ಎಂದು ಓಡುವ ನನಗೆ ಹೂಗಳೊಂದಿಗೆ ತುಂಬ ತುಂಬ ಕ್ರಷ್. ಅಯ್ಯೊ ಇನ್ನು ಗೆಳೆಯರ ಬಳಗ ಅವರು ಯಾಕೆ ನನಗೆ ಕ್ರಷ್ ಅಂತ ಹೇಳಹೊರಟರೆ ಯಾರನ್ನ ಯಾಕೆ ಅಂತ ಲಿಸ್ಟ್ ಮಾಡಲಿ? ಅಕ್ಷರದಲಿ ಬಾರದೆ ದೂರ ಉಳಿದು ಅದನ್ನು ಉಳಿದವರು ಓದಿ ಕೋಪಿಸಿಕೊಂಡು ಪೋನಾಯಿಸಿದರೆ ಏನೆಂದು ಉತ್ತರಿಸಲಿ. ಯಾವುದಪ್ಪ ಈ ಹುಚ್ಚು ಕ್ರಷ್? 
ನಾ ಓದಿದ, ಭೇಟಿಯಾದ, ನನ್ನವರಂತೆ ಬದಲಾದ ಬರಹಗಾರರು, ಚಿಂತಕರು, ಸಾಮಾಜಿಕ ಕಳಕಳಿಯ ಜೀವಗಳು ಎಲ್ಲಿ ತೂಗಲಿ. 
ಏ ಕ್ರಷ್ ಬೇಕಿಲ್ಲ ನನಗೆ ನಿನ್ನ ಹೊದಿಕೆ. ನನಗೆ ಈ ಬದುಕು ಇದರ ಎಳೆಗಳು ಜೀವಂತಿಕೆಯೇ ನನ್ನ ಕ್ರಷ್.

ಕಾಮೆಂಟ್‌ಗಳಿಲ್ಲ: