Pages

ಲೇಖನ - ರೂಪಶ್ರೀ ಸಾವು ಸಮರ್ಥನೀಯವೇ?


ರೂಪಶ್ರೀ ಅವರ ಸಾವನ್ನು ತಪ್ಪಿಸಬಹುದಾಗಿತ್ತು. ಉಮಾಪತಿ ಎಂಬುವವರ ಪತ್ನಿ ರೂಪಶ್ರೀ. 6 ವರ್ಷದ ಪುತ್ರ ಹಾಗೂ ಒಂದೂವರೆ ವರ್ಷದ ಪುತ್ರಿಯೊಡನೆ ಗೃಹಿಣಿಯಾಗಿ ಸಂತೋಷದ ಜೀವನ ನಡೆಸಿದ್ದರು. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಒಂದು ವಾರದ ಹಿಂದೆ ಮೈಸೂರಿನ ಚೆಲುವಾಂಬಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಉದರದರ್ಶಕ (ಲ್ಯಾಪ್ರೊಸ್ಕೋಪ್) ದ ಮೂಲಕ ಟ್ಯುಬೆಕ್ಟಮಿ ಮಾಡಲಾಗಿತ್ತು. ಆದರೆ ಆಕೆ ಚೇತರಿಸಿಕೊಳ್ಳಲಿಲ್ಲ. ರಕ್ತಸ್ರಾವ ನಿಲ್ಲದ ಕಾರಣ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಅಪೊಲೊ ಆಸ್ಪತ್ರೆಗೆ ಕರೆದೊಯ್ಯುವಂತೆ ಚೆಲುವಾಂಬ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. 
ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರು ರೂಪಶ್ರೀಯವರ ಯಕೃತ್ (ಲಿವರ್) ಮತ್ತು ಕರುಳಿಗೆ ಘಾಸಿಯಾಗಿರುವುದನ್ನು ಪತ್ತೆಮಾಡಿದ್ದು ರಕ್ತಸ್ರಾವವನ್ನು ಚಿಕಿತ್ಸೆ ಮೂಲಕ ನಿಲ್ಲಿಸಿದ್ದರು. ಆದರೂ ಆಕೆ ಬದುಕುಳಿಯಲಿಲ್ಲ. ವೈದ್ಯಕೀಯ ಕ್ಷೇತ್ರದ ನಿರ್ಲಕ್ಷ್ಯವೇ ಈ ಆರೋಗ್ಯವಂತ ಮಹಿಳೆಯನ್ನು ಬಲಿ ತೆಗೆದುಕೊಂಡಿತು. ಇಬ್ಬರು ಮಕ್ಕಳನ್ನು ತಾಯಿವಾತ್ಸಲ್ಯದಿಂದ ವಂಚಿತರನ್ನಾಗಿಸಿತು. 
ಇಲ್ಲಿ ವೈದ್ಯರ ಬೇಜವಾಬ್ದಾರಿ ಎಂಬ ಅಂಶದ ಜೊತೆಗೆ ಅನೂಚಾನವಾಗಿ ನಡೆದುಬಂದಿರುವ ಪಿತೃಪ್ರಧಾನ ವ್ಯವಸ್ಥೆಯ ಕೊಡುಗೆಯೂ ಇದೆ. ಈ ವ್ಯವಸ್ಥೆಯಡಿ ಕುಟುಂಬಕಲ್ಯಾಣ (ಸಂತಾನಶಕ್ತಿಹರಣ) ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ನಿರ್ದೇಶಿಸಲಾಗುತ್ತಿದೆ. ವಾಸ್ತವವಾಗಿ ಈ ಕುಟುಂಬಕಲ್ಯಾಣ ಯೋಜನೆಯ ಉದ್ದೇಶ ಮಿತಿಮೀರಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದಾಗಿದೆ. 
1970ರಲ್ಲಿ ದೇಶದಲ್ಲಿ ಕುಟುಂಬಕಲ್ಯಾಣ ಯೋಜನೆಯಡಿ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಪ್ರಮುಖವಾಗಿ ಕಂಡುಬಂದಿತು. 1975-77ರಲ್ಲಿ ಅಂದರೆ ರಾಜಕೀಯ ತುರ್ತುಪರಿಸ್ಥಿತಿಯ ಕಾಲದಲ್ಲಿ ಸಂಜಯ್ ಗಾಂಧಿ ಅತಿ ಉತ್ಸಾಹ ಮತ್ತು ಪೂರ್ವಗ್ರಹದಿಂದ ವ್ಯಾಸೆಕ್ಟಮಿಯನ್ನು ಅತಿ ಹೆಚ್ಚಾಗಿ ನಡೆಸಿದ್ದರು. ಅದು ಜನರು ಕಾಂಗ್ರೆಸ್ ವಿರುದ್ಧ ತಿರುಗಿಬೀಳುವಂತೆ ಮಾಡಿತು. ಅದು ಜನರ ಮೇಲೆ ಬಲವಂತವಾಗಿ ಹೇರಲ್ಪಟ್ಟಿದ್ದು ರಾಜಕೀಕರಣಗೊಂಡಿತ್ತು. ಆ ಸಂದರ್ಭದಲ್ಲಿ ಹಲವಾರು ಯುವಜನರು (ವಿವಾಹಿತರು/ಅವಿವಾಹಿತರು) ನಗದು ಬಹುಮಾನದ ಆಸೆಗಾಗಿ ವ್ಯಾಸೆಕ್ಟಮಿಗೆ ಒಳಗಾಗಿದ್ದರು.
ಹಿಂದೆ ಮಹಿಳೆಯರು ಹೆರಿಗೆ ಆದ ಸಂದರ್ಭದಲ್ಲಿ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದಿತ್ತು. ಅದು ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆಯಾಗಿದ್ದು ಹಲವು ದಿನ ಆಸ್ಪತ್ರೆಯಲ್ಲಿ ಇರಬೇಕಿತ್ತು. ನಂತರದಲ್ಲಿ ಲ್ಯಾಪ್ರೊಸ್ಕೋಪ್ ತಂತ್ರಜ್ಞಾನ ಪರಿಚಯವಾಗಿದ್ದು, ಟ್ಯುಬೆಕ್ಟಮಿ (ಮಹಿಳಾ ಸಂತಾನಹರಣ ಶಸ್ತ್ರಚಿಕಿತ್ಸೆ) ಯನ್ನು ಪ್ರಚುರಪಡಿಸಿತು. 1980ರ ಆಸುಪಾಸಿನಲ್ಲಿ ಟ್ಯುಬೆಕ್ಟಮಿಯ ವಿಧಾನ ವ್ಯಾಸೆಕ್ಟಮಿಯನ್ನು ಹಿಂದಿಕ್ಕಿತು. ಅದರ ಫಲವಾಗಿ ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸಾ ಶಿಬಿರಗಳನ್ನೇ ಏರ್ಪಡಿಸಲಾಗುತ್ತಿತ್ತು. 


ಇದರಿಂದಾಗಿ ಈಗ ಕುಟುಂಬಕಲ್ಯಾಣ ಶಸ್ತ್ರಚಿಕಿತ್ಸೆಯ ಹೊರೆ ಕೇವಲ ಮಹಿಳೆಯರಿಗೆ ಸೀಮಿತವಾಗಿದೆ. ಶಾಲೆಗಳು ಜನನನಿಯಂತ್ರಣದ ಶಿಬಿರಗಳ ತಾಣವಾಗುತ್ತಿತ್ತು. ಬೆಂಚುಗಳು ಶಸ್ತ್ರಚಿಕಿತ್ಸೆ ನಡೆಯುವ ಟೇಬಲ್ ಗಳಾಗಿ ಪರಿವರ್ತನೆಗೊಂಡಿದ್ದವು. ನೈರ್ಮಲ್ಯತೆ, ರಕ್ಷಣೆ, ಗೌಪ್ಯತೆ ಸೇರಿದಂತೆ ಈ ಶಸ್ತ್ರಚಿಕಿತ್ಸೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಉದಾಹರಣೆಗೆ, ಪ್ರತಿ ಲ್ಯಾಪ್ರೊಸ್ಕೋಪ್ ಶಸ್ತ್ರಚಿಕಿತ್ಸೆಗೆ ಅಗತ್ಯ ಉಪಕರಣಗಳನ್ನು 10-20ನಿಮಿಷಗಳ ಸ್ಟರ್ಲೈಸೇಷನ್ ಅಗತ್ಯ. ಇದು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ ಎಂಬುವುದು ಪ್ರಶ್ನೆ. ಶಿಬಿರಗಳಲ್ಲಿ ಮಹಿಳೆಯರನ್ನು ಬೆಂಚುಗಳ ಮೇಲೆ ಮಲಗಿಸಿ ವೈದ್ಯರು ಒಂದು ಪ್ರಕರಣ ಮುಗಿಸಿ ಇನ್ನೊಂದರತ್ತ ದಡಬಡ ನಡೆಯುತ್ತಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಆಪರೇಷನ್ ಗಳನ್ನು ಮಾಡಿ ಮುಗಿಸುವ ಪ್ರಚಂಡತೆ ಅವರದ್ದು. ಅಧಿಕ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಪ್ರಕರಣಗಳನ್ನು ನಡೆಸುವ ವೈದ್ಯರು ಹೀರೋಗಳೆನಿಸಿಕೊಳ್ಳುವ ಜೊತೆಗೆ ಪ್ರಶಸ್ತಿಗೂ ಭಾಜನರಾಗುವ ಅವಕಾಶ ಇರುತ್ತದೆ. ಆರೋಗ್ಯ ಇಲಾಖೆಯ ಗುರಿ ಸಾಧಿಸುವ ಆತುರ ಎಲ್ಲರದ್ದು. 
ಈಗ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯೇ ಜನಪ್ರಿಯವಾಗಿದೆ. ಶೇಕಡ 95ಕ್ಕೂ ಹೆಚ್ಚು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಫಲಾನುಭವಿಯ ಸಾವು ಸಂಭವಿಸಿದರೂ ಅವು ವರದಿಯೂ ಆಗದೆ ಬಹಿರಂಗವಾಗದೆ, ಬೆಳಕಿಗೆ ಬಾರದೆ ಉದ್ದೇಶಪೂರ್ವಕವಾಗಿ ಹಿಂದಡಿಗೆ ತಳ್ಳಲ್ಪಟ್ಟಿವೆ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳೂ ಸಹ ದುರ್ಬಲವಾಗಿವೆ. ಟ್ಯುಬೆಕ್ಟಮಿ ನಂತರ ಫಲಾನುಭವಿ ಮಹಿಳೆಯು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಅದರ ಅಂಕಿ-ಸಂಖ್ಯೆಗಳು ಉಲ್ಲೇಖವಾಗುವುದಿಲ್ಲ. 
ಈ ಶಸ್ತ್ರಚಿಕಿತ್ಸೆಗೊಳಗಾದ ಬಹಳ ಮಹಿಳೆಯರು ಜನನ ಮಾರ್ಗದ ಸೋಂಕುಗಳಿಗೆ ಒಳಗಾಗುತ್ತಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಗರ್ಭಕೋಶವು ಸ್ಪಷ್ಟವಾಗಿ ಗೋಚರಿಸಲು ಯೋನಿಯ ಮೂಲಕ ರಾಡ್ ಅಳವಡಿಸಲಾಗುತ್ತಿತ್ತು. ಅದನ್ನು ನಂತರ ತೆಗೆದರೂ ಅದರಿಂದ ಉಂಟಾಗುವ ಯಾತನೆ ಫಲಾನುಭವಿಗಳನ್ನು ಕಾಡುತ್ತದೆ. ಆಘಾತಕಾರಿಯೂ ಆಗಿರುತ್ತದೆ. ಹಲವರು ಮೈಕೈನೋವಿನಿಂದ ಬಳಲುವುದು ಉಂಟು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅವರ ಉದರಕ್ಕೆ ಗಾಳಿಯನ್ನು ತುಂಬಿಸಬೇಕಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಅದಕ್ಕಾಗಿ ಸೈಕಲ್ ಪಂಪ್ ಬಳಸಿ ಗಾಳಿಯನ್ನು ತುಂಬಲಾಗುತ್ತಿತ್ತು ಎಂದು ವರದಿಯಾಗಿದೆ. ಅದರಿಂದ ಕೂಡ ತೊಂದರೆ ಉಂಟಾಗುತ್ತದೆ. ಅದನ್ನು ತದೆಯುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸಾರಜನಕ ಅನಿಲ (ನೈಟ್ರೋಜನ್ ಗ್ಯಾಸ್) ಬಳಸುವುದು ಸೂಕ್ತ. ಆದರೆ ಸಾರಜನಕ ಅನಿಲವನ್ನು ಗ್ರಾಮಾಂತರ ಪ್ರದೇಶದಲ್ಲಿ ಪೂರೈಕೆ ಮಾಡುವುದು ಕಷ್ಟವಾಗಿದೆ. ಮಹಿಳೆಯರನ್ನು ಈ ರೀತಿಯಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ರಾಷ್ಟ್ರ ಕಟ್ಟುವ ವಿಚಾರದಲ್ಲಿ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ, ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲ ಎಂಬ ವಾದವೂ ಇದೆ. 
ಕುಟುಂಬ ಕಲ್ಯಾಣ ಕಾರ್ಯಕ್ರಮವು ದೇಶದ ಹಿತಾಸಕ್ತಿಯ ವಿಚಾರ ಆರಂಭಿಕ ಹಂತದಲ್ಲಿ ಕುಟುಂಬ ಕಲ್ಯಾಣವು ಪುರುಷರನ್ನೇ ದೃಷ್ಟಿಯಲ್ಲಿಟ್ತುಕೊಂಡಿತ್ತು. ಶೇಕಡ 75 ಮಂದಿ ಪುರುಷರು ವ್ಯಾಸೆಕ್ಟಮಿಗೆ ಒಳಗಾಗಿದ್ದರು. ಅದು ಸರಳ ಮತ್ತು ಸುರಕ್ಷಿತವಾಗಿತ್ತು. ಆದರೆ ನಮ್ಮ ಪಿತೃಪ್ರಧಾನ ವ್ಯವಸ್ಥೆಗೆ ಪ್ರಿಯವಾಗಿರಲಿಲ್ಲ. ಹಾಗಾಗಿ ಮಕ್ಕಳನ್ನು ಹೆರುವ ಮಹಿಳೆಯರೇ ಈ ಶಸ್ತ್ರಚಿಕಿತ್ಸೆಯ ನೋವು ಅನುಭವಿಸುವಂತೆ ಅದನ್ನು ಜನಪ್ರಿಯಗೊಳಿಸಲಾಯಿತು. 
ನಂತರ ಆಯೋಜಿತವಾದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಲ್ಯಾಪ್ರೊಸ್ಕೋಪ್ ತಂತ್ರಜ್ಞಾನದ ಟ್ಯುಬೆಕ್ಟಮಿಯನ್ನೇ ಉತ್ತೇಜಿಸಲಾಗುತ್ತಿದೆ. ಈ ದಿನಗಳಲ್ಲಿ ಪುರುಷರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಎಲ್ಲಿಯೂ ಮಾತೇ ಇಲ್ಲ. 
ಇಂತಹ ಮಹಿಳಾ ವಿರೋಧಿ ಪರಿಸ್ಥಿತಿಯಲ್ಲಿ ರೂಪಶ್ರೀಯವರು ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ! ಟ್ಯುಬೆಕ್ಟಮಿಯು ಶಾಶ್ವತವಾಗಿ ಜನನ ನಿಯಂತ್ರಣ ಮಾಡುವುದು ಸಾಮಾನ್ಯ ಜ್ಞಾನ. ಅಲ್ಲದೆ ಈ ಆಧುನಿಕ ಕಾಲದಲ್ಲಿ ಗರ್ಭ ಧರಿಸುವುದನ್ನು ತಡೆಯಲು ಅತ್ಯುತ್ತಮವಾದ ಕಾಂಡೋಮ್ ಗಳಿವೆ. ಕಾಂಡೋಮ್ ವೈಫಲ್ಯ ಅಥವಾ ಅಸುರಕ್ಷಿತ ಲೈಂಗಿಕ ಚಟುವಟಿಕೆ ನಿಯಂತ್ರಣಕ್ಕಾಗಿ “ಬೆಳಗಿನ ಮಾತ್ರೆ” ಇದೆ. ಇವೆಲ್ಲದರ ಜೊತೆಗೆ ಅನಗತ್ಯ ಗರ್ಭಧಾರಣೆ ತಡೆಯುವುದಕ್ಕೆ ನೈಸರ್ಗಿಕ ವಿಧಾನಗಳೂ ಇವೆ.
ಹೀಗಾಗಿ ಮಹಿಳೆಯರ ದೇಹದ ಮೇಲೆ ಆಕ್ರಮಣಕಾರಿ ಹಸ್ತಕ್ಷೇಪವಾಗುವ ಬಗ್ಗೆ ಜಾಗೃತಿ ಮೂಡಿಸಬೇಕಲ್ಲವೇ ಎಂಬುದು ಈಗಿನ ಪ್ರಶ್ನೆಯಾಗಿದೆ. ಜನನ ಪ್ರಮಾಣ ನಿಯಂತ್ರಣಕ್ಕೆ ಉನ್ನತ ಮಟ್ಟದ ತಂತ್ರಜ್ಞಾನ ಇರುವಾಗ ಕುಟುಂಬಗಳು, ವೈದ್ಯರು ಹಾಗೂ ಸಮಾಜ ಹೆಂಗಸರನ್ನೇ ಏಕೆ ಜನಸಂಖ್ಯೆಯ ನಿಯಂತ್ರಣಕ್ಕೆ ಗುರಿಯಾಗಿಸುತ್ತಿವೆ? ಹಾಗೆ ನೊಡಿದರೆ ಪುರುಷರ ವ್ಯಾಸೆಕ್ಟಮಿಯೇ ಸುರಕ್ಶಿತವಾದದ್ದು. ವ್ಯಾಸೆಕ್ಟಮಿಗೆ ಒಳಗಾದ ಸಂದರ್ಭದಲ್ಲಿ ಯಾವುದೇ ಪುರುಷ ಸಾವಿಗೀಡಾದ ಉದಾಹರಣೆ ಇಲ್ಲ. ಯಾವುದೇ ಕನಿಷ್ಟ ಆಕ್ರಮಣಶೀಲವಾದ ತಂತ್ರಜ್ಞಾನವೂ ಸಹ ಶೇಕಡ 100ರಷ್ಟು ಸುರಕ್ಷಿತವಲ್ಲ. ಇದೇ ನಿಯಮ ಲ್ಯಾಪ್ರೊಸ್ಕೋಪ್ ಗೂ ಅನ್ವಯಿಸುತ್ತದೆ. 
ಇಲ್ಲಿ ನಿಜವಾದ ಅಪರಾಧಿ ಪಿತೃಪ್ರಧಾನ ಮೌಲ್ಯದ ವ್ಯವಸ್ಥೆಯಾಗಿದೆ. ಈ ಸೈಲೆಂಟ್ ಕಿಲ್ಲರ್ (ಮೌನ ಕೊಲೆಗಾರ) ಹಾಗೂ ಮಹಿಳೆಯರನ್ನು ಬಲಿಪಶುಮಾಡಿರುವ ಈ ಪಿತೃಪ್ರಧಾನ ವ್ಯವಸ್ಥೆಯನ್ನು ಶಿಕ್ಶಿಸುವವರು ಯಾರು? ಅದೇನು ಕಣ್ಣಿಗೆ ಗೋಚರವಾಗಬಲ್ಲ ಅಪರಾಧಿಯೇ? ನಮ್ಮದು ಆರೋಗ್ಯವಂತ ತಾಯಂದಿರ ಮುಕ್ತ ಸಮಾಜವಾಗವೇಕೆ ಎಂಬುದರ ಬಗ್ಗೆ ವೈದ್ಯರು ಹಾಗೂ ಆರೋಗ್ಯರಕ್ಷಕರು ಮತ್ತು ಸಮಾಜ ಈಗ ಚಿಂತಿಸಬೇಕಾಗಿದೆ. ಯಾವಾಗ ಎಲ್ಲ ತಾತ್ಕಾಲಿಕ ವಿಧಾನಗಳು ವಿಫಲವಾಗುತ್ತವೋ ಆಗ ವೈದ್ಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು ಅಲ್ಲದೆ ಅದು ಪುರುಷರ ಮೇಲೆ ನಡೆಯಬೇಕು. ಮಹಿಳೆಯರ ದೇಹದೊಂದಿಗೆ ಇಂತಹ ಆಟ ಸಲ್ಲದು. ಇದೇ ದಿಕ್ಕಿನಲ್ಲಿ ಮಹಿಳೆಯರು ಕೂಡ ತಮ್ಮ ಧ್ವನಿಯನ್ನು ಏರಿಸಬೇಕು. 
                                                      - ಡಾ. ರತಿ ಈ ಆರ್

ಸಿನಿಮಾ ವಿಮರ್ಶೆ: "ಪಿಂಕ್"



ದೆಹಲಿಯಲ್ಲಿ ದುಡಿಯುತ್ತ ಒಟ್ಟಿಗಿರುವ ಮೂವರು ಗೆಳತಿಯರು - ಮೀನಲ್ (ತಾಪ್ಸಿ ಪನ್ನು), ಫಲಕ್ (ಕೀರ್ತಿ ಕುಲ್ಹಾರಿ) ಮತ್ತು ಆಂಡ್ರಿಯಾ (ಆಂಡ್ರಿಯಾ ತಾರಿಯಾಂಗ್). ಮೂವರೂ ಆಧುನಿಕ ಸಮಾಜದ ಸ್ವತಂತ್ರ ಯುವತಿಯರು. ಮೀನಲ್ ಈವೆಂಟ್ ಮ್ಯಾನೇಜರ್ ಅದರೆ, ಫಲಕ್ ಕಾರ್ಪೋರೆಟ್ ಕಂಪನಿಯ ಉದ್ಯೋಗಿ, ಆಂಡ್ರಿಯಾ ನೌಕರಿಯಲ್ಲಿರುವ ಮೇಘಾಲಯದ ಹುಡುಗಿ. ಒಂದು ರಾತ್ರಿ ಸೂರಜ್ ಕುಂಡ್ ನಲ್ಲಿ ರಾಕ್ ಸಂಗೀತ ಸಭೆಗೆ ಹೋಗಿ, ತಮಗೆ ಪರಿಚಿತನಿದ್ದ ಸ್ನೇಹಿತನ ಗೆಳೆಯರೊಂದಿಗೆ ಅವರ ಒತ್ತಾಯದ ಮೇರೆಗೆ ರೆಸಾರ್ಟ್ ಗೆ ಊಟಕ್ಕೆ ಹೋಗುತ್ತಾರೆ. ಒಟ್ಟಿಗೆ ಕುಳಿತು ಮಧ್ಯ ಸೇವಿಸುತ್ತಾರೆ, ಒಂದೆರಡು ನಾನ್-ವೆಜ್ ಜೋಕ್ ಗಳನ್ನು ಹಂಚಿಕೊಳ್ಳುತ್ತಾರೆ. ಹುಡುಗರಲ್ಲಿ ಒಬ್ಬನು ಮೀನಲ್ ಳನ್ನು ಲೈಂಗಿಕವಾಗಿ ಅತಿಕ್ರಮಿಸಲು ಪ್ರಯತ್ನಿಸಿದಾಗ ಅವಳು ಬೇಡ ಎಂದು ಪ್ರತಿರೋಧಿಸುವಳು. ಆವಳ ಪ್ರತಿರೋಧವನ್ನು ಲೆಕ್ಕಿಸದೇ ರಾಜ್ವೀರ್ ಮುಂದುವರಿದಾಗ ಒಂದು ಬಾಟಲ್ ತೆಗೆದು ಅವನ ತಲೆಗೆ ಹೊಡೆಯುತ್ತಾಳೆ. 

ಅನಿರುದ್ಧ ರಾಯ್ ಚೌಧುರಿ ನಿರ್ದೇಶನದ 'ಪಿಂಕ್' ಒಂದು ಸ್ತರದಲ್ಲಿ ಈ ಘಟನೆಯ ಪರಾಮರ್ಶೆ ಎನ್ನಬಹುದು. ಘಟನೆಯ ನಂತರ ಹುಡುಗಿಯರ ಮೇಲೆ ನಡೆವ ಹಲ್ಲೆಗಳು, ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಯತ್ನಗಳು, ಹುಡುಗಿಯರನ್ನೇ ಆರೋಪಿಗಳಾಗಿಸಿ ನ್ಯಾಯಲಯಕ್ಕೆ ಕರೆತರುವುದು ಹಾಗೂ ನ್ಯಾಯಾಲಯದಲ್ಲಿ ನಡೆವ ವಾದ-ವಿವಾದಗಳು. ಆದರೆ ಮತ್ತೊಂದು ಸ್ತರದಲ್ಲಿ ಈ ಸಿನಿಮಾ ನಮ್ಮ ಸಂಕುಚಿತ ಸಾಮಾಜಿಕ ಆಲೋಚನೆಯನ್ನು ಪ್ರಶ್ನಿಸುವ ದಿಟ್ಟ ಪ್ರಯತ್ನ. ಬೇರೊಬ್ಬರು ತೊಟ್ಟ ಉಡುಗೆತೊಡುಗೆಗಳಿಂದ, ಅವರ ವೈಯಕ್ತಿಕ ಸಂಬಂಧಗಳಲ್ಲಿನ ಘರ್ಷಣೆಗಳಿಂದ, ವ್ಯಕ್ತಿ ಹೀಗೆ ಎಂದು ಪೂರ್ವನಿರ್ಧಾರಿತ ಅಭಿಪ್ರಾಯಗಳನ್ನು, ಪೂರ್ವಾಗ್ರಹಗಳನ್ನು ಬೆಳೆಸಿಕೊಳ್ಳುವ, ಅವರ ಚಾರಿತ್ರ್ಯವನ್ನು ಅಳೆವ ನಮ್ಮ ಆಲೋಚನೆಯ ಪರಿಯನ್ನು ಸಿನಿಮಾ ಸೂಕ್ಷ್ಮವಾಗಿ ಪ್ರಶ್ನಿಸುತ್ತದೆ.

ಹುಡುಗಿಯರ ಪರ ವಕೀಲನಾಗಿ ದೀಪಕ್ ಸೆಹಗಲ್ (ಅಮಿತಾಭ್ ಬಚ್ಚನ್) ಕೇಳುವ ಪ್ರಶ್ನೆಗಳು, ಮಂಡಿಸುವ ವಾದ ಸಿನಿಮಾದ ಹೈಲೈಟ್. ಹೆಣ್ಣಿನ ಕನ್ಯತ್ವ ಅವಳ ಸ್ವತಂತ್ರ ಆಯ್ಕೆ, ಆಕೆಯ ಕನ್ಯತ್ವಕ್ಕೂ ಚಾರಿತ್ರ್ಯದ ಪಾವಿತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ. ಹೆಣ್ಣೊಬ್ಬಳು ಬೇಡ ಎಂದರೆ ಅದು ಬೇಡವೆಂದೇ ಅರ್ಥ, ಇದಕ್ಕೆ ಯಾವುದೇ ವ್ಯಾಖ್ಯಾನ ಅಥವಾ ವಿವರಣೆ ಬೇಕಿರುವುದಿಲ್ಲ. ಅವಳ ನಿರಾಕರಣೆಯ ಆಯ್ಕೆಯನ್ನು ಗೌರವಿಸುವಲ್ಲಿ ಅವಳ ಚಾರಿತ್ರ್ಯದ ಕುರಿತಾದ, ಪಾವಿತ್ರ್ಯದ ಕುರಿತಾದ ಇತರೇ ಯಾವುದೇ ಪ್ರಶ್ನೆಗಳು - ಅಭಿಪ್ರಾಯಗಳು ಅಪ್ರಸ್ತುತವೆಂದು ನೇರವಾಗಿ, ಸ್ಪಷ್ಟವಾಗಿ, ದಿಟ್ಟವಾಗಿ ಸಿನಿಮಾ ವಾದಿಸುತ್ತದೆ. 

ಹಣ ಪಡೆದು ದೈಹಿಕ ಸಂಬಂಧದಲ್ಲಿ ತೊಡಗುತ್ತಿದ್ದರೆಂದು ಅಪವಾದ ಹೊರಿಸಿ, ಅದನ್ನು ಸಾಬೀತು ಪಡೆಸಲು ಹೊರಟಾಗ ಫಲಕ್ "ಹೌದು, ಹಣ ಪಡೆದಿದ್ದೆವು, ಆದರೆ ಹಣ ಪಡೆದ ನಂತರವೂ ಬೇಡವೆನ್ನುವ ಸ್ವಾತಂತ್ರ್ಯವಿಲ್ಲವೇ?" ಎಂದು ಕೇಳುವಲ್ಲಿ ಒಬ್ಬ ವ್ಯಕ್ತಿಯ ಸಮ್ಮತಿಯಿಲ್ಲದೆ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದು ಸರಿಯೇ ಎಂಬ ಅತ್ಯಂತ ಪ್ರಸ್ತುತ ಪ್ರಶ್ನೆಯಿದೆ. ಈ ಬಗೆಯ ಮತ್ತಷ್ಟು ಪ್ರಸ್ತುತ ಪ್ರಶ್ನೆಗಳನ್ನು ಕೇಳುವ ಸಿನಿಮಾ ನಮ್ಮ ಆಲೋಚನೆಗಳಲ್ಲಿರುವ ಸಂಕುಚಿತತೆಯನ್ನು ಸೂಕ್ಷ್ಮವಾಗಿ ತಿವಿಯುವಲ್ಲಿ ಯಶಸ್ವಿಯಾಗುತ್ತದೆ. 

ಸಿನಿಮಾದ ಮತ್ತೊಂದು ಸನ್ನಿವೇಶದಲ್ಲಿ ಪಾರ್ಕಿನಲ್ಲಿ ಮೀನಲ್ ದೀಪಕ್ ಸೆಹಗಲ್ ನ್ನೊಂದಿಗೆ ನಡೆದು ಬರುವಾಗ, ಎದುರಾದವರು ಸೂರಜ್ ಕುಂಡ್ ಹಗರಣದವಳು ಇವಳೇ ಅಲ್ಲವೇ ಎಂದು ಮಾತಾಡಿಕೊಳ್ಳುವಾಗ ಮೀನಲ್ ಜನರಿಗೆ ತನ್ನ ಗುರುತು ಸಿಗಬಾರದು ಎಂದು ಜರ್ಕಿನ್ ನ ಕ್ಯಾಪ್ ಅನ್ನು ತಲೆಗೇರಿಸಿಕೊಳ್ಳುತ್ತಾಳೆ. ಆದರೆ ನಂತರ ಸದ್ದಿಲ್ಲದೆ ಅದನ್ನು ಹಿಂದೆ ತಳ್ಳಿ ತಪ್ಪು ಅವಳದಲ್ಲ, ತಲೆಮರೆಸಿಕೊಂಡು ಬದುಕಬೇಕಿಲ್ಲ ಎಂದು ಮಾತಿಲ್ಲದೆ ಸಾಂಕೇತಿಕವಾಗಿ ಹೇಳುವಲ್ಲಿ ಚಿತ್ರಕಥೆ ಬರೆದವನ ಹಿಡಿತ ಕಾಣಸಿಗುತ್ತದೆ. ಬಾಡಿಗೆ ಮನೆಯ ಮಾಲಿಕ ಹುಡುಗಿಯರೊಡನೆ ನಡೆದುಕೊಳ್ಳುವ ಪರಿಯಲ್ಲಿರುವ ಸಭ್ಯತೆ ಹಾಗು ನೆರೆಹೊರೆಯವರ ಕಣ್ನೋಟಗಳಲ್ಲಿರುವ ವಿಕೃತತೆಯ ನಡುವಿನ ಕಾಂಟ್ರಾಸ್ಟ್ ಸಿನಿಮೀಯವೆನಿಸದೆ ನೈಜವೆನಿಸುವಂತೆ ಚಿತ್ರೀಕರಿಸಿರುವುದು ನಿರ್ದೇಶಕನ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ.
ಹಾಗೆಯೇ ಸಾಕ್ಷಿಯೊಬ್ಬನ ವರ್ತನೆ ಕುರಿತು ದೀಪಕ್ - "I object to this awkward performance. He is overacting." ಎನ್ನುವಲ್ಲಿನ ವ್ಯಂಗ್ಯ ಚೂಪಾಗಿದೆ. ಪೂರ್ವೋತ್ತರದವರ ಕುರಿತು ಸಮಾಜದಲ್ಲಿರುವ ಪೂರ್ವಗ್ರಹಿಕೆಯತ್ತ ಕೂಡ ಸಿನಿಮಾ ಪ್ರಶ್ನೆಗಳನ್ನು ಒಡ್ಡುತ್ತದೆ. ಇಷ್ಟೆಲ್ಲಾ ಸಂಕೀರ್ಣ ವಿಷಯಗಳನ್ನು ಒಟ್ಟಿಗೆ ಬಿಗಿಯಾಗಿ ಕಟ್ಟಿಕೊಡುವಲ್ಲಿ ಸಿನಿಮಾದ ಗೆಲುವಿದೆ.

ನಟನೆಯಲ್ಲಿ ನೈಜತೆಯನ್ನು ಬಹುತೇಕ ಎಲ್ಲರೂ ಕಾಪಾಡಿಕೊಂಡಿರುವಂತೆನಿಸುತ್ತದೆ. ಸಂಗೀತ ಕಥೆಗೆ ತಕ್ಕಂತಿದ್ದು, ಇಬ್ಬರು ಪಾಕಿಸ್ತಾನಿ ಗಾಯಕಿಯರಿಂದ ಎರಡು ಹಾಡುಗಳನ್ನು ಹಾಡಿಸಿದ್ದಾರೆ. ಸಿನಿ ಮಾಧ್ಯಮದಲ್ಲಿ ಪಾಕಿಸ್ತಾನ ಮೂಲದ ಕಲಾವಿದರನ್ನು ತೊಡಗಿಸಿಕೊಳ್ಳುವುದರ ವಿರುದ್ಧ ಅಸಹಿಷ್ಣುತೆಯ ಗದ್ದಲ ಕೇಳಿಬರುತ್ತಿರುವ ಸಮಯದಲ್ಲಿ ಇದು ಮತ್ತೊಂದು ಶ್ಲಾಘನೀಯ ಪ್ರಯತ್ನ.

ಪ್ರೌಢಪ್ರೇಕ್ಷಕರೆಲ್ಲರೂ ನೋಡಲೇಬೇಕಾದ ಚಿತ್ರ ಎಂದರೆ ಅತಿಶಯೋಕ್ತಿಯಾಗದೆನಿಸುತ್ತದೆ.

- ಮಂಜುನಾಥ್ ಎ ಎನ್

ಕವನ: "ಅದಮ್ಯ ಚೇತನಕ್ಕೆ ನಮನ"



ನೀನೆಂದರೆ
ಬಿಸಿ ನೆತ್ತರ ಧಗೆಯು
ನೀನಲ್ಲವೆ
ಬಿರುಗಾಳಿಯ ವೇಗವು
ನೀನಾದೆ
ಬ್ರಿಟಿಷರಿಗೆ ಸಿಂಹಸ್ವಪ್ನವು
ನೀನೇ
ಯುವಬಲದ ಮೂಲಾರ್ಥವು.

ಕಡೆಗಣಿಸಿ ನಿನ್ನವರ
ಧುಮುಕಿದೆ ಸ್ವಾತಂತ್ರ್ಯವನ್ನರಸಿ
ಕ್ಷಣಕ್ಷಣವು ಪರಿತಪಿಸಿದೆ
ದೌರ್ಜನ್ಯವ ನೆನೆಸಿ
ದಬ್ಬಾಳಿಕೆಯೆದುರು ಅಬ್ಬರಿಸಿ
ಹೆಬ್ಬುಲಿಯಾದೆ
ಯುವಶಕ್ತಿಯನೆಚ್ಚರಿಸಿ
ನೀ ಅಮರನಾದೆ.

ಅರ್ಥಪೂರ್ಣ
ನೀನು ಬದುಕಿದ ರೀತಿ,
ಅಮೂಲ್ಯ
ನಿನ್ನ ದೇಶಪ್ರೀತಿ,
ಅಮೋಘ
ನಿನ್ನ ಸಾಹಸವೃತ್ತಿ,
ಅಪರೂಪ
ನಿನ್ನ ಮಾನವಪ್ರೀತಿ.

ಆದರೆ,
ಮರೆತೇಹೋಗಿದೆ
ಮರೆಯಾಗಿಯೇ ಹೋಗಿದೆ
ಆ ಬಲಿದಾನ,
ಅಳಿಸಿ ಹೋಗಿದೆ
ಅರಿವಿನಲ್ಲಿರದಾಗಿದೆ
ಆ ರಕ್ತದಾನ,
ಮತ್ತಿನಲ್ಲಿದೆ
ಮಾದಕತೆಯಲ್ಲಿ ಮುಳುಗಿದೆ
ಈ ಯುವಜನ.

ಜಡವ ತೊಲಗಿಸಲಿ
ಜನರಲ್ಲಿ ನಿನ್ನ ನೆನಪು
ಭಯವೇ ಬೆದರೋಡಲಿ
ನೆನೆದಾಗ ನಿನ್ನ ಬದುಕು
ಉತ್ಸಾಹವನುಕ್ಕಿಸಲಿ
ನಿನ್ನ ಉಕ್ಕಿನೋಕ್ತಿಗಳು
ಆವೇಶವನ್ನೆಬ್ಬಿಸಲಿ
ನಿನ್ನ ಘೋಷಗಳು.
      -              ಉಷಾಗಂಗೆ

ಮರೆಯಲಾದೀತೆ ಆ ಮಹಾನ್ ಚೇತನವನ್ನು
ಸ್ವಾತಂತ್ರ್ಯಕ್ಕಾಗಿ ಮಡಿದ ಸಿಂಹವನ್ನು
ನೆನೆಯಬೇಕು ಸ್ಫೂರ್ತಿಯ ಚಿಲುಮೆಯನ್ನು
ಸಾಕಾರಗೊಳಿಸಬೇಕು ಅವರ ಕಂಡ ಕನಸನ್ನು
ಆ ಕ್ರಾಂತಿ ಶಿಶುವಿಗೆ ನಮ್ಮಯ ನಮನ
                                         -         ವಿಜಯಲಕ್ಷ್ಮಿ ಎಂ ಎಸ್ 

ಅವರ ನೋಡಿ ದೇಶಭಕ್ತಿಯ ಕಲಿಯಬೇಕು
ಆ ಕೆಚ್ಚೆದೆಯ ಬೆಳೆಸಿಕೊಳ್ಳಬೇಕು
ಕ್ರಾಂತಿಯ ಅರಿವ ಮನದಿ ತುಂಬಿಕೊಳ್ಳಬೇಕು
ಸ್ವಾತಂತ್ರ್ಯದ ಮೌಲ್ಯವ ತಿಳಿಯಬೇಕು
ಅವರ ಕನಸನ್ನು ಸಾಕಾರಗೊಳಿಸಬೇಕು
ಎಲ್ಲರೂ ಅವರಂತೆ ಬಾಳಬೇಕು
ಇದು ನಮ್ಮ ಧ್ಯೇಯವಾಗಬೇಕು.

                                                           - ಗೀತಾ

ಲೇಖನ: "ಸ್ವತಂತ್ರ ಭಾರತ ಎತ್ತ ಸಾಗುತ್ತಿದೆ?"



ಬ್ರಿಟಿಷರ ಆಗಮನವಾದ ಮೇಲೆ ಕೆಲವು ರಾಜರು ಅವರ ಆಧುನಿಕ ಯುದ್ಧ ತಾ೦ತ್ರಿಕತೆಯನ್ನು ಎದುರಿಸಲಾಗದೆ ಶರಣಾದರೆ, ಹಲವರು ರಾಜಕೀಯ ಲಾಭಕ್ಕೆ ಅವರೊಡನೆ ನಿ೦ತರು. ಕೆಲವು ಸ್ವಾಭಿಮಾನಿ ರಾಜರುಗಳು ಅವರೊಡನೆ ಹೋರಾಡಿ ಮಡಿದರು. ಬ್ರಿಟಿಷರ ಆಡಳಿತ ದಬ್ಬಾಳಿಕೆಗೆ ತಿರುಗಿ, ವರ್ಣಭೇದ ಹಾಗೂ ಗುಲಾಮಗಿರಿ ಸಾಮಾನ್ಯ ಮನುಷ್ಯನನ್ನು ಹಿ೦ಸಿಸತೊಡಗಿತು. ಬ್ರಿಟಿಷರಿ೦ದ ಸ್ವಾತ೦ತ್ರ್ಯ ಅನಿವಾರ್ಯ ಎ೦ಬ ಪರಿಸ್ಥಿತಿ ನಿರ್ಮಾಣವಾಗಿ, ಸಾಮಾನ್ಯ ಜನರ ಮನಮನದಲ್ಲೂ  ಸ್ವಾತ೦ತ್ರ್ಯದ ದಾಹ ಉ೦ಟಾಗಿ ಚಳುವಳಿಗೆ ಧುಮುಕಿದರು. ಸಣ್ಣ ಪುಟ್ಟ ಬೀದಿಗಳಲ್ಲೂ ಸ್ವಾತ೦ತ್ರ್ಯದ ಕೂಗು ಕೇಳತೊಡಗಿತು. ಹಿರಿಯಕಿರಿಯರೆನ್ನದೆ, ಪುರುಷಮಹಿಳೆಯರೆನ್ನದೆ ಎಲ್ಲರೂ ಪ್ರಾಣಾರ್ಪಣೆಗೆ ಮು೦ದಾದರು. ಬ್ರಿಟಿಷರಿ೦ದ ಸ್ವಾತ೦ತ್ರ್ಯ ಯಾವುದೇ ಒ೦ದು ರಾಜ್ಯಕ್ಕೆ ಅಥವಾ ರಾಜರಿಗೆ ಸೀಮಿತವಾಗಿರದೆ ಪ್ರತಿ ಜನರಲ್ಲೂ, ಜಾಗದಲ್ಲೂ ಅವಿರ್ಭವಿಸಿ ಪ್ರತಿಧ್ವನಿಸತೊಡಗಿತು.
"ಸ್ವಾತ೦ತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು" , "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಮು೦ತಾದ ಘೋಷಣೆಗಳೊಡನೆ ಜನರು ಸ್ವಾತ೦ತ್ರ್ಯಚಳುವಳಿಗೆ ಧುಮುಕಿದರು. ಎಲ್ಲಾ ರೀತಿಯಲ್ಲೂ ಸ್ವಾತ೦ತ್ರ್ಯದ ಕೂಗು ಮಾರ್ದನಿಸಿತು.
ಗೋಖಲೆ, ಗಾ೦ಧೀಜಿಯವರ ನೇತ್ರತ್ವದಲ್ಲಿ ಅಹಿ೦ಸೆ ಹಾಗೂ ಸತ್ಯಾಗ್ರಹದ ಮೂಲಕ ಚಳುವಳಿಯಾದರೆ, ಮತ್ತೊ೦ದೆಡೆ ಚ೦ದ್ರಶೇಖರ ಆಜಾದ್, ಭಗತ್ ಸಿಂಗ್ ಮುಂತಾದವರ ನಾಯಕತ್ವದಲ್ಲಿ ಕ್ರಾ೦ತಿಕಾರಿ ಹೋರಾಟ, ಸುಭಾಷ್ ಚ೦ದ್ರ ಬೋಸ್ ರ ಸೈನ್ಯ ತರಬೇತಿ ಮತ್ತು ಬ್ರಿಟಿಷ್ ಭಾರತದ ಮೇಲೆ ದಾಳಿ  - ಎಲ್ಲವೂ ಬೇರೆ ಮಾರ್ಗಗಳಾದರೂ ಎಲ್ಲರೂ ನಿರೀಕ್ಷಿಸಿದ್ದು ಸ್ವತಂತ್ರ ಭಾರತವನ್ನು ಮಾತ್ರ, ಅನುಸರಿಸಿದ ಸಿದ್ಧಾ೦ತಗಳು, ತತ್ವಗಳು, ಮಾರ್ಗಗಳು ಮಾತ್ರ ಬೇರೆ, ಗುರಿ ಒ೦ದೇ "ಸರ್ವತ೦ತ್ರ ಸ್ವತ೦ತ್ರ ಭಾರತ"
ಇವರೆಲ್ಲರ ತೀವ್ರವಾದ ಹೋರಾಟ ಹಾಗೂ ಲಕ್ಷಾ೦ತರ ಮ೦ದಿಯ ತ್ಯಾಗಬಲಿದಾನದ ಫಲವಾಗಿ ಭಾರತಕ್ಕೆ ಸ್ವಾತ೦ತ್ರ್ಯ ದೊರೆತು, ಬ್ರಿಟಿಷರು ಭಾರತವನ್ನು ಭಾರತೀಯರ ಆಡಳಿತಕ್ಕೆ ಬಿಟ್ಟು ನಡೆದರು. 
ಸ್ವಾತ೦ತ್ರ್ಯವೇನೋ ಸಿಕ್ಕಿತು! ಆದರೆ ಮು೦ದೇನು? ಅದಕ್ಕೂ ಮೊದಲು ಛಿದ್ರವಾಗಿದ್ದ  ಭಾರತವನ್ನು ಒಕ್ಕೂಟ ರಾಷ್ಟ್ರವಾಗಿ ನಿರ್ಮಾಣ ಮಾಡುವುದು, ಆಯಾ ರಾಜರ ಮನವೊಲಿಸಿ ರಾಜ್ಯವನ್ನು ಒಕ್ಕೂಟಕ್ಕೆ ಸೇರಿಸುವುದು ಸುಲಭದ ಮಾತಾಗಿರಲಿಲ್ಲ, ಸಾಮ, ದಾನ, ಭೇದ, ದ೦ಡ  ನೀತಿಯನ್ನು ಅನುಸರಿಸಿ ಎಲ್ಲವನ್ನು ಒಗ್ಗೂಡಿಸಲಾಯಿತು. ಆದರೆ ಕಾಶ್ಮೀರ ಎರಡಾಯಿತು. ಒಂದು ಭಾರತಕ್ಕೆ ಸೇರಿತು. ಇನ್ನೊಂದು ಭಾಗ ಪಾಕಿಸ್ತಾನಕ್ಕೆ ಸೇರಿತು. ಆ ವಿಷಯದಲ್ಲಿ ಉದ್ಭವಿಸಿದ ಸಮಸ್ಯೆ ಇ೦ದಿಗೂ ಸಮಸ್ಯೆಯಾಗಿಯೆ ಉಳಿದಿರುವುದು ಪ್ರಪ೦ಚಕ್ಕೆ ತಿಳಿದ ವಿಷಯ.
ಇದೆಲ್ಲದರ ನ೦ತರವೂ ಭಾರತವನ್ನು ಪ್ರಜಾತ೦ತ್ರ ರಾಷ್ಟ್ರವನ್ನಾಗಿ ಮಾಡಬೇಕೆನ್ನುವುದು ಮತ್ತು ಮು೦ಬರುವ ದಿನಗಳಲ್ಲಿ ಅಭಿವೃದ್ಧಿಶೀಲ ದೇಶವನ್ನಾಗಿ ಮಾಡುವುದು ನಮ್ಮ ಸ್ವಾತ೦ತ್ರ್ಯ ಹೊರಾಟಗಾರರ ಕನಸು. (ಆದರೆ ಅದು ಸ್ವಾತ೦ತ್ರ್ಯ ಹೋರಾಟಕ್ಕಿ೦ತ ಕಠಿಣ ಎ೦ಬುದು ನಮ್ಮ ನಾಯಕರುಗಳಿಗೆ ಆಗ ಹೊಳೆದಿರಲಿಕ್ಕಿಲ್ಲ!)
ನಮ್ಮದೇ ಆದ ಒ೦ದು ಹೊಸ ಸ೦ವಿಧಾನವನ್ನು ರಚಿಸಿ, ಆಡಳಿತ ಸ೦ಹಿತೆಯನ್ನು ಜಾರಿಗೊಳಿಸಿ ಸಮಗ್ರ ರಾಷ್ಟ್ರದ ಅಭಿವೃದ್ಧಿಗೆ ಯೊಜನೆಗಳನ್ನು ರೂಪಿಸಿ ಕೆಲವೊ೦ದನ್ನು ಆಗಲೇ ಅನುಷ್ಠಾನಕ್ಕೆ ತ೦ದು ಸ್ವತ೦ತ್ರ ಆಡಳಿತಕ್ಕೆ ನಾ೦ದಿ ಹಾಕಲಾಯಿತು. ಅಪರಿಮಿತ ರಾಷ್ಟ್ರ ಪ್ರೇಮದಲಿ ರಕ್ತ ಹರಿಸಿದ ಹಾಗೂ ಅ೦ಥವರನ್ನು ಕ೦ಡ ತಲೆಮಾರಿನವರೆಗೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಮು೦ದಿನ ತಲೆಮಾರಿನವರಿಗೆ ಸ್ವಾತ೦ತ್ರ್ಯ ಹೋರಾಟದ ತೀವ್ರತೆ, ತ್ಯಾಗ ಬಲಿದಾನಗಳು ಬರೀ ಕಥೆಗಳಾಗಿ, ನಮ್ಮವರು ತ೦ದಿತ್ತ ಸ್ವಾತ೦ತ್ರ್ಯ ಸ್ವಚ್ಛ೦ದತೆಯಾಗಿದೆ.
ಪ್ರಸ್ತುತ ಯುವಕರಲ್ಲಿ ರಾಷ್ಟ್ರಪ್ರೇಮವಾಗಲಿ, ದೇಶದ ಸಂಯುಕ್ತ ಸಂಸ್ಕೃತಿಯ ಪರಿಚಯವಾಗಲಿ, ಅಥವಾ ನಮ್ಮ ದೇಶದ ಉತ್ತಮ ಅಂಶಗಳ ಬಗ್ಗೆ ಸ್ವಾಭಿಮಾನವಾಗಲಿ ಇರದೆ, ಕೆಟ್ಟ ಪಾಶ್ಚಿಮಾತ್ಯ ಸಂಸ್ಕೃತಿಗೆ ಹಾಗೂ ಜೀವನಶೈಲಿಗೆ ಜೋತು ಬೀಳುತ್ತಿದ್ದಾರೆ.
ಅಧಿಕಾರದಲ್ಲಿರುವವರು ದೇಶಾಭಿವೃದ್ಧಿಗಾಗಿ ದುಡಿಯದೆ, ಸ್ವಹಿತಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊ೦ಡು, ರಾಷ್ಟ್ರ ಸ೦ಪತ್ತನ್ನು ನಾಶ ಮಾಡುತ್ತಿದ್ದಾರೆ. ದ್ವೇಷದ ರಾಜಕಾರಣ ತಾ೦ಡವವಾಡಿ, ಭ್ರಷ್ಟಾಚಾರವೇ ಮೇಲಾಗಿದೆ. ರಾಜಕೀಯ ಎ೦ಬ ಪದದ ಅರ್ಥವೇ ಬದಲಾಗಿ ದ್ವೇಷ, ವ೦ಚನೆ ಇತ್ಯಾದಿ ಋಣಾತ್ಮಕ ಚಿ೦ತನೆಗಳಿಗೆ ಪರ್ಯಾಯ ಪದವಾಗಿದೆ. ದೇಶಭಕ್ತಿ ಎ೦ಬುದು ಕ್ರೀಡೆಗಷ್ಟೇ ಸೀಮಿತವಾಗಿ, ಸೈದ್ಧಾ೦ತಿಕ ನಿಲುವಿಲ್ಲದೆ ಧರ್ಮಾ೦ಧತೆಯು ಮೇಲ್ಮುಖವಾಗಿದೆ.
ಸ್ವಾತ೦ತ್ರ್ಯ ಹೋರಾಟಕ್ಕೆ ಹಾಗೂ ತ್ಯಾಗಬಲಿದಾನಗಳಿಗೆ ಸಾರ್ಥಕತೆ ಸಿಗಬೇಕಾದರೆ ನಮ್ಮ ಯುವಕರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ದೇಶದ ಚಿ೦ತಕರು, ಹಿರಿಯ ಮುತ್ಸದ್ಧಿಗಳು, ಶಿಕ್ಷಣ ಸ೦ಸ್ಥೆಗಳು, ವಿಶ್ವವಿದ್ಯಾಲಯಗಳು ಕಲೆತು ಪ್ರಗತಿಪರ ಶಿಕ್ಷಣ ವಿಧಾನವನ್ನು  ರೂಪಿಸಬೇಕು. ಪ್ರಜಾಸತ್ತೆಯ ಸದುಪಯೋಗಕ್ಕಾಗಿ, ಪ್ರಜಾತಾಂತ್ರಿಕ ಸಂಸ್ಕೃತಿಯ ಉಳಿವಿಗಾಗಿ ಯುವಜನತೆಯನ್ನು ಎಚ್ಚರಿಸುವ ಹಾಗು ದೇಶಪ್ರೇಮವನ್ನು ಬೆಳೆಸುವ ಕಾರ್ಯವಾಗಬೇಕಾಗಿದೆ. ಒಳ್ಳೆಯದನ್ನು ಉಳಿಸಿಕೊಳ್ಳಲು, ಕೆಟ್ಟದ್ದನ್ನು ತೊಡೆಯಲು ಕಂಕಣಬದ್ಧರಾಗಬೇಕಾಗಿದೆ. ಇ೦ಥ ಮಹತ್ತರವಾದ ಕಾರ್ಯ ಶಿಕ್ಷಣದ ಮೂಲಕ ಮಾತ್ರ ಸಾಧ್ಯ. ಭಾರತದ ಸ್ವಾತ೦ತ್ರ್ಯ ಹೋರಾಟ, ಚರಿತ್ರೆಯ ಪಾಠವಾಗಿ ಉಳಿಯದೆ ಸ್ಪೂರ್ತಿಯ ಸೆಲೆಯಾಗಬೇಕು, ಅಭಿವೃದ್ಧಿಗೆ ಬುನಾದಿಯಾಗಬೇಕು.  ಆಗಲೇ ದೇಶದ ಪ್ರಗತಿ ಹಾಗೂ ನಮ್ಮವರು ಹೋರಾಡಿ ಗಳಿಸಿ ನಮಗಿತ್ತ ಸ್ವಾತ೦ತ್ರ್ಯಕ್ಕೆ ಸಾರ್ಥಕತೆ. 
- ಡಾ. ದಿವ್ಯಶ್ರೀ                                      

ಅನುವಾದ: “ಚಿಕ್ಕವರು ದೊಡ್ಡವರಿಗಿಂತ ವಿವೇಕಿಗಳು” - ಲಿಯೊ ಟಾಲ್‍ಸ್ಟಾಯ್




ಈಸ್ಟರ್‍ನ ಸಮಯವದು. ಕೈದೋಟಗಳಲ್ಲಿನ್ನೂ ಮಂಜು ಸುರಿಯುತಿತ್ತು. ಹಳ್ಳಿಯ ಬೀದಿಯಲ್ಲಿ ನೀರಿನ್ನೂ ಹರಿದುಹೋಗುತ್ತಿತ್ತು. ಬೇರೆ ಬೇರೆ ಮನೆಗಳ ಇಬ್ಬರು ಪುಟ್ಟ ಹುಡುಗಿಯರು ಆ ಚಿಕ್ಕ ದಾರಿಯಲ್ಲಿ ಭೇಟಿಯಾಗುತ್ತಿದ್ದರು. ಎರಡು ಫಾರ್ಮ್‍ಗಳ ನಡುವಿನ ಚಿಕ್ಕ ಹಾದಿಯಲ್ಲಿ, ತೋಟಗಳಿಂದ ಬಂದ ಗಲೀಜು ನೀರು ಅಲ್ಲಿ ಸೇರಿ ಒಂದು ದೊಡ್ಡ ಹೊಂಡವಾಗಿತ್ತು. ಒಬ್ಬ ಹುಡುಗಿ ಬಹಳ ಚಿಕ್ಕವಳು, ಇನ್ನೊಬ್ಬಳು ಅವಳಿಗಿಂತ ಸ್ವಲ್ಪ ದೊಡ್ಡವಳು. ಅವರ ತಾಯಂದಿರು ಅವರಿಬ್ಬರಿಗೂ ಹೊಸ ಬಟ್ಟೆಗಳನ್ನು ತೊಡಿಸಿದ್ದರು. ಚಿಕ್ಕವಳು ನೀಲಿ ಬಣ್ಣದ, ದೊಡ್ಡವಳು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಇಬ್ಬರೂ ತಲೆಯ ಸುತ್ತ ಕೆಂಪು ಸ್ಕಾರ್ಫ್ ಧರಿಸಿದ್ದರು. ಚರ್ಚಿನಿಂದ ಆಗಷ್ಟೇ ಹೊರಬಂದ ಅವರು ಒಬ್ಬರಿಗೊಬ್ಬರು ತಮ್ಮ ಹೊಸ ಬಟ್ಟೆಯನ್ನು ತೋರಿಸಿಕೊಂಡು, ನಂತರ ಆಟವಾಡಲಾರಂಭಿಸಿದರು. ಕ್ರಮೇಣ ಅವರಿಗೆ ನೀರನ್ನು ಎರಚಾಡುವ ಮನಸ್ಸಾಯಿತು.
ಚಿಕ್ಕವಳು ಹೊಂಡಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ ದೊಡ್ಡವಳು ಅವಳನ್ನು ತಡೆದಳು. “ಮಾಲಾಶಾ, ಹಾಗೆ ಹೋಗಬೇಡ, ನಿನ್ನ ಅಮ್ಮನಿಗೆ ಕೋಪ ಬರುತ್ತದೆ. ನಾನು ನನ್ನ ಶೂ ಮತ್ತು ಉದ್ದದ ಕಾಲ್ಚೀಲಗಳನ್ನು ತೆಗೆಯುತ್ತೇನೆ, ನೀನೂ ತೆಗೆ”. ಹಾಗೆಯೇ ಮಾಡಿ, ಅವರಿಬ್ಬರೂ ತಮ್ಮ ಸ್ಕರ್ಟ್‍ಗಳನ್ನು ಮೊಳಕಾಲಿನವರೆಗೂ ಮೇಲಕ್ಕೆ ಎತ್ತಿಕೊಂಡು ಹೊಂಡದಲ್ಲಿ ನಡೆಯಲಾರಂಭಿಸಿದರು. ನೀರು ಮಾಲಾಶಾಳ ಪಾದಕ್ಕಿಂತ ಮೇಲೆ ಬಂದಾಗ ಅವಳು, “ಅಕುಲ್ಯಾ, ನನಗೆ ಭಯವಾಗುತ್ತಿದೆ, ಇಲ್ಲಿ ಆಳವಿದೆ”, ಎಂದಳು. “ಬಾ ಪರವಾಗಿಲ್ಲ, ಹೆದರಬೇಡ, ನೀರು ಅದಕ್ಕಿಂತ ಹೆಚ್ಚು ಆಳವೇನೂ ಇಲ್ಲ”.
ಒಬ್ಬರ ಬಳಿ ಒಬ್ಬರು ಬಂದಾಗ “ಮಾಲಾಶಾ, ಹುಷಾರಾಗಿ ನಡೆ, ಎಗರಿಸಬೇಡ”, ಎಂದಳು ಅಕುಲ್ಯಾ. ಅಷ್ಟರಲ್ಲಿ ಮಾಲಾಶಾಳ ಹೆಜ್ಜೆ ಜೋರಾಗಿ ನೀರನ್ನು ಬಡಿದು ನೀರು ಅಕುಲ್ಯಾಳ ಬಟ್ಟೆಯ ಮೇಲೆ ಎಗರಿತು, ಅವಳ ಕಣ್ಣು, ಮೂಗಿಗೂ ಸಿಡಿಯಿತು.
ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಕಲೆಯನ್ನು ಕಂಡು ಕೋಪಗೊಂಡು ಮಾಲಾಶಾಳಿಗೆ ಹೊಡೆಯಲು ಹೋದಳು. ಮಾಲಾಶಾಳಿಗೆ ಹೆದರಿಕೆಯಾಯಿತು. ತಕ್ಷಣವೇ ಅವಳು ನೀರಿನಿಂದ ಹೊರಬಂದು ಮನೆಯತ್ತ ಓಡತೊಡಗಿದಳು. ಆಗಷ್ಟೇ ಅಕುಲ್ಯಾಳ ತಾಯಿ ಅಕಡೆ ಬಂದಳು. ಮಗಳ ಬಟ್ಟೆಯ ಮೇಲಿನ ಕಲೆಗಳನ್ನು ಕಂಡು ಕೋಪದಿಂದ, “ಏ, ಕೆಟ್ಟ ಹುಡುಗಿಯೇ, ಇಲ್ಲೇನು ಮಾಡುತ್ತಿದ್ದೀಯಾ?” ಕೇಳಿದಳು. “ಮಾಲಾಶಾ ಬೇಕಂತಲೇ ಮಾಡಿದಳು,” ಉತ್ತರಿಸಿದಳು ಅವಳು.
ಇದನ್ನು ಕೇಳಿದ ತಕ್ಷಣ ಅಕುಲ್ಯಾಳ ತಾಯಿ ಮಾಲಾಶಾಳನ್ನು ಹಿಡಿದುಕೊಂಡು ಬೆನ್ನ ಮೇಲೆ ಹೊಡೆದಳು. ಮಾಲಾಶಾ ಇಡೀ ಬೀದಿಗೆ ಕೇಳಿಸುವಂತೆ ಅಳಲಾರಂಭಿಸಿದಳು. ಅವಳ ತಾಯಿ ಹೊರಬಂದು, “ನನ್ನ ಮಗಳನ್ನೇಕೆ ಹೊಡೆಯುತ್ತಿದ್ದೀಯಾ?” ಎಂದು ಜೋರು ಮಾಡಿದಳು.
ತಕ್ಷಣವೇ ಅವರಿಬ್ಬರೂ ಜೋರಾಗಿ ಜಗಳವಾಡಲಾರಂಭಿಸಿದರು. ಮನೆಯೊಳಗಿಂದ ಪುರುಷರೂ ಸಹ ಹೊರಬಂದು ಜಗಳದಲ್ಲಿ ಸೇರಿದರು. ಸ್ವಲ್ಪಹೊತ್ತಿನಲ್ಲಿ ಬೀದಿಯಲ್ಲಿ ಜನಜಂಗುಳಿ ಸೇರಿತು. ಎಲ್ಲರೂ ಕಿರುಚುವವರೇ, ಯಾರೂ ಕೇಳುವವರಿರಲಿಲ್ಲ. ಅವರೆಲ್ಲಾ ಜಗಳ ಮುಂದುವರೆಸಿಕೊಂಡು ಹೋದರು. ಜಗಳ ಹೊಡೆದಾಟದ ಮಟ್ಟಕ್ಕೆ ಹೋಗುವಷ್ಟರಲ್ಲಿ ಅಕುಲ್ಯಾಳ ಅಜ್ಜಿ ಅವರನ್ನು ಸಮಾಧಾನ ಪಡಿಸಲೆತ್ನಿಸಿದರು. “ನೀವು ಸ್ನೇಹಿತರು, ಹೀಗೆ ವರ್ತಿಸುವುದು ಸರಿಯೇ? ಅದೂ ಇಂತಹ ದಿನದಂದು. ಈಸ್ಟರ್ ಸಂತೋಷವಾಗಿರಬೇಕಾದ ಸಮಯ, ಜಗಳವಾಡುವ ಸಮಯವಲ್ಲ.” ಆದರೆ ಯಾರೂ ಅಜ್ಜಿಯ ಮಾತನ್ನು ಕೇಳಲು ಸಿದ್ಧರಿರಲಿಲ್ಲ.
ಅವರೆಲ್ಲಾ ಹೀಗೆ ಕೂಗಾಡುತ್ತಿರುವಾಗಲೇ ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಮಣ್ಣನ್ನು ಸ್ವಚ್ಛಗೊಳಿಸಿಕೊಂಡು ಪುನಃ ಆ ಹೊಂಡದ ಬಳಿ ಹೋಗಿದ್ದಳು. ಒಂದು ಚೂಪಾದ ಕಲ್ಲನ್ನೆತ್ತಿಕೊಂಡು ಆ ಹೊಂಡದ ಮುಂದಿನ ನೆಲವನ್ನು ಅಗೆಯತೊಡಗಿದಳು. ಮಾಲಾಶಾ ಅವಳನ್ನು ಸೇರಿಕೊಂಡು ಒಂದು ಸಣ್ಣ ಕಟ್ಟಿಗೆಯಿಂದ ಅಗೆಯಲು ಸಹಾಯ ಮಾಡಿದಳು. ದೊಡ್ಡವರೆಲ್ಲಾ ಜಗಳವಾಡುತ್ತಿದ್ದಂತೆಯೆ ನೀರು ಹರಿದು ಅವರತ್ತ ಬಂದಿತು. ಹುಡುಗಿಯರು ಆ ನೀರನ್ನೇ ಹಿಂಬಾಲಿಸಿಬಂದರು.
ಮಾಲಾಶಾ ತನ್ನ ಕಡ್ಡಿಯನ್ನು ಅದರೊಳಗೆ ಹಾಕಿದಳು. “ಹಿಡಿದುಕೋ ಮಾಲಾಶಾ, ಹಿಡಿದುಕೋ” ಕೂಗಿದಳು ಅಕುಲ್ಯಾ. ಮಾಲಾಶಾ ಮಾತನಾಡಲಾಗದಷ್ಟು ನಗುತ್ತಿದ್ದಳು. ಕಡ್ಡಿಯು ಆ ನೀರಿನೊಂದಿಗೆ ಹರಿದುಹೋಗುತ್ತಿರುವುದನ್ನು ಕಂಡು ಆ ಹುಡುಗಿಯರಿಗೆ ಖುಷಿಯೋ ಖುಷಿ. ಅವರು ಆ ಗುಂಪಿನತ್ತ ಬಂದರು.
ಅವರನ್ನು ನೋಡಿ ಅಜ್ಜಿಯು, ದೊಡ್ಡವರ ಕಡೆ ತಿರುಗಿ, “ನಿಮಗೆ ನಾಚಿಕೆಯಾಗುವುದಿಲ್ಲವೇ? ಆ ಹುಡುಗಿಯರಿಗಾಗಿ ನೀವು ಜಗಳವಾಡುತ್ತಿದ್ದೀರಿ, ಆದರೆ ಅವರೇ ಅದನ್ನೆಲ್ಲಾ ಮರೆತು ಸಂತೋಷವಾಗಿ ಒಟ್ಟಿಗೆ ಆಟವಾಡುತ್ತಿದ್ದಾರೆ. ಪ್ರೀತಿಯ ಪುಟ್ಟ ಮಕ್ಕಳು, ಅವರು ನಿಮಗಿಂತ ವಿವೇಕಿಗಳು!” ಆ ದೊಡ್ಡವರೆಲ್ಲಾ ಆ ಮಕ್ಕಳನ್ನು ನೋಡಿ ನಾಚಿಕೆಪಟ್ಟರು. ತಮ್ಮ ಮೂರ್ಖತನಕ್ಕೆ ತಾವೇ ನಗುತ್ತಾ ಮನೆಯೊಳಗೆ ಹೋದರು.

                                                                    -  ಸುಧಾ ಜಿ

ಕಥೆ: "ಕಣ್ತೆರೆಸಿದ ಕಿರಿಯ"

    


ಮನೋಜ ಅಂದು ಮನೆಗೆ ಬಂದವನೇ ಏರುಧ್ವನಿಯಲ್ಲಿ "ಅಮ್ಮಾ, ಅಮ್ಮ" ಎಂದು ಕೂಗಿದ. 
ಒಳಗೆ ಅಡಿಗೆ ಮಾಡುತ್ತಿದ್ದ ಅನ್ನಪೂರ್ಣಮ್ಮ "ಏನೋ ಮನೋಜ, ಹಾಗೆ ಕೂಗಿಕೊಳ್ತಾ ಇದ್ದೀಯಾ, ಏನಾಯ್ತು?" ಎಂದು ಕೇಳಿದರು. 
ಅದಕ್ಕವನು, ಅಮ್ಮ, ನೋಡು ನೀನು ನನ್ನನ್ನು ಅಪ್ರಯೋಜಕ ಎನ್ನುತ್ತಿದ್ದೆಯಲ್ಲಾ, ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಈಗ ಹೇಳು ನೋಡೋಣ" ಎಂದ. 
ಅನ್ನಪೂರ್ಣಮ್ಮನವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸದಾಶಿವರಾಯರು ತೀರಿಕೊಂಡ ಮೇಲೆ ಅವರ ಪೆನ್ಷನ್ ನಲ್ಲಿ ತಮ್ಮ ಇಬ್ಬರೂ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದರು. ಮಗ ಮನೋಜನನ್ನು ಇಂಜಿನಿಯರಿಂಗ್ ಮಾಡಿಸಿದರು. ಆದರೆ ಮನೋಜ ಸ್ವಲ್ಪ ಬೇಜವಾಬ್ದಾರಿ, ಉಡಾಫೆ ಸ್ವಭಾವದವನು. ಬುದ್ಧಿ ಇದ್ದರೂ ಉಪಯೋಗಿಸಿಕೊಳ್ಳಲು ಸೋಮಾರಿತನ. ಮಕ್ಕಳು ದೊಡ್ಡವರಾದಂತೆ ಪೆನ್ಷನ್‍ನಲ್ಲಿ ಮನೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ಅನ್ನಪೂರ್ಣಮ್ಮ ಹಲವಾರು ಬಾರಿ ಹೇಳಿ ಹೇಳಿ ಸಹನೆ ಮೀರಿದಾಗ ಒಮ್ಮೊಮ್ಮೆ ಅಪ್ರಯೋಜಕ ಎಂದಿದ್ದರು. ಇಂತಹ ಸಂದರ್ಭದಲ್ಲಿ ಮನೋಜನಿಗೆ ಕೆಲಸ ದೊರೆತದ್ದು ಒಂದು ಆಸರೆಯಾಯಿತು ಎಂದುಕೊಂಡರು ಅನ್ನಪೂರ್ಣಮ್ಮ. 
ಆದರೆ ಮನೋಜ ಕೆಲಸಕ್ಕೆ ಹೋಗಲು ಶುರುಮಾಡಿದ ಎರಡು ತಿಂಗಳಲ್ಲೇ ತನ್ನ ದರ್ಪವನ್ನು ತಾಯಿ, ತಂಗಿಯರ ಮೇಲೆ ತೋರಿಸಲಾರಂಭಿಸಿದ. 
ಎಂದಿನಂತೆಯೇ ಅಂದು ಕೆಲಸಕ್ಕೆ ಹೋಗುವಾಗ ತಡವಾಗಿ ಎದ್ದು "ಅಮ್ಮಾ ಸ್ನಾನಕ್ಕೆ ನೀರು ರೆಡಿ ಮಾಡು, ಆಶಾ ನನ್ನ ಶರ್ಟ್ ಐರನ್ ಮಾಡಿ, ಶೂ ಪಾಲಿಶ್ ಮಾಡಿಡೇ" ಎಂದು ಆಜ್ಞಾಪಿಸತೊಡಗಿದ. 
ಅನ್ನಪೂರ್ಣಮ್ಮ "ಏನೋ ಮನು, ನಾನು ತಿಂಡಿ ಮಾಡ್ತಿರ್ತೀನಿ, ಆಶಾ ಹತ್ತನೇ ತರಗತಿ, ಓದುತ್ತಿರುತ್ತಾಳೆ, ನಿನ್ನ ಕೆಲಸ ನೀನೇ ಮಾಡಿಕೊಳ್ಳೋಕೆ ಆಗೋಲ್ವೇನೋ?" ಕೇಳಿದರು. 
ಅದಕ್ಕೆ ಅವನು, “ನಾನು ಮಾಡ್ಕೋಬೇಕಾ? ನೀವು ಮಾಡಿದರೆ ತಪ್ಪೇನು? ನಾನು ತಂದುಹಾಕೋಲ್ವಾ? ಅದಕ್ಕಿಂತ ನಿಮಗೇನು ಕೆಲಸ" ಎಂದು ವಾದಿಸಿದ. 
ಇದರಿಂದ ಅನ್ನಪೂರ್ಣಮ್ಮನವರಿಗೆ ತುಂಬಾ ನೋವಾಯಿತು. ತನ್ನನ್ನು 20 ವರ್ಷ ನೋಡಿಕೊಂಡಿದ್ದ ತನ್ನ ಗಂಡನೇ ಒಂದು ದಿನ ನನ್ನೊಂದಿಗೆ ಹೀಗೆ ಮಾತನಾಡಿದವರಲ್ಲ, ಈಗ ಮಗನಿಂದ ಈ ರೀತಿ ಮಾತು ಕೇಳಬೇಕಾಯಿತಲ್ಲ ಎಂದು ನೊಂದುಕೊಂಡರು. 
ಮರುದಿನ ಬೆಳಿಗ್ಗೆ, ಮನೋಜ ಆಫೀಸಿಗೆ ರೆಡಿಯಾಗುತ್ತಿದ್ದಾಗ ಅನ್ನಪೂರ್ಣಮ್ಮನವರು ತಿಂಡಿ ತಟ್ಟೆ ಅವನಿಗೆ ನೀಡಿ, ಬಹಳ ಸಂಕೋಚದಿಂದ "ಮನೋಜ, ನನಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ಎಲ್ಲವೂ ಮಂಜುಮಂಜಾಗಿದೆ, ಅಕ್ಕಿ ಆರಿಸೋಕೂ ಹಾಕ್ತಿಲ್ಲ, ಪೇಪರ್ ಓದ್ಲಿಕ್ಕೂ ಆಗ್ತಿಲ್ಲ, ಅದಕ್ಕೆ ಸಂಜೆ ಬೇಗ ಬರ್ತೀಯಾ, ಆಸ್ಪತ್ರೆಗೆ ಹೋಗೋಣ" ಎನ್ನುತ್ತಲೇ, ಮನೋಜ, "ನೀನು ಪೇಪರ್ ಓದಿ ಯಾವ ದೇಶಾನೂ ಆಳಬೇಕಿಲ್ಲಮ್ಮ, ಸುಮ್ಮನೆ ವೇಸ್ಟ್ ಖರ್ಚು, ಅಕ್ಕಿ ಆರಿಸೋಕೇ ಆಶಾಗೆ ಹೇಳು" ಎಂದುಬಿಟ್ಟ,. ಅನ್ನಪೂರ್ಣಮ್ಮನವರಿಗೆ ಕಣ್ಣಲ್ಲಿ ನೀರು ತುಂಬಿಕೊಂಡಿತು. "ಆಯ್ತಪ್ಪ" ಎಂದು ಒಳಹೋದರು. 
ಸಂಜೆ ಮನೋಜ ಆಫೀಸಿನಿಂದ ಬರುವಾಗ ತನಗಾಗಿ 1000 ರೂ ನೀಡಿ ಹೊಸ ಶೂ ತಂದ.  ಇದನ್ನು ಕಂಡು ದಂಗಾದ ಆಶಾ "ಏನಣ್ಣಾ ನೀನು ಬೆಳಿಗ್ಗೆ ಅಮ್ಮನಿಗೆ ಕಣ್ಣು ಚೆಕ್ ಮಾಡಿಸೋಕೆ ಅದು ವೇಸ್ಟ್ ಖರ್ಚು ಅಂತ ಬೈದುಬಿಟ್ಟೆ. ಈಗ ಮಾತ್ರ ನಿನಗೆ ಇಷ್ಟು ಬೆಲೆ ಬಾಳುವ ಶೂ ಅನ್ನು ತಂದಿದ್ದೀಯ, ಅದೂ ನಿನ್ನ ಬಳಿ ಈಗಾಗಲೇ ಒಂದು ಹೊಸ ಶೂ ಇದ್ದೂ ಕೂಡ" ಎಂದಳು. 
ಅದಕ್ಕೆ ಮನೋಜ ಮುಖ ಕೆಂಪಗೆ ಮಾಡಿಕೊಂಡು, "ನನ್ನ ಹಣ ನನ್ನಿಷ್ಟ, ನಿನಗೇನು ಹೋಗೆ" ಎಂದು ಗದರಿಬಿಟ್ಟ. 
ಅಲ್ಲಿಂದ, ನೇರ ತನ್ನ ಸ್ನೇಹಿತನನ್ನು ಭೇಟಿಯಾಗಲು ಪಾರ್ಕಿಗೆ ಬಂದು ಬೆಂಚೊಂದರ ಮೇಲೆ ಕುಳಿತ. ಅಷ್ಟರಲ್ಲಿ ಅಲ್ಲಿಗೆ 12 ವರ್ಷದ, ಹರಕಲು ಶರ್ಟಿನ, ತುಂಡು ನಿಕ್ಕರಿನ, ಕಾಲಿಗೆ ಚಪ್ಪಲಿಯಿಲ್ಲದ ಒಬ್ಬ ಹುಡುಗ “ಗರಂ ಗರಂ ಕಳ್ಳೆಕಾಯಿ ಸರ್, ಒಂದು ಪೊಟ್ಟಣ 2 ರೂ ಸರ್, ಎಂದ. ಮನೋಜ ‘ಬೇಡ’ ಎಂದ. 
ಅದಕ್ಕವನು, “ ತುಂಬಾ ಚೆನ್ನಾಗಿದೆ ಸರ್, ಕಾಯಿ ಕೆಟ್ಟಿದ್ರೆ ವಾಪಸ್ ಕೊಡಿ ಸರ್, ಒಂದು ಪೊಟ್ಟಣ ತಗೊಳ್ಳಿ ಸರ್’ ಅಂದ. 
ಮನೋಜ "ಒಂದು ಸಾರಿ ಹೇಳಲಿಲ್ಲವಾ, ಬೇಡ ಅಂತಾ, ಹೋಗೊ" ಎಂದು ರೇಗಿಬಿಟ್ಟ. ಆ ಹುಡುಗ ಹೆದರಿ, ಪೆಚ್ಚುಮೋರೆ ಹಾಕಿಕೊಂಡು ಅಲ್ಲೇ ಒಂದು ಕಡೆ ಕೂತ. 
ಕೂತವನೇ ತನ್ನ ಜೇಬಿನಿಂದ ಮೋಟು ಪೆನ್ಸಿಲ್, ಹರಕಲು ಕಾಗದ ತೆಗೆದು ಏನೋ ಲೆಕ್ಕ ಹಾಕತೊಡಗಿದ. ಇದನ್ನು ಕಂಡ ಮನೋಜ, 'ಎಲಾ ಇವನಾ ಚೋಟುದ್ದ ಇದಾನೆ, ಏನೋ ಲೆಕ್ಕ ಹಾಕ್ತಿದ್ದಾನಲ್ಲ' ಎಂದುಕೊಂಡು ಕುತೂಹಲದಿಂದ "ಏ ಹುಡುಗ ಬಾರೋ ಇಲ್ಲಿ" ಎಂದು ಕೂಗಿದ. 
ಅದಕ್ಕವನು ಸಂತೋಷದಿಂದ "ಬಂದೆ ಸರ್, ಕಳ್ಳೆಕಾಯಿ ಬೇಕೆ" ಎಂದು ಓಡಿ ಬಂದ. “ಏನೋ ಅದು ಲೆಕ್ಕ ಹಾಕ್ತಿದ್ದೆ” ಎಂದು ಕೇಳಿದಾಗ, ಅವನು ನಾಚಿಕೆಯಿಂದ "ಏನು ಇಲ್ಲ ಸರ್" ಎಂದ. 
"ಪರವಾಗಿಲ್ಲ ಹೇಳೋ." 
ಆಗ ಆ ಹುಡುಗ, “ಸರ್ ನೆನ್ನೆ ನಮ್ಮಮ್ಮ ದೇವಸ್ಥಾನಕ್ಕೆ ಹೋಗುವಾಗ ಕಾಲಿಗೆ ಮುಳ್ಳು ಚುಚ್ಚಿ ತುಂಬಾ ನೋವಾಗಿದೆ. ಅವಳ ಚಪ್ಪಲಿ ಪೂರ್ತಿ ಸವೆದುಹೋಗಿ, ಕಿತ್ತುಹೋಗಿದೆ. ಅಮ್ಮ ಸಂಕೋಚದಿಂದ ನನ್ನನ್ನು ಕೇಳಲೇ ಇಲ್ಲ. ಅದಕ್ಕೆ ನಾನು ಅವಳಿಗೆ ಹೊಸ ಚಪ್ಪಲಿ ಕೊಡಿಸೋಣ ಅಂತ 20 ರೂ ಕೂಡಿಸ್ತಾ ಇದ್ದೀನಿ. ಬೆಳಿಗ್ಗೆ ಒಂದು ಘಂಟೆ ಮುಂಚೆ ಬಂದು ಕಳ್ಳೆಕಾಯಿ ಮಾರ್ತಾ ಇದ್ದೀನಿ. 18 ರೂ ಆಗಿದೆ. ಇನ್ನು ಒಂದು ಪೊಟ್ಟಣ ಮಾರಿದರೆ 20 ರೂ ಆಗುತ್ತೆ. ಅದಕ್ಕೆ ನಿಮ್ಮನ್ನು ತುಂಬಾ ಪೀಡಿಸಿದೆ. ಕ್ಷಮಿಸಿ ಸರ್” ಅಂದ. 
ಅದಕ್ಕೆ ಮನೋಜ “ಯಾಕೆ ನಿಮ್ಮ ತಂದೆ ಇಲ್ವಾ”, ಕೇಳಿದ. ಅದಕ್ಕೆ ಹುಡುಗ “ಇಲ್ಲ ಸರ್, ನಾನು ಚಿಕ್ಕವನಿದ್ದಾಗ ನನ್ನ ತಂದೆ ನಮ್ಮನ್ನು ಬಿಟ್ಟು ಹೋಗಿಬಿಟ್ಟ. ನನ್ನ ತಾಯಿ ಮತ್ತು ನನ್ನ ತಮ್ಮನನ್ನು ನಾನೇ ನೋಡಿಕೊಳ್ತೀನಿ ಸರ್”, ಎಂದು ಹೆಮ್ಮೆಯಿಂದ ಹೇಳಿ, ಅಲ್ಲಿಂದ ಹೊರಟ.
ಇದನ್ನು ಕೇಳಿದ ಮನೋಜ ನಾಚಿಕೆಯಿಂದ ತಲೆತಗ್ಗಿಸಿದ. ಅವನಿಗಾದ ದುಃಖಕ್ಕೆ ಪಾರವೇ ಇರಲಿಲ್ಲ. ಆ ಪುಟ್ಟ ಹುಡುಗನ ಎದುರು ತಾನು ಬಹಳ ಸಣ್ಣವ ಎನಿಸಿಬಿಟ್ಟಿತು. ಬೆಳಿಗ್ಗೆ ತಾನು ಅಮ್ಮನೊಂದಿಗೆ ವರ್ತಿಸಿದ ರೀತಿ ನೆನಪಾಗಿ ಕಣ್ಣಲ್ಲಿ ನೀರು ತುಂಬಿತು. ತಕ್ಷಣ ಆ ಹುಡುಗನನ್ನು ಕರೆದು 2 ಪೊಟ್ಟಣ ಕಳ್ಳೆಕಾಯಿ ಕೊಂಡು ‘ಥ್ಯಾಂಕ್ಸ್ ಪುಟ್ಟಾ’ ಎಂದು ಅಲ್ಲಿಂದ ನೇರ ಮನೆಗೆ ಓಡಿದ. 
ರೂಪಶ್ರೀ.ವಿ.ಬಿ


ಪುಸ್ತಕ ಪ್ರೀತಿ: "ಹಗಲುಗನಸು"


(ಗುಜರಾತ್ ನಲ್ಲಿ ಶಿಕ್ಶಣತಜ್ಞರಾದ ಗಿಜುಭಯ್ ಬಧೇಕಾರವರು ನಡೆಸಿದ ಸ್ವಂತ ಪ್ರಯೋಗದ ಆಧಾರದ ಮೇಲೆ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ)

ಒಬ್ಬ ಉತ್ಸಾಹಿ ಯುವ ಶಿಕ್ಷಣತಜ್ಞ ತಾನು ಅರಿತ ಸತ್ಯಾಂಶಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ದೃಢೀಕರಿಸಲು ನಾಲ್ಕನೇ ತರಗತಿಯ ಶಿಕ್ಷಕರಾಗಿ, ಒಂದು ಶಾಲೆಗೆ ಬರುತ್ತಾರೆ. ಬಲು ಆತ್ಮವಿಶ್ವಾಸದಿಂದ ಮೊದಲ ದಿನವೇ ಮಕ್ಕಳನ್ನು ತನ್ನ ಕೌಶಲ್ಯದಿಂದ ಮೋಡಿಗೊಳಿಸುತ್ತೇನೆ ಎಂದುಕೊಂಡು ತರಗತಿ ಪ್ರವೇಶಿಸುತ್ತಾರೆ. ಅಲ್ಲಿ ಕುಳಿತಿದ್ದ ಮಕ್ಕಳ ತುಂಟ ವರ್ತನೆ ಕಂಡು ಅವರ ಜಂಘಾಬಲವೇ ಉಡುಗಿಹೋಗುತ್ತದೆ. ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು, ‘ಈಗ ಶಾಂತಿಯ ಆಟ ಆಡೋಣವೆಂದು, ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ, ಕತ್ತಲೆ ಮಾಡಿ, ‘ಓಂ ಶಾಂತಿ’ ಎಂದು ಹೇಳಿಕೊಡುತ್ತಾರೆ. ಮಕ್ಕಳೆಲ್ಲಾ ಕತ್ತಲಲ್ಲಿ ‘ಹಾಂ, ಹೂ, ಓಂ ಎನ್ನುತ್ತಾ ಗದ್ದಲ ಮಾಡಿ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕುಬಿಡುತ್ತಾರೆ. ಬೇಸತ್ತ ಯುವಕ ಮಕ್ಕಳಿಂದ ಮುಕ್ತಿ ಪಡೆಯಲು ರಜೆ ಘೋಷಿಸಿಬಿಡುತ್ತಾರೆ. ಅಂದು ತನಗಾದ ಅವಮಾನದಿಂದ ದಿನವೆಲ್ಲಾ ಅಶಾಂತಿಯಿಂದಲೇ ಕಳೆಯುತ್ತಾರೆ. 
ಇದೇ ಯುವಕ ಮುಂದೆ ಒಂದು ವರುಷದೊಳಗೆ, ಆ ಮಕ್ಕಳನ್ನೇ ತನ್ನ ಸಹನೆ ಮತ್ತು ಪ್ರೀತಿಯಿಂದ ತನ್ನೆಡೆಗೆ ಸೆಳೆದುಕೊಂಡು, ಅವರಲ್ಲಿ ಕಲಿಕೆಯ ಬಗ್ಗೆ ನಿಜವಾದ ಆಸಕ್ತಿ ಮೂಡಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಮಕ್ಕಳಿಗೆ ಸಭ್ಯತೆ ಹಾಗೂ ಸ್ವಚ್ಛತೆಯನ್ನು ಕಲಿಸುತ್ತಾರೆ. ಮಕ್ಕಳಲ್ಲಿ ಶಾಲೆಗೆ ಬರುವುದೆಂದರೆ, ಕಲಿಯುವುದೆಂದರೆ ಆಸಕ್ತಿದಾಯಕವಾದದ್ದು ಎಂಬ ಧೋರಣೆಯನ್ನು ಬೆಳೆಸುತ್ತಾರೆ. 
ಈ ರೋಚಕ ಕಥೆಯೇ “ಹಗಲುಗನಸು”. ಆ ಉತ್ಸಾಹಿ ತರುಣನೇ ಗುಜರಾತಿನ ಭಾವ್‍ನಗರದ ಮಹಾನ್ ಶಿಕ್ಷಣತಜ್ಞ ಗಿಜುಭಾಯಿ ಬಢೇಕಾ. ಮಾಂಟೆಸ್ಸೊರಿ ಶಿಕ್ಷಣದಿಂದ ಪ್ರೇರಿತರಾದ ಇವರು ಅದೇ ಶಿಕ್ಷಣ ಪದ್ಧತಿಯನ್ನು, ಇಲ್ಲಿನ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಅಳವಡಿಸಿಕೊಂಡರು. ಮಕ್ಕಳನ್ನು ಹೊಡೆಯದೆ, ಅವಾಚ್ಯ ಶಬ್ದಗಳಿಂದ ಬೈಯ್ಯದೆ, ಕ್ರೂರವಾದ ಶಿಕ್ಷೆಯ ಪದ್ಧತಿಯನ್ನು ಉಪಯೋಗಿಸದೆ, ಮಕ್ಕಳಿಗೆ ಶಿಕ್ಷಣ ನೀಡಬಹುದೆಂಬುದನ್ನು ಕೇವಲ ಲೇಖನದ ಮೂಲಕ ತೋರಿಸದೆ, ವಾಸ್ತವವಾಗಿ ಮಾಡಿ ತೋರಿಸಿದ್ದೇ ಇವರ ವಿಶಿಷ್ಠತೆ. ಮಕ್ಕಳಿಗೆ ಶಿಕ್ಷಕ/ಶಿಕ್ಷಕಿ ಆಸಕ್ತಿದಾಯಕವಾಗಿ ವಿಷಯಗಳನ್ನು ಹೇಳುತ್ತಾ ಹೋದರೆ ಮಕ್ಕಳು ಖಂಡಿತವಾಗಿ ಕಲಿಯುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಈ ಕಥೆಯಲ್ಲಿ ‘ಲಕ್ಷಿಶಂಕರ ಬಾಬು’ ಎಂಬ ಪಾತ್ರದ ಮೂಲಕ ಬಢೇಕಾ ಕಥೆಯನ್ನು ಹೇಳಿದ್ದಾರೆ. ಶಿಕ್ಷಕರನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಹಿಡಿದಿಟ್ಟು ಓದಿಸಿಕೊಂಡು ಹೋಗುವ ಶಕ್ತಿ ಈ ಕಥೆಗಿರುವ ಇನ್ನೊಂದು ವೈಶಿಷ್ಠ್ಯ. ಕಪಾಳಕ್ಕೆ ಹೊಡೆದೇ ಕಲಿಸುತ್ತಿದ್ದ ಶಿಕ್ಷಕರು, ಕಂಠಪಾಠವೇ ಕಲಿಸುವ ಉತ್ತಮ ವಿಧಾನ ಎಂಬಂತಿದ್ದ ಶಾಲಾ ವಾತಾವರಣದಲ್ಲಿ ಲಕ್ಷಿಶಂಕರರು ಶಾಲೆಗೆ ಬಂದ ಮರುದಿನವೇ ತಮ್ಮ ಪ್ರಯೋಗಗಳ ಮೂಲಕ ತರಗತಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತಾರೆ. ಹಳೆಯ ಶಿಕ್ಷಣ ಪದ್ಧತಿಯಿಂದ ಜಡ್ಡು ಹಿಡಿದುಹೋಗಿದ್ದ ಮಕ್ಕಳನ್ನು, ಕಥೆ   ಹೇಳುವುದರ ಮೂಲಕ, ಪದ್ಯಗಳನ್ನು ಹಾಡುವುದರ ಮೂಲಕ, ಆಟಗಳನ್ನು ಆಡಿಸುವುದರ ಮೂಲಕ ಕ್ರಿಯಾಶೀಲ ಮಕ್ಕಳನ್ನಾಗಿಸಿ ಒಂದು ಪವಾಡವನ್ನೇ ಸೃಷ್ಠಿಸುತ್ತಾರೆ. ಶಾಲೆಗಳಲ್ಲಿ ಎಂದೂ ಕಾಣದ ಈ ಹೊಸ ಪದ್ಧತಿಗಳನ್ನು ಕಂಡು ಎಲ್ಲರೂ ನಕ್ಕು ವ್ಯಂಗ್ಯವಾಡುತ್ತಾರೆ. ಇವನೊಬ್ಬ ಮೂರ್ಖನೆಂದು ಮೂದಲಿಸುತ್ತಾರೆ. ಇದಾವುದರಿಂದಲೂ ವಿಚಲಿತರಾಗದೆ ಲಕ್ಷಿಶಂಕರರು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಾರೆ.
   ಎಷ್ಟು ಹೇಳಿದರೂ ಸ್ವಚ್ಛತೆಯ ಬಗ್ಗೆ ಗಮನ ಕೊಡದ ಪೋಷಕರ ಸಭೆ ಕರೆದು ಸ್ವಚ್ಛತೆಯಿಂದಾಗುವ ಲಾಭದ ಬಗ್ಗೆ ಹೇಳಿದಾಗಲೂ ಏನೂ ಪ್ರಯೋಜನವಾಗದೆ ಇದ್ದಾಗ ತಾವೇ ಕನ್ನಡಿ, ಖಾದಿ ವಸ್ತ್ರ, ಬಾಚಣಿಗೆ, ಉಗುರು ಕತ್ತರಿಸಲು ಕತ್ತರಿಯನ್ನು ಕೊಂಡು ತಂದು ಶಾಲೆಯಲ್ಲಿ ಇಡುತ್ತಾರೆ. ಪ್ರತಿನಿತ್ಯ ಕೈಕಾಲು ತೊಳೆದು, ಕೂದಲು ಬಾಚಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು, ತಮ್ಮ ಮುದ್ದಾದ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತಾರೆ. ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಂಡು ಸಂತೋಷ ಪಡುತ್ತಿದ್ದ ಮಕ್ಕಳು ದಿನಾಲೂ ಅದನ್ನೇ ಮುಂದುವರೆಸುತ್ತಾರೆ.
   ಒಮ್ಮೆ ಶಾಲೆಯಲ್ಲಿ ನಿರ್ದೇಶಕರ ಆಗಮನಕ್ಕಾಗಿ ಪೂರ್ವಸಿದ್ಧತೆಗಳು ನಡೆಯುತ್ತಿದ್ದವು. ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಹಾಗೆಯೇ 4ನೆಯ ತರಗತಿಯ ಸುಂದರ ಮಕ್ಕಳನ್ನು ಕಳಿಸಬೇಕೆಂದು ಮುಖ್ಯೋಪಾಧ್ಯಾಯರು ಆಜ್ಞೆ ಮಾಡಿದರು. ಈ ವಿಧಾನದಿಂದ ಅಸಮಾಧಾನಗೊಂಡ ಲಕ್ಷಿಶಂಕರರು ತಮ್ಮ ಮಕ್ಕಳನ್ನು ಕಳಿಸಿಕೊಡಲು ಒಪ್ಪಲಿಲ್ಲ. ಬಿಸಿಬಿಸಿ ಮಾತುಗಳಾಗಿ ದೂರು ಮೇಲಧಿಕಾರಿಯವರೆಗೂ ಹೋಗುತ್ತದೆ. ಕೋಪಗೊಂಡ ಅಧಿಕಾರಿಯ ಬಳಿ ಲಕ್ಷಿಶಂಕರರು ಶಾಂತವಾಗಿಯೇ ಈ ರೀತಿ ಉತ್ತರಿಸುತ್ತಾರೆ, “ನೋಡಿ ಸ್ವಾಮಿ, ಮಕ್ಕಳಿರುವುದು ಇನ್ನೊಬ್ಬರನ್ನು ಸಂತಸ ಪಡಿಸಲಿಕ್ಕಲ್ಲ. ನಿಮ್ಮ ಪ್ರಕಾರದ ‘ನೋಡಲು ಸುಂದರ ಮಕ್ಕಳನ್ನು’, ಅವರಿಗೆ ಸಂಬಂಧವೇ ಇರದ ವಿಷಯಗಳಲ್ಲಿ ತರಬೇತಿ ನೀಡಲೋಸುಗ ಅವರಿಗೆ ಹೊಡೆದು, ಬಡಿದು ಕಲಿಸುತ್ತಾರೆ. ಮಕ್ಕಳು ಭಾವವಿಲ್ಲದ ಗೊಂಬೆಗಳಂತೆ ವೇದಿಕೆ ಮೇಲೆ ಸುಳ್ಳು ಪ್ರದರ್ಶನ ಕೊಡುತ್ತಾರೆ. ನಿರ್ದೇಶಕರೂ ಸುಳ್ಳು ಪ್ರಶಸ್ತಿ ನೀಡುತ್ತಾರೆ. ನಿರ್ದೇಶಕರನ್ನು ಮೋಸಗೊಳಿಸುವುದು ನನಗಿಷ್ಟವಿಲ್ಲ. ಜೊತೆಗೆ ನನ್ನ ಎಲ್ಲಾ ಮಕ್ಕಳು ಸುಂದರರೇ. ಅವರಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ನಾನು ಹೇಗೆ ಆಯ್ಕೆಮಾಡಲಿ? ಬೇಕಿದ್ದರೆ ನಾನು ನನ್ನ ತರಗತಿಯ ಎಲ್ಲಾ ಮಕ್ಕಳಿಂದ ಒಂದು ಕಾರ್ಯಕ್ರಮವನ್ನು ಏರ್ಪಡಿಸುವೆ”.
   ಕಾರ್ಯಕ್ರಮದ ದಿನದಂದು ಇತರೆ ತರಗತಿಗಳ ಮಕ್ಕಳ ಯಾಂತ್ರಿಕ ಪ್ರದರ್ಶನ ಮುಗಿದ ನಂತರ, ನಿರ್ದೇಶಕರು ಯಾಂತ್ರಿಕ ನಗು ಬೀರಿ ಎಲ್ಲಾ ಮಕ್ಕಳನ್ನೂ, ಶಾಲೆಯನ್ನೂ ಹೊಗಳುತ್ತಾರೆ. ಆದರೆ ಕೊನೆಯಲ್ಲಿ ಲಕ್ಷಿಶಂಕರರು ತಮ್ಮ ಮಕ್ಕಳೊಂದಿಗೆ, ಯಾವುದೇ ಅಭ್ಯಾಸವಿಲ್ಲದೆ, ಪ್ರತಿನಿತ್ಯ ತಾವಾಡುತ್ತಿದ್ದ ನಾಟಕಗಳಲ್ಲಿ ಒಂದನ್ನು ಆರಿಸಿಕೊಂಡು, ಆಡಂಬರವಿಲ್ಲದೆ, ನೈಜ ಅಭಿನಯದಿಂದ ಪ್ರೇಕ್ಷಕರನ್ನೆಲ್ಲಾ ಚಕಿತಗೊಳಿಸುತ್ತಾರೆ. ಯಾವುದೇ ಭಯವಿಲ್ಲದೆ, ಸಹಜವಾಗಿ ಅಭಿನಯಿಸಿದ ಮಕ್ಕಳನ್ನು ನಿರ್ದೇಶಕರು ಮನಸಾರೆ ಹೊಗಳಿ ಲಕ್ಷಿಶಂಕರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇಂಗ್ಲೆಂಡಿನವರಾದ ಆ ನಿರ್ದೇಶಕರು “ಇಂದು ನನ್ನ ತಾಯ್ನಾಡಿನ ಮಾಂಟೆಸ್ಸೊರಿ ಮಾದರಿಯ ಶಾಲೆಯನ್ನು ನೆನಪಿಸಿದಿರಿ” ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.   
-  ಉಷಾಗಂಗೆ       


                                  

ವಿನೋದ: "ಶೂ ಮಹಿಮೆ"





“ನನಗೆ ನನ್ನ ಶೂಗಳನ್ನು ಕಂಡರೆ ಬಹಳ ಅಭಿಮಾನ. ಆದರೆ ನನ್ನ ಬಗ್ಗೆ ಅಭಿಮಾನವಿದ್ದವರಲ್ಲಿ ಕೆಲವರಿಗೆ ಅದನ್ನು ಕಂಡರೆ ಬಹಳ ಕಸಿವಿಸಿ. ಅವರಿಗೆಲ್ಲಾ ಆ ಶೂಗಳು ನನ್ನ ಸೌಂದರ್ಯ..... ಅಲ್ಲಲ್ಲ ನನ್ನ ಪಾದಗಳ ಸೌಂದರ್ಯ ಹಾಳು ಮಾಡುತ್ತವೆಂದು ಸಿಟ್ಟು. ಅದರಲ್ಲೂ ನನ್ನ ಆತ್ಮೀಯ ಗೆಳತಿಗಂತೂ ಅದನ್ನು ಕಂಡರೆ ಅಸಹ್ಯ.
ನನ್ನ ಶೂಗಳು ಬಹಳ ಗಟ್ಟಿಮುಟ್ಟಾಗಿದ್ದವು. ಈ ದುಬಾರಿ ಕಾಲದಲ್ಲಿ ಮೂರು ವರ್ಷಗಳ ಸತತ ಸೇವೆಯ ಜಯಭೇರಿಯನ್ನು ಬಾರಿಸಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದವು. ನನ್ನ ಮೆಚ್ಚಿನ ಆ ಶೂಗಳಿಗೆ ನನ್ನ ಗೆಳತಿಯರು, ಆದರೆ ಆ ಶೂಗಳ ಶತ್ರುಗಳು “ಮಿಲಿಟರಿ ಶೂಗಳು” ಎಂದು ಹೆಸರಿಟ್ಟಿದ್ದರು.
ಎಲ್ಲರದ್ದೂ ಒಂದೇ ಮಾತು - “ಈ ಶೂಗಳು ಬೇಡ.” ನಾನು ಜಗ್ಗಲಿಲ್ಲ. ನನ್ನ ಆತ್ಮೀಯ ಗೆಳತಿ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಹಿಂದೆ ಬಿದ್ದಳು. ನನ್ನ ಶೂಗಳನ್ನು ಬಿಡುವಂತೆ ನನ್ನ ಮನವೊಲಿಸಲಾಗದೆ ಕೊನೆಗೊಂದು ಉಪಾಯವನ್ನು ನೀಡಿದಳು.
“ನೋಡು, ಶೂಗಳನ್ನೇ ಹಾಕಿಕೋ, ಆದರೆ ಹೆಣ್ಣುಮಕ್ಕಳಿಗಾಗಿಯೇ ಹೇಳಿಮಾಡಿಸಿದ ಶೂ ಹಾಕಿಕೊ.” 
ಗೆಳತಿಯ ಮಾತಿಗೆ “ಇಲ್ಲ” ಎನ್ನಲಾರದೆ “ಸರಿ” ಎಂದೆ, ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎನ್ನುವುದು ನೆನಪಿಸಿಕೊಂಡು.
ಮರುದಿನ ಆಫೀಸಿನಿಂದ ಹಿಂತಿರುಗಿದಾಗ, ಮನೆಯ ಹೊರಗಡೆ ಅವಳ ಲೂನಾ ಕಂಡೆ. ಒಳಗೆ ಹೋದೆ, ಶೂ ಕಳಚಲೂ ಸಹ ಬಿಡದೆ “ನಡಿ” ಎಂದು ಎಳೆದುಕೊಂಡು ಹೊರಟೇ ಬಿಟ್ಟಳು. ನಾನು ಎಲ್ಲಿಗೆ, ಏನು ಎಂದು ವಿಚಾರಿಸುವಷ್ಟರಲ್ಲಿ ಲೂನಾ ಚಪ್ಪಲಿ ಅಂಗಡಿಯ ಮುಂದೆ ನಿಂತಿತ್ತು. ಅವಳನ್ನು ಹಿಂಬಾಲಿಸಿದೆ.
ಅಂಗಡಿಯಲ್ಲಿ ಅಳತೆಗಾಗಿ ಹಾಕಿಕೊಂಡ ಹೆಣ್ಣುಮಕ್ಕಳಿಗಾಗಿ ಮಾಡಿದ ಶೂಗಳನ್ನು ನೋಡಿ “ಬ್ಯೂಟಿಫುಲ್!” ಎಂದಳು.
ಮರುದಿನ ಆಫೀಸಿನಲ್ಲಿ ಎಲ್ಲರೂ “ಓಹ್, ವಾಟ್ ಎ ಚೇಂಜ್” ಎಂದು ಉದ್ಗರಿಸುವವರೇ. ನನಗೇನೊ ಅದರಲ್ಲಿ ಪಾದಗಳೇ ನಿಲ್ಲುತ್ತಿರಲಿಲ್ಲ. ಪ್ರತಿ ಬಾರಿ ಹೆಜ್ಜೆ ಮುಂದಿಟ್ಟಾಗಲೂ ಶೂ ಹಿಂದೆಯೇ ಉಳಿದಿರುತ್ತಿತ್ತು. ಎಷ್ಟೇ ಕಷ್ಟ ಆದರೂ ಸ್ನೇಹಕ್ಕಾಗಿ ಸಹಿಸಬೇಕಲ್ಲವೇ? 
ನನ್ನ ಅದೃಷ್ಟ! ಎರಡೇ ದಿನಗಳಲ್ಲಿ ಆ ಶೂಗಳೂ ಬಾಯಿಬಿಟ್ಟವು. ಗೆಳತಿಗೆ ತೋರಿಸಿದರೆ, “ನಿನಗೆ ಸರಿಯಾಗಿ ನಡೆಯಲು ಬರುವುದಿಲ್ಲ” ಎಂದು ಸರ್ಟಿಫಿಕೇಟ್ ನೀಡಿದಳು. ಹೆಚ್ಚು ಚರ್ಚೆಯಿಲ್ಲದೆ ಒಪ್ಪಿಕೊಂಡೆ, ನನ್ನ ಹಳೆಯ ಶೂಗಳಿಗೆ ಹಿಂತಿರುಗಬಹುದೆಂದು.
ಎಂದಿನಂತೆ ಆ ದಿನವೂ ಆಫೀಸಿಗೆ ಹೋಗಲು ರೆಡಿಯಾದೆ. ಶೂಗಳನ್ನು ಹಾಕಿಕೊಳ್ಳಲು ಹೋದಾಗ ಹೊಸ ಶೂಗಳು ಬಾಯ್ಬಿಟ್ಟಿರುವುದು ನೆನಪಾಗಿ ನನ್ನ ಮಿಲಿಟರಿ ಶೂಗಳನ್ನು ಕಪಾಟಿಂದ ಹೊರತೆಗೆದು ಪಾಲಿಷ್ ಮಾಡಲಾರಂಭಿಸಿದೆ. ಅಷ್ಟರಲ್ಲಿ ನನ್ನ ಗೆಳತಿ ಒಂದು ಕವರ್ ಹಿಡಿದು ಒಳಬಂದಳು.
“ಇವು ಬಹಳ ಒಳ್ಳೆಯ ಕ್ವಾಲಿಟಿ ಚಪ್ಪಲಿಗಳು. ಹೇಗೆ ನಡೆದರೂ ಬಾಳಿಕೆ ಬರುತ್ತವೆ. ನಿನಗೇನೂ ತೊಂದರೆಯಾಗುವುದಿಲ್ಲ.” ಬೆಳ್ಳಂಬೆಳಗ್ಗೆ ಗೆಳತಿಯ ಉಡುಗೊರೆ ತಿರಸ್ಕರಿಸಲಾದೀತೆ? 
ನನ್ನ ನಡಿಗೆಯಲ್ಲಿ ಏನೋ ಬದಲಾವಣೆ. ನನಗೇನೋ ಕಸಿವಿಸಿ. ಇರಲಿ ಸ್ವಲ್ಪ ದಿನ ಎಂದುಕೊಂಡೆ.
ಎಂದಿನಂತೆ ಆ ದಿನವೂ ಬಿಟಿಎಸ್ ಹತ್ತಿದೆ. ರಶ್ಶೋ ರಶ್ಶು. ಕಾಲಿಡಲೂ ಸ್ಥಳವಿಲ್ಲ. ಹೇಗೋ ಜಾಗ ಮಾಡಿಕೊಂಡು ಹತ್ತಿದೆ. ಅಬ್ಬಾ, ಕೊನೆಗೂ ಕಾಲಿಡಲು ಜಾಗ ಸಿಕ್ಕಿತು ಎಂದುಕೊಳ್ಳುವಷ್ಟರಲ್ಲಿ ನನ್ನ ಪಾದಗಳ ಮೇಲೆ ಏನೋ ಭಾರ ಬಿದ್ದಂತಾಯಿತು. ಪಕ್ಕದಲ್ಲಿದ್ದ ಧಡೂತಿ ಹೆಂಗಸಿನ ಪಾದವದು. “ಅಯ್ಯಮ್ಮಾ” ಎಂದು ಕಿರುಚಿ ಆಕೆಯನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸಿದೆ. ಅದೇನು ಅಷ್ಟು ಸುಲಭವೇ? ಪಾಪ, ಆಕೆಗಾದರೂ ಜಾಗ ಎಲ್ಲಿತ್ತು?
ಬಿಟಿಎಸ್‍ನಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯ. ಎಷ್ಟೋ ಬಾರಿ ನನಗೆ ಇದರ ಅನುಭವವಾಗಿತ್ತು. ಆದರೆ ಒಂದೇ ವ್ಯತ್ಯಾಸವೆಂದರೆ ಇಷ್ಟು ದಿನ ನನ್ನ ಪಾದಗಳನ್ನು ಕಾಪಾಡಿದ್ದ ಮಿಲಿಟರಿ ಶೂಗಳು ಇರಲಿಲ್ಲ.
ಬಸ್ ಇಳಿದ ಮೇಲೆ ನೋಡಿದರೆ ಕಾಲು ಟೊಮೋಟೊದಂತೆ ಕೆಂಪಗೆ ಊದಿಕೊಂಡಿತ್ತು. ಅರ್ಧ ದಿನ ಹೇಗೊ ಆಫೀಸಿನಲ್ಲಿ ಕಳೆದು ರಜೆ ಹಾಕಿ ಆಟೊ ಹತ್ತಿ ಮನೆಗೆ ಹಿಂತಿರುಗಿದೆ. ಮರುದಿನ ಸಹ ಆಫೀಸಿಗೆ ಹೋಗಲಾಗಲಿಲ್ಲ. ಮಾತ್ರೆಗಳನ್ನು ತೆಗೆದುಕೊಂಡೆ. ನೋವೇನೋ ಹೋಯಿತು, ಆದರೆ ಒಂದು ದಿನದ ರಜೆಯೂ ಹೋಯಿತು.
ವಿಷಯ ತಿಳಿದ ಗೆಳತಿ ಮನೆಗೆ ಬಂದು, “ಅಷ್ಟು ರಷ್‍ನಲ್ಲಿ ಏಕೆ ಹೋದೆ. ಆಟೋನಲ್ಲಿ ಬರಬೇಕಿತ್ತು. ಹೋಗಲಿ, ಒಂದು ಗಾಡಿ ತೆಗೆದುಕೊಂಡು ಬಿಡು” ಎಂದಳು. ಅದ್ಭುತ ಸಲಹೆ! “ನೋಡೋಣ” ಎಂದೆ. ಮರುದಿನದಿಂದ ಆಫೀಸಿಗೇನೊ ಹೋಗಲಾರಂಭಿಸಿದೆ. ಆದರೆ ಒಂದು ವಾರದವರೆಗೂ ಪೇನ್ ಕಿಲ್ಲರ್ಸ್ ತೆಗೆದುಕೊಂಡೆ.
ಒಂದು ವಾರ ಕಳೆಯುವಷ್ಟರಲ್ಲಿ ಇನ್ನೊಂದು ಆಕ್ಸಿಡೆಂಟ್. ರಸ್ತೆ ಕ್ರಾಸ್ ಮಾಡಲು ನಿಂತಿದ್ದ ನನ್ನ ಕಾಲುಗಳ ಮೇಲೆ ಆಟೊ ಹೋಯಿತು. ಬಹುಶಃ ಕಾಲುಗಳನ್ನೂ ರಸ್ತೆ ಎಂದೇ ಭಾವಿಸಿತೇನೋ!  ಅಲ್ಲೇ ಕುಸಿದು ಕುಳಿತೆ. ಅಕ್ಕ ಪಕ್ಕದಲ್ಲಿದ್ದವರು ಸಹಾಯ ಮಾಡಿ ಆಟೊ ಹತ್ತಿಸಿದರು. ಡಾಕ್ಟರ್ “ಮಾಂಸಖಂಡಕ್ಕೆ ಏಟಾಗಿದೆ. ಒಂದು ವಾರ ರೆಸ್ಟ್ ತಗೊಳ್ಳಿ ಎಂದರು. “ನನ್ನ ಶೂಗಳಿದ್ದರೆ ಹೀಗಾಗುತ್ತಿರಲಿಲ್ಲ” ಎಂದದ್ದಕ್ಕೆ ನನ್ನ ಗೆಳತಿ ಮಾತ್ರ “ಪಾದಚಾರಿಗಳು ಯಾವಾಗಲೂ ಫುಟ್‍ಪಾತ್ ಮೇಲೆಯೇ ನಡೆಯಬೇಕು” ಎಂದು ಆದೇಶ ನೀಡಿದಳು.
6 ತಿಂಗಳ ನಂತರ ಶಾಪಿಂಗ್ ಎಂದು ಮಲ್ಲೇಶ್ವರಂನಲ್ಲಿ ಓಡಾಡುತ್ತಿದ್ದೆ, ಆ ಫುಟ್‍ಪಾತೋ ದೇವರಿಗೇ ಪ್ರೀತಿ. ಆದರೆ ಗೆಳತಿಯ ಆದೇಶವಿತ್ತಲ್ಲ! ಫುಟ್‍ಪಾತ್ ಹತ್ತಿದೆ. ಬಹಳ ಜಾಗರೂಕತೆಯಿಂದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಹೋದರೂ ಅದ್ಯಾವ ಮಾಯದಲ್ಲೊ ಆ ಕಲ್ಲು ನನ್ನ ಕಾಲಿಗೆ ಬಡಿದಿತ್ತು. 
ನಡೆಯುವವರು ಎಡವೋದು ಸಹಜ ತಾನೇ! ಮುಂದೆ ಹೆಜ್ಜೆ ಇಟ್ಟೆ. ಅಬ್ಬಾ! ಅದೇನು ನೋವು. ಸಹಿಸಲಸಾಧ್ಯವೆನಿಸಿತು. ತಕ್ಷಣ ಆಟೊ ಹತ್ತಿ ಕ್ಲಿನಿಕ್‍ಗೆ ಹೋದೆ. ಅಲ್ಲಿದ್ದ ಡಾಕ್ಟರ್ ಎಕ್ಸರೇ ತೆಗೆದು ನಗುಮೊಗದಿಂದ “ಹೆಬ್ಬೆರಳು ಫ್ರ್ಯಾಕ್ಚರ್ ಆಗಿದೆ” ಎಂದರು. ಬಲಗಾಲಿಗೆ ಬಿಳಿ ಶೂ ಹಾಕಿ ನನ್ನ ಚಪ್ಪಲಿಯನ್ನು ಕೈಗಿಟ್ಟು ಕಳಿಸಿದರು.
ಮನೆಗೆ ಬಂದ ಗೆಳತಿ ಪೆಚ್ಚು ಮೋರೆ ಹಾಕಿಕೊಂಡು, “ಬೆಂಗಳೂರು ಹೀಗೇನೆ” ಎಂದಳು.
ಒಂದೂವರೆ ತಿಂಗಳು ರೆಸ್ಟ್ ತೆಗೆದುಕೊಂಡು ಮತ್ತೆ ಓಡಾಡಲು ಆರಂಭಿಸುವ ಮುನ್ನ, “ಸೂರ್ಯಚಂದ್ರರಿರುವವರೆಗೂ, ಅಲ್ಲಲ್ಲ, ಫುಟ್‍ಪಾತ್‍ಗಳಲ್ಲಿ ಏರು ಪೇರುಗಳಿರುವವರೆಗೂ, ಬಿಟಿಎಸ್ ಬಸ್‍ಗಳಲ್ಲಿ ನೂಕುನುಗ್ಗಲು ಇರುವವರೆಗೆ, ನಾನು ನನ್ನ ಮಿಲಿಟರಿ ಶೂಗಳನ್ನು ಬಿಡುವುದಿಲ್ಲ” ಎಂದು ಭೀಷ್ಮ ಪ್ರತಿಜ್ಞೆ ಕೈಗೊಂಡೆ!!

-- ಸುಧಾ ಜಿ            

ವ್ಯಕ್ತಿ ಪರಿಚಯ: "ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ"



“ನೆನಪಿಡಿ, ನಿಮ್ಮ ಕೆಲಸ ಕೇವಲ ಒಂದು ರೈಲ್ವೆ ಕ್ರಾಸಿಂಗ್ ಗುಡಿಸುವುದಾಗಿರಬಹುದು, ಆದರೆ ಅದನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರೆ, ಇಡೀ ವಿಶ್ವದಲ್ಲಿ ನಿಮ್ಮದರಷ್ಟು ಸ್ವಚ್ಛವಾಗಿ ಇನ್ನಾವುದೂ ಇರಬಾರದು.” 
“ಹಣದಿಂದ ಅಳೆಯಲಾಗದ ಮತ್ತು ಕೊಂಡುಕೊಳ್ಳಲಾಗದ ಸೇವೆಯೇ ನಿಜವಾದ ಸೇವೆ” 
ಇಂತಹ ಅರ್ಥಗರ್ಭಿತ, ಮೌಲ್ಯಯುತವಾದ ಹೇಳಿಕೆ ನೀಡಿದವರು ಭಾರತದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಇಂತಹ ಉದಾತ್ತ ಚೇತನಗಳು ಮತ್ತೆ ಮತ್ತೆ ಹುಟ್ಟಿಬರಲಿ ಎಂದು ಎಲ್ಲ ಸಮಾಜಗಳು ಹಾರೈಸುವಂತಹ ವ್ಯಕ್ತಿತ್ವ ಅವರದು. 
ಭಾರತದ ಸುಪ್ರಸಿದ್ಧ ಇಂಜಿನಿಯರ್, ಮಹಾನ್ ಮೇಧಾವಿ, ಮೈಸೂರಿನ ದಿವಾನರು, ಉತ್ತಮ ಆಡಳಿತಗಾರರು, ನಿಸ್ವಾರ್ಥ ಜನಸೇವಕರು ಆದ ಸರ್ ಎಂ ವಿ, ನಮ್ಮ ದೇಶದಲ್ಲಿ ಜನಿಸಿದರೆಂಬುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇವರು 1861ರಲ್ಲಿ ಸೆಪ್ಟೆಂಬರ್ 15ರಂದು, ಕರ್ನಾಟಕ ರಾಜ್ಯದ ರೇಷ್ಮೆಯ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ ಜನಿಸಿದರು. ಹನ್ನೆರಡು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಇವರು ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿ ನಂತರ ಮಾವ ರಾಮಯ್ಯನವರ ಆಹ್ವಾನದ ಮೇರೆಗೆ ಬೆಂಗಳೂರಿಗೆ ಹೋದರು.
1875ರಲ್ಲಿ ವೆಸ್ಲಿಯನ್ ಮಿಷನ್ ಪ್ರೌಢಶಾಲೆಗೆ ಸೇರಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಸರ್ ಎಂವಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದರು. ನಂತರ ಪುಣೆಯ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಮುಂಬೈನ ಪಿಡಬ್ಲ್ಯೂಡಿ ಯಲ್ಲಿ ಕೆಲಸ ಗಳಿಸಿದರು. ಆನಂತರ ಭಾರತದ ನೀರಾವರಿ ಮಂಡಲಿಯಲ್ಲಿ ಸೇವೆಗೆ ಸೇರಿ ದಖನ್ ಪ್ರಾಂತ್ಯದಲ್ಲಿ ಅತ್ಯುತ್ತಮ ನೀರಾವರಿ ಪದ್ಧತಿಯನ್ನು ಜಾರಿಗೆ ತಂದರು. 
1903ರಲ್ಲಿ ಅವರು ಪುಣೆಯ ಹತ್ತಿರದ ಖಡಕ್ ವಾಸ್ಲಾ ರಿಸರ್ವಾಯರ್ ನಲ್ಲಿ ಸ್ವಯಂಚಾಲಿತ ನೀರು ಬಿಡುವ ಗೇಟ್ ನಿರ್ಮಿಸಿದರು. ನಂತರ ಇದನ್ನೇ ಗ್ವಾಲಿಯರ್‍ನ ಟೈಗ್ರಾ ಅಣೆಕಟ್ಟು ಮತ್ತು ಮೈಸೂರಿನ  ಕೆಆರ್‍ಎಸ್‍ಗೂ ಅಳವಡಿಸಿದರು. ಇಂತಹ ಪದ್ಧತಿಯನ್ನು ಲಕ್ನೋ, ವಿಶಾಖಪಟ್ಟಣಗಳಲ್ಲಿ ಅಳವಡಿಸಿ ಅದರಿಂದ ಸಂಪೂರ್ಣ ಯಶಸ್ಸು, ಕೀರ್ತಿ ಗಳಿಸಿದರು. 
  

1906-07ರಲ್ಲಿ ಭಾರತ ಸರ್ಕಾರ ಅವರನ್ನು ಈಜಿಪ್ಟ ನ ಅಡೆನ್ ನಲ್ಲಿ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಬಗ್ಗೆ ಯೋಜನೆ ತಯಾರಿಸಲು ಕಳಿಸಿದರು. ನಂತರ ಅವರ ಯೋಜನೆಯನ್ನು ಅಳವಡಿಸಲಾಯಿತು. ಮೂಸಿ ಮತ್ತು ಲ್ಯಾಸಿ ನದಿಗಳಿಗೆ ಅಣೆಕಟ್ಟು ಕಟ್ಟಿ, ಹೈದರಾಬಾದ್ ನಗರಕ್ಕೆ ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವ ಮೂಲಕ ಖ್ಯಾತಿ ಪಡೆದರು. ಬಿಹಾರದ ಗಂಗಾ ನದಿಗೆ ಸೇತುವೆಯಾದ ಮೊಕಾಮಾ ಸೇತುವೆಯ ಸ್ಥಳದ ಬಗ್ಗೆ ತಾಂತ್ರಿಕ ಸಲಹೆ ನೀಡಿದರು.
ಮೈಸೂರಿನ ದಿವಾನರಾಗಿಯೂ ಸೇವೆ ಸಲ್ಲಿಸಿದ ಇವರು ಮೈಸೂರಿನಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿಶ್ವವಿದ್ಯಾನಿಲಯ, ಹಲವಾರು ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಪಕರಾಗಿದ್ದಾರೆ. ಮೈಸೂರು ಸೋಪ್ ಕಾರ್ಖಾನೆ, ಬೆಂಗಳೂರು ಕೃಷಿ ವಿವಿ, ಸೆಂಚುರಿ ಕ್ಲಬ್, ಮೈಸೂರು ಛೇಂಬರ್ಸ್ ಆಫ್ ಕಾಮರ್ಸ್, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲು ಕಾರಣಕರ್ತರಾದರು. 
 
 

ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದರು. ಅಸ್ಪೃಶ್ಯರ ಮತ್ತು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಮಾಡಿದರು. ಮೈಸೂರು-ಬೆಂಗಳೂರು ರೈಲ್ ರೋಡ್, ಜೋಗದಲ್ಲಿ ಶರಾವತಿ ವಿದ್ಯುತ್ ಯೋಜನೆ, ಭಟ್ಕಳ ಬಂದರಿನ ಅಭಿವೃದ್ಧಿ, ಮಹಾರಾಣಿ ಕಾಲೇಜನ್ನು ಪದವಿ ಕಾಲೇಜನ್ನಾಗಿ ಮಾಡಿದರು, ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಆರಂಭಿಸಿದರು. ಆದ್ದರಿಂದಲೇ ಅವರನ್ನು “ಆಧುನಿಕ ಮೈಸೂರು ರಾಜ್ಯದ (ಇಂದಿನ ಕರ್ನಾಟಕ) ಪಿತಾಮಹ”ರೆಂದು ಪರಿಗಣಿಸಲಾಗಿದೆ.
ಒಮ್ಮೆ ಭದ್ರಾವತಿಯ ಕಾರ್ಖಾನೆಯಲ್ಲಿ ತಾಂತ್ರಿಕತೆಗೆ ಸಂಬಂಧಿಸಿದ ಸಮಸ್ಯೆಯುಂಟಾಗಿ ಪರಿಹರಿಸಲಾಗದ ಸಂದರ್ಭದಲ್ಲಿ, ಸರ್ ಎಂ ವಿ ಅವರನ್ನು ಕರೆಸಲಾಯಿತು. ನುರಿತ ಇವರು ಸಮಸ್ಯೆಯನ್ನು ಬಗೆಹರಿಸಿ ಕಾರ್ಖಾನೆಯನ್ನು ಉಳಿಸಿದರು. ಆಗ ಸರ್ಕಾರ ಇವರಿಗೆ ಭಾರಿ ಹಣದ ಬಳುವಳಿ ನೀಡಲು ಹೋದಾಗ ಅವರು ಹೀಗೆಂದರು “ಹುಡುಗರು ಒಂದು ವೃತ್ತಿಯನ್ನು ಕಲಿಯಲಾಗುವಂತಹ ವಿದ್ಯಾಸಂಸ್ಥೆಯನ್ನು ಆರಂಭಿಸಿ” ಎಂದರು. ಅವರ ಮಾತಿನ ಪ್ರತಿಫಲವೇ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು. 
1915ರಲ್ಲಿ ಮೈಸೂರಿನ ದಿವಾನರಾಗಿದ್ದವರಿಗೆ ಬ್ರಿಟಿಷ್ ಸರ್ಕಾರ ನೈಟ್ ಪದವಿಯನ್ನು ನೀಡಿತು. ಹಲವಾರು ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ. 1923ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದರು. 8 ವಿವಿಗಳಿಂದ ಗೌರವ ಡಾಕ್ಟರೇಟ್ ದೊರೆಯಿತು.  
ಅವರು ತಮ್ಮ ದುಡಿಮೆ, ಸಮಯಪಾಲನೆ, ಶಿಸ್ತು, ಪ್ರಾಮಾಣಿಕತೆ ಮತ್ತು ನಿಷ್ಟೆಗೆ ಹೆಸರಾದವರು.
ಸಮಯಪ್ರಜ್ಞೆ
ಸಮಯಪಾಲನೆಗೆ ಮತ್ತೊಂದು ಹೆಸರೇ ವಿಶ್ವೇಶ್ವರಯ್ಯನವರು ಎಂದರೆ ತಪ್ಪಿಲ್ಲ. ಅವರೆಂದೂ ಕಾರ್ಯಕ್ರಮಗಳಿಗೆ ಅಥವಾ ಸಭೆಗಳಿಗೆ ತಡವಾಗಿ ಹೋಗುತ್ತಿರಲಿಲ್ಲ. ಒಮ್ಮೆ ಒಂದು ಕಾರ್ಯಕ್ರಮಕ್ಕೆ ಮಂತ್ರಿಗಳೊಬ್ಬರು 3 ನಿಮಿಷ ತಡವಾಗಿ ಬಂದರು. ಇವರು ಅವರಿಗೆ ಸಮಯದ ಮಹತ್ವ ತಿಳಿಸಿ, ಸಮಯಪಾಲನೆ ಕಲಿಯಲು ತಿಳಿಸಿ ಅಲ್ಲಿಂದ ಹೊರಟುಹೋದರು. 
ಗುರುಭಕ್ತಿ
ಇವರಿಗೆ ಗುರುಗಳಲ್ಲಿ ಅಪಾರ ಭಕ್ತಿ ಗೌರವ. ಉಪಾಧ್ಯಾಯರಿಗೂ ಈ ಶಿಷ್ಯನ ಬಗ್ಗೆ ಪ್ರೀತಿ. ಇವರ ಬಗ್ಗೆ ಎಲ್ಲರ ಬಳಿಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಗುರುಗಳಾದ ರಾಘವೇಂದ್ರರಾಯರು ಉಪಾಧ್ಯಾಯ ವೇತನ ಸಾಲದೆ ಸಂಸಾರ ನಿರ್ವಹಿಸುವುದು ಕಷ್ಟವಾಗಿ, ವೃತ್ತಿಗೆ ರಾಜಿನಾಮೆ ನೀಡಿ ಬೆಂಗಳೂರಿಗೆ ಬಂದು ಅಲ್ಲಿ ವಕೀಲರಾದರು. ಒಮ್ಮೆ ರಾಘವೇಂದ್ರರಾಯರು ಕಛೇರಿ ಕೆಲಸ ಮುಗಿಸಿ ಹಿಂದಿರುಗುತ್ತಿರುವಾಗ ಎರಡು ಕುದುರೆಗಳನ್ನು ಕಟ್ಟಿದ್ದ ಸಾರೋಟು ಅವರ ಬಳಿ ನಿಂತಿತು. ಅದರಿಂದ ಅಚ್ಚುಕಟ್ಟಾದ ಉಡುಪು, ಮೈಸೂರು ಪೇಟ ಧರಿಸಿದ್ದ ಒಬ್ಬ ವ್ಯಕ್ತಿ ಇಳಿದು ವಿನಮ್ರತೆಯಿಂದ ನಮಸ್ಕರಿಸಿದರು. ಗುರುಗಳಿಗೆ ಅವರು ಯಾರೆಂದು ತಿಳಿಯಲಿಲ್ಲ. ಆಗ ಆ ವ್ಯಕ್ತಿ “ಮೇಷ್ಟ್ರೆ ನೀವು ನನ್ನನ್ನು ಮರೆತಂತಿದೆ. ನಾನು ನಿಮ್ಮ ಶಿಷ್ಯ ವಿಶ್ವೇಶರ” ಎಂದ ಕೂಡಲೆ ಆ ಗುರುಗಳಿಗೆ ಆದ ಆನಂದ ಅಷ್ಟಿಷ್ಟಲ್ಲ.
ಜೀವನಸ್ಫೂರ್ತಿ
ಒಮ್ಮೆ ಇವರು ಇತರೆ ಭಾರತೀಯ ಇಂಜಿನಿಯರ್‍ಗಳ ಜೊತೆ ಅಮೇರಿಕಾ ಪ್ರವಾಸ ಹೊರಟರು. ಅಲ್ಲಿ ಅಮೇರಿಕಾದ ಅಧಿಕಾರಿಯೊಬ್ಬರು ಹೊಸದಾಗಿ ಕಂಡುಹಿಡಿದ ಯಂತ್ರಗಳು, ಸಲಕರಣೆಗಳನ್ನು ತೋರಿಸಲಾರಂಭಿಸಿದರು. ಅಲ್ಲಿ ಬೃಹದಾಕಾರದ ಮೆಷಿನ್ ಒಂದನ್ನು ನೋಡಲು 75 ಅಡಿ ಎತ್ತರದ ಏಣಿಯನ್ನು ಹತ್ತಬೇಕಿತ್ತು. ಅದರ ಎತ್ತರ ಕಂಡು ಭಯಭೀತರಾದ ಇತರರು ಅದನ್ನು ಹತ್ತುವ ಸಾಹಸ ಮಾಡಲಿಲ್ಲ. ಆದರೆ ಇವರು ಮುಂದಾದರು. ಆಗ ಅವರ ವಯಸ್ಸು 101. ವಯಸ್ಸನ್ನು ಕಲಿಕೆಗೆ ತೊಡಕು ಎಂದು ಅವರು ಭಾವಿಸಲಿಲ್ಲ.
ಸಮಾನತೆಯ ಪ್ರತಿಪಾದಕರು
ಮೈಸೂರಿನ ದಸರಾ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಅಧಿಕಾರಿಗಳಿಗೆ ಎತ್ತರದ ಐಷಾರಾಮಿ ಕುರ್ಚಿಗಳನ್ನು ಹಾಕಿಸಿದ್ದರು. ಆದರೆ ಭಾರತೀಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕುರ್ಚಿ ವ್ಯವಸ್ಥೆಯೇ ಇರಲಿಲ್ಲ. ಅವರು ಬ್ರಿಟಿಷರ ಪಕ್ಕದಲ್ಲಿ ನಿಲ್ಲಬೇಕಿತ್ತು. ಅಥವಾ ನೆಲದ ಮೇಲೆ ಕೂರಬೇಕಿತ್ತು. ಬ್ರಿಟಿಷರ ಈ ಅಸಮಾನ ವರ್ತನೆ ವಿರೋಧಿಸಿದ ಇವರು  ದಸರಾ ಉತ್ಸವಕ್ಕೆ ಹೋಗುವುದನ್ನೇ ನಿಲ್ಲಿಸಿದರು. ಇದನ್ನರಿತ ಬ್ರಿಟಿಷ್ ಸರ್ಕಾರ ಭಾರತೀಯ ಅಧಿಕಾರಿಗಳಿಗೂ ಕುರ್ಚಿ ವ್ಯವಸ್ಥೆ ಮಾಡಿಸಿತು. 
ಹೀಗೆ ಹೇಳುತ್ತಾ ಹೋದರೆ ಇವರ ಉದಾತ್ತ ವ್ಯಕ್ತಿತ್ವದ ಘಟನೆಗಳು ಮುಗಿಯುವುದೇ ಇಲ್ಲ. 
ಸರ್ ಎಂವಿ ಮನೆತನದಿಂದ ಸಭ್ಯರು, ಬೆಳವಣಿಗೆಯಿಂದ ಸಂಯಮಿ, ಸ್ವಭಾವದಿಂದ ಸಜ್ಜನರು, ಅಜಾತಶತ್ರು, ಪರೋಪಕಾರಿ, ವೃತ್ತಿಯಲ್ಲಿ ಯಶಸ್ವಿ ಇಂಜಿನಿಯರ್, ಸಂದರ್ಭದಿಂದ ದಿವಾನರು, ಮನೋಧರ್ಮದಿಂದ ವಿಜ್ಞಾನಿ, ಶ್ರದ್ಧೆಯಿಂದ ಉದ್ಯಮಿ, ಅವರು ಕೈಗೊಂಡಿದ್ದು ಕಠೋರ ವ್ರತ. ಅದನ್ನು ತಪ್ಪದೆ ನೆರವೇರಿಸುವ ಧೈರ್ಯ, ಸ್ಥೈರ್ಯ, ಸಾಮರ್ಥ್ಯ ಅವರಲ್ಲಿತ್ತು.
“ದುಡಿದರೆ ಉದ್ಧಾರ, ದುಡಿಯದಿದ್ದರೆ ವಿನಾಶ” ಈ ಸಂದೇಶವನ್ನು ಮುಟ್ಟಿಸುವ ಉದ್ದೇಶದಿಂದ ಸ್ವತಃ ದುಡಿದರು. ತಮ್ಮ ದುಡಿಮೆಯ ಹಿರಿಮೆಯನ್ನು ತೋರಿಸಿಕೊಟ್ಟರು. ನಾಡಿನ ಏಳ್ಗೆಗೆ ದುಡಿಯಬೇಕೆಂದು ತಮ್ಮ ತನುಮನ ಅರ್ಪಿಸಿ ದುಡಿದು ದೊಡ್ಡವರಾದರು. ಅವರು 1962ರ ಏಪ್ರಿಲ್ 12ರಂದು ಮರಣ ಹೊಂದಿದರು. ಅವರ ಹುಟ್ಟುಹಬ್ಬದ ದಿನವನ್ನು “ಇಂಜಿನಿಯರ್ ಗಳ ದಿನ”ವೆಂದು ಆಚರಿಸಲಾಗುತ್ತದೆ.
ಅವರು ತಮ್ಮ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ನಂತರ ಕಟ್ಟಿಸಿಕೊಂಡ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇಡಲಾಗಿದೆ. ಅವರ ಎಲ್ಲ ವಸ್ತುಗಳನ್ನು, ಪದಕಗಳನ್ನು, ಪುಸ್ತಕಗಳನ್ನು ಇಡಲಾಗಿದೆ. 


                                                      -   ರೂಪಶ್ರೀ ವಿ ಬಿ                             


ಸ್ವಾತಂತ್ರ್ಯದ ಸಂಭ್ರಮಾಚರಣೆ



ಆಚರಣೆಯಂತೆ 
ಸಂಭ್ರಮಾಚರಣೆಯಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ರಸ್ತೆ ತಡೆಯಂತೆ,
ಏಕೆಂದರೆ ಮೆರವಣಿಗೆಯಂತೆ. 
ಹೆರಿಗೆ ಬೇನೆಯ ತಾಯಿಯೂ 
ನೋವು ತಡೆದು ಕಾಯಬೇಕಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ಗಾಂಧಿಯ ಪುತ್ಥಳಿಯಂತೆ 
ಅದಕೆ ಜರಿಯ ಶಾಲು ಹೊದಿಸಬೇಕಂತೆ 
ಶಾಲಿನ ಅಂಚು ಹಸಿರೋ ಕೇಸರಿಯೋ 
ಎಂಬುದೇ ಒಂದು ಕಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ನೆಹರು, ಸುಭಾಷರಂತೆ 
ಅವರನು ಕೊಂಡಾಡುವ ಇತಿಹಾಸವಂತೆ 
ಆದರ್ಶಗಳ ಆರಾಧಿಸುವ ಕುರುಡುಕೂಪ 
ಇಲ್ಲಿ ವಿಮರ್ಶೆಗೆ ಜಾಗವಿಲ್ಲವಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ಇತಿಹಾಸದ 'ಪರಿಶುದ್ಧ' ಪಾಠವಂತೆ
ಫೇಸ್ಬುಕ್ಕಿನಲ್ಲಿ ಪರ್ಯಾಯ ಪೋಸ್ಟ್ಗಳಂತೆ
ರಾಷ್ಟ್ರಧ್ವಜವ ವಾಟ್ಸಾಪ್ಪಿನಲ್ಲಿ
'ಡಿಪಿ' ಮಾಡುವುದೇ ರಾಷ್ಟ್ರಪ್ರೇಮವಂತೆ
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

- ಮಂಜುನಾಥ್ ಎ ಎನ್

ಸ್ವತಂತ್ರ ಭಾರತ - ಒಂದು ತ್ವರಿತ ಆತ್ಮಾವಲೋಕನ



"ಬ್ರಿಟಿಷರು ಬಿಟ್ಟು ಹೋದ ಭಾರತಕ್ಕಿಂತಲೂ ನಾವಿಂದು ಸ್ವತಂತ್ರ ಭಾರತ ಸರಿ, ಆದರೆ ನಮ್ಮ ಸಂವಿಧಾನ ಶಿಲ್ಪಿಗಳು ಕಂಡ ಕನಸಿನ ಭಾರತದಷ್ಟು ಸ್ವತಂತ್ರ ಭಾರತವಲ್ಲ"
- ೬೯ ವರ್ಷಗಳ ಸ್ವಾತಂತ್ರ್ಯವನ್ನು ಅವಲೋಕಿಸುತ್ತ ಸ್ವಾತಂತ್ರ್ಯ ದಿನದಂದು "ದಿ ಇಂಡಿಯನ್ ಎಕ್ಸ್ಪ್ರೆಸ್"ನಲ್ಲಿ ರಾಮಚಂದ್ರ ಗುಹಾ

ರಾಜಕೀಯ ಸ್ವಾತಂತ್ರ್ಯ 
 
ಪ್ರಜಾಪ್ರಭುತ್ವದ ಉತ್ತಮ ನಿದರ್ಶನಗಳಲ್ಲಿ ಭಾರತ ವಿಶ್ವಕ್ಕೆ ಮಾದರಿ. ಇಷ್ಟು ಸಂಪತ್ಭರಿತ ವೈವಿಧ್ಯಗಳನ್ನು ಒಂದು ಸಂಯುಕ್ತ ಪ್ರಜಾಪ್ರಭುತ್ವ ರಾಷ್ಟ್ರದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹಿರಿ ಸಾಧನೆ. ೭೩ನೇ ಹಾಗು ೭೪ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಹಾಗು ನಗರಪಾಲಿಕ ವ್ಯವಸ್ಥೆ ಜಾರಿಗೆ ತಂದು ಸ್ವಯಂ ಆಡಳಿತ ಎಂಬುದು ಕೇವಲ ಒಂದು ಆದರ್ಶ ಪರಿಕಲ್ಪನೆ ಆಗಿರದೆ ನಮ್ಮ ದಿನನಿತ್ಯ ಜೀವನದ ವಾಸ್ತವಿಕತೆಯಾಯಿತು. ೨೦೦೫ರ ಮಾಹಿತಿ ಹಕ್ಕು ಕಾಯ್ದೆ, ೨೦೦೯ರ ಶಿಕ್ಷಣ ಹಕ್ಕು ಕಾಯ್ದೆ ಮುಂತಾದವು ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವೆಡೆಗೆ ಕಂಡ ಕನಸುಗಳು. ಆದರೆ ಇವುಗಳನ್ನು ಅನುಷ್ಠಾನಗೊಳಿಸುವ ಪರಿ, ನಾಗರೀಕರಾಗಿ ಹಲವು ಹಕ್ಕುಗಳನ್ನು ನಾವು ದುರುಪಯೋಗಗೊಳಿಸಿಕೊಳ್ಳುವ ಪರಿ ಆ ಕನಸಿನ ಈಡೇರಿಕೆಗೆ ಮುಳ್ಳಾಗಿವೆ. 

ರಕ್ತಸಿಕ್ತ ವಿಭಜನೆ ಸ್ವಾತಂತ್ರ್ಯ ಸಿರಿಯ ಕಹಿ ಅವಳಿ. ವಿಭಜನೆಯ ವೈಷಮ್ಯದಿಂದ ಇಂದಿಗೂ ನಾವು ಸ್ವತಂತ್ರರಾಗಿಲ್ಲ. ಅಭಿಪ್ರಾಯಗಳ ಹಾಗು ಆಚರಣೆಗಳ ವಿಮರ್ಶೆ ಹಾಗು ಟೀಕೆಗೆ ನಾವು ತೆರೆದುಕೊಂಡಿಲ್ಲ. "ಪ್ರಜಾಪ್ರಭುತ್ವದಲ್ಲಿ ಅಸಮ್ಮತಿಯು ವಿಶ್ವಾಸವ ದೃಡೀಕರಿಸುವ ಕ್ರಿಯೆ" ಎಂಬ ಫುಲ್ ಬ್ರೈಟ್ ನ ವ್ಯಾಖ್ಯಾನದ ಪರಿಗಣನೆಯಲ್ಲಿ ಅಸಮ್ಮತಿಯನ್ನು ಸಹಿಸದ ನಾವು ಸ್ವತಂತ್ರ ಪ್ರಜಾಪ್ರಭುತ್ವವೇ ಎಂಬ ಪ್ರಶ್ನೆ ಕಾಡುತ್ತದೆ. ೭೦ ವರ್ಷಗಲ್ಲಿ ಒಂದು ಪ್ರೌಢ ಪ್ರಜಾಪ್ರಭುತ್ವವಾಗುವ ಬದಲು ಕ್ಷುಲ್ಲಕ ವಿಚಾರಗಳಿಗೆ, ಅವೈಜ್ಞಾನಿಕ ನಂಬಿಕೆಗಳಿಗೆ, ಧಾರ್ಮಿಕ ಆಚರಣೆಗಳಿಗೆ ಬಲಿಯಾದ ಅರಾಜಕತೆಯಾಗಿದ್ದೇವೆ.


ಆರ್ಥಿಕ ಸ್ವಾತಂತ್ರ್ಯ 

ಹೆಚ್ಚಿರುವ ಅವಕಾಶಗಳು, ಬಲಿಷ್ಟಗೊಂಡಿರುವ ಆರ್ಥಿಕ ವ್ಯವಸ್ಥೆ, ಜಾಗತಿಕ ಸರಬರಾಜು ಸರಪಳಿಯಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ-ಮಾನಗಳಿಸಿಕೊಂಡಿರುವ ಹೆಗ್ಗಳಿಕೆ, ಬಾಹ್ಯಾಕಾಶ ಸಂಶೋಧನೆ ಎಂತಹ ಕ್ಲಿಷ್ಟ ಕ್ಷೇತ್ರದಲ್ಲಿ ದೇಶಿಯ ಸ್ವಾವಲಂಭನೆ ಗಿಟ್ಟಿಸಿಕೊಂಡಿರುವಿಕೆ ಶ್ಲಾಗನೀಯವೇ ಸರಿ. ಆದರೆ ಮತ್ತೊಂದೆಡೆ ಆರ್ಥಿಕ ಅಸಮಾನತೆ ಉಲ್ಬಣಗೊಳ್ಳುತ್ತಿದೆ. ನಗರ ಹಾಗು ಗ್ರಾಮೀಣ ಪ್ರದೇಶಗಳ ನಡುವಿನ ಕಂದಕ ಇನ್ನಷ್ಟು ಆಳ ಹಾಗು ವಿಸ್ತಾರಗೊಳ್ಳುತ್ತಿದೆ. ನಗರ ಪ್ರದೇಶದಲ್ಲಿ ಕೂಡ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಸಮ್ಮಿಲನಗೊಂಡಿರುವವರ ಆದಾಯ ಹಾಗು ಜೀವನ ಗುಣಮಟ್ಟಕ್ಕೂ ಹಾಗು ಆ ವ್ಯವಸ್ಥೆಯಲ್ಲಿ ಅಡಕಗೊಳ್ಳಲು ವಿಫಲವಾಗಿರುವವರ ಆದಾಯ ಹಾಗು ಜೀವನ ಗುಣಮಟ್ಟಕ್ಕೂ ಹೆಚ್ಚಿನ ಅಂತರವಿದೆ. ಅಪಾಯಕಾರಿ ಬೆಳವಣಿಗೆ ಎಂದರೆ ಈ ಅಂತರ ದಿನೇ ದಿನೇ ಬೆಳೆಯುತ್ತಿದೆ. 

ಸಾಮಾಜಿಕ ಸ್ವಾತಂತ್ರ್ಯ 

"ಧರ್ಮ-ಜಾತಿ ವ್ಯವಸ್ಥೆ" ಹಾಗು "ಪುರುಷ ಪ್ರಧಾನತೆ" ನಮ್ಮ ಸಮಾಜದ ಅವಳಿ ಪೂರ್ವಾಗ್ರಹಗಳು. ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೂ ಸಮಾನ ಸಮಾಜದ ಕನಸ್ಸಿಗೆ ಮುಳ್ಳಾಗಿದ್ದ ಇವು ಇಂದಿಗೂ ಮುಳ್ಳಾಗಿಯೇ ಉಳಿದಿವೆ. ಅಲ್ಲಲ್ಲಿ ಬದಲಾವಣೆಯ, ಪ್ರಗತಿಯ ಘಟನೆಗಳು ಗಮನಕ್ಕೆ ಬಂದರೂ ನಾವಿನ್ನೂ ಬಹುಪಾಲು ಪೂರ್ವಾಗ್ರಹಗಳ ಕರಿಛಾಯೆಯಲ್ಲೇ ಕೊರಗುತ್ತಿರುವ ಸಮಾಜ. ೧೮೫೭ರಲ್ಲಿ ಹಸು ಮತ್ತು ಹಂದಿಯ ಕೊಬ್ಬಿನಿಂದ ಶುರುವಾದ ಹೋರಾಟ ಇನ್ನೂ ಬಗೆಹರಿದಿಲ್ಲ. ಇಂದಿಗೂ ಹಸು - ಹಂದಿಗಳ ನೆಪದಲ್ಲಿ ನಮ್ಮವರನ್ನು ನಾವು ಕೊಲ್ಲುವ ಕ್ರೌರ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಅಥವಾ ಆ ಸ್ವಾತಂತ್ರ್ಯವ ಬಹುಶಃ ನಾವೇ ದಕ್ಕಿಸಿಕೊಂಡಿಲ್ಲ. 

National Crime Records Bureau (NCRB) ಯ ೨೦೧೪ರ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ದಿನ ಸರಾಸರಿ ೯೩ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಕೌಟುಂಬಿಕ ಹಿಂಸೆಯ ವಿವಿಧ ಬಗೆಗಳು ನಮ್ಮ ದಿನ ನಿತ್ಯದ ಜೀವನದ ಅವಿಭಾಜ್ಯ ಅಂಗವೇ ಆಗಿವೆ. UNICEFನ ೨೦೧೨ರ ತರುಣರ ಜಾಗತಿಕ ವರದಿಯ ಪ್ರಕಾರ ಭಾರತದಲ್ಲಿ ಶೇಕಡ ೫೭ರಷ್ಟು ಹುಡುಗರು ಹಾಗು ೫೩ರಷ್ಟು ಹುಡುಗಿಯರು ಗಂಡ ಹೆಂಡತಿಯನ್ನು ದೈಹಿಕವಾಗಿ ಶಿಕ್ಷಿಸುವುದು ಸರಿಯೆಂದು ಅಭಿಪ್ರಾಯ ಪಡುತ್ತಾರೆ.ಇಂತಹ ಹಲವು ಅಂಕಿಅಂಶಗಳು ನಮ್ಮ ಸಾಮಾಜಿಕ ಸಂಕುಚಿತತೆಗೆ ಹಿಡಿದ ಕನ್ನಡಿ. 

ಸಾಂಸ್ಕೃತಿಕ ಸ್ವಾತಂತ್ರ್ಯ 

ಹತ್ತು ಹಲವು ಬಗೆಯ ಸಂಸ್ಕೃತಿಗಳಿಗೆ ತವರೂರು ಭಾರತ ಆದರೆ ವಿವಿಧ ಸಂಸ್ಕೃತಿಗಳು ಸಹಿಷ್ಣುತೆಯಿಂದ ಸಹಬಾಳ್ವೆಗೆಯ್ಯಲು ನಮ್ಮಲ್ಲಿ ಸ್ವತಂತ್ರ ಅವಕಾಶವಿದೆ. ನಾಸ್ತಿಕರಿಂದ ಹಿಡಿದು ಬೇರೆ ಬೇರೆ ನಂಬಿಕೆಯ ಆಸ್ತಿಕರೆಲ್ಲರಿಗೂ ಭಾರತ ಆಸರೆ ನೀಡಿದೆ. ನಮ್ಮ ಸಂಸ್ಕೃತಿಯನ್ನೇ ವಿಮರ್ಶೆಯ ವಸ್ತುವನ್ನಾಗಿಸಿ, ಪರೀಕ್ಷಿಸಿ, ಖಂಡಿಸುವ ಸ್ವಾತಂತ್ರ್ಯ ನಮ್ಮ ವಿದ್ವಾಂಸರಿಗಿದೆ. ಆದರೆ ಇತ್ತೀಚಿನ ವರ್ಷಗಲ್ಲಿ ಕಲ್ಬುರ್ಗಿ, ದಾಬೋಲ್ಕರ್ ಮುಂತಾದವರ ಕೊಲೆಗಳು ಈ ಬಗೆಯ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಸಿದುಕೊಳ್ಳುವಂತೆ ಕಾಣುತ್ತಿವೆ. 

ಸ್ವಾತಂತ್ರ್ಯ ಎಂಬುದು ಕೇವಲ ಒಮ್ಮೆಗಳಿಸಿ ಮರೆತುಬಿಡುವುದಲ್ಲ. ಪ್ರತಿದಿನ, ಪ್ರತಿಕ್ಷಣ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಹಕ್ಕುಗಳಿಗಾಗಿ ಒತ್ತಾಯ ಮಾಡುವ ನಾವು ಕರ್ತವ್ಯ ಹಾಗು ಜವಾಬ್ದಾರಿಗಳನ್ನು ಅರಿತು ಸಂಯುಕ್ತ ಜಾತ್ಯತೀತ ಸ್ವತಂತ್ರ ಪ್ರಜಾಪ್ರಭುತ್ವದಲ್ಲಿ ಸುಲಭ ಮಾರ್ಗೋಪಾಯಗಳು ಸರಳಸಾಧ್ಯವಲ್ಲ ಎಂಬುದನ್ನು ಅರಿಯಬೇಕು. ಅದರ ಸಂಕೀರ್ಣತೆಯನ್ನು ಗಮನದಲ್ಲಿರಿಸಿಕೊಂಡು ನಾಗರೀಕ ಕರ್ತವ್ಯಗಳನ್ನು ನೆರವೇರಿಸಿ ಪ್ರೌಢ ಆರೋಗ್ಯಕರ ಸದೃಢ ಸ್ವತಂತ್ರ ಪ್ರಜಾಪ್ರಭುತ್ವವನ್ನು ಬೆಳೆಸಿ ಅದರಲ್ಲಿ ಸಕ್ರಿಯವಾಗಿ ಭಾಗಿಯಾಗುವ.

- ಮಂಜುನಾಥ್ ಎ ಎನ್