Pages

ವ್ಯಕ್ತಿ ಪರಿಚಯ: "ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ"



“ನೆನಪಿಡಿ, ನಿಮ್ಮ ಕೆಲಸ ಕೇವಲ ಒಂದು ರೈಲ್ವೆ ಕ್ರಾಸಿಂಗ್ ಗುಡಿಸುವುದಾಗಿರಬಹುದು, ಆದರೆ ಅದನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರೆ, ಇಡೀ ವಿಶ್ವದಲ್ಲಿ ನಿಮ್ಮದರಷ್ಟು ಸ್ವಚ್ಛವಾಗಿ ಇನ್ನಾವುದೂ ಇರಬಾರದು.” 
“ಹಣದಿಂದ ಅಳೆಯಲಾಗದ ಮತ್ತು ಕೊಂಡುಕೊಳ್ಳಲಾಗದ ಸೇವೆಯೇ ನಿಜವಾದ ಸೇವೆ” 
ಇಂತಹ ಅರ್ಥಗರ್ಭಿತ, ಮೌಲ್ಯಯುತವಾದ ಹೇಳಿಕೆ ನೀಡಿದವರು ಭಾರತದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಇಂತಹ ಉದಾತ್ತ ಚೇತನಗಳು ಮತ್ತೆ ಮತ್ತೆ ಹುಟ್ಟಿಬರಲಿ ಎಂದು ಎಲ್ಲ ಸಮಾಜಗಳು ಹಾರೈಸುವಂತಹ ವ್ಯಕ್ತಿತ್ವ ಅವರದು. 
ಭಾರತದ ಸುಪ್ರಸಿದ್ಧ ಇಂಜಿನಿಯರ್, ಮಹಾನ್ ಮೇಧಾವಿ, ಮೈಸೂರಿನ ದಿವಾನರು, ಉತ್ತಮ ಆಡಳಿತಗಾರರು, ನಿಸ್ವಾರ್ಥ ಜನಸೇವಕರು ಆದ ಸರ್ ಎಂ ವಿ, ನಮ್ಮ ದೇಶದಲ್ಲಿ ಜನಿಸಿದರೆಂಬುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇವರು 1861ರಲ್ಲಿ ಸೆಪ್ಟೆಂಬರ್ 15ರಂದು, ಕರ್ನಾಟಕ ರಾಜ್ಯದ ರೇಷ್ಮೆಯ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ ಜನಿಸಿದರು. ಹನ್ನೆರಡು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಇವರು ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿ ನಂತರ ಮಾವ ರಾಮಯ್ಯನವರ ಆಹ್ವಾನದ ಮೇರೆಗೆ ಬೆಂಗಳೂರಿಗೆ ಹೋದರು.
1875ರಲ್ಲಿ ವೆಸ್ಲಿಯನ್ ಮಿಷನ್ ಪ್ರೌಢಶಾಲೆಗೆ ಸೇರಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಸರ್ ಎಂವಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದರು. ನಂತರ ಪುಣೆಯ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಮುಂಬೈನ ಪಿಡಬ್ಲ್ಯೂಡಿ ಯಲ್ಲಿ ಕೆಲಸ ಗಳಿಸಿದರು. ಆನಂತರ ಭಾರತದ ನೀರಾವರಿ ಮಂಡಲಿಯಲ್ಲಿ ಸೇವೆಗೆ ಸೇರಿ ದಖನ್ ಪ್ರಾಂತ್ಯದಲ್ಲಿ ಅತ್ಯುತ್ತಮ ನೀರಾವರಿ ಪದ್ಧತಿಯನ್ನು ಜಾರಿಗೆ ತಂದರು. 
1903ರಲ್ಲಿ ಅವರು ಪುಣೆಯ ಹತ್ತಿರದ ಖಡಕ್ ವಾಸ್ಲಾ ರಿಸರ್ವಾಯರ್ ನಲ್ಲಿ ಸ್ವಯಂಚಾಲಿತ ನೀರು ಬಿಡುವ ಗೇಟ್ ನಿರ್ಮಿಸಿದರು. ನಂತರ ಇದನ್ನೇ ಗ್ವಾಲಿಯರ್‍ನ ಟೈಗ್ರಾ ಅಣೆಕಟ್ಟು ಮತ್ತು ಮೈಸೂರಿನ  ಕೆಆರ್‍ಎಸ್‍ಗೂ ಅಳವಡಿಸಿದರು. ಇಂತಹ ಪದ್ಧತಿಯನ್ನು ಲಕ್ನೋ, ವಿಶಾಖಪಟ್ಟಣಗಳಲ್ಲಿ ಅಳವಡಿಸಿ ಅದರಿಂದ ಸಂಪೂರ್ಣ ಯಶಸ್ಸು, ಕೀರ್ತಿ ಗಳಿಸಿದರು. 
  

1906-07ರಲ್ಲಿ ಭಾರತ ಸರ್ಕಾರ ಅವರನ್ನು ಈಜಿಪ್ಟ ನ ಅಡೆನ್ ನಲ್ಲಿ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಬಗ್ಗೆ ಯೋಜನೆ ತಯಾರಿಸಲು ಕಳಿಸಿದರು. ನಂತರ ಅವರ ಯೋಜನೆಯನ್ನು ಅಳವಡಿಸಲಾಯಿತು. ಮೂಸಿ ಮತ್ತು ಲ್ಯಾಸಿ ನದಿಗಳಿಗೆ ಅಣೆಕಟ್ಟು ಕಟ್ಟಿ, ಹೈದರಾಬಾದ್ ನಗರಕ್ಕೆ ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವ ಮೂಲಕ ಖ್ಯಾತಿ ಪಡೆದರು. ಬಿಹಾರದ ಗಂಗಾ ನದಿಗೆ ಸೇತುವೆಯಾದ ಮೊಕಾಮಾ ಸೇತುವೆಯ ಸ್ಥಳದ ಬಗ್ಗೆ ತಾಂತ್ರಿಕ ಸಲಹೆ ನೀಡಿದರು.
ಮೈಸೂರಿನ ದಿವಾನರಾಗಿಯೂ ಸೇವೆ ಸಲ್ಲಿಸಿದ ಇವರು ಮೈಸೂರಿನಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿಶ್ವವಿದ್ಯಾನಿಲಯ, ಹಲವಾರು ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಪಕರಾಗಿದ್ದಾರೆ. ಮೈಸೂರು ಸೋಪ್ ಕಾರ್ಖಾನೆ, ಬೆಂಗಳೂರು ಕೃಷಿ ವಿವಿ, ಸೆಂಚುರಿ ಕ್ಲಬ್, ಮೈಸೂರು ಛೇಂಬರ್ಸ್ ಆಫ್ ಕಾಮರ್ಸ್, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲು ಕಾರಣಕರ್ತರಾದರು. 
 
 

ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದರು. ಅಸ್ಪೃಶ್ಯರ ಮತ್ತು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಮಾಡಿದರು. ಮೈಸೂರು-ಬೆಂಗಳೂರು ರೈಲ್ ರೋಡ್, ಜೋಗದಲ್ಲಿ ಶರಾವತಿ ವಿದ್ಯುತ್ ಯೋಜನೆ, ಭಟ್ಕಳ ಬಂದರಿನ ಅಭಿವೃದ್ಧಿ, ಮಹಾರಾಣಿ ಕಾಲೇಜನ್ನು ಪದವಿ ಕಾಲೇಜನ್ನಾಗಿ ಮಾಡಿದರು, ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಆರಂಭಿಸಿದರು. ಆದ್ದರಿಂದಲೇ ಅವರನ್ನು “ಆಧುನಿಕ ಮೈಸೂರು ರಾಜ್ಯದ (ಇಂದಿನ ಕರ್ನಾಟಕ) ಪಿತಾಮಹ”ರೆಂದು ಪರಿಗಣಿಸಲಾಗಿದೆ.
ಒಮ್ಮೆ ಭದ್ರಾವತಿಯ ಕಾರ್ಖಾನೆಯಲ್ಲಿ ತಾಂತ್ರಿಕತೆಗೆ ಸಂಬಂಧಿಸಿದ ಸಮಸ್ಯೆಯುಂಟಾಗಿ ಪರಿಹರಿಸಲಾಗದ ಸಂದರ್ಭದಲ್ಲಿ, ಸರ್ ಎಂ ವಿ ಅವರನ್ನು ಕರೆಸಲಾಯಿತು. ನುರಿತ ಇವರು ಸಮಸ್ಯೆಯನ್ನು ಬಗೆಹರಿಸಿ ಕಾರ್ಖಾನೆಯನ್ನು ಉಳಿಸಿದರು. ಆಗ ಸರ್ಕಾರ ಇವರಿಗೆ ಭಾರಿ ಹಣದ ಬಳುವಳಿ ನೀಡಲು ಹೋದಾಗ ಅವರು ಹೀಗೆಂದರು “ಹುಡುಗರು ಒಂದು ವೃತ್ತಿಯನ್ನು ಕಲಿಯಲಾಗುವಂತಹ ವಿದ್ಯಾಸಂಸ್ಥೆಯನ್ನು ಆರಂಭಿಸಿ” ಎಂದರು. ಅವರ ಮಾತಿನ ಪ್ರತಿಫಲವೇ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು. 
1915ರಲ್ಲಿ ಮೈಸೂರಿನ ದಿವಾನರಾಗಿದ್ದವರಿಗೆ ಬ್ರಿಟಿಷ್ ಸರ್ಕಾರ ನೈಟ್ ಪದವಿಯನ್ನು ನೀಡಿತು. ಹಲವಾರು ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ. 1923ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದರು. 8 ವಿವಿಗಳಿಂದ ಗೌರವ ಡಾಕ್ಟರೇಟ್ ದೊರೆಯಿತು.  
ಅವರು ತಮ್ಮ ದುಡಿಮೆ, ಸಮಯಪಾಲನೆ, ಶಿಸ್ತು, ಪ್ರಾಮಾಣಿಕತೆ ಮತ್ತು ನಿಷ್ಟೆಗೆ ಹೆಸರಾದವರು.
ಸಮಯಪ್ರಜ್ಞೆ
ಸಮಯಪಾಲನೆಗೆ ಮತ್ತೊಂದು ಹೆಸರೇ ವಿಶ್ವೇಶ್ವರಯ್ಯನವರು ಎಂದರೆ ತಪ್ಪಿಲ್ಲ. ಅವರೆಂದೂ ಕಾರ್ಯಕ್ರಮಗಳಿಗೆ ಅಥವಾ ಸಭೆಗಳಿಗೆ ತಡವಾಗಿ ಹೋಗುತ್ತಿರಲಿಲ್ಲ. ಒಮ್ಮೆ ಒಂದು ಕಾರ್ಯಕ್ರಮಕ್ಕೆ ಮಂತ್ರಿಗಳೊಬ್ಬರು 3 ನಿಮಿಷ ತಡವಾಗಿ ಬಂದರು. ಇವರು ಅವರಿಗೆ ಸಮಯದ ಮಹತ್ವ ತಿಳಿಸಿ, ಸಮಯಪಾಲನೆ ಕಲಿಯಲು ತಿಳಿಸಿ ಅಲ್ಲಿಂದ ಹೊರಟುಹೋದರು. 
ಗುರುಭಕ್ತಿ
ಇವರಿಗೆ ಗುರುಗಳಲ್ಲಿ ಅಪಾರ ಭಕ್ತಿ ಗೌರವ. ಉಪಾಧ್ಯಾಯರಿಗೂ ಈ ಶಿಷ್ಯನ ಬಗ್ಗೆ ಪ್ರೀತಿ. ಇವರ ಬಗ್ಗೆ ಎಲ್ಲರ ಬಳಿಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಗುರುಗಳಾದ ರಾಘವೇಂದ್ರರಾಯರು ಉಪಾಧ್ಯಾಯ ವೇತನ ಸಾಲದೆ ಸಂಸಾರ ನಿರ್ವಹಿಸುವುದು ಕಷ್ಟವಾಗಿ, ವೃತ್ತಿಗೆ ರಾಜಿನಾಮೆ ನೀಡಿ ಬೆಂಗಳೂರಿಗೆ ಬಂದು ಅಲ್ಲಿ ವಕೀಲರಾದರು. ಒಮ್ಮೆ ರಾಘವೇಂದ್ರರಾಯರು ಕಛೇರಿ ಕೆಲಸ ಮುಗಿಸಿ ಹಿಂದಿರುಗುತ್ತಿರುವಾಗ ಎರಡು ಕುದುರೆಗಳನ್ನು ಕಟ್ಟಿದ್ದ ಸಾರೋಟು ಅವರ ಬಳಿ ನಿಂತಿತು. ಅದರಿಂದ ಅಚ್ಚುಕಟ್ಟಾದ ಉಡುಪು, ಮೈಸೂರು ಪೇಟ ಧರಿಸಿದ್ದ ಒಬ್ಬ ವ್ಯಕ್ತಿ ಇಳಿದು ವಿನಮ್ರತೆಯಿಂದ ನಮಸ್ಕರಿಸಿದರು. ಗುರುಗಳಿಗೆ ಅವರು ಯಾರೆಂದು ತಿಳಿಯಲಿಲ್ಲ. ಆಗ ಆ ವ್ಯಕ್ತಿ “ಮೇಷ್ಟ್ರೆ ನೀವು ನನ್ನನ್ನು ಮರೆತಂತಿದೆ. ನಾನು ನಿಮ್ಮ ಶಿಷ್ಯ ವಿಶ್ವೇಶರ” ಎಂದ ಕೂಡಲೆ ಆ ಗುರುಗಳಿಗೆ ಆದ ಆನಂದ ಅಷ್ಟಿಷ್ಟಲ್ಲ.
ಜೀವನಸ್ಫೂರ್ತಿ
ಒಮ್ಮೆ ಇವರು ಇತರೆ ಭಾರತೀಯ ಇಂಜಿನಿಯರ್‍ಗಳ ಜೊತೆ ಅಮೇರಿಕಾ ಪ್ರವಾಸ ಹೊರಟರು. ಅಲ್ಲಿ ಅಮೇರಿಕಾದ ಅಧಿಕಾರಿಯೊಬ್ಬರು ಹೊಸದಾಗಿ ಕಂಡುಹಿಡಿದ ಯಂತ್ರಗಳು, ಸಲಕರಣೆಗಳನ್ನು ತೋರಿಸಲಾರಂಭಿಸಿದರು. ಅಲ್ಲಿ ಬೃಹದಾಕಾರದ ಮೆಷಿನ್ ಒಂದನ್ನು ನೋಡಲು 75 ಅಡಿ ಎತ್ತರದ ಏಣಿಯನ್ನು ಹತ್ತಬೇಕಿತ್ತು. ಅದರ ಎತ್ತರ ಕಂಡು ಭಯಭೀತರಾದ ಇತರರು ಅದನ್ನು ಹತ್ತುವ ಸಾಹಸ ಮಾಡಲಿಲ್ಲ. ಆದರೆ ಇವರು ಮುಂದಾದರು. ಆಗ ಅವರ ವಯಸ್ಸು 101. ವಯಸ್ಸನ್ನು ಕಲಿಕೆಗೆ ತೊಡಕು ಎಂದು ಅವರು ಭಾವಿಸಲಿಲ್ಲ.
ಸಮಾನತೆಯ ಪ್ರತಿಪಾದಕರು
ಮೈಸೂರಿನ ದಸರಾ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಅಧಿಕಾರಿಗಳಿಗೆ ಎತ್ತರದ ಐಷಾರಾಮಿ ಕುರ್ಚಿಗಳನ್ನು ಹಾಕಿಸಿದ್ದರು. ಆದರೆ ಭಾರತೀಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕುರ್ಚಿ ವ್ಯವಸ್ಥೆಯೇ ಇರಲಿಲ್ಲ. ಅವರು ಬ್ರಿಟಿಷರ ಪಕ್ಕದಲ್ಲಿ ನಿಲ್ಲಬೇಕಿತ್ತು. ಅಥವಾ ನೆಲದ ಮೇಲೆ ಕೂರಬೇಕಿತ್ತು. ಬ್ರಿಟಿಷರ ಈ ಅಸಮಾನ ವರ್ತನೆ ವಿರೋಧಿಸಿದ ಇವರು  ದಸರಾ ಉತ್ಸವಕ್ಕೆ ಹೋಗುವುದನ್ನೇ ನಿಲ್ಲಿಸಿದರು. ಇದನ್ನರಿತ ಬ್ರಿಟಿಷ್ ಸರ್ಕಾರ ಭಾರತೀಯ ಅಧಿಕಾರಿಗಳಿಗೂ ಕುರ್ಚಿ ವ್ಯವಸ್ಥೆ ಮಾಡಿಸಿತು. 
ಹೀಗೆ ಹೇಳುತ್ತಾ ಹೋದರೆ ಇವರ ಉದಾತ್ತ ವ್ಯಕ್ತಿತ್ವದ ಘಟನೆಗಳು ಮುಗಿಯುವುದೇ ಇಲ್ಲ. 
ಸರ್ ಎಂವಿ ಮನೆತನದಿಂದ ಸಭ್ಯರು, ಬೆಳವಣಿಗೆಯಿಂದ ಸಂಯಮಿ, ಸ್ವಭಾವದಿಂದ ಸಜ್ಜನರು, ಅಜಾತಶತ್ರು, ಪರೋಪಕಾರಿ, ವೃತ್ತಿಯಲ್ಲಿ ಯಶಸ್ವಿ ಇಂಜಿನಿಯರ್, ಸಂದರ್ಭದಿಂದ ದಿವಾನರು, ಮನೋಧರ್ಮದಿಂದ ವಿಜ್ಞಾನಿ, ಶ್ರದ್ಧೆಯಿಂದ ಉದ್ಯಮಿ, ಅವರು ಕೈಗೊಂಡಿದ್ದು ಕಠೋರ ವ್ರತ. ಅದನ್ನು ತಪ್ಪದೆ ನೆರವೇರಿಸುವ ಧೈರ್ಯ, ಸ್ಥೈರ್ಯ, ಸಾಮರ್ಥ್ಯ ಅವರಲ್ಲಿತ್ತು.
“ದುಡಿದರೆ ಉದ್ಧಾರ, ದುಡಿಯದಿದ್ದರೆ ವಿನಾಶ” ಈ ಸಂದೇಶವನ್ನು ಮುಟ್ಟಿಸುವ ಉದ್ದೇಶದಿಂದ ಸ್ವತಃ ದುಡಿದರು. ತಮ್ಮ ದುಡಿಮೆಯ ಹಿರಿಮೆಯನ್ನು ತೋರಿಸಿಕೊಟ್ಟರು. ನಾಡಿನ ಏಳ್ಗೆಗೆ ದುಡಿಯಬೇಕೆಂದು ತಮ್ಮ ತನುಮನ ಅರ್ಪಿಸಿ ದುಡಿದು ದೊಡ್ಡವರಾದರು. ಅವರು 1962ರ ಏಪ್ರಿಲ್ 12ರಂದು ಮರಣ ಹೊಂದಿದರು. ಅವರ ಹುಟ್ಟುಹಬ್ಬದ ದಿನವನ್ನು “ಇಂಜಿನಿಯರ್ ಗಳ ದಿನ”ವೆಂದು ಆಚರಿಸಲಾಗುತ್ತದೆ.
ಅವರು ತಮ್ಮ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ನಂತರ ಕಟ್ಟಿಸಿಕೊಂಡ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇಡಲಾಗಿದೆ. ಅವರ ಎಲ್ಲ ವಸ್ತುಗಳನ್ನು, ಪದಕಗಳನ್ನು, ಪುಸ್ತಕಗಳನ್ನು ಇಡಲಾಗಿದೆ. 


                                                      -   ರೂಪಶ್ರೀ ವಿ ಬಿ                             


1 ಕಾಮೆಂಟ್‌:

Rajiv Magal ಹೇಳಿದರು...

ಸರ್. ಎಮ್.ವಿ ಯವರ ಬಗ್ಗೆ ನೀಡಿದ ವಿವರಣೆಯಲ್ಲಿ ಹಲವು ಪ್ರಮುಖ ಸ೦ಗತಿಗಳು ಕಾಣಲಿಲ್ಲವಾದರೂ ಭದ್ರಾವತಿಯ ಪ್ರತೀಶ್ಟಿತ ಕಾಗದ ಕಾರ್ಖಾನೆಯ ವಿಚಾರವನ್ನು ನಮೂದಿಸಲೆಬೇಕಾದ ಅವಶ್ಯಕತೆ ಒ೦ದು ಕಡೆಯಾದರೆ, ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಹಾಗು ಕಾಗದ ಕಾರ್ಖಾನೆ ಎರಡೂ ಸಹ ಇ೦ದು ಉತ್ಪಾದನೆ ಮಾಡದ ಹ೦ತಕ್ಕೆ ತಲುಪಿ ದಿವಾಳಿಯಾಗಿರುವುದೇ ನಮ್ಮ ಸರ್ಕಾರಗಳು ಸರ್.ಎಮ್.ವಿ ಯವರಿಗೆ ಸಲ್ಲಿಸುವ ಶ್ರದ್ಧಾ೦ಜಲಿ ಎ೦ಬುದನ್ನು ಬರವಣಿಗೆಯಲ್ಲಿ ನಮೂದಿಸಬೇಕಾದ್ದು ವಾಸ್ತವ. ಈ ಮಾಹಿತಿ ಬಹುತೇಕ ಓದುಗರಿಗೆ ತಿಳಿಯದ ಸ೦ಗತಿ.