Pages

ಅನುವಾದಿತ ಕವಿತೆ - ಸಮತೆ ಇರದೆ ಪ್ರಗತಿ ಬರುವುದೆ



ತನ್ನಲ್ಲಿ ಕಸುವಿದ್ದರೂ ಸ್ತ್ರೀ
ಕೋಮಲೆಯಂತೆ ನಟಿಸಿ 
ಬಸವಳಿದಿರುವಂತೆ
ಬೇನೆಯಲ್ಲೂ ಬಲಾಢ್ಯನೆಂಬ 
ವೇಷ ಧರಿಸಿ 
ಪುರುಷನೂ ದಣಿದಿದ್ದಾನೆ

ತಿಳಿದವಳಾದರೂ ಹೆಣ್ಣು 
ಮೌನ ವಹಿಸಿ ವಹಿಸಿ 
ಮರುಗಿದಂತೆ
ಎಲ್ಲ ಬಲ್ಲವನೆಂಬ
ನಿರೀಕ್ಷಾಭಾರಕ್ಕೆ
ಗಂಡೂ ಸಹ ಬಳಲಿ ಬೆಂಡಾಗಿದ್ದಾನೆ

ಅಳುಮುಂಜಿಗಳೆಂಬ
ಆರೋಪಕೆ ಅವಳು ಅಂಜಿರುವಂತೆ
ಅತ್ತು ಹಗುರಾಗಲು ಅವಕಾಶವೀಯದ ಸಮಾಜಕೆ
ಅವನೂ ಸಹ ಹಿಡಿಶಾಪವಿತ್ತಿದ್ದಾನೆ

ಇಲ್ಲಿ ವನಿತೆ 
ವೃತ್ತಿ, ವೇತನವೆರಡರಲ್ಲು
ತಾರತಮ್ಯದಿ ತಲ್ಲಣಿಸಿರೆ
ಅಲ್ಲಿ ಒಬ್ಬನೇ
ಸಂಸಾರವನ್ನಿಡೀ ಸಲಹಲು 
ಹಲವು ರೀತಿ ಹೆಣಗುತ್ತಿದ್ದಾನೆ

ಒಂದೆಡೆ
ತಂತ್ರಜ್ಞಾನದಿ
ಹೆಂಗಸು ತಾತ್ಸಾರವ ಕಂಡಂತೆ
ಇನ್ನಂದೆಡೆ
ತುತ್ತು ತಿನಿಸೊ ತೃಪ್ತಿಯನೆ 
ಹೊಂದಲಿಲ್ಲ ಗಂಡಸು

ಹೆಣ್ಣಿನದು
ಸ್ವತಂತ್ರಕಾಗಿ 
ಕಠಿಣ ನಡಿಗೆಯಾದರೆ
ಗಂಡಸಿಗದು ಸುಲಭ ದೊರೆತು 
ಅಮೂಲ್ಯ ಮೌಲ್ಯ
ಕಳಕೊಂಡಿರೆ

ಈ ಪಿತೃರಾಜ್ಯ ಈರ್ವರಿಗೂ
ಪೀಡೆಯಾಗಿ ಪರಿಣಮಿಸಿರೆ
ಸಮತೆ ಎಲ್ಲಿ ಬಂದೀತು
ಪ್ರಗತಿ ಎಲ್ಲಿ ಕಂಡೀತು
                           - ಉಷಾಗಂಗೆ                                                                 

ಕಾಮೆಂಟ್‌ಗಳಿಲ್ಲ: