Pages

ವಿನೋದ: "ಶೂ ಮಹಿಮೆ"





“ನನಗೆ ನನ್ನ ಶೂಗಳನ್ನು ಕಂಡರೆ ಬಹಳ ಅಭಿಮಾನ. ಆದರೆ ನನ್ನ ಬಗ್ಗೆ ಅಭಿಮಾನವಿದ್ದವರಲ್ಲಿ ಕೆಲವರಿಗೆ ಅದನ್ನು ಕಂಡರೆ ಬಹಳ ಕಸಿವಿಸಿ. ಅವರಿಗೆಲ್ಲಾ ಆ ಶೂಗಳು ನನ್ನ ಸೌಂದರ್ಯ..... ಅಲ್ಲಲ್ಲ ನನ್ನ ಪಾದಗಳ ಸೌಂದರ್ಯ ಹಾಳು ಮಾಡುತ್ತವೆಂದು ಸಿಟ್ಟು. ಅದರಲ್ಲೂ ನನ್ನ ಆತ್ಮೀಯ ಗೆಳತಿಗಂತೂ ಅದನ್ನು ಕಂಡರೆ ಅಸಹ್ಯ.
ನನ್ನ ಶೂಗಳು ಬಹಳ ಗಟ್ಟಿಮುಟ್ಟಾಗಿದ್ದವು. ಈ ದುಬಾರಿ ಕಾಲದಲ್ಲಿ ಮೂರು ವರ್ಷಗಳ ಸತತ ಸೇವೆಯ ಜಯಭೇರಿಯನ್ನು ಬಾರಿಸಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದವು. ನನ್ನ ಮೆಚ್ಚಿನ ಆ ಶೂಗಳಿಗೆ ನನ್ನ ಗೆಳತಿಯರು, ಆದರೆ ಆ ಶೂಗಳ ಶತ್ರುಗಳು “ಮಿಲಿಟರಿ ಶೂಗಳು” ಎಂದು ಹೆಸರಿಟ್ಟಿದ್ದರು.
ಎಲ್ಲರದ್ದೂ ಒಂದೇ ಮಾತು - “ಈ ಶೂಗಳು ಬೇಡ.” ನಾನು ಜಗ್ಗಲಿಲ್ಲ. ನನ್ನ ಆತ್ಮೀಯ ಗೆಳತಿ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಹಿಂದೆ ಬಿದ್ದಳು. ನನ್ನ ಶೂಗಳನ್ನು ಬಿಡುವಂತೆ ನನ್ನ ಮನವೊಲಿಸಲಾಗದೆ ಕೊನೆಗೊಂದು ಉಪಾಯವನ್ನು ನೀಡಿದಳು.
“ನೋಡು, ಶೂಗಳನ್ನೇ ಹಾಕಿಕೋ, ಆದರೆ ಹೆಣ್ಣುಮಕ್ಕಳಿಗಾಗಿಯೇ ಹೇಳಿಮಾಡಿಸಿದ ಶೂ ಹಾಕಿಕೊ.” 
ಗೆಳತಿಯ ಮಾತಿಗೆ “ಇಲ್ಲ” ಎನ್ನಲಾರದೆ “ಸರಿ” ಎಂದೆ, ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎನ್ನುವುದು ನೆನಪಿಸಿಕೊಂಡು.
ಮರುದಿನ ಆಫೀಸಿನಿಂದ ಹಿಂತಿರುಗಿದಾಗ, ಮನೆಯ ಹೊರಗಡೆ ಅವಳ ಲೂನಾ ಕಂಡೆ. ಒಳಗೆ ಹೋದೆ, ಶೂ ಕಳಚಲೂ ಸಹ ಬಿಡದೆ “ನಡಿ” ಎಂದು ಎಳೆದುಕೊಂಡು ಹೊರಟೇ ಬಿಟ್ಟಳು. ನಾನು ಎಲ್ಲಿಗೆ, ಏನು ಎಂದು ವಿಚಾರಿಸುವಷ್ಟರಲ್ಲಿ ಲೂನಾ ಚಪ್ಪಲಿ ಅಂಗಡಿಯ ಮುಂದೆ ನಿಂತಿತ್ತು. ಅವಳನ್ನು ಹಿಂಬಾಲಿಸಿದೆ.
ಅಂಗಡಿಯಲ್ಲಿ ಅಳತೆಗಾಗಿ ಹಾಕಿಕೊಂಡ ಹೆಣ್ಣುಮಕ್ಕಳಿಗಾಗಿ ಮಾಡಿದ ಶೂಗಳನ್ನು ನೋಡಿ “ಬ್ಯೂಟಿಫುಲ್!” ಎಂದಳು.
ಮರುದಿನ ಆಫೀಸಿನಲ್ಲಿ ಎಲ್ಲರೂ “ಓಹ್, ವಾಟ್ ಎ ಚೇಂಜ್” ಎಂದು ಉದ್ಗರಿಸುವವರೇ. ನನಗೇನೊ ಅದರಲ್ಲಿ ಪಾದಗಳೇ ನಿಲ್ಲುತ್ತಿರಲಿಲ್ಲ. ಪ್ರತಿ ಬಾರಿ ಹೆಜ್ಜೆ ಮುಂದಿಟ್ಟಾಗಲೂ ಶೂ ಹಿಂದೆಯೇ ಉಳಿದಿರುತ್ತಿತ್ತು. ಎಷ್ಟೇ ಕಷ್ಟ ಆದರೂ ಸ್ನೇಹಕ್ಕಾಗಿ ಸಹಿಸಬೇಕಲ್ಲವೇ? 
ನನ್ನ ಅದೃಷ್ಟ! ಎರಡೇ ದಿನಗಳಲ್ಲಿ ಆ ಶೂಗಳೂ ಬಾಯಿಬಿಟ್ಟವು. ಗೆಳತಿಗೆ ತೋರಿಸಿದರೆ, “ನಿನಗೆ ಸರಿಯಾಗಿ ನಡೆಯಲು ಬರುವುದಿಲ್ಲ” ಎಂದು ಸರ್ಟಿಫಿಕೇಟ್ ನೀಡಿದಳು. ಹೆಚ್ಚು ಚರ್ಚೆಯಿಲ್ಲದೆ ಒಪ್ಪಿಕೊಂಡೆ, ನನ್ನ ಹಳೆಯ ಶೂಗಳಿಗೆ ಹಿಂತಿರುಗಬಹುದೆಂದು.
ಎಂದಿನಂತೆ ಆ ದಿನವೂ ಆಫೀಸಿಗೆ ಹೋಗಲು ರೆಡಿಯಾದೆ. ಶೂಗಳನ್ನು ಹಾಕಿಕೊಳ್ಳಲು ಹೋದಾಗ ಹೊಸ ಶೂಗಳು ಬಾಯ್ಬಿಟ್ಟಿರುವುದು ನೆನಪಾಗಿ ನನ್ನ ಮಿಲಿಟರಿ ಶೂಗಳನ್ನು ಕಪಾಟಿಂದ ಹೊರತೆಗೆದು ಪಾಲಿಷ್ ಮಾಡಲಾರಂಭಿಸಿದೆ. ಅಷ್ಟರಲ್ಲಿ ನನ್ನ ಗೆಳತಿ ಒಂದು ಕವರ್ ಹಿಡಿದು ಒಳಬಂದಳು.
“ಇವು ಬಹಳ ಒಳ್ಳೆಯ ಕ್ವಾಲಿಟಿ ಚಪ್ಪಲಿಗಳು. ಹೇಗೆ ನಡೆದರೂ ಬಾಳಿಕೆ ಬರುತ್ತವೆ. ನಿನಗೇನೂ ತೊಂದರೆಯಾಗುವುದಿಲ್ಲ.” ಬೆಳ್ಳಂಬೆಳಗ್ಗೆ ಗೆಳತಿಯ ಉಡುಗೊರೆ ತಿರಸ್ಕರಿಸಲಾದೀತೆ? 
ನನ್ನ ನಡಿಗೆಯಲ್ಲಿ ಏನೋ ಬದಲಾವಣೆ. ನನಗೇನೋ ಕಸಿವಿಸಿ. ಇರಲಿ ಸ್ವಲ್ಪ ದಿನ ಎಂದುಕೊಂಡೆ.
ಎಂದಿನಂತೆ ಆ ದಿನವೂ ಬಿಟಿಎಸ್ ಹತ್ತಿದೆ. ರಶ್ಶೋ ರಶ್ಶು. ಕಾಲಿಡಲೂ ಸ್ಥಳವಿಲ್ಲ. ಹೇಗೋ ಜಾಗ ಮಾಡಿಕೊಂಡು ಹತ್ತಿದೆ. ಅಬ್ಬಾ, ಕೊನೆಗೂ ಕಾಲಿಡಲು ಜಾಗ ಸಿಕ್ಕಿತು ಎಂದುಕೊಳ್ಳುವಷ್ಟರಲ್ಲಿ ನನ್ನ ಪಾದಗಳ ಮೇಲೆ ಏನೋ ಭಾರ ಬಿದ್ದಂತಾಯಿತು. ಪಕ್ಕದಲ್ಲಿದ್ದ ಧಡೂತಿ ಹೆಂಗಸಿನ ಪಾದವದು. “ಅಯ್ಯಮ್ಮಾ” ಎಂದು ಕಿರುಚಿ ಆಕೆಯನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸಿದೆ. ಅದೇನು ಅಷ್ಟು ಸುಲಭವೇ? ಪಾಪ, ಆಕೆಗಾದರೂ ಜಾಗ ಎಲ್ಲಿತ್ತು?
ಬಿಟಿಎಸ್‍ನಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯ. ಎಷ್ಟೋ ಬಾರಿ ನನಗೆ ಇದರ ಅನುಭವವಾಗಿತ್ತು. ಆದರೆ ಒಂದೇ ವ್ಯತ್ಯಾಸವೆಂದರೆ ಇಷ್ಟು ದಿನ ನನ್ನ ಪಾದಗಳನ್ನು ಕಾಪಾಡಿದ್ದ ಮಿಲಿಟರಿ ಶೂಗಳು ಇರಲಿಲ್ಲ.
ಬಸ್ ಇಳಿದ ಮೇಲೆ ನೋಡಿದರೆ ಕಾಲು ಟೊಮೋಟೊದಂತೆ ಕೆಂಪಗೆ ಊದಿಕೊಂಡಿತ್ತು. ಅರ್ಧ ದಿನ ಹೇಗೊ ಆಫೀಸಿನಲ್ಲಿ ಕಳೆದು ರಜೆ ಹಾಕಿ ಆಟೊ ಹತ್ತಿ ಮನೆಗೆ ಹಿಂತಿರುಗಿದೆ. ಮರುದಿನ ಸಹ ಆಫೀಸಿಗೆ ಹೋಗಲಾಗಲಿಲ್ಲ. ಮಾತ್ರೆಗಳನ್ನು ತೆಗೆದುಕೊಂಡೆ. ನೋವೇನೋ ಹೋಯಿತು, ಆದರೆ ಒಂದು ದಿನದ ರಜೆಯೂ ಹೋಯಿತು.
ವಿಷಯ ತಿಳಿದ ಗೆಳತಿ ಮನೆಗೆ ಬಂದು, “ಅಷ್ಟು ರಷ್‍ನಲ್ಲಿ ಏಕೆ ಹೋದೆ. ಆಟೋನಲ್ಲಿ ಬರಬೇಕಿತ್ತು. ಹೋಗಲಿ, ಒಂದು ಗಾಡಿ ತೆಗೆದುಕೊಂಡು ಬಿಡು” ಎಂದಳು. ಅದ್ಭುತ ಸಲಹೆ! “ನೋಡೋಣ” ಎಂದೆ. ಮರುದಿನದಿಂದ ಆಫೀಸಿಗೇನೊ ಹೋಗಲಾರಂಭಿಸಿದೆ. ಆದರೆ ಒಂದು ವಾರದವರೆಗೂ ಪೇನ್ ಕಿಲ್ಲರ್ಸ್ ತೆಗೆದುಕೊಂಡೆ.
ಒಂದು ವಾರ ಕಳೆಯುವಷ್ಟರಲ್ಲಿ ಇನ್ನೊಂದು ಆಕ್ಸಿಡೆಂಟ್. ರಸ್ತೆ ಕ್ರಾಸ್ ಮಾಡಲು ನಿಂತಿದ್ದ ನನ್ನ ಕಾಲುಗಳ ಮೇಲೆ ಆಟೊ ಹೋಯಿತು. ಬಹುಶಃ ಕಾಲುಗಳನ್ನೂ ರಸ್ತೆ ಎಂದೇ ಭಾವಿಸಿತೇನೋ!  ಅಲ್ಲೇ ಕುಸಿದು ಕುಳಿತೆ. ಅಕ್ಕ ಪಕ್ಕದಲ್ಲಿದ್ದವರು ಸಹಾಯ ಮಾಡಿ ಆಟೊ ಹತ್ತಿಸಿದರು. ಡಾಕ್ಟರ್ “ಮಾಂಸಖಂಡಕ್ಕೆ ಏಟಾಗಿದೆ. ಒಂದು ವಾರ ರೆಸ್ಟ್ ತಗೊಳ್ಳಿ ಎಂದರು. “ನನ್ನ ಶೂಗಳಿದ್ದರೆ ಹೀಗಾಗುತ್ತಿರಲಿಲ್ಲ” ಎಂದದ್ದಕ್ಕೆ ನನ್ನ ಗೆಳತಿ ಮಾತ್ರ “ಪಾದಚಾರಿಗಳು ಯಾವಾಗಲೂ ಫುಟ್‍ಪಾತ್ ಮೇಲೆಯೇ ನಡೆಯಬೇಕು” ಎಂದು ಆದೇಶ ನೀಡಿದಳು.
6 ತಿಂಗಳ ನಂತರ ಶಾಪಿಂಗ್ ಎಂದು ಮಲ್ಲೇಶ್ವರಂನಲ್ಲಿ ಓಡಾಡುತ್ತಿದ್ದೆ, ಆ ಫುಟ್‍ಪಾತೋ ದೇವರಿಗೇ ಪ್ರೀತಿ. ಆದರೆ ಗೆಳತಿಯ ಆದೇಶವಿತ್ತಲ್ಲ! ಫುಟ್‍ಪಾತ್ ಹತ್ತಿದೆ. ಬಹಳ ಜಾಗರೂಕತೆಯಿಂದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಹೋದರೂ ಅದ್ಯಾವ ಮಾಯದಲ್ಲೊ ಆ ಕಲ್ಲು ನನ್ನ ಕಾಲಿಗೆ ಬಡಿದಿತ್ತು. 
ನಡೆಯುವವರು ಎಡವೋದು ಸಹಜ ತಾನೇ! ಮುಂದೆ ಹೆಜ್ಜೆ ಇಟ್ಟೆ. ಅಬ್ಬಾ! ಅದೇನು ನೋವು. ಸಹಿಸಲಸಾಧ್ಯವೆನಿಸಿತು. ತಕ್ಷಣ ಆಟೊ ಹತ್ತಿ ಕ್ಲಿನಿಕ್‍ಗೆ ಹೋದೆ. ಅಲ್ಲಿದ್ದ ಡಾಕ್ಟರ್ ಎಕ್ಸರೇ ತೆಗೆದು ನಗುಮೊಗದಿಂದ “ಹೆಬ್ಬೆರಳು ಫ್ರ್ಯಾಕ್ಚರ್ ಆಗಿದೆ” ಎಂದರು. ಬಲಗಾಲಿಗೆ ಬಿಳಿ ಶೂ ಹಾಕಿ ನನ್ನ ಚಪ್ಪಲಿಯನ್ನು ಕೈಗಿಟ್ಟು ಕಳಿಸಿದರು.
ಮನೆಗೆ ಬಂದ ಗೆಳತಿ ಪೆಚ್ಚು ಮೋರೆ ಹಾಕಿಕೊಂಡು, “ಬೆಂಗಳೂರು ಹೀಗೇನೆ” ಎಂದಳು.
ಒಂದೂವರೆ ತಿಂಗಳು ರೆಸ್ಟ್ ತೆಗೆದುಕೊಂಡು ಮತ್ತೆ ಓಡಾಡಲು ಆರಂಭಿಸುವ ಮುನ್ನ, “ಸೂರ್ಯಚಂದ್ರರಿರುವವರೆಗೂ, ಅಲ್ಲಲ್ಲ, ಫುಟ್‍ಪಾತ್‍ಗಳಲ್ಲಿ ಏರು ಪೇರುಗಳಿರುವವರೆಗೂ, ಬಿಟಿಎಸ್ ಬಸ್‍ಗಳಲ್ಲಿ ನೂಕುನುಗ್ಗಲು ಇರುವವರೆಗೆ, ನಾನು ನನ್ನ ಮಿಲಿಟರಿ ಶೂಗಳನ್ನು ಬಿಡುವುದಿಲ್ಲ” ಎಂದು ಭೀಷ್ಮ ಪ್ರತಿಜ್ಞೆ ಕೈಗೊಂಡೆ!!

-- ಸುಧಾ ಜಿ            

ಕಾಮೆಂಟ್‌ಗಳಿಲ್ಲ: